Showing posts with label ಊರ್ಣ ನಾಭನ ಸಂಗ. Show all posts
Showing posts with label ಊರ್ಣ ನಾಭನ ಸಂಗ. Show all posts

Thursday, April 30, 2020

ಬಕುಳದ ಬಾಗಿಲಲಿ ಸಿಕ್ಕವಳು...

ಬಕುಳ ಒಂದು ಸುಂದರ ಹೂ ಬಿಡುವ ಮರ. ಮಲೆನಾಡಿನ ಜನರ ಮದುವೆಗಳಲಿ ಇದರ ಹಾರವು ಅತಿ ಅಗತ್ಯವಾದುದು. ಪರಿಮಳವೂ ಅತಿ ಮಧುರ. ಇದರ ಹಣ್ಣನ್ನು ನಾವು ಚಿಕ್ಕವರಿದ್ದಾಗ ಆರಿಸಿ ಆರಿಸಿ ತಿನ್ನುತ್ತಿದ್ದೆವು. ತುಂಬಾ ರುಚಿಯಲ್ಲದಿದ್ದರೂ ಒಂಥರಾ ಒಗರು ಸಿಹಿಯ ಹಣ್ಣು. ಈಗಿನ ಮಕ್ಕಳಿಗೆ ಲೇಸ್, ಬಿಂಗೊ, ಕುರ್ ಕುರೆ ಬಿಟ್ಟರೆ ಬೇರೆ ಗೊತ್ತಿಲ್ಲ ಬುಡಿ. ಹೊಟ್ಟೆಯ ತುಂಬುವುದರ ಜೊತೆಗೆ ಪುಷ್ಟಿಯೂ ಸಹ. 
                               ಮಂಗನಂತೆ ಕಾಡು ಹಣ್ಣುಗಳನ್ನು ತಿಂದ ನನಗೆ ಯಾವ ವಿಟಾಮಿನ್ ಕೊರತೆ ಕಾಡಿದ್ದಿಲ್ಲ. ಪೂಜೆ ಪುನಸ್ಕಾರಗಳಲ್ಲಿಯೂ ಬಕುಳದ ಉಪಯೋಗ ಉಂಟು. ಬಕುಳದ ಹೂವಿನ ಹಾರ ವಿಲ್ಲದೇ ಮದುವೆನೂ ಆಗಲ್ಲ!


ಹಣ್ಣು 




ವ್ಯಾಟ್ಸಪ್ ನಲ್ಲಿ ಅವಳ ಪೋಟೋಗಳನ್ನು ಕೆಲವರು ಹಾಕಿದ್ದೆ ಹಾಕಿದ್ದು, ನನ್ನ ಮುಖಾರವಿಂದವು ಅರಳಿತ್ತು, ಅವಳ ಹುಡುಕುತ್ತಾ ಬಕುಳದ ಬಾಗಿಲಿಗೆ ಬಂದಿದ್ದೆ. ಬಹಳಾ ದಿನಗಳಿಂದ ಅವಳ ನಿರೀಕ್ಷೆಯಲ್ಲಿದ್ದೆ. ಹುಡುಕುತ್ತಾ ಇದ್ದೆ. ಸಿಕ್ಕಿರಲಿಲ್ಲ. ಅಚಾನಕ್ಕಾಗಿ ಬಾಲ್ಯದ ದಾರಿ ಸವೆಸುತ್ತಿದ್ದವನಿಗೆ ಬಕುಳದ ಮರದ ಬಳಿಯೇ ಅವಳು ಸಿಕ್ಕಳು! ಎಷ್ಟು ಖುಷಿಯಾಯಿತೆಂದರೆ  ಹೇಳ ತೀರದು. ನಿಂತಲ್ಲೇ ಕುಣಿದು ಕುಪ್ಪಳಿಸಿದೆ. ನನಗೆ ಸಿಕ್ಕವಳನ್ನು ನಿಮಗೆ ತೋರಿಸಬೇಡವೇ? ತಪ್ಪು ತಿಳಿಯ ಬೇಡಿ. ಅವಳೊಂದು ಜೇಡ!!! ಕಸದಲ್ಲೇ ಕಸದಂತಿರುವ ಜೇಡ! ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಸೂಕ್ತಿಯೂ ಕಡಿಮೆಯಾದೀತು ಇವುಗಳ ವೇಷ ಮರೆಸುವ ತಂತ್ರಕ್ಕೆ.




ಯಾವುದೋ ಒಣಗಿದ ಎಲೆಯೊಂದು ನೇತಾಡುತ್ತಿದೆಯಲ್ಲಾ ಎಂದು ಚಿಕ್ಕ ಕಡ್ಡಿಯ ಸಹಾಯದಿಂದ ಅದನ್ನು ಮುಟ್ಟಿದೆನಷ್ಟೆ. ಏನಾಶ್ಚರ್ಯ ಒಣಗಿದ ಎಲೆ ಓಡಾಡ ತೊಡಗಿತು! ನೋಡಿದರೆ ಕಾಲುಗಳೂ ಉಂಟು. ಯಾರೀಕೆ? ಹುಡುಕಾಡಿದೆ ಇವಳೇ ಚೇಳು ಬಾಲದ ಊರ್ಣ ನಾಭ( ಜೇಡ). 


             ಅರಶಿನ ಮತ್ತು ಕಡು ಕಪ್ಪು ಬಣ್ಣದ ಅಂಗಿಗಳಲ್ಲಿ ಇವಳನ್ನು ನೋಡಿದ್ದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಇವು ನೋಡಲು ಕಾಣುವುದು ಅಪರೂಪ. ಈಗಿನ ಕಾಲದಲ್ಲಿ ಕಸವಾಗಲು ಯಾರು ಬಯಸುತ್ತಾರೆ ಹೇಳಿ? ಅದೂ ಕಾಲ ಕಸವಾಗಿ ಅಜ್ಞಾತವಾಗಿ. ಎಲ್ಲಾ ಕಡೆ ಬೇಡದ ಕಸವನ್ನು ಎಸೆಯುತ್ತಾ ಇರೋ ಮಾನವನೆಂಬ ಜೀವಿಯ ಮುಂದೆ, ಜೀವಿ ಸಮತೋಲದಲ್ಲಿ ಅಭೂತಪೂರ್ವ ಸಹಕಾರ ನೀಡುವ ಇವು ನಿಜಕ್ಕೂ ಶ್ರೇಷ್ಠವಲ್ಲವೆ? ಏನಂತೀರಿ?
ಶ್ರೀಧರ್. ಎಸ್. ಸಿದ್ದಾಪುರ.

ಚಿತ್ರ ಅಂತಜರ್ಾಲ.


Saturday, February 22, 2020

ಪ್ರಸ್ಥದ ಕೋಣೆಯಲ್ಲೊಂದು ಕೊಲೆ.


oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ.   

ಯಾವುದೋ ಪತ್ತೆದಾರಿ ಕಾದಂಬರಿಯ ಕುರಿತು  ಹೇಳುತ್ತಾನೆಂದು ಸೀಟಿನ ತುದಿಗೆ ಬಂದಿರಾ? ವಿಷಯ ಆಸಕ್ತಿದಾಯಕವಾಗಿದೆ. ಸ್ವಲ್ಪ ಇರಿ.
ಪ್ರತೀ ಜೀವಿಯು ಈ ಜಗತ್ತಿನಲ್ಲಿ ಭಿನ್ನ. ಅವುಗಳಿಗೆ ಪ್ರಕೃತಿ ನೀಡಿದ ಸಂಸ್ಕಾರ ಬೇರೆ ಬೇರೆ. ಹಾಗಾಗಿ ಅವು ಒಂದರಂತೆ ಮೊತ್ತೊಂದಿಲ್ಲ. ಪರಿಸರದ ಒತ್ತಡಗಳು ಅವನ್ನು ವಿಭಿನ್ನವಾಗಿ ರೂಪಿಸಿವೆ. ನಾನು ಹೇಳುವ ಕತೆಯೂ ಅಂತಹುದೇ ಒಂದು ತುಣುಕು.
       
ಕ್ರಾಬ್ ಜೇಡವನ್ನು ಹಿಡಿದಿರುವ ಮತ್ತೊಂದು ಜೇಡ. 
ಜೀವಿಗಳು ತಮ್ಮ ಸಂತಾನವನ್ನು ಮುಂದುವರಿಸುವ ಸಲುವಾಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಸಹಜವಾದುದು. ಸಂತಾನೋತ್ಪತ್ತಿಯಾಗಲು ಗಂಡು ಹೆಣ್ಣನ್ನು ಕೂಡ ಬೇಡವೇ?
ಹೀಗಿರುವ ಪ್ರಸ್ಥದ ಕೋಣೆಯಲ್ಲಿಯೇ ವರನಿಗೆ ಮರಣ ಬಂದರೆ ಹೇಗೆ? ಪ್ರಸ್ತದ ಮನೆಯಲ್ಲಿಯೇ ಒಂದು ಕೊಲೆ ಅದೂ ಮದುಮಗನದ್ದು! ಕೊಲೆಗಾರ ಯಾರೆಂದಿರಾ? ಬೇರಾರೂ ಅಲ್ಲ, ಒಲಿಸಿಕೊಂಡವಳು! ಅಚ್ಚರಿಯಾಯಿತೆ? ಓಡಿದಾಗಲೋ, ಕೆಲಸ ಮಾಡಿದಾಗ ಹಸಿವಾಗೋದು ಸಹಜ. ಆದರೆ ಜೇಡಗಳಿವೆಯಲ್ಲ ಅವುಗಳಿಗೆ ಪ್ರಸ್ಥದ ಕೊನೆಗೆ ಹೆಣ್ಣಿಗೆ ವಿಪರೀತ ಹಸಿವು! ಹಸಿವು ಆರಲು ಕೊಲೆ ಮಾಡಲು ಹೇಸುವುದಿಲ್ಲ. ಹೆಣ್ಣು ಗಂಡಿನ ಚರಮಗೀತೆ ಬರೆಯುವವು. ಗಂಡು ಜಾಣನಾದರೆ ಉಪಾಯವಾಗಿ ತಪ್ಪಿಸಿಕೊಳ್ಳುವುದು. ಆದರೆ ಕೆಲವೊಮ್ಮೆ ಸಿಕ್ಕಿ ಬೀಳುವುದು ಮಾಮೂಲು. ಹೆಣ್ಣು ಸ್ವಲ್ಪ ಯಾಮಾರಿದರೂ ಗಂಡು ತಪ್ಪಿಸಿಕೊಳ್ಳುವುದು.
ಇಲ್ಲಿರುವ oxyopes shweta   ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. ಇದಕ್ಕೆ cannibalism ಎನ್ನುವರು. ಅದು ಸಂಗದ ತರುವಾಯ. ಅಚ್ಚರಿಯಾಯಿತೇ? ಇನ್ನೆಷ್ಟು ಅಚ್ಚರಿಗಳು ಪ್ರಕೃತಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವಳೋ ಗೊತ್ತಿಲ್ಲ. ಗುಟ್ಟು ರಟ್ಟಾದಂದು ನಿಮಗೆ ತಿಳಿಸುವೆ. ಅಲ್ಲಿವರೆಗೆ ನಮಸ್ಕಾರ...
 ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,



      

Friday, January 24, 2020

ಚಿನಕುರುಳಿ ಚೇಳಿನ ಮರಿ!

"ಲೋ ಶ್ರೀಧರಾ ಏನು ಮಾಡ್ತಿದ್ದಿಯೋ, ಬೇಗ ಬಾ" ಅಮ್ಮನ ಆರ್ತನಾದ. "ಈ ಹಾಳು ಪುಸ್ತಕದಲ್ಲಿ ಮುಳುಗಿದರೆ ಲೋಕ ಮುಳುಗಿದರೂ ತಿಳಿಯಲ್ಲ" ಎಂದು ಒಂದೇ ಸಮನೆ ವಟ ವಟಿಸುತ್ತಲೇ ಇದ್ದಳು.
ಚೇಳಿನಂತಿರುವ  ಊರ್ಣ ನಾಭ!

ಎದ್ದೆನೋ ಬಿದ್ದೆನೊ ಎಂದು ಅಮ್ಮನಿದ್ದಲ್ಲಿಗೆ ಓಡಿದೆ. "ಚೇಳಿನ ಮರಿ ಮರಾಯ ಕಚ್ಚಲಿಕ್ಕೆ ಬರುತ್ತೆ ನೋಡು" ಎಂದು ಕಥೆ ಹೇಳಲು ಶುರುವಿಟ್ಟಳು. ನೋಡಿದೆ. ಪುಟಾಣಿ ಚೇಳಿದ್ದರೆ ಅದರ ಅಮ್ಮನೂ ಇರಬೇಕಲ್ಲ ಎಂದು ಯೋಚಿಸುತ್ತಾ ಬಗ್ಗಿ ನೋಡಿದೆ. ಪುಸ್ತಕದ ಮೇಲೆ ಕುಳಿತು ತಬ್ಬಿಕೊಳ್ಳುವಂತೆ ತನ್ನೆರಡೂ ಬಾಹುಗಳನ್ನು ಚಾಚಿತು. ಅಮ್ಮ ಮತ್ತೆ ಚೀರಿದಳು. 'ನಿಂದೇನೋ ಪ್ರಯೋಗ ಅದರ ಮೇಲೆ, ಕಡಿಯುತ್ತೆ ನೋಡು ಹೊರಗೆ ಬಿಟ್ಟು ಬಾ ಮರಾಯ' ಎಂದು ಬೇಡಿಕೊಂಡಳು. ನನಗೇನೋ ಸಂದೇಹ. ಚೇಳಿನ ಮರಿ ಇರಲಿಕ್ಕಿಲ್ಲವೆಂದು. 'ಅಮ್ಮಾ ಇದು ಚೇಳಿನ ಮರಿ ಅಲ್ಲಾ, ಜೇಡವಿರಬೇಕು' ಎಂದೆ. 'ನಿನ್ನ ತಲೆ' ಸರಿಯಾಗಿ ನೋಡು ದೊಡ್ಡ ಕೊಂಬಿದೆ. ಆದರೂ ಪರೀಕ್ಷಿಸುವ ದೃಷ್ಟಿಯಿಂದ ನಿಧಾನಕ್ಕೆ ಪುಸ್ತಕವನ್ನೆತ್ತಿ ಮನೆಯ ಹೊರಗೋಡಿದೆ. ಅದನ್ನು ಕೆಸುವಿನ ಗಿಡದ ಮೇಲೆ ಬಿಟ್ಟೆ. 'ಚೇಳಿನ ಮರಿಯೇ ಅದು' ಎಂದು ವಟ ವಟಿಸುತ್ತಲೇ ಇದ್ದಳು. ಮನೆಯೊಳಗೋಡಿ ಕ್ಯಾಮಾರ ಹಿಡಿದು ಬಂದೆ. ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಬೆಳಕನ್ನು ಅವನ ಮೇಲೆ ಚಿಮುಕಿಸಿದೆ. ಚಿತ್ರವನ್ನು ಕೂಡಲೇ ಕಂಪ್ಯೂಟರಿಗೆ ವರ್ಗಾಯಿಸಿ ನೋಡಿದೆ. ಗುರುತು ಹತ್ತಿತ್ತು. ಇವನಾ ಗೊತ್ತುಂಟು.      'ಇಂಡೊಪಡಿಲಾ'    ಪ್ರಬೆಧಕ್ಕೆ ಸೇರಿದ ಪೋರ, ಮರಿ ವೀರ. ಯಾರ ಕೈಗೂ ಸಿಗದಂತೆ ವೇಷ ಮರೆಸಿ ಚೇಳಿನಂತೆ ತೋರಿಸಿಕೊಳ್ಳುತ್ತಾ ಓಡಾಡುತ್ತಾನೆ! ನೋಡಿದವರೂ ಮೋಸ ಹೋಗಲೇ ಬೇಕು ಹಾಗಿದ್ದಾನೆ ಪುಣ್ಯಾತ್ಮ. ಹಾಗೇ ಅಮ್ಮನೂ ಮೋಸ ಹೋಗಿದ್ದಾಳೆ. ಇವನು ಅವನ್ನವೆಂದರೂ ಕೇಳುತ್ತಿಲ್ಲ. ಕೊನೆಗೆ ಅಂತಜರ್ಾಲದಿಂದ ಒಂದೆರಡು ಚಿತ್ರವಿಳಿಸಿ ತೋರಿಸಿದೆ. ಕೊನೆಗೂ ಅವಳಿಗೆ ಆತ್ಮ ಸಾಕ್ಷತ್ಕಾರವಾಯಿತು! ಜೇಡವೆಂದು ಒಪ್ಪಿದಳು. ಈಗ ಹುಲ್ಲುಕಡ್ಡಿಯನ್ನು ತೋರಿಸಿ ಇದೊಂದು ಜೇಡ ಎಂದರೂ ನಂಬುವ ಸಿತ್ಥಿಗೆ ತಲುಪಿದ್ದಾಳೆ!
,
ಹಿಮ್ಮುಖ ನೋಟದ ಆಕರ್ಷಕ ಕಣ್ಣುಗಳು 



ಶ್ರೀಧರ್. ಎಸ್. ಸಿದ್ದಾಪುರ.

Monday, June 17, 2019

ಕರಿ ಸಾಕ್ಸು ತೊಟ್ಟ ತುಂಟಿಯ ಸ್ವಗತ!



Angaeus sp. [Thomisidae family]
 ದಟ್ಟ ಕಾನನದ ನಡುವೆ ಹೊಳೆಯಂತೆ ಹರಿವ ಸರ ಹದ್ದಿನ ಹರ ದಾರಿಯಲಿ ಸ್ವಚ್ಚಂದವಾಗಿ, ರಾತ್ರಿಯವರೆಗೆ ಏಳಬಾರದೆಂದು ಸಣ್ಣ ಪೊದೆಯ ಟೊಂಗೆ ಮೇಲೆ ಮಲಗಿದ್ದೆ. 
 ಚಿಕ್ಕ ಗಿಡವೇ ನನ್ನ ಮನೆ. ಧೂಳೆಬ್ಬಿಸಿ, ಬರ್ರೆಂದು ಬರುವ ಬೈಕುಗಳ ಹಿಂಡು ಒಂದರ ಹಿಂದೊಂದು. ಎಲ್ಲರೂ ಮುಂದೆ ಮುಂದೆ ಹೋಗುವವರೇ. ಒಬ್ಬರೂ ನೋಡೋರೇ ಇಲ್ಲ! ನನ್ನ ಪುಣ್ಯ. ನನ್ನ ಜಾಗದ ಸನಿಹವೇ ಹಾದು ಹೋಗುವರು. ಆದರೆ ನನ್ನ ನೀಳ ನೀಳ ಕಾಲುಗಳು. ಕಾಲ ಬುಡದಲಿ ಮುಳ್ಳಿನಂತಹ ರಚನೆ. ಜೊತೆಗೆ ಸಾಕ್ಸ್ ತೊಟ್ಟಂತೆ ಕಾಣುವ ಕಪ್ಪು ಕಪ್ಪು ಕಾಲುಗಳು. ಕಣ್ಣುಗಳೋ ದುಂಡಗೆ ಕೆಂಪು ಕೆಂಪು. ಕಣ್ಣು ಗುಡ್ಡೆ ಎದ್ದಂತಿರುವ ನನ್ನ ಕಣ್ಣು ಕಂಡರೆ ನಿಮಗೆ ಭಯವಾಗಬಹುದು. ಭಯ ಪಡುವ ಅಗತ್ಯವಿಲ್ಲ. ಹಗಲಿನಲ್ಲಿ ತಣ್ಣಗೆ ಮಲಗುವ ನಾ ರಾತ್ರಿ ಕಾವಲುಗಾರ! 
spider ನ ಹಿಂಬಾಗ....
 ಕೈ ಕಾಲು ಮಡಚಿ ಮಲಗಿದವನ ಪಕ್ಕ ಪುಸಕ್ಕನೆ ಬೆಳಕಬಿಟ್ಟು ಎಬ್ಬಿಸಬೇಕೆ ಈ ಪುಣ್ಯಾತ್ಮ? ನನ್ನ ಇಷ್ಟು ಹತ್ತಿರ ಬಂದವರಿಲ್ಲ. ಒಮ್ಮೆಗೆ ಹೆದರಿಕೆಯೂ ಆಯಿತು. ಸುದಾರಿಸಿಕೊಂಡೆ. ಹಿಂದಿನಿಂದ ಮುಂದಿನಿಂದ ನನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನುಷ್ಯನ ಮುಖವನ್ನು ಹೋಲುವ ನನ್ನ ಹೊಟ್ಟೆ ಭಾಗವನ್ನೂ ಈ ಪುಣ್ಯಾತ್ಮ ಕ್ಲಿಕ್ಕಿಸಿಕೊಂಡ. ಸಾಕ್ಸು ತೊಡಿಸಿದ್ದು ಯಾರೆಂದು ಕೇಳಬೇಡಿ. ಇಷ್ಟವಾದರೆ ಕ್ಲಿಕ್ಕಿಸಿ ಒಂದು ಲೈಕು!

ಶ್ರೀಧರ್. ಎಸ್. ಸಿದ್ದಾಪುರ.

Saturday, June 8, 2019

ಪ್ರಕೃತಿ ಇವುಗಳಿಗೆ ನೀಡಿದ ಆ ಅದ್ಭುತ ವರ ಯಾವುದು?


 ಥೊಮೊಸಿಡೆ ಪ್ರಭೇದಕ್ಕೆ ಸೇರಿದ ಈ ಜೇಡ ಅತ್ಯಂತ ಸ್ಪಷ್ಟವಾಗಿ ತನ್ನ ಬೇಟೆಯನ್ನು ಹುಡುಕಬಲ್ಲದು. ಆದರೆ ಮನುಷ್ಯ ಜಾತಿಗೆ ತನ್ನ ಆಹಾರವೇನೆಂದು ತಂದೆ ತಾಯಿ ನೀಡುತ್ತಾರೆ. ತಾನೆ ತನ್ನ ಆಹಾರ ಗುರುತಿಸಲಾರ! ತಂದೆ ತಾಯಿಯ ಗುಣಾವಗುಣಗಳನ್ನು ಹೆಕ್ಕಿಕೊಂಡು ನಮ್ಮದೇ ಆದ ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೇವೆ. ಎಲ್ಲದಕ್ಕೂ ಪರಾವಲಂಬನೆ ತಪ್ಪಿದ್ದಲ್ಲ. ಸಣ್ಣ ಶೀತವಾದರೂ ವೈದ್ಯರಲ್ಲಿಗೆ ಓಡುತ್ತೇವೆ.
 


ಆದರೆ ಪುಟಾಣಿ ಜೇಡಗಳನ್ನು ಗಮನಿಸಿ. ತನ್ನ ಬಣ್ಣವೇನೆಂದು ತಿಳಿದು, ಅದನ್ನೇ ಹೋಲುವ ವಿವಿಧ ಗಿಡಗಳನ್ನು ಪರಿಸರದಲ್ಲಿ ಗುರುತಿಸಿ ಅಲ್ಲಿಗೆ ದಾಂಗುಡಿ ಇಟ್ಟು ತನ್ನನ್ನು ರಕ್ಷಿಸಿಕೊಳ್ಳುವುದಲ್ಲದೇ ಆಹಾರವನ್ನೂ ಹುಡುಕಬಲ್ಲದು! ಏನಾಶ್ಚರ್ಯ ನೋಡಿ ಇಲ್ಲಿರುವ ಕ್ರ್ಯಾಬ್ ಜೇಡವನ್ನು. ತನ್ನ ಬಣ್ಣವನ್ನೇ ಹೋಲುವ ಗಿಡವನ್ನು ಆರಿಸಿಕೊಂಡು ಅದರಲ್ಲಿ ಅರಳಿದ ಹೂವಿನ ದಂಟಿನ ಆಶ್ರಯ ಪಡೆದು ಅಲ್ಲಿಗೆ ದಾಂಗುಡಿ ಇಟ್ಟಿದೆ! ತನ್ನ ಬಣ್ಣ ಮತ್ತು ಗಿಡದ ಬಣ್ಣಗಳು ಒಂದೇ ಎಂದು ಅದಕ್ಕೆ ಹೇಳಿದವರ್ಯಾರು? ಅಲ್ಲಿ ಹೂವೊಂದು ಅರಳಿದ ಮಾಹಿತಿ ತಿಳಿಸಿದವರ್ಯಾರು? ಪ್ರಕೃತಿಯ ವಿಶಿಷ್ಟವಾದ ಈ ಅಂರ್ತಸಂವಹನ ನಮ್ಮನ್ನು ಆಶ್ಚರ್ಯಕ್ಕೆ ಕೆಡಹುವುದು. ಯಾರೂ ಕಲಿಸದೆಯೇ ತನ್ನ ಆಹಾರವನ್ನು ಗುರುತಿಸಿ ಬೇಟೆಯಾಡಬೇಕಾದರೆ ಅದಕ್ಕಿರುವ ಅದ್ಭುತವಾದ ಪ್ರಕೃತಿಯು ನೀಡಿದ ವರ ನಿಜಕ್ಕೂ ನಮ್ಮನ್ನು ಅಚ್ಚರಿಗೆ ನೂಕುವುದು.

 ಇವುಗಳನ್ನು ಗುರುತಿಸಲು ಹದ್ದಿನ ಕಣ್ಣಿನ ನನ್ನ ಸ್ನೇಹಿತ ಪ್ರಕಾಶನ ಸಹಾಯ ಹಸ್ತವಿದೆ. ಬೆಳಗಿನಿಂದ ಸಂಜೆವರೆಗೂ ಹಳದಿ ಬಣ್ಣದ ಕ್ರೋಟೊನ್ ಗಿಡದಲಿ ಕೂತು ಎರಡೂ ಬೇಟೆಯಲಿ ನಿರತವಾಗಿದ್ದವು. 
ಶ್ರೀಧರ್. ಎಸ್. ಸಿದ್ದಾಪುರ.

Friday, May 17, 2019

'ಉದರ ನಿಮಿತ್ತಂ ಬಹುಕೃತ ವೇಷಂ'.

 ನಾನಾ ತರೇವಾರಿ ವೇಷ ತೊಟ್ಟು ಯಾರನ್ನೊ ಮಂಗ ಮಾಡಿ ತಮ್ಮ ಹೊಟ್ಟೆ ಹೊರೆದುಕೊಳ್ಳೋ ಎಷ್ಟು ಜನರಿಲ್ಲ ಹೇಳಿ. ಕೊಳಕು ತಿಂಡಿ ಮಾರುವವರು, ದುಡ್ಡಿಗಾಗಿ ದೇಶದ ಜನರ ಆರೋಗ್ಯವನ್ನೇ ಒತ್ತೆ ಇಡಬಲ್ಲವರು. ದೇಶದ ಸಂಪತ್ತು ಮಾರಟಕ್ಕಿಟ್ಟವರು. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. 'ಉದರ ನಿಮಿತ್ತಂ ಬಹುಕೃತ ವೇಷಂ'. ಈ ಮಾತು ಮನುಷ್ಯರಿಗೆ ಮಾತ್ರ ಸೀಮಿತ ಎಂದು ನೀವು ಅಂದುಕೊಂಡಿದ್ದರೆ ಅದು ನಿಜವಲ್ಲ!
 
ಸಣ್ಣ ಆಮೆಯಂತಿದೆ....   ಆದರೆ    ಆಮೆಯಲ್ಲ.


ಕಾಡಿನಲ್ಲಿ ಕೀಟಗಳ ಛಾಯಾಚಿತ್ರ ತೆಗೆಯಲು ನಿಂತದ್ದೆ. ಯಾವುದೊ ಕಡ್ಡಿಯ ತುದಿಯಲ್ಲಿ ಕಸದಂತಹದೊಂದು ನೇತಾಡುತಲಿತ್ತು. ಅರೆ ಅಲ್ಲೇ ಆಮೆಯಂತಹ ಕೀಟವೊಂದು ಕಣ್ಣಿಗೆ ಬಿತ್ತು. ಮೈ ಮೇಲೆಲ್ಲಾ ಸಣ್ಣ ಸಣ್ಣ ಮುಳ್ಳುಗಳ (Spikes) ಮಡಿಕೆ. ತನ್ನ ಕಾಲುಗಳನ್ನು ಮಡಚಿ ಮಣೆಯಂತೆ ದೇಹದ ಕೆಳಗಿಟ್ಟಿತ್ತು! ಸಾಕ್ಷಾತ್ ಹನುಮಂತನಂತೆ. ದೇಹದ ಮೇಲೆ ಹಸಿರು ಬಣ್ಣದ ನಡುವೆ ಎರಡು ಕಣ್ಣುಗಳಂತಹ ರಚನೆ! ಇದು ಬೇರೆ ಕೀಟಗಳನ್ನು ಯಾಮಾರಿಸಲು ಮಾಡಿಕೊಂಡ ಏಪರ್ಾಟು. ಜೊತೆಗೆ ತಲೆಯ ಭಾಗದಲ್ಲೂ ಇಂತಹುದೇ ಎರಡು ಕಣ್ಣುಗಳು. ನಮ್ಮನ್ನೇ ನೋಡುತ್ತಿರುವವೋ ಎಂಬಂತಿವೆ! 



ಪಕ್ಕನೆ ಯಾವ ಕೀಟವೆಂದು ಹೇಳಲು ಸಾಧ್ಯವಿಲ್ಲ. ಸರಿಯಾಗಿ ನಾಲ್ಕೈದು ಪೋಟೋ ಕ್ಲಿಕ್ಕಿಸಿ ನೋಡಿದೆ, ಅರೆ ಇದು ಕೀಟವಲ್ಲ. ಜೇಡ! ಸಖತ್ ಆಶ್ಚರ್ಯ ಜೊತೆಗೆ ಖುಷಿ. ಇದನ್ನು ಮೋದಲು ನೋಡಿದ್ದಿಲ್ಲ. ಜುಮ್ಮನ ಗಿಡದ ಮುಳ್ಳಿನಂತಹ ಮುಳ್ಳು ಹೊತ್ತ ಜೇಡ. ನಿಜವಾಗಿ ಅದರ ಕಣ್ಣುಗಳು ಕಾಲುಗಳ ಎಡೆಯಲ್ಲಿವೆ. ತೀರಾ ಸಣ್ಣದು. ಮಾರನೆಯ ದಿನವೂ ಅಲ್ಲೇ ಪ್ರತ್ಯಕ್ಷ! ಯಾವ ಪ್ರಭೇದವೆಂದು ಗೊತ್ತಿಲ್ಲ. ಇಷ್ಟೇ ಹೇಳಬಲ್ಲೆ 'ಉದರ ನಿಮಿತ್ತಂ ಬಹುಕೃತ ವೇಷಂ'.
 
Front view of the Spider.


Tuesday, January 1, 2019

ಬಾಬಾ ರಾಮ್ ದೇವನ ಶಿಷ್ಯ ಸಿಕ್ಕಿದ್ದ ಮೊನ್ನೆ!

          ನೆಲ್ಲಿಯ ಮರ. ಮುಂಜಾವಿನ ಮುತ್ತಿನಂತಹ ಸೂರ್ಯ. ನೆಲ್ಲಿಯ ಮರಗಳ ಪುಟಾಣಿ ಎಲೆಗಳೊಂದಿಗೆ ಲಾಸ್ಯವಾಡುತ್ತಿದ್ದ. ಎಲೆಗಳ ಸಂಧಿಯಲ್ಲಿದ್ದ ನೆಲ್ಲಿ ಗಿಡದ ಸಣ್ಣ ಕಾಯೊಂದು ಮೆಲ್ಲಗೆ ಚಲಿಸಿದಂತಾಯಿತು.
 

ಆಶ್ಚರ್ಯ, ಪುಳಕ, ಕೌತುಕ ಒಟ್ಟೊಟ್ಟಿಗೆ! ಇದು ಸಾಧ್ಯನಾ ಎಂದು. ಮತ್ತೆ ಸನಿಹಕ್ಕೆ ಹೋಗಿ ಗಮನಿಸಿದೆ, ಅರೆ ಕಾಯಿಗೆ ಕಾಲುಗಳಿವೆ! ಮತ್ತೆ ನೋಡಿದರೆ ಇವ ನಮ್ಮವ ಊರ್ಣನಾಭ.(ಜೇಡ). ಒಮ್ಮೆಲೆ ಒಂದೇ ಕೈಲಿ ಹಿಡಿದ ಕ್ಯಾಮರದ ಬೆಳಕನ್ನು ಚಕ್ಕನೆ ಚೆಲ್ಲಿದೆ. ಈಗ ಗಮನಿಸಿ ನೋಡಿದೆ, ಅರೇ ಸಣ್ಣ ನೆಲ್ಲಿ ಕಾಯಿಗೆ ಕಾಲು ಬಂತಿರುವ ಹದವಾದ ಜೇಡ. ಎಲೆಯ ನಡುವೆ ಏನು ಮಾಡುತ್ತಿದೆ ಎಂದು ಗಮನಿಸುತ್ತಾ ಹೋದೆ. ಮುಂಜಾವಿಗೆ ನಮ್ಮ ಬಾಬಾ ರಾಮ್ ದೇವ್ ಮಾಡುವ ಆಸನವೊಂದನ್ನು ಎಲೆಗಳ ನಡುವೆ ಮಾಡುತ್ತಾ ವಿಶ್ರಾಂತ ಸ್ಥಿತಿಗೆ ಹೋಯಿತು! (ಎರಡನೇ ಚಿತ್ರ ಗಮನಿಸಿ) ಹೀಗೆ ಕಾಲು ಚಾಚಿ ಮಲಗಿದ ನಮ್ಮ ಊರ್ಣ ನಾಭ ಮತ್ತೆ ಅಲ್ಲಾಡಲೇ ಇಲ್ಲ! 

Epidius species.
ಆಂ ಎನಂದ್ರಿ ಹೆಸರಾ? ಹೆಸರು ಗಿಸರು ಕೇಳಬೇಡಿ! ನಮ್ಮ 'ಸಾಲಿಗ' ತಂಡದ ಅಭಿಜಿತ್ ಡಾಕ್ಟ್ರನ್ನೇ ಕೇಳ್ಬೇಕು!

ಇಂತಿ ಪ್ರವರಂ ಸಮಾಪ್ತಿ.
ಶ್ರೀಧರ್ ಎಸ್. ಸಿದ್ದಾಪುರ.

Monday, October 8, 2018

ಮಕ್ಕಳ ಮನ ಸೆಳೆದ ಜೇಡಗಳ ಛಾಯಾಚಿತ್ರ ಪ್ರದರ್ಶನ...

        ಹಕ್ಕಿ ಹಿಕ್ಕೆಯಂತೆ ಕಾಣುವ, ಚಪ್ಪಟೆ   ಹುಳದಂತಹ ಎಂಟು ತುದಿ ಹೊಂದಿರುವ, ಅಂಗಿ ಗುಂಡಿಯಂತಿರುವ,  ಕಿತ್ತಳೆ ಹಣ್ಣಿನಂತಿರುವ, 

ಅಳಿಲಿನ ಮರಿಯಂತಿರುವ ಜೇಡಗಳು. ಒಂದೊಂದು ಒಂದು ಬಗೆ. 

ಕೆಲವು ಮುದುಡಿ ಮಲಗಿದರೆ, ಕೆಲವು ಕೀಟಗಳ ಹಿಡಿದು ತಿನ್ನಲು ಕುಳಿತಿದ್ದವು. 

ಇನ್ನು ಕೆಲವು ಮತ್ತೊಂದು ಜೇಡವನ್ನು ತಿನ್ನಲು ಹಿಡಿದಿದ್ದವು. 
ಕೆಲವು ಎರಡು ಬಾಲದವು. ಕೆಲವು ಇರುವೆಯಂತಿರುವವು, ಆದರೆ ಇರುವೆಗಳಲ್ಲ! ಎಲ್ಲವೂ ಜೇಡಗಳು. ಬಲೆ ಹೆಣೆದು ಕಾದು ಕುಳಿತ ಕೆಲವು ಜೇಡಗಳ ಛಾಯಾಚಿತ್ರಗಳು. 
ಒಂದೊಂದು ಒಂದು ಬಣ್ಣ. ಕೆಲವು ನಿದ್ರಾವಸ್ಥೆಯಲ್ಲಿ. ಕೆಲವು ರಾತ್ರಿ ಶಿಖಾರಿಗೆ ಸಜ್ಜಾಗಿದ್ದವು. 
ಇವುಗಳ ಜೊತೆಗೆ ಒಂದಿಪ್ಪತ್ತು ಹಕ್ಕಿಗಳು. 


















ಹಲವು ಮಿಡತೆಗಳು, ಏರೋಪ್ಲೇನ್ ಚಿಟ್ಟೆಗಳು ಮತ್ತು ಅವುಗಳ ದೂರದ ಸಂಬಂಧಿ ಕೀಟಗಳು! ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ಕಣ್ತುಂಬಿಕೊಂಡ ದೃಶ್ಯ! ಮಕ್ಕಳ ಕಲ್ಪನೆಯಲ್ಲಿ ಹೊಸ ಹೂಗಳಂತೆ ಜೇಡಗಳು ಅರಳಿ ನಿಂತವು. 
ಎಲ್ಲಾ ಛಾಯಾಚಿತ್ರಗಳು ಶ್ರೀಧರ್ ಎಸ್. ಸಿದ್ದಾಪುರ ಅವರ ಕ್ಯಾಮರ ಕಣ್ಣಿಂದ ಮೂಡಿಬಂದಿತ್ತು.



Monday, August 13, 2018

ಬಾಣಂತನ ಮುಗಿಸಿ ಹೊರಟ ಮನೆ ಮಗಳು...

   
ಎರಡು ಬಣ್ಣಗಳ ದಾಸವಾಳ....
     
      ಸುವಾಸನೆ ಬೀರುವ ಹೂ ಮಳೆಯೊಂದು ಸುರಿದು ಹೋಗಿತ್ತು. ಮುತ್ತು ಸುರಿಸುವ ಮಳೆಗಾಲ. ಅಲ್ಲಲ್ಲಿ ಹನಿಗಳು ಹಾಡು ಹೇಳುತ್ತಾ ಕುಳಿತ್ತಿದ್ದವು. ಅವೆನ್ನೆಲ್ಲಾ ಕೇಳಿಸಿಕೊಳ್ಳುತ್ತಾ ನಿಂತಿದ್ದೆ.

ಅಮ್ಮ ನೆಟ್ಟ ಹಳೇ ದಾಸವಾಳದ ಗಿಡದಲ್ಲೊಬ್ಬ ಊರ್ಣನಾಭ (Lynx Spider, Oxyopes Shewtha) ಕುಳಿತಿದ್ದ. ಅರೆ ಇವನಾ ಇವನ ಪರಿಚಯ ಉಂಟೆಂದು ಸುಮ್ಮನಾದೆ.
Lynx Spider, Oxyopes Shewtha
ಅನೇಕ ದಿನಗಳಿಂದ ಅಲ್ಲೇ ಬಿಡಾರ ಹೂಡಿದ್ದ. ಹೊಸ ಮನೆ ಬಾಡಿಗೆ ಸಿಗಲಿಲ್ಲವೋ ಏನೋ ಎಂದು ಸುಮ್ಮನಾದೆ. ಹತ್ತಿರದ ಮತ್ತೊಬ್ಬನಲ್ಲಿ ತನ್ನ ದುಃಖ ತೋಡಿಕೊಳ್ಳುತ್ತಿದ್ದನೆನಿಸಿತು. ಇವನ ಆಸುಪಾಸು ಏನೋ ವಿಚಿತ್ರವಾದ ನೂಲೂಗಳು ಕಾಣುತ್ತಿದ್ದವು. ತೀರ ಸನಿಹ ಹೋಗಿ ಇಣುಕಿದೆ. ಯಾವುದೋ ವಿಚಿತ್ರ ಬಿಳಿ ವಸ್ತುಗಳಿದ್ದವು. ಅವುಗಳಲ್ಲಿ ವಿಚಿತ್ರವಾದ ಬಿಳಿ ಬಿಳಿಯಂತದ್ದು ಕಾಣಿಸಿತು. ಅಲ್ಲಿಂದ ಏನೇನೋ ನೇಲುತಲಿದ್ದವು. ಗಾಳಿ ಬಂದೆಡೆ ತೇಲುತ ಹೋದವು. ಏನೆಂದು ಗೊತ್ತಾಗಲಿಲ್ಲ. ಕೂಡಲೇ ಒಳಗೊಡಿದೆ. ನನ್ನ ತಪಾಸಣೆಯ ವಸ್ತುಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬಂದೆ. ಇವನ ತೀರ ಸನಿಹಕ್ಕೆ ಹೋಗಿ ಅವುಗಳ ಚಿತ್ರ ತೆಗೆದುಕೊಂಡೆ. ಅವನ್ನೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸಿದೆ. ಅಬ್ಬಾ ಬರೋಬ್ಬರಿ 108
ಮರಿಗಳನ್ನಿಟ್ಟಿತ್ತು ನಮ್ಮ ಊರ್ಣನಾಭ. ಅವು ಅಲ್ಲಲ್ಲಿ ಜೀಕುತ್ತಾ ಕುಳಿತ್ತಿದ್ದವು. ಕೆಲವು ತಾಯಿಯ ಮೈ ಮೇಲೆಲ್ಲಾ ಕುಣಿತ್ತಿದ್ದವು. ಅನೇಕ ದಿನಗಳವರೆಗೆ ಅಲ್ಲೇ ಬೀಡು ಬಿಟ್ಟಿದ್ದ. ನಿನ್ನೆ ಸುರಿದ ಭಾರೀ ಮಳೆಗೆ ಬಾಯ್ ಹೇಳಿ ಹೊರಟೇ ಬಿಟ್ಟ. ಬಾಣಂತನ ಮುಗಿಸಿ ಹೊರಟ ಮಗಳಿನಂತಾಗಿದ್ದ ನನಗೆ ದುಃಖ ಒತ್ತರಿಸಿಕೊಂಡು ಬಂತು!
ಬಾಣಂತನದ ಕಷ್ಟ ಸುಖ ನಿಮ್ಮೊಡನೆ ಹಂಚಿಕೊಂಡಿರುವೆ. ಇಷ್ಟವಾದರೆ ಹೇಳಿ.
ಶ್ರೀಧರ್. ಎಸ್. ಸಿದ್ದಾಪುರ. 

ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...