Showing posts with label ಬುಕ್ Rack. Show all posts
Showing posts with label ಬುಕ್ Rack. Show all posts

Sunday, January 25, 2026

ನದಿ ದಾಟಿ ಬಂದವರು


 

ನಾನ್ಯಾವುದೇ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವುದೇ ಕಡಿಮೆ! ಸ್ವಲ್ಪ ಜಿಡುಕಾದರೂ ಎತ್ತಿ ಬದಿಗಿಡುತ್ತೇನೆ. ಇಲ್ಲ ಓದಿನ ಕೊಂಡಿ ಮುರಿದು ಮುಂದಿನ ಪುಸ್ತಕಕ್ಕೆ ಹೆಜ್ಜೆ ಇಡುತ್ತೇನೆ. ಉದಾಹರಣೆಗೆ ಮಾಂಡೋವಿ ಕಾದಂಬರಿ. ಹಾಗೇ ಹಲವು ಪುಸ್ತಕಗಳ ಹೆಸರು ಹೇಳಬಲ್ಲೆ.  ಆದರೆ ಇದೊಂದು ಪುಸ್ತಕ ಸಲೀಸಾಗಿ ಓದಿಸಿಕೊಂಡು ಕೊನೆ ಪುಟಕ್ಕೆ ಬಂದಿದ್ದೇ ತಿಳಿಯಲಿಲ್ಲ. ಕೊನೆಯ ಹತ್ತು ಪುಟ ಮಾತ್ರ ಕಣ್ಣು ನೋವಿನ ಕಾರಣವಾಗಿ ಓದಲು ಎರಡು ದಿನ ತೆಗೆದುಕೊಂಡೆ. 

ಲೋಕಾಭಿರಾಮದ ಮಾತುಕತೆ

ಕುಂದಾಪುರ ಕಡೆಯ ಕತೆಯನ್ನು ಇಷ್ಟು ಸಶಕ್ತವಾಗಿ ವಿವರಿಸಿದ ಇತ್ತೀಚಿನ ಕಾದಂಬರಿಗಳಲ್ಲಿ ಸೂಡಿ ಮತ್ತು ನದಿದಾಟಿ ಬಂದವರು ಪ್ರಮುಖವಾಗಿ ನಿಲ್ಲುತ್ತದೆ. ಸ್ವಲ್ಪವೇ ಸ್ವಲ್ಪ ಶಿವರಾಮ ಕಾರಂತರ ಶೈಲಿಯನ್ನು ಹೋಲುತ್ತದೆ.  ಅತ್ಯಂತ ಸರಳವಾಗಿ ಕಥೆ ಹೆಣೆಯುವ ಕಸುಬು ದಾರಿಗೆ ಇವರಿಗೆ ಸಿದ್ಧಿಸಿದೆ. ಯಾವುದೇ ರೀತಿಯ ಮಸಾಲೆ ಇನ್ನು ಬೆರೆಸದೆ ಸರಳವಾಗಿ ಕಥೆಯನ್ನು ಹೆಣದಿದ್ದಾರೆ.

 ನಿರ್ಲಿಪ್ತ ಕಥನಗಾರಿಕೆ

ಕತೆಯಿಂದ ಬೇರ್ಪಟ್ಟು ನಿಶ್ಪಕ್ಷಪಾತವಾಗಿ ದೂರನಿಂತು ಕತೆಗಾರರು ಕತೆ ಹೇಳುತ್ತಾ ಹೋಗುತ್ತಾರೆ. ಕತೆಯ ಎಡೆಗಿನ ಅವರ ನಿರ್ಲಿಪ್ತ ದೋರಣೆ ಅಚ್ಚರಿಯಾಗಿ ಎದ್ದು ಕಾಣುತ್ತದೆ. 

ಕತೆಯು ಕುಂದಾಪುರ ಕಡೆಯ ಹಿಂದುಳಿದ ಜನಾಂಗ, ಮಧ್ಯಮ ವರ್ಗ ಹಾಗೂ ಜಮೀನುದಾರರ  ಬದುಕಿನ ಚಿತ್ರಣದ ಜೊತೆಗೆ ಸ್ವಾತಂತ್ರ್ಯೋತ್ತರದ ಪಲ್ಲಟಗಳನ್ನು ನಿರ್ಲಿಪ್ತರಾಗಿ ಪ್ರತಿಬಿಂಂಬಿಸುತ್ತಾ ಸಾಗುತ್ತದೆ. ಅಂದಿನ ಬದುಕಿನ ಅನನ್ಯ ಚಿತ್ರಣ  ಚಿತ್ರಿಸುತ್ತಾ ಎಲ್ಲಿಯೂ ದೀರ್ಘವೆನಿಸದೇ ಸಾಗುತ್ತದೆ. ಗೆಳೆಯನೊಂದಿಗೆ ಕಲ್ಲು ಬೆಂಚಿನ ಮೇಲೆ ಕುಳಿತು ಮಾತನಾಡಿದಂತೆ.

ಊರ ಪಟೇಲನ ಹಳವಂಡಗಳಾಗಲಿ, ಕೃಷ್ಣಯ್ಯನ ರಸಿಕತೆಯನ್ನಾಗಲಿ, ಹಯವದನ ಭಟ್ಟರು ಪೆಟ್ಟು ತಿನ್ನುವ ಪ್ರಸಂಗವಾಗಲಿ, ಸಾಕಮ್ಮ ಊರು ತೊರೆಯುವ ಕ್ಷಣ ಇವೆಲ್ಲವನ್ನೂ ಹೆಚ್ಚಿನ ನಾಟಕೀಯತೆ ಬಳಸದೇ ಸರಳವಾಗಿ ನಿರೂಪಿಸಿದ್ದಾರೆ. ಕತೆಗಾರರ ವ್ಯಕ್ತಿತ್ವವೇ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಾತ್ರ ಪೋಷಣೆಯಲ್ಲಾಗಲೀ ವಿವರಣೆಯಲ್ಲಾಗಲಿ ಎಲ್ಲೂ ಎಳೆಯದೇ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಪ್ರತೀ ಪಾತ್ರದೊಂದಿಗೂ ಒಂದು ಅಂತರವನ್ನು ಕತೆಗಾರರು ಕಾಯ್ದಕೊಂಡಿದ್ದಾರೆ! ಜೊತೆ ಜೊತೆಗೆ ಸರಿ ತಪ್ಪುಗಳ ತೀರ್ಮಾನ ಕೊಡದೇ ಇಂತಹ ಕತೆ ಹೆಣೆಯುವುದು ಬಹಳ ಕಷ್ಟ. ಇವೆಲ್ಲವನ್ನು ಮೀರುತ್ತಾ  ತಾಜಾ ಕತೆಯೊಂದನ್ನು ಉಣಬಡಿಸಿದ್ದಾರೆ.

ಇದೆಲ್ಲದಕ್ಕಿಂತ ಪ್ರಮುಖವಾದುದು ನದಿದಾಟಿ ಬಂದವರು ಎಂಬುದು ಅತ್ಯಂತ ಸುಂದರ ರೂಪಕ.  ನಾವು ದಾಟಿ ಬರಬೇಕಾದ ನದಿ ಯಾವುದೆಂದು ನಾವೇ ನಿರ್ಧರಿಸಬೇಕು.

ಕಾಲದೋಣಿಯಲ್ಲಿ ಮತ್ತೆ ಪಯಣ ಮಾಡ ಬಯಸುವ ರಸಿಕರು ಸ್ವಾತಂತ್ರ್ಯೋತ್ತರ ಸ್ಥಿತ್ಯಂತರವನ್ನು ಅಧ್ಯಯನ ಮಾಡಬಯಸುವವರು ಓದಲೇ ಬೇಕಾದ ಹೊತ್ತಿಗೆ ನದಿದಾಟಿ ಬಂದವರು.

ಇವರು ಆಯ್ಕೆ ಮಾಡಿಕೊಂಡ ಮೂರೂ ಕಾದಂಬರಿಗಳ ವಸ್ತು ವಿಭಿನ್ನ. ಹಾಗಾಗಿ ಶಶಿಧರ್ ಹಾಲಾಡಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳನ್ನು ವೈಯಕ್ತಿಕವಾಗಿ ನಿರೀಕ್ಷೆ ಮಾಡುತ್ತೇನೆ.


Thursday, May 29, 2025

ಮಹಾ ಪಯಣದ ಹೆಜ್ಜೆ ಗುರುತುಗಳು

 


ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕೃತಿ.

 ತಮ್ಮ ನಾಲ್ಕು ಸಾವಿರ ಮೈಲುಗಳ ಭೀಕರ ನಡಿಗೆ ಮತ್ತು ಎದುರಾದ ಸಂಕಷ್ಟಗಳನ್ನು ನಮ್ಮ ಮುಂದೆ ಸರಳವಾಗಿ  ಹರವಿಟ್ಟಿದ್ದಾರೆ ತೇಜಸ್ವಿ. 

     ಬದುಕೇ ಒಂದು ಸ್ವಾತಂತ್ರ್ಯಕ್ಕಾಗಿ ಅನನ್ಯ ಹೋರಾಟ. ನದಿ ತೊರೆ ಬೆಟ್ಟಗಳನ್ನೆಲ್ಲ ಗೆಲ್ಲುತ್ತಾ ಸ್ಲೋವಿಯರ್ ಕೊನೆಗೆ ಭಾರತಕ್ಕೆ ಬಂದಿದ್ದೆ ಒಂದು ಮಹಾನ್ ಅಚ್ಚರಿ. ಹಿಮಾಲಯದ ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಲು ನಾವು ತಿಣುಕಾಡಬೇಕು. ಅಂತಹುದರಲ್ಲಿ ಯಾವುದೇ ಉಪಕರಣಗಳಿಲ್ಲದೆ ಕೇವಲ ಚರ್ಮದ ದಾರ ಸಣ್ಣ ವಯರ್ ಬಳಸಿ ಹಿಮಾಲಯವನ್ನು ದಾಟಿಕೊಂಡಿದ್ದು ಪ್ರಪಂಚದ ಮಹಾ ಪವಾಡ. 

 ನೀರಿಲ್ಲದೆ ಗೋಬಿ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವುದು  ಒಂದು ರೋಚಕ ಮಹಾಸಾಹಸ! ಮಹಾನರಕದ ಗೋಬಿ ಮರುಭೂಮಿಯನ್ನು ನೀರಿಲ್ಲದೆ ದಾಟಿದ್ದು ಒಂದು ವಿಶೇಷ ಅವರ ಮನೋ ಶಕ್ತಿ ಅಭೀಪ್ಸೆಗಳಿಗೆ ಸಾಕ್ಷಿ. ಹಾವು ತಿಂದು ಗೋಬಿ ಮರುಭೂಮಿಯಲ್ಲಿ ಬದುಕಿ ಉಳಿದದ್ದೊಂದು ಅಚ್ಚರಿ.

 ದಾರಿ ಉದ್ದಕ್ಕೂ ಸಿಕ್ಕ ಅನಾಗರಿಕರ ಆದೃ ಸಹಕಾರ. ಅವರ ಹೃದಯ ವೈಶಾಲ್ಯತೆ ನಾಗರಿಕರಲ್ಲೂ ಕಾಣಸಿಗದು ಪ್ರತಿಯೊಬ್ಬ ಅನಾಮಿಕನು ತಮಗೆ ಸಹಾಯ ಹಸ್ತ ಚಾಚುತ್ತಾ ಗಮ್ಯದೆಡೆಗೆ ಪಯಣಿಸುತ್ತಾ, ಈ ಪಯಣ ಹುಟ್ಟಿಸಿದ ಭರವಸೆ ಅಂತಿಂಥದ್ದಲ್ಲ. ಪ್ರತಿಯೊಂದುಕ್ಕೂ ಅನುಮಾನಿಸುವ ನಾಗರೀಕ ಪ್ರಪಂಚದಲ್ಲಿ ಗೊತ್ತಿಲ್ಲದೆಯೇ ಆದರಿಸುವ ಅನಾಗರಿಕ ಪ್ರಪಂಚವೆಲ್ಲಿ. ಯಾವುದಕ್ಕೆ ಯಾವುದು ಹೋಲಿಕೆ? ಮಾಡದ ತಪ್ಪಿಗೆ ಪರಿತಪಿಸುವಂತಹ ಶಿಕ್ಷೆ ನೀಡಿದ ನಾಗರಿಕ ಪ್ರಪಂಚ ಒಂದೆಡೆಯಾದರೆ ಕರೆದು ಆದರಿಸಿ ಸತ್ಕರಿಸುವ ಅಲೆಮಾರಿಗಳು. ತಕ್ಕಡಿಯ ಈ ಕಡೆಯೇ ಭಾರ. 

 ರಷ್ಯಾದಿಂದ ಭಾರತದವರೆಗೆ ಅಪರಿಚಿತ ಅನಾಗರಿಕರು ತೋರಿದ ಆಸ್ತೆ, ಪ್ರೀತಿ, ವಾತ್ಸಲ್ಯ ನಮ್ಮ ಕಣ್ಣನ್ನು ಹೊಳೆಯಾಗಿಸುತ್ತದೆ. ಗೋಬಿ ಮರುಭೂಮಿಯಲ್ಲಿ ಸಿಗುವ ಹಳ್ಳಿಗ, ಮಂಗೋಲಿಯ ದೇಶದಾಟಿದ ನಂತರ ಸಿಗುವ ಮುದುಕ, ಟಿಬೆಟ್ ಪ್ರಾರಂಭಕ್ಕಿಂತ ಮೊದಲು ಸಿಕ್ಕಿದ ಪುಟಾಣಿ ಹಳ್ಳಿಯ ಗ್ರಾಮಸ್ಥರ ಸತ್ಕಾರ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ.

 ಸೈಬೀರಿಯಾದ ಘೋರ ಚಳಿಯನ್ನು ಒಂದೇ ಒಂದು ಜೊತೆ ಬಟ್ಟೆಯಲ್ಲಿ ದಾಟಿದ್ದು , ಟಿಬೇಟ್ ಮತ್ತು ಹಿಮಾಲಯವನ್ನು  ಹತ್ತಿ ಇಳಿದಿದ್ದು, ಕೈಲಾಸ ಸರೋವರದ ಸನಿಹವೇ ಹಾದುಹೋಗಿದ್ದು, ನರಕ ಸದೃಶ ಗೋಬಿ ಮರುಭೂಮಿಯನ್ನು ದಾಟಿದ್ದು, ಎಂಟು ಅಡಿ ಎತ್ತರದ ಹಿಮ ಮಾನವನನ್ನು ನೋಡಿದ್ದು  ಈ ಪ್ರಯಾಣದ ಪ್ರಮುಖ ಹೆಜ್ಜೆ ಗುರುತುಗಳು.

 ಮನುಷ್ಯನ ಅಪಾರ ಮನೋಬಲ, ಸ್ವಾತಂತ್ರದೆಡೆಗಿನ  ತುಡಿತವನ್ನು ಎತ್ತಿ ಹಿಡಿಯುವ  ಅನನ್ಯ ಕೃತಿ.

 ಇಂತಹ ಮಹಾ ಪ್ರಯಾಣ ಮನುಕುಲದ ಹಾದಿಯಲ್ಲಿ ಹಿಂದೆಂದೂ ನಡೆದಿಲ್ಲ ಮುಂದೆ ನಡೆಯುವುದು ಇಲ್ಲ. ನಾಲ್ಕುವರೆ ತಿಂಗಳ ಅವಧಿಯಲ್ಲಿ ಸುಮಾರು 2000 ಮೈಲು ನಡೆದ ದಾಖಲೆ ಇಲ್ಲ!! ಒಟ್ಟು ನಡೆದ ಹಾದಿ ನಾಲ್ಕು ಸಾವಿರ ಮೈಲಿ!!


ಅಸಾಧ್ಯ ವಾದ ರೋಚಕ ಸಾಹಸದ ನೈಜಕತಾನಕ ಮಹಾಪಲಾಯನ.

ಏಕೆ ನೀವಿನ್ನು ಓದಿಲ್ಲ?

Friday, May 12, 2023

ಅಬ್ಬೆ ಎಂಬ ಅನನ್ಯ ಕತೆ

 ಆತ್ಮಕತೆಯ ಭಾಗವಾಗುವಂತಹ ಕಾದಂಬರಿಗಳು ವಿರಳ. ಅಂತಹ ವಿರಳ ಕಾದಂಬರಿ ಅಬ್ಬೆ . ಹಾಲಾಡಿ ಸನಿಹದ ಮುದೂರಿಯ ಶಶಿಧರ್ ಇದರ ಲೇಖಕರು


ಅಬ್ಬೆಯ ಅನನ್ಯತೆ:

ಅಬ್ಬೆ ಎಂಬ ಜೇಡವೇ ಕತೆಯ ಆತ್ಮ. ಯಾರಿಗೂ ಇದರ ಸ್ಪಷ್ಟ ಪರಿಚಯವಾಗಲಿ ನಿಖರವಾಗಿ ತಿಳಿದಿಲ್ಲ. ಆದರೆ ಅನೇಕ ಸಾವುಗಳ ಅಪರಾಧಿ ಈ ಜೇಡ. ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು  ಸಮಯವಿಲ್ಲ ಎಂಬ ಗಾದೆ ಕಲ್ಕೆ ರೆ ಎಂಬ ಗ್ರಾಮದ ಜನ ನಂಬುತ್ತಾರೆ.  

ಈ ಗ್ರಾಮಕ್ಕೆ ಬರುವ ಶಿವರಾಂ ಎಂಬ ಬ್ಯಾಂಕ್ ಅಧಿಕಾರಿ ಇಲ್ಲಿನ ನಿಗೂಢತೆಯನ್ನು ಬೇಧಿಸಲು ಪ್ರಯತ್ನಿಸುತ್ತಾನೆ. ತಾನು ಬಂದು ಸೇರುವ ಹೊತ್ತಿಗೇ ಕೊಲೆಯೊಂದು ನಡೆದಿರುತ್ತದೆ. ಆ ಕೊಲೆಯು ಕೊನೆಗೆ ಆತ್ಮಹತ್ಯೆ ಎಂದು ವರದಿ ಯಾಗುತ್ತದೆ. ಕತಾ ನಾಯಕನಿಗೆ ಇದು ಕೊಲೆ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಕೊನೆಯ ಕ್ಷಣದವರೆಗೂ ಆತ ತನ್ನ ತನಿಖೆ ಮುಂದುವರಿಸುತ್ತಾನೆ. 

ಕ್ರಿಟಿಕಲ್ ಕೆಂಚಪ್ಪ

ಕತೆಯಲ್ಲಿ ಕಂಡ ವಿಶಿಷ್ಟ ಪಾತ್ರ ಕೆಂಚಪ್ಪ . ಚಿಪ್ಪು ಹಂದಿ ಹಿಡಿಯುವ ಅವನು ಬ್ಯಾಂಕ್ ಗೆ ಬಂದು ಡಿಪಾಸಿಟ್ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತಾನೆ. ದಿನಕಳೆದ ಕಾಡುತ್ತಾ ಹೋಗುತ್ತಾನೆ. ಯಾವುದೇ ಪ್ರಾಣಿಶಾಸ್ತ್ರಜ್ಞನಿಗೂ ಕಮ್ಮಿ ಇಲ್ಲದ ಇವನ ಪ್ರತಿಭೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತನ್ನ ಪ್ರತಿಭೆ ತನಗೇ ತಿಳಿಯದ ಅಮಾಯಕ. ಇಂತಹ ನೂರಾರು ಪ್ರತಿಭಾವಂತರು ನಮ್ಮ ನಡುವಿದ್ದಾರೆ ಎಂಬ ಸಣ್ಣ ವಿಶಾದವು ನಮ್ಮನ್ನು ಕಾಡುತ್ತದೆ. ಬದುಕಿನ ಕ್ರಿಟಿಕಲ್ ಸಮಯದಲ್ಲಿ ಅವನಾಡುವ ಮಾತು ವಿಶಿಷ್ಟವೆನಿಸುತ್ತವೆ.

ಕತೆಯ ಉದ್ದಕ್ಕೂ ಕಿರಿಕಿರಿ ಮಾಡುತ್ತಾ ಶಿವರಾಂ ನನ್ನು ಗೋಳು ಹೊಯ್ದು ಕೊಳ್ಳುವ ಪಾತ್ರವಾಗಿ ಮ್ಯಾನೇಜರ್ ಕಾಣಿಸುತ್ತಾನೆ. ಅನವಶ್ಯಕ ದ್ವೇಷ ಮತ್ತು ಇಂದಿನ ಸಮಾಜದ ವ್ಯಕ್ತಿಯನ್ನು ಆತ ಪ್ರತಿನಿಧಿಸುವಂತಿದೆ. 

ದ್ವೇಷದ ಜೊತೆ ಜೊತೆಗೆ ಸ್ನೇಹ ಪ್ರೀತಿ ಸುರಿಸುವ ಅಪರೂಪದ ವ್ಯಕ್ತಿಗಳು ಇರುತ್ತಾರೆ.  ಕ್ರಿಕೆಟ್ ತಂಡ ಮತ್ತು ಭಾಸ್ಕರನ ತಾಯಿ ಮತ್ತು ಭಾಸ್ಕರ  ಪ್ರೀತಿಗೆ ಕಲಶವಿಟ್ಟಂತೆ ಕಾಡುತ್ತಾರೆ.

ಕತೆಗೆ ಪೂರಕವಾಗಿ ಕಲ್ಲೂರಾಯ, ಭಾಸ್ಕರ ಮುಂತಾದ ಪೂರಕ ಪಾತ್ರ ರಚಿಸಿದ್ದಾರೆ. 

ಕತೆಯ ಓಟ:

ಕತೆಗಾರನಿಗಿಲ್ಲಿ ಯಾವ ಅವಸರವೂ  ಕಾಣಿಸುವುದಿಲ್ಲ.  ತನ್ನದೇ ವಿಶಿಷ್ಟ ವೇಗದಲ್ಲಿದೆ ಕತೆ. ಅದೇ ಕತೆಯ ಜೀವಾಳ. 

ಮುಕ್ತ ಅಂತ್ಯ

ಕತೆಯ ಅನನ್ಯತೆ ಇರುವುದು ಅದು ಮುಕ್ತ ಅಂತ್ಯವನ್ನು ಕಾಣುವುದರಲ್ಲಿ, ಹೆಚ್ಚಾಗಿ ಕತೆಗಳು ಮುಕ್ತ ಅಂತ್ಯ ಕಾಣುತ್ತವೆ. ಆದರೆ ಕಾದಂಬರಿಯೊಂದು ಮುಕ್ತ ಅಂತ್ಯ ಕಾಣುವುದು ಅಪರೂಪ. ಅಂತಹ ಅಪರೂಪದ ಕಾದಂಬರಿ ಸಾಲಿಗೆ ಅಬ್ಬೆ ಸೇರಿದೆ. 

ಅಬ್ಬೆಯ ಕುರಿತಾದ ನಿಗೂಢತೆಯನ್ನು ಹಾಗೇ ಉಳಿಸಿಕೊಂಡು ಕಾದಂಬರಿಯನ್ನು ಮುಕ್ತ ಅಂತ್ಯಕ್ಕೆ ಕೊಂಡೊಯಿದ್ದಿದ್ದಾರೆ.

ನಿರೂಪಕ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ವರ್ಗ ಆಗುವುದರೊಂದಿಗೆ ಕತೆ ಮುಕ್ತ ಅಂತ್ಯ ಕಾಣುತ್ತದೆ. ಅದೇ ಮತ್ತೊಂದು ಕಾದಂಬರಿಗೆ ಮುನ್ನುಡಿಯಾ ಎಂಬ ಆಲೋಚನೆಗೂ ರಾಜ ದಾರಿ.  ಪ್ರವಾಸದ ಗೀಳಿರುವ ನನ್ನಂತವರಿಗೆ ನಿರೂಪಕನ ವರ್ಗಾವಣೆ ಚೇತೋಹಾರಿ.


ಕೆಲವರು ಅಪಾರವಾದ ಪ್ರತಿಭೆ ಶ್ರಮವಿದ್ದರೂ ಅದೃಷ್ಟದ ತೀವ್ರ ನಿರ್ಲಕ್ಷಕ್ಕೆ ಈಡಾಗುತ್ತಾರೆ. ಇದೇ ಬದುಕಿನ ವಿಕ್ಷಿಪ್ತತೆ.  ಕೆಲವರಷ್ಟೇ ಈ ನಿರ್ಲಕ್ಷದ ಬಲೆಯಿಂದ ಹೊರಬರಬಲ್ಲರು. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ. 

 ಎಲ್ಲೂ ಸ್ಥಾವರವಾಗದೇ ಜಂಗಮನಂತಿರುವುದೇ ಬದುಕಿನ ಅಂತಿಮ ಸತ್ಯವೇನೋ ?  ಎಂಬ ಮಿಂಚನ್ನು ಮಿಂಚಿಸುತ್ತದೆ ಈ ಕಾದಂಬರಿ.


Wednesday, March 22, 2023

ಯಾತನೆಗಳಿಗೆ ಕೊಟ್ಟ ಶಬ್ದ ರೂಪ

ಹಕೂನ ಮಟಾಟ

ಒಂದು ಬೇವಾರಸಿ ಟಿಪ್ಪಣಿ….

ನೇರ ರೇಖೆಯನ್ನೇ ವಕ್ರ ಸೊಟ್ಟಗೆ ಎಂದಾಡಿ ಕೊಳ್ಳುವಾಗ ಇಂತಹ ಕತಾ ಸಂಕಲನಕ್ಕೆ ಲೇವಡಿ ಹಚ್ಚಿ ಬಿಡುವುದಿಲ್ಲವೇ? ತಂತ್ರಜ್ಞಾನ ಯುಗದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೂ ಬೇಕಾದರೂ ನೇತು ಹಾಕಿಕೊಂಡು ಸುಖಿಸಬಹುದಿಲ್ಲಿ. ಅಂಕೆ ಶಂಕೆ ಇಲ್ಲದಿರೆ ಪದಗಳ ಆಮಶಂಕೆ! ನೀನೂ ಮಾಡಿರುವುದೂ ಅದೇ ಎಂದು ಹಳಿಯಬೇಡಿ.

ಅರಿಕೆಯೊ, ಸ್ವಗತಗಳೊ, ತುಮುಲಗಳ ಸಂತೆಯನ್ನು ತಡವಿ ಬಂದ ಅನುಭವ. ಪಟ್ಟದ್ದು ಪಾಡೋ, ಸುಖವೋ ಎಂದು ಹೇಳಲು ಏಕಮಾನವಿಲ್ಲ ಇಲ್ಲಿ. ನಮ್ಮ ಉದ್ದಗಲಕ್ಕೆ ಸರಿಯಾಗಿ. ಮೂಗುತಿ ಭಾರದಿಂದೋ ಅಥವಾ ಮೂಗೇ ಸೊಟ್ಟಗೋ  ನೀವೇ ನೋಡಿ ನಿರ್ಧರಿಸಬೇಕಷ್ಟೆ. 

ಕತೆಯೋ, ಪ್ರಬಂಧವೋ? ಕತೆಯಂತಹ ಪ್ರಬಂಧಗಳಾ? ಸ್ವಗತಗಳ ಸಂತೆಯಾ? ತನ್ನ ಬದುಕಿನ ತುಣುಕುಗಳಾ ತಲೆ ಬಾಲ ಕತ್ತರಿಸಿದ ವೃಕ್ಷ ಕಾಂಡದಂತೆ ಕಂಡರೂ ಭಿನ್ನ ಅಗೋಚರ ಧನಿಯಾಗಿ ನಿರಂತರವಾಗಿ ಕಾಡದೇ ಇರದು. 

ಹೊಸ ಹೊಸದಾದ ರೂಪಕಗಳು ಆಸ್ವಾದಿಸುವವರ ನಾಲಗೆಯ ರುಚಿ ಮೊಗ್ಗುಗಳನ್ನು ಕೆಣಕದೇ ಇರದು. ʼನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆʼ, ʼಕಸಿವಿಸಿ ತೊಟ್ಟಿಕ್ಕಿತ್ತುʼ. ʼನಾಲಗೆಯಲ್ಲೇನೋ ಬೇವಾರಸಿ ತೊಡರುʼ, ʼಕತ್ತಲು ಜಿಟಿಪಿಟಿಸುತ್ತಿತ್ತು!ʼ, ʼಎಲೆಯ ವಂದರಿಯಲಿ ಬಿಸಿಲಿನ ಜರಡಿʼ, ʼಸೈಕ್ಲೋನ್‌ ಸುರಿತʼ, ರೇಜಿಗೆಯ ಜಿಟಿ ಪಿಟಿ, ರೇಜಿಗೆಯ ಹಗಲು, “ನನ್ನದೋ ಬೇವಾರಸಿಯ ಚರ್ಯೆ”, ʼತಹ ತಹ ವಿರಹವಲ್ಲʼ, ʼಊಟಕ್ಕೆ ಕುಳಿತಾಗ ಮಾತು ಹೆಕ್ಕಿದ್ದಳು!ʼ, ʼನೆನಪಿಗೆಂದೂ ತೇಗುವುದಿಲ್ಲʼ, ʼನೆಳಲು ಚೆಲ್ಲುತ್ತಾಳೆʼ, ʼರಾಡಿ ಮುಕ್ಕಳಿಸಿದ ರೋಡುʼ, ʼನಗು ಗುಟುರಿದ್ದʼ, ʼಬೀದಿಯ ಕಾಮಾಲೆ ಮಂಪರಿನಲ್ಲಿ.ʼ, ʼಜಿಗುಟು ಹಗಲುʼ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲವು ತಾರಲೋಕದಿಂದ ಎಳೆದು ತಂದವು! ಖಂಡಿತ ನಮ್ಮ ಲೋಕದ್ದಲ್ಲವೇ ಅಲ್ಲ.


ಒಂದು ಬೇವಾರಸಿ ಟಿಪ್ಪಣಿಗಳು ಕತೆಯಿಂದ....


ಅಕ್ಷ್ಯೋಭ್ಯ ಕಡಿದಾಳನ್ನು ಕಟ್ಟಿಕೊಂಡು ಅವಳು ಹೆಣಗುವ ರೀತಿಗೆ ಅವಳ ಅನನ್ಯ ಪ್ರೀತಿಗೆ ಬೆರಗುಗೊಂಡಿದ್ದೇನೆ. ತಾನು ಮೂರನೆಯವಳು ಎಂಬ ಅರಿವಿದ್ದೂ ಅವನ ಮಾತಿಗೆ ಕಟ್ಟುವ ಕಲೆಗೆ ಮರುಳಾದವಳು ಅವಳು! ಅವನ ಆರ್ಕಿಟೆಕ್‌ ಕೈಗಳಿಗೆ ಸೋತವಳು. ಕೊನೆಯವರೆಗೂ ಸೋಲುತ್ತಾ ಬುದುಕುವಳು. ಮಗನನ್ನು ಆರ್ಕಿಟೆಕ್‌ ಆಗಿಯೇ ರೂಪಿಸುವಳು. ಸಣ್ಣ ಸಮಾರಂಭವೊಂದರಲ್ಲಿ ಅವಳು ತನ್ನ ಸವತಿಯನ್ನು ಎದುರಿಸುವ ಪರಿ ಅನನ್ಯವಾಗಿಸಿದ್ದಾರೆ ಕತೆಗಾರ.  ಅವಳ ತುಮುಲಗಳ ಜೊತೆಗೆ ಹೋಗಿ ಇದ್ದು ಬಂದಿದ್ದೇನೆ. ಅವಳ ಕಣ್ಣೀರಿಗೆ ಜೊತೆಯಾಗಿದ್ದೇನೆ. ಅವನ ಜೊತೆಗಿನ ಬಂಧವನು ಅತ್ಯಂತ ನಾಜೂಕಾಗಿ ಪೋಣಿಸಿಕೊಟ್ಟಿದ್ದಾರೆ. ವಾರಸುಗಳಿಲ್ಲದ ಗೆರೆಗಳು…. ಎಲ್ಲೂ ಹೇಳಲಾಗದ ಸಂಕಟಗಳ ಕಡತ. ಕೊನೆಗೂ ಪ್ರಶಸ್ತಿ ಪಡೆಯುವಾಗಲೂ ಹೇಳಲಾಗದೇ ಮಗ ಮತ್ತು ಅಮ್ಮನ ತೊಳಲಾಟಗಳು. ಎಷ್ಟು ನೋವುಗಳನ್ನು ಹಿಡಿದಿಡಬಹುದೋ ಅಷ್ಟನ್ನು  ಹಿಡಿದಿಟ್ಟ ಪರಿ ಅನನ್ಯ.



         

ಬದುಕಿನ ಉತ್ಸವಗಳಲ್ಲಿ ಅವನಿಲ್ಲದ ಖಾಲಿತನ, ಸಾಂಗತ್ಯವಿಲ್ಲದ ವಿರಹದ ದಿನಗಳ ಮರೆವಣಿಗೆ. ಸಾವಿನಲ್ಲೂ ಸಿಗದ ನೆಮ್ಮದಿ. ಒಂದು ಬೇವಾರಸಿ ಸಾವು. ದುಃಖದ ದಂಡೆಯಲಿ ಅವನ ನೆನಪಿನ ಮೆರವಣಿಗೆ. ಹೊಯ್ದಾಟಗಳು. ಯಾವುದು ನಿಚ್ಚಳವಾಗದಂತಹ ಸಂದಿಗ್ಧತೆ. ಯಾವುದೇ ಚೌಕಟ್ಟಿಗೆ ಸಿಗದ ಯಾತನೆಗಳ ಸಂತೆ. ತಂದೆ ಅನಿಸಿಕೊಂಡವನ ಹಸಿ ಬಿಸಿ ನೆನಪುಗಳು ನಮ್ಮನ್ನೂ ಕಲುಕುತ್ತವೆ. ಸಿಗದ ದುಃಖ ಕಾಡುತ್ತದೆ. ನಮ್ಮನ್ನೂ ಹೆಪ್ಪುಗಟ್ಟಿಸಿ ಅಳಿಸುತ್ತವೆ. ಒಳಗೊಳಗೇ ಅಳುತ್ತೇನೆ. 

         ಗುಟುಕು ಪ್ರೀತಿಗೆ ಕಾತರಿಸಿ ಕಾಯುವ ಕಷ್ಟಗಳ ಸಂಕೋಲೆ. ಅದಮ್ಯ ಜೀವನೋತ್ಸಾಹದಲ್ಲಿ ಅನಾಮಿಕವಾಗಿ ಉಳಿವ ತಂದೆಯ ಹೆಸರು ಮತ್ತು ಅವರ ಸಂಬಂಧಗಳು. ತುಮುಲಗಳ ಕಂತೆಯನ್ನು ಆರ್ಕಿಟೆಕ್ಚರ್‌ನ ಮೂಸೆಯಲ್ಲಿಟ್ಟು ನೋಡುವುದು ಸಹ ಕತಾ ಪ್ರಪಂಚಕ್ಕೆ ಹೊಸ ಕಿಂಡಿ. ಎಂದೂ ದಕ್ಕದ ತಂದೆ. ಕತೆ ಹೇಳದ ಏನನ್ನೂ ತಂದು ಕೊಡದ ತಂದೆ! ರಸಿಕೆಯಾಗಿ ಸೋರುವ ಸಣ್ಣ ಹುಣ್ಣಿನಂತೆ ತಂದೆಯ ನೆನಪು. ಒಂದು ಮಾಯದ ಗಾಯ.

ಕತೆ ತೆರೆದಿಡುವ ಟಿಸಿಲುಗಳು ನೂರಾರು. ಭಾವ ಸ್ಪರ್ಶಕ್ಕೆ ದಕ್ಕದ ಬರಡು ಬದುಕು. ಇಂತಹ ನೂರಾರು ಟಿಸಿಲುಗಳಿಂದ ತೊಟ್ಟಿಕ್ಕುತ್ತಿದೆ ನೋವಿನ ನೂರಾರು ಕತೆಗಳು. ನೂರಾರು ಭಾವ ಪ್ರಪಂಚದ ಸಾವಿರ ಬಿಂದುಗಳು. ಪ್ರತಿ ಬಿಂದುವಿನ ಕತೆಯೂ ಭಿನ್ನ. ಇಂತಹ ಒಂದು ಟಿಸಿಲಿನಲ್ಲದರೂ ಬಂದು ಕುಳಿತು ಕತೆ ಕೇಳಿ ಹೋಗಿ.

-----

ಹುತ್ತಗಟ್ಟದೇ ಇಂತಹ ಪ್ರಯತ್ನ ಸಾಧ್ಯವಿಲ್ಲ. ಎಲ್ಲರಂತಲ್ಲದ ಹೊಸ ಕಥಾ ಪ್ರಪಂಚಕ್ಕೆ ಪಾದವಿಟ್ಟ ಅನುಭವ. 


ವಸ್ತಾರೆ ಕತೆಗಳಾಲಿ ಕವಿತೆಗಳಾಗಲಿ ಸುಲಭಕ್ಕೆ ದಕ್ಕಲಾರವು. ಪ್ರಯತ್ನ ಪಟ್ಟು ದಕ್ಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಕೈಯ ಸಂಧಿಯಲಿ ಜಾರಿ ಹೋಗುವವು. ಸುಲಭಕ್ಕೆ ಗ್ರಹಿಸಲು ಸಾಧ್ಯವಾಗದು ಎಂದು ವಾಚಿಕೆಯ ಪ್ರಾರಂಭದಲ್ಲೇ ಶಾಂತಾ ಮಣಿ ಹೇಳಿದ್ದಾಳೆ ಜಾಗೃತೆ! 

ಹಾಗಾಗಿ ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ. ದಕ್ಕುವುದು ದಕ್ಕಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಬದುಕೆಂದರೆ ಮುಕ್ತಾಯವಾಗದ ಕೊನೆ ಮೊದಲಿಲ್ಲದ ಹುಡುಕಾಟ. ಎಂಬುದನು ಸದಾ ನೆನಪಿಸುತ್ತಾ ಕರಣಗಳಲಿ ಮತ್ತೆ ಮತ್ತೆ ಕೇಳುತಿದೆ “ನಿಂತಲ್ಲೇ ನಾನು ಹೆಪ್ಪಿ ಬಿಟ್ಟೆ” ಎಂಬ ಪದಪುಂಜ. ನಿಮ್ಮ ಓದಿಗೆ ದಕ್ಕಿದರೆ ತಿಳಿಸಿ. 

ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ ದಕ್ಕುವುದು ದಕ್ಕಿಸಿಕೊಳ್ಳುವುದೂ ನಿಮ್ಮ ಕೈಯಲ್ಲೆ ಇದೆ ಎನ್ನುತ್ತಾ ಈ ಮೋಟು ಲೇಖನಕ್ಕೆ ಪೂರ್ಣ ವಿರಾಮ. ಮತ್ತೆ ಸಿಗೋಣ.

Wednesday, May 4, 2022

ನೆನಪುಗಳನ್ನು ನೇಣಿಗೇರಿಸಬೇಕು...

ಹಮಾರ ಬಜಾಜ್‌-




    ನೆನಪುಗಳನ್ನು ನೇಣಿಗೇರಿಸಬೇಕೆಂದು ಹೊರಟವನಿಗೆ ಸಿಕ್ಕ ಹಳೆ ಹೊತ್ತಗೆಯ ನೆನಪುಗಳು ಕಾಡುತಲಿವೆ. ಬೇಡವೆಂದರೂ ಕಹಿಯೇ ಉಳಿದ ಕಾಫಿ ಚರಟದಂತೆ ನೆನಪುಗಳು ಕಾಡುತಲಿವೆ. ಕುಡಿದ ಕಹಿ -ಸಿಹಿ ಕಾಫಿಯ ನೆನಪು ಮಾಸಿದಂತೆ ಕುಣಿಯುತ್ತೆ ಮನಸ್ಸು. ಮತ್ತೇನಕ್ಕೋ ಧ್ಯಾನಿಸುತ್ತೆ ಮನಸ್ಸು. ಮೂಲೆಯಲಿ ಮಲಗಿದ್ದ ಸಣ್ಣ ವೃಣವೊಂದನು ಕೆದಕಿ ಕೆದಕಿ ಮಹಾ ವೃಣವಾಗುವಂತೆ ರಾಡಿ ಎಬ್ಬಿಸುತ್ತೆ.




ನೆನಪುಗಳು, ನೆನಪುಗಳ ಶವ ಪೆಟ್ಟಿಗೆಯಿಂದ ಹೊರ ಬರಲಾರದಂತೆ ಮೊಳೆ ಜಡಿಯಬೇಕು ಬಿಡಿಸಿಕೊಳ್ಳಲಾರದಂತೆ, ಆಗುತ್ತಿಲ್ಲ. ಅದು ಕಾಡಿದಂತೆ ಮತ್ಯಾವುದೂ ಕಾಡವುದಿಲ್ಲ. ಸುಡುವ ಬೆಳದಿಂಗಳು. ನೆನಪಿಗೆ ವಾರಸುದಾರನಿಲ್ಲ. ಹೊರ ಹಾಕಿದರೂ ಹಾಕದೇ ಇದ್ದರೂ ನೆನಪುಗಳು ಒಮ್ಮೊಮ್ಮೆ ಮೆರವಣಿಗೆ ಹೊರಡುತ್ತವೆ. ತಟ್ಟುತ್ತವೆ. ದಿಗ್ಗನೇಳುತ್ತವೆ ಮುಂಗಾರಿನ ಮೋಡದಂತೆ. ಕಾಡುವ ಅನಂತ ಪ್ರಲೋಭನೆಗಳೂ ಇದರ ಎದುರು ಮಂಡಿಯೂರಲೇ ಬೇಕು ಜೋಗಿಯಂತೆ. ಅಕ್ಷರವೇ ಅಳಿಯುತ್ತವೆ ಇನ್ನೆಲ್ಲಿಯ ನೆನಪುಗಳು ಎಂಬ ಸಿನಿಕ ವಾಕ್ಯವೂ ಕ್ಷಣಿಕ. ಮತ್ತೆ ತೆರೆಯಂತೆ ದಡಕ್ಕೆ ಬಡಿಯುತ್ತವೆ. 


ಇಂತಹ ನೆನಪುಗಳ ನೊರೆ ಉಕ್ಕಿಸುವ ಕತೆಗಳ ಗುಚ್ಚ ನನ್ನೆದುರಿಗಿದೆ. ಎಲ್ಲಾ ಕತೆಯ ಹೆಣಿಗೆಯೂ ವಿಶಿಷ್ಟವಾದ ಪ್ಲಾಟ್‌ ಫಾರಂನಲ್ಲಿ ಕಟ್ಟಿರುವಂತಹ ನಿರ್ಮಿತಿ. ಎಲ್ಲೆಲ್ಲೂ ನೆನಪುಗಳದ್ದೇ ಮುಖ್ಯ ಭೂಮಿಕೆ.

ನೀವಾದರೂ ಓದಿ ಕತೆಗಳ ಸಿಕ್ಕನ್ನೂ ಬಿಡಿಸಿಕೊಳ್ಳಿ. ಒಂದೊಂದು ಕತೆಗಳು ತೆರೆಗಳಂತೆ ನನ್ನನ್ನು ಮತ್ತೆ ಮತ್ತೆ ತಟ್ಟುತ್ತಲೇ ಇವೆ. ನಿಮಗೂ ತಟ್ಟಿದರೆ ಹೇಳಿ. ತಕರಾರಿದ್ದರೂ.

 

ಯಾವ ಉಡುಗೊರೆ ಕೊಡಲಿ-

ಭಟ್ಟರ ಸಿನೆಮಾ ನೆನಪು ಮಾಡಿಕೊಡುವಂತಹ ವಿಶಿಷ್ಟ ಕತೆ ಯಾವ ಉಡುಗೊರೆ ಕೊಡಲಿ. ಕತೆಯ ಎಳೆ ವಿಧಾಯದಲಿ ಮಡುಗಟ್ಟುವ ವಿಶಾದ. ವಿಶಾಧವೇ ಕತಾ ನಾಯಕನೊ ಎಂಬಂತೆ ಭಾಸವಾಗುತ್ತದೆ. ಅದಮ್ಯವಾಗಿ ಪ್ರೇಮಿಸುವ ಗಂಡು ಹೆಣ್ಣು ವಿಧಾಯವನ್ನೇ ಅತ್ಯಂತ ರೋಚಕವಾಗಿ ವಿಧಾಯದ ಬಿಸಿ ಓದುಗನಿಗೂ ತಟ್ಟುವಂತೆ ವರ್ಣಿಸುತ್ತಾ ಕತೆಗಾರ ಕತೆಯಲ್ಲಿ ಸಾಧಿಸುವ ತಾಧ್ಯಾತ್ಮ ಅಪೂರ್ವವಾದುದು. ಎಲ್ಲಿಯೂ ಒಂದೇ ಒಂದು ವಾಕ್ಯವೂ ಭಾರವಾಗದಂತೆ ವಿಧಾಯದ ಕಹಿಯೇ ಹೃದಯ ತುಂಬುವಂತಹ ಮ್ಯಾಜಿಕ್ ಕತೆಯುದ್ದಕ್ಕೂ ಸಾಧ್ಯವಾಗಿಸಿದ್ದು ಕನ್ನಡದ ಕತೆಗಳ ಮಟ್ಟಿಗೆ ವಿಶೇಷ.‌ ಎರಡು ಹೃದಯಗಳ ತೊಳಲಾಟವನ್ನು, ಅವರು ಜೊತೆಯಾಗುವರಾ ಇಲ್ಲವಾ ಒಂದೂ ಗೊತ್ತಾಗದಂತೆ ಮುಕ್ತ ಅಂತ್ಯ ಕಾಣುವ ವಿಶಿಷ್ಟ ಕತೆ.

ಜೆಜೆ ಬಂದಿದ್ದ –

            ಇಬ್ಬರು ಗೆಳೆಯರ ನಡುವೆ ನಡೆವ ಆಪ್ತ ಮಾತುಕತೆಯಂತೆ ಕಂಡರೂ ಇಲ್ಲೊಂದು ವಿಶೇಷತೆ ಇದೆ. ಮಾನವ ಸಂಬಂಧಗಳ ನಡುವೆ ಗುಪ್ತವಾಗಿ ಹರಿಯುವ ಹೊಟ್ಟೆ ಕಿಚ್ಚು ಕತೆಯುದ್ದಕ್ಕೂ ಹರಿದು ಅದೇ ಕತಾ ನಾಯಕನಿರಬೇಕೆಂಬ ಗುಮಾನಿ ನಮಗೆ ಹುಟ್ಟಿಸುತ್ತದೆ. ಪ್ರೀತಿಸಿದ  ಹುಡುಗಿಯನ್ನು ಬಿಟ್ಟುಕೊಟ್ಟ ನೆನಪುಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಈ ಕತೆಯ ಪ್ರಧಾನ ಭೂಮಿಕೆಯು ನೆನಪೇ.  ಹೆಚ್ಚು ಕಡಿಮೆ ಮೇಲ್ಮೆಗಳ ತಾಕಲಾಟಗಳು ಕತೆಯ ನೇಯ್ಗೆಯಲ್ಲಿ ಸೇರಿಸಿ ಅತ್ಯಂತ ಸುಶಿಕ್ಷಿತರೂ ಈ ಮೇಲ್ಮೆಗಳ ಹೊಡೆದಾಟದಲ್ಲಿ ಭಾಗಿದಾರರು ಎಂಬ ಅಚ್ಚರಿಯು ಟಿಸಿಲೊಡೆಯುತ್ತದೆ. ಜೆಜೆಯ ವಿಶಿಷ್ಟ ವಿಕ್ಷಿಪ್ತ ವ್ಯಕ್ತಿತ್ವದ ಹೊರತಾಗಿಯೂ ಅದು ನಮಗೆ ಕಾಡುತ್ತದೆ.

ಹಮಾರ ಬಜಾರ್‌-

ಹಿಮ್ಮುಖವಾಗಿ  ಚಲಿಸುವ ತಂದೆಯ ನೆನಪಿನ ವಿಶಿಷ್ಟ ನೀಳ್ಗತೆ  ʼ ಹಮಾರ ಬಜಾಜ್‌ʼ. ಡೈರಿಯ ಪುಟಗಳಿಂದ ಹಿಮ್ಮುಖವಾಗಿ ಶುರುವಾಗಿ ಅಂತ್ಯದಲ್ಲಿ ಮುಂದೆ ಚಲಿಸುತ್ತಾ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತದೆ.

ತಂದೆಯ ನೆನಪಿನಿಂದ ಹೊರ ಬರಲಾರದ ಮಗ ತನಗೆ ತಾನು ಬರೆದುಕೊಂಡ ಸ್ವಗತದ ಕಿಂಡಿಯಂತೆ ಕೆಲವೊಮ್ಮೆ ಭಾಸ ಆಗುವುದು. ನೆನಪೆಂಬ ಗಾಳಿ ಪಟ ಮನದ ತುಂಬಾ ಹಾರಾಡುವಂತೆ ಮಾಡಿ ವಿಶಿಷ್ಟವಾಗಿಸಿದ್ದಾರೆ ವಿಕ್ರಂ.

ಬಜಾಜ್‌ ಸ್ಕೂಟರ ಅವರ ನೆನಪಿನ ಅಥವಾ ಅವರದ್ದೇ ಒಂದು ಭಾಗವೇನೋ ಅನ್ನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾರೆ. ಸಾವಿನಿಂದ ಮೊದಲ್ಗೊಂಡು ವಿಚಿತ್ರ ಸನ್ನಿವೇಶಗಳನ್ನು ವಿರಚಿಸುತ್ತಾ ಅವರ ಬದುಕಿನ ವಿವರಗಳನ್ನು ಡೈರಿಯ ಪುಟಗಳ ಮೂಲಕ ಮರಳಿಸುವ ಪ್ರಯತ್ನ. ಗಾಢ ವಿಶಾದದಲಿ ಅದ್ದಿ ತೆಗೆದ ಚಿತ್ರದಂತೆ ಚಿತ್ತದಲಿ ಉಳಿದು ಹೋಗುತ್ತದೆ. ತಂದೆಯ ಬದುಕಿನೊಂದಿಗೆ ಆಪ್ತವಾಗಿ ತಳುಕು ಹಾಕಿ ಕೊಂಡವರನ್ನೆಲ್ಲಾ ಇಲ್ಲಿ ಮತ್ತೊಮ್ಮೆ ಜೀವಂತಿಸಿದ್ದಾರೆ. ತಂದೆಯ ಗೆಳೆಯರಾದ ಪೆಜತ್ತಾಯರು, ಉಡುಪರನ್ನು ಪುನಃ ಬದುಕಿಸಿ ಆಪ್ತವಾಗಿಸಿದ್ದಾರೆ.

ಯಾರನ್ನೇ ಆಗಲಿ ನಾವು ಪ್ರಯತ್ನ ಪೂರ್ವಕ ನೆನಪು ಮಾಡಿಕೊಳ್ಳಬೇಕೊ ಅಥವಾ ಅದಾಗಿಯೇ ನೆನಪುಗಳು ತೆರೆಗಳಂತೆ ಮನ ಪಟಲದಲಿ ಆವರಿಸುವುದೋ ಎಂಬ ಗುಮಾನಿ ನನಗೆ ಕಾಡುವುದು.

ತೀವ್ರ ವಿಶಾದಕ್ಕೂ ಎಳಸದೇ ಕತೆ ಸತ್ವಯುತವಾಗಿ ಅಂತ್ಯ ಕಾಣುವುದು ಕತೆಯ ಮಗದೊಂದು ವಿಶೇಷತೆ.



Tuesday, May 18, 2021

ಓದಲಾರೆ ಓದದೆಯೂ ಇರಲಾರೆ!!



ತೀವ್ರತೆ, ತುಮುಲ, ಕಲ್ಪನೆಗಳಿದ್ದರೆ ಮಾತ್ರ ಕವಿತೆ ಹುಟ್ಟಬಹುದೇನೊ? ಕತೆ ಕಟ್ಟಬಹುದೇನೋ? ತೀವ್ರ ತಿರಸ್ಕಾರ, ವಿಷಾದ ಜೊತೆಯಾದಾಗ ಹುಟ್ಟುವ ಭಾವಕ್ಕೆ ಕತೆಯ ಚೌಕಟ್ಟು ತೊಡಿಸಬಹುದೇನೋ? 

ಸಣ್ಣಗೆ ಜಿನುಗುವ ಲಾಟಾನು ಬೆಳಕಿನಲಿ ಕವಿ ಅನುಭವಿಸಿದ ಅತೀವ ಭಾವನೆಗಳನ್ನು ಕೊನೆ ಮೊದಲಿಲ್ಲದ ವಿಷಾದದಲ್ಲಿ ಅದ್ದಿ ತೆಗೆದಂತಹ ಬರೆಹ. 

ಅಪ್ಪ, ಲೀಲಾವತಿ ಮತ್ತು 'ನಾನು' ಎಂಬ ಮೂರು ಭಿನ್ನ ಟಿಸಿಲುಗಳಲ್ಲಿ ಹಬ್ಬಿ ಹರಡಿದ  ಕಥನ ಕವನ! ಹೃದಯದ ರಕ್ತ ಬಸಿದು ಬಿಡುವಂತಹ ನಿಗಿ ನಿಗಿ ಸುಡು ಸಾಲುಗಳ ನಡುವೆ ಹರಡಿದ ಕತೆ. ಭಿನ್ನ ರೂಪಕಗಳಲ್ಲಿ ಕಸಿ ಕಟ್ಟಲಾದ ಕತೆ. ಈ ಪದಗಳು ಹುಟ್ಟು ಹಾಕುವ ಭಾವ ತೀವ್ರತೆ ನನ್ನಲ್ಲಿ ಮಾತ್ರವಾ ಎಂದು ಆಲೋಚಿಸುತ್ತೇನೆ. ಇಲ್ಲ. ಮುಂಬರಹ, ಹಿಂಬರದ ನುಡಿಗಳಲ್ಲೂ ಅವೇ ಮಾತು. ಕೆಲವೊಮ್ಮೆ ಆಲೋಚಿಸುತ್ತೇನೆ ಓದು, ಬರೆಹ ಎಲ್ಲವೂ            ನಿರರ್ಥಕವೆಂದು. ಎಲ್ಲವೂ ಅಯೋಮಯ. 

ಕಾದಂಬರಿಯ ಕೆಲವು ಸಾಲುಗಳು...

1. ನಿರಾಕರಣವೇ ಬಾಳಿನ ಬೆಳಕು.

ಒಮ್ಮೆಯಾದರೂ ಯಾರಿಂದಲಾದರೂ ತಿರಸ್ಕೃತಗೊಳದೇ ಹೋದರೆ ಕವಿತೆ ಜಾಳಾಗುತ್ತದೆ. ತಿರಸ್ಕೃತಗೊಂಡ ಜೀವಕ್ಕೂ ಕವಿತೆಗೂ ಜಗತ್ತನ್ನೇ ಗೆಲ್ಲುವ ಧೈರ್ಯ ಬರುತ್ತದೆ.

2. ನಿರೂಪಕ ಹೇಳುತ್ತಾನೆ...

ಪದ್ಯ ಬರೆಯಬಾರದು.

ಬರೆದರೆ ಅದು ಮತ್ತೊಬ್ಬರ ವಶವಾಗುತ್ತದೆ. ನಾವು ಪಳಗಿಸದೇ ಹೋದರೂ ಅವರು ಅದನ್ನು ಪಳಗಿಸುತ್ತಾರೆ. ಕವಿತೆಯನ್ನು ಪಳಗಿಸಿದರೆ ಕವಿಯನ್ನು ಪಳಗಿಸಿದಂತೆ ಅಂದುಕೊಳ್ಳುತ್ತಾರೆ. ನೀವು ನನ್ನನ್ನು ಪಳಗಿಸಲಾರಿರಿ. ನನ್ನ ಕವಿತೆಯನ್ನು ಕೂಡ ಎಂದು ಸಿಟ್ಟಿನಿಂದ ಹೇಳಬೇಕು ಅಂದುಕೊಳ್ಳುತ್ತೇನೆ, ಸಿಟ್ಟು ಕೂಡ ಪದ್ಯದ ಹಾಗೆಯೇ. ಮತ್ತೊಬ್ಬರ ವಶವಾದರೆ ಅದನ್ನೂ ಅವರು ಪಳಗಿಸಬಲ್ಲರು.

3. ....

ನಾನು ಕವಿತೆಗಳನ್ನು ಅನುವಾದಿಸಲಿಕ್ಕೇ ಹೋಗಲಿಲ್ಲ. ಅನುವಾದವೆಂದರೆ ಮಕ್ಕಳ ಪೋಟೋ ತೆಗೆದಂತೆ. ಮಕ್ಕಳಂತೆಯೇ ಕಾಣಿಸುತ್ತದೆ. ಜೀವ ಇರುವುದಿಲ್ಲ.

ಜೀವ ಇಲ್ಲದ ಪದ್ಯ ಬರೆಯುವುದಕ್ಕೆ ಹೋಗಬಾರದು.

ಅಂಥ ಪದ್ಯ ಬರೆದರೆ ಒಂದೋ ಕವಿ ಸತ್ತಿರುತ್ತಾನೆ. ಅಥವಾ ಪದ್ಯ.

ಎರಡೂ ಸತ್ತಿರುವುದನ್ನೂ ನೋಡಿದ್ದೇನೆ. ಸತ್ತ ಕವಿ ಸತ್ತು ಹೋದ ಪದ್ಯಗಳನ್ನು ಹೆರುತ್ತಾನೆ. ಅವುಗಳನ್ನು ತೋರಿಸಿ ನನ್ನ ಪದ್ಯಗಳಿವು ಅಂತ ಹೇಳುತ್ತಾನೆ.

4. ..

ಕವಿತೆ ಬರೆಯುವುದು ಅಂದರೆ ಕಳೆದುಕೊಳ್ಳುವುದು. ಬೇರೆ ಯಾರಿಗೋ ಕೊಟ್ಟು ಬಿಡುವುದು. ಸೆರೆಮನೆಯಲ್ಲಿ ಹೆತ್ತ ಮಗುವನ್ನು ನಂದನದಲ್ಲಿ ಬಿಟ್ಟು ಬರುವುದು. ಮತ್ತೆ ಸೆರೆಯಾಗಿ ಏಕಾಂಗಿಯಾಗಿ ಬದುಕುವುದು. ಹಾಗಾಗಿ ಪದ್ಯ ಬರೆಯಲೇ ಬಾರದು. ಹಾಗಾದರೂ ಅದು ನನ್ನ ಜೊತೆಗಿರುತ್ತದೆ.

5. 

ಈ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು, ಓದಿಯೂ ಎಲ್ಲೋ ಬಿಟ್ಟುಹೋದ ಒಳ್ಳೆಯ ಇಮೇಜುಗಳು, ಒಳ್ಳೆಯ ಸಾಲುಗಳು ಸಾವಿರಾರು ಇವೆ, ಅವುಗಳನ್ನು ಹಿಡಿಯಬೇಕು. ಈ ಕಾದಂಬರಿ ಒಂದು ಥರ ಅಷ್ಟು ಸುಲಭಕ್ಕೆ ಅರ್ಥಕ್ಕೆ ಸಿಗದ ಒಂದು ಮೊಂಡು ಕವಿತೆಯೇ. ನಾವೂ ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು. ಅಥವಾ ಅದರ ಗುಂಗಲ್ಲೇ ಇದ್ದು ಬಿಡಬೇಕು. ಥೇಟು ಲಕ್ಷ್ಮಣ ನೀಲಂಗಿ ಅರ್ಥಾತ್ ಎಲ್, ತನ್ನ ಲೀಲಾಳ ಗುಂಗಲ್ಲೇ ಇದ್ದು ಬಿಡುವಂತೆ.

- ಹಿಂಬರಹದಿಂದ ವಿಕಾಸ್.



***

ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು. ಎನ್ನುವ ತೀವ್ರ ಸಾಲುಗಳನ್ನು ನೆನಪಿಸುತ್ತಾ ಕವಿಯ ಅಸಾಹಕತೆ ಜೊತೆಗೆ ಕವಿತೆಯ ನಿರರ್ಥಕತೆ ಕಾಡುತ್ತಾ ಇರುವಾಗ... ಹೀರಿಬಿಟ್ಟ ಕಾಫಿ ಲೋಟದ ಘಮಲು ಹಾಗೆಯೇ ಉಳಿದಿದೆ. ಈ 'ಎಲ್' ನಂತೆ.


 

Saturday, May 1, 2021

ಯಾಮಿನಿ ಬಂದಿದ್ದಳು!!



12 ವರ್ಷಗಳ ಬಳಿಕ ಯಾಮಿನಿ ಬಂದಿದ್ದಳು. ಅನೇಕ ಬಾರಿ ಬಾ ಎಂದರೂ ಬಂದಿರಲಿಲ್ಲ.  ಅವಳ ಜೊತೆ ಗೆಳೆಯ ಚಿರಾಯು  ಸಹ ಬಂದಿದ್ದ. ಹಗಲು ರಾತ್ರಿ ಅವಳೊಂದಿಗೇ ಮಾತೇ ಮಾತು. ಕಾಫಿ ಕಪ್ ಹಿಡಿದು ಅದನ್ನೇ ಮರೆತು ಅವಳ ಕತೆಯಲ್ಲಿ ತೇಲಿದ್ದಿದೆ. ನಿದ್ದೆಯಲ್ಲೂ ಅವಳ ಕನವರಿಕೆ. ಹೆಂಡತಿಗಂತೂ ವಿಪರೀತ ಹೊಟ್ಟೆ ಕಿಚ್ಚು. ಎನಷ್ಟು ಅವಳೊಂದಿಗೆ ಮಾತು. ಏನೋ ಕುತೂಹಲ ಅವಳಿಗೆ. ಸಣ್ಣ ಸಂಶಯ. ಅಂತಹದ್ದೆನಿದೆ ಅವಳಲ್ಲಿ? ಇವಳ ಪ್ರಶ್ನೆ. ಚೂಪು ಮೂಗಿನ ನವಿರು ಗಲ್ಲದ ಮುದ್ದಾದ ಹುಡುಗಿ. ಏನಿಲ್ಲ ಅವಳಲ್ಲಿ? ವಿವರಣೆಗೆ ಕುಳಿತರೆ ತೇಜಸ್ವಿಯ ಕತೆಗಿಂತಲೂ ರೋಚಕವಾಗಿ ಹೇಳಬಲ್ಲಳು. ಹಾಡಲು ಹೇಳಿದರೆ ಗಂಗೂಬಾಯಿ. ಅತ್ಯುತ್ತಮ ವಿಮರ್ಶಕಿ. ಎದೆಯಲ್ಲೊಂದು ಪ್ರೀತಿಯ ಝರಿ ಜೀವಂತ. ಇಂತಿಪ್ಪ ಯಾಮಿನಿ...

12 ವರ್ಷಗಳ ತನ್ನ ಕತೆಯನ್ನು ಬಿಚ್ಚಿಟ್ಟಳು. ಕರೋನ ಬರುತ್ತದೆಂದು ಹೆಂಡತಿ ಹೆದರಿಸಿದರೂ ಕೇಳದೆ ನಾವಿಬ್ಬರೂ ಒಂದೆರಡು ದಿನ ಹಾಯಾಗಿ ಬೆಂಗಳೂರಿಗೆ, ಶಿವಮೊಗ್ಗಕ್ಕೆ, ಯಲ್ಲಾಪುರ, ಸುಬ್ರಮಣ್ಯ ಸುತ್ತಿ ಸುಳ್ಯದ ಅವಳ ಕಾಡುಮನೆಯಲ್ಲಿ ಒಂದೆರಡು ದಿನವಿದ್ದು ಬಂದೆವು. ಪ್ರಯಾಣದ ನಡುವೆ ಶೃದ್ಧಾ ಶರ್ಮಾ ಸೇರಿಕೊಂಡಳು.

ನಮ್ಮೆಲ್ಲರ ಕಣ್ಮಣಿಯಾದವಳು ಒಲಿದದ್ದು ಮಾತ್ರ ಚಿರಾಯುವಿಗೆ. ನಾವು ಒಲಿಸಿಕೊಳ್ಳಲು ಪ್ರಯತ್ನಿಸಿಲ್ಲವೆಂಬುದು ಶುದ್ಧ ಸುಳ್ಳು! ಒಲಿದಿಲ್ಲವಷ್ಟೇ. ಹಾಗಂತ ಚಿರಾಯುವಿನ ಹೆಂಡತಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಒಲಿದಿದ್ದು ಗಿರೀಶ್ ಗೆ ಇರುವುದು ಚಿರಾಯುವಿನ ಜೊತೆ!!

ಅವಳು ಬಂದ ದಿನ ರಾತ್ರಿ ಪೂರಾ ಜಾಗರಣೆ. ಓರೆ ಕೋರೆ ಗೆರೆಗಳಂತೆ ಚದುರಿದ ರೇಖೆಗಳಂತೆ ತನ್ನ ಕತೆ ಹೇಳುತ್ತಾ ಕೂತಿದ್ದಳು. ತಾನೇ ಕನ್ನಡಿ ಮುಂದೆ ನಿಂತು ಕತೆ ಹೇಳಿ ಕೊಳ್ಳತೊಡಗಿದಳು. ತನ್ನ ತುಮುಲಗಳನ್ನು, ಒಳತೋಟಿಗಳನ್ನು ಹೇಳುತ್ತಾ ಬೆತ್ತಲಾಗತೊಡಗಿದಳು. 

ಕಮಲಶಿಲೆಯಲ್ಲಿ, ಶಿವಮೊಗ್ಗೆಯಲ್ಲಿ ಚಿರಾಯು ಕಳೆದ ದಿನಗಳು, ಅವನೊಂದಿಗಾದ ಮಾತು ಕತೆಯ ವಿವರಗಳು. ಆತನ ಕತೆಗಳು. ಚಿರಾಯುವಿನ ತಂದೆಯ ತಿರಸ್ಕಾರ, ಸಿಕ್ಕ ಪುರಸ್ಕಾರ. ಯಾವುದು ಶಾಶ್ವತ? ಯಾವುದು ನಶ್ವರ? ಎಂಬ ತೊಳಲಾಟಗಳು. ಅವನ ಹೋರಾಟದ ದಿನಗಳು ಎಲ್ಲವೂ ಮಾತಿನ ನಡುವೆ ಜಾಗ ಮಾಡಿಕೊಂಡವು. ಬದುಕಿನ ನಾಜೂಕಿನ ಸಂದರ್ಭದಲ್ಲಿ ಚಿರಾಯುವಿನಿಂದ ದೂರಾಗಲು ಇಂಗ್ಲೆಂಡ್ಗೆ ಹೊರಟು ನಿಂತ ಕ್ಷಣಗಳು. ವರುಷಗಳ ಬಳಿಕ ಮತ್ತೆ ಚಿರಾಯುವನ್ನೇ ಸೇರಿಕೊಂಡ ಕತೆ. ಆತನನ್ನು ಪ್ರೇರೇಪಿಸಿ ಬರೆಯಿಸಿದ ಕತೆಗೆ ಬಹುಮಾನ ಬಂದಿದ್ದು. ಜೀವನದಲ್ಲಿ ನಡೆದ ಕತೆಗಳನ್ನು ಹೆಕ್ಕಿ ಹೇಳಿದ್ದಳು. ಯಾವುದೂ ಇಲ್ಲಿ ನೇರವಿಲ್ಲ. ಆದರೂ ವಕ್ರವಲ್ಲ. ಅವಳು ಅವನ ಬದುಕಿನ ವಿವರಗಳ ಗುಚ್ಚಗಳು ಅಚ್ಚರಿ ಹುಟ್ಟಿಸುವಂತಹುದು. ಹೀಗೆ ಆಕೆ ಹೇಳಿದ ಸಣ್ಣ ಸಣ್ಣ ವಿವರಗಳು ಎರಡು ದಿನದಿಂದ ನನ್ನ ಎದೆಯಲ್ಲಿ ಗುಂಯ್ ಗುಡುತ್ತಿದೆ. ಹೀಗೂ ಜೀವನವಿರಬಹುದೇ ಎಂಬ ತುಮುಲದಲ್ಲಿರುವೆ. ಕತೆಗಳಿಗಿಂತಲೂ ಕೆಲವರ ಬದುಕುಗಳು ವಿಚಿತ್ರ. ಎರಡು ತಿಂಗಳಿಗಾಗುವಷ್ಟು ಕತೆ ಹೇಳಿ ಹೋಗಿದ್ದಾಳೆ. ಒಂದೊಂದೇ ನವಿಲುಗರಿಯಂತಹ ಕತೆಗಳನ್ನು ಎದೆಯ ಗೂಡಲ್ಲಿ ಬಚ್ಚಿಡಲು ಪ್ರಯತ್ನಿಸುತ್ತಿರುವೆ ಆಗುತ್ತಿಲ್ಲ. ಕತೆಗಾರ್ತಿ ಯಾಮಿನಿಯ ಚಮಕ ಪ್ರತಿ ವಾಕ್ಯದಲ್ಲೂ ಅನುರಣಿಸುತಿದೆ. ನನ್ನ ಎದೆಯ ಗೂಡಲ್ಲಿ ಅರಳಲು ತವಕಿಸುತ್ತಿದೆ. ಕಣ್ಣು ಮಾತಿಗಿಳಿದಾಗ ಬಾಯಿ ಬಲು ಮೌನ! ಅವಕಾಶ.

ಇಂದು ಆಕೆ ಹೊರಟು ನಿಂತಾಗ ಎದೆ ಭಾರ. ಮತ್ತೆ ಕೇಳಿದೆ ಭೇಟಿ ಯಾವಾಗ?

 



 

Saturday, January 30, 2021

ಬೈರಪ್ಪನ ದಾಟು ತಂದ ಪೇಚಾಟ!

ಬೈರಪ್ಪನ ದಾಟು ತಂದ ಪೇಚಾಟ! ಕೆಲಸಕ್ಕೆ ಸೇರಿದ್ದಷ್ಟೇ. ನಾಲ್ಕು ತಿಂಗಳಿನಿಂದ ಸಂಬಳವೇ ಆಗಿರಲಿಲ್ಲ. ಮನೆಯಿಂದ ಹೊರಟಾಗ ಕಿಸೆಯಲ್ಲಿ ಕೇವಲ ನೂರು ರೂ ಮಾತ್ರವಿತ್ತು. ಕೈಯಲ್ಲಿ ಭೈರಪ್ಪನವರ ದಾಟು ಕಾದಂಬರಿ ಹಿಡಿದು 7.30ಕ್ಕೆ ಬಂದ ಗಜಾನನ ಬಸ್ಸಿಗೆ ಹತ್ತಿ ಕಂಡಕ್ಟರ್ಗೆ ನೂರು ರೂಪಾಯಿ ಕೊಟ್ಟು, ಟಿಕೀಟು ಇಸಕೊಂಡು ದಾಟು ಕಾದಂಬರಿಯಲ್ಲಿ ಮುಳುಗಿದೆ. 








 ಕಥೆಯು ಆಸಕ್ತಿಕರ ಹಂತಕ್ಕೆ ಬಂದಿತ್ತು. ಅಂದು ಕಾದಂಬರಿಯಲ್ಲಿ ಎಷ್ಟು ತಲ್ಲೀನನಾದೆನೆಂದರೆ ಜಗತ್ತೆಲ್ಲಾ ಶೂನ್ಯವಾದಂತೆನಿಸಿತು. ನಾನಿಳಿಯುವ ಸ್ಥಳ ಹಾಲಾಡಿ ಬಂದರೂ ತಿಳಿಲೇ ಇಲ್ಲ. ಪಕ್ಕವೇ ಕುಳಿತಿದ್ದವರೊಬ್ಬರು ನೀವಿಳಿವ ಸ್ಥಳ ಬಂತು ಎಂದು ಎಬ್ಬಿಸಿದರು. ಇಲ್ಲವಾದರೆ ಉಡುಪಿಯವರೆಗೆ ಹೋಗಿ ಬರುತಲಿದ್ದೆ! ಕಾದಂಬರಿಯನ್ನು ಹೆಗಲ ಚೀಲಕ್ಕೆ ತುರುಕಿ ಲಘುಬಗೆಯಿಂದ ಇಳಿದೆ. ಮುಂದಿನ ಬಸ್ಸಿಗೆ ಕಾದು ಕುಳಿತೆ. ನಡುವೆ ಕಿಸೆಗೆ ಕೈ ಹಾಕಿ ನೋಡಿದರೆ ಒಂದು ರೂಪಾಯಿಯೂ ಇರಲಿಲ್ಲ! ಅಚ್ಚರಿ, ಭಯ, ಉದ್ವೇಗ ಮುಂತಾದ ಭಾವಗಳೆಲ್ಲಾ ಒಟ್ಟಿಗೆ ಉಂಟಾದವು. ಈ ಊರಿಗೆ ಹೊಸಬ. ಸಾಲ ಹುಟ್ಟುವುದಾದರೂ ಹೇಗೆ? ತಲೆ ತುಂಬಾ ಮುಜುಗರ. ಕೇಳುವುದಾದರು ಯಾರಲ್ಲಿ? ಆಗಲೇ ಗೊತ್ತಾಗಿದ್ದು ಕಂಡಕ್ಟರ್ ಬಳಿ ಚಿಲ್ಲರೆ ತೆಗೆದುಕೊಳ್ಳದೇ ಇಳಿದು ಬಿಟ್ಟಿದ್ದು. ಕಂಡಕ್ಟರ್ ಹೊಸಬ. ನಾಳೆ ಕೇಳುವಂತಿಲ್ಲ. ಏನು ಮಾಡುವುದೆಂದು ತೋಚದೆ ಕುಳಿತೆ. ಮುಂದಿನ ಬಸ್ಸು ಹತ್ತುವಂತಿಲ್ಲ, ಹಿಂದಿರುಗಲೂ ಸಾಧ್ಯವಿಲ್ಲ್ಲ. ಪೋನ್ಗಳಿಲ್ಲದ ಕಾಲ. ಪುಣ್ಯಕ್ಕೆ ಬಸ್ಸಿನ ಟಿಕೆಟ್ ಕಿಸೆಯೊಳಗೆ ಕುಳಿತಿತ್ತು. ಬಳಿಗೆ ಬಂದ ಬಸ್ ಎಜೆಂಟ್ನ ಬಳಿ ಈ ಬಸ್ಸು ಎಷ್ಟು ಹೊತ್ತಿಗೆ ಹಿಂದಿರುಗುತ್ತೆ ಮರಾಯ ಎಂದು ಕೇಳಿದೆ. "12 ಗಂಟೆ" ಎಂದ. ಅಲ್ಲಿಯ ತನಕ ಕಾಯುವುದೆಂದು ನಿಶ್ಚಯಿಸಿ ಮತ್ತೆ ದಾಟು ಕಾದಂಬರಿಯಲ್ಲಿ ಮುಳುಗಿದೆ. ಅಂತೂ 12ಕ್ಕೆ ಬಸ್ಸು ಬಂದಿತು. ಬಸ್ಸು ಹತ್ತಿ ಕಂಡಕ್ಟರ್ ಬಳಿ ಚಿಲ್ಲರೆಗಾಗಿ ಕೇಳಿದೆ. ಪುಣ್ಯಾತ್ಮ ತಕರಾರಿಲ್ಲದೇ ಉಳಿದ ಚಿಲ್ಲರೆ ನೀಡಿದ. ಚಿಲ್ಲರೆ ಕಿಸೆಗಿಳಿಸಿ ಹಾಲಾಡಿಯಲ್ಲೇ ಉಂಡು ಕೆಲಸಕ್ಕೆ ತೆರಳಿದೆ.

ಶ್ರೀಧರ್ ಎಸ್. ಸಿದ್ದಾಪುರ. 

ಕುಂದಾಪುರ ತಾಲೂಕು 

 ಉಡುಪಿ ಜಿಲ್ಲೆ.

Thursday, September 3, 2020

ಸೂಡಿ ಎಂಬ ಕಾಡ ಬೆರಗು...

 




ಅಬಚೂರಿನ ಪೋಸ್ಟಾಫೀಸು ಕೃತಿಯಲ್ಲಿ ತೇಜಸ್ವೀ ಹೊಸ ನುಡಿಗಟ್ಟು ಉಕ್ತಿ ಬಂಗಿಯನ್ನು ಸೃಷ್ಟಿಸಬೇಕೆಂದು ತಮ್ಮ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅದದೇ ಹಳಸಲು ಸರಕು ರೇಜಿಗೆ ಹುಟ್ಟಿಸುತ್ತೆ. ಜೊತೆಗೆ ನವ್ಯದ ಹಿಡಿತದಿಂದ ಸಾಹಿತ್ಯವನ್ನು ಪಾರು ಮಾಡಬೇಕೆಂಬ ಘನ ಉದ್ದೇಶದಿಂದ ಈ ಮಾತು ಹೇಳಿರಬೇಕು. 
  ಇತಂಹ ಹೊಸ ಶಕೆಯೊಂದನ್ನು ಬರೆಯ ಹೊರಟ ಕೃತಿ ಕಾಡ ಸೆರಗಿನ ಸೂಡಿ. ತೇಜಸ್ವಿ ಕೃತಿಯೊಂದನ್ನು ಓದಿದ ನಂತರ ನಮಗೆ ಆ ಜಾಗಕ್ಕೆ ಹೋಗಬೇಕು ಅನಿಸುತ್ತೆ. ಆದರೆ ಸೂಡಿ ಓದಿದ ಮೇಲೆ ನನಗನಿಸಿದ್ದು ಅವರು ವಿವರಿಸಿದ ಜಾಗದಲ್ಲೇ ಮನೆ ಮಾಡಿ ಕೊಂಡಿರಬೇಕು!! ಅಷ್ಟು ಪರಿಣಾಮಕಾರಿಯಾಗಿ ಪರಿಸರ ಅದರ ಜೊತೆಗಿನ ತಮ್ಮ ಅನುಭವವನ್ನು ಪನ್ನೀರ ಪಾನಕದಂತೆ ವಿವರಿಸಿದ್ದಾರೆ ಮಂಜುನಾಥ್ ಚಾಂದ್. ನಾವೇ ಸೌಪರ್ಣಿಕಾ ನದಿಯ ಬೆಳದಿಂಗಳಲ್ಲಿ ಮಿಂದ ಅನುಭವ. ಈ ಪರಿಯ ಪರಿಸರ ಮಿಳಿತಗೊಂಡು ಅಮಿತಾನುಭವ ನೀಡಿದ ಕೃತಿ ಮತ್ತೊಂದಿಲ್ಲವೆಂದೇ ಹೇಳಬೇಕು. ಕನ್ನಡ ಸಾಹಿತ್ಯಲೋಕದ ಹೊಸ ಮೈಲುಗಲ್ಲು. ಇಂಥಹ ಅಪ್ಪಟವಾದ ಅಪರಂಜಿ ಕತೆ ಹೆಣೆದ ಮಂಜುನಾಥ್ ಚಾಂದ್ ನಮ್ಮ ತ್ರಾಸಿಯವರು ಎಂಬುದೇ ನಮಗೆ ಹೆಮ್ಮೆ.
ಕೆಲವು ಲೇಖಕರ ಕತೆ ಕಾದಂಬರಿಗಳಿಗೆ ಒಂದು ಸ್ಥಾಯಿ ಭಾವವಿದೆ ಎಂಬುದು ನನ್ನ ಸ್ವ ಅನಿಸಿಕೆ. ವಿಶಾದವೇ ಜೋಗಿ ಬರೆಹದ ಸ್ಥಾಯಿ ಭಾವ. ಹುಡುಕಾಟವೇ ತೇಜಸ್ವಿ ಬರೆಹದ ಸ್ಥಾಯಿ ಭಾವ. ಹೊಸ ಬರವಸೆಯ ಸೆಳಕೇ ಮಂಜುನಾಥ್ ಅವರ ಸ್ಥಾಯಿ ಭಾವ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. 

ಅನೇಕ ಹೊಸತುಗಳ ಹೂರಣ :-

ಹೊಸ ಹೊಸ ಭಾಷಾ ಪ್ರಯೋಗಗಳು ಕಚಗುಳಿ ಇಕ್ಕಿದವು. ಅವುಗಳಲ್ಲಿ ಕೆಲವು... 1. "ಸೂರ್ಯ ಕಂದೀಲು ಗುಡ್ಡವನ್ನೂ, ಸೌಪರ್ಣಿಕಾ ನದಿಯನ್ನೂ ದಾಟಿಕೊಂಡು ಕಡಲ ಹೊಟ್ಟೆ ಸೇರಿಕೊಳ್ಳುವ ದಾವಂತದಲ್ಲಿತ್ತು." 2. "ಆ ಮಧ್ಯರಾತ್ರಿಯ ಸರಿ ಹೊತ್ತಿನಲ್ಲಿ  ಹೊತ್ತಿಕೊಂಡ ಚಿಮಣಿ ದೀಪದ ಬೆಳಕು ಆ ಕೊಪ್ಪದ ತುಂಬಾ ಚೆಲ್ಲಾಡಲು ಒದ್ದಾಟ ನೆಡೆಸಿ ಒಂದಪಾ ಹಾಗೇ ತಟಸ್ಥವಾಯಿತು. 3. "ಒಂದಿದ್ದ ಸೂಡಿ ಎರಡಾಗಿ ಮೂರಾಗಿ ಆರಾಗುವ ಹೊತ್ತಿಗೆ ಆ ಪುಟ್ಟ ತೋಪಿನ ಕೆರೆಯ ನೀರು ಕೆಂಡದ ಓಕಳಿ ತುಂಬಿಕೊಂಡಂತೆ ಕಾಣುತ್ತಿತ್ತು." ಹೀಗೆ ಕವಿತೆಗಳಂತೆ ಪೋಣಿಸಿಕೊಟ್ಟ ಕಾಡಿನ ಹಾರದಂತೆ, ಒಂದೊಳ್ಳೆ ಪ್ರವಾಸ ಮಾಡಿದಂತೆ ಸೌಪರ್ಣಿಕೆಯಲ್ಲಿ ತೇಲಿ ಬರುವ ಬೆಳದಿಂಗಳಂತೆ ಪದಗಳನ್ನು ಬಳಸಲಾಗಿದೆ.
ಗಿರಿಜಾ ಹೆಗೆಡೆಯವರು ಗಂಡ ತೀರಿ ಹೋದಾಗ ಅನುಭವಿಸುವ ಗಾಢವಾದ ವಿಷಾದವನ್ನೂ ವಿಶಿಷ್ಟವಾಗಿ ಪೋಣಿಸಿಕೊಟ್ಟ ಪರಿ ಅನನ್ಯ. ಅನುಭವಿಸಿ ಬರೆದಂತಹ ವಿಷಾದ ಯೋಗ. ಹೀಗಿದೆ ಒಕ್ಕಣೆ "ಏಕಾಏಕಿ ಇವೆಲ್ಲಾ ನಡೆದು ಹೋದವು. ಬದುಕಿನ ರೀತಿಯೇ ಬದಲಾಗಿ ಹೋಯಿತು. ಆಸೆ, ಜಿಹಾಸೆ, ಮುನಿಸು, ಸ್ಪರ್ಶ ಎಲ್ಲಕ್ಕೂ ಅರ್ಥವಿತ್ತು. ಬದುಕಿನ ಕಿಂಡಿಯಲ್ಲಿ ಸಹ್ಯ ಕ್ಷಣಗಳಿದ್ದವು. ಮನಸ್ಸು ಎಲ್ಲವನ್ನೂ ಆಸ್ವಾದಿಸುವ ಶಕ್ತಿಯನ್ನು ಹೊಂದಿತ್ತು. ಈಗ ಬರೀ ಏಕಾಂತ. ಒಳಗಿನ ಧಗ್ಧ ಭಾವಗಳಿಗೆ ಅಂಕುಶವಿಡುವುದು ಅತ್ಯಂತ ಯಾತನಾಮಯ. ಹೊರಗೆ ಬೆಳದಿಂಗಳು ಹಾಲು ಸುರಿಯುತ್ತಿದೆ. ಆದರೆ ಇಣುಕಿ ನೋಡಬೇಕು ಅನಿಸುವುದಿಲ್ಲ. ಅದು ಈ ಮನಸ್ಸಿನ ನೋಟಕ್ಕೆ ಕಾಂತಿಹೀನ ಅನಿಸುತ್ತಿದೆ.....ಸಹಸ್ರಾತಿ ಸಹಸ್ರ ನಕ್ಷತ್ರಗಳ ಚಾಪೆಗೆ ಸೌಪರ್ಣಿಕಾ ನದಿ ಕನ್ನಡಿ ಹಿಡಿದಿರುವುದನ್ನು ಮನಸ್ಸು ಗ್ರಹಿಸುವುದೇ ಇಲ್ಲ! ಅತ್ಯಂತ ನವಿರಾಗಿ ವಿಶಾದವನ್ನು ಅಕ್ಷರಕ್ಕೆ ಪೋಣಿಸಿದ ಪರಿ ಅಚ್ಚರಿ. 

ತನಿಯಾ ಎಂಬ ಅಮಾಯಕ:- 

ಕತೆಯುದ್ದಕ್ಕೂ ಹಬ್ಬಿನಿಂತ ತನಿಯಾ ಅವನ ಅಮಾಯಕತೆ, ಅವನ ಜೀವನ ಪ್ರೀತಿ, ನಿಷ್ಠೆ ಗಮನ ಸೆಳೆಯುತ್ತದೆ. ಆತ ಗಿರಿಜಾ ಹೆಗಡೆ ಅವರಲ್ಲಿ ಕೇಳ್ತಾನೆ "ಅಲ್ಲಾ ಒಡ್ತಿಯರೆ, ಪ್ಯಾಪರ್ ಅಂದ್ರೆ ಎಂತ? ಸತಂತ್ರ ಅಂದ್ರೆ ಎಂತ? ಗಾಂಧಿ ಎಂದ್ರೆ ಯಾರ್? ಹೀಗೆ ಅವನ ಅಮಾಯಕತೆ ಕತೆಯುದ್ದಕ್ಕೂ ಸಾಗುತ್ತದೆ. 
ಕತೆಯನ್ನೂ ಎಲ್ಲೂ ಎಳೆಯದೆ, ತತ್ವ ಸಿದ್ಧಾಂತಗಳ ಭಾರವನ್ನು ಹೊರಿಸದೇ ನೇರವಾಗಿ ಕತೆ ಹೆಣೆದ ಮಂಜುನಾಥ್ ಚಾಂದ್ ಯಶಸ್ವಿಯಾಗಿದ್ದಾರೆ. ಪುಸ್ತಕವನ್ನು ನಿಮ್ಮ ಜೋಳಿಗೆಗೆ ಹಾಕಿದ್ದೇನೆ. ನಿಮಗೇನನ್ನಿಸಿತೆಂದು ಓದಿ ಹೇಳಿ.

Friday, April 10, 2020

'ಮಸಾಲೆ ದೋಸೆಗೆ ಕೆಂಪು ಚೆಟ್ನಿ'


 ಪುಸ್ತಕಗಳ ಬಗ್ಗೆ ಬರೆಯುವುದೆಂದರೆ ಚಳಿಗಾಲದ ರಾತ್ರಿ ಹಳೆ ಪ್ರೇಯಸಿಯನ್ನು ನೆನಪಿಸಿಕೊಂಡಂತೆ ಮೈ ಮನಗಳಲ್ಲಿ ಪುಳಕ! ಜೋಗಿಯವರ 'ಮಸಾಲೆ ದೋಸೆಗೆ ಕೆಂಪು ಚೆಟ್ನಿ' .
 
 ಸೊಗಸು ಎಲ್ಲಿದೆ? ನೋಡುಗನ ಕಣ್ಣಿನಲ್ಲಿ? ಉಹುಂ. ನೋಡುಗನ ಹೃದಯದಲ್ಲಿ? ಉಹುಂ. ನೋಡುಗನ ಮನಸ್ಸಿನಲ್ಲಿ. ಗೊತ್ತಿಲ್ಲ! 
 ಯಾರದೋ ಯಾವುದೋ ಅಭಿಪ್ರಾಯಗಳ ಕೇಳಿ ಮಾರು ಹೋಗುತ್ತೇವೆ. ಆ ಒಂದು ಪುಸ್ತಕ ಕೊಳ್ಳುತ್ತೇವೆ. ಮುಖಪುಟ ಚೆನ್ನಾಗಿರೋದ್ರಲ್ಲಿ ವಿಷಯವೇ ಇರೋಲ್ಲ. ವಿಷಯವಿರುವ ಪುಸ್ತಕಗಳಲ್ಲಿ ಮುಖಪುಟ, ತಲೆಬರೆಹ ಆಕರ್ಷಕ ಅನಿಸೊಲ್ಲ. ಹೀಗೆ ಕೊನೆಗೆ ನನಗನಿಸುವು    ಈ     ಪುಸ್ತಕ  ನನಗೆ ಬೇಕಿತ್ತಾ. ನೂರರಲ್ಲಿ 25-30 ಪುಸ್ತಕಗಳು ಈ ಸಾಲಿಗೆ ಸೇರುತ್ತವೆ. ತಿಳುವಳಿಕೆ ಮೂಡಿದಾಗ ತಡವಾಗಿರುತ್ತದೆ, ಕೊನೆಗೆ ಕಪಾಟಿನ ಮೂಲೆ ಸೇರುತ್ತವೆ. ಆದರೆ ಈ ಪುಸ್ತಕ ಹಾಗಿಲ್ಲ.
ಅದರಲ್ಲಿನ ಒಂದು ಸುಂದರ ಕತೆ ಹೀಗಿದೆ. 
 "ಜೀವನದಲ್ಲಿ ಅತ್ಯಂತ ನಿರುತ್ಸಾಹಗೊಂಡ ವ್ಯಕ್ತಿಯೊಬ್ಬ ಸಾಯಲೆಂದು ಹೊರಡುತ್ತಾನೆ. ಆ ರಾಜ್ಯದಲ್ಲಿ ಆತ್ಮಹತ್ಯೆ ಅಪರಾಧವಲ್ಲ. ಹಾಗಂತ ಎಲ್ಲೆಲ್ಲೋ ಬಿದ್ದು ಸಾಯುವಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮಹಾರಾಜನೇ ವ್ಯವಸ್ಥೆ ಮಾಡಿದ್ದಾನೆ. ಅದಕ್ಕೊಂದು ಜಾಗವಿದೆ. ರಾಜ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರೆ ನೀವು ಆತ್ಮಹತ್ಯೆ ಮಾಡಿಕೊಳ್ಳುವ ದಿನಾಂಕವನ್ನು ಕಾರ್ಯಾಲಯ ಸೂಚಿಸುತ್ತದೆ. ಕೆಲವೊಮ್ಮೆ ಆರೇಳು ತಿಂಗಳು ಕಾಯಬೇಕಾಗಿ ಬರುವುದೂ ಉಂಟು. ಕೆಲವೊಮ್ಮೆ ಐದಾರು ದಿನಗಳಲ್ಲಿ ಸಾಯುವ ಅವಕಾಶ ಬಂದರೂ ಬರಬಹುದು. 
 ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವ ವ್ಯಕ್ತಿ ಕಾರ್ಯಾಲಯಕ್ಕೆ ಹೋಗಿ ಅಜರ್ಿ ಸಲ್ಲಿಸುತ್ತಾನೆ. ಹದಿನೈದು ದಿನಗಳಲ್ಲಿ ಆತ್ಮಹತ್ಯಾ ದಿನಾಂಕವನ್ನು ಹೇಳುವುದಾಗಿ ಕಾರ್ಯಾಲಯ ಹೇಳಿ ಕಳಿಸುತ್ತದೆ. ಅವನು ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಅಲ್ಲೊಬ್ಬಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇವನು ಅವಳನ್ನು ಮಾತನಾಡಿಸುತ್ತಾನೆ. ಅವಳಿಗೆ ಐದು ತಿಂಗಳ ನಂತರ ಸಾಯೋ ದಿನ ನಿಗದಿಯಾಗಿರುತ್ತದೆ. ಅವಳಿಗೆ ಐದು ತಿಂಗಳು ಕಾಯಲು ಮನಸ್ಸಿಲ್ಲ. ಉಳಿಯಲು ಮನೆ ಇಲ್ಲ. ನೋಡಿಕೊಳ್ಳಲು ಯಾರೂ ಇಲ್ಲ.
 ಈತ ಆಕೆಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವನಿಗೂ ಐದು ತಿಂಗಳು ಕಾಯುವ ಮನಸ್ಸಿರುವುದಿಲ್ಲ. ಅದರ ಬಗ್ಗೆ ಮಾತನಾಡುತ್ತಾ ವಾರ ಉರುಳುತ್ತದೆ. ತಿಂಗಳೂ ಉರುಳುತ್ತದೆ. ಕ್ರಮೇಣ ಅವರಿಬ್ಬರೂ ಪ್ರೀತಿಸತೊಡಗುತ್ತಾರೆ. ಮದುವೆಯಾಗುತ್ತಾರೆ. ಪ್ರೀತಿ ಗಾಢವಾಗುತ್ತಿದ್ದ ಹಾಗೆ ಬದುಕ ಬೇಕು ಅನ್ನಿಸುತ್ತದೆ. ಸಾಯುವ ದಿನ ಸಮೀಪವಾಗುತ್ತಾ ಹೋಗುತ್ತಿದ್ದ ಹಾಗೆ ಅವರಿಬ್ಬರೂ ಬದುಕಲು ನಿರ್ಧರಿಸಿ ತಮ್ಮ ಆತ್ಮಹತ್ಯೆಯ ಅಜರ್ಿಯನ್ನು ವಾಪಾಸು ಪಡೆಯಲು ನಿರ್ಧರಿಸಿರುತ್ತಾರೆ. 
 ಆದರೆ ಅಧಿಕಾರಿಗಳೂ ಅದಕ್ಕೆ ಅನುಮತಿ ಕೊಡುವುದಿಲ್ಲ...ಸಾಯುತ್ತೀರಿ ಎಂದು ಹೇಳಿದ್ದಾಗಿದೆ. ನಿಮ್ಮ ಕಡತಗಳು ವಿಲೇವಾರಿಯಾಗಿವೆ. ಈಗ ಅದನ್ನು ಹಿಂತೆಗೆಯುವಂತಿಲ್ಲ. ಆ ದಿನಾಂಕದಂದು ಬಂದು ಸಾಯಿರಿ ! ಎಂದು ರಾಜಾಜ್ಞೆಯಾಗುತ್ತದೆ. ಈ ಮಧ್ಯೆ  ಅವರ ರಕ್ತ ಸಂಬಂಧಿಗಳು ಯಾರಾದರೂ ಸಾಯುವ ನಿಧರ್ಾರ ಮಾಡಿದರೆ, ಆತ್ಮಹತ್ಯಾ ದಿನವನ್ನು ಅವರಿಗೆ ವಗರ್ಾಯಿಸಬಹುದು ಎಂದು ಸಲಹೆ ಕೊಡುತ್ತಾರೆ. 
 ಅವರು ತಮ್ಮ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಹುಡುಕಾಟದಲ್ಲಿ ತೊಡಗುತ್ತಾರೆ. ಯಾರೂ ಸಿಗುವುದಿಲ್ಲ. ಹತಾಷೆ ಆವರಿಸುತ್ತದೆ. ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಬದುಕು ರೇಜಿಗೆ ಅನಿಸುತ್ತದೆ. ಅವಳು ಮೊದಲಿನಂತಿಲ್ಲ ಎಂದು ಅವನು ಭಾವಿಸುತ್ತಾನೆ. ಅವನು ಹೀಗಿರಲಿಲ್ಲ ಎಂದು ಅವಳು ಕೊರಗುತ್ತಾಳೆ. ಇದಕ್ಕಿಂತ ಸಾಯೋದೇ ವಾಸಿ ಅಂತ ಅವಳು ಒಳಗೊಳಗೇ ತೀಮರ್ಾನ ಮಾಡಿ ಬದುಕುವ ಯೋಚನೆ ಕೈ ಬಿಡುತ್ತಾಳೆ. 
 ಅಷ್ಟು ಹೊತ್ತಿಗೆ ಮದುವೆಯಾದವರಿಗೆ ಸಾಯುವ ಅವಕಾಶವಿಲ್ಲ. ಅವರ ಅಜರ್ಿಗಳನ್ನು ನಿರಾಕರಿಸಲಾಗಿದೆ ಕೇವಲ ಪ್ರೇಮಿಗಳಿಗೆ ಮಾತ್ರ ಸಾಯುವ ಅವಕಾಶವೆಂದು ಕಾನೂನು ತಿದ್ದುಪಡಿಯಾಗಿರುತ್ತದೆ.
 ಅವರಿಗೆ ಮದುವೆಯಾಗಿದೆ. ಅವರು ಪ್ರೇಮಿಗಳೂ ಅಲ್ಲ. ಹೀಗಾಗಿ ಬದುಕುವಂತಿಲ್ಲ, ಸಾಯುವಂತಿಲ್ಲ"
----
ಹೇಗಿದೆ ಕತೆ? ಯಾಕೆ ಓದಬೇಕು? ಚೆಂದದ ಕತೆಗಳಿಗಾಗಿಯಾ? ಯಾಕೆ ಬರೆಯಬೇಕು ಇಷ್ಟೆಲ್ಲಾ? ಅದಕ್ಕೂ ಮತ್ತೆರಡು ಚೆಂದದ ಕತೆಯಿದೆ. ಇಂತಹ ಅನೇಕ ಜಿಜ್ಞಾಸೆಗಳ ಒಳ ಸುಳಿ, ತಿರುಳಗಳ ಹೂರಣಗಳ ಹೊತ್ತು ತಂದ ಹೊತ್ತಗೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಅಲ್ಲವೇ ಅಲ್ಲ.( ನನ್ನ ಸ್ವಂತ ಅಭಿಪ್ರಾಯ) ಹಾಗಾಗಿ ಮತ್ತೊಮ್ಮೆ ಓದಿದೆ. 
 ಜೋಗಿಗೆ ನಾ ಕೇಳಬೇಕು, ಇಂತಹ ಕಾಡುವ  ಸಾಲುಗಳನ್ನು ಎಲ್ಲಿಂದ ಎತ್ತಿಟ್ಟುಕೊಂಡೆ. ತಣ್ಣನೆಯ ಆಹ್ಲಾದಂತಹ ಕತೆಗಳನ್ನು ಎಲ್ಲಿಂದ ಹೆಕ್ಕಿ ತಂದೆ. ಮಾತಿನ ಸುಂದರ ಸೀರೆ ಉಡಿಸೋದು ನೀನು ಎಲ್ಲಿಂದ ಕಲಿತೆ? 
ಶ್ರೀಧರ್ ಎಸ್. ಸಿದ್ದಾಪುರ.

Tuesday, March 24, 2020

'ಅಂತರಂಗ'ದಲ್ಲಿ ಅನಂತ ಪಯಣ...



ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.

ಶ್ರೀಧರ. ಎಸ್. ಸಿದ್ದಾಪುರ

Friday, November 22, 2019

ನೀವು ಓದಲೇ ಬೇಕಾದ ಅಪೂರ್ವ ಪುಸ್ತಕ...



 ನಾಗೇಶ್ ಹೆಗಡೆಯವರ ನಿಲುಕಿಗೆ ದಕ್ಕದ ಬರೆಹ ಇರಲಿಕ್ಕಿಲ್ಲ. ಓದುಗರಿಗೆ ವಿಜ್ಞಾನದ 
ಅವರ ಲೇಖನಗಳು ನೀರಿನಷ್ಟು ಸಲೀಸು, ಸರಾಗ. ಅವರ ಹೊಸ ಕೃತಿಯೊಂದು ಹೊರಬಂದಿದೆ, 'ಅಪೂರ್ವ ಪಶ್ಚಿಮ ಘಟ್ಟ'. ಮತ್ತೊಮ್ಮೆ ನಾಗೇಶ ಹೆಗಡೆ ತಮ್ಮ ಬರಹದ ಚುಬುಕನ್ನು ಒರೆಗೆ ಹಚ್ಚಿ ಬರೆದಿದ್ದಾರೆ. ಎಲ್ಲೂ ಓದುಗನಿಗೆ ಭಾರವಾಗದೆ, ಎಳೆಯದೇ ಪಶ್ಚಿಮ ಘಟ್ಟಗಳ ದರ್ಶನ ಮಾಡಿಸಿದ್ದಾರೆ. ಅದೇ ಚವರ್ಿತ ಚರ್ವಣ ಹೇಳದೆ ಹೊಸದೊಂದು ಲೋಕ ಕಟ್ಟಿ ಕೊಟ್ಟಿದ್ದಾರೆ. ಓದಿ ಕೆಳಗಿಟ್ಟರೆ ಹೃದಯ ಭಾರ ಭಾರ. ಸಾಕ್ಷಾತ್ ನಾವೇ ಅಲ್ಲಿ ಅಲೆದು ಬಂದಂತೆ ಭಾಸವಾಗುತ್ತದೆ. ಮನಸ್ಸು ಅಲ್ಲಿಗೆ ಓಡುತ್ತದೆ.
ಇಲ್ಲಿನ ಜೀವ ಸಂಕುಲಗಳ ಹೊಸ ಲೋಕ, ವಿಶಿಷ್ಟ ಅನನ್ಯ ಪ್ರಭೇದದ ಪ್ರಾಣಿ, ಪಕ್ಷಿ, ಕೀಟ ಪ್ರಭೇದಗಳ ಪರಿಚಯ, ಅಳಿವಿನಂಚಿನ ಸಸ್ಯ ಪ್ರಭೇದಗಳ ಸ್ತೂಲ ಪರಿಚಯ ಮಾಡಿಸಿದ್ದಾರೆ. ಮನುಜನಿಂದ ಹಾಳಾದ ಜೀವ ಸಂಕುಲಗಳು, ಅವನ ಅಭಿವೃದ್ಧಿ ದಾಹಕ್ಕೆ ಮರೆಗೆ ಸಂದಲಿರುವ ಕಾಡು, ಜೀವಿಗಳ ಸೂಕ್ಷ್ಮ ಪರಿಚಯ ಮಾಡಿಸಿದ್ದಾರೆ. ಇಲ್ಲಿ ನಡೆದ ಹೋರಾಟಗಳ ಚಿತ್ರಣ ಬದಲಾದ ಹೋರಾಟದ ಹಾದಿಯ ಸೊಲ್ಲನ್ನು ಕಟ್ಟಿಕೊಟ್ಟಿದ್ದಾರೆ.
ಜೊತೆಗೆ ನಮ್ಮ ಇಲಾಖೆಗಳ ಪೊಳ್ಳುತನವನ್ನೂ, ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲಾಗುವ ಅನಾಚಾರಗಳನ್ನು ಕೆನಾರಾ ಟ್ರೇಲ್ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಹೊಸ ಪ್ರವಾಸೋಧ್ಯಮಕ್ಕೊಂದು ಹೊಳಹನ್ನು ಕೊಟ್ಟಿದ್ದಾರೆ.
ಪಶ್ಚಿಮ ಘಟ್ಟಗಳ ಒಳ ಹೊರಗನ್ನು ಈ ಕೃತಿ ತರೆದಿಟ್ಟಿದೆ. ನಾವೆಷ್ಟು ಪ್ರಕೃತಿಗೆ ಋಣಿಯಾಗಿರಬೇಕು ಎಂಬ ಸಂದೇಶ ನೀಡುತ್ತಾ ಓದುತ್ತಾ ಹೋದಂತೆ ನಾವು ಕಳೆದುಕೊಂಡ ಆ ಅಪೂರ್ವ ಪಶ್ಚಿಮ ಘಟ್ಟ ನಮ್ಮ ಕಣ್ಣ ಮುಂದೆ ಸುಳಿದು ಹತಾಶೆಗೆ ನೂಕಿಬಿಡುತ್ತದೆ. ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾಗಿ ನಾವು ಇದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂಬುದು ಹಳಸಲು ಸರಕು. ಆದರೂ ಹೇಳಲೇ ಬೇಕಿದೆ ಉಳಿಸಿ, ಉಳಿಸಿ ಎಂದು.

ಕೊಂಡು ತಂದು ಓದಿಸಿದ ಮಿತ್ರ ನಾಗರಾಜ್ನಿಗೆ ಧನ್ಯವಾದಗಳು. ಇನ್ನೇಕೆ ತಡ ಕೊಂಡು ಓದಿ.


Saturday, June 9, 2018

ಹೊಸ ಕತೆಗಾರ ಮತ್ತು ಹಳೇ ಓದುಗ...


ಬರೆಹ ಎಲ್ಲೂ ಭಾರವಾಗದೇ ಓದುಗನೆದುರು ತೆರೆದುಕೊಳ್ಳಬೇಕು. ಹಳೇ ರದ್ದಿಯಲ್ಲಿ ಅದ್ದಿದ ಶೈಲಿಯಲ್ಲಿ 'ಹೋರಿ ಉಚ್ಚೆ ಹೊಯ್ದಂತೆ'  ಬರೆದ ಬರೆಹಗಳನ್ನು ಹಳೇ ಓದುಗ ಚಪ್ಪರಿಸಿ ಓದಲಾರ. ಆತನಿಗೆ ಹೊಸ ಉಪಮೆಗಳು, ನವೀನ ನುಡಿಗಟ್ಟುಗಳು ಬೇಕು. ಹೊಸ ಹೊಸ ವಿಷಯಗಳು ಬೇಕು. ಇಲ್ಲವಾದರೆ ಬರೆಹ ಹಿಡಿದಿಡಲಾರದು. ವಯ್ಯಕ್ತಿಕ ವಿಷಯ, ಕೇವಲ ವಿವರಣೆಗಳನ್ನು ಹಿಂಜಿ ಹಿಂಜಿ ಎಳೆದು ಬರೆದರೆ ಓದುವವರ್ಯಾರು? ಹಳೆಯ ಪ್ರೇಮ ಕತೆಗಳನು ಹೊಸ ಚೌಕಟ್ಟಿನೊಳಗೆ ಕಟ್ಟಿ ಕೊಡಬೇಕು. ಕತೆ ಎಂದರೆ ಹೀಗಿರಬೇಕು ಎಂಬುದ ಮುರಿದು ಕಟ್ಟಿದವರು ಕುಂದಾಪುರದ ಕತೆಗಾರ ವಿಕ್ರಂ ಹತ್ವಾರ್. ತೀರ ವಿಭಿನ್ನ ವಿಷಯ, ನೈಪುಣ್ಯಪೂರ್ಣ ನಿರೂಪಣೆಯಿಂದ ಪ್ರತೀ ಕತೆಯೂ 'ಕುರುಂ ಕುರುಂ ಕಡ್ಲೆ ಪುರಿ'.

ಕತ್ತಲನ್ನು ಸೀಳಿಕೊಂಡು ಬಂದ ಬೆಳಕಿನ ಬೆಟ್ಟ, ಚಿಮ್ಮುವ ಕಾರಂಜಿ, ವಿದ್ಯುತ್ ಸಂಚಾರ. ಎಂತಹ ರೋಮಾಂಚಕ ಕತೆಗಳು. ಚಿತ್ರ-ವಿಚಿತ್ರ ಕತೆಗಳು. ಅಸಹಜ ಎನಿಸಿದರೂ ಈ ಸಂಕೀರ್ಣ ಬದುಕಿನಲಿ ಅವೆಲ್ಲವೂ ಸಹಜವೇ ಆಗಿವೆಯಲ್ಲವೇ?
ಕತೆ ಮತ್ತು ವಾಸ್ತವಕ್ಕೂ ಸಂವಾದಿಯಾಗಿ ಸಾಗುತ್ತಾ ಕತೆಯೇ ವಾಸ್ತವವಾಗುತ್ತಾ, ವಾಸ್ತವವೇ ಕತೆಯಾಗುತ್ತಾ ಬೆಳೆಯುವ 'ಕಥಾಸ್ತು' ಒಂದು ವಿಭಿನ್ನ ಕತೆ. ಅನಾಮಿಕ, ಕನಕಾಭಿಷೇಕ, ಸಾಪ್ಟವೇರ್ ಜಗತ್ತಿನ ಜಂಜಢಗಳ ಅನಾವರಣಗೊಳಿಸುವ ಪ್ರಾಜೆಕ್ಟ್ ಬ್ರೀಜ್, ಬದುಕಿನ ಆಧ್ಯಾತ್ಮಿಕತೆಯನ್ನು ವಿವರಿಸುವ, ಬದುಕು ಮತ್ತು ಕಂಪ್ಯೂಟರ್ ಎರಡುಕ್ಕಿರುವ ಸಾಮ್ಯಾತೆ 'ಜೀರೋ ಮತ್ತು ಒಂದು' ಕತೆಗಾರ ವಿವರಿಸುವ ಪರಿ ಅನನ್ಯ. ಇಂತಹ ಅನೇಕ ವಿಶಿಷ್ಟ ಕತಾ ಗುಚ್ಚವೇ ವಿಕ್ರಮ್ ಹತ್ವಾರ ಬರೆದ 'ಜೀರೋ ಮತ್ತು ಒಂದು'.

ಸಾಧ್ಯವಾದರೆ ಕೊಂಡು ಓದಿ...

Saturday, March 31, 2018

ಎರಡು ವಿಭಿನ್ನ ಕತೆ ಮತ್ತು ಒಂದು ಕತಾ ಸಂಕಲನ.


ಒಂದು ವಿಭಿನ್ನ ಕತಾ ಸಂಕಲನ ಮತ್ತು ನನ್ನನ್ನು ಪ್ರಭಾವಿಸಿದ ಎರಡು ಕತೆ ಬಗ್ಗೆ ನಿಮಗೆ ಹೇಳ್ಬೇಕು ಅಂತಾ ಅನಿಸಿದೆ. ನುಡಿಸಿರಿಯಲ್ಲಿ ಕೊಂಡ ಪುಸ್ತಕ ಮೊನ್ನೆ ಓದಿ ಮುಗಿಸಿದೆ. ಸಾಮಾನ್ಯವಾಗಿ ಸಾಮಾನ್ಯ ಲೇಖಕರು ಬರೆಯುವ ಕತಾ ಸಂಕಲನ ಓದುವವರು ಕಡಿಮೆ. ಹಾಗಾಗಿ ಈ ಪರಿಚಯ ಲೇಖನ. ಮುಖಪುಟದಿಂದಲೇ ನನ್ನನ್ನು ಆಕಷರ್ಿಸಿದ ಈ ಸಂಕಲನ ಕೆಲವು ಪ್ರಶಸ್ತಿಗಳನ್ನು ಗಳಿಸಿದೆ ಕೂಡ! ಲೇಖಕರ ವಿಶಿಷ್ಟ ಶೈಲಿ ಓದಿಸಿಕೊಂಡು ಹೋಗುತ್ತೆ. ಸಾಕೆನಿಸುತ್ತೆ ಅಲ್ವಾ. ಕತೆಗೆ ಬರೋಣ.
ಉತ್ಸರ್ಗ ಎಂಬ ವಿಭಿನ್ನ ಕತೆ:-
ಪಾತ್ರವೊಂದು ವಾಸ್ತವಕ್ಕೂ ಕತೆಗೂ ಏಕಕಾಲಕ್ಕೆ ಬಂದು ಹೋಗುವ ಉತ್ಸರ್ಗವೆಂಬ ಕತೆ. ಕತೆಗಾರ ಓದುಗನಿಗೆ ನೀಡುವ ವಿಶಿಷ್ಟ ಸೂಚನೆಗಳಿಂದ ಈ ಕತೆ ನಮ್ಮನ್ನು ಆಕಷರ್ಿಸುತ್ತೆ. ಕಾಯಿಲೆಯಿಂದ ಬಳಲುವ ಕತಾ ನಾಯಕನಿಗೆ ಆತನ ಮೂತ್ರ ಕುಡಿಸುವ ಪ್ರಯತ್ನದ ಮೂಲಕ ಕತೆ ಪ್ರಾರಂಭವಾಗುತ್ತದೆ! 'ಅಗ್ಗದ ಆಕರ್ಷಣೆಗಾಗಿ ಈ ರೀತಿ ನಾ ಹೇಳುತ್ತಿಲ್ಲ' ಎಂದು ಕತೆಗಾರ ಎಚ್ಚರಿಸುತ್ತಾನೆ. ಕತೆಗಾರ ಆಗಾಗ ಕತೆಯಿಂದ ಹೊರ ಬರುತ್ತಾನೆ. ಮೂರು ಮಜಲುಗಳಲ್ಲಿ ನಡೆಯುತ್ತಾ ಸಾಗಿ ಮುಕ್ತ ಅಂತ್ಯ ಕಾಣುತ್ತೆ.
'ವದ್ಧಾ' ವೆಂಬ ವಿಚಿತ್ರ ಹೆಸರಿನ ಕತೆ:-
'ಮೋ' ಎಂಬ ವಿಚಿತ್ರ ಹೆಸರಿನ ಮತ್ತು ಕತೆಗಾರನ ನಡುವೆ ನಡೆಯುವ ವಿಶಿಷ್ಟ ಕತೆ ವದ್ಧಾ. ಎರಡು ವಿಭಿನ್ನ ಪರಿಸರದ ಇಬ್ಬರು ವ್ಯಕ್ತಿಗಳು ಎದುರಾಗಿ ಎದುರಿಸುವ ಸಂಘರ್ಷ, ತಾತ್ವಿಕ ಭಿನ್ನಾಭಿಪ್ರಾಯಗಳ ಸರಮಾಲೆಯನ್ನು ಬಿಚ್ಚಿಡುತ್ತಾ ಸಾಗುತ್ತೆ ಕತೆ. ಕತೆಗಾರನ ಆಂತರ್ಯದಲ್ಲಿನ ತೊಳಲಾಟಗಳ ದರ್ಶನ ಮಾಡಿಸುತ್ತಾ ಆ ತೊಳಲಾಟಗಳೂ ನಮ್ಮವೂ ಆಗುತ್ತಾ ಸಾಗುತ್ತೆ. ಮಧ್ಯಮ ವರ್ಗದ ಸಾಮಾನ್ಯರ ತೊಳಲಾಟಗಳು, ಪೊಳ್ಳು ಹೆಚ್ಚುಗಾರಿಕೆಯನ್ನು ಬಿಚ್ಚುತ್ತಾ ಹೋಗುವುದು. ಸುಡೊ ದೊಡ್ಡಸ್ತನಗಳ ಅನಾವರಣ ಮಾಡಿಸುತ್ತೆ. ಅದಕ್ಕಾಗಿ ಕತಾ ನಾಯಕ ಪಡುವ ಪಾಡು ಅಯ್ಯೋ ಅನಿಸುತ್ತೆ.
ಮುಕ್ತ ಅಂತ್ಯದೊಂದಿಗೆ ಓದುಗರನ್ನು ಚಿಂತನೆಗೆ ಹಚ್ಚುತ್ತೆ! ಮುಗಿಯಲೇ ಬೇಕೆನ್ನುವವರಿಗೆ ಹಿಡಿಸದೇ ಹೊಗಬಹುದಾದ ಹಲವು ಕತೆಗಳನ್ನು ಈ ಒಳಗೊಂಡು ನೈಜತೆಗೆ ಅತಿ ಸಮೀಪವೂ ಇದೆ ಎನ್ನಬಹುದು. ತಡ ಮಾಡದೇ ಕೊಂಡು ಓದಿ.

Sunday, March 25, 2012

ತಪ್ಪು ತಿದ್ದುವ ತಪ್ಪು


ತಪ್ಪು ತಿದ್ದುವ ತಪ್ಪು

ನಿಮ್ಮ ಆಲೋಚನೆ ಕ್ರಮವನ್ನು ಸಂಪೂರ್ಣ ಬದಲಿಸುವ, ನೀವು ಯೋಚಿಸುವಂತೆ ಮಾಡುವ ಉತ್ತಮ ಪುಸ್ತಕ.
ನೀವು ಉತ್ತಮ ಪೊಷಕರಾಗಲು, ಉತ್ತಮ ತಂದೆಯಾಗಲು, ಯಶಸ್ವಿಯಾಗಲು ಸಹಕಾರಿಯಾದ ತರ್ಕಕ್ಕೆ ಹಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.




ನಿಮಗಾಗಿ ಇದರಲ್ಲಿನ ಒಂದು ಅಧ್ಯಾಯವನ್ನು ಕೊಡುತ್ತಿದ್ದೇನೆ. ನೀವು ಓದಿ ಇತರರಿಗೂ ಹೇಳಿ. ಅಕ್ಷರ ಸಂಸ್ಕೃತಿ ಬೆಳೆಯಲಿ.

ಇತಿ ನಿಮ್ಮ
ಶ್ರೀಧರ್. ಎಸ್. ಸಿದ್ಧಾಪುರ












Add caption

Tuesday, May 3, 2011

ನಾನು ಓದಿದ ಅತ್ಯುತ್ತಮ ಪುಸ್ತಕ ಪ್ಯಾಪಿಲಾನ್.....

ಪ್ಯಾಪಿಲಾನ್ ...



ಪ್ಯಾಪಿಲಾನ್ ಹೆಸರೇ ವಿಚಿತ್ರ, ನಿಗೂಢ. ನಮ್ಮನ್ನೊಂದು ಹೊಸ ಜಗತ್ತಿಗೆ ಪರಿಚಯಿಸುವ ಪುಸ್ತಕ. ಓದಿದಂತೆ ನಮ್ಮ ಆತ್ಮವಿಶ್ವಾಸದ ಕತ್ತಿ ಮಿನುಗುತ್ತದೆ. ಪರಿಸ್ಥಿತಿ ಹೇಗೇ ಇರಲಿ ಎದುರಿಸುವ ಛಲ ಮೂಡುತ್ತದೆ.
ಬದುಕಿನ ಬಗ್ಗೆ ನೂರಾರು ಕಂಪ್ಲೇಟುಗಳಿರಬಹುದು. ಆದರೆ ಬದುಕೇ ಕಂಪ್ಲೇಂಟ್ ಆದಾಗ ನಮ್ಮ ಪರಿಸ್ಥಿತಿ ಊಹಿಸಲೂ ಅಸಾಧ್ಯ! ಅಂತಹ ವಿಷಮ ಸ್ಥಿತಿಯಲ್ಲೂ ಪ್ಯಾಪಿಲಾನ್ ಪ್ರಯತ್ನಗಳು ನಮ್ಮನ್ನಾವರಿಸಿ ಕಾಡಿ ಕೊನೆಗೊಂದು ಜೀವನಪಾಠ ಕಲಿಸುತ್ತದೆ.
ನಾಗರಿಕ ಸಮಾಜದ ಕೊಚ್ಚೆಯನ್ನು ಎಲ್ಲಿಯೂ ವೈಭವಿಕರಿಸದೇ ಸಾದರಪಡಿಸಿದ್ದಾರೆ. ಅಂತೆಯೇ ಕಾಡು ಜನಾಂಗಗಳ ಜೀವನವನ್ನೂ ಹೋಲಿಸಿದ್ದಾರೆ. ಎಲ್ಲೆಲ್ಲೂ ಕೃತಕತೆಯೇ ತುಂಬಿರುವ 'ನಮ್ಮದು ನಾಗರಿಕತೆ' ಎಂದು ಹೇಳಿಕೊಳ್ಳಲು ಹೇಸಿಗೆಎನಿಸುವಷ್ಟು ಕೊಳಕಾಗಿದ್ದೇವೆ ಎಂಬುದು ಖೇದಕರ. ಹಾಗೆ ನಮ್ಮಲ್ಲಿ ನಿಷ್ಕಳಂಕ ಪ್ರೀತಿ, ಆತ್ಮೀಯತೆ, ಮೌಲ್ಯ, ಹಣದ ಮೌಲ್ಯ ಇವೇ ಮೊದಲಾದ ಅಂಶಗಳು ಕಾಣೆಯಾಗಿರುವುದು ಗೊಚರವಾಗುತ್ತದೆ. ಹಣದ ಲಾಲಚಿಗಳಾಗಿ ಬದಲಾಗಿದ್ದೇವೆ. ನಾವೆಲ್ಲಾ ಹೇಳಲು ಮಾತ್ರ ನಾಗರಿಕರು ವರ್ತನೆ ಮಾತ್ರ 'ಅನಾಗರಿಕ'. ನಮ್ಮ ವರ್ತನೆಗಳು ಹೊರಗೊಂದು ಒಳಗೊಂದು ಎಂಬುದನ್ನು ಈ ಕೃತಿ ಮೊತ್ತಮ್ಮೆ ಸಾರುತ್ತದೆ.
ಹಾಗೆಯೇ ಪ್ರೀತಿಗೆ, ಸ್ನೇಹಕ್ಕೆ, ಹಣದಾಹಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಓದುಗರಿಗೆ ಸ್ವಾತಂತ್ರ್ಯದ ಮಹತ್ವ, ವ್ಯವಸ್ಥೆಯೊಂದಿಗೆ ಹೊಂದಾಣಿಕೆ, ಆತ್ಮವಿಶ್ವಾಸ, ಬರವಸೆ, people management ಗಳ ಬಗ್ಗೆ ಪಾಠ ಹೇಳುವ ಕೃತಿ 'ಪ್ಯಾಪಿಲಾನ್'

thanks to ಹೆನ್ರಿ, ಪೂರ್ಣಚಂದ್ರ, ಪ್ರದೀಪ.

ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...