Saturday, January 20, 2018

ಹಳಿಗಳ ಮೇಲೆ ನೆನಪಿನ ಉಯ್ಯಾಲೆ..

ಪ್ರಜಾವಾಣಿಯಲ್ಲಿ   ಪ್ರಕಟವಾದ  ನನ್ನ  ಲೇಖನ ನಿಮ್ಮ ಭಾನುವಾರದ  ಓದಿಗೆ....

ಸಣ್ಣಗೆ ಹನಿವ ಮಳೆ. ಹನಿ ಹನಿಯಲ್ಲೂ ತಣ್ಣನೆಯ ಗುಟುರು ಚಳಿ. ಅಮ್ಮನಂತೆ ತಬ್ಬಿ ಮುತ್ತಿಕ್ಕಿ ಹೋಗುವ ಮಂಜು. ಆಕಾಶಕ್ಕೆ ಚಪ್ಪರ ಹಾಸಿದಂತಹ ಮುಗಿಲು. ಮನಸ್ಸೆಲ್ಲಾ ಆದ್ರ. ಸಣ್ಣ ಮನಃಕಂಪನ. ಇನಿಯನ್ನು ಸೇರುವ ತವಕದಲ್ಲಿರುವಂತೆ ಬೀಸುವ ಕುಳಿಗರ್ಾಳಿ. ಏಕಾಂತ. ಹಳೆಯ ಸಿನಿಮಾ ಸೆಟ್ಟಿನಂತಹ, ಕಲ್ಲಿನಿಂದ ಮಾಡಿದ ರೈಲು ನಿಲ್ದಾಣ. ಚುಮುಚುಮು ಚಳಿಗೆ ನಿಲ್ದಾಣವೇ ತಣ್ಣಗಾದಂತಿತ್ತು. ಯಾವುದೇ ಗಡಿಬಿಡಿ ಇಲ್ಲದೇ ಬೆಚ್ಚಗೆ ಕುಳಿತ ಜನ. ಸ್ವೆಟರಿನೊಳಗಿಂದ ಇಣುಕುವ ಸುಂದರಿಯರ ಅರವಿಂದ ಅಂದ ಸವಿಯುತಲಿದ್ದೆ. ಅವರನ್ನು ನೋಡದಂತೆ ಪಕ್ಕದಲ್ಲಿದ್ದ ಹೆಂಡತಿಯ ನಿಶೇಧ.


oty railway station

ಇಲ್ಲಿ ಬಂದಿಳಿದರೆ ಕಾಲವೇ ನಿಂತ ಅನುಭವ. ಸುಮ್ಮನೆ ಕುಳಿತವನ ಮನಸ್ಸು ನೂರಿನ್ನೂರು ವರ್ಷ ಹಿಂದಕ್ಕೊಡುತ್ತೆ. ಪಶ್ಚಿಮ ಘಟ್ಟದ ವಿಶ್ವ ಪಾರಂಪರಿಕ ತಾಣವಾದ ಉದಕ ಮಂಡಲದಿಂದ ಹೊರಡುವ ರೈಲು ನಿಲ್ದಾಣದಲ್ಲಿದ್ದೆವು. ವಿಶ್ವದ ಹತ್ತು ವಿಶಿಷ್ಟ ರೈಲು ಸಂಚಾರಗಳಲ್ಲಿ ಇದೂ ಒಂದೂ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ನೀಲಗಿರಿ ಪರ್ವತ ರೈಲು 2004ರಲ್ಲಿ ಸೇರ್ಪಡೆಗೊಂಡಿತು. ಹಳೆಯ ವಿಶಿಷ್ಟ ನ್ಯಾರೋ ಗೇಜ್ನ್ನು ಹಾಗೇ ಉಳಿಸಿಕೊಂಡು ಅದೇ ಹಳೆಯ ಇಂಜಿನ್ನನ್ನು ಈಗಲೂ ಬಳಸುತ್ತಾರೆ! 
Tea estate Oty.


ಬ್ರಿಟಿಷ್ ಕಾಲದ ಮಧುರ ಮುಂದುವರಿಕೆ:-
ಬ್ರಿಟಿಷ್ ಕಾಲದ ಪಳೆಯುಳಿಕೆಯಂತೆ ಗೋಚರಿಸುವ ಸಣ್ಣ ನಿಲ್ದಾಣ. ಇದನ್ನು ನಿಮರ್ಿಸುವ ಕಾಲಕ್ಕೆ ಇಲ್ಲಿನ ಪರಿಸ್ಥಿತಿ ಹೇಗಿದ್ದಿರಬಹುದೆಂದು ಊಹಿಸುತ್ತಾ ಕುಳಿತೆ. ಮಗನೋ ಆಟದಲ್ಲಿ ತಲ್ಲೀನನಾಗಿದ್ದ. ಅವನದೊಂದು ಚಿತ್ರ ತೆಗೆದು ನನ್ನ ಆಲೋಚನೆಯಲ್ಲಿ ಮತ್ತೆ ಮುಳುಗಿದೆ. ಕಡಿದಾದ ಪರ್ವತದ, ಬರೋಬ್ಬರಿ 2203 ಮೀಟರ್ ಎತ್ತರದಲ್ಲಿ ನಿಮರ್ಿಸಿದ ನಿಲ್ದಾಣ. ಸುತ್ತಲೂ ದಟ್ಟ ಕಾಡಿದ್ದಿರ ಬಹುದು ಆ ಕಾಲಕ್ಕೆ. ವನಸಿರಿಯೇ ಮುಗಿಲು ಮುಟ್ಟಿರುವ ಕಾಲ. ಬ್ರಿಟಿಷ್ ಕಾಲಕ್ಕೆ ಜಾರುತ್ತಿತ್ತು ಮನಸ್ಸು.
Narrow gaze train Ooty

ಬ್ರಿಟಿಷರೇ ಬಿಟ್ಟು ಹೋದಂತಿದ್ದ ರೈಲು. ನ್ಯಾರೋ ಗೇಜ್ ರೈಲು ಹತ್ತಿದರೆ ಯಾರೋ ನಮ್ಮನ್ನು ನೂರಿನ್ನೂರು ವರ್ಷ ಹಿಂದಕ್ಕೆ ನೂಕಿದ ಭಾವ. ಸಾಕ್ಷಾತ್ ಡಾಲ್ಹೌಸಿಯೇ ನಮ್ಮನ್ನು ಕರೆದೊಯ್ಯಲು ಬಂದಂತ್ತಿತ್ತು. ರೈಲಿನಲ್ಲಿರುವುದು ಇಕ್ಕಟಾದ 3 ಬೋಗಿಗಳು. ನಾಲ್ಕಡಿಯಲ್ಲಿ ಬರೋಬ್ಬರಿ ಎಂಟು ಜನರು. ಕಿಟಕಿಗಾಗಿ ನೂಕಾಟ ಬೇರೆ. ಹಳೆಯ ಕಾಲದ ಉಗಿ ಯಂತ್ರ. ಹಿಂದೊಂದು ಮುಂದುಗಡೆಯೊಂದು ಉಗಿ ಇಂಜಿನ್. ರೈಲು ತುಂಬಾ ಹೊಸದಾಗಿ ಮುದುವೆಯಾದ ಜೋಡಿಗಳು. ಅವರ ನಡುವೆಯೊಂದು ಹಳೆ ಜೋಡಿ ಚೆನೈಗೆ ಹೊರಟಿದ್ದರು! ! ಅವರ ಜೊತೆ ಹರಕು ಮುರುಕು ಇಂಗ್ಲೀಷ್ನಲ್ಲಿ ಏನೇನೋ ಮಾತನಾಡಿಕೊಂಡೆವು. ಹೊರಟ ಕೆಲ ಹೊತ್ತಿಗೆ ಗಂಡನ ಭುಜಕ್ಕಾನಿದಳು ಅವಳು. ಹೊರಡಲಿನ್ನು ಕೆಲವೇ ಸಮಯ ಉಳಿದಿತ್ತು. ಹಳೆಯ ಭೋಗಿಗಳ ವಿಶಿಷ್ಟ ರಚನೆ ಮನ ಸೆಳೆಯುತ್ತಿತ್ತು. ಸ್ಟೇಷನ್ ಮಾಸ್ಟರ್ರೇ ಬಂದು ಬಾಗಿಲು ಹಾಕಿ ಹೋದರು! ನಾವೇ  ಮಹಾರಾಜರೆಂಬ ಭಾವ ಕೊಡುವಂತೆ ಮಾಡಿತ್ತು.
On the way to cannor railway station


ವಿರಾಮ ಪ್ರಯಾಣ:
ವಿರಾಮ ಜೀವಿಯಂತೆ ರೈಲು ಅವಸರಿಸದೇ ಚುಕುಬುಕು ನಾದ ಮಾಡಿತು. ಆಗಲೇ ಮನಸು ಇಹಕ್ಕೆ ಇಳಿದಿದ್ದು. ಉದಕ ಮಂಡಲದಿಂದ ಅದು ಹಸಿರ ಹೊದ್ದ ಹಾದಿಯಲ್ಲಿ ಏದುಸಿರು ಬಿಡುತ್ತಾ ಮದುವಣಗಿತ್ತಿಯಂತೆ ಹೊರಟಿತು ನೋಡಿ. ಇಕ್ಕೆಲಗಳ ಟೀ ಎಸ್ಟೇಟುಗಳ ನಡುವೆ ದಾರಿ ಮಾಡಿಕೊಂಡು, ತೆವಳುತ್ತಾ, ಧಾವಂತವಿಲ್ಲದ ವಿರಾಮ ಪಯಣ. ಬಸವನ ಹುಳುವಿನ ವೇಗ. ಟೀ ಎಸ್ಟೇಟುಗಳಲ್ಲಿ ಸೊಪ್ಪು ಕೊಯ್ಯುವ ಕೆಲವೇ ಕೆಲವು ಮಂದಿ ಕಾಣಸಿಕ್ಕರು. ಜನರೇ ಇಲ್ಲದ ಚಳಿ ಹೊದ್ದ ಸಣ್ಣದಾದ ಕೆಲಸದವರ ಮನೆಗಳು. ಚಹ ತೋಟದ ನಡುವೆ ಏಕಾಂಗಿಯಾಗಿ ನಿಂತಿರುವ ಸಿಲ್ವರ್ ಓಕ್ ಮರಗಳು. ಮೊಡ ಅಮರಿಕೊಂಡ ಬೆಟ್ಟ ಗುಡ್ಡಗಳು. ಉದಕ ಮಂಡಲದಿಂದ 52 ಕಿ.ಮೀ ದೂರದ ಮೆಟ್ಟುಪಾಳಯಂ ತಲುಪಲು ಅದು 5 ಗಂಟೆ ತೆಗೆದುಕೊಳ್ಳುತ್ತದೆಂದರೆ ಅದರ ವೇಗವನ್ನು ನೀವೇ ಊಹಿಸಿ. ನಮ್ಮ ಜೊತೆ ಎರಡು ನವ ದಂಪತಿಗಳು ಹೊಸ ಹಾದಿ ಮರೆತು ತಮ್ಮ ತಮ್ಮನ್ನೇ ನೋಡಿಕೊಳ್ಳುತ್ತಿದ್ದರು. ಏನು ಕಂಡರೋ ತಮ್ಮಲ್ಲಿ ಗೊತ್ತಿಲ್ಲ. ಕಡಿದಾದ ಬೆಟ್ಟಗಳ ಗರ್ಭಗಳನ್ನು ಹೊಕ್ಕು, ಬೆಟ್ಟವಿಳಿದು, ಕಣಿವೆಗಳ ದಾಟುತ್ತಾ ಸಾಗುವ ಪ್ರಯಾಣ ರೋಚಕ. ಪ್ರತಿ ಸುರಂಗವನ್ನು ಹೊಕ್ಕು ಹೊರ ಬಂದಾಗಲೂ ವಿಭಿನ್ನ ನೋಟ. ಹೂ ಹೊತ್ತ ಗಿಡ ಮರಗಳು. 250 ಸೇತುವೆಗಳನ್ನು ಹಾದು ಬಂದಿದ್ದೆವು! ಕೂನೂರು ಎಂಬ ಸ್ಟೇಷನ್ವರೆಗೂ ಬಲಕ್ಕಿದ್ದ ಆಳ ಪ್ರಪಾತ ಕಣ್ಣೂರಿನ ನಂತರ ಎಡಕ್ಕೆ ಹೊರಳಿಕೊಂಡಿತು. ಇಣುಕಿದರೆ ಹೃದಯ ಬಾಯಿಗೆ. ಹೊರಗೆ ಸಣ್ಣಗೆ ಮಳೆಯಾಗುತ್ತಿತ್ತು. ಎಲ್ಲಾ ಸ್ಟೇಷನ್ಗಳನ್ನೂ ಹಳೇ ಕಾಲದಂತೆ ಉಳಿಸಿಕೊಂಡಿದ್ದರು.
ಪೋಟೊದೊಳಗೊಂದು ಪೋಟೋ


ಹಿಂದಕ್ಕೋಡುವ ಮನಸ್ಸು:
ರೈಲು ಮುಮ್ಮುಖವಾಗಿ ಚಲಿಸಿದರೆೆ ಮನಸ್ಸು ಹಿಮ್ಮುಖ ಚಲಿಸಿತು. ನೂರು ವರ್ಷಗಳ ಹಿಂದೆ ಇಲ್ಲಿನ ಕಾಡು ಹೇಗಿದ್ದಿರಬಹುದೆಂದು ಮನಸ್ಸು ಹಿಂದಕ್ಕೊಡಿತು. ಭಾರತದ ವಿವಿಧ ಭಾಗಗಳಿಂದ ಕೆಲಸಕ್ಕೆಂದು ಬಂದವರು ಇಲ್ಲೇ ನೆಲೆಸಿ ಇಲ್ಲಿನವರಾಗಿದ್ದಾರೆ. ಕೆಲವು ತಲೆಮಾರುಗಳನ್ನು ಇಲ್ಲಿಯೇ ಕಳೆದಿದ್ದಾರೆ. ಅವರು ಕೊಡುವ ಉದಕಮಂಡಲದ ಚಿತ್ರ ಅನನ್ಯ. ಮೈಸೂರು ಭಾಗದ ಹೆಂಗಸೊಬ್ಬಳು ಮವತ್ತು ಮರುಷದ ಹಿಂದೆ ಬೀಳುತ್ತಿದ್ದ ಮಳೆಯನ್ನು ನೆನೆದಳು. ಅಂದಿನ ಮಳೆ ಈಗ ಇಲ್ಲವೆಂದಳು. ಸುತ್ತಲಿನ ಸಿಕ್ಕುಗಳ ಮರೆತು ಅಂದಿನ ಪರಿಸ್ಥಿತಿಗಳ ಚಿತ್ರಣ ಮಾಡ ಹತ್ತಿತ್ತು ಮನಸು. ಈ ನೂರಾರು ಸುರಂಗಗಳ ನಿಮರ್ಿಸಲು ಅಂದಿನ ಜನ ಪಟ್ಟ ಪಾಡು ಎಣಿಸಲು ಸಾಧ್ಯವಿಲ್ಲದ್ದು. ಅವರ ಕಳೆದ ನೀರವ, ನಿಲರ್ಿಪ್ತ ರಾತ್ರಿಗಳ ನೆನೆಸಿಕೊಂಡರೆ ಭಯವಾಗುವುದು. ನೀಲಗಿರಿ ಕಾಡಿನ ಜೀವಿಗಳ ನಡುವೆ ಕೆಲಸ ಮಾಡುವ ಅನಿವರ್ಾಯತೆ. ಚಳಿ ಮತ್ತು ಮಳೆಯೊಂದಿಗೆ ಹೋರಾಟ ಬೇರೆ. ಮನುಷ್ಯನ ಇಚ್ಚಾಶಕ್ತಿಯ ವಿರಾಟ ದರ್ಶನವೇ ನಮಗಾಗುವುದರಲ್ಲಿ ಆಶ್ಚರ್ಯವಿಲ್ಲ. ವಿಚಿತ್ರವೆನಿಸುವ ಹೆಸರಿನ ಕಾಡ ನಡುವಿನ ನಿಲ್ದಾಣಗಳನ್ನು ಹಾದು ಅದು ಕೂನೂರ್ ತಲುಪಲು ಸಣ್ಣಗೆ ಮತ್ತೊಂದು ಮಳೆ ನಮಗಾಗಿ ಕಾದಿರುವಂತೆ ಹೊಯ್ಯತೊಡಗಿತು. ಜಪ್ಪಯ್ಯವೆಂದರೂ ಒಂದು ನಿಲ್ದಾಣದ ಹೆಸರೂ ಮನಸ್ಸಿನಲ್ಲುಳಿಯದು.


A Silent village on the way to Ooty to Mettupallayam

ರೈಲು ಅಲ್ಲೊಂದು ಹತ್ತು ನಿಮಿಷ ನಿಂತು ಸುಧಾರಿಸಿಕೊಂಡು ನೀರು ಕುಡಿದು ಮತ್ತೆ ಪ್ರಯಾಣ ಆರಂಭಿಸಿತು. ತಣ್ಣಗಿನ ಚಳಿಗೆ ಬಿಸಿ ಕಾಫಿ ಸವಿದು ನಾವೂ ಹೊರೆಟೆವು ಅದನ್ನೇರಿ. ಬಲಭಾಗದ ಸ್ವರ್ಗ ಸದೃಶ ಭೂ ದೃಶ್ಯಾವಳಿಗಳು ಮುಗಿದು ಈಗ ಎಡ ಭಾಗಕ್ಕೆ ಹೊರಳಿ ಕೊಂಡಿತು. ಮನ ತಣಿಯುವವರೆಗೂ ನೋಡುತ್ತಾ ಮೆಟ್ಟುಪಾಳಯಂನ್ನು ಸಂಜೆ 7 ಗಂಟೆಗೆ ತಲುಪಿದೆವು. ಈ ದಾರಿಯಲ್ಲಿ ದಿನಕ್ಕೆರಡು ಬಾರಿಯಂತೆ ಚಲಿಸುವ ರೈಲು ಜನಮಾನಸದ ಜೀವನಾಡಿಯಂತಿದೆ. 
ನೂರು ವರ್ಷ ಪೂರೈಸಿರುವ ಇದು ಡಿಸೆಲ್ ಚಾಲಿತ ಸ್ವಿಸ್ ಇಂಜಿನ್ನಿಂದ ಓಡಿಸಲಾಗುತ್ತಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹಳೆಯ ವಿನ್ಯಾಸದ ಟಿಕೀಟುಗಳನ್ನು  ಇನ್ನೂ ನೀಡಲಾಗುತ್ತಿದೆ. 50 ಕಿ.ಮೀಗಳಿಗೆ ರೂ. 50ಕ್ಕೂ ಹೆಚ್ಚು ಹಣ ಪಾವತಿಸುವ ಈ ಕಾಲದಲ್ಲಿ ಕೇವಲ 15 ರೂಪಾಯಿಗೆ ಒಂದು ಸುಮಧುರ ಪ್ರಯಾಣದ ಅನುಭವ ನಿಮಗೆ ನೀಡುವುದರಲ್ಲಿ ಸಂಶಯವಿಲ್ಲ. ಇನ್ನೇಕೆ ತಡ ಈ ಚಳಿಗಾಲಕ್ಕೆ ಕ್ಯಾಮರ ಹೆಗಲಿಗೇರಿಸಿ ಹೊರಡಿ.
- ಶ್ರೀಧರ್. ಎಸ್. ಸಿದ್ದಾಪುರ.





No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...