Showing posts with label ಕತೆ-ಕವಿತೆ. Show all posts
Showing posts with label ಕತೆ-ಕವಿತೆ. Show all posts

Saturday, July 10, 2021

ಪ್ರತಿಫಲನ.



ಕುಳಿರ್ಗಾಳಿ ಶಿಖಾರಿ ಗುಡ್ಡದ ಕಡೆಯಿಂದ ಬೀಸುತಲಿತ್ತು. ಮಂಜು ನಿಧಾನವಾಗಿ ಶಿಖಾರಿ ಗುಡ್ಡವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತಲಿತ್ತು. ಶಿಖಾರಿ ಗುಡ್ಡದ ಎಡ ಮಗ್ಗುಲಿಗೆ ನನ್ನ ಮನೆಯಿದೆ. ಕೆಂಪಾದ ಸೂರ್ಯ ಶಿಖಾರಿ ಗುಡ್ಡದಲ್ಲಿ ಅಡಗಲು ನಿಧಾನಕ್ಕೆ ಶಿಖಾರಿ ಗುಡ್ಡಕ್ಕೆ ಇಳಿಯುತ್ತಿದ್ದ. ಮರಗಳ ನೆರಳು ಉದ್ದಕ್ಕೆ ಬೆಳೆದು ಮನೆಯ ಜಗುಲಿ ಹೊಕ್ಕು ಅಲ್ಲೇ ಕಾಲು ಚಾಚಿತ್ತು. ದನ ಕರುಗಳ ಗಂಟೆಯ ನಾದ ಕಿವಿಗಳ ತುಂಬುತಲಿತ್ತು. ಕತ್ತಲನ್ನು ನಿಧಾನಕ್ಕೆ ಚಳಿ ಅಪ್ಪಿಕೊಳ್ಳುತಲಿತ್ತು.

ನಮ್ಮ ಮನೆಯ ಸನಿಹದಲ್ಲೇ ಕಮ್ಮಾರರ ಕೇರಿಗೊಂದು ಸುಂದರ ರಸ್ತೆ. ಮೈಲುದ್ದ ಮಲಗಿದ ರಸ್ತೆ ಕೆಂಧೂಳಿಯಿಂದ ಅಲಂಕೃತಗೊಂಡು, ಅಜಿರೆವರೆಗೆ ರಸ್ತೆ ಹಾವಿನಂತೆ ಸುತ್ತಿ ಸುಮ್ಮನಾಗಿತ್ತು. ಇಳಿಜಾರಿನ ಕೊನೆಗೆ ಹರಿವ ಚಿತ್ತೇರಿ ಹೊಳೆ ಸುತ್ತಲೂ ಹಬ್ಬಿದ ವನವು ಶಿಖಾರಿಗುಡ್ಡದ ತನಕವೂ ಹಬ್ಬಿತ್ತು. ಶಿಖಾರಿಗುಡ್ಡದ ಬಲ ಮಗ್ಗುಲಿನಲ್ಲಿ ಚೀರು, ಸುಬ್ಬಮ್ಮ, ಶಂಕ್ರ ಮನೆ ಮಾಡಿಕೊಂಡಿದ್ದರು. ಶಿಖಾರಿ ಗುಡ್ಡದ ಎಡ ಮಗ್ಗುಲಿನಿಂದ ಹಬ್ಬಿದ ವನವು ನಮ್ಮ ತೋಟದ ಬುಡಕ್ಕೆ ಬರುವಷ್ಟರಲ್ಲಿ ಅಸಾಧ್ಯ ಜಿಗ್ಗುಗಳಾಗಿ ಪರಿವರ್ತನೆ ಹೊಂದಿ ಒಳಹೋಗಲಾರದಷ್ಟು ದಟ್ಟವಾಗಿತ್ತು.

***

ಆಗಸ್ಟೇ ತೋಟದ ಕೆಲಸ ಮುಗಿಸಿ ಕಾಲು ಚಾಚಿ ಕುಳಿತು, ಚಹಾ ಹೀರುತ್ತಾ, ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಚೀರು ಸುಬ್ಬಮ್ಮರ ಮನೆ ಕಡೆಯಿಂದ ಗದ್ದಲದ ಸದ್ದೊಂದು ಕೇಳಿ ಬಂತು. ಅನೇಕ ಜನ ಸೇರಿ ಕೂಗಿಕೊಂಡತೆ ಏನೋ ಪ್ರಾಣಿಗಳನ್ನು ಅಡ್ಡಗಟ್ಟಿದಂತಹ ಗಲಾಟೆ. ದನವೋ ಎಮ್ಮೆಯನ್ನು ಅಡ್ಡಗಟ್ಟುವ ದನಿಯಾಗಿ ನನಗೆ ಕೇಳಿಸಿತು. ಹೋಗಿ ನೋಡಿ ಬರೋಣವೆಂದೆನಿಸಿದರೂ ಬಹಳಾ ಸುಸ್ತಾದುದರಿಂದ ಸುಮ್ಮನಾದೆ. ಅವರ ಕೇರಿಕಡೆಯಿಂದ ಕೋಳಿ ಕುಪ್ಪ ಬರುವುದು ಕಾಣಿಸಿತು. ಇವನಲ್ಲೇ ಕೇಳೋಣವೆಂದು ಸುಮ್ಮನಾದೆ.

ಕೋಳಿ ಅಂಕದಲ್ಲಿ ಹಮ್ಮೀರನಾದ ಈತ ಎರಡು ಕೋಳಿ ಚಂಚಿಕೊಂಡು ಕೋಳಿ ಅಂಕಕ್ಕೆ ಹೊರಟಿದ್ದ. ಆತನನ್ನು ಕರೆದೆ. ಬಹಳ ಗಡಿಬಿಡಿಯಲ್ಲಿದ್ದ ಆತ ಸ್ವಯಂ ಮುಚ್ಚುವ ಗೇಟು ತೆಗೆದುಕೊಂಡು ಬಂದು ಅನ್ಯ ಮನಸ್ಕನಾಗಿ ನನ್ನ ಪ್ರಶ್ನಾರ್ಥಕವಾಗಿ ನೋಡಿದ. "ಕಮ್ಮಾರರ ಕೇರಿಯಿಂದ ಏನೋ ಗಲಾಟೆ ಕೇಳುತ್ತಿದೆಯಲ್ಲಾ ಮರಾಯ ನಿನಗೇನಾದರು ಗೊತ್ತೋ?" ಎಂದೆ. "ಚೀರು ಮನೆಯ ಹಳೇ ದನವಿರಬೇಕು ಕೊಟ್ಟಿಗೆಗೆ ಬರಲು ಉಪದ್ರವ ಕೊಡುತ್ತಿರಬೇಕು. ಅದೇ ಗದ್ದಲ." ಎಂದು ಗಡಿಬಿಡಿಯ ತೀರ್ಮಾನ ಕೊಟ್ಟ. ನನಗೆ ಹಾಗನಿಸುತ್ತಿರಲಿಲ್ಲವಾದರೂ ನನ್ನ ಅನುಮಾನ ಅವನಲ್ಲಿ ಹೇಳಿದರೆ ಆತ ಇನ್ನೇನೊ ಹೇಳಿ ತನ್ನದೇ ಸರಿ ಎಂದು ವಾದಿಸುವವನಾದ್ದರಿಂದ ಸುಮ್ಮನಾದೆ. ಈಗ ಶಬ್ದ ಸಂಪೂರ್ಣ ನಿಂತು ಹೋದುದರಿಂದ ಸುಮ್ಮನಾದೆ. ಕೋಳಿ ಕುಪ್ಪ ತನ್ನ ಕೋಳಿಯೊಂದಿಗೆ ಹೊರಟು ಹೋದ. 

ಕೋಳಿ ಕುಪ್ಪನಂತವರು ಸಿಗುವುದೇ ವಿರಳ. ಆತನೊಬ್ಬ ವಿಲಾಸಿ ವಿರಾಮ ಜೀವಿ. ಕೋಳಿಗಳ ಕುರಿತು ಆತ್ಮಜ್ಞಾನಿ. ಈತನಿಗೆ ಕೋಳಿಗಳಿಗೆ ನೀಡುವ ಔಷಧಗಳು ಆರೈಕೆ ಮಾಡುವ ವಿಧಾನ ಗಳೆಲ್ಲ ನಾಲಿಗೆ ತುದಿಯಲ್ಲಿ. ದಿನದ ಹೆಚ್ಚಿನ ಸಮಯ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಳೆಯುತ್ತಿದ್ದ. ಆತ ಮನವಿಟ್ಟು ಹುಂಜನೊಂದನು ಸಾಕಿದರೆ ಕೋಳಿ ಅಂಕದಲಿ ಗೆದ್ದೇ ತೀರುವುದು. ಆದರೆ ಆತನೆಷ್ಟು ಅನ್ಯ ಮನಸ್ಕನೆಂದರೆ ಆತನ ಮನೆಯಲ್ಲೇ ಒಂದೇ ಒಂದು ಕೋಳಿ ಇಲ್ಲ! "ಕುಪ್ಪ ನೀನೊಂದು ಕೋಳಿ ಫಾರಂ ಮಾಡಿದ್ರೆ ಚೆನ್ನಾಗಿತ್ತು ಮರಾಯ. ನಿನಗೆ ಕೋಳಿಗಳ ಕುರಿತು ಒಳ್ಳೆ ಜ್ಞಾನವಿದೆ." ಎಂದು ಒಮ್ಮೆ ಎಲ್ಲೊ ಹೊರಟವನಲ್ಲಿ ಬಿಟ್ಟಿ ಸಲಹೆಯೊಂದನು ಎಸೆದೆ. "ಕೋಳಿಗಳನ್ನು ಫಾರಂನಲ್ಲಿಟ್ಟು ಸಾಕಬಾರದು. ಪಾಪ ಬರ್ತದೆ." ಎಂದ.

"ಅಲ್ವೋ ಕೋಳಿ ಅಂಕ ಮಾಡಿ, ಚೂರಿ ಕಟ್ಟಿ ಹಿಂಸೆ ಕೊಟ್ಟರೆ ಬರಲ್ವೇನೋ?" ಎಂಬ ತರ್ಕವನ್ನು ಮುಂದಿಟ್ಟೆ. " ಹಾಗಲ್ಲ ಬುದ್ದಿ "ದುಡ್ಡಿಗೆ ಕೋಳಿಗಳನ್ನು ಮಾರಾಟ ಮಾಡಬಾರದು." ಎಂಬ ತನ್ನ ವಿಚಿತ್ರ ವಿತ್ತಂಡವಾದವನ್ನು ಮುಂದಿಟ್ಟು ಅಲ್ಲಿಂದ ಕಾಲ್ಕಿತ್ತ. ಎಲ್ಲರಿಗೂ ಧರ್ಮಾರ್ಥ ಕೋಳಿ ಮತ್ತು ದನಗಳಿಗೆ ಬರುವ ಕಾಯಿಲೆಗಳಿಗೆ ಔಷಧಿ ಕೊಡುತ್ತಾ ಸಿಗುವ ಆರಾಮವನ್ನು ಅನುಭವಿಸುತ್ತಾ, ಒಂದೆರಡು ಗದ್ದೆ ಮಾಡಿಕೊಂಡು ಕಾಲಹಾಕುತ್ತಿದ್ದ. ಕೇರಿಯುದ್ದಕ್ಕೂ ಇಂತಹುದೇ ಮನಸ್ಥಿಯವರೇ ಅನೇಕರಿದ್ದರು.

ಪತ್ರಿಕೆಯನ್ನು ಎತ್ತಿಕೊಂಡು ಅದರ ಮೇಲೆ ಕಣ್ಣಾಡಿಸತೊಡಗಿದೆ. ಆಗಲೇ ಸುಬ್ಬಣ್ಣನ ಮನೆಯ ನಾಗರಾಜ ಏದುಸಿರು ಬಿಡುತ್ತಾ, ಓಡುತ್ತಾ ಮನೆ ಕಡೆಗೆ ಬಂದ.  ಬಂದ ಗಡಿಬಿಡಿ ನೋಡಿದರೆ ಏನೋ ಅನಾಹುತವಾಗಿದೆ ಎಂದು ಅಂದಾಜಿಸಿದೆ. ಅವನನ್ನೇ ನೋಡುತ್ತಾ, "ಎಂತಾ ಆಯಿತು?" ಎಂದೆ. 'ನಮ್ಮ ಮನೆಯ ದನವನ್ನು ಯಾವುದೋ ಪ್ರಾಣಿ ಹಿಡಿದಿದೆ, ಬೇಗ ಬಂದು ತಪ್ಪಿಸಬೇಕು. ಎಂದು ಅವಸರ ಮಾಡಿದ. ಈಗ ಇಚಾರಣೆ ಸರಿಯಲ್ಲವೆಂದು ನನ್ನ ಹಳೆ ಕಾಲದ ರೈಪಲ್ನ್ನು ತೆಗೆದು ಚರೆ ತುಂಬಿಸಿ, ಮನೆಯಿಂದ ಹೊರಟೆ. ಅವನ ಮನೆಗೆ ಏನಿಲ್ಲವೆಂದರೂ ಐದು ನಿಮಿಷದ ಹಾದಿ. ಕೂಡಲೇ ಹಳೇ ಎಜಿಡಿ ಬೈಕ್ನ ಕಿವಿ ಹಿಂಡಿದೆ. ನಾಗರಾಜ ನನ್ನ ಕೋವಿ ಹಿಡಿದು ಗೇಟಿನೆಡೆಗೆ ಓಡಿದ. 

ಕೆಂದೂಳು ಮಿಶ್ರಿತ ಹೊಗೆ ಉಗುಳುತ್ತಾ ಬೈಕ್ ಮಣ್ಣು ರಸ್ತೆಯಲ್ಲಿ ಜಿಂಕೆಯಂತೆ ಓಡಿತು. 'ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' 'ನಾನು ನೋಡಿಲ್ಲ ಮರ್ರೆ, ಅಮ್ಮ ನೋಡಿದ್ದಾಳೆ.' ಎಂದ. 'ಅಮ್ಮನಿಗೂ ಸರಿಯಾಗಿ ಕಾಣಿಸಿಲ್ಲವಂತೆ' ಎಂದ. 'ನೀವೆಲ್ಲಾ ಕುರುಡರೋ ಹೇಗೆ?' ಎಂದು ಅಸಮದಾನದಿಂದ ಗದರಿದೆ. ಅವನಿಂದ ಉತ್ತರವೇ ಬರಲಿಲ್ಲ. 'ಯಾವ ಕಡೆ ಹೋಯಿತೆಂದು ಗೊತ್ತಾ?' 'ಶಿಖಾರಿ ಗುಡ್ಡದ ನೆತ್ತಿಯ ಕಲ್ಲು ಬಂಡೆ ಎಡೆಗೆ ಕರುವನ್ನು ಎಳೆದೊಯ್ಯಿದಿತು.' ಎಂದ. 'ಸರಿ', ಎಂದು ಶಿಖಾರಿ ಗುಡ್ಡದ ನೆತ್ತಿಯ ಕಡೆಗೆ ಬೈಕ್ ತಿರುಗಿಸಿದೆ. ನನ್ನ ಮನೆಯಿಂದ ಕೇವಲ ಎರಡು ಫರ್ಲಾಂಗ್ ದೂರ ಮಾತ್ರವಿದ್ದ ಎರಡು ಪರ್ವತದ ಕಣಿವೆಯಲ್ಲಿ ಬೈಕ್ನ್ನು ನಿಲ್ಲಿಸಿದೆ. ನಾಗರಾಜನ ತಾಯಿ ಅಲ್ಲೇ ಒಂಟಿ ದೆವ್ವದಂತೆ ದೊಣ್ಣೆ ಹಿಡಿದು ವೀರಬಾಹುವಿನಂತೆ ನಮಗಾಗಿ ಕಾಯುತಲಿದ್ದಳು. ಇಲ್ಲಿಂದಲೇ ಶಿಖಾರಿ ಗುಡ್ಡದ ನೆತ್ತಿಗೆ ಹೋಗುವ ಕಾಲು ದಾರಿಯೊಂದಿತ್ತು. ಎರಡು ಮೂರು ನಿಮಿಷದೊಳಗೆ ನೆತ್ತಿ ತಲುಪಬಹುದಾದ ಜಾಗದಲ್ಲಿಂದು ಅಸಾಧ್ಯ ಜಿಗ್ಗು ಬೆಳೆದು ಯಾರೂ ಏರದಂತೆ ಪ್ರತಿಬಂದಿಸಿತ್ತು ಪ್ರಕೃತಿ. ಮೊದಲೆಲ್ಲಾ ಇಲ್ಲಿ ವಿಶಾಲವಾದ ಮರವಿದ್ದಿತ್ತು. ನಾಟ ಕಳ್ಳರಿಗೆ ಬಲಿಯಾಗಿದ್ದವು. 

ನಾವು ಬಂದದ್ದೇ 'ಒಡೀರೆ, ಈ ಜಿಗ್ಗಿನೊಳಗೆ ನಮ್ಮ ಹೆಂಗರುವೊಂದನ್ನು ಎಳೆದೊಯ್ಯಿದಿತು. ಸ್ವಲ್ಪ ಕಾಣಿ.' ಎಂದು ಭಯಭೀತಳಾದಂತೆ ತೋರುತ್ತಿದ್ದ ಆಕೆ, ಒಂದು ಅಸಾದ್ಯ ಜಿಗ್ಗಿನೆಡೆಗೆ ತನ್ನ ಅಸಹಾಯಕ ಕೈ ತೋರಿದಳು ಸುಬ್ಬಮ್ಮ. ' ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' ಆಕೆ ವೀಳ್ಯ ಉಗಿಯುತ್ತಾ 'ಚಿರತೆ ಇರಬೇಕು ಅಯ್ಯ. ಒಂದೇ ಅಲ್ಲ, ಎರಡು ಮೂರು ಪ್ರಾಣಿ ಇದ್ದಂಗಿದೆ.' ಆಶ್ಚರ್ಯ ಚಕಿತನಾದೆ. ಈ ಇಳಿ ಸಂಜೆಯ ಹೊತ್ತಿನಲ್ಲಿ ಕರುವನ್ನು ಹೊತ್ತೊಯ್ಯುವ ಪ್ರಾಣಿ ಯಾವುದೆಂದು ಅಂದಾಜಿಸಲಾಗಲಿಲ್ಲ.

ಮೊದಲೆಲ್ಲಾ ಹಗಲು ಹೊತ್ತಿನಲ್ಲೇ ದಾರಿಯಲ್ಲಿ ಮೊಲ, ಜಿಂಕೆ, ಕಡವೆಗಳು ಸಿಕ್ಕುತ್ತಿದ್ದವು. ಗುಡ್ಡದಲ್ಲಿ ನಿಶ್ಚಿಂತವಾಗಿ ಮೇಯುತ್ತಿದ್ದವು. ಕೇರಿಯವರ ಬಾಯಿ ಚಪಲಕ್ಕೆ, ಪೇಟೆ ಜನರ ಶೋಕಿಗೆ ಅವೆಲ್ಲಾ ತಮ್ಮ ಪ್ರಾಣ ಅರ್ಪಿಸಬೇಕಾಗಿ ಬಂತು. ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಬಂದೂಕು ನಳಿಕೆಗೆ ಗುರಿ ಮಾಡಿದರು. ಶಿಖಾರಿ ಗುಡ್ಡದ ಪ್ರಾಣಿಗಳ ಜೀವ ವಿಮೋಚನೆಗೆ ಒಳಗಾಯಿತು. ಒಂದೆರಡು ದಿನಗಳಲ್ಲ ಅನೇಕ ವರ್ಷಗಳವರೆಗೆ ಭೇಟೆ ಅವ್ಯಾಹತ. ಕಾಡಿನಲ್ಲಿರಬೇಕಾದುದು ಇವರ ಹೊಟ್ಟೆಯಲ್ಲಿ ತಣ್ಣಗೆ ಮಲಗಿತ್ತು. ಕೆಲವರಿಗೆ ಬೇಟೆ ಶೋಕಿ ಇನ್ನು ಕೆಲವರಿಗೆ ಬಾಯಿ ಚಪಲ. ಬೇಡವೆಂದು ಬಡಕೊಂಡ್ರೂ ಬಿಡದೇ ತಿಂದು ಮುಗಿಸಿದರು. ಚಿರತೆಗಳಿಗೆ ತಿನ್ನಲೇನೂ ಸಿಗದೆ ಊರಿಗೆ ಧಾಳಿ ಮಾಡುವುದು ಸಾಮಾನ್ಯ ಸಂಗತಿಯಾಗ ತೊಡಗಿತು. ಹುಲಿ ಬೆಕ್ಕುಗಳು ಕೋಳಿ ಗೂಡುಗಳಿಗೆ ಧಾಳಿ ಮಾಡುತ್ತಿದ್ದವು. ಇತ್ತೀಚಿನ ದಿನ ಮಾನಸದಲ್ಲಿ ಇದು ವಿಪರೀತಕ್ಕಿಟ್ಟಿತು.

ಜಿಗ್ಗಿನೊಳಗೆ ನುಗ್ಗಿದ ಪ್ರಾಣಿಯಾವುದೆಂದು ಊಹಿಸುತ್ತಾ ನಾಗರಾಜನೊಡನೆ ಜಿಗ್ಗಿನೊಳಗೆ ನುಗ್ಗ ತೊಡಗಿದೆವು. ಕಿಚಕ್ ಕಿಚಕ್ ಎಂದು ಕಾಡು ಕೋಳಿಗಳು ಸಣ್ಣ ಸದ್ದು ಮಾಡಿ ಮರೆಯಾದವು. ಹಕ್ಕಿ ಪಿಕ್ಕಿಗಳು ಕಂಡರೆ ಒಂದೂ ಉಳಿಸುವುದಿಲ್ಲವೆಂದು ಮುಂದಡಿ ಇಟ್ಟೆ. ಚರೆ ಕೋವಿಯನ್ನು ನಾಗರಾಜನಿಗೆ ಕೊಟ್ಟು, ಅಡ್ಡ ಬಂದ ಜಿಗ್ಗನ್ನು ಸವರುತ್ತಾ ದಾರಿ ಮಾಡುತ್ತಾ ಮುಂದಡಿ ಇಡತೊಡಗಿದೆ. ಮಲಗಿರುವ ಹುಲ್ಲುಗಳು ಪ್ರಾಣಿಯೊಂದು ನುಸುಳಿ ಹೋದ ಸಾಕ್ಷಿ ನುಡಿಯುತ್ತಿದ್ದವು. ಶಿಕಾರಿಯ ಹೆಜ್ಜೆ ಗುರುತು ಹಿಡಿಯಲು ಪ್ರಯತ್ನಿಸಿದೆ. ಮಳೆ ಹೋಗಿ ಅನೇಕ ದಿನಗಳಾದುದರಿಂದ ಮಣ್ಣಿನಲ್ಲಿ ಹೆಜ್ಜೆ ಗುರುತು ಗುರುತಿಸದಾದೆ.  ಇಂತಹ ಜಿಗ್ಗಿನೊಳಗೆ ಹೇಗೆ ನುಗ್ಗಿ ಹೋಗಿರಬೇಕೆಂದು ಆಲೋಚಿಸತೊಡಗಿದೆ. 

ಕೆಲವೇ ನಿಮಿಷ ನಡೆಯುವುದರೊಳಗೆ ಮೈ ಕೈ ಎಲ್ಲಾ ಗೀರಿದ ಗಾಯಗಳಿಂದ ತುಂಬಿ ಹೊಯ್ತು. ಬೆವರಿನೊಂದಿಗೆ ಬೆರೆತ ಗೀರಿದ ಗಾಯಗಳು ಚುರುಗುಟ್ಟುತ್ತಿದ್ದವು. 'ಬೇಕಾ ನಿನಗಿದೆಲ್ಲಾ?' ಎನ್ನುತಲಿತ್ತು ಒಳ ಮನಸ್ಸು. ಆಗಲೇ ಮುಸುವ ಮಂಗವೊಂದು ಕೀರಲು ದನಿ ಮಾಡಿ ತನ್ನ ಗುಂಪಿಗೆ ಸಂಜ್ಞೆ ಕೊಟ್ಟಿದ್ದು ಅಸ್ಪಷ್ಟವಾಗಿ ತೇಲಿಬಂತು. ಕಷ್ಟ ಪಟ್ಟು ಶಿಖಾರಿಗುಡ್ಡದ ನೆತ್ತಿಯೊಳಗೆ ಕಾಲಿರಿಸಿದಾಗ ಸೂರ್ಯ ಸಂಪೂರ್ಣವಾಗಿ ಜಿಗ್ಗಿನೆಡೆಯಲ್ಲಿ ಕಂತಲು ಕಾಯುತ್ತಿದ್ದ. ಗಾಳಿ ಗುಡ್ಡದ ಮೇಲಿನಿಂದ ಕೆಳಗೆ ಬೀಸುತಲಿತ್ತು. ಭೂತಾಕಾರದ ಮರಗಳು ಅಲ್ಪ ಬೆಳಕನ್ನು ಬಿಟ್ಟು ಭಯದ ವಾತಾವರಣ ನಿರ್ಮಿಸಿತ್ತು. ಹಕ್ಕಿ, ಮುಸುವ ಮಂಗಳಗಳ ವಿಪರೀತ ಅರಚಾಟ ಸ್ಪಷ್ಟವಾಗ ತೊಡಗಿತು. ಇಲ್ಲೆ ಎಲ್ಲೋ ಸನಿಹದಲ್ಲಿ ಅದಿರಬೇಕೆಂದು ಜಾಗರೂಕನಾದೆ. 

ಮರದ ನೆರಳಿನಲ್ಲಿ ಕರಿ ಕರಡಿಯಂತಹ ಬಂಡೆಯೊಂದು ಕಂಬಳಿ ಹೊದ್ದಂತೆ ನಮ್ಮೆದುರಿಗಿತ್ತು. ಈ ನೆರಳಿನಡಿ ಏನೋ ಚಲಿಸಿದ ಸದ್ದಾಯಿತು. ಒಂದು ಜೀವಿ ಮತ್ತೊಂದು ಜೀವಿಯನ್ನು ಎಳೆದಾಡುವಂತಹ ಸದ್ದು. ಎರಡು ಮೂರು ಜೀವಿಗಳು ಓಟ ಮುಗಿಸಿ ಬಂದು ದೀರ್ಘ ಶ್ವಾಸ ಬಿಡುವ ಸದ್ದುಗಳು. ಕೆಂಪಾದ ಆಗಸದೆದುರಿಗೆ ಬಿದ್ದಿದ್ದ ಕರಿ ಕಲ್ಲಿನ ಮೇಲೆ ಆ ಜೀವಿ ತನ್ನ ದರ್ಶನ ಕೊಟ್ಟಿತು. ಒಮ್ಮೆಲೆ ಮೆದುಳಿನ ನರ ತಂತುಗಳೆಲ್ಲಾ ತಲ್ಲಣಿಸಿ ಸ್ತಬ್ದವಾದವು. ಮೊದಲೇ ಪಸೆ ಆರಿದ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಲ್ಲಿನ ಮೇಲೆಲ್ಲಾ ರಕ್ತದೋಕುಳಿ. ದನದ ಕುತ್ತಿಗೆ ಕಚ್ಚಿ ಹಿಡಿದ ಚಿರತೆಯೊಂದು ತನ್ನ ಬೇಟೆಯನ್ನು ಸುರುಕ್ಷಿತ ಸ್ಥಳಕ್ಕೆ ಎಳೆದೊಯ್ಯುವ ಮೊದಲು ಸ್ವಲ್ಪ ವಿಶ್ರಾಂತಿಗಾಗಿ ಬಂಡೆ ಎಡೆಯಿಂದ ನಮಗೆ ದರ್ಶನ ಕೊಟ್ಟಿತ್ತು. ತೀವ್ರ ಚಟುವಟಿಕೆಯಿಂದ ಕೂಡಿದ್ದ ಸಂಜೆಯಲಿ ಚಿರತೆ ನಮ್ಮನ್ನು ಗಮನಿಸಲಿಲ್ಲ. ನಾವಿಬ್ಬರೂ ಹಿಂದೆಯೂ ಹೋಗದಂತಹ ಮುಂದಡಿಯು ಇಡದಂತಹ ಸಂಧಿಗ್ದಕ್ಕೆ ಸಿಕ್ಕಿಹಾಕಿಕೊಂಡೆವು. ಹಿಮ್ಮುಖವಾಗಿ ಓಡಲಾರದ ಎಡ ಬಲಕ್ಕೂ ದಾರಿಗಳಿಲ್ಲದ ಬೋನೊಳಗೆ ಬಿದ್ದಿದ್ದೆವು. ಕ್ಷಣ ಕಾಲ ಮೆದುಳೇ ಖಾಲಿ ಖಾಲಿ.

ನಮ್ಮೆಲ್ಲ ಕುಕೃತ್ಯಗಳು ಶಿಖಾರಿಗುಡ್ಡದ ಚಿರತೆಯ ಕಣ್ಣುಗಳಲ್ಲಿ ಪ್ರತಿಫಲನಗೊಂಡು ನನ್ನನ್ನು ವಿಚಲಿತಗೊಳಿಸಿದವು. ತೆವಳುತ್ತಾ ಮೇಲೆ ಬರುತ್ತಾ ಚಿರತೆಯ ಸಂಪೂರ್ಣ ದರ್ಶನ ಸಿಗುತ್ತಲೇ ನಾಗರಾಜ ನಡುಗುವ ಕೈಗಳಲ್ಲೇ ಕೋವಿಯ ಕುದುರೆಯನ್ನು ಅಮುಕಲು ತಯಾರಾಗಿದ್ದ. ಒಮ್ಮೆಲೆ ನಾನು ಕೋವಿ ಮೇಲೆರುಗುದಕ್ಕೂ ಆತ ಕೋವಿಯ ಕುದುರೆಯನ್ನು ಸಂಪೂರ್ಣ ಅದುಮುದಕ್ಕೂ ಸರಿ ಹೋಯ್ತು. ಗುಂಡು ಹಾರದೆ ಕೋವಿ ಕೆಳಗೆ ಬಿದ್ದು ನಿಶ್ಶಬ್ದವಾಯ್ತು. ನಾಗರಾಜ ನನ್ನನ್ನೇ ಆಶ್ಚರ್ಯ ಚಕಿತನಾಗಿ ನೋಡ ಹತ್ತಿದ. ಕೋವಿಯಿಂದ ಶಬ್ದ ಹೊರ ಹೊಮ್ಮಿದಿದ್ದರೆ ನಾವಿಬ್ಬರೂ ಪಡ್ಜವಾಗುತ್ತಿದ್ದೆವು. ವಿರುದ್ದ ದಿಕ್ಕಿನಿಂದ ಬೀಸುತ್ತಿದ್ದ ಗಾಳಿ, ಮೀಟದ ಕೋವಿಯ ಕುದುರೆ ನಮ್ಮನ್ನುಳಿಸಿತ್ತು. ಮುಂದಿದ್ದ ನಾಗರಾಜನಿಗೆ ವಾಪಾಸಾಗುವ ಸೂಚನೆ ನೀಡಿದೆ. ಚಿರತೆಯನ್ನೇ ಗಮನಿಸುತ್ತಾ ಏನೂ ಮಾತನಾಡದೇ ಹಿಮ್ಮುಖವಾಗಿ ಚಲಿಸತೊಡಗಿದೆವು. ಸುಬ್ಬಮ್ಮನ್ನ ಕರುವಾಗಲೇ ಪ್ರಾಣ ಬಿಟ್ಟಿತ್ತು. 'ಹೂಜಿ ಗಿಡದ' ಬೋನಿನಿಂದ ನೊಣ ಹೊರ ಬರುವಂತೆ ಬರತೊಡಗಿದೆವು. ಸುಬ್ಬಮ್ಮನ ಕರುವಾಗಲೇ ಪ್ರಾಣ ಬಿಟ್ಟಾಗಿತ್ತು. ಜಿಗ್ಗಿನೊಳಗೆ ಹೇಗೋ ಸುಲಭವಾಗಿ ನುಗ್ಗಿದ್ದೆವು. ಹುಲಿ ಬೋನಿಗೆ ಬಿದ್ದ ಇಲಿಯಂತಾಗಿದ್ದೆವು. ಮೈಯಲ್ಲಿ ಚೂರೂ ಜಾಗವಿಲ್ಲದಂತೆ ತರಚು ಗಾಯಗಳು. ಹಿಂದಡಿ ಇಡುತ್ತಾ ಬೈಕಿರುವಲ್ಲಿಗೆ ಬಂದಾಗ " ಗುಂಡು ಹಾರಿಸಿ ಕೊಲ್ಲ ಬಹುದಿತ್ತಲ್ಲಾ?" ಎಂದ ನಾಗರಾಜ. "ಕರು ಉಳಿಯುವ ಸಾಧ್ಯತೆ ಇಲ್ಲದಾಗ ಕೊಂದೇನು ಲಾಭ?" " ಮುಂದೊಂದು ದಿನ ಅದು ಇನ್ನೊಂದು ದನವನ್ನು ಸಾಯಿಸಬಹುದು." "ಅದಕ್ಕೆ ಈಗಲೇ ಕೊಲ್ಲುವುದೇ?" "ಅದೊಂದು ಹೆಣ್ಣು ಚಿರತೆ, ಈಗಷ್ಟೇ ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅವು ಹೊರಬರುವುದಿಲ್ಲ. ತನ್ನ ಸಂಗಾತಿಯನ್ನೂ ಕಳೆದುಕೊಂಡಿರಬೇಕು. ಹಾಗಾಗಿ ಸ್ವತಃ ಬೇಟೆಗೆ ಬಂದಿದೆ. ಮರಿಗಳೆಲ್ಲಾ ಅನಾಥವಾಗುವುದು ಸರಿಯಲ್ಲ." ಎಂದು ಆತನಿಗೆ ತಿಳಿ ಹೇಳಿದೆ. "ನಿಮಗೆ ಹೇಗೆ ಇಷ್ಟೆಲ್ಲಾ ವಿವರ ತಿಳಿಯಿತು?" ಅವನೆಂದ. 

" ಅದರ ಹೊಟ್ಟೆಯನ್ನು ನೀನು ಗಮನಿಸಿದೆಯಾ? ಅದು ಬೆನ್ನಿಗಂಟಿದೆ. ಹಾಲು ತುಂಬಿದ ಅದರ ಜೋಲು ಮೊಲೆಗಳನ್ನು ನೋಡಿದರೆ ಅದೀಗಷ್ಟೇ ಮರಿ ಹಾಕಿದೆ ಎಂದು ಗೊತ್ತಾಗುತ್ತೆ." ಎಂದೆ. ನಾಗರಾಜ ಏನೂ ಮಾತನಾಡದೆ ನನ್ನ ಜೊತೆ ಹೆಜ್ಜೆ ಹಾಕಿದ. ಶಿಖಾರಿ ಗುಡ್ಡವನ್ನು ಪ್ರಾಣಿ ಮುಕ್ತ ಮಾಡಿದ್ದಕ್ಕೆ ಸೇಡು ತೀರಿಸಲೋ ಎಂಬಂತೆ ಚಿರತೆಯೊಂದು ನಮ್ಮ ಕರುವನ್ನು ಎಳೆದೊಯ್ಯಿದಿತು. ಬೈಕನ ಕಿವಿ ಹಿಂಡಿ ಧೂಳು ರಸ್ತೆಯಲ್ಲಿ ನಿಧಾನಕ್ಕೆ ಧೂಳಿನೊಂದಿಗೆ ಒಂದಾದೆವು.



ಶ್ರೀಧರ್. ಎಸ್. ಸಿದ್ದಾಪುರ.

                                                                                ವಿಳಾಸ:- ರಥಬೀದಿ ಸಿದ್ಧಾಪುರ,

                          ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,

                          ಉಡುಪಿ ಜಿಲ್ಲೆ 576229.

 

Sunday, October 4, 2020

ಕಾಟಿ ಮರಿಯ ಕೃಪಾಕಟಾಕ್ಷ....



 

ಹೆಸರು ಹೇಮಂತ್.‌ ಅವಧೂತನಂತಹ ಗಡ್ಡ. ಹೊಳೆವ ಜಿಂಕೆ ಕಣ್ಣು . ಛೆ ಜಿಂಕೆ ಎಂದರೆ ಮೋಸವಾದೀತು. ಕಾಡುಕೋಣದ ಕಣ್ಣು. ವದನದ ತುಂಬಾ ಹರಡಿಕೊಂಡ ಕುರುಚಲು ಗಡ್ಡ. ಎಲ್ಲೋ ನೆಟ್ಟ ನೋಟ.  ಭಾವತತ್ಪರತೆ. ಬಿಗುಮಾನ. ಎತ್ತರದ ನಿಲುವು. 

ಬಿಚ್ಚಲೊಲ್ಲದೆ ಬಿಗಿದ ಅವನ ತುಟಿಗಳನು ಮೆಲು ಮಳೆಯಲ್ಲಿ ಮಾತಿಗೆಳೆದಳು ಅವನಿ. ಕತೆಗಳು, ಮಲೆನಾಡು ಅವರ ನಡುವಿನ ಏಕತ್ರ ಸೂತ್ರ. ಅವನ ಸೃಜನಾತ್ಮಕ ಕೆಲಸಗಳಲ್ಲಿ ಅವಳ ಹಾಜರಿ ಇತ್ತು. ಇಂದು ಅವನ ಎರಡನೆಯ ಕತಾ ಸಂಕಲನ ಅನಾವರಣಗೊಂಡಿತ್ತು. ಪುಸ್ತಕ ಅನಾವರಣದ ಗೌಜಿ ಮುಗಿದು ಅವರಿಬ್ಬರು ಕಲಾ ಪರಿಷತ್ತಿನ ಎದುರಿನ ಕಾಫಿಬಾರ್ ನಲ್ಲಿದ್ದರು. ಕಪಚಿನೊಗೆ ಆರ್ಡರಿಸಿದ್ದರು.


ಗುಡುಗು ಬಂದು ಅವರ ಮಾತಿಗೆ ಮೇಳವಾಗಿತ್ತಂದು. ಧೋ ಎಂದು ಸುರಿವ ಮಳೆಯ ನಡುವೆ ಅವಳು ಅವನನ್ನು ಮಾತಿಗೆ ಎಳೆದಳು.
ಏಯ್ ಹೇಮ್, ನೀನು ಹೇಗೆ ಪರ್ತಕರ್ತನಾದೆ? ಎಂದು ಹೇಳುತ್ತಿಯೆಂದು ಕಳೆದ ಬಾರಿಯೇ ಹೇಳಿದ್ದೆ ಎಂದು ಜೋಗುಳದಂತೆ ಅವಳು ಪಿಸುಗುಟ್ಟಿದಳು.
ಮಲೆನಾಡಿನ ನನ್ನ ನೆನಪೇ ನನಗೆ ಶ್ರೀರಕ್ಷೆ.
ಹೇಳಿದರೆ ನೀ ನಗುತ್ತಿ, ಯಾಕೆ ಈಗ ಅದೆಲ್ಲಾ ಮೆಲ್ಲಗೆ ಅವನೆಂದ.
ಕೇಳುವ ಕುತೂಹಲ ಎಂದು ಮೆಲ್ಲಗೆ ಅವನ ಬೆನ್ನಿಗೆ ಗುದ್ದಿದಳು.
ಮರಾಯ್ತಿ ನೀ ಬಿಡುವ ಹಾಗೆ ಕಾಣಿಸೊಲ್ಲ ಎಂದು ಒಂದು ನೋಟವನ್ನು ಅವಳೆಡೆಗೆ ಎಸೆದು ನಕ್ಕ.
..........................ಹಂ ಅವಳೂ ನಕ್ಕಳು.
ಅದೊಂದು ವಿಚಿತ್ರ ಕತೆ. ನಾನೊಂದು ಕಾಡುಕೋಣದ ಮರಿಯಿಂದಾಗಿ ಈ ವೃತ್ತಿಗೆ ಬಂದೆ.
ಏನು? ಅವಳು ಆಶ್ಚರ್ಯ ತಡೆಯಲಾಗದೆ ಕೇಳಿದಳು.
ಹೌದು
ಅದು ಹೇಗೋ? ಎಂದಳು.
ಅದೊಂದು ನನ್ನ ಬದುಕಿನ ಅತಿ ವಿಚಿತ್ರ ಘಟನೆ. ಎಲ್ಲರ ಬದುಕಲ್ಲೂ ಘಟಿಸೊಲ್ಲವೆಂದು ನೆನಪ ಸುರುಳಿ ಬಿಚ್ಚತೊಡಗಿದ.
***
ಮಾಘ ಮಾಸದ ಸಂಜೆಗತ್ತಲಿನ ಸಮಯ. ಹಸುಗಳು ಹಟ್ಟಿಗೆ ಮರಳುವ ಹೊತ್ತು. ಸೂರ್ಯ ತನ್ನ ಕೆಲಸ ಮುಗಿಸಿದ್ದ. ಗಾಳಿ ತಣ್ಣಗೆ ಹೊಯ್ಯುತ್ತಿತ್ತು.
ಓತಿಕ್ಯಾತನಂತಿರುವ ತನ್ನ ನೆಚ್ಚಿನ ಬಂಟ ಅಂಜು ಬುರುಕ ಮಾಚನೊಡನೆ "ಬೇಟೆಗೆ ಹೋಗುವಾ." ಎಂದೆ. ಮಾಚ ನನ್ನ ಬೇಟೆಯ ಸಂಗಾತಿ. ಮೂರು ಹೊತ್ತು ನಮ್ಮನೆಯ ಕೂಳು ತಿನ್ನದಿದ್ದರೆ ಅವನಿಗೆ ಸರಿಯಾಗಿ ನಿದ್ರೆ ಹತ್ತಲ್ಲ. ಬೇಟೆ ಹುಚ್ಚಿನ ಮನುಷ್ಯ. ತನ್ನ ಸ್ವಭಾವಕ್ಕೂ ಬೇಟೆಗೂ ವಿರುದ್ಧ ಪದದಂತಿದ್ದ.
ಮಲೆನಾಡಿನ ನಮ್ಮ ಒಂಟಿ ಮನೆಯಿಂದ ಚರೆ ಕೋವಿ ಹಿಡಿದು ಕಬ್ಬಿನಗದ್ದೆ, ಕಾಲು ತೋಡು ದಾಟಿ ಕುರುಚಲು ಕಾಡಿಗೆ ಬಂದಿದ್ದೆವು. ರಾತ್ರಿ ಪೂರಾ ತಿರುಗುವ ಉದ್ದೇಶದಿಂದ ಒಂದಿಷ್ಟು ಕಡುಬು, ಚರೆ ಕೋವಿಗೊಂದಿಷ್ಟು ಗುಂಡು ನಮ್ಮ ಜೊತೆಗಿದ್ದವು. ಕಾಟಿ, ಚಿರತೆ, ಹಂದಿಗಳು ಕಾಡ ನಡುವೆ ಹೆದ್ದಾರಿ ಕೊರೆದ ಜಾಗವದು. 
ಕುರುಚಲು ಕಾಡಿನ ನಡುವೆಯೊಂದು ದೊಡ್ಡಾಲದ ಮರವಿತ್ತು. ಕುರುಚಲು ಕಾಡಿನ ನಡುವೆಯೇ ಜಿಂಕೆ, ಕಡವೆಗಳನ್ನು ಒಂದೇಟಿಗೆ ಹೊಡೆದುರುಳಿಸಿದ್ದ ನಡು ಕಾಡಲ್ಲಿ ಅವತ್ತು  ಯಾವ ಬೇಟೆಯೂ ಕಾಣಸಿಗದೇ, ನಿರಾಶನಾಗಿ  ಆ ಆಲದ ಮರದಡಿ ಸ್ವಲ್ಪ ಕೂರೋಣವೇ? ಎಂದೆ. ಅಯ್ಯೋ, ಸರಿ ದ್ಯಾವ್ರೆ ಎಂದ ಮಾಚ. ಥೂ ಹಲ್ಕಾ ಸುವರ್, ಎಲ್ಲದಕ್ಕೂ ಅಯ್ಯೋ ಸೇರಿಸಿ ಕನ್ನಡದ ಮಯರ್ಾದೆ ತೆಗಿಬೇಡ್ವೋ ಮರಾಯ ಎಂದು ಗದರಿದೆ. ಆಗಲೇ ಆಲದ ಮರದಡಿ ಏನೋ ಬಹೃತ್ ಪ್ರಾಣಿಯೊಂದು ನೆಗೆಯೊ ಸದ್ದಿನಿಂದ ನಮ್ಮ ಕಿವಿ ನೆಟ್ಟಗಾಯಿತು. ಚರೆ ಕೋವಿ ನಿಮಿರಿ ನಿಂತಿತು ನೋಡು.
ಸದ್ದಾಗದಂತೆ ನಾವು ಆಲದ ಮರವನ್ನು ಸಮೀಪಿಸಿದೆವು. ಎದೆ ಢವ-ಢವನೇ ಹೊಡೆದುಕೊಳ್ಳ ಹತ್ತಿತ್ತು. ಈ ರೀತಿ ಕುಣಿಯುವ ಪ್ರಾಣಿ ಯಾವುದೆಂದು ನಮಗೆ ಹೊಳೆಯಲೇ ಇಲ್ಲ. ಹಂದಿ, ಕಡವೆಯಾಗಿದ್ದರೆ ಅವುಗಳ ಸದ್ದು ಹೀಗಿರುತ್ತಿರಲಿಲ್ಲ. ನಿಧಾನಕ್ಕೆ ನಾನು ಕಳ್ಳ ಹೆಜ್ಜೆ ಇಟ್ಟು ಕುರುಚಲು ಕಾಡಿನೊಳಗೆ ಇಣುಕಿ ನೋಡಿದೆ. ಧಿಗ್ಮೂಢನಾದೆ. ಕಾಡುಕೋಣದ ಮರಿಯೊಂದು ಮರದಡಿಯಲ್ಲಿ ಖುಷಿಯಿಂದ ಕುಣಿಯುತಲಿತ್ತು. ನಾವಿಬ್ಬರೂ ಜಾಗೃತರಾದೆವು.
ಮರಿ ಇದೆ ಎಂದರೆ ಹತ್ತಿರದಲ್ಲೆಲ್ಲೋ ಅದರ ತಾಯಿ ಇರಲೇ ಬೇಕಲ್ಲ. ಸುತ್ತಲೂ ಹುಡುಕಿದರೂ. ಏನೂ ಕಾಣಲಿಲ್ಲ. 
ಅಯ್ಯೋ, ಇಲ್ಲೇನೂ ಕಾಂತಿಲ್ಯಲೆ ದ್ಯಾವ್ರೇ ಎಂದ ಮಾಚ ಆಶ್ಚರ್ಯ ಸೂಚಿಸುತ್ತಾ.
 ಹತ್ತಿರ ಹೋಗಿ ನೋಡೋ ಮರಾಯ, ಪಕ್ಕದಲ್ಲೇ ಮಲಗಿರಬಹುದು ಎಂದೆ. ಮರಿ ಎಮ್ಮೆ ಅಸಾಧ್ಯ ಶಬ್ದಮಾಡುತ್ತಾ ಜಾತ್ರೆಯ ಕೀಲು ಗೊಂಬೆಯಂತೆ ಕುಣಿಯುತಲಿತ್ತು. 
ಎಷ್ಟು ದಿನಗಳ ಮರಿ ಇರ್ಬೊದು ಮಾಚ? 
ಅಯ್ಯೋ, ಒಂದಿಪ್ಪತ್ತು ದಿನದ್ದು, ದ್ಯಾವ್ರೆ 
 ಹಟ್ಟಿಯ ದನಗಳೊಂದಿಗೆ ಸಾಕಿದ್ರೆ ಹೆಂಗೆ? ನಾನೆಂದೆ.
ಅಯ್ಯೋ, ಥೂ ನಿಮ್ಮ, ಅದರಮ್ಮ ಬಂದ್ರೆ ಸಿಗದ್ ಹಾಕತ್ತೆ ಅಷ್ಟೇ! 400 ಕೆ. ಜಿ ಬಬ್ಬರ್ಯದಾಂಗ್ ಇಪ್ಪೊ ಅದನ್ ಎದ್ರುಸುಕಾತ್ತೆ? ಅದ್ ನಮ್ಮನ್ ಕಂಡು ಕೊಂದ್ ಹಾಕುತ್ತೆ ದ್ಯಾವ್ರೆ. ಎಂದು ಪಿಸುಗುಟ್ಟಿದ ಮಾಚ. ನಾ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಎಷ್ಟು ಹಾಲು ಕೊಡುತದೆಂದು ನೋಡ್ಬೇಕು ಮರಾಯ?
"ನಮ್ ತಿಥಿ ಆಯ್ದಿರ್ ಸಾಕ್." 
ಮಾಚ ಏನು ಹೇಳುವುದೆಂದು ತೋಚದೆ ಗರ ಬಡಿದವನಂತೆ ನಿಂತ .
ಏಯ್ ಮಾಚ, ನೀನು ಲಂಗೋಟಿ ಕಟ್ಟಿದ್ಯಾ? ಕೇಳಿದೆ.
ಅಯ್ಯೋ, ಅದು ಈ ಮರಿ ಕಟ್ಟುವಷ್ಟು ಉದ್ದವಿಲ್ಲ ದ್ಯಾವ್ರೆ
ಥೂ, ಹಲ್ಕಾ ಬಡ್ಡಿ ಮಗನೆ, ನಿನ್ನ ಲಂಗೋಟಿ ಯಾರಿಗೆ ಬೇಕೋ?
ಬೇಕಾಗಿರೋದು ನಿನ್ನ ಪಂಚೆ. 
ಅಯ್ಯಯ್ಯೋ, ಬ್ಯಾಡ ದೇವ್ರೆ ಎಂದು ಕಿರುಚಲು ಬಾಯಿ ತೆರೆದ. ಅಯ್ಯೋ, ಊರ ದನಕಳ ಕಾಯ್ಲಿ ಅವಕ್ಕೂ ಬತ್ತ್ ಮರ್ರೆ, ಬ್ಯಾಡ ದ್ಯಾವ್ರೆ ಎನ್ನುವುದನ್ನು ಕಿವಿಗೆ ಹಾಕಿಕೊಳ್ಳದೇ ಹಠ ಹಿಡಿದಾಗ ಅನಿವಾರ್ಯವಾಗಿ ಮಾಚ ಸುಮ್ಮನಾದ. 
***
ಕಪಚಿನೋ ಬಂದಿತ್ತು. ಅದನ್ನು ಸವಿಯುತಲಿದ್ದ ಹೇಮಂತ್ ಮತ್ತು ಅವನಿ. ಎನ್ ಧೈರ್ಯ ನಿಂದು ಎಂದು ಕಣ್ಣಲ್ಲೇ ನಕ್ಕಳು. ಅವನೂ ನಕ್ಕ. ಮತ್ತೊಂದು ಸಿಗರೇಟಿಗೆ ಕೈ ಹಚ್ಚಿದ್ದ. ಅವನಿ ಮುನಿಸಿಕೊಂಡು ಕೆಂಪಗಾದಳು. ಸಿಗರೇಟಿನ ಧೂಮದೊಂದಿಗೆ ಕತೆ ಮತ್ತೆ ಬಿಚ್ಚಿಕೊಳ್ಳ ತೊಡಗಿತು.
***
ಕುಣಿತಿದ್ದ ಕಾಟಿ ಮರಿ ಹಿಂದೆ ಹೋಗಿ ಅಡಗಿ ಸದ್ದಾಗದಂತೆ ಅದರ ಕುತ್ತಿಗೆ ಸುತ್ತ ಪಂಚೆ ಬಿಗಿದು ಆಲದ ಮರಕ್ಕೆ ಕಟ್ಟಿ ಹಾಕಿದೆವು. ಕಟ್ಟಿದ ಕೂಡಲೇ ತಟಪಟವೆಂದು ಕಾಲನ್ನು ವಿಚಿತ್ರ ರೀತಿಯಿಂದ ಬಡಿಯತೊಡಗಿತು. ಅಪಸ್ವರದ ಶಂಖದಿಂದ ಹೊಮ್ಮಿದಂತಹ ಸ್ವರವೊಂದನು ಅದು ಹೊರಡಿಸಿತು. ಕಾಡಿನ ಮರಗಿಡಗಳೆಲ್ಲಾ ಅಲ್ಲಾಡಿದವು. ಅನೇಕ ಬಾರಿ ಕಾಡೆಮ್ಮೆಯ ಸ್ವರ ಕೇಳಿದ್ದ ನಾವಿಬ್ಬರೂ ಮರಿ ಈ ವಿಚಿತ್ರ ಸ್ವರಕ್ಕೆ ವಿಚಲಿತರಾದೆವು. ಅಷ್ಟು ಕರ್ಕಶವಾಗಿತ್ತದು. ಇದು ಯಾವುದೋ ಸನಿಹದ ಮತ್ತೊಂದಕ್ಕೆ ಸಂದೇಶ ನೀಡುತ್ತಿದೆ ಎಂದು ನಮಗೆ ಖಾತ್ರಿಯಾಯಿತು. ಚರೆ ತುಂಬಿದ ಕೋವಿ ಹಿಡಿದೆವು. ಕರುವನ್ನು ಆಲದ ಉದ್ದದ ಬಿಳಲುಗಳನ್ನು ಸೇರಿಸಿ ಪಂಚೆಯಿಂದ ಕಟ್ಟಿದ್ದೆವು.
ಕುರುಚಲು ಕಾಡಿನ ಕಡೆಯಿಂದ ಏನೋ ಸದ್ದಾಯಿತು. ಮಹಾ ಧೈತ್ಯ ಕಾಟಿಯೊಂದು ಬುಸು ಬುಸು ಉಸಿರ ಬಿಡುತ್ತಾ ಬಂದಿತು. ಅದರ ಎತ್ತರದ ನಿಲುವು ಹೊಳೆಯುವ ಮೈ. ಕೆಂಗಣ್ಣು. ಕೋಪದಿಂದ ಬುಸುಗುಡುವ ಅದರ ಮೂತಿ ನೋಡಿ ನಮ್ಮ ಚಡ್ಡಿ ಒದ್ದೆಯಾಗುವುದೊಂದು ಬಾಕಿ. ತನ್ನ ಕೋಡಿನಿಂದ ತಿವಿಯುವಂತೆ ಎತ್ತುತ್ತಾ ನಾವಿರುವಲ್ಲಿಗೆ ನುಗ್ಗಿತು. ಬಿಳಲುಗಳನ್ನು ಹಿಡಿದು ನಾವಿಬ್ಬರು ಮರವೇರಿದರು. ಗಜರ್ಿಸುತ್ತಾ ಮರವನ್ನೇ ತಿವಿಯ ತೊಡಗಿತು. ಐದಾರು ಬಾರಿ ಮರ ಸುತ್ತಿ ಬಂದಿತು. ತನ್ನ ಕಂದನ ಬಿಡಿಸಿರೆಂದು ಒಮ್ಮೆ ಆರ್ತನಾದ ಮಾಡಿ ಕೂಗಿತು. ಬರಿ ಅಂಗಿಯಲ್ಲಿದ್ದ ಮಾಚನಿಗೆ ಸಂಜೆಗತ್ತಲಾವರಿಸುವುದ ನೋಡಿ ಚಿಂತೆಯಾಯಿತು. ಅಯ್ಯೋ, ಗಾಳಿಯಲ್ಲಿ ಒಂದು ಗುಂಡು ಹಾರಿಸಿ ದ್ಯಾವ್ರೆ ಎಂದ. ತಡಮಾಡದೆ ನಾನು, ಕಾಡೆಮ್ಮೆಯ ಕಿವಿಗಳ ನಡುವೆ ಗುಂಡು ಹಾರಿಸಿದೆ. ಕೋಡುಗಳ ನಡುವೆ ಗುಂಡು ಹಾರಿತು. ಒಂದೇ ನೆಗೆತಕ್ಕೆ ತನ್ನ ಮರಿಯಿಂದ ಅನತಿ ದೂರಕ್ಕೆ ಹೋಗಿ ಕಾಟಿ ನಿಂತು ಬಿಟ್ಟಿತು. ಸ್ಪೋಟಿಸಿದ ಶಬ್ದಕ್ಕೆ ಕಾಡೊಮ್ಮೆ ನಿಶ್ಯಬ್ದವಾಯಿತು. ದೂರ ಹೋಗಿ ನಿಂತ ಎಮ್ಮೆ ತನ್ನ ಮರಿಗೆ ಬರುವಂತೆ ಬುಸುಗುಟ್ಟಿ ಕರೆಯತೊಡಗಿತು. ಮತ್ತೊಂದು ಚರೆ ತುಂಬಿಸಿ ಅದರ ಕೋಡುಗಳ ನಡುವೆ ಹೊಡೆದೆ. ವಿಚಿತ್ರವಾಗಿ ಕೂಗೂತ್ತಾ ಕಾಡಿನಲ್ಲಿ ಕಣ್ಮರೆಯಾಯಿತು. ಅದರ ವಿಚಿತ್ರ ದನಿ ನನ್ನ ಕಿವಿಗಳಲ್ಲಿ ಇನ್ನೂ ರಿಂಗಿಣಿಸುತ್ತಿದೆ.
ಕಾಡಿನ ಮೌನದಲ್ಲೇ ಲೀನವಾದ ನಾವಿಬ್ಬರೂ ಕುಳಿತಲ್ಲೇ ಕುಳಿತ್ತಿದ್ದರಿಂದ ಸೊಳ್ಳೆಗಳು ಕಡಿಯ ತೊಡಗಿದವು. ನಡೆದ ಘಟನಾವಳಿಗಳಿಂದ ಸ್ವಲ್ಪ ವಿಚಲಿತನಾದೆ. ಮಾಚನಿಗೆ ತೋರಿಸಿಕೊಳ್ಳದೆ ಸುಮ್ಮನಿದ್ದೆ. ಇಳಿದು ಹೋಗಲು ಅಂಜಿಕೆ. ಮಾಚನೊಬ್ಬನನ್ನೇ ಬಿಟ್ಟು ಹೋದರೆ ಅವನಿಗೆ ಗುಂಡು ಹಾರಿಸಲೂ ಬರದು. ಕಾಡಿನ ಹಾದಿಯಲ್ಲಿ ಕೋವಿ ಇರದೇ ನಡೆದು ಹೋಗುವುದು ಅತಿ ಅಪಾಯ. ಹಾಗೇ ಸಂದಿಗ್ಧದಲ್ಲೇ ಕೆಲ ಕ್ಷಣಗಳು ಕಳೆದವು. ರಾತ್ರಿ ಎರುವ ಹೊತ್ತಲ್ಲಿ ಮಾಚನನ್ನು ಸಮಾಧಾನ ಮಾಡಿ, ಕೋವಿಗೆ ಚರೆ ತುಂಬಿಸಿ ಅಲ್ಲೇ ಬಿಟ್ಟು ಧೈರ್ಯ ಮಾಡಿ ಹೊರಟೆ. 
ಬಲವಾದ ಹಗ್ಗ, ಪಂಚೆ ಒಂದಿಷ್ಟು ಹುಲ್ಲಿನೊಂದಿಗೆ ಹಿಂದಿರುಗಿದೆ.
ಅಯ್ಯೋ, ಬಂದ್ಬಿಟ್ರಾಯ್ಯಾ ದ್ಯಾವ್ರೆ
ಯಾಕೆ ಬರ ಬಾರದಿತ್ತೆ.? 
ಮಾಚನಿಗೆ ಪಂಚೆ ಕೊಟ್ಟು ಬಲವಾದ ಹಗ್ಗದಿಂದ ಮರಿಯನ್ನು ಬಂದಿಸಿದೆ. ನಿಶೆಯ ಮೊದಲ ಘಳಿಗೆಯೊಳಗೆ ಮನೆ ತಲುಪಿದೆವು. ಹಟ್ಟಿಯಲ್ಲಿ ಕರುವನ್ನು ಉಳಿದ ಕರುಗಳ ಜೊತೆಗೇ ಕಟ್ಟಿ ನಿಟ್ಟುಸಿರಿಟ್ಟೆ.
***
ರಾತ್ರಿ ತನ್ನ ಮಗ್ಗಲು ಬದಲಿಸಿತ್ತು. ತೋಟ ತಿರುಗಿ ಬಂದ ತಂದೆ ಹಟ್ಟಿ ಕಡೆ ಹೋದವರಿಗೆ ಈ ಹೊಸ ಅತಿಥಿ ಗುಟುರು ಹಾಕಿತು. 
ಗಾಬರಿ ಬಿದ್ದವರು, ನೇರ ಮನೆಯೊಳಗೆ ಹೋಗಿ  ಎಲ್ಲಿಂದ ತಂದ್ಯೋ ಇದ್ನಾ, ಅಲ್ಲೇ ಬಿಟ್ಟು ಬಾ. ಡಿಪಾರ್ಟಮೆಂಟಿಗೆ ಗೊತ್ತಾದರೆ ಮುಗೀತು ಕತೆ. 
ಹಾಗೇನೂ ಆಗಲ್ಲ. ಅದು ಕಾಡುಕೋಣದ ಮರಿಯೆಂದು ಯಾರಿಗೂ ಗೊತ್ತಾಗಲ್ಲ ಬಿಡಿ. ನೀವೇನು ತಲೆ ಬಿಸಿ ಮಾಡ್ಬೇಡಿ. ಎಂದು ಅವರ ಬಾಯಿ ಮುಚ್ಚಿಸಿದೆ.
ಒಂದು ನಾಲ್ಕು ದಿನ ಕಷ್ಟ ಕೊಟ್ಟಿತು. ನಂತರ ಅದುವೇ ಮರಿಗಳೊಂದಿಗೆ ಹೊಂದಿಕೊಂಡಿತು. ಮನೆಯ ದನ ಕರುಗಳೊಂದಿಗೆ ಒಂದಾದ ಮರಿ ದಿನಾಲೂ ಮೇಯಲು ಹೋಗಿ ಹಟ್ಟಿಗೆ ಹಿಂತಿರುಗುತಲಿತ್ತು. ಅದಕೆ ದಿನಾಲೂ ನಾಲ್ಕು ಲೀಟರ್ ಹಾಲು ಕುಡಿಸುತ್ತಿದ್ದೆ. 
***
ಒಂದು ಮುಂಜಾನೆ ಧೂಳೆಬ್ಬಿಸುತ್ತಾ ಬಂದ ಕಪ್ಪು ಪೋಲಿಸ್ ಜೀಪು ನನ್ನ ಅಪ್ಪಯ್ಯನ ಎದೆ ಪಸೆ ಆರುವಂತೆ ಮಾಡಿತ್ತು. 
ಏನ್ರೀ ಕಾಡುಕೋಣದ ಮರಿ ಸಾಕುತ್ತಿದ್ದೀರಿಯಂತೆ? ಎಂದು ಜಂಬದಿಂದ ಜಬರಿಸಿದ ಅರಣ್ಯಾಧಿಕಾರಿ.
ಎ...........ಲ್ಲಾ..........ದ........ರೂ......ಉಂ.....ಟೆ?. ಎಂದರು ಅಪ್ಪಯ್ಯ ನಡುಗುವ ಕಂಠದಲ್ಲಿ. ಅರಣ್ಯಾಧಿಕಾರಿ ನೇರ ಹಟ್ಟಿಗೆ ಹೋಗಿ ನೋಡಿದ. ದನಗಳು, ಕರುಗಳು, ಎಮ್ಮೆಗಳು ಇವನನ್ನು ಪಿಳಿ-ಪಿಳಿ ನೋಡಿದವು. ಅವನೂ ದಿಟ್ಟಿಸಿದ. ಯಾವನೋ ಹೊಸಬನ ನೋಡಿ ಬೆಚ್ಚಿ ಬೊಬ್ಬಿರಿದು ಕೂಗ ತೊಡಗಿದವು. 10-15 ಮರಿಗಳಲ್ಲಿ ಕಾಡುಕೋಣ ಯಾವುದೆಂದು ಅವನಿಗೆ ಗುರುತಿಸಲಾಗಲಿಲ್ಲ. ಅಧಿಕಾರಿಯೋ ಬಯಲು ಸೀಮೆಯವನು. ನಿರಾಶನಾಗಿ ಹಿಂದೆ ಬಂದು ಆ ಮರಿಗಳವುಗಳ ಪೋಟೋ ತೆಗೆದು ಕೊಳ್ಳಿ ಎಂದು ಪೋಟೊಗ್ರಾಫರ್ಗೆ ಆದೇಶಿಸಿದ. ಅಪ್ಪಯ್ಯನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಬಿಸಿತು. ಅಧಿಕಾರಿ ಅಪ್ಪಯ್ಯನೊಡನೆ ಏನೋ ಮಾತನಾಡಿಕೊಂಡು ಜೀಪು ಹತ್ತಿ ಹೊರಟ. 
ಅವರು ಬಂದು ಹೋದ ಮೇಲೆ ಅಪ್ಪಯ್ಯ ಚಿಂತಾಕ್ರಾಂತರಾದರು. ನನ್ನೊಡನೆ ಮಾತು ನಿಲ್ಲಿಸಿದರು. ನೀನು ಸ್ವಲ್ಪ ದಿನಗಳಿಗೆ ಊರು ಬಿಡು. ಆ ಮರಿಯನ್ನ ಹಟ್ಟಿಯಿಂದ ಬಿಡು ಎಂದು ವರಾತ ಶುರುವಿಟ್ಟರು. ಸಣ್ಣ ಶಬ್ದಕ್ಕೂ ಎಗರಿ ಬೀಳುತ್ತಿದ್ದರು. ಅಪ್ಪಯ್ಯ ದಿನದಿಂದ ದಿನಕ್ಕೆ ಕೃಶರಾಗತೊಡಗಿದರು. ಅವರ ಅವಸ್ಥೆ ನೋಡಲಾಗದೇ ಮರಿಯನ್ನು ಕಾಡಿಗೆ ಬಿಟ್ಟು ಬಂದೆ. ಅದು ಐದಾರು ಬಾರಿ ಇವನನ್ನೇ ನೋಡಿ ಕಾಡಿನಲ್ಲಿ ಕಣ್ಮರೆಯಾಯಿತು. ಏನೇ ಮಾಡಿದರೂ ಅಪ್ಪಯ್ಯನ ದಿಗಿಲು ಕಡಿಮೆಯಾಗಲಿಲ್ಲ. ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಯಾವಾಗ ಮಗ ಅರಸ್ಟ್ ಆಗುವನೊ ಎಂಬ ಚಿಂತೆಯಲ್ಲೇ ಕಾಲ ಹಾಕತೊಡಗಿದರು. 
***
"ಇದೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್" ಎಂದು ಕಪಾಚಿನೋ ಹೀರುತ್ತಾ ಹೇಳಿದ ಹೇಮಂತ್.
ಅವನಿ ಮುಂದೆ ಎನ್ನುವಂತೆ ಅವನನ್ನೆ ನೋಡತೊಡಗಿದಳು.
***
ಇದೇ ಚಿಂತೆಯಲ್ಲಿ ಅವರನ್ನು ನೋಡಲಾದೇ ನಾನು ಮನೆ ಬಿಟ್ಟೆ. ಮೊದ ಮೊದಲಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಜೊತೆ ಜೊತೆಗೆ ಓದು ಮುಂದುವರಿಸಿದೆ. ಬೆಂಗಳೂರಿಗೆ ಬಂದೆ ಬರವಣಿಗೆ ಕೈ ಹತ್ತಿತು. ನಾ ಬರೆದ 'ಕಾಟಿ ಮರಿಯ ಕೃಪಾಕಟಾಕ್ಷ' ಕತೆಗೆ ಮೊದಲ ಬಹುಮಾನ ಕೂಡ ಬಂದಿತು. ಪ್ರಜಾ ಮಿತ್ರಕ್ಕೆ ದುಡಿದೆ. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೆ ಇಲ್ಲಾ.
***
ಕಪ್ನಲ್ಲಿದ್ದ ಕಪಚಿನೋ ಕೂಡಾ ಮುಗಿದಿತ್ತು. ತುಂತುರು ಮಳೆಯೂ ಆಗಸ್ಟೇ ನಿಂತಿತು.
ಪ್ರಪಂಚದಲ್ಲಿ ಕಾಡೆಮ್ಮೆ ಮರಿಯಿಂದಾಗಿ ಪರ್ತಕರ್ತರಾದವರು ಇರಲಿಕ್ಕಿಲ್ಲ. ಎಂದು ಹೇಳಿ ನಕ್ಕ. 
ಅವಳೂ ಅವನ ಜೊತೆಗೂಡಿದಳು.
***
ಶ್ರೀಧರ್. ಎಸ್. ಸಿದ್ದಾಪುರ.
x

Sunday, July 26, 2020

ಕದ








ಅಂದು ನಾನು ಊರಿಗೆ ಹೋಗದೆ ಇದ್ದಿದ್ದರೆ ಈ ಕತೆ ನಡೆಯುತ್ತಲೇ ಇರಲಿಲ್ಲ. ನಿಮ್ಮ ಮುಂದೆ ಹೇಳುವ ಪ್ರಸಂಗ ಬರುತ್ತಲೇ ಇರಲಿಲ್ಲ.
***

ಬಿಸಿಲ ಕೋಲುಗಳು ಬಚ್ಚಲು ಧೂಮದೊಂದಿಗೆ ಬೆರೆತು ವಿಚಿತ್ರ ಪರಿಮಳದಿಂದ ಕೂಡಿ ಆಹ್ಲಾದಕರವಾಗಿತ್ತು. ಯಾವ ಕಟ್ಟಿಗೆ ಹಾಕಿದ್ದರೆಂದು ಮನಸ್ಸಲ್ಲೇ ಲೆಕ್ಕ ಹಾಕ ತೊಡಗಿದೆ.  ಬಿರುಗಾಳಿಗೆ ಬಿದ್ದ ಅಡಿಕೆ ಮರಗಳು ಚಳಿ ಓಡಿಸಲು ಬಿಸಿಲ ಕೋಲಿಗೆ ಮೈ ಒಡ್ಡಿ ಮಲಗಿದ್ದವು. ಬಿಸಿ ಕಾಫಿಯ ಘಮಲುವಿನೊಂದಿಗೆ ಬೆರೆತ ರುಚಿ ರುಚಿ ಪತ್ರೊಡೆಯ ಪಸರಿಸಿದ ಪರಿಮಳ ನಾಸಿಕಾಗ್ರದ ಮೂಲಕ ರವಾನೆಗೊಂಡು ಜಠರಾಗ್ನಿಯನು ಸಚೇತನಗೊಳಿಸಿತ್ತು. ಮನೆಯ ಚೌಕಿಯ ಮುಖ್ಯ ದ್ವಾರಕ್ಕೆ ತಲೆಯಬಾಗಿ ಅಡುಗೆ ಮನೆಗೆ ಹೋಗಿ ಕಾಫೀ ಹೀರಿ ಪತ್ರೊಡೆ ಮೆಲ್ಲುತ್ತಾ ಅಮ್ಮನೊಂದಿಗೆ ಹರಟುತ್ತಾ ಕುಳಿತೆ. 
ಊರ, ಹೊರ ಊರ ಸಮಾಚಾರವನ್ನು ಕೇಳುತ್ತಾ ಸುಬ್ಬಮ್ಮಜ್ಜಿಯ ವಿಚಾರ ಬಂತು. "ಊಟಾದ್ಮೇಲೆ ಸುಬ್ಬಮ್ಮಜ್ಜಿ ಮನಿಗ್ ಹೋಗ್ ಬಾರೋ ಮಗಾ" ಅಮ್ಮ ಎಂದೊಡನೆ ಅವರ ನೆನಪುಗಳ ಸುರುಳಿ ಒಂದೊಂದಾಗಿ ಬಿಚ್ಚ ತೊಡಗಿತು.
ತಂದೆ ಇಲ್ಲದ ನಮ್ಮನ್ನು ತಂದೆಯಂತೆ ಸಲಹಿದವರು ಅವರೇ. ಊರಿಗೇ ಊರುಗೋಲಾಗಿ ನಿಂತವರು. ಚಿಕ್ಕ ವಯಸ್ಸಿಗೆ ನನ್ನ ತಂದೆ ತೀರಿಕೊಂಡಾಗ ಅವರ ಅಪರಕರ್ಮವನ್ನು ಮುಂದೆ ನಿಂತು ಮಾಡಿಸಿದವರು. ನನಗೊಮ್ಮೆ ವಿಪರೀತ ಜ್ವರ ಬಂದಾಗ 10 ಮೈಲಿ ಆಚೆಗಿನ ಕುಮಟಾ ಆಸ್ಪತ್ರೆಗೆ ತನ್ನ ಸೈಕಲ್ಲಿನಲ್ಲಿ ಕರೆದೊಯ್ಯಿದ ನೆನಪಿನ್ನು ಕಳಚದೇ ಸ್ಮೃತಿ ಕೋಶದಲಿ ಕುಳಿತಿದೆ. 
ಡಿಗ್ರಿ ಆಗಿ ಬಿ. ಎಡ್ ಸೇರುವಾಗ ಬಿಡಿಗಾಸೂ ಅಮ್ಮನ ಬಳಿ ಇರಲಿಲ್ಲ. ಆ ವರ್ಷ ಅಡಿಕೆಗೆ ವಿಪರೀತ ಕೊಳೆ. ತನ್ನ ತೋಟದ ಅಡಿಕೆ ಮಾರಿ ನನ್ನ ವಿದ್ಯಾಭ್ಯಾಸಕ್ಕೆ ಹಣ ಕೂಡಿಸಿಕೊಟ್ಟಿತ್ತು. ಎಂತಹ ಕರುಣಾ ಹೃದಯಿ. ಗಣೇಶನ ಹಬ್ಬಕ್ಕೆ, ದೀಪಾವಳಿಗೆ ಮಾಡುವ ವಿಶಿಷ್ಟ್ಯ ಕಡುಬು ಎರಡು ನನಗೆ ಎತ್ತಿಡದೇ ಇರುತ್ತಿರಲಿಲ್ಲ. ಪ್ರತಿ ಬಾರಿ ಊರಿಗೆ ಬಂದಾಗಲೂ ಸುಬ್ಬಮ್ಮಜ್ಜಿಯನ್ನು ಮಾತನಾಡಿಸದೇ ಹೋದದ್ದೇ ಇಲ್ಲ. ನಾನು ಹೋದರೆ ತಾಯಿಯಂತೆ ಪ್ರೀತಿಯ ಮಳೆ ಕರೆಯುತ್ತಿದ್ದಳು.
ತನ್ನ ನಾಲ್ಕು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೇ ನೌಕರಿ ಸಿಗು ಹಂಗೆ ಮಾಡಿತ್ತು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿದ್ದ ಸುಬ್ಬಮ್ಮಜ್ಜಿಯ ಬದುಕು ಈಗ ವಿಚಿತ್ರ ಸಂಕಟಕ್ಕಿಟ್ಟುಕೊಂಡಿತ್ತು. ಗಾಳಿಗೆ ಸಿಕ್ಕ ಗಾಳಿಪಟದಂತೆ ತಾನೊಬ್ಬಳೇ ಇರಬೇಕಾಗಿ ಬಂತು. ಕಲಿತು ಬಿಡಾರ ಬಿಟ್ಟ ಮಕ್ಕಳೆಲ್ಲಾ ಈ ಕೊಂಪೆಗೆ ಬರಲು ನಿರಾಕರಿಸಿದರು. ಹಾಗಾಗಿ ಅಷ್ಟೊ ಇಷ್ಟೋ ಒಬ್ಬೊಬ್ಬರ ಮನೆಯಲ್ಲಿದ್ದು ಸಾಕಾಗಿ ತಾನೆಲ್ಲೂ ಬರೋಲ್ಲ ಎಂದು ಪುನಃ ಊರ ಸೇರಿದವಳು ಮತ್ತೆ ಯಾರ ಮನೆಗೂ ಕಾಲಿಡಲಿಲ್ಲ. ವಯಸ್ಸು ಏರಿದಂತೆ ಉಬ್ಬಸದೊಂದಿಗೆ ಕೆಲಸ ಮಾಡುವುದು ಕಷ್ಟವಾಗ ತೊಡಗಿತು.
ಸುಬ್ಬಮ್ಮಜ್ಜಿಯ ನೇರ ನಿಷ್ಠುರ ಮಾತಿನಿಂದಾಗಿ ಅಜ್ಜಿಗೆ ಉಪಚಾರ ಹೇಳುವವರು ಊರಲ್ಲಿ ಯಾರೂ ಇರಲಿಲ್ಲ. ಆಯಿಯೂ ಈಗೇಕೋ ಬಹಳವೇ ಅಜ್ಜಿ ಮನೆಗೆ ಹೋಗಿ ಬಾ ಎಂದು ಒಂದೇ ಸಮನೆ ಒತ್ತಾಸೆ ಪಡಿಸುವುದನು ನೋಡಿದರೆ ಏನೋ ಒಂಥರಾ ಕಸಿವಿಸಿ.
ಊಟಕ್ಕೆಬ್ಬಿಸಿದಾಗ ಮನೆ ತುಂಬಾ ದೀವಲಸಿನ ಬೋಂಡದ ಘಮ. ನೆತ್ತಿ ಸುಡೋ ಸೂರ್ಯನೂ ನಡುಮನೆಯ ಹೊಕ್ಕು ತಣ್ಣಗಾಗಿದ್ದ.  ನಿನ್ನೆ ಬಸ್ ಹತ್ತುವಾಗಲಿನಿಂದ ಖಾಲಿ ಇದ್ದ ಹೊಟ್ಟೆ ಇಂದು ಆಯಿ ಅಡುಗೆಗೆ ಬಕಾಸುರನಂತೆ ಬಾಯಿ ಕಳೆದಿತ್ತು. ಸ್ವಯಂ ಪಾಕದಿಂದ ನಲುಗಿದವನಿಗೆ ಓಯಸಿಸ್ ಸಿಕ್ಕಂತಾಯಿತು. ಚಕ್ಕಳ ಮಕ್ಕಳವಿಕ್ಕಿ ದೇಸಿ ಅಡುಗೆಯನುಂಡೆ. ಅದು ಇದು ದೇಶಾವರಿ ಮಾತು ಎರಡು ತುತ್ತು ಹೆಚ್ಚೇ ಸೇರುವಂತೆ ಮಾಡಿತ್ತು. ಉಂಡ ಹೊಟ್ಟೆ ವಿರಾಮ ಬಯಸಿತ್ತು. ಕಣ್ಣು ಮುಚ್ಚಿದೆ. ಎದ್ದವನಿಗೆ ಆಯಿಯ ಕಾಫಿ ಕಾದು ಕುಳಿತಿತ್ತು. ಕಾಫಿ ಕುಡಿಯುತ್ತಾ ಆಯಿ ಮತ್ತೊಮ್ಮೆ ಸುಬ್ಬಮ್ಮಜ್ಜಿಯ ನೆನಪಿಸಿದಳು. ಸರಿ ಎಂದು ಹೊರಟೆ.
ತೆರೆ ತೆರೆಯಾಗಿ ಹರಿವ ತೊರೆಯೊಂದ ದಾಟಿ ಇಳಿ ಸಂಜೆ ಹೊತ್ತಿಗೆ ಸುಬ್ಬಮ್ಮಜ್ಜಿಯ ಮನೆ ಎದುರಿಗಿದ್ದೆ. ಎಲೆಯಡಿಕೆ ಕುಟ್ಟುತ್ತಿದ್ದ ಅಜ್ಜಿಗೆ ಒಮ್ಮೆದೊಮ್ಮೆಲೆ ಜೀವರಸವೆಲ್ಲಾ ಮುಖಕ್ಕೆ ಹರಿದು ಮುಖ ಕೆಂಪಾಯಿತು. " ಬಾರಾ ತಮಾ, ಎಷ್ಟು ದಿನಾಗೋತು ನಿನ್ ನೋಡ್ದೆ?" ಎಂದಿತು ಖುಷಿಯಿಂದ. ಹೇಗಿದ್ದಿ ಮರಾಯ ಎಂದು ನನ್ನ ಅಪ್ಪಿಕೊಂಡಿತು. ನನ್ನ ಜಗುಲಿಗೆ ಒಯ್ದು ಕೂರಿಸಿ, ನಟಿಗೆ ತೆಗೆಯಿತು. 
"ಅಜ್ಜಿ ಆನು ಗುತರ್ು ಸಿಗಲ್ಯನೆ ಯನ್ನಾ?" ಎಂದೆ. 
"ಸುಮ್ಮಂಗಿರೋ ತಮಾ, ಯಂಗಿನ್ನು ಕಣ್ ಸಮಾ ಕಾಣ್ತು ಅಕಾ..ಚಸ್ಮಾ ಇಲ್ದೇ ಪೇಪನರ್ೂ ಓದ್ತೆ ಗೊತಿದ್ದಾ"
 "ನೀ ಗನಾಗ್ ಊಟಾನೂ ಮಾಡ್ದೇ ಸೋತ್ಹೋಯ್ದೆ ಮರಾಯಾ?" 
"ಬಾ ಉಣ್ಣಕ್ಕೂ" ಎಂದು ಅಡುಗೆ ಮನೆಗೆ ಹೋಗುವ ತಯಾರಿಯಲಿದ್ದಳು. 
"ಈಗಷ್ಟೇ ಯಂದ್ ಉಟಾತೇ. ನಿಂದಾತನೆ ಅಜ್ಜೀ." ಎಂದೆ. 
"ಯಾಕಾ ತಮಾ ಸುಳ್ಹೇಳ್ತೆ."
"ಸುಮ್ಮಂಗಿರೋ ತಮಾ ಮುಖ ಎಷ್ಟ್ ಬಾಡೋಜು ನೋಡು. ಉಣ್ಣಲ್ ಬಾ." ಎನ್ನುತ್ತಾ ಏಳಲು ಹೊರಟಿತು ಅಜ್ಜಿ.
ಸುಬ್ಬಮ್ಮಜ್ಜಿಯನ್ನು ಸುಧಾರಿಸಿ ಕೂರಿಸಲು ಸ್ವಲ್ಪ ಹೆಚ್ಚೇ ಹೊತ್ತು ಬೇಕಾಯಿತು. ಹೊಯ್ಯುವ ಮಳೆಯಂತೆ ಒಂದೇ ಸಮನೇ ತನ್ನ ಹಳೇ ಕಡತ ಬಿಡಿಸಿಕೊಂಡು ಕುಳಿತಿತು ಅಜ್ಜಿ. ಪಾಪ ತಾನು ಮಾಡಿದ ಸಂಗತಿ ಹೇಳಲು ಯಾರು ಇಲ್ಲದೇ ಪರಿತಪಿಸುತಲಿತ್ತು. ಒಂಟಿತನದ ಸಂಕಷ್ಟಗಳು ನನಗಾಗ ಅರಿವಿಗೆ ಬರತೊಡಗಿತು.
ತನ್ನ ಮಗನಾದ ಸೀತಾರಾಮನನ್ನು ಬೆಳೆಸಲು ಪಟ್ಟ ಕಷ್ಟಗಳನ್ನು ಒಂದೊಂದಾಗಿ ಹೇಳತೊಡಗಿತು. ಆತ ಎಂಟು ತಿಂಗಳಿಗೆ ಹುಟ್ಟಿದವ, ಶಾಲೆಗೇ ಹೋಗುತ್ತಿರಲಿಲ್ಲ ಕೊನೆಗೂ ಆತನನ್ನು ಓದಿಗೆ ಹಚ್ಚಿಸಿ ಇಂಜಿನಿಯರಾಗಿ ರೂಪಿಸಲು ಪಟ್ಟ ಕಷ್ಟಗಳನು ಹೇಳತೊಡಗಿತು. ಅಮೇರಿಕಾದಲ್ಲಿ ಎಂ. ಎಸ್. ಮಾಡಲು ಆತನಿಗಾಗಿ ತಾನು ಪಟ್ಟ ಪಾಡಿನ ಗಂಟನ್ನು ಬಿಚ್ಚಿತು. 
ನಿಜ ತಾಯಿಯಾದವಳ ಕಷ್ಟಗಳಿಗೆ ಮಕ್ಕಳು ಆಗಬೇಕಲ್ಲವೆ? ಯಾರಲ್ಲಿ ಹೇಳುವುದು. ಸೀತಾರಾಮ ಮತ್ತು ಅವನ ಹೆಂಡತಿಗೆ ಅಮೇರಿಕದ ಮತ್ತು ಡಾಲರ್ ಭೂತ ಅಮರಿಕೊಂಡವರಿಗೆ ತಾಯಿ ಕಾಣುವಳೇ?  ಅವನಿಗಾಗುವಷ್ಟು ತೋಟ ಜೊತೆಗೆ ಒಂದಿಷ್ಟು ಗದ್ದೆಯೂ ಅವನ ಪಾಲಿಗಿತ್ತು. ಗಟ್ಟಿ ಮುಟ್ಟಾದ ಅಪ್ಪ ಕಟ್ಟಿಸಿದ 6 ಅಂಕಣದ ತೊಟ್ಟಿ ಮನೆಯಿತ್ತು. ನಿರುಮ್ಮಳವಾಗಿ ತೋಟ ನೋಡಿಕೊಂಡಿದ್ದರೆ ಸಾಕಾಗಿತ್ತು. ಮೇಲು ಖಚರ್ಿಗೆ ಕಾಳು ಮೆಣಸಿನ ಸಂಪಾದನೆ ಸಾಕಾಕ್ತು. ಶಿಕ್ಷಣವೇ ಶಾಪವೇನೋ ಅಂತ ಮನಸಿಗೆ ಬಂತು. ವಿವೇಕವನು ನೀಡದ ಶಿಕ್ಷಣ ಇದ್ದರೆಷ್ಟು ಬಿಟ್ಟರೆಷ್ಟು? 
ಹೀಗೆ ನನ್ನ ಆಲೋಚನೆಯಲಿ ಜೀಕುತ್ತಾ ಇರಲು ಅಜ್ಜಿ "ಅಲ್ದಾ ತಮಾ, ಕಳ್ದ್ ವರ್ಷ  ಶ್ರಾದ್ಧಕ್ಕೆ  ನೀ ಎಂತಕಾ ಬಲರ್ೆ?" ಎಂದು ಗದರಿತು. 
" ಯಂಗೆ ಎಸ್ಟ್ ಬೇಜಾರಾತು ಗೊತಿದಾ ಮಗಾ?" ಎಂದಿತು.
ನನಗೂ ಅಜ್ಜನ ಶ್ರಾಧ್ಧಕ್ಕೆ ಬಂದ ನೆನಪಾಗದೇ ಸುಮ್ಮನಾದೆ.
ಮುಸ್ಸಂಜೆ ದಾಟಿ ಇರುಳು ಇಣುಕಿದ್ದು ಗೊತ್ತಾಗಲೇ ಇಲ್ಲ.
ನನ್ನ ಕೈ ಹಿಡಿದು ನಡುಮನೆಗೆ ಕರೆದೊಯಿದಿತು. ಕವಚಿಕೊಂಡ ಕತ್ತಲ ಸಾಮ್ರಾಜ್ಯವು ಅಜ್ಜಿಯ ಬದುಕಿನ ರೂಪಕದಂತಿತ್ತು. ಬೆಳಕು ಯಾವಾಗಲೋ ಬೇಲಿ ಕಿತ್ತಿತ್ತು. ಮನೆಯೊಳಗೆ ಹಳ್ಳಿ ಅಡುಗೆ ಸುವಾಸನೆ. ಕರೆಂಟು ಯಾವಾಗಲೋ ಹೋಗಿತ್ತು. ಸೀಮೆಎಣ್ಣೆ ಬುಡ್ಡಿಯೊಂದನ್ನು ಹಚ್ಚಿಕೊಂಡು ಬಂದ ಅಜ್ಜಿ ಕೈಯಲ್ಲಿ ಎಳೆ ಬಾಳೆ ಎಲೆ ಇತ್ತು.
ಒಲೆ ಎದುರಿಂದ ಬಿಸಿ ಬಿಸಿ ದೇಸಿ ಅನ್ನಕ್ಕೆ ಘಮ್ ಎನ್ನುವ  ತಿಳಿ ಸಾರು, ಮಿಳ್ಳೆ ತುಪ್ಪ, ನಂಜಿಕೊಳ್ಳಲು ಬಾಳೆ ಕುಂಡಿಗೆಯ ಪಲ್ಯ ಬಡಿಸಿ ಉಣ್ಣು ಎಂದಿತು. ಮರು ಮಾತನಾಡದೇ ಉಣ್ಣುತ್ತಾ ಅಜ್ಜಿಯ ಮುಖ ನೋಡಿದೆ. ಎಂತಹ ಸಂತೃಪ್ತಿ! ಬುಡ್ಡಿ ಬೆಳಕಿನಲಿ ಬೆಳಗುತ್ತಿತ್ತು ಮುಖ. 
ಊಟದ ಸಮಯದಲ್ಲೂ ಸೀತಾರಾಮನ ಪುರಾಣವನ್ನೇ ಹೇಳತೊಡಗಿತು. ಇಲ್ಲಿಯವರೆಗೂ ನಾನು ಮನೆಗೆ ಹೋಗುವ ಆಲೋಚನೆಯಲ್ಲಿದ್ದೆ. ಗಾಳಿ ಕೂಡ ಆಡದೇ ಉಸಿರುಗಟ್ಟಿದ ಭಾವ. ಕತ್ತಲೆಯೊಳಗೂ ಸೀತರಾಮನ ನೆನಪಿನ ಛಾಯೆ. ಸೀತಾರಾಮನ ನೆನಪು ಅಜ್ಜಿಯ ಉಸಿರೊಳಗೆ ಬೆರೆತು ಹೋದಂತೆನಿಸಿ ಅಜ್ಜಿಗೆ ಬೇಸರ ಮಾಡುವುದು ಬೇಡವೆಂದು ಮನೆಗೆ ಹೋಗುವ ಆಲೋಚನೆಯನ್ನೇ ಕೈಬಿಟ್ಟೆ. ಒಂಟಿ ಜೀವ 6 ಅಂಕಣದ ಮನೆಯಲ್ಲಿ ಮಕ್ಕಳ ನೆನಪುಗಳೊಂದಿಗೆ ಜೀಕುತ್ತಾ ಜೀವನ ಕಳೆಯುದನು ಎಣಿಸಿದರೆ ಕಣ್ಣೀರೇ ಬರುತಲಿತ್ತು. 
"ಒಳ್ಕ್ವಾಣಿ ಹಾಸ್ಗೆ ಹಾಸಿದ್ದಿ ನೋಡು ಕತ್ಲಾಗೋತು. ಮನ್ಕ್ಯಾ ತಮಾ." ಎಂದು ಒಳಕೋಣೆಯಿಂದಲೇ ಬರುತ್ತಾ ಹೇಳಿತು ಅಜ್ಜಿ. ಆಗಲೇ ಗೊತ್ತಾದದ್ದು ಅಜ್ಜಿ ನನ್ನನ್ನೇ ಸೀತಾರಾಮ ಎಂದು ತಿಳಿದು ಬಿಟ್ಟಿತ್ತು. ಅಜ್ಜಿಗೆ ತಿಳಿ ಹೇಳುವುದು ಹೇಗೆ ಎಂದು ಚಿಂತಿಸುತ್ತಾ ಮಜ್ಜಿಗೆ ಅನ್ನ ಉಣ್ಣುತಲಿದ್ದೆ. ಒಳ ಕೋಣೆಯಿಂದ ಸಣ್ಣ ಹಿತ್ತಾಳೆ ಪಟ್ಟಿಗೆಯೊಂದನ್ನು ಹಿಡಿದು ಬಂದು "ನೋಡು ಮಗಾ ಇದು ನಿನ್ ಅಪ್ಪಯ್ಯನ್ ಅಸ್ಥಿ. ಇದ್ನಾ ತೆಕಂಡ್ಹೋಗಿ ಗೋಕರ್ಣದಲ್ ವಿಸಜರ್ಿಸಕ್ಕೂ. ನೀ ಬಪ್ಪದನ್ನೆ ಕಾಯ್ತಾ ಇದ್ದಿದ್ದೆ ಮರಾಯ." ಎಂದು ನನ್ನ ಮುಂದಿಟ್ಟಿತು. ಸುಬ್ಬಮ್ಮಜ್ಜಿಯ ಗಂಡ ಸತ್ತು ಕೆಲವು ವರುಷಗಳಾಗಿತ್ತು. ತನ್ನ ದುಃಖವನ್ನು ಎದೆಯೊಳಗಡಗಿಸಿಕೊಂಡಿತ್ತು. ತಂದೆ ಸತ್ತಾಗ ಬಂದಿದ್ದ ಸೀತಾರಾಮ ಮತ್ತೆ ಬಂದಿರಲಿಲ್ಲ. ಇಂದಜ್ಜಿಯ ದುಃಖದ ಕಟ್ಟೆಯೊಡೆಯಿತು. ಸುತ್ತಲಿನ ಕತ್ತಲಿನಲಿ ಹೊಳೆವ ಹಿತ್ತಾಳೆಯ ಕರಡಿಗೆ ನನ್ನ ಕೈಲಿತ್ತು. ಹಾಗೇ ಎಷ್ಟೋ ಹೊತ್ತು ಕತ್ತಲಿನಲಿ ನಿಂತೇ ಇದ್ದೆ. ಕಣ್ಣ ಬಿಂದುಗಳು ಜಾರಿ ಹೊಳೆವ ಪೆಟ್ಟಿಗೆ ಮೇಲೆ ಉದುರುತ್ತಾ ಇದ್ದಂತೆ ಬುಡ್ಡಿ ದೀಪ ನಿಧಾನಕ್ಕೆ ಮಂಜಾಗುತ್ತಾ ಬಂತು.
ಶ್ರೀಧರ್. ಎಸ್. ಸಿದ್ದಾಪುರ.

Monday, June 1, 2020

ಶಾಪಗ್ರಸ್ಥ ಗಂಧರ್ವ....



ಕಿಟ್ಟು, ಪುಟ್ಟು ಎಂಬ ಇಬ್ಬರು ಹುಡುಗರು ತಮ್ಮ ಬೇಸಿಗೆ ರಜೆ ಕಳೆಯಲು ಅಜ್ಜಿ ಊರಿಗೆ ಬಂದಿದ್ದರು. ಪಕ್ಕದ ಮನೆ ರಂಗ ಅವರನ್ನ ಬಣ್ಣ ಬಣ್ಣದ ಕಲ್ಲುಗಳಿರೋ ಹೊಳೆ ತೋರಿಸ್ತೀನಿ ಅಂತ ಒಂದಿನ ಹೊಳೆಗೆ ಕರೆದುಕೊಂಡು ಹೋದ.


ಹೊಳೆ ನೀರಲ್ಲಿ ಸಾಕಷ್ಟು ಹೊತ್ತು ಈಜಾಡಿ ಅಲ್ಲಿನ ಕಲ್ಲುಗಳನ್ನೆಲ್ಲಾ ನೋಡುತ್ತಾ ಮನೆಗೆ ತೆರಳುವ ಕಾಡದಾರಿಯನ್ನು ಹಿಡಿದರು.

          ಸ್ವಲ್ಪ ದೂರ ಬರುತ್ತಲೇ ಅವರಿಗೊಂದು ಮರ ಕಾಣಿಸಿತು. ಅದರಲ್ಲಿ ಸೀತಾಫಲ ಗಾತ್ರದ ಹಣ್ಣು ಗಳು ಬಿಟ್ಟಿದ್ದವು. ನೋಡಲು ಸೀತಾಫಲದಂತೆಯೂ ಇತ್ತು. ಏನಾದರಾಗಲಿ ಎಂದು ರಂಗನ ಬಳಿ ಹೇಳಿ ಎರಡು ಹಣ್ಣು ಕಿತ್ತುಕೊಂಡು ಬಂದರು.



ಮನೆಗೆ ಬರುತ್ತಲೇ ಕಿಟ್ಟು, ಪುಟ್ಟು ಉತ್ಸಾಹದಿಂದ ಅಜ್ಜಿಗೆ ತಾವು ತಂದ ಹಣ್ಣು ಯಾವುದೆಂದು ಕೇಳಿದರು. "ನೋಡಿ ಮಕ್ಕಳೆ ಇದರ ಹಿಂದೆ ಆಸಕ್ತಿದಾಯಕ ಕತೆ ಇದೆ" ಬನ್ನಿ ಇಲ್ಲಿ ಹೇಳ್ತೇನೆ ಎಂದಳು. ಮಕ್ಕಳೆಲ್ಲಾ ಅಜ್ಜಿ ಸುತ್ತ ಕುಳಿತರು.
ಗಂಧರ್ವ ಲೋಕ, ಅಲ್ಲೊಬ್ಬ ರುದ್ರಾಕ್ಷ ಎಂಬ  ಗಂಧರ್ವನಿದ್ದ. ಬಹಳ ದಷ್ಟ ಪುಷ್ಟನಾಗಿ ಎತ್ತರವಾಗಿದ್ದ. ಆತ ವಿಪರೀತ ಅಹಂಕಾರಿಯೂ, ತನ್ನ ಸೌಂದರ್ಯದ ಬಗ್ಗೆ ಮೇಲರಿಮೆಯೂ, ಇನ್ನೊಬ್ಬರ ಬಗ್ಗೆ ತಾತ್ಸಾರದ ಭಾವನೆಯನ್ನು ಹೊಂದಿದ್ದ. ಆತ ಒಮ್ಮೊಮ್ಮೆ ಭೂಮಿಗೆ ಬಂದು ಅನೇಕರಿಗೆ ಉಪದ್ರವ ಕೊಡುತ್ತಿದ್ದ. ಒಮ್ಮೆ ಆತ ಭೂಮಿಗೆ ಬಂದಾಗ ಹಲಸಿನ ಹಣ್ಣು ತಿನ್ನುತ್ತಿದ್ದ ಋಷಿಯನ್ನು ನೋಡಿದ. ಆತನೆಡೆಗೆ ನಿಕೃಷ್ಟ ಭಾವವೊಂದನ್ನು ಬೀರಿ, "ಏ ಗತಿ ಇಲ್ಲದ ಸನ್ಯಾಸಿಯೆ ಬೇರೇನು ಸಿಗಲಿಲ್ಲವೇ ತಿನ್ನಲು? ಈ ದರಿದ್ರಕಾರಿಯಾದ, ಮೇಣದಿಂದ ತುಂಬಿದ ಹಲಸು ತಿನ್ನುತ್ತಿದ್ದಿಯಲ್ಲ." ಎಂದು ಮೂದಲಿಸಿದ. ಸುಮ್ಮನೆ ತಿನ್ನುತ್ತಿದ್ದ ಸನ್ಯಾಸಿಗೆ ಕೋಪ ನೆತ್ತಿಗೇರಿತು. ಕೂಡಲೇ " ಅತ್ಯಂತ ರುಚಿಕಟ್ಟಾದ ಆದರೆ ಅತಿ ಸಣ್ಣ ಗಾತ್ರದ ರುದ್ರಾಕ್ಷಿ ಹಣ್ಣಾಗಿ ಹುಟ್ಟು." ಎಂದು ಶಪಿಸಿದ. ಕೂಡಲೇ ಆತ ಕಾಡುಗಳ ಸಂದುಗಳಲ್ಲಿ ಹುಲುಸಾಗಿ ಬೆಳೆವ ಪುಟಾಣಿ ರುದ್ರಾಕ್ಷಿ ಗಿಡವಾಗಿ ಹುಟ್ಟಿದ. "ಹೀಗೆ ಅಹಂಕಾರದಿಂದ, ಮದದಿಂದಾಗಿ ಹಲಸಾಗಿ ಹುಟ್ಟಿದ ಗಂಧರ್ವ ರುದ್ರಾಕ್ಷನ ಕತೆ ಮಕ್ಕಳೆ." ಎಂದು ಅಜ್ಜಿ ಕತೆ ನಿಲ್ಲಿಸಿದಳು.



" ಇದರ ಸೊಳೆ ರುಚಿ ಇರುತ್ತಾ" ಎಂದು ಕೇಳಿದ ಪುಟ್ಟು. "ಬಹಳ ರುಚಿ ಮಕ್ಕಳಾ, ನಾಳೆ ತಿನ್ನೋಣ." ಎಂದು ಅಜ್ಜಿ ತನ್ನ ಕೆಲಸಕ್ಕೆ ಹೊರಟಳು.


ಶ್ರೀಧರ್. ಎಸ್. ಸಿದ್ದಾಪುರ

Friday, April 10, 2020

ಬಿಳಲು




       ಏಕೋ ಮೂರು ನಾಲ್ಕು ದಿನಗಳಿಂದ ಅವನದೇ ನೆನಪು! ಏನು ಮಾಡುತ್ತಿದ್ದಾನೊ ಏನೋ. ಅಪ್ಪನ ತಿಥಿಗೂ ಬಂದಿರಲಿಲ್ಲ ಪುಣ್ಯಾತ್ಮ. ಪೋನ್ನಲ್ಲಿ 'ಹಾಂ', 'ಹೂಂ' ಎಂಬಲ್ಲಿಗೆ ಮಾತಿಗೆ ಕಡಿವಾಣ.
 ನಿಮ್ಮ ಆಸ್ತಿನೂ ಬೇಡ ಮನೆನೂ ಬೇಡವೆಂದು ಒಂದಿಷ್ಟು ಹಣ ಹೊತ್ತು ಹೋದ ನನ್ನ ತಮ್ಮ ಇಂದು ಹೆಬ್ಬಾಗಿಲಲಿ ನಿಂತು ಹಣಕಿ ಹಾಕಿದಂತೆ ಭಾಸ. 

      ಯಾರೋ ಅದು ಎಂದು ಕರೆದೆ. ತೆರೆದ ಹೆಬ್ಬಾಗಿಲಿನಲಿ ಆರಡಿ ಎತ್ತರದ ವ್ಯಕ್ತಿ. ಕನ್ನಡಕವಿಲ್ಲದೇ ದೂರದ್ದು ಕಾಣಲ್ಲ. 'ತಥ್ ಈ ಚಾಲೀಸು' ಎಂದು ಶಪಿಸಿದೆ. ಆತನ ಹಿಂದೆ ಮಿಳ್ಳೆಗಣ್ಣಿನ ಪೋರನೊಬ್ಬ ಹಣಕಿ ಹಾಕಿ ನನ್ನೇ ನೋಡುತ್ತಲಿದ್ದ. ಬಿಸಿಲಕೋಲೊಂದು ಇಡಿ ಮನೆಯನು ಬೆಳಗಿತ್ತು. 
    ನನ್ನ ಗಮನವೆಲ್ಲಾ ಆತನೆಡೆಗೆ ಹೋಯಿತು. ತಕ್ಷಣಕ್ಕೆ ತಿಳೀಲಿಲ್ಲ. 'ನಿಜ ಅವನು ನನ್ನ ತಮ್ಮನೇ', 'ಒಳಗೆ ಬಾರೋ' ಎಂದೆ. ದೊಡ್ಡಪ್ಪ ಎಂದು ದೊಡ್ಡ ದನಿ ಮಾಡಿ ನನ್ನ ಕಾಲ ಬಳಸಿ ನಿಂತ ಮಗುವನ್ನು ಒಮ್ಮೆಲೆ ಎತ್ತಿ ಹಿಡಿದೆ. 'ಅಂತೂ ನಿನಗೆ ಮನೆ ನೆನಪಾಯಿತಲ್ಲ, ನಡೆ ನೀರು ದೋಸೆ ಮಾವಿನ ರಸ ಹಾಕ್ಕೊಂಡು ತಿನ್ನೋಣ' ಎನ್ನುತ್ತಾ ಮಗುವನ್ನು ಒಮ್ಮೆಲೆ ಆಕಾಶಕ್ಕೆ ಹಾರಿಸಿದೆ. 
#_ಶ್ರೀಧರ್_ಎಸ್_ಸಿದ್ದಾಪುರ.
#_ಸಣ್ಣ_ಕತೆಗಳು.

Thursday, March 26, 2020

ಅಳಿಲ ಧ್ಯಾನ!



ಅಳಿಲ ಮರಿಯೇ
ಅಳಿಲ ಮರಿಯೇ
ಎಲ್ಲಿರುವೆ?
ತುಪಾಕಿಯ ಮೇಲೆ
ಕುಂತಿರುವೆ.
ಅಯ್ಯೋ ರಾಮ
ಏನು ಕೆಲಸ
ಅಲ್ಲಿ ನಿನಗೆ?
ಬೇಗ ಸೇರೆ 
ಮನೆಗೆ.
'ತುಪಾಕಿ ಮಾಮ
ಬಂದರೆ ಕೈಯ
ಮುಗಿವೆ
ಹೊಡೆಯದಿರು ಗುಂಡು
ಎನುವೆ.
ನಾಕು ಜನರ ಪ್ರಾಣ
ಉಳಿಸಿ ಬರುವೆ.

ಶ್ರೀಧರ್ ಎಸ್. ಸಿದ್ದಾಪುರ. ಮಾರ್ಚ್ ೨೨.
#ಪುರುಸೊತ್ತು_2020.

#ಮಕ್ಕಳ_ಪದ್ಯಗಳು.

Friday, December 15, 2017

ಬೆಳ್ಳಿಯೂರಿನ ಬೆಡಗಿ ಸಿಕ್ಕಿದ್ದಳು ಮೊನ್ನೆ!

 ಬೆಳ್ಳಿಯೂರಿನ ಬೆಡಗಿ
ಸಿಕ್ಕಿದ್ದಳು ಮೊನ್ನೆ
ಕದ್ದು ನೋಡುತ್ತಿದ್ದಳು ನನ್ನೇ
ನೋಡಿದೆನವಳ ನಾನೂ ಕದ್ದೇ
ಬಿಡದೇ ಕದ್ದೆ ಅವಳ ನಿದ್ದೆ

ವಾಸಿಯಾಗಿಲ್ಲ ಅವಳ ಹುಚ್ಚು
ಎಷ್ಟೇ ಕೊಟ್ಟರೂ ಮದ್ದು!
ದಿನವಿಡಿ ಇವಳದೇ ಸದ್ದು.
ಹೊಂಗನಸೊಂದನ್ನು
ಕಟ್ಟಿಕೊಂಡೇ ಇದ್ದೇ  ಸೊಂಟಕ್ಕೆ
ಜಾರಿಹೋಗದಂತೆ ಬಿದ್ದು.

ತಳುಕು ಬಳುಕಿನ ಬಳ್ಳಿ
ಅಡಗಿಕುಂತವಳೆ ಕಳ್ಳಿ
ಮನ ಕದ್ದ ಮಳ್ಳಿ
ಅಡವಿಯೊಳಗಿನ ಚೆಂದುಳ್ಳಿ!

ಶ್ರೀಧರ್ ಎಸ್. ಸಿದ್ದಾಪುರ.

ಒಂದು ಆರ್ಕಿಡ್ ಸಸ್ಯ

On Way to Jari Falls




Wednesday, September 20, 2017

ಹೊರಗು ಮಳೆ ಒಳಗು ಮಳೆ......


ಕುಂಭ ದ್ರೊಣ ಮಳೆಯನ್ನು ನಾ ಕಂಡಿರಲೆ  ಇಲ್ಲ. ಮೊನ್ನೆ ಸಿಕ್ಕಿಂಗೆ ಹೊದಾಗ ಅದರ ಅನುಭವವಾಯಿತು. ಆಗಲೆ ಈ ಚಿತ್ರ ತೆಗೆದಿದ್ದು...ಮೊನ್ನೆ ನಮ್ಮಲ್ಲಿ ಸುರಿದ ಭಾರಿ ಮಳೆಗೆ ಹೊಳೆದ ಕವನ ನಿಮ್ಮ ಓದಿಗೆ.


ಹೊರಗೂ ಮಳೆ ಒಳಗೂ ಮಳೆ
ಸುರಿಯುತಿದೆ ಬಿಟ್ಟು ಬಿಡದೆ
ಜಿಟಿಜಿಟಿ ಜೀರಿಗೆ ಮಳೆ
ಮುತ್ತಿಕ್ಕುತಿವೆ ಮತ್ತೆ ಮತ್ತೆ
ನನ್ನ ಬಿಟ್ಟು ಬಿಡದೆ
ನೆನಪಲ್ಲಿ ನೆನಪೇ ನೆನೆದು ಬಿಟ್ಟಿದೆ
ಹರಿಸಿದೆ ಹೊಳೆ.
ಹೊರಗೂ ಮಳೆ ಒಳಗೂ ಮಳೆ!

(ಬರೆಹದ ತಪ್ಪುಗಳಿಗೆ ಕಾರಣ ನಾನಲ್ಲ)

Saturday, April 22, 2017

ಹಕ್ಕಿ ಮರಿ..

ಮೊನ್ನೆ ಪೋಟೋಗ್ರಪಿಗೆ ಹೋದಾಗ ಕುಟುರದ ಮರಿಯೊಂದು ಅಮ್ಮ ನೊಂದಿಗೆ ಕಾಣಸಿಕ್ಕಿತು. ಮುದ್ದಾದ ಮರಿ. ತರೆದ ಗೆಲ್ಲುಗಳ ಮೇಲೆ ಕುಳಿತ್ತಿತ್ತು. ಇಂದಷ್ಟೇ ಹೊರಗೆ ಬಂದ ಮರಿಗೆ ಅಮ್ಮ ಅಡಗುವುದನ್ನು, ಹಾರುವುದ ಕಲಿಸುವುದ ನೋಡುವುದು ಕಣ್ಣಿಗೆ ಹಬ್ಬ. ಮತ್ತೆ ಮತ್ತೆ ಮರಿ ನೋಡಿ ಆನಂದಿಸಿದೆ. ತನ್ನ ಮರಿಯನ್ನು ತಾಯಿ ಹುರಿದುಂಬಿಸುವುದು ಮತ್ತು ತಾಯಿ ಜೊತೆ ಏನು ಮಾತನಾಡುತ್ತಿರಬಹುದೆಂದು ಕಲ್ಪಿಸಿ ಕವನವೊಂದು ಗೀಚಿದೆ. ಓದಿ ಕುಸಿಯಾದರೆ ಇಷ್ಟಿಸಿ!
Juvenile Barbit.


ಹಕ್ಕಿ ಮರಿ..
ಗೂಡು ಬಿಟ್ಟು ಹೊರಗೆ ನೀ ಬಂದರೆ
ಆಗದಂತೆ ನಿನಗೆ ಎಲ್ಲೂ ತೊಂದರೆ.
ಗುಬ್ಬಿ ಮರಿಯಂತೆ ನಿನ್ನ ನಾ ನೋಡಿಕೊಳ್ಳುವೆ;
ಹಾರಲು ಹಾರಾಡಲು ನಿನಗೆ ನಾ ಕಲಿಸುವೆ.
    ವಸಂತದ ಹೂವಂತೆ ಬಿರಿದೆ ನೀ
    ಹಾರಲು ನಿನಗೆ ನಾ ಕಲಿಸಲೆ.
    ಅಲ್ಲಿ ನೋಡು ಮಾವು ಚಿಗುರಿದೆ;
    ಕೊಕ್ಕಿನಲ್ಲಿ ಕಿತ್ತು ತಿನ್ನ ಬಾರದೇ?
ಚಿಗುರಿನಂತೆ ನಿನ್ನೆ ಮೊನ್ನೆ ನಾ ಚಿಗುರಿದೆ,
ವಿಶಾಲ ಪ್ರಪಂಚವ ನಾ ಇಂದೇ ನೋಡಿದೆ.
ಚಿಗುರು ಮಿಡಿಯ ಕಿತ್ತು,
ಬಾಯಿಗಿಡಬಾರದೇ ಒಂದು ತುತ್ತು?
    ಹಾರುತಿಹುದು ದೂರದಲ್ಲಿ ಹದ್ದು ಹತ್ತು
    ಬಿಟ್ಟು ಹಾರದಿರು ನನ್ನ ಇವತ್ತು.
    ತುಂಬ ಹೊಸದು ನನಗೆ ಈ ಜಗತ್ತು,
    ಹಾರಬಾರದೇ ನನ್ನ ಹೊತ್ತು?
                ಶ್ರೀಧರ್. ಎಸ್. ಸಿದ್ದಾಪುರ.

Thursday, December 29, 2016

ನಿರೀಕ್ಷೆ



ಬರುವ ಕನಸುಗಳಿಗಾಗಿ
ಸಿಗುವ ಕೆಲಸಗಳಿಗಾಗಿ
ಹೊಸದು ಹೊಸೆವ
ಮನಸ್ಸಿಗಾಗಿ
ಮನವ ತೋಯಿಸಿ
ಹನಿಯ ಹನಿಸುವ
ಮಳೆಗಾಗಿ
ಮನದ ಭಾರವ
ಇಳಿಸುವ ಮೌನಕ್ಕಾಗಿ
ಪ್ರೀತಿ ಹನಿಸುವ
ಪ್ರಿಯತಮೆಗಾಗಿ
ನಿರೀಕ್ಷೆ ನಿರೀಕ್ಷೆ ನಿರೀಕ್ಷೆ.... 

Saturday, December 20, 2014

ಹೊಸ ಮನ್ವಂತರದತ್ತ....


ಚಿತ್ರ ಇಂಟರ್ ನೆಟ್.
ಪರಮ ಅದ್ಭುತ ಈ ದ್ರಾವಣ
ಕುಡಿದವರು ರಾವಣ!
ಹನಿ ಹನಿಯೂ ವಿಷದ ತೊಟ್ಟು
ಜನ್ಯವು ಸೋಜಿಗದ ಬಿಕ್ಕಟ್ಟು.

        ಹೊಸ ಮನ್ವಂತರದ ರಾವಣ
        ಹುಟ್ಟಿಕೊಂಡಿದ್ದಾನೆ.
        ಎಲ್ಲಿ? ಎಲ್ಲಿ? ಅಲ್ಲಿ ಅಲ್ಲಿ
        ಗಲ್ಲಿ ಗಲ್ಲಿ ನೋಡಲ್ಲಿ!

ರಾವಣ, ಕಂಸ, ಜರಾಸಂದ
ಕುಡಿದಿರ್ಪರು ಈ ಪೇಯ
ಕೃತಿಯೆಲ್ಲವೂ ಹೇಯ.

        ಅಪ್ಪ ಅಮ್ಮ ಅಕ್ಕ ತಂಗಿಯರಿಲ್ಲ
        ನ್ಯಾಯ ಅನ್ಯಾಯ ಇವರಲ್ಲೇ ಇಕ್ಯ
        ತತ್ವ ಆದರ್ಶಗಳಿಲ್ಲ.
ಹಾದಿ ಹಾದಿಯಲೂ ಜನಿಪರು
ಕೊಂದರೂ ಹುಟ್ಟಿ ಬರುವರು
ರಕ್ತ ಬೀಜಾಸುರರಂತೆ
ಮತ್ತೊಬ್ಬರು,
ನುಂಗಿ ನೀರ್ ಕುಡಿವರು.
        ವಾಸ್ತವದ ಬೇರನು
        ಕೆದಕಿದರೆ ಬರಿಕಣ್ಣೀರು.
        ಇದಕೆಲ್ಲಿಯ ಕೊನೆ
        ದಿನ ದಿನವೂ ಹಿಗ್ಗುತಿದೆ
        ಪೂತನಿಯ ವಿಷದ ಮೊಲೆ!

Friday, October 10, 2014

ಮರೆತು ಹೋದ ಗೆಳಯನಿಗೆ.

ಮರೆತು ಹೋದ ಗೆಳಯನಿಗೆ...
ಹಲವು ದಿನಗಳಿಂದ ಕಾಡಿದ ವಿಷಯ ಒಂದರ ಕುರಿತು ನನಗನಿಸಿದ್ದು. ನಿಮಗೂ ಹಿಗನಿಸಿದ್ದರೆ ತಿಳಿಸಿ...

ಕೈಯಲ್ಲೊಂದು ಕರಟ ಹಿಡಿದು
ನೆಲದೊಡಲ ಬಗೆದು
ಮತ್ತೆ ಮತ್ತೆ ಜಿಗಿದು
ಸಿಪ್ಪೆ ದೋಣಿ ಮಾಡಿಕೊಂಡು
ತೇಲಿ ಬಿಟ್ಟ ದೋಣಿ ನೆನಪ ಮರೆತು
ಗಣಕದೊಂದಿಗಾಡುತಿರುವೆ
ಉಸಿರು ಅದುವೆ ಎಲ್ಲಾ ನಿನಗೆ...
ನೆನಪನೆಲ್ಲಾ ದೋಣಿಯಲ್ಲಿ..
ಒಂದು ಬಿಡದೇ ತೇಲಿ ಬಿಟ್ಟೆ.
ಗೆಳೆಯನೆಂದು ಬರುವೆ
ನಿನ್ನ ನೆನದು ಕಾಯುತಿರುವೆ


ತೆೇಲಿ ಬಿಟ್ಟ ದೋಣಿ
ಎಂದೊ ಮಗುಚಿದೆ.
ಎಷ್ಟು ದಿನವೊ ನಿನ್ನ ಆಟ
ಎಂದು ಮುಗಿಯುವುದೊ?
ಎಲ್ಲೆಲ್ಲೊ ತೇಲಿ ಹೋದೆ
ಮತ್ತೆ ಬಾರ ದೂರಿಗೆ.
ಬಿಟ್ಟ ದೋಣಿ ಕಾಯುತಿಹುದು
ಒಮ್ಮೆ ಬಾರೊ ತೇರಿಗೆ

ಶ್ರೀಧರ. ಎಸ್.

Thursday, April 18, 2013

ಚಿಟ್ಟೆಯೊಂದಿಗೆ ಸವಿ ಮಾತು.

ಚಿಟ್ಟೆಯೊಂದಿಗೆ ಸವಿ ಮಾತು.

"ಎರಡು ಎರಡು ಕಣ್ಣು ಮಿಟುಕಿಸಿ
ಹೊರಟ್ಟಿದ್ದೆಲ್ಲಿಗೆ?"
ಎಂದು ಕೇಳಿದೆ.
"ಪುಟ್ಟ ದೇಹಕೇಕೆ ಎರಡು ಕಣ್ಣು
ಒಂದೇ ಸಾಲದೇ?"
ಎಂದು ಕೇಳಿದೆ.
"ಎರಡು ಕಣ್ಣು ಸಾಲದೆನಗೆ
ಹೂವಿನಂದ ಸವಿಯಲು.
ಸೃಷ್ಟಿಗಿಂತ ದೃಷ್ಟಿ ಮುಖ್ಯ
ಸೊಬಗ ನೋಡಲು"
ಎಂದು ಸಾರಿತು.

Saturday, March 9, 2013

ಅನಂತ ಶಕ್ತಿ






ಸುತ್ತ ಮುತ್ತ ಕೆಂಪ ಚಲ್ಲಿ
ಹಗಲ ಚುಕ್ಕಿ ಬಂದಿದೆ
ಹಾರಿ ಹೋದ ಪುಟ್ಟ ಹನಿಯು
ತಂಪನೆರೆಯೆ ಇಳೆಗೆ ಜಾರಿದೆ.

ಎಲ್ಲಿ ನೋಡೆ ಹಳದಿ ಬಣ್ಣ
ಗರಿಕೆ ಹುಲ್ಲ ಮೇಲೆ ನಿನ್ನ ಕಣ್ಣ
ಓ ಇದೆಂಥ ಅನಂತ ಮೋಡಿ
ಹೊನ್ನ ಬಣ್ಣವ ಚಲ್ಲಾಡಿ.

ಹನಿಗಳೆಲ್ಲಾ ಮುತ್ತ ಜೋಡಿ
ಕೊಂಬೆ ತುಂಬ ಹತ್ತು ಕೋಟಿ
ಈ ಪರಿಯ ಸೊಬಗ ನೋಡೆ
ಕವಿಯ ಹೃದಯ ಹಾಡ ಹಾಡೆ.


ಓ ಅಪೂರ್ವ ಇದೆಂಥ ಉಕ್ತಿ
"ನಾನು ನಿನ್ನ ಎದುರೆ ಎಷ್ಷು ಸಣ್ಣ'
ಓ ಅನಂತ ಅಶ್ವ ಶಕ್ತಿ
ನೀನೆ ನೋಡು ಹಗಲ ಚುಕ್ಕಿ.

ಮಿತ್ರ ರಾಘವೇಂದ್ರನ "ಹಗಲ ಚುಕ್ಕಿ' ಕವನ ಸಂಕಲ ನೋಡಿ ಪ್ರೇರಿತನಾಗಿ ಬರೆದ ಕವನ.

Tuesday, January 3, 2012

ಕತ್ತಲೆ ಮತ್ತು ಪ್ರೀತಿ




ನಡುಮನೆಯಲ್ಲಿ ಹಚ್ಚಿ ಹಣತೆ
ಕುಳಿತಿಹರು ಸುತ್ತ
ಕಟ್ಟಿಹರು ಮಾತಿನ ಬೆಟ್ಟ
ಸಿಕ್ಕಿತ್ತು ಎಲ್ಲರಿಗೂ ಸ್ವಲ್ಪ ಪುರುಸೊತ್ತು
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.

ಅಮ್ಮ ಓದುತಿಹಳು ಕವಿತೆ
ಮಕ್ಕಳಾಡುತಿಹರು ಹಿಡಿದು ಮಿಡತೆ
ಅಪ್ಪನೋ ಅಮ್ಮನ ಪಕ್ಕ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.

ಅಜ್ಜ ನೆನೆದನೊ ಆ ಘಳಿಗೆ
ಈಗ ಊಟವೂ ಪಾಳಿ ಪಾಳಿಗೆ
ಒಬ್ಬೊಬ್ಬರೂ ಒಂದು ಕಡೆಗೆ
ಸಾಗಿಹರು ತಮ್ಮ್ ತಮ್ಮ್ ವಿಶ್ವ ದೆಡೆಗೆ
ಈಗ ಸೇರಿಹರು ಒಟ್ಟಿಗೆ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.


ಅನುಕ್ಷಣವೂ ಹೋರಾಟ
ಏನೇನೊ ಪರದಾಟ
ಇಲ್ಲ ಮನಕೆ ಶಾಂತಿ
ತುಂಬಿಹದೋ ಬರಿ ಭ್ರಾಂತಿ
ದೀಪವಿಲ್ಲದೆ ಸಿಕ್ಕಿತ್ತು ಮನಕೆ ವಿಶ್ರಾಂತಿ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.




ಬನ್ನಿ ಎಲ್ಲಾ ಒಂದಾಗೋಣ
ಬೆಳಕ ಭ್ರಾಂತಿ ತೊರೆಯೋಣ
ಕತ್ತಲೆಯ  ಪ್ರೀತಿಸೋಣ
ವಿಷಯ ಪ್ರೀತಿ ಕಳಚೋಣ
ಮತ್ತೆ ಮನುಜರಾಗೋಣ
ದೀಪ ವಿಲ್ಲದ ರಾತ್ರಿ
ತುಂಬಿತ್ತು ಪ್ರೀತಿ.
ಶ್ರೀಧರ್. ಎಸ್. ಸಿದ್ದಾಪುರ

Monday, November 14, 2011

ಪದ್ಯ ಪತ್ರ


ಹೀಗೆ ಒಮ್ಮೆ ಗೆಳೆಯನಿಗೆ ಬರೆದ 'ಪದ್ಯ ಪತ್ರದ' ತುಣುಕುಗಳು

ಕಾರಣ 'ಸರಳ'

ಗೆಳೆಯ
ಫೋನಿಸಿದೆ ನಾನು ಬಹಳ
ಮನೆಯಲ್ಲಿರುವುದು ನೀನು
ತುಂಬಾ ವಿರಳ
ತಿಳಿಯಿತು ಕಾರಣ 'ಸರಳ'!




ನಿನ್ ಕಾಗ್ದ


ನಿನ್ ಕಾಗ್ದ
ಓದ್ದೋನು
ನಿಜವಾಗಲೂ ಸೂರ
ನಮಗ್ ಬೇಕ್ರಿ
ದೊಡ್ಡ ಮಸೂರ!

ಕಾಗದ

ಚೊಕ್ ಮಾಡ್ ಬರೀರಿ
ಕಾ ಗುಣಿತ
ಇರಲಿ ಕಾಗ್ದೊಳಗೆ
ಒಂಚೂರ್ ಗಣಿತ.










ಯೋ(ರೋ)ಗ ತರಬೇತಿ

ಇದ್ದೈತಿ ನಮಗ
ಹತ್ತು ದಿನ ಯೋಗ
ಹಿಡ್ಕೊಂಡೈತಿ ಈಗ
ಶೀತ ನೆಗಡಿ ರೋಗ
*****







ಬರಿಯಾಕ್ ಆಗ್ಲಿಲ್ಲ
ಅಂತ ಹೇಳಬ್ಯಾಡ್ರಿ
ನೂರಾರು ನೆವನ
ಮಾಡಾಕ್ ಹತ್ತಿರಿ
ಯಾರದ್ದೋ ಧ್ಯಾನ!
*****
ಬೆಳಸ್ಕೊಳ್ರಿ ಒಂಚೂರ್
ಬರಿಯೊ ಹವ್ಯಾಸ
ಎನಾಗತೈತಿ
ನಿಮಗ ತ್ರಾಸ
*****
ದಯಮಾಡಿ
ಬರಿಬ್ಯಾಡ್ರಿ
ಕವ್ನ
ಉಳಿಸಿ
ನಮ್
ಕಣ್ಣಿನ್
ಜೀವ್ನ
*****






ಯಾರ್ರೀ ಕಲ್ ಸ್ದೊರ್
ನಿಮಗ ಅಕ್ಷರ
ಸರಿ ಬರ್ಯಾಕ್
ಬರಾಕಿಲ್ಲ ಬರ( hand writing)
*****








ಎಲ್ಲಾನು ಓದಿ
ಮಾಡ್ಕೊಳ್ ಬ್ಯಾಡ್ರಿ
ಬ್ಯಾಸ್ರ
ಕುಡಿಯಾಕ್ ಬೇಕೇನ್ರಿ
ಆಸ್ರ.
*****







ಕವನ ಓದಿ
ಸಿಟ್ಟೇನಾರ ಬಂತೆ
ಬಂದ್ರೆ ಜಗದ್ ಬಿಡು
ಕುತ್ತುಂಬರಿ ಜೀರಿಗೆ ಮೆಂತೆ!

ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...