ಅದೇ ರುಚಿಯ ಅದದೇ ವಾಕ್ಯಗಳು, ಮಾಹಿತಿಗಳಿಂದ ರೋಸಿ ಹೋಗಿ ಬಿಟ್ಟೆ. ಓದದೇ ಹೇಳಬಹುದಾಗಿದ್ದ ಮುಂದಿನ ವಾಕ್ಯ. ಹಳಸಲು ಆಗಬಾರದು ಆದರೆ ಹೇಗೆ? ತಿಳಿಯದ ತಿಳಿಯಾಗದ ಅನವರತ ಜಿಜ್ಞಾಸೆ. ಬಾಲ್ದಿಲಿ ಇಟ್ಟ ನೀರೇ ಸಮುದ್ರವೆಂದು ತಿಳಿವ ಬದುಕು ನಮದಾಗಬಾರದು ಅಲ್ವಾ? ಸಣ್ಣ ಬದಲಾವಣೆಯ ಹನಿಯೊಂದು ಬೇಕಿದೆ. ಹಾಗಾಗಿ ಹೊಸ ವಿನ್ಯಾಸದ ಹುಡುಕಾಟ! ಜೋಧಪುರದಲ್ಲಿ ಜುಗಲ್‌ಬಂದಿ ನಿಮ್ಮ ಮುಂದೆ.
***
ಮೆಹರ್‌ಗಾನ್ ಕೋಟೆಯ ಹೊರ ಆವರಣದಲಿ ರಾವಣತಾರ ಸಂಗೀತ ವಾದ್ಯದ ಸ್ವರ ಚಮತ್ಕಾರ. ಬರಹಕ್ಕೆ ನೆನಪಿನ ಜುಗಲ್‌ಬಂಧಿ. ಬಿಸಿಲಿಗೆ ಬೆವರಿನ ಜುಗಲ್‌ಬಂಧಿ. ವಾಸ್ತವಕೆ ಇತಿಹಾಸದ ಜುಗಲ್‌ಬಂಧಿ ಎಂತಹ ಲಯ ವಿಜ್ಞಾನ ಇವರ ನರನಾಡಿಗಳಲ್ಲಿ ಮನಸೋಲದೇ ವಿಧಿ ಇಲ್ಲ. ರಾಜಸ್ಥಾನದ ಜೋಧಪುರದಲ್ಲಿ ಕಂಡ ದೃಶ್ಯಾವಳಿಯ ನೆನಪುಗಳ ಜುಗಲ್‌ಬಂಧಿ ನಿಮ್ಮ ಮುಂದೆ.
***
ಹೋಟೆಲ್ ವೀವ್ ಪಾಯಿಂಟ್ ಕಿಟಕಿ ತುಂಬಾ ಹರಡಿದ ಬೃಹತ್ ಕೋಟೆಯ ಹರವು! ಹೋಟೆಲ್ ಮಾಣಿ ಅಟ್ಟೆ ಅಟ್ಟೆ ಪರೋಟ ತಂದಿಟ್ಟಾಗ ತಿನ್ನುವುದು ಹೇಗೆಂದು ಕಳವಳಗೊಂಡೆ. ಪರೋಟಾಗೆ ಮೊಸರಿನ ಜುಗಲ್‌ಬಂಧಿ. " ಇಲ್ಲಿನ ಬಿಸಿಲಿಗೆ ಬೇಕಾಗುತ್ತೆ ತಿನ್ನಿ ಸಾರ್." ಎಂದ. ಬಿಸಿಲೇ ತಿನ್ನುತ್ತೊ ಬಿಸಿಲಿಗೆ ತಿನ್ನುವುದೋ ಅನುಮಾನ ಕಾಡಿತು. ಕೋಟೆಯ ಗೋಡೆಗಳಂತೆ ಒಂದರ ಮೇಲೊಂದು ಹೇರಿಕೊಂಡಿತ್ತು. ಅಂತು ಇಂತೂ ಕೋಟೆ ನೋಡುತ್ತಾ ಒಂದು ಪರೋಟವನ್ನು ಮೊಸರಿನ ಜುಗಲ್‌ಬಂಧಿಯೊಂದಿಗೆ ತಿಂದು ಮುಗಿಸಿದೆ.
| ನೀವು ಸ್ವಲ್ಪ ನೋಡಿ... 😂 |
ಬಿಸಿಲ ಕೋಲುಗಳು ಕೋಟೆಯ ಗೋಡೆಯೊಂದಿಗೆ ಜುಗಲ್‌ಬಂಧಿ ನಡೆಸಿತ್ತು. ಕೋಟೆಯೊಳಗೆ ಬೆಳಕಿನ ಚಿತ್ತಾರ ಕೆತ್ತಿತ್ತು. ಇಲ್ಲಿಂದ ಹೊರಟಾಗ ಎಂಟು ಗಂಟೆ. ನೀಲಿ ನೀಲಿ ಮನೆಯಿಂದೆದ್ದ ಧೂಮ ಕೋಟೆಯ ಗೋಡೆಯ ಸೋಕಿ ಜುಗಲ್‌ಬಂಧಿ ನಡೆಸಿದ್ದವು.
ಕೋಟೆ ವದನದ ತುಂಬಾ ರಾಜಸ್ಥಾನಿ ಚಿತ್ತಾರ
ಬನ್ನಿ ಕೋಟೆಯೊಳಗೆ ಹೋಗೋಣ. ಚಿತ್ರಕಾರಗಳಿದ್ದರೂ ಆತನ ಸೃಜನಶೀಲ ಮನಸ್ಸು ಪ್ರತೀ ಕೋನದಲ್ಲೂ ಪ್ರತಿಫಲಿಸುತಲಿತ್ತು. ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ ಸುಂದರವಾದುದು ಜೈಪೋಲ್ 1806ರಲ್ಲಿ ಕಟ್ಟಲ್ಪಟ್ಟಿದ್ದು. ಇದರ ನಿರ್ಮಾತ ಮಾನ್‌ಸಿಂಗ್.
ಅಲ್ಲಿ ಕೆತ್ತಿದ ಆನೆ, ಕುದುರೆಗಳು ಈಗಷ್ಟೇ ಎದ್ದು ಬಂದಂತಿದ್ದವು. ಎರಡನೆಯ ದ್ವಾರ ಫತೇ ಪೋಲ್ ದ್ವಾರ ಯುದ್ದ ಕಾಲದಲ್ಲಿ ಬಿದ್ದ ಗುಂಡುಗಳಿಂದ ನುಜ್ಜು ಗುಜ್ಜಾದ ಮುದುಕನ ಗುಳಿಬಿದ್ದ ವದನದಂತಿತ್ತು!
ಕೋಟೆಯ ಮುಂದಡಿ ಇಟ್ಟರೆ ತುತ್ತಿನ ಚೀಲ ತುಂಬಲೊಬ್ಬ ರಾವಣ್ ತಾರ್‌ವಾದ್ಯವನ್ನು ತನ್ನ ರಾಧೆಯೊಂದಿಗೆ ಬಾರಿಸುತ್ತಿದ್ದ. ಈ ರಾವಣ್ ತಾರದ ಮಧುರ ಆಲಾಪ ಕೋಟೆಯ ಮೌನದೊಂದಿಗೆ ಜುಗಲ್‌ಬಂಧಿ ನಡೆಸಿತ್ತು! ಬಿಸಿಲಿಗೆ ಒಣಗುತ್ತಾ ಚಹವೇ ನಮ್ಮ ಲಕ್ಸೂರಿ ಎಂಬಂತೆ ಹೀರುತಲಿದ್ದರು! ಅವರಿಗೆ ಹತ್ತಿಪ್ಪತ್ತು ನೀಡಲೂ ಹಿಂಜರಿಯುವ ಕೆಲವರು ಒಂದು ದಿನದ ಸಂಗೀತ ಕಾರ‍್ಯಕ್ರಮಕ್ಕೆ ಐದು ಸಾವಿರ ಪೀಕುತ್ತಿದ್ದರು! ರಾವಣ್ ತಾರ್‌ದ ಸ್ವರ ನಮ್ಮ ನಾಡಿಗಳಲ್ಲಿ ವ್ಯಾಪಿಸುತ್ತಿತ್ತು.
ವಿ ಆಕಾರದ ತುದಿಯಿಂದ ಕೋಟೆಯ ದ್ವಾರ ಪ್ರಾರಂಭವಾಗಿ ಎಡಮಗ್ಗುಲಿನಲಿ ಹೊರಳಿ ಏರುದಾರಿಯೊಂದಿಗೆ ಬಲಕ್ಕೆ ಹೊರಳಿಕೊಂಡಿತ್ತು. ಬೆಟ್ಟದ ಬಳುಕುಗಳನ್ನೇ ಬಳಸಿಕೊಂಡ ಪರಿ ನಿಜಕ್ಕೂ ಅನನ್ಯ. ಬಲಕ್ಕೆ ಕೋಟೆಯ ದ್ವಾರ. ಮಹಲುಗಳು ಗಗನಮುಖಿಯಾಗಿದ್ದವು!
ಚರ್ಮವಾದನದಲ್ಲಿ ಪರಿಣತಿ ಹೊಂದಿದವನನ್ನು ದಾಟಿದರೆ ಕೋಟೆಯ ಕಾವಲುಗಾರರು ಬಿಳಿ ಸಮವಸ್ತೃ ಮತ್ತು ರಾಜಸ್ಥಾನಿ ರುಮಾಲಿನಲ್ಲಿ ಕೋಟೆಯೊಂದಿಗೆ ಜುಗುಲ್ ಬಂದಿ ನಡೆಸಿದ್ದರು. ಎಲ್ಲರಿಗೂ ರುಮಾಲು ಸುತ್ತುವುದನು ತೋರಿಸುತಲಿದ್ದರು. ಮಹಲಿನ ಕೆತ್ತನೆ, ಕಾವಲುಗಾರರ ಉಡುಪು ಜುಗಲ್ ಬಂದಿಗಿಳಿದಿತ್ತು. ಮರ್‌ವಾರ ರಾಜರ ಕಲಾ ನೈಪಣ್ಯವಿಲ್ಲಿ ಅನಾವರಣಗೊಂಡಿದ್ದವು. ಒಂದಕ್ಕಿಂತ ಒಂದು ವಿಭಿನ್ನ ಕಿಟಕಿ ಗೋಡೆಗಳ ಕೆತ್ತನೆ ಬಿಸಿಲಿನೊಂದಿಗೆ ಜುಗಲ್‌ಬಂಧಿಗಿಳಿದಿತ್ತು. ಅನೇಕ ಸುತ್ತುಗಳಿಂದ ಸುತ್ತುವರಿದ ಏಳುದ್ವಾರಗಳಿಂದ ಅತಿಭದ್ರ ಕೋಟೆಯಾಗಿ ಉಳಿದಿದೆ. ಈಗಲೂ ಈ ಕೋಟೆ ಮೇವಾರದ ರಾಜ ಗಜಸಿಂಗನ ಹಿಡಿತದಲ್ಲಿದೆ!
ಕರಣೀ ಮಾತೆಯ ಕೃಪೆ
ಕರಣೀ ಮಾತೆಯ ಕೃಪೆಯಿಂದ ಅಡಿಗಲ್ಲು ಹಾಕಿಸಿಕೊಂಡ ಕೋಟೆ, ಬೆಳಕಿನ ದೇವರು ಸೂರ್ಯನ ಕೋಟೆ ಎಂದು ರಾಜಸ್ಥಾನಿ ಭಾಷೆಯಲ್ಲಿ ಕರೆಸಿಕೊಳ್ಳುವುದು.
ಮರ್‌ವಾರ್ ಸಂಗೀತೋತ್ಸವದ ಸಲುವಾಗಿ ಅನೇಕರು ದೇಸಿ ಸಂಗೀತ ನೃತ್ಯದಿಂದ ನೆರೆದವರನ್ನು ರಂಜಿಸುತ್ತಿದ್ದರು. ಸುಂದರ ಕೆತ್ತನೆಗೆ ದೇಶೀಯ ನೃತ್ಯ ಸಂಗೀತದ ಜುಗಲ್‌ಬಂಧಿ ಕ್ಯಾಮಾರದಲ್ಲಿ ನೃತ್ಯ ಸಂಗೀತ ಬಂದಿ. ಬೆಳಗಿನಿಂದ ಹಾಡು, ಕುಣಿತ ಜೋಶ್‌ನಲ್ಲಿದ್ದರೂ ಸ್ವಲ್ಪವೂ ಬೇಸರ ಅವರ ಮುಖದಲ್ಲಿರಲಿಲ್ಲ. ಮೋತಿ ಮಹಲ್, ಫುಲ್ ಮಹಲ್ ನೋಡಿಕೊಂಡು ಶೀಶ್ ಮಹಲಿನಲ್ಲಿ ಕಾಲಿಟ್ಟರೆ ಅಚ್ಚರಿಗಳ ಜುಗಲ್‌ಬಂಧಿ. ಹಚ್ಚಿಟ್ಟ ಒಂದು ಮೇಣದ ಬತ್ತಿ ಸಾವಿರವಾಗಿ ಕಾಣುತಲಿತ್ತು. ಪುಡಿ ವರ್ಣದ ಅಮೃತಶಿಲೆಗಳಿಂದಾದ, ಶೃಂಗರಿಸಿದ ಮೂರಂತಸ್ತಿನ ಭವನದ ಹೊಸ್ತಿಲಲ್ಲೇ ರಾವಣ್‌ತಾರದ ಮೆಲುದನಿ ಸ್ವರ, ಶಿಲ್ಪದೊಂದಿಗೆ ಜುಗಲ್‌ಬಂದಿಗಿಳಿದಿತ್ತು.
ಹಲವು ಕೋಣೆಗಳಲ್ಲಿ ರಾಜಸ್ಥಾನಿ ಕಲೆ ಬಿಂಬಿಸುವ ವಸ್ತುಗಳಿದ್ದವು. ಕೆಲವು ಕೋಣೆ ಮುಚ್ಚಿದ್ದವು. ಅಮೃತಶಿಲೆಯಲ್ಲಿ ಚಿತ್ತಾಕರ್ಷಕ ಹೂ ಬಳ್ಳಿ. ಜಾಲಾಂಧ್ರ ರಚನೆ ನಿಮ್ಮನ್ನು ಸ್ವಾಗತಿಸುತ್ತೆ. ಮಾರ್‌ವಾರ್ ಹಬ್ಬದ ಸಲುವಾಗಿ ದೇಸಿ ನೃತ್ಯ ದರ್ಬಾರ್ ಹಾಲ್‌ನಲ್ಲಿ ಎದುರಿನ ಅಂಗಳದಲ್ಲಿ ನಡೆಯುತ್ತಿತ್ತು.
ನೋಡಲೇ ಬೇಕಾದ ನೀಲೂರು
ಊರಿಗೊರೇ ನೀಲಿಕುಡಿದು ನೀಲವಾಗಿ ಕುಳಿತಿತ್ತು. ನೀಲೂರು! ಬ್ಲೂ ಸಿಟಿ ಕ್ಯಾಮರಾಕ್ಕಂತೂ ಪುರುಸೊತ್ತಿರಲಿಲ್ಲ ಊರಿಗೊಂದು ಕಿರೀಟ. ತಣ್ಣಗೆ ಮಲಗಿದ ರಕ್ಕಸಗಾತ್ರದ ಪಿರಂಗಿಗಳು ಇತಿಹಾಸದ ಹಸಿ ಬಿಸಿ ಕಥಾನಕವನ್ನು ಉಣಬಡಿಸುತ್ತಿವೆ. ಕೋಟೆಯನ್ನು ವಶಪಡಿಸಿಕೊಳ್ಳಲು ಬಂದ ಪ್ರತಿಯೊಬ್ಬರಿಗೂ ಅದು ನೀಡಿದ ಉತ್ತರಗಳ ನಿಟ್ಟುಸಿರು ಅಲ್ಲೇ ಇತ್ತು!
ಫಿರಂಗಿಯ ಮೇಲೆ ಕುಳಿತ ಅಳಿಲು ತನ್ನ ಇನಿಯನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಕೈ ಕೈ ಹಿಡಿದ ನವವಿವಾಹಿತರು, ಅಪ್ಪ-ಮಗನ ಜುಗಲ್‌ಬಂದಿ ಕೋಟೆಯ ಛಾವಣಿಯಲ್ಲಿ ಛಾವಣಿಯಿಂದ ಕಾಣುವ ನೀವು ನೋಡದ ಅಮೃತ ಶಿಲೆಯ ತಾಜ್‌ಮಹಲ್ ಮೇಹರ್‌ನ್‌ಗಢದೊಂದಿಗೆ ಜುಗಲ್‌ಬಂದಿಗೆ ಇಳಿದಿತ್ತು. ಮುಳುಗುವ ಸೂರ‍್ಯ ಕತ್ತಲಿನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಮಹಲಿನ ಇಂಚಿಂಚು ಅದ್ಭುತ ಕಲಾಕುಸುರಿಯಿಂದ ಅಲ್ಲಿನ ಪಾರಂಪರಿಕ ಉಡುಗೆಯ ಜನರೊಂದಿಗೆ ಜುಗಲ್‌ಬಂದಿಗಳಿದಿತ್ತು. ಎಲ್ಲೆಲ್ಲೂ ಪೊಗದಸ್ತಾದ ಹುರಿ ಮೀಸೆಯ ಹುರಿಯಾಳುಗಳು ರುಮಾಲು ಸುತ್ತಿಕೊಂಡು ಜುಗಲ್‌ಬಂದಿಗಿಳಿದಿದ್ದರು.
ನೋಡಲೇ ಬೇಕಾದ ನೀಲಿಯೂರಿನ ಇತಿಹಾಸ
ರಾವ್ ಜೋಧನಿಂದ 1459ರಲ್ಲಿ ನಿರ್ಮಿಸಲ್ಪಟ್ಟ ಇದು ಮಂಡೋರದ 9 ಕಿ.ಮೀ. ದಕ್ಷಿಣಕ್ಕೆ ಸ್ಥಾಪಿಸಿದ ನಗರ ಜೋಧಪುರ. ಪಕ್ಷಿಗಳ ಗುಡ್ಡವಾಗಿತ್ತು ಒಮ್ಮೆ. ಊರ ನಡುವೆ ಕಾಂತದಂತೆ ಆಕರ್ಷಿಸುವ ಮೇಹರ್‌ಗಾನ್ ಕೋಟೆ. ಸೂರ‍್ಯನ ಆರಾಧಕರ ಸೂರ‍್ಯನ ಕೋಟೆ. ಘಡವಾಲಿಯಾ ಸಮುದಾಯದವರ ಅಪೂರ್ವ ಕಲ್ಲಿನ ಜ್ಞಾನಕ್ಕೊಂದು ಸಾಕ್ಷೀ. ಇವರ ಜೊತೆಗೆ ಬೆರೆತ ಚವಾಲಿಯ ಸಮುದಾಯದವರು ಎಂತಹ ಭಾರವನ್ನು ತಮ್ಮದೇ ತಂತ್ರಗಾರಿಕೆಯಲ್ಲಿ ಎತ್ತಿ ಸಾಗಿಸಬಲ್ಲವರು. ಈ ಎರಡೂ ಸಮುದಾಯದವರು ಪ್ರಕೃತಿಯನ್ನು ಪಳಗಿಸಿದ ಪರಿ ಅನನ್ಯ. ಇಲ್ಲಿನ ನೀರಿನ ಜ್ಞಾನವೂ ಅನನ್ಯ. ಇವರಿಬ್ಬರ ಜುಗಲ್‌ಬಂದಿಯಲ್ಲಿ ನಿರ್ಮಿತ ಈ ಕೋಟೆ ಏಷ್ಯಾದ ಒಂದು ಅತ್ಯುತ್ತಮ ಕಲಾಕೃತಿ! ಇಲ್ಲಿನ ಪ್ರತೀ ಕೋಣೆಯೂ ಗತ ಇತಿಹಾಸವ ಉಸುರುತ್ತದೆ. ಶೃಂಗಾರ ಕೋಣೆ , ಹೌದಾ, ಶೀಶ್ ಮಹಲ್, ಹೂವಿನರಮನೆ ಮತ್ತು ಹೆಮ್ಮಕ್ಕಳ ಅರಮನೆಯ ಕೋಣೆಯೊಳಗೊಮ್ಮೆ ಹೊಕ್ಕು ಬರೋಣ.
ಶೃಂಗಾರ ಚೌಕ -
ಆನೆ ಮೇಲೆ ಹೊರಿಸುವ ಹೌದಾಗಳಿಗಾಗಿಯೇ ರಚಿಸಿದ ಕೋಣೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮಹರಾಜ ಜಸ್ವಂತ್ ಸಿಂಗ್‌ನಿಗೆ ಶಹಜಾನ್ ನೀಡಿದ ಹೌದಾ ಕೋಟೆಯೊಂದಿಗೆ ಜುಗಲ್ ಬಂದಿಗಿಳಿದಿತ್ತು! ಇದರ ರಚನೆ ನಿಮ್ಮ ಕಣ್ಮನ ಸೆಳೆಯುತ್ತದೆ.
ಇವೆಲ್ಲವನ್ನು ನೋಡಿ ಮುಂದಡಿ ಇಟ್ಟರೆ ಸಿಗುವುದೇ ಅಜಿತ್ ಸಿಂಗ್‌ನ ಶಯನಗೃಹ ಶೀಶ್ ಮಹಲ್. ಅದ್ಭುತವಾದ ಕನ್ನಡಿ ಕಲೆಯಿಂದ ಬೆಳಕು ಕನ್ನಡಿಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆಸಿತ್ತು. ಬನ್ನಿ ಗಾಜಿನ ಮಹಲಿಗೆ ಒಂದು ಸುತ್ತು ಬರೋಣ.
ಗಾಜಿನ ಮಹಲ್ (ಶೀಶ್ ಮಹಲ್)
ಶೀಶ್ ಮಹಲ್‌ನ್ನು ಅಜಿತ್‌ಸಿಂಗ್, ಪೂಲ್ ಮಹಲ್‌ನ್ನು ಅಭಯಸಿಂಗರು 17ನೆಯ ಶತಮಾನದಲ್ಲಿ ನಿರ್ಮಿಸಿದ್ದರು. ಕನ್ನಡಿ ಅಳವಡಿಸಿ ಚಿನ್ನ ಲೇಪಿಸಿ ಗೋಡೆ ಸೀಲಿಂಗ್ ಇರುವುದು ಶೀಶ್ ಮಹಲಿನ ವಿಶೇಷತೆ. ಬೆಳಕಿನೊಂದಿಗೆ ಕನ್ನಡಿ ಜುಗುಲ್‌ಬಂದಿಗಿಳಿದಿತ್ತು.
ಶೀಶ್ ಮಹಲಿನ ಕೋಣೆಯ ಬಾಗಿಲ ಬಾಗುವಿನಲ್ಲಿ ಕುಳಿತ ಶಿವ, ಬ್ರಹ್ಮ, ಪಾರ್ವತಿ, ದೇವಿ, ಕೃಷ್ಣ, ಗಣೇಶರ ನಡುವೆ ಸುಂದರ ಜುಗಲ್‌ಬಂದಿ. ಗೋವರ್ಧನ ಗಿರಿಯ ನೆತ್ತಿದ ಕೃಷ್ಣನ ಕೆತ್ತನೆ ಅದ್ಭುತ. ಇಲ್ಲಿ ಕಲೆಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆದಿತ್ತು.
ಅಭಯಸಿಂಗ್ ನಿರ್ಮಿತ ಹೂವಿನರಮನೆ ಇಲ್ಲಿಂದ ಮುಂದೆ ತೆರೆದುಕೊಳ್ಳುತ್ತದೆ. ಇದೊಂದು ಸಂಗೀತವನ್ನು ಆಲಿಸುವ ಖಾಸಗಿ ವರಾಂಡ ಇಲ್ಲಿಂದ ಮುಂದೆ ತಾಕತ್‌ಸಿಂಗ್ ನಿರ್ಮಿಸಿದ ತಾಕತ್‌ನಿವಾಸದ ಕಲ್ಲುಗಳು ಕಲೆ ನಮ್ಮೊಂದಿಗೆ ಮೌನ ಸಂವಾದಕ್ಕಿಳಿದಿದ್ದವು.
ಇವೆಲ್ಲವ ದರ್ಶಿಸಿ ಮುಂದಡಿ ಇಟ್ಟರೆ ಹಳದಿ ಮರಳುಕಲ್ಲಿನ ಅಪರೂಪದ ಕೆತ್ತನೆಯ, ನಿಮ್ಮ ಬಾಯಿಯಿಂದ `ವಾವ್' ಎಂಬ ಉದ್ಗಾರವನ್ನು ಹೊಮ್ಮಿಸುವ ಹೆಮ್ಮಕ್ಕಳ ಅರಮನೆ ಮಂತ್ರಮುಗ್ಧವಾಗಿಸುತ್ತದೆ. ಅರಮನೆಗೊಂದು ಶೋಭೆ ಅರಮನೆಯ ಅತ್ಯಂತ ಹಳೆಯ ಭಾಗವೂ ಇದಾಗಿದೆ. ಮೇವಾರರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ ನುಡಿಯುತ್ತದೆ.
ಮೇವಾರ್ ಚಿತ್ರಕಲೆ...
ಮೇವಾರ್ ಚಿತ್ರಕಲೆ 17ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಮೊದಮೊದಲು ಮೊಗಲರಿಂದ ಪ್ರಭಾವಿಸಿದ್ದ ಈ ಕಲೆ ತದನಂತರ ತನ್ನದೇ ವಿಶಿಷ್ಟತೆಯ ಚಾಪ್‌ನ್ನು ಪಡೆದುಕೊಂಡಿತು. ಉಗುರಿನ ಮೇಲೆ ಇವರು ಮೂಡಿಸುವ ಚಿತ್ರ ಒಂದು ಅದ್ಭುತ ಕಲೆ. ಬಟ್ಟೆ ಮೇಲೆ ಮೂಡಿಸುವ ಅವರ ಕಲೆ ಅಪೂರ್ವ. ಇಂದಿಗೂ ನಮ್ಮ ಮನೆಯಲ್ಲಿ ಬಟ್ಟೆ ಮೇಲೆ ರಚಿಸಿದ ಸುಂದರ ಚಿತ್ರವೊಂದು ರಾಜಸ್ಥಾನದ ಮೇವಾರ್ ಕಲೆಯ ಜುಗಲ್‌ಬಂದಿ ನಡೆಸಿತ್ತು. ಇಲ್ಲಿಂದ ನಾವು ಹೊದ ಶಿಲ್ಪಗ್ರಾಮವು ರಾಜಸ್ತಾನಿ ಕಲೆಯನ್ನು ಅನಾವರಣಗೊಳಿಸುವ ಸಂಸ್ಕೃತಿಕ ನಿಲ್ದಾಣ. ಮುಂದಿನ ಜನಾಂಗಕ್ಕೆ ಕಲೆ ಸಂಸ್ಕೃತಿಯನ್ನು ಪರಿಚಯಿಸಲು ಅವರು ರೂಪಿಸಿಕೊಂಡು ನಿರ್ವಹಿಸುವ ತಾಣ. ನಿವಿಲ್ಲಿಗೆ ಭೇಟಿ ಕೊಟ್ಟಾಗ ತಪ್ಪದೇ ಹೋಗಿಬನ್ನಿ.
ಇಲ್ಲಿನ ಇಂಡೋ ಮೊಘಲ್ ಶೈಲಿಯ ಕಟ್ಟಡಗಳು ಒಂದಕ್ಕಿಂತ ಒಂದು ಭಿನ್ನ. ಎಲ್ಲಿ ಹೋಗಿ ಎಲ್ಲಿಂದ ಹೊರಬರುವುದೋ ಎಲ್ಲವೂ ಗೋಜಲು. ಕರನಿಮಾತೆಗೆ ನಮಸ್ಕರಿಸಿ ಕೋಟೆಯ ನೆತ್ತಿ ತಲುಪಿದರೆ ನಾಲ್ಕಾರು ಪಿರಂಗಿಗಳು ಮುಳುಗುವ ಸೂರ‍್ಯನೊಂದಿಗೆ ಜುಗಲ್‌ಬಂದಿಗಿಳಿದಿದ್ದವು.
ಹಳದಿ ಮರಳು ಕಲ್ಲು, ಬಿಸಿಲಕೋಲು, ಅಮೃತಶಿಲೆಯ ಜಸವಂತ್ ಥಾಡಾ ನಮ್ಮ ಮನಸ್ಸಿನೊಂದಿಗೆ ಬೆರೆತು ಸದಾ ಜುಗಲ್‌ಬಂದಿಗಳಿದು ನೆನಪುಗಳನ್ನು ಮುನ್ನಲೆಗೆ ತರುತ್ತಲೇ ಇದೆ.







No comments:
Post a Comment