Sunday, April 27, 2025

ಮೊದಲ ಮಮ್ಮಿಯ ತೊದಲು ನೋಟ…


ಮೊದಲ್ಗೊಂಡ ಓಟ-

ಶಿಮ್ಲಾದ ಹಾಟ್‌ ರಷ್‌ನ್ನು ಹಿಂದಿಕ್ಕಿ ನಾರ್ಕಂಡದ ಆಪಲ್‌ ತೋಟಗಳನ್ನು ಹಾದು ವಿಶ್ವದ ಉತ್ಕೃಷ್ಠ ಆಲೂ ಬೆಳೆಯುವ ಚಿತ್ಕುಲ್‌ ಊರಿನಲ್ಲಿ ನಕ್ಷತ್ರಗಳನ್ನು ಹೆಕ್ಕಿ ಕೈ ಚೀಲಕ್ಕೆ ಸುರಿದು, ಪವಾಡ ಸದೃಶ ಕಣಿವೆಯಲ್ಲಿ ಚೂರೇ  ಚೂರು ಜಾಗಗಳಲ್ಲಿ ಜಿರಳೆ ನುಸುಳಿದಂತೆ ತೂರಿಕೊಂಡು ಟಿಬೆಟ್‌ ಗಡಿಯ ದಾಬವೊಂದನ್ನು ನೋಡಿ ಧೂಳಿನ ಸ್ನಾನ ಮಾಡುತ್ತಾ ಹಿಮಾಚಲದ ತುತ್ತ ತುದಿಯ ʼಗ್ಯೂʼ ಊರಿನ ದಾರಿಯಲ್ಲಿದ್ದೆವು. ಮೂರು ದಿನಗಳಿಂದ ಮೆರಾಥಾನ್‌ ನಂತೆ ಕ್ಯಾಬ್‌ ನಲ್ಲಿ ಓಡುತ್ತಾ ಸುಸ್ತಾಗಿ ಒಣಗುತ್ತಾ ಬಂದ ನಮ್ಮ ಕನಸುಗಳು ಗರಿಗೆದರಿದ್ದು ಇಲ್ಲೇ. 

      ಸ್ಪಿಟಿ ಕಣಿವೆಯ ಅತ್ಯಂತ ದುರ್ಗಮ ರಸ್ತೆಗಳನು ಮಾತಾಡಿಸಿ, ಸ್ಪಿಟಿ ಮತ್ತು ಸಟ್ಲೇಜ್‌ ಎಂಬೆರಡು ನದಿಯ ಮಿಲನಕ್ಕೆ ಸಾಕ್ಷಿಯಾಗಿ, ನದಿ ಹರಿವಿನ ವಿಚಿತ್ರ ಬಂಡೆಗಳ ಬಳುಕಿಗೆ ಅಚ್ಚರಿಗೊಂಡು ಅಲ್ಲೇ ಒಂದು ಚಹಾ ಹೀರಿ, ಆಪಲ್‌ ತಿಂದು ನ್ಯಾಕೊ ಸರೋವರದ ದಂಡೆಯಲಿ ತಂಗಿ ಗ್ಯೂ ಹಳ್ಳಿಯತ್ತ ಓಟ ಕಿತ್ತೆವು.


 

ಸ್ಪಿಟಿ ಮತ್ತು ಸಟ್ಲೆಜ್‌ ಸೇರುವ ಸಂಗಮದಲ್ಲಿನ ಬಂಡೆಗಳು ಭೂಮಿ ಹುಟ್ಟಿನ ರಹಸ್ಯ ಹೇಳುತ್ತದೆ. ದಕ್ಷಿಣದ ತೆಲಂಗಾಣದ ಗಂಡೀಕೋಟದಂತೆ ಇವು ಕಾಣುತ್ತದೆ. ಕೆಲವು ಕಡೆಗಳಲ್ಲಿ ಸಾಗರವಿದ್ದ ಕುರುಹನ್ನು  ಇಲ್ಲಿನ ಬಂಡೆಗಳು ಹರವಿ ನಿಂತಿವೆ. ಅಲ್ಲಲ್ಲಿ ಸಮುದ್ರದ ಅವಶೇಷಗಳು(ಫಾಸಿಲ್‌ಗಳು) ಸಿಗುತ್ತದೆ. ಎರಡೂ ನದಿಗಳ ಬಣ್ಣವೂ ಕಣ್ಮನ ಸೆಳೆಯುತ್ತದೆ.

 


ಸಾಮಾನ್ಯ ಹಳ್ಳಿಯ ಅಸಾಮಾನ್ಯ ಕತೆ-

ಶಬ್ದಕ್ಕೆ ತೀರವಿಲ್ಲದ ನೋಡಿದಷ್ಟು ಕಣ್ಣು ತೀರದ ಸುಂದರ ಹಳ್ಳಿ. ಗಾಳಿ ಮಾತ್ರ ಇಲ್ಲಿ ಶಬ್ದ ಮಾಡುತ್ತದೆ. ಮೌನವೇ ಇಲ್ಲಿನ ಮಾತೃಭಾಷೆ. ಉಚ್ಛಾರಣೆ ಮತ್ತು  ಅರ್ಥದಲ್ಲೂ ವಿಚಿತ್ರ ಹೆಸರಿನ ಊರು ಗ್ಯೂ.

ನ್ಯಾಕೊ ಹಳ್ಳಿಯ ಅಂದಕೆ ಬೆರಗಾದರೂ ಬೆಳ್ಳಂ ಬೆಳಿಗ್ಗೆ ಮನಸ್ಸಿಲ್ಲದ ಮನಸ್ಸಿನಿಂದ  ಹೊರಟು ಬಿಟ್ಟೆವು. 

ಬಿಸಿಲ ಬೋಗುಣಿಯಲಿ ಚಳಿಯ ರಾಗಗಳನು ಉದ್ಧೀಪಿಸುವ ಪಿಸುಗುಡುವ ಊರ ಹೆಬ್ಬಾಗಿಲಿನಲಿ ಧೂಳಿನ ಮೆರವಣಿಗೆ. ಯಾವುದೋ ಕಣಿವೆಯ ತುತ್ತ ತುದಿಯ ಹಿಮ ಕಂದರದಲಿ ಹುಟ್ಟುವ ಹಿಮನದಿಯೊಂದು ದಾರಿಯುದ್ದಕ್ಕೂ ನಮಗೆ ಜೊತೆಯಾಗಿತ್ತು. ಮೋಡಗಳ ತೀಡಿ ತೀಡಿ ಸ್ವರ ನುಡಿಸುವ ಪಗೋಡದ ತುದಿಯೊಂದು ದೂರದ ಕಣಿವೆಯಲ್ಲೇ ಕಂಡು ರೋಮಾಂಚಿತರಾದೆವು. ಅದುವೇ ಗ್ಯೂ ಊರಿನ ತುದಿಯಲ್ಲಿರುವ ಬೌದ್ಧ ದೇವಾಲಯ. 


ಸುಂದರ ನ್ಯಾಕೋ ಹಳ್ಳಿ

ಗ್ಯೂ ಎಂಬ ವಿಶಿಷ್ಟ ಊರ ದಾರಿಯಲಿ-

ಕೆಂಡದಂತೆ ಸುಡುವ ಸೂರ್ಯನಡಿಯಲಿ ಕುಡಿಯುವ ಹನಿ ನೀರಿಗೂ ತತ್ವಾರ ಪಡುವ ಇಂತಹ ದುರ್ಗಮ ಜಾಗಗಳಲ್ಲಿ ಹತ್ತೇ ಹತ್ತು ಮನೆ ಕಟ್ಟಿಕೊಂಡು  ದಿವ್ಯ ಏಕಾಂತದಲಿ ಲೀನವಾಗಿ ಬದುಕುವ ಇಲ್ಲಿವನರ ಅಪಾರ ತಾಳ್ಮೆಗೆ ಶರಣು ಬಂದೆ. ಕನಿಷ್ಠ ಸೌಲಭ್ಯಗಳಲ್ಲೂ ಖುಷಿಯಾಗಿರುವ ಇವರ ಗುಟ್ಟನ್ನು ತಿಳಿಯಬೇಕು.  ಎಲ್ಲವನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಪಾಹಪಿಯ ಬಯಲ ಜನರಂತೆ ಏನೂ ಬಯಸದ  ತೃಪ್ತ ಜೀವನ.



ಒಂದು ಪೋಸ್ಟ್‌ ಆಫೀಸ್‌ ಸಣ್ಣದೊಂದು ಔಷಧಾಲಯ ಮಾತ್ರ ಇವರ ಸೌಲಭ್ಯ. ಹಿಮಾಚಲದ ಕಾಝಾದಿಂದ 87ಕಿ.ಮಿ. ಹಾಗೂ ನ್ಯಾಕೊ ದಿಂದ 47 ಕಿ.ಮಿ ಅಂತರದಲ್ಲಿದೆ. ಇಲ್ಲಿಗೆ ಬಂದು ಹೋಗಲು ಯಾವುದೇ ನೇರ ಬಸ್‌ ವ್ಯವಸ್ಥೆ ಇರುವುದಿಲ್ಲ.  

 ಬೇಸರವಾದರೆ ಬೆಟ್ಟ ನೋಡುತ್ತಾ ಕೂರಬೇಕು. ಇಲ್ಲ ಚಳಿಯೊಂದಿಗೆ ರಗ್ಗಿನೊಳಗೆ ತೂರಿ ಗುದ್ದಾಡಬೇಕು. ಸಾರಿಗೆ ಬಿದ್ದ ಸಾಸಿವೆಯಂತೆ ಅಲ್ಲೊಂದು ಇಲ್ಲೊಂದು ಭೋಜ ಪತ್ತೆಯ ಮರಗಳು. ಎರಡು ಕಣಿವೆಯ ಅಂಚಿನ ಧೂಳು ಮೆತ್ತಿದ ದಾರಿಯಲ್ಲಿ 10 ಕೀ. ಮಿ ಸಾಗಬೇಕು. ಈ ದಾರಿ ತುದಿಯಲ್ಲೊಂದು ಪುಟಾಣಿ ಹಳ್ಳಿ. 

ಊರ ಪೂರ್ವಕ್ಕೊಂದು ಚಂದದ ಬೌದ್ಧ ದೇವಾಲಯ. ಹಿಮ ಬೀಳುವ ಬೆಟ್ಟಗಳು ದೇವಾಲಯದ ರಕ್ಷಣೆಗೆ ನಿಂತಿವೆ. 






ಯಾವುದೇ ನೆಟ್ವರ್ಕ ಸಿಗದ ಹಳ್ಳಿಯ ತುದಿ. ಇಲ್ಲಿಂದ ಚೀನಾ ಕೆಲವೇ ಕಿಲೋ ಮೀಟರ್.‌ ಚೀನಾ ತನ್ನ ನೆಲವಿದು ಎಂದು ಸದಾ ಜಗಳ ತೆಗೆಯುತ್ತದೆ. ಮೊಬೈಲ್‌ ತೆಗೆದರೆ ಕೂಡಲೇ ಚೀನಾದ ಸಮಯವನ್ನು ಅದು ತೋರಿಸುತ್ತೆ! ತನ್ನ ನೆಲವೆಂದು  ದೊಡ್ಡ ದೊಡ್ಡ ಟವರ್‌ ಗಳನ್ನು ಹಾಕಿ ಸಾಧಿಸಲು ಯತ್ನಿಸುತ್ತಿದೆ. ಭಾರತ ದಲ್ಲಿ 11.45 am ಆದರೆ ಚೀನಾದ ಸಮಯ 2.16 pm ಎಂದು ತೋರಿಸುತ್ತೆ. ಅಲ್ಲಿನವರಿಗೂ ತಾವು ಯಾವ ಕಡೆ ಒಲವು ತೋರಬೇಕೆಂಬ ಗೊಂದಲದಲ್ಲಿದ್ದಂತೆ ಕಂಡಿತು. 



ದೇವಾಲಯದ ಸುತ್ತ-

ಗ್ಯೂ ಮಾನೆಸ್ಟ್ರಿ


ಈ ದೇವಾಲಯದಲ್ಲಿ ಕೆಲವು ಆಸಕ್ತಿಕರ ಮೂರ್ತಿಗಳಿವೆ. ಸ್ತ್ರೀಯೊಬ್ಬಳು ಪುರುಷನನ್ನು ಕಾಲಿನ ಮೇಲೆ ಕುಳಿತು ಆತನನ್ನು ಅಪ್ಪಿ ಹಿಡಿದುಕೊಂಡ ಮೂರ್ತಿಯೊಂದಿದೆ!  

ಗ್ಯೂ ಹಳ್ಳಿ


ದೇವಾಲಯದ ಹೊರ ಭಿತ್ತಿಯಲ್ಲಿ 1975ರಲ್ಲಿ ಸಿಕ್ಕ ಒಂದು ಮಮ್ಮಿ ಇದೆ. ಭಾರತದಲ್ಲಿ ಸಿಕ್ಕ ಏಕೈಕ ಮಮ್ಮಿ ಇದು. 1430ರಿಂದ ಧ್ಯಾನಸ್ಥನಾಗಿರುವ ಲಾಮಾ ಸಾಂಗಾ ತೇನ್ಜಿನ್ ಅವರ ಅಪರೂಪದ ಮಮ್ಮಿ. ಸ್ವಾಭಾವಿಕವಾಗಿ ಮಮ್ಮಿ ಮಾಡಲಾಗಿದೆ. ಈ ಪುಣ್ಯಾತ್ಮ ಟಿಬೆಟ್‌ ನಿಂದ ಇಲ್ಲಿಗೆ ಬಂದು ಪ್ರಾಣ ಬಿಟ್ಟ ಎನ್ನುತ್ತದೆ ಇತಿಹಾಸ! ಚರ್ಮ, ಹಲ್ಲು ಮತ್ತು ಕೂದಲು ಇನ್ನೂ ಸುಸ್ಥಿತಿಯಲ್ಲಿರುವುದು ಇನ್ನೂ ವಿಶೇಷ. 1975ರಲ್ಲಿ ಇದನ್ನು ಇಲ್ಲಿ ಸಂಭವಿಸಿದ ಭೂಕಂಪದಲ್ಲಿ ಹಾಳಾದ ಸ್ತೂಪ ಒಂದರ ಅವಶೇಷಗಳಲ್ಲಿ ಸಿಕ್ಕಿತು. ಕೆಲವೊಮ್ಮೆ ಕೆಡುಕು ಸಹ ಒಳಿತ ನಂಟುಮಾಡುತ್ತದೆ ಎನ್ನುವುದಕ್ಕೆ ಈ ಮಮ್ಮಿಯೇ ಸಾಕ್ಷಿ.  ವಿಜ್ಞಾನಿಗಳು ಇದನ್ನು 600 ವರ್ಷಹಳೆಯದೆಂದು ಘೋಷಿಸಿದ್ದಾರೆ.


 

ವಿಶಿಷ್ಟ ತಂತ್ರದಲಿ ಮಮ್ಮಿ ಮಾಡುವ ವಿಧಾನ-

ಈಜಿಪ್ಟ್‌ನ ತಂತ್ರಕ್ಕಿಂತ ಭಿನ್ನವಾಗಿ ಈ ಲಾಮಾನನ್ನು ಮಮ್ಮಿ ಮಾಡಲಾಗಿದೆ. ದೇಹದ ರಸ ಮತ್ತು ಮಾಂಸವನ್ನು ನಿರ್ಜಲೀಕರಣ ಮಾಡಿ ಮಮ್ಮಿ ಮಾಡುತ್ತಾರೆ. ಈ ವಿಧಾನವನ್ನು ಶೇಕಾಸಿನಬುಟೆಸ್‌ (Shokushinbutsu) ಎನ್ನುವರು. 

ಈ ಪ್ರಕ್ರಿಯೆಗೆ ಸುಮಾರು ಹತ್ತು ವರ್ಷ ಬೇಕಾಗುತ್ತದೆ ಎನ್ನುತ್ತಾರೆ. ವಿಷಕಾರಿಯಾದ ಬೀಜ, ಬೇರು, ಎಲೆ ತಿನ್ನುತ್ತಾ ತನ್ನ ದೇಹದ ನೀರಿನಂಶ ಕಳೆದುಕೊಳ್ಳುತ್ತಾ ವಿಶಿಷ್ಟವಾಗಿ ಮಮ್ಮಿ ಮಾಡುವ ಕ್ರಿಯೆಯಾಗಿದೆ.


ಕಠಿಣಾತಿ ಕಠಿಣ ಮಮ್ಮಿಯ ಹಾದಿ-

ಸುಮಾರು ಎರಡು ಸಾವಿರ ದಿನಗಳ ತೀವ್ರ ಆಹಾರದ ನಿಯಂತ್ರಣದ ನಂತರ ವಿಷಕಾರಿ ಉರುಶಿ ಮರದ ರಸದಿಂದ ಮಾಡಲಾದ ಚಹ ಕುಡಿಯಲಾಗುತ್ತದೆ. ಈ ಚಹದಿಂದಾಗಿ ತೀವ್ರ ವಾಂತಿಯಾಗಿ ದೇಹದ ನೀರಿನಂಶ ಹೊರ ಹೋಗುತ್ತದೆ. ಆ ವಿಷಕಾರಿ ಚಹದಿಂದಾಗಿ ದೇಹದಲ್ಲಿ ಪ್ರಿಸರ್ವೇಟಿವ್‌ ತರಹ ಕೆಲಸ ಮಾಡಿ ದೇಹವನ್ನು ಬ್ಯಾಕ್ಟೀರಿಯದಿಂದಾಗುವ ಡಿಕೆಯಿಂದ ರಕ್ಷಿಸುತ್ತದೆ. ಇದರ ನಂತರ ದೇಹವು ಸರಿಯಾಗಿ ಮಮ್ಮಿಯಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಆತನ ದೇಹ ಸರಿಯಾಗಿ ಮಮ್ಮಿಯಾದರೆ ಆತ ಬುದ್ಧನ ಎತ್ತರಕ್ಕೆ ಏರುತ್ತಾನೆ. ಬುದ್ಧನಾದ ಖುಷಿಯಲ್ಲಿ ಜನ ಧಾರ್ಮಿಕ ಆಚರಣೆ ಆಚರಿಸುತ್ತಾರೆ. ಕೆಲವು ಸ್ಥಳೀಯರ ಹೇಳಿಕೆಯಂತೆ ಆತ ಚೇಳಿನ ಕಡಿತದಿಂದ ಊರನ್ನು ರಕ್ಷಿಸಲು ಮಮ್ಮಿಯಾದ ಎನ್ನುತ್ತಾರೆ. ಆತ ತೀರಿ ಹೋದ ಬಳಿಕ ಆಕಾಶದಲ್ಲಿ ಕಾಮನಬಿಲ್ಲು ಮೂಡಿತು ಎನ್ನುತ್ತದೆ ಜನಪದ. 

ಇಂತಹದೊಂದು ಕಾಲಾತೀತ ಚಮತ್ಕಾರಿ ಮಮ್ಮಿಯನ್ನು ನೋಡಲು, ನೀರವ ರಾತ್ರಿಗಳನ್ನು ಕಳೆಯಲು, ಆಧ್ಯಾತ್ಮಿಕ ಅನುಭೂತಿಯೊಂದನ್ನು ಪಡೆಯಲು ನೀವಿಲ್ಲಿಗೆ ಬರಲೇಬೇಕು.

                               ಶ್ರೀಧರ್‌ ಎಸ್.‌ ಸಿದ್ದಾಪುರ.



No comments:

Post a Comment

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...