Wednesday, December 19, 2018

ಕಡಲ ಮಕ್ಕಳ ಕಥೆಗಳು.......



ಕಡಲಿಗೂ, ನದಿಗೂ ಮಳೆಗೂ ಅವಿನಾಭಾವ ಸಂಬಂಧ. ನಮ್ಮ ಕಡೆ ಅಂದರೆ ಗೋಕರ್ಣ ಸೀಮೆಯ ಕಡೆ ಮಳೆಗೆ 'ಮಳಿ' ಎಂದು ರಾಗ ಎಳೆದು ಹೇಳುತ್ತೇವೆ. ಕೆಲವು ಪದಗಳಿಗೆ 'ಡ' ಸೇರಿಸಿ ಬಿಡುತ್ತೇವೆ! ಎಲ್ಲವನ್ನೂ ತಿಕ್ಕಿ, ಕತ್ತರಿಸಿ, ತುಂಡರಿಸಿ ಚೂಪು ಮಾಡಿ ಹೃಸ್ವಗೊಳಿಸಿ ಬಿಡುತ್ತೇವೆ! ಹಾಗೆಂದು ನಾವು ಕಂಜೂಸುಗಳಲ್ಲ. ನಮ್ಮ ಜಾನಪದಗಳಲ್ಲಿ ಹಣಕಿ ಹಾಕಿದರೆ ನಮ್ಮ ಶ್ರೀಮಂತಿಕೆ ಅರಿವಿಗೆ ಬರುತ್ತದೆ. ಭಾಷೆಯಂತೆ ನಮ್ಮ ಕಡೆ ಸಂಪ್ರದಾಯಗಳೂ ಅನನ್ಯ. ರುಚಿ ಮೊಗ್ಗು ಅರಳಿಸುವ ಅಡುಗೆಗಳೂ ಅಪಾರ.






  ಇಂತಹ ಜಾನಪದೀಯ ಜ್ಞಾನ ಹೊತ್ತ ದೇಸಿ ಪಂಗಡಗಳು ನೂರಾರು. ಕೆಲವಂತೂ ನಶಿಸಿಯೇ ಹೋಗಿವೆ. ಅಂತಹ ವಿಶಿಷ್ಟ ಜ್ಞಾನ ಪರಂಪರೆಯಿಂದ ಸಂಪನ್ನರಾದವರು ಹಾಲಕ್ಕಿಗಳು. ತಮ್ಮ ಆಚರಣೆಯಿಂದ ಕರ್ನಾಟಕದಾದ್ಯಂತ ವಿಶಿಷ್ಟ ಛಾಪು ಮೂಡಿಸಿದವರು ಹಾಲಕ್ಕಿಗಳು. ಹಾಲಕ್ಕಿಗಳ ಗೌಡ ಹೆಂಗಸೊಬ್ಬಳು ಸಿಕ್ಕಿದ್ದಳು. 80 ರ ಇಳಿ ಪ್ರಾಯದಲ್ಲೂ ಬೆಳಗ್ಗಿನ ಹೊತ್ತು ಗುಡ್ಡೆಗೆ ಸೊಪ್ಪು ತರಲು ಹೋಗಿದ್ದಳು. ಅವಳ ಮಕ್ಕಳು ಕುಡಿಯಲು ಕಷಾಯ ಮಾಡಿಕೊಟ್ಟಿದ್ದರು. ಅಂತಹ ವಿಶಿಷ್ಟ ರುಚಿಯ ಕಷಾಯವನ್ನು ಇವತ್ತಿನವರೆಗೂ ನಾ ಕುಡಿದ್ದಿದಿಲ್ಲ. ಬೆಟ್ಟದ ಯಾವುದೋ ಸೊಪ್ಪಿನಿಂದ ಅದಕ್ಕೆ ವಿಶಿಷ್ಟ ರುಚಿ ಬಂದಿತ್ತು. ಅವರು ಹೇಳಿದ ಸೊಪ್ಪು ನನಗೆ ಯಾವುದೆಂದು ತಿಳಿಯಲಿಲ್ಲ. ಇವರು ಹಬ್ಬ, ಆಚರಣೆ ಸಂಪ್ರದಾಯಗಳಲ್ಲಿ ಇವರು ವಿಶಿಷ್ಟತನವನ್ನು ಇನ್ನೂ ಕಾಪಾಡಿಕೊಂಡು ಬಂದಿದ್ದಾರೆ.


ಕಡಲಿಗೆ ಮುಖ ಮಾಡಿ ಕುಳಿತರೆ ಸಿಗುವ ಅನುಭವವೇ ಅನನ್ಯ. ನೂರಾರು ಕತೆಗಳ ಸುರಳಿ ಅಲೆಗಳ ನಡುವೆ ಬಿಚ್ಚುತ್ತಾ ಸಾಗುತ್ತೆ. ಆಲಿಸುವ ಕಿವಿಗಳಿಲ್ಲದೇ ಬಂಡೆಗಳಿಗೇ ಅಪ್ಪಳಿಸಿ ಅಲೆಗಳಲ್ಲೇ ಲೀನವಾಗುವವು.

ಅಂತಹುದೊಂದು ಪಂಗಡ ಗೋಕರ್ಣದ ಕಡಲ ಸುತ್ತಲಿದ್ದಾರೆ. ಬೇರೆಲ್ಲೂ ಕಾಣಸಿಗದ ಇವರು ನಾಗರಿಕ ಪ್ರಪಂಚದ ಸುಖ ಭೋಗಗಳಿಂದ ಬಹಳ ದೂರ. ನಿರ್ಲಿಪ್ತರು. ಸ್ನೇಹ ಜೀವಿಗಳು. ಕಡಲಿನೊಂದಿಗೆ ಸೆಣಸುವುದೇ ಇವರ ಬದುಕು. ಇವರ ಕಡಲ ಜ್ಞಾನ ಅಪಾರ. ಕಡಲಿನ ಒಳ ಹೊಕ್ಕು ತಿಳಿದವರು. ಅಂತಹ ಒಂದು ಪಂಗಡ ಗೋಕರ್ಣದ ಓಂ ಬೀಚ್ನ ಉಬ್ಬರದ ಸಮಯದಲ್ಲಿ ಭೇಟಿಯಾದರು.

ಏನೇನೋ ತಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಕೈಯಲ್ಲ್ಲೊಂದು ಗಾಳ. ಬೆನ್ನ ಹಿಂದೆ ಕಟ್ಟುವ ಒಂದು ಕತ್ತಿ. ಒಂದು ಪ್ಲಾಸ್ಟಿಕ್ ಚೀಲ ಇವಿಷ್ಟೇ ಅವರ ಅಸ್ತ್ರ. ಅಂದು ಕಡಲು ಎಷ್ಟು ಪ್ರಕ್ಷುಬ್ದಗೊಂಡಿತೆಂದರೆ ಬಂಡೆಗಳಿಗೆಲ್ಲಾ ತನ್ನ ಅಪರಿಮಿತ ಸಿಟ್ಟನ್ನು ತೋರುತ್ತಿತ್ತು. ಆದರೆ ಅವರು ನಾವು ಕಣ್ಣು ಮಿಟುಕಿಸುವಷ್ಟರಲ್ಲೇ ಕಡಲಿಗಿಳಿದು ಎದುರಿಗಿದ್ದ ನಡುಗುಡ್ಡೆಯೊಂದನ್ನು ಅನಾಯಾಸವಾಗಿ ಈಜಿ ಸೇರಿಕೊಂಡರು. ಅವರೊಂದಿಗೆ ಆಚೆ ನಡುಗುಡ್ಡೆಗೆ ಹೋಗುವ ಮನಸೆನೋ ಇತ್ತು. ಆದರೆ ಧೈರ್ಯ. ಅದನ್ನೆಲ್ಲಿಂದ ಕಡ ತರಲಿ?! ಇರಲಿ.. ಅಲ್ಲಿ ಸೇರಿಕೊಂಡವರೇ ಗಾಳ ಹಾಕಿ ಮೀನು ಹಿಡಿಯಲು ಪ್ರಾರಂಭಿಸಿದರು. ಕೆಲವೇ ಕೆಲವು ನಿಮಿಷಗಳಲ್ಲಿ ಅವರ ಕೈಚೀಲಗಳು ಮೀನಿನಿಂದ ತುಂಬಿ ತುಳುಕಿತು. ಯಾವ ಮೀನು ಎಷ್ಟು ಹೊತ್ತಿಗೆ ಎಲ್ಲಿ ಬರುವವೆಂದು ಅವರ ಜ್ಞಾನ ಅಪಾರ! ಬುಟ್ಟಿಯಲ್ಲಿನ ಮೀನು ನೋಡೋಣವೆಂದು ದಿಟ್ಟಿಸಿದೆ. ಮೀನು ಬೇಕಾ? ಎಂದು ತನ್ನ ಭಾಷೆಯಲ್ಲೇ ಕೇಳಿದ. ಆತನ ವಿಚಾರಿಸಿದೆ  ಏನು ಮಾಡುವಿರಿ? ಇಷ್ಟೊಂದು ಮೀನು.  ಅಂದು ಮಾರಲೊಂದಿಷ್ಟು ಮೀನು, ಮನೆ ಖಚರ್ಿಗೆ ಸ್ವಲ್ಪ. ದುಡಿದ ನಾಲ್ಕಾಣಿಯಲ್ಲೇ ಸ್ವಲ್ಪ ಗೋಕರ್ಣನಾಥನ ಹುಂಡಿಗೆ! ಎಂದು ಹೇಳಿ ಸರಸರನೇ ಹೊರಟ.

ಬುದ್ದ ಹೇಳಿದ ಆಸೆರಹಿತ ಸ್ಥಿತಿ ಇದೇ ಇರಬೇಕು. ಅವರ ನಿರುದ್ವಿಗ್ನವಾದ ಜೀವನ ಶೈಲಿ ನನ್ನನ್ನು ಬೆರಗುಗೊಳಿಸಿತು. ಇವಿಷ್ಟೇ ಅವರ ಅಗತ್ಯವೆಂದು ಕಾಣುತ್ತೆ. ಅತಿಯಾಸೆಯೇ ಇಲ್ಲ. ಇಳಿ ಸಂಜೆಯೊಳಗೆ ಅವರು ಹೊರಟು ಬಿಟ್ಟರು!

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...