Saturday, August 29, 2026

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ



ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭಾಗಿಸಿ ನಾವು ಆಯ್ಕೆ ಮಾಡಿದ್ದು ಶಿರಸಿಯ ಬೆಣ್ಣೆ ಮತ್ತು ವಿಭೂತಿ ಜಲಧಾರೆ. ಶನಿವಾರ ಸಂಜೆ ಜೋಳಿಗೆ ತುಂಬಾ ಬಟ್ಟೆ ತುಂಬಿಕೊಂಡು ಲಟಾರಿ ಹಿಡಿದ ಕ್ಯಾಮರಕೊಂದಿಷ್ಟು ರೀಲು ತುಂಬಿ ಕರ್ಮವೀರ ಹಿಡಿದು ಹೊರಟೆವು.

ಕುಂದಾಪುರದಿಂದ ಕುಮುಟಾವರೆಗೆ ರೈಲು. ಆನಂತರ ಕುಮುಟಾದಿಂದ ಶಿರಸಿಯವರೆಗೆ ಬಸ್ಸು ಪ್ರಯಾಣ. ಇವೆಲ್ಲ ಮುಗಿದು ಶಿರಸಿ ತಲುಪಿದಾಗ ರಾತ್ರಿ 11. ರೈಲಿನಲ್ಲಿ ಸಿಕ್ಕ ಯಲ್ಲಾಪುರದ ದಂಪತಿಗಳು ನಮ್ಮನ್ನು ಇನ್ನಿಲ್ಲದಂತೆ ಯಲ್ಲಾಪುರಕ್ಕೆ ಬನ್ನಿ ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ನಿಮ್ಮ ಮನೆಗೆ ಬಂದೇ ಬರುತ್ತೇವೆ ಎಂದು ಹೇಳಿ ತಪ್ಪಿಸಿಕೊಂಡೆವು. ಬಂಡಿ ಬಕಾಸುರನಾದ ನನಗೆ ಅಂದು ರಾತ್ರಿ ಉಪವಾಸ ಕೆಡವಿತ್ತು ಶಿರಸಿ. ಮಧುವನ ಹೋಟೆಲಿನ ದಿಂಬಿಗೊರಗಿದಾಗ ರಾತ್ರಿ 11.30. ನಿದ್ದೆ ಹತ್ತುದಾದರೂ ಹೇಗೆ? ದಿಂಬಿನೊಡನೆ ಮಾತಿಗಿಳಿದು ರಾತ್ರಿ ಕಳೆದೆ. ಗೆಳೆಯನ ಕುಂಭಕರ್ಣ ಗೊರಕೆ ಕಿವಿ ತುಂಬುತ್ತಲೇ ಇತ್ತು. 

ಹೊಟ್ಟೆ ಚುರುಗುಟ್ಟುತ್ತಲೇ ಇತ್ತು. ಬೆಳಗಾಗುತ್ತಲೇ ಹೋಟೆಲ್ ಸಾಮ್ರಾಟಕ್ಕೆ ದೌಡಾಯಿಸಿದೆ. ಹೋಟೆಲ್ ಸಾಮ್ರಾಟನ ವಿಶೇಷ ರುಚಿಯ ಉಪ್ಪಿಟ್ಟು ಜೊತೆಗೊಂದಿಷ್ಟು ಸೇವು, ಅದರೊಂದಿಗೆ ಲಗ್ನ ಮಾಡಿಕೊಂಡ ಫಿಲ್ಟರ್ ಕಾಫಿ ಹೊಟ್ಟೆ ಸೇರಿದಾಗ ನಮ್ಮ ಚೇತನವೂ ಎಚ್ಚೆತ್ತಿತು.





ಹೊಸ ಕರ್ಮವೀರ ಸಂಚಿಕೆಯ ಹಾಳೆ ಹಿಡಿದು ಹೊರಟವನಿಗೆ ಜಲಪಾತದ ಜಿಪಿಎಸ್ ಕಳೆದಿತ್ತು. ಶಿರಸಿಯಲ್ಲಿ ಸಿಕ್ಕಿದ ಚಂದ್ರಶೇಖರ್ ಎಂಬುವವರ ಜೀಪು ಬಾಡಿಗೆಗೆ ಪಡೆದೆವು . ಎರಡು ಜಲಪಾತಗಳನ್ನು ತೋರಿಸಲು ಆತ ಬರೋಬ್ಬರಿ 2400 ಕ್ಕೆ ಒಪ್ಪಿಕೊಂಡಿದ್ದ! ಹೊರಗೆ ತಣ್ಣನೆಯ ಗಾಳಿಯ ಬಿರುಮಳೆಯ ಶೃಂಗಾರ. ನಾವು ಹೊರಹೋಗದಂತೆ ಪ್ರತಿಬಂಧ. ಶಿರಸಿಯಲ್ಲೋ ಅಂದು ದಾರಿ ಕಾಣದಷ್ಟು ಮಳೆ. ಅಂದು ಶಿರಸಿಯಲ್ಲೇ ಉಳಿದು ಸಂಜೆ ವಾಪಸು ಹೊರಡಬೇಕಾಗುತ್ತದೆ ಎಂದು ಅಂದುಕೊಂಡೆವು. ಆದರೂ ಸಾಹಸ ಮಾಡೋಣವೆಂದು ಜೀಪ್ ಹತ್ತಿದೆವು. ವಾರದಿಂದ ರಚ್ಚೆ ಹಿಡಿದ ಮಳೆಗೇ ಬೇಸರ ಬಂದು ಬೆಳಿಗ್ಗೆ ಹತ್ತರ ಸುಮಾರಿಗೆ ಕೊಂಚ ಬಿಡುವು. ಮೈ ಮನ ಒದ್ದೆ ಮಾಡಿಕೊಂಡು 20 ನಿಮಿಷಗಳ ನಡಿಗೆ ಪೂರೈಸಿ ನೂರಾರು ಇಂಬಳಗಳ ಸ್ವಾಗತದ ನಡುವೆ ವಿಭೂತಿಯಲ್ಲಿ ಮಿಂದು ಹೊರಟೆವು. ಮುಂದಿನ ಕಥೆ ಬಲು ರೋಚಕ.    

ಇಲ್ಲಿಂದ ನಮ್ಮ ಬಂಡಿ ಮಂಜುಗುಣಿಯ ವೆಂಕಟರಮಣ ದೇವಾಲಯಕ್ಕೆ ಅಡಿ ಇಟ್ಟಿತು. ನಾವಿಲ್ಲಿಗೆ ಕಾಲಿಟ್ಟಾಗ ಮುತ್ತುದುರಿದಂತೆ ಹನಿ ಮಳೆಯ ಶೃಂಗಾರ. ಊರ ಪ್ರವೇಶ ದ್ವಾರದಲ್ಲಿ ಹತ್ತಾರು ಮಕ್ಕಳು ಮೈ ಒದ್ದೆ ಮಾಡಿಕೊಂಡು ಕಬಡ್ಡಿ ಆಟದಲ್ಲಿ ನಿರತರಾಗಿದ್ದರು. ಅವರನ್ನು ನೋಡಿ ನಾವು ಬಾಲ್ಯಕ್ಕೆ ಮರಳಿದೆವು. ಕಳೆದು ಹೋಗಬಾರದಿತ್ತು ನಮ್ಮ ಬಾಲ್ಯ ಎಂದುಕೊಂಡೆವು. ಇನ್ನೂ ನೋಡುತ್ತಲಿದ್ದರೆ ಮಂಜುಗುಣಿಯ ಮಜ್ಜಿಗೆ ಊಟವೂ ಮಿಸ್ ಆಗುತ್ತದೆ ಎಂದು ಡ್ರೈವರ್ ಹೊರಡಿಸಿದ. ದೇವಾಲಯಕ್ಕೆ ಸುಮ್ಮನೆ ಸುತ್ತು ಬಂದು ಗಂಧ ಹಚ್ಚಿ ನಾಲ್ಕೈದು ದಿನ ಊಟ ಮಾಡದವರಂತೆ ಊಟದ ಮನೆಗೆ ಹೋಗಲು ಗೆಳೆಯ ಗಡಿಬಿಡಿ ಮಾಡಿದ.



  ಬಲು ರುಚಿಯಾದ ತಂಬಳಿಯೂಟ ಒಂದು ನಮ್ಮ ಉದರವನು ಸೇರಿತು. ಸೇಡು ತೀರಿಸಿಕೊಳ್ಳುವವನಂತೆ, ಎರಡೆರಡು ಬಾರಿ ತಂಬಳಿ ಹಾಕಿಸಿ ಕೊಂಡು ಉಂಡ ಗೆಳೆಯ. ಜೊತೆಗೆ ಜೀರಿಗೆ ಮೆಣಸು ಬೆರೆಸಿದ ಹದವಾದ ಮಜ್ಜಿಗೆ ಮೋರಿದ. ನಾನು ಮೂರು ಮೂರು ಬಾರಿ ತಂಬಳಿ ಕೇಳಿ ಹಾಕಿಸಿಕೊಂಡು ಉಂಡಾಡಿ ಗುಂಡರಂತೆ ನಾಚಿಕೆ ಬಿಟ್ಟು ಉಂಡು ದೇವಾಲಯ ದರ್ಶನ ಮಾಡಿ ಸುತ್ತಲಿನ ಪರಿಸರ ಆಸ್ವಾದಿಸಿದೆವು. “ಇಷ್ಟು ಉಂಡರೆ ನಮ್ಮ ಗತಿ ಏನು?” ನಾ ಕೇಳಿದೆ ಮಿತ್ರ ನಾಗರಾಜನಲ್ಲಿ. ಶುಕ್ರಾಚಾರ್ಯರು ಎಂದಂತೆ “ವಾತಾಪಿ ಜೀರ್ಣೋಭವ” ಎಂದು ಉಂಡಾದ ಮೇಲೆ ಹೊಟ್ಟೆ ಮೇಲೆ ಕೈಯಿಟ್ಟು ಹೇಳು. ತಿಂದದ್ದೆಲ್ಲಾ ಕ್ಷಣ ಮಾತ್ರದಲ್ಲಿ ಜೀರ್ಣ! ಎಂದು ಕಣ್ಣು ಮಿಟುಕಿಸಿದ. ನಕ್ಕು ಹಗುರಾದೆವು.



ಮಂಜುಗಣಿ ಅಜ್ಞಾತವಾಗಿ ಕಾಡೊಳಗೆ ಅವಿತ ಸುಂದರ ದೇವಾಲಯ. ಇದರ ಇತಿಹಾಸ 10 ನೆಯ ಶತಮಾನದ ಬಾಗಿಲವರೆಗೆ ಕೊಂಡೊಯ್ಯುತ್ತದೆ. ಜೊತೆಗೆ ಚಕ್ರತೀರ್ಥವೆಂಬ ಚಂದದ ಪುಷ್ಕರಣಿ. ಪುಷ್ಕರಣಿಯ ವಿಹಂಗಮತೆಯಲ್ಲಿ ಮಿಂದೆದ್ದೆವು. 10 ಶತಮಾನಗಳ ಉದ್ದಕ್ಕೂ ಜನರನ್ನು ಕಂಡ ದೇವಾಲಯ. ಜನಜೀವನ, ಜಗಳ, ಜಾತ್ರೆ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದೆ. 10 ಶತಮಾನಗಳ ಅಂಚನ್ನು ಸವರಿ ಬಂದಿದೆ! ನೂರಾರು ತಾಪತ್ರಯಗಳನ್ನು ಎದುರಿಸಿದೆ. ಪಶ್ಚಿಮ ಘಟ್ಟಗಳ ನಟ್ಟ ನಡುವೆ ನೆಲೆಸಿರುವುದೊಂದು ವಿಶೇಷ. ಈ ದೇವಾಲಯಕ್ಕೆ ಕಾಡು ಒಂದು ವಿಕ್ಷಿಪ್ತತೆಯನ್ನು ಒದಗಿಸಿದೆ. ಒಂದು ಕಡೆ ಯಾಣ ಇನ್ನೊಂದು ಕಡೆ ವಿಭೂತಿ ಎಂಬ ಎರಡು ವಿಭಿನ್ನ ಸ್ಥಳಗಳು. ಇದೇ ದಾರಿಯುವುದಕ್ಕೂ ಹಬ್ಬಿದ ನೂರಾರು ಜಲಧಾರೆಗಳು. ಇದೇ ದಾರಿಯೊಳಗೆಲ್ಲೊ ಶಿವಾನಂದ ಕಳವೆಯವರ ಮಧ್ಯಗಟ್ಟ ಕಾನಿನ ಕಾದಂಬರಿಯು ನಡೆದ ಊರು ಸಿಗುತ್ತದೆ. ಈ ದಾರಿಯುದ್ದಕ್ಕೂ ನೆನಪುಗಳ ಮೆರವಣಿಗೆ.



ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಲ ದೇವರಾಗಿದೆ. ದೇವಾಲಯದ ವಿಶಾಲ ಬೀದಿಗಳು ಹಾಗೂ ಬೃಹತ್ ಮರದ ರಥ ದೇವಾಲಯದ ಹಿರಿತನವನ್ನು ಸಾರುತ್ತದೆ. ಸಂಪೂರ್ಣ ಶಿಲಾಮಯವಾದ ದೇವಾಲಯವಾಗಿದ್ದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. 14 ರಿಂದ 16ನೆಯ ಶತಮಾನದ ನಡುವೆ ವಿಜಯನಗರ ಅರಸರು ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರೆಂದು ತಿಳಿದು ಬಂದಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಇಲ್ಲಿನ ದೇವಾಲಯಗಳನ್ನೂ ಪೊರೆದ ದೊರೆ ವಿಜಯನಗರ ಅರಸರು. ಕಾಡೊಳಗಿನ ದೇವಾಲಯಕ್ಕೂ ದಾನದತ್ತಿಗಳನ್ನು ದೊರಕಿಸಿಕೊಟ್ಟವರು. 

ವಿಶಿಷ್ಟ ದೇವಾಲಯ

ಇಲ್ಲಿನ ವಿಶಿಷ್ಟ ವೆಂಕಟರಮಣ ಮೂರ್ತಿಯು ಕೈಯಲ್ಲಿ ಬಿಲ್ಲು ಬಾಣ ಶಂಖ ಚಕ್ರವನ್ನು ಹಿಡಿದಿದ್ದಾನೆ. ಸಾಮಾನ್ಯ ಮೂರ್ತಿಗಳಿಗಿಂತ ಇದು ವಿಭಿನ್ನವಾಗಿದೆ. ಸಾಮಾನ್ಯವಾಗಿ ವೆಂಕಟರಮಣ ಮೂರ್ತಿಯ ಕೈಯಲ್ಲಿ ಕಮಲ ವಿರುತ್ತದೆ ಆದರೆ ಇಲ್ಲಿನ ಬಿಲ್ಲು ಬಾಣಧಾರಿಯಾಗಿ ತನ್ನ ಭಕ್ತರ ರಕ್ಷಣೆಗೆ ನಿಂತಿದ್ದಾನೆ. ವೆಂಕಟರಮಣ ಮೂರ್ತಿಯು ಸ್ವಲ್ಪವೇ ಸ್ವಲ್ಪ ತಿರುಗಿದಂತೆ ಶಿಲ್ಪಿಯು ರಚಿಸಿದ್ದಾನೆ. ವೆಂಕಟರಮಣನ ಜೊತೆಗೆ ಆತನ ಕಾಲ ಬುಡದಲ್ಲಿ ಪದ್ಮಾವತಿಯು ನೆಲೆಸಿದ್ದಾಳೆ. ಮಾರ್ಚ್ ತಿಂಗಳ ಚೈತ್ರ ಪೂರ್ಣಿಮೆಯೆಂದು ಇಲ್ಲಿ ರಥೋತ್ಸವ ಜರಗುತ್ತದೆ. ದೇವಾಲಯದ ಗರ್ಭಗೃಹದ ಹೊರ ಭಾಗದ ಮಂಟಪದಲ್ಲಿರುವ ಕಂಬಗಳ ಕೆತ್ತನೆ ಅದ್ಭುತವಾಗಿದೆ. ದೇವಾಲಯದ ರಚನೆ ಸ್ವಲ್ಪ ಮಟ್ಟಿಗೆ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿ ದೇವಾಲಯವನ್ನು ಹೋಲುತ್ತದೆ. ದೇವಾಲಯದ ಹೊರ ಮಂಟಪದಲ್ಲೂ ಅಂದದ ಕೆತ್ತನೆಗಳಿವೆ. ದೇವಾಲಯದೊಳಗೆ ನೀರು ನುಗ್ಗದಂತೆ ಮೇಲ್ಚಾವಣಿ ಮತ್ತು ಅದಕ್ಕೆ ಅನುಸರಿಸುವ ಮಂಟಪವನ್ನು ರಚಿಸಲಾಗಿದೆ. ಹದಿನಾರನೆಯ ಶತಮಾನದಲ್ಲಿ ರಚನೆಯಾದ ವಾದಿರಾಜ ತೀರ್ಥರ ʼತೀರ್ಥ ಪ್ರಬಂಧದಲ್ಲಿʼ ಈ ದೇವಾಲಯದ ಉಲ್ಲೇಖಗಳನ್ನು ವಿವರಿಸಿದ್ದಾರೆ! 

ಸುಂದರ ದೇವಾಲಯದ ಸುತ್ತ ಸಿಮೆಂಟ್ ಕಟ್ಟಡಗಳನ್ನು ಕಟ್ಟಿ ಇದರ ಮೂಲ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಆ ಮೂಲಕ ಜನರು ಸೌಂದರ್ಯೋಪಾಸಕತೆಯನ್ನು, ರಸಾಸ್ವಾದತೆಯನ್ನು ಕಳೆದುಕೊಂಡಿದ್ದೇವೆಂದು ಸಾಬೀತುಪಡಿಸಿದ್ದಾರೆ. ಉದರ ಉಬ್ಬಿಸಿಕೊಂಡು ಇಲ್ಲಿಂದ ಹೊರಟಿದ್ದು ಬೆಣ್ಣೆ ಜಲಧಾರೆ ಎಡೆಗೆ.

ಬೆಣ್ಣೆ ಎಂಬ ಬೆಡಗಿ



ಜೀರುಂಡೆ ಗಾಯನ ಕೇಳುತ್ತಾ ಜಿಗಣೆಗಳನ್ನು ಕಚ್ಚಿಸಿಕೊಂಡು ಒಂದೆರಡು ಕಿಲೋ ಮೀಟರ್‌ ನಡೆದು ಬೆಣ್ಣೆ ಜಲಪಾತದ ಬುಡದವರೆಗೆ ಹೋಗಿ ಸಿಡಿಯುವ ನೀರ ಹನಿಗೆ ಮುಖ ಮಜ್ಜನ ಮಾಡಿಸಿಕೊಂಡಾಗಲೇ ನೆಮ್ಮದಿ. ದಾರಿಯುದ್ದಕ್ಕೂ ಹನಿ ಮಳೆಯ ಮಾಲ್‌ಕೌಂಸ್‌ ರಾಗ. ಜೀರುಂಡೆಗಳ ಹಿಮ್ಮೇಳ. ಸದಾ ಬೆಣ್ಣೆಯಂತೆ ಧುಮ್ಮಿಕ್ಕುವ ಜಲೌಗವನ್ನು ಕಾಡ ನಡುವೆ ನೋಡುವ ಆನಂದವೇ ಬೇರೆ. ಹೊನ್ನೆ ಸುರಗಿ ಮುಂತಾದ ಕಾಡು ವೃಕ್ಷಗಳ ನಡುವೆ ನೆಮ್ಮದಿಯಿಂದ ಧಮ್ಮಿಕ್ಕುವ ಈ ಜಲ ಧಾರೆಯು ಕಲ್ಲು ಪೊಟರೆ ನಡುವೆ ಜಾಗ ಮಾಡಿಕೊಂಡು ಉದುರುವ ಸಣ್ಣ ಬ್ರೆಡ್ನ ಪುಡಿಗಳಂತೆ ಭಾಸವಾಗುತ್ತದೆ. ನೋಡಿದಷ್ಟು ತಣಿಯದ ನೀರ ರೇಖೆಗಳು. ಪ್ರತಿಕ್ಷಣವೂ ನೂರಾರು ಹನಿಗಳು ಎಲ್ಲೆಲ್ಲಿಂದಲೋ ಓಡಿ ಬಂದು ಮೈ ಮುಖವನ್ನೆಲ್ಲ ತಬ್ಬಿಕೊಳ್ಳುವ ಜಾದುಗಾರನಂತೆ. ಜಲಪಾತದ ಸನಿಹದಲ್ಲೊಂದು ಸಣ್ಣ ಮರವೊಂದು ಛತ್ರಿಯಂತೆ ಹರಡಿ ಜಲಧಾರೆಯನ್ನು ಸದಾ ಕಾಯುತ್ತಿರುತ್ತದೆ. ಕೇವಲ ಕಲ್ಲುಗಳ ನಡುವೆ ಅತಿ ಕಡಿಮೆ ಮಣ್ಣಿನಲ್ಲಿ ಬದುಕುಳಿವ ಕಾಲನ ಕೈವಾಡಕ್ಕೆ ನನ್ನದೊಂದು ಅಚ್ಚರಿ. ಈ ಮರದ ಅಪೂರ್ವ ಆಕರ್ಷಣೆ ಕೊನೆ ಮೊದಲಿಲ್ಲದಂತೆ ನನ್ನನ್ನು ಸೆಳೆದಿದೆ. ಮುಖ್ಯ ಜಲಧಾರೆಗೆ ಬಂದು ಸೇರುವ ಹಲವಾರು ಪುಟಾಣಿ ಹಳ್ಳಗಳು. ಎಲ್ಲವೂ ಒಂದಾಗಿ ಕೊನೆಗೆ ಶಾಲ್ಮಲೆಯ ಒಡಲನ್ನು ಸೇರಿಕೊಳ್ಳುತ್ತವೆ. ತವರು ತೊರೆದ ಶಾಲ್ಮಲೆ ಶರಾವತಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದರಲ್ಲೂ ಸುಖವಿದೆ ಎಂದು ಸದಾ ಸಾರುತ್ತಲೇ ನಮಗೊಂದು ಹೊಸ ಪಾಠ ಅರಹುತ್ತಾಳೆ. ಇಲ್ಲಿಂದಲೇ ಇವಳ ಹೊಸ ಪ್ರಯಾಣದ ಆರಂಭ. ಇವಳ ಸಂಘಕ್ಕೆ ಬಿದ್ದ ಹತ್ತಾರು ಹಳ್ಳಿಗಳು, ಅಲ್ಲಿನ ಕೃಷಿಕರು ನೆಮ್ಮದಿಯ ಬದುಕು ಕಾಣುತ್ತಾರೆ. ಜಲಪಾತ ಮತ್ತು ಜೀರುಂಡೆ ನಿಮ್ಮ ಕರಣಗಳನ್ನು ತುಂಬುತ್ತದೆ..... ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ. ಧ್ಯಾನಸ್ಥರಾದಾಗಲೇ ನಿಮ್ಮ ಅಂತರಂಗಕ್ಕೊಂದು ಹೊಸ ಹೊಳಹು ಉತ್ಸಾಹ.


ಬೆಣ್ಣೆ ಜಲಧಾರೆಯ ದಾರಿಯಲ್ಲಿ ಮಿಸಳ್‌ ಬಾಜಿ!



ಅಲ್ಲಿಂದ ಮೇಲಕೆ ಹತ್ತಿ ಬಂದಾಗ ಬಲ್‌ ನನ್ನ ಮಗನ ಹೊಟ್ಟೆ ಚುರು ಚುರು ಎಂದಿತ್ತು! ನಮ್‌ ಜೀಪ್‌ ಡ್ರೈವರ್‌ಗೂ ನಮ್‌ ಹೊಟ್ಟೆ ಬಾಕತನ ಇಷ್ಟವಾಗಿರಬೇಕು. ಮೋಸ್ಟಲಿ ಅವನೂ ಹೊಟ್ಟೆಬಾಕನಿರಬೇಕು. ಅವನ ಮುಂದೆ ಪ್ರಸ್ತಾಪಿಸಿದ್ದೇ ಟಣ್‌ ಎಂದು ʼಅವರ್‌ ನೆಕ್ಸ್ಟ್‌ ಡೆಸ್ಟಿನೇಶನ್‌ ಈಸ್‌ ಶ್ಯಾನುಭೋಗರ ಕ್ಯಾಂಟಿನ್‌ʼ ಎಂದು ಬಿಡೋದೆ. ನನಗೆ ಒಳಗೊಳಗೆ ಖುಷಿಯಾದರೂ ಸ್ವಲ್ಪ ನಾಚಿಕೆಯಾಯಿತು. ನಾಲಿಗೆಯ ಜೊಲ್ಲು ಸಲೀಸಾಗಿ ಹೊರ ಬಂದಿತ್ತು. “ಥೂ ನಾಯಿ ಬುದ್ದೀದೆ” ಎಂದು ಬೈದುಕೊಂಡು ನಾಲಿಗೆಯ ಸುಮ್ಮನಿರಿಸಿದೆ. ಆದರೂ ಕೇಳಬೇಕಲ್ಲ. ಕ್ಯಾಂಟಿನ್‌ ಬಂದೊಡನೆ ನಿಲ್ಲಿಸೋಣವೇ ಎಂದು ಕೇಳಿದ ಚಾಲಕ. “ಹಂ” ಅಂದ್ದಿದ್ದೇ ನಿಲ್ಲಿಸಿಬಿಡೋದೆ!


ಕ್ಯಾಂಟಿನ್‌ನಲ್ಲಿ ಹಾಜರಿ ಹಾಕಿಯಾಗಿತ್ತು. ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್‌ ಮಿಸಳ್‌ ಬಾಜಿ ಹಾಗೂ ಎರಡು ಕಪ್‌ ಕಾಫೀಗೆ ಆಹ್ವಾನವಿಟ್ಟೆವು. ಜಲಧಾರೆಯ ಹನಿಗಳಿಗೆ ನೆನೆದು ಹೋಗಿದ್ದೆವು. ಮನಸ್ಸು ಕಾಫಿ ಬೇಡುತ್ತಿತ್ತು. ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್.‌ ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ, ಅದರ ಮೋಡಿಗೆ ನನ್ನ ನಾಲಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು. ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು.

ಇನ್ನೊಂದು ಪ್ಲೇಟ್‌ ಹೇಳೋಣವೆಂದುಕೊಂಡರೆ ಓರೆ ನೋಟದಲ್ಲೇ ಚಾಲಕ ನಮ್ಮನ್ನೇ ತಿನ್ನುವಂತೆ ನೋಡುತ್ತಿದ್ದಾನೆ. ಜೊತೆಗೆ ಮೀಸೆ ಕೆಳಗಿನ ಕಿರು ನಗೆ ಬೇರೆ. ಇನ್ನೊಮ್ಮೆ ಮಿಸಳ್‌ ಬಾಜಿ ತಿನ್ನಲೆಂದೇ ಇಲ್ಲಿಗೆ ಬರಬೇಕೆಂದು ಮಾತಾಡಿಕೊಂಡೆವು. ಚಾಲಕ ನಗುತಲಿದ್ದ. ಅನೇಕ ಕಡೆ ಈ ತಿಂಡಿಯನ್ನು ನಾ ಸವಿದಿದ್ದೆ ಆದರೆ ಇಷ್ಟು ರುಚಿಕಟ್ಟಾದ ಮಿಸಳ್‌ಬಾಜಿ ಮತ್ತೆಲ್ಲೂ ನನಗೆ ತಿಂದ ನೆನಪಿಲ್ಲ. ಮೊದಲ ಮಾತಿನಂತೆ ಮೊದಲ ತುತ್ತು ಅತಿ ವಿಶಿಷ್ಟವಾಗಿ ನನ್ನ ಸ್ಮೃತಿ ಪಟಲದಲ್ಲಿ ಉಳಿದಿತ್ತು.  

ಮಿಸಳ್‌ ಬಾಜಿಯ ಆಧ್ಯಾತ್ಮ

ಇದು ಯಾವುದೇ ಹೋಲಿಕೆಗೂ ಸಿಗದ ಇದು ವಿಶಿಷ್ಟ ತಿಂಡಿ ಮಿಸಾಳ್ ಎಂದರೆ ಮಿಕ್ಷರ್ ಬಾಜಿ ಎಂದರೆ ವಿಶಿಷ್ಟ ಸಾಂಬಾರು. ಮಸಾಲೆ ಮೆತ್ತಿದ ಅವಲಕ್ಕಿಗೆ ಖಾರಾ ಶೇವು, ಕಡಲೆ ಜೊತೆಗೆ ಬಾಜಿ. ಸ್ವಲ್ಪವೇ ಸ್ವಲ್ಪ ಈರುಳ್ಳಿ ಬೆರೆಸಿ ತಯಾರಿಸುವ ವಿಶೇಷ ಖಾದ್ಯ. ಬಾಯಿಗಿಟ್ಟ ಮರುಕ್ಷಣವೇ ನಿಮ್ಮಲ್ಲಾ ಇಹದ ಬಂದನ ಕಳಚಿ ಹೊಸ ಲೋಕಕ್ಕೆ ಒಯ್ಯುವ ಅಮೃತರುಚಿ. ಒಮ್ಮೆ ತಿಂದ ಮೇಲಂತೂ ಮತ್ತೆ ಮತ್ತೆ ಮೆಲ್ಲಬೇಕೆಂಬ ಮನಸ್ಸು. ಇನ್ನೊಮ್ಮೆ ನಮ್ಮ ಉಡುಪಿ ಗಜಾನನ ಬಸ್ಸಿನ ಗ್ಯಾರೇಜಿನ ಬಳಿಯ ಸಣ್ಣ ಕ್ಯಾಂಟೀನ್‌ನಲ್ಲಿ ತಿಂದಿದ್ದೆ ಬಲು ರುಚಿಯಾಗಿತ್ತು.


  ಮಹಾರಾಷ್ಟ್ರದಲ್ಲೆಲ್ಲೋ ಪ್ರಾರಂಭವಾಗಿ ಉತ್ತರಕನ್ನಡಕ್ಕೆ ಚಿತ್ಪಾವನದೊಂದಿಗೆ ವಲಸೆ ಬಂದ ತಿಂಡಿಯೊಂದು ಉತ್ತರ ಕನ್ನಡದಾದ್ಯಂತ ಹರಡಿ ತನ್ನ ಘಮವನ್ನು ಹರಡುತಲಿದೆ. ಅಲ್ಲಿ ಮಿಸಾಳ್ ಪಾವ್ ಆಗಿರುವುದು ಹೊನ್ನಾವರ, ಅಂಕೋಲ, ಕುಮಟಾ ಬರುತ್ತಲೆ ತನ್ನ `ಪಾವ್' ಎಂಬ ಅಂಗಿ ಕಳಚಿ `ಬಾಜಿ' ತೊಟ್ಟು ನಿಲ್ಲುತ್ತದೆ. ಈರುಳ್ಳಿ ಸೇವ್, ಟೊಮ್ಯಾಟೋ ಸೇರಿ ನಮ್ಮ ರುಚಿ ಮೊಗ್ಗ ಅರಳಿಸುತ್ತವೆ. ನಮ್ಮನ್ನೂ ಸದಾ ಸೋಲಿಸುತಲಿದೆ. ರಾಗಿ ಹೊಸಳ್ಳಿಯ ಭಟ್ಟರ ಹೋಟೆಲ್, ಗುಣವಂತೆಯ ಭಟ್ಟರ ಹೋಟೆಲು, ಶಿರಾಲಿಯ ಭಟ್ಟರ ಹೋಟೆಲುಗಳಲ್ಲಿ ಸಿಗುವ ಇಂತಹ ಅಂಥೆಟಿಕ್ ಅಡ್ಡಾಗಳ ತಿಂಡಿಗಳು ನಮ್ಮ ಜಿಹ್ವೆಯನ್ನು ಸದಾ ರುಚಿಯ ಹರಿತ ಕತ್ತರಿಯಾಗಿಸುತ್ತಲೇ ಇದೆ.


ಹೇಗೆ ಮಾಡ್ತಾರೆ ಕೇಳಿದಿರಾ?

ಅವಲಕ್ಕಿಗೆ ಒಂದಿಷ್ಟು ವಿಶೇಷ ಮಸಾಲೆ ಹಾಕಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ಖಾರಾಸೇವು, ಶಂಕರ ಪೋಳೆ ಸೇರಿಸಿ ಜೊತೆಗೆ ವಿಶಿಷ್ಟ ರುಚಿಯ ಸಾಂಬಾರು ನೀಡುತ್ತಾರೆ. “ಮೂಲತಃ ಇದೊಂದು ಮಹರಾಷ್ಟ್ರದ ಕಡೆಯ ತಿಂಡಿ” ಎಂದು ನನ್ನ ಪ್ರೀತಿಯ ತಿರುಗಾಲ ತಿಪ್ಪ ಗೆಳೆಯ ನಾಗರಾಜನೆಂದ. ನನಗೆ ಯಾವ ಫರಕ್ಕೂ ಕಾಣಲಿಲ್ಲ. ಇದರ ವಿಶಿಷ್ಟ ರುಚಿಗೆ ಮನಸೋತೆ.

 ಹಾಂ ಈ ಕ್ಯಾಂಟಿನ್‌ ಇರುವುದು ಶಿರಸಿ ಕುಮುಟಾ ನಡುವಿನ ರಾಗಿ ಹೊಸ ಹಳ್ಳಿ ಎಂಬ ಪುಟ್ಟ ಊರಲ್ಲಿ. ಮುಂದಿನ ಸಾರಿ ಈ ಕಡೆ ಬಂದಾಗ ಮಿಸ್‌ ಮಾಡದೇ ಮಿಸಳ್‌ ಬಾಜಿಗೆ ಆರ್ಡರಿಸಿ!

ಬೆಣ್ಣೆಯಷ್ಟೇ ಹುಡುಕಿ ಹೊರಟು ಮಜ್ಜಿಗೆ ಪಡೆದು ಕೃತಾರ್ಥರಾದೆವು! ನಿಮಗೆ ಎಂದಾದರೂ ಹೀಗಾಗಿದೆಯೇ? ಕಾಡುವ ಇಂತಹ ಜಾಗಗಳಿಗೆ ಮತ್ತೆ ಮತ್ತೆ ಕಾಡು ಬೀಳಬೇಕು ಎಂದೆಣೆಸುತ್ತ ಬೆಣ್ಣೆ ಜಲಧಾರೆಗೆ ಬಾಯ್ ಬಾಯ್ ಹೇಳಿದೆವು.


Tuesday, July 21, 2026

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

 

‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌

 ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ, ಶೃಂಗೇರಿ ಹೀಗೆ ಹತ್ತು ಹಲವು ಸ್ಥಳಗಳಿಗೆ ಹೋಗಲು ನಮಗೆ ಆಗುಂಬೆಯೇ ಲಾಂಚ್‌ ಪ್ಯಾಡ್. ಹಾಗಾಗಿ ಆಗುಂಬೆಯೊಂದಿಗೆ ಬಂಧ ಬೆಸೆದುಕೊಂಡು ಬಂದಿದೆ. ಹಾಗಾಗಿ ಆಗುಂಬೆಗೆ ಎಷ್ಟು ಸಲ ಹೋಗಿದ್ದೇವೆಂದು ಕೇಳಿದರೆ ಲೆಕ್ಕ ತಪ್ಪುತ್ತದೆ. 

ಆಗುಂಬೆ ಎಂಬ ಆತ್ಮ ಸಖಿ

ಆಗುಂಬೆ ಎಂದರೆ ಆತ್ಮ ಸಖಿ. ಇವಳ ಪದತಲದಲ್ಲಿ ಪವಡಿಸುವ ಸುಖವೇ ಬೇರೆ. ಸದಾ ಗಿಜಿ ಗುಡುವ ಊರುಗಳಿಗಿಂತಲೂ ಶಾಂತವಾದ ಇಂತಹ ಊರುಗಳು ನಮ್ಮ ಎದೆಯ ತಣಿಸುತ್ತವೆ. ಸದಾ ಮಂಜು ಬಿಕ್ಕುವ ಇಲ್ಲಿನ ದಾರಿಗಳು ನಮ್ಮನ್ನು ವಿಸ್ಮಿತರನ್ನಾಗಿಸುತ್ತದೆ. 

  ಸೂರ್ಯನಿಗಿಲ್ಲಿ ಯಾವತ್ತೂ ರಜೆ. ಹತ್ತಿ ಮರದ ಅಜ್ಜನ ಗಡ್ಡ ಹಾರಿದಂತೆ ಮುಖಕ್ಕೆ ಮಂಜಿನ ಮಜ್ಜನ. ಮೌನ ಹೊದ್ದ ರಸ್ತೆಗಳು. ಕರ್ನಾಟಕದ ಚಿರಾಪುಂಜಿ. ಸದಾ ಸೂಜಿ ಮಳೆಯ ಸಂಜೆಯಂತಹ ವಾತಾವರಣ. ಅರಬ್ಬಿ ಕಡಲಿಗೋಡುವ ಸೀತೆ ಹುಟ್ಟುವುದು ಇಲ್ಲಿನ ಗಿರಿ ಶೃಂಗಗಳಲ್ಲೇ. 

ಆಗುಂಬೆ ಎಂಬುದೊಂದು ಭಾವ. ಸದಾ ನಮ್ಮನ್ನು ಆವರಿಸಿದ ಚರ್ಮದಂತೆ. ನಮ್ಮೊಳಗೇ ಹುಟ್ಟಿ ಬೆಳೆವ ಪುಟಾಣಿ ಹಳ್ಳಿ. ಸದಾ ಮಂಜಿನಿಂದ ತುಂಬಿ ಆತ್ಮಕ್ಕೊಂದು ಶಾಂತಿ ನೀಡುವ ನಿಲ್ದಾಣ. ನಾ ಯಾವತ್ತೂ ಆಗುಂಬೆಯಲ್ಲಿ ಅನುಭವಿಸುವ ಶಾಂತಿ ಮತ್ತೆಲ್ಲೂ ಸಿಕ್ಕಿಲ್ಲ. ಮನಸ್ಸು ಸದಾ ಆಗುಂಬೆಯತ್ತ ತುಡಿಯುತ್ತಾ ಇರುತ್ತೆ. ಇಲ್ಲಿರುವ ಪರಿಸರದಲ್ಲಿರುವ ಪಾಸಿಟಿವ್‌ ಶಕ್ತಿಯೇ ಅಂತಹುದು. ಇಲ್ಲಿಗೆ ಹೋಗಿ ಬಂದರೆ ಮುಂದಿನ ಆರೇಳು ತಿಂಗಳು ನಿಮ್ಮ ಎನರ್ಜಿ ಅಧ್ಬುತವಾಗಿರುತ್ತದೆ. ನಮ್ಮೂರಿನ ಕೆಮಿಸ್ಟ್‌ ಒಬ್ಬರು ಪ್ರತೀ ವಾರ ಆಗುಂಬೆಗೆ ಹೋಗಿ ಬರುತ್ತಾರೆ. ನನಗೆ ಕೇಳಿಯೇ ಅಚ್ಚರಿಯಾಯಿತು. ನಿಮಗೂ ಇಂತಹ ಅನುಭೂತಿ ಪಡೆವ ಆಸೆಯೇ? ಇನ್ನೇಕೆ ತಡ ಸದಾ ಕಾಡುವ ಆಗುಂಬೆಗೊಮ್ಮೆ ಈ ಮಳೆಗಾಲದಲ್ಲಾದರೂ ಹೋಗಿ ಬನ್ನಿ.

ಟ್ರೋಗನ್‌ನ ಬೆನ್ನು ಬಿದ್ದು

ಗಂಡು ಹಕ್ಕಿ - (ಚಿತ್ರ ಅಂತರ ಜಾಲ)


LTM ಅಳಿವಿನ ಅಂಚಿನಲ್ಲಿ ಕೊನೆಯ ಪ್ರಯತ್ನ...

ಜಗತ್ತಿನ 38 ಜೀವವೈವಿದ್ಯತಾ ತಾಣಗಳಲ್ಲಿ ಆಗುಂಬೆಯೂ ಒಂದು. world heritage ಮಾನ್ಯತೆಯೂ ಇದಕ್ಕಿದೆ. ಇಲ್ಲಿನ ಹಕ್ಕಿಗಳಿಗಾಗಿ ವಿದೇಶಿಯರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಟ್ರೋಗನ್ ಇಲ್ಲಿನ ಒಂದು ವಿಶೇಷ ಹಕ್ಕಿ. ಕೆಂಬಣ್ಣ ತುಂಬಿದ ಡಬ್ಬಿಗೆ ಬಿದ್ದು ಬಂದಂತಹ ಬಣ್ಣ. ಗಂಡು ಹಕ್ಕಿಯಂತೂ ಗಾಡ ಕೆಂಪು. ಈ ಹಕ್ಕಿಯ ಸಂಗಕ್ಕೆ ಬಿದ್ದು ಊರೂ ಅಲೆದಿದ್ದೆ. ಹಗಲೂ ರಾತ್ರಿ ಸತಾಯಿಸಿದ್ದಿದೆ. ಕೈಯಲ್ಲಿ ಕ್ಯಾಮಾರವಿಲ್ಲದೇ ಇದ್ದಾಗಲ್ಲೊಮ್ಮೆ ೧೦ ಅಡಿ ಅಂತರದಲ್ಲಿ ದರ್ಶನಕೊಟ್ಟು ನನ್ನ ಹೊಟ್ಟೆ ಉರಿಸಿದ್ದಿದೆ. ಹಲವಾರು ಬಾರಿ ಕಾರ್ಯಸಿದ್ದಿಯಾಗದೇ ವಾಪಸಾದೆ. ಹೀಗೆ ಟ್ರೋಜನ್‌ ಸಂಗಕ್ಕೆ ಬಿದ್ದವರೆಲ್ಲಾ ಅದರ ಅಪರಿಮಿತ ಅಂದಕ್ಕೆ ಮಾರು ಹೋಗದೇ ಇರರು. ಇವುಗಳ ಜೊತೆಗೆ ಲಂಗೂರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮೊದಲೆಲ್ಲಾ ರಸ್ತೆ ಬದಿ ಬರದೇ ನಾಚಿಕೆ ಸ್ವಭಾವದ LTM (Lion tailed Macaque) ಗಳು ಈಗ ಪ್ರವಾಸಿಗರ ತಿಂಡಿಗಳಿಗೆ ಕೈಚಾಚುತ್ತಿರುವುದು ಇವುಗಳ ಸಹಜ ಪರಿಸರದಲ್ಲಿ ಆಹಾರ ಲಭ್ಯತೆಯು ಕಡಿಮೆಯಾಗಿರುವುದರ ದ್ಯೋತಕವಾಗಿದೆ. ನಾನು ಹೋದಾಗ ಇವುಗಳು ಪ್ರವಾಸಿಗರಲ್ಲಿ ಭಿಕ್ಷೆ ಬೇಡುತಲಿತ್ತು. ಮಹೋರಗದಲ್ಲೊಂದಾದ ಕಾಳಿಂಗ ಸರ್ಪ ಸರ್ವೆ ಸಾಮಾನ್ಯ.



  ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ. ಆಗುಂಬೆಯನ್ನೊಮ್ಮೆ ಒಬ್ಬನೇ ಅಡ್ಡಾಡುವುದು ನನ್ನ ಉದ್ದೇಶ.

ಬೆಳಗಿನ ಚಹ ಮುಗಿಸಿ ಜೋಗಿ ಗುಂಡಿ ನೋಡಲು ತಯಾರಾದೆ. ಸ್ವಲ್ಪ ದೂರವನ್ನು ರಿಕ್ಷಾದಲ್ಲಿ ಪಯಣಿಸಿದೆ. ನಂತರದು ಕಾಲ್ನಡಿಗೆ ಹಾದಿ. ಕ್ಯಾಮರವೊಂದೇ ನನ್ನ ಸಂಗಾತಿ. ಹಾದಿ ಉದ್ದಕ್ಕೂ ಹತ್ತಿಯಂತೆ ಹಾಸಿತ್ತು ಮಂಜು! ಆಕಾಶಕೆಟುಕಿದ ಮರಗಳು. ಎರಡಡಿ ದೂರವೂ ತೋರದು! ಜೀರುಂಡೆಯ ಜೇಂಕಾರ ಆಸ್ವಾದಿಸುತ್ತಾ ಸಾಗಿತ್ತು ಪಯಣ. ಕೀಟ ಹಕ್ಕಿಗಳಿಗಾಗಿ ಹುಡುಕಾಟ ನಡೆಸಿತ್ತು ಕ್ಯಾಮರ. ಸಿಕ್ಕ ಸಿಕ್ಕಿದ ಹುಳ ಹುಪ್ಪಟೆಗಳೆಲ್ಲಾ ಕ್ಯಾಮರದಲ್ಲಿ ಬಂಧಿ. ಮಂಜಿನ ಪರದೆ ಸರಿಸಿದಾಗ ಕಂಡದ್ದು ಅಮೋಘ, ನಯನಾಸ್ವಾದಕ ದೃಶ್ಯ. ಅಪ್ಸರೆಯರ ಬಚ್ಚಲು ಮನೆಯಂತಿತ್ತು. ಸುತ್ತ ವನಸಿರಿ. ನಡುವೆ 20 ಅಡಿಯಿಂದ ಧುಮುಕುವ ಜಲಧಾರೆ. ಜಲಪಾತ ಕೊರೆದಾದ ಗುಂಡಿ. ಗುಂಡಿ ಸುತ್ತಿ ನೊರೆ ನೊರೆಯಾಗಿ ಹರಿವ ಪನ್ನೀರು. ಆಗಾಗ ಕೇಳಿ ಬರುವ ಮಲಬಾರ ವಿಸ್ಲಿಂಗ್ ಥ್ರಷ್‌ ಹಕ್ಕಿಯ ಸುಮಧುರ ನಾದ. ಒಟ್ಟಾರೆ ಸ್ವರ್ಗವೇ ಧರೆಗಿಳಿದ ಅನುಭವ. ಅಪರೂಪದ ಕೆಲವು ಸೋಣೆ ಮತ್ತಿತರ ಕಾಡು ಹೂಗಳು. ಕೊನೆಗೂ ಮಲಬಾರ ವಿಸ್ಲಿಂಗ್‌ ಥ್ರಷ್‌ವೊಂದು ದರುಶನವಿತ್ತು ಕಣ್ಮರೆಯಾಯಿತು. ಕಲ್ಲು ಸಂದಿಯಲ್ಲಿ ಗೂಡು ಕಟ್ಟುತ್ತಿರಬೇಕು. ನೀರಾಟ ಆಡಿ ಹಿಂತಿರುಗುವ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆ. ಆಗುಂಬೆ ಎಂದರೆ ಜ್ಞಾಪಕ ಚಿತ್ರ ಶಾಲೆಯ ನೂರಾರು ಹೆಸರುಗಳು.

ದೊಡ್ಡ ಮನೆಯ ದೊಡ್ಡಕ್ಕ

ಆಗುಂಬೆಯ ಅಸ್ಮಿತೆಗಳಲ್ಲಿ ದೊಡ್ಡಮನೆಯ ಕಸ್ತೂರಕ್ಕ ಸಹ ಒಬ್ಬರು. ಆಗುಂಬೆಯ ಆ ದೊಡ್ಡ ಮನೆಗೆ ಬಂದರೆ ಅವರೆಲ್ಲರನ್ನೂ ಚೆನ್ನಾಗಿ ಉಪಚರಿಸಿ ಕಳುಹಿಸುತ್ತಿದ್ದುದು ಅವರೇ. ಅವರನ್ನು ನಾವೆಲ್ಲಾ ದೊಡ್ಡ ಮನೆ ದೊಡ್ಡಕ್ಕ ಎನ್ನುತ್ತಿದ್ದೆವು. ಅದೆಷ್ಟೇ ಜನ ಬಂದರೂ ಅಡುಗೆ ಮಾಡಿ ಬಡಿಸುತ್ತಿದ್ದರು. ಮಾಲ್ಗುಡಿ ಡೇಸ್‌ನ ಚಿತ್ರೀಕರಣ ನಡೆದಿದ್ದು ಇಲ್ಲೇ. ತಿಂಗಳುಗಳ ಕಾಲ ಅವರಿಗೆಲ್ಲಾ ಊಟ ತಿಂಡಿ ಮಾಡಿ ಹಾಕಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಮನೆಯನ್ನೇ ಬಿಟ್ಟು ಕೊಟ್ಟರು. ʼಮಾಲ್ಗುಡಿʼ ಪ್ರಖ್ಯಾತವಾಯಿತು ಜೊತೆಗೆ ಇವರ ಮನೆಯೂ. ಕೆಲವರು ಈಗಲೂ ಇದಕ್ಕೆ ಮಾಲ್ಗುಡಿ ಮನೆ ಎಂದೂ ಕರೆಯುತ್ತಾರೆ ಎಂದು ದೊಡ್ಡಕ್ಕ ನೆನಪಿಸಿಕೊಳ್ಳುತ್ತಾರೆ.


ಆಗುಂಬೆಗೊಂದು ಅಡಿ ಬರೆಹ



ಆಗುಂಬೆ ಎಂದರೆ ನೂರಾರು ಹೆಸರುಗಳ ನೆನಪಿನ ಚಿತ್ರ ಶಾಲೆ. ಕೆಲವು ಸ್ಮೃತಿಯಲ್ಲಿ ಉಳಿಯುತ್ತದೆ. ಹೈರ್‌ ಪಿನ್‌ ತಿರುವು ದಾಟಿ ಗಡಿಗೆ ಅಡಿ ಇಡುತ್ತಿದ್ದಂತೆ ಬಲ ಗಡೆಗೆ ಸದಾ ನಗು ಮುಖ ಹೊತ್ತು ತನ್ನದೇ ಗೂಡಂಗಡಿಯಲಿ ಚಟ್ಟಂಬಡೆ ಕಾಯಿಸುವ ಪ್ರೇಮಾನಂದ ಪಡಿಯಾರ್‌ ಸಹ ಒಬ್ಬರು! ನಮ್ಮ ನಡುವೆ ಪಡಿಯಾರ್‌ ಮಾಮ್‌ ಎಂದೇ ಪ್ರಸಿದ್ದಿ. 

ಮಸಲಧಾರೆಗೆ ಬಿಸಿಬಿಸಿ ಅಂಬೊಡೆ ಮಾರಿ ಬದುಕಿದವರು. ಮಳೆ ಮಂಜಿನ ಧ್ಯಾನ ಮಾಡಿದವರು. ಮಳೆ, ಬಿಸಿಲು ಎಂದು ಬೆಚ್ಚದೆ ಬೆದರದೆ ಸದಾ ನಗುಮುಖದ ಸೇವೆಯನ್ನು ಮಾಡಿದ ಇವರೊಬ್ಬ ಅಪ್ಪಟ ಕಾಯಕ ಜೀವಿ. ಆಗುಂಬೆಯ ಗಡಿದಾಟಿದರೆ ಮೊದಲು ನೆನಪಾಗುವುದೇ ಪ್ರೇಮಾನಂದ ಪಡಿಯಾರ್  ಯಾನೆ ಪಡಿಯಾರ್ ಮಾಮ ಮತ್ತು ಅವರು ಮಾಡುತ್ತಿದ್ದ ರುಚಿ ರುಚಿ ಅಂಬೋಡೆ.

ಸದಾ ನಗುತ್ತಾ ನಗಿಸುತ್ತಾ, ಕಡಿಮೆ ದರದಲ್ಲಿ ಚಹ, ಚಟ್ಟಂಬಡೆ, ಇಡ್ಲಿಯನ್ನು ತನ್ನ ಸಣ್ಣ ಕ್ಯಾಂಟಿನ್‌ನಲ್ಲಿ ಮಾರುತಲಿದ್ದರು! ಇವರ ಚಟ್ಟಂಬಡೆಯ ರುಚಿ ಬಲ್ಲವರು ಚಟ್ಟಂಬಡೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಿರಲಿಲ್ಲ. ಜೊತೆಗೊಂದು ಬಿಸಿ ಬಿಸಿ ಮಂಜಿನ ಚಹಾ. ಆಗುಂಬೆ ಎಂದರೆ ಪಡಿಯಾರ್‌ ಮಾಮ್‌ನ ಚಟ್ಟಂಬಡೆ ಎನ್ನುವಷ್ಟು. ಆಗುಂಬೆಯ ಜಿಯೋ ಟ್ಯಾಗ್! 

 ಸನಿಹದ ಕಾರ್ಕಳದವರಾದರೂ ೯೦ರ ದಶಕದಲ್ಲಿಯೇ ಇಲ್ಲಿಗೆ ಬಂದವರು. ಸೇವೆ ಎಂಬ ಹೆಸರಿನಲ್ಲಿಯೇ ಚಟ್ಟಂಬಡೆ ಮಾರುತ್ತ ತನ್ನ ಜೀವಮಾನವನ್ನು ಸವೆಸಿದವರು. ಇವರ ಮಕ್ಕಳೆಲ್ಲಾ ಈಗ ಇಂಜಿನಿಯರುಗಳಾಗಿದ್ದರೂ ಸದಾ ಜನರ ನಡುವೆಯೇ ಬದುಕಬೇಕೆಂಬ ಇವರ ಅದಮ್ಯ ಉತ್ಸಾಹವೇ ನನಗೆ ಸ್ಪೂರ್ತಿ. ಆಧ್ಯಾತ್ಮ, ದೇಶಭಕ್ತಿಯ ಅನೇಕ ಪುಸ್ತಕಗಳನ್ನು ಸಹ ತನ್ನ ಪುಟಾಣಿ ಕ್ಯಾಂಟಿನ್ ಒಳಗೆ ಇಟ್ಟುಕೊಂಡು ಸ್ಪೂರ್ತಿ ಪಡೆಯುತ್ತಾ ಬದುಕುತ್ತಿದ್ದರು. ನೂರಾರು ಓಡಾಟದ ನಂತರ ಇವರೊಂದಿಗಾದ ನನ್ನ ಅವಿನಾಭಾವ ಸಂಬಂಧ ಆಗುಂಬೆ ಹಾಗೂ ಇವರನ್ನು ಬೇರ್ಪಡಿಸಲಾಗದಷ್ಟು! ತಾನೂ ನಗುತ್ತಾ ತನ್ನೊಂದಿಗೆ ಇತರರನ್ನೂ ನಗಿಸುತ್ತಾ ಬದುಕುವ ಇತಂಹ ಒಬ್ಬ ಅಧ್ಯಾತ್ಮ ಜೀವಿ ಇಹದ ಬದುಕಲ್ಲಿ ನಾ ಕಂಡಿಲ್ಲ. ಇವರ ಆಶಯ ಮತ್ತು ಜೀವನ ನಮಗೆಲ್ಲಾ ಸ್ಪೂರ್ತಿ. ಕೊನೆಗಾಲದಲ್ಲಿ ಇವರ ಜೊತೆಗೆ ಮಾತನಾಡಲು ಸಾಧ್ಯವಾಗಿಲ್ಲ ಎಂಬುದೊಂದು ಸಣ್ಣ ಕೊರಗು ಸದಾ ನನ್ನ ಕಾಡುತ್ತಲೇ ಇದೆ. ಸೆಲ್ಪಿ ಇಲ್ಲದ ಕಾಲದಲ್ಲಿ ಇವರ ಜೊತೆಗೊಂದು ಫೋಟೊ ಸಾಧ್ಯವಾಗಿಲ್ಲವೆಂಬ ಬೇಸರ ಸದಾ ಕಾಡುತ್ತಿರುತ್ತದೆ. 

ಮತ್ತೆಂದೂ ಸಿಗದ ಮಸಾಲೆ ಅಂಬೊಡೆ 

  ಇಂದು ಬರುವೆನೆಂದು ಅಂದು ಹೊರಟ ಪ್ರೇಮಾನಂದ ಮತ್ತೆ ಆಗುಂಬೆಗೆ ಬರಲೇ ಇಲ್ಲ. ೨೦೧೫ರ ಜುಲೈ ತಿಂಗಳಿನಲ್ಲಿ ಡೆಂಗ್ಯೂವಿನಿಂದ ಮೃತರಾದರು. ಈಗೀಗ ಜಾಗತೀಕರಣ, ವ್ಯಾಪಾರೀಕರಣದ ಭರಾಟೆಯಲ್ಲಿ ಭಾವನೆಗಳು ಬೆಲೆಯೇ ಇಲ್ಲದ ಹಳೆಯ ಚಟ್ಟಂಬಡೆಯಂತಾಗಿದೆ. ನೀವೇನಂತೀರಿ?

  ನನ್ನಂತಹವರಿಗೆ ಸದಾ ಕಾಡುವ ಊರು. ಇಲ್ಲಿನ ಟ್ರೋಜನ್‌ ಹಕ್ಕಿ, ವಿಷಲಿಂಗ್‌ ಥ್ರಶ್‌ ನನ್ನನ್ನು ಇಲ್ಲಿಗೆಳೆಯುತ್ತವೆ. ಇಲ್ಲಿ ಸರಳವಾಗಿ ಬದುಕುವ ನೂರಾರು ಮಹನೀಯರು ಹೆಜ್ಜೆ ಮೂಡದಂತೆ ಅನಂತದಲಿ ಲೀನವಾಗುವ ಪರಿಗೆ ಬೆರಗಾಗಿದ್ದೇನೆ. ಎಂದು ಬರುವಿರೆಂದು ಮತ್ತೆ ಮತ್ತೆ ಕರೆಯುತ್ತಲೇ ಇದೆ ಅಲೆಮಾರಿಯ ಆಗುಂಬೆ.

          ಬರಹ-೨೦೧೫.



Thursday, July 9, 2026

ಬಲ ಉಳ್ಳವರ ಅಹೋಬಿಲಂ!

 


ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ಸಹಾಯದಿಂದ ಆಂಧ್ರದ ಮೂಲೆಯೂರಿಗೆ ಪ್ರಯಾಣ ಬೆಳೆಸಿದೆವು. 

ಭವನಾಶಿನಿ ನದಿ ತಟದ ಅಹೋಬಿಲಂ -

 ಭರತ ಖಂಡದ ಯಾವ ಮೂಲೆಗೆ ಹೋದರೂ ನಿಮಗೆ ಒಂದೇ ಊರಿನಲ್ಲಿ 9 ನರಸಿಂಹ ದೇವಾಲಯಗಳು ಸಿಗಲಾರವು. ಅಂತಹ ಮಹಾ ವಿಚಿತ್ರ ಅಹೋಬಿಲಂ! ತೆಲುಗಿನಲ್ಲಿ ಬಿಲಂ ಎಂದರೆ ಗುಹೆ. ನಮ್ಮ ನಿಯಾನ್ ಕಣ್ಣುಗಳಲ್ಲಿ ಮಿಂಚಿದ ಪ್ರಶ್ನೆಗಳು ಹಲವು. ಒಂಭತ್ತು ದೇವಾಲಯಗಳನ್ನು ಒಂದೇ ಊರಿನಲ್ಲಿ ನಿರ್ಮಿಸುವ ಔಚಿತ್ಯವಾದರೂ ಏನು? ಅಚ್ಚರಿಯ ಅಹೋಬಿಲಂನ್ನು ಒಂದೇ ಗುಟುಕಿನಲಿ ನೋಡಿದ ನಮ್ಮ ಪಯಣದ ಮೆಲುಕು ಹಾಕೋಣ ಬನ್ನಿ. 

ಪೊಂಗಲ್‌ ಮುನ್ನುಡಿ!


 ಹೈದ್ರಾಬಾದಿನಿಂದ ಕಾರು ಬಾಡಿಗೆಗೆ ಹಿಡಿದು. ಸಿಕ್ಕ ಒಂದು ರೈಲು ಹತ್ತಿ ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂಗೆ ಬೆಳ್ಳಂ ಬೆಳಿಗ್ಗೆ ಹೆಜ್ಜೆ ಇಟ್ಟೆವು. ಮುಸುಕು ಎಳೆದು ಮಲಗಿದ್ದ ಊರನ್ನು ನಮ್ಮ ಬಸ್ಸು ಎಬ್ಬಿಸಿತು. ಜೊತೆಗೆ ಮಹಾ ಧೂಳಿನ ನೆಬ್ಯೂಲಾ ಊರನ್ನು ಮುಚ್ಚಿತು. ನಮ್ಮ ಮೂಗನ್ನೂ. 

 ಊರಿಗೆ ಕಾಲಿಡುತ್ತಲೆ ಸಣ್ಣ ಲಾಡ್ಜು ಹಿಡಿದು ಪ್ರಾತಃವಿಧಿಗಳನ್ನು ಪೂರೈಸಿ ಬಳ್ಳಾರಿ ಭಟ್ಟರ ಹೋಟೆಲಿಗೆ ಲಗ್ಗೆ ಇಟ್ಟೆವು. ಭಟ್ಟರಿನ್ನು ಬಾಗಿಲು ತೆರೆದಿರಲಿಲ್ಲ. ಹೋಟೆಲ್‌ ತೆರೆಯುತ್ತಲೇ ಪೊಂಗಲ್‌ ಬಾರಿಸಿ ಭಟ್ಟರ ಕುಶಲೋಪರಿ ವಿಚಾರಿಸಿ ನರಸಿಂಹ ದೇವಾಲಯ ಭೇಟಿಗೆ ಹೊರಟು ಬಿಟ್ಟೆವು. 

ಕನ್ನಡ ನಾಡಿನ ಬಳ್ಳಾರಿಯಿಂದ ಬಂದ ಭಟ್ಟರ ತಂದೆ ಇಲ್ಲೇ ನೆಲೆಯೂರಿದವರು. ಅಂದಿನ ಅವರ ದುರ್ದು ಏನಿತ್ತೋ. ಸಣ್ಣದೊಂದು ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೇ ಬೇರೆ ಸೌಲಭ್ಯಗಳಿಲ್ಲ. ವ್ಯಾಪಾರವಾಗುತ್ತದೆ ಎಂಬ ಭರವಸೆ ಏನಿಲ್ಲ. ಯಾರೂ ಇಲ್ಲಿ ಉಳಿಯಲು ಮನಸ್ಸು ಮಾಡುವುದಿಲ್ಲ! ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಕಾಡ ನಡುವಿನ ಊರು. ದೂರದ ಬಾಗಲ ಕೋಟೆಯ ಇಬ್ಬರು ಇಲ್ಲಿ ಸಿಕ್ಕರು.  

 ಬದುಕಿನ ನಾಗಾಲೋಟಕ್ಕೆ ಬ್ರೇಕ್‌ ಬೇಕೆನಿಸಿದರೆ ಇಲ್ಲಿಗೆ ಸುಮ್ಮನೆ ಬನ್ನಿ! ಯಾವುದೋ ನಾಟಕದ ಪಾತ್ರಧಾರಿಗಳಂತೆ ಇಲ್ಲಿನವರು ನಿಮಗೆ ಕಾಣುತ್ತಾರೆ. ತಮ್ಮ ಉಬ್ಬಿದ ಹೊಟ್ಟೆ ಹೊತ್ತು ಯಮ ಸದೃಶಃ ಪರ್ವತವನ್ನು ಏರಲಾಗದೇ ಬೆಟ್ಟವೇರುವವರು. 



ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್‌ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.

ಅಚ್ಚರಿಯ ಅಹೋಬಿಲಂ.



ಈ ಒಂಭತ್ತು ದೇವಾಲಯಗಳು ನಲ್ಲಮಾಲಾ ಕಾಡೊಳಗೆ ಅವಿತಿದೆ ಎನ್ನುವುದೇ ಅಚ್ಚರಿ. ಕಾಡೊಳಗೆ ನಿರ್ಮಿಸುವ ದುರ್ದು ಏನಿತ್ತೊ. ಕಾಡ ಕಟ್ಟೆಯಲ್ಲಿ ಕಟ್ಟಿದ ಅಹೋಬಿಲಂನಲ್ಲಿ ಎರಡು ದೇವಾಲಯಗಳು ಕಾಡಿನಂಚಿನಲ್ಲಿವೆ. ಹೆಚ್ಚಿನ ಎಲ್ಲಾ ದೇವಾಲಯ 14 ಮತ್ತು 15 ನೆಯ ಶತಮಾನದ ಅಂಚಿನಲ್ಲಿ ವಿಜಯನಗರದ ಕಾಲದಲಿ ನಿರ್ಮಿಸಿದಂತವು. ನಾಲ್ಕು ದೇವಾಲಯ ಬೆಟ್ಟದ ಬುಡದಲ್ಲೂ ನಾಲ್ಕು ಬೆಟ್ಟದ ಮೇಲೆ ಹಾಗೂ ಒಂದು ಕಾಡೊಳಗೆ ಅವಿತಿದೆ. ಯೋಗಾನಂದ ಚತ್ರವಟ ನರಸಿಂಹ ಕಾಡಂಚಿನಲ್ಲಿದೆ.



ಯೋಗಾನಂದ ನರಸಿಂಹ ಶನಿಯನ್ನು ಆಳುತ್ತಾನೆಂದು ಪ್ರತೀತಿ ಇದೆ. ಇಲ್ಲಿನ ನರಸಿಂಹ ದೇವರನ್ನು ಅಹೋಬಾಲ ಎಂದೂ ಕರೆಯುತ್ತಾರೆ. ಅಂದರೆ ಮಹಾ ಶಕ್ತಿ ಶಾಲಿ ಎಂದು. ಯೋಗಾನಂದ ನರಸಿಂಹ ಯೋಗಾಸನದಲ್ಲಿದ್ದಾನೆ.


ಚತುರ್ವಾತ ನರಸಿಂಹ ಹಾಹಾ ಮತ್ತು ಹೋ ಹೋ ಎಂಬಿಬ್ಬರು ಗಂಧರ್ವರು ನರಸಿಂಹನಿಗೆ ಸಂಗೀತ ಸೇವೆ ಮಾಡಿ ಖುಷಿ ಪಡಿಸಿದರು. ಆ ಸಲುವಾಗಿಯೇ ಇಲ್ಲಿನ ನರಸಿಂಹನಲ್ಲಿ ಸಂಗೀತ ಮತ್ತು ಕಲೆಯ ಆರಾಧಕರು ಇಲ್ಲಿ ಬೇಡಿಕೊಂಡರೆ ಅವರಿಗೆ ಕಲೆ ಸಿದ್ಧಿಸುತ್ತದೆ ಎಂಬ ಪ್ರತೀತಿಯೂ ಇದೆ.

ಕೆಳಗಿನ ಎರಡು ದೇವಾಲಯ ದರ್ಶಿಸಿ ಮೇಲಿನ ದೇವಾಲಯ ದರ್ಶಿಸುವ ಹೊತ್ತು. ಇದೊಂದು ಅಚ್ಚರಿಯ ಪಯಣ! ಕಾಡು ತನ್ನ ಬಾಹು ಕವಚಿದ ಏಳು ದೇವಾಲಯಗಳ ತೋರಲೊಬ್ಬ ಕನ್ನಡ ಬಲ್ಲ ಗೈಡ್‌ಗಾಗಿ ತಡಕಾಡಿ ಗೆದ್ದೆವು. ಆತನೋ ನಮಗೆ ಮೂರು ಸಾವಿರಕ್ಕೆ ಬೇಡಿಕೆ ಇಟ್ಟ! ಆತನ ಬ್ರಹ್ಮಾಂಡ ಕನ್ನಡ ಪಾಂಡಿತ್ಯಕ್ಕೆ ಮೂರು ಸಾವಿರ ಬಹಳ ಕಡಿಮೆ!! ಹೊಕ್ಕ ದಾರಿ ಅಲ್ಲದೆ ಹೊರ ಬರುವ ಬೇರೊಂದು ದಾರಿ ಇರುವುದರಿಂದ ಈತನನ್ನೇ ಆಯ್ಕೆ ಮಾಡಿ ಕೊಂಡೆವು. ದಾರಿಯಾದರೂ ತೋರು ರಾಘವೇಂದ್ರನೇ ಎನ್ನುತ್ತ ಪುಟ್ಟ ಮಕ್ಕಳಂತೆ ಅವನ ಹಿಂದೆ ಹೆಜ್ಜೆ ಇಟ್ಟೆವು.

ಬೃಹತ್‌ ಮರಳು ಶಿಲೆಯೊಂದು ನಿಮ್ಮನ್ನು ಕೆಳಗಿನಿಂದಲೇ ಕರೆಯುತ್ತದೆ. ಬಹೃತ್‌ ಶಿಲೆಯ ಜಟೆಯಿಂದ ಧುಮುಕುವ ನೀರ ಹನಿಗಳ ಪ್ರೋಕ್ಷಣೆಗೈದು ದೇವಾಲಯ ಪ್ರವೇಶಿಸಬೇಕಾಗುವುದು ಇಲ್ಲಿನ ವಿಶೇಷ. ಮೂರು ಜಲಕನ್ನಿಕೆಯರು ನಿಮ್ಮ ಬರುವಿಕೆಗಾಗಿ ಕಾಯುವರು. ಬನ್ನಿ ಹಾಗೆ ಮುಂದೆ ಹೋಗೋಣ. 

ಯಗುವಾ ಅಹೋಬಿಲ ನರಸಿಂಹ-



ಭವನಾಶಿನಿ ನದಿ ದಡದ ನರಸಿಂಹ ಸ್ವಯಂ ಭೂ. ಅಂದರೆ ಉದ್ಭವ ನರಸಿಂಹ. ಇಲ್ಲಿ ಹತ್ತಾರು ಪೇರಳೆ ನಮ್ಮ ಚೀಲ ಸೇರಿದವು. ಭಕ್ತರು ಬೆಳಗಿದ ನೂರಾರು ಹಣತೆ ದೇವಾಲಯದೆದುರು ಪ್ರಜ್ವಲಿಸುತಲಿತ್ತು. ಯಾರೋ ಮಹಾಶಯನೊಬ್ಬ ನಮ್ಮ ಹಣೆಗೆ ನಾಮವೆಳೆದ ಸುಮ್ಮನಿದ್ದು ಎಳೆಸಿಕೊಂಡೆವು! ಬೆಟ್ಟವೇರಲು ಮೂರನೆ ಕಾಲಾಗಿ ಒಂದು ಕೋಲು ಕೊಟ್ಟರು ಬರೇ ಐದು ರೂಪಾಯಿಗೆ. ಇಸ್ಕೊಂಡೆವು. ಯಾರಿಗೆ ಹೊಡೆಯಲೋ ಗೊತ್ತಿಲ್ಲ. 

ಬೃಹತ್‌ ಪರ್ವತದ ಬುಡದಲ್ಲಿ ದೇವಾಲಯವಿದೆ. ಗಡಿಬಿಡಿಯಲ್ಲಿ ದೇವಾಲಯ ದರ್ಶನಕ್ಕೆ ಹೊರಟು ನಿಂತೆವು. ಸುಖಾಸೀನನಾದ ನರಸಿಂಹ ಹಿರಣ್ಯ ಕಶುಪುವಿನ ಎದೆ ಬಗೆಯುತ್ತಿದ್ದಾನೆ. ಇನ್ನೆರಡು ಕೈಗಳಿಂದ ಹಿರಣ್ಯಕಶುಪುವಿನ ಕಾಲು ತಲೆ ಹಿಡಿದು ಉಗ್ರರೂಪಿಯಾಗಿದ್ದಾನೆ. ಬಲ ತುದಿಯಲಿ ಅಬಲಾನಾದ ಪ್ರಹ್ಲಾದನು ಕೈ ಮುಗಿಯುವಂತೆ ಚಿತ್ರಿಸಿದ್ದಾನೆ ಶಿಲ್ಪಿ. ಯಗುವಾ ನರಸಿಂಹ ದರ್ಶನ ಮುಗಿಸಿ ಹಲಗೆಯ ಸೇತುವೆಯಲ್ಲಿ ಭವನಾಶಿನಿಯನ್ನು ದಾಟಿ ಹೊಸ ಲೋಕಕ್ಕೆ ಕಾಲಿಟ್ಟೆವು. 


ಕಾಡು ನಮ್ಮೊಳಗೋ ನಾವೇ ಕಾಡಿನೊಳಗೋ ಎಂಬಂತೆ ಕಾಡಿಗೆ ಕಾಲಿಟ್ಟೆವು. ಚಿತ್ರ ವಿಚಿತ್ರವಾಗಿ ಪ್ರಕೃತಿಯ ನಮ್ಮೆದುರು ತನ್ನ ಭವ್ಯತೆಯನ್ನು ತೋರುತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿವ ಭವನಾಶಿನಿ ಹೊಳೆ ದಾಟಲು ಹಲವು ಕಡೆ ಹಗ್ಗ ಹಾಕಲಾಗಿತ್ತು. ಮಳೆಗಾಲದ ಮೂರು ತಿಂಗಳು ಅಸಾಧ್ಯ ವೇಗದಿಂದ ಹರಿವ ಇವಳನ್ನು ಹರಿಯುವುದು ಅಸಾಧ್ಯ. ಯಗುವಾ ನರಸಿಂಹ ದೇವಾಲಯದ ಸನಿಹವಂತು 6-7 ಅಡಿ ನೀರು ಧುಮ್ಮಿಕ್ಕುತ್ತದೆ. ಅಹೋಬಿಲಂ ಜಲಪಾತ ಮತ್ತು ಉಗ್ರ ಸ್ತಂಭ ಕಾಣಿಸುವ ಬ್ರಿಡ್ಜ್‌ ಮೇಲೆ ನಿಂತೆವು. ನಾವು ಗುರಿಯ ಸನಿಹವೆಂದು ಕೊಂಡೆವು. ನೀವಿನ್ನೂ 450 ಮೆಟ್ಟಿಲು ಏರುವುದಿದೆ ಎಂದು ಹೇಳಿ ಗೈಡ್‌ ನಮ್ಮನ್ನು ಗಾಬರಿ ಬೀಳಿಸಿದ. ಉಗ್ರ ಸ್ತಂಭದ ಸನಿಹದಲ್ಲೇ ಜ್ವಾಲಾ ನರಸಿಂಹ ದೇವಾಲಯವಿದೆ. ಇಲ್ಲಿಂದ ಮುಂದೆ ಏರುವುದೇ ಅತಿ ಕಠಿಣ ಹಾದಿ. ಉಗ್ರ ಸ್ತಂಭದ ಬಳಿಯ ಅಹೋ ಬಿಲಂ ಜಲಪಾತ ಅಂದು ತನ್ನ ಉಗ್ರ ರೂಪ ತೊರೆದು ಶಾಂತವಾಗಿತ್ತು.

ನರಸಿಂಹ ಜಯಂತಿ ಮತ್ತು ಸ್ವಾತಿ ನಕ್ಷತ್ರ!

ಸ್ವಾತಿ ನಕ್ಷತ್ರದಂದೇ ನರಸಿಂಹ ಸ್ವಾಮಿಯ ಜನ್ಮ ದಿನ. ಬೆಳಗಾವಿ ಬಾಗಲಕೋಟೆಯ ಹತ್ತಾರು ಭಕ್ತರು ಅಂದು ದರ್ಶನಕ್ಕೆ ಬಂದಿದ್ದರು. ನೀವು ಪುಣ್ಯವಂತರು, ಇಂದು ನವ ನರಸಿಂಹನ ದರ್ಶನ ಮಾಡಿದವರಿಗೆ ಮೋಕ್ಷ ಪ್ರಾಪ್ತಿ ಎಂದ ನಮ್ಮ ಗೈಡ್.‌ ನಿನ್ನೊಂದಿಗೆ ನಡೆಯುವ ಎಲ್ಲರಿಗೂ ಮೋಕ್ಷ ಖಾತರಿ ಮರಾಯ ಎಂದು ಅವನನ್ನು ಚೇಡಿಸುತ್ತ ಹೆಜ್ಜೆ ಹಾಕಿದೆವು. ಉಗ್ರ ಸ್ತಂಭದಿಂದ ಧುಮುಕುವ ನೀರಲ್ಲಿ ಅಭಿಶೇಕ ಮಾಡಿಸಿಕೊಂಡು ಬಲ ಭಾಗದ ಕೆಂಪು ಕೊಳವನ್ನು ನೋಡುತ್ತಾ ಜ್ವಾಲಾ ನರಸಿಂಹನ ಸೇರಿಕೊಂಡೆವು. 



ಕೆಂಪು ಆಲ್ಗೆ ತುಂಬಿದ ಈ ಕೊಳವನ್ನು ಹಿರಣ್ಯ ಕಶುಪುವಿನ ರಕ್ತ ತೊಳೆದ ಕೊಳವೆಂದು ಜನ ಈಗಲೂ ನಂಬುತ್ತಾರೆ. ಜ್ವಾಲಾ ನರಸಿಂಹ ದೇವಾಲಯದ ಹಿಂದೆ 80 ಡಿಗ್ರಿ ಕೋನದಲ್ಲಿದ್ದ ದಾರಿಯಲ್ಲಿ ಕೇವಲ ಹಗ್ಗದ ಸಹಾದಿಂದ ಏರಬೇಕು. ಕೈ ಕಾಲುಗಳಲ್ಲಿ ಕಸುವಿಲ್ಲದ ಕಾರಣ ಕೈ ಬಿಟ್ಟೆವು. 




ಮೈ ತೋಯಿಸಿಕೊಂಡ ನಿಮಗೆ ಇಲ್ಲಿ ಕತೆಗಳು ನಿಮ್ಮ ಮನಸ್ಸು ತೋಯಿಸುವವು. ಪ್ರಕೃತಿ ಮಡಿಲಲ್ಲಿ ಇಂತಹದೊಂದು ಅಚ್ಚರಿಯ ತಾಣವ ಹುಡುಕಿ ತೆಗೆದು ಅದಕೊಂದು ಕತೆಗಳನ್ನು ಜೋಡಿಸಿದ ಮಹಾ ಪುರುಷನಿಗೆ ಶರಣು. ದೇಶ ಕಾಲಾತೀತದಲ್ಲಿ ಹಬ್ಬಿ ಹರಡಿದ ನೂರಾರು ಕತೆಗಳು ನಿಜಕ್ಕೂ ನಿಮ್ಮನ್ನು ಕಾಡುವವು. 

ಕಾಡೊಳಗಿನ ಅಚ್ಚರಿ ಮೂಡಿಸುವ ಕಾಡುವ ಕತೆಗಳು 

ಚುಂಚೂ ಬುಡಕಟ್ಟು ಮತ್ತು ನರಸಿಂಹ-


ಇಲ್ಲಿನ ಚುಂಚೂ ಆದಿವಾಸಿಗಳು ನರಸಿಂಹನನ್ನು ತಮ್ಮ ಅಳಿಯನ್ನನ್ನಾಗಿಸಿದ ಪರಿಗೆ ಅಚ್ಚರಿಗೊಂಡೆ. ನರಸಿಂಹನಿಗೆ ಆದಿವಾಸಿ ಲಕ್ಷ್ಮೀಯನ್ನು ಮದುವೆ ಮಾಡಿಸಿ ಇವರು ತಮ್ಮವನನ್ನಾಗಿ ಮಾಡಿ ಕೊಂಡಿದ್ದಾರೆ! ಹಾಗಾಗಿ ಹೋಗಿ ಬರುವವರಿಗಾಗಿ ಇಲ್ಲಿನ ಬುಡಕಟ್ಟು ಜನರು ದಾರಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಾದು ಕೂರುವುದು ನಮಗಂತೂ ಅಚ್ಚರಿ. ಸಾಕ್ಷಾತ್‌ ದೈವ ಸಂಭೂತರಾದ ಸರಳ ಜನ! ಇವರ ಚೇತನವೇ ಒಂದು ಒಗಟು. ನಮ್ಮ ದಾರಿಯಲ್ಲೊಬ್ಬಳೂ ನರಸಿಂಹ ಲಕ್ಷೀಗಾಗಿ ರಂಗೋಲಿ ಹಾಕಿ ಕುಳಿತಿದ್ದಳು. ಭಕ್ತರು ನೀಡಿದ ಅಷ್ಟೋ ಇಷ್ಟೋ ಇವರಿಗೆ ಆದಾಯ! ಅಬ್ಬಬ್ಬಾ ಎಂದರೂ ೨೦೦ ದಾಟದ ಸಂಪಾದನೆ. ಮತ್ತು ಮಗದೊಂದು ಯೋಚಿಸದ ಯೋಜಿಸದ ತೃಪ್ತ ಜನ.

ಮಾಲೋಲ ನರಸಿಂಹನೆಡೆಗೆ….

ಅಹೋಬಿಲಂನ ಜ್ವಾಲಾ ನರಸಿಂಹನಿಗೆ ಶರಣು ಬಂದು ನಿಧ ನಿಧಾನಕ್ಕೆ ಒಂದೊಂದು ಹೆಜ್ಜೆ ಇಟ್ಟು ನೀರ ಜೋಕಾಲಿಯಲಿ ಮಿಂದು ಕ್ಯಾಮರಕ್ಕೂ ಎರಡು ಹನಿ ಮೀಯಿಸಿ ನಮ್ಮ ಗೈಡ್‌ ಜೊತೆ ಹೊರಟು ನಿಂತೆವು.

ಕ್ಷೀಣ ಜಲಪಾತವೊಂದು ನನ್ನ ಕಣ್ಣವೆಯಲ್ಲಿ ತುಂಬಿ ಪೂರ್ಣ ಸೃಷ್ಟಿಯ ಸೊಬಗನ್ನು ಹೆಚ್ಚಿಸುವ, ಕತೆಗಳ ಸೃಷ್ಟಿಸುವ ಪರಿಗೆ ಚಕಿತಗೊಂಡಿರುವೆ.

ಇಲ್ಲಿಂದ ಹೊರಟು ಮಾಲೋಲ ನರಸಿಂಹನೆಡೆಗೆ ಹೆಜ್ಜೆ ಹಾಕಿದೆವು. ಹಿರಣ್ಯ ಕಶಪುವಿನ ಸಂಹರಿಸಿ ಕುಪಿತಗೊಂಡ ಆತನನ್ನು ಸಂತೈಸಲು ಆದಿವಾಸಿ ಲಕ್ಷ್ಮೀ ಎಂಬ ಮಹಿಳೆಯನ್ನು ಬ್ರಹ್ಮ ಕಳುಹುತ್ತಾನೆ. ಆಗಲೇ ಶಾಂತ ಸ್ವರೂಪಿಯಾಗಿ ಜ್ವಾಲಾ ನರಸಿಂಹ ಮಾಲೋಲ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾನೆ. ದೇವರ ಸಿಟ್ಟಿಗೆ ಕತೆಯ ಒಗ್ಗರಣೆ ಅನಿಸಿತು. ಅದೇ ಹಾದಿಯಲಿ ಕೆಳಗಿಳಿಯುತ್ತಾ ಬಂದಾಗ ವರಾಹ ರೂಪಿಯಾಗಿ ನರಸಿಂಹ ನೆಲೆ ನಿಂತಿದ್ದಾನೆ. ಭೂ ಭಾರವನ್ನು ಎತ್ತಿದ್ದಾನೆ. ಕತೆಗಳ ಸಿಕ್ಕು ಬಿಡಿಸಲು ಹೋಗದೇ ಸುಮ್ಮನೆ ದರ್ಶನಗೈದು ಬಂದೆವು. 

ಮೇಲೇರುವ ಹಾದಿಯೊಂದು ವಾಪಾಸಾಗುವ ಹಾದಿ ಇನ್ನೊಂದು. ಪ್ರತಿ ಕಲ್ಲಿಗೂ ಇಲ್ಲೊಂದು ಸುಂದರ ಕತೆ ಹೆಣೆಯುವ ಚಾತುರ್ಯ ಇದೆ. ಕತೆಗಳನ್ನು ಕೇಳುತ್ತಾ ಕೇಳುತ್ತಾ ದಾರಿ ಸಾಗಿದ್ದೆ ತಿಳೀಲಿಲ್ಲ.

14 ಕಿಲೋ ಮೀಟರ್‌ ದೂರದ ಪವನ ನರಸಿಂಹ ದರುಶನಕ್ಕೆ ಅಹೋಬಿಲಂ ವೃತ್ತಕ್ಕೆ ಬಂದು ಜೀಪು ಹತ್ತಿ ಹೊರಟೆವು. ಕಾಡೊಳಗೆ ಜೀಪು ಸರ್ಕಸ್ ಮಾಡುತ್ತಾ ನರಸಿಂಹ ದೇವಾಲಯ ತಲುಪಿತು. ಮುಚ್ಚಿದ ಬಾಗಿಲ ನಡುವೆ ಹಣಕಿ ಹಾಕಿ ದರ್ಶನ ಮುಗಿಸಿ ಹಿಂದಿರುಗಿದೆವು. ಹೀಗೆ ಒಂಭತ್ತು ದೇವಾಲಯ ದರುಶನವಾದರೂ ನೋಡಿದ ಸಂಪೂರ್ಣತೆ ನನಗೆ ದಕ್ಕಲಿಲ್ಲ. ಇನ್ನೂ ನೋಡಬೇಕು ಅಲ್ಲೇ ಇನ್ನೆರಡು ದಿನವಿರಬೇಕೆಂಬ ಹಂಬಲ. ಆದರೆ ಕಾಲ ಪುರುಷನೆದುರು ನಾವು ಮಂಡಿ ಊರಲೇ ಬೇಕಲ್ಲ. ಹೊರಡಲೇ ಬೇಕಾಯಿತು.

ಮೇಲೇರಿದ ಜಾಗದ ಸನಿಹದಲ್ಲೇ ವಿಶಿಷ್ಟ ವನ ಭೋಜನವೊಂದು ನಮಗಾಗಿ ಕಾಯುತಲಿತ್ತು. ಅಣಬೆ ಗಸಿ ಮತ್ತು ಕಡಲೆ ಬೇಳೆ ಪಾಯಸವನ್ನು ಹಿತಮಿತವಾಗಿ ಸೇವಿಸಿ ಗಂಡೀಕೋಟದತ್ತ ಓಟ ಕಿತ್ತೆವು .


Saturday, June 27, 2026

ಹಂಪಿಯ ಹೊಳೆ ದಂಡೆ

 


ಹಂಪಿ ಎಂಬ ವಿಸ್ಮಯವನ್ನು ಪದಗಳಲ್ಲಿ ಹಿಡಿದಡಲು ಅಸಾಧ್ಯ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳುತ್ತವೆ. ಕತೆಗಳಿಗೆ ಕಿವಿಯಾಗಬೇಕಷ್ಟೆ. 

ನಿಗೂಢ ಹಂಪಿ


ಹಂಪಿ ನೋಡುವವರು ಕಮಲ್‌ ಮಹಲ್‌, ಗಜ ಶಾಲೆ, ವಿರುಪಾಕ್ಷ ದೇವಾಲಯ, ಹಜಾರ ರಾಮ, ವಿಜಯ ವಿಠಲ ನೋಡಿಕೊಂಡು ಹಿಂದಿರುಗುವರು. ಹೆಚ್ಚೆಂದರೆ ಅಚ್ಯುತರಾಯ ದೇವಾಲಯ ನೋಡಿ ಹಂಪಿಗೆ ಬೈ ಬೈ ಹೇಳುವರು. ನೋಡುವುದು ಬಿಡಿ ಅದರಾಚಿಗಿನ ಸ್ಥಳಗಳನ್ನು ಮುಟ್ಟಿ ಮೂಸುವುದು ಇಲ್ಲ. ನಿಜವಾಗಿ ನೋಡುವುದೇ ಬೇರೆ. ನೋಡುವುದು ಎಂದರೆ ಹಂಪಿಯ ಅಂತರ್ ಸತ್ವ ಅರಿಯುವುದು. ನೂರಾರು ವರ್ಷಗಳ ಕಾಲ ಇಲ್ಲಿನ ವಾಸ್ತು ಶಿಲ್ಪ ಕಾಪಾಡಿದವರು ಇಲ್ಲಿನ ರೈತರು!

ಹಂಪಿ ಎಂದರೆ ಇಷ್ಟೇ ಅಲ್ಲಾ. ಹಂಪಿಯ ಬಳುಕು ವೈಯಾರ ನೋಡಬೇಕೆಂದರೆ ಹೊರಗೆ ಕಾಲಿಡಬೇಕು. ಹಂಪಿಯ ಪಿಸುಮಾತನ್ನು ಆಲಿಸಬೇಕು. ಹಂಪಿಯ ಮುಖ್ಯ ಆಕರ್ಷಣೆಯ ಆಚೆಗೂ ಅನನ್ಯತೆ ಇದೆ. ಹಂಪಿಯ ನಿಜದ ಅಸ್ಮಿತೆ ಇರುವುದು ಬದುಕು ಇರುವುದು ಮುಖ್ಯ ಮಂದಿರಗಳ ಹೊರಗೆ! ಇವುಗಳಿಗೆ ಹಣಕಿ ಹಾಕಿದರೆ ಹೊಸ ನೋಟ ತೆರೆಯುತ್ತದೆ.

ಹಂಪಿಯ ಪ್ರವಾಸವನ್ನ ವಿಭಿನ್ನವಾಗಿಸಿಕೊಳ್ಳಬೇಕೆಂಬ ಬಯಕೆ ಇದ್ದರೆ ಇಲ್ಲಿನ ಮುಖ್ಯ ಆಕರ್ಷಣೆಯ ಹೊರಗೆ ಇಣುಕಬೇಕು. ಆಗಲೇ ಹಂಪಿಯ ಮೌನ, ಕಂಪನದ ಆಸ್ವಾದನೆ ಮತ್ತು ಅಚ್ಚರಿಗಳು ಅರ್ಥವಾಗುವುದು. ಹಂಪಿಯ ಜನಸಾಮಾನ್ಯರ ಬದುಕು ಅರ್ಥವಾಗುವುದು. ಹೀಗಾಗಿ ಹೊಸ ಬಗೆಯ ಸ್ಥಳಗಳ ಆಯ್ಕೆ ಮಾಡಿ ನಿರ್ಧರಿಸಿ ಹೊರಟೆವು. ಸ್ಥಳೀಯ ಗೈಡ್‌ ಈರಣ್ಣ ಎಂಬುವವರನ್ನು ಜೊತೆ ಮಾಡಿಕೊಂಡೆವು. ನಮ್ಮ ಪ್ರಯಾಣದ ಪಟ್ಟಿಯಲ್ಲಿ ಏನೇನೆಲ್ಲಾ ಇತ್ತೊ ಅವೆಲ್ಲಾ ಸಾಧ್ಯವಾಗದೇ ಇದ್ರೂ ಹನುಮ ಪಾದದ ನೆತ್ತಿ ಮುಟ್ಟಿ, ತೆಪ್ಪದೊಂದಿಗೆ ಪಯಣಿಸಿ, ಸ್ಥಳೀಯ ಆಹಾರ ಸೇವನೆ, ಮದನಕೊತ್ತಲ ಮಂಟಪದಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿ ಕೊಂಡೆವು. ಗಜ ಸ್ನಾನವೊಂದು ತಪ್ಪಿ ಹೋಯಿತು.


 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜಾಗ ವಿರೂಪಾಕ್ಷ ಮಂದಿರ! ಅದರ ಸನಿಹವೇ ಒಂದು ಹಳೆಯ ದೋಣಿ ಹೆಂಚಿನ ಮಠವಿದೆ. ಪಿನ್‌ ಹೋಲ್‌ ಕ್ಯಾಮರದಲ್ಲಿ ತಲೆಕೆಳಗಾದ ಛಾಯೆ ತೋರುತ್ತದಷ್ಟೇ ಆದರಿಲ್ಲಿ ನಿಜದ ಬಿಂಬ! ಪಿನ್‌ ಹೋಲ್‌ ಕ್ಯಾಮರದಲ್ಲಿ ಮಠದಿಂದ ಕಂಡ ಸ್ವಾಗತ ಗೋಪುರದ ಬಣ್ಣದ ಪ್ರತಿಬಿಂಬ ಇಂದಿಗೂ ಒಂದು ಸೋಜಿಗ! ಅಲ್ಲಿ ಹೋಗಿ ಬರುವವರ ಪ್ರತಿಬಿಂಬವೂ ಬಣ್ಣದಲ್ಲಿ. ಸಾಮಾನ್ಯವಾಗಿ ಯಾವ ಗೈಡೂ ಈ ಸ್ಥಳಗಳನ್ನೂ ಕಾಣಿಸುವುದಿಲ್ಲ. ಆತ ಕಾಣಿಸದೇ ಉಳಿದಿದ್ದು ನೀವು ಕಂಡರೆ ನಿಮ್ಮೊಳಗೊಂದು ಒಳನೋಟವಿದೆ ಎಂದೇ ಅರ್ಥ. ಬದುಕಿಗೊಂದು ಹೊಸ ಒಳನೋಟ ಪ್ರಾಪ್ತವಾದರೆ ಪ್ರವಾಸ ಸಾರ್ಥಕ. 

ಹಂಪಿಯ ಹನುಮ ಪಾದದ ನೆತ್ತಿಯಿಂದ

ವಿಜಯ ವಿಠಲದ ಹಾದಿಯಲ್ಲೇ ಸಣ್ಣ ಗುಡ್ಡದ ತುದಿಯಲ್ಲಿ ಹನುಮ ಪಾದವಿದೆ. ವಿಜಯ ವಿಠಲ ಎರಡು ಕಿಲೋ ಮೀಟರ್‌ ಎಂಬ ಮೈಲಿಗಲ್ಲು ದಾಟಿ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ಹೊರಳಿ ಕಿಲೋ ಮೀಟರ್‌ ಹಲುಸಾಗಿ ಬೆಳೆದ ಬಾಳೆ ತೋಟದಂಚಲ್ಲಿ ಸಾಗಿ ಕಟ್ಟಿಗೆ ಅಹಮದ್‌ ಖಾನ್‌ ನ ಅರವಟ್ಟಿಗೆ ಬಳಿ ಮೇಲೇರುತ್ತಾ ಸಾಗಬೇಕು. ನಡು ನಡುವೆ ಜೋಳ ಬೆಳೆದ ಕುರುಹುಗಳು, ಅನೇಕ ಗೋರಿಗಳು ಪಾಳು ಬಿದ್ದ ಮನೆಗಳ ಅವಶೇಷಗಳು ನಿಮಗೆ ಕಾಣಸಿಗುತ್ತದೆ. ಅನೇಕ ನೀರು ಸಂಗ್ರಹಕಗಳು. ಅಲ್ಲಲ್ಲಿ ಬೆಳೆದ ಕಳ್ಳಿ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಚ್ಚು ಕಡಿಮೆಯಾದರೆ ನೀವೇ ಗತಿಸುವಿರಿ ಅಂತಹ ಜಾಗ! ಮೇಲೇರಿದಂತೆ ಚಲಿಸುವ ಜಾಗವೂ ಕಡಿದಾಗುತ್ತಾ ಸಾಗುತ್ತದೆ. ದಿಗಂತಕ್ಕೆ ಕೈ ಚಾಚಿದಂತೆ ಇರುವ ಇದರ ನೆತ್ತಿ ಸವರಲು ಬಂಡೆಗಳ ನಡುವೆ ತೆವಳುತ್ತಾ ಸಾಗಬೇಕು. ಹೃದಯ ಬಡಿತ ಹೆಚ್ಚಿಸುವ ಜಾಗಗಳಲ್ಲಿ ಹೆಜ್ಜೆ ಹಾಕಬೇಕು. ವರ್ಟಿಗೋ ಇಲ್ಲದವರಷ್ಟೇ ಸುಲಭವಾಗಿ ಮೇಲೇರಬಲ್ಲರು. ಮೇಲೆರಿದಾಗ ಬೃಹತ್‌ ಪಾದವೊಂದು ನಿರ್ಮಿಸಲಾಗಿದೆ. ಜೊತೆಗೊಂದು ಚಿಕ್ಕ ಮಂಟಪ ಇದರ ನೆತ್ತಿಯ ಮೇಲೆ. ಇಲ್ಲಿಂದ ಕೆಳಗಿಳಿದು ಮದನ ಕೊತ್ತಲ ಮಂಟಪದತ್ತ ಹೆಜ್ಜೆ ಹಾಕಿದೆವು.

ಮದನಕೊತ್ತಲ ಮಂಟಪವೂ ನಮ್ಮ ಪಟ್ಟಿಯಲ್ಲಿತ್ತು! ಹಂಪಿಗೆ ಬಂದವರು ಮದನಕೊತ್ತಲ ಮಂಟಪದ ಇಳಿ ಸಂಜೆಗೆ ಹೋಗದೇ ಇದ್ದರೆ ಹೇಗೆ? ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹೊಸಪೇಟೆಯಿಂದ ಹಂಪಿಗೆ ಬರುವವರು ಹಂಪಿಗೆ ತಿರುಗುವಲ್ಲಿ ಸಿಕ್ಕ ಬೋರ್ಡ್‌ ಒಂದಕ್ಕೆ ಸಿಕ್ಕಿಸಿದ ಬೃಹತ್‌ ಚಿತ್ರ ನೋಡದೇ ಮುಂಬರಿಯಲಾರರು. ಅದುವೇ ಮದನಕೊತ್ತಲ ಮಂಟಪದ ಸೂರ್ಯಾಸ್ತ! ಅಪಾರ ಸೌಂದರ್ಯದ ಸೂರ್ಯಾಸ್ತವನ್ನು ಕಣ್ಣು ತುಂಬಿಕೊಳ್ಳಲು ನೀವು ಹರ ಸಾಹಸ ಪಡಬೇಕು. ಇಲ್ಲಿಗೆ ಪಯಣಿಸುವ ಅನುಭವವು ಅನನ್ಯ. ಈ ಮಟಂಪಕ್ಕೆ ತೆನಾಲಿ ಮಂಟಪವೆಂಬ ಇನ್ನೊಂದು ಹೆಸರು. ಈ ಹೆಸರು ಹೇಗೆ ಬಂತೆಂಬುದು ಮಾತ್ರ ತಿಳಿದಿಲ್ಲ. ಬನ್ನಿ ಮದನ ಕೊತ್ತಲವನ್ನೇರೋಣ.

ಮದನ ಕೊತ್ತಲದ ದಾರಿಯಲ್ಲಿ

ಗಜ ಶಾಲೆಯ ಬಲ ತುದಿಯ ರಂಗನಾಥ ದೇವಾಲಯದ ಸನಿಹ ದಾರಿಯಲ್ಲಿ ಅನತಿ ದೂರದವರೆಗೆ ನಿರ್ಜನ ದಾರಿಯಲ್ಲಿ ಸಾಗಬೇಕು. ಅದೊಂದು ಬೆದರಿಸುವ ನಿರ್ಜನ ದಾರಿ. ಎದುರಿಗೆ ಏರು ಗುಡ್ಡ. ದೂರದಲ್ಲಿ ಮಹಾನವಮಿ ದಿಬ್ಬ. ಒಂದಾನೊಂದು ಕಾಲದಲ್ಲಿ ದೊಡ್ಡ ದೇವಾಲಯ. ವಿದೇಶಿ ಮತ್ತು ಸ್ವದೇಶಿ ಆಕ್ರಮಣದ ತರುವಾಯ ಕೇವಲ ದಿಬ್ಬ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ!

ನೂರಾರು ಅವಶೇಷಗಳಡಿಯಲ್ಲಿ ನೆಟ್ಟನೋಟ. ಉದುದ್ದ ಮಲಗಿದ್ದ ವಹಿವಾಟಿನ ಖಾಲಿ ಅಂಗಡಿ ಸಾಲುಗಳು. ಕೃಷ್ಣ ಮತ್ತು ಅಚ್ಚುತರಾಯ ದೇವಾಲಯದ ಬೀದಿಗಳು ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಅಗಲದ ಬೀದಿಯ ನೋಡಿದರೆ ಅವರ ಮುಂದಾಲೋಚನೆಗೆ ದೊಡ್ಡ ಸಲಾಮು. ಊರು ಎಲ್ಲಿಯವರೆಗೆ ಬೆಳೆಯುತ್ತದೆ ಎಂಬ ಅಂದಾಜು ಅವರ ತೀಕ್ಷ್ಣಮತಿಯ ಧ್ಯೋತಕ! 

ಗಜಶಾಲೆಯಿಂದ ಮುಂದಡಿ ಇಟ್ಟರೆ ಅಡಿಗಡಿಗೆ ಸಿಗುವ ಒಡೆದ ಮಡಿಕೆ ಚೂರುಗಳು. ಒಂಟಿಯಾಗಿ ಕಲ್ಲು ಮುಳ್ಳು ಕಂಟಿಗಳ ನಡುವೆ ಹುದುಗಿದ ಜೀವನೋತ್ಸಾಹದ ಹೆದ್ದಾರಿಗಳಾದ ದಾರಿಗಳನ್ನು ಕಂಡಾಗ ಕರಳು ಚುರುಕ್‌ ಎನ್ನುತ್ತದೆ. ವಿಷಾದದ ಒಣ ಬಿಸಿಲು ರಾಚುತ್ತದೆ. ಕಾಲದ ಕೈವಾಡಕ್ಕೆ ನಲುಗಿದ ಫಲವತ್ತತೆಯ ಭೂಮಿ. ಕಳಕೊಂಡ ಖಾಲಿತನ, ಹಳವಂಡಗಳ ಹದ್ದು ಮನದ ಮುಗಿಲಿನಲಿ! 

ತಾಳಿಕೋಟೆ ಕದನದ ನಂತರ ಹಂಪಿಯ ಕನಸು ಕರಗುತ್ತಾ ನಿಧ ನಿಧಾನಕ್ಕೆ ಈ ಜಾಗಗಳನ್ನೆಲ್ಲಾ ತೊರೆದು ಜನ ಹೊಸ ಕನಸ ಬೆನ್ನಟ್ಟಿ ಹೊರಟರಿರಬೇಕು. ಇವೆಲ್ಲವ ಕಂಡಾಗ ವಸುದೇಂದ್ರರ ತೇಜೋ-ತುಂಗಭದ್ರ ಕಾದಂಬರಿಯ ಮಹತ್ವಾಕಾಂಕ್ಷಿ ಅಹಮದ್‌ ಖಾನ್‌ ನೆನಪಿಗೆ ಬರುತ್ತಾನೆ. ಏನೋ ಆಗಲು ಹೋಗಿ ಏನೂ ಆಗದೆ ತುಂಗಾ ತೀರದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಜೊತೆಗೆ ಕಿವಿಯನ್ನೂ ಮತಾಂಧರಿಂದ ಕಳೆದುಕೊಳ್ಳುತ್ತಾನೆ. ಆತ ದುಡ್ಡಿನಾಸೆಗೆ ತನ್ನೂರ ತೊರೆದಂತೆ ಇಲ್ಲಿನ ಜನ ಬಿಡಾರ ಕೊಡವಿ ಹೊರಟಿರಬೇಕು. ತನ್ನ ತನವ ತೊರೆದ ನದಿಯಂತೆ.

 ಒಂದು ಕಾಲದಲ್ಲಿ ಅಪಾರ ಜನಸ್ತೋಮವನು ಕಟ್ಟಿಕೊಂಡ ಊರಿಗ ಪುಟಾಣಿ ಹಳ್ಳಿ. ಗುಡ್ಡದ ತುದಿಗಳಲ್ಲೂ ಮಡಿಕೆ ಕಂಡವನಿಗೆ ಎಂದೋ ಬಿಸುಟು ಹೋದವರ ತಾಪದ ಬಿಸಿ ತಟ್ಟುತ್ತದೆ. ಇಲ್ಲಿಯವರೆಗೆ ಆ ರಾಜ ಮಾಡಿಕೊಡುತ್ತಿದ್ದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಗಜ ಶಾಲೆಯಿಂದ ಏನಿಲ್ಲವೆಂದರೂ ಎರಡು ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕು. ಗಜ ಶಾಲೆಯಿಂದ ಇಲ್ಲಿಯವರೆಗಿನ ದೂರವೇ ನಿಮ್ಮನ್ನು ದಂಗು ಬಡಿಸುತ್ತದೆ! ಈಗ ಮುಳ್ಳು ಕಂಟಿಗಳ ಒಳ ದಾರಿ. ಬೆಟ್ಟದಿಂದ ಇಳಿಬಿಟ್ಟಂತಹ ಇಳಿಜಾರು ಬಂಡೆಯನು ಭಾರಿ ಕಷ್ಟದಲಿ ಏರಬೇಕು. ಯಾರೋ ಪುಣ್ಯಾತ್ಮ ಇಲ್ಲಿ ಪುಟಾಣಿ ಮೆಟ್ಟಿಲು ನಿರ್ಮಿಸಿದ್ದಾನೆ! ಎಲ್ಲೆಲ್ಲೂ ದೈವ ಮತ್ತು ದೇವರುಗಳು. ನಡುವೆಲ್ಲೋ ದೊಡ್ಡ ಹನುಮಂತ ಮೂರ್ತಿ ಕೆತ್ತಿಟ್ಟಿದ್ದರು. ಒಂದಾನೊಂದು ಕಾಲದಲ್ಲಿ ದೇವಾಲಯ ಮತ್ತು ಮನೆಗಳ ಸಮುಚ್ಚಯವಿದ್ದಿರಬೇಕು. ಈಗ ಬಟಾ ಬಯಲು. ಅಲ್ಲಲ್ಲಿ ಮಂಟಪಗಳು ನಿದ್ರಿಸುವ ವಿರಾಮ ಪಡೆಯುವ ಸಣ್ಣ ಜಾಗಗಳನ್ನು ನೀವು ನೋಡಬಹುದು. ತೆನಾಲಿ ಮಂಟಪದ ಉತ್ತರ ದಿಕ್ಕಿಗೆ ಮಾತಂಗ ಪರ್ವತ ಪವಡಿಸಿತ್ತು. ಹಾವಿನ ಹೆಡೆಯಂತಹ ಬಂಡೆಯೊಂದು ಕಂಡಿತು. ಪ್ರಕೃತಿಯ ಅಚ್ಚರಿಯ ಮುಂದೆ ಉಳಿದಚ್ಚರಿಗಳು ಗೌಣ.

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.

ಮದನಕೊತ್ತಳದ ಮುಸ್ಸಂಜೆ

 ನೆತ್ತಿ ಹತ್ತಿ ಪುಳಕಗೊಂಡು ಸ್ವಲ್ಪ ವಿಶ್ರಮಿಸಿಕೊಂಡೆವು. ಮೇಲೇರಿ ಬಂದ ಗೈಡ್‌ ಸನಿಹದ ಕಡಿದಾದ ಬಂಡೆ ಏರಿದ. ಇಳಿಯುವಾಗಂತೂ ನಮಗೇ ಭಯವಾಯಿತು. ಸೂರ್ಯನನ್ನು ನುಂಗುವಂತೆ, ಯೋಗ ನಮಸ್ಕಾರದ ನಡುವೆ ಸೂರ್ಯನ ಸಿಲುಕಿಸಿ ಮುಂತಾದ ವಿವಿಧ ಭಂಗಿಯಲ್ಲಿ ಚಿತ್ರ ತೆಗೆದು ಖುಷಿ ಪಟ್ಟೆವು. ಸ್ವಲ್ಪ ಆಯ ತಪ್ಪಿದರೂ ಮೂಳೆಗಳೆಲ್ಲಾ ಪುಡಿ ಪುಡಿ. ಮದನಕೊತ್ತಳ ಮಂಟಪದಲಿ ಮುಸ್ಸಂಜೆಯನು ಕಳೆದು, ಹಗಲು ಮುಗಿಯುವ ಮೊದಲೇ ಇಳಿಯ ತೊಡಗಿದೆವು. ಮದನ ಕೊತ್ತಲದ ಮುಸ್ಸಂಜೆ ಅನ್ಯಾದರ್ಶ. ಅಪರೂಪದ ಹಲವು ಚಿತ್ರಗಳು ನನ್ನ ಲ್ಯಾಪ್‌ಟಾಪ್‌ ಸೇರಿದವು.

ಮತ್ತದೇ ದಾರಿಯಲ್ಲಿ ಮುಳ್ಳು ಕಂಟಿಗಳ ನಡುವೆ ಮುಂದುವರಿಯ ಬೇಕಿರುವುದರಿಂದ ಹಾಗೂ ಈ ದಾರಿಯಲ್ಲಿ ಕರಡಿ, ಚಿರತೆಗಳ ಹಾವಳಿ ಬಲು ಜೋರೆಂದು ಬೇಗನೆ ಇಳಿದೆವು.

ಚಕ್ರ ತೀರ್ಥದ ಸೆಳೆತ

ವಿರೂಪಾಕ್ಷ ಮಂದಿರದಿಂದ ನೇರ ಚಲಿಸಿ ತುಂಗೆಯ ತೀರದ ಲಿಂಗದ ಮುಂದಿರುವುದೇ ಚಕ್ರತೀರ್ಥ. ಇಲ್ಲಿನ ಸೆಳತವೇ ಅನನ್ಯ. ಇಲ್ಲಿಂದಲೇ ಆಚೆ ದಡಕ್ಕೆ ತೆಪ್ಪದಲ್ಲಿ ಬಿಡಲಾಗುತ್ತದೆ. ಆಚೆ ದಡದ ಚಂದ್ರಮೌಳೇಶ್ವರ ದೇವಾಲಯ ಮತ್ತು ಮಠಗಳನ್ನು ನೋಡಿ ಬಂದಿದ್ದು ಇಲ್ಲಿಂದಲೇ. ಅದೊಂದು ವಿಶಿಷ್ಟ ಕಥನ.

ಚಕ್ರತೀರ್ಥದಲ್ಲಿ ಮಿಂದೆದ್ದು ಬಂದು ಕೋದಂಡ ರಾಮನಿಗೆ ನಮಿಸಿ ಅಲ್ಲೇ ಎಡಕ್ಕೆ ಸಿಗುವ ಮೆದು ಇಡ್ಲಿ ಮತ್ತು ಹಸಿರು ಚಟ್ನಿ, ಬೋಂಡಾ ಉದರದ ಉಪಶಮನಕ್ಕೆ ಹೇಳಿ ಮಾಡಿಸಿದ ತಂಪೆಳೆಯುವ ಜಾಗ. ೧೦ರೊಳಗೆಲ್ಲಾ ಖಾಲಿ ಖಾಲಿ. ಅಲಲ್ಲಿ ಚೌಕುಳಿ ವಯರ್‌ ಬುಟ್ಟಿ ಬಿಡಿಸಿ ಊಟಕ್ಕೆ ಕೂತ ಕಾರ್ಮಿಕರು ಗಮನ ಸೆಳೆಯುತ್ತಾರೆ. 

ಕೋದಂಡ ರಾಮ, ಯಂತ್ರೋದ್ಧಾರಕ ಹನುಮ, ಕೋಟಿಲಿಂಗ, ಸೀತಾ ಸೆರಗು, ರಂಗನಾಥ, ಅಚ್ಚುತರಾಯ ಪೇಟೆ ಇತ್ಯಾದಿಗಳನ್ನು ದರ್ಶಿಸಿ ಹಳೆಯ ಹೆದ್ದಾರಿಗಳನ್ನು ಹಾಯ ಬಹುದು.

 ಇಲ್ಲಿಂದಲೇ ಕಂಪ-ಭೂಪ ಮಾರ್ಗ ಪ್ರಾರಂಭವಾಗಿ ಸುಗ್ರಿವನ ಗುಹೆ ಹಾದು ವಿಠಲ ದೇವಾಲಯದ ಹಿಂಬಂದಿಗೆ ಪುರಂದರ ಮಂಟಪದ ಬಾಜುವಲ್ಲೇ ಹಾದು ಹೋಗುತ್ತದೆ. ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಹೊರಟರೆ ೫ರ ಸುಮಾರಿಗೆ ಪುರಂದರ ಮಂಟಪದ ಸನಿಹವಿರುತ್ತೀರಿ. ಇಲ್ಲೊಬ್ಬಳು ಲಕ್ಷ್ಮೀ ಇಡ್ಲಿ, ವಡೆ, ಬಿಸಿ ಬಿಸಿ ಮೆಣಸಿನ ಬಜ್ಜಿಯನ್ನು ಬಯನಿ ಮರದ ನೆರಳಡಿ ಮಾರಾಟಕ್ಕೆ ನಿಂತಿರುತ್ತಾಳೆ. ನೀವೇನೋ ಗ್ರಹಿಸದಿರಿ. ಮುಂಜಾವಿಗೆ ಪುರಂದರ ಮಂಟಪದ ಸ್ವಚ್ಚಂದದ ಗಾಳಿ ಕುಡಿದು ಬಂದು ಮೆದು ಇಡ್ಲಿ ಮೆಲ್ಲುವ ಆ ಸುಖವೇ ಬೇರೆ. ಪುರಂದರ ಮಂಟಪದಿಂದ ಆಚೆಗೆ ತಲುಪಲು ನಿರ್ಮಿಸಿದ ೫೦೦ ವರ್ಷ ಹಳೆಯ ಸೇತುವೆಯುದ್ದಕ್ಕೂ ಕಣ್ಣು ಹಾಯಿಸಿ. ಹೊಸ ಮಿಂಚೊಂದು ಸಂಚಾರವಾಗುತ್ತದೆ. ಹಾಗೆಯೇ ಆಚಯ ಬದಿಯ ದೇವಾಲಯಕ್ಕೂ ಕಲ್ಲುಗಳ ಮೇಲೆ ಜಿಗಿಯುತ್ತಾ ಹೋಗಿ ಬರಬಹುದು. ಆಚೆ ದಡದಲ್ಲಿ ನೆಲಕ್ಕುರುಳಲು ತಯಾರಾದ ದೇವಾಲಯ ಹಾಗು ಇಬ್ಬರು ವೃದ್ಧರಿರುವ ಪುಟಾಣಿ ಮಠವಿದೆ.

ಇಲ್ಲಿನ ಗಾಳಿ, ನೀರಲ್ಲಿ ಒಂಟಿತನದ ಅಮಲು. ಇಲ್ಲಿಂದ ಮುಂದಡಿ ಇಟ್ಟರೆ ತಿರುಮಲ ದೇವಾಲಯ, ತುಲಾಭಾರ ಮಂಟಪ ಮತ್ತು ವಿಜಯ ವಿಠಲನ ಗುಡಿ ಎದುರಿಗಿರುತ್ತೀರಿ.

 ಹೀಗೆ ಸಾಗಿದ ಅನನ್ಯ. ದಾರಿ ಗುಂಟ ಸಿಗುವ ವಿಶಾಲ ಬೀದಿ ಮತ್ತು ಪ್ರತಿ ಬೀದಿಯ ಅಚ್ಚುಕಟ್ಟುತನ ನಮ್ಮ ಇಂದಿನ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ತುಂಗಭದ್ರೆಯನ್ನು ತಿರುಗಿಸಿ ಹಂಪಿಗೆ ಸದಾ ನೀರಿನ ಕೊರತೆಯಾಗದಂತೆ ಕಾಪಾಡಿದುದು ಒಂದು ಅದ್ಭುತ ಇಂಜಿನಿಯರಿಂಗ್‌ ಸಾಹಸ. ಇಂದಿಗೂ ಇದೊಂದು ಮಿಸ್ಟರಿಯೇ! 

ಮಾಲ್ಯವಂತದ ಮುಂಜಾನೆ

ಮಾಲ್ಯವಂತದ ಚುಬುಕು ಎಂತವರನ್ನು ಆಕರ್ಷಿಸದೇ ಬಿಡದು. ದೇವಾಲಯದವರೆಗೆ ರಸ್ತೆ ಇದೆ. ಮುಂದೆ ಸಣ್ಣ ದಾರಿಯಲ್ಲಿ ಕತ್ತಲಲ್ಲಿ ನಡೆಯಬೇಕು. 

ಮೇಲೇರಿದಾಗ ಕಾಣುವ ದೃಶ್ಯಾವಳಿಗಳಿಗೆ ನೀವು ಮಾರು ಹೋಗುವಿರಿ. ಒಂದೆಡೆ ಮಾಲ್ಯವಂತ ರಘುನಾಥ ದೇವಾಲಯ ಇನ್ನೊಂದೆಡೆ ಗಜಶಾಲೆ ಕಾಣಸಿಗುತ್ತದೆ. ಮಾಲ್ಯವಂತದ ಬೆಳಗು ಹಾಗೂ ಸಂಜೆಗಳು ಪ್ರೇಯಸಿಯ ಬಿಸಿ ಅಪ್ಪುಗೆಯಂತೆ ಬೆಚ್ಚಗೆ! ಸದಾ ಹಂಪಿಗಾಗಿ ಹಾತೊರೆಯುವಂತೆ ಮಾಡುತ್ತದೆ! 



ರಾಮನಿಲ್ಲಿಗೆ ವನವಾಸದ ಸಮಯಕ್ಕೆ ಬಂದಿರುವ ಕುರುಹಾಗಿ ರಘುನಾಥ ದೇವಾಲಯ ನಿರ್ಮಿಸಲಾಗಿದೆ. ಜೊತೆಗೊಂದು ವಿಶಿಷ್ಟ ಶಿವಾಲಯವಿದೆ. ಶಿವಾಲಯದೆದುರು ಪುಟಾಣಿ ಲಿಂಗಗಳನ್ನು ಕೆತ್ತಿಡಲಾಗಿದೆ. ಸೂರ್ಯೋದಯ ವೀಕ್ಷಣೆಗೆ ಅತ್ಯಂತ ಪ್ರಶಸ್ತವಾದ ಜಾಗವೇ ಮಾಲ್ಯವಂತ.



ಮಾಲ್ಯವಂತ ದೇವಾಲಯದಲ್ಲಿ ೨೪ ಗಂಟೆ ಭಜನೆ ಮತ್ತು ಪಾರಾಯಣ ನಡೆಯುತ್ತದೆ. ಅಲ್ಲಲ್ಲಿ ಅರಳುವ ನಾಗಸಂಪಿಗೆಯ ಘಮಲನ್ನು ಆಸ್ವಾದಿಸುತ್ತಾ ನೆತ್ತಿ ಏರಿದರೆ ಅಪೂರ್ವ ಅಹ್ಲಾದ. ಇನ್ನೂ ಎತ್ತರಕೆ ಏರಿದರೆ ಹಂಪಿಯ ದಶ ದಿಕ್ಕುಗಳೂ ಕಾಣ ಸಿಗುತ್ತದೆ. ಪ್ರತಿವರ್ಷ ನಡೆಯುವ ಹಂಪಿಯ ಫಲ ಪುಷ್ಪ ಪೂಜೆಗೆ ಕಾತರನಾಗಿ ಕಾಯುತ್ತಾ ನಮ್ಮ ರೂಂನತ್ತ ನಡೆದೆವು


ವರ್ಷ ವರ್ಷವೂ ಹಂಪಿಯ ನೋಡುವ ಬಯಕೆ ಜ್ವರದಂತೆ ಏರುತ್ತಲೇ ಇದೆ. ಮತ್ತೆಂದು ಹಂಪಿಯ ಅಲೆಮಾರಿತನದ ಗಾಳಿಯನ್ನು ಹೀರುವೆನೆಂಬ ತವಕದಲ್ಲೇ ಕಳೆಯುತ್ತಿದೆ ದಿನಗಳು.


 

Thursday, June 4, 2026

ಹಿಂಡ್ಲು ಮನೆಯ ಹಾದಿಯಲ್ಲಿ

 


 ಮಾಗಿ ಚಳಿ ಇನ್ನೂ ಪ್ರಾರಂಭವಾಗಿರಲಿಲ್ಲ. ಪ್ರಚಂಡ ಚಂಡಮಾರುತ ಬೀಸಿ ಹೋಗಿತ್ತು. ಬದುಕಿನಲ್ಲಿ ವಯಸ್ಸಿನ ಚಂಡಮಾರುತ! ಚಾರಣ, ಪ್ರವಾಸದ ಚುಬುಕು. ನಾಲ್ಕಾರು ಸ್ಥಳಗಳ ಕಾಕ್‌ಟೈಲ್ ತಯಾರಿಸಿದ್ದಾಯಿತು. ಡಬ್ಬಿ ಕ್ಯಾಮರಕ್ಕೆ ರೀಲು ತುಂಬಿಸಿದ್ದಾಯಿತು.

  ಎರಡು ಜಲಪಾತ, ಒಂದು ಸಣ್ಣ ಚಾರಣ. ಒಂದೆರಡು ದೇವಾಲಯ. ಸಿರಸಿ ಮಾರಿಕಾಂಬ ಬನವಾಸಿಯ ಮಧುಕೇಶ್ವರ, ಜೋಗ, ವರದಾನದಿ ಸಹ ಕಾಕ್‌ಟೈಲ್‌ನ ಭಾಗ! ಅಪ್ಪಟ ಅನಾಸ್ತಿಕ ಗೆಳೆಯರು ಮೂಗು ಮುರಿದಿದ್ದರು! 



ಓಮಿನಿ ಕಾರನ್ನು ಬಾಡಿಗೆಗೆ ಪಡೆದು , ಒಂದೇ ದಿನದಲ್ಲಿ ವಾಪಾಸು ಬರುವೆವು ಎಂದು ಕಾಗೆ ಹಾರಿಸಿ ಗೆಳೆಯನೊಬ್ಬನನ್ನು ನಂಬಿಸಿ ಕಿಡ್ನಾಪ್ ಶೈಲಿಯಲ್ಲಿ ಒಮ್ನಿಗೆ ತುಂಬಿಕೊಂಡು ಹೊರಟೆವು! ಆತನೇ ಇಂದಿನ ಕಥನದ ಕೇಂದ್ರ ಬಿಂದು. ಅಸಲಿಗೆ ಅದು ನಮ್ಮ ಮೂರು ದಿನಗಳ ಪ್ರವಾಸ! ಆತನಿಗೆ ಬೇಕಾದ ವಸನಗಳ ವ್ಯವಸ್ಥೆ ಮಾಡಿದ್ದಾಯಿತು. ಊರ ಗಲ್ಲಿಗಳಲ್ಲಿ ಕಾರಿನ ಬೆಳಕು ಚೆಲ್ಲಿ ಮೂಕಾಂಬಿಕಾ ಅಭಯಾರಣ್ಯದ ಮಗ್ಗುಲಿಗೆ ಹಾದು ಮರಕುಟಿಕವೆಂಬ ಸಣ್ಣ ಮೂರ್‌ಕೈಯಲ್ಲಿ ದಾರಿಕಾಣದೇ ಸ್ಥಿತವಾಯಿತು ನಮ್ಮ ಕಾರು.

ಜಲಪಾತದ ಜಿ.ಪಿ.ಎಸ್‌ ಕಳೆದು (Hindlumane)

  ಬೀಸಿ ಹೋದ ಮುಂಗಾರು ಮಳೆ ಹರಡಿದ ತರಗಲೆ ದಾರಿಯುದ್ದಕ್ಕೂ. ಎಡಕ್ಕೊ ಬಲಕ್ಕೊ ನೇರವೊ ತಿಳಿಯದೆ ನಿಂತಾಗ ದಿನೇಶ ಹೊಳ್ಳ ಬರೆದ ಲೇಖನವೊಂದು ದಾರಿದೀಪವಾಗಿ ಬಲಕ್ಕೆ ಹೊರಳಿಸಿದೆವು. ನಾಲ್ಕೈದು ಎಮ್ಮೆ ಹೊಡೆದುಕೊಂಡು ಕಂಬಳಿ ಕೊಪ್ಪೆ ಹೊದ್ದವನಲ್ಲಿ ಎಮ್ಮೆ ಹೊಂಡದ ದಾರಿ ಕೇಳಿದೆ. ನೇರ ದಾರಿ ಎಂಬಂತೆ ಸನ್ನೆ ಮಾಡಿದ ಮೂಕನಿರಬೇಕು ಎಂದುಕೊಂಡೆ ನೇರದಾರಿಯಲಿ ಮುಂದುವರಿದು ಕವಲಿನ ಹಾದಿಯ ನಡುವೆ ಎಲ್ಲೋ ಹಾದಿ ತಪ್ಪಿದೆವು. ಇನ್ನು ಮುಂದಿವರಿಯದಂತೆ ತೊರೆಯೊಂದು ತನ್ನ ಇರುವನ್ನು ಅರುಹಿತ್ತು. ಮುಂದುವರಿದರೆ ಸೈಲೆನ್ಸ್ರ್ ಒಳಗೆ ಹಾದು ಪ್ರವಾಸ ಮೊದಲ ದಿನಕ್ಕೆ ಮೊಟಕಾಗಬಹುದೆಂದು ಮತ್ತಿನೆರಡು ಘಳಿಗೆಯಲ್ಲೇ ಮಳೆ ಸುರಿದು ನೀರೇರಬಹುದೆಂಬ ಆತಂಕ ಮುಂಬರಿಯದಂತೆ ತಡೆದಿತ್ತು. ಸುತ್ತಲೂ ಮುಗಿಲ ಚುಂಬಿಸೋ ಮರಗಳು ನಡು ಹಗಲಿಗೇ ಕಡುಗತ್ತಲು! ಅಲ್ಲಲ್ಲಿ ಕೃಷಿ , ತೋಟಗಾರಿಕೆ. ಲಿಂಬೆ ಹುಲ್ಲಿನ `ವಾಹ್' ಪರಿಮಳ ಹೊತ್ತ ತುಂಟ ಗಾಳಿ. ಕಡಿದಾದ ಕೆಂಪು ಮಣ್ಣಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕನಸ ಬೆನ್ನತ್ತಿದೆವು.



 ಕನಸು ಅಬ್ಬೇಪಾರಿಯಾಗುವ ಕ್ಷಣ. ದಾರಿ ತಪ್ಪಿ ಯಾರದೋ ತೋಟದೊಳಗೆ ಕಾಲಿಟ್ಟೆವು. ಮನೆ ಮನಗಳಲ್ಲಿ ಹಸಿರುಟ್ಟ ಗದ್ದೆ ಕೋಗು. ಊರ ಮಂದಿ ಊರ ಬಿಟ್ಟಂತೆ ಮನೆಗಳೆಲ್ಲಾ ಖಾಲಿ ಖಾಲಿ. ಕನಸು ಅಬ್ಬೇಪಾರಿಯಾಗುವ ಪಾಳಿ. ಆತಂಕದಲ್ಲೇ ಕಳೆವ ಕ್ಷಣ. ಗೆಳೆಯರಿಗೆಲ್ಲಾ ಜಲಪಾತ ತೋರಿಸುತ್ತೇನೆಂದು ರೈಲು ಹತ್ತಿಸಿ ಎಲ್ಲೆಲ್ಲೋ ಅಲೆಸಿದ್ದದಾಯಿತು. ಜಲಪಾತ ಬಿಡಿ ಅದರ ಶಬ್ದವೂ ಎಲ್ಲೂ ಕೇಳಿಸಲೇ ಇಲ್ಲ! ಅಂತು ಇಂತು ದಾರಿ ಸಿಕ್ಕದೇ ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತಾ ನಿರಾಶೆಯಲ್ಲಿ ಹಿಂದಿರುಗುವ ಹುನ್ನಾರದಲ್ಲಿದ್ದೆವು. ಯಾವ ನರಪಿಳ್ಳೆಯ ಸುಳಿವೂ ಸಿಗದೇ ಜಲಪಾತದ `ಜಿ.ಪಿ.ಎಸ್' ಕಳೆದುಕೊಂಡಿದ್ದೆವು!

ಕದಡಿದ ಕೂಗು


  ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಂದ ಬುತ್ತಿಗಂಟು ಬಿಚ್ಚಿ ಉಂಡು ಹೊರಡೋಣವೆಂದುಕೊಂಡಿರುವಾಗಲೇ ಆರ್ತನಾದವೊಂದು ಕೇಳಿ ಎಲ್ಲರೂ ದಂಗಾದೆವು. ನಾನು ನನ್ನ ಜೊತೆಗಾರರಲ್ಲಿ ಇಬ್ಬರು ಮುಂದೆ ಮುಂದೆ ಹಳ್ಳಿಯ ದಾರಿಯಲ್ಲಿ ಮನುಷ್ಯ ಆವಾಸಕ್ಕಾಗಿ ಹುಡುಕುತ್ತಾ ಹೊರಟಿದ್ದೆವು. ಇಬ್ಬರು ಮಧ್ಯ. ಇನ್ನಿಬ್ಬರು ತೀರಾ ಹಿಂದೆ ಬಿದ್ದು ನಮ್ಮನ್ನು ಅನುಸರಿಸಿದ್ದರು.

  ದೂರದಲ್ಲಿದ್ದ ಇಬ್ಬರಲ್ಲಿ ಒಬ್ಬನಿಗೆ ಏನೋ ಆಗಿರಬೇಕು. ದೂರದಲ್ಲಿ ಆತನಿದ್ದಿದ್ದರಿಂದ ಆ ಕೂಡಲೇ ಸ್ಪಂದಿಸಲಾಗಲಿಲ್ಲ. ಏನೋ ಒಂದು ಈ ಕಗ್ಗಾಡಿನ ಮೂಲೆಯಲ್ಲಿ ಜರುಗಿತ್ತು! ಇಲ್ಲಿನ ಮೂಲ ಸೌಕರ್ಯ ಅಷ್ಟಕಷ್ಟೆ. ಓಮಿನಿ ದೂರದಲ್ಲಿ ನಿಲ್ಲಿಸಿ ಬಂದಿದ್ದೆವು. ದಾರಿತಪ್ಪಿದ ಮಕ್ಕಳಾಗಿದ್ದೆವು. ಸದಾ ಉಲ್ಲಾಸದ ಬುಗ್ಗೆಗೆ ಕಾರಣವಾಗಿದ್ದ ಕಾಡು, ಈ ಪರಿಸರ ನಮ್ಮ ಬದ್ಧ ವೈರಿಯಾಗಿ ಪ್ರತಿಸ್ಪರ್ಧಿಯಾಗಿ ಜೀವೋತ್ಕರ್ಷಕ್ಕೆ ಅಡ್ಡಿಯಾಗಿ ನಿಂತಂತೆ ಭಾಸವಾಯಿತು. ಈ ಕಠಿಣ ಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂತಹ ಸುಮಧುರ ಕ್ಷಣವನ್ನು ನುಂಗಿ ಹಾಕುವಂತೆ ಏನೋ ಒಂದು ಘಟಿಸಿತ್ತೆಂದು ನನಗೆ ಭಾಸವಾಯಿತು. ಹಾಗಾಗಿ ಆತನಿದ್ದಲ್ಲಿಗೆ ದೌಡಾಯಿಸಿದೆ.

ಕನ್ನಡಿ ಹಾವು ಕಚ್ಚಿ



ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಗಣೇಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಜಾಗೃತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಜೊತೆಗೆ ಈ ದುರ್ಗಮ ಹಾದಿಯಲಿ ಹಾವಿನ ಕಾಟಕ್ಕೆ ಗೆಳೆಯನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಬಂತೆಂದು ಹಿಡಿ ಶಾಪ ಹಾಕತೊಡಗಿದರು. ಕನ್ನಡಿ ಹಾವು ಕಡಿದರೆ ಸಾಯೋದಿಲ್ಲವೆಂದು ನಿರ್ದಿಷ್ಟವಾಗಿ ಹೇಳಿದೆ. ಎಲ್ಲರೂ ನನ್ನ ಮೇಲೆ ದಾಳಿ ಮಾಡಿದರು!



ಗಣೇಶನ ತುರ್ತು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.



ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು. ನಮ್ಮ ಸ್ನೇಹಿತರೆಲ್ಲಾ ಗರ ಬಡಿದವರಂತೆ ನಿಂತರು.

ಚೆಲುವಾತಿ ಚೆಲುವ ಕನ್ನಿಕೆ 



ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾದಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು.  ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ. ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಗಣೇಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ! 


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಗಣೇಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು. ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿಯ ನೋಡುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು. 

ಹಿಂಡ್ಲು ಮನೆಯತ್ತ



ಹಿಂಡ್ಲು ಮನೆಯೊಂದು ವಿಶಿಷ್ಟ ಜಲಧಾರೆ. ಕೊಡಚಾದ್ರಿ ಕುಡಿದ ನೀರೆಲ್ಲಾ ಇಲ್ಲಿ ಇಳಿದು ಹರಿಯುತ್ತದೆ. ಕೊಡಚಾದ್ರಿ ಚಾರಣದ ಚಿಮ್ಮು ಹಲಗೆಯೂ ಹೌದು! ಜಲಪಾತದ ಸನಿಹದ ಏರುದಾರಿಯಲಿ ಏರಿದರೆ `ಒಂಟಿ ಮರ' ವೆಂಬ ವಿಶಿಷ್ಟ ಜಾಗಕ್ಕೆ ಬಂದು ತಲುಪುತ್ತೇವೆ. 


  ಕೆಳಗಿನಿಂದ ಮೇಲೇರುವುದು ಬಲು ಕಠಿಣವೆಂದು ಒಮ್ಮೆ ಮೇಲಿನಿಂದ ಕೆಳಗಿಳಿದು ಬಂದಿದ್ದೆ! ಜಲಪಾತದ ಬುಡದ ಮನೆಯಲ್ಲಿ ಮಲೆನಾಡಿನ ಮನೆಯ ವಿಶಿಷ್ಟ ತಂಬಳಿಯೂಟ ಸವಿದಿದ್ದೆ! ಇಂತಹ ಮಲೆನಾಡ ಮನೆಗಳು ಪೇಟೆ ಪಟ್ಟಣಗಳ ಮನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತವೆ! ತನ್ನ ಕಾಲಮೇಲೆ ನಿಂತ ಮನೆ. ಹತ್ತಲಿನಲಿ ತರಹೇವಾರಿ ತರಕಾರಿ, ಹೂ ಗಿಡ, ಸಂಪಿಗೆ, ಜಾಜಿ ಬಳ್ಳಿಗಳು. ನೀರ ಹನಿಗಳನ್ನು ನಿರಾಯಸವಾಗಿ ತಮ್ಮ ತಮ್ಮ ಮನೆಗಳತ್ತ ತಿರುಗಿಸಿಕೊಂಡು ನೆಮ್ಮದಿಯ ಬದುಕ ಕಂಡವರು ಆಗಷ್ಟೇ ವಿದ್ಯುತ್ ಎಂಬ ಅನಿಷ್ಟ ಅವರ ಅಂಗಳಕ್ಕೂ ಕಾಲಿಟ್ಟಿತ್ತು ಬಂದು ಹೋಗೋರಿಗೆ ಅವರ ತೋಟದ ಲಿಂಬೆ ಪಾನಕ ಅತಿ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಿದ್ದರು. ಈಗಂತೂ ಆರ್ಥಿಕತೆ ಮಗ್ಗಲು ಬದಲಿಸಿದ್ದರಿಂದ ಅಲ್ಲೊಂದು ಪುಟಾಣಿ ಅಂಗಡಿ ತಲೆ ಎತ್ತಿತ್ತು! ತರಹೇವಾರಿ ಬಾಟಲಿ ಪೇಯ ಮಾರಾಟಕ್ಕಿಟ್ಟಿದ್ದರು. ಪಟ್ಟಣದ ಎಲ್ಲಾ ವಸ್ತುಗಳು ಈಗಲ್ಲಿ ಲಭ್ಯ. ಪಯಣಿಗರು ಬಿಟ್ಟ ಕೊಟ್ಟೆ, ತಾಟು, ಪ್ಲೇಟುಗಳು ಈಗವರ ಅಂಗಳದಲಿ ತಬ್ಬಲಿಯಾಗಿ ಬಿದ್ದಿರುತ್ತವೆ.

ನೀರೂಡುವ ಬೃಹತ್‌ ಸ್ತನಗಳು



  ಶೋಲಾ ಕಾಡುಗಳ ವಿಶಿಷ್ಟತೆ ಇರುವುದೇ ಇಲ್ಲಿ. ಎರಡು ಎರಿನ ನಡುವಿನ ಕಣಿವೆಯಲ್ಲಿ ಬೆಳವ ಮರಗಳು ಬಯಲಿನ ಜನರಿಗೆ ನೀರೂಡುವ ಬೃಹತ್ ಸ್ತನಗಳು! ಪ್ರತೀ ಹುಲ್ಲು ಕುಡಿದ ನೀರನ್ನು ನಿಧ ನಿಧಾನವಾಗಿ ಕಣಿವೆಗೆ ತಳ್ಳುವ ಶೋಲಾ ಕಾಡುಗಳು ಬಯಲ ನೀರಿನ ತಾಯಿ ಬೇರು. ಹಾಗಾಗಿ ಶೋಲಾ ಅರಣ್ಯಗಳು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿತವಾಗಿದೆ. ಆದರೆ ಮಾನವನ ಅಪರಿಮಿತವಾದ ಆಸೆಗೆ ಬಲಿಯಾಗುತ್ತಲಿದೆ.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ ಹಲವು ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು! ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಕೊನೆಯ ಹನಿ 

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಸದಾ ಕಾಡುತ್ತಾ ಉಳಿಯಿತು. ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ ಗೆಳೆಯರು ಮತ್ತೆಂದೂ ಚಾರಣ ದಾರಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

Wednesday, May 27, 2026

ಹಿಮಾಲಯದ ಅಪರೂಪದ ಹಳ್ಳಿಯ ಮಧುರ ಆಲಾಪ

 ಈ ಜಗ ಸೋಜಿಗ….

A portrait of a village. 

ಹೊಸ ಹಾದಿಗಳ ಅನ್ವೇಷಣೆಯಲ್ಲಿ


 ಸಾಮಾನ್ಯವಾಗಿ ಮನಾಲಿ ಹೆಸರು ಕೇಳದವರಿಲ್ಲ. ಅಲ್ಲಿಗೆ ಹೋಗದವರೂ ಮನಾಲಿಯ ಕುರಿತು ತಿಳಿದು ಕೊಂಡಿರುತ್ತಾರೆ. ಆದರೆ ಈ ಅಪರೂಪದ ಹಳ್ಳಿ ಮನಾಲಿಯ ಸನಿಹದಲಿ ಯಾರ ಅರಿವಿಗೂ ಬರದೇ ನಿಶ್ಚಿಂತವಾಗಿದೆ. ಕರಡಿಯಮ್ಮನ ಮರಿಯಂತೆ. ಪಹರೆ ಕಾಯುವ ಹಿಮ ಬೆಟ್ಟಗಳು, ನದಿಗಳ ಪದತಲದಲಿ ನಿಶ್ಚಿಂತವಾಗಿ ಪವಡಿಸಿದೆ. ಹೊಸ ಕಾಲದ ವ್ಯಾಧಿಗಳಾವುವೂ ಕಾಲಿಡದ ಪುಣ್ಯ ಭೂಮಿ!

ಕೊಕ್ಸರ್ ಮತ್ತೊಂದು ಹಳ್ಳಿ.


ಮನಾಲಿಯ ಕಿರೀಟದಂತಿರುವ ಊರು ಸೀಸು. ಅಟಲ್‌ ಟನಲ್‌ ದಾಟಿ ಎಡಕ್ಕೆ ಹೊರಳಿ ೫ ಹಾಡಿನ ದೂರದಲ್ಲಿದೆ ಸೀಸು ಎಂಬ ವಿಚಿತ್ರ ಹೆಸರಿನ ಪುಟಾಣಿ ಹಳ್ಳಿ. ಬಲಕ್ಕೆ ಹೊರಳಿದರೆ ಕೊಕ್ಸರ್‌ ಎಂಬ ಮತ್ತೊಂದು ಪುಟಾಣಿ ಹಳ್ಳಿ ಬೆಟ್ಟಗಳ ಬುಡದಲ್ಲಿ ತಣ್ಣಗೆ ಪವಡಿಸಿತ್ತು. ನೂರಾರು ಹಿಮ ಝರಿಗಳು ಹೊದಿಕೆ ಹೊದಿಸಿ ಕಾಪಿಟ್ಟ ಹಳ್ಳಿ. ಮತ್ತೆರಡು ಹಾಡಿನ ದೂರಕ್ಕೆ ಹಿಮವಾಟವಾಡುವ ಜಾಗ. ಇನ್ನೂ ಸ್ವಲ್ಪ ದೂರಕ್ಕೆ ಹಿಮ ಹೊದ್ದ ರೋತಾಂಗ್‌ ನ ಸುಳಿ ರಸ್ತೆ. ರಸ್ತೆ ಗುಂಟ ಬಿಡಿಸಲಾಗದ ಕಗ್ಗಂಟ್ಟು ಹಿಮ. ಹಿಮಪಾತದ ದಿನಗಳಲ್ಲಿ ರೋತಾಂಗ್‌ ಪಾಸ್‌ ಮುಚ್ಚುತ್ತದೆ. ಅಟಲ್‌ ಟನಲ್‌ ತೆರೆದಿರುತ್ತದೆ ಅಷ್ಟೇ. ಚಳಿಯ ಹೆದ್ದರೆಗಳು ಹೆದ್ದಾರಿ ತುಂಬಾ. ಅದ್ಯಾವುದೋ ಮಾಯಕದಲ್ಲಿ ಪ್ರತ್ಯಕ್ಷವಾದ ಚಿಕ್ಕ ರೆಸ್ಟೋರೆಂಟ್.‌ ಅಲ್ಲೇ ಉಂಡು ತೂರುವಗಾಳಿಗೆ ಬೆಟ್ಟವ ಮಾತಾಡಿಸಿ ಹೊರಟೆವು.



 ನಾಲ್ಕು ದಿಕ್ಕುಗಳಿಂದಲೂ ಹಿಮದ ಹೊದಿಕೆ ಹೊದ್ದ ಬೆಟ್ಟ ಸಾಲು. ಸೂರ್ಯ ಕಿರಣಕೆ ಏಳುವ ಮಂಜು. ಕೆಂಪಿನಿಂದ ಹಳದಿಯಾಗುವ ಎಲ್ಲೆಲ್ಲೂ ಹಿಮದ ಚಾದರ. ನೆನಪುಗಳಿಗೆ ಪುನರ್ಜನಮ್ಮ ಕೊಡುವಂತಹ ವಿಪರೀತ ಚಳಿ! ಬಯಕೆ ಕೆಂಡದ ಮೇಲಿಂದ ಬೀಸುವ ಸುಟ್ಟ ಕುಳಿರ್ಗಾಳಿ. ಒಣ ಮರುಭೂಮಿಯ ತಣ್ಣನೆಯ ಹವೆ. ಅಲ್ಲಲ್ಲಿ ಕಾಣ ಸಿಗುವ ವಿಶಿಷ್ಟ ಮೊಲ. ಕರಿ ಮಣ್ಣ ಗದ್ದೆಗಳಲ್ಲಿ ಎಲ್ಲೆಲ್ಲೂ ಚಿಗುರುವ ಹೂಕೋಸಿನ ಚಿಗುರು. ವಿಶಿಷ್ಟ ಜೀವ ಜಾಲದ ಸೆರಗು. ಊರಿಗೆ ಶಾಲು ಹೊದಿಸಿದಂತೆ ಹರಿವ ಚಂದ್ರಾ ನದಿ! ಚಳಿಗೆ ಬೇಗ ಮಲಗೋ ಬಾನ ಚಂದ್ರ!!

ಊರ ಚಾವಡಿಯಲ್ಲಿ 


 ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ನೀರುಣಿಸುವ ಹಿಮಗಡ್ಡೆಗಳು ಚಂದ್ರಾ ನದಿಯ ಮಹಾ ಮೊಲೆಗಳು! ಹಿಮದ ದಿನಗಳಲ್ಲಿ ಜಲಪಾತವೇ ಮರುಗಟ್ಟಿ ಕಂಬವಾಗುತ್ತದೆ. ಹಿಮಕಂಬ! ಗಡಿಯಾಚೆಗೂ ತನ್ನ ಕರುಣೆಯ ಕೈಚಾಚುತ್ತಾಳೆ. ಚಂದ್ರಾ ಸಿಂಧೂವಿನೊಂದಿಗೆ ಒಪ್ಪಿನ ಒಪ್ಪಂದವಗೈದು ಹರಿಯುತ್ತಲೇ ಪಾಕಿಸ್ತಾನ ಸೇರುತ್ತಾಳೆ. ಚಂದ್ರಾ ನದಿಯ ಒಂದು ಭಾಗ ಈ ಜಲಧಾರೆ. ಇಲ್ಲೇ ನದಿಗುಂಟ ರಿವರ್‌ ಕ್ರಾಸಿಂಗ್‌ ಮಾಡಿಸಲಾಗುತ್ತದೆ. ಉದುರುವ ಹುಡಿ ಮಣ್ಣಿಗೆ ಹುಗಿದ ಕಂಬಗಳು ನೀರಲಿ ತೇಲುವ ಹುನ್ನಾರದಲ್ಲಿದ್ದಂತೆ ಭಾಸ. ಮಹಾ ಮಳೆಗೆ ಕೊಚ್ಚಿ ಹೋದ ಹಳೆಯ ಸೇತುವೆಯ ಕುರುಹುಗಳಿನ್ನೂ ಅಲ್ಲೇ ಜೀವಂತ.

ಸೀಸುವಿನ ಮುಂಬೆಳಗು




ಮುಂಜಾವಿನ ಇಬ್ಬನಿಗೆ ತೊಯ್ದ ನೆಲ. ಸೂರ್ಯ ರಶ್ಮಿಗೆ ಎದ್ದ ಹಿಮದಾವಿ ಸವಿಯಲು ನೀವೊಮ್ಮೆ ಇಲ್ಲಿಗೆ ಬರಬೇಕು. ಪುಡಿಗೆಲಸ, ಪುಡಿಗಾಸು ಬರ್ಫದ ಹೊದಿಕೆ ಜಾರಿದಾಗಲೇ ಭರ್ತಿಯಾಗುವ ಬಟ್ಟಲು, ಬೆಳೆ ಎಲ್ಲಾ. ಒಂದು ತುಂಬಲು ಇನ್ನೊಂದು ಕರಗಲೇ ಬೇಕು. ಅತಿಥಿ ದೇವೋ ಭವ. ಕಲ್ಲುಗಳ ಗುಡ್ಡದಲ್ಲೂ ಅರಳುವ ಹಿಮ ಪ್ರೇಮ. ಆಕಾಶಕ್ಕೆ ಏಣಿ ಹಚ್ಚುವ ಅವಕಾಶವಿಲ್ಲದ ಸೀಮಿತ ಬದುಕಿನ ಓಣಿ. ಹೂಕೋಸು ಅರಳಲು ಬೇಡುವ ಹಿಮ ಕರುಣೆ. ಆಲುವಿಲ್ಲಿ ಭಾಲು!! 

ಸಣ್ಣ ಶಾಲೆ, ಪುಟಾಣಿ ಮ್ಯೂಜಿಯಂ, ಸಣ್ಣ ಔಷಧಾಲಯ ಇವಿಷ್ಟೇ ಸೌಲಭ್ಯಗಳು. ಮರಳಾಗದೇ ಮರಳುವುದು ಹೇಗೆ? ಬದುಕಿಡಿ ಅನುಭವಿಸುವ ಖಾಲಿತನವನ್ನು ಇಲ್ಲಿ ತುಂಬಿಕೊಳ್ಳಬಲ್ಲಿರಿ. ಮನದ ಬೇಗುದಿಯನು ಬೆಟ್ಟಕ್ಕೆ ವರ್ಗಾಯಿಸಿ ನಿರುಮ್ಮಳನಾಗಬಹುದು. 




ಮನದ ಆಗಸದಲ್ಲಿ ತುಂಬಿಕೊಂಡ ಅಪೂರ್ವ ಸೀಸು ಎಂಬ ಪುಟಾಣಿ ಹಳ್ಳಿಯಲ್ಲಿನ ಎರಡು ಹಗಲು ಮತ್ತು ಎರಡು ರಾತ್ರಿಗಳ ನೆನಪು ಸಣ್ಣ ಕಿಡಿ ಹೊತ್ತಿ ಹೊರಬಂದಿದೆ. ನನ್ನ ಕಾಡುತಲಿದೆ ಎಂದೂ ಬಾರದ ಗೆಳತಿಯ ನೆನಪಿನಂತೆ. ತಂಗಾಳಿಗೆ ತೆಗೆದ ಕಿಟಕಿಯಂತೆ. ನೀನಿಲ್ಲದ ಖಾಲಿ ದಿನಗಳ ಸಂಪುಟದ ಸಣ್ಣ ಪುಟದಂತೆ. ಕುದುರೆಯ ಕರಪುಟದಂತೆ ಆಧುನಿಕತೆಗೆ ಪುಟ ತೆರೆದುಕೊಂಡವರಿಗೆ ಅಪ್ಪಟ ದೇಸಿ ಸಂಪುಟ. ಬೆಟ್ಟದ ಬೆರಗಿಗೆ ಪಸುರೊಡೆದ ಪುಟಾಣಿ ಹೂಕೋಸಿನಂತಹ ಹಳ್ಳಿ. ಆರು ತಿಂಗಳು ಕೆಲಸ ಆರು ತಿಂಗಳು ಸೂಟಿ!!

 ಎಲ್ಲೆಲ್ಲಿಂದಲೋ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳು ಅಪರಿಚತರಂತೆ ಹಾದು ಹೋಗುತ್ತವೆ. ಕೆಲವೊಮ್ಮೆ ಪರಿಚಿತರೂ ಅಪರಿಚಿತರಂತೆ! ಗೊತ್ತಿದ್ದೂ ಗೊತ್ತಿಲ್ಲದಂತೆ ಹಾದು ಹೋಗುವರು. ಹರಿದ್ವಾರದ ಬಯಲಿನಿಂದ ಬೆಟ್ಟಕ್ಕೆ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳಂತೆ. ನಿರುದ್ವಿಗ್ನ ನೀರವ ರಾತ್ರಿಗಳನ್ನು ಕಳೆಯುವ ಪಾಪದ ಚಾಲಕರು. ಇಲ್ಲಿ ಬಂದಿಳಿದಿದ್ದೇ ಸುಳ್ಳು ಎಂಬಂತೆ ಬೆಳಗಿನ ಚಳಿಗೆ ಎದ್ದು ಜಿಪ್ಸಾ ಮತ್ತು ಕಿಲಾಂಗ ಎಂಬ ಸ್ವರ್ಗಕ್ಕೆ ಹೊರಟು ಬಿಡುತ್ತಾರೆ. ಅವರ ಕೈ ಚೀಲದ ಗಾತ್ರವು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ! ಅವರಿಗೆ ಈ ಲೋಕವೇ ಅಪರಿಚಿತ. ನಿರುದ್ವಿಗ್ನ! ರಸ್ತೆ ಮಾತ್ರ ಪರಿಚಿತ. ಏನೋ ಕಳೆದುಕೊಂಡು ಅರಸುವವರಂತೆ ಅಪರಿಚಿತ, ಅನೂಹ್ಯವಾಗಿ ಎಕ್ಸಲೇಟರ್‌ ಅದುಮುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಈ ದಾರಿಗಳಲ್ಲಿ ಪಯಣಿಸಲು ಮನಸ್ಸು ಬಯಸುತ್ತಲೇ ಇರುತ್ತದೆ. ಯಾವುದೇ ಹೋಲಿಕೆಗೆ ನಿಲುಕದ ನಿರುದ್ವಿಗ್ನ ಹಳ್ಳಿ ಜಿಪ್ಸಾ. ಇಲ್ಲಿ ಬದುಕುವುದೇ ಇವರ ಸೌಭಾಗ್ಯ! ಎಲ್ಲವಿದ್ದು ಏನೋ ಕಳಕೊಂಡವರಂತೆ ಬದುಕುವ ನಾವು ಸೇಬಿನ ರಾಶಿಯ ಈರುಳ್ಳಿಯಂತೆ!

 ಏಕಾಂತವೇ ಪರಮ ಸೌಭಾಗ್ಯ. ಹಿಮದ ದೀವಟಿಗೆಯಲಿ ಸೂರ್ಯ ಅಪ್ಪಟ ಕೆಂಡ. ಮಂಜಿನಲಿ ನೆನದ ಮನೆಗಳು ಸೂರ್ಯ ಬಂದಾಗ ನೆಟಿಗೆ ಮುರಿಯುತ್ತವೆ. ನಿಧಾನಕ್ಕೆ ಏಳುತ್ತವೆ. ಗದ್ದೆ ಬಯಲುಗಳಲಿ ಅಲೆವ ಜನ ಮಂಜಿಗೆ ಮುಖ ಒಡ್ಡಿ ಸೂರ್ಯ ಮಾಮನಿಗೆ ಶುಭೋದಯ ಹೇಳುತ್ತಾ ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ. ತುಂಬಾ ಮಂಜು ಬೀಳುವಾಗ ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳ ಎಣಿಸುತ್ತಾರೆ. ಕೇವಲ ಗಾಳಿ ಮಾತನಾಡುತ್ತದೆ. ಮನುಷ್ಯ ಮಾತು ಮರೆಯುತ್ತಾನೆ. ಕಾಫಿ ಕಪ್ಪಿನ ಸಾಂಗತ್ಯದೊಂದಿಗೆ ಸುಖಿಸುವ ಸಖನಂತೆ ಸೀಸು ಸದಾ ಶಾಂತವಾಗಿ ನಮ್ಮನ್ನು ಮತ್ತೆ ಮತ್ತೆ ಬರುವಂತೆ ವಿನಂತಿಸುತ್ತದೆ.

ಸೀಸು ಎಂಬ ಆಪ್ತ ಸಖಿ


ಇಲ್ಲಿನ ತಣ್ಣಗಿನ ಹಳದಿ ಬೆಳಕಿನಲ್ಲಿ ತಿಂಗಳುಗಟ್ಟಲೆ ಮಿಂದೇಳಬೇಕು. ಅಪರಿಚಿತ ಬಸ್ಸುಗಳಲ್ಲಿ ಸುಮ್ಮನೆ ಪಯಣಿಸಬೇಕು ಎಂದು ನಿಮಗನಿಸದೇ ಇದ್ದರೆ ಕೇಳಿ. ಜನಪದದ ಗುಂಗಿನೊಳಗೆ ಪದವಾಗಿ, ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬೆರೆಯಬೇಕು. ನೀವೆಂದು ಬರುವಿರೆಂದು ನಿಮಗಾಗಿ ಕಾಯುತ್ತಲೇ ಇದೆ ಸೀಸು.

ಮಾತು ಮರೆತಂತ ಸುಖಭಾವ. ಅರ್ಧ ಬರೆದ ಕವನದಂತೆ. ಗಂಧರ್ವನ ಕನಸಿನಂತೆ ಎಲ್ಲವೂ ಇಲ್ಲಿ ಶಾಂತ. ಒನಕೆಯಂತೆ ಗಂಟೆಗೆ ಕೆಲವು ಕ್ಯೂಸೆಕ್‌ ನೀರನ್ನು ಬೇಜಾರಿಲ್ಲದೆ ಬೆಟ್ಟದಿಂದ ಭೂಮಿಗಿಳಿಸುವ ಭಗೀರಥನಂತೆ ಸದಾ ಸೀಸು ಜಲಧಾರೆ ಸುರಿಯುತ್ತಲೇ ಇರುವುದ ನೋಡುತ್ತಾ ಊರ ಜಗಲಿಯಿಂದ ಹೊರಬಿದ್ದೆ. ಮನಸ್ಸು ಇಲ್ಲಿನ ಗಾಳಿಗೆ ಪುಳಕಗೊಳ್ಳುತಲಿತ್ತು. ನಿನ್ನ ಕಣ್‌ ಬೆಳಕಿನ ಸಂತಸವನ್ನು ನನ್ನೊಡಲಿನಲ್ಲಿ ನಾ ಮತ್ತೆ ತುಂಬಿಕೊಳ್ಳಲು ಒಂಟಿಯಾಗಿ ಇಲ್ಲಿಗೆ ಮತ್ತೆ ಬರಬೇಕು. ಹಿಮ ಚಾದರವ ಹೊದ್ದು ಮಲಗಬೇಕು ಎಂಬ ಬಯಕೆಯೊಂದಿಗೆ ಸೀಸುವಿಗೆ ಹಿಮದ ಕೈ ಬೀಸಿದೆ.

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...