Sunday, August 11, 2024

ಹಸಿರು ಮುಕ್ಕಳಿಸುವ ದಾರಿಯಲ್ಲಿ ಮೂರು ಹೆಜ್ಜೆ


ಯಲ ಜಗಲಿಗೆ ಬಂದ ಸೂರ್ಯ ಗುಟ್ಟಾಗಿ ಹೂಗಳ ಮಧುವ ಹೀರುತಲಿದ್ದ. ಕಾಫೀ ಪ್ಲಾಂಟೇಷನೊಳಗೆ ಅಲ್ಲಲ್ಲಿ ಬಿಸಿಲ ಛಾಪೆ ಹಾಸಿದ್ದ. ಮೂಡಿಗೆರೆಯಿಂದ ನಮ್ಮ ತೇರು ಹೊರಟಿದ್ದು ಜೇನು ಕಲ್ಲು ಗುಡ್ಡಕ್ಕೆ. ಉಜಿರೆಯ ಗೆಳೆಯನ ಮನೆಗೆ ಹೋದಾಗ ಅಕಸ್ಮಾತ್ತಾಗಿ ನೆನಪಾದ ಜೇನುಕಲ್ಲು ಗುಡ್ಡ ಹತ್ತುವ ಉಮೇದು ಮಾಡಿದೆವು. ನೂರಾರು ಚಾರಣ ದಾರಿಗಳಲ್ಲಿ ಇದೊಂದು ವಿಶಿಷ್ಟ. ತೇಜಸ್ವೀ ಕತೆಗಳಲ್ಲಿ ಕಂಡ ಊರುಗಳೆಲ್ಲಾ ಮರೆವಣಿಗೆ ಹೊರಟಿದ್ದವು. ನೆನಪಿನ ಆಗಸದಲ್ಲಿ ಬಿಳಿ ಮೋಡಗಳ ಚಿತ್ತಾರ.




ಕಾಫಿ ನಾಡು ಗೋಪ್ರೋ ಕ್ಯಾಮರದಲ್ಲಿ ಯಥಾವತ್ತು ಚಿತ್ರಿತವಾಗುತ್ತಿತ್ತು.  ಪ್ರತಿ ತಿರುವುಗಳು, ಮಂಡಾಳೆ ಹಾಕಿ ಹೊರಟ ಜನರೆಲ್ಲಾ ಗೋಪ್ರೋ ಕ್ಯಾಮರದಲ್ಲಿ ಬಂದಿ. ನಮ್ಮೊಂದಿಗೆ ಕಿಲೋ ಮೀಟರ್‌ ಗಟ್ಟಲೆ ಕಂಪೆನಿ ನೀಡಿದ ಜೇನು ಕಲ್ಲು ಗುಡ್ಡ ಮರೆಯಾಗಿ ಹೋಗಿತ್ತು. ಚದುರಿದ ಜನಸಂಖ್ಯೆ. ಗುಡ್ಡಕ್ಕೆ ಬಡಿದ ಬುಲೆಟ್‌ ಸದ್ದು ಕಿವಿತುಂಬುತಲಿತ್ತು. ಮೂಡಿಗೆರೆಯಿಂದ ಖಾನಾಪುರದ ದಾರಿ ಹಿಡಿದು ಅಲ್ಲಿ ಬಲಕ್ಕೆ ಹೊರಳಿ ಕೊಳ್ಳಬೇಕು. ಕಾಫಿ ಕಾಡಿನ ಹೆಬ್ಬಾವಿನ ಹೆದ್ದಾರಿ. ಅಲ್ಲಲ್ಲಿ ಚದುರಿದ ಮನೆಗಳ ನಡುವೆ ಅನಂತದ ಓಟ. ಜನರೇ ಜಗತ್ತಿನಿಂದ ಕಣ್ಮರೆಯಾದಂತೆ ಭ್ರಮಿಸ ಬಹುದಾದ ಭ್ರಾಮಕ ಜಗತ್ತಿನಲ್ಲಿ ಒಂಟಿ ಬುಲೆಟ್‌ನ ಓಟ. ಗದ್ದೆಯಂಚಿನ ದಾರಿಗಳಲ್ಲಿ ನಮ್ಮ ಒಂಟಿ ಸಲಗ. ಇಪ್ಪತ್ತು ಮವತ್ತು ವರುಷಗಳ ಕೆಳಗಿನ ಪರಿಸ್ಥಿತಿಯನ್ನು ನೆನೆದು ಚಕಿತಗೊಂಡೆ.

ವಿಚಿತ್ರ ಹೆಸರುಗಳ ಊರಿನಲ್ಲಿ…….

ಯಾವ ಮನೆ ಹಾಳ ಈ ಹೆಸರಿಟ್ಟನೋ ಭಗವಂತ ಬಲ್ಲ ಬೂದಿಹಾಳ! ಬೂದಿಹಾಳ ಊರಿನಲ್ಲಿ ಎಡಕ್ಕೆ ತಿರುಗಿ ಬೈಕ್‌ನ ಕೀಲಿ ತಿರುವಿ ಸುಮ್ಮನಿರಿಸುತ್ತಲೇ ಸಾವಿರ ಜೀರುಂಡೆಗಳು ಮಾಲ್‌ಕೌಂಸ್‌ ರಾಗದಲ್ಲಿ ತಮ್ಮ ಆರ್ಕೆಸ್ಟ್ರಾ ಶುರು ಮಾಡಿದವು. ಇಂತಹುದೇ ನೂರಾರು ವಿಚಿತ್ರ ಹೆಸರಿನ ಊರುಗಳ ಹಿಂದೆ ಬೀಳಬೇಕು. ಮೂಲ ಕೆದುಕ ಬೇಕು. 

ಬೂದಿ ಹಾಳ ಊರಿನಲ್ಲಿ ಎಡಕ್ಕೆ ತಿರುಗಿ ಬೈಕ್‌ನ ಕೀಲಿ ತಿರುವಿ ಸುಮ್ಮನಿರಿಸುತ್ತಲೇ ಸಾವಿರ ಜೀರುಂಡೆಗಳು ತಮ್ಮ ವಯೋಲಿನ್‌ ಹಿಡಿದು ಆರ್ಕೆಸ್ಟ್ರಾ ಮಾಡಲು ಬಂದವು.

ದಾರಿ ಯಾವುದಯ್ಯ-

ಒಂಟಿ ಮನೆಯ ಯಜಮಾನನಲ್ಲಿ “ಹೊಯ್‌ ಜೇನುಕಲ್ಲು ಗುಡ್ಡಕ್ಕೆ ಹೋಪುದು ಹ್ಯಾಂಗೆ?” ಎಂದರೆ ತನ್ನ ಉಬ್ಬಸಮಯ ಉಸಿರನ್ನು ಮೇಲೆ ಕೆಳಕ್ಕೆ ಒಯ್ದು ತನ್ನ ವಿಶಿಷ್ಟ ಕನ್ನಡದಲ್ಲಿ ದಾರಿ ಉಸುರಿದ. ಜೀರುಂಡೆಯ ಜಗತ್ತಿನಲ್ಲಿ ಸದಾ ಒಂಟಿಯಾಗಿ ಬದುಕುವ ಇವರ ಬದುಕು ನಮಗೆ ಪರಮಾಶ್ಚರ್ಯ. ಜನ ಸಮುದ್ರದ ನಡುವೆ ಇದ್ದರೂ ನಮ್ಮಂತವರು ಸದಾ ಒಂಟಿ.

ಕಾಡ ಜಗುಲಿಗೂ ಕಾಲಿಟ್ಟ ನೂರಾರು ರೆಸಾರ್ಟಗಳು, ಕಲ್ಪನೆ ಬುಡಮೇಲು ಮಾಡಿದ ಅನೇಕ ಹೋಂ ಸ್ಟೇಗಳು. ಹಸಿರ ಕಾಡಿನ ನಡುವೆ ಕಾಂಕ್ರಿಟ್‌ ಕಾಡು ಬೆಳೆಸುತ್ತಿರುವವರ ಬಗಗೆ ಒಂದು ವಿನಮ್ರ ಕಾಳಜಿ. ಪರಿಸರವ ಹಾಳುಗೆಡುಹದಿರಿ.


ಆತ್ಮಹತ್ಯೆಗೆ ಸಮಾನವಾದ ದಾರಿಯನ್ನು ತೋರಿ ನಮ್ಮಿಬ್ಬರನ್ನು ಸಾಗಹಾಕಿದ ಆಸಾಮಿ ನಾಪತ್ತೆ.

ತೀವ್ರ ಕೊರಕಲಿನ ಇಳಿಜಾರು ಹಾದಿ. ಹಾದಿಗುಂಟ ಹಾಸಿದ ಮರಗಳ ಚಪ್ಪರ. ಸಹಸ್ರ ಸಹಸ್ರ ಜೀರುಂಡೆಗಳು ಪಿಟೀಲು ಹಿಡಿದು ನಮ್ಮ ಆಗಮನವನ್ನು ಸಂಭ್ರಮಿಸತೊಡಗಿದವು. ಕೆಲವೊಮ್ಮೆ ಏಕತಾಳ ಕೆಲವೊಮ್ಮೆ ದ್ವಿತಾಳ. ನೂರಾರು ಕೀಟಗಳೂ ನಮ್ಮ ಜೊತೆಗೇ ಪ್ರಯಾಣ ಹೊರಟಿದ್ದವು. ಕಕ್ಕೆ ಮುಂತಾದ ಮರಗಳ ಪುಟ್ಟ ವಿಶ್ವವಿಧ್ಯಾಲಯ ತೆರೆದುಕೊಂಡಿತು. ಇಲ್ಲಿನ ಜೀವ ವೈವಿಧ್ಯ ಬೆರಗು ಮೂಡಿಸುವಂತಹದು. ಅಧ್ಯಯನ ಕಾರರಿಗೆ ಪಂಥಾಹ್ವಾನ.

ಗೆಳೆಯನೊಂದಿಗೆ ಹರಟುತ್ತಾ ಗುಡ್ಡಕ್ಕೆ ದಾಗುಂಡಿ ಇಟ್ಟೆವು. ಗೋವುಗಳ ನಾದದ ಜೊತೆಗೆ ಗೋಪಾಲಕನ ಸದ್ದು ಕಿವಿ ತುಂಬಿತ್ತು. ಚಾರಣ ಪ್ರಾರಂಭದಲಿ ಚಿಕ್ಕ ಕಾಡು, ಎರಡು ಗುಡ್ಡಗಳು ಸಂಧಿಸುವ ಜಾಗ.

ಮೇಲೆರುತ್ತಲೇ ಕಾಲಿಗೆ ಮುತ್ತಿದ ಇಂಬಳವನ್ನು ಉದುರಿಸಲು ಅವುಗಳ ಮೇಲೆ ನಶ್ಯ ಹುಡಿಯ ಸನ್ಮಾನ ಮಾಡಿದೆ. ಸನ್ಮಾನಕ್ಕೆ ತಲೆಬಾಗಿ ಖುಷಿ ಪಟ್ಟವು!!

ಗುರ್ಗಿ ಗಿಡದ ಸಮುದ್ರವೇ ನಮ್ಮ ಮುಂದೆ. ಜೊತೆಗೆ ಕಕ್ಕೆ ಮುಂತಾದ ಮರಗಳ ಸಂಧಿನಲಿ ನುಸುಳ ಬೇಕಾಯಿತು. ಶೋಲಾ ಕಾಡಿನ ನಡುವೆ ಹುದುಗಿಸಿಟ್ಟ ಬೆಟ್ಟ ಕಾಣದೇ ದಾರಿ ತಪ್ಪಿದ ಮಕ್ಕಳಾದೆವು. ದಾರಿಯುದ್ದಕ್ಕೂ ಆನೆ, ಕಾಡುಕೋಣಗಳ ಲದ್ಧಿ, ಕುಮಾರ ಪರ್ವತದ ತಪ್ಪಲಿನಲಿ ಆನೆಯ ಆರ್ಭಟದ ನೆನಪು ಬೆನ್ನು ಹುರಿಯಲ್ಲೊಂದು ಸಣ್ಣ ಭಯ ಹುಟ್ಟಿಸಿತು. ಈ ಭಯವೇ ಸುತ್ತಲಿನ ಪ್ರಾಣಿ ಪಕ್ಷಿ ಗಿಡ ಗಂಟೆಗಳನ್ನು ಆಸ್ವಾದಿಸದಂತೆ ಪ್ರತಿಬಂಧಿಸಿದವು. ಭಯವಿಲ್ಲದ ಸ್ಥಿತಿಯೇ ಅನುಭವ ಸಾಣೆಯ ಆಶಾ ಕಿರಣ.

ಮೂಡಿ ಬಂದ ಬೆಳ್ಳಿ ಕಿರಣ-

        ಜೇನು ಕಲ್ಲು ಗುಡ್ಡ ದೂರದಿಂದಲೇ ಕಿಸಕ್ಕನೇ ನಕ್ಕು ತನ್ನಲ್ಲೇ, ಬೇಕಾ ಬಡ್ಡಿ ಮಗನೇ ಎಂದತಾಯ್ತು. ನನ್ನ ಜೊತೆಗೇ ಅಸಂಖ್ಯಾತ ಹುಳು ಹುಪ್ಪಟೆಗಳೂ ಜೇನುಕಲ್ಲು ಗುಡ್ಡಕ್ಕೆ ಪ್ರವಾಸ ಹೊರಟಿದ್ದವು! ಜೀರುಂಡೆಗಳು ತಮಾಷೆಯಾಗಿ ನಕ್ಕವು. 




ಅಗೋಚರ ದಾರಿಯಲಿ ಅರ್ಧ ಗಂಟೆಯ ತೀವ್ರ ಹುಡುಕಾಟದ ನಂತರ ಬೆಳ್ಳಿ ಕಿರಣದ ಟಿಸಿಲು. ಬೆಟ್ಟದ ಕಿರು ದಾರಿ ತೆರೆದುಕೊಳ್ಳುತ್ತಲೇ ಸುತ್ತಲಿನ ಚರಾಚರಗಳೆಲ್ಲಾ ಸಜೀವಗೊಂಡವು. ಸುಮ್ಮನಾದ ಜೀರುಂಡೆಗಳು ಒಂದೇ ಸಲಕ್ಕೆ ತಮ್ಮ ಮೊದಲಿನ ಮಾಲ್ಕಂಸ್‌ ರಾಗವನ್ನು ಬಾರಿಸಿತೊಡಗಿದವು. ರಾಗದಲ್ಲಿ ಕರಗಿ ಮುಂದಡಿ ಇಟ್ಟೆವು. ಲಯಕ್ಕೆ ಮರಳಿದವು. ಪೊದೆ ಜಾತಿಯ ಮರಗಳು ತೆಳುವಾಗುತ್ತಾ ಸಾಗಿ ಶಿಖರಾಗ್ರ ಕಾಣತೊಡಗಿತ್ತು.


ನೀಲಿ ಹೊತ್ತ ಆಗಸದಡಿಯಲಿ ಹೂ ಹಾಸಿಗೆಯಂತಹ ಹುಲ್ಲ ಮೇಲಿನ ಸುಂದರ ಪ್ರಯಾಣ.  ಸ್ವಾಗತಕ್ಕೆ ನೀಲ ಮತ್ತು ಗಾಢ ಗುಲಾಲಿಯ ಕರ್ಣ ಕುಂಡಲ ಗಿಡಗಳು ಪೂರ್ಣ ಕುಂಬ ಹಿಡಿದು ಬಂದಿದ್ದವು. ನೀಲ ಕುರುಂಜಿ ಎಂಬ ವಿಶಿಷ್ಟ ಹೂವಿನ ನೆನಪಾಯಿತು. ಕೂಡಲೇ ಸಂಶೋಧನೆಗೆ ಇಳಿದೆ. ಮತ್ತೊಮ್ಮೆ ಬಂದು ಸಂಶೋಧಕನಾಗುವಿಯಂತೆ ಎಂದು ಗೆಳೆಯ ಕಾಲೆಳೆದನಾದುದರಿಂದ ಬೆಟ್ಟದೆಡೆಗೆ ಹೊರಳುವವನಾದೆ. ಗಾಳಿಯ ಕಣ ಕಣದಲ್ಲೂ ಹೂವ ಗಂಧ. ಚೇತೋಹಾರಿ ಚೆಲುವಿನ ಗುಚ್ಛ. ದಾರಿಯುದ್ದಕ್ಕೂ ತಂಪು ಗಾಳಿಯ ಸಾಂತ್ವನ. ಬಲದ ದಿಕ್ಕಿಗೆ ತೀವ್ರ ಕಣಿವೆ. ದೂರದಲ್ಲೆಲ್ಲೋ ಎರಡು ಒಂಟಿ ಮನೆಗಳು. ನಿರ್ಮಲವಾಗಿ ಬದುಕುವ ಇವರ ಜೀವನೋತ್ಸಾಹ. ಇಲ್ಲಗಳ ನಡುವೆಯೂ ನಗುವ ನಯನಗಳು ನಗರವಾಸಿಗಳಾದ ನಮ್ಮ ನಿದ್ದೆ ಕೆಡಿಸಿದವು. ಆಗಾಗ ಕೇಳಿಬರುವ ದನಗಳ ಕೊರಳ ನಿನಾದ. ಜೇನಿಗೆ ಮುತ್ತಿಡುವ ದುಂಬಿಗಡಣ. ಇಂಗ್ಲೀಷ್‌ ನ ಎಲ್‌ ಆಕಾರದಲ್ಲಿ ಹರವಿನಿಂತ ಗುಡ್ಡ. ಗುಡ್ಡಗುಂಟ ಕೇವಲ ಎರಡೇ ಎರಡು ಇಳಿಜಾರು. ಬಾಕಿ ಎಲ್ಲವೂ ಆರೋಹಣ. ಈ ಗುಡ್ಡ ಜೇನುಕಲ್ಲು ಹೇಗಾಯಿತು ಎಂದು ಚಿಂತಿಸುತ್ತಾ ಮೇಲೇರಿದೆ. 





ನೆತ್ತಿಯಲಿ ನಿಂತು-

ನಿರಹಂಕಾರಿ ಗುಡ್ಡದ ನೆತ್ತಿಯಲಿ ನಿಂತಾಗ ಸೂರ್ಯನು ನಡು ನೆತ್ತಿಯ ಮೇಲೆ ಕತ್ತಿ ಝಳಪಿಸುತಲಿದ್ದ. ಅಲೆ ಅಲೆ ಯಂತೆ ಶಿಖರಗಳು. ಹಸಿರು ಜುಟ್ಟು ಬಿಟ್ಟ ನೂರಾರು ಸುಂದರಾಂಗನೆಯರು ಸುತ್ತಲೂ ನೆರೆದಿದ್ದರು! ಅದರಲ್ಲೊಂದು ಎತ್ತಿನ ಭುಜ. ಎಂತಹ ಎಂಟೆದೆಯ ಬಂಟನನ್ನು ಬೆದರಿಸುವ ಅದರ ನೆತ್ತಿ ಇಲ್ಲಿಂದ ನಿಚ್ಚಳ. ಜಾರದಂತೆ ಸಮತೋಲನ ಕಾಪಾಡಿಕೊಂಡು ನೆತ್ತಿಯ ಸವರುವುದು ಬಲು ಕಠಿಣ.





ಕುದುರೆ ಮುಖವೂ ಇಲ್ಲಿಂದ ಸ್ಪಷ್ಟ. ನೆತ್ತಿ ಮೇಲಿನ ಹುಲ್ಲ ಹಾಸಿಗೆಯಲಿ ಒಂದರ್ಧ ಗಂಟೆ ವಿರಮಿಸಿ ಬುತ್ತಿಗಂಟಿನೊಡನೆ ಹೊರಟು ಬಿಟ್ಟೆವು. ಸುತ್ತಲಿನ ದೃಶ್ಯ ಕಾವ್ಯವನ್ನು ಪದಗಳಲ್ಲಿ ಹಿಡಿದಿಡುವಲ್ಲಿ ಸೋತವು.

 

ಅಚ್ಚರಿಗೊಳಿಸಿದ ಡ್ರಾಸಿರ:-

ಬೆಟ್ಟದೊಡಲಿನ ಅಚ್ಚರಿಗಳ ತಿಳಿಯಬೇಕಾದರೆ ಒಂಟಿಯಾಗಿ ಏರಬೇಕು. ಪ್ರಕೃತಿಯ ಸೊಬಗಿನ ಜೊತೆಗೆ ಸೋಜಿಗಗಳು ತನ್ನಿಂದ ತಾನೇ ತೆರೆದುಕೊಳ್ಳುವುದು.










ಜನುಮದಲ್ಲೊಮ್ಮೆ ಕೀಟಾಹಾರಿ ಸಸ್ಯವನು ಅದರ ಆವಾಸದಲ್ಲೇ ನೋಡಬೇಕು. ಅದರ ವಿವರ ಕಲೆಹಾಕಬೇಕು ಎಂಬ ಕನಸಿತ್ತು. ಪರಶಿವನು ಹಂದಿಯ ರೂಪದಲ್ಲಿ ಬಂದಂತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತು. ನನ್ನ ಅದೃಷ್ಟಕ್ಕೆ ನಾನೇ ಪುಳಕಗೊಂಡೆ. ಕೆಂಬಣ್ಣದ ಹೂವಿಗೊಂದು ಜುಟ್ಟೊಂದು ಬಂದಂತೆ ಸಣ್ಣ ಕುಡಿಯಿಂದ ಅಲಂಕೃತಗೊಂಡಿತ್ತು. ಮೈಯ ಮೇಲೆ ಸಣ್ಣ ಸಣ್ಣ ರೋಮಗಳು. ಮುಟ್ಟಿದರೆ ಎಲ್ಲಿ ಉದರುವುದೋ ಎಂಬಷ್ಟು ಚಿಕ್ಕವು. ಹೂವೆಂದು ಲಾಸ್ಯವಾಡಲು ಬಂದ ದುಂಬಿಗಳು ಅಪರಾಧ ಮಾಡಿದ ಖೈದಿಯಂತೆ ಸಿಕ್ಕಿಬಿದ್ದು ಒದ್ದಾಡುತಲಿದ್ದವು. ಇನ್ನೆಂದೂ ಈ ತಪ್ಪು ಮಾಡೊಲ್ಲವೆಂದು ಆರ್ತವಾಗಿ ಬೇಡುತಲಿದ್ದವು. ತುಂಬಾ ಹೊತ್ತು ಅವನ್ನೇ ನೋಡುತ್ತಾ ಕುಳಿತೆ.

 ತಾನೆಷ್ಟೇ ಏರಿದರೂ ತನ್ನ ಹಿರಿತನವ ಎಲ್ಲೂ ಸಾರದ ನಿರಂಹಕಾರಿ ಈ ಗುಡ್ಡ.

ಅದಮ್ಯವಾದ ಜೀವನೋತ್ಸಾಹ ತುಂಬಿದ ಅದ್ರಿಗೊಂದು ಸಲಾಂ ಹೇಳಿ ಇಳಿಯತೊಡಗಿದೆವು. ಹೊಟ್ಟೆ ಎಕ್‌ ದಂ ಚುರುಗುಟ್ಟುತಲಿತ್ತು ಬೆನ್ನ ಚೀಲದಲ್ಲಿದ್ದ ಪಲಾವಿನ ಪರಿಮಳಕ್ಕೆ ಮನಸೋತು ಮನಸೋ ಇಚ್ಚೆ ತಿಂದು ಕೆಳಗಿಳಿದೆವು. ಯಾವುದೇ ಪ್ಲಾಸ್ಟಿಕ್‌ ಪಳೆಯುಳಿಕೆನ್ನುಳಿಸದೇ ಸುಂದರ ನೆನಪುಗಳನ್ನು ಮಾತ್ರ ಉಳಿಸಿಕೊಂಡು ಬಂದೆವು. 












ಪುರುಸೊತ್ತಾದಾಗ ನೀವು ಒಮ್ಮೆ ಇಲ್ಲಿಗೆ ಹಾಜರಿ ಹಾಕಿ. ಏನಂತೀರಿ?




 

ವಾರೆ ನೋಟ

ಹಸಿರು ಮುಕ್ಕಳಿಸುವ ದಾರಿಯಲ್ಲಿ ಮೂರು ಹೆಜ್ಜೆ

ಬ ಯಲ ಜಗಲಿಗೆ ಬಂದ ಸೂರ್ಯ ಗುಟ್ಟಾಗಿ ಹೂಗಳ ಮಧುವ ಹೀರುತಲಿದ್ದ. ಕಾಫೀ ಪ್ಲಾಂಟೇಷನೊಳಗೆ ಅಲ್ಲಲ್ಲಿ ಬಿಸಿಲ ಛಾಪೆ ಹಾಸಿದ್ದ. ಮೂಡಿಗೆರೆಯಿಂದ ನಮ್ಮ ತೇರು ಹೊರಟಿದ್ದು ಜೇನು ಕ...