Showing posts with label ಹಾಗೇ ಸುಮ್ನೆ. Show all posts
Showing posts with label ಹಾಗೇ ಸುಮ್ನೆ. Show all posts

Thursday, February 12, 2026

ಹೊಷಾಯ್ ಹೊಸೆದ ಹೊಸ ಕತೆ….

 

ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲುಗಳ ಮೇಲೆ ಪ್ರತಿಫಲಿಸುತ್ತದೆ. 






ಯಾಕಾಗಿ ನಮ್ಮ ಹಿಂದಿನವರು ಬೆಟ್ಟದ ಮೇಲೆ ಇಲ್ಲ ದೊಡ್ಡ ಪೀಠದ ಮೇಲೆಯೇ ದೇವಾಲಯಗಳನ್ನು ನಿರ್ಮಿಸುತ್ತಿದ್ದರು? ಎಂಬ ಸಣ್ಣ ಜಿಜ್ಞಾಸೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಇಲ್ಲಿಯವರೆಗೆ ಅದಕ್ಕೊಂದು ಸಮರ್ಪಕವಾದ ಉತ್ತರ ದೊರೆತಿರಲಿಲ್ಲ. ಆದರೆ ಹೊಷಾಯ್‌ನ ಭೇಟಿ ಮಾಡಿ ಬಂದ ನಂತರ ಹೊಸ ಹೊಳಹು ಹೊಳೆಯಿತು. ನಿಮಗೂ ಹೊಳೆದರೆ ಹೇಳಿ.


****

ಹುಚ್ಚು ಮಳೆ ಅಬ್ಬರ ಮತ್ತು ಕಾಫಿ






ನಾಲ್ಕು ದಿನಗಳಿಂದ ಹೊಡೆಯುತ್ತಿದ್ದ ಮಳೆ ಅಂದೂ ಬಿಡುವು ಕೊಟ್ಟಿರಲಿಲ್ಲ. ಮಳೆ ನೋಟಕ್ಕಾಗಿ ಹಾತೊರೆದು ಹೊರಟೆ. ಮಳೆ ಬಾರದೇ ನಾನು ಹೊರಡದೇ ಇದ್ದಿದ್ದರೆ ಹೊಷಾಯ್ ಆಗಲಿ ಈ ಕತೆಯ ಭೇಟಿಯೇ ಆಗುತ್ತಿರಲಿಲ್ಲ! ಕಾಲ ನಿರ್ಣಯದ ಕಸರತ್ತು.

ಎರಡು ಅಡ್ಡಾಗಳ ನಡುವೆ!




ಹೊತ್ತು ಹುಟ್ಟುವ ಮುಂಚೆ ಹೆಬ್ರಿಯ ಭಟ್ಟರ ಹೋಟೆಲಿನಲ್ಲಿ ಕಾಫಿ ಸಮಾರಾಧನೆ! ಅವರ ಕಷ್ಟ ಸುಖ ವಿಚಾರಿಸಿ ಎರಡೆರಡು ಹಬೆಯಾಡುವ ಕಡಬು ಹೊಡೆದು ಹೊರಟೆವು. ನೀವು ಹೆಬ್ರಿಗೆ ಬಂದರೆ ಅಥೆಂಟಿಕ್ ಆಹಾರಕ್ಕಾಗಿ ಹಪಾಹಪಿಸುವವರಾದರೆ ಆಗುಂಬೆ ರಸ್ತೆಯಲ್ಲಿನ ಭಟ್ಟರ ಹೋಟೆಲ್ ಬಹಳ ಅನನ್ಯವಾದ ಹೋಟೆಲ್‌. ನಿಮ್ಮ ರುಚಿ ಮೊಗ್ಗುಗಳನ್ನು ಬಡಿದೆಬ್ಬಿಸುವ ಹೋಟೆಲ್. ಇಲ್ಲಿನ ಶ್ಯಾವಿಗೆ, ಕಡಬು ಮುಂತಾದ ದೇಸಿ ತಿನಿಸುಗಳು ಮನತಣಿಸುತ್ತವೆ. ಒಂದು ಕಾಲದಲ್ಲಿ ಬಡ್ಕಿಲಾಯ ಹೋಟೆಲ್ ಎಂಬ ಹೆಸರು ಹೊತ್ತು ಇದೀಗ ಭಟ್ಟರ ಹೋಟೆಲ್ ಆಗಿ ಹೆಸರು ಬದಲಿಸಿ ಕೂತಿದೆ. ಅನನ್ಯ ರುಚಿಯ ಹಬೆಯನ್ನು ಪಸರಿಸಿದ ಬಡ್ಕಿಲಾಯರ ಮುಂದುವರಿಕೆಯತೆ ಭಟ್ಟರ ಹೋಟೆಲ್ ಕಾರ್ಯ ನಿರ್ವಹಿಸುತ್ತಿದೆ. ಭಟ್ಟರು ಪ್ರೀತಿಯಿಂದ ಕೊಟ್ಟ ಹಲಸಿನಕಾಯಿ ತಣ್ಣಗೆ ಕಾರ್‌ ಡಿಕ್ಕಿಯಲ್ಲಿ ಕುಳಿತಿತ್ತು! ಮನೆಗೆ ತಂದು ವಾರ ಕಳೆದರೂ ಹಣ್ಣಾಗಲಿಲ್ಲ! ಚಿಗುರೇ ಕೊಯ್ದಿರಬೇಕು! ಅವರ ಕತೆಗೆ ಕಿವಿಯಾಗುತ್ತಲೇ ಹುಚ್ಚು ಮಳೆ ಅಟಕಾಯಿಸಿಕೊಂಡಿತು. 




ವರಂಗದ ಬಸದಿ ನೋಡಿ ಬರುತ್ತಲೇ ಕಾಫಿ ಹುಚ್ಚು ಅಟಕಾಯಿಸಿಕೊಂಡಿತು!   ಎಂತಹ ಹೊಟ್ಟೆ ಬಾಕನೆಂದು ಕಣ್ಣು ಹಾಕಬೇಡಿ! ಕಡಬು ಹೊಡೆದ ಮೇಲೆ ಕಾಫಿನಾ ಅಂತ ಕಣ್ಣು ಅರಳಿಸಬೇಡಿ. ನಾನಿರುವುದೇ ಹಾಗೆ. ಕಡು ಕಾಫೀ ಮೋಹಿ. ಕಾರ್ಕಳದ ಆನೆ ಕೆರೆಯ ಸನಿಹದ ರಂಗನಾಥ ಕೆಫೆಗೆ ಕಾಲಿಟ್ಟು  ಕಾಫಿಗೆ ಆರ್ಡರಿಸಿ ಕೆರೆ ನೋಡುತ್ತಾ ಕಾಲು ಚಾಚಿದೆ. ಕಾರ್ಕಳದ ಅಥೆಂಟಿಕ್‌ ಆಹಾರದ ಅಡ್ಡಾ ರಂಗನಾಥ ಕೆಫೆ. ಇಲ್ಲಿನ ಶ್ಯಾವಿಗೆ ದಾಲ್‌ ಸವಿದವನೇ ಬಲ್ಲ! ಕ್ಷಮಿಸಿ ಹೆಚ್ಚು ಹೇಳಲಾರೆ ನಾಲಗೆ ನೀರೂರಿಸುತ್ತಿದೆ.



 ಪರಿಚಾರಕ ತಂದಿಟ್ಟ ಕಾಫಿಯ ಡಿಕಾಕ್ಷನ್ ಹಾಲು ಸೇರದೆ ಹಾಗ ಹಾಗೇ ಉಳಿದಿತ್ತು. ಏನು ಮ್ಯಾಜಿಕ್‌ ಮಾಡಿದ್ದನೋ? ಎಷ್ಟು ಕಾದರೂ ಸೇರದೆ ಇದ್ದುದ ನೋಡಿ ಪರಿಚಾರಕನಲ್ಲಿ ಕೇಳಿದಾಗ `ನೀವೇ ತಿರುಗಿಸಬೇಕು' ಎಂದ! ಅರರೇ ಎನ್ನುತ್ತಾ ಚಮಚ ತಿರುವಿ ಗಂಟಲು ಒದ್ದೆ ಮಾಡಿದೆ. ಅಬ್ಬಾ ಅದ್ಭುತ ರುಚಿ! ರಂಗನಾಥ ಕೆಫೆಯ ಅದೈತ ರುಚಿಯ ಕಾಫಿಗೆ ಮರುಳಾದೆ!

 ಅದೇ ಕಾಫಿಯ ನೆನೆಯುತ್ತಾ ಕಾರು ಹತ್ತಿದೆ. ಗುಡ್ಡವೇರುವಾಗಲೂ ಕಾಫಿ ನೆನಪುಗಳು! ನಾವಾಗಿಯೇ ತಿರುಗಿಸದ ಹೊರತು ಇಲ್ಲಿ ಏನೂ ಆಗದು. ಸ್ವಪ್ರಯತ್ನ ಬೇಕೇ ಬೇಕು! ಎಂಬ ಹೊಸ ಹೊಳಹೊಂದು ನನ್ನೊಡಲ ಸೇರಿತ್ತು. ಜೊತೆಗೆ ಮತ್ತೊಂದು ಅಚ್ಚರಿಯೂ ಜೊತೆಗೆ ಸೇರಬಹುದೆಂಬ ಸಣ್ಣ ಅಂದಾಜು ನನಗಿರಲಿಲ್ಲ.

***

ಮಿಲಿಯಾಂತರ ವರ್ಷಗಳಿಂದ ಕುಳಿತ ಬಲಿತ ಕಲ್ಲುಗಳ ಬಗೆದು ಕಟ್ಟಿದ ಕತ್ತಲೆ ಬಸದಿ ಹೊಕ್ಕೆವು. ದೇವರನ್ನು ಮಾತಾಡಿಸಿ, ಪ್ರದೀಪ್‌ ಚಂದ್ರನಲ್ಲಿ ಇತಿಹಾಸ ಕೆದಕಿ ಗೊಮ್ಮಟ ಗಿರಿಗೆ ಅಡಿ ಇಟ್ಟೆ.







  ಬೆಟ್ಟವ ಪಳಗಿಸಿ ವಿರಾಗಿಯನ್ನು ಕಡೆದು ನಿಲ್ಲಿಸಿದ ಗಿರಿ. ಗಿರಿ ಹಿಂದಿನ ಕಣಿವೆಯಿಂದ ನಿಧಾನಕ್ಕೆ ಎತ್ತಿ ನಿಲ್ಲಿಸಿ ಪ್ರತಿಷ್ಠಾಪಿಸಲಾಗಿದೆ. ಬೆಟ್ಟದ ಬಗಲಿನ ಕಲ್ಲು ಬಳಸಿ ಈ ಬಾಹುಬಲಿಯನ್ನು ಕೆತ್ತಿದ್ದಾರೆ. ಉಳಿದ ತೀರ್ಥಂಕರರ ಚಿಕ್ಕ ಚಿಕ್ಕ ಚಂದದ ಮೂರ್ತಿಗಳ್ನನು ದೊಡ್ಡ ಪಾಗಾರದ ಸುತ್ತ ಮಲ್ಲಿಕಾಫರ್‌ನ ದಾಳಿಯ ಮುನ್ಸೂಚನೆಯವರೆಗೆ ಅವಕ್ಕೆಲ್ಲಾ ಸುಂದರವಾದ ಗೂಡನ್ನು ನಿರ್ಮಿಸಿ ಕಾಫಿಡಲಾಗಿತ್ತು! ತದನಂತರ ದಕ್ಷಿಣ ಭಾರತಕ್ಕೆ ದಾಳಿಯ ಸಮಯದಲ್ಲಿ ಅವನ್ನೆಲ್ಲಾ ಬೆಟ್ಟದ ಸನಿಹ ಹೂತಿಟ್ಟು ಕಾಫಿಟ್ಟರು. ದೇವರನ್ನೇ ಅಕ್ಷರಶಃ ಹೂತಿಟ್ಟರು! ಕಾಫಿಟ್ಟವರು ಅಲ್ಲಿ ಹೂತಿದ್ದೆ ಎಂಬುದನ್ನೇ ಮರೆತು ಬಿಟ್ಟರು. ಶತಮಾನಗಳ ಭವಣೆಯ ನಂತರ ಕಾಲ ಗರ್ಭದಲ್ಲಿ ಅವಿತ ಕೆಲ ತೀರ್ಥಂಕರರ ಮೂರ್ತಿಗಳನ್ನು ಹೊರತೆಗೆದು ಬಾಹುಬಲಿಯ ಮೂರ್ತಿಯ ಹಿಂಬಂದಿಯಲಿ ಜೋಡಿಸಲಾಯಿತು. ನಮ್ಮ ದುರಾದೃಷ್ಟವಶಾತ್ ಎಲ್ಲವೂ ಸಿಕ್ಕಿಲ್ಲ ಕೆಲವಷ್ಟೇ. ಇವನ್ನೆಲ್ಲಾ ನಮಗೆ ಅಚ್ಚು ಕಟ್ಟಾಗಿ ವಿವರಿಸಿದವರು ಹೊಷಾಯ್‌ ಕರುಣಾಕರ ಆಳ್ವ!! ಹೆಸರೇ ವಿಚಿತ್ರ ವಾಗಿದೆಯೆಲ್ಲ ಎಂದು ಆತನ ವಿಚಾರಿಸಿದಾಗ ಆತ ತನ್ನ ಕರುಣಾಜನಕ ಕತೆಯನ್ನು ಹೇಳಿದ.



***

“೧೮೯೫ನೆಯ ಇಸವಿ. ತನ್ನಜ್ಜ ಹಿಂದೂ ಧರ್ಮವ ತೊರೆದು ಕಾಲದ ಹೊಡೆತಕ್ಕೆ ಸಿಕ್ಕಿ ಮತಾಂತರಗೊಂಡ. ಅವನಿಗಾಗಲೇ ೮ ಮಕ್ಕಳು. ನನ್ನಪ್ಪನೂ ಕ್ರಿಶ್ಚಿಯನ್‌ ಆದ. ಆದರೆ ಅಪ್ಪನ ಹೆಸರು ಕರುಣಾಕರ ನನ್ನೊಂದಿಗೆ ಹಾಗೇ ಪಯಣಿಸಿತು. ನನ್ನ ಜೊತೆಗೂ ಅಂಟಿಕೊಂಡು ಬಂದಿತು! ಹೊಷಾಯ್‌ ಕರುಣಾಕರ ಆಳ್ವ ಆದೆ. ನನ್ನ ಅಜ್ಜನ ತಲ್ಲಣಗಳು  ಏನಿದ್ದವೋ? ಕಲಿತ ಧರ್ಮವನ್ನು ಬಿಟ್ಟು ಹೊಸತನಕ್ಕೆ ಒಗ್ಗಬೇಕಾದ ಅನಿವಾರ್ಯತೆ. ಯಾವ ಧರ್ಮವಾದರೇನು ಬಿಡಿ. ಬದುಕಲು ಧರ್ಮದ ಹಂಗೇಕೆ? ನನಗೆ ಮಕ್ಕಳಾಗುವವರೆಗೂ ಬದುಕು ನಿರಾಯಾಸವಾಗಿ ಸಾಗಿತ್ತು.  ಬದುಕು ಹೀಗೆ ಕಾಲನ ಹೊಡೆತಕ್ಕೆ ಸಿಕ್ಕು ಛಿದ್ರವಾಗುತ್ತದೆ ಎಂದು ನಾನೆಣಿಸಿಯೇ ಇರಲಿಲ್ಲ.”


ಕೇವಲ ಒಂದು ಧರ್ಮದವರ ಕತೆಗಳನ್ನಷ್ಟೇ ಅಲ್ಲದೆ ಒಂದು ಸಮಾಜದ ಪಲ್ಲಟಗಳನ್ನು, ಅಂದಿನ ದುರ್ದನ್ನು ಬಿಂಬಿಸುವ ಇಂತಹ ಸ್ಥಳ ಪುರಾಣಗಳು ಸೋಜಿಗವನ್ನು ಹಾಗೂ ಇಂದಿನ ಬದುಕಿಗೆ ಹೊಸ ನೋಟಗಳನ್ನು ಒದಗಿಸುತ್ತದೆ. ಇಲ್ಲಿನವರ ಮೇಲಾದ ಅನ್ಯರ ದಾಳಿಯ ವಿವರಗಳನ್ನೆಲ್ಲಾ ಈ ಅನಾಥ ಮೂರ್ತಿಗಳು ಮತ್ತು ಅವರ ಕ್ರೌರ್ಯವನ್ನು ಬಿಂಬಿಸುವುದರ ಜೊತೆ ಜೊತೆಗೆ ನಮ್ಮವರ ಕೈಲಾಗದಿರುವಿಕೆಯನ್ನೂ, ಎಲ್ಲದ್ದಕ್ಕೂ ಹೊಂದಿಕೊಂಡು ಹೋಗುವ, ಬಾಗುವ ನಮ್ಮವರ ಹೇಡಿತನದ ಅಸಲಿಯತ್ತನ್ನು ಅನಾವರಣಗೊಳಿಸುತ್ತಾ, ಹೊಸ ಹೊಳಹಗೆ ನಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಹೊಸ ಹೊಳಹು ಹುಟ್ಟದೇ ಹೋದರೆ ಬದುಕು ನಿಂತ ನೀರಾಗುತ್ತದಲ್ಲವೇ?

***

ಗೋಣು ಮುರಿದ ಹಕ್ಕಿ 

ಹೊಷಾಯ ಅರುಹಿದ ಕತೆ ಹೀಗಿತ್ತು, “ಒಂದು ದಿನ ವಿಪರೀತ ಬೆನ್ನಿನ ಸೆಳಕು ಪ್ರಾರಂಭವಾಯಿತು. ದಿನ ಕಳೆದಂತೆ ಹೆಚ್ಚುತ್ತಾ ಹೋಯಿತು. ನಿಲ್ಲಲು ನಡೆಯಲು ಕಷ್ಟ ಪಡಬೇಕಾದ ಸ್ಥಿತಿ ಬಂದೊದಗಿತು. ಎಲ್ಲಾ ವೈದ್ಯರು ನಿಮಗಿನ್ನು ನಡೆಯಲು ಸಾಧ್ಯವಾಗಲ್ಲ! ನಿಮ್ಮ ಕಾಯಿಲೆಗೆ ಮದ್ದಿಲ್ಲ. ಉಳಿದ ಬದುಕಿಡಿ ಹೀಗೇ ಕಳೆಯಬೇಕು. ಬೆನ್ನುಹುರಿಯ ನರವೊಂದು ಸಂಪೂರ್ಣವಾಗಿ ಇನ್ನೊಂದರ ಮೇಲೆ ಕೂತಿದೆ. ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚಲ್ಲಿದರು. ನಾನೂ ಕೈ ಚೆಲ್ಲಿದೆ. ಹಲವು ತಿಂಗಳು ಮಗನ, ಮಗಳ ಆಶ್ರಯದಲ್ಲಿ ಕಳೆದೆ.

ಕೊನೆಗೊಂದು ದಿನ ಗೊಮ್ಮಟ ಗಿರಿಯ ನೆತ್ತಿ ಹತ್ತುವ ನಿರ್ಧಾರ ಮಾಡಿದೆ.  ನೆಡೆಯಲು ನಿಲ್ಲಲೂ ಆಗದ ಸ್ಥಿಯಲ್ಲಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲೇರಿ ಮಗನ ಆಶ್ರಯದಲ್ಲಿ ಇಲ್ಲಿಗೆ ಬಂದೆ! ಮೊದಲ ಬಾರಿಯಂತೂ ವಿಪರೀತ ನೋವು ಪ್ರಾರಂಭವಾಯಿತು. ಮಲಗಿದ ಸ್ಥಿತಿಯಲ್ಲೇ ಹಿಮ್ಮರಳಿದೆ. ಹೀಗೆ ಮೇಲಿಂದ ಮೇಲೆ ಮೂರ್ನಾಲ್ಕು ಬಾರಿ ಬಂದ ನಂತರ ಸುಧಾರಣೆ ಕಾಣತೊಡಗಿತು. 




  ನಿಧಾನಕ್ಕೆ ನಾಲ್ಕಾರು ಬಾರಿ ಹತ್ತಿ ಇಳಿಯುತ್ತಾ ನನ್ನ ಕಾಲಿಗೆ ಬಲ ಬರಲು ಪ್ರಾರಂಭವಾಯಿತು! ನಿಧಾನವಾಗಿ ನನ್ನ ಕಾಲಿನ ಶಕ್ತಿ ಮರಳಿತು. ಮೊದಲಿನಂತಾದೆ. ಕೂಡಿಕೊಂಡ ನರಗಳೆರಡು ನೈಸರ್ಗಿಕ ವಿಧಾದಲ್ಲೇ ಬೇರ್ಪಟ್ಟವು! ವಾವ್‌ ಅದ್ಭುತ! ಬದುಕಿನ ಆಸೆ ಕಳಕೊಂಡ ನಾನು ಮತ್ತೆ ಬದುಕ ಜೀವಿಸ ತೊಡಗಿದೆ. ತಾನು  ಹೊಷಾಯ್ ಆದರೂ ಬಾಹುಬಲಿಯ ಸೇವೆಗೆ ನಿಂತೆ! ಬೆಳಿಗ್ಗೆ ಬೇಗ ಬಂದು ಬಾಗಿಲು ತೆಗೆಯುವುದು. ದೇವಾಲಯದ ವಠಾರದ ಸ್ವಚ್ಛತೆ. ಬಂದವರಿಗೆ ಮಾಹಿತಿ ನೀಡುವುದು. ಪೂಜೆಗೆ ಬರುವ ಪುರೋಹಿತರಿಗೆ ಸಹಾಯ ಮಾಡುತ್ತಾ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಈ ಬೆಟ್ಟದ ಬಾಹುಬಲಿ ತನ್ನ ಬದುಕು ಬದಲಿಸಿದ ಪರಿಗೆ ಬೆರಗಾಗಿದ್ದೇನೆ. ಉಸಿರಿರುವ ತನಕ ಇವನ ಸೇವೆ ಮಾಡುತ್ತಾ ಕಳೆಯಬೇಕೆಂದಿರುವೆ!” ಎನ್ನುತ್ತಾ ನನ್ನ ಜೊತೆಗೆ ಫೋಟೋಗೆ ಫೋಜುಕೊಟ್ಟರು. ಅವರ ಆತ್ಮೀಯತೆ ಮಾತಿನ ವೈಖರಿಗೆ ಬೆರಗಾದೆ.

ಒಂಚೂರು ಇತಿಹಾಸ



ಸುರುಳಿ ಕೂದಲು, ಬೊಗಸೆಕಣ್ಣು, ನೀಳಕೈಯ ೮೦ ಟನ್ ತೂಕ. ಈತನ ನೋಡಲು ಕಾತರನಾಗಿ ರಂಗನಾಥ ಕೆಫೆಯಲ್ಲಿ ಕಾಫಿ ಹೀರಿ ಹೊರಟಾಗ ಸಣ್ಣ ಜಿಟಿ ಜಿಟಿ ಜೀರಿಗೆ ಮಳೆ ನೆಲಕ್ಕೆ ಮುತ್ತಿಕ್ಕುತ್ತಿತ್ತು.

ಶ್ರವಣ ಬೆಳಗೊಳದ (೯೮೩) ಬಾಹುಬಲಿಯಿಂದ ಸ್ಫೂರ್ತಿ ಪಡೆದು ೧೪೩೨ ರಲ್ಲಿ ವೀರಪಾಂಡ್ಯ ಬೈರಸ ವಡೆಯರ್ ನಿರ್ಮಿಸಿದ ಬಹೃತ್‌ ಶಿಲ್ಪ. ಆತ ಸಂತಾರಾದ ರಾಜವಂಶದವ. ಏಕಶಿಲೆಯ ೪೨ ಅಡಿ ಬೃಹತ್ ಬಾಹುಬಲಿಯ ಮೂರ್ತಿಯನ್ನು ಅಚ್ಚುಕಟ್ಟಾಗಿ ಕೆತ್ತಿದವನು ಕಲ್ಕುಡಾ. ಮೂರ್ತಿಗೆ ಯಾವುದೇ ದಕ್ಕೆಯಾಗದಂತೆ ಕೆತ್ತಿ ಬೃಹತ್ ಪರ್ವತದ ಮೇಲೆ ತಂದು ನಿಲ್ಲಿಸಿದ್ದು, ಅಂದಿನ ಕಾಲದ ಇಂಜಿನಿಯರಿಂಗ್‌ ಜ್ಞಾನದ ದ್ಯೋತಕ. ೪೨ ಅಡಿಯ ಬಾಹುಬಲಿ ಎದುರಿಗೆ ಮಾನಸ್ತಂಭ ಮತ್ತು ಯಕ್ಷ. ಸನಿಹದಲ್ಲೇ ಬೃಹತ್‌ ಕೆರೆಯೊಂದಿದೆ.

***

ಇತಿಹಾಸಕ್ಕೊಂದು ಕರಿ ಚುಕ್ಕಿ



ಅಂದಿನ ರಾಜ ವೀರ ಪಾಂಡ್ಯ ಬೈರರಸ ಕಲ್ಕುಡಾ ಶಿಲ್ಪಿಯ ಕೈ ಮತ್ತು ಕಾಲು ಕಡಿದು ಹಾಕಿದ್ದು ಕೇಳಿ ನಾನು ನಿಸ್ತೇಜನಾದೆ!! ರಾಜ ಜೈನನಾಗಿದ್ದು ಇಂತಹ ಇನ್ನೊಂದು ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಕೈ ಕಡಿದಿದ್ದು ಅವಮಾನವೀಯ ಕೃತ್ಯ. ಕಲ್ಕುಡನ ನಿರಂತರ ತಲ್ಲಣಗಳು ಸದಾ ಕಾಡುತ್ತಲೇ ಇರುತ್ತದೆ. ಆತನ ಮನೆಯವರ ತಲ್ಲಣಗಳ ನೆನೆದು ಮನಸ್ಸು ಮರುಗಿತು. ಕಲ್ಕುಡನ ಪ್ರಕರಣ ನನ್ನೆದೆಯ ಕವಾಟಗಳನ್ನು ಕುಟುಕುತ್ತಲೇ ಇದೆ. ಆಡಳಿತದ ಹೆಬ್ಬಾಗಿಲಲಿ ಇವರ ಈ ಕೃತ್ಯ ಕ್ಷಮಾರ್ಹವಲ್ಲ. ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದೇ ಆತನ ಅಪರಾಧವೇ? ಎಂಬಿತ್ಯಾದಿ ಪ್ರಶ್ನೆಯ ಅಲೆ ತಾಕುತ್ತಲೇ ಇದೆ. 

ಇತಿಹಾಸದ ಮಗ್ಗುಲಿಗೆ ಮೆತ್ತಿದ ಹೊಸ ಕತೆಗಳಿಗೆ ಕಿವಿಯಾಗುವ ಆಸೆಯೊಂದಿಗೆ, ಮತ್ತೊಂದು ಅಚ್ಚರಿಗಾಗಿ ಕಾಯುತ್ತಾ ವಿರಾಗಿಗೆ ವಿಶಾದದ ಕೈ ಬೀಸಿದೆ!





Thursday, May 29, 2025

ಮಹಾ ಪಯಣದ ಹೆಜ್ಜೆ ಗುರುತುಗಳು

 


ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕೃತಿ.

 ತಮ್ಮ ನಾಲ್ಕು ಸಾವಿರ ಮೈಲುಗಳ ಭೀಕರ ನಡಿಗೆ ಮತ್ತು ಎದುರಾದ ಸಂಕಷ್ಟಗಳನ್ನು ನಮ್ಮ ಮುಂದೆ ಸರಳವಾಗಿ  ಹರವಿಟ್ಟಿದ್ದಾರೆ ತೇಜಸ್ವಿ. 

     ಬದುಕೇ ಒಂದು ಸ್ವಾತಂತ್ರ್ಯಕ್ಕಾಗಿ ಅನನ್ಯ ಹೋರಾಟ. ನದಿ ತೊರೆ ಬೆಟ್ಟಗಳನ್ನೆಲ್ಲ ಗೆಲ್ಲುತ್ತಾ ಸ್ಲೋವಿಯರ್ ಕೊನೆಗೆ ಭಾರತಕ್ಕೆ ಬಂದಿದ್ದೆ ಒಂದು ಮಹಾನ್ ಅಚ್ಚರಿ. ಹಿಮಾಲಯದ ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಲು ನಾವು ತಿಣುಕಾಡಬೇಕು. ಅಂತಹುದರಲ್ಲಿ ಯಾವುದೇ ಉಪಕರಣಗಳಿಲ್ಲದೆ ಕೇವಲ ಚರ್ಮದ ದಾರ ಸಣ್ಣ ವಯರ್ ಬಳಸಿ ಹಿಮಾಲಯವನ್ನು ದಾಟಿಕೊಂಡಿದ್ದು ಪ್ರಪಂಚದ ಮಹಾ ಪವಾಡ. 

 ನೀರಿಲ್ಲದೆ ಗೋಬಿ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವುದು  ಒಂದು ರೋಚಕ ಮಹಾಸಾಹಸ! ಮಹಾನರಕದ ಗೋಬಿ ಮರುಭೂಮಿಯನ್ನು ನೀರಿಲ್ಲದೆ ದಾಟಿದ್ದು ಒಂದು ವಿಶೇಷ ಅವರ ಮನೋ ಶಕ್ತಿ ಅಭೀಪ್ಸೆಗಳಿಗೆ ಸಾಕ್ಷಿ. ಹಾವು ತಿಂದು ಗೋಬಿ ಮರುಭೂಮಿಯಲ್ಲಿ ಬದುಕಿ ಉಳಿದದ್ದೊಂದು ಅಚ್ಚರಿ.

 ದಾರಿ ಉದ್ದಕ್ಕೂ ಸಿಕ್ಕ ಅನಾಗರಿಕರ ಆದೃ ಸಹಕಾರ. ಅವರ ಹೃದಯ ವೈಶಾಲ್ಯತೆ ನಾಗರಿಕರಲ್ಲೂ ಕಾಣಸಿಗದು ಪ್ರತಿಯೊಬ್ಬ ಅನಾಮಿಕನು ತಮಗೆ ಸಹಾಯ ಹಸ್ತ ಚಾಚುತ್ತಾ ಗಮ್ಯದೆಡೆಗೆ ಪಯಣಿಸುತ್ತಾ, ಈ ಪಯಣ ಹುಟ್ಟಿಸಿದ ಭರವಸೆ ಅಂತಿಂಥದ್ದಲ್ಲ. ಪ್ರತಿಯೊಂದುಕ್ಕೂ ಅನುಮಾನಿಸುವ ನಾಗರೀಕ ಪ್ರಪಂಚದಲ್ಲಿ ಗೊತ್ತಿಲ್ಲದೆಯೇ ಆದರಿಸುವ ಅನಾಗರಿಕ ಪ್ರಪಂಚವೆಲ್ಲಿ. ಯಾವುದಕ್ಕೆ ಯಾವುದು ಹೋಲಿಕೆ? ಮಾಡದ ತಪ್ಪಿಗೆ ಪರಿತಪಿಸುವಂತಹ ಶಿಕ್ಷೆ ನೀಡಿದ ನಾಗರಿಕ ಪ್ರಪಂಚ ಒಂದೆಡೆಯಾದರೆ ಕರೆದು ಆದರಿಸಿ ಸತ್ಕರಿಸುವ ಅಲೆಮಾರಿಗಳು. ತಕ್ಕಡಿಯ ಈ ಕಡೆಯೇ ಭಾರ. 

 ರಷ್ಯಾದಿಂದ ಭಾರತದವರೆಗೆ ಅಪರಿಚಿತ ಅನಾಗರಿಕರು ತೋರಿದ ಆಸ್ತೆ, ಪ್ರೀತಿ, ವಾತ್ಸಲ್ಯ ನಮ್ಮ ಕಣ್ಣನ್ನು ಹೊಳೆಯಾಗಿಸುತ್ತದೆ. ಗೋಬಿ ಮರುಭೂಮಿಯಲ್ಲಿ ಸಿಗುವ ಹಳ್ಳಿಗ, ಮಂಗೋಲಿಯ ದೇಶದಾಟಿದ ನಂತರ ಸಿಗುವ ಮುದುಕ, ಟಿಬೆಟ್ ಪ್ರಾರಂಭಕ್ಕಿಂತ ಮೊದಲು ಸಿಕ್ಕಿದ ಪುಟಾಣಿ ಹಳ್ಳಿಯ ಗ್ರಾಮಸ್ಥರ ಸತ್ಕಾರ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ.

 ಸೈಬೀರಿಯಾದ ಘೋರ ಚಳಿಯನ್ನು ಒಂದೇ ಒಂದು ಜೊತೆ ಬಟ್ಟೆಯಲ್ಲಿ ದಾಟಿದ್ದು , ಟಿಬೇಟ್ ಮತ್ತು ಹಿಮಾಲಯವನ್ನು  ಹತ್ತಿ ಇಳಿದಿದ್ದು, ಕೈಲಾಸ ಸರೋವರದ ಸನಿಹವೇ ಹಾದುಹೋಗಿದ್ದು, ನರಕ ಸದೃಶ ಗೋಬಿ ಮರುಭೂಮಿಯನ್ನು ದಾಟಿದ್ದು, ಎಂಟು ಅಡಿ ಎತ್ತರದ ಹಿಮ ಮಾನವನನ್ನು ನೋಡಿದ್ದು  ಈ ಪ್ರಯಾಣದ ಪ್ರಮುಖ ಹೆಜ್ಜೆ ಗುರುತುಗಳು.

 ಮನುಷ್ಯನ ಅಪಾರ ಮನೋಬಲ, ಸ್ವಾತಂತ್ರದೆಡೆಗಿನ  ತುಡಿತವನ್ನು ಎತ್ತಿ ಹಿಡಿಯುವ  ಅನನ್ಯ ಕೃತಿ.

 ಇಂತಹ ಮಹಾ ಪ್ರಯಾಣ ಮನುಕುಲದ ಹಾದಿಯಲ್ಲಿ ಹಿಂದೆಂದೂ ನಡೆದಿಲ್ಲ ಮುಂದೆ ನಡೆಯುವುದು ಇಲ್ಲ. ನಾಲ್ಕುವರೆ ತಿಂಗಳ ಅವಧಿಯಲ್ಲಿ ಸುಮಾರು 2000 ಮೈಲು ನಡೆದ ದಾಖಲೆ ಇಲ್ಲ!! ಒಟ್ಟು ನಡೆದ ಹಾದಿ ನಾಲ್ಕು ಸಾವಿರ ಮೈಲಿ!!


ಅಸಾಧ್ಯ ವಾದ ರೋಚಕ ಸಾಹಸದ ನೈಜಕತಾನಕ ಮಹಾಪಲಾಯನ.

ಏಕೆ ನೀವಿನ್ನು ಓದಿಲ್ಲ?

Saturday, July 27, 2024

ನಿಶ್ಚಲವಾದ ಊರುಗಳ ನಡುವೆ

 


ಯಾರೋ ಹರವಿದ ಕ್ಯಾನವಾಸ ಮೇಲೆ ಹದವಾಗಿ ಬಿಡಿಸಿಟ್ಟ ಊರು. ಚಿತ್ರಕಾರ ತನ್ನ ಕುಂಚದಿಂದ ರಚಿಸಿದಂತಹ ರಚನೆಗಳು. ಊರಿನ ಜನರಂತೆ ಇಲ್ಲಿನ ದೇವಾಲಯಗಳೂ ಅನಾಥರಂತೆ ಅಲ್ಲಲ್ಲಿ ಹರಡಿವೆ.


ಎಲ್ಲೋ ಕಳೆದು ಹೋದ ಹಿಂದಿನ ಶತಮಾನದ ಮಾನಸ ಪುತ್ರ ರತ್ನರಂತೆ, ಕಾಲದೊಂದಿಗೆ ಋಜುತ್ವ ಸಾಧಿಸಿದವರಂತೆ ಈ ಪುಟಾಣಿ ಹಳ್ಳಿಯಲ್ಲಿ ಬಂದಿಯಾದವರು ಶಾಪಗ್ರಸ್ಥ ಅಹಲ್ಯೆಯ ನೆನಪಾಗುವಂತೆ ಮಾಡುತ್ತಾರೆ. ಅವಳ ಚಂಚಲತೆಗೆ ಶಾಪ, ಇವರಿಗೆ ನಿಶ್ಚಲವಾಗಿರುವಂತಹ ಶಾಪ! ಎರಡೂ ಶಾಪವೇ. ಚಂಚಲತೆ ಮತ್ತು ನಿಶ್ಚಲತೆಯ ನಡುವಿನ ಗಡಿ ರೇಖೆಯೊಂದನ್ನು ಗುರುತಿಸಬೇಕಿದೆ.

ಇಲ್ಲಿನವರು ಎಲ್ಲೂ ಗಡಿಬಿಡಿ ಇಲ್ಲದೆ, ಯಾವುದಕ್ಕೂ ಹಪಹಪಿಸದೇ ಕಾಲ ದೇಶದ ಗಡಿ ಮೀರಿದವರಂತೆ, ಯಾರಿಗೋ ಕಾದು ಕುಳಿತವರಂತೆ ಭಾಸವಾಗುತ್ತಾ, ಕಿರು ವ್ಯಾಪಾರಕ್ಕೂ ಖುಷಿ ಪಡುತ್ತಾ ಇಟ್ಟಿಗೆ ಗೂಡಿನಂತಹ ಮನೆಗಳಲ್ಲಿ ವಾಸ ಮಾಡುತ್ತ ಬದುಕುತ್ತಿದ್ದಾರೆ. ಪೆನ್ನಾ ನದಿಯೂ ಯಾವುದೇ ಗಡಿ ಬಿಡಿ ಇಲ್ಲದೆ ಪ್ರಶಾಂತವಾಗಿ ಪ್ರವಹಿಸುತ್ತಾ ಇಲ್ಲಿನ ಬದುಕಿಗೆ ರೂಪಕವಾಗಿದೆ. ಮುಂದೆಲ್ಲೋ ಇದಕ್ಕೆ ಅಣೆಕಟ್ಟು ಕಟ್ಟಿದಂತೆ ನೀರು ನಿಂತಂತೆ ಹರಿಯುತ್ತಿದೆ.  




ಭಾರತದ ಎರಡನೇ ದೊಡ್ಡ ಕ್ಯಾನ್ಯಾನ್‌ ಎಂದು ಕರೆಯಿಸಿಕೊಳ್ಳುವ ಇಲ್ಲಿನ ನದಿ, ಅದರ ಹರಿವ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾಗದು. ಶಾಪ ಗ್ರಸ್ಥ ಕೋಟೆಯೊಳಗೆ ಮಾಧವ ಮತ್ತು ರಂಗಸ್ವಾಮಿ ದೇವಾಲಯವಿದೆ.  

 ಗಂಡೀಕೊಟ ಒಂದು ಕಾಲದ ಶ್ರೀಮಂತ ಬೀಡು, ಇಂದು ಬಡತನ ಮತ್ತು ಅವಜ್ಞೆಯ ಕತೆ ಹೇಳುತ್ತದೆ. ಹಿಂದೆ ಸರಿಯಲಾರದ ಮುಂದೆ ಹೋಗಲಾರದ ಒಂದಿಷ್ಟು ಮಂದಿ ಮಾತ್ರ ಉಳಿದಿದ್ದಾರೆ. ಅರ್ಥವೇ ಇಲ್ಲದ ಅನಾಥರು. ಯಾವ ರಾಮನ ಬರುವಿಕೆಗಾಗಿ ಕಾದಿರುವರೋ? ಒಂದಿಡಿ ಬದುಕು ರಾಮನ ಬರುವಿಕೆಗಾಗಿ ಕಾದಂತಿರುವ ನೂರಾರು ಶಬರಿಯರು. ಯಾರೋ ಅವರನ್ನು ಸ್ವಯಂ ಆಗಿ ನಿಯಂತ್ರಿಸುವಂತೆ ಪ್ರೊಗ್ರಾಂ ಮಾಡಿರುವರೋ ಎಂಬಂತಿದ್ದಾರೆ.  ಪೆನ್ನಾರನ ಗಾಢ ಹಸಿರಿನಂತಿರದೆ ಬದುಕು ಇವರದು ಕಡು ಕಷ್ಟ. ದಿನಕ್ಕೆರಡು ಬಸ್ಸು ಬಿಟ್ಟರೆ ಬೇರೆ ಸೌಲಭ್ಯಗಳಿಲ್ಲದೂರು. ಬಂದರೆ ಬಂತು  ಇಲ್ಲವಾದರೆ ಇಲ್ಲ. ಭಗ್ನಗೊಂಡ ಕೋಟೆ ಮತ್ತು ಊರು ಬಿಕೋ ಅನ್ನುತ್ತಿತ್ತು. ಭಗ್ನತೆಗೆ ತುಪ್ಪ ಸುರಿದಂತೆ ಆಕಾಶ ಬಿಕ್ಕ ತೊಡಗಿತು! ಹೊಟೆಲ್‌ ಹರಿತಾ ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ. ಇತಿಹಾಸದ ಪ್ರಜ್ಞೆ ಮತ್ತು ತೀವ್ರ ಅವಜ್ಞೆಗೆ ಮತ್ತೊಂದು ಹೆಸರೇ ಗಂಡೀಕೊಟ!!



ಕಲೆ, ಇತಿಹಾಸ ಮತ್ತು ಪ್ರಾಕೃತಿಕ ಅಚ್ಚರಿಗಳ ಸಂಮ್ಮಿಶ್ರಣದಂತಿರುವ ಕೋಟೆಯೂರು ಗಂಡಿಕೋಟ. ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂನಿಂದ ೮೦ ಕಿಲೋ ಮೀಟರ್. ಗಂಡಿಕೊಟವು ಆಂಧ್ರದ ಕಡಪಾ ಜಿಲ್ಲೆಯ ಕೊಟೆಯೂರು.

            ಚಿದ್ರಗೊಂಡ ಊರಿನಿಂದ ಭಗ್ನ ಮನಸ ಹೊತ್ತು ಹೊರಟು ನಿಂತಾಗ ಇಳಿ ಸಂಜೆ.

Sunday, August 20, 2023

ಕಾಯುವ ಸುಖ ಕಷ್ಟ....

                ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಸಿಕ್ಕಿ ಎಂದಿದ್ದ ಗೆಳೆಯ. ಮಾಡಲೇನೂ ಕೆಲಸವು ಇರಲಿಲ್ಲ ಹಾಗಾಗಿ ಕಾಫೀ ಹೀರಿ ಅಂಕಿತದ ಜಗುಲಿಗೆ ಬಂದು ಪುಸ್ತಕ ತಿರುವುತ್ತಾ ಕೂತೆ. ಗಂಟೆ ಹತ್ತಾದರೂ ಆಸಾಮಿ ನಾಪತ್ತೆ. ಕಾಯುವಿಕೆ ಮುಂದುವರಿದಿತ್ತು.



ಪ್ರೇಯಸಿಗಾಗಿ ಅವಳ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ ಕಾದವನಂತೆ ಪುಸ್ತಕದಂಚು ಸವರುತಲಿದ್ದೆ. ಸಿ. ಇ. ಟಿ ಬರೆದು ರಿಸಲ್ಟ್‌ ಗೆ ಕಾದ ಇಂಜಿನಿಯರಿಂಗ್‌ ವಿದ್ಯಾರ್ಥಿಯಂತೆ. ಮಿಸ್‌ ಯು ಹೇಳುವ ಅವಳ ತುಟಿ ಅಂಚಿನ ಮೋಹಕತೆ.




            ಪಕ್ಕನೆ ಸಿಕ್ಕಿದ್ದೆ ಮಾರ್ಕ್ವೇಜ್ನ ʼನೋಬಡಿ ರೈಟ್ಸ್‌ ಟು ಕರ್ನಲ್ʼ. ಪುಟ ತಿರುತಿರುಗಿಸುತ್ತಾ ಕುಳಿತೆ. ಮಾರ್ಕ್ವೇಜ್‌ ಕಾಯುವಿಕೆಯೊಂದನ್ನು ರೂಪಕದಂತೆ ಇಲ್ಲಿ ಬಳಸಿದ್ದಾನೆ, ಕರ್ನಲ್‌ ಬದುಕಿನ ಸಂಧ್ಯಾ ಕಾಲವಿಡಿ ಬಾರದ ಒಂದು ಪತ್ರಕ್ಕಾಗಿ ಕಾಯುತ್ತಾನೆ. ಅರ್ಥ ನಿರರ್ಥಕಗಳ ಪರಿವೇ ಇಲ್ಲದ ಅಸಾಮಾನ್ಯ ಕಾಯುವಿಕೆ ಆತನದು. ಕಾಯುವಿಕೆಯೇ ಸುಂದರ  ಕಾದು ಕಾದು ಸುಣ್ಣವಾದರೂ ಕತೆಗಳಲ್ಲಿ ನಿಜ ಜೀವನದ ಸಿಕ್ಕುಗಳಲ್ಲಿ ಸಿಕ್ಕಿ ನಮಗೂ ಸಿಕ್ಕಿ ಅಸಾಮಾನ್ಯವಾದುದೇನೋ ಒಂದನ್ನು ಹೊಳೆಯಿಸುತ್ತಾನೆ.



                ಹೀಗೆ ತೇಜಸ್ವಿಯ ತಬರನೂ ಅಂಥವರಲ್ಲೊಬ್ಬ. ತಬರ ಬಾರದ ಪೆನ್ಶನ್ಗಾಗಿ, ತಬರನಿಗೆ ಸಾಲಕೊಟ್ಟ ಅಂಗಡಿಯಾತ ಆತನಿಗೆ ಬರಬೇಕಾದ ದುಡ್ಡಿಗೆ, ಹೆಂಡತಿ ಔಷಧಿಗಾಗಿ ಅನವರತ ಕಾಯುತ್ತಿರುತ್ತಾಳೆ. ನಾನು ಗೆಳೆಯನಿಗೆ, ಅಂಗಡಿಯಾತ ಈತ ಪುಸ್ತಕ ಕೊಳ್ಳಲಿ, ಬೋಣಿಯಾಗಲಿ ಎಂದು ಕಾಯುತ್ತಿರುತ್ತಾನೆ.

ಇನಿಯ ಅವಳ ಮೋಹಕ ನೋಟಕ್ಕೆ. ಜಗತ್ತೇ ಕಾಯುವವರ ಸಂತೆಯಂತೆ ಕಾಣಿಸುತ್ತದೆ. ಈ ಜಗದಲ್ಲಿ ಕಾಯದೇ ಇರುವವರು ಯಾರು? ಕಾಯುವಿಕೆ ಅನವರತ. 
ಹುಟ್ಟಿದವ ಸಾವಿಗೆ. ಸ್ಪರ್ಧಿ ರಿಸಲ್ಟ್‌ಗೆ ಮತದಾರ ಮತ ಎಣಿಕೆಯ ರೋಚಕತೆಗೆ. ಗುಮಾಸ್ತ ಪ್ರಮೋಷನ್‌ಗೆ.
ಕೋರ್ಟನ ವಿಚಾರಣೆಗೆ ಕಾಯುವ ಅನಸೂಯಳಂತೆ ನಾವೆಲ್ಲಾ ಯಾವುದೋ ಫಲಿತಕ್ಕಾಗಿ ಕಾಯುತ್ತಿರುತ್ತೇವೆ.
        ನೈದಿಲೆಯು ಸೂರ್ಯನಿಗೆ, ಚಕೋರಿಯು ಚಂದ್ರನಿಗೆ ಕಾದಂತೆ. ಇಲ್ಲಿ ಎಲ್ಲರೂ ಕಾಯುವವರೇ.       


 

ಕಾಯುವ ಸುಖಕಷ್ಟ ಕುರಿತು ಚಂದದ ಲೇಖನ ಈ ಕೃತಿಯಲ್ಲಿ ಉಂಟು. 

    ಕಾಯುವುದರಲ್ಲೂ ಕಾಯಕ್ಕೆ ಸುಖವುಂಟು. ಅದಮ್ಯವಾದ ಪ್ರೀತಿಯುಂಟು. ಕಾಯ ಕಾಯಬೇಕು. ಅಹಲ್ಯ ಮತ್ತು ಶಬರಿ ರಾಮನಿಗಾಗಿ ಕಾಯುವಿಕೆಗೆ ಕೊನೆಯುಂಟೆ? ಅಂದ ಹಾಗೆ ನೀವು ಯಾವುದಕ್ಕೆ ಕಾಯುತ್ತಿರುವಿರಿ.


ಶ್ರೀಧರ್‌ ಎಸ್. ಸಿದ್ದಾಪುರ.

Sunday, July 16, 2023

ಪ್ಯಾಪಿಲೋ ಬುದ್ಧನ ಹುಡುಕಾಟದಲ್ಲಿ ಸಿಕ್ಕ ಅಪ್ಸರೆ..

    ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.(Irfu Waterfall, Coorg)


   ಇವನೇನು ಹೇಳುವನೆಂದು ಹುಬ್ಬೇರಿಸಬೇಡಿ ಕೆಲವೊಮ್ಮೆಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುವುದು. 




ಆಗ ನನ್ನ ಬಳಿ ಪುಟಗೋಸಿ ಸುಣ್ಣದ ಡಬ್ಬಿಯಂತಹ ಚಿಕ್ಕ ಕ್ಯಾಮರವೊಂದಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ. ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು.  ಆಗ ನನ್ನ ಕಣ್ಣಿಗೆ ಬಿದ್ದವ ಪ್ಯಾಪಿಲೋ ಬುದ್ದ ಎಂಬ ಸುಂದರ ಚಿಟ್ಟೆ.  ಅದರ ಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಅದರ  ಸುಮನೋಹರ ಸೌಂದರ್ಯವೇ ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಸಮ್ಮೋಹಿತರಾಗೋದು ಗ್ಯಾರೆಂಟಿ. ಈ ಚಿಟ್ಟೆಯ ಅಂದವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.  




 ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್‌ ಒಬ್ಬರು ಇರ್ಫು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದಿದ್ದ. ತಡ ಮಾಡದೇ ಕಾರೊಂದನ್ನು ಬುಕ್‌ ಮಾಡಿ ಹೊರಟೆವು!

ಕುಟ್ಟಂನಲ್ಲಿ ಕಟ್ಟಂ ಚಾ ಕುಡಿದು

ವಿಚಿತ್ರವಾದ ದ್ರಾವಣದಲ್ಲಿ ಅದ್ದಿ ತೆಗೆದಂತಹ ಕುಟ್ಟಂನ ಪರಿಸರ. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ವಿಚಿತ್ರವಾದ ಸೆಳೆತದಿಂದ ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟ ಹಳ್ಳಿಯ ಬೆಚ್ಚಗಿನ ಸ್ವಾಗತ. ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್‌ ಬಹಳ ಫೇಮಸ್.

         ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ ಚಾಯ. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. ಕುಟ್ಟಂನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ, ಚಹಾ ಕಾಫೀ ತೋಟದ ಕೂಲಿಗಳು ಸಾಕಷ್ಟು. ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹ ಹೀರುತಲಿದ್ದರು. ನಾವೂ ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್ಸರ್ಗೂ ಗಿಡಮೂಲಿಕೆ ಔಷಧ ನೀಡಿ ಗುಣಪಡಿಸುವವರು ಇಲ್ಲಿದ್ದಾರೆಂದು ಬೆಂಗಳೂರಿನ ಗೆಳೆಯನೊಬ್ಬ ಯಾವಾಗಲೂ ಹೇಳುತ್ತಿದ್ದ. ಹಾಗೇ ಅವರನ್ನೂ ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು. 




ಲಾಮಾ ನಾಡಿನ ಲಕ್ಷ್ಮಣ  ತೀರ್ಥದೆಡೆಗೆ…


         ಲಾಮಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ ಈ ತಾಣ ಎಷ್ಟೊಂದು ರಮಣೀಯ ಅಂತೀರಾ. ಬನ್ನಿ ಹೇಗಿದೆ ನೋಡೋಣವೇ?

         ಜಲಧಾರೆಯ ಬಲಕ್ಕೆ ಕೇರಳವಿದ್ದರೆ ಎಡಕ್ಕೆ ನಾಗರಹೊಳೆ ಅಭಯಾರಣ್ಯವಿದೆ. ಅದೇ ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್‌ ಇರುವಾಗಲೇ ಇದು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

         ಇದನ್ನು ನೋಡಲು ಕೇರಳದ ತುದಿಯ ತಲುಪಬೇಕು. ಮಂಜು ತುಂಬಿದ ಗಿರಿಗಳಿಂದ ಜಡೆ ಬಿಟ್ಟಂತೆ ಧುಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನ ಮಣಿ.

ಸುತ್ತೆಲ್ಲಾ ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಕೆನ್ನೆಗೆ ಮುತ್ತಿಕ್ಕಲು ಬರುವ ಪ್ಯಾಪಿಲೋ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ. ದರ್ಶನ ಪಡೆದರಂತೂ ಅದರ ಮೋಹಕತೆಗೆ ಬೆರಗಾಗದೇ ಇರಲಾರಿರಿ.


ಮೆಟ್ಟಿಲೇರಿ ಮುಗಿಲಿಗೆ ಕೈಯ ಚಾಚಿ…


ಇಲ್ಲಿ ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಿದಂತೆ ಮಂಜು ನಿಮ್ಮನ್ನು ಆವರಿಸುತ್ತದೆ. ಕಿವಿಯೊಳಗೆಲ್ಲಾ ಹಾದು ಕಚಗುಳಿ ಇಡುತ್ತದೆ.

ಜಲಪಾತದ ಹಾದಿಯೇ ಎಷ್ಟೊಂದು ರೋಚಕ. ಹೂ ಬಳ್ಳಿಗಳು, ಶೃಂಗಾರಕ್ಕಿಟ್ಟಂತೆ ಕಾಣುವ ದಪ್ಪ ದಪ್ಪ ಬಿಳಲುಗಳು. ಜಲಪಾತದ ಸನಿಹದೊರೆಗೆ ಮೆಟ್ಟಿಲುಗಳ ಸಖ್ಯ ಬೆಳೆಸಿದ ದಪ್ಪ ದಪ್ಪ ಮರಗಳು.

ಕಾವೇರಿಯ ಉಪನದಿಯಾಗಿ ಮುಂದೆ ಹರಿಯುವ ಗಂಡು ನದಿ ಲಕ್ಷ್ಮಣ ತೀರ್ಥ. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು ಕುಲಗೆಡಿಸಿದ್ದಾರೆ. ಹುಣಸೂರಿನಲ್ಲೊಮ್ಮೆ ನೋಡಿದ್ದೆ ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೇ ನೆಮ್ಮದಿ ಇಲ್ಲವೇನೋ ನಮ್ಮ ಜನಕ್ಕೆ.

ಪುಟಾಣಿ ಮೆಟ್ಟಿಲ ಏರಿ ಪುಷ್ಪ ಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪ ಪಕಳೆ ಹಾಸಿದಂತ ದಾದಿಯ ಹೊಕ್ಕು ಬರಬೇಕು. ನೀವು ಎಂದೂ ಮರೆಯಲಾರಿರಿ ಇರ್ಫು ಎಂಬ ಚಕೋರಿಯ.

ತರುಲತೆಗಳ ಜೊತೆಗೆ ಹಾದು ಬಂಡೆಯಿಂದ ಬಂಡೆಗೆ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!

ಇರ್ಫು ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಅಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ಕೆಳ ತುದಿಯಲ್ಲಿರುವುದರಿಂದ ತಲುಪುವುದೇ ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡಿ ದಿನ ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತಾರೆ. ಹಲವರು ಇಲ್ಲಿ ಬಂದು ಜೀವಜಾಲದ ಅಧ್ಯಯನ ಮಾಡುತ್ತಾರೆ. 



ಸಿಕ್ಕನೇ ಬುದ್ಧ:-

ಹಲವು ಪ್ಯಾಪಿಲೊ ಬುದ್ಧದ ಜೊತೆ ಜೊತೆಗೆ ಅನೇಕ ಮನಮೋಹಕ ಚಿಟ್ಟೆಗಳು ಅಲ್ಲಲ್ಲಿ ಕಾಣ ಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು.

ಸಿಕ್ಕೀತೆ ಮುಂದಿನ ದಾರಿ:-

    ನಾಳೆಗಾಗಿ ನಮ್ಮನ್ನುಳಿಸಿ ಎಂಬ  ಲಕ್ಷ್ಮಣ ತೀರ್ಥದ ಆರ್ತ ನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ. ಲಕ್ಷ್ಮಣ ತೀರ್ಥವೆಂಬ ವಿಶಿಷ್ಟ ನದಿಯು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ?




Saturday, July 8, 2023

ನಿಲ್ದಾಣವಲ್ಲದ ನಿಲ್ದಾಣದಲ್ಲಿ…

 

ಪಶ್ಚಿಮ ಘಟ್ಟದ ಸೆರಗ ಹಿಡಿದು ಅದರ ತೊಡೆಯ ಮೇಲೆ ಮಲಗಿದ ರಮ್ಯ ರೈಲು ನಿಲ್ದಾಣ! ಕಾವಲಿಗೆ ನಿಂತ ಬೆಟ್ಟ ಸಾಲು. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಸಾಗುವ ನೋಟ ಎಂತಹ ಜಡ ಭರತರನ್ನೂ ಕವಿಯಾಗಿಸಬಲ್ಲದು! ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟವಾದ ಮತ್ತೊಂದು ರೈಲು ನಿಲ್ದಾಣವಿರಲಿಕ್ಕಿಲ್ಲ. ಯಡಕುಮರಿ. ಎಂತಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿ ಅಥವಾ ಯಡಕುವೇರಿ ಎಂಬ ಹೆಸರು ಕೇಳಿರದ ಚಾರಣಿಗ ಇಲ್ಲವೇನೋ.


ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಬೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುಮರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್‌ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್‌ ಒಂದು ಇದೆ ಎಂಬುದೇ  ಒಂತರಾ ವಿಚಿತ್ರವಲ್ಲವೇ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ ೮ ಕಿ. ಮೀಟರ್‌ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಯಡಕುಮರಿ.


            ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂರ್ಣ ಹಸಿರು ಚಾದರ ಹೊದ್ದ ಬೆಟ್ಟ ಗುಡ್ಡಗಳು. ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾಯನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತ್ತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ.‌ ಕೇಳುವವರೇ ಇಲ್ಲದ ಕ್ಯಾರೆ ಎನ್ನದ ದಿವ್ಯ ಮೌನ. ಮಾತಿಗೆ ಮೌನ ಸ್ವೆಟರಿನ ಮುಚ್ಚಿಗೆ. ಜೀರುಂಡೆಗಳ ಸಮೂಹಗಾಯನ. ಇನಿಯಳೊಂದಿಗೆ ಮುದ್ದು ಮಾಡುತ್ತಾ ಕೂರಬಹುದಾದ ಜಾಗ. 



ಇಲ್ಲಿನ ರೈಲ್ವೆ ಮಾಸ್ತರರನ್ನು ಮಾತಾಡಿಸಿದೆ. ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ!

            ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್‌ ಮಾಸ್ಟ್ರುಗಳಿಗೆ ಬಹಳ ಕಷ್ಟ! ವಿದ್ಯುತ್‌ ಬೇರೆ ಇಲ್ಲ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾರ್ಟುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿರ್ಮಿಸಿದ ಒಂದೆರಡು ಸಣ್ಣ ಮನೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ!


    ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ.  ಆದರೂ ಒಂದು ನಿಲ್ದಾಣ!! ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿದಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಇಳಿದರೆ ಇಲ್ಲಿನ ಏಕಾಂತದಲ್ಲಿ ಬಂಧಿ. ಹಲವು ವರ್ಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಈ ಚಾರಣ ಸಂಪೂರ್ಣ ನಿಶೇಧಿಸಲಾಗಿದೆ. ಈಗಿಲ್ಲಿ  ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್‌ ಕೇಸ್‌ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಸಕಲೇಶಪುರದ ಸನಿಹದಲ್ಲಿರುವ ಮೌನವೇ ಹೊದ್ದು ಮಲಗಿದ ಇಲ್ಲಿಗೆ ಒಮ್ಮೆಯಾದರೂ ಹೋಗಿ ನೀರವ ಏಕಾಂತವನ್ನು ತಬ್ಬಿ ಮಲಗಬೇಕು. ನೀವು ಬರುವಿರಾ?



Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

Wednesday, March 22, 2023

ಯಾತನೆಗಳಿಗೆ ಕೊಟ್ಟ ಶಬ್ದ ರೂಪ

ಹಕೂನ ಮಟಾಟ

ಒಂದು ಬೇವಾರಸಿ ಟಿಪ್ಪಣಿ….

ನೇರ ರೇಖೆಯನ್ನೇ ವಕ್ರ ಸೊಟ್ಟಗೆ ಎಂದಾಡಿ ಕೊಳ್ಳುವಾಗ ಇಂತಹ ಕತಾ ಸಂಕಲನಕ್ಕೆ ಲೇವಡಿ ಹಚ್ಚಿ ಬಿಡುವುದಿಲ್ಲವೇ? ತಂತ್ರಜ್ಞಾನ ಯುಗದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೂ ಬೇಕಾದರೂ ನೇತು ಹಾಕಿಕೊಂಡು ಸುಖಿಸಬಹುದಿಲ್ಲಿ. ಅಂಕೆ ಶಂಕೆ ಇಲ್ಲದಿರೆ ಪದಗಳ ಆಮಶಂಕೆ! ನೀನೂ ಮಾಡಿರುವುದೂ ಅದೇ ಎಂದು ಹಳಿಯಬೇಡಿ.

ಅರಿಕೆಯೊ, ಸ್ವಗತಗಳೊ, ತುಮುಲಗಳ ಸಂತೆಯನ್ನು ತಡವಿ ಬಂದ ಅನುಭವ. ಪಟ್ಟದ್ದು ಪಾಡೋ, ಸುಖವೋ ಎಂದು ಹೇಳಲು ಏಕಮಾನವಿಲ್ಲ ಇಲ್ಲಿ. ನಮ್ಮ ಉದ್ದಗಲಕ್ಕೆ ಸರಿಯಾಗಿ. ಮೂಗುತಿ ಭಾರದಿಂದೋ ಅಥವಾ ಮೂಗೇ ಸೊಟ್ಟಗೋ  ನೀವೇ ನೋಡಿ ನಿರ್ಧರಿಸಬೇಕಷ್ಟೆ. 

ಕತೆಯೋ, ಪ್ರಬಂಧವೋ? ಕತೆಯಂತಹ ಪ್ರಬಂಧಗಳಾ? ಸ್ವಗತಗಳ ಸಂತೆಯಾ? ತನ್ನ ಬದುಕಿನ ತುಣುಕುಗಳಾ ತಲೆ ಬಾಲ ಕತ್ತರಿಸಿದ ವೃಕ್ಷ ಕಾಂಡದಂತೆ ಕಂಡರೂ ಭಿನ್ನ ಅಗೋಚರ ಧನಿಯಾಗಿ ನಿರಂತರವಾಗಿ ಕಾಡದೇ ಇರದು. 

ಹೊಸ ಹೊಸದಾದ ರೂಪಕಗಳು ಆಸ್ವಾದಿಸುವವರ ನಾಲಗೆಯ ರುಚಿ ಮೊಗ್ಗುಗಳನ್ನು ಕೆಣಕದೇ ಇರದು. ʼನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆʼ, ʼಕಸಿವಿಸಿ ತೊಟ್ಟಿಕ್ಕಿತ್ತುʼ. ʼನಾಲಗೆಯಲ್ಲೇನೋ ಬೇವಾರಸಿ ತೊಡರುʼ, ʼಕತ್ತಲು ಜಿಟಿಪಿಟಿಸುತ್ತಿತ್ತು!ʼ, ʼಎಲೆಯ ವಂದರಿಯಲಿ ಬಿಸಿಲಿನ ಜರಡಿʼ, ʼಸೈಕ್ಲೋನ್‌ ಸುರಿತʼ, ರೇಜಿಗೆಯ ಜಿಟಿ ಪಿಟಿ, ರೇಜಿಗೆಯ ಹಗಲು, “ನನ್ನದೋ ಬೇವಾರಸಿಯ ಚರ್ಯೆ”, ʼತಹ ತಹ ವಿರಹವಲ್ಲʼ, ʼಊಟಕ್ಕೆ ಕುಳಿತಾಗ ಮಾತು ಹೆಕ್ಕಿದ್ದಳು!ʼ, ʼನೆನಪಿಗೆಂದೂ ತೇಗುವುದಿಲ್ಲʼ, ʼನೆಳಲು ಚೆಲ್ಲುತ್ತಾಳೆʼ, ʼರಾಡಿ ಮುಕ್ಕಳಿಸಿದ ರೋಡುʼ, ʼನಗು ಗುಟುರಿದ್ದʼ, ʼಬೀದಿಯ ಕಾಮಾಲೆ ಮಂಪರಿನಲ್ಲಿ.ʼ, ʼಜಿಗುಟು ಹಗಲುʼ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲವು ತಾರಲೋಕದಿಂದ ಎಳೆದು ತಂದವು! ಖಂಡಿತ ನಮ್ಮ ಲೋಕದ್ದಲ್ಲವೇ ಅಲ್ಲ.


ಒಂದು ಬೇವಾರಸಿ ಟಿಪ್ಪಣಿಗಳು ಕತೆಯಿಂದ....


ಅಕ್ಷ್ಯೋಭ್ಯ ಕಡಿದಾಳನ್ನು ಕಟ್ಟಿಕೊಂಡು ಅವಳು ಹೆಣಗುವ ರೀತಿಗೆ ಅವಳ ಅನನ್ಯ ಪ್ರೀತಿಗೆ ಬೆರಗುಗೊಂಡಿದ್ದೇನೆ. ತಾನು ಮೂರನೆಯವಳು ಎಂಬ ಅರಿವಿದ್ದೂ ಅವನ ಮಾತಿಗೆ ಕಟ್ಟುವ ಕಲೆಗೆ ಮರುಳಾದವಳು ಅವಳು! ಅವನ ಆರ್ಕಿಟೆಕ್‌ ಕೈಗಳಿಗೆ ಸೋತವಳು. ಕೊನೆಯವರೆಗೂ ಸೋಲುತ್ತಾ ಬುದುಕುವಳು. ಮಗನನ್ನು ಆರ್ಕಿಟೆಕ್‌ ಆಗಿಯೇ ರೂಪಿಸುವಳು. ಸಣ್ಣ ಸಮಾರಂಭವೊಂದರಲ್ಲಿ ಅವಳು ತನ್ನ ಸವತಿಯನ್ನು ಎದುರಿಸುವ ಪರಿ ಅನನ್ಯವಾಗಿಸಿದ್ದಾರೆ ಕತೆಗಾರ.  ಅವಳ ತುಮುಲಗಳ ಜೊತೆಗೆ ಹೋಗಿ ಇದ್ದು ಬಂದಿದ್ದೇನೆ. ಅವಳ ಕಣ್ಣೀರಿಗೆ ಜೊತೆಯಾಗಿದ್ದೇನೆ. ಅವನ ಜೊತೆಗಿನ ಬಂಧವನು ಅತ್ಯಂತ ನಾಜೂಕಾಗಿ ಪೋಣಿಸಿಕೊಟ್ಟಿದ್ದಾರೆ. ವಾರಸುಗಳಿಲ್ಲದ ಗೆರೆಗಳು…. ಎಲ್ಲೂ ಹೇಳಲಾಗದ ಸಂಕಟಗಳ ಕಡತ. ಕೊನೆಗೂ ಪ್ರಶಸ್ತಿ ಪಡೆಯುವಾಗಲೂ ಹೇಳಲಾಗದೇ ಮಗ ಮತ್ತು ಅಮ್ಮನ ತೊಳಲಾಟಗಳು. ಎಷ್ಟು ನೋವುಗಳನ್ನು ಹಿಡಿದಿಡಬಹುದೋ ಅಷ್ಟನ್ನು  ಹಿಡಿದಿಟ್ಟ ಪರಿ ಅನನ್ಯ.



         

ಬದುಕಿನ ಉತ್ಸವಗಳಲ್ಲಿ ಅವನಿಲ್ಲದ ಖಾಲಿತನ, ಸಾಂಗತ್ಯವಿಲ್ಲದ ವಿರಹದ ದಿನಗಳ ಮರೆವಣಿಗೆ. ಸಾವಿನಲ್ಲೂ ಸಿಗದ ನೆಮ್ಮದಿ. ಒಂದು ಬೇವಾರಸಿ ಸಾವು. ದುಃಖದ ದಂಡೆಯಲಿ ಅವನ ನೆನಪಿನ ಮೆರವಣಿಗೆ. ಹೊಯ್ದಾಟಗಳು. ಯಾವುದು ನಿಚ್ಚಳವಾಗದಂತಹ ಸಂದಿಗ್ಧತೆ. ಯಾವುದೇ ಚೌಕಟ್ಟಿಗೆ ಸಿಗದ ಯಾತನೆಗಳ ಸಂತೆ. ತಂದೆ ಅನಿಸಿಕೊಂಡವನ ಹಸಿ ಬಿಸಿ ನೆನಪುಗಳು ನಮ್ಮನ್ನೂ ಕಲುಕುತ್ತವೆ. ಸಿಗದ ದುಃಖ ಕಾಡುತ್ತದೆ. ನಮ್ಮನ್ನೂ ಹೆಪ್ಪುಗಟ್ಟಿಸಿ ಅಳಿಸುತ್ತವೆ. ಒಳಗೊಳಗೇ ಅಳುತ್ತೇನೆ. 

         ಗುಟುಕು ಪ್ರೀತಿಗೆ ಕಾತರಿಸಿ ಕಾಯುವ ಕಷ್ಟಗಳ ಸಂಕೋಲೆ. ಅದಮ್ಯ ಜೀವನೋತ್ಸಾಹದಲ್ಲಿ ಅನಾಮಿಕವಾಗಿ ಉಳಿವ ತಂದೆಯ ಹೆಸರು ಮತ್ತು ಅವರ ಸಂಬಂಧಗಳು. ತುಮುಲಗಳ ಕಂತೆಯನ್ನು ಆರ್ಕಿಟೆಕ್ಚರ್‌ನ ಮೂಸೆಯಲ್ಲಿಟ್ಟು ನೋಡುವುದು ಸಹ ಕತಾ ಪ್ರಪಂಚಕ್ಕೆ ಹೊಸ ಕಿಂಡಿ. ಎಂದೂ ದಕ್ಕದ ತಂದೆ. ಕತೆ ಹೇಳದ ಏನನ್ನೂ ತಂದು ಕೊಡದ ತಂದೆ! ರಸಿಕೆಯಾಗಿ ಸೋರುವ ಸಣ್ಣ ಹುಣ್ಣಿನಂತೆ ತಂದೆಯ ನೆನಪು. ಒಂದು ಮಾಯದ ಗಾಯ.

ಕತೆ ತೆರೆದಿಡುವ ಟಿಸಿಲುಗಳು ನೂರಾರು. ಭಾವ ಸ್ಪರ್ಶಕ್ಕೆ ದಕ್ಕದ ಬರಡು ಬದುಕು. ಇಂತಹ ನೂರಾರು ಟಿಸಿಲುಗಳಿಂದ ತೊಟ್ಟಿಕ್ಕುತ್ತಿದೆ ನೋವಿನ ನೂರಾರು ಕತೆಗಳು. ನೂರಾರು ಭಾವ ಪ್ರಪಂಚದ ಸಾವಿರ ಬಿಂದುಗಳು. ಪ್ರತಿ ಬಿಂದುವಿನ ಕತೆಯೂ ಭಿನ್ನ. ಇಂತಹ ಒಂದು ಟಿಸಿಲಿನಲ್ಲದರೂ ಬಂದು ಕುಳಿತು ಕತೆ ಕೇಳಿ ಹೋಗಿ.

-----

ಹುತ್ತಗಟ್ಟದೇ ಇಂತಹ ಪ್ರಯತ್ನ ಸಾಧ್ಯವಿಲ್ಲ. ಎಲ್ಲರಂತಲ್ಲದ ಹೊಸ ಕಥಾ ಪ್ರಪಂಚಕ್ಕೆ ಪಾದವಿಟ್ಟ ಅನುಭವ. 


ವಸ್ತಾರೆ ಕತೆಗಳಾಲಿ ಕವಿತೆಗಳಾಗಲಿ ಸುಲಭಕ್ಕೆ ದಕ್ಕಲಾರವು. ಪ್ರಯತ್ನ ಪಟ್ಟು ದಕ್ಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಕೈಯ ಸಂಧಿಯಲಿ ಜಾರಿ ಹೋಗುವವು. ಸುಲಭಕ್ಕೆ ಗ್ರಹಿಸಲು ಸಾಧ್ಯವಾಗದು ಎಂದು ವಾಚಿಕೆಯ ಪ್ರಾರಂಭದಲ್ಲೇ ಶಾಂತಾ ಮಣಿ ಹೇಳಿದ್ದಾಳೆ ಜಾಗೃತೆ! 

ಹಾಗಾಗಿ ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ. ದಕ್ಕುವುದು ದಕ್ಕಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಬದುಕೆಂದರೆ ಮುಕ್ತಾಯವಾಗದ ಕೊನೆ ಮೊದಲಿಲ್ಲದ ಹುಡುಕಾಟ. ಎಂಬುದನು ಸದಾ ನೆನಪಿಸುತ್ತಾ ಕರಣಗಳಲಿ ಮತ್ತೆ ಮತ್ತೆ ಕೇಳುತಿದೆ “ನಿಂತಲ್ಲೇ ನಾನು ಹೆಪ್ಪಿ ಬಿಟ್ಟೆ” ಎಂಬ ಪದಪುಂಜ. ನಿಮ್ಮ ಓದಿಗೆ ದಕ್ಕಿದರೆ ತಿಳಿಸಿ. 

ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ ದಕ್ಕುವುದು ದಕ್ಕಿಸಿಕೊಳ್ಳುವುದೂ ನಿಮ್ಮ ಕೈಯಲ್ಲೆ ಇದೆ ಎನ್ನುತ್ತಾ ಈ ಮೋಟು ಲೇಖನಕ್ಕೆ ಪೂರ್ಣ ವಿರಾಮ. ಮತ್ತೆ ಸಿಗೋಣ.

ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...