ಪೂರ್ವಾಪರ
ಮೇಘಾಲಯದ ಮೂರು ಬುಡಕಟ್ಟುಗಳು ಮೂರು ಬೆಟ್ಟಗಳಲ್ಲಿ ತಮ್ಮನ್ನು ಕಂಡು ಕೊಂಡವರು. ಸರಳರೂ ಮತ್ತು ಪ್ರಾಮಾಣಿಕರು. ಖಾಸಿ, ಗಾರೊ ಮತ್ತು ಜಟಿಂತ್ಯಾ ಬೆಟ್ಟದ ಬುಡಕಟ್ಟಿನವರು. ಎಲ್ಲರೂ ಬೆಟ್ಟಗಳ ನೆತ್ತಿಯಲಿ ಪುಟಾಣಿ ಮನೆ ಕಟ್ಟಿಕೊಂಡು ಬಿದಿರು, ಹಿಡಿಕಟ್ಟು, ಕಿತ್ತಳೆ, ಅಕ್ಕಿ ಬೆಳೆದುಕೊಂಡು ತಮ್ಮದೇ ಜಗತ್ತು ಮತ್ತು ಭಾಷೆ ಹಬ್ಬವನು ಸೃಷ್ಟಿಸಿಕೊಂಡು ಖುಷಿಯಾಗಿರುವವರು.
ಕಳೆದ ಪ್ರವಾಸದ ವೇಳೆ ಖಾಸಿ ಬೆಟ್ಟಗಳಲ್ಲಿ ಅಲೆದು ಬಂದಿದ್ವಿ. ಈ ಬಾರಿಯ ಪ್ರವಾಸದ ವೇಳೆ ಜಟಿಂತ್ಯಾ ಮತ್ತು ಗಾರೋ ಬೆಟ್ಟಗಳ ಕೆಲವೊಂದು ಬೆಲ್ಲದಂತಹ ಜಾಗಗಳ ತಡುವಲು ಹೊರಟೆವು. ಗಾರೋ ಬುಡಕಟ್ಟುಗಳಂತೆ ಜಟಿಂತ್ಯಾ ಬುಡಕಟ್ಟು ಕುಳ್ಳಗಿನ ಜನ, ಸ್ವಲ್ಪ ದಪ್ಪಗಿನ ಮೈಕಟ್ಟು, ಗೋಧಿ ಬಣ್ಣ.
ಸ್ವಚ್ಛಂದ ಬೆಳಿಗ್ಗೆ
ನೀಲ ಗಗನಕ್ಕೇರಿದ ಸೂರ‍್ಯ ನಮ್ಮ ಹೊಸ ದಿನದತ್ತ ಕೈಚಾಚುತಲಿದ್ದ. ಚಳಿ ರಗ್ಗನು ಮೆಲ್ಲಗೆ ಸರಿಸುತಲಿದ್ದ. ನಸುಕಿಗೆ ಎದ್ದು ಬಿರಿದ ಚೆರಿ ಹೂಗಳ ನಲಿವನು ನೋಡುತ್ತಾ ಶಿಲ್ಲಾಂಗಿನಿಂದ ಜವಾಯಿ ಕಡೆಗೆ ಹೋಗಲು ಅಂಜಲಿ ಎಂಬ ಜಂಕ್ಷನ್ ಬಳಿ 57 ಕಿ.ಮೀ ದಾರಿಗಾಗಿ ಒಂದು ಲಟಾರಿ ಟಾಟಾ ಸುಮೋ ಬಾಡಿಗೆಗೆ ಪಡೆದೆವು. ನಮ್ಮನ್ನೇ ದೇವರೆಂಬಂತೆ ಚಂದಗೆ ಕೂರಿಸಿಕೊಂಡು ಖಾಸಿ ಬೆಟ್ಟಗಳ ನಡುವೆ ಹೊರಟ. ಚಾಲಕನ ಖುಷಿಗೆ ಪಾರವೇ ಇರಲಿಲ್ಲ!
ವಾಹನದಲ್ಲಿ ಪಚೀತಿ
ಹಾದಿಗೊಬ್ಬರು ನಮ್ಮ ವಾಹನಕ್ಕೆ ಕೈ ಅಡ್ಡ ಹಾಕುತಲಿದ್ದರು! ಇರಲಿ ಇನ್ನೊಂದಿಬ್ಬರನ್ನು ಕೂರಿಸಿಕೊ ಅವರು ಕಾಯಬೇಕಲ್ಲ ಪಾಪ ಎಂದೆವು ಚಾಲಕನಲ್ಲಿ. ತನ್ನ ಅರ್ಧ ಸೀಟ್‌ನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ನಾವೇ ಹೌಹಾರುವಂತೆ ಮಾಡಿದ. ಗೆಳೆಯನ ಬಳಿ ಇಬ್ಬರು ತರುಣಿಯರು ಸೀಟು ಹಂಚಿಕೊಂಡರು! ನನ್ನ ಕಾಲ ಬುಡದಲ್ಲೂ ಒಬ್ಬನನ್ನು ತುರುಕಿ ಕೂರಿಸಲು ನೋಡಿದ, ನಾವೇ ಮುಫ್ತಿನಲಿ ಹೋಗುತ್ತಿದ್ದೇವೇನೊ ಎಂಬ ಭಾವನೆ ಮೂಡಿಸಿ, ಏನೂ ಆಗದವನಂತೆ ವೀಳ್ಯ ಜಗಿಯತೊಡಗಿದ.

ಹಳೆ ವಾಹನಗಳ ಪ್ರದರ್ಶನ ರಸ್ತೆ
ಚಳಿಗೆ ಪತರುಗುಟ್ಟುತ್ತಾ ಕೆಲವು ಪ್ರವಾಸಿಗರು ಬೈಕ್ ಸವಾರಿ ಮಾಡುತಲಿದ್ದರು! ಪಾಪ. ಎಲ್ಲೂ ಕಾಣ ಸಿಗದ ವಿಶಿಷ್ಟ ವಿನ್ಯಾಸದ ಹಳೆ ಕಾಲದ ವಾಹನಗಳು ಒಂದೊಂದೇ ಹಾದು ಹೋದವು. ನಾವೇನು ಟೈಮ್ ಮೆಷಿನ್ ನಲ್ಲಿ ಹಿಮ್ಮುಖವಾಗಿ ಪ್ರಯಾಣ ಮಾಡುತ್ತಿಲ್ಲ ತಾನೆ ಎಂದು ನನ್ನನ್ನೇ ಚಿವುಟಿ ಕೊಂಡೆ. ಕೆಲವು ಹಳೆ ವಾಹನಗಳು ತಮ್ಮೆಲ್ಲ ನಟ್ಟು ಬೋಲ್ಟು ಕಳಚಿಕೊಂಡು ಸುಮ್ಮನೆ ರಸ್ತೆ ಪಕ್ಕದಲ್ಲಿ ಹೋಗಿ ಬರುವ ವಾಹನಗಳ ಲೆಕ್ಕ ಮಾಡತೊಡಗಿದ್ದವು. ಎರಡನೆಯ ಮಹಾಯುದ್ಧ ಕಾಲದ ಕೆಲವು ಜೀಪುಗಳೂ ನಮ್ಮನ್ನು ಕಾಣಲು ಬಂದವು. ಜವಾಯಿಯಿಂದ ಹೊರಟ ಹಳೆ ಕಾಲದ ಬಸ್ಸುಗಳು ಕೆಲವು ದರ್ಶನಕೊಟ್ಟವು. 30 ವರ್ಷಗಳ ಹಿಂದೆ ಇಂತಹುದೇ ವಾಹನಗಳ ಕಂಡಿದ್ದೆ. ಹಳೆಯ ನೆನಪುಗಳು ತೊಟ್ಟಿಕ್ಕತೊಡಗಿತು. ರಸ್ತೆ ಬದಿಯಲ್ಲಿ ಕೆಲವು ಹಳೆ ವಾಹನಗಳು ತಮ್ಮ ಅಂಗಾಂಗ ಪ್ರದರ್ಶಿಸುತ್ತಾ ನಿಂತಿದ್ದು ಏಕೆಂದು ಗೊತ್ತಿಲ್ಲ.
ಇಲ್ಲಿ ಕಣ್ಣು ಹಚ್ಚಿದ್ದಲ್ಲೆಲ್ಲಾ ಭತ್ತದ ಗದ್ದೆಗಳು. ಶೀಟು ಹೊದ್ದ ಪುಟಾಣಿ ಮನೆಗಳು. ದಾರಿಗುಂಟಿದ ಓಕ್ ಮತ್ತು ಫೈನ್ ಮರಗಳು ಶುಭಕೋರಲು ನಿಂತಿದ್ದವು. ಚಾಲಕನಿಗೆ ನಮ್ಮೊಂದಿಗೆ ಹರಟಲು ನೂರಾರು ವಿಷಯಗಳಿದ್ದವು. ಗಳಿಗೆಗೊಮ್ಮೆ ಏನೇನೋ ಹೇಳುತ್ತಿದ್ದ. ಒಂದೂ ಅರ್ಥವಾಗುತ್ತಿರಲಿಲ್ಲ. ನಾಲಿಗೆ ಹೊರಳದ ನಾಡಿನಲ್ಲಿ ಏನು ಮಾತನಾಡುವುದು ತಿಳಿಯದಾದ ನಾನೂ ಸುಮ್ಮನಾದೆ.

ಊರ ಹೆಬ್ಬಾಗಿಲಿನಲ್ಲಿ
ಅಂತೂ ಒಂಭತ್ತರ ಸುಮಾರಿಗೆ ಜವಾಯಿಯ ಬಳಿ ಇಳಿಸಿ ಹೋದ. ವೀಳ್ಯ ಜಗಿಯುವ ಕೆಂದುಟಿಯ ಯುವಕರು, ಯುವತಿಯರು, ಸುಣ್ಣದ ಹಚ್ಚೆ ಹಾಕಿಸಿಕೊಂಡ ಕಟ್ಟಡಗಳ ನೋಡುತ್ತಾ ಖಾಸಿ ಗೆಳೆಯನ ನಿರೀಕ್ಷೆ ಮಾಡತೊಡಗಿದೆವು. ಊರ ಸಂತೆಯೊಂದು ಸಣ್ಣ ಓಣಿಯಲ್ಲಿ ಚಿತ್ರ ವಿಚಿತ್ರ ವಸ್ತುಗಳನ್ನಿಟ್ಟು ಮಾರುತ್ತಿದ್ದರು. ಹೋಗೋಣವೆನ್ನುವಷ್ಟರಲ್ಲೇ ಖಾಸಿ ಗೆಳೆಯನ ವಾಹನ ನಮ್ಮನ್ನು ಹೊತ್ತೊಯ್ಯಲು ಬಂದಿತು.
ಅಲ್ಲಿಂದ ಖಾಸಿ ಗೆಳೆಯನ ವಾಹನದಲ್ಲಿ ಗೊತ್ತು ಗುರಿ ಇಲ್ಲದೆ ಜಲಪಾತವೊಂದಕ್ಕೆ ಪ್ರಯಾಣ ಬೆಳೆಸಿದೆವು. ಗಡಿಗಡಿಗೆ ಒಂದರಂತೆ ಅರುಚಿಯ ವೀಳ್ಯ ಜಗಿಯುತ್ತಾ ಕಾಡು ಹರಟೆ ಕೊಚ್ಚುತ್ತಾ ಕ್ರೇಮ್‌ಸೂರಿ ಜಲಧಾರೆಯತ್ತ ಹೊರಟೆವು. ಇಲ್ಲಿ ಪ್ರತಿಯೊಬ್ಬರೂ ವೀಳ್ಯ ಜಗಿಯುವವರೇ. ಬೆಳೆಯೂ ಕಡಿಮೆ. ಹಾಗಾಗಿ ಅಡಿಕೆಗಿಲ್ಲಿ ಚಿನ್ನದ ಬೆಲೆ. ವ್ಯಾಪಾರ ಕುದುರಿಸುವ ಮಾತುಕತೆಯೂ ಆಯಿತು! ಮತ್ತೆ ಮುಂದುವರಿದಂತೆ ಕಾಣಲಿಲ್ಲ.
ಬೆಟ್ಟದಿಂದ ಬಯಲಿಗೆ.
ಜವಾಯಿಯಿಂದ ಡೌಕಿ ದಾರಿಯಲ್ಲಿ ಹೊರಬಿದ್ದು ನಾಲ್ಕಾರು ಕಿಲೋಮೀಟರ್ ಬಂದರೆ ವಿಶಾಲ ಬಯಲೊಂದು ತೆರೆದುಕೊಳ್ಳುತ್ತದೆ. ಬಯಲ ಮೇಲೆ ಹರಡಿದ ಸ್ಪಟಿಕ ಶುಭ್ರ ಜಲಧಾರೆಗಳು. ಚಂದಕ್ಕಿಂತ ಚಂದ. ಜೋವಾಯಿಯಿಂದ ೨೪ ಕಿಲೋಮೀಟರ್ ಚಲಿಸಿ ಒಂದೆಡೆ ಎಡಕ್ಕೆ ಹೊರಳಿ 4-5 ಕಿಲೋಮೀಟರ್ ಕ್ರಮಿಸಬೇಕು. ಜಟಿಂತ್ಯಾ ಮೋನೋಲಿತ್ ಸಹ ನಡುವೆ ಕಾಣ ಸಿಗುತ್ತದೆ. ನಡು ದಾರಿಯ ಹುಲ್ಲುಗಾವಲಿನಲಿ ಎಡಬದಿಯಲ್ಲಿ ಹಿರಿಯರ ಸಮಾಧಿಸಹ ಕಾಣಸಿಗುತ್ತದೆ. ಮಾಸ್ತಿ, ವೀರಗಲ್ಲುಗಳಂತೆ ಅನಾಥವಾಗಿ ನಿಂತು ತಮ್ಮ ಹಿರಿಯ ತಲೆಮಾರಿನ ಕತೆ ಹೇಳುತ್ತವೆ. ಇಂತಹ ದೊಡ್ಡ ಸಮಾಧಿಗಳು ಮೇಘಾಲಯದ ಸುತ್ತಮುತ್ತ ಬಹಳಷ್ಟಿದೆ. ಕಾಣದ ಇತಿಹಾಸದ ಕಗ್ಗತ್ತಲಿನಲ್ಲಿ ಪಯಣಿಸುವ ಆಸಕ್ತಿ ಇರಬೇಕಷ್ಟೆ. ಮಾತು ಮಥಿಸುತ್ತಾ ಜಲಪಾತದ ಹೆಬ್ಬಾಗಿಲಿಗೆ ಬಂದಿದ್ದೆವು. ಇಲ್ಲಿಂದ ಇಪ್ಪತ್ತರಿಂದ ಮವತ್ತು ನಿಮಿಷಗಳ ಅವರೋಹಣ.
ಪ್ರಪಾತಕ್ಕೆ ಬಾಯ್ತೆರೆದ ದಾರಿಯಲ್ಲಿ ಪ್ರತಿಯೊಬ್ಬರೂ ಇಲ್ಲಿ ತಲೆಗೆ ಐವತ್ತರಂತೆ ಸುಂಕ ಕಟ್ಟಿ ನೂರಾರು ಕೆಂಪು ಕಲ್ಲಿನ ಮೆಟ್ಟಿಲಿಳಿಯಬೇಕು. ಅರಿವೆಂಬ ಹರಿವು ಮನದ ಭಿತ್ತಿಯಲಿ ಹರಿದಂತೆ ಜಲಧಾರೆ ನೀಲಿ ಕುಡಿದ ಆಕಾಶದಂತೆ ಭಾಸವಾಗುತ್ತದೆ. ಆಕಾಶದ ನೀಲಿಯನ್ನೇ ಕದ್ದ ಜಲಧಾರೆ ತಣ್ಣಗೆ ಹರಿಯುತ್ತಲೇ ಇತ್ತು. ಕೆಳಗಿಳಿಯುತ್ತಲೇ ಕಿವಿ ತೂತಾಗುವಂತೆ ನೀರು ಮತ್ತು ಜೀರುಂಡೆಯ ಸದ್ದು ಕಿವಿತುಂಬುತ್ತದೆ. ಕುಂದಾಪುರ ಭಾಷೆಯಲ್ಲಿ ಹೇಳುವುದಾದರೆ ಒರ್ಲುತ್ತಿತ್ತು!!
ಆಕಾಶದ ನೀಲಿಯನ್ನೇ ಕದ್ದ ಜಲಧಾರೆ.
ಅನಂತ ಕಾಲದಿಂದ ಹರಿದು ಬಂದ ನದಿಯೊಂದು ಬೆಟ್ಟದ ಕಣಿವೆಗಳಲ್ಲಿ ನುಗ್ಗಿ ಬಯಲಿಗೆ ಜೀಕಿ ಕಡಲೊಡಲ ಸೇರಲು ತವಕಿಸುತ್ತದೆ. ತನ್ನ ತನವ ಕಳಕೊಳ್ಳುತ್ತದೆ. ನದಿಯೊಂದು ಸದಾ ಹರಿಯಲೇ ಬೇಕು. ಹರಿದಾಗಲೇ ಅದಕ್ಕೆ ಅಸ್ತಿತ್ವ. ಗಮ್ಯ ತಲುಪಲು ನೂರಾರು ಏರು ತಗ್ಗು. ಇದರಿಂದಲೇ ಜಲಪಾತವೊಂದು ಸೃಷ್ಟಿಯಾಗುತ್ತದೆ.
ನೀರಿಗೆ ಮೆತ್ತಿದ ಬಣ್ಣ, ಸೋತ ಮನಕ್ಕಿಲ್ಲಿ ಉಲ್ಲಾಸದ ಬುಗ್ಗೆ. ಕಡುನೀಲ ತೆಳು ಹಸಿರ ಸ್ಫಟಿಕ ಸದೃಶ ಪ್ರಾಂಜಲಾಂಬುಧಿ ಧುಮುಕುತಿದೆ ನೋಡಲ್ಲಿ ಶಿವನ ಜಟೆಯಿಂದೆಂಬಂತೆ. ಸುತ್ತಲೂ ಕವುಚಿಕೊಂಡ ಕಾಡ ನಡುವೆ ವೈಯಾರದಿ ಬಳುಕಿ ಧುಮುಕುವ ವೈಯಾರಿಣಿ.

ಹರಿವೆಂಬ ಹೊಸ ಅರಿವು
ಈ ಜಲಧಾರೆಯ ಹರಿವಿಗಡ್ಡವಾಗಿ ಸಿಕ್ಕಿಸಿಕೊಂಡಂತೆ ಬೃಹತ್ ಬಂಡೆ ಹೊರಚಾಚಿದೆ. ಬಂಡೆಯಿಂದ ಜಾರಿದ ನೀರು ನವಿರಾಗಿ ಹರಿಯುತ್ತದೆ. ಪಶ್ಚಿಮ ಘಟ್ಟದಲ್ಲಿ ಧುಮುಕುವ ಜಲಪಾತದಡಿ ಹೋಗಲಸಾಧ್ಯ. ಆದರೆ ಇಲ್ಲಿ ನೀವು ಜಲಪಾತದಡಿ ನಿದ್ರಿಸಬಹುದು. ನಾನಲ್ಲಿ ಹೋಗಿ ನಿಂತು ಒಂದಿಷ್ಟು ಫೋಟೊ ಕ್ಲಿಕ್ಕಿಸಿದೆ. ನೀರಂತೂ ನೀಲ ಮಣಿ ಸ್ಪಟಿಕ. ದುರ್ಯೋಧನ ಅಡಗಲಾರದಷ್ಟು ಸುಸ್ಪಷ್ಟ. ಜಲಪಾತದ ಹೊಂಡದಲಿ ಕೆಲವರು ಲೈಫ್ ಜಾಕೆಟ್ ತೊಟ್ಟು ಈಜುತ್ತಿದ್ದರು. ಜಲಪಾತದಡಿ ತಲುಪಿದ ಕೆಲವರು ಪನ್ನೀರ ಅಭಿಷೇಕಕ್ಕೆ ತಲೆಕೊಟ್ಟು ಸುಖಿಸುತ್ತಿದ್ದರು.
ಯಾವುದೇ ಮರಗಳಿಗೆ ಹಾನಿಯಾಗದಂತೆ ರೋಪ್‌ವೇ ಜಲಪಾತದೆದುರೇ ನಿರ್ಮಿಸಲಾಗಿದೆ. ಜಲಧಾರೆಯ ಮೇಲಿನ ಹರಿವಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಆಕಾಶದ ನೀಲಿ ಕುಡಿದ ನೀರಲಿ ತೇಲುತ್ತಾ ಬೋಟಿಂಗ್ ಮಾಡುವುದು ಒಂದು ರೋಚಕಾನುಭ! ಆಕಾಶದಲಿ ದೋಣಿ ಬಿಟ್ಟಂತಹ ಭ್ರಮೆ ಭರಿಸುವ ಅನುಭವ. ನೀರೋ ಆಕಾಶ ನೀಲಿ. ಕೆಲವೆಡೆ ಪಚ್ಚೆ ಹಸಿರು!
ಕ್ರೆಮ ಸುರಿ ಜಲಧಾರೆ ಡಾರ್ವೆ ನದಿ ಸೇರಿ ತನ್ನ ಹರಿವನ್ನು ಕೊನೆಗೊಳಿಸುತ್ತದೆ. ಜೂನ್‌ನಿಂದ ಆಗಸ್ಟ್ ತನಕ ಅಬ್ಬರಿಸಿ ಸಪ್ಟೆಂಬರ್ ಬಳಿಕ ಮಂದಗಮನೆಯಾಗುತ್ತಾಳೆ. ಏಪ್ರಿಲ್ ಸುಮಾರಿಗೆ ತನ್ನೊಡಲ ಬರಿದು ಮಾಡಿಕೊಳ್ಳುತ್ತಾಳೆ.
ನೀಲಕಂಠನ ನೆನಪು ಮಾಡಿಸುತ್ತಾ ಜಗದ ನೀಲಿ ನುಂಗಿದ ಜಲಪಾತ ನಗುತ್ತಲೆ ಬೀಳ್ಕೊಟ್ಟಿತು. ಚಂದ್ರಶೇಖರನ ಜಟೆಯ ಚಂದ್ರನಂತೆ ಅರ್ಧ ಚಂದ್ರನ ಕಾಮನಬಿಲ್ಲು ಮೂಡಿ ಮರೆಯಾಗಿ ಹೊಸ ನೋಟ ಹೊಸ ಹೊಳೆಹು ಒದಗಿಸಿತು. ಎಲ್ಲಾ ಕ್ಯಾಮರಾಗಳು ಕೂಡಲೇ ಸಚೇತನಗೊಂಡವು. ಕಾಮನಬಿಲ್ಲನು ಕಂಡ ಕಣ್ಣು ಜಲಪಾತದಿಂದ ಕಣ್ಣು ಕೀಳಲು ಮನಸ್ಸೊಪ್ಪದೇ ಹಾಗೆ ನೋಡುತ್ತಲೇ ಇತ್ತು. ಜಲಪಾತದ ಉಜಾಲ ನೀಲಿ ನೀರಲಿ ತೇಲಬೇಕೆಂಬ ಅದಮ್ಯ ಹಂಬಲವನು ಹತ್ತಿಕ್ಕಿ ಹೊರಟು ನಿಂತೆ!
ಜಲಪಾತದ ಹಿಂದೆ ಚಿಕ್ಕ ಡ್ಯಾಂ ಒಂದನ್ನು ನಿರ್ಮಿಸಿ ಸ್ಪಟಿಕ ಶುಭ್ರ ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ನದಿಯಲಿ ತೇಲುವ ಮನಸಿದ್ದರೂ ಸಮಯವಿರಲಿಲ್ಲ. ಇಲ್ಲಿಂದ ನಾವು ಹೊರಟದ್ದೇ ಹೊಟ್ಟೆ ಪೂಜೆಗೆ. ಬೆಳಿಗ್ಗೆ ಸಹ ಸರಿಯಾಗಿ ಏನೂ ತಿಂದಿರಲಿಲ್ಲ.
ಜಟಿಂತ್ಯಾ ಬೆಟ್ಟಗಳ ವಿಶಿಷ್ಟ ರುಚಿಯ ಊಟವೊಂದಕ್ಕೆ ಸಾಕ್ಷಿಯಾಗಿ ಡಾವ್ಕಿ ನದಿ ನೋಡಲು ವೀಳ್ಯ ಜಗಿಯುತ್ತಾ ಹೊರಡಿಸಿದ ಖಾಸಿ ಗೆಳೆಯ. ಡಾವ್ಕಿ ನದಿಯದು ಇನ್ನೊಂದು ಕತೆ. ಪುರುಸೊತ್ತಾದಾಗ ಅರಹುವೆ.

ಬಾಂಗ್ಲಾ ಸನಿಹದ ಬಾಕೂರ್
ಬಾಂಗ್ಲಾಗೆ ತಾಕಿಕೊಂಡ ಬಾಕುರ್ ಹಳ್ಳಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು. ಬಾಂಗ್ಲಾ ಪ್ರವೇಶಿಸದೇ ಹಲವು ಬಾಂಗ್ಲಾ ನೋಟುಗಳನ್ನು ಸಂಪಾದಿಸಲು ಇಲ್ಲಿಗೆ ಬಂದಿದ್ದೆವು! ನನಗಂತೂ ಬಾಂಗ್ಲಾ ಗಡಿಯಾಚೆ ಹೋಗಬೇಕೆಂಬ ತವಕವಿತ್ತು. ಬಿಗಿ ಭದ್ರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಡಾವ್ಕಿ ನದಿ ತನ್ನ ಮೇಲಿರುವ ದೋಣಿಗಳನ್ನು ಪಚ್ಚೆ ಹಸಿರು ನೀರಲ್ಲಿ ಪ್ರತಿಫಲಿಸುತ್ತಿತ್ತು.
ಹಗಲು ರಾತ್ರಿ ಎನ್ನದೇ ನದಿಯೊಂದು ಯಾರೂ ಭಾರತದೊಳಗೆ ನುಸುಳದಂತೆ ಕಾವಲಿಗೆ ನಿಂತಿದೆ. ಬಾಂಗ್ಲಾದಿಂದ ಹಲವರು ಈ ನುಸುಳುದಾರಿಯಲ್ಲೇ ಒಳ ಬರುತ್ತಾರೆ ಎಂಬುದು ಗೆಳೆಯನ ಅಂಬೋಣ. ನದಿ ಬಲ ಕಳಕೊಂಡ ಕಡೆಗಳಲ್ಲಿ ನುಸುಳುಕೋರರು ಸದಾ ಒಳನುಗ್ಗುತ್ತಲೇ ಇರುತ್ತಾರೆ. ದೇಶದ ವಿವಿಧ ನಗರಗಳಲ್ಲಿ ಹರಡಿ ವೈರಸಿನಂತೆ ಹಬ್ಬುತ್ತಾರೆ ಎಂದು ಕರೆದುಕೊಂಡು ಬಂದ ಗೆಳೆಯ ಉಸುರಿದ. ಮನದಲ್ಲೇನೋ ಕ್ಲೇಶ, ಕಳವಳ, ಕಸಿವಿಸಿ, ಅಸ್ತವ್ಯಸ್ತತೆ. ಬಾಕುರ್ ಹಳ್ಳಿಯ ಬಾಜುವಲ್ಲೇ ಕಂಡ ಬಾಂಗ್ಲಾದ ಹಸಿ ಹಸಿ ನೆನಪುಗಳೊಂದಿಗೆ ಹಿಂದಿರುಗಿದೆವು.