Wednesday, March 6, 2019

Ballalarayana Durga Fort ಬೆರಗಿನ ಬಲ್ಲಾಳರಾಯನ ದುರ್ಗಾ-

      ಏಕದಂ ರಜೆಗಳ ಸಾಲು ಸಾಲು ಬಂದು ನಿಂತದ್ದೆ ಪ್ರವಾಸದ ಚುಂಗು ಹಿಡಿದುಬಿಟ್ಟಿತು. ಗೆಳೆಯರಿಗೆಲ್ಲಾ ಚುಂಗು ಹಿಡಿಸಿ ಹೊರಟು ನಿಂತೆ. 
      ಬೆಳಕು ಕಣ್ಣು ಬಿಡುವ ಮುನ್ನ ಚುಮು ಚುಮು ಚಳಿಗೆ ಕಾಫಿಗೆ ಮುತ್ತಿಕ್ಕಿ, ನಮ್ಮ ಬೈಕ್ನ ಕಿವಿ ಹಿಂಡುತ್ತಾ, ಕಾಫಿ ಕಾಡಿನ ತಿರುವುಗಳಲ್ಲಿ ಹಿಂದಿನ ದಿನ ಬಿದ್ದ ಮಳೆಯ ಘಮಲನ್ನು ಆಸ್ವಾದಿಸುತ್ತಾ, ಕುದುರೆ ಮುಖ ಶ್ರೇಣಿಗಳ ಹಿಂದಿಕ್ಕಿ ಬಲಕ್ಕೆ ಹೊರಳಿ, ಕಡಿದಾದ ಗುಡ್ಡದ ಕಡೆ ಹೊರಳಿ, ತ್ರಿಪಾಠಿ ಎಸ್ಟೇಟ್ನ ಮ್ಯಾನೇಜರ್ ಬಂಗೇರಾ ಅವರನ್ನು ಎದುರುಗೊಂಡು ರಾಣಿ ಝರಿ ಶಿಖರದ ಬಳಿ ನಿಶ್ಚಲವಾಯಿತು ನಮ್ಮ ಬೈಕು. ಬಂಗೇರಾ ಅಂಕಲ್ ಸಕತ್ ಆಗಿ ಇತಿಹಾಸದ ಆ ತುದಿಗೂ ಶಿಖರದ ಮತ್ತೊಂದು ತುದಿಗೂ ನಮ್ಮನ್ನು ಒಯ್ದರು. ಸದ್ಯಕ್ಕೆ ಸೆಲ್ಪಿ ತೆಗೆಯುತ್ತಾ ತಲ್ಲೀನರಾದೆವು.


ರಾಣಿ ಪೀಕ್.

ಹತ್ತು ಹೆಜ್ಜೆ ಮುಂದಿಟ್ಟರೆ ಕಡಿದಾದ ಪ್ರಪಾತ. ಮುಂದಕ್ಕೆ ದಕ್ಷಿಣ ಕನ್ನಡ. ನಾವು ಮತ್ತು ಬೈಕ್ ಇರುವುದು ಚಿಕ್ಕಮಗಳೂರಿನಲ್ಲಿ! ದೂರದಲ್ಲೆಲ್ಲೋ ಜಮಾಲಾಬಾದ್ ಕೋಟೆ ತಣ್ಣಗೆ ಮಂಜಿನೊಂದಿಗೆ ಮುದ್ದಾಡುತ್ತಿತ್ತು. ನಮ್ಮ ಎಡಕ್ಕೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಸೇರುವ 8 ಕಿ. ಮೀ. ನ ಕಾಲು ಹಾದಿ. ಟಿಪ್ಪು ಸೈನಿಕರು ಅಟ್ಟಿಸಿಕೊಂಡು ಬಂದಾಗ ಬಲ್ಲಾಳರಾಯನ ಪತ್ನಿ ಹಾರಿಕೊಂಡಳೆನ್ನಳಾದ ರಾಣಿ ಝರಿ ಬಲಕ್ಕೆ ಬಾಯ್ಕಳೆದು ಬಾಯಾರಿದಂತೆ ನಿಂತಿತ್ತು. ನಡೆದಾಡಲೇ ಕಷ್ಟ ಪಡುವ ಹಾದಿಯಲ್ಲಿ ಅವಳು ಹೇಗೆ ಓಡಿದಳೋ ಇವರು ಹೇಗೆ ಅಟ್ಟಿಸಿಕೊಂಡು ಬಂದರೋ ಫುಲ್ ಕನಪ್ಯೂಷ್ನ್ನೊ ಕನ್ಫ್ಯೂಷ್ನ್! 
       ಹೆಜ್ಜೆ ಹೊರಳಿದರೆ ಸ್ವರ್ಗಕ್ಕೆ ಗೇಟ್ ಪಾಸ್. ಎಡ ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಸ್ವರ್ಗ ಶಿಖರ. ಮಂಜಿನ ಮಸ್ತಾದ ರಗ್ ಹೊದ್ದುಕೊಂಡು ಹೊಗೆ ಬಿಡುತಲಿದ್ದ ಚೋಟಾ ಉಸ್ತಾದ್. ಅದರ ನಡು ಸೀಳಿ ನಡೆದರೆ ಬಲ್ಲಾಳರಾಯನ ಕೋಟೆ ದಾರಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ.

A SUN SET IN KUDUREMUKA RANGE 

DEVARA MANE

ಮೊದಲ ಅರ್ಧ ಗಂಟೆ ಕಾಡಿನ ಏರು ದಾರಿ. ಜಿಗಿವ ಜಿಗಣೆಗಳ ಗೊಲ್ಲೆ. ಯಾರಿಗೆ ಕಡಿಮೆ ಕಚ್ಚುತ್ತೆ ಎಂಬ ಪೈಪೋಟಿಯಲ್ಲೇ ಕಾಡು ದಾಟಿ ಕೊಂಡೆವು. ಜಾರುವ ಅಂಟು ಮಣ್ಣಿನ ಏರು ದಾರಿಯಲಿ ಹೆಜ್ಜೆ ಮೇಲೆ ಹೆಜ್ಜೆ, ಭರತನಾಟ್ಯ. ಎಡಕ್ಕೆ ಮಹಾ ಪ್ರಪಾತ ಬಿಟ್ಟು ಬಂದ ಬೆಟ್ಟದ ಹಳ್ಳಿ. ವೆಲ್ವೆಟ್ ಹಸಿರು ರವಿಕೆ ತೊಟ್ಟ ಸುಂದರಿಯರ ಸಾಲು ಸಾಲೇ ನಮ್ಮ ಮುಂದಿದ್ದರು!  ಯಾರನ್ನು ನೋಡುವುದೆಂಬ ವಿಚಿತ್ರ ತಳಮಳ. ಯಾರನ್ನು ಬೇಕಾದರೂ ನೋಡಿಕೊ, ಚಿವುಟಲು ಹೆಂಡತಿಯಿಲ್ಲ ಪಕ್ಕದಲ್ಲಿ ಎಂದಿತು ಮರ್ಕಟ ಮನ! ಮೋಡಗಳು ತಮ್ಮ ಬಾಹುಗಳಲ್ಲಿ ಶಿಖರಗಳ ಬಳಸಿ ಮುದ್ದಿಸಿ ಒಮ್ಮೆಲೆ ಅವುಗಳ ಬಿಟ್ಟು ಬಿಡುತ್ತಿದ್ದವು. ಚಕ್ಕನೆ ಕಣ್ಣೆದುರು ಬಂದು ಆಶ್ಚರ್ಯ ಮೂಡಿಸಿ ಮತ್ತೆ ಮಂಜಿನೊಂದಿಗೆ ಸರಸಕ್ಕಿಳಿಯುತ್ತಿದ್ದವು. ಕ್ಯಾಮರವೂ ಎರಡು ಮೂರು ಬಾರಿ ವಾವ್ ಎಂದು ಕ್ಲಿಕ್ಕಿಸುತ್ತೇ ಇತ್ತು. ಮೋಡಗಳೆದ್ದು ನಾವು ಹೋದಲ್ಲೇ ನಮ್ಮ ಬೆನ್ನಟ್ಟಿ ಬರುತ್ತಿದ್ದವು. ರಸಿಕನಿಗೆ ರಸಗವಳ. ನೆತ್ತಿಗೇರಿದ ಮೇಲೂ ನಾಲ್ಕು ಹನಿ ಚೆಲ್ಲಿ ಹೆದರಿಸಿದವು. ನೆತ್ತಿ ಮೇಲಿನ ದುರ್ಗದ ಕುರುಹುಗಳನ್ನು ಒಂದೊಂದಾಗಿ ನೋಡುತ್ತಾ ಪುಳಕಗೊಂಡೆವು. ಕಲ್ಲಿಗೆ ಮಾತು ಬಂದಿದ್ದರೆ ಚೆನ್ನಿತ್ತ. ಸ್ವಲ್ಪ ಹರಟ ಬಹುದಿತ್ತ. 

Add caption




THE RUINED BALLALA RAYA FORT FROM FAR

ಚಳಿಯ ರಗ್ ಹೊದ್ದು ಮಲಗಿದ್ದ ಬಲ್ಲಳರಾಯನ ಕೋಟೆ ನಮ್ಮೆದುರು ಇತಿಹಾಸದ ಮಗ್ಗಲನ್ನು ಬಿಡಿಸಿಡುತ್ತಾ ಸಾಗುವುದು. ನೆತ್ತಿಯ ಮೂರು ನಾಲ್ಕು ಕಡೆ ಕಾವಲು ಬುರುಜಿದೆ. ದಕ್ಷಿಣ ಕನ್ನಡದ ಬಳಿ ತೀರಾ ಕಡಿದಾದ ಪ್ರಪಾತವಿದೆ. ಚಾಮರ್ಾಡಿಯ 'ಏರಿಕಲ್ಲು' ಅಥವಾ 'ಹುಲಿ ದನ' ಬೆಟ್ಟ, ಕುದುರೆ ಮುಖ ಶಿಖರ ಇಲ್ಲಿಂದ ನಿಚ್ಚಳ. ಬೆಟ್ಟದ ತುದಿಯಲ್ಲಿ ಗೋಡೆ ನಿಮರ್ಿಸಿದ್ದಾರೆ. ನೆತ್ತಿಯನ್ನು ಸಪಾಟುಗೊಳಿಸಿ ಮನೆಯಂತಹ ರಚನೆಗಳನ್ನು ನಿಮರ್ಿಸಿದ್ದಾರೆ!

        ಅದರೊಳಗೆ ಪ್ಲಾಸ್ಟಿಕ್ ಬಾಟಲಿಗಳು! ಜೀವ ಹೊತ್ತು ಬಂದವರಿಗೆ ಬಾಟಲಿಗಳು ಭಾರವಾಗಿ ಕೋಟೆಯ ಹೊಂಡದಲ್ಲಿ ಬಿಸುಟು ಹೋಗಿದ್ದಾರೆ! ನಮ್ಮ ಜನರ ಪರಿಸರ ಪ್ರಜ್ಞೆ ಇನ್ನೂ ಪಾತಾಳದಲ್ಲಿದ್ದರೆ ಬೆಟ್ಟವೇರುವ ಕನಸು ಉತ್ತುಂಗದಲ್ಲಿದೆ.
ON TOP OF THE FORT

ಕಪ್ಪು ಬಿಳಿ ಬಣ್ಣದಲ್ಲಿ     ಕೊಟೆಯ  ಗೊಡೆ.
         
                     ಬೆಟ್ಟದ ಕಲ್ಲುಗಳನ್ನೇ ಕೋಟೆಗೆ ಬಳಸಿ, ಬೃಹತ್ ಕಡೆಯುವ ಕಲ್ಲು, ಬೀಸುವ ಕಲ್ಲು ತಯಾರಿಸಿದ್ದಾರೆ. ಬಲ್ಲಾಳರಾಯನ ಕಾಲದ ಸಾಕ್ಷವಾಗಿ ಇನ್ನೂ ನಿಂತಿವೆ. ಶಿವನ ಬಾಗಿಲೆಂಬ ಶಿಲೆಯ ಮಹಾದ್ವಾರ ನೆತ್ತಿಯ ಸ್ವಲ್ಪ ಕೆಳಗಿನ ಕಾಡುಗಳಲ್ಲಿ ಅನಾಥವಾಗಿ ಬಿದ್ದಿದೆ. ಬಾಗಿಲು ಮಾಡುವಷ್ಟು ದೊಡ್ಡ ಬಂಡೆ ಸುತ್ತಲ್ಲೆಲ್ಲೂ ಇಲ್ಲ! ಕೆಳಗಿನ ಕಣಿವೆಯಿಂದ ಕ್ರೇನು, ಟ್ರಕ್ಕುಗಳಿಲ್ಲದ ಕಾಲದಲ್ಲಿ ಹೊತ್ತುಕೊಂಡೇ ಬರಬೇಕು. ಅಂತಹ ಬೃಹತ್ ಬಾಗಿಲು. ನಮ್ಮ ಹಿರಿಯರ ಪರಿಶ್ರಮಕ್ಕೊಂದು ಸೆಲ್ಯೂಟ್ನ್ನು ಮನದಲ್ಲೇ ಹೊಡೆೆದೆ. ಹೆಮ್ಮೆ ಮೂಡಿಸಿತು.

ON THE WAY TO BALLALARAYANA DURGA FORT

ಒಂದು ಬುರುಜಿನಿಂದ ಮತ್ತೊಂದಕ್ಕೆ ದಾಟಿಕೊಳ್ಳಲು ಕನಿಷ್ಟ ಅರ್ಧ ಗಂಟೆ ಬೇಕು. ಅಷ್ಟೂ ಉದ್ದಕ್ಕೂ ಕಲ್ಲಿನ ಪಾಗಾರ ಕಟ್ಟಿದ್ದಾರೆ. ಬಂಡಾಜೆ ಅಬ್ಬಿ, ಸುಂಕಸಾಲೆ ಅಬ್ಬಿ ಇಲ್ಲಿಂದ ಬಹಳ ಸನಿಹದಲ್ಲಿದೆ. 360 ಕೋನದಲ್ಲೂ ಎತ್ತ ನೋಡಿದರು ಬೆಟ್ಟಗಳ ರಾಶಿ.


ಹಿಂದಿನ ದಿನ ಮಳೆಗೆ ಕಪ್ಪ ಕೊಟ್ಟಿದ್ದರಿಂದ ಇಂದು ಬೇಗ ಹೊರಟೆವು. ಬಿಟ್ಟು ಬಂದು ತಿಂಗಳಾದರೂ ಮನದ ತುಂಬಾ ಬಲ್ಲಾಳರಾಯನ ಕೋಟೆಯ ನೆನಪುಗಳ ತೋರಣ. ಮನಸ್ಸು ಮತ್ತೊಮ್ಮೆ ಲಗ್ಗೆ ಇಡಲು ಕಾತುರವಾಗಿದೆ! ನೀವೂ ಬರುವಿರಾ?
ಶ್ರೀಧರ್. ಎಸ್. ಸಿದ್ದಾಪುರ.

4 comments:

  1. ಓದಿದಾಗಲೆಲ್ಲ ಬರಬೇಕು ಎಂದೆನಿಸುತ್ತದೆ. ಹೀಗೆ ಬರೆಯುತ್ತಿರು.

    ReplyDelete
  2. ಮಧ್ಯೆಆದರೆ ಬಂದು ಬಿಡುತ್ತದೆ. 🙏

    ReplyDelete
  3. chendada patagolondige muddada baraha

    ReplyDelete
  4. ನೀವು ಬಳಸಿದ ಫೋಟೋ ‌ಮತ್ತು ಪದದ‌ ಜೋಡಣೆ ತುಂಬಾ ಚೆಂದ,ನವೀರಾದ ನಿರೂಪಣೆ..

    ReplyDelete

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...