Tuesday, September 6, 2016

ನನ್ನ ಊರು

       ನನ್ನ ಬಾವ ಕೋಶದ ಭಿತ್ತಿಯೊಳಗೆ ಹಸಿರಾಗಿರುವುದು ಸ್ವಲ್ಪ ಕಾಲ ನನ್ನ ಸಲಹಿದ ಆ ನನ್ನ ಊರು. ಮರೆತರೂ ಮರೆಯದ, ಮರೆಯಲಾಗದ ಅನುಭೂತಿಗಳನ್ನಿತ್ತ ಆ ನನ್ನ ಊರು. ಮುಗಿಯದ ಸುಂದರ ಬುತ್ತಿ ಗಂಟು. ಮತ್ತೊಮ್ಮೆ ಹುಟ್ಟ ಬೇಕು ನಾ ಅದೇ ಊರಲ್ಲಿ ಆದರೆ....................... ನಾ ಬೆಳೆದ ಆ ಊರಿನ ಕುರಿತು ನಾ ಬರೆದ ಕಿರು ಲೇಖನ 'ವಿಶ್ವವಾಣಿ' ಪತ್ರಿಕೆಯ ಭಾನುವಾರದ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಗೊಂಡಿದೆ. ಓದಿರಿ ಇಷ್ಟವಾದರೆ ಪ್ರತಿಕ್ರಿಯಿಸಿ.



ದೋಣಿಯ ಹುಟ್ಟು ನೀರಲಿ ಬಿತ್ತು
ಎತ್ತರದ ಮರಗಳ ಸಾಲು. ಗಾಢ ಹಸಿರ ಎಲೆ ಬಿಸಿಲು ನೆಲ ತಾಗದಂತೆ ಮಾಡಿದ್ದವು. ಬಿಸಿಲುಕೋಲುಗಳು. ದಾರಿಗುಂಟ ವಿವಿಧ -ರ್ನ್ಗಳು. ಸಣ್ಣ ಗುಡ್ಡದ ತುದಿಯಲ್ಲಿ ನಮ್ಮ ಮನೆ. ಮನೆ ಪಕ್ಕ ಹಳ್ಳ. ಹಳ್ಳ ದಾಟಿ 2 ಮೈಲು ಹೋದರೆ ಮೂರ್ನಾಲ್ಕು ಮನೆಗಳಿರುವ ಚಿಕ್ಕ ಹಳ್ಳಿ. ದೊಡ್ಡ ಹಳ್ಳದಿಂದೊಂದು ಕವಲು ಒಡೆದು ಝರಿಯಂತೆ ಗದ್ದೆ ಕಡೆ ಓಡುವುದು. ಝರಿಯ ಮೇಲ್ಭಾಗ ದಲ್ಲೇ ನಮ್ಮ ಮನೆ. ಎದುರಿಗೆ ಕಾಡು ಕಾಲು ಚಾಚಿ ತಣ್ಣಗೆ ಮಲಗಿತ್ತು. ಶಾಲೆ ಇರದ, ಟಿ.ವಿ. ಇರದ ನನ್ನೂರಿಗೆ ಹೊರ ಜಗತ್ತಿನೊಂದಿಗೆ ರೇಡಿಯೋ ಒಂದೇ ಕೊಂಡಿ. ಒತ್ತಡಗಳಿಲ್ಲದ, ಅಸೀಮ ಸಂತೋಷ ತುಂಬಿದ್ದ ಕಾಲ!ಊರಿಗೊಂದೇ ಬಸ್ಸು ಶಂಕರ ವಿಠಲ. ದಿನಕ್ಕೆ ಎರಡೋ ಮೂರೋ ಟ್ರಿಪ್ ಹೊಡೀತಿತ್ತು. ಬಸ್ಸು ನನ್ನೂರಿನಿಂದ 3 ಮೈಲು ದೂರದಲ್ಲಿ ನಿಲ್ಲುತ್ತಿತ್ತು. ದೋಣಿ ಕಡುವಿನಲ್ಲಿ ಹೊಳೆ ಇಳಿದು, ಪಂಚೆ ಎತ್ತಿ, ಚಡ್ಡಿ ಒದ್ದೆ ಮಾಡಿಕೊಂಡು ದಾಟಬೇಕಿತ್ತು. ಬಸ್ಸಿಳಿದು ದಾರಿಗುಂಟ ನಡೆವ ಖುಷಿಯೇ ಬೇರೆ. ಬಿಸಿಲು ತಾಕದ ಬಳಸು ದಾರಿ. ಬಾನಿಗೆರಚಿದ ಮರಗಳು.


ಕಾಡು ಸುತ್ತುತ್ತಾ ಸಾಗುತ್ತಿದ್ದೆವು. ಮನೆ ತಲುಪಿದೊಡನೆ ತಾಜಾ ಆಕಳ ಹಾಲಿನ ಕಾಫಿ ಕಾಯುತ್ತಿತ್ತು. ಕಾಫಿ ಸುವಾಸನೆ ಅಡರಿದರೆ ನಡೆದ ದಣಿವೆಲ್ಲಾ ಮಾಯ.ಅಂದು, ಯಾವುದೋ ದಿನ, ವಾರ, ತಿಥಿ, ನಕ್ಷತ್ರಗಳ ಪರಿವೆ ಇಲ್ಲದ ಕಾಲ! ನಾನು ಅಕ್ಕ ಮತ್ತು ಅಣ್ಣ ಚಕ್ರಾ ನದಿಯಲ್ಲಿ ದೋಣಿ ಬಿಡಲು ಹೊರಟೆವು. ನದಿಯಲ್ಲಿ ನೀರು ತುಂಬಾ ಇತ್ತು. ಅಣ್ಣನೇ ನಾವಿಕ. ಹೊರಟಿತು ನೋಡಿ ನಮ್ಮದೋಣಿ ಸವಾರಿ. ನಡು ಹೊಳೆಗೆ ಬಂದಿದ್ದೆವು, ದೋಣಿ ಹುಟ್ಟು ಜಾರಿ ನದಿಗೆ ಬಿತ್ತು. ಹುಟ್ಟು ತೇಲುತ್ತಾ ಸಾಗುತ್ತಿದ್ದದ್ದು ಕಾಣಿಸುತ್ತಿತ್ತು. ಅಕ್ಕ ನಾನು ಗಾಬರಿ ಬಿದ್ದೆವು. ಅಣ್ಣ ದುಡುಂ ಎಂದು ನೀರಿಗೆ ಧುಮುಕಿ ಅದು ಹೇಗೊ ಹುಟ್ಟು ಹುಡುಕಿದ! ನಾವಿಬ್ಬರೂ ದೋಣಿಯೊಂದಿಗೆ ಕೆಳಮುಖವಾಗಿ ಪ್ರಯಾಣ ಹೊರಟಾಗಿತ್ತು. ಚಕ್ರಾ ನದಿಯಲ್ಲಂತೂ ವಿಪರೀತ ಕಲ್ಲು. ಯಾವ ಕಲ್ಲಿನ ಮೇಲೆ ಪ್ರಾಣ ಹೋಗುವುದೊ ಎಂಬ ಭಯ.
 ಚಿತ್ರ ವಿಚಿತ್ರ ಹೆಸರಿನ ತಳ ಕಾಣದ ಗುಂಡಿಗಳು ಹೊಳೆಗುಂಟ ಹರಡಿದ್ದವು. ಈಜುತ್ತಾ ಬಂದು ಅಣ್ಣ ದೋಣಿಯನ್ನು ಹಿಡಿತಕ್ಕೆ ತಂದ. ಅದಾಗಲೇ ನಮಗಾಗಿ ಹುಡುಕಿ ಸುಸ್ತಾಗಿ ದೊಡ್ಡ ಹೊಳೆ ಕಡುವಿಗೆ ದೊಡ್ಡಪ್ಪ ನುಕ್ಕಿ ಅಡ್ರು ಹಿಡಿದು ಬಂದಿದ್ದರು. ‘ಹತ್ತಿ ಬೆಟ್ಟುಎಂದು ಕೂಗಿದ ಕೂಡಲೆ, ದೋಣಿಯನ್ನು ಬೆಟ್ಟಿಗೆ ತಂದು ಪರಾರಿಯಾದೆವು. ಆಮೇಲೆ ಸಿಕ್ಕಿಕೊಂಡೆವು. ಯಾರಿಗೆಷ್ಟು ಪೆಟ್ಟು ಬಿತ್ತೆಂದು ಈಗ ನೆನಪಿಲ್ಲ. ಮನೆ ಸಮೀಪದ ಹಳ್ಳ ದಲ್ಲಿ ದಿನಾಲೂ ಈಜಿದ್ದು, ಝರಿಯಲ್ಲಿ ಬಾಳೆದಿಂಡು ಕತ್ತರಿಸಿ ದೋಣಿ ಮಾಡಿ ಅದರ ಮೇಲೆ ಕುಳಿತು ತೇಲಿದ್ದು, ಬ್ರಹ್ಮನ ಗುಂಡಿ, ರಾಕ್ಷಸ ಗುಂಡಿಯಲ್ಲಿ ಈಜು ಕಲಿತಿದ್ದು, ಬಿಚ್ಚ ಹೋದರೆ ಸಾವಿರ ನೆನಪಿನ ಬುತ್ತಿ ನಮ್ಮೂರು. ಆಗೆಲ್ಲಾ ಹಳ್ಳಿ ಯವರೇ ಸೇರಿ ಹಳ್ಳಕ್ಕೆ ಕಟ್ಟುಗಳನ್ನು ಹಾಕುತ್ತಿದ್ದರು. ನೀರು ಶೇಖರವಾಗಿ ಪೂರ್ತಿ ತೋಟಕ್ಕೆ ಹೋಗುವಂತೆ, ಗದ್ದೆಗೆ ಬರುವಂತೆ ಮಾಡಿಕೊಳ್ಳುತ್ತಿದ್ದರು.
ನೀರಿನ ನಿರ್ವಹಣೆಯನ್ನು ನಮ್ಮ ಹಿಂದಿನವರಿಂದ ಕಲಿಯಬೇಕು. ಈಗ ಮೇಘ ಮುಖಿ ಮರಗಳೂ ಇಲ್ಲ, ಹಳ್ಳ ಕೂಡ ಮನುಷ್ಯನ ಹಣದಾಹಕ್ಕೆ ಸ್ಲಿಮ್ ಆಗಿದ್ದಾಳೆ. ಕಾಡಿದ್ದ ಜಾಗಗಳಲ್ಲಿ ತೋಟಗಳೆದ್ದಿವೆ. ನಾವು ತಿನ್ನುತ್ತಿದ್ದ ಕಾಟು ಮಾವಿನಹಣ್ಣಿನ ಮರಗಳು ಕಿಟಕಿ ಬಾಗಿಲುಗಳಾಗಿ ಯಾರದೋ ಮನೆ ಸೇರಿವೆ. 60-70 ಆಕಳಿದ್ದ ಕೊಟ್ಟಿಗೆಯಲ್ಲಿ ಸಂಖ್ಯೆ ಎರಡಕ್ಕಿಳಿದಿದೆ. ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ ಹರಡಿದ ಕಮ್ಮರಪಾಲೆಂಬ ನಂದನವನ ನನ್ನ ಭಾವಕೋಶದ ಭಿತ್ತಿಯೊಳಗಿನ್ನೂ ಹಸಿರು ಹಸಿರು ಹಸಿರು.
ಶ್ರೀಧರ್. ಎಸ್ ಸಿದ್ದಾಪುರ

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...