ಭೈರವನಿಗೆ
ನಮಿಸೋಣವೆಂದು ಹೊರಡೋಣವೆಂದರೆ ಪುರುಸೊತ್ತೇ ಆಗದಷ್ಟು ಕಾವ್ಯ ಮಳೆ! ಭೈರವನಿಗೂ ನಮ್ಮ ಮೇಲೆ ಮುನಿಸಿರಬೇಕು!
ಬಿಡುವೇ ಆಗದೇ ಹಿಂದಿರುಗಿದೆ. ದೇವರ ಮನೆಯ ಸ್ನೇಹಿತ ಯಾವಾಗ ಬರುತ್ತಿ ಎಂದು ನೆನಪಿಸುತ್ತಲೇ ಇದ್ದ
ಹೋಗಲಾಗಲಿಲ್ಲ.
ನಾಣ್ಯ ಭೈರವ
![]() |
| ನಾಣ್ಯ ಭೈರವ ದೇವಾಲಯ. |
ಎತ್ತಿನ
ಭುಜದ ಪದತಲದಲ್ಲಿ ವಿರಮಿಸಿದ ನಾಣ್ಯ ಭೈರವನನ್ನು 13ನೆಯ
ಶತಮಾನದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದಾದ್ಯಂತ ಕಾಲ ಭೈರವನ ಹೊರತು ಪಡಿಸಿದರೆ ಭೈರವನ ದೇವಾಲಯ ಬಲು
ಅಪರೂಪ. ಇಂತಹ ಭೈರವನ ದೇವಾಲಯಗಳಲ್ಲಿ ನಾಣ್ಯ ಭೈರವನೇ ವಿಶಿಷ್ಟವಾದ ಹೆಸರು. ಇವನಿಂದಲೇ ಈ ಊರಿಗೆ ಭೈರಾಪುರವೆಂಬ
ಹೆಸರು. ಭೈರವ ಪುರದಿಂದ ಭೈರಾಪುರವಾಗಿರಬೇಕು. ನಾಣ್ಯ ಭೈರವೇಶ್ವರ ಹೊಯ್ಸಳರ ಕಾಲದಲ್ಲಿ ಅತ್ಯಂತ ಪ್ರಮುಖ
ಪಟ್ಟಣವಾಗಿತ್ತು. ಇಲ್ಲಿಯೇ ಟಂಕಸಾಲೆಯಿತ್ತು ಎಂಬುದಕ್ಕೆ ನಾಣ್ಯ ಭೈರವ ದೇವಾಲಯವೇ ಸಾಕ್ಷಿ. ಕೋಟೆ
ಕೊತ್ತಲಗಳಿದ್ದ ಭೈರಾಪುರಕ್ಕೀಗ ಸನ್ಯಾಸ. ಅಜ್ಞಾತವಾಗಿ ಎರಡು ಜಿಲ್ಲೆಗಳ ನಡುವಿನ ಗರುಡಗಂಬದಂತಿದೆ.
ಇತಿಹಾಸದ ಹೆಜ್ಜೆ ಗುರುತುಗಳನ್ನು ಬಿಡದೇ ಅಳಿಸಿಕೊಂಡು ಸ್ಮಶಾನ ವೈರಾಗಿಯಂತೆ ನಿಂತ ದೇವಾಲಯ! ಇದಕ್ಕೂ
ನಮಗೂ ಸಂಬಂಧವೇ ಇಲ್ಲದಂತೆ ಬದುಕ ಬಂಡಿ ಎಳವ ಮಂದಿ!
ಹೆಜ್ಜೆ
೧
ಆಸಾಡಿಯ ಒಡ್ರು ಮಳೆ ಮುಗಿದು
ಸ್ವಾತಿಯ ಸೋನೆ ಶುರುವಾಗಿದ್ದೇ ಗೆಳೆಯ ಮತ್ತು ನಾಣ್ಯ ಭೈರವನ ನೆನಪಾಯಿತು! ನಾಣ್ಯ ಭೈರವನೊಂದಿಗೆ ತಳುಕಿ
ಹಾಕಿ ಆತನ ರಕ್ಷಣೆಗೆ ನಿಂತಂತೆ ಕಾಣುವ ಎತ್ತಿನ ಭುಜವೆಂಬ ಅಭೂತಪೂರ್ವ ವಿಶಿಷ್ಟ ಚಾರಣ ಮಾಡುವ ನೆನಪಾಗಿ
ಹೊರಟು ನಿಂತಿದ್ದೆ. ಮಳೆ ನಿಂತು ದಿನಕ್ಕೊಂದೊ ಎರಡೋ
ಸೋನೆ ಸುರಿಸಿ ಹೋಗುತ್ತಿದ್ದ ಸಮಯ. ನಾವು ಸಂಜೆಯ ಚಹ ಹೀರಿ ಹೊರಟು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ
ಇಳಿದೆವು.
ತೇಜಸ್ವಿ
ಮನೆ ಇಲ್ಲಿಂದ ಮಾರು ದೂರ. ಅವರ ತೋಟ ಗದ್ದೆ ತಿರುಗಿದ ನೆನಪುಗಳು. ರಾಜೇಶ್ವರಿಯವರು ಮಾಡಿಕೊಟ್ಟ
ಚಹ. ಅವರ ಮನೆಯಂಗಳದ ಹಕ್ಕಿ ಚಿಲಿಪಿಲಿ, ಸ್ಕೂಟರ್, ನಿಂತ ಗಡಿಯಾರದ ಮೆಲುಕು ಹಾಕುತ್ತಾ ಹೊರಟೆವು. ಅಲ್ಲಿಗೆ ಭೇಟಿ ಇತ್ತ ನೆನಪು ದಾರಿಯುದ್ದಕ್ಕೂ ಹಸಿರು.
ಎರಡು ಜಿಲ್ಲೆಗಳ ಗಡಿಯ ಗರುಡ
ಗಂಬದಂತಿರುವ ಎತ್ತಿನ ಭುಜವನ್ನು ಶಿಶಿಲಾ ಧರ್ಮಸ್ಥಳ ಕಡೆಯಿಂದಲೂ ಏರಬಹುದು. ಶಿಶಿಲ ಕಡೆಯ ಕಠಿಣ
ದಾರಿ ತೊರೆದು ಸುಲಭದ ಮೂಡಿಗೆರೆಯ ಹಾದಿ ಹಿಡಿದೆವು. ಎತ್ತಿನ ಭುಜ ದಂತಿರುವ ವಿಶಿಷ್ಟ ಚಾರಣ
ದಾರಿ. ಜೇನು ಕಲ್ಲು ಗುಡ್ಡದ ನೆತ್ತಿಯಿಂದ ಒಮ್ಮೆ ನೋಡಿದ್ದೆ. ತನ್ನ ಅಪೂರ್ವ
ನೋಟವನ್ನು ತೋರಿ ಮಿಡುಕಿತ್ತು. ತನ್ನ ವಿಶಿಷ್ಟ ಮೋಹಕತೆಯಿಂದ ಸೆಳೆದಿತ್ತು.
![]() |
| ಎತ್ತಿ ಭುಜ - ಚಿತ್ರ ಕೃಪೆ ಅಂತಜಾ೯ಲ. |
ತೇಜಸ್ವಿ
ಊರಾದ ಇಲ್ಲಿ ರಾತ್ರಿಯೂಟಕ್ಕೆ ಯಾವಗಲೂ ತತ್ವಾರ. ಯಾವುದೋ
ಗಲ್ಲಿಯಲ್ಲಿ ಸಿಕ್ಕ ಅಕ್ಕಿ ರೊಟ್ಟಿಯ ಪುಟಾಣಿ ಹೋಟೆಲಿನಲ್ಲಿ ಉಳಿದ ನಾಲ್ಕೇ ನಾಲ್ಕು ರೊಟ್ಟಿ ಹಂಚಿಕೊಂಡು
ಹೊಟ್ಟೆಗಿಳಿಸಿ ಬಂದು ದಿಂಬಿಗೊರಗಿದೆವು.
ಹೊಸತೊಂದು ಚಾರಣದ ಅನುಭವವಾಗುತ್ತದೆಂದು ಅಂದು ಅಂದಾಜಿರಲಿಲ್ಲ. ನಾವಂತೂ ಸಣ್ಣ ಸಣ್ಣ ಚಾರಣಗಳನ್ನು ಪೂರ್ಣಗೊಳಿಸದೇ ಬಂದುದೇ ಇಲ್ಲ. ಹರಕಿ ದುನ್, ಕಾಶ್ಮೀರದ ಸರೋವರ ಮುಂತಾದ ಚಾರಣಗಳನ್ನು ಆಯಾಸವಿಲ್ಲದೇ ಪೂರ್ಣಗೊಳಿಸಿದ ನಮ್ಮ ಗೆಲುವಿನ ಎನ್‌ಸೈಕ್ಲೋಪಿಡಿಯಾದ ಒಂದು ವಿಶಿಷ್ಟ ಅಧ್ಯಾಯ!
****
ಸದಾ
ಗೆಲ್ಲುತ್ತಿರುವವನಿಗೆ ಆಗಾಗ ಸೋಲುಗಳು ಸಿಗಬೇಕು. ಸದಾ ಗೆಲ್ಲುತ್ತಿದ್ದರೆ ಗೆಲುವಿನ ರುಚಿ ತಿಳಿಯದು.
ನಮ್ಮ ಅಹಂಕಾರದ ಬಲೂನಿಗೆ ಅರಿವಿನ ಸೂಜಿಯನು ಆಗಾಗ ಚುಚ್ಚುತ್ತಿರಬೇಕು. ಇಲ್ಲವಾದರೆ ನಾವೇ
ದೇವರಾಗಿ ಬಿಡುವ ಅಪಾಯವಿದೆ ಎನ್ನುತ್ತಾರೆ ಕವಿ ಗೋಪಾಲ ಕೃಷ್ಣ ಅಡಿಗರು. ಕಷ್ಟ ಕಾಲದಲ್ಲೇ ನಮ್ಮ
ಸಂಪೂರ್ಣ ಸಾಮರ್ಥ್ಯ ಹೊರಬರುವುದು. ನಮ್ಮ ಮೇಲಿನ ಬೃಹತ್ ನಂಬಿಕೆಯ ಬೆಟ್ಟವನ್ನು ಬಲಪಡಿಸುವುದು
ಇಂತಹ ಪುಟಾಣಿ ಚಾರಣಗಳು. ಅಲ್ವೇ?! ಅಂತಹದೊಂದು ಅನುಭವ
ನಿಮ್ಮೊಂದಿಗೆ.
ಮುಂಜಾವಿನ
ಮಂಜಿಗೆ ಮುತ್ತಿಡುತ್ತಾ…
ಕರೋನ
ತುತ್ತ ತುದಿಯಲ್ಲಿದ್ದ ಕಾಲ ನಾವೊಂದು ಐದು ಜನ ಗೆಳೆಯರಿಗೆ ಹೇಗಾದರೂ ಮಾಡಿ ಎತ್ತಿನ ಭುಜವನ್ನು
ಅಲುಗಾಡಿಸಿ ನೆತ್ತಿಯಲಿ ಭಾವುಟ ಹಾರಿಸಲು ಹೊರಟೆವು. ಗಡದ್ದಾಗಿ ತಯಾರಿಯೂ ನಡೆಸಿದ್ದೆವು.
ಎರಡೆರಡು ರೈನ್ ಕೋಟ್ ಖರೀದಿಸಿದ್ದೆವು. ಬಲಾಡ್ಯ ಕೊಡೆಯೊಂದು ಜೊತೆಗಿತ್ತು.
ಹಸಿರ
ದಾರಿಯಲಿ ನೆನಪುಗಳ ಮೆರವಣಿಗೆ
ಚುಮು
ಚುಮು ಮುಂಜಾವಿನಲ್ಲಿ ಇಡ್ಲಿ ಮತ್ತು ಕಾಫಿಗೆ ಜಿಟಿ ಜಿಟಿ ಜೀರಿಗೆ
ಮಳೆಯ ಅಲಂಕಾರ. ಈ ನಡುವೆ ನಮ್ಮ ರಥ ಎತ್ತಿನಭುಜದ ನೆತ್ತಿ ಸವರಲು ಹೊರಟಿತ್ತು. ಜೊತೆಗೆ ನಾಣ್ಯ ಬೈರವನ ಜೊತೆ ಸೇರುವ ಮಾತಾಗಿತ್ತು.
ನಿನ್ನೆಯ
ಮಳೆಗೆ ತೊಳೆದಿಟ್ಟಂತಹ ರಸ್ತೆಯಲ್ಲಿ ನಡುದಾರಿಗೆ ಬರುತ್ತಲೇ ಹನಿ ಮಳೆಯ ಸಿಂಚನ ಶುರುವಿಟ್ಟುಕೊಂಡಿತು.
ದಾರಿ ನಡುವೆ ಮಂಡಾಳೆ ಹೊತ್ತ ಒಂದಿಷ್ಟು ಹಳ್ಳಿಗರು ತುಟಿ ಕೆಂಪಾಗಿಸಿಕೊಂಡು,
ಮಂದಸ್ಮಿತವಾಗಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾ ಎಲ್ಲಿಗೋ ಮಳೆಯಲ್ಲಿ ನಡೆದು ಹೋಗುತ್ತಿದ್ದರು. ಅವರ ಗೊರಬು ನನ್ನನ್ನು ಬಾಲ್ಯಕ್ಕೆ
ಮರಳಿಸಿತು.
ಕಂಬಳಿಯಿಂದ ತಯಾರಿಸಿದ
ಗೊರುಬುಗಳು ಈಗ ಮಾಯವಾಗಿ ಪ್ಲಾಸ್ಟಿಕ್‌ನದ್ದಾಗಿದೆ. ಮೊದಲದಕ್ಕೆ ಅಪ್ಪನ ಬೆವರಿನ ನಂಟಿತ್ತು. ತನ್ನ ಮೊದಲಿನ ಆಪ್ತತೆಯ ಚುಬುಕಿತ್ತು. ಅಪಾರ ನೆನಪಿನ ಚಿತ್ತಾರವಿತ್ತು. ಅವರ ಬಳಿ ಕಷ್ಟ ಸುಖ ವಿಚಾರಿಸಿ, ಕವಳ ಕೇಳಿ ಪಡೆದು ಜಗಿದು,
ಎತ್ತಿನ ಭುಜದ ದಾರಿ ಕೇಳಿ ಅವರನ್ನು ಬೀಳ್ಕೊಟ್ಟೆವು!
ಇಕ್ಕೆಲಗಳಲ್ಲಿ ಕರ್ಣ
ಕುಂಡಲಗಳು ಈಗಷ್ಟೇ ಸೂರ್ಯ ರಶ್ಮಿಗಾಗಿ ಕಾದು ನಮ್ಮ ನೋಡಿ ನಗುತಲಿದ್ದವು. ಪುಟಾಣಿ ಮಕ್ಕಳು ತಮ್ಮ ಕಿವಿಗೆ ಜೋತು ಬಿದ್ದ ಅಶ್ವಥದೆಲೆಯ ಆಭರಣದಂತೆ ಗಿಡಗಳು ಪುಟಾಣಿ
ಹೂ ತೊಟ್ಟು ನಿಂತಿದ್ದವು. ನಾವು ಪುಟಾಣಿಗಳಿದ್ದಾಗ ಸ್ಲೇಟು ಉಜ್ಜಲು ಇದರ ಇನ್ನೊಂದು ಜಾತಿಯನ್ನು
ಬಳಸುತ್ತಿದ್ದದು ನೆನಪು. ದಾರಿಯುದ್ದಕ್ಕೂ ಬಾಲ್ಯದ ನೆನಪುಗಳ ಮೆರವಣಿಗೆ. ಬಹಳ ದಪ್ಪವಾಗಿದ್ದ ಆ ತಳಿ ಈಗಿಲ್ಲ! ಅಳಿದವಿರಬೇಕು. ಯಾರ ಕಾಕ ದೃಷ್ಟಿ ಬಿತ್ತೋ.
ಮೂಡಿಗೆರೆ ಬಿಟ್ಟ
ಕ್ಷಣದಿಂದ ಸೋನೆಯಂತೆ ಸುರಿದು ಚಾರಣಕ್ಕೆ ಸಂಭ್ರಮದ ಹಚ್ಚೆ ಹಚ್ಚುತಲಿದ್ದ
ಮಳೆ. ಮಾಲಕೌಂಸ್ ರಾಗ ಹಚ್ಚಿ ಹಾಡ ತೊಡಗಿತು. ಎತ್ತಿನ ಭುಜ ಬರುತ್ತಲೇ ಉಸಿರ
ಕಟ್ಟಿದ ಮಕ್ಕಳಂತೆ ಮಳೆಯ ರಚ್ಚೆ. ಯಾರ ಮೇಲಿನ ಸಿಟ್ಟೋ ಏನೋ. ಬೆಟ್ಟದ ಭೈರವನ ಪೂಜಾರಿಯ
ಜೊತೆಯಿರಬೇಕು. ದಿನವೂ ಕಲ್ಲಂತಹ ಕಲ್ಲಿಗೆ ನೈವೇಧ್ಯ ಕೊಡುವಾತ ಯಾಕೆ ತನಗಿಲ್ಲವೆಂಬ
ಸಿಟ್ಟಿರಬೇಕು. ಅಥವಾ ಹೆಂಡತಿಯೊಂದಿಗೆ ಜಗಳ ಕಾದು ನಮಗೆ ಹೀಗೆ ಸತಾಯಿಸಿದನೋ ಹೇಗೆ? ಎಂಬ ಗುಮಾನಿ.
ಮಳೆಯ ಶಿವತಾಂಡವ
ಬೈರವನ
ಗುಡಿಗುಂಟ ಸಾಲು ಸಾಲು ಎಲ್ನೋಡಿ ಕಾರು. ಭೈರವ ಗುಡಿಯ ಅರ್ಚಕರನ್ನು ಮಾತಾಡಿಸಿ ಪ್ರಸಾದ ಪಡೆದು
ಬೆಟ್ಟದ ಭೈರವನಿಗೆ ಸುತ್ತು ಬಂದು ಪ್ರಾರ್ಥಿಸಿ ನಮ್ಮ ಚಾರಣ ಸುಖಕರವಾಗಿರಲಿ ಎಂದು ಬೆಟ್ಟವೇರಲು ಸಜ್ಜಾದೆವು. ಭಟ್ಟರ ಮೊಬೈಲ್ ಸಂಖ್ಯೆ ನಮ್ಮ
ಮೊಬೈಲೊಳಗೆ
ಸೇರಿಕೊಂಡಿತು.
ಕಷ್ಟ ಪಟ್ಟು ಹಾಗೂ ಹೀಗೂ ಬಂದ ಭೈರವೇಶ್ವರ ಗುಡಿಯ ಪೂಜಾರಿ ಮಳೆ ನಿಲ್ಲಲ್ಲಿ ಎಂಬಂತೆ ಮಹಾ ಮಂಗಳಾರತಿ ಎತ್ತಿದರು. ಮಂಗಳಾರತಿ ಎತ್ತಿದ್ದೆ ಎಲ್ಲಿತ್ತೊ ಕುಂಬ ದ್ರೋಣ ಮಳೆ ಹೊಡೆತ. ಗುಡುಗು ಸಿಡಿಲಿನೊಂದಿಗೆ ಮತ್ತೆ ಮಳೆ ದೇವಾಲಯದ ಗಂಟೆಯೊಂದಿಗೆ ಜುಗುಲ್ ಬಂದಿಗೆ ಇಳಿಯಿತು. ಗಂಟೆಯ ಶಬ್ಧವೆಲ್ಲಾ ಮಳೆಯ ನೀರಲಿ ಕರಗಿ ಹಳ್ಳ ಕೊಳ್ಳಗಳಲ್ಲಿ ಹರಿಯತೊಡಗಿತು. ಮನಸ್ಸುಗಳೆಲ್ಲಾ ಥಂಡಿ ಥಂಡಿ!
ನಿರಾಸೆಯ
ಮೂಡಿಸಿದ ನೀಲ ಕುರುಂಜಿ
ಈ ವರ್ಷವೇ ನೀಲ
ಕುರುಂಜಿ/ನೀಲ ಕಾವರಿ ಹೂವುಗಳು ಅರಳಬೇಕಾಗಿರುವುದರಿಂದ ಸುತ್ತಲೂ ಕಣ್ಣರಳಿಸಿದೆ.
ಮಳೆ ಪ್ರಾಕೃತಿಕ ವಿಕೋಪ ಮುಂತಾದ ಕಾರಣಗಳಿಂದ ಅರಳದೇ ಸುಪ್ತಾವಸ್ತೆಯಲ್ಲಿ ಉಳಿದು ನಮ್ಮನ್ನು ಸತಾಯಿಸಿತು. 2009ರಲ್ಲೊಮ್ಮೆ ಅರಳಿದಾಗ
ಬರಬೇಕೆಂಬ ಬಯಕೆ ಇದ್ದರೂ ಬರಲಾಗಲಿಲ್ಲ. ಅಲ್ಲಲ್ಲಿ ತಡಕಾಡಿದರೂ ಕಾಣದ ಕುರುಂಜಿ.
ಗಾಳಿಗುಡ್ಡ ಚಾರಣಕ್ಕೆ ಹೋದಾಗ ಒಂದೆರಡು ಕಂಡಿದ್ದೇ ಕೊನೆ ಮತ್ತೆಲ್ಲೂ ಕಂಡಿದಿಲ್ಲ. ಮತ್ತೆ ಕಂಡಿದ್ದು
ಬಾಬಾ ಬುಡನ್ ಗಿರಿಯಲ್ಲಿ. ಎಲ್ಲಾ ಸರಿ ಇದ್ದರೆ ಇನ್ನು ದರ್ಶನ ೨೦೩೫ಕ್ಕೆ.
ಹುಚ್ಚು ಮಳೆಯಲ್ಲಿ ಹೆಜ್ಜೆ ಇಟ್ಟಿದ್ದೆವು. ಮಳೆ ತನ್ನ ರೌದ್ರ ರೂಪವನ್ನು ತೋರ ಹತ್ತಿತ್ತು. ಜೀವ ಮಾನದ ಮಹಾ ಮಳೆಯೊಂದು ನಮ್ಮ ನೆನಪಿನ ಪುಟಗಳಲ್ಲಿ ದಾಖಲಾಯಿತು. ಹೊರಗಿನ ನೋಟವಾಗಲಿ ನಮ್ಮ ತಂಡದವರೇ ನಮಗೆ ಕಾಣಿಸುತ್ತಿರಲಿಲ್ಲ. ಹಾಗಾಗಿ ನಿಧಾನವಾಗಿ ಒಬ್ಬರ ಹಿಂದೆ ಒಬ್ಬರು ರೈಲು ಬೋಗಿಗಳಂತೆ ಸಾಗುತ್ತಿದ್ದೆವು. ನೆತ್ತಿಯಿಂದ ಕನಿಷ್ಠ ದೂರದಲ್ಲಿದ್ದೆವು. ಅಸಾಧ್ಯ ಮಳೆ. ಕೊಡೆ, ರೈನು ಕೋಟುಗಳೊಳಗೆಲ್ಲಾ ನೀರ ಕಾರು ಬಾರು. ಎರಡೂ ಕಡೆ ಮಹಾ ಕಣಿವೆ. ನೇರ ಗೆರೆ ಎಳೆದಂತಹ ದಾರಿ ಇದ್ದರೂ ಮಳೆ ಹೊಡೆತಕ್ಕೆ ಸಿಕ್ಕಿ ೨ ಅಡಿಯ ಮುಂದೇನಿದೆ ಎಂದು ಗೋಚರವಾಗುತ್ತಿರಲಿಲ್ಲ. ನೆತ್ತಿಗೆ ನೂರು ಹೆಜ್ಜೆಯಷ್ಟೇ ಬಾಕಿ. ಎಡ ಬಲದ ನಡುವೆ ಸಣ್ಣ ಗೆರೆಯಂತಹ ದಾರಿಗೆ ಹುಲ್ಲು ಹಾಸು ಹಾಸಿತ್ತು. ಸುಮಾರು ೭೫ ಡಿಗ್ರಿ ಕೋನದಲ್ಲಿ ಲಂಬಿಸಿದ ದಾರಿ ನಮಗೀಗ ಸಾಕ್ಷಾತ್ ವೈಕುಂಠದ ಹೆದ್ದಾರಿಯಂತೆ ಭಾಸ.
ಕೊಡೆಯೊಂದಿಗೆ
ಪ್ಯಾರಾ ಚೂಟ್ ಆಗಿ ಕೆಳಗಿನ ಶಿಶಿಲಕ್ಕೊ ಧರ್ಮಸ್ಥಳದಲ್ಲೋ ಶಿವೈಕ್ಯವಾಗುವುದರಲ್ಲಿ ಜಸ್ಟ್ ಮಿಸ್!
ಇನ್ನೇನು ಕೈಗೆಟಕುವ ದೂರದಲ್ಲಿದೆ ನೆತ್ತಿ ಆದರೂ ಕಾಣಿಸುತ್ತಿರಲಿಲ್ಲ. ಸುಮಾರು 75 ಡಿಗ್ರಿ ಕೋನದಲ್ಲಿ ವಾಲಿಕೊಂಡ ಮಣ್ಣು ದಾರಿ.
ತೋರುತ್ತದ್ದೋ ಇಲ್ಲವೋ ಎಂಬಸ್ಟೇ ತೆರೆದುಕೊಂಡ ದಾರಿ. ನೆತ್ತಿ
ಕಾಣದ ಅನಾಥ ಅನಂತದಲ್ಲಿ ಲೀನವಾದ ದಾರಿ. ಬೇರೆಲೋಕಕ್ಕೆ ಮಾಯವಾದಂತೆ ಭಾಸ. ಹಿಡಿದ ಕೊಡೆ ಗಾಳಿಗೆ
ತೂರತೊಡಗಿತು. ಮಸಲ ಧಾರೆ. ಗುಡ್ಡ ಕುಸಿಯುವಷ್ಟು ಮಳೆ. ಜೀವ ಇದ್ದರೆ ಬೆಲ್ಲ ಬೇಡಿ ಬದುಕಿಯೇನು. ಈ
ಗಾಳಿಯ ಸಹಿಸಲು ಸಾಧ್ಯವಿಲ್ಲ ಎಂಬಷ್ಟು ಗಾಳಿ. ಗಾಳಿಯ ಶಿವ ತಾಂಡವ!
ಇಳಿಯತೊಡಗಿದೆವು. ಮಳೆಯೂ ನಮ್ಮೊಂದಿಗೆ ಇಳಿಯದೇ ಏರತೊಡಗಿತು. ಪ್ರಳಯ ರುದ್ರದಂತಹ ಮಳೆ.
ಈ
ಜನ್ಮದಲ್ಲಂತು ಇಂತಹ ಬೀಕರ ಮಳೆ ಕಂಡಿದ್ದು ಇಲ್ಲಾ!! ಕೆಳಗಿಳಿಯುತ್ತಾ ಜೀವಾದಿಗಳು
ತಲ್ಲಣಿಸುತ್ತಿದ್ದವು. ತರಗಲೆಗಳ ತೂರಾಟ, ಹನಿಗಳ
ಆರ್ಭಟ. ಕೆಳಗಿಳುತ್ತಲೇ ಮಳೆ ಕಡಿಮೆ ಆಗುವುದನ್ನೇ ತಲೆಗೊಂದು ಸೂರು ಹುಡುಕಿ ಹೊರಟೆವು. ಅಷ್ಟು
ಮಳೆಯಲ್ಲೂ ಒಂದೆರಡು ಚಿತ್ರ ತೆಗೆದುದರಿಂದ ಎಲ್ಲರಿಗಿಂತ ಹಿಂದುಳಿದಿದ್ದ ನಾನು
ಸ್ನೇಹಿತರಿಗಾಗಿ ಹುಡುಕಿದೆ. ಯಾರೂ ಕಾಣಲಿಲ್ಲ. ಭಟ್ಟರ ಹಿಂದೇ ಹೋದರೋ ಹೇಗೆ? ಭೈರವನಿಗೆ ಪೂಜೆ ಮುಗಿಸಿ ಭಟ್ಟರು ಆಗಲೇ ಹೋಗಿಯಾಗಿತ್ತು.
ಭೈರವನ ಗುಡಿಯಲ್ಲಿ ಅಡಗುವ ಆಸೆ ಬಿಟ್ಟೇವು. ಸನಿಹದಲ್ಲೇ ಚಿಕ್ಕ ಗುಡಿಸಿಲಿನಂತಹ ಮಾಡಿತ್ತು. ಕಳ್ಳರಂತೆ ಅಲ್ಲಿ ಅಡಗಿಕೊಳ್ಳಲು ಹೊರಟೆ. ಗೆಳೆಯರೆಲ್ಲ ಅಲ್ಲೇ ಅಡಗಿ ಕುಳಿತ್ತಿದ್ದರು! ಒಬ್ಬರಿಗೊಬ್ಬರು ಒತ್ತಿ ನಿಂತು ಚಳಿ, ಮಳೆಯನ್ನು
ಅನುಭವಿಸುತ್ತಾ ನಿಂತೆವು.
ರಕ್ತ ಪರೀಕ್ಷಕರು
ಜಿರಾಪತಿ ಮಳೆಯ
ನಡುವೆ ಕಾಲಿಗೇನು ಏರಬಾರದೆಂದು ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಬಂದವರಿಗೆ ತಕ್ಕ ಪಾಠ ಕಲಿಸಿದ ರಕ್ತ
ಪರೀಕ್ಷಕ ಜಿಗಣೆಗಳು ಎಲ್ಲೆಲ್ಲಿಗೂ ನುಸುಳಿ ತನ್ನ ಪಾರುಪತ್ಯ ತೋರಿತ್ತು! ಕೆಲವರು ತಮ್ಮ ಮರ್ಮಾಂಗವನ್ನೆಲ್ಲಾ ಪರೀಕ್ಷೆ ಮಾಡಿಕೊಳ್ಳುತಲಿದ್ದರು! ಲೀಟರ್ ಗಟ್ಟಲೇ ರಕ್ತದಾನ ಮಾಡಿದ ನಂತರ ನಾವು ನಶ್ಯಾದ ಭರ್ಜರಿ ಸನ್ಮಾನ ಮಾಡಿದೆವು. ಕೊಂಚ ಖುಷಿ ಪಟ್ಟು, ಪಟ್ಟು ಸಡಿಲಿಸಿ ಉದುರಿದವು. ನಶ್ಯಾದ
ಅಪರಿಮಿತ ಶಕ್ತಿಗೆ ಮನಸೋತೆ. ಯಕಶ್ಚಿತ್ ಜೀವಿಯೊಂದು ಜೀವ ವಿಸ್ಮಯವಾಗಿ ಕಂಡಿತು. ಅಬ್ಬಾ! ಇದರ ಪ್ರತಾಪವೇ
ಎನಿಸಿತು. ತನ್ನ ಮೂತಿಯಿಂದಲೇ ನಡೆಯುತ್ತಾ ಬಿಸಿ ರಕ್ತ ಜೀವಿಗಳ ರಕ್ತ ಹೀರುವ ರಕ್ತ ಪೀಪಾಸುಗಳು. ಮರ,
ಗಿಡ-ಗಂಟಿ ಮತ್ತು ಮನುಷ್ಯನಿಗೂ ವ್ಯತ್ಯಾಸವನ್ನು ಕ್ಷಣದಲ್ಲೇ ಗುರುತಿಸಬಲ್ಲದು! ತನ್ನ ಅಂಗಾಂಗಗಳ ಮೂಲಕ
ಬಿಸಿ ರಕ್ತ ಪ್ರಾಣಿಗಳ ಬಿಸಿ, ಮೈಯ ಎಣ್ಣೆ, ನೆರಳು ಮತ್ತು ರಾಸಾಯನಿಕಗಳ ಇರುವಿಕೆಯನ್ನು ಪರಿಶೀಲಿಸಿ ಕಚ್ಚುತ್ತವೆ! ಜೊತೆಗೆ ಕಚ್ಚಿದ ಜಾಗದಲ್ಲಿ ಉಂಟಾಗುವ
ನೆವೆ ತಿಂಗಳುಗಳ ಕಾಲ ಇರುತ್ತದೆ. ನಮ್ಮೆಲ್ಲಾ ಗೆಳೆಯರು
ತಮ್ಮ ತಮ್ಮ ಅಂಗಾಗಳ ಸಂಶೋಧನೆಗಿಳಿದರು! ಪುಣ್ಯಕ್ಕೆ ನನಗೊಂದು ಕಚ್ಚಲೇ ಇಲ್ಲ!!
ಈ ವಿಶಿಷ್ಟ ಶಿಖರದ
ನೆತ್ತಿಗೇರುವ ಬಯಕೆಯೊಂದು ಮಳೆಯೊಂದಿಗೆ ಬೆರೆತು, ನನ್ನ ನೂರಾರು
ಸೋಲುಗಳ ಎನ್ ಸೈಕ್ಲೋಪಿಡಿಯಾದೊಳಗೆ ಸೇರಿ ಕರಗಿ ಹೋಯಿತು. ಮತ್ತೊಮ್ಮೆ ನೆತ್ತಿಯಲಿ ವಿಜಯದ ನಗೆಯ
ನೆಡಬೇಕು. ಎತ್ತಿನ ಭುಜದ ಕನಸಿಗೆ ಬಸಿರಾಗುವ ಬಯಕೆಯೊಂದನ್ನು ಮನಸ್ಸು ಸದಾ ಹೆರುತ್ತಲೇ
ಇರುತ್ತದೆ. ಕಾಲು ನೆಟ್ಟಗಿದ್ದರೆ ಒಮ್ಮೆ ಹತ್ತಿ ಬರಬೇಕು.












