Sunday, October 18, 2026

ಪ್ರವಾಸಗಳೆಂಬ ಕಿರುದಾರಿಯಲಿ


ಬೇಕಲ್‌ನ ದಾರಿಯಲ್ಲಿ ( Bekal Fort)



ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದು ಗಂಟೆಗೆ ಮಂಗಳೂರಿನಿಂದ ಕಾಸರಗೊಡಿನ ರೈಲು ಹತ್ತಿಸಿದ. ತಪ್ಪು ತಿಳಿಯಬೇಡಿ ನಿಜವಾದ ರೈಲೇ. ತಿರುಗಾಟದ ಹುಚ್ಚಿನ ಮೀನಿಗೆ ಎರೆಹುಳ ತೋರಿಸಿದ್ದ! ನನ್ನ ಪುಸ್ತಕದ ಹೂರಣಕ್ಕೆ ನೆರವಾದಿತೆಂದು ಒಪ್ಪಿಕೊಂಡೆ. ಮಂಗಳೂರಿನ ಮುಖ್ಯ ನಿಲ್ದಾಣದಿಂದ ಹೊರಟು ಬೇಕಲ್ ಎನ್ನುವ ಪುಟಾಣಿ ಹಳ್ಳಿಯ ಕಡೆಗೆ ಹೊರಡಿಸಿದ್ದ. 



ಅಂದು ದಾರಿ ಕಾಣದಷ್ಟು ಮಳೆ ಅಬ್ಬರ. ಕಡಲುಬ್ಬರ. ಮನದ ಕದ ತೆರೆದು ಮಳೆ ಹೊಡೆಯುತ್ತಿತ್ತು. ಮನಸ್ಸು ಮಳೆಯ ನೀರಿಗೆ ಕರಗಿತ್ತು. ಮಂಗಳೂರು ಬಿಡುತ್ತಲೇ ನಮ್ಮನ್ನು ಅಡ್ಡಗಟ್ಟಿದ ನೇತ್ರಾವತಿ ಕೆಂಪಾಗಿ ಹರಿಯುತ್ತಿದ್ದಳು. ಒಂಟಿ ಮೀನುಗಾರನೊಬ್ಬ ತನ್ನ ಹರಿಗೋಲು ಹಿಡಿದು ಅನಾಥ ಅಲೆಗಳನ್ನು ಪಳಗಿಸುತ್ತ ಆಗಷ್ಟೇ ಮೀನು ಬೇಟೆಗೆ ಹೊರಟಿದ್ದ. ನೇತ್ರಾವತಿಯ ದಂಡೆ ಉದ್ದಕ್ಕೂ ಹತ್ತಾರು ಬೋಟ್ಗಳು ಲಂಗರು ಹಾಕಿದ್ದವು. ಹಂಚಿಗೆ ಹಾಕಿದ ಎಣ್ಣೆಯಂತೆ ಸಿಡಿವ ತುಂತುರು ಮಳೆ ಸಿಂಚನವಾಯಿತು. ಹಳಿ ಪರೀಕ್ಷಕರ ತಂಡವೊಂದು ನೇತ್ರಾವತಿಯ ದಂಡೆಯಲ್ಲಿ ಬೀಡು ಬಿಟ್ಟಿತ್ತು. ಟ್ರೈನು ವೇಗ ಪಡೆಯುತ್ತಿದ್ದಂತೆ ಎಲ್ಲಾ ತೆಂಗಿನ ಮರಗಳು ಮಂಗಳೂರು ಕಡೆ ಬಾರಿ ಕೆಲಸವಿದ್ದಂತೆ ಧಾವಂತದಿಂದ ಓಡ ತೊಡಗಿದವು. ನೂರಾರು ಜನರು ಕಾರು ಬೈಕುಗಳಲ್ಲಿ ತಮ್ಮ ತಮ್ಮ ಕೆಲಸಗಳಿಗೆ ಓಡುತ್ತಿದ್ದರು. ಪ್ರೇಮು ಹಾಕಿದ ಚಿತ್ರಪಟದಂತೆ ಪ್ರತಿಯೊಬ್ಬರು. ತೆಂಗಿನ ಮರಗಳ ನಡುವೆ ತಂಗಿದ ಹಳೆಯ ಹೆಂಚಿನ ಮನೆಗಳು. ನಡುವೆ ಅಲ್ಲಲ್ಲಿ ತಾರಸಿ ಮನೆಗಳು. ಅವಲ್ಲಿ ಕೆಲವು ಮನೆ ಬಿಟ್ಟು ಹೋದ ಯಜಮಾನನ ನಿರೀಕ್ಷೆಯಲ್ಲಿ ಇದ್ದವು. ನೂರಾರು ಎಕರೆ ಖಾಲಿ ಬಿದ್ದ ಹಡಿಲು ಗದ್ದೆಗಳು ಕೆಲಸವಿಲ್ಲದೆ ಮೊಕ್ಕಾಮು ಹೂಡಿದ್ದವು. ಗದ್ದೆಯ ಮೇಲೆ ತಮ್ಮ ಹಕ್ಕಿನ ಸಾಮ್ರಾಜ್ಯ ಸ್ಥಾಪಿಸುತ್ತಾ ದನಗಳು ಮೇಯುತ್ತಿದ್ದವು. ಇವಕ್ಕೆಲ್ಲಾ ಕಲಶ ಇಟ್ಟಂತೆ ರೈಲಿನ ಹಿನ್ನಲೆ ಸಂಗೀತ. ದೂರದಿಂದ ಕಡಲಿನ ಮೊರೆತ. ನೂರಾರು ಜನರು ತಮ್ಮ ತಮ್ಮ ನಿಸ್ತಂತು ದೂರವಾಣಿಯಲ್ಲಿ ತಲ್ಲಿನ. ಪ್ರಕೃತಿಯ ರಮ್ಯತೆಯ ಮುಂದೆ ಈ ದೂರವಾಣಿಯು ನಿಸ್ತೇಜ. ಪ್ರಕೃತಿಗಿಂತ ಮತ್ತೊಬ್ಬ ಚಿತ್ರಕಾರನಿಲ್ಲ ಎಂದುಕೊಳ್ಳುತ್ತ ಹೊರಟೆ. ಕ್ಷಣ ಕ್ಷಣಕ್ಕೂ ಬದಲಾಗುವ ಹೊರಗಿನ ಚಿತ್ರಗಳು. ನೂರಾರು ಹಳ್ಳಗಳು ನಮ್ಮ ಹರಿವಿಗೆ ಅಡ್ಡವಾಗಿ ಹರಿದು ಕಡಲ ಸೇರಲು ಹೊರಟಿದ್ದವು. ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ರೈಲು ನಿಶ್ಚಿಂತೆಯಿಂದ ಬೇಕಲ್ಲನ ಕಡೆಗೆ ಹೊರಟಿತ್ತು. ಎಲ್ಲೆಲ್ಲಿಂದಲೋ ಹೊರಟ ಜನ ಏನೋ ಅದ್ಭುತವನ್ನು ಕಾಣುವ ತವಕದಿಂದ ನೂರಾರು ಕಥೆಗಳನ್ನು ಹೊತ್ತು ಮಂಗಳೂರು ಕಡೆಗೆ ಅಕ್ಷಯೋಹಿಣಿ ಸೈನ್ಯದಂತೆ ಹತ್ತಾರು ಟ್ರೈನುಗಳಲ್ಲಿ ಬಂದಿಳಿಯುತ್ತಿದ್ದರು.ಇಳಿದಷ್ಟೇ ವೇಗವಾಗಿ ಮಂಗಳೂರಿನ ನಿಲ್ದಾಣದಲ್ಲಿ ಕರಗುತ್ತಿದ್ದರು. ಬದುಕಿನ ಬಂಡಿ ನೂಕಲು ದಿನವೂ ನಿಲ್ಲದ ಓಡಾಟ.




ಕೆಲವು ತೆಂಗಿನ ಮರಗಳು ಬಾಯಾರಿ ಕಡಲು ಸೇರುವ ಹಳ್ಳಗಳಿಗೆ ಮುತ್ತಿಕ್ಕುತ್ತಿದ್ದವು. ತೆಂಗಿನ ಮರಗಳ ಪ್ರೇಮಕ್ಕೆ ಸ್ವಲ್ಪವೂ ಬೇಸರಿಸಿಕೊಳ್ಳದೆ ಹಳ್ಳ ಮಂದಸ್ಮಿತವಾಗಿ ಕಡಲಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಲಿತ್ತು. ಜಗತ್ತಿಡಿ ಶೂನ್ಯ ಎಂಬಂತೆ ಹೊರನೋಟದ ಸೌಂದರ್ಯಕ್ಕೆ ನನ್ನನ್ನು ಒಪ್ಪಿಸಿಕೊಂಡಿದ್ದೆ. ಆಗಲೇ ಗೆಳೆಯ ನನ್ನನ್ನು ಎಚ್ಚರಿಸಿ ರೈಲಿನಿಂದ ಇಳಿಸಿದ. ಅಪಾರ ಹಸಿರು ಹೊದ್ದ ಈ ದಾರಿಯಲ್ಲಿ ನೀವೊಮ್ಮೆ ಪ್ರಯಾಣಿಸಿ ನೋಡಿ ಕವಿಯಾಗದಿದ್ದರೆ ಕೇಳಿ. 




ನಮ್ಮನ್ನು ಇಳಿಸಿದ ರೈಲು ದೊಡ್ಡ ನಿಟ್ಟುಸಿರು ಬಿಟ್ಟು ಹೊರಟಿತು! ಬೆಳಿಗ್ಗೆ 6ಕ್ಕೆಲ್ಲ ತಿಂಡಿ ತಿಂದುದರಿಂದ ಹೊಟ್ಟೆ ಗೂಯಿಗುಡುತ್ತಲೆ ಇತ್ತು. ಕೇರಳ ಶೈಲಿಯ ಸದ್ಯ ಎಂಬ ಊಟ ಕೊಟ್ಟಿದ್ದರಿಂದ ನಾನು ಸದ್ಯಕ್ಕೆ ಬಚಾವಾದೆ. ಅಮ್ಮನಂತೆ ಊಟ ವಿಕ್ಕಿದ ಹೋಟೆಲ್ ಮಾಣಿಯ ಕೈಗೊಂದಿಷ್ಟು ಹಣ ತುರುಕಿದೆ. ಊರಗಲ ಮುಖ ಮಾಡಿ ನನ್ನನ್ನೇ ನೋಡುತ್ತಾ ನಮಸ್ಕರಿಸಿದ. ದಿನವಿಡೀ ಬೇಸರಿಸಿಕೊಳ್ಳದೆ ಅದದೇ ತಟ್ಟೆಗಳನ್ನು ಎತ್ತಿಡುವ ಇವರ ಕಾಯಕಕ್ಕೊಂದು ನನ್ನ ದೊಡ್ಡ ಸಲಾಮ. 

ತೆರೆದ ಬಸ್ಸಿನಲ್ಲಿ 



ಕಾಸರಗೋಡಿನಿಂದ ತೆರೆದ ನೀಲಿ ಬಸ್ಸು ನಮಗಾಗಿ ಕಾದಿತ್ತು. ಬಸ್ಸಿನಲ್ಲಿ ಕುಳಿತು ಬೇಕಲ ಕೋಟೆಗೆ ಹೊರಟೆವು. ತಂಪಾದ ಗಾಳಿ ಮನದೊಳಗೆ ನುಗ್ಗಿ ಹರ್ಷವನ್ನುಂಟು ಮಾಡಿತು. ನನಗೋ ತೆರೆದ ಬಸ್ಸಿನಲ್ಲಿ ಚಲಿಸೋ ಪುಳಕ. ಕಾಸರಗೋಡಿನ ಶಾಲೆ ನಡು ಮಧ್ಯಾನಕ್ಕೆ ಮುಗಿದುದರಿಂದ ಬಸ್ಸಿನ ತುಂಬಾ ಪುಟಾಣಿ ಮಕ್ಕಳ ಗೌಜಿ. ಅವರ ಜೊತೆಗೆ ನಾನೂ ಮಕ್ಕಳಾದೆ. ನನ್ನನ್ನು ಪರಿಚಿತರಂತೆ ನೋಡುತ್ತಾ ಮಾತನಾಡಿಸಿ ನಕ್ಕರು. ಏನೇನೋ ಹರಟುತ್ತಾ ಗದ್ದಲ ಎಬ್ಬಿಸಿದ್ದರು. ಕಂಡಕ್ಟರ್ ನ ಫಂಟಾನಾದವು ಮಕ್ಕಳ ಗಿಲಕಿಯೊಳಗೆ ಮುಳುಗಿ ಹೋಗಿತ್ತು. ಹಿರಿ ಮೇಸ್ಟ್ರಂತೆ ಆತ ಎಲ್ಲರನ್ನೂ ಸುಮ್ಮನಿರಿಸುತ್ತಿದ್ದ. ಚಂದ್ರಗಿರಿ ಕೋಟೆ ಬಳಸಿ ಚಂದ್ರ ನದಿ ಹಾಗೂ ಬೇಕಲ್ ನದಿ ದಾಟಿ ಬೇಕಲ್ ಊರಿನಲ್ಲಿ ನಮ್ಮನ್ನು ಇಳಿಸಿ ಕಾಜ0ಗಾಡಿನ ಕಡೆಗೆ ಹೊರಟಿತು ಹಳೆಯ ನೀಲಿ ಬಸ್ಸು. ಹೆದ್ದಲೆಗಳು ಬಡಿದು ನುಚ್ಚು ಗುಜ್ಜಾದ ಬಸ್ಸು ನಿಲ್ದಾಣದ ಸ್ವಲ್ಪ ಮುಂದೆ ನನ್ನ ಇಳಿಸಿ ಮರೆಯಾಯಿತು. ಬೇಕಲ್ಲ ದಾರಿಗೆ ಅಂಟಿಕೊಂಡಂತೆ ಕೆಂಪು ಕಲ್ಲಿನ ವಿಶೇಷ ರಚನೆಗಳು ಬೇಕಲ್ನತ್ತ ಕೈಬೀಸುತ್ತವೆ.

ಬೇಕಲ್‌ನ ಕೋಟೆಯದುರಿಗೇ ಮುಖಪುಟ ವಿನ್ಯಾಸಗಾರನ ಸಿಗುತ್ತೇನೆಂದು ಹೇಳಿದ್ದ. ತುರ್ತು ಕೆಲಸ ಒಂದು ಬಂದುದರಿಂದ ಆತ ನಾಪತ್ತೆಯಾಗಿದ್ದ. ಎಷ್ಟೇ ಪ್ರಯತ್ನಿಸಿದರೂ ಸಿಗದ ಸಂಪರ್ಕಕ್ಕೆ ಬೇಸತ್ತು ನಿಧಾನಕ್ಕೆ ಬೇಕಲ ಕೋಟೆಯತ್ತ ಮುಖಮಾಡಿದೆ. ಬೇಕಲ್ ನ ಸುತ್ತಮುತ್ತ ನೂರಾರು ಸುಂದರ ಹೋಟೆಲುಗಳಿವೆ. ಒಂದಕ್ಕಿಂತ ಒಂದು ಚಂದ.

ಮರೆತು ಜೀವಿಸಬಹುದೇ



               ಈಗ ಕೇರಳದ ಭಾಗವಾಗಿದ್ದರು ನೂರಾರು ವರ್ಷಗಳಿಂದ ಬದುಕಿ ಬಾಳಿದ್ದ ಕನ್ನಡಿಗರು ಕಟ್ಟಿದ ಕನ್ನಡ ಶಾಲೆಯೊಂದು ಕೆಲವೇ ಕೆಲವು ಮಕ್ಕಳೊಡಗೂಡಿ ಕನ್ನಡಿಗರ ಭಾಷಾ ಪ್ರೇಮಕ್ಕೆ ಕನ್ನಡಿ ಹಿಡಿಯುತ್ತಿತ್ತು. ಅವರ ಜೀವ ಕಣದೊಳಗೆ ಸೇರಿದ ಕನ್ನಡವನ್ನು ಬೇರ್ಪಡಿಸಿ ನೋಡುವುದು ಎಂತೋ? ತಿಳಿಯದಾದೆ. ಪರಂಪರೆಯಿಂದ ಕಲಿತ ಭಾಷೆಯನ್ನು ಮರೆತು ಜೀವಿಸಬಹುದೇ? 


ಅಗಸರ ಹೊಳೆ ಎಂಬ ಹೆಸರಿನ ಸುಸಜ್ಜಿತವಾದ ಕಟ್ಟಡವನ್ನು ಹೊಂದಿರುವ ವಿಶಿಷ್ಟ ಶಾಲೆಯಲ್ಲಿ ಈಗ ಕೆಲವೇ ಕೆಲವು ಬೆರಳೆಣಿಕೆಯ ವಿದ್ಯಾರ್ಥಿಗಳು! ಇಲ್ಲಿರುವ ನೂರಾರು ಕನ್ನಡಿಗರು ಪುತ್ತೂರು, ಸುಳ್ಯ ಕಡೆಗೆ ವಲಸೆ ಹೋದರೆಂದು ಅರ್ಧಂಬರ್ಧ ಕನ್ನಡ ತಿಳಿದ ಮುರುಳಿಧರರು ಮಾಹಿತಿ ನೀಡಿದರು. ಉಡುಪಿ ಕಡೆಯ ವ್ಯಕ್ತಿಯೊಬ್ಬ ಸಹ ಇಲ್ಲಿ ಹೋಟೆಲ್ ನಡೆಸುತ್ತಿದ್ದಾನೆ ಆತನ ಮಕ್ಕಳೆಲ್ಲರೂ ಕನ್ನಡ ಮರೆತು ಮಲಯಾಳ ಕಲಿತು ವ್ಯವಹಾರ ಮಾಡುತ್ತಿದ್ದಾರೆ ಎಂದು ತಿಳಿದು ಖೇದವಾಯಿತು. ಪುರುಷೋತ್ತಮ ಎನ್ನುವ ರಿಕ್ಷಾ ಚಾಲಕ ಅರೆಬರೇ ಕನ್ನಡದಲ್ಲಿ ಅರೇಭಾಷಿಕನಂತೆ ಮಾತನಾಡಿ ಅಚ್ಚರಿ ಮೂಡಿಸಿದ. ಆತನ ಕನ್ನಡವೋ ದೇವನಾಂಮಪ್ರಿಯ!!

      ಬೇಕಲ್ ಕಾಣುತ್ತಲೇ ಇತಿಹಾಸದ ಬೃಹತ್ ಬಳ್ಳಿಯೊಂದು ಕಾಲಿಗೆ ತೊಡರಿದಂತೆ ಭಾಸವಾಯಿತು. ಮೊರೆವ ಹೆದ್ದಲೆಗಳ ನಡುವೆ ಕಡಲನ್ನು ಕಾಯುತ್ತಿರುವಂತೆ ಕಟ್ಟಿದ ಬೃಹತ್ ಕೋಟೆ. ಬೃಹತ್ ಎರಡು ಬುರುಜುಗಳು ಕೋಟೆ ಕಾವಲುಗಾರರಂತೆ ಒಳ ಹೊರ ಬರುವವರನ್ನು ಕಣ್ಣಿಟ್ಟು ಕಾಯುತ್ತದೆ. ಕೋಟೆ ಎದುರು ಬೃಹತ್ ಹೊಂಡಗಳನ್ನು ನಿರ್ಮಿಸಿ ನೀರು ತುಂಬಿಟ್ಟು ಮೊಸಳೆಗಳನ್ನು ಸಾಕುತ್ತಿದ್ದರು ಅನಿಸುತ್ತೆ. ಹೊರ ವರ್ತುಲದಲ್ಲೂ ಬೃಹತ್ ಬಾವಿ ಒಂದಿದೆ. ಪಶ್ಚಿಮಕ್ಕೆ ತೀರಾ ಕಡಿದಾದ ಉತ್ತರ ಮತ್ತು ದಕ್ಷಿಣದಲ್ಲಿ ಸಪಾಟಾದ ಬಸಾಲ್ಟ್ ಶಿಲಾ ಗುಡ್ಡದ ಮೇಲೆ ನಿರ್ಮಾಣ ಮಾಡಿರುವುದು ನಮ್ಮ ಹಿಂದಿನವರ ಚಾತುರ್ಯಕ್ಕೊಂದು ಮೆರಗು. ಎರಡು ಕಡೆಯೂ ಸಮುದ್ರ ಕಿನಾರೆಯನ್ನು ನೋಡಿ ಸವಿಯಬಹುದು. ಎರಡು ದಿಕ್ಕಿನ ಕಿನಾರೆಗಳು ೬0 ಡಿಗ್ರಿಯಲ್ಲಿ ಸಂಧಿಸುವ ಕಿರು ಗುಡ್ಡದ ಮೇಲೆ ನಿರ್ಮಿಸಿರುವುದು ಒಂದು ವಿಶೇಷ. ಅಂದರೆ ಇಲ್ಲಿ ಸಮುದ್ರ ಸ್ವಲ್ಪವೇ ಒಳ ಚಾಚಿದೆ. ಇದನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಂಡ ಪರಿ ಅನನ್ಯ. ಕೆಂಪು ಕಲ್ಲು ಮತ್ತು ಬಸಾಲ್ಟ್‌ ಬಂಡೆಗಳನ್ನು ಉಪಯೋಗಿಸಿ ತಮ್ಮ ಅನೂಕೂಲಕ್ಕೆ ತಕ್ಕಂತೆ ಅದನ್ನು ಪರಿವರ್ತಿಸಲಾಗಿದೆ!

ಕೋಟೆಯ ಒಳಹೊಕ್ಕರೆ ಬಲಕ್ಕೆ ತಿರುಗಿ ಮತ್ತೆ ಎಡ ಮಗ್ಗುಲಿಗೆ ಹೊರಳಿ ಬೃಹತ್ ಏರುದಾರಿ ಬಳಸಿ ಏರಿದರೆ ಕೋಟೆಯ ಹಜಾರಕ್ಕೆ ತಲುಪುತ್ತೀರಿ. ನೀವು ಎಡಕ್ಕೆ ಮಗ್ಗಲು ಬದಲಾಯಿಸುವಲ್ಲೇ ಆಂಜನೇಯ ಸ್ವಾಮಿ ದೇವಾಲಯವಿದೆ. ದೇವಾಲಯದ ಅರ್ಚಕರು ಕನ್ನಡಿಗರು. ಅಂದು ಹನುಮನಿಗೆ ವೀಳ್ಯದೆಲೆಯ ಅಲಂಕಾರ. ಕನ್ನಡದಲ್ಲೇ ನಮ್ಮನ್ನು ವಿಚಾರಿಸಿಕೊಂಡರು. ಏರುದಾರಿಯ ಬಳಿ ಚೀಟಿ ಪರೀಕ್ಷಕರ ಕೊಠಡಿ.

ಕೆಳಗಿನ ಮೈದಾನದಿಂದ ಹಜಾರಕ್ಕೆ ಹತ್ತಡಿಯ ವ್ಯತ್ಯಾಸ. ಹಜಾರದಲ್ಲಿ ಹರಡಿದ ನೂರಾರು ಅವಶೇಷಗಳು ನಮ್ಮ ಗಮನ ಸೆಳೆಯುತ್ತದೆ. ಹಜಾರದ ನಡುವಿರುವ ಬೃಹತ್ ಬುರುಜು. ಮತ್ತು ಬಲಕ್ಕೆ ಇರುವ ಕೋಟೆಯೊಳಗಿನ ಕಚೇರಿಗಳ ಮತ್ತು ಸಭಾಮಂಟಪದ ಅವಶೇಷಗಳು ಕಂಡುಬರುತ್ತವೆ. ಅದರ ನಡುವೆಯೇ ಬಾವಿ ಒಂದಿದೆ. ಮುಂದೆ ಚಲಿಸಿದರೆ ವಿಶಾಲವಾದ ಮೈದಾನದಂತಹ ಜಾಗ. ಮುಖ್ಯವಾಗಿ ಅಧಿಕಾರಿಗಳ ಕಾವಲುಗಾರರ ಕೋಣೆಗಳು ಅಂದು ಇದ್ದಿರಬಹುದು. ಇಲ್ಲಿಂದ ಎಡಕ್ಕೆ ಸಣ್ಣ ಕಟ್ಟಡ ಒಂದಿದೆ. ಮುಖ್ಯದ್ವಾರದ ಎದುರಿಗೆ ಬೃಹತ್ ಬೃಹತ್ ಬುರುಜೊಂದು ಕಣ್ಮನ ಸೆಳೆಯುತ್ತದೆ. ಅದರ ಸುತ್ತಲಿನ ಇಳಿಜಾರುಗಳಲ್ಲಿ ಬೃಹತ್ ಬುರುಜುಗಳನ್ನು ನಿರ್ಮಿಸಿದ್ದಾರೆ. ಕಾವಲುಗಾರರ ಪ್ರವೇಶ ದ್ವಾರದಲ್ಲಿ ಎಲ್ಲಾ ಬುರುಜುಗಳೂ ಒಂದಕ್ಕೊಂದು ಸೇರುವಂತೆ ಕಾಲುದಾರಿಯನ್ನು ನಿರ್ಮಿಸಿದ್ದಾರೆ. ಮುಂದಕ್ಕಿರುವ ಸಪಾಟು ಬಯಲಿನ ಬಲಕ್ಕೆ ಚಲಿಸಿದರೆ ಅಂಗಾತ ಬಾಯಿ ಕಳೆದು ಮಲಗಿದ ಕೆಂಪು ಕಲ್ಲಿನ ಕೆರೆಯೊಂದಿದೆ. ಕೆರೆಯ ಅಚ್ಚುಕಟ್ಟುತನ ನಮ್ಮ ಗಮನ ಸೆಳೆಯುತ್ತದೆ. ಇಳಿದು ನೀರು ಸೇದುವವರಿಗಾಗಿ ಚಂದನೆಯ ಮೆಟ್ಟಿಲು.

ಇಲ್ಲಿಂದ ಪಶ್ಚಿಮಕ್ಕೆ ಹರಿದ ದಾರಿಯೊಂದು ಮಿಸುಕಾಡದೆ ಮಲಗಿತ್ತು. ಕಡಲ ಇಳಿಜಾರಿಗೆ ಸಾಗಿ ಹೋಗಲು ಪುಟಾಣಿ ಕಿಂಡಿ. ಇಲ್ಲಿಂದ ಕಾಣಸಿಗುವ ಸುಂದರ ದೃಶ್ಯಾವಳಿಗಳು ಅರಬ್ಬಿ ಕಡಲಿನ ವಿಹಂಗಮತೆಯನ್ನು, ಜೊತೆಗೆ ಎಂತಹ ಅರಸಿಕರನ್ನೂ ರಸಿಕರನ್ನಾಗಿ ಮಾಡುತ್ತದೆ. ಕಡಲಿನ ಹೆದ್ದಲೆಗಳು ಬಡಿಯುವ ತಾಣದಲ್ಲೊಂದು ಸುಂದರ ಬುರುಜು. ಕ್ಷಣ ಕ್ಷಣವು ಬಡಿವ ಅಲೆಗಳು ತಮ್ಮ ದಡದ ಮೋಹವನ್ನು ಬಿಚ್ಚಿಡುತ್ತವೆ. ಬೃಹತ್ ಬಸಾಲ್ಟ್ ಬಂಡೆಗಳನ್ನು ಉಜ್ಜಿ ತಿಕ್ಕಿ ನುಚ್ಚು ಗುಜ್ಜಾಗಿಸಿದರೂ ಮತ್ತೆ ಬಿಡಲೊಲ್ಲದ ಮೋಹ. ಬಸಾಲ್ಟ್ ಬಂಡೆಗಳಿಗೆ ಮುಖ ಒತ್ತಿ ತನ್ನ ಬಸಾಲ್ಡ್ ಪ್ರೇಮವನ್ನು ಹೊರಗೆಡಹುತ್ತದೆ. ಸದಾ ಬೋರ್ಗರೆವಾ ಕಡಲಿನಿಂದ ಕೋಟೆಯ ಗೋಡೆಗಳಿಗೆ ಉಪ್ಪು ನೀರ ಸಿಂಚನ. 


ಕಡಲ ಕಾಗೆಯೊಂದು ಈ ಮಹಾ ಹೆದ್ದಲೆಗಳ ನಡುವೆ ಮೀನ ಬೇಟೆಯಲ್ಲಿ ತೊಡಗಿತ್ತು. ತನ್ನ ಬಿಳಿಯ ದಷ್ಟ ಪುಷ್ಟ ದೇಹ ಚೂಪು ಕೊಕ್ಕು ಮತ್ತು ಚುರುಕು ಕಣ್ಣಿನಿಂದ ಆಕರ್ಷಕವಾಗಿತ್ತು. ಹಲವು ಬಾರಿ ಇದು ದೊಡ್ಡ ಮೀನುಗಳ ಬೇಟೆಯಾಡಿದ್ದನ್ನು ಕಂಡಿದ್ದೆ. ಕಡಲ ಕಾಗೆಗಳ ಕಣ್ಣಿನ ಸೂಕ್ಷ್ಮತೆ ಬೆಚ್ಚಿ ಬೀಳಿಸುತ್ತದೆ. ಸೋಮಾರಿ ಕಾಗೆಗಳು ಕಡಲ ಕಾಗೆಯ ಮೀನನ್ನು ಗುಂಪಾಗಿ ಬಂದು, ಹೊಂಚಿ ಕಸಿಯುತಲಿದ್ದವು ನಮ್ಮ ರಾಜಕಾರಣಿಗಳಂತೆ. ವಿಸ್ಮಯ. ಯಾವುದೇ ಬಾರಿಯೂ ಸೋಮಾರಿ ಕಾಗೆಗಳು ಗೆದ್ದಿದ್ದು ಕಂಡಿಲ್ಲ. ಈ ಬೃಹತ್ ಅಲೆಗಳ ನಡುವೆ ಸದಾ ಕಲಸು ಮೇಲೋಗರವಾಗಿರುವ ನೀರು ಮತ್ತು ಮಣ್ಣಿನ ಕಣಗಳ ನಡುವೆ ಅದು ಹೇಗೆ ಮೀನ ಬೇಟೆ ಮಾಡುತ್ತದೆಯೋ ನಾನರಿಯೆ! ಸಾವಿರಾರು ವರ್ಷಗಳ ಹೊಂದಾಣಿಕೆಯ ಫಲವಾಗಿರಬೇಕು. ನೀರು ಸದಾ ಮಣ್ಣೊಳಗೆ ಬೆರೆತು ನೀರ್ ಮಣ್ಣಾಗಿ ಬಂದವರ ಮೇಲೆಲ್ಲ ಸಿಂಚನಗೈಯುತ್ತಲೇ ಇರುತ್ತದೆ. ಪಶ್ಚಿಮದ ಮೂರು ಬುರುಜುಗಳು ಕಡಲಿಗೆ ಇಳಿದವರ ಮಾಹಿತಿಯನ್ನು ತಿಳಿಸುತ್ತದೆ. ಈ ಬುರುಜುಗಳು ಕಡಲ ವ್ಯಾಪಾರದ ವ್ಯಾಪಕತೆಯನ್ನು ವಿಸ್ತಾರವಾಗಿ ವಿವರಿಸುವ ಗುರುತುಗಳಾಗಿ ತೋರುತ್ತವೆ. ಕರ್ನಾಟಕದ ಸುತ್ತಮುತ್ತ ಸಿಕ್ಕ ವಿವಿಧ ದೇಶಗಳ ನಾಣ್ಯಗಳು, ದೇವಾಲಯದ ಭಿತ್ತಿಯಲ್ಲಿ ಕಂಡ ಅನ್ಯ ದೇಶದವರ ಮುಖಗಳೂ ನಮ್ಮವರ ವ್ಯಾಪಾರಿತನವನ್ನು ಜಗಜ್ಜಾಹಿರು ಮಾಡುತ್ತವೆ.




ಅಂದೇ ನಮ್ಮವರು ಪರ್ಷಿಯ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ತಾವು ಕಂಡಿದ್ದನ್ನು ಶಿಲ್ಪಿಗಳು ದೇವಾಲಯದ ಗೋಡೆಗಳ ಮೇಲೆ ಅನೇಕ ವಿದೇಶಿಯರನ್ನು ಕೆತ್ತಿ ತಮ್ಮ ವ್ಯಾಪಾರದ ಸಂಬಂಧದ ಹೊಳಹನ್ನು ಬಿಟ್ಟು ಹೋಗಿದ್ದಾರೆ. 10ನೇ ಶತಮಾನದ ಬೃಹದೀಶ್ವರ ಹಾಗೂ ಸಾಗರ ಸಮೀಪದ ಅಘೋರೇಶ್ವರ ದೇವಾಲಯದ ಗೋಡೆಗಳ ಮೇಲಿನ ವಿದೇಶಿಯರ ಮುಖ ಕೆತ್ತನೆ ಜನರ ವ್ಯಾಪಾರದ ಕೊಂಡಿಗಳನ್ನು ತೋರ್ಪಡಿಸುತ್ತವೆ. ಅಘೋರೇಶ್ವರ ದೇವಾಲಯದ ಹೊನ್ನಿನ ಕಳಶ ಇವರ ವ್ಯಾಪಾರಿ ತನದ ವ್ಯಾಪಕತೆಗೆ ಸಾಕ್ಷಿಯಾಗಿದೆ. 

ಇತಿಹಾಸದ ಮಗ್ಗುಲಿಗೆ ಬಳಿದ ಬಣ್ಣ



ಕದಂಬರಿಂದ ಮೊದಲ್ಗೊಂಡು ವೆಂಕಟಪ್ಪ ನಾಯಕನವರೆಗೆ ಆಳಿಸಿಕೊಂಡ ಈ ಭೂಮಿ ಕನ್ನಡ ನಾಡಿನ ಹಿರಿತನವನ್ನು ಮೂಕವಾಗಿ ಸಾರುತ್ತಲೇ ಇದೆ. ಹಿರಿಯ ವೆಂಕಟಪ್ಪ ನಾಯಕ ಇದರ ನಿರ್ಮಾಣವನ್ನು ಪ್ರಾರಂಭಿಸಿದ. 1650 ರಲ್ಲಿ ಶಿವಪ್ಪ ನಾಯಕ ಎಂಬ ಅಪ್ರತಿಮ ಹೋರಾಟಗಾರ ಇದನ್ನು ಪೂರ್ಣಗೊಳಿಸಿದ. ಮಲಬಾರ್ ಭಾಗದ ವ್ಯಾಪಾರದ ಅತ್ಯಂತ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದದ್ದು ಬೇಕಲ್ ಪಟ್ಟಣ. ಇಲ್ಲಿಂದಲೇ ಕಾಳುಮೆಣಸು ಪರ್ಶಿಯ ಮುಂತಾದ ದೇಶಗಳಿಗೆ ರವಾನೆಯಾಗುತ್ತಿತ್ತು. ರಕ್ಷಣಾ ಹಿತದೃಷ್ಟಿಯಿಂದ ಇದೊಂದು ಮಹತ್ವದ ಕೋಟೆಯಾಗಿದೆ. ಸಂಪೂರ್ಣವಾಗಿ ಕೆಂಪು ಕಲ್ಲಿನಿಂದ ನಿರ್ಮಾಣವಾಗಿದೆ. ಹೈದರ್ ಅಲಿಯು ನಾಯಕ್ ಸಾಮ್ರಾಜ್ಯದ ಅರಸರನ್ನು ಸೋಲಿಸಿ , ಈ ಕೋಟೆಯನ್ನು ವಶಪಡಿಸಿಕೊಳ್ಳುತ್ತಾನೆ. ಇವನ ಕಾಲ ನಂತರ ಟಿಪ್ಪು ಸುಲ್ತಾನ್ ನಂತರದ ವರ್ಷಗಳಲ್ಲಿ ಬ್ರಿಟಿಷರ ವಶವಾಗುತ್ತದೆ. ಕಾಲದಿಂದ ಕಾಲಕ್ಕೆ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬದಲಾಯಿಸಿಕೊಳ್ಳುತ್ತಾ ಬಂದ ಕೋಟೆ ಜನಮನದ ಸಂಸ್ಕೃತಿಯ ನಾಡಿಮಿಡಿತವಾಗಿತ್ತು. ಒಂದು ಕಾಲದಲ್ಲಿ ಹಬ್ಬಿ ಹರಡಿದ ಕನ್ನಡ ನಾಡಿನ ಭಾಗವಾಗಿತ್ತು. ತಲತಲಾಂತರದಿಂದ ಕೋಟೆ ಆಂಜನೇಯನಿಗೆ ಪೂಜೆ ಮಾಡುವ ಕನ್ನಡದ ಅರ್ಚಕರು, ಅವರ ಸುಲಲಿತವಾದ ಸುಂದರ ಕನ್ನಡ ಇದಕ್ಕೆ ಪುಷ್ಟಿಯನ್ನು ಒದಗಿಸುತ್ತದೆ. ಬೇಕಲ್‌ ಕೋಟೆಯ ಹತ್ತಿರವೇ ಅವರ ಮನೆಯಿದೆ. ಜನಮಾನಸದಲ್ಲಿ ಕನ್ನಡ ಪ್ರೇಮ ತೆಳುವಾಗಿದೆ. ಹಿರಿಯ ತಲೆಮಾರಿನವರು ಕನ್ನಡ ಮಾತನಾಡಿದಷ್ಟು ಇಂದಿನ ತಲೆಮಾರು ಕನ್ನಡವಾಡುವುದಿಲ್ಲ. ವಿಸ್ಮೃತಿಗೆ ಸರಿದ ಭಾಷೆ ಮತ್ತು ಹಳೆಯ ಸಂಸ್ಕೃತಿ ಸಂಪ್ರದಾಯಗಳು. ಕಾಸರಗೋಡು ಇಂದು ಕನ್ನಡದ ಗಡಿಯನಾಡು. ಎದೆಯೊಳಗೆ ಸರಿದಾಡಿದ ಕನ್ನಡ ಮಿಂಚೊಂದು ಮಿಂಚಿ ಮಾಯವಾಯಿತು. 



ನಾನು ಹೋದಾಗ ಕೋಟೆಯ ಆಂಜನೇಯನಿಗೆ ವೀಳ್ಯದೆಲೆಯ ಅಲಂಕಾರ ಮಾಡಿದ್ದರು. ಇಲ್ಲಿನ ಅರ್ಚಕರು ಬಾಯಿ ತುಂಬಾ ಮಾತನಾಡಿಸಿದರು. ಸುಮಾರು ಕೋಟಿ ರೂಪಾಯಿಯ ಖರ್ಚಿನಲ್ಲಿ ವರ್ಷಂಪ್ರತಿ ಆಂಜನೇಯನ ವಿಶೇಷ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಪ್ರಕೃತಿಯ ನಡುವಿನ ಸುಂದರ ತಾಣಗಳ ಸವಿಯಲು ಇನ್ನೊಮ್ಮೆ ಇಲ್ಲಿಗೆ ಮಳೆಗಾಲದಲ್ಲಿ ಬರಬೇಕು. ಕಡಲ ಕಾವಲಿಗೆ ನಿಂತ ಬುರುಜಿನ ಪಕ್ಕ ಸುಮ್ಮನೆ ಹೆದ್ದಲೆಗಳ ನಾದಕ್ಕೆ ಕಿವಿ ಕೊಟ್ಟು ನಿಲ್ಲಬೇಕು.


ನಾನು ಚಂದ್ರಾ ನದಿ ಮತ್ತು ಬೇಕಲ್‌ ನದಿ ದಾಟುವಾಗ ಅಬ್ಬರದಲಿ ಹರಿಯುತ್ತಿತ್ತು. ಸ್ವಲ್ಪ ಹೊತ್ತು ಅಲ್ಲಲ್ಲಿ ನಿಂತು ನದಿಯ ದಾಟಿದೆ. ಶಿವಾನಂದ ಕಳವೆಯ ಮಧ್ಯ ಘಟ್ಟದಲ್ಲೂ ಈ ನದಿಗಳ ದಾಟುವ ಪ್ರಸಂಗ ಬರುತ್ತದೆ. ನದಿ ನಮ್ಮನ್ನು ದಾಟಿದ್ದೊ ನಾವೇ ನದಿಯನ್ನು ದಾಟಿದ್ದೋ ಎಂಬ ತೀವ್ರ ಗೊಂದಲ. ದಾಟಿದ ನದಿಗಳಿಗೆ ನಮ್ಮ ನೆನಪಿರುತ್ತದೆಯೇ? ಬದುಕಿನಲ್ಲಿ ನಾವು ಯಾವುದೆಲ್ಲಾ ನದಿ ದಾಟಬೇಕು? ಗೊತ್ತಿಲ್ಲ. ನದಿ ದಾಟುವ ಸುಂದರ ರೂಪಕವೊಂದು ಮನದ ಪುಟದಲ್ಲಿ ಅಚ್ಚಾಯಿತು! ಶಶಿಧರ ಹಾಲಾಡಿ ಅವರ ಸುಂದರ ಕಾದಂಬರಿಯ ನೆನಪಾಯಿತು. ನೂರಾರು ವರ್ಷಗಳಿಂದ ಬೇಕಲ್ ನದಿ ಇತಿಹಾಸದ ಸಾಕ್ಷಿ ಪ್ರಜ್ಞೆಯಾಗಿ ಹರಿಯುತ್ತಲೇ ಇದೆ.



Sunday, September 27, 2026

ಧಂಕರ್‌ ಒಂದು ಅಪರೂಪದ ಆಲಾಪ


ಪ್ರಾರಂಭ



ಓಡಾಟಕ್ಕೆ ಬಸ್ಸು, ಕಾರು ರಿಕ್ಷಾ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳಿದ್ದರೇನೆ ಬದುಕು ಎಂದುಕೊಂಡ ಶಹರದ ಬೆಪ್ಪುತಕ್ಕಡಿಗಳಿಗೆ, ಅಗಾಧ ಸಂಪತ್ತಿದ್ದರೆ ಮಾತ್ರ ಮನುಷ್ಯ ಆಕರ್ಷಿತನಾಗಿ ಅಲ್ಲಿ ಬದುಕಬಲ್ಲ ಎಂದುಕೊಂಡವರಿಗೆ ಇದನ್ನೆಲ್ಲಾ ಮಿಥ್ಯೆ ಮಾಡಿ ತೋರಿಸುವ ಸಣ್ಣ ಜಗತ್ತು. ತಮ್ಮದೇ ವಿಶಿಷ್ಟ ಚೌಕಟ್ಟನ್ನು ಹಾಕಿಕೊಂಡು ಬದುಕ ಹೊರಟವರು. ಸದಾ ಸವಾಲಿನೊಂದಿಗೆ ಮುಖಾಮುಖಿಯಾಗುವವರು ಹಿಮಾಚಲದ ಧಂಕರ್‌ ಎಂಬ ಪುಟಾಣಿ ಹಳ್ಳಿಯವರು. ಆರು ತಿಂಗಳು ಹಿಮ ಗುಡ್ಡೆಯೊಳಗೆ ಹೂತು ಬದುಕಬೇಕಾದ ಅನಿವಾರ್ಯತೆ. ಬೆಟ್ಟದ ಬೋಗುಣಿಯಲ್ಲಿ ಬೆಚ್ಚಗೆ ಕುಳಿತ ಪುಟಾಣಿ ಹಳ್ಳಿಗೆ ಒಂದು ಸುತ್ತು ಬರೋಣ ಬನ್ನಿ. 

ಎಲ್ಲಿಂದ ಹೊರಟು ಬಂದರೂ ಸುಮಾರು ಎಂಟು ಕಿಲೋ ಮೀಟರ್‌ ನಷ್ಟು ನಡೆದೇ ಬರಬೇಕಾದ ಧೂಳಿನ ಕೋಟೆಯಲ್ಲಿ ಅಡಗಿದ ಪುಟಾಣಿ ಹಳ್ಳಿ. ಸ್ವಂತ ವಾಹನ ಅಥವಾ ಶಿಚಲಿಂಗ್‌ ಹಳ್ಳಿಯಲ್ಲಿ ಇಳಿದು ನಡೆದೋ ಅಥವಾ ಟ್ಯಾಕ್ಸಿ ಮಾಡಿ ಬರಬೇಕು. ಒಂದು ಕಾಲದಲ್ಲಿ ರಾಜಧಾನಿಯಾಗಿದ್ದ ಈ ಊರು ಇಂದು ವಿರಳ ಜನಸಂಖ್ಯೆಯನ್ನು ಹೊಂದಿದೆ! ಕಾಜಾದಿಂದ 24 ಕಿ.ಮಿ. ದೂರದಲ್ಲಿದೆ. ಅದೇ ಹಿಮಾಚಲದ ಸ್ಪಿಟಿ ಕಣಿವೆಯ ಧಂಕರ್.

ಧಂಕರ್ ಹಳ್ಳಿಯಲಿ



ನ್ಯಾಕೊ ಹಳ್ಳಿಯಲಿ ತಂಗಿ, ರೆಕ್ಕೆ ಪಡಪಡಿಸಿ ಎದ್ದ ಹಗಲಿನಲ್ಲಿ ಟಾಬೋ ಮಾನೆಷ್ಟ್ರಿಗೆ ಮಾರು ಹೋಗಿ ಪೋಹ್‌ ಹಳ್ಳಿಯ ನಡು ಬಳಸಿ, ಸಿಲುಕ್‌ ಹಳ್ಳಿಯ ಸ್ನಿಗ್ಧ ಸಂತಸವ ಸವಿದು ಧಂಕರ್‌ ತಲುಪಿದಾಗ ಬಿಸಿಲಿಗೆ ಒಣ ಹಾಕಿದ ಹಗಲು ಮುಗಿಯುತಲಿತ್ತು. ನೂರು ಮೀರದ ಜನಸಂಖ್ಯೆಯ ಈ ಪುಟಾಣಿ ಹಳ್ಳಿ ಇಳಿ ಸಂಜೆಯ ಮೂಡಿನಲ್ಲಿತ್ತು. 




ಮೃದು ಮಣ್ಣ ಸಮುದ್ರದಲಿ ಎದ್ದ ಗೊದ್ದದ ಹುತ್ತದಂತಹ ಮಣ್ಣಗುಡ್ಡೆಗಳು. ಇನ್ನೇನು ಕೆಲವೇ ದಿನಗಳಲ್ಲಿ ಕಳಚಿ ಸ್ಪಿಟಿ ನದಿಗೆ ತನ್ನನ್ನು ಅರ್ಪಿಸಿಕೊಳ್ಳುವ ಧಾವಂತದಲ್ಲಿದ್ದಂತೆ ತೋರುತ್ತಿತ್ತು ಎಂಟು ನೂರು ವರ್ಷ ಹಳೆಯ ಧಂಕರ್‌ ಮಾನೆಷ್ಟ್ರಿ. ಮಣ್ಣ ಗುಡ್ಡೆಯೊಳಗೆ ಅಳಿಲು ಕೊರೆದ ಹೆದ್ದಾರಿ. ವಿಸ್ಮಯ. ಅಳಿವಿನಂಚಿನ ನೂರು ಸ್ಥಳಗಳಲ್ಲಿ ಧಂಕರ್‌ ಸಹ ಒಂದು ಎನ್ನುವುದು ವಿಶೇಷ. ಧಂಕರ್ ಉಳಿಸಿ ಎನ್ನುವ ಹೋರಾಟವೂ ಚಾಲ್ತಿಯಲ್ಲಿದೆ.

ಧಂಕರ್‌ ಎಂದರೆ ಬೆಟ್ಟದ ತುದಿಯ ಕೋಟೆ ಎಂದು. ಕುಲ್ಲು, ಲಡಾಕ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇದನ್ನು ೧೨೦೦ರ ಸುಮಾರಿಗೆ ಈ ಮಾನೆಷ್ಟ್ರಿ ಮತ್ತು ಕೋಟೆ ಕಟ್ಟಲಾಯಿತು. 

ಪಶ್ಚಿಮ ಘಟ್ಟದ ತಪ್ಪಲಿನಿಂದ ಬಂದ ನಮಗೆ ಅಚ್ಚರಿಯ ಅನುಭೂತಿ. ಸಸ್ಯಗಳ ಹಸಿರು ಕಂಡ ನಮ್ಮ ಕಣ್ಣುಗಳಿಗೆ ಎಂತಹುದೋ ಹಾಪಾ ಹಪಿ . ಇಲ್ಲಿನ ಜನರು, ಹುತ್ತದಂತಹ ಗುಡ್ಡ ಏರಿದರೆ ಅಲ್ಲೊಂದು ಇಲ್ಲೊಂದು ಮನೆಗಳು. ಆಚಾರ, ರೂಢಿ-ಪದ್ಧತಿಗಳು ಎಲ್ಲವೂ ಬಿನ್ನ. ನನಗೆ ಹಸಿರಿಲ್ಲದ ಇವರ ಬದುಕು ಬರಡು ಎಂದೆನ್ನಿಸಿತು. ಏರಲಾರದ ಎಡೆಗಳಲ್ಲಿ ಇವರ ಮನೆಗಳು. ನಮಗೋ ಬೀಳುವ ಭಯ ಅವರೋ ನಿರಾಳ ನಿಶ್ಷಿಂತರು. 



ಅವಿಚ್ಛಿನ್ನವಾಗಿ ಅವಿರತಿರುವ ಇವರ ಅಪ್ರತಿಮ ಇಚ್ಛಾಶಕ್ತಿಗೆ ಬೆರಗುಗೊಂಡೆ. ತಣ್ಣಗಿನ ಈ ದಿಬ್ಬಗಾಡು ಸರಿಸುಮಾರು ಆರು ತಿಂಗಳು ಹಿಮ ಹಿಮಚಾದರವ ಹೊದ್ದಿರುತ್ತದೆ. ಹಿಮ ಕರಗಿದ ನೀರೇ ಇವರಿಗೆ ಆಸರೆ. ಮಳೆ ನೆರಳಿನ ಪ್ರದೇಶ. ಹೊರ ಪ್ರಪಂಚದಿಂದ ಬಲು ದೂರ. ಎಲ್ಲೆಲ್ಲೂ ಏಕಾಂತ. ಇವರ ತಾಳ್ಮೆ ಅಪಾರ. ಇಲ್ಲಿನ ಕಲ್ಲುಗಳು ತಾಳ್ಮೆಯ, ಹಿಮ ಕವುಚಿದ ಕತೆ ಹೇಳುತ್ತವೆ.

ದಿನಕ್ಕೆ ಆಗುವಷ್ಟು ಸಂಪಾದನೆಯಾದರೆ ಸಾಕು ಇಲ್ಲವಾದರೂ ಸರಿಯೇ ಎಂಬಷ್ಟು ನಿರ್ಲಿಪ್ತ ಜನ. ಮಳೆ ನೆರಳಿನ ಪ್ರದೇಶವಾದುದರಿಂದ ಇಲ್ಲಿಯ ಮಣ್ಣಿಗೆ ಉಳಿಗಾಲ. ಇಲ್ಲವಾದರೆ ಅಷ್ಟೂ ಮಣ್ಣು ಕೊಚ್ಚಿ ಸ್ಪಿಟಿ ಸೇರುತ್ತಿತ್ತು. 

ಅಲ್ಲಲ್ಲಿ ಸಿಗುವ ಶಂಖದ ಅಚ್ಚು , ಸುರುಳಿ ಸುತ್ತಿದಂತಹ ಚಕ್ರದ ಕಲ್ಲಿನ ಫಾಸಿಲ್‌ ಪಳೆಯುಳಿಕೆ ಸಮುದ್ರದ ಕತೆ ಹೇಳುತ್ತದೆ.

ಧಂಕರ್‌ ಒಂದು ಅಪರೂಪದ ಹಳ್ಳಿ

1956ರಲ್ಲಿ ವಿಶ್ವ ಪಾರಂಪರಿಕ ಸ್ಥಳ ಎಂದು ಘೋಷಣೆಗೊಂಡ 17ನೆಯ ಶತಮಾನದ ಸ್ಪಿಟಿ ಕಣಿವೆಯ ರಾಜಧಾನಿ. ಒಂದೆಡೆ ಚೀನಾ ಮತ್ತು ಟಿಬೆಟ್.‌ ಬನ್ನಿ ಮಾನೆಷ್ಟ್ರಿ ಒಳ ಹೊಕ್ಕು ಬರೋಣ.

ಎದ್ದು ನಿಂತ ಕಾಂದಾ ಬಜ್ಜಿಯ ಗೋಪುರಗಳ ನಡುವೆ ಹುದುಗಿನಿಂತ ಸಣ್ಣ ಮಾನೆಷ್ಟ್ರಿ. ಹಲವೆಡೆ ಮಣ್ಣಗಾರೆಗೆ ಸಿಮೆಂಟ್‌ ಮೆತ್ತಿದ್ದರು. ಬಿಳಿ ಮತ್ತು ಕೆಂಪು ವರ್ಣದ ಗೋಡೆಗಳು. ಮಾನೆಷ್ಟ್ರಿಯ ಒಳ ಹೊಕ್ಕು ಉಪ್ಪು ಚಹ ಹೀರಿದೆವು. ಬೋತಿ ಭಾಷೆಯ ಲಿಪಿಯಲ್ಲಿ ಬರೆದ ಭೌದ್ಧ ಕಡತಗಳು ಕೆಲವಿದ್ದವು. ಒಳಗಿನ ಗೋಡೆಗಳಲ್ಲಿ 1500ರ ಸುಮಾರಿಗೆ ಬಣ್ಣದಲ್ಲಿ ಬಿಡಿಸಿದ ಸುಂದರ ಚಿತ್ರಗಳಿದ್ದವು. ಒಳಗಿನಿಂದ ಹೊರಟ ದಾರಿ ಮಾನೆಷ್ಟ್ರಿಯ ತುತ್ತ ತುದಿಗೆ ತಲುಪಿಸಿತ್ತು. ತುದಿಗೇರಿ ಸ್ಪಿಟಿ ಕಣಿವೆಯ ರುದ್ರ ಸೌಂದರ್ಯದಲಿ ಮುಳುಗಿದೆವು. ಸುತ್ತಲಿನ ೩೬೦ ಡಿಗ್ರಿ ನೋಟ ನಿಚ್ಚಳ. ದೂರದಲ್ಲಿ ಪರಿಶುಭ್ರ ಸ್ಪಿಟಿ ಮತ್ತು ಪಿನ್‌ ನದಿಗಳು ಸೇರುತಲಿದ್ದವು. ಸ್ಪಿಟಿ ನದಿ ದಕ್ಷಿಣಾಭಿ ಮುಖವಾಗಿ ಹರಿಯುತಲಿತ್ತು. ಸೂರ್ಯ ಅವಸರದಲ್ಲಿದ್ದ. ನೆತ್ತಿ ತಲುಪಿ ಸ್ಪಿಟಿ ನದಿಯಲಿ ಮೀಯಲು ತಯಾರಾಗಿದ್ದ. ಇಲ್ಲಿಂದ ಕಾಣುವ ಸೂರ್ಯಾಸ್ತ ಮತ್ತು ಚಂದ್ರಾಸ್ತಗಳು ಅಮೋಘ. ಸೂರ್ಯನ ಗೈರಿನಲ್ಲಿ ಚಳಿ ನರ್ತನ ಶುರುವಾಗಿತ್ತು. ಹಾರಾಡುವ ಪತಾಕೆಗಳು. ಹಳೆ ಕಾಲದ ವಸ್ತುಗಳನ್ನಿಟ್ಟ ವಸ್ತು ಸಂಗ್ರಹಾಲಯ ಅದರ ಜೊತೆಗಿತ್ತು. ನಾವು ಹೋದಾಗ ಮುಚ್ಚಿತ್ತು. 




ಮೂರು ಮಕ್ಕಳ ತಾಯೊಬ್ಬಳು ನಾವು ನಡೆಯಲೂ ಕಷ್ಟ ಪಡುವ ದಾರಿಯಲ್ಲಿ ಎದೆಗವಚಿದ ಮಗುವಿನೊಂದಿಗೆ ಕಿರು ನಗೆ ಸೂಸುತ್ತಾ ಮರವೇ ಇಲ್ಲದ ಊರಲ್ಲಿ ಕಟ್ಟಿಗೆಯ ಹೊರೆಯೊಂದನು ಹೊತ್ತು ಹೊರಟಿದ್ದಳು. ಗುಹೆಯಂತಹ ದಾರಿಯೊಳಗೆ ಮಾಯವಾದಳು. ಯಾರೊ ಅವಸರದಲಿ ಗೀಚಿದ ಹೋಮ್‌ ಸ್ಟೇಯೊಂದರ ಬೋರ್ಡು ನಮ್ಮನ್ನು ಅಣಕಿಸುತಲಿತ್ತು. ಅದೊಂದು ಸಣ್ಣ ಅಜಂತಾದ ಗುಹಾಂತರ ದೇವಾಲಯವನ್ನು ನೆನಪಿಗೆ ತರಿಸಿತ್ತು. ಸುತ್ತಲೂ ಗೊದ್ದದ ಹುತ್ತದಂತಹ ತ್ರಿಭುಜಾಕೃತಿಗಳು. ಇಂತಹ ಪ್ರಕೃತಿಯ ವಿಸ್ಮಯಗಳು ಅಲ್ಲಿ ನೂರಾರಿವೆ. ನೋಡುವ ಕಣ್ಣು ಬೇಕಷ್ಟೇ.

3 ಕಿಲೋ ಮೀಟರ್‌ ದೂರದ ಚಾರಣ ಮಾಡಿ ತಲುಪುವ ಧಂಕರ್‌ ಸರೋವರವನ್ನು ಈ ಬಾರಿ ಮಿಸ್‌ ಮಾಡುತ್ತಾ ಸ್ಪಿಟಿ ನದಿಯ ಸೆರಗಿಗೆ ತಲುಪಿ ಮುಖ ತೊಳೆದು ಮುಂದಡಿ ಇಟ್ಟೆವು.

ಚಳಿಯ ತೋಳಿನ ಬೆಂಕಿಯ ಕೂಸು ಧಂಕರ್

ಹಿಮದಲಿ ಸುಟ್ಟ ರೊಟ್ಟಿ ಸವಿಯಲು ಒಮ್ಮೆ ಇಲ್ಲಿಗೆ ಬರಬೇಕು. ಹಿಮ ಸ್ವಪ್ನ ಲೋಕದಲ್ಲೊಮ್ಮೆ ಹೊರಳಿ ಹೂತು ಹೋಗಬೇಕು. ಸವಾಲಿನ ಆರು ತಿಂಗಳು ಕಳೆದು ಮತ್ತೆ ನಿಚ್ಚಳ ಬೆಳಗನ್ನು ಸವಿಯಬೇಕು. 

ಸುಟ್ಟ ರೊಟ್ಟಿಯ ಕನಸುಗಳು. ಬೆಳದಿಂಗಳಲಿ ಬೆಂದ ನೋಟ. ಉಪ್ಪಿಟ್ಟಿನ ಹುರಿದ ರವೆಯಂತಹ ಮಣ್ಣು. ಮೀನಿನ ಸಾರಿನ ಪರಿಮಳದಂತಹ ಧೂಳು ನಾಸಿಕದೊಳ ಹೊಕ್ಕಿ ಒಳಗನ್ನು ಹೊರಗು, ಹೊರಗನ್ನು ಒಳಗೂ ಮಗುಚುತ್ತಲೇ ಇತ್ತು. ಇರುಳ್ಳಿ ಬಜ್ಜಿಯಂತೆ ಎದ್ದ ದೊಡ್ಡ ಗುಡ್ಡಗಳು. ಹಿಮಗಾಣಕ್ಕೆ ಸಿಕ್ಕ ಕೋಣಗಳ ಕೊಂಬುಗಳಂತೆ.  

ಸಾವಿರಾರು ವರ್ಷಗಳಿಂದ ಸೂರ್ಯನ ಕಾವಲಿಗೆ ಬಿದ್ದು ಬದುಕಿದ ಇಲ್ಲಿನ ಜನರ ತಾಳ್ಮೆಯ ಕತೆ ಕೇಳಿಸಿಕೊಳ್ಳಬೇಕು. ಸರಳ ಸಂತಸದ ತಿಳಿಯು ತುಂಬಿದ ಇವರ ಬೊಗಸೆಯಿಂದ ಸ್ವಲ್ಪವಾದರೂ ಸಂತಸವ ಬಸಿದುಕೊಳ್ಳಬೇಕು. ನೂರಾರು ಕತೆಗಳ ಜೋಲಿಯನ್ನು ತೂಗಬೇಕೆಂಬ ಆಸೆ. ಎಂದು ಬರುವೆ ಎಂದು ಕೇಳುತ್ತಲೇ ಇದೆ ಧಂಕರ್‌ ಎಂಬ ಮಧುರ ಆಲಾಪ!

ನನ್ನ ಸ್ಮರ್ತಿಪಟಲದಲಿ ಧಂಕರನ ಸುಂದರ ರಿಂಗ್‌ಟೋನು ಮತ್ತೆ ಮತ್ತೆ ರಿಂಗಿಣಿಸುತ್ತಲೇ ಇದೆ. ಒಳಹೊಕ್ಕು ನೋಡದೇ ಯಾವುದರ ಮಹತ್ವವೂ ನಮಗೆ ಅರಿಯದೆಂಬ ಅರಿವಿನೊಂದಿಗೆ ಅಪರೂಪದ ಧಂಕರ್‌ ಮಾನೆಷ್ಟ್ರಿಗೆ ವಿದಾಯ ಹೇಳಿದೆವು.


Sunday, September 13, 2026

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ್ಟಿದೆ, ಇನ್ನೆಷ್ಟು ಎಲೆ ಬಿಡಲು ಬಾಕಿ ಇದೆ ಮುಂತಾದ ವಿವರಗಳು ನಮ್ಮ ನಾಲಿಗೆ ತುದಿಯಲ್ಲಿ. ನಾವು ತಿನ್ನುವ ಜೋಗಾಳ ಅಷ್ಟರಲ್ಲೇ ಇದೆ. 



ಇಂತಹ ಮರ ಕೆಸುವಿನ ಎಲೆ ಭೇಟೆಗೆ ಹೊರಟಾಗ ಕಂಡ ನಾಲ್ಕು ಜಲಧಾರೆಯ ಕುರಿತು ಕಿರು ಟಿಪ್ಪಣಿ. ಇಂತಿಥ ಮರದಲ್ಲಿ ಈ ಸಮಯಕ್ಕೇ ಕೆಸುವಿನ ಎಲೆ ಬಿಡುತ್ತದೆ ಎಂಬುದೆಲ್ಲಾ ನಮಗೆ ಬಾಯಿ ಪಾಠ! ಸುಲಭದಲ್ಲಿ ಕೊಯ್ಯಬಹುದಾದ ನೂರಾರು ಮರಗಳನ್ನು ಗುರುತು ಹಾಕಿಟ್ಟುಕೊಂಡಿದ್ದೆವು. ಆದರೆಕೋ ಆ ವರ್ಷ ಎಲೆಗಳ ಅಭಾವ. ಪತ್ರೊಡೆ ತಿನ್ನದೇ ಬಾಯಿ ತುರಿಕೆ. ಅಂಗಡಿಯಲ್ಲಿ ಕೊಳ್ಳೋಣ ಎಂದರೆ ಒಂದಕ್ಕೆರಡು ದರ. ನಾಲ್ಕು ಎಲೆಗಳಿಗೆ ೨೦-೩೦ ಬೆಲೆ! ಹಾಗಾಗಿ ಆ ಭಾನುವಾರ ನಾವು ಊರು ಬಿಡಬೇಕಾಯಿತು! ಕೈ ಚೀಲ ಹಿಡಿದು ಬೇಟೆಗೆ ಹೊರಟೆವು!

   


     ಹೀಗೆ ನಾನು ಕೆಲಸ ಮಾಡೋ ಊರಿಂದ ಮುಂದೆ ದೊಡ್ಡದೊಂದು ಕಾಡು. ಈ ಕಾಡಿನ ಮರಗಳ ಕಂಕಳಲ್ಲಿ ಬೆಳೆವ ಎಲೆಗಳನ್ನು ಮಾತನಾಡಿಸಲು ಒಮ್ಮೆ ಹೊರಟೆವು! ಬೃಹತ್‌ ಕಾಡು ದಾಟಿದರೆ ಹರಿವ ಹಳ್ಳ. ಆ ಹಳ್ಳದ ಸನಿಹವೇ ಪುಟ್ಟ ವಿನಾಯಕ ದೇವಾಲಯ. ಹೇಗೂ ಬಂದಿದ್ದೇವೆಂದು ದೇವಾಲಯ ಹೊಕ್ಕೆವು. ಸಿದ್ದಾಪುರ ದಿಂದ 10-12 ಕಿಲೋಮೀಟರ್‌ ದೂರದ ತೊಂಭಟ್ಟು ಎಂಬ ಪುಟ್ಟ ಗ್ರಾಮದಲ್ಲಿದೆ ಈ ವಿನಾಯಕ ಮಂದಿರ. ನಮ್ಮೂರಿನ ತಂಡವೊಂದು ಆಗಷ್ಟೇ ಹೊಸ ಶಾಸನವೊಂದನ್ನು ಊರ ಮಕ್ಕಳ ಸಹಾಯದಿಂದ ಪತ್ತೆ ಮಾಡಿ ಅಧ್ಯಯನಕಾರರಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಈ ಊರಲ್ಲಿ ನಮ್ಮ ಮಕ್ಕಳ ಡೌಲು. ಶಾಸನಗಳ ಬಗ್ಗೆ ಕೇಳಿ ತಿಳಿದಿದ್ದ ನನಗೆ ಇವುಗಳನ್ನು ನೋಡುವ ಆಸೆ. ಉಳ್ಳೂರು ಕಂದಾವರ ದೇವಾಲಯದ ತುಂಬಾ ಹರಡಿರುವ ವಿಜಯನಗರ, ರಾಣಿ ಚೆನ್ನಾಬೈರಾದೇವಿ ಹೀಗೆ ಹತ್ತು ಹಲವು ಶಾಸನಗಳ ಸರಮಾಲೆಯನ್ನೇ ನಮಗೆ ಅಲ್ಲಿನ ಅರ್ಚಕರು ಪರಿಚಯಿಸಿದ್ದರು. ಶಾಸನಗಳ ಮೇಲೆ ವಿಶೇಷ ಆಸಕ್ತಿ ಹಾಗಾಗಿ ಇಲ್ಲಿರುವ ಹಳೆಯ ಕಾಲದ ಹಲವು ಶಾಸನಗಳನ್ನು ಓದುವ ಪ್ರಯತ್ನ ಮಾಡಿದೆವು. ಅಲ್ಲಿನ ಪುರೋಹಿತ ಉಡುಪರು ಸ್ಥಳ ಪುರಾಣ, ಶಾಸನ ಅಧ್ಯಯನಕ್ಕೆ ಬಂದ ಮಹನೀರಯರನ್ನೆಲ್ಲಾ ನೆನೆದರು. ಹದಿನಾಲ್ಕನೆಯ ಶತಮಾನದ ಈ ದೇವಾಲಯಕ್ಕೆ ವಿಜಯನಗರ ಆದಿಯಾಗಿ ಅನೇಕ ಅರಸರ ಉಂಬಳಿ ಇತ್ತೆಂದು ಹೇಳಿದ ನೆನಪು. ಒಂದಿಬ್ಬರ ಹಳೆಯ ಫೋನ್ ಸಂಖ್ಯೆಯನ್ನೆಲ್ಲಾ ನೀಡಿದರು. ಬಹಳ ಸಂಭ್ರಮದಿಂದ ಸನಿಹದ ಹಳ್ಳಕ್ಕೆ ಕರೆದೊಯ್ದರು.


ವಿನಾಯಕ ದೇವಾಲಯದ ಸನಿಹವೇ ಇರ್ಕಿಗದ್ದೆ ಜಲಧಾರೆ ಎರಡು ಹಂತವಾಗಿ ಹರಿಯುತ್ತದೆ. ಹೆಚ್ಚು ಕಡಿಮೆ ವಾರಾಹಿಯ ಗರ್ಭ ಸೇರುವ ಪುಟಾಣಿ ಹಳ್ಳ. ಒಂದಾನೊಂದು ಕಾಲದಲ್ಲಿ ಎಲ್ಲಾ ಊರುಗಳೂ ಹೊಳೆ, ಹಳ್ಳಗಳ ಸನಿಹವೇ! ಇಲ್ಲಾ ಗುಡ್ಡದ ಬುಡದಲ್ಲಿ ಮೈಲುಗಟ್ಟಲೆ ದೂರಕ್ಕೊಂದು ಮನೆ. ಮನೆ ಮನೆಗಳ ನಡುವೆ ಬಿಡಿಸಲಾಗದ ಭಾಂದವ್ಯ. ಇಲ್ಲಿನ ಗುಡ್ಡಗಳಿಗೆ ಸದಾ ಮಂಜಿನ ಪ್ರೀತಿ. ಮಂಜಿನ ಮುಸುಕೆಳೆದು ಮಲಗಿರುತ್ತವೆ. ಈ ಹಳ್ಳದ ಗುಂಟ ನಡೆದಿದ್ದೇನೆ. ಎಲ್ಲಾ ತಕರಾರುಗಳ ನಡುವೆ ತಕರಾರು ತೆಗೆಯದೇ ಬದುಕುವ ನಮ್ಮ ಪೂರ್ವಿಕರ ಪರಿಗೆ ಬೆರಗುಗೊಂಡಿದ್ದೇನೆ! ಗುಡ್ಡದಿಂದ ಒಸರುವ ನೀರೇ ಇವರ ಸಕಲ ಬೇಸಾಯ ಭಾಗ್ಯದ ಬಾಗಿಲು. ಒಂದೆರೆಡು ಎಕರೆ ತೋಟ ಮಾಡಿಕೊಂಡು ನೆಮ್ಮದಿಯ ಬದುಕು ಕಾಣುತ್ತಾರೆ.

ಕುಂಚಿಕಲ್ ಅಬ್ಬಿ ಮತ್ತು ಹುಲಿ ಮಾಬ್ಲ!



 ಅಂದು ನನಗೆ ಪರಿಚಯ ಆದವರೇ ಹುಲಿ ಮಾಬ್ಲನ ಮಗ ಅಶೋಕ ಪೂಜಾರಿ! ಊರವರ ಬಾಯಲ್ಲಿ ಸದಾ ನಲಿವ ಈ ಹೆಸರುಗಳು. ನಾವು ಹೋದಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ವಿನಾಯಕನ ದೇವಾಲಯದಿಂದ ಮಾರು ದೂರದ ಮನೆ ಅಶೋಕ್‌ ಪೂಜಾರಿಯದು. ಅವನೇ ನಮಗೆ ತನ್ನ ತಂದೆಯ ಕುರಿತು ಹೇಳಿದ ಕತೆಗಳು ನೂರಾರು. ಊರ ಜನರಿಗೆ ಉಪಟಳ ಕೊಡುವ ನೂರಕ್ಕೂ ಹೆಚ್ಚು ಹುಲಿಗಳನ್ನು ತನ್ನ ತಂದೆ ನಿವಾರಿಸಿದ್ದಾರೆ. ಹಾಗಾಗಿ ಅವರಿಗೆ ಬ್ರಿಟಿಷ್‌ ಸರಕಾರ ಬಿರುದು ಬಾವಲಿಗಳನ್ನಿತ್ತು ಸನ್ಮಾಸಿದೆ. ಹಳ್ಳದ ಸನಿಹದ ಗದ್ದೆ ಕೋವಿನಲ್ಲಿ ಆತನ ಮನೆ. ನಾವು ಹೋದಾಗ ಮನೆಯಿಂದ ಕಟ್ಟಿಗೆಯ ಧೂಮ ಏಳುತಲಿತ್ತು. ಜೊತೆಗೆ ಗಂಜಿಯ ಪರಿಮಳ. ಈಗ ಅವರಿಬ್ಬರೂ ಇಲ್ಲ.

  ಹುಲಿಗಳ ನಡುವೆ ಬದುಕು ಅಂದಿನವರ ಪರದಾಟ, ಬವಣೆಗಳ ನೆನೆದು ಖೇದವಾಯಿತು. ಜೊತೆಗೆ ಸಣ್ಣ ರೋಮಾಂಚನ! ಅವರ ಎದೆಯ ಬಯಲಲಿ ಕರಗಿದ ಹುಲಿಯ ನೂರಾರು ಕತೆಗಳು ಕೇಳುವ ತವಕವಿತ್ತು. ಅಂದು ಮನಸ್ಸಿರಲಿಲ್ಲ ಇಂದು ಅವರೇ ಇಲ್ಲ. ವಾರಾಹಿ ನದಿಯ ಉದ್ದಗಲಕ್ಕೂ ಹಬ್ಬಿದ ಬದುಕಿನ ಕತೆಗಳು ಅವರ ಬಳಿ ಇತ್ತು.

  ಹುಲಿ ಮಾಬ್ಲನ ಮಗನ ಜೊತೆಯಾಗಿ ಅವರ ಮನೆಗೆ ಹೋದೆ. ಬ್ರಿಟಿಷ್ ಸರಕಾರ ನೀಡಿದ ಪ್ರಶಸ್ತಿ ಫಲಕಗಳು ಮನೆಯ ಚಾವಡಿಯಲ್ಲಿ ನೇತು ಬಿದ್ದಿತ್ತು! ಹಳೆಯ ಚರೆ ಕೋವಿಯೂ ಸಹ! ಗತದ ವರ್ತಮಾನದ ಕೊಂಡಿಯಂತೆ ಅಂದಿನ ಜನರ ಹೋರಾಟದ ಬದುಕಿನ ಗುರುತಾಗಿ ಗೋಡೆಗೆ ಆತು ನಿಂತಿತ್ತು. ಮನೆ ಎದುರೇ 8-10 ಮುಡಿ ಗದ್ದೆ. ಗದ್ದೆ ಬಯಲ ನಂತರ ಚಿಕ್ಕ ತೆಂಗಿನ ತೋಟ. ತೋಟ ದಾಟಿದರೆ ಎಳ್ಳಾಮಾಸೆಗೆ ಊರ ಜನರೆಲ್ಲಾ ಸೇರಿ ಪೂಜೆ ಮಾಡೋ ಚಿಕ್ಕ ಗುಡಿ. ಕಲ್ಲೇ ಇವರಿಗೆ ದೇವರು. ಮಳೆಗಾಲವಿಡೀ ಗುಡಿಯೊಳಗೆ ನೀರ ಸಂಭ್ರಮ. ಸನಿಹದಲ್ಲೇ ಹರಿವ ಸಣ್ಣ ಜಲಪಾತವನ್ನು ತಾದ್ಯಾತ್ಮತೆಯಿಂದ ತೋರಿದನು. ನಾಲ್ಕಾರು ಸಂಕ ದಾಟಿ ಇಲ್ಲಿಗೆ ಬರಬೇಕು. ಮಳೆಗಾಲದಲ್ಲಿ ಬೋರ್ಗರೆವ ಬೇಸಿಗೆಯಲ್ಲಿ ಬತ್ತುವ ಈ ಹಳ್ಳಕ್ಕೆ ಕಟ್ಟು ಕಟ್ಟಿ ಊರಿನ ಎಲ್ಲಾ ಗದ್ದೆಗಳಿಗೆ ನೀರುಣಿಸುತ್ತಾರೆ. ಇದೆ ಹಳ್ಳವೇ ಪುಟ್ಟ ವಿನಾಯಕನ ಗುಡಿಯ ಸನಿಹ ಹಾದು ಹೋಗುತ್ತದೆ! ಅಂದು ನಮಗೆ ಪರಿಚಯವಾದವನೇ ಪುಟ್ಟ ಈಶ. ಈತನೇ ನಮ್ಮ ತಂಡದ ಗುರು.

ಪುಟ್ಟ ಈಶನ ಜೊತೆಯಲಿ

  ಇಲ್ಲಿ ನಮಗೆ ಜೊತೆಯಾದವನು ಪುಟಾಣಿ ಗೈಡ್‌ ಈಶ. ಆತನ ಜೊತೆಯಲಿ ಅಲ್ಲಿಂದ ನಮ್ಮ ಸವಾರಿ ಹೊರಟಿದ್ದು ಹಾವರೆಕಲ್ಲು ಎಂಬ ಅಜ್ಞಾತ ಧಾರೆಯೆಡೆಗೆ ಸಾಮಾನ್ಯವಾಗಿ ಯಾರೂ ಹೊರಡದ ಈ ಹಾದಿಗೆ ಅಲ್ಲಿನ ಈಶನೆಂಬ ಗೆಳೆಯನ ಜೊತೆ ಮಾಡಿದರು ಗೆಳೆಯ ಸುಧಾಕರ. ಈಶನೋ ಕೇವಲ 13ರ ಪೋರ! ಕಾಡ ನಡುವೆ ದಾರಿ ತಪ್ಪಿದರೆ ಎಂಬ ಅಜ್ಞಾತ ಭಯ. ಆದರೆ “ಈತ ಇಲ್ಲಿಗೆ ಹತ್ತಾರು ಬಾರಿ ಅಲ್ಲಿಗೆ ಭೇಟಿ ಕೊಟ್ಟಿದ್ದ!” ಎಂದು ತಿಳಿದಾಗ ಸಮಾಧಾನವಾಯ್ತು. ತನ್ನ ಪುಟಾಣಿ ಕೊಡೆ ಹಿಡಿದು ಇಲ್ಲಿನ ಕಾಡು, ಗಿಡ, ಮರ ಬಳ್ಳಿಯ ಬಗೆಗೆ ವಿವರಿಸಿ ಅಚ್ಚರಿ ಪಡಿಸಿದ್ದ. ಸುಟ್ಟಾಗ ಉಪ್ಪಿನಂತೆ ಚಟಪಟಗುಡುವ ಎಲೆ, ತಲೆದಿಂಬಿನಡಿ ಇಟ್ಟು ಮಲಗಿದರೆ ಈಗ ಎಲ್ಲಿದ್ದನೋ ತಿಳಿಯದು. ಕಾಡುವ ಅಸ್ಪಷ್ಟ ನೆನಪುಗಳು. ನಮ್ಮ ತಂಡದ ಪುಟಾಣಿ ಗುರು.



  ಪಶ್ಚಿಮ ಘಟ್ಟದ ಅಪೂರ್ವ ಕಾಡಿನ ದರ್ಶನ ಸಿಕ್ಕಿದ್ದು ಇಲ್ಲೇ. ವಿಭಿನ್ನ ಜಾತಿಯ ಮರಗಳ ದಟ್ಟಣೆಯಿಂದ ತುಂಬಿತ್ತು. ಅಮಾಯಕ ಜನರು ಕಾಡು ಉಳಿಕೆಗೆ ಕಾರಣವಾಗಿದ್ದರು. ಹಾಗೆಯೇ ಸದಾ ಸುರಿವ ಮಳೆ, ಇಂಬಳ, ಸರಿ ಇಲ್ಲದ ರಸ್ತೆ ಈ ಜಾಗವನ್ನು ಅನೂಹ್ಯವಾಗಟ್ಟಿತ್ತು. ಇತ್ತಿಚಿಗಷ್ಟೇ ಇಲ್ಲಿಗೊಂದು ಸುಸಜ್ಜಿತ ರಸ್ತೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದು. ಇಲ್ಲದೇ ಇದ್ದರೆ ರೋಗಿಗಳನ್ನು ರಸ್ತೆ ತನಕ ಎಂಟು ಕೀಲೊ ಮೀಟರ್ ಹಂದಿ ಹೊತ್ತಂತೆ ಹೊತ್ತು ತರಬೇಕಿತ್ತು. ಸಣ್ಣ ಕಾಯಿಲೆಗೂ 10 ಕಿ.ಮೀ ನಡಿಗೆ. ಹಾಗಾಗಿ ನಡಿಗೆ ಇವರಿಗೆ ಉಸಿರಾಟದಷ್ಟೇ ಸರಳ. ವಾರಾಹಿ ನದಿ ಗುಂಟ ಹಬ್ಬಿದ ನಾಗರೀಕತೆಗೆ ಸುಮಾರು 500 ವರ್ಷಗಳ ಇತಿಹಾಸ. ಮೊದಲೆಲ್ಲ ಕಾಡು ನದಿಗಳ ಸನಿಹವೇ ನಮ್ಮ ನಿಮ್ಮೆಲ್ಲರ ವಾಸ್ತವ್ಯ. ಇಂದು ಕಾಡಾಗಿರುವ ಎಡೆಗಳಲ್ಲಿ ಬದುಕಿದ ಜನ ಸಮುದಾಯದ ಬದುಕು ಇಂದಿಗಿಂತ ತದ್ವಿರುದ್ಧ. ಅಲ್ಲಲ್ಲಿ ಕಾಣ ಸಿಗುವ ಬೃಹತ್ ತೆಂಗಿನ ಮರಗಳು ಅಲ್ಲಿ ನಾಗರೀಕತೆ ಇತ್ತೆಂಬುದಕ್ಕೆ ಇಂಬು ಕೊಡುತ್ತವೆ. ಹುಲಿ ಮಾಬ್ಲನಿದ್ದಿದ್ದರೆ ಹತ್ತಾರು ಕತೆ ಹೇಳಿ ನಮ್ಮನ್ನು ಅಚ್ಚರಿಗೆ ಕೆಡಹುತ್ತಿದ್ದ. ಹಲವಾರು ಹಾವು ಅಣಬೆಗಳನ್ನು ನೋಡುತ್ತಾ ಹಾವರೆ ಕಲ್ಲಿನ ಜಲಧಾರೆಗೆ ತಲೆ ಕೊಟ್ಟಾಗಲೇ ನಮಗೆ ಸಮಾಧಾನವಾಗಿದ್ದು. ದಾರಿ ನಡುವೆ ವೈಪರ್‌ ಹಾವೊಂದು ಗಿರಕಿ ಹಾಕಿ ಮಲಗಿದ್ದಿದ್ದು ಈಶ ನಮಗೆಲ್ಲಾ ತೋರಿಸಿದ. ಒಣಗಿದ ತರಗಲೆಯ ಬಣ್ಣಕ್ಕೆ ಇದ್ದ ಅದರ ಚರ್ಮ ನಾವೆಷ್ಟೇ ಪ್ರಯತ್ನ ಪಟ್ಟರೂ ಕಾಣಿಸುತ್ತಿರಲ್ಲಿಲ್ಲ. ಆತ ನಮಗೆ ಅದನ್ನು ಕಾಣಿಸಿದ. ಕಿತ್ತಳೆ ಬಣ್ಣದ ಅಣಬೆಯನ್ನೂ ತೋರಿಸಿದ.


  ಹೀಗೆ ಹಾವರೆಕಲ್ಲು ಎಂಬ ಚೇತೋಹಾರಿ ಜಲ ಕನ್ನಿಕೆಯ ದರ್ಶನ ಪಡೆದು ಸಾಕಷ್ಟು ರಕ್ತದಾನ ಮಾಡಿ ಇಳಿ ಸಂಜೆಗೆ ಮತ್ತೆ ಹುಲಿ ಮಹಾಬಲನ ಮನೆ ಎದುರಿದ್ದೆವು.

  ಅಗಾದ ಕಷ್ಟದಲ್ಲಿ ಜಲಪಾತದ ಬುಡಕ್ಕೆ ಇಳಿದು ಅಪಾರ ನೆನಪುಗಳ ಹೊತ್ತು ತಂದಿದ್ದೆವು. ಜೀವ ಒತ್ತೆ ಇಟ್ಟು ಇಳಿದು ಎರಡು ಡಬ್ಬಿ ಚಿತ್ರಾನ್ನ, ಹತ್ತಾರು ಇಡ್ಲಿ ಹುಡಿ ಮಾಡಿದ್ದೆವು! ನೀರಿಗಿಳಿದಾಗ ಒಬ್ಬೊಬ್ಬರೂ ಬಕಾಸುರರು. ಹೊತ್ತು ತಂದವರಿಗೇ ಹಿಡಿ ಅನ್ನವಿಲ್ಲದಂತೆ ಮುಕ್ಕಿದ್ದರು!! ಹೊತ್ತು ಹೊರಟಾಗ ಇಷ್ಟು ಏಕೆ ಎಂದು ಲೇವಡಿ ಮಾಡಿದ್ದರು.

  ಮಾತನಾಡುತ್ತಾ ವಾರಾಹಿಯ ಮೂಲ ಜಲಪಾತವೊಂದು ಇಲ್ಲೇ ಸನಿಹದಲ್ಲೇ ಹರಿಯುತ್ತದೆ. ಭಾರತದ ಅತ್ಯಂತ ಉದ್ದದ ಜಲಪಾತವಿದು ಎಂಬುದು ಮತ್ತೆ ತಿಳಿಯಿತು. ವಾರಾಹಿಯ ಮೂಲ ದಿಕ್ಕನ್ನು ಬದಲಿಸಿದಾಗ ಇದು ಬರಿದಾಗುತ್ತಾ ಬಂದಿತ್ತು. ಇದನ್ನು ಕುಂಚಿಕಲ್ ಅಬ್ಬಿ ಎಂದು ಕರೆಯುತ್ತಾರೆ ಎಂದು ಅಶೋಕ ಪೂಜಾರಿ ಮಾಹಿತಿ ಇತ್ತರು. ಆದರಿದು ಬಲು ಕಠಿಣ ದಾರಿ ಬಂಡೆಗಳನು ಹತ್ತಿಳಿಯಬೇಕು. ಯಾವುದೇ ಮಾರ್ಗವಿಲ್ಲದೆ ಕೇವಲ ನಮ್ಮದೇ ಮಾರ್ಗ ಸೃಷ್ಟಿಸಿಕೊಂಡು ಹೊರಡಬೇಕು. ಇಲ್ಲಿ ಮಲೆನಾಡಿನ ವಿಶಿಷ್ಟ ತಳಿಯ ಬೆತ್ತ ಬೆಳೆಯುತ್ತದೆ. ಚುಚ್ಚುವ ಮುಳ್ಳನ್ನು ಹೊಂದಿದ ಈ ಬೆತ್ತ ಬಲು ಅಪಾಯಕಾರಿ. ಇದರ ನಿವಾರಣೆಗಾಗಿ ಕತ್ತಿ ಮತ್ತು ಶೂ ಅನಿವಾರ್ಯವೆಂದರು. ಹಾಗೆಯೇ ಅರಣ್ಯ ಇಲಾಖೆಯ ಅನುಮತಿ! ಇದೆಲ್ಲವನು ಪಡೆದು ತೊಂಭಟ್ಟಿನ ಒಬ್ಬನನ್ನು ಗೈಡಾಗಿಸಿಕೊಂಡು ದಿನ ನಿಗದಿ ಮಾಡಿಕೊಂಡು ಹೊರಟೆವು.

ಕಾಡ ನಡುವೆ ನವ ನಾಗರೀಕತೆಯ ಕತೆಗಳು

  ವಾರಾಹಿಯ ಹರಿವಿನುದ್ದಕ್ಕೂ ನಾಲ್ಕು ಅಣೆಕಟ್ಟು ಕಟ್ಟಲಾಗಿದೆ. ಅದರ ಎರಡನೆಯ ಅಣೆಕಟ್ಟಿನ ಸನಿಹ ಹರಿವು ಬಲು ನಿಧಾನ. ಸಿದ್ಧಾಪುರ ಹೊಸಂಗಡಿ ದಾಟಿ ಮುಂದೆ ಸಿಗುವ ವಿದ್ಯುದಾಗರಕ್ಕಿಂತ ಸ್ವಲ್ಪ ಮುಂಚೆ ಬಲಕ್ಕೆ ಹೊರಳಿಕೊಳ್ಳಬೇಕು. ದಟ್ಟ ಕಾಡಿನ ನಡುವೆ ಕಂಡು ಕಾಣದಂತೆ ಇರುವ ಬಲ ಹೊರಳಿಕೆ. ಅನೇಕ ಬಾರಿ ಹಕ್ಕಿ, ಜೇಡಗಳ ಛಾಯಾಚಿತ್ರ ತೆಗೆಯಲು ಹೋದವನ ಕಣ್ಣಿಗೆ ಕಾಣಿಸಿದ್ದುಂಟು. ಹಾಗೆಯೇ ಏನಿದೆ ಎಂಬ ಕುತೂಹಲ ತಾಳಿ ಒಂದೆರಡು ಬಾರಿ ಇಣುಕಿ ಹಾಕಿ ಬಂದಿದ್ದೆ. ಇಲ್ಲಿರುವ ಅಣೆಕಟ್ಟು ಕಾಯುವ ಕಾವಲುಗಾರನಿಗೂ ಹೆಸರು ತಿಳಿದಿಲ್ಲ! ಮತ್ತೆ ಮತ್ತೆ ಭೇಟಿಕೊಟ್ಟರೂ ಜಲಪಾತದ ಸನಿಹ ಸೇರುವ ಭಾಗ್ಯ ದೊರೆತಿರಲಿಲ್ಲ. ಅಂತು ಅದೊಂದು ಬೆಳಿಗ್ಗೆ ನಾವೊಂದು ಆರೇಳು ಜನ ಗೆಳೆಯರೆಲ್ಲಾ ಸೇರಿ ಅರಣ್ಯ ಇಲಾಖೆಯ ಅನುಮತಿ ಪಡೆದು ಪುಟಾಣಿ ಅಣೆ ಕಟ್ಟಿನ ಜಾಗಕ್ಕೆ ಬಂದು ಸೇರಿದೆವು. ಇಲ್ಲಿಂದಲೇ ಆ ಮನೋಹರ ಜಲಧಾರೆ ಕಾಣಸಿಗುತ್ತದೆ! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಅನೇಕ ಬಾರಿ ಅಂದು ಕೊಂಡು ವಾಪಾಸು ಹೋದದ್ದಿದೆ.

 ಇಲ್ಲಿಂದ ನಿಧ ನಿಧಾನಕ್ಕೆ ಹೊಳೆಯನ್ನು ಕಲ್ಲುಗಳ ಮೇಲೆ ಹಾರುತ್ತಾ ದಾಟಿದೆವು. ದೊಡ್ಡ ದೊಡ್ಡ ಬಂಗಲೆಯಂತಹಾ ನೂರಾರು ಮನೆಗಳಿಗಿಂತಾ, ಕಾಡನಡುವೆ ಮಣ್ಣಿನ ಸುಂದರ ಸರಳ ಮನೆಗಳ ನೆಮ್ಮದಿ ಅದ್ಭುತ. ಒತ್ತೊತ್ತಾಗಿ ಬದುಕುವುದಕ್ಕಿಂತ ಕಾಲು ಚಾಚಿ ಪ್ರಕೃತಿಯ ಮಡಿಲಲ್ಲಿ ಒಂದಾಗಿ ಸರಳ ಮನೆಗಳಲ್ಲಿ ಬದುಕುವ ಅಪರಿಮಿತ ಸೌಂದರ್ಯವೇ ಬೇರೆ! ನೂರಾರು ಇಲ್ಲಗಳ ನಡುವಿನ ವಿಶ್ರಾಂತ ಸುಖ. ಇಂತಹ ಹತ್ತಾರು ಅಳಿದ ಮನೆಗಳು ಹೊಳೆ ಹಾರುತ್ತಲೇ ಕಾಣಸಿಕ್ಕವು. ಅಲಲ್ಲಿ ಪುಟಾಣಿ ವಿಶಾಲ ಅಂಗಳಗಳು. ನಾಗರೀಕತೆಯ, ಮನುಷ್ಯ ವಾಸದ ಕತೆಯನ್ನು ಅರಹುತ್ತದೆ. ಪ್ರಕೃತಿ ಮಡಿಲಲ್ಲಿ ಬದುಕಿದ ಇವರ ಬದುಕಿನ ಸಾಹಸಗಳೆಂತೂ. ಇವರು ಬದುಕಿದ ಕುರುಹಾಗಿ ಅಲ್ಲಲ್ಲಿ ತೆಂಗಿನ ಮರಗಳಿವೆ! ಇಲ್ಲಿರುವವರು ಬಿಟ್ಟ ಬಳಿಕ ಬಯಲುಗಳೆಲ್ಲಾ ಕಾಡು ಪಾಲಾಗಿದೆ. ಇಲ್ಲಿನ ಕಾಡೊಳಗಡಗಿಹ ರಹಸ್ಯಗಳೆಷ್ಟೋ? ಹಲವೆಡೆ ಜನರು ಮನೆಯವರೆಗೆ ನೀರು ತಲುಪಲು ಮಾಡಿಕೊಂಡ ನೂರಾರು ನಾಲೆಗಳು ಕಂಡವು. ಜಲಪಾತ ಮತ್ತು ಪತ್ರೊಡೆ ಆಸೆಗೆ ಹೊರಟು ನಿಂತಾಗ ಕಂಡ ಅಚ್ಚರಿಗಳು.


  ಹೊಳೆ ದಾಟುತ್ತಲೇ ನಮಗೆ ಸಿಕ್ಕ ಪತ್ರೊಡೆ ಎಲೆಗಳಿಗೆ ಲೆಕ್ಕ ಉಂಟೇ? ಪತ್ರೊಡೆ ಎಲೆಗಳ ಮಹಾ ಸಮ್ಮೇಳನ! ಚಿಕ್ಕ ಚಿಕ್ಕ ಮರಗಳ ಎಡುಕುಗಳಲೆಲ್ಲಾ ಇವುಗಳದೇ ಕಾರುಬಾರು. ಎಲ್ಲವನ್ನೂ ಕೊಯ್ದು ಚೀಲ ತುಂಬಿಸಿಕೊಂಡೆ. ನಾಳಿನ ಪತ್ರೊಡೆ ಕನಸು ಇಂದೇ ಮೊಳೆತಂತಾಯಿತು.



  ಮೂಲ ವಾರಾಹಿಯ ಹೊಳೆಗುಂಟ ಹರಡಿದ ಬಂಡೆಗಳನ್ನು ಹತ್ತಿ ಇಳಿಯುತ್ತಾ ನಿಧಾನಕ್ಕೆ ಹೊರಟೆವು. ನೂರಾರು ಕಡೆ ಬೆತ್ತದ ಸಸಿಗಳು ನಮ್ಮ ದಾರಿಗಡ್ಡವಾಗಿದ್ದವು. ಅವನೆಲ್ಲಾ ನಿವಾರಿಸಿಕೊಂಡೆವು. ದಾರಿ ಎಂಬ ದಾರಿ ಎಲ್ಲಿತ್ತು? ನಾವು ನಡೆದದ್ದೇ ದಾರಿ. ದೊಡ್ಡ ಬಂಡೆಗಳು ಹಲವು ಬಾರಿ ನಮ್ಮ ದಾರಿಗಡ್ಡವಾಗಿತ್ತು. ಕ್ಷಮಿಸಿ ನಾವೇ ಬಂಡೆಗಳ ದಾರಿ ಗಡ್ಡವಾಗಿ ಬಂದಿದ್ದೆವು! ಅವನ್ನೆಲ್ಲಾ ಏರಿದ್ದಾಯಿತು. ಜಲಪಾತದ ಬುಡ ತಲುಪುವ ಕನಸು ಹೊತ್ತು ಹೊರಟಿದ್ದೆವು. ಹೊತ್ತು ಸಹ ನಮ್ಮ ಜೊತೆಗೆ ನಿಧಾನಕ್ಕೆ ಹೊರಟಿತ್ತು. ಇನ್ನೇನು ಒಂದೆರಡು ಗಂಟೆಯ ಚಾರಣ ಎನ್ನುವಾಗಲೇ ಬೃಹತ್ ಬಂಡೆಯೊಂದು ನಮ್ಮ ದಾರಿಗಡ್ಡ ಬಂತು. ಇವನ್ನೆಲ್ಲಾ ದಾಟುವುದು ಅಸಾಧ್ಯವಾಗಿ ಕಾಣಿಸಿತು. ಇನ್ನೇನು ಜಲಪಾತ ಅರ್ಧ ಕಿಲೋಮೀಟರ್‌ ದೂರವಿರುವಾಗಲೇ ಪ್ರಯಾಣ ನಿಲ್ಲಿಸಿದೆವು. ಕುಂಚಿಕಲ್‌ನ ದೊಡ್ಡ ಹರಿವು ಜೊತೆಯ ಸಣ್ಣೆರಡು ಹರಿವು ಕಣ್ತುಂಬಿಕೊಂಡೆವು. 


ಅಪಾರವಾದ ಹಸಿರ ನಡುವೆ ಬಳುಕುವ ಜಲಪಾತವ ನೋಡುವುದೇ ಅನನ್ಯ ಅನುಭೂತಿ. ದೊಡ್ಡ ಬಂಡೆಯೊಂದನ್ನು ಏರಿ ಕುಳಿತು ಬುತ್ತಿಗಂಟು ಬಿಚ್ಚಿದೆವು. ಅಪಾಯ ಶ್ರಮ ವಹಿಸಿ ಬೆಳ್ಳಂ ಬೆಳ್ಳಗೆ ಹೊರಟರೂ ಜಲಪಾತದ ಬುಡ ತಲುಪುವುದು ಸಾಧ್ಯವಾಗಲಿಲ್ಲ. ದೂರದಿಂದಲೇ ಹಲವು ಚಿತ್ರ ಕ್ಲಿಕ್ಕಿಸಿದೆವು. ಕೆಲವರಿಗೆ ನಿರಾಶೆ, ಕೆಲವರಿಗೆ ಮತ್ತೊಮ್ಮೆ ಈ ದಾರಿಯ ತುಳಿಯಬಹುದೆಂಬ ಹೊಸ ತವಕ. ಹೀಗೆ ಒಂದೇ ಜಗತ್ತಿನ ಹಲವು ಮಗ್ಗಲುಗಳು. ತಂದ ಬುತ್ತಿ ಗಂಟು ಖಾಲಿ ಮಾಡಿ ಪತ್ರೊಡೆ ಎಲೆ ತುಂಬಿಸಿದೆ. 

 ಕುಂಚಿಕಲ್ ಎಂಬ ಮಹಾ ಜಲೌಗವು ತನ್ನ ವಿರಾಟ ರೂಪಿಯಾಗಿ ಹರಿಯುತ್ತಲೇ ಇದೆ. ಸುತ್ತಲೂ ಬದುಕಿದ ನೂರಾರು ಮನುಜರ ಸುಖದ ಕತೆಗಳನ್ನು, ಕಣ್ಣೀರನ್ನು ಕಾಣುತ್ತಾ ಸಹಸ್ರಮಾನದಿಂದ ನದಿ ಹರಿಯುತ್ತಲೇ ಇದೆ. ಸ್ವಲ್ಪ ಮಾತಿಗೆ ಸಿಕ್ಕರೆ ಚೆನ್ನಾಗಿತ್ತು ಎನಿಸುತ್ತಲೇ ಮತ್ತೆ ಬರುವೆನೆಂದು ನಾನು ಹೊರಟೆ. ಮಹಾ ಬಂಡೆಗಳ ದಾರಿ ಮತ್ತೊಮ್ಮೆ ಹಲ್ಲು ಕಿಸಿಯಿತು.‌ ನಮ್ಮ ಅಹಂಕಾರದ ಬಲೂನಿಗೆ ಚುಚ್ಚಿದ ಅರಿವಿನ ಸೂಜಿ ಮೊನೆಯಂತೆ ಸದಾ ನಗುತ್ತಾ ಛೇಡಿಸುತ್ತಾ ಹರಿಯುತ್ತಲೇ ಮತ್ತೆಂದು ಬರುವೆ ಎಂದು ತನ್ನ ಸೆರಗ ಹಾಸಿ ಕರೆಯುತ್ತಲೇ ಇದೆ ಕುಂಚಿಕಲ್.





Saturday, August 29, 2026

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ



ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭಾಗಿಸಿ ನಾವು ಆಯ್ಕೆ ಮಾಡಿದ್ದು ಶಿರಸಿಯ ಬೆಣ್ಣೆ ಮತ್ತು ವಿಭೂತಿ ಜಲಧಾರೆ. ಶನಿವಾರ ಸಂಜೆ ಜೋಳಿಗೆ ತುಂಬಾ ಬಟ್ಟೆ ತುಂಬಿಕೊಂಡು ಲಟಾರಿ ಹಿಡಿದ ಕ್ಯಾಮರಕೊಂದಿಷ್ಟು ರೀಲು ತುಂಬಿ ಕರ್ಮವೀರ ಹಿಡಿದು ಹೊರಟೆವು.

ಕುಂದಾಪುರದಿಂದ ಕುಮುಟಾವರೆಗೆ ರೈಲು. ಆನಂತರ ಕುಮುಟಾದಿಂದ ಶಿರಸಿಯವರೆಗೆ ಬಸ್ಸು ಪ್ರಯಾಣ. ಇವೆಲ್ಲ ಮುಗಿದು ಶಿರಸಿ ತಲುಪಿದಾಗ ರಾತ್ರಿ 11. ರೈಲಿನಲ್ಲಿ ಸಿಕ್ಕ ಯಲ್ಲಾಪುರದ ದಂಪತಿಗಳು ನಮ್ಮನ್ನು ಇನ್ನಿಲ್ಲದಂತೆ ಯಲ್ಲಾಪುರಕ್ಕೆ ಬನ್ನಿ ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ನಿಮ್ಮ ಮನೆಗೆ ಬಂದೇ ಬರುತ್ತೇವೆ ಎಂದು ಹೇಳಿ ತಪ್ಪಿಸಿಕೊಂಡೆವು. ಬಂಡಿ ಬಕಾಸುರನಾದ ನನಗೆ ಅಂದು ರಾತ್ರಿ ಉಪವಾಸ ಕೆಡವಿತ್ತು ಶಿರಸಿ. ಮಧುವನ ಹೋಟೆಲಿನ ದಿಂಬಿಗೊರಗಿದಾಗ ರಾತ್ರಿ 11.30. ನಿದ್ದೆ ಹತ್ತುದಾದರೂ ಹೇಗೆ? ದಿಂಬಿನೊಡನೆ ಮಾತಿಗಿಳಿದು ರಾತ್ರಿ ಕಳೆದೆ. ಗೆಳೆಯನ ಕುಂಭಕರ್ಣ ಗೊರಕೆ ಕಿವಿ ತುಂಬುತ್ತಲೇ ಇತ್ತು. 

ಹೊಟ್ಟೆ ಚುರುಗುಟ್ಟುತ್ತಲೇ ಇತ್ತು. ಬೆಳಗಾಗುತ್ತಲೇ ಹೋಟೆಲ್ ಸಾಮ್ರಾಟಕ್ಕೆ ದೌಡಾಯಿಸಿದೆ. ಹೋಟೆಲ್ ಸಾಮ್ರಾಟನ ವಿಶೇಷ ರುಚಿಯ ಉಪ್ಪಿಟ್ಟು ಜೊತೆಗೊಂದಿಷ್ಟು ಸೇವು, ಅದರೊಂದಿಗೆ ಲಗ್ನ ಮಾಡಿಕೊಂಡ ಫಿಲ್ಟರ್ ಕಾಫಿ ಹೊಟ್ಟೆ ಸೇರಿದಾಗ ನಮ್ಮ ಚೇತನವೂ ಎಚ್ಚೆತ್ತಿತು.





ಹೊಸ ಕರ್ಮವೀರ ಸಂಚಿಕೆಯ ಹಾಳೆ ಹಿಡಿದು ಹೊರಟವನಿಗೆ ಜಲಪಾತದ ಜಿಪಿಎಸ್ ಕಳೆದಿತ್ತು. ಶಿರಸಿಯಲ್ಲಿ ಸಿಕ್ಕಿದ ಚಂದ್ರಶೇಖರ್ ಎಂಬುವವರ ಜೀಪು ಬಾಡಿಗೆಗೆ ಪಡೆದೆವು . ಎರಡು ಜಲಪಾತಗಳನ್ನು ತೋರಿಸಲು ಆತ ಬರೋಬ್ಬರಿ 2400 ಕ್ಕೆ ಒಪ್ಪಿಕೊಂಡಿದ್ದ! ಹೊರಗೆ ತಣ್ಣನೆಯ ಗಾಳಿಯ ಬಿರುಮಳೆಯ ಶೃಂಗಾರ. ನಾವು ಹೊರಹೋಗದಂತೆ ಪ್ರತಿಬಂಧ. ಶಿರಸಿಯಲ್ಲೋ ಅಂದು ದಾರಿ ಕಾಣದಷ್ಟು ಮಳೆ. ಅಂದು ಶಿರಸಿಯಲ್ಲೇ ಉಳಿದು ಸಂಜೆ ವಾಪಸು ಹೊರಡಬೇಕಾಗುತ್ತದೆ ಎಂದು ಅಂದುಕೊಂಡೆವು. ಆದರೂ ಸಾಹಸ ಮಾಡೋಣವೆಂದು ಜೀಪ್ ಹತ್ತಿದೆವು. ವಾರದಿಂದ ರಚ್ಚೆ ಹಿಡಿದ ಮಳೆಗೇ ಬೇಸರ ಬಂದು ಬೆಳಿಗ್ಗೆ ಹತ್ತರ ಸುಮಾರಿಗೆ ಕೊಂಚ ಬಿಡುವು. ಮೈ ಮನ ಒದ್ದೆ ಮಾಡಿಕೊಂಡು 20 ನಿಮಿಷಗಳ ನಡಿಗೆ ಪೂರೈಸಿ ನೂರಾರು ಇಂಬಳಗಳ ಸ್ವಾಗತದ ನಡುವೆ ವಿಭೂತಿಯಲ್ಲಿ ಮಿಂದು ಹೊರಟೆವು. ಮುಂದಿನ ಕಥೆ ಬಲು ರೋಚಕ.    

ಇಲ್ಲಿಂದ ನಮ್ಮ ಬಂಡಿ ಮಂಜುಗುಣಿಯ ವೆಂಕಟರಮಣ ದೇವಾಲಯಕ್ಕೆ ಅಡಿ ಇಟ್ಟಿತು. ನಾವಿಲ್ಲಿಗೆ ಕಾಲಿಟ್ಟಾಗ ಮುತ್ತುದುರಿದಂತೆ ಹನಿ ಮಳೆಯ ಶೃಂಗಾರ. ಊರ ಪ್ರವೇಶ ದ್ವಾರದಲ್ಲಿ ಹತ್ತಾರು ಮಕ್ಕಳು ಮೈ ಒದ್ದೆ ಮಾಡಿಕೊಂಡು ಕಬಡ್ಡಿ ಆಟದಲ್ಲಿ ನಿರತರಾಗಿದ್ದರು. ಅವರನ್ನು ನೋಡಿ ನಾವು ಬಾಲ್ಯಕ್ಕೆ ಮರಳಿದೆವು. ಕಳೆದು ಹೋಗಬಾರದಿತ್ತು ನಮ್ಮ ಬಾಲ್ಯ ಎಂದುಕೊಂಡೆವು. ಇನ್ನೂ ನೋಡುತ್ತಲಿದ್ದರೆ ಮಂಜುಗುಣಿಯ ಮಜ್ಜಿಗೆ ಊಟವೂ ಮಿಸ್ ಆಗುತ್ತದೆ ಎಂದು ಡ್ರೈವರ್ ಹೊರಡಿಸಿದ. ದೇವಾಲಯಕ್ಕೆ ಸುಮ್ಮನೆ ಸುತ್ತು ಬಂದು ಗಂಧ ಹಚ್ಚಿ ನಾಲ್ಕೈದು ದಿನ ಊಟ ಮಾಡದವರಂತೆ ಊಟದ ಮನೆಗೆ ಹೋಗಲು ಗೆಳೆಯ ಗಡಿಬಿಡಿ ಮಾಡಿದ.



  ಬಲು ರುಚಿಯಾದ ತಂಬಳಿಯೂಟ ಒಂದು ನಮ್ಮ ಉದರವನು ಸೇರಿತು. ಸೇಡು ತೀರಿಸಿಕೊಳ್ಳುವವನಂತೆ, ಎರಡೆರಡು ಬಾರಿ ತಂಬಳಿ ಹಾಕಿಸಿ ಕೊಂಡು ಉಂಡ ಗೆಳೆಯ. ಜೊತೆಗೆ ಜೀರಿಗೆ ಮೆಣಸು ಬೆರೆಸಿದ ಹದವಾದ ಮಜ್ಜಿಗೆ ಮೋರಿದ. ನಾನು ಮೂರು ಮೂರು ಬಾರಿ ತಂಬಳಿ ಕೇಳಿ ಹಾಕಿಸಿಕೊಂಡು ಉಂಡಾಡಿ ಗುಂಡರಂತೆ ನಾಚಿಕೆ ಬಿಟ್ಟು ಉಂಡು ದೇವಾಲಯ ದರ್ಶನ ಮಾಡಿ ಸುತ್ತಲಿನ ಪರಿಸರ ಆಸ್ವಾದಿಸಿದೆವು. “ಇಷ್ಟು ಉಂಡರೆ ನಮ್ಮ ಗತಿ ಏನು?” ನಾ ಕೇಳಿದೆ ಮಿತ್ರ ನಾಗರಾಜನಲ್ಲಿ. ಶುಕ್ರಾಚಾರ್ಯರು ಎಂದಂತೆ “ವಾತಾಪಿ ಜೀರ್ಣೋಭವ” ಎಂದು ಉಂಡಾದ ಮೇಲೆ ಹೊಟ್ಟೆ ಮೇಲೆ ಕೈಯಿಟ್ಟು ಹೇಳು. ತಿಂದದ್ದೆಲ್ಲಾ ಕ್ಷಣ ಮಾತ್ರದಲ್ಲಿ ಜೀರ್ಣ! ಎಂದು ಕಣ್ಣು ಮಿಟುಕಿಸಿದ. ನಕ್ಕು ಹಗುರಾದೆವು.



ಮಂಜುಗಣಿ ಅಜ್ಞಾತವಾಗಿ ಕಾಡೊಳಗೆ ಅವಿತ ಸುಂದರ ದೇವಾಲಯ. ಇದರ ಇತಿಹಾಸ 10 ನೆಯ ಶತಮಾನದ ಬಾಗಿಲವರೆಗೆ ಕೊಂಡೊಯ್ಯುತ್ತದೆ. ಜೊತೆಗೆ ಚಕ್ರತೀರ್ಥವೆಂಬ ಚಂದದ ಪುಷ್ಕರಣಿ. ಪುಷ್ಕರಣಿಯ ವಿಹಂಗಮತೆಯಲ್ಲಿ ಮಿಂದೆದ್ದೆವು. 10 ಶತಮಾನಗಳ ಉದ್ದಕ್ಕೂ ಜನರನ್ನು ಕಂಡ ದೇವಾಲಯ. ಜನಜೀವನ, ಜಗಳ, ಜಾತ್ರೆ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದೆ. 10 ಶತಮಾನಗಳ ಅಂಚನ್ನು ಸವರಿ ಬಂದಿದೆ! ನೂರಾರು ತಾಪತ್ರಯಗಳನ್ನು ಎದುರಿಸಿದೆ. ಪಶ್ಚಿಮ ಘಟ್ಟಗಳ ನಟ್ಟ ನಡುವೆ ನೆಲೆಸಿರುವುದೊಂದು ವಿಶೇಷ. ಈ ದೇವಾಲಯಕ್ಕೆ ಕಾಡು ಒಂದು ವಿಕ್ಷಿಪ್ತತೆಯನ್ನು ಒದಗಿಸಿದೆ. ಒಂದು ಕಡೆ ಯಾಣ ಇನ್ನೊಂದು ಕಡೆ ವಿಭೂತಿ ಎಂಬ ಎರಡು ವಿಭಿನ್ನ ಸ್ಥಳಗಳು. ಇದೇ ದಾರಿಯುವುದಕ್ಕೂ ಹಬ್ಬಿದ ನೂರಾರು ಜಲಧಾರೆಗಳು. ಇದೇ ದಾರಿಯೊಳಗೆಲ್ಲೊ ಶಿವಾನಂದ ಕಳವೆಯವರ ಮಧ್ಯಗಟ್ಟ ಕಾನಿನ ಕಾದಂಬರಿಯು ನಡೆದ ಊರು ಸಿಗುತ್ತದೆ. ಈ ದಾರಿಯುದ್ದಕ್ಕೂ ನೆನಪುಗಳ ಮೆರವಣಿಗೆ.



ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಲ ದೇವರಾಗಿದೆ. ದೇವಾಲಯದ ವಿಶಾಲ ಬೀದಿಗಳು ಹಾಗೂ ಬೃಹತ್ ಮರದ ರಥ ದೇವಾಲಯದ ಹಿರಿತನವನ್ನು ಸಾರುತ್ತದೆ. ಸಂಪೂರ್ಣ ಶಿಲಾಮಯವಾದ ದೇವಾಲಯವಾಗಿದ್ದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. 14 ರಿಂದ 16ನೆಯ ಶತಮಾನದ ನಡುವೆ ವಿಜಯನಗರ ಅರಸರು ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರೆಂದು ತಿಳಿದು ಬಂದಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಇಲ್ಲಿನ ದೇವಾಲಯಗಳನ್ನೂ ಪೊರೆದ ದೊರೆ ವಿಜಯನಗರ ಅರಸರು. ಕಾಡೊಳಗಿನ ದೇವಾಲಯಕ್ಕೂ ದಾನದತ್ತಿಗಳನ್ನು ದೊರಕಿಸಿಕೊಟ್ಟವರು. 

ವಿಶಿಷ್ಟ ದೇವಾಲಯ

ಇಲ್ಲಿನ ವಿಶಿಷ್ಟ ವೆಂಕಟರಮಣ ಮೂರ್ತಿಯು ಕೈಯಲ್ಲಿ ಬಿಲ್ಲು ಬಾಣ ಶಂಖ ಚಕ್ರವನ್ನು ಹಿಡಿದಿದ್ದಾನೆ. ಸಾಮಾನ್ಯ ಮೂರ್ತಿಗಳಿಗಿಂತ ಇದು ವಿಭಿನ್ನವಾಗಿದೆ. ಸಾಮಾನ್ಯವಾಗಿ ವೆಂಕಟರಮಣ ಮೂರ್ತಿಯ ಕೈಯಲ್ಲಿ ಕಮಲ ವಿರುತ್ತದೆ ಆದರೆ ಇಲ್ಲಿನ ಬಿಲ್ಲು ಬಾಣಧಾರಿಯಾಗಿ ತನ್ನ ಭಕ್ತರ ರಕ್ಷಣೆಗೆ ನಿಂತಿದ್ದಾನೆ. ವೆಂಕಟರಮಣ ಮೂರ್ತಿಯು ಸ್ವಲ್ಪವೇ ಸ್ವಲ್ಪ ತಿರುಗಿದಂತೆ ಶಿಲ್ಪಿಯು ರಚಿಸಿದ್ದಾನೆ. ವೆಂಕಟರಮಣನ ಜೊತೆಗೆ ಆತನ ಕಾಲ ಬುಡದಲ್ಲಿ ಪದ್ಮಾವತಿಯು ನೆಲೆಸಿದ್ದಾಳೆ. ಮಾರ್ಚ್ ತಿಂಗಳ ಚೈತ್ರ ಪೂರ್ಣಿಮೆಯೆಂದು ಇಲ್ಲಿ ರಥೋತ್ಸವ ಜರಗುತ್ತದೆ. ದೇವಾಲಯದ ಗರ್ಭಗೃಹದ ಹೊರ ಭಾಗದ ಮಂಟಪದಲ್ಲಿರುವ ಕಂಬಗಳ ಕೆತ್ತನೆ ಅದ್ಭುತವಾಗಿದೆ. ದೇವಾಲಯದ ರಚನೆ ಸ್ವಲ್ಪ ಮಟ್ಟಿಗೆ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿ ದೇವಾಲಯವನ್ನು ಹೋಲುತ್ತದೆ. ದೇವಾಲಯದ ಹೊರ ಮಂಟಪದಲ್ಲೂ ಅಂದದ ಕೆತ್ತನೆಗಳಿವೆ. ದೇವಾಲಯದೊಳಗೆ ನೀರು ನುಗ್ಗದಂತೆ ಮೇಲ್ಚಾವಣಿ ಮತ್ತು ಅದಕ್ಕೆ ಅನುಸರಿಸುವ ಮಂಟಪವನ್ನು ರಚಿಸಲಾಗಿದೆ. ಹದಿನಾರನೆಯ ಶತಮಾನದಲ್ಲಿ ರಚನೆಯಾದ ವಾದಿರಾಜ ತೀರ್ಥರ ʼತೀರ್ಥ ಪ್ರಬಂಧದಲ್ಲಿʼ ಈ ದೇವಾಲಯದ ಉಲ್ಲೇಖಗಳನ್ನು ವಿವರಿಸಿದ್ದಾರೆ! 

ಸುಂದರ ದೇವಾಲಯದ ಸುತ್ತ ಸಿಮೆಂಟ್ ಕಟ್ಟಡಗಳನ್ನು ಕಟ್ಟಿ ಇದರ ಮೂಲ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಆ ಮೂಲಕ ಜನರು ಸೌಂದರ್ಯೋಪಾಸಕತೆಯನ್ನು, ರಸಾಸ್ವಾದತೆಯನ್ನು ಕಳೆದುಕೊಂಡಿದ್ದೇವೆಂದು ಸಾಬೀತುಪಡಿಸಿದ್ದಾರೆ. ಉದರ ಉಬ್ಬಿಸಿಕೊಂಡು ಇಲ್ಲಿಂದ ಹೊರಟಿದ್ದು ಬೆಣ್ಣೆ ಜಲಧಾರೆ ಎಡೆಗೆ.

ಬೆಣ್ಣೆ ಎಂಬ ಬೆಡಗಿ



ಜೀರುಂಡೆ ಗಾಯನ ಕೇಳುತ್ತಾ ಜಿಗಣೆಗಳನ್ನು ಕಚ್ಚಿಸಿಕೊಂಡು ಒಂದೆರಡು ಕಿಲೋ ಮೀಟರ್‌ ನಡೆದು ಬೆಣ್ಣೆ ಜಲಪಾತದ ಬುಡದವರೆಗೆ ಹೋಗಿ ಸಿಡಿಯುವ ನೀರ ಹನಿಗೆ ಮುಖ ಮಜ್ಜನ ಮಾಡಿಸಿಕೊಂಡಾಗಲೇ ನೆಮ್ಮದಿ. ದಾರಿಯುದ್ದಕ್ಕೂ ಹನಿ ಮಳೆಯ ಮಾಲ್‌ಕೌಂಸ್‌ ರಾಗ. ಜೀರುಂಡೆಗಳ ಹಿಮ್ಮೇಳ. ಸದಾ ಬೆಣ್ಣೆಯಂತೆ ಧುಮ್ಮಿಕ್ಕುವ ಜಲೌಗವನ್ನು ಕಾಡ ನಡುವೆ ನೋಡುವ ಆನಂದವೇ ಬೇರೆ. ಹೊನ್ನೆ ಸುರಗಿ ಮುಂತಾದ ಕಾಡು ವೃಕ್ಷಗಳ ನಡುವೆ ನೆಮ್ಮದಿಯಿಂದ ಧಮ್ಮಿಕ್ಕುವ ಈ ಜಲ ಧಾರೆಯು ಕಲ್ಲು ಪೊಟರೆ ನಡುವೆ ಜಾಗ ಮಾಡಿಕೊಂಡು ಉದುರುವ ಸಣ್ಣ ಬ್ರೆಡ್ನ ಪುಡಿಗಳಂತೆ ಭಾಸವಾಗುತ್ತದೆ. ನೋಡಿದಷ್ಟು ತಣಿಯದ ನೀರ ರೇಖೆಗಳು. ಪ್ರತಿಕ್ಷಣವೂ ನೂರಾರು ಹನಿಗಳು ಎಲ್ಲೆಲ್ಲಿಂದಲೋ ಓಡಿ ಬಂದು ಮೈ ಮುಖವನ್ನೆಲ್ಲ ತಬ್ಬಿಕೊಳ್ಳುವ ಜಾದುಗಾರನಂತೆ. ಜಲಪಾತದ ಸನಿಹದಲ್ಲೊಂದು ಸಣ್ಣ ಮರವೊಂದು ಛತ್ರಿಯಂತೆ ಹರಡಿ ಜಲಧಾರೆಯನ್ನು ಸದಾ ಕಾಯುತ್ತಿರುತ್ತದೆ. ಕೇವಲ ಕಲ್ಲುಗಳ ನಡುವೆ ಅತಿ ಕಡಿಮೆ ಮಣ್ಣಿನಲ್ಲಿ ಬದುಕುಳಿವ ಕಾಲನ ಕೈವಾಡಕ್ಕೆ ನನ್ನದೊಂದು ಅಚ್ಚರಿ. ಈ ಮರದ ಅಪೂರ್ವ ಆಕರ್ಷಣೆ ಕೊನೆ ಮೊದಲಿಲ್ಲದಂತೆ ನನ್ನನ್ನು ಸೆಳೆದಿದೆ. ಮುಖ್ಯ ಜಲಧಾರೆಗೆ ಬಂದು ಸೇರುವ ಹಲವಾರು ಪುಟಾಣಿ ಹಳ್ಳಗಳು. ಎಲ್ಲವೂ ಒಂದಾಗಿ ಕೊನೆಗೆ ಶಾಲ್ಮಲೆಯ ಒಡಲನ್ನು ಸೇರಿಕೊಳ್ಳುತ್ತವೆ. ತವರು ತೊರೆದ ಶಾಲ್ಮಲೆ ಶರಾವತಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದರಲ್ಲೂ ಸುಖವಿದೆ ಎಂದು ಸದಾ ಸಾರುತ್ತಲೇ ನಮಗೊಂದು ಹೊಸ ಪಾಠ ಅರಹುತ್ತಾಳೆ. ಇಲ್ಲಿಂದಲೇ ಇವಳ ಹೊಸ ಪ್ರಯಾಣದ ಆರಂಭ. ಇವಳ ಸಂಘಕ್ಕೆ ಬಿದ್ದ ಹತ್ತಾರು ಹಳ್ಳಿಗಳು, ಅಲ್ಲಿನ ಕೃಷಿಕರು ನೆಮ್ಮದಿಯ ಬದುಕು ಕಾಣುತ್ತಾರೆ. ಜಲಪಾತ ಮತ್ತು ಜೀರುಂಡೆ ನಿಮ್ಮ ಕರಣಗಳನ್ನು ತುಂಬುತ್ತದೆ..... ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ. ಧ್ಯಾನಸ್ಥರಾದಾಗಲೇ ನಿಮ್ಮ ಅಂತರಂಗಕ್ಕೊಂದು ಹೊಸ ಹೊಳಹು ಉತ್ಸಾಹ.


ಬೆಣ್ಣೆ ಜಲಧಾರೆಯ ದಾರಿಯಲ್ಲಿ ಮಿಸಳ್‌ ಬಾಜಿ!



ಅಲ್ಲಿಂದ ಮೇಲಕೆ ಹತ್ತಿ ಬಂದಾಗ ಬಲ್‌ ನನ್ನ ಮಗನ ಹೊಟ್ಟೆ ಚುರು ಚುರು ಎಂದಿತ್ತು! ನಮ್‌ ಜೀಪ್‌ ಡ್ರೈವರ್‌ಗೂ ನಮ್‌ ಹೊಟ್ಟೆ ಬಾಕತನ ಇಷ್ಟವಾಗಿರಬೇಕು. ಮೋಸ್ಟಲಿ ಅವನೂ ಹೊಟ್ಟೆಬಾಕನಿರಬೇಕು. ಅವನ ಮುಂದೆ ಪ್ರಸ್ತಾಪಿಸಿದ್ದೇ ಟಣ್‌ ಎಂದು ʼಅವರ್‌ ನೆಕ್ಸ್ಟ್‌ ಡೆಸ್ಟಿನೇಶನ್‌ ಈಸ್‌ ಶ್ಯಾನುಭೋಗರ ಕ್ಯಾಂಟಿನ್‌ʼ ಎಂದು ಬಿಡೋದೆ. ನನಗೆ ಒಳಗೊಳಗೆ ಖುಷಿಯಾದರೂ ಸ್ವಲ್ಪ ನಾಚಿಕೆಯಾಯಿತು. ನಾಲಿಗೆಯ ಜೊಲ್ಲು ಸಲೀಸಾಗಿ ಹೊರ ಬಂದಿತ್ತು. “ಥೂ ನಾಯಿ ಬುದ್ದೀದೆ” ಎಂದು ಬೈದುಕೊಂಡು ನಾಲಿಗೆಯ ಸುಮ್ಮನಿರಿಸಿದೆ. ಆದರೂ ಕೇಳಬೇಕಲ್ಲ. ಕ್ಯಾಂಟಿನ್‌ ಬಂದೊಡನೆ ನಿಲ್ಲಿಸೋಣವೇ ಎಂದು ಕೇಳಿದ ಚಾಲಕ. “ಹಂ” ಅಂದ್ದಿದ್ದೇ ನಿಲ್ಲಿಸಿಬಿಡೋದೆ!


ಕ್ಯಾಂಟಿನ್‌ನಲ್ಲಿ ಹಾಜರಿ ಹಾಕಿಯಾಗಿತ್ತು. ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್‌ ಮಿಸಳ್‌ ಬಾಜಿ ಹಾಗೂ ಎರಡು ಕಪ್‌ ಕಾಫೀಗೆ ಆಹ್ವಾನವಿಟ್ಟೆವು. ಜಲಧಾರೆಯ ಹನಿಗಳಿಗೆ ನೆನೆದು ಹೋಗಿದ್ದೆವು. ಮನಸ್ಸು ಕಾಫಿ ಬೇಡುತ್ತಿತ್ತು. ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್.‌ ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ, ಅದರ ಮೋಡಿಗೆ ನನ್ನ ನಾಲಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು. ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು.

ಇನ್ನೊಂದು ಪ್ಲೇಟ್‌ ಹೇಳೋಣವೆಂದುಕೊಂಡರೆ ಓರೆ ನೋಟದಲ್ಲೇ ಚಾಲಕ ನಮ್ಮನ್ನೇ ತಿನ್ನುವಂತೆ ನೋಡುತ್ತಿದ್ದಾನೆ. ಜೊತೆಗೆ ಮೀಸೆ ಕೆಳಗಿನ ಕಿರು ನಗೆ ಬೇರೆ. ಇನ್ನೊಮ್ಮೆ ಮಿಸಳ್‌ ಬಾಜಿ ತಿನ್ನಲೆಂದೇ ಇಲ್ಲಿಗೆ ಬರಬೇಕೆಂದು ಮಾತಾಡಿಕೊಂಡೆವು. ಚಾಲಕ ನಗುತಲಿದ್ದ. ಅನೇಕ ಕಡೆ ಈ ತಿಂಡಿಯನ್ನು ನಾ ಸವಿದಿದ್ದೆ ಆದರೆ ಇಷ್ಟು ರುಚಿಕಟ್ಟಾದ ಮಿಸಳ್‌ಬಾಜಿ ಮತ್ತೆಲ್ಲೂ ನನಗೆ ತಿಂದ ನೆನಪಿಲ್ಲ. ಮೊದಲ ಮಾತಿನಂತೆ ಮೊದಲ ತುತ್ತು ಅತಿ ವಿಶಿಷ್ಟವಾಗಿ ನನ್ನ ಸ್ಮೃತಿ ಪಟಲದಲ್ಲಿ ಉಳಿದಿತ್ತು.  

ಮಿಸಳ್‌ ಬಾಜಿಯ ಆಧ್ಯಾತ್ಮ

ಇದು ಯಾವುದೇ ಹೋಲಿಕೆಗೂ ಸಿಗದ ಇದು ವಿಶಿಷ್ಟ ತಿಂಡಿ ಮಿಸಾಳ್ ಎಂದರೆ ಮಿಕ್ಷರ್ ಬಾಜಿ ಎಂದರೆ ವಿಶಿಷ್ಟ ಸಾಂಬಾರು. ಮಸಾಲೆ ಮೆತ್ತಿದ ಅವಲಕ್ಕಿಗೆ ಖಾರಾ ಶೇವು, ಕಡಲೆ ಜೊತೆಗೆ ಬಾಜಿ. ಸ್ವಲ್ಪವೇ ಸ್ವಲ್ಪ ಈರುಳ್ಳಿ ಬೆರೆಸಿ ತಯಾರಿಸುವ ವಿಶೇಷ ಖಾದ್ಯ. ಬಾಯಿಗಿಟ್ಟ ಮರುಕ್ಷಣವೇ ನಿಮ್ಮಲ್ಲಾ ಇಹದ ಬಂದನ ಕಳಚಿ ಹೊಸ ಲೋಕಕ್ಕೆ ಒಯ್ಯುವ ಅಮೃತರುಚಿ. ಒಮ್ಮೆ ತಿಂದ ಮೇಲಂತೂ ಮತ್ತೆ ಮತ್ತೆ ಮೆಲ್ಲಬೇಕೆಂಬ ಮನಸ್ಸು. ಇನ್ನೊಮ್ಮೆ ನಮ್ಮ ಉಡುಪಿ ಗಜಾನನ ಬಸ್ಸಿನ ಗ್ಯಾರೇಜಿನ ಬಳಿಯ ಸಣ್ಣ ಕ್ಯಾಂಟೀನ್‌ನಲ್ಲಿ ತಿಂದಿದ್ದೆ ಬಲು ರುಚಿಯಾಗಿತ್ತು.


  ಮಹಾರಾಷ್ಟ್ರದಲ್ಲೆಲ್ಲೋ ಪ್ರಾರಂಭವಾಗಿ ಉತ್ತರಕನ್ನಡಕ್ಕೆ ಚಿತ್ಪಾವನದೊಂದಿಗೆ ವಲಸೆ ಬಂದ ತಿಂಡಿಯೊಂದು ಉತ್ತರ ಕನ್ನಡದಾದ್ಯಂತ ಹರಡಿ ತನ್ನ ಘಮವನ್ನು ಹರಡುತಲಿದೆ. ಅಲ್ಲಿ ಮಿಸಾಳ್ ಪಾವ್ ಆಗಿರುವುದು ಹೊನ್ನಾವರ, ಅಂಕೋಲ, ಕುಮಟಾ ಬರುತ್ತಲೆ ತನ್ನ `ಪಾವ್' ಎಂಬ ಅಂಗಿ ಕಳಚಿ `ಬಾಜಿ' ತೊಟ್ಟು ನಿಲ್ಲುತ್ತದೆ. ಈರುಳ್ಳಿ ಸೇವ್, ಟೊಮ್ಯಾಟೋ ಸೇರಿ ನಮ್ಮ ರುಚಿ ಮೊಗ್ಗ ಅರಳಿಸುತ್ತವೆ. ನಮ್ಮನ್ನೂ ಸದಾ ಸೋಲಿಸುತಲಿದೆ. ರಾಗಿ ಹೊಸಳ್ಳಿಯ ಭಟ್ಟರ ಹೋಟೆಲ್, ಗುಣವಂತೆಯ ಭಟ್ಟರ ಹೋಟೆಲು, ಶಿರಾಲಿಯ ಭಟ್ಟರ ಹೋಟೆಲುಗಳಲ್ಲಿ ಸಿಗುವ ಇಂತಹ ಅಂಥೆಟಿಕ್ ಅಡ್ಡಾಗಳ ತಿಂಡಿಗಳು ನಮ್ಮ ಜಿಹ್ವೆಯನ್ನು ಸದಾ ರುಚಿಯ ಹರಿತ ಕತ್ತರಿಯಾಗಿಸುತ್ತಲೇ ಇದೆ.


ಹೇಗೆ ಮಾಡ್ತಾರೆ ಕೇಳಿದಿರಾ?

ಅವಲಕ್ಕಿಗೆ ಒಂದಿಷ್ಟು ವಿಶೇಷ ಮಸಾಲೆ ಹಾಕಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ಖಾರಾಸೇವು, ಶಂಕರ ಪೋಳೆ ಸೇರಿಸಿ ಜೊತೆಗೆ ವಿಶಿಷ್ಟ ರುಚಿಯ ಸಾಂಬಾರು ನೀಡುತ್ತಾರೆ. “ಮೂಲತಃ ಇದೊಂದು ಮಹರಾಷ್ಟ್ರದ ಕಡೆಯ ತಿಂಡಿ” ಎಂದು ನನ್ನ ಪ್ರೀತಿಯ ತಿರುಗಾಲ ತಿಪ್ಪ ಗೆಳೆಯ ನಾಗರಾಜನೆಂದ. ನನಗೆ ಯಾವ ಫರಕ್ಕೂ ಕಾಣಲಿಲ್ಲ. ಇದರ ವಿಶಿಷ್ಟ ರುಚಿಗೆ ಮನಸೋತೆ.

 ಹಾಂ ಈ ಕ್ಯಾಂಟಿನ್‌ ಇರುವುದು ಶಿರಸಿ ಕುಮುಟಾ ನಡುವಿನ ರಾಗಿ ಹೊಸ ಹಳ್ಳಿ ಎಂಬ ಪುಟ್ಟ ಊರಲ್ಲಿ. ಮುಂದಿನ ಸಾರಿ ಈ ಕಡೆ ಬಂದಾಗ ಮಿಸ್‌ ಮಾಡದೇ ಮಿಸಳ್‌ ಬಾಜಿಗೆ ಆರ್ಡರಿಸಿ!

ಬೆಣ್ಣೆಯಷ್ಟೇ ಹುಡುಕಿ ಹೊರಟು ಮಜ್ಜಿಗೆ ಪಡೆದು ಕೃತಾರ್ಥರಾದೆವು! ನಿಮಗೆ ಎಂದಾದರೂ ಹೀಗಾಗಿದೆಯೇ? ಕಾಡುವ ಇಂತಹ ಜಾಗಗಳಿಗೆ ಮತ್ತೆ ಮತ್ತೆ ಕಾಡು ಬೀಳಬೇಕು ಎಂದೆಣೆಸುತ್ತ ಬೆಣ್ಣೆ ಜಲಧಾರೆಗೆ ಬಾಯ್ ಬಾಯ್ ಹೇಳಿದೆವು.


Tuesday, July 21, 2026

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

 

‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌

 ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ, ಶೃಂಗೇರಿ ಹೀಗೆ ಹತ್ತು ಹಲವು ಸ್ಥಳಗಳಿಗೆ ಹೋಗಲು ನಮಗೆ ಆಗುಂಬೆಯೇ ಲಾಂಚ್‌ ಪ್ಯಾಡ್. ಹಾಗಾಗಿ ಆಗುಂಬೆಯೊಂದಿಗೆ ಬಂಧ ಬೆಸೆದುಕೊಂಡು ಬಂದಿದೆ. ಹಾಗಾಗಿ ಆಗುಂಬೆಗೆ ಎಷ್ಟು ಸಲ ಹೋಗಿದ್ದೇವೆಂದು ಕೇಳಿದರೆ ಲೆಕ್ಕ ತಪ್ಪುತ್ತದೆ. 

ಆಗುಂಬೆ ಎಂಬ ಆತ್ಮ ಸಖಿ

ಆಗುಂಬೆ ಎಂದರೆ ಆತ್ಮ ಸಖಿ. ಇವಳ ಪದತಲದಲ್ಲಿ ಪವಡಿಸುವ ಸುಖವೇ ಬೇರೆ. ಸದಾ ಗಿಜಿ ಗುಡುವ ಊರುಗಳಿಗಿಂತಲೂ ಶಾಂತವಾದ ಇಂತಹ ಊರುಗಳು ನಮ್ಮ ಎದೆಯ ತಣಿಸುತ್ತವೆ. ಸದಾ ಮಂಜು ಬಿಕ್ಕುವ ಇಲ್ಲಿನ ದಾರಿಗಳು ನಮ್ಮನ್ನು ವಿಸ್ಮಿತರನ್ನಾಗಿಸುತ್ತದೆ. 

  ಸೂರ್ಯನಿಗಿಲ್ಲಿ ಯಾವತ್ತೂ ರಜೆ. ಹತ್ತಿ ಮರದ ಅಜ್ಜನ ಗಡ್ಡ ಹಾರಿದಂತೆ ಮುಖಕ್ಕೆ ಮಂಜಿನ ಮಜ್ಜನ. ಮೌನ ಹೊದ್ದ ರಸ್ತೆಗಳು. ಕರ್ನಾಟಕದ ಚಿರಾಪುಂಜಿ. ಸದಾ ಸೂಜಿ ಮಳೆಯ ಸಂಜೆಯಂತಹ ವಾತಾವರಣ. ಅರಬ್ಬಿ ಕಡಲಿಗೋಡುವ ಸೀತೆ ಹುಟ್ಟುವುದು ಇಲ್ಲಿನ ಗಿರಿ ಶೃಂಗಗಳಲ್ಲೇ. 

ಆಗುಂಬೆ ಎಂಬುದೊಂದು ಭಾವ. ಸದಾ ನಮ್ಮನ್ನು ಆವರಿಸಿದ ಚರ್ಮದಂತೆ. ನಮ್ಮೊಳಗೇ ಹುಟ್ಟಿ ಬೆಳೆವ ಪುಟಾಣಿ ಹಳ್ಳಿ. ಸದಾ ಮಂಜಿನಿಂದ ತುಂಬಿ ಆತ್ಮಕ್ಕೊಂದು ಶಾಂತಿ ನೀಡುವ ನಿಲ್ದಾಣ. ನಾ ಯಾವತ್ತೂ ಆಗುಂಬೆಯಲ್ಲಿ ಅನುಭವಿಸುವ ಶಾಂತಿ ಮತ್ತೆಲ್ಲೂ ಸಿಕ್ಕಿಲ್ಲ. ಮನಸ್ಸು ಸದಾ ಆಗುಂಬೆಯತ್ತ ತುಡಿಯುತ್ತಾ ಇರುತ್ತೆ. ಇಲ್ಲಿರುವ ಪರಿಸರದಲ್ಲಿರುವ ಪಾಸಿಟಿವ್‌ ಶಕ್ತಿಯೇ ಅಂತಹುದು. ಇಲ್ಲಿಗೆ ಹೋಗಿ ಬಂದರೆ ಮುಂದಿನ ಆರೇಳು ತಿಂಗಳು ನಿಮ್ಮ ಎನರ್ಜಿ ಅಧ್ಬುತವಾಗಿರುತ್ತದೆ. ನಮ್ಮೂರಿನ ಕೆಮಿಸ್ಟ್‌ ಒಬ್ಬರು ಪ್ರತೀ ವಾರ ಆಗುಂಬೆಗೆ ಹೋಗಿ ಬರುತ್ತಾರೆ. ನನಗೆ ಕೇಳಿಯೇ ಅಚ್ಚರಿಯಾಯಿತು. ನಿಮಗೂ ಇಂತಹ ಅನುಭೂತಿ ಪಡೆವ ಆಸೆಯೇ? ಇನ್ನೇಕೆ ತಡ ಸದಾ ಕಾಡುವ ಆಗುಂಬೆಗೊಮ್ಮೆ ಈ ಮಳೆಗಾಲದಲ್ಲಾದರೂ ಹೋಗಿ ಬನ್ನಿ.

ಟ್ರೋಗನ್‌ನ ಬೆನ್ನು ಬಿದ್ದು

ಗಂಡು ಹಕ್ಕಿ - (ಚಿತ್ರ ಅಂತರ ಜಾಲ)


LTM ಅಳಿವಿನ ಅಂಚಿನಲ್ಲಿ ಕೊನೆಯ ಪ್ರಯತ್ನ...

ಜಗತ್ತಿನ 38 ಜೀವವೈವಿದ್ಯತಾ ತಾಣಗಳಲ್ಲಿ ಆಗುಂಬೆಯೂ ಒಂದು. world heritage ಮಾನ್ಯತೆಯೂ ಇದಕ್ಕಿದೆ. ಇಲ್ಲಿನ ಹಕ್ಕಿಗಳಿಗಾಗಿ ವಿದೇಶಿಯರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಟ್ರೋಗನ್ ಇಲ್ಲಿನ ಒಂದು ವಿಶೇಷ ಹಕ್ಕಿ. ಕೆಂಬಣ್ಣ ತುಂಬಿದ ಡಬ್ಬಿಗೆ ಬಿದ್ದು ಬಂದಂತಹ ಬಣ್ಣ. ಗಂಡು ಹಕ್ಕಿಯಂತೂ ಗಾಡ ಕೆಂಪು. ಈ ಹಕ್ಕಿಯ ಸಂಗಕ್ಕೆ ಬಿದ್ದು ಊರೂ ಅಲೆದಿದ್ದೆ. ಹಗಲೂ ರಾತ್ರಿ ಸತಾಯಿಸಿದ್ದಿದೆ. ಕೈಯಲ್ಲಿ ಕ್ಯಾಮಾರವಿಲ್ಲದೇ ಇದ್ದಾಗಲ್ಲೊಮ್ಮೆ ೧೦ ಅಡಿ ಅಂತರದಲ್ಲಿ ದರ್ಶನಕೊಟ್ಟು ನನ್ನ ಹೊಟ್ಟೆ ಉರಿಸಿದ್ದಿದೆ. ಹಲವಾರು ಬಾರಿ ಕಾರ್ಯಸಿದ್ದಿಯಾಗದೇ ವಾಪಸಾದೆ. ಹೀಗೆ ಟ್ರೋಜನ್‌ ಸಂಗಕ್ಕೆ ಬಿದ್ದವರೆಲ್ಲಾ ಅದರ ಅಪರಿಮಿತ ಅಂದಕ್ಕೆ ಮಾರು ಹೋಗದೇ ಇರರು. ಇವುಗಳ ಜೊತೆಗೆ ಲಂಗೂರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮೊದಲೆಲ್ಲಾ ರಸ್ತೆ ಬದಿ ಬರದೇ ನಾಚಿಕೆ ಸ್ವಭಾವದ LTM (Lion tailed Macaque) ಗಳು ಈಗ ಪ್ರವಾಸಿಗರ ತಿಂಡಿಗಳಿಗೆ ಕೈಚಾಚುತ್ತಿರುವುದು ಇವುಗಳ ಸಹಜ ಪರಿಸರದಲ್ಲಿ ಆಹಾರ ಲಭ್ಯತೆಯು ಕಡಿಮೆಯಾಗಿರುವುದರ ದ್ಯೋತಕವಾಗಿದೆ. ನಾನು ಹೋದಾಗ ಇವುಗಳು ಪ್ರವಾಸಿಗರಲ್ಲಿ ಭಿಕ್ಷೆ ಬೇಡುತಲಿತ್ತು. ಮಹೋರಗದಲ್ಲೊಂದಾದ ಕಾಳಿಂಗ ಸರ್ಪ ಸರ್ವೆ ಸಾಮಾನ್ಯ.



  ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ. ಆಗುಂಬೆಯನ್ನೊಮ್ಮೆ ಒಬ್ಬನೇ ಅಡ್ಡಾಡುವುದು ನನ್ನ ಉದ್ದೇಶ.

ಬೆಳಗಿನ ಚಹ ಮುಗಿಸಿ ಜೋಗಿ ಗುಂಡಿ ನೋಡಲು ತಯಾರಾದೆ. ಸ್ವಲ್ಪ ದೂರವನ್ನು ರಿಕ್ಷಾದಲ್ಲಿ ಪಯಣಿಸಿದೆ. ನಂತರದು ಕಾಲ್ನಡಿಗೆ ಹಾದಿ. ಕ್ಯಾಮರವೊಂದೇ ನನ್ನ ಸಂಗಾತಿ. ಹಾದಿ ಉದ್ದಕ್ಕೂ ಹತ್ತಿಯಂತೆ ಹಾಸಿತ್ತು ಮಂಜು! ಆಕಾಶಕೆಟುಕಿದ ಮರಗಳು. ಎರಡಡಿ ದೂರವೂ ತೋರದು! ಜೀರುಂಡೆಯ ಜೇಂಕಾರ ಆಸ್ವಾದಿಸುತ್ತಾ ಸಾಗಿತ್ತು ಪಯಣ. ಕೀಟ ಹಕ್ಕಿಗಳಿಗಾಗಿ ಹುಡುಕಾಟ ನಡೆಸಿತ್ತು ಕ್ಯಾಮರ. ಸಿಕ್ಕ ಸಿಕ್ಕಿದ ಹುಳ ಹುಪ್ಪಟೆಗಳೆಲ್ಲಾ ಕ್ಯಾಮರದಲ್ಲಿ ಬಂಧಿ. ಮಂಜಿನ ಪರದೆ ಸರಿಸಿದಾಗ ಕಂಡದ್ದು ಅಮೋಘ, ನಯನಾಸ್ವಾದಕ ದೃಶ್ಯ. ಅಪ್ಸರೆಯರ ಬಚ್ಚಲು ಮನೆಯಂತಿತ್ತು. ಸುತ್ತ ವನಸಿರಿ. ನಡುವೆ 20 ಅಡಿಯಿಂದ ಧುಮುಕುವ ಜಲಧಾರೆ. ಜಲಪಾತ ಕೊರೆದಾದ ಗುಂಡಿ. ಗುಂಡಿ ಸುತ್ತಿ ನೊರೆ ನೊರೆಯಾಗಿ ಹರಿವ ಪನ್ನೀರು. ಆಗಾಗ ಕೇಳಿ ಬರುವ ಮಲಬಾರ ವಿಸ್ಲಿಂಗ್ ಥ್ರಷ್‌ ಹಕ್ಕಿಯ ಸುಮಧುರ ನಾದ. ಒಟ್ಟಾರೆ ಸ್ವರ್ಗವೇ ಧರೆಗಿಳಿದ ಅನುಭವ. ಅಪರೂಪದ ಕೆಲವು ಸೋಣೆ ಮತ್ತಿತರ ಕಾಡು ಹೂಗಳು. ಕೊನೆಗೂ ಮಲಬಾರ ವಿಸ್ಲಿಂಗ್‌ ಥ್ರಷ್‌ವೊಂದು ದರುಶನವಿತ್ತು ಕಣ್ಮರೆಯಾಯಿತು. ಕಲ್ಲು ಸಂದಿಯಲ್ಲಿ ಗೂಡು ಕಟ್ಟುತ್ತಿರಬೇಕು. ನೀರಾಟ ಆಡಿ ಹಿಂತಿರುಗುವ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆ. ಆಗುಂಬೆ ಎಂದರೆ ಜ್ಞಾಪಕ ಚಿತ್ರ ಶಾಲೆಯ ನೂರಾರು ಹೆಸರುಗಳು.

ದೊಡ್ಡ ಮನೆಯ ದೊಡ್ಡಕ್ಕ

ಆಗುಂಬೆಯ ಅಸ್ಮಿತೆಗಳಲ್ಲಿ ದೊಡ್ಡಮನೆಯ ಕಸ್ತೂರಕ್ಕ ಸಹ ಒಬ್ಬರು. ಆಗುಂಬೆಯ ಆ ದೊಡ್ಡ ಮನೆಗೆ ಬಂದರೆ ಅವರೆಲ್ಲರನ್ನೂ ಚೆನ್ನಾಗಿ ಉಪಚರಿಸಿ ಕಳುಹಿಸುತ್ತಿದ್ದುದು ಅವರೇ. ಅವರನ್ನು ನಾವೆಲ್ಲಾ ದೊಡ್ಡ ಮನೆ ದೊಡ್ಡಕ್ಕ ಎನ್ನುತ್ತಿದ್ದೆವು. ಅದೆಷ್ಟೇ ಜನ ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದರು. ಮಾಲ್ಗುಡಿ ಡೇಸ್‌ನ ಚಿತ್ರೀಕರಣ ನಡೆದಿದ್ದು ಇಲ್ಲೇ. ತಿಂಗಳುಗಳ ಕಾಲ ಅವರಿಗೆಲ್ಲಾ ಊಟ ತಿಂಡಿ ಮಾಡಿ ಹಾಕಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಮನೆಯನ್ನೇ ಬಿಟ್ಟು ಕೊಟ್ಟರು. ʼಮಾಲ್ಗುಡಿʼ ಪ್ರಖ್ಯಾತವಾಯಿತು ಜೊತೆಗೆ ಇವರ ಮನೆಯೂ. ಕೆಲವರು ಈಗಲೂ ಇದಕ್ಕೆ ಮಾಲ್ಗುಡಿ ಮನೆ ಎಂದೂ ಕರೆಯುತ್ತಾರೆ ಎಂದು ದೊಡ್ಡಕ್ಕ ನೆನಪಿಸಿಕೊಳ್ಳುತ್ತಾರೆ.


ಆಗುಂಬೆಗೊಂದು ಅಡಿ ಬರೆಹ



ಆಗುಂಬೆ ಎಂದರೆ ನೂರಾರು ಹೆಸರುಗಳ ನೆನಪಿನ ಚಿತ್ರ ಶಾಲೆ. ಕೆಲವು ಸ್ಮೃತಿಯಲ್ಲಿ ಉಳಿಯುತ್ತದೆ. ಹೈರ್‌ ಪಿನ್‌ ತಿರುವು ದಾಟಿ ಗಡಿಗೆ ಅಡಿ ಇಡುತ್ತಿದ್ದಂತೆ ಬಲ ಗಡೆಗೆ ಸದಾ ನಗು ಮುಖ ಹೊತ್ತು ತನ್ನದೇ ಗೂಡಂಗಡಿಯಲಿ ಚಟ್ಟಂಬಡೆ ಕಾಯಿಸುವ ಪ್ರೇಮಾನಂದ ಪಡಿಯಾರ್‌ ಸಹ ಒಬ್ಬರು! ನಮ್ಮ ನಡುವೆ ಪಡಿಯಾರ್‌ ಮಾಮ್‌ ಎಂದೇ ಪ್ರಸಿದ್ದಿ. 

ಮಸಲಧಾರೆಗೆ ಬಿಸಿಬಿಸಿ ಅಂಬೊಡೆ ಮಾರಿ ಬದುಕಿದವರು. ಮಳೆ ಮಂಜಿನ ಧ್ಯಾನ ಮಾಡಿದವರು. ಮಳೆ, ಬಿಸಿಲು ಎಂದು ಬೆಚ್ಚದೆ ಬೆದರದೆ ಸದಾ ನಗುಮುಖದ ಸೇವೆಯನ್ನು ಮಾಡಿದ ಇವರೊಬ್ಬ ಅಪ್ಪಟ ಕಾಯಕ ಜೀವಿ. ಆಗುಂಬೆಯ ಗಡಿದಾಟಿದರೆ ಮೊದಲು ನೆನಪಾಗುವುದೇ ಪ್ರೇಮಾನಂದ ಪಡಿಯಾರ್  ಯಾನೆ ಪಡಿಯಾರ್ ಮಾಮ ಮತ್ತು ಅವರು ಮಾಡುತ್ತಿದ್ದ ರುಚಿ ರುಚಿ ಅಂಬೋಡೆ.

ಸದಾ ನಗುತ್ತಾ ನಗಿಸುತ್ತಾ, ಕಡಿಮೆ ದರದಲ್ಲಿ ಚಹ, ಚಟ್ಟಂಬಡೆ, ಇಡ್ಲಿಯನ್ನು ತನ್ನ ಸಣ್ಣ ಕ್ಯಾಂಟಿನ್‌ನಲ್ಲಿ ಮಾರುತಲಿದ್ದರು! ಇವರ ಚಟ್ಟಂಬಡೆಯ ರುಚಿ ಬಲ್ಲವರು ಚಟ್ಟಂಬಡೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಿರಲಿಲ್ಲ. ಜೊತೆಗೊಂದು ಬಿಸಿ ಬಿಸಿ ಮಂಜಿನ ಚಹಾ. ಆಗುಂಬೆ ಎಂದರೆ ಪಡಿಯಾರ್‌ ಮಾಮ್‌ನ ಚಟ್ಟಂಬಡೆ ಎನ್ನುವಷ್ಟು. ಆಗುಂಬೆಯ ಜಿಯೋ ಟ್ಯಾಗ್! 

 ಸನಿಹದ ಕಾರ್ಕಳದವರಾದರೂ ೯೦ರ ದಶಕದಲ್ಲಿಯೇ ಇಲ್ಲಿಗೆ ಬಂದವರು. ಸೇವೆ ಎಂಬ ಹೆಸರಿನಲ್ಲಿಯೇ ಚಟ್ಟಂಬಡೆ ಮಾರುತ್ತ ತನ್ನ ಜೀವಮಾನವನ್ನು ಸವೆಸಿದವರು. ಇವರ ಮಕ್ಕಳೆಲ್ಲಾ ಈಗ ಇಂಜಿನಿಯರುಗಳಾಗಿದ್ದರೂ ಸದಾ ಜನರ ನಡುವೆಯೇ ಬದುಕಬೇಕೆಂಬ ಇವರ ಅದಮ್ಯ ಉತ್ಸಾಹವೇ ನನಗೆ ಸ್ಪೂರ್ತಿ. ಆಧ್ಯಾತ್ಮ, ದೇಶಭಕ್ತಿಯ ಅನೇಕ ಪುಸ್ತಕಗಳನ್ನು ಸಹ ತನ್ನ ಪುಟಾಣಿ ಕ್ಯಾಂಟಿನ್ ಒಳಗೆ ಇಟ್ಟುಕೊಂಡು ಸ್ಪೂರ್ತಿ ಪಡೆಯುತ್ತಾ ಬದುಕುತ್ತಿದ್ದರು. ನೂರಾರು ಓಡಾಟದ ನಂತರ ಇವರೊಂದಿಗಾದ ನನ್ನ ಅವಿನಾಭಾವ ಸಂಬಂಧ ಆಗುಂಬೆ ಹಾಗೂ ಇವರನ್ನು ಬೇರ್ಪಡಿಸಲಾಗದಷ್ಟು! ತಾನೂ ನಗುತ್ತಾ ತನ್ನೊಂದಿಗೆ ಇತರರನ್ನೂ ನಗಿಸುತ್ತಾ ಬದುಕುವ ಇತಂಹ ಒಬ್ಬ ಅಧ್ಯಾತ್ಮ ಜೀವಿ ಇಹದ ಬದುಕಲ್ಲಿ ನಾ ಕಂಡಿಲ್ಲ. ಇವರ ಆಶಯ ಮತ್ತು ಜೀವನ ನಮಗೆಲ್ಲಾ ಸ್ಪೂರ್ತಿ. ಕೊನೆಗಾಲದಲ್ಲಿ ಇವರ ಜೊತೆಗೆ ಮಾತನಾಡಲು ಸಾಧ್ಯವಾಗಿಲ್ಲ ಎಂಬುದೊಂದು ಸಣ್ಣ ಕೊರಗು ಸದಾ ನನ್ನ ಕಾಡುತ್ತಲೇ ಇದೆ. ಸೆಲ್ಪಿ ಇಲ್ಲದ ಕಾಲದಲ್ಲಿ ಇವರ ಜೊತೆಗೊಂದು ಫೋಟೊ ಸಾಧ್ಯವಾಗಿಲ್ಲವೆಂಬ ಬೇಸರ ಸದಾ ಕಾಡುತ್ತಿರುತ್ತದೆ. 

ಮತ್ತೆಂದೂ ಸಿಗದ ಮಸಾಲೆ ಅಂಬೊಡೆ 

  ಇಂದು ಬರುವೆನೆಂದು ಅಂದು ಹೊರಟ ಪ್ರೇಮಾನಂದ ಮತ್ತೆ ಆಗುಂಬೆಗೆ ಬರಲೇ ಇಲ್ಲ. ೨೦೧೫ರ ಜುಲೈ ತಿಂಗಳಿನಲ್ಲಿ ಡೆಂಗ್ಯೂವಿನಿಂದ ಮೃತರಾದರು. ಈಗೀಗ ಜಾಗತೀಕರಣ, ವ್ಯಾಪಾರೀಕರಣದ ಭರಾಟೆಯಲ್ಲಿ ಭಾವನೆಗಳು ಬೆಲೆಯೇ ಇಲ್ಲದ ಹಳೆಯ ಚಟ್ಟಂಬಡೆಯಂತಾಗಿದೆ. ನೀವೇನಂತೀರಿ?

  ನನ್ನಂತಹವರಿಗೆ ಸದಾ ಕಾಡುವ ಊರು. ಇಲ್ಲಿನ ಟ್ರೋಜನ್‌ ಹಕ್ಕಿ, ವಿಷಲಿಂಗ್‌ ಥ್ರಶ್‌ ನನ್ನನ್ನು ಇಲ್ಲಿಗೆಳೆಯುತ್ತವೆ. ಇಲ್ಲಿ ಸರಳವಾಗಿ ಬದುಕುವ ನೂರಾರು ಮಹನೀಯರು ಹೆಜ್ಜೆ ಮೂಡದಂತೆ ಅನಂತದಲಿ ಲೀನವಾಗುವ ಪರಿಗೆ ಬೆರಗಾಗಿದ್ದೇನೆ. ಎಂದು ಬರುವಿರೆಂದು ಮತ್ತೆ ಮತ್ತೆ ಕರೆಯುತ್ತಲೇ ಇದೆ ಅಲೆಮಾರಿಯ ಆಗುಂಬೆ.

          ಬರಹ-೨೦೧೫.



ವಾರೆ ನೋಟ

ಪ್ರವಾಸಗಳೆಂಬ ಕಿರುದಾರಿಯಲಿ

ಬೇಕಲ್‌ನ ದಾರಿಯಲ್ಲಿ ( Bekal Fort) ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದ...