Showing posts with label ಚಾರಣ. Show all posts
Showing posts with label ಚಾರಣ. Show all posts

Thursday, July 9, 2026

ಬಲ ಉಳ್ಳವರ ಅಹೋಬಿಲಂ!

 


ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ಸಹಾಯದಿಂದ ಆಂಧ್ರದ ಮೂಲೆಯೂರಿಗೆ ಪ್ರಯಾಣ ಬೆಳೆಸಿದೆವು. 

ಭವನಾಶಿನಿ ನದಿ ತಟದ ಅಹೋಬಿಲಂ -

 ಭರತ ಖಂಡದ ಯಾವ ಮೂಲೆಗೆ ಹೋದರೂ ನಿಮಗೆ ಒಂದೇ ಊರಿನಲ್ಲಿ 9 ನರಸಿಂಹ ದೇವಾಲಯಗಳು ಸಿಗಲಾರವು. ಅಂತಹ ಮಹಾ ವಿಚಿತ್ರ ಅಹೋಬಿಲಂ! ತೆಲುಗಿನಲ್ಲಿ ಬಿಲಂ ಎಂದರೆ ಗುಹೆ. ನಮ್ಮ ನಿಯಾನ್ ಕಣ್ಣುಗಳಲ್ಲಿ ಮಿಂಚಿದ ಪ್ರಶ್ನೆಗಳು ಹಲವು. ಒಂಭತ್ತು ದೇವಾಲಯಗಳನ್ನು ಒಂದೇ ಊರಿನಲ್ಲಿ ನಿರ್ಮಿಸುವ ಔಚಿತ್ಯವಾದರೂ ಏನು? ಅಚ್ಚರಿಯ ಅಹೋಬಿಲಂನ್ನು ಒಂದೇ ಗುಟುಕಿನಲಿ ನೋಡಿದ ನಮ್ಮ ಪಯಣದ ಮೆಲುಕು ಹಾಕೋಣ ಬನ್ನಿ. 

ಪೊಂಗಲ್‌ ಮುನ್ನುಡಿ!


 ಹೈದ್ರಾಬಾದಿನಿಂದ ಕಾರು ಬಾಡಿಗೆಗೆ ಹಿಡಿದು. ಸಿಕ್ಕ ಒಂದು ರೈಲು ಹತ್ತಿ ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂಗೆ ಬೆಳ್ಳಂ ಬೆಳಿಗ್ಗೆ ಹೆಜ್ಜೆ ಇಟ್ಟೆವು. ಮುಸುಕು ಎಳೆದು ಮಲಗಿದ್ದ ಊರನ್ನು ನಮ್ಮ ಬಸ್ಸು ಎಬ್ಬಿಸಿತು. ಜೊತೆಗೆ ಮಹಾ ಧೂಳಿನ ನೆಬ್ಯೂಲಾ ಊರನ್ನು ಮುಚ್ಚಿತು. ನಮ್ಮ ಮೂಗನ್ನೂ. 

 ಊರಿಗೆ ಕಾಲಿಡುತ್ತಲೆ ಸಣ್ಣ ಲಾಡ್ಜು ಹಿಡಿದು ಪ್ರಾತಃವಿಧಿಗಳನ್ನು ಪೂರೈಸಿ ಬಳ್ಳಾರಿ ಭಟ್ಟರ ಹೋಟೆಲಿಗೆ ಲಗ್ಗೆ ಇಟ್ಟೆವು. ಭಟ್ಟರಿನ್ನು ಬಾಗಿಲು ತೆರೆದಿರಲಿಲ್ಲ. ಹೋಟೆಲ್‌ ತೆರೆಯುತ್ತಲೇ ಪೊಂಗಲ್‌ ಬಾರಿಸಿ ಭಟ್ಟರ ಕುಶಲೋಪರಿ ವಿಚಾರಿಸಿ ನರಸಿಂಹ ದೇವಾಲಯ ಭೇಟಿಗೆ ಹೊರಟು ಬಿಟ್ಟೆವು. 

ಕನ್ನಡ ನಾಡಿನ ಬಳ್ಳಾರಿಯಿಂದ ಬಂದ ಭಟ್ಟರ ತಂದೆ ಇಲ್ಲೇ ನೆಲೆಯೂರಿದವರು. ಅಂದಿನ ಅವರ ದುರ್ದು ಏನಿತ್ತೋ. ಸಣ್ಣದೊಂದು ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೇ ಬೇರೆ ಸೌಲಭ್ಯಗಳಿಲ್ಲ. ವ್ಯಾಪಾರವಾಗುತ್ತದೆ ಎಂಬ ಭರವಸೆ ಏನಿಲ್ಲ. ಯಾರೂ ಇಲ್ಲಿ ಉಳಿಯಲು ಮನಸ್ಸು ಮಾಡುವುದಿಲ್ಲ! ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಕಾಡ ನಡುವಿನ ಊರು. ದೂರದ ಬಾಗಲ ಕೋಟೆಯ ಇಬ್ಬರು ಇಲ್ಲಿ ಸಿಕ್ಕರು.  

 ಬದುಕಿನ ನಾಗಾಲೋಟಕ್ಕೆ ಬ್ರೇಕ್‌ ಬೇಕೆನಿಸಿದರೆ ಇಲ್ಲಿಗೆ ಸುಮ್ಮನೆ ಬನ್ನಿ! ಯಾವುದೋ ನಾಟಕದ ಪಾತ್ರಧಾರಿಗಳಂತೆ ಇಲ್ಲಿನವರು ನಿಮಗೆ ಕಾಣುತ್ತಾರೆ. ತಮ್ಮ ಉಬ್ಬಿದ ಹೊಟ್ಟೆ ಹೊತ್ತು ಯಮ ಸದೃಶಃ ಪರ್ವತವನ್ನು ಏರಲಾಗದೇ ಬೆಟ್ಟವೇರುವವರು. 



ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್‌ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.

ಅಚ್ಚರಿಯ ಅಹೋಬಿಲಂ.



ಈ ಒಂಭತ್ತು ದೇವಾಲಯಗಳು ನಲ್ಲಮಾಲಾ ಕಾಡೊಳಗೆ ಅವಿತಿದೆ ಎನ್ನುವುದೇ ಅಚ್ಚರಿ. ಕಾಡೊಳಗೆ ನಿರ್ಮಿಸುವ ದುರ್ದು ಏನಿತ್ತೊ. ಕಾಡ ಕಟ್ಟೆಯಲ್ಲಿ ಕಟ್ಟಿದ ಅಹೋಬಿಲಂನಲ್ಲಿ ಎರಡು ದೇವಾಲಯಗಳು ಕಾಡಿನಂಚಿನಲ್ಲಿವೆ. ಹೆಚ್ಚಿನ ಎಲ್ಲಾ ದೇವಾಲಯ 14 ಮತ್ತು 15 ನೆಯ ಶತಮಾನದ ಅಂಚಿನಲ್ಲಿ ವಿಜಯನಗರದ ಕಾಲದಲಿ ನಿರ್ಮಿಸಿದಂತವು. ನಾಲ್ಕು ದೇವಾಲಯ ಬೆಟ್ಟದ ಬುಡದಲ್ಲೂ ನಾಲ್ಕು ಬೆಟ್ಟದ ಮೇಲೆ ಹಾಗೂ ಒಂದು ಕಾಡೊಳಗೆ ಅವಿತಿದೆ. ಯೋಗಾನಂದ ಚತ್ರವಟ ನರಸಿಂಹ ಕಾಡಂಚಿನಲ್ಲಿದೆ.



ಯೋಗಾನಂದ ನರಸಿಂಹ ಶನಿಯನ್ನು ಆಳುತ್ತಾನೆಂದು ಪ್ರತೀತಿ ಇದೆ. ಇಲ್ಲಿನ ನರಸಿಂಹ ದೇವರನ್ನು ಅಹೋಬಾಲ ಎಂದೂ ಕರೆಯುತ್ತಾರೆ. ಅಂದರೆ ಮಹಾ ಶಕ್ತಿ ಶಾಲಿ ಎಂದು. ಯೋಗಾನಂದ ನರಸಿಂಹ ಯೋಗಾಸನದಲ್ಲಿದ್ದಾನೆ.


ಚತುರ್ವಾತ ನರಸಿಂಹ ಹಾಹಾ ಮತ್ತು ಹೋ ಹೋ ಎಂಬಿಬ್ಬರು ಗಂಧರ್ವರು ನರಸಿಂಹನಿಗೆ ಸಂಗೀತ ಸೇವೆ ಮಾಡಿ ಖುಷಿ ಪಡಿಸಿದರು. ಆ ಸಲುವಾಗಿಯೇ ಇಲ್ಲಿನ ನರಸಿಂಹನಲ್ಲಿ ಸಂಗೀತ ಮತ್ತು ಕಲೆಯ ಆರಾಧಕರು ಇಲ್ಲಿ ಬೇಡಿಕೊಂಡರೆ ಅವರಿಗೆ ಕಲೆ ಸಿದ್ಧಿಸುತ್ತದೆ ಎಂಬ ಪ್ರತೀತಿಯೂ ಇದೆ.

ಕೆಳಗಿನ ಎರಡು ದೇವಾಲಯ ದರ್ಶಿಸಿ ಮೇಲಿನ ದೇವಾಲಯ ದರ್ಶಿಸುವ ಹೊತ್ತು. ಇದೊಂದು ಅಚ್ಚರಿಯ ಪಯಣ! ಕಾಡು ತನ್ನ ಬಾಹು ಕವಚಿದ ಏಳು ದೇವಾಲಯಗಳ ತೋರಲೊಬ್ಬ ಕನ್ನಡ ಬಲ್ಲ ಗೈಡ್‌ಗಾಗಿ ತಡಕಾಡಿ ಗೆದ್ದೆವು. ಆತನೋ ನಮಗೆ ಮೂರು ಸಾವಿರಕ್ಕೆ ಬೇಡಿಕೆ ಇಟ್ಟ! ಆತನ ಬ್ರಹ್ಮಾಂಡ ಕನ್ನಡ ಪಾಂಡಿತ್ಯಕ್ಕೆ ಮೂರು ಸಾವಿರ ಬಹಳ ಕಡಿಮೆ!! ಹೊಕ್ಕ ದಾರಿ ಅಲ್ಲದೆ ಹೊರ ಬರುವ ಬೇರೊಂದು ದಾರಿ ಇರುವುದರಿಂದ ಈತನನ್ನೇ ಆಯ್ಕೆ ಮಾಡಿ ಕೊಂಡೆವು. ದಾರಿಯಾದರೂ ತೋರು ರಾಘವೇಂದ್ರನೇ ಎನ್ನುತ್ತ ಪುಟ್ಟ ಮಕ್ಕಳಂತೆ ಅವನ ಹಿಂದೆ ಹೆಜ್ಜೆ ಇಟ್ಟೆವು.

ಬೃಹತ್‌ ಮರಳು ಶಿಲೆಯೊಂದು ನಿಮ್ಮನ್ನು ಕೆಳಗಿನಿಂದಲೇ ಕರೆಯುತ್ತದೆ. ಬಹೃತ್‌ ಶಿಲೆಯ ಜಟೆಯಿಂದ ಧುಮುಕುವ ನೀರ ಹನಿಗಳ ಪ್ರೋಕ್ಷಣೆಗೈದು ದೇವಾಲಯ ಪ್ರವೇಶಿಸಬೇಕಾಗುವುದು ಇಲ್ಲಿನ ವಿಶೇಷ. ಮೂರು ಜಲಕನ್ನಿಕೆಯರು ನಿಮ್ಮ ಬರುವಿಕೆಗಾಗಿ ಕಾಯುವರು. ಬನ್ನಿ ಹಾಗೆ ಮುಂದೆ ಹೋಗೋಣ. 

ಯಗುವಾ ಅಹೋಬಿಲ ನರಸಿಂಹ-



ಭವನಾಶಿನಿ ನದಿ ದಡದ ನರಸಿಂಹ ಸ್ವಯಂ ಭೂ. ಅಂದರೆ ಉದ್ಭವ ನರಸಿಂಹ. ಇಲ್ಲಿ ಹತ್ತಾರು ಪೇರಳೆ ನಮ್ಮ ಚೀಲ ಸೇರಿದವು. ಭಕ್ತರು ಬೆಳಗಿದ ನೂರಾರು ಹಣತೆ ದೇವಾಲಯದೆದುರು ಪ್ರಜ್ವಲಿಸುತಲಿತ್ತು. ಯಾರೋ ಮಹಾಶಯನೊಬ್ಬ ನಮ್ಮ ಹಣೆಗೆ ನಾಮವೆಳೆದ ಸುಮ್ಮನಿದ್ದು ಎಳೆಸಿಕೊಂಡೆವು! ಬೆಟ್ಟವೇರಲು ಮೂರನೆ ಕಾಲಾಗಿ ಒಂದು ಕೋಲು ಕೊಟ್ಟರು ಬರೇ ಐದು ರೂಪಾಯಿಗೆ. ಇಸ್ಕೊಂಡೆವು. ಯಾರಿಗೆ ಹೊಡೆಯಲೋ ಗೊತ್ತಿಲ್ಲ. 

ಬೃಹತ್‌ ಪರ್ವತದ ಬುಡದಲ್ಲಿ ದೇವಾಲಯವಿದೆ. ಗಡಿಬಿಡಿಯಲ್ಲಿ ದೇವಾಲಯ ದರ್ಶನಕ್ಕೆ ಹೊರಟು ನಿಂತೆವು. ಸುಖಾಸೀನನಾದ ನರಸಿಂಹ ಹಿರಣ್ಯ ಕಶುಪುವಿನ ಎದೆ ಬಗೆಯುತ್ತಿದ್ದಾನೆ. ಇನ್ನೆರಡು ಕೈಗಳಿಂದ ಹಿರಣ್ಯಕಶುಪುವಿನ ಕಾಲು ತಲೆ ಹಿಡಿದು ಉಗ್ರರೂಪಿಯಾಗಿದ್ದಾನೆ. ಬಲ ತುದಿಯಲಿ ಅಬಲಾನಾದ ಪ್ರಹ್ಲಾದನು ಕೈ ಮುಗಿಯುವಂತೆ ಚಿತ್ರಿಸಿದ್ದಾನೆ ಶಿಲ್ಪಿ. ಯಗುವಾ ನರಸಿಂಹ ದರ್ಶನ ಮುಗಿಸಿ ಹಲಗೆಯ ಸೇತುವೆಯಲ್ಲಿ ಭವನಾಶಿನಿಯನ್ನು ದಾಟಿ ಹೊಸ ಲೋಕಕ್ಕೆ ಕಾಲಿಟ್ಟೆವು. 


ಕಾಡು ನಮ್ಮೊಳಗೋ ನಾವೇ ಕಾಡಿನೊಳಗೋ ಎಂಬಂತೆ ಕಾಡಿಗೆ ಕಾಲಿಟ್ಟೆವು. ಚಿತ್ರ ವಿಚಿತ್ರವಾಗಿ ಪ್ರಕೃತಿಯ ನಮ್ಮೆದುರು ತನ್ನ ಭವ್ಯತೆಯನ್ನು ತೋರುತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿವ ಭವನಾಶಿನಿ ಹೊಳೆ ದಾಟಲು ಹಲವು ಕಡೆ ಹಗ್ಗ ಹಾಕಲಾಗಿತ್ತು. ಮಳೆಗಾಲದ ಮೂರು ತಿಂಗಳು ಅಸಾಧ್ಯ ವೇಗದಿಂದ ಹರಿವ ಇವಳನ್ನು ಹರಿಯುವುದು ಅಸಾಧ್ಯ. ಯಗುವಾ ನರಸಿಂಹ ದೇವಾಲಯದ ಸನಿಹವಂತು 6-7 ಅಡಿ ನೀರು ಧುಮ್ಮಿಕ್ಕುತ್ತದೆ. ಅಹೋಬಿಲಂ ಜಲಪಾತ ಮತ್ತು ಉಗ್ರ ಸ್ತಂಭ ಕಾಣಿಸುವ ಬ್ರಿಡ್ಜ್‌ ಮೇಲೆ ನಿಂತೆವು. ನಾವು ಗುರಿಯ ಸನಿಹವೆಂದು ಕೊಂಡೆವು. ನೀವಿನ್ನೂ 450 ಮೆಟ್ಟಿಲು ಏರುವುದಿದೆ ಎಂದು ಹೇಳಿ ಗೈಡ್‌ ನಮ್ಮನ್ನು ಗಾಬರಿ ಬೀಳಿಸಿದ. ಉಗ್ರ ಸ್ತಂಭದ ಸನಿಹದಲ್ಲೇ ಜ್ವಾಲಾ ನರಸಿಂಹ ದೇವಾಲಯವಿದೆ. ಇಲ್ಲಿಂದ ಮುಂದೆ ಏರುವುದೇ ಅತಿ ಕಠಿಣ ಹಾದಿ. ಉಗ್ರ ಸ್ತಂಭದ ಬಳಿಯ ಅಹೋ ಬಿಲಂ ಜಲಪಾತ ಅಂದು ತನ್ನ ಉಗ್ರ ರೂಪ ತೊರೆದು ಶಾಂತವಾಗಿತ್ತು.

ನರಸಿಂಹ ಜಯಂತಿ ಮತ್ತು ಸ್ವಾತಿ ನಕ್ಷತ್ರ!

ಸ್ವಾತಿ ನಕ್ಷತ್ರದಂದೇ ನರಸಿಂಹ ಸ್ವಾಮಿಯ ಜನ್ಮ ದಿನ. ಬೆಳಗಾವಿ ಬಾಗಲಕೋಟೆಯ ಹತ್ತಾರು ಭಕ್ತರು ಅಂದು ದರ್ಶನಕ್ಕೆ ಬಂದಿದ್ದರು. ನೀವು ಪುಣ್ಯವಂತರು, ಇಂದು ನವ ನರಸಿಂಹನ ದರ್ಶನ ಮಾಡಿದವರಿಗೆ ಮೋಕ್ಷ ಪ್ರಾಪ್ತಿ ಎಂದ ನಮ್ಮ ಗೈಡ್.‌ ನಿನ್ನೊಂದಿಗೆ ನಡೆಯುವ ಎಲ್ಲರಿಗೂ ಮೋಕ್ಷ ಖಾತರಿ ಮರಾಯ ಎಂದು ಅವನನ್ನು ಚೇಡಿಸುತ್ತ ಹೆಜ್ಜೆ ಹಾಕಿದೆವು. ಉಗ್ರ ಸ್ತಂಭದಿಂದ ಧುಮುಕುವ ನೀರಲ್ಲಿ ಅಭಿಶೇಕ ಮಾಡಿಸಿಕೊಂಡು ಬಲ ಭಾಗದ ಕೆಂಪು ಕೊಳವನ್ನು ನೋಡುತ್ತಾ ಜ್ವಾಲಾ ನರಸಿಂಹನ ಸೇರಿಕೊಂಡೆವು. 



ಕೆಂಪು ಆಲ್ಗೆ ತುಂಬಿದ ಈ ಕೊಳವನ್ನು ಹಿರಣ್ಯ ಕಶುಪುವಿನ ರಕ್ತ ತೊಳೆದ ಕೊಳವೆಂದು ಜನ ಈಗಲೂ ನಂಬುತ್ತಾರೆ. ಜ್ವಾಲಾ ನರಸಿಂಹ ದೇವಾಲಯದ ಹಿಂದೆ 80 ಡಿಗ್ರಿ ಕೋನದಲ್ಲಿದ್ದ ದಾರಿಯಲ್ಲಿ ಕೇವಲ ಹಗ್ಗದ ಸಹಾದಿಂದ ಏರಬೇಕು. ಕೈ ಕಾಲುಗಳಲ್ಲಿ ಕಸುವಿಲ್ಲದ ಕಾರಣ ಕೈ ಬಿಟ್ಟೆವು. 




ಮೈ ತೋಯಿಸಿಕೊಂಡ ನಿಮಗೆ ಇಲ್ಲಿ ಕತೆಗಳು ನಿಮ್ಮ ಮನಸ್ಸು ತೋಯಿಸುವವು. ಪ್ರಕೃತಿ ಮಡಿಲಲ್ಲಿ ಇಂತಹದೊಂದು ಅಚ್ಚರಿಯ ತಾಣವ ಹುಡುಕಿ ತೆಗೆದು ಅದಕೊಂದು ಕತೆಗಳನ್ನು ಜೋಡಿಸಿದ ಮಹಾ ಪುರುಷನಿಗೆ ಶರಣು. ದೇಶ ಕಾಲಾತೀತದಲ್ಲಿ ಹಬ್ಬಿ ಹರಡಿದ ನೂರಾರು ಕತೆಗಳು ನಿಜಕ್ಕೂ ನಿಮ್ಮನ್ನು ಕಾಡುವವು. 

ಕಾಡೊಳಗಿನ ಅಚ್ಚರಿ ಮೂಡಿಸುವ ಕಾಡುವ ಕತೆಗಳು 

ಚುಂಚೂ ಬುಡಕಟ್ಟು ಮತ್ತು ನರಸಿಂಹ-


ಇಲ್ಲಿನ ಚುಂಚೂ ಆದಿವಾಸಿಗಳು ನರಸಿಂಹನನ್ನು ತಮ್ಮ ಅಳಿಯನ್ನನ್ನಾಗಿಸಿದ ಪರಿಗೆ ಅಚ್ಚರಿಗೊಂಡೆ. ನರಸಿಂಹನಿಗೆ ಆದಿವಾಸಿ ಲಕ್ಷ್ಮೀಯನ್ನು ಮದುವೆ ಮಾಡಿಸಿ ಇವರು ತಮ್ಮವನನ್ನಾಗಿ ಮಾಡಿ ಕೊಂಡಿದ್ದಾರೆ! ಹಾಗಾಗಿ ಹೋಗಿ ಬರುವವರಿಗಾಗಿ ಇಲ್ಲಿನ ಬುಡಕಟ್ಟು ಜನರು ದಾರಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಾದು ಕೂರುವುದು ನಮಗಂತೂ ಅಚ್ಚರಿ. ಸಾಕ್ಷಾತ್‌ ದೈವ ಸಂಭೂತರಾದ ಸರಳ ಜನ! ಇವರ ಚೇತನವೇ ಒಂದು ಒಗಟು. ನಮ್ಮ ದಾರಿಯಲ್ಲೊಬ್ಬಳೂ ನರಸಿಂಹ ಲಕ್ಷೀಗಾಗಿ ರಂಗೋಲಿ ಹಾಕಿ ಕುಳಿತಿದ್ದಳು. ಭಕ್ತರು ನೀಡಿದ ಅಷ್ಟೋ ಇಷ್ಟೋ ಇವರಿಗೆ ಆದಾಯ! ಅಬ್ಬಬ್ಬಾ ಎಂದರೂ ೨೦೦ ದಾಟದ ಸಂಪಾದನೆ. ಮತ್ತು ಮಗದೊಂದು ಯೋಚಿಸದ ಯೋಜಿಸದ ತೃಪ್ತ ಜನ.

ಮಾಲೋಲ ನರಸಿಂಹನೆಡೆಗೆ….

ಅಹೋಬಿಲಂನ ಜ್ವಾಲಾ ನರಸಿಂಹನಿಗೆ ಶರಣು ಬಂದು ನಿಧ ನಿಧಾನಕ್ಕೆ ಒಂದೊಂದು ಹೆಜ್ಜೆ ಇಟ್ಟು ನೀರ ಜೋಕಾಲಿಯಲಿ ಮಿಂದು ಕ್ಯಾಮರಕ್ಕೂ ಎರಡು ಹನಿ ಮೀಯಿಸಿ ನಮ್ಮ ಗೈಡ್‌ ಜೊತೆ ಹೊರಟು ನಿಂತೆವು.

ಕ್ಷೀಣ ಜಲಪಾತವೊಂದು ನನ್ನ ಕಣ್ಣವೆಯಲ್ಲಿ ತುಂಬಿ ಪೂರ್ಣ ಸೃಷ್ಟಿಯ ಸೊಬಗನ್ನು ಹೆಚ್ಚಿಸುವ, ಕತೆಗಳ ಸೃಷ್ಟಿಸುವ ಪರಿಗೆ ಚಕಿತಗೊಂಡಿರುವೆ.

ಇಲ್ಲಿಂದ ಹೊರಟು ಮಾಲೋಲ ನರಸಿಂಹನೆಡೆಗೆ ಹೆಜ್ಜೆ ಹಾಕಿದೆವು. ಹಿರಣ್ಯ ಕಶಪುವಿನ ಸಂಹರಿಸಿ ಕುಪಿತಗೊಂಡ ಆತನನ್ನು ಸಂತೈಸಲು ಆದಿವಾಸಿ ಲಕ್ಷ್ಮೀ ಎಂಬ ಮಹಿಳೆಯನ್ನು ಬ್ರಹ್ಮ ಕಳುಹುತ್ತಾನೆ. ಆಗಲೇ ಶಾಂತ ಸ್ವರೂಪಿಯಾಗಿ ಜ್ವಾಲಾ ನರಸಿಂಹ ಮಾಲೋಲ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾನೆ. ದೇವರ ಸಿಟ್ಟಿಗೆ ಕತೆಯ ಒಗ್ಗರಣೆ ಅನಿಸಿತು. ಅದೇ ಹಾದಿಯಲಿ ಕೆಳಗಿಳಿಯುತ್ತಾ ಬಂದಾಗ ವರಾಹ ರೂಪಿಯಾಗಿ ನರಸಿಂಹ ನೆಲೆ ನಿಂತಿದ್ದಾನೆ. ಭೂ ಭಾರವನ್ನು ಎತ್ತಿದ್ದಾನೆ. ಕತೆಗಳ ಸಿಕ್ಕು ಬಿಡಿಸಲು ಹೋಗದೇ ಸುಮ್ಮನೆ ದರ್ಶನಗೈದು ಬಂದೆವು. 

ಮೇಲೇರುವ ಹಾದಿಯೊಂದು ವಾಪಾಸಾಗುವ ಹಾದಿ ಇನ್ನೊಂದು. ಪ್ರತಿ ಕಲ್ಲಿಗೂ ಇಲ್ಲೊಂದು ಸುಂದರ ಕತೆ ಹೆಣೆಯುವ ಚಾತುರ್ಯ ಇದೆ. ಕತೆಗಳನ್ನು ಕೇಳುತ್ತಾ ಕೇಳುತ್ತಾ ದಾರಿ ಸಾಗಿದ್ದೆ ತಿಳೀಲಿಲ್ಲ.

14 ಕಿಲೋ ಮೀಟರ್‌ ದೂರದ ಪವನ ನರಸಿಂಹ ದರುಶನಕ್ಕೆ ಅಹೋಬಿಲಂ ವೃತ್ತಕ್ಕೆ ಬಂದು ಜೀಪು ಹತ್ತಿ ಹೊರಟೆವು. ಕಾಡೊಳಗೆ ಜೀಪು ಸರ್ಕಸ್ ಮಾಡುತ್ತಾ ನರಸಿಂಹ ದೇವಾಲಯ ತಲುಪಿತು. ಮುಚ್ಚಿದ ಬಾಗಿಲ ನಡುವೆ ಹಣಕಿ ಹಾಕಿ ದರ್ಶನ ಮುಗಿಸಿ ಹಿಂದಿರುಗಿದೆವು. ಹೀಗೆ ಒಂಭತ್ತು ದೇವಾಲಯ ದರುಶನವಾದರೂ ನೋಡಿದ ಸಂಪೂರ್ಣತೆ ನನಗೆ ದಕ್ಕಲಿಲ್ಲ. ಇನ್ನೂ ನೋಡಬೇಕು ಅಲ್ಲೇ ಇನ್ನೆರಡು ದಿನವಿರಬೇಕೆಂಬ ಹಂಬಲ. ಆದರೆ ಕಾಲ ಪುರುಷನೆದುರು ನಾವು ಮಂಡಿ ಊರಲೇ ಬೇಕಲ್ಲ. ಹೊರಡಲೇ ಬೇಕಾಯಿತು.

ಮೇಲೇರಿದ ಜಾಗದ ಸನಿಹದಲ್ಲೇ ವಿಶಿಷ್ಟ ವನ ಭೋಜನವೊಂದು ನಮಗಾಗಿ ಕಾಯುತಲಿತ್ತು. ಅಣಬೆ ಗಸಿ ಮತ್ತು ಕಡಲೆ ಬೇಳೆ ಪಾಯಸವನ್ನು ಹಿತಮಿತವಾಗಿ ಸೇವಿಸಿ ಗಂಡೀಕೋಟದತ್ತ ಓಟ ಕಿತ್ತೆವು .


Thursday, June 4, 2026

ಹಿಂಡ್ಲು ಮನೆಯ ಹಾದಿಯಲ್ಲಿ

 


 ಮಾಗಿ ಚಳಿ ಇನ್ನೂ ಪ್ರಾರಂಭವಾಗಿರಲಿಲ್ಲ. ಪ್ರಚಂಡ ಚಂಡಮಾರುತ ಬೀಸಿ ಹೋಗಿತ್ತು. ಬದುಕಿನಲ್ಲಿ ವಯಸ್ಸಿನ ಚಂಡಮಾರುತ! ಚಾರಣ, ಪ್ರವಾಸದ ಚುಬುಕು. ನಾಲ್ಕಾರು ಸ್ಥಳಗಳ ಕಾಕ್‌ಟೈಲ್ ತಯಾರಿಸಿದ್ದಾಯಿತು. ಡಬ್ಬಿ ಕ್ಯಾಮರಕ್ಕೆ ರೀಲು ತುಂಬಿಸಿದ್ದಾಯಿತು.

  ಎರಡು ಜಲಪಾತ, ಒಂದು ಸಣ್ಣ ಚಾರಣ. ಒಂದೆರಡು ದೇವಾಲಯ. ಸಿರಸಿ ಮಾರಿಕಾಂಬ ಬನವಾಸಿಯ ಮಧುಕೇಶ್ವರ, ಜೋಗ, ವರದಾನದಿ ಸಹ ಕಾಕ್‌ಟೈಲ್‌ನ ಭಾಗ! ಅಪ್ಪಟ ಅನಾಸ್ತಿಕ ಗೆಳೆಯರು ಮೂಗು ಮುರಿದಿದ್ದರು! 



ಓಮಿನಿ ಕಾರನ್ನು ಬಾಡಿಗೆಗೆ ಪಡೆದು , ಒಂದೇ ದಿನದಲ್ಲಿ ವಾಪಾಸು ಬರುವೆವು ಎಂದು ಕಾಗೆ ಹಾರಿಸಿ ಗೆಳೆಯನೊಬ್ಬನನ್ನು ನಂಬಿಸಿ ಕಿಡ್ನಾಪ್ ಶೈಲಿಯಲ್ಲಿ ಒಮ್ನಿಗೆ ತುಂಬಿಕೊಂಡು ಹೊರಟೆವು! ಆತನೇ ಇಂದಿನ ಕಥನದ ಕೇಂದ್ರ ಬಿಂದು. ಅಸಲಿಗೆ ಅದು ನಮ್ಮ ಮೂರು ದಿನಗಳ ಪ್ರವಾಸ! ಆತನಿಗೆ ಬೇಕಾದ ವಸನಗಳ ವ್ಯವಸ್ಥೆ ಮಾಡಿದ್ದಾಯಿತು. ಊರ ಗಲ್ಲಿಗಳಲ್ಲಿ ಕಾರಿನ ಬೆಳಕು ಚೆಲ್ಲಿ ಮೂಕಾಂಬಿಕಾ ಅಭಯಾರಣ್ಯದ ಮಗ್ಗುಲಿಗೆ ಹಾದು ಮರಕುಟಿಕವೆಂಬ ಸಣ್ಣ ಮೂರ್‌ಕೈಯಲ್ಲಿ ದಾರಿಕಾಣದೇ ಸ್ಥಿತವಾಯಿತು ನಮ್ಮ ಕಾರು.

ಜಲಪಾತದ ಜಿ.ಪಿ.ಎಸ್‌ ಕಳೆದು (Hindlumane)

  ಬೀಸಿ ಹೋದ ಮುಂಗಾರು ಮಳೆ ಹರಡಿದ ತರಗಲೆ ದಾರಿಯುದ್ದಕ್ಕೂ. ಎಡಕ್ಕೊ ಬಲಕ್ಕೊ ನೇರವೊ ತಿಳಿಯದೆ ನಿಂತಾಗ ದಿನೇಶ ಹೊಳ್ಳ ಬರೆದ ಲೇಖನವೊಂದು ದಾರಿದೀಪವಾಗಿ ಬಲಕ್ಕೆ ಹೊರಳಿಸಿದೆವು. ನಾಲ್ಕೈದು ಎಮ್ಮೆ ಹೊಡೆದುಕೊಂಡು ಕಂಬಳಿ ಕೊಪ್ಪೆ ಹೊದ್ದವನಲ್ಲಿ ಎಮ್ಮೆ ಹೊಂಡದ ದಾರಿ ಕೇಳಿದೆ. ನೇರ ದಾರಿ ಎಂಬಂತೆ ಸನ್ನೆ ಮಾಡಿದ ಮೂಕನಿರಬೇಕು ಎಂದುಕೊಂಡೆ ನೇರದಾರಿಯಲಿ ಮುಂದುವರಿದು ಕವಲಿನ ಹಾದಿಯ ನಡುವೆ ಎಲ್ಲೋ ಹಾದಿ ತಪ್ಪಿದೆವು. ಇನ್ನು ಮುಂದಿವರಿಯದಂತೆ ತೊರೆಯೊಂದು ತನ್ನ ಇರುವನ್ನು ಅರುಹಿತ್ತು. ಮುಂದುವರಿದರೆ ಸೈಲೆನ್ಸ್ರ್ ಒಳಗೆ ಹಾದು ಪ್ರವಾಸ ಮೊದಲ ದಿನಕ್ಕೆ ಮೊಟಕಾಗಬಹುದೆಂದು ಮತ್ತಿನೆರಡು ಘಳಿಗೆಯಲ್ಲೇ ಮಳೆ ಸುರಿದು ನೀರೇರಬಹುದೆಂಬ ಆತಂಕ ಮುಂಬರಿಯದಂತೆ ತಡೆದಿತ್ತು. ಸುತ್ತಲೂ ಮುಗಿಲ ಚುಂಬಿಸೋ ಮರಗಳು ನಡು ಹಗಲಿಗೇ ಕಡುಗತ್ತಲು! ಅಲ್ಲಲ್ಲಿ ಕೃಷಿ , ತೋಟಗಾರಿಕೆ. ಲಿಂಬೆ ಹುಲ್ಲಿನ `ವಾಹ್' ಪರಿಮಳ ಹೊತ್ತ ತುಂಟ ಗಾಳಿ. ಕಡಿದಾದ ಕೆಂಪು ಮಣ್ಣಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕನಸ ಬೆನ್ನತ್ತಿದೆವು.



 ಕನಸು ಅಬ್ಬೇಪಾರಿಯಾಗುವ ಕ್ಷಣ. ದಾರಿ ತಪ್ಪಿ ಯಾರದೋ ತೋಟದೊಳಗೆ ಕಾಲಿಟ್ಟೆವು. ಮನೆ ಮನಗಳಲ್ಲಿ ಹಸಿರುಟ್ಟ ಗದ್ದೆ ಕೋಗು. ಊರ ಮಂದಿ ಊರ ಬಿಟ್ಟಂತೆ ಮನೆಗಳೆಲ್ಲಾ ಖಾಲಿ ಖಾಲಿ. ಕನಸು ಅಬ್ಬೇಪಾರಿಯಾಗುವ ಪಾಳಿ. ಆತಂಕದಲ್ಲೇ ಕಳೆವ ಕ್ಷಣ. ಗೆಳೆಯರಿಗೆಲ್ಲಾ ಜಲಪಾತ ತೋರಿಸುತ್ತೇನೆಂದು ರೈಲು ಹತ್ತಿಸಿ ಎಲ್ಲೆಲ್ಲೋ ಅಲೆಸಿದ್ದದಾಯಿತು. ಜಲಪಾತ ಬಿಡಿ ಅದರ ಶಬ್ದವೂ ಎಲ್ಲೂ ಕೇಳಿಸಲೇ ಇಲ್ಲ! ಅಂತು ಇಂತು ದಾರಿ ಸಿಕ್ಕದೇ ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತಾ ನಿರಾಶೆಯಲ್ಲಿ ಹಿಂದಿರುಗುವ ಹುನ್ನಾರದಲ್ಲಿದ್ದೆವು. ಯಾವ ನರಪಿಳ್ಳೆಯ ಸುಳಿವೂ ಸಿಗದೇ ಜಲಪಾತದ `ಜಿ.ಪಿ.ಎಸ್' ಕಳೆದುಕೊಂಡಿದ್ದೆವು!

ಕದಡಿದ ಕೂಗು


  ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಂದ ಬುತ್ತಿಗಂಟು ಬಿಚ್ಚಿ ಉಂಡು ಹೊರಡೋಣವೆಂದುಕೊಂಡಿರುವಾಗಲೇ ಆರ್ತನಾದವೊಂದು ಕೇಳಿ ಎಲ್ಲರೂ ದಂಗಾದೆವು. ನಾನು ನನ್ನ ಜೊತೆಗಾರರಲ್ಲಿ ಇಬ್ಬರು ಮುಂದೆ ಮುಂದೆ ಹಳ್ಳಿಯ ದಾರಿಯಲ್ಲಿ ಮನುಷ್ಯ ಆವಾಸಕ್ಕಾಗಿ ಹುಡುಕುತ್ತಾ ಹೊರಟಿದ್ದೆವು. ಇಬ್ಬರು ಮಧ್ಯ. ಇನ್ನಿಬ್ಬರು ತೀರಾ ಹಿಂದೆ ಬಿದ್ದು ನಮ್ಮನ್ನು ಅನುಸರಿಸಿದ್ದರು.

  ದೂರದಲ್ಲಿದ್ದ ಇಬ್ಬರಲ್ಲಿ ಒಬ್ಬನಿಗೆ ಏನೋ ಆಗಿರಬೇಕು. ದೂರದಲ್ಲಿ ಆತನಿದ್ದಿದ್ದರಿಂದ ಆ ಕೂಡಲೇ ಸ್ಪಂದಿಸಲಾಗಲಿಲ್ಲ. ಏನೋ ಒಂದು ಈ ಕಗ್ಗಾಡಿನ ಮೂಲೆಯಲ್ಲಿ ಜರುಗಿತ್ತು! ಇಲ್ಲಿನ ಮೂಲ ಸೌಕರ್ಯ ಅಷ್ಟಕಷ್ಟೆ. ಓಮಿನಿ ದೂರದಲ್ಲಿ ನಿಲ್ಲಿಸಿ ಬಂದಿದ್ದೆವು. ದಾರಿತಪ್ಪಿದ ಮಕ್ಕಳಾಗಿದ್ದೆವು. ಸದಾ ಉಲ್ಲಾಸದ ಬುಗ್ಗೆಗೆ ಕಾರಣವಾಗಿದ್ದ ಕಾಡು, ಈ ಪರಿಸರ ನಮ್ಮ ಬದ್ಧ ವೈರಿಯಾಗಿ ಪ್ರತಿಸ್ಪರ್ಧಿಯಾಗಿ ಜೀವೋತ್ಕರ್ಷಕ್ಕೆ ಅಡ್ಡಿಯಾಗಿ ನಿಂತಂತೆ ಭಾಸವಾಯಿತು. ಈ ಕಠಿಣ ಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂತಹ ಸುಮಧುರ ಕ್ಷಣವನ್ನು ನುಂಗಿ ಹಾಕುವಂತೆ ಏನೋ ಒಂದು ಘಟಿಸಿತ್ತೆಂದು ನನಗೆ ಭಾಸವಾಯಿತು. ಹಾಗಾಗಿ ಆತನಿದ್ದಲ್ಲಿಗೆ ದೌಡಾಯಿಸಿದೆ.

ಕನ್ನಡಿ ಹಾವು ಕಚ್ಚಿ



ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಗಣೇಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಜಾಗೃತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಜೊತೆಗೆ ಈ ದುರ್ಗಮ ಹಾದಿಯಲಿ ಹಾವಿನ ಕಾಟಕ್ಕೆ ಗೆಳೆಯನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಬಂತೆಂದು ಹಿಡಿ ಶಾಪ ಹಾಕತೊಡಗಿದರು. ಕನ್ನಡಿ ಹಾವು ಕಡಿದರೆ ಸಾಯೋದಿಲ್ಲವೆಂದು ನಿರ್ದಿಷ್ಟವಾಗಿ ಹೇಳಿದೆ. ಎಲ್ಲರೂ ನನ್ನ ಮೇಲೆ ದಾಳಿ ಮಾಡಿದರು!



ಗಣೇಶನ ತುರ್ತು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.



ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು. ನಮ್ಮ ಸ್ನೇಹಿತರೆಲ್ಲಾ ಗರ ಬಡಿದವರಂತೆ ನಿಂತರು.

ಚೆಲುವಾತಿ ಚೆಲುವ ಕನ್ನಿಕೆ 



ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾದಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು.  ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ. ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಗಣೇಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ! 


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಗಣೇಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು. ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿಯ ನೋಡುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು. 

ಹಿಂಡ್ಲು ಮನೆಯತ್ತ



ಹಿಂಡ್ಲು ಮನೆಯೊಂದು ವಿಶಿಷ್ಟ ಜಲಧಾರೆ. ಕೊಡಚಾದ್ರಿ ಕುಡಿದ ನೀರೆಲ್ಲಾ ಇಲ್ಲಿ ಇಳಿದು ಹರಿಯುತ್ತದೆ. ಕೊಡಚಾದ್ರಿ ಚಾರಣದ ಚಿಮ್ಮು ಹಲಗೆಯೂ ಹೌದು! ಜಲಪಾತದ ಸನಿಹದ ಏರುದಾರಿಯಲಿ ಏರಿದರೆ `ಒಂಟಿ ಮರ' ವೆಂಬ ವಿಶಿಷ್ಟ ಜಾಗಕ್ಕೆ ಬಂದು ತಲುಪುತ್ತೇವೆ. 


  ಕೆಳಗಿನಿಂದ ಮೇಲೇರುವುದು ಬಲು ಕಠಿಣವೆಂದು ಒಮ್ಮೆ ಮೇಲಿನಿಂದ ಕೆಳಗಿಳಿದು ಬಂದಿದ್ದೆ! ಜಲಪಾತದ ಬುಡದ ಮನೆಯಲ್ಲಿ ಮಲೆನಾಡಿನ ಮನೆಯ ವಿಶಿಷ್ಟ ತಂಬಳಿಯೂಟ ಸವಿದಿದ್ದೆ! ಇಂತಹ ಮಲೆನಾಡ ಮನೆಗಳು ಪೇಟೆ ಪಟ್ಟಣಗಳ ಮನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತವೆ! ತನ್ನ ಕಾಲಮೇಲೆ ನಿಂತ ಮನೆ. ಹತ್ತಲಿನಲಿ ತರಹೇವಾರಿ ತರಕಾರಿ, ಹೂ ಗಿಡ, ಸಂಪಿಗೆ, ಜಾಜಿ ಬಳ್ಳಿಗಳು. ನೀರ ಹನಿಗಳನ್ನು ನಿರಾಯಸವಾಗಿ ತಮ್ಮ ತಮ್ಮ ಮನೆಗಳತ್ತ ತಿರುಗಿಸಿಕೊಂಡು ನೆಮ್ಮದಿಯ ಬದುಕ ಕಂಡವರು ಆಗಷ್ಟೇ ವಿದ್ಯುತ್ ಎಂಬ ಅನಿಷ್ಟ ಅವರ ಅಂಗಳಕ್ಕೂ ಕಾಲಿಟ್ಟಿತ್ತು ಬಂದು ಹೋಗೋರಿಗೆ ಅವರ ತೋಟದ ಲಿಂಬೆ ಪಾನಕ ಅತಿ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಿದ್ದರು. ಈಗಂತೂ ಆರ್ಥಿಕತೆ ಮಗ್ಗಲು ಬದಲಿಸಿದ್ದರಿಂದ ಅಲ್ಲೊಂದು ಪುಟಾಣಿ ಅಂಗಡಿ ತಲೆ ಎತ್ತಿತ್ತು! ತರಹೇವಾರಿ ಬಾಟಲಿ ಪೇಯ ಮಾರಾಟಕ್ಕಿಟ್ಟಿದ್ದರು. ಪಟ್ಟಣದ ಎಲ್ಲಾ ವಸ್ತುಗಳು ಈಗಲ್ಲಿ ಲಭ್ಯ. ಪಯಣಿಗರು ಬಿಟ್ಟ ಕೊಟ್ಟೆ, ತಾಟು, ಪ್ಲೇಟುಗಳು ಈಗವರ ಅಂಗಳದಲಿ ತಬ್ಬಲಿಯಾಗಿ ಬಿದ್ದಿರುತ್ತವೆ.

ನೀರೂಡುವ ಬೃಹತ್‌ ಸ್ತನಗಳು



  ಶೋಲಾ ಕಾಡುಗಳ ವಿಶಿಷ್ಟತೆ ಇರುವುದೇ ಇಲ್ಲಿ. ಎರಡು ಎರಿನ ನಡುವಿನ ಕಣಿವೆಯಲ್ಲಿ ಬೆಳವ ಮರಗಳು ಬಯಲಿನ ಜನರಿಗೆ ನೀರೂಡುವ ಬೃಹತ್ ಸ್ತನಗಳು! ಪ್ರತೀ ಹುಲ್ಲು ಕುಡಿದ ನೀರನ್ನು ನಿಧ ನಿಧಾನವಾಗಿ ಕಣಿವೆಗೆ ತಳ್ಳುವ ಶೋಲಾ ಕಾಡುಗಳು ಬಯಲ ನೀರಿನ ತಾಯಿ ಬೇರು. ಹಾಗಾಗಿ ಶೋಲಾ ಅರಣ್ಯಗಳು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿತವಾಗಿದೆ. ಆದರೆ ಮಾನವನ ಅಪರಿಮಿತವಾದ ಆಸೆಗೆ ಬಲಿಯಾಗುತ್ತಲಿದೆ.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ ಹಲವು ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು! ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಕೊನೆಯ ಹನಿ 

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಸದಾ ಕಾಡುತ್ತಾ ಉಳಿಯಿತು. ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ ಗೆಳೆಯರು ಮತ್ತೆಂದೂ ಚಾರಣ ದಾರಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

Wednesday, March 11, 2026

ಸೋಲೆಂಬ ಅಲ್ಪ ವಿರಾಮದ ನಡುವೆ. (Ettina buja treking)

 

ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್ಯ ಭೈರವನಿಗೂ ನಮಿಸೋಣ ಎಂದುಕೊಂಡು ಹೊರಟಿದ್ದೆ. ಒಂದಿಷ್ಟು ಹೊಸ ಲೇಖಕರು ಅಲ್ಲಿದ್ದರು. ಹೊಸಬರ ಪರಿಚಯವಾಯಿತು. `ಹೋಮ್'  ಸಾಕ್ಷಚಿತ್ರಕ್ಕೆ ದನಿಯಾದ ಈಶ್ವರ್‌ ಪ್ರಸಾದ ಬಂದಿದ್ದರು! ಏನೇನೋ ಪುಂಗುತಲಿದ್ದರು! ಜೊತೆಗೆ ತಮ್ಮ ಅನುಭವ ಸಾರವನ್ನು ಅರಹುತ್ತಿದ್ದರು!



ಭೈರವನಿಗೆ ನಮಿಸೋಣವೆಂದು ಹೊರಡೋಣವೆಂದರೆ ಪುರುಸೊತ್ತೇ ಆಗದಷ್ಟು ಕಾವ್ಯ ಮಳೆ! ಭೈರವನಿಗೂ ನಮ್ಮ ಮೇಲೆ ಮುನಿಸಿರಬೇಕು! ಬಿಡುವೇ ಆಗದೇ ಹಿಂದಿರುಗಿದೆ. ದೇವರ ಮನೆಯ ಸ್ನೇಹಿತ ಯಾವಾಗ ಬರುತ್ತಿ ಎಂದು ನೆನಪಿಸುತ್ತಲೇ ಇದ್ದ ಹೋಗಲಾಗಲಿಲ್ಲ.

ನಾಣ್ಯ ಭೈರವ(Nanya Bairava)

ನಾಣ್ಯ ಭೈರವ ದೇವಾಲಯ.


ಎತ್ತಿನ ಭುಜದ (Ettina Bhuja trek)  ಪದತಲದಲ್ಲಿ  ವಿರಮಿಸಿದ ನಾಣ್ಯ ಭೈರವನನ್ನು 13ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದಾದ್ಯಂತ ಕಾಲ ಭೈರವನ ಹೊರತು ಪಡಿಸಿದರೆ ಭೈರವನ ದೇವಾಲಯ ಬಲು ಅಪರೂಪ. ಇಂತಹ ಭೈರವನ ದೇವಾಲಯಗಳಲ್ಲಿ ನಾಣ್ಯ ಭೈರವನೇ ವಿಶಿಷ್ಟವಾದ ಹೆಸರು. ಇವನಿಂದಲೇ ಈ ಊರಿಗೆ ಭೈರಾಪುರವೆಂಬ ಹೆಸರು. ಭೈರವ ಪುರದಿಂದ ಭೈರಾಪುರವಾಗಿರಬೇಕು. ನಾಣ್ಯ ಭೈರವೇಶ್ವರ ಹೊಯ್ಸಳರ ಕಾಲದಲ್ಲಿ ಅತ್ಯಂತ ಪ್ರಮುಖ ಪಟ್ಟಣವಾಗಿತ್ತು. ಇಲ್ಲಿಯೇ ಟಂಕಸಾಲೆಯಿತ್ತು ಎಂಬುದಕ್ಕೆ ನಾಣ್ಯ ಭೈರವ ದೇವಾಲಯವೇ ಸಾಕ್ಷಿ. ಕೋಟೆ ಕೊತ್ತಲಗಳಿದ್ದ ಭೈರಾಪುರಕ್ಕೀಗ ಸನ್ಯಾಸ. ಅಜ್ಞಾತವಾಗಿ ಎರಡು ಜಿಲ್ಲೆಗಳ ನಡುವಿನ ಗರುಡಗಂಬದಂತಿದೆ. ಇತಿಹಾಸದ ಹೆಜ್ಜೆ ಗುರುತುಗಳನ್ನು ಬಿಡದೇ ಅಳಿಸಿಕೊಂಡು ಸ್ಮಶಾನ ವೈರಾಗಿಯಂತೆ ನಿಂತ ದೇವಾಲಯ! ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಬದುಕ ಬಂಡಿ ಎಳವ ಮಂದಿ! 



ಹೆಜ್ಜೆ ೧



               ಆಸಾಡಿಯ ಒಡ್ರು ಮಳೆ ಮುಗಿದು ಸ್ವಾತಿಯ ಸೋನೆ ಶುರುವಾಗಿದ್ದೇ ಗೆಳೆಯ ಮತ್ತು ನಾಣ್ಯ ಭೈರವನ ನೆನಪಾಯಿತು! ನಾಣ್ಯ ಭೈರವನೊಂದಿಗೆ ತಳುಕಿ ಹಾಕಿ ಆತನ ರಕ್ಷಣೆಗೆ ನಿಂತಂತೆ ಕಾಣುವ ಎತ್ತಿನ ಭುಜವೆಂಬ ಅಭೂತಪೂರ್ವ ವಿಶಿಷ್ಟ ಚಾರಣ ಮಾಡುವ ನೆನಪಾಗಿ ಹೊರಟು ನಿಂತಿದ್ದೆ. ಮಳೆ  ನಿಂತು ದಿನಕ್ಕೊಂದೊ ಎರಡೋ ಸೋನೆ ಸುರಿಸಿ ಹೋಗುತ್ತಿದ್ದ ಸಮಯ. ನಾವು ಸಂಜೆಯ ಚಹ ಹೀರಿ ಹೊರಟು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಇಳಿದೆವು.



ತೇಜಸ್ವಿ ಮನೆ ಇಲ್ಲಿಂದ ಮಾರು ದೂರ. ಅವರ ತೋಟ ಗದ್ದೆ ತಿರುಗಿದ ನೆನಪುಗಳು. ರಾಜೇಶ್ವರಿಯವರು ಮಾಡಿಕೊಟ್ಟ ಚಹ. ಅವರ ಮನೆಯಂಗಳದ ಹಕ್ಕಿ ಚಿಲಿಪಿಲಿ, ಸ್ಕೂಟರ್, ನಿಂತ ಗಡಿಯಾರದ ಮೆಲುಕು ಹಾಕುತ್ತಾ ಹೊರಟೆವು. ಅಲ್ಲಿಗೆ ಭೇಟಿ ಇತ್ತ ನೆನಪು ದಾರಿಯುದ್ದಕ್ಕೂ ಹಸಿರು.



        ಎರಡು ಜಿಲ್ಲೆಗಳ ಗಡಿಯ ಗರುಡ ಗಂಬದಂತಿರುವ ಎತ್ತಿನ ಭುಜವನ್ನು ಶಿಶಿಲಾ ಧರ್ಮಸ್ಥಳ ಕಡೆಯಿಂದಲೂ ಏರಬಹುದು. ಶಿಶಿಲ ಕಡೆಯ ಕಠಿಣ ದಾರಿ ತೊರೆದು ಸುಲಭದ ಮೂಡಿಗೆರೆಯ ಹಾದಿ ಹಿಡಿದೆವು. ಎತ್ತಿನ ಭುಜ ದಂತಿರುವ ವಿಶಿಷ್ಟ ಚಾರಣ ದಾರಿ. ಜೇನು ಕಲ್ಲು ಗುಡ್ಡದ ನೆತ್ತಿಯಿಂದ ಒಮ್ಮೆ ನೋಡಿದ್ದೆ. ತನ್ನ ಅಪೂರ್ವ ನೋಟವನ್ನು ತೋರಿ ಮಿಡುಕಿತ್ತು. ತನ್ನ ವಿಶಿಷ್ಟ ಮೋಹಕತೆಯಿಂದ ಸೆಳೆದಿತ್ತು.

ಎತ್ತಿ ಭುಜ - ಚಿತ್ರ ಕೃಪೆ ಅಂತಜಾ೯ಲ.


ತೇಜಸ್ವಿ ಊರಾದ ಇಲ್ಲಿ ರಾತ್ರಿಯೂಟಕ್ಕೆ  ಯಾವಗಲೂ ತತ್ವಾರ. ಯಾವುದೋ ಗಲ್ಲಿಯಲ್ಲಿ ಸಿಕ್ಕ ಅಕ್ಕಿ ರೊಟ್ಟಿಯ ಪುಟಾಣಿ ಹೋಟೆಲಿನಲ್ಲಿ ಉಳಿದ ನಾಲ್ಕೇ ನಾಲ್ಕು ರೊಟ್ಟಿ ಹಂಚಿಕೊಂಡು ಹೊಟ್ಟೆಗಿಳಿಸಿ ಬಂದು ದಿಂಬಿಗೊರಗಿದೆವು.

ಹೊಸತೊಂದು ಚಾರಣದ ಅನುಭವವಾಗುತ್ತದೆಂದು ಅಂದು ಅಂದಾಜಿರಲಿಲ್ಲ. ನಾವಂತೂ ಸಣ್ಣ ಸಣ್ಣ ಚಾರಣಗಳನ್ನು ಪೂರ್ಣಗೊಳಿಸದೇ ಬಂದುದೇ ಇಲ್ಲ. ಹರಕಿ ದುನ್‌, ಕಾಶ್ಮೀರದ ಸರೋವರ ಮುಂತಾದ ಚಾರಣಗಳನ್ನು ಆಯಾಸವಿಲ್ಲದೇ ಪೂರ್ಣಗೊಳಿಸಿದ ನಮ್ಮ ಗೆಲುವಿನ ಎನ್‌ಸೈಕ್ಲೋಪಿಡಿಯಾದ ಒಂದು ವಿಶಿಷ್ಟ ಅಧ್ಯಾಯ!

****

            ಸದಾ ಗೆಲ್ಲುತ್ತಿರುವವನಿಗೆ ಆಗಾಗ ಸೋಲುಗಳು ಸಿಗಬೇಕು. ಸದಾ ಗೆಲ್ಲುತ್ತಿದ್ದರೆ ಗೆಲುವಿನ ರುಚಿ ತಿಳಿಯದು. ನಮ್ಮ ಅಹಂಕಾರದ ಬಲೂನಿಗೆ ಅರಿವಿನ ಸೂಜಿಯನು ಆಗಾಗ ಚುಚ್ಚುತ್ತಿರಬೇಕು. ಇಲ್ಲವಾದರೆ ನಾವೇ ದೇವರಾಗಿ ಬಿಡುವ ಅಪಾಯವಿದೆ ಎನ್ನುತ್ತಾರೆ ಕವಿ ಗೋಪಾಲ ಕೃಷ್ಣ ಅಡಿಗರು. ಕಷ್ಟ ಕಾಲದಲ್ಲೇ ನಮ್ಮ ಸಂಪೂರ್ಣ ಸಾಮರ್ಥ್ಯ ಹೊರಬರುವುದು. ನಮ್ಮ ಮೇಲಿನ ಬೃಹತ್‌ ನಂಬಿಕೆಯ ಬೆಟ್ಟವನ್ನು ಬಲಪಡಿಸುವುದು ಇಂತಹ ಪುಟಾಣಿ ಚಾರಣಗಳು. ಅಲ್ವೇ?! ಅಂತಹದೊಂದು ಅನುಭವ ನಿಮ್ಮೊಂದಿಗೆ.

ಮುಂಜಾವಿನ ಮಂಜಿಗೆ ಮುತ್ತಿಡುತ್ತಾ…




ಕರೋನ ತುತ್ತ ತುದಿಯಲ್ಲಿದ್ದ ಕಾಲ ನಾವೊಂದು ಐದು ಜನ ಗೆಳೆಯರಿಗೆ ಹೇಗಾದರೂ ಮಾಡಿ ಎತ್ತಿನ ಭುಜವನ್ನು ಅಲುಗಾಡಿಸಿ ನೆತ್ತಿಯಲಿ ಭಾವುಟ ಹಾರಿಸಲು ಹೊರಟೆವು. ಗಡದ್ದಾಗಿ ತಯಾರಿಯೂ ನಡೆಸಿದ್ದೆವು. ಎರಡೆರಡು ರೈನ್‌ ಕೋಟ್‌ ಖರೀದಿಸಿದ್ದೆವು. ಬಲಾಡ್ಯ ಕೊಡೆಯೊಂದು ಜೊತೆಗಿತ್ತು.


ಹಸಿರ ದಾರಿಯಲಿ ನೆನಪುಗಳ ಮೆರವಣಿಗೆ

ಚುಮು ಚುಮು ಮುಂಜಾವಿನಲ್ಲಿ ಇಡ್ಲಿ ಮತ್ತು ಕಾಫಿಗೆ ಜಿಟಿ ಜಿಟಿ ಜೀರಿಗೆ ಮಳೆಯ ಅಲಂಕಾರ. ಈ ನಡುವೆ ನಮ್ಮ ರಥ ಎತ್ತಿನಭುಜದ ನೆತ್ತಿ ಸವರಲು ಹೊರಟಿತ್ತು. ಜೊತೆಗೆ ನಾಣ್ಯ ಬೈರವನ ಜೊತೆ ಸೇರುವ ಮಾತಾಗಿತ್ತು.





ನಿನ್ನೆಯ ಮಳೆಗೆ ತೊಳೆದಿಟ್ಟಂತಹ ರಸ್ತೆಯಲ್ಲಿ ನಡುದಾರಿಗೆ ಬರುತ್ತಲೇ ಹನಿ ಮಳೆಯ ಸಿಂಚನ ಶುರುವಿಟ್ಟುಕೊಂಡಿತು. ದಾರಿ ನಡುವೆ ಮಂಡಾಳೆ ಹೊತ್ತ ಒಂದಿಷ್ಟು ಹಳ್ಳಿಗರು ತುಟಿ ಕೆಂಪಾಗಿಸಿಕೊಂಡು, ಮಂದಸ್ಮಿತವಾಗಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾ  ಎಲ್ಲಿಗೋ ಮಳೆಯಲ್ಲಿ ನಡೆದು ಹೋಗುತ್ತಿದ್ದರು. ಅವರ ಗೊರಬು ನನ್ನನ್ನು ಬಾಲ್ಯಕ್ಕೆ ಮರಳಿಸಿತು.



       ಕಂಬಳಿಯಿಂದ ತಯಾರಿಸಿದ ಗೊರುಬುಗಳು ಈಗ ಮಾಯವಾಗಿ ಪ್ಲಾಸ್ಟಿಕ್‌ನದ್ದಾಗಿದೆ. ಮೊದಲದಕ್ಕೆ ಅಪ್ಪನ ಬೆವರಿನ ನಂಟಿತ್ತು. ತನ್ನ ಮೊದಲಿನ ಆಪ್ತತೆಯ ಚುಬುಕಿತ್ತು. ಅಪಾರ ನೆನಪಿನ ಚಿತ್ತಾರವಿತ್ತು. ಅವರ ಬಳಿ ಕಷ್ಟ ಸುಖ ವಿಚಾರಿಸಿ, ಕವಳ ಕೇಳಿ ಪಡೆದು ಜಗಿದು, ಎತ್ತಿನ ಭುಜದ ದಾರಿ ಕೇಳಿ ಅವರನ್ನು ಬೀಳ್ಕೊಟ್ಟೆವು!

-


             ಇಕ್ಕೆಲಗಳಲ್ಲಿ ಕರ್ಣ ಕುಂಡಲಗಳು ಈಗಷ್ಟೇ ಸೂರ್ಯ ರಶ್ಮಿಗಾಗಿ ಕಾದು ನಮ್ಮ ನೋಡಿ ನಗುತಲಿದ್ದವು. ಪುಟಾಣಿ ಮಕ್ಕಳು ತಮ್ಮ ಕಿವಿಗೆ ಜೋತು ಬಿದ್ದ ಅಶ್ವಥದೆಲೆಯ ಆಭರಣದಂತೆ ಗಿಡಗಳು ಪುಟಾಣಿ ಹೂ ತೊಟ್ಟು ನಿಂತಿದ್ದವು. ನಾವು ಪುಟಾಣಿಗಳಿದ್ದಾಗ ಸ್ಲೇಟು ಉಜ್ಜಲು ಇದರ ಇನ್ನೊಂದು ಜಾತಿಯನ್ನು ಬಳಸುತ್ತಿದ್ದದು ನೆನಪು. ದಾರಿಯುದ್ದಕ್ಕೂ ಬಾಲ್ಯದ ನೆನಪುಗಳ ಮೆರವಣಿಗೆ. ಬಹಳ ದಪ್ಪವಾಗಿದ್ದ ಆ ತಳಿ ಈಗಿಲ್ಲ! ಅಳಿದವಿರಬೇಕು. ಯಾರ ಕಾಕ ದೃಷ್ಟಿ ಬಿತ್ತೋ.

                  ಮೂಡಿಗೆರೆ ಬಿಟ್ಟ ಕ್ಷಣದಿಂದ ಸೋನೆಯಂತೆ ಸುರಿದು ಚಾರಣಕ್ಕೆ ಸಂಭ್ರಮದ ಹಚ್ಚೆ ಹಚ್ಚುತಲಿದ್ದ ಮಳೆ. ಮಾಲಕೌಂಸ್‌ ರಾಗ ಹಚ್ಚಿ ಹಾಡ ತೊಡಗಿತು. ಎತ್ತಿನ ಭುಜ ಬರುತ್ತಲೇ ಉಸಿರ ಕಟ್ಟಿದ ಮಕ್ಕಳಂತೆ ಮಳೆಯ ರಚ್ಚೆ. ಯಾರ ಮೇಲಿನ ಸಿಟ್ಟೋ ಏನೋ. ಬೆಟ್ಟದ ಭೈರವನ ಪೂಜಾರಿಯ ಜೊತೆಯಿರಬೇಕು. ದಿನವೂ ಕಲ್ಲಂತಹ ಕಲ್ಲಿಗೆ ನೈವೇಧ್ಯ ಕೊಡುವಾತ ಯಾಕೆ ತನಗಿಲ್ಲವೆಂಬ ಸಿಟ್ಟಿರಬೇಕು. ಅಥವಾ ಹೆಂಡತಿಯೊಂದಿಗೆ ಜಗಳ ಕಾದು ನಮಗೆ ಹೀಗೆ ಸತಾಯಿಸಿದನೋ ಹೇಗೆ? ಎಂಬ ಗುಮಾನಿ.

ಮಳೆಯ ಶಿವತಾಂಡವ



        ಬೈರವನ ಗುಡಿಗುಂಟ ಸಾಲು ಸಾಲು ಎಲ್ನೋಡಿ ಕಾರು. ಭೈರವ ಗುಡಿಯ ಅರ್ಚಕರನ್ನು ಮಾತಾಡಿಸಿ ಪ್ರಸಾದ ಪಡೆದು ಬೆಟ್ಟದ ಭೈರವನಿಗೆ ಸುತ್ತು ಬಂದು ಪ್ರಾರ್ಥಿಸಿ ನಮ್ಮ ಚಾರಣ ಸುಖಕರವಾಗಿರಲಿ ಎಂದು ಬೆಟ್ಟವೇರಲು ಸಜ್ಜಾದೆವು. ಭಟ್ಟರ ಮೊಬೈಲ್‌ ಸಂಖ್ಯೆ ನಮ್ಮ ಮೊಬೈಲೊಳಗೆ ಸೇರಿಕೊಂಡಿತು.



ಕಷ್ಟ ಪಟ್ಟು ಹಾಗೂ ಹೀಗೂ ಬಂದ ಭೈರವೇಶ್ವರ ಗುಡಿಯ ಪೂಜಾರಿ  ಮಳೆ ನಿಲ್ಲಲ್ಲಿ ಎಂಬಂತೆ ಮಹಾ ಮಂಗಳಾರತಿ ಎತ್ತಿದರು. ಮಂಗಳಾರ
ತಿ ಎತ್ತಿದ್ದೆ ಎಲ್ಲಿತ್ತೊ ಕುಂಬ ದ್ರೋಣ ಮಳೆ ಹೊಡೆತ. ಗುಡುಗು ಸಿಡಿಲಿನೊಂದಿಗೆ ಮತ್ತೆ ಮಳೆ ದೇವಾಲಯದ ಗಂಟೆಯೊಂದಿಗೆ ಜುಗುಲ್‌ ಬಂದಿಗೆ ಇಳಿಯಿತು. ಗಂಟೆಯ ಶಬ್ಧವೆಲ್ಲಾ ಮಳೆಯ ನೀರಲಿ ಕರಗಿ ಹಳ್ಳ ಕೊಳ್ಳಗಳಲ್ಲಿ ಹರಿಯತೊಡಗಿತು. ಮನಸ್ಸುಗಳೆಲ್ಲಾ ಥಂಡಿ ಥಂಡಿ!

ನಿರಾಸೆಯ ಮೂಡಿಸಿದ ನೀಲ ಕುರುಂಜಿ

              ಈ ವರ್ಷವೇ ನೀಲ ಕುರುಂಜಿ/ನೀಲ ಕಾವರಿ ಹೂವುಗಳು ಅರಳಬೇಕಾಗಿರುವುದರಿಂದ ಸುತ್ತಲೂ ಕಣ್ಣರಳಿಸಿದೆ. ಮಳೆ ಪ್ರಾಕೃತಿಕ ವಿಕೋಪ ಮುಂತಾದ ಕಾರಣಗಳಿಂದ ಅರಳದೇ ಸುಪ್ತಾವಸ್ತೆಯಲ್ಲಿ ಉಳಿದು ನಮ್ಮನ್ನು ಸತಾಯಿಸಿತು. 2009ರಲ್ಲೊಮ್ಮೆ ಅರಳಿದಾಗ ಬರಬೇಕೆಂಬ ಬಯಕೆ ಇದ್ದರೂ ಬರಲಾಗಲಿಲ್ಲ. ಅಲ್ಲಲ್ಲಿ ತಡಕಾಡಿದರೂ ಕಾಣದ ಕುರುಂಜಿ. ಗಾಳಿಗುಡ್ಡ ಚಾರಣಕ್ಕೆ ಹೋದಾಗ ಒಂದೆರಡು ಕಂಡಿದ್ದೇ ಕೊನೆ ಮತ್ತೆಲ್ಲೂ ಕಂಡಿದಿಲ್ಲ. ಮತ್ತೆ ಕಂಡಿದ್ದು ಬಾಬಾ ಬುಡನ್‌ ಗಿರಿಯಲ್ಲಿ. ಎಲ್ಲಾ ಸರಿ ಇದ್ದರೆ ಇನ್ನು ದರ್ಶನ ೨೦೩೫ಕ್ಕೆ.



                 ಹುಚ್ಚು ಮಳೆಯಲ್ಲಿ ಹೆಜ್ಜೆ ಇಟ್ಟಿದ್ದೆವು. ಮಳೆ ತನ್ನ ರೌದ್ರ ರೂಪವನ್ನು ತೋರ ಹತ್ತಿತ್ತು. ಜೀವ ಮಾನದ ಮಹಾ ಮಳೆಯೊಂದು ನಮ್ಮ ನೆನಪಿನ ಪುಟಗಳಲ್ಲಿ ದಾಖಲಾಯಿತು. ಹೊರಗಿನ ನೋಟವಾಗಲಿ ನಮ್ಮ ತಂಡದವರೇ ನಮಗೆ ಕಾಣಿಸುತ್ತಿರಲಿಲ್ಲ. ಹಾಗಾಗಿ ನಿಧಾನವಾಗಿ ಒಬ್ಬರ ಹಿಂದೆ ಒಬ್ಬರು ರೈಲು ಬೋಗಿಗಳಂತೆ ಸಾಗುತ್ತಿದ್ದೆವು. ನೆತ್ತಿಯಿಂದ ಕನಿಷ್ಠ ದೂರದಲ್ಲಿದ್ದೆವು. ಅಸಾಧ್ಯ ಮಳೆ. ಕೊಡೆ, ರೈನು ಕೋಟುಗಳೊಳಗೆಲ್ಲಾ ನೀರ ಕಾರು ಬಾರು. ಎರಡೂ ಕಡೆ ಮಹಾ ಕಣಿವೆ. ನೇರ ಗೆರೆ ಎಳೆದಂತಹ ದಾರಿ ಇದ್ದರೂ ಮಳೆ ಹೊಡೆತಕ್ಕೆ ಸಿಕ್ಕಿ ೨ ಅಡಿಯ ಮುಂದೇನಿದೆ ಎಂದು ಗೋಚರವಾಗುತ್ತಿರಲಿಲ್ಲ. ನೆತ್ತಿಗೆ ನೂರು ಹೆಜ್ಜೆಯಷ್ಟೇ ಬಾಕಿ. ಎಡ ಬಲದ ನಡುವೆ ಸಣ್ಣ ಗೆರೆಯಂತಹ ದಾರಿಗೆ ಹುಲ್ಲು ಹಾಸು ಹಾಸಿತ್ತು. ಸುಮಾರು ೭೫ ಡಿಗ್ರಿ ಕೋನದಲ್ಲಿ ಲಂಬಿಸಿದ ದಾರಿ ನಮಗೀಗ ಸಾಕ್ಷಾತ್‌ ವೈಕುಂಠದ ಹೆದ್ದಾರಿಯಂತೆ ಭಾಸ.

                      ಕೊಡೆಯೊಂದಿಗೆ ಪ್ಯಾರಾ ಚೂಟ್ ಆಗಿ ಕೆಳಗಿನ ಶಿಶಿಲಕ್ಕೊ ಧರ್ಮಸ್ಥಳದಲ್ಲೋ ಶಿವೈಕ್ಯವಾಗುವುದರಲ್ಲಿ ಜಸ್ಟ್‌ ಮಿಸ್!‌ ಇನ್ನೇನು ಕೈಗೆಟಕುವ ದೂರದಲ್ಲಿದೆ ನೆತ್ತಿ ಆದರೂ ಕಾಣಿಸುತ್ತಿರಲಿಲ್ಲ. ಸುಮಾರು 75 ಡಿಗ್ರಿ ಕೋನದಲ್ಲಿ ವಾಲಿಕೊಂಡ ಮಣ್ಣು ದಾರಿ. ತೋರುತ್ತದ್ದೋ ಇಲ್ಲವೋ ಎಂಬಸ್ಟೇ  ತೆರೆದುಕೊಂಡ ದಾರಿ. ನೆತ್ತಿ ಕಾಣದ ಅನಾಥ ಅನಂತದಲ್ಲಿ ಲೀನವಾದ ದಾರಿ. ಬೇರೆಲೋಕಕ್ಕೆ ಮಾಯವಾದಂತೆ ಭಾಸ. ಹಿಡಿದ ಕೊಡೆ ಗಾಳಿಗೆ ತೂರತೊಡಗಿತು. ಮಸಲ ಧಾರೆ. ಗುಡ್ಡ ಕುಸಿಯುವಷ್ಟು ಮಳೆ. ಜೀವ ಇದ್ದರೆ ಬೆಲ್ಲ ಬೇಡಿ ಬದುಕಿಯೇನು. ಈ ಗಾಳಿಯ ಸಹಿಸಲು ಸಾಧ್ಯವಿಲ್ಲ ಎಂಬಷ್ಟು ಗಾಳಿ. ಗಾಳಿಯ ಶಿವ ತಾಂಡವ! ಇಳಿಯತೊಡಗಿದೆವು. ಮಳೆಯೂ ನಮ್ಮೊಂದಿಗೆ ಇಳಿಯದೇ ಏರತೊಡಗಿತು. ಪ್ರಳಯ ರುದ್ರದಂತಹ ಮಳೆ.

ಈ ಜನ್ಮದಲ್ಲಂತು ಇಂತಹ ಬೀಕರ ಮಳೆ ಕಂಡಿದ್ದು ಇಲ್ಲಾ!! ಕೆಳಗಿಳಿಯುತ್ತಾ ಜೀವಾದಿಗಳು ತಲ್ಲಣಿಸುತ್ತಿದ್ದವು. ತರಗಲೆಗಳ ತೂರಾಟ, ಹನಿಗಳ ಆರ್ಭಟ. ಕೆಳಗಿಳುತ್ತಲೇ ಮಳೆ ಕಡಿಮೆ ಆಗುವುದನ್ನೇ ತಲೆಗೊಂದು ಸೂರು ಹುಡುಕಿ ಹೊರಟೆವು. ಅಷ್ಟು ಮಳೆಯಲ್ಲೂ ಒಂದೆರಡು ಚಿತ್ರ ತೆಗೆದುದರಿಂದ ಎಲ್ಲರಿಗಿಂತ ಹಿಂದುಳಿದಿದ್ದ ನಾನು ಸ್ನೇಹಿತರಿಗಾಗಿ ಹುಡುಕಿದೆ. ಯಾರೂ ಕಾಣಲಿಲ್ಲ. ಭಟ್ಟರ ಹಿಂದೇ ಹೋದರೋ ಹೇಗೆ? ಭೈರವನಿಗೆ ಪೂಜೆ ಮುಗಿಸಿ ಭಟ್ಟರು ಆಗಲೇ ಹೋಗಿಯಾಗಿತ್ತು. ಭೈರವನ ಗುಡಿಯಲ್ಲಿ ಅಡಗುವ ಆಸೆ ಬಿಟ್ಟೇವು. ಸನಿಹದಲ್ಲೇ ಚಿಕ್ಕ ಗುಡಿಸಿಲಿನಂತಹ ಮಾಡಿತ್ತು. ಕಳ್ಳರಂತೆ ಅಲ್ಲಿ ಅಡಗಿಕೊಳ್ಳಲು ಹೊರಟೆ. ಗೆಳೆಯರೆಲ್ಲ ಅಲ್ಲೇ ಅಡಗಿ ಕುಳಿತ್ತಿದ್ದರು! ಒಬ್ಬರಿಗೊಬ್ಬರು ಒತ್ತಿ ನಿಂತು ಚಳಿ, ಮಳೆಯನ್ನು ಅನುಭವಿಸುತ್ತಾ ನಿಂತೆವು.

ರಕ್ತ ಪರೀಕ್ಷಕರು

                  ಜಿರಾಪತಿ ಮಳೆಯ ನಡುವೆ ಕಾಲಿಗೇನು ಏರಬಾರದೆಂದು ಪ್ಲಾಸ್ಟಿಕ್‌ ಕವರ್‌ ಹಾಕಿಕೊಂಡು ಬಂದವರಿಗೆ ತಕ್ಕ ಪಾಠ ಕಲಿಸಿದ ರಕ್ತ ಪರೀಕ್ಷಕ ಜಿಗಣೆಗಳು ಎಲ್ಲೆಲ್ಲಿಗೂ ನುಸುಳಿ ತನ್ನ ಪಾರುಪತ್ಯ ತೋರಿತ್ತು! ಕೆಲವರು ತಮ್ಮ ಮರ್ಮಾಂಗವನ್ನೆಲ್ಲಾ ಪರೀಕ್ಷೆ ಮಾಡಿಕೊಳ್ಳುತಲಿದ್ದರು! ಲೀಟರ್‌ ಗಟ್ಟಲೇ ರಕ್ತದಾನ ಮಾಡಿದ ನಂತರ ನಾವು ನಶ್ಯಾದ ಭರ್ಜರಿ ಸನ್ಮಾನ ಮಾಡಿದೆವು. ಕೊಂಚ ಖುಷಿ ಪಟ್ಟು, ಪಟ್ಟು ಸಡಿಲಿಸಿ ಉದುರಿದವು. ನಶ್ಯಾದ ಅಪರಿಮಿತ ಶಕ್ತಿಗೆ ಮನಸೋತೆ. ಯಕಶ್ಚಿತ್ ಜೀವಿಯೊಂದು ಜೀವ ವಿಸ್ಮಯವಾಗಿ ಕಂಡಿತು. ಅಬ್ಬಾ! ಇದರ ಪ್ರತಾಪವೇ ಎನಿಸಿತು. ತನ್ನ ಮೂತಿಯಿಂದಲೇ ನಡೆಯುತ್ತಾ ಬಿಸಿ ರಕ್ತ ಜೀವಿಗಳ ರಕ್ತ ಹೀರುವ ರಕ್ತ ಪೀಪಾಸುಗಳು. ಮರ, ಗಿಡ-ಗಂಟಿ ಮತ್ತು ಮನುಷ್ಯನಿಗೂ ವ್ಯತ್ಯಾಸವನ್ನು ಕ್ಷಣದಲ್ಲೇ ಗುರುತಿಸಬಲ್ಲದು! ತನ್ನ ಅಂಗಾಂಗಗಳ ಮೂಲಕ ಬಿಸಿ ರಕ್ತ ಪ್ರಾಣಿಗಳ ಬಿಸಿ, ಮೈಯ ಎಣ್ಣೆ, ನೆರಳು ಮತ್ತು ರಾಸಾಯನಿಕಗಳ ಇರುವಿಕೆಯನ್ನು ಪರಿಶೀಲಿಸಿ ಕಚ್ಚುತ್ತವೆ! ಜೊತೆಗೆ ಕಚ್ಚಿದ ಜಾಗದಲ್ಲಿ ಉಂಟಾಗುವ ನೆವೆ ತಿಂಗಳುಗಳ ಕಾಲ ಇರುತ್ತದೆ.  ನಮ್ಮೆಲ್ಲಾ ಗೆಳೆಯರು ತಮ್ಮ ತಮ್ಮ ಅಂಗಾಗಳ ಸಂಶೋಧನೆಗಿಳಿದರು! ಪುಣ್ಯಕ್ಕೆ ನನಗೊಂದು ಕಚ್ಚಲೇ ಇಲ್ಲ!!



            ಈ ವಿಶಿಷ್ಟ ಶಿಖರದ ನೆತ್ತಿಗೇರುವ ಬಯಕೆಯೊಂದು ಮಳೆಯೊಂದಿಗೆ ಬೆರೆತು, ನನ್ನ ನೂರಾರು ಸೋಲುಗಳ ಎನ್ ಸೈಕ್ಲೋಪಿಡಿಯಾದೊಳಗೆ ಸೇರಿ ಕರಗಿ ಹೋಯಿತು. ಮತ್ತೊಮ್ಮೆ ನೆತ್ತಿಯಲಿ ವಿಜಯದ ನಗೆಯ ನೆಡಬೇಕು. ಎತ್ತಿನ ಭುಜದ ಕನಸಿಗೆ ಬಸಿರಾಗುವ ಬಯಕೆಯೊಂದನ್ನು ಮನಸ್ಸು ಸದಾ ಹೆರುತ್ತಲೇ ಇರುತ್ತದೆ. ಕಾಲು ನೆಟ್ಟಗಿದ್ದರೆ ಒಮ್ಮೆ ಹತ್ತಿ ಬರಬೇಕು.


Friday, January 30, 2026

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕ ಸಂತ

 


ನನ್ನ ಸ್ಮೃತಿಪಟಲದಿಂದ ಅಳಿಸಿಹೋಯಿತೆಂಬತೆ ಆಗಿದ್ದ ಹಿಮಾಚಲದ ಕೀರ್‌ಗಂಗಾ ಚಾರಣ (keerganga  trek) ಮತ್ತೆ ಮುನ್ನಲೆಗೆ ಬಂದಿದ್ದೇ ಆಕಸ್ಮಿಕ! ಬೆಟ್ಟಗಳಲ್ಲಿ ಕಳೆದೋಗುವುದು ಅಂತಾರೆ ಆದರೆ ಇಲ್ಲಿ ಬರೋಬ್ಬರಿ 1768 ಜನ ಮತ್ತೆಂದೂ ಸಿಗದಂತೆ ಕಣ್ಮರೆಯಾಗಿದ್ದಾರೆ! ಭಾರತದ ಉದ್ದಗಲಕ್ಕೂ ಇಂತಹ ಇನ್ನೊಂದು ಚಾರಣ ಪಥ ಕಾಣಸಿಗದು! ನೆತ್ತಿಯಿಂದ ೨೪ ಗಂಟೆಯೂ ಹರಿದು ಬರುವ ಹಾಲಿನಂತಹ ಬಿಸಿ ನೀರು ಮತ್ತೊಂದು ವಿಶೇಷ! ಜಗತ್ತು ಹುಚ್ಚರ ಸಂತೆ. ಇಲ್ಲಿ ಎಲ್ಲರದೂ ಒಂದು ವಿಭಿನ್ನ ಹುಡುಕಾಟ. ನನ್ನಂಥವರಿಗೆ ತಿರುಗಾಟವೇ ಒಂದು ಬಿಡುಗಡೆ. 



  ಈ ಅಚ್ಚರಿಯ ಜಾಡು ಹಿಡಿದು ಹೊರಟವನಿಗೆ ಹೊಸ ಹೊಸ ವಿಷಯಗಳ ಮಹಾಪೂರವೇ ಕೀರ್‌ಗಂಗಾ ಚಾರಣದ ದಾರಿಯಲ್ಲಿ ಕಾಣಸಿಕ್ಕವು. ಹಾಗಾಗಿ ಕನಸಿನ ಈ ಚಾರಣಕ್ಕೆ ಅಡಿಯಿಟ್ಟೆ ಬನ್ನಿ ನಿಮ್ಮನ್ನೂ ಕರೆದೊಯ್ಯುವೆ.

ಕೀರ್‌ಗಂಗಾ ಹಿಮಾಚಲದ ಕಸೋಲ್‌ ಹಳ್ಳಿಯಿಂದ ಅನತಿ ದೂರದಲ್ಲಿದೆ. ಮಣಿಕರಣವನ್ನೂ ದಾಟಿ ಸಿಗುವ ತೋಷ್‌ನಿಂದಲೂ ಚಾರಣ ಮಾಡಬಹುದು. ದೊಡ್ಡ ಪ್ರವಾಸದ ನಡುವೆ ಹೇಗೋ ಜಾಗ ಮಾಡಿಕೊಂಡು ಚಾರಣಕ್ಕಾಗಿ 3 ದಿನ ತೆಗೆದಿರಿಸಿದೆ. ಕನಿಷ್ಟ ನಾಲ್ಕು ದಿನಗಳ ಚಾರಣವನ್ನು ಎರಡೇ ದಿನದಲ್ಲಿ ಮುಗಿಸುವ ಹಠಕ್ಕೆ ಬಿದ್ದು ಪೂರ್ಣ ಗೊಳಿಸಿದೆವು. ಕೀರ್‌ಗಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ 12 ಕಿ.ಮೀ ಅತಿ ಉದ್ದದ ಚಾರಣವನ್ನು ಎರಡೇ ದಿನದಲ್ಲಿ ಪೂರೈಸುವ ಮನಸ್ಸು ಮಾಡಿದೆವು.

ಮಣಿಕರಣದಿಂದ ತೋಷ್‌ಗೆ




ನಾವು ಬಿಜಿಲಿ ಮಹಾದೇವನಿಗೆ ನಮಿಸಿ, ಮಲಾನಾ ದಾರಿಯಲ್ಲಿ ಕಳೆದುಹೋಗಿ, ಮಣಿಕರಣದ ಬಸಿ ನೀರ ಬುಗ್ಗೆಯಲಿ ಮಿಂದೆದ್ದು̧ ಮೈಮನ ತಣಿಸಿಕೊಂಡು ಕೀರ್‌ಗಂಗಾ ಚಾರಣಕ್ಕೆ ಹೊರಟು ನಿಂತಾಗ ನಡು ಹಗಲು. ಬೆಳಗಿನ ಬಸ್ಸಾಗಲೇ ಊರು ತೊರೆದಿತ್ತು. ಕುಂಬಕರ್ಣನ ಹೊಟ್ಟೆಯಂತಹ ಎರಡು ಲಗೇಜು ಹೊತ್ತು ಹೋಗುವುದೂ ಸುಲಭವಿರಲಿಲ್ಲ. ಕಾರು ಹತ್ತಿದೆವು. 

ಓಕ್, ಪೈನ್ ಮರಗಳ ಚಪ್ಪರದಡಿ ನುಸುಳುತ್ತಾ ನುಜ್ಜುಗುಜ್ಜಾದ ರಸ್ತೆಯಿಲ್ಲದ ರಸ್ತೆಯಲ್ಲಿ ತೋಷ್‌ನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ನಡು ಹಗಲಿಗೇ ತಂಪಾದ ಚಂದ್ರನಂತಹ ಸೂರ್ಯ! ಏಕಮುಖಿ ರಸ್ತೆಯ ಗೋಜಲಿಗೆ ಸಿಕ್ಕಿಹಾಕಿಕೊಂಡ ನಮ್ಮ ವಾಹನ ನಡುರಸ್ತೆಯಲ್ಲಿ ಉಳಿಯಿತು. ನಾವು ಊರಿಗೆ ಪಾದ ಸೇವೆಗೈದೆವು. ಒಂದಿಷ್ಟು ಪಡ್ಡೆಗಳು ಊರ ಹೆಬ್ಬಾಗಿಲಿನಲ್ಲಿ  ಅಗ್ನಿ ಕಾರ್ಯ ನಡೆಸಿದ್ದರು. ಅದೇನು ಹುಚ್ಚು ಗೊತ್ತಿಲ್ಲ ಪ್ರತಿ ಸಾರಿ ಕಂಡ ಬೆಟ್ಟವು ನೋಡಿದಷ್ಟು  ಮತ್ತೆ ನೋಡಬೇಕೆನ್ನುವ ಬಯಕೆ. ತನ್ನ ಮೇಲೆ ನೀರ ಗಾಯಗಳನ್ನ ಮಾಡಿಕೊಂಡ ಬೆಟ್ಟ ನಗುತ್ತಲೇ ನಮ್ಮನ್ನು ಸ್ವಾಗತಿಸಿತು. ಅಸಂಖ್ಯಾತ ಬೇರುಗಳು ಹರಿದಾಡಿದಂತೆ ಹಿಮ ಕೊರೆದ ಗೀರುಗಳು. ದೂರದ ಗ್ಲೇಶಿಯರ್ ನಿಂದ ಬೀಸುವ ಕುಳಿರ್ಗಾಳಿ. ಅಪಾರವಾದ ನಿಲುಕದ ಸೌಂದರ್ಯ ಹೊತ್ತ ತೋಷ ಹಳ್ಳಿಗೆ ಮರುಳಾಗಿ ತುಂಬಾ ಹೊತ್ತು ಹಾಗೇ ನಿಂತೆ. 

ತೋಷ್‌ ಎಂಬ ಗ್ಲೋಬಲ್‌ ಹಳ್ಳಿ!




ಮೊದಲೊಂದು ಹಳ್ಳ ದಾಟಿ ಏರು ದಾರಿ ಏರುತ್ತಾ ಜರ್ಮನ್‌ ಬೇಕರಿ, ಇಸ್ರೇಲಿ ಕೆಫೆ ಇವನ್ನೆಲ್ಲಾ ಬಳಸಿ, ಜಮ್ಲು ಮಂದಿರ ದಾಟಿ, ದೂರದ ಜಲಧಾರೆಯ ಶಬ್ದಕ್ಕೆ ಕಿವಿಯಾಗುತ್ತಾ ರೂಂ ಸೇರಿ ಅಲ್ಲೇ ಕುಳಿತು ಎರಡೆರಡು ಲೋಟ ಕಾಫಿ ಸಮಾರಾದನೆ ನಡೆಸಿ ಮನ ತಣಿಸಿಕೊಂಡೆ. ಸ್ವಲ್ಪ ವಿಶ್ರಾಂತಿ ಪಡೆದು ಊರು ಸುತ್ತಲು ಹೊರಟೆವು. 


  ತೋಷ್ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ. ಹೈನುಗಾರಿಕೆಯೇ ಪ್ರಧಾನ ಉದ್ಯೋಗ. ಗೋಧೂಳಿಯಲ್ಲಿ ಗಂಟೆ ಬಾರಿಸುತ್ತಾ ಗೋಪಾಲಕರ ಹಿಂಡು ಊರ ಕಡೆ ಹೆಜ್ಜೆ ಹಾಕಿದ್ದವು. ಊರ ನೆತ್ತಿಯಲ್ಲೊಂದು ಹಿಮಟೋಪಿ ಹೊತ್ತ ಶಿಖರವೊಂದು ಫ್ರೇಮ್ ಹಾಕಿಸಿದಂತೆ ಆಕಾಶಕ್ಕೆ ತೂಗು ಬಿದ್ದಿತ್ತು. ಪಾರ್ವತಿ ಕಣಿವೆಯ ತುದಿಯೂರು ಸನಿಹದಲ್ಲೆ ತೋಷ್ ನದಿ ಬೋರ್ಗರೆಯುತ್ತಾ ಪಾರ್ವತಿ ನದಿಗೆ ಸೇರುವ ತವಕದಲ್ಲಿ ಕ್ಷಣಕ್ಷಣಕ್ಕೂ ದೂರದ ಬೃಹತ್ ಹಿಮಗಡ್ಡೆ ಕರಗಿಸಿಕೊಂಡು ತನ್ನೊಡಲು ತುಂಬಿಸಿಕೊಂಡು ಹರಿಯುತಿತ್ತು.

 ತೋಷ್ ನದಿ ಹರಿವಿಗಡ್ಡವಾಗಿ ಇತ್ತೀಚಿಗೆ ಚಿಕ್ಕ ಡ್ಯಾಂ ನಿರ್ಮಿಸಿದ್ದಾರೆ. ಅದರ ಹರಿವೆ ಇಲ್ಲಿನ ಪ್ರತಿ ಮನೆಯ ಬೆಳಕ ಪ್ರಜ್ವಲನೆಗೆ ಕಾರಣ. ಊರ ಹಿರಿಯರು ಬಿಸಲು ಕಾಸಿ ಮೈ ಬೆಚ್ಚಗೆ ಮಾಡಿಕೊಂಡು ಹೊರಡುತ್ತಿದ್ದರು. 

ಊರ ಹೆಬ್ಬಾಗಿಲಿನಲ್ಲಿ




ಊರ ಹೆಬ್ಬಾಗಿಲಿನಲಿ ಕಂಡ ಜರ್ಮನ್ ಬೇಕರಿ ನಮ್ಮನ್ನು ಅಚ್ಚರಿಗೆ ತಳ್ಳಿತು. ಅಲ್ಲಿ ಸಿಗುವ ಬ್ರೆಡ್, ಕ್ರೊಸೊಂಟ್ ಗಳಿಂದ ಸ್ಥಳೀಯ ಆಹಾರದ ಮೇಲೆ ಅಲಾವುದ್ದೀನ್ ಖಿಲ್ಜ್ ಆಕ್ರಮಣ! ಆಹಾರ ದಾಸ್ಯದ ಮುಂದುವರಿಕೆ! ಹೇವರಿಕೆ! Eat local ತತ್ವವೇ ನಮ್ಮ ಪಥವಾದುದರಿಂದ ಸ್ಥಳೀಯ ಆಹಾರಕ್ಕೆ ಪ್ರಥಮ ಪ್ರಾಶಸ್ತ್ಯ. ಈ ಕೊನೆಯ ಹಳ್ಳಿಯಲ್ಲೂ ಜರ್ಮನ್ ಬೇಕರಿ ಕಂಡು ಅಚ್ಚರಿ ಮತ್ತು ವಿಶಾದ ಒಟ್ಟೊಟ್ಟಿಗೆ ಉಂಟಾದವು. ಯಾರದೋ ಬಾಯಿ ಚಪಲವ ತಣಿಸಲು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದ ಸಕ್ಕರೆ, ಮೈದಾ ಮಿಶ್ರಿತ ತಿನಿಸುಗಳ ಸಂಗಕ್ಕೆ ಬಿದ್ದ ಸ್ಥಳೀಯರನ್ನು ಮೋಹಗೊಳಿಸುತ್ತಲೇ ಇದೆ. ಇಲ್ಲಿನ ಸ್ಥಳೀಯ ಆಹಾರಕ್ಕಾಗಿ ಹುಡುಕಿದಾಗ ಊರ ಚೌಕದ ಸನಿಹ ಜಮದಗ್ನಿಯ ದೇವಾಲಯದ ದಾರಿಯಲ್ಲಿ ಸ್ಥಳೀಯ ಪುಟ್ಟ ಹೋಟೆಲ್ ಕಣ್ಣಿಗೆ ಬಿತ್ತು. ಕತ್ತಲ ಕವಿದ ರಾತ್ರಿಯಲಿ ಮೇಣದ ದೀಪದ ಬೆಳಕಿನಲಿ ಆತನು ಬಡಿಸಿದ ಪದರ ಪದರವಾದ ಜವೆ ಗೋಧಿಯ ರೊಟ್ಟಿ ಹೊಟ್ಟೆ ಜೊತೆಗೆ ಮನಸ್ಸನ್ನೂ ತಣಿಸಿತ್ತು. ಇಲ್ಲಿಗೆ ಆಗಮಿಸಿದ್ದೇ ಈ ಚಾರಣದ ತಿರು ಬಿಂದು!

ಚಾರಣಿಗರ ಸಂತೆಯಲ್ಲೊಬ್ಬ ಸಂತ




ಈ ಉಪಹಾರ ಗೃಹದಲ್ಲೇ ಪ್ರಾನ್ಸ್ ದೇಶದವನೊಬ್ಬ ಭೇಟಿಯಾದ. ಡೂಡೋ ಆತನ ಹೃಸ್ವ ನಾಮಧೇಯ! ಯಾವುದೇ ಆತಂಕವಿಲ್ಲದೆ ಮನೆ ಮಗನಂತೆ ಉಣ್ಣುತಲಿದ್ದ! ಆತ ತನ್ನ ಸಣ್ಣ ಕತೆಯ ಕರಂಡಿಕೆ ಬಿಚ್ಚಿಟ್ಟಿದ್ದು ಹೀಗೆ.


 "ನಾನು ಡೂಡೋ" (ಪೂರ್ಣ ನಾಮ ಮರೆತಿದ್ದೇನೆ) ಪ್ರಾನ್ಸ್ ದೇಶದವ ತೋಷ್‌ನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಪ್ರತಿವರ್ಷ ಬರುತ್ತಿದ್ದೇನೆ! ನಾನು ನನ್ನ ಅಕ್ಕನ ಜೊತೆ ವಾಸವಾಗಿದ್ದೇನೆ. ಮದುವೆ ಆಗಿಲ್ಲ, ಆಗುವ ಆಸೆಯೂ ಇಲ್ಲ. ಪ್ರಾಯ 50. ನನ್ನ 25ನೆಯ ವರ್ಷಕ್ಕೆ ಅಂದರೆ 2000ನೆಯ ಇಸವಿಗೆ ಇಲ್ಲಿಗೆ ಮೊದಲ ಬಾರಿಗೆ ಬಂದೆ! ಇದು ನನ್ನ 25ನೆಯ ಭೇಟಿ! ಎಂದು ಬೆರಳು ಚೀಪುತ್ತಾ ಊಟ ಮುಗಿಸಿದ. ಆತನ ಈ ಮಾತು ನನ್ನಲ್ಲಿ ಪ್ರಶ್ನೆಗಳ ಮಹಾಪೂರದ ಅಲೆಯನ್ನೇ ಎಬ್ಬಿಸಿತು. ಒಬ್ಬ ವ್ಯಕ್ತಿ ತನ್ನೆಲ್ಲಾ ಕೆಲಸವನ್ನು, ತಿರುಗಾಟವನ್ನು ಬದಿಗಿಟ್ಟು ಬರಬೇಕೆಂದರೆ ಇಲ್ಲಿನ ಅಪೂರ್ವ ಆಕರ್ಷಣೆಯಾದರೂ ಏನು? ಊರವರ ಗೆಳೆತನವೇ? ಮುಕ್ತವಾಗಿ ಸಿಗುವ ಗಾಂಜಾವೇ? ಯಾವುದು ಅವನ ಹಿಡಿದಿಟ್ಟ ಆಸಕ್ತಿಯ ಬಿಂದು? ತಿಳಿಯದಾದೆ. ಮರುದಿನದ ತರುವಾಯ ಕೀರ್‌ಗಂಗಾ ಚಾರಣ ಹಾದಿಯಲ್ಲೂ 12ರ ಸುಮಾರಿಗೆ ಸಿಕ್ಕಿ ಅಚ್ಚರಿಗೆ ತಳ್ಳಿದ್ದ! ಕೇಳುವ ನೂರಾರು ಪ್ರಶ್ನೆಗಳು ನನ್ನಲೇ ಉಳಿದವು. ಎಲ್ಲವನ್ನು ನುಂಗಿಕೊಂಡು ಹೊರಟು ಬಿಟ್ಟೆ! ಊರ ಜಗುಲಿಯಲಿ ಅನೇಕ ಇಸ್ರೇಲಿ ಹೋಟೆಲುಗಳು, ವಿಶಿಷ್ಟ ವಿನ್ಯಾಸದಿಂದ ಕಂಗೊಳಿಸುತ್ತಿದ್ದವು. ಎಲ್ಲಿಯ ಇಸ್ರೇಲ್ ಎಲ್ಲಿಯ ತೋಷ್, ಎಲ್ಲಿಯ ಪಾರ್ವತಿ ಕಣಿವೆ? ಉದಾರಿಕರಣದ ಪದತಲದಲ್ಲಿ ಕಮರಿದ ದೇಸಿ ತಿನಿಸುಗಳ ಲೆಕ್ಕಾವಿಟ್ಟರ‍್ಯಾರು? ನಮ್ಮ ತನವ ಫೋಕೇಸ್ ಮಾಡಲಾಗದ ಮೂರ್ಖರಂತೆ, ಪೆಕರರಂತೆ ಭಾಸವಾದೆವು. 

ಯಾವುದೇ ಹೆಚ್ಚಿನ ಲಗೇಜುಗಳಿಲ್ಲದೇ ಮಣಿಪುರದ ಶಂಗೈ ಹಬ್ಬದಲ್ಲೂ ಇಟಲಿಯ ಪ್ರವಾಸಿಗನೊಬ್ಬ ಸಿಕ್ಕಿದ್ದ. ಅವನಂತೆಯೇ ಈ ಡುಡೋ ಭಾಸವಾಗಿದ್ದ! ಮುರುಕು ಇಂಗ್ಲೀಷ್‌ನಲ್ಲಿ ಮಾತನಾಡಿ ಅವನ ಸ್ನೇಹ ಸಂಪಾದಿಸಿದ್ದೆ. ತನ್ನ ಪೋನ್ ಸಂಖ್ಯೆ ನೀಡಿ ಇಟಲಿಗೂ ಆಹ್ವಾನಿಸಿದ್ದ!

ಒರಟು ಒಳದಾರಿಗೆ ಹೊರಳಿ  





ಸಾಮಾನ್ಯ ಚಾರಣದಂತೆ ಕಂಡರೂ ಇದು ಸಾಮಾನ್ಯ ಚಾರಣವಲ್ಲ. ಎಲ್ಲ ದೊಡ್ಡ ಚಾರಣಗಳ ಹೂರಣ ಹೊತ್ತ ದಾರಿ. ಯಾಮಾರಿದರೆ ಸ್ವರ್ಗಕ್ಕೆ ರಹದಾರಿ! ಇದೊಂದು ಅನನ್ಯ ಚಾರಣ ದಾರಿ. ದಾರಿಯುದ್ದಕ್ಕೂ ಸಿಗುವ ನೂರಾರು ತೊರೆಗಳು, ಫರ್ನ್‌ಗಳು, ಜಲಪಾತಗಳು, ನಕ್ತಾನ್‌, ಕಲ್ಗಾ ಎಂಬ ಹಳ್ಳಿ ಇದನ್ನು ವಿಶಿಷ್ಟ ಚಾರಣವನ್ನಾಗಿಸಿದೆ. ಅಲ್ಲದೇ ಕಳೆದು ಹೋದ ಆ ೧೭೬೮ ಜನ ಚಾರಣಕ್ಕೊಂದು ನಿಗೂಢ ಮೆರಗನ್ನು ನೀಡಿ ಹೋಗಿದ್ದಾರೆ!  

  


ಕೀರ್‌ಗಂಗಾಕೆ ಪ್ರಮುಖ ಎರಡು ದಾರಿಗಳು ಮೊದಲನೆ ಬರ್‌ಶೈನಿಯಿಂದ ವಯಾ ಕಲ್ಗಾ. ಎರಡನೆಯ ದಾರಿ ನಾಕ್‌ತಾನ್‌ ಹಳ್ಳಿಯ ಮೂಲಕ. ನಾಕ್ತಾನ್ ದಾರಿ ಬಲು ಕಠಿಣ. ಹೊಸ ದಾರಿಯ ಹುಡುಕಾಟದಲ್ಲಿರುವವರಿಗಾಗಿ ಕಾದಿರುವ ದಾರಿ ಬುನ್‌ಬುನಿ. ಸ್ವಲ್ಪ ಕಠಿಣವಾದರೂ ಅನ್ವೇಷಣಾ ಅಲೆಮಾರಿಗಳಿಗೆ ಉತ್ತಮ!

  ನಾವು ಆಯ್ಕೆ ಮಾಡಿಕೊಂಡ ದಾರಿ ಬರ್‌ಶೈನಿಯಿಂದ ಕಲ್ಗಾ ಮೂಲಕ ಕಾಡು ಬೀಳುವುದೆಂದು ತೀರ್ಮಾನಿಸಿ ನಾಕ್ತಾನ್‌ ಹಳ್ಳಿ ದಾರಿ ಬಿಟ್ಟೆವು. ಹೇಗೆ ಈ ಊರ ಉಚ್ಚಾರಣೆ ನನಗಿನ್ನೂ ಗೊಂದಲವಿದೆ.





  ಬರ್‌ಶೈನಿಯಲ್ಲೇ ಚಾರಣಿಗರ ಸಂತೆ ನೆರೆದಿತ್ತು. ತಲೆಗೊಂದು ಸಾವಿರವಿತ್ತು. ಅಲ್ಲೊಬ್ಬ ದಾಂಡಿಗನತಹ ಗೈಡ್‌ನೊಂದಿಗೆ ಸನಿಹದ ಬರಶೈನಿ ಡ್ಯಾಂ ದಾಟಿ ಕೀರ್‌ಗಂಗಾ ದಾರಿಗಡಿ ಇಟ್ಟೆವು.

 ಕೀರ್‌ಗಂಗಾದ ದಾರಿ ಓಕ್ ಮತ್ತು ಮ್ಯಾಪಲ್ ಮರಗಳ ದಟ್ಟಣಿಯ ನಡುವೆ ಕಾಲು ಹಾದಿ ಜಾಗ ಮಾಡಿಕೊಂಡು ನುಸುಳಿ ಹೊರಟಿತ್ತು. ಕಡು ನೀಲ ಹಕ್ಕಿಯೆಂದು ನನಗೆ ಕೀರ್‌ಗಂಗಾ ಚಾರಣಕ್ಕೆ ಸ್ವಾಗತವೆಂದುಸುರಿ ನಭಕ್ಕೆ ಹಾರಿತು. ಅದರ ಹತ್ತಾರು ಚಿತ್ರ ನನ್ನ ಕ್ಯಾಮರಾದಲ್ಲಿ ದಾಖಲಾಯಿತು. ಹತ್ತು ಹೆಜ್ಜೆ ಹಾಕುತ್ತಲೆ ಚಾರಣದಾರಿ ಗಡ್ಡವಾಗಿ ಹರಿವ ತೊರೆಯನು ಹರ ಸಾಹಸಗೈದು ದಾಟಿದೆವು. ನಮ್ಮ ಸಾಹಸ ಪರೀಕ್ಷೆ ಮಾಡಲು ಕೇವಲ ಒಂದೇ ಒಂದು ತುಂಡು ಮರವನ್ನು ದಾರಿಗಡ್ಡವಾಗಿ ಹಾಕಲಾಗಿತ್ತು. ಇವೆಲ್ಲವು ಬರ್‌ಶೈನಿಯ ಬೃಹತ್ ಅಣೆಕಟ್ಟಿಗೆ ನೀರೂಡುವ ಪುಟಾಣಿ ಸ್ತನಗಳು. 


ತೋಷ್‌ಗೆ, ಬರಶೈನಿಗೆ ಬೆಳಕು ಚೆಲ್ಲುವ ಪುಟಾಣಿ ಡ್ಯಾಂ ಕರಗಿದ ಹಿಮಗಡ್ಡೆಗಳಿಂದ ವಿದ್ಯುತ್ ಉತ್ಪಾದಿಸುತ್ತಲೇ ಇದೆ. ಮಾನವ ಅಭೀಪ್ಸೆಗೆ ಬೆಲೆ ತೆತ್ತುತ್ತಲೇ ಇದೆ. 2025ರ ಮಹಾ ಮಳೆಯೊಂದು ರಾತ್ರೋರಾತ್ರಿ ಪಾರ್ವತಿಕೊಳ್ಳದ ಊರನ್ನು ನದಿಗುಂಟ ಕೊಚ್ಚಿ ಸಾಗಿಸಿದೆ ಎಂಬ ಸುದ್ದಿ ತಿಳಿಯುತ್ತಲೇ ಖಿನ್ನನಾದೆ. ಅಂತಹ ಜಲಪ್ರಳಯಕ್ಕೆ ಈ ಊರುಗಳು ಸಾಕ್ಷಿಯಾಗಬೇಕಾಗಿದ್ದು, ದುರಾದೃಷ್ಣ.





 ದಾರಿಯುದ್ದಕ್ಕೂ 3-4 ಜಲಪಾತಗಳು ಬಳುಕುತ್ತಾ ಹರಿಯುವವು. ಒಂದು ಜಲಪಾತದಲ್ಲಂತೂ 3-4 ಜನ ತಮ್ಮ ಪ್ರಾಣ ಕಳಕೊಂಡಿದ್ದರು! ಅವುಗಳಿಗೆ ಅವರ ಹೆಸರನ್ನೇ ಇರಿಸಲಾಗಿತ್ತು. ಭೀಕರತೆಯಿಂದ ಹರಿವ ನಡು ಚಾರಣದ ನಡುವೆ ಸಿಗುವ ಹೆಸರೇ ಇಲ್ಲದ ಜಲಪಾತವೂ ಒಂದು. ಇಲ್ಲಿ ದಣಿವಾರಿಸಿಕೊಳ್ಳಲು ಹಲವು ಕೆಫೆಗಳಿಗೆ. ಝಳು ಝಳು ಹರಿವ ತೊರೆಗೆ ಕಾಲಿಟ್ಟು ಕಾಫಿ ಹೀರಿ ಚಾರಣಿಗರನ್ನು ನೋಡುತ್ತಾ ಕೂರುವುದು ವಿಶೇಷ ಅನುಭವ! ಸನಿಹ ದೂರಿನ ಹಲವು ನಾಯಿಗಳು ನಮ್ಮನ್ನು ಹಿಂಬಾಲಿಸಿ ಇಲ್ಲಿ ಬಿಸಿಲ ಹೀರುತ್ತಾ ಕುಳಿತವು. 



ಹೆಸರಿಸದ ಜಲಪಾತ ದಾಟುತ್ತಲೇ ದಾರಿ ಏರು ಮುಖವಾಗಿತ್ತು. ಏರು ಇಳಿಯ ದಾರಿಗಳ ದಾಟಿ ಅರ್ಧ ದಾರಿ ಏರಿ ಬಂದಾಗ ಮತ್ತೊಂದು ಜಲಪಾತ ನಿರುಮ್ಮಳವಾಗಿ ಹರಿಯುತಲಿತ್ತು. ದೂರದಿಂದೊಂದು ಜಲಧಾರೆ ಈ ಜಲಧಾರೆಗೆ ಬಂದು ಸೇರಿತ್ತು. ಇಲ್ಲಿ ತಂಗಲು ವ್ಯವಸ್ಥೆ ಸಹ ಇದೆ. ನಮ್ಮ ಗುರಿ ಕೀರ್‌ಗಂಗಾವಾದುದರಿಂದ ಕಾಲು ತೋಯಿಸಿ ಹರಿವ ನೀರ ಜೋಗುಳವನು ಆಲಿಸಿ ಕಾಫಿ ಹೀರಿ, ಹೊಟ್ಟೆ ಪೂಜೆ ಮಾಡಿ ಹೊರಟು ಬಿಟ್ಟೆವು.

ಕಾಡ ಗರ್ಭದಲ್ಲಿ


 ಕಾಡಗರ್ಭಕ್ಕಿಳಿದಂತೆ ಧಾರೆ ಮತ್ತು ಮಸ್ಕ್ ಜಿಂಕೆಗಳು ಉಜ್ಜಿ ಹೋದ ಮರಗಳು ಅವುಗಳ ಇರುವಿಕೆಯ ಸಾಕ್ಷಿ ನುಡಿಯುತ್ತಿತ್ತು. ಮುಂದಿನ ಕಠಿಣ ಏರುದಾರಿಗಳ ಏರಲು ಅಲ್ಲಲ್ಲಿ ಕಬ್ಬಿಣದ ಸಲಾಖೆ ನೆಟ್ಟಿದ್ದರು. ಒಂದೆರಡು ಜಲಪಾತಗಳ ರುದ್ರ ಭೀಕರತೆ ಕಂಡು ಬೆರಗಾದೆನು. ಒಂದು ಜಲಪಾತದಲ್ಲಂತೂ ಇತಿಂಥವರು ಸತ್ತಿದ್ದಾರೆಂದು ಗಿಡಗಳ ಕೊಂಬೆಗಳಿಗೆ ಬೋರ್ಡು ನೇತು ಹಾಕಿದ್ದರು.




ಕಾಡ ಗರ್ಭ ಹೊಕ್ಕು ಹೊರಟು ನಿಂತಾಗ ದಾರಿಯುದ್ದಕ್ಕೂ ಒರಟು ಕಲ್ಲುಗಳ ಪತ್ತೆದಾರಿಕೆ. ಓಕ್ ಮರಗಳ ಎಲೆಗಳು ದಾರಿಯ ಜಾರುವಿಕೆಯಲ್ಲಿ ಮತ್ತಷ್ಟು ತೀವ್ರಗೊಳಿಸಿ ಜಿಡುಕಾಗಿಸಿತ್ತು. ಅಲ್ಲಲ್ಲಿ ಸಿಗುವ ಸಣ್ಣ ತೊರೆಗಳ ಬಳಸಿ ದಾಟುವಾಗಲೇ ಆಕಾಶ ಬಿಕ್ಕ ತೊಡಗಿತು. ಚಳಿಯಲ್ಲಿ ನಡುಗುತ್ತಾ ಪೋಂಚೋ ಹಾಕಿ ಯಾವುದೇ ಭಯವಿಲ್ಲದೇ ದಾಟಿಕೊಂಡದ್ದು ನೆನೆದರೆ ಬೆನ್ನು ಹುರಿಯಲ್ಲಿ ಸಣ್ಣ ನಡುಕ. ಕೆಲವೆಡೆ ಜಾರುವ ಬಂಡೆಗಳ ಮೇಲೆ ಕಪ್ಪೆ ಹಿಡಿದಂತೆ ಬಂಡೆ ಹಿಡಿದು ನೀರ ಝರಿಗಳ ದಾಟಬೇಕು.







 ನಡು ದಾರಿಗೊಂದು ಚಂದದ ಜಲಪಾತ. ಜಲಪಾತದ ಹಾದಿಯಲ್ಲೇ ಟೇಬಲ್ ಕುರ್ಚಿ ಜೋಡಿಸಿದ ಚಿಕ್ಕ ಮ್ಯಾಗಿ ಪಾಯಿಂಟ್. ಇಲ್ಲಿಂದ ಪ್ರಪಾತದ ಸನಿಹವೇ ಬಳಸು ದಾರಿಯೊಂದು ಕೀರ್‌ಗಂಗಾದತ್ತ ಪ್ರಯಾಣ ಬೆಳೆಸುತ್ತದೆ. ಅರಣ್ಯ ಇಲಾಖೆ ಇಲ್ಲಿ ಪ್ರಯಾಣಿಕರ ನೋಂದಣಿ ಮಾಡಿಕೊಳ್ಳುತ್ತದೆ. ನಡು ಮಧ್ಯಾಹ್ನ ದಾಟಿದ್ದರಿಂದ ಇಲ್ಲಿ ಚಿಕ್ಕ ಉಪಹಾರ ಸೇವಿಸಿ ಜಲಪಾತದಲ್ಲಿ ಕಾಲು ತೋಯಿಸಿ ಹೊರಟೆವು. ಸರಿಸುಮಾರು 5 ಗಂಟೆ ಹೊತ್ತಿಗೆ ಕೀರ್‌ಗಂಗಾದ ನೆತ್ತಿಯಲ್ಲಿದ್ದೆವು.




 ನೂರಾರು ಕ್ಯಾಂಪ್‌ಗಳು ಚಾರಣಿಗರಿಗಾಗಿ ಇಲ್ಲಿ ಹಾಕಲಾಗಿದೆ. ಹಣ್ಣಿನ ರಸ ಒಂದನು ಹೀರಿ ಕೀರ್‌ಗಂಗಾದ ಬಿಸಿ ನೀರಿನ ಬುಗ್ಗೆಗೆ ಲಗ್ಗೆ ಇಟ್ಟೆವು. ಚಾರಣದ ಆಯಾಸವನ್ನೆಲ್ಲಾ ಒಂದು ಚಿಕ್ಕ ಸ್ನಾನ ತೊಳೆದು ಹಾಕಿತು. ಪ್ರತಿ ಹನಿಯಲ್ಲೂ ಹರಿದು ಬರುವ ಹಾಲಿನ ಕೆನೆಯಂತಹ ಸಣ್ಣ ಕಣ! ಕ್ಷಣ ಕ್ಷಣವೂ ಉಕ್ಕುಕ್ಕಿ ಹರಿವ ಬಿಸಿ ನೀರು! ತಣ್ಣಗಿನ ವಾತಾವರಣದಲ್ಲಿ ಮೈ ತಾಗಿಸಿದರೆ ಸುಟ್ಟು ಹೋಗುವಷ್ಟು ಬಿಸಿನೀರು ಚಾರಣದ ಆಯಾಸ ತೊಡೆದು ಹಾಕಲು ಮನಸೊ ಇಚ್ಚೆ ಮಿಂದು ಮುಳುಗುವ ಸೂರ‍್ಯನಿಗೆ ಮುಖ ಮಾಡಿ ಕುಳಿತೆವು. ಬೃಹತ್ ಬೆಟ್ಟವೊಂದರ ನೆತ್ತಿಯಿಂದ ಹರಿವ ಬಿಸಿನೀರೇ ಒಂದು ಕೌತುಕ. ಬೇಸಿಗೆ ಪೂರ್ಣ ಬಿಸಿನೀರ ಔತಣ ಉಣ ಬಡಿಸುತ್ತದೆ. ಡಿಸೆಂಬರ್‌ನಿಂದ ಮಾರ್ಚ್ವರೆಗೆ ಬಿಸಿನೀರ ಬುಗ್ಗೆಗೆ ಬಿಡುವು! ಹಿಮ ಕಟ್ಟಿ ನೀರ ಹರಿವು ನಿಲ್ಲುತ್ತದೆ. ಮೊದ ಮೊದಲು ಈ ಬಿಸಿನೀರನ್ನು ಕೊಳವೊಂದಕ್ಕೆ ಹಾಯಿಸಲಾಗುತ್ತಿತ್ತು. ಆದರೆ ಈಗ ಕೇವಲ ಸಣ್ಣ ನಲ್ಲಿಯಂತಹುದನು ಮಾಡಿ ಸ್ನಾನ ಮಾಡಬೇಕಾದ ಅನಿವಾರ್ಯತೆ! ಸನಿಹದ ಶಿವ ಮತ್ತು ಕಾರ್ತಿಕೆಯನ ಗುಹಾ ದರ್ಶನ ಮಾಡಿ ರಾತ್ರಿಯ ಆಕಾಶಗಂಗೆಗಾಗಿ ಕಾದು ಕುಳಿತೆವು.

ಮ್ಯಾಗಿ ಮತ್ತು ಮಿಲ್ಕೀವೇ




  ಬಿಸಿ ಬಿಸಿಯಾಗಿ ಹರಿವ ಚಿಲುಮೆಯಲಿ ಮಿಂದು, ಮ್ಯಾಗಿ ತಿಂದು ಮಿಲ್ಕೀವೇ ಕಾಣುವ ಕನಸಿಗೆ ಕಾತರಿಸಿದೆವು. ಚಳಿಯಾಗದಿರಲೆಂದು ಬೆಟ್ಟಗಳೆಲ್ಲಾ ಹಿಮ ಟೋಪಿ ಹೊದ್ದು ಕುಳಿತಿದ್ದವು. ಸುಂದರವಾದ ಸಂಜೆ 3000 ಮೀ ಎತ್ತರದಲ್ಲಿ ಸಾಕ್ಷಿಯಾಯಿತು! ರಾತ್ರಿಯಾಗುತ್ತಲೇ ನಮ್ಮ `ಓಂ ಶಾಂತಿ' ಟೆಂಟ್‌ನ ಬಾಣಸಿಗ ಬಡಿಸಿದ ದಾಲ್ ಖಿಚಿಡಿ, ಪನ್ನೀರ್ ಗ್ರೇವಿ, ಸಲಾಡ್ ನಮ್ಮ ರುಚಿಮೊಗ್ಗುಗಳನ್ನು ಬಡಿದೆಬ್ಬಿಸಿತ್ತು! ಬದುಕಿನ ಅತ್ಯುತ್ತಮ ಊಟವೊಂದು ದಾಖಲಾಯಿತು. ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡ ಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿ ನನ್ನ ಮೂಗಿಗೂ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ. ನಮ್ಮಲ್ಲಿ ಒಂದೆರಡು ತಾರಾ ದರ್ಶನವಷ್ಟೇ ಅಲ್ಲಿನ ಆಕಾಶವೇ ಬೇರೆ ಎಂಬಂತೆ ಭಾಸ.

ಕೊನೆಯ ಮತ್ತು

 ನಕ್ತಾನ ದಾರಿಯಲ್ಲಿ ಇಳಿಯುವ ಮನಸ್ಸಾದರೂ ದಾರಿತಪ್ಪುವ ಭಯದಲ್ಲಿ ಕುಲ್ಗಾದ ಅದೇ ದಾರಿ ಹಿಡಿದೆವು. ತೀವ್ರ ಕಡಿದಾದ ಮೂರು ಕಿಲೋಮೀಟರ್ ಇಳಿದಿದ್ದೇವಷ್ಟೇ ಆಗಷ್ಟೇ ಸೂರ‍್ಯ ಕಣ್ಣು ಒಡೆದಿದ್ದ. ಇಳಿವ ಧಾವಂತದ ನಡುವೆ ಕಾರ್ತಿಕೇಯ ಗುಹೆ ಹೊಕ್ಕು ಕತೆಗಳಿಗೆ ಆವಿಯಾದೆ. ನಮ್ಮ ದಂಡು ಹೊರಡಲು ತಯಾರಿ ನಡೆಸಿತ್ತು. 

 ಹಳದಿ ಬೆಳಕಲಿ ಮೀಯುತ್ತಾ ಬೆಟ್ಟಗಳ ಬಾಯ್ ಬಾಯ್ ಹೇಳಿದೆ. ಪೈನ್ ಡಿಯೋದಾರ್ ಮರಗಳ ನೆರಳಲ್ಲಿ ಜಾರುತ್ತಾ ನಡೆಯ ಹತ್ತಿದೆವು. ಅರ್ಧ ದಾರಿ ಕ್ರಮಿಸಿದ್ದೆವಷ್ಟೇ ಕೊನೆಯ ಜಲಪಾತದ ನಿಲ್ದಾಣ ಎದುರಾಯಿತು.

ಡೂಡೋ ಎದುರಾಗಿ



 ತೋಷ್ ಊರಿನಲ್ಲಿ ಸಿಕ್ಕ ಸಂತ `ಡೂಡೋ' ಎದುರಾದ. ಒಂದು ಕೋಲು, ಹತ್ತಿ ಜೋಳಿಗೆ ಹಿಡಿದು ಚಾರಣಕ್ಕೆ ಹೊರಟಿದ್ದ! ಆತನೊಂದಿಗೆ ಹರಟಲು ಹಲವು ವಿಷಯಗಳಿದ್ದವು. ಆಗಲೇ ನನ್ನ ಬಿಟ್ಟು ತೆರಳಿದ ಗುಂಪು ಮುಂದಡಿ ಇಟ್ಟಾಗಿತ್ತು. ಕೇವಲ ಸೆಲ್ಫಿಯೊಂದ ಕ್ಲಿಕ್ಕಿಸಿ ಪ್ರಶ್ನೆಯ ದೊಡ್ಡದೊಂದು ಮೂಟೆ ಹೊತ್ತು ಹೊರಟು ಬಿಟ್ಟೆ. ಗೆಳೆಯರ ಗುಂಪು ಬಿಟ್ಟು ಈತನ ಕತೆಗಳಿಗೆ ಕಿವಿಯಾಗಬೇಕಿತ್ತೆಂದು ಈಗ ಪಶ್ಚಾತ್ತಾಪವಾಗುತ್ತಿದ್ದೆ! ಇನ್ನೆಂದರೂ ಇಂತಹ ಅವಕಾಶವೊಂದನು ಮತ್ತೆ ಬಿಡಬಾರದೆಂಬ ಪ್ರತಿಜ್ಞೆಯೊಂದಿಗೆ ಬರಶೈನಿ ಕಡೆಗೆ ಹೆಜ್ಜೆ ಹಾಕಿದೆ.

 ಬರಶೈನಿಯ ಹೋಟೆಲ್‌ನಲ್ಲಿ ಉಂಡ ದಾಲ್‌ ಮಾಕ್ನಿ, ಸಬ್ಜಿ ಊಟದ ಸವಿಯಿನ್ನೂ ನಾಲಿಗೆ ತುದಿಯಲ್ಲಿದೆ. ಮತ್ತೊಮ್ಮೆ ಅಂತಹ ಊಟಕ್ಕಾಗಿ ತಹತಹಿಸುತ್ತಾ ಬರಶೈನಿಗೆ ಬಾಯ್ ಹೇಳುತ್ತಾ ಸೀಸುವಿನ ಅನಂತ ಆಕಾಶವನ್ನು ಅಪ್ಪಲು ಬರಶೈನಿಯಿಂದ ಕಾರು ಹತ್ತಿದೆ!

ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...