Saturday, December 28, 2019

ಏಕಶಿಲಾ ಶಿಖರದ ಶಿಖೆಯನ್ನೇರಿ....

ಜಟಕಾ ಬಂಡಿಯ ಹಿಂದೆ  ಓಡುವ ಹುಡುಗಿ


ಇಲ್ಲಿನ ದೃಶ್ಯಗಳು ನಿಮ್ಮನ್ನು ದಂಗು ಬಡಿಸುವುದು. ಗುಪ್ಪೆ ಹಾಕಿದ ದೊಡ್ಡ ಕಲ್ಲು ರಾಶಿ, ನಿದ್ದೆ ಹೋದ ಕುಂಭ ಕರ್ಣನ ಹೊಟ್ಟೆಯನು ನೆನಪಿಸಿ ನಿಮ್ಮಲ್ಲಿ ಬೀಕರವಾದ ಭಯವೊಂದನ್ನು ಹುಟ್ಟಿಸುವುದು. ಭಯವೇ ಕಾವಲಿಗೆ ನಿಂತಂತೆ ಸುತ್ತಲೂ ಕಾಷ್ಠ ಮೌನ.

ಬೆಂಗಳೂರಿನ ಮಾಗಡಿ ಸನಿಹದ ಸಾವನ ದುರ್ಗ ಏಕಶಿಲಾ ಬೆಟ್ಟ ಏಷ್ಯಾದಲ್ಲೇ ಬಹೃತ್ ಬೆಟ್ಟವೆನಿಸಿಕೊಂಡಿದೆ ಎಂಬುದೇ ಒಂದು ಸೋಜಿಗ! ಅದೂ ನಮ್ಮ ಬೆಂಗಳೂರಿನ ಸನಿಹದಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾಗಿಯಾದರೂ ನಾವೊಮ್ಮೆ ಹೋಗಿ ಅದರ ದರ್ಶನ ಪಡೆದು ಧನ್ಯತೆಯ ಪಡೆಯಬೇಕಲ್ಲವೇ? ಹೊಯ್ಸಳ ಕಾಲದಲ್ಲಿ ಸಾವಂದಿ ಎಂದು ಕರೆಸಿಕೊಂಡಿದ್ದ ಊರು. ದಂಗು ಬಡಿಸುವ ಏಕಶಿಲೆಯ ಏರು, ಇಳಿಜಾರುಗಳ ಮೇಲ್ಮೈ ಮೇಲೆ ಎಚ್ಚರ ತಪ್ಪಿದರೆ ಸ್ವರ್ಗಕ್ಕೆ ತೋರಣ ಕಟ್ಟುವ ತಾಣ. ಇದರ ಚಾರಣ ಅನುಭವ ಜೀವಮಾನದ ಒಂದು ರೋಚಕ ಅನುಭವ! ನೆನೆಸಿಕೊಂಡರೆ ಈಗಲೂ ಕಣ್ಣ ರೆಪ್ಪೆಗೆ ನಿದ್ದೆ ಹತ್ತದು! ನೋಡಿದರೆ ನಡುಕ ಹುಟ್ಟಿಸುವ ಇದರ ಇಳಿಜಾರು. ಜೊತೆಗೆ ಇದು ಒಡ್ಡುವ ಸವಾಲು ಎದುರಿಸಿ ಮೇಲೇರಿದರೆ ಆವರಿಸುವ ಧನ್ಯತೆ ಅಪಾರ. ಏಕಶಿಲಾ ಬೆಟ್ಟ ಚಾರಣ ಮಾಡಲು ನಾನು ರೆಡಿ, ನೀವು?



ನಾವಿಲ್ಲಿಗೆ ದಾಂಗುಡಿ ಇಟ್ಟದ್ದು ನಡು ಮಧ್ಯಾಹ್ನದ ಹೊತ್ತು. ಸೂರ್ಯ ನೆತ್ತಿ ಸುಡುತಲಿದ್ದ. ಕಾಯ್ದಿಟ್ಟ ಅರಣ್ಯವಾದ್ದರಿಂದ ತೀರ ಬಿಸಿಲೆನಿಸಲಿಲ್ಲ. ಒಂದು ಕಾಲದಲ್ಲಿ ರಾಜ ಮಹಾರಾಜರು ನಡೆದಾಡಿದ ಭೂಮಿ. ಈಗ ಕಾಡು ಮತ್ತು ನಿರ್ಲಕ್ಷಿತ ಪ್ರದೇಶ. ಸುತ್ತಲಿನ ಅರಣ್ಯಗಳಲ್ಲಿ ಹಿಂದಿನ ಕಾಲದ ಮನೆಗಳ ಹಲವು ಕುರುಹುಗಳು ಕಂಡವು. ಪಾಳು ಬಿದ್ದ ಅಡಿಪಾಯಗಳು ಅಲ್ಲಲ್ಲಿ ಕಾಣಸಿಕ್ಕವು. ನಾಲ್ಕಾರು ಮನೆ ಬಿಟ್ಟರೆ ಹೆಚ್ಚಿನ ಜನವಸತಿ ಇದ್ದಂತಿಲ್ಲ. ಆದರೂ ಬಂದ ಪ್ರವಾಸಿಗರು ಮಾಡಿದ ಗಲೀಜು ಮುಖಕ್ಕೆ ರಾಚುವಂತ್ತಿತ್ತು. ಕುಡಿದ ಎಳನೀರಿನ ರಾಶಿ, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಮುಖಕ್ಕೆ ಹೊಡೆಯುವಂತ್ತಿತ್ತು.


ಮೊದಲ್ಗೊಂಡ ಮಂದ್ರ
ಏಕಶಿಲಾ ಬೆಟ್ಟದ ಸೆರೆಗಿನಲ್ಲಿ ಎರಡು ದೇವಾಲಯಗಳು ತಣ್ಣಗೆ ಕುಳಿತಿದ್ದವು. ಉದ್ಭವ ಉಗ್ರನರಸಿಂಹನಿಗೆ ಕೈಮುಗಿದು, ತೋರಣ ಕಂಬಗಳ ದಾಟಿ ಮತ್ತೊಬ್ಬ ದೇವನಾದ ವೀರಭದ್ರನಿಗೆ ನಮ್ಮ ಮುಡಿಪು ಸಲ್ಲಿಸಿ, ತಂದ ಪೊಂಗಲ್ ಡಬ್ಬಿ ಖಾಲಿಮಾಡಿ ಬೆಟ್ಟವೇರಲು ಶುರುವಿಟ್ಟೆವು. ಅಸಾಧ್ಯವೆನಿಸುವ ಅದರ ಎಡ ಮಗ್ಗುಲಿನ ಇಳಿಜಾರಿನಲ್ಲಿ ಏಕಶಿಲೆಗೆ ಎದೆಯೊಡ್ಡಿ ಚಪ್ಪಲಿ ಕೈಲಿ ಹಿಡಿದು ಕೆಲವರು ಬೆಟ್ಟವೇರುವ ವಿಚಿತ್ರ ಸರ್ಕಸ್ನಲ್ಲಿ ತೊಡಗಿದ್ದರು. ನಡು ನಡುವೆ ಕುಳಿತ ಕೆಲವರು ಮೇಲೂ ಏರಲಾಗದೇ ಕೆಳಗೂ ಇಳಿಯಲಾಗದೆ ತ್ರಿಶಂಕು ಸುಖವನ್ನು ಅನುಭವಿಸುತ್ತಾ ಕುಳಿತ್ತಿದ್ದರು! ಇನ್ನೂ ಕೆಲವರು ಕಾಲು ಸಾಲದೆನಿಸಿ ಕೈಬಳಸಿ ತಮ್ಮ ಪೂವರ್ಾಶ್ರಮಕ್ಕೆ ಮತ್ತೆ ಹಿಂದಿರುಗಿದ್ದರು. ಇವರ ಪಚೀತಿ, ಪೇಚಾಟ ನಮಗೆ ನಗು ತರಿಸುತ್ತಿತ್ತು. ನಮ್ಮ ಗತಿಯೂ ಹೀಗೇ ಆಗುವುದು ಎಂದೆಣಿಸಿ ಒಮ್ಮೆ ಎದೆ ನಡುಗಿತು. ನಾನು ಮತ್ತು ಗೆಳೆಯ ಸಂದೀಪ್ ಬಲ ಮಗ್ಗುಲಿನ ಬೆಟ್ಟದ ಓಣಿ ಬಳಸಿ, ಮಳೆ ಬರದಿರಲಿ ಎಂದು ಮನದಲ್ಲೇ ಪ್ರಾಥರ್ಿಸಿ ಏಕಶಿಲೆಯನ್ನು ಏರಲು ಮೊದಲ್ಗೊಂಡೆವು.



ದಾಟು
ಸಾವನ್ ದುರ್ಗ ಸಮುದ್ರಮಟ್ಟದಿಂದ 1,227 ಮೀಟರ್ ಎತ್ತರದಲ್ಲಿದೆ. ಕೆಲವೊಂದು ಕಡೆ 60 ಡಿಗ್ರಿಯ ಏರು, ಹೆಲವೆಡೆ 80 ಡಿಗ್ರಿಯ ಏರು ನಮ್ಮ ಎದೆ ಬಡಿತ ಹೆಚ್ಚಿಸಿದವು. ಕಾಲು ನಡುಗುತಲಿತ್ತು. ಬೆಣ್ಣೆ ಮುದ್ದೆಯಂತಹ ಮೋಡಗಳು ಆಗೀಗ ಅಡ್ಡ ಬಂದು ಬೆಟ್ಟವೇರುವ ನಮ್ಮ ಕಷ್ಟ ಕಡಿಮೆ ಮಾಡಿದವು. ಮೊದಲ ಕೆಲವು ಹೆಜ್ಜೆಗಳಷ್ಟೇ ಹರ್ಷದಾಯಕ. ಹಿಮ್ಮಖವಾಗಿ ನೋಡಿದರೆ ತಲೆ ಗಿರಕಿ ಹೊಡೆಯುತ್ತೆಂದು ಮುಮ್ಮುಖವಾಗಿ ನೋಡುತ್ತಾ ಏರಿದೆವು. ಅರ್ಧ ದಾರಿ ಏರಿದ್ದೆವಷ್ಟೇ. ಇಲ್ಲಿಂದ ಮೇಲೇರುವುದು ಬಿಡಿ ಕೆಳಗೆ ಬರುವ ಬರವಸೆಯನ್ನೂ ನಾನು ಕಳೆದುಕೊಂಡಿದ್ದೆ. ಅಂತಹ ಇಳಿಜಾರು ಪ್ರಪಾತವೊಂದು ನಮ್ಮನ್ನು 'ಇಷ್ಟಯೇ ನಿನ್ನ ತಾಕತ್ತು!' ಎಂದಣಕಿಸಿದಂತಾಯ್ತ್ತು. ಏರು ನೋಡೋಣವೆಂಬ ಸವಾಲು ಹಾಕಿ ಅಚಲವಾಗಿ ನಿಂತಿತ್ತು ಬೆಟ್ಟ. ಇಲ್ಲಿಗೆ ಯಾಕಾದರೂ ಬಂದೆನೋ ಎಂದು ಮನಸ್ಸಿನಲ್ಲೇ ನನಗೆ ನಾನೇ ಬೈದುಕೊಂಡೆ! ಅದೃಷ್ಟಕ್ಕೇ ಇಲ್ಲಿ ಯಾರೋ ಪುಣ್ಯಾತ್ಮ ಬೆಟ್ಟ ಕೊರೆದು ಸಣ್ಣ ಕುಳಿ ತೋಡಿ ಏರುವ ಕಷ್ಟ ಸ್ವಲ್ಪ ಕಡಿಮೆ ಮಾಡಿದ್ದ. ಮೇಲಿನಿಂದ ಎಳೆದು ಕೊಳ್ಳುವವರಿಲ್ಲದೇ ಇದ್ದರೆ ನನಗಂತೂ ಏರುವುದು ಅಸಾಧ್ಯವಿತ್ತು. ಕುಳಿ ಕೊರೆದ ಪುಣ್ಯಾತ್ಮನಿಗೊಂದು ಧನ್ಯವಾದವನ್ನು ಮನಸ್ಸಿನಲ್ಲೇ ಅಪರ್ಿಸಿ, ಅಂತೂ-ಇಂತು ಆ ಏರನ್ನು ದಾಟಿಕೊಂಡೆವು. ಬೆಟ್ಟದ ಮುಕ್ಕಾಲಂಶ ದಾಟಿದ ಮೇಲೆ ಇಳಿಜಾರಿನ ಕೋಟೆಯಂತಹ ರಚನೆ ಬಹಳ ಆಕರ್ಷಕವೂ ಅಪಾಯಕಾರಿಯೂ ಆಗಿತ್ತು. ಅದರ ಒಂದು ಕಲ್ಲು ಎತ್ತಿಡಲು ಇಂದಿನ ಕನಿಷ್ಠ ನಾಲ್ಕು ಜನರು ಬೇಕು! ಅಲ್ಲಲ್ಲಿ ಬುರುಜುಗಳನ್ನು ನಿಮರ್ಿಸಿದ್ದರು. ಸಮೀಪವೇ ಒಂದು ಕಲ್ಲಿನ ಮಂಟಪವನ್ನು ರಚಿಸಿದ್ದರು. ಹೊಯ್ಸಳ ರಾಜರಾದ ಸಾಮಂತರಾದ ಕೆಂಪೇಗೌಡರ ಕಾಲದಲ್ಲಿ ಎರಡನೇ ಅತಿ ಮುಖ್ಯ ಪಟ್ಟಣ ಇದಾಗಿತ್ತು! ಇಂದು ಕಾಯ್ದಿಟ್ಟ ಅರಣ್ಯ. ಟಿಪ್ಪುವಿನಿಂದ ಈ ಕೋಟೆಯನ್ನು ವಶಪಡಿಸಿಕೊಂಡ ಲಾಡರ್್ ಕಾನರ್್ವಾಲಿಸ್ ಇದನ್ನು 'ಸಾವಿನ ಕೋಟೆ' ಎಂದು ಬಣ್ಣಿಸಿದ್ದು ಅಕ್ಷರಶಃ ಸತ್ಯ ಎಂದು ನಮಗೆ ಮನವರಿಕೆಯಾಯಿತು! ಅಂತಹ ಕಡಿದಾದ ಏರಿನ  ಕೋಟೆಯದು.


ನಾಲ್ಕು ಕಾಲಿನಲಿ ಕೆಲವರ ಸರ್ಕಸ್.
 ಏರಲೂ ಕಷ್ಟಕರ ಜಾಗದಲ್ಲಿನ ಕೋಟೆಯ ಮಹತ್ವ ಇಂದಿನ ನಮಗೆ ಅರ್ಥವಾಗುವುದಾದರೂ ಹೇಗೆ? ಅಷ್ಟೊಂದು ಎತ್ತರದಲ್ಲಿ ಕಟ್ಟಿದ ಈ ಕೋಟೆ ನಮ್ಮನ್ನು ಅಚ್ಚರಿಗೆ ನೂಕಿದವು. ಹಿಂದಿನ ಕಾಲದವರ ಇಂಜಿನಿಯರಿಂಗ್ ಜ್ಞಾನ, ಸಾಹಸೀ ಪ್ರವೃತ್ತಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿ ನಮ್ಮನ್ನು ಕುಬ್ಜರನ್ನಾಗಿಸಿತು! ಬುರುಜುಗಳನ್ನೇ ಧ್ಯಾನಿಸುತ್ತಾ ಕುಳಿತೆವು. ಏರಲು ಇನ್ನೂ ಕಾಲಂಶ ಬೆಟ್ಟವಿತ್ತು. ಕೆಲವೆಡೆ ಅಡ್ಡ ಅಡ್ಡವಾಗಿ ನಡೆಯುತ್ತಾ ಜಾರದಂತೆ ಜಾಗೃತೆವಹಿಸಿ, ಅಂತೂ ಮಧ್ಯಾಹ್ನ ಮೂರಕ್ಕೆ ಸರಿಸುಮಾರು ನೆತ್ತಿಯಲ್ಲಿದ್ದೆವು. ಬೆಟ್ಟವೇರಿದ ಸಂತೋಷದಲಿ ಸುಖಿಸಿದೆ. ನೆತ್ತಿಯ ನೋಟ ನಿಮ್ಮನ್ನು ಮತ್ತೊಂದು ಪ್ರಪಂಚಕ್ಕೆ ಕೊಂಡ್ಯೋಯುವುದು. ಸುತ್ತಲಿನ ಕಲ್ಲುಗಳ ವಿಶಿಷ್ಟಾಕೃತಿಗಳ ವೀಕ್ಷಿಸುತ್ತಾ ಸಮಯ ಕಳೆದೆವು.


ತೀವ್ರ ಇಳಿಜಾರಿನಲ್ಲಿ ನಿರ್ಮಿಸಿದ ಮಂಟಪ 



ಬೆಟ್ಟದ ಇಳಿಜಾರು

ಮಂಗನಾಟ!

ಪ್ರಕೃತಿ  ಎಂಬ ಕಲಾಕಾರ

ಕುಂಭ ಕರ್ಣನಂತಹ ಬೆಟ್ಟ.

ಬಂಡೆಯ ಇಳಿಜಾರುಗಳಲ್ಲಿ ಅಲ್ಲಲ್ಲಿ ಗಿಡಗಂಟಿಗಳಿದ್ದವು. ಒಂದು ಕಳ್ಳಿಯಂತೂ ಓಡುವ ಜಟಕಾ ಗಾಡಿಯಂತೆ ಕಾಣಿಸುತ್ತಾ ಆಶ್ಚರ್ಯ ಹುಟ್ಟಿಸಿತು. ಅದರ ಹಿಂದಿನ ಕಳ್ಳಿ ಗಿಡವೊಂದು ಓಡುತ್ತಿರುವ ಚಿಕ್ಕ ಹುಡುಗಿಯಂತೆ ಭಾಸವಾಯಿತು. ದೂರದಲ್ಲಿ ಕಾಣಿಸುತ್ತಿದ್ದ ಚಿತ್ರ, ವಿಚಿತ್ರ ಬಂಡೆಗಳ ಚಿತ್ರ ತೆಗೆಯುತ್ತಾ ನನ್ನ ಲೋಕದಲ್ಲಿ ನಾ ಮುಳುಗಿದೆ. ಬೇಟೆ ಹಕ್ಕಿಗಳು ಅಲ್ಲಲ್ಲಿ ಓಡಾಡಿ ಬೇಟೆಗಾಗಿ ಅರಸುತ್ತಿದ್ದವು. ಮಾಗಡಿ, ರಾಮನಗರ ಚಿರತೆಗಳ ನಾಡು, ಹಾಗಾಗಿ ಇಲ್ಲಿ ಮೊಲ, ಇತರೇ ದಂಶಕಗಳು ಸಾಕಷ್ಟಿದೆ ಎಂದು ಹೇಳಬಹುದು. ದೂರದಲ್ಲಿ ಅಕರ್ಾವತಿ ಮೆಲ್ಲಗೆ ಹರಿಯುತ್ತಿದ್ದಳು. ಅವಳನ್ನೇ ನೋಡುತ್ತಾ ಸ್ವಲ್ಪ ಹೊತ್ತು ಪರವಶನಾದೆವು. ಏರುವ ಕಷ್ಟಕ್ಕಿಂತ ಇಳಿವ ಕಷ್ಟ ಮತ್ತೊಂದು ರೀತಿ. ಬಾಯಿತೆರೆದು ನುಂಗುವಂತಿರುವ ಪ್ರಪಾತವನ್ನೇ ನೋಡುತ್ತಾ, ಬೆಟ್ಟದ ತುಂಬಾ ಕೆನ್ನೀರ ಓಕಳಿ ಚೆಲ್ಲಿದ ಸೂರ್ಯನೊಂದಿಗೆ ಸ್ಪಧರ್ೆಗಿಳಿದು ಜಾರದಂತೆ ಜಾಗರೂಕ ಹೆಜ್ಜೆ ಇಟ್ಟು, ಬೆಟ್ಟ ಇಳಿದೆವು. ಸೂರ್ಯ ಪೂರ್ವದಲ್ಲಿ ಕರಗುವ ಮುನ್ನವೇ ಅಲ್ಲಿಂದ ಹೊರಟೆವು. ಇಷ್ಟು ಬೇಗ ಹೊರಟಿರಾ ಎಂದು ಬೆಟ್ಟ ನಕ್ಕಂತಾಯಿತು! ಇಂತಹ ಸುಂದರ ಸ್ಥಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ?


ಶ್ರೀಧರ. ಎಸ್. ಸಿದ್ದಾಪುರ.
ವಿಳಾಸ- ಸಿದ್ದಾಪುರ ಅಂಚೆ ಮತ್ತು ಹಳ್ಳಿ,
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576229.

Friday, December 6, 2019

ಝರಿ ಎಂಬ ಜಲ ಕನ್ನಿಕೆಯ ಬೆನ್ನು ಹತ್ತಿ....


ಗವಿಕಲ್ ಗಂಡಿ.

ದೂರದಲ್ಲೆಲ್ಲೋ ಕಾಣುವ ಸಣ್ಣ ಹಳ್ಳಿ. ಕಣ್ಣು ತುಂಬಿಕೊಂಡಷ್ಟು ಮತ್ತೆ ನೋಡುವಂತೆ ಮಾಡುವ ಮುಗಿಲುಗಳ ಮೈ ಮರೆಸುವ ನೋಟ. ವಿವಿಧ ಬಂಗಿಗಳ ಪೋಟೋ ಸೆಷನ್ ನಡೆಯುತ್ತಿತ್ತು. ಸಣ್ಣ ಹೂ ಬಿಡುವ ಗಿಡಗಳು ನಮ್ಮ ಪೋಟೊ ತೆಗೆಯಿರಿ ಎಂದು ವಿನಂತಿಸುತಿರುವವೋ ಎಂದೆನಿಸುತ್ತಿತ್ತು. ಜಾರುವ ಕಲ್ಲುಗಳನ್ನು ಏರಿ ಸ್ವಲ್ಪ ದೂರ ಹೋಗಿ ಮೂಕವಿಸ್ಮಿಯನಾಗಿ ಹಿಂದಿರುಗಿದೆ. ಇಂತಹ ಗವಿಕಲ್ಲು ಗಂಡಿಯ ಸುಮನೋಹರ ನೋಟವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿರುವಾಗ ನಮ್ಮ ಡ್ರೈವರ್ ಇಲ್ಲೇ ಸನಿಹದಲ್ಲೊಂದು ಜಲಪಾತವಿದೆ ನೋಡೋಣವೇ ಎಂದ. ಸರಿ ಎಂದು ಅಲ್ಲಿಂದ ಹೊರಟೆವು. ಸಿರಿಯುಕ್ಕಿಸುವ ಸುಮನೋಹರ ಮಲೆಗಳ ಸಾಲು ಸಾಲು ದಾಟಿ ಮುಂದಿನ ತಿರುವಿನ ತುದಿಯಲ್ಲಿ ಇಳಿಸಿ, ಇಲ್ಲೇ ಸ್ವಲ್ಪ ದೂರದಲ್ಲಿದೆ ನಡೆದು ಹೋಗಿ ಎಂದ. ಎದುರಿಗೊಂದು ಕಣಿವೆಯೊಂದು ಬಾಯ್ದೆರದು ನಿಂತ್ತಿತ್ತು. 


ಝರಿ ಜಲಧಾರೆ...
ದಾರಿ ಯಾವುದಯ್ಯ?
ಚಿಕ್ಕಮಗಳೂರಿನಿಂದ ಗವಿಕಲ್ಲ್ಗಂಡಿಯಿಂದ ಎರಡು ಕಿಲೋ ಮೀಟರ್ ಚಲಿಸಿ ಎಡಕ್ಕೆ ಹೊರಳಿ ಕೊರಕಲಲ್ಲಿ ಇಳಿದರೆ ಝರಿ ಜಲಧಾರೆ ಯ ದಾರಿ ತೆರೆದುಕೊಳ್ಳುವುದು.

ಜಾರುವ ಇಳಿಜಾರಿನಲ್ಲಿ ಸರ್ಕಸ್-

 ಜಾರುವ ಕೊರಕಲಿನಲ್ಲಿ ಚಿಕ್ಕ ಮಕ್ಕಳೊಂದಿಗೆ  ನಿಧಾನಕ್ಕೆ ಹೆಜ್ಜೆ ಇಡುತ್ತಾ ನಡೆಯ ತೊಡಗಿದೆವು. ಹಾದಿಯುದ್ದಕ್ಕೂ ಕೆಂಪು, ನೀಲಿ ಹೂಗಳನ್ನು ಯಾರೋ ಹರಡಿದಂತ್ತಿತ್ತು. ಹಲವು ಬಗೆಯ ಆಕರ್ಿಡ್ಗಳು ಮರದಿಂದ ಇಣುಕು ಹಾಕುತ್ತಿದ್ದವು. ಕೆಲವು ನೆಲದಲ್ಲಿ ಅರಳಿ ನಿಂತಿದ್ದವು. ಅವನ್ನೆಲ್ಲಾ ಕ್ಯಾಮರದಲ್ಲಿ ಬಂದಿಯಾಗಿಸಿಕೊಂಡೆವು. ಅನೇಕ ಬಳ್ಳಿಗಳು ಬಿಡದಂತೆ ಮರ ಸುತ್ತಿ, ಹೂ ಬಿಟ್ಟಿದ್ದವು. ಮಲಬಾರ್ ವಿಸಲಿಂಗ್ ಥ್ರಷ್ನ ಸಣ್ಣದನಿ ಎಲ್ಲಿಂದಲೋ ಕೇಳಿಬರುತ್ತಿತ್ತು. ದಾರಿಯೂ ಸಣ್ಣಗೆ ಜಾರುತ್ತಿತ್ತು. ಜಾರದಂತೆ ಗಿಡ ಬಳ್ಳಿಗಳನ್ನು ಹಿಡಿದು ನಡೆಯುತ್ತಿದ್ದೆವು. ಕೊರಕಲಿನಲ್ಲಿ 2 ಕಿಲೋ ಮೀಟರ್ ನಡೆದರೂ ಜಲಧಾರೆಯ ಸುಳಿವಿಲ್ಲ್ಲ.  ಕಾನನದಲ್ಲಿ ಯಾರನ್ನು ಕೇಳುವುದು? . ಮೊದಲ ಮಳೆ ಸಣ್ಣಗೆ ಜಿನುಗಿ ನಾಪತ್ತೆಯಾಗಿತ್ತು. ದಾರಿ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಜಲಪಾತದ ಕುರುಹು ಸಹ ಕಾಣಲಿಲ್ಲ. ಹಾವು ಮಲಗಿದಂತೆ ಮಲಗಿದಂತಹ ದಾರಿಯಲ್ಲಿ ನಡೆ ನಡೆದು ಕಾಲು ಮುಷ್ಕರ ಹೂಡಿತ್ತು. ಜೊತೆಯಲ್ಲಿ ಚಿಕ್ಕ ಮಕ್ಕಳನ್ನು ಹೊರುವ ಕಷ್ಟ ಬೇರೆ. ಇಲ್ಲೇ ಹತ್ತಿರದಲ್ಲಿದೆ ಎಂದ ಚಾಲಕನನ್ನು ಮಕ್ಕಳನ್ನು ಹೊತ್ತ ಅಮ್ಮಂದಿರು ಮನಸಾರೆ ಶಪಿಸಿದರು. 
ತಿಳಿಯದ ಹಾದಿಯಲ್ಲಿ ನಡೆವ ಸುಖವನ್ನುಂಡು ಹರಟುತ್ತಾ, ಗಿಡ, ಬಳ್ಳಿ ನೋಡುತ್ತಾ ಲೋಕ ಮರೆತವರಂತೆ ನಡೆಯ ಹತ್ತಿದೆವು. ಸುಂದರ ಜಲಧಾರೆ ನೋಡುವ ಆಸೆ ನಮ್ಮನ್ನು ಇನ್ನೂ ಕೆಳಗಿಳಿಯುವಂತೆ ಪ್ರೇರೆಪಿಸುತ್ತಿತ್ತು. ಒಂದೆರಡು ಸಲ ಮಣ್ಣಿನೊಂದಿಗೆ ಚಕ್ಕಂದವಾಡಿಯಾಗಿತ್ತು. ಅಂತು ಇಂತು ಮಕ್ಕಳನ್ನು ಹೊತ್ತು 2 ಗಂಟೆಯಷ್ಟು ನಡೆದಾಗ ಕೊನೆಗೊಂದು ಮನೋಹರ ಜಲಧಾರೆಯೊಂದು ನಮ್ಮ ಕಣ್ಗಳಿಗೆ ಗೋಚರಿಸಲು ಪ್ರಾರಂಭವಾಯಿತು. ನಡೆದ ದಣಿವಿಗೆ ಅಮೃತ ಸಿಂಚನವಾಯಿತು. ಆತುರಾತುರವಾಗಿ ಇಳಿದು, ಜಲಧಾರೆಯಡಿಯಲ್ಲಿ ತಲೆ ಒಡ್ಡಿದಾಗಲೇ ಸಮಾಧಾನವಾಗಿದ್ದು. ಹಿಮದ ಹನಿಗಳ ಸಿಂಚನದಂತಿತ್ತು  ಜಲಧಾರೆಯ ನೀರು. ಸಣ್ಣ ಹನಿ ಹನಿಯಾಗಿ ಜಿನುಗುವ ಜಲಧಾರೆಯ ಸೊಬಗು ಪದಗಳಲ್ಲಿ ಹಿಡಿದಿಡಲಾರೆ. ಎರಡು ಹಂತಗಳಲ್ಲಿ ಧುಮುಕುವ ಜಲಧಾರೆಯ ಪೂರ್ಣ ಚಿತ್ರ ತೆಗೆಯುವುದು ಸ್ವಲ್ಪ ಕಷ್ಟ ಸಾಧ್ಯ. ಇನ್ನೂ ನಿಗೂಢವಾಗಿರುವ ಇದನ್ನು ಅನೇಕ ಹೆಸರಿನಿಂದ ಕರೆಯುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದರು. ಝರಿ ಜಲಧಾರೆ ಎಂಬುದು ಇದರದೊಂದು ಹೆಸರು. ತೊರೆಯನ್ನು ವಿವಿಧ ಕೋನದಲ್ಲಿ, ಕ್ಯಾಮರದ ವಿವಿಧ ಸೆಟ್ಟಿಂಗ್ ಬಳಸಿ ಕ್ಲಿಕ್ಕಿಸಿದೆ. ಕಾನನದ ನಡುವೆ ಕಾಡುವಂತಹ ಎಷ್ಟು ಸುಂದರಿಯರು ಹೆಸರಿಲ್ಲದೇ ತಣ್ಣಗೇ ಹರಿಯುತಿರುವರೋ ಎಂದು ಅಚ್ಚರಿಯಾಯಿತು. ಮನಸ್ಸು ತಣಿದಿತ್ತು.
ಅರಳಿ ನಿಂತ ಆರ್ಕಿಡ್.

ಹಾದಿ ಬದಿಯಲ್ಲಿ ಬಣ್ಣದ ಗಿಡ.
 ಮಳೆಗಾಲದ ಕೆಲವೊಂದು ಆಕರ್ಿಡ್ ಸಸ್ಯಗಳು ನಮ್ಮ ಚೀಲ ಸೇರಿದವು. ಮರಳುವ ಹಾದಿ ಎಣಿಸಿದಾಗ ಒಮ್ಮೆ ಎದೆ ಜಲ್ಲನೆ ನಡುಗಿತಾದರೂ ಮೇಲೇರಲೇ ಬೇಕಾದುದರಿಂದ ಕಡಿದಾದ ಬೆಟ್ಟವೇರ ತೊಡಗಿದೆವು. ಅಂತೂ ತುದಿ ತಲುಪಿದಾಗ ಸಾರ್ಥಕ ಭಾವ. ಇಳಿಯುವ ಗಡಿಬಿಡಿಯಲ್ಲಿ ಸುತ್ತಲಿನ ಪರಿಸರ ಗಮನಿಸಲಿಲ್ಲವಾಗಿತ್ತು. ಸುತ್ತಲೂ ಚಿತ್ತಾಕರ್ಷಕವಾದ ಮನೋಹರ ಚಿತ್ರವೊಂದು ನಮ್ಮ ಮುಂದೆ ತೆರದುಕೊಂಡಿತು. ಇಲ್ಲಿಂದ ನಮ್ಮ ಪಟಾಲಂ ಹೊರಟಿದ್ದು ಮುಳ್ಳಯ್ಯನ ಗಿರಿಯೆಡೆಗೆ.
 ಸನಿಹದಲ್ಲೇ ಚಿಕ್ಕಮಗಳೂರಿರುವುದರಿಂದ ವಾಸ್ತವ್ಯಕ್ಕೆ ಯಾವುದೇ ಕುಂದಿಲ್ಲ. ನೋಡಲು ಬೇಲೂರು, ಹಳೆಬೀಡು, ದತ್ತ ಪೀಠ, ಮುಳಯ್ಯನ ಗಿರಿಗಳಿವೆ. ನವೆಂಬರ್ನಿಂದ ಮೇ ವರೆಗೆ ಪ್ರಯಾಣಕ್ಕೆ ಸೂಕ್ತ.
     ಶ್ರೀಧರ್. ಎಸ್. ಸಿದ್ದಾಪುರ.

Friday, November 22, 2019

ನೀವು ಓದಲೇ ಬೇಕಾದ ಅಪೂರ್ವ ಪುಸ್ತಕ...



 ನಾಗೇಶ್ ಹೆಗಡೆಯವರ ನಿಲುಕಿಗೆ ದಕ್ಕದ ಬರೆಹ ಇರಲಿಕ್ಕಿಲ್ಲ. ಓದುಗರಿಗೆ ವಿಜ್ಞಾನದ 
ಅವರ ಲೇಖನಗಳು ನೀರಿನಷ್ಟು ಸಲೀಸು, ಸರಾಗ. ಅವರ ಹೊಸ ಕೃತಿಯೊಂದು ಹೊರಬಂದಿದೆ, 'ಅಪೂರ್ವ ಪಶ್ಚಿಮ ಘಟ್ಟ'. ಮತ್ತೊಮ್ಮೆ ನಾಗೇಶ ಹೆಗಡೆ ತಮ್ಮ ಬರಹದ ಚುಬುಕನ್ನು ಒರೆಗೆ ಹಚ್ಚಿ ಬರೆದಿದ್ದಾರೆ. ಎಲ್ಲೂ ಓದುಗನಿಗೆ ಭಾರವಾಗದೆ, ಎಳೆಯದೇ ಪಶ್ಚಿಮ ಘಟ್ಟಗಳ ದರ್ಶನ ಮಾಡಿಸಿದ್ದಾರೆ. ಅದೇ ಚವರ್ಿತ ಚರ್ವಣ ಹೇಳದೆ ಹೊಸದೊಂದು ಲೋಕ ಕಟ್ಟಿ ಕೊಟ್ಟಿದ್ದಾರೆ. ಓದಿ ಕೆಳಗಿಟ್ಟರೆ ಹೃದಯ ಭಾರ ಭಾರ. ಸಾಕ್ಷಾತ್ ನಾವೇ ಅಲ್ಲಿ ಅಲೆದು ಬಂದಂತೆ ಭಾಸವಾಗುತ್ತದೆ. ಮನಸ್ಸು ಅಲ್ಲಿಗೆ ಓಡುತ್ತದೆ.
ಇಲ್ಲಿನ ಜೀವ ಸಂಕುಲಗಳ ಹೊಸ ಲೋಕ, ವಿಶಿಷ್ಟ ಅನನ್ಯ ಪ್ರಭೇದದ ಪ್ರಾಣಿ, ಪಕ್ಷಿ, ಕೀಟ ಪ್ರಭೇದಗಳ ಪರಿಚಯ, ಅಳಿವಿನಂಚಿನ ಸಸ್ಯ ಪ್ರಭೇದಗಳ ಸ್ತೂಲ ಪರಿಚಯ ಮಾಡಿಸಿದ್ದಾರೆ. ಮನುಜನಿಂದ ಹಾಳಾದ ಜೀವ ಸಂಕುಲಗಳು, ಅವನ ಅಭಿವೃದ್ಧಿ ದಾಹಕ್ಕೆ ಮರೆಗೆ ಸಂದಲಿರುವ ಕಾಡು, ಜೀವಿಗಳ ಸೂಕ್ಷ್ಮ ಪರಿಚಯ ಮಾಡಿಸಿದ್ದಾರೆ. ಇಲ್ಲಿ ನಡೆದ ಹೋರಾಟಗಳ ಚಿತ್ರಣ ಬದಲಾದ ಹೋರಾಟದ ಹಾದಿಯ ಸೊಲ್ಲನ್ನು ಕಟ್ಟಿಕೊಟ್ಟಿದ್ದಾರೆ.
ಜೊತೆಗೆ ನಮ್ಮ ಇಲಾಖೆಗಳ ಪೊಳ್ಳುತನವನ್ನೂ, ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲಾಗುವ ಅನಾಚಾರಗಳನ್ನು ಕೆನಾರಾ ಟ್ರೇಲ್ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಹೊಸ ಪ್ರವಾಸೋಧ್ಯಮಕ್ಕೊಂದು ಹೊಳಹನ್ನು ಕೊಟ್ಟಿದ್ದಾರೆ.
ಪಶ್ಚಿಮ ಘಟ್ಟಗಳ ಒಳ ಹೊರಗನ್ನು ಈ ಕೃತಿ ತರೆದಿಟ್ಟಿದೆ. ನಾವೆಷ್ಟು ಪ್ರಕೃತಿಗೆ ಋಣಿಯಾಗಿರಬೇಕು ಎಂಬ ಸಂದೇಶ ನೀಡುತ್ತಾ ಓದುತ್ತಾ ಹೋದಂತೆ ನಾವು ಕಳೆದುಕೊಂಡ ಆ ಅಪೂರ್ವ ಪಶ್ಚಿಮ ಘಟ್ಟ ನಮ್ಮ ಕಣ್ಣ ಮುಂದೆ ಸುಳಿದು ಹತಾಶೆಗೆ ನೂಕಿಬಿಡುತ್ತದೆ. ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾಗಿ ನಾವು ಇದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂಬುದು ಹಳಸಲು ಸರಕು. ಆದರೂ ಹೇಳಲೇ ಬೇಕಿದೆ ಉಳಿಸಿ, ಉಳಿಸಿ ಎಂದು.

ಕೊಂಡು ತಂದು ಓದಿಸಿದ ಮಿತ್ರ ನಾಗರಾಜ್ನಿಗೆ ಧನ್ಯವಾದಗಳು. ಇನ್ನೇಕೆ ತಡ ಕೊಂಡು ಓದಿ.


Wednesday, October 30, 2019

ಅಪ್ಸರೆಯರ ಅಮರ ಲೋಕದಿಂದ ....


ಅಬ್ಬಬ್ಬಾ ಹಾರ್ನಬಿಲ್ ಹಬ್ಬ!

ನನ್ನ ಮನ ಗೆದ್ದ ಚಿತ್ರಾಂಗದೆ!😆😆
 ತರವಾರಿ ಬಿದಿರಿನ ಡಬ್ಬಿಗಳು, ಬಿದಿರ ತಟ್ಟೆಗಳು, ಬಿದಿರ ಚಮಚಗಳು, ಬಿದಿರಿನ ಚಹದ ಕೆಟಲ್ಗಳು, ಚಿತ್ತಾಕರ್ಷಕ ಕೀ ಚೈನ್ಗಳು, ಬಿದಿರಿನ ನೀರಿನ ಬಾಟಲಿ!, ಗಿಡದ ಕಾಂಡದಿಂದ ತಯಾರಿಸಿದ ವಿಶಿಷ್ಟಚಾಪೆಗಳು, ವಿಶಿಷ್ಟ್ಯ ಶಾಲ್ಗಳು, ಕಾಪರ್ೆಟ್ಗಳು, ಭಿನ್ನ ರುಚಿಯ ದೇಸಿ ಜೇನುತುಪ್ಪ,  ವಿವಿಧ ಹರಳುಗಳಿಂದ ಅಲಂಕೃತ ವಿಚಿತ್ರ ವಿನ್ಯಾಸದ ಕ್ಲಿಪ್ಪುಗಳು, ಮನಸೂರೆಗೊಳಿಸುವ ವಿವಿಧ ಹರಳುಗಳ ಸರಗಳು, ಮರದ ಕಾಡುಕೋಣಗಳು, ರೈನೋಗಳು, ಮರದಿಂದ ಮಾಡಿದ ಹಾರ್ನಬಿಲ್ ಹಕ್ಕಿಗಳು, ಉಬ್ಬು ಶಿಲ್ಪಗಳು, ವಿಚಿತ್ರ ವಿನ್ಯಾಸದ ಹಿತ್ತಾಳೆ ಪದಕದ ಸರಗಳು ಕೊನೆಗೆ ಬಿದಿರಿನ ನಳ್ಳಿಗಳು! ಚಿತ್ರ ವಿಚಿತ್ರ ಪೋಷಾಕಿಂದ ಕಂಗೊಳಿಸುವ ನೃತ್ಯಗಾರರು. ವಿಶಿಷ್ಟ ದೇಸಿ ಆಟ, ಕುಣಿತ. ಕಣ್ಣಿಗೆ ಹಬ್ಬ. ಕಣ್ಣು ಹಾಸಿದಲ್ಲೆಲ್ಲಾ ಕಲೆ,ಕಲೆ ಮತ್ತು ಕಲೆ! ವಿವರಣೆಗೆ ನಿಲುಕದ ಕಲಾ ಗ್ರಾಮ! ಎಲ್ಲೆಲ್ಲೂ ವಯ್ಯಾರದ ಮದನಿಕೆಯರು! ಚಿತ್ರ ವಿಚಿತ್ರವಾದ ಅವರ ಪೋಷಾಕುಗಳು. ಚಹಾ ತಂದಿಡಲೂ ಅಪ್ಸರೆ 'ಚಿತ್ರಾಂಗದೆ'! ಇನ್ನೇನು ಬೇಕು ಸ್ವರ್ಗಕ್ಕೆ ಮೂರೇ ಗೇಣು.


ಇಂತಹ ಕ್ರಾಪ್ಟ್ ಮೇಳಗಳನ್ನು ಭಾರತವನ್ನು ಬಿಟ್ಟು ವಿಶ್ವದ ಯಾವ ಭಾಗದಲ್ಲೂ ನೀವು ಊಹಿಸಲಾರಿರಿ! ಇಂತಹ ವಿಶಿಷ್ಟ ಅಂತರಾಷ್ಟ್ರೀಯ ಹಬ್ಬ ನಡೆಯುವುದು ನಮ್ಮ ದೇಶದ ನಾಗಾಲ್ಯಾಂಡ್ನ ಕಿಸಾಮ ಎಂಬ ಹಳ್ಳಿಯಲ್ಲಿ. ಸಂಪ್ರದಾಯಸ್ಥ ನಾಗಾ ಕುಟಿರಗಳನ್ನು ಇಲ್ಲಿ ನಿಮರ್ಿಸಿ ಡಿಸೆಂಬರ್ 1 ರಿಂದ ಡಿಸೆಂಬರ್ 10 ರವರೆಗೆ ಹಾರ್ನಬಿಲ್ ಹಬ್ಬವೆಂದು ಆಚರಿಸಲಾಗುತ್ತದೆ. 
ಒಂದು ಸಾಂಪ್ರದಾಯಿಕ ಮನೆ 

ಸುಮಾರು ಹದಿನೇಳಕ್ಕೂ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ಈ ರಾಜ್ಯ ಅದಕ್ಕಿಂತಲೂ ಹೆಚ್ಚು ಭಾಷೆಗಳನ್ನು ಬಳಸುತ್ತೆ! ಒಂದು ಇನ್ನೊಂದರಂತಿರದ ಭಾಷೆಗಳು. ಅವುಗಳ ನಡುವಿನ ಸಾಮ್ಯವು ಕಡಿಮೆ. ಅವರ ಒಂದೆರಡು ಶಬ್ದ ಕಲಿತೆನಾದರೂ ಒಂದೂ ಮನಸ್ಸಿನಲ್ಲಿ ಉಳಿಯಲಿಲ್ಲ.
ಕಲಾ ವಸ್ತುಗಳನ್ನು ಕೊಳ್ಳಲು ಆತುರ ...

Tribe of Nagaland.
ಹೆಚ್ಚಿನ ಗುಂಪುಗಳು ಮಾನವ ಹಂತಕರದು (ಜಚಿಜ ಣಟಿಣಜಡಿ) . ಹೆಡ್ ಹಂಟರ್ಸ್ ಎಂದು ಕರೆಯಲ್ಪಡುವ ಇವರ ಇತಿಯೋಪರಿಯ ಅಧ್ಯಯನ ಮಾನವ ಉಗಮ ಶಾಸ್ತ್ರಕ್ಕೊಂದು ಹೊಸ ದಿಶೆಯನ್ನು ನೀಡಬಲ್ಲದು. ಯಾರು ಚೆನ್ನಾಗಿ ಮತ್ತೊಬ್ಬನ ತಲೆ ಕಡಿಯುವವನೋ ಅವನೇ ಗುಂಪಿನ ನಾಯಕ. ಇಂತಹ ಅನೇಕ ಹೆಡ್ ಹಂಟರ್ಸ್ ಹಬ್ಬಕ್ಕೆ ಬಂದಿದ್ದರು. ಇವರು ಕೊಂದ ವ್ಯಕ್ತಿಯ ತಲೆ ಬುರುಡೆಯನ್ನು ಮೊದಲು ಧರಿಸುತ್ತಿದ್ದರು. ಇವರ ವೇಷಭೂಷಣ, ಧಿರಿಸು, ತಲೆ ಪೋಷಾಕು, ಕತ್ತಿ ಎಲ್ಲವೂ ಅನನ್ಯ. ಪ್ರತೀ ಬುಡಕಟ್ಟು ಸಹ ಮತ್ತೊಂದರಿಂದ ಭಿನ್ನ. ಕೆಲ ಗುಂಪು ಕತ್ತಿ ಹಿಡಿದರೆ ಕೆಲವು ಈಟಿಯನ್ನು ಆಯುಧವಾಗಿ ಬಳಸುವರು. 

The tribe dance.

A tribe man.

ಇವರ ಆಚರಣೆಗಳು, ಮನೆ, ಸಂಪ್ರದಾಯ, ಮದುವೆಯ ಕ್ರಮಗಳು ಎಲ್ಲವೂ ವಿಭಿನ್ನ. ಗ್ರಾಮದಲ್ಲಿ ರಚಿಸಿದ ಅವರ ಮನೆಗಳಲ್ಲಿ ಅವರ ಸಾಂಪ್ರದಾಯಿಕ ಉಡುಗೆ, ಆಭರಣ, ಬಟ್ಟೆ, ಆಯುಧಗಳನ್ನು ಪ್ರದಶರ್ಿಸುತ್ತಾರೆ. ನಿಮ್ಮನ್ನು ಸ್ವಾಗತಿಸುತ್ತಾರೆ. ಎಲ್ಲಾ ಪಂಗಡ, ಉಪ ಪಂಗಡ, ಸಂಪ್ರದಾಯಗಳ ಫಲಕಗಳಿವೆ. ಅರ್ಧ ದಿನ ವಿವಿಧ ಪಂಗಡಗಳ ನೃತ್ಯ, ಸಂಪ್ರದಾಯಗಳ ಪ್ರದರ್ಶನ 10 ರಿಂದ 12 ಗಂಟೆಯವರೆಗೆ ಏರ್ಪಡಿಸುವರು. 
Sumi Ki One of the major tribe.

ಇವರ ವಧು ವರಾನ್ವೇಷಣೆ ಬಹಳ ವಿಭಿನ್ನವಾಗಿ ನಡೆಯುತ್ತೆ. ಒಂದು ಬುಡಕಟ್ಟಿನ ವರ-ವಧುವನ್ನು ಒಂದು ಕಡೆ ಸೇರಿಸಲಾಗುತ್ತದೆ. ಅವರ ಆಯ್ಕೆಗೆ ಬಿಡಲಾಗುತ್ತದೆ. ಯಾರು ಯಾರನ್ನು ಬೇಕಾದರೂ ಆರಿಸಿಕೊಳ್ಳಬಹುದು. ನನಗೆ ಈ ಕ್ರಮ ಅತ್ಯಂತ ಸಮರ್ಪಕವೆನಿಸಿತು. ಅವರವರ ಕೆಮಿಸ್ಟ್ರಿಗೆ ಸರಿ ಹೊಂದುವ ಹುಡುಗ ಯಾ ಹುಡುಗಿಯನ್ನು ಆರಿಸಿಕೊಳ್ಳುವ ಅಧ್ಬುತ ಅವಕಾಶ. ಅವರಿಗೆ ಜನಿಸಿದ ಮಕ್ಕಳು ಅವರಿಗಲ್ಲದೆ ಇಡೀ ಸಮುದಾಯಕ್ಕೆ ಸೇರುತ್ತವೆ ಎನ್ನುವುದು ಮತ್ತೊಂದು ವಿಶೇಷ! ಎಲ್ಲರೂ ಎಲ್ಲದಕ್ಕೂ ಭಾದ್ಯಸ್ಥರು. ಇಂತಹ ಸಂಪ್ರದಾಯ ಈಗ ಅಳಿವಿನಂಚಿಗೆ ಸರಿದಿದೆ ಎಂಬುದೇ ಖೇದ. ಸ್ತ್ರೀ ಸ್ವಾತಂತ್ರ್ಯವೂ ಇಲ್ಲಿ ಬಹಳ ಹೆಚ್ಚು.
Opening dance.
ಇವರ ಆಹಾರ ಸಂಸ್ಕೃತಿಯೂ ಅನನ್ಯ. ಎಲ್ಲಾ ಜಾತಿಯ ಕಂಬಳಿ ಹುಳ, ಬಸವನ ಹುಳ, ಹಕ್ಕಿಗಳನ್ನು ಹೊಡೆದು ತಿನ್ನುತ್ತಾರೆ. ಹಾಗಾಗಿ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಂದಿಯೊಂದನ್ನು ಒಣಗಿಸಿ ತಿಂಗಳುಗಳ ಕಾಲ ಹಾಳಾಗದಂತೆ ಕಾಪಾಡುತ್ತಾರೆ. ಹಂದಿ ಮಾಂಸದಿಂದಲೂ ಅನೇಕ ಭಕ್ಷ್ಯಗಳನ್ನು ಮಾಡುತ್ತಾರೆ. ಹಾರ್ನಬಿಲ್ ಹಬ್ಬದಲ್ಲಿ ಎಲ್ಲೆಂದರಲ್ಲಿ ಹಂದಿ ಭಕ್ಷ್ಯ ಲಭ್ಯ. ಅಕ್ಕಿಯಿಂದ ತಯಾರಿಸಿದ ದೇಸಿ ಮಧ್ಯವನ್ನು ಬಿದಿರಿನ ಸುಂದರ ಲೋಟಗಳಲ್ಲಿ ಹೆಂಗಸರೂ ಕುಡಿಯುತ್ತಾರೆ.  ಸಸ್ಯಾಹಾರದಲ್ಲೂ ದೇಸಿ ಅಕ್ಕಿ ಮತ್ತು ಔಷಧೀಯ ಎಲೆಗಳಿಂದ  ತಯಾರಿಸಿದ ವಿಶಿಷ್ಟ ತಿನಿಸು ಗಾಲ್ಹೊ ನಿಮಗೆ ಉಣ್ಣಲು ಲಭ್ಯ. ಕನಿಷ್ಟ ಮೂರ್ನಾಲ್ಕು ಬಟ್ಟಲನ್ನು ನಾವು ಒಬ್ಬೊಬ್ಬರು ಹೊಟ್ಟೆಗಿಳಿಸಿದೆವು. ಅಷ್ಟು ರುಚಿಯಾಗಿತ್ತು! ಇಂತಹ ವಿಶಿಷ್ಟ ಕಲಾ ಪ್ರಕಾರಗಳಿಗೆ ಕಲಾ ಪ್ರಕಾರಗಳೇ ಸಾಕ್ಷಿ. ಐದು ದಿನವಿದ್ದರೂ ಬಿಟ್ಟು ಬರಲಾಗದೇ ಬಂದೆವು. ಇನ್ನೇಕೆ ತಡ ಮುಗಿಯುವ ಮುನ್ನ ಒಮ್ಮೆ ಕಣ್ತುಂಬಿಕೊಳ್ಳಿ.
.

ಶ್ರೀಧರ್. ಎಸ್. ಸಿದ್ದಾಪುರ.

Friday, September 27, 2019

ಮೊದಲ ಮಳೆ, ಮೊದಲ ಮುತ್ತು, ಮೊದಲ ಚಿತ್ರ....



 

ನಾನಾಗ ಸಣ್ಣ ಸುಣ್ಣದ ಪೆಟ್ಟಿಗೆಯಂತಹ ಕ್ಯಾಮಾರಾ ಹೆಗಲಿಗೇರಿಸಿ ಸಣ್ಣ ಪೋಟೋಗ್ರಾಫರ್ ಪೋಸ್ ನೀಡುತ್ತಿದ್ದೆ! ಮೊದಲ ಕ್ಯಾಮರವದು. ಈಗಲೂ ನನ್ನ ಬಳಿ ಇದೆ! ನನ್ನ ಮಗ ಅದನ್ನು ಸಾಕಷ್ಟು ರಗಳೆ ತೆಗೆದಿದ್ದ. ಅದರಲ್ಲೇ ಕೆಲವು ಪಕ್ಷಿಗಳ ಚಿತ್ರಗಳನ್ನು ಜೂಮ್ ಇಲ್ಲದ ರೀಲ್ ಕ್ಯಾಮಾರದಲ್ಲಿ ತೆಗೆದಿದ್ದೆ! ಕೊನೆಗೆ ದೊಡ್ಡ ಭೂತ ಕನ್ನಡಿ ಹಿಡಿದು ಅದರಲ್ಲಿದ್ದ ಪಕ್ಷಿಯನ್ನು ಹುಡುಕಿ ತೆಗೆದು ನನ್ನಕ್ಕನಿಗೆ ತೋರಿಸಿದ್ದೆ. ಏನೋ ಇದು ನಿನ್ನ ಅವಸ್ಥೆ, ಪಕ್ಷಿ ಪೋಟೋಗ್ರಫಿ ಅಂದರೆ ಹೀಗಾ? ಎಂದು ಅಕ್ಕ ಮೂಜು ಮುರಿದಿದ್ದಳು.  ಏನು ಹೇಳುವುದೆಂದು ಅಂದು ತೋಚಲೇ ಇಲ್ಲ! ಬರುತ್ತಿದ್ದ ಪೋಟೋಗಳು ಅಷ್ಟಕ್ಕಷ್ಟೇ. ಮನೆಯಲ್ಲಿ ಮಾತ್ರ ಪೋಟೋಗಳ ರಾಶಿ ರಾಶಿ ಬಂಡಲ್ಲು. ಹೀಗಿರುವ ದಿನಗಳಲ್ಲಿ ನನ್ನ 'ಪೋಟೋಗ್ರಫಿ ವಿಷಯ' ಎಲ್ಲರ ಆಹಾರವಾಗಿತ್ತು! 
  ಮೊದಲ ಮಳೆ, ಮೊದಲ ಕವನ, ಮೊದಲ ಪ್ರೀತಿ, ಮೊದಲ ತೊದಲು, ಮೊದಲ ಮುತ್ತು ಹೀಗೆ ಮೊದಲಾಗಿರುವುದೆಲ್ಲವು ನೆನಪಿನಲ್ಲುಳಿಯುತ್ತೆ. ಯಾರೂ ಅದನ್ನು ಮರೆಯಲಾರರು! ಅರೆ ಏನು ಹೇಳ್ತಾನೆ ಎಂದು ಮನಸು ಮಂಡಿಗೆ ತಿಂತಿದೆಯಾ? ಮೊದಲ ಜಗತ್ತಿನ ಹಳೆ ತುಣುಕೊಂದು ಇಲ್ಲಿದೆ. 2001 ರ ಸಮಯವಿರಬೇಕು. ಸಾಕಷ್ಟು ಓದುತ್ತಿದ್ದೆನಾದರೂ ಬರೆಯುತ್ತಿರಲಿಲ್ಲ. ಆ ಸಂಧರ್ಬದಲ್ಲಿ ವಿಜಯ ಕರ್ನಾಟಕ ಪತ್ರಿಕಾ ಜಗತ್ತಿಗೆ ತನ್ನ ವಿಶಿಷ್ಟ ಅಂಕಣದಿಂದ ಅಚ್ಚರಿಗಳನ್ನು ನೀಡುತಲಿತ್ತು. ಅದೇ ಸಮಯಕ್ಕೆ ಅವರು ಹೊಸದಾಗಿ 'ಚಿತ್ರಕ ನೆನಪು' ಅಂಕಣ ಆರಂಬಿಸಿದ್ದರು. ಚಿತ್ರ ಮತ್ತು ಅದರ ಜೊತೆಗಿನ ನೆನಪನ್ನು ಹಿಡಿದಿಡುವ ಪುಟಾಣಿ ಅಂಕಣ.
 ಫೋಟೋಗ್ರಫಿಯ ಹವ್ಯಾಸವಿದ್ದ ನನಗೆ ಈ ಅಂಕಣ ಬಹಳ ಅಚ್ಚು ಮೆಚ್ಚು. ಯಾಕೆ ನಾನು ನನ್ನದೊಂದು ಚಿತ್ರ ಇಲ್ಲಿಗೆ ಕಳುಹಿಸಬಾರದು ಎಂದುಕೊಂಡೆ. ಹಾಗೆಯೇ ನನ್ನ ಕಡತ ರಾಶಿಗಳನ್ನು ಹರವಿ ಕುಳಿತೆ. ಯಾವ ಚಿತ್ರವೂ ಮನಸ್ಸಿಗೆ ಹಿಡಿಸಲಿಲ್ಲ. ಚಿತ್ರ ಗುಡ್ಡೆಯಿಂದ ಒಂದು ಚಿತ್ರವನ್ನು ಆರಿಸಿ, ಕುಂದಾಪುರಕ್ಕೆ ಹೋಗಿ ಪ್ರಿಂಟ್ ಹಾಕಿಸಿ ತಂದು ವಿಜಯ ಕನರ್ಾಟಕ ಪತ್ರಿಕೆಗೆ ಕಳುಹಿಸಿ, ಕಣ್ಮುಚ್ಚಿ ಕುಳಿತೆ. ನನ್ನ ಅದೃಷ್ಟವೋ ಗೊತ್ತಿಲ್ಲ ನನ್ನ ಬರೆಹ ಮತ್ತು ಚಿತ್ರ ಪತ್ರಿಕೆಗೆ ಆಯ್ಕೆಯಾಗಿತ್ತು. ಆ ಚಿತ್ರವನ್ನು ಅಮ್ಮನಿಗೆ, ಅಕ್ಕನಿಗೆ ತೋರಿಸಿ ಬೀಗಿದೆ. ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದೆಯೆಂದು ಸಣ್ಣ ಜಂಬ ಮಾಡಿದೆ. ಆ ಸಂತೋಷವನ್ನು ಪದಗಳಲ್ಲಿ ಹಿಡಿದಿಡಲಾರೆ ಬಿಡಿ. ಮೊದಲ ಬರೆಹ ಮೊದಲ ಮುದ್ರಣ. ಅಂತಹ ಸಂತಸವೊಂದು ಒಡಮೂಡಿತ್ತು. ಮೊದಲ ಲೇಖನ ಕಣ್ಣು ತೆರೆದಿದ್ದು ಹೀಗೆ. ಈಗ ಇಲ್ಲಿವರೆಗೆ ಬರೆಯುತ್ತಾ ಬಂದಿರುವೆ. ಎಷ್ಟು ದಿನ ಈ ವೈಕುಂಠ ಗೊತ್ತಿಲ್ಲ. ಇವತ್ತು ಲೇಖನಗಳ ರಾಶಿಗೆ ಕೈಹಚ್ಚಿದಾಗ ಸಿಕ್ಕಿತು. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

Thursday, September 19, 2019

ಬೆಟ್ಟದ ಮೇಲೆ ಇತಿಹಾಸದ ಚಿತ್ತಾರ! ರಾಯ್ ಗಢ್ ಕೋಟೆ..


ಮಹಾರಾಷ್ಟ್ರದ ಮಹಾಡ್ನಿಂದ ರಾಯಗಢಕ್ಕೆ ಬಂದಾಗ ನಡು ಮಧ್ಯಾಹ್ನ . ಮಹಿಷಾಸುರನಂತೆ ಮಲಗಿದ ಮಲೆಗಳ ನೋಡಿ ರಾಯಗಢ ಕೋಟೆ ಹತ್ತಲು ಮನಸ್ಸು ಹಿಂದೇಟು ಹಾಕಿತ್ತು. ಹೇಗೂ ರೋಪ್ ವೇ ಇದೆಯಲ್ಲಾ ಎಂದು ಹತ್ತಿ ಕುಳಿತೆವು. ಮೋಡವೊಂದು ನಮ್ಮ ನೆತ್ತಿಯ ತಾಗಿ ನಾವು ಕುಳಿತ ವಾಹನ ಮೋಡದೊಳಗೆ ಲೀನ. ತ್ರಿಶಂಕು ಸ್ವರ್ಗದಲಿ ತೇಲುತ್ತಾ ತೇಲುತ್ತಾ ನಾವು ಕುಳಿತ ಟ್ರಾಲಿ ಸೇರಿದುದು ರಾಯಗಢವೆಂಬ ರುದ್ರ ರಮಣೀಯ ಕೋಟೆಯ ನೆತ್ತಿಯ ಮೇಲೆ! ನೂರು ಎಕರೆಯಲ್ಲಿ ಹರಡಿದ ಇತಿಹಾಸದ ಚಿತ್ತಾರ! ಒಂದು ಮನೆ ಕಟ್ಟಲು ಹೆಣಗುವ ನಾವು ಎಂಟು ಹೆಂಡಿರ ಕಟ್ಟಿಕೊಂಡು ಇಷ್ಟೊಂದು ಅಗಾಧವಾದ, ವಿಶಾಲ ಕೋಟೆ ಕಟ್ಟಲು ಬೇಕಾದ ಇಚ್ಚಾಶಕ್ತಿಗೆ ಬೆರಗುಗೊಂಡು ಕೋಟೆಯ ಪ್ರತೀ ಇಂಚನ್ನು ಸವರುವ ತವಕದಲಿದ್ದೆವು.
ರಾಯಗಢ್ ಸನಿಹದ ಹಳ್ಳಿ.


ಸ್ವರ್ಗದಲಿ ತೇಲುತಿದೆ ಟ್ರಾಲಿ ..



ಮಾರಾಟಗಾರ್ತಿ ಸ್ಥಳೀಯ ಉಡುಗೆಯಲ್ಲಿ

ಮಂತ್ರಿ ವಾಸದ ಕೋಣೆಗಳು.


ಜಗದೀಶ್ವರ ದೇವಾಲಯ.

ವಿಶಾಲ ಮಾರುಕಟ್ಟೆ.



ನಾ ಕಂಡತೆ ಜಗದೀಶ್ವರ ದೇವಾಲಯ..



ನನಗೆ ಶಿವಾಜಿ ಉಸಿರಾಡಿದ ಉಸಿರು ಅಲ್ಲೇ ಎಲ್ಲೋ ಇತ್ತೆಂದು ಭಾಸವಾಗುತ್ತಲೇ ಇತ್ತು. ಮನದ ತುಂಬಾ ಶಿವಾಜಿ ಕಂಪನ. ಶಿವಾಜಿ ಮೆಟ್ಟಿದ ನೆಲವನ್ನು ಪೂರ್ವ ದ್ವಾರದಲ್ಲಿ ಹೊಕ್ಕರೆ ಸಾಲು ಸಾಲು ರಾಣಿ ಆವಾಸ. ಅವಕ್ಕೆ ತಾಗಿಕೊಂಡಂತೆ ಶೌಚ ವ್ಯವಸ್ಥೆ ಅದೂ ಬೆಟ್ಟದ ನೆತ್ತಿಯಲ್ಲಿ!  ಅದರ ವಿರುದ್ದ ದಿಕ್ಕಿಗೆ ಮಂತ್ರಿ ಆವಾಸ ತೆರೆದು ಕೊಳ್ಳುತ್ತೆ. ಮುಂದೆ ಬಲಕ್ಕೆ ಹೊರಳಿ ನೇರ ಮುಂದೆ ಹೋದರೆ ಏಳು ಅಂತಸ್ತಿನ ವಿಜಯ ಸ್ತಂಭ. ಪ್ರತಿ ವಿಜಯವನ್ನೂ ಹೊಸ ದೀಪದೊಂದಿಗೆ ಆಚರಿಸುತ್ತಾರೆ. ದೀಪ ಉರಿಯುತ್ತಿದ್ದರೆ ಶಿವಾಜಿ ಯಾವುದೋ ಕೋಟೆ ಗೆದ್ದನೆಂದು ಅರ್ಥ. ಬಲಭಾಗಕ್ಕೆ ಶಿವಾಜಿಯ ವಿಶ್ರಾಂತಿ ಕೊಠಡಿ. ಅಲ್ಲಿಂದ ಮುಂದಕ್ಕೆ ಹೊರಳಿದರೆ ವಿಶಾಲ ದಬರ್ಾರ್ ಹಾಲ್. 1280 ಕೆ.ಜಿ. ತೂಗುವ ಚಿನ್ನದ ಸಿಂಹಾಸನವನ್ನು ಶಿವಾಜಿ 1681ರಲ್ಲಿ ಏರಿದನು. ಈ ಚಿನ್ನದ ಸಿಂಹಾಸನ ಈಗ ದರೋಡೆಕೋರ ಬ್ರಿಟಿಷ್ ಸಾಮ್ರಾಜ್ಯದಲ್ಲಿದೆ. ಇಲ್ಲಿ ಒಂದು ಚಿಟಿಕೆ ಹೊಡೆದರೆ ಶಬ್ದ ತರಂಗಗಳು ಸ್ಪಷ್ಟವಾಗಿ ನಮಗೆ ಕೇಳಿಸಿ ಆಶ್ಚರ್ಯವನ್ನುಂಟು ಮಾಡಿತು.  ಯಾವುದೇ ಸ್ಪೀಕರ್ ವ್ಯವಸ್ಥೆ ಇಲ್ಲದ  ಕಾಲದಲ್ಲಿ ಮಾತನಾಡಿದ ಪ್ರತಿ ಶಬ್ದವು ಕೇಳುವ ಹಾಗೆ ಧ್ವನಿ ವ್ಯವಸ್ಥೆಯಾಗುವಂತೆ ಮಾಡಿಕೊಂಡಿದ್ದು ಅವರ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿ. ಈ ದಬರ್ಾರ್ ಹಾಲ್ನ ಎದುರಿಗಿದ್ದ ಮುಖದ್ವಾರವನ್ನು ಹೋಲುವಂತೆ ಬ್ರಿಟಿಷರು ಇಂಡಿಯಾ ಗೇಟ್ ರಚಿಸಿದರು! ಹರದಾರಿ ಸವೆಸಿದರೆ ಹುಲಿದ್ವಾರ, ಹೋಲಿ ಮೈದಾನ ಕಾಣಸಿಗುತ್ತದೆ. ಹೋಲಿ ಮೈದಾನದಲ್ಲಿರುವ ಶಿವಾಜಿ ಪ್ರತಿಮೆಗೆ ಸತಾರದಲ್ಲಿರುವ ಶಿವಾಜಿ ವಂಶಸ್ಥರು ಪ್ರತಿದಿನವೂ ಬಂದು ಮಾಲಾರ್ಪಣೆ ಮಾಡಿ ಹೋಗುವರು! ಹಾಗೆಂದು ಬೆಟ್ಟ ಬಹಳ ಚಿಕ್ಕದೆಂದು ತಿಳಿಯಬೇಡಿ. ಸಮುದ್ರ ಮಟ್ಟದಿಂದ ಬರೋಬ್ಬರಿ 1356 ಮೀಟರ್ ಎತ್ತರದಲ್ಲಿದೆ. ಈ ಎಲ್ಲಾ ಕಟ್ಟಡಗಳಲ್ಲಿ ಬಿದ್ದ ನೀರು ಹೋಲಿ ಮೈದಾನಕ್ಕೆ ಬಂದು ಹೊರ ಹೋಗುತ್ತೆ. ಅಷ್ಟೊಂದು ಅಧ್ಬುತವಾಗಿ ಜಲ ನಿರ್ವಹಣಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಟ್ಟದ ನೆತ್ತಿಯ ಮೇಲೆ 11 ಬೃಹತ್ ಮತ್ತು 100ಕ್ಕೂ ಹೆಚ್ಚು ಚಿಕ್ಕ ಕೆರೆಗಳಿವೆ ಎಂದರೆ ನಮ್ಮವರ ನೀರಿನ ತಂತ್ರಜ್ಞಾನ ಅರಿವಿನ ಅಗಾಧತೆ ಅರಿಯುವುದು! ಅದೇ ಕಲ್ಲಿನಿಂದಲೇ ಕೋಟೆ ದ್ವಾರಗಳನ್ನು, ದೇವಾಲಯಗಳನ್ನು ನಿಮರ್ಿಸಲಾಗಿದೆ. ಹೋಲಿ ಮೈದಾನದೆದುರಿಗೆ ನಿಮರ್ಿಸಲಾದ 1400 ಅಡಿ ಉದ್ದದ ಮಾರುಕಟ್ಟೆ ನಮ್ಮನ್ನು ದಂಗುಬಡಿಸುತ್ತೆ. ಪ್ರತಿ ಅಂಗಡಿಯ ಹಿಂದೊಂದು ಮನೆ ಇದೆ.

ಮಂಜಿನಲಿ ಮುಳುಗಿದ ಮಾರುಕಟ್ಟೆ..

ದರ್ಬಾರ್ ಹಾಲನ ಸ್ವಾಗತ ಗೋಪುರ..ಇಂಡಿಯಾ ಗೇಟ್ ಇದನ್ನು ಹೋಲುತ್ತೆ.



ಪಲ್ಲಕ್ಕಿ ದ್ವಾರ

ವಿಜಯ ಸ್ತಂಭ.








ತಕ್ ಮಕ್ ಟಾಕ್ ನಿಂದ ಕಾಣುವ ಸ್ವರ್ಗ ಸದ್ರಶಃ ನೋಟ.


ತಕ್ ಮಕ್ ಟಾಕ್.

ಮಾರುಕಟ್ಟೆಯಿಂದ ಹೊರ ಬರುತ್ತಿದ್ದಂತೆ ಎಡದ ದಾರಿ ನಿಮ್ಮನ್ನು ಕಮರಿಯ ಕಡೆಗೆ ಕೊಂಡೊಯ್ಯುವುದು. ಇದನ್ನು ತಕ್ ಮಕ್ ಟೊಕ್ ಎನ್ನುವರು. ನಿಲ್ಲಲೂ ಎಂಟೆದೆಯ ಧೈರ್ಯ ಬೇಡುವ ಸಹ್ಯಾದ್ರಿಯ ಬೆಡಗನ್ನೆಲ್ಲಾ ತನ್ನೊಡಲಿನಲ್ಲಿಟ್ಟ ಈ ಜಾಗ ಸ್ವರ್ಗ ಸದೃಶಃ. ಕೋಟೆಯ ವಿಹಂಗಮತೆ, ಅದರ ಪ್ರವೇಶ ದ್ವಾರ, ಒಂದೆರಡು ಸಣ್ಣ ಜಲಪಾತಗಳು ಇಲ್ಲಿಂದ ಸುಸ್ಪಷ್ಟ! ಇಲ್ಲಿಂದಲೇ ಪೇಶ್ವೆ ಕಾಲದಲ್ಲಿ ಅಪರಾಧಿಗಳನ್ನು ತಳ್ಳುತ್ತಿದ್ದರಂತೆ. ಇಲ್ಲಿ ಕತ್ತು ಬಗ್ಗಿಸಿ ಕಮರಿಗೆ ಇಣುಕಿದರೆ ಹೃದಯ ಬಾಯಿಗೆ ಬರುತ್ತೆ.
ಅಲ್ಲೇ ಬಲಕ್ಕೆ ಏಳು ತಲೆಮಾರಿನಿಂದ ಅಲ್ಲಿನ ಮಳೆ, ಬಿಸಿಲು ಕಂಡ ಈಗ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶನ ಮನೆ ಇದೆ. ದಣಿದು ಬಂದವರಿಗಾಗಿ ಅವರ ತಾಯಿ ಆದರ ಆತಿಥ್ಯ ಮಾಡುತ್ತಾರೆ. ನಾವೂ ಇಲ್ಲೇ ಬೆಳಗಿನ ಉಪಹಾರ ಅವಲಕ್ಕಿ ಮತ್ತು ಚಹಾ ಸೇವಿಸಿದೆವು. ಬಹಳ ರುಚಿಯಾಗಿತ್ತು. ಏಳು ತಲೆ ಮಾರಿನ ಇತಿಹಾಸವನ್ನು ತಿಳಿಯ ಬಯಸುವವರು ಅವರ ಮಣ್ಣಿನ ಮನೆಯಲ್ಲೇ ಉಳಿಯಬಹುದು. ಜಗದೀಶ್ವರನಿಗೆ ನಮಿಸಿ, ಶಿವಾಜಿ ಮತ್ತು ಆತನ ನಾಯಿಯ ಸಮಾಧಿಗೆ ಶರಣು ಬಂದು ಪಲ್ಲಕ್ಕಿ ದ್ವಾರದ ಮೂಲಕ ವಿಜಯ ಸ್ತಂಭ ಬಳಸಿ ಹೊರಟು ಬಂದೆವು. ಶಿವಾಜಿಯ ಮಂತ್ರಿ ಹಿರೋಜಿ ಹಿಂದೋಳ್ಕರ್ 14 ವರ್ಷಗಳ ಕಾಲ ಶ್ರಮಪಟ್ಟು ನಿಮರ್ಿಸಿದ ಈ ಕೋಟೆಯನ್ನು ಬರೀ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಅನುಭವಿಸಿ ಇದರ ಅಗಾಧತೆ ಅರಿಯಬೇಕು. ಜೊತೆಗೆ ಇಲ್ಲಿನ ವಿಶೇಷವಾದ ಮಹಾರಾಷ್ಟ್ರದ ಬಕರಿ( ಒಂದು ವಿದಧ ರೊಟ್ಟಿ) ಜವಾಣ್(ಊಟ) , ಮಿಸಳ್ ಬಾಜಿ, ಮಿಸಾಳ್ ಪಾವ್ ಸವಿಯಲು ಮರೆಯದಿರಿ.








ಇಲ್ಲಿ ವಾಸಕ್ಕೆ ಅನೇಕ ಹೋಟೆಲುಗಳಿವೆ. ಕೋಟೆಯ ಮೇಲೆಯೇ ರಾಯಗಢ್ ರೋಪ್ ವೇ ಹೋಟೆಲ್ ಇದೆ. ಇಲ್ಲಿ ಊಟಕ್ಕೂ ವ್ಯವಸ್ಥೆ ಇದೆ. ಈ ಪ್ರವಾಸಕ್ಕೆ ಕನಿಷ್ಠ ಎರಡು ದಿನ ತೆಗೆದಿಡುವುದು ಉತ್ತಮ. ಇಲ್ಲಿಂದ ಸನಿಹದಲ್ಲಿರುವ ಪ್ರತಾಪ್ ಗಢ್, ಮಾತೇರನ್ಗೂ ಹೋಗಿ ಬರಬಹುದು. 

ಶ್ರೀಧರ್. ಎಸ್. ಸಿದ್ದಾಪುರ 


ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...