Friday, December 6, 2019

ಝರಿ ಎಂಬ ಜಲ ಕನ್ನಿಕೆಯ ಬೆನ್ನು ಹತ್ತಿ....


ಗವಿಕಲ್ ಗಂಡಿ.

ದೂರದಲ್ಲೆಲ್ಲೋ ಕಾಣುವ ಸಣ್ಣ ಹಳ್ಳಿ. ಕಣ್ಣು ತುಂಬಿಕೊಂಡಷ್ಟು ಮತ್ತೆ ನೋಡುವಂತೆ ಮಾಡುವ ಮುಗಿಲುಗಳ ಮೈ ಮರೆಸುವ ನೋಟ. ವಿವಿಧ ಬಂಗಿಗಳ ಪೋಟೋ ಸೆಷನ್ ನಡೆಯುತ್ತಿತ್ತು. ಸಣ್ಣ ಹೂ ಬಿಡುವ ಗಿಡಗಳು ನಮ್ಮ ಪೋಟೊ ತೆಗೆಯಿರಿ ಎಂದು ವಿನಂತಿಸುತಿರುವವೋ ಎಂದೆನಿಸುತ್ತಿತ್ತು. ಜಾರುವ ಕಲ್ಲುಗಳನ್ನು ಏರಿ ಸ್ವಲ್ಪ ದೂರ ಹೋಗಿ ಮೂಕವಿಸ್ಮಿಯನಾಗಿ ಹಿಂದಿರುಗಿದೆ. ಇಂತಹ ಗವಿಕಲ್ಲು ಗಂಡಿಯ ಸುಮನೋಹರ ನೋಟವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿರುವಾಗ ನಮ್ಮ ಡ್ರೈವರ್ ಇಲ್ಲೇ ಸನಿಹದಲ್ಲೊಂದು ಜಲಪಾತವಿದೆ ನೋಡೋಣವೇ ಎಂದ. ಸರಿ ಎಂದು ಅಲ್ಲಿಂದ ಹೊರಟೆವು. ಸಿರಿಯುಕ್ಕಿಸುವ ಸುಮನೋಹರ ಮಲೆಗಳ ಸಾಲು ಸಾಲು ದಾಟಿ ಮುಂದಿನ ತಿರುವಿನ ತುದಿಯಲ್ಲಿ ಇಳಿಸಿ, ಇಲ್ಲೇ ಸ್ವಲ್ಪ ದೂರದಲ್ಲಿದೆ ನಡೆದು ಹೋಗಿ ಎಂದ. ಎದುರಿಗೊಂದು ಕಣಿವೆಯೊಂದು ಬಾಯ್ದೆರದು ನಿಂತ್ತಿತ್ತು. 


ಝರಿ ಜಲಧಾರೆ...
ದಾರಿ ಯಾವುದಯ್ಯ?
ಚಿಕ್ಕಮಗಳೂರಿನಿಂದ ಗವಿಕಲ್ಲ್ಗಂಡಿಯಿಂದ ಎರಡು ಕಿಲೋ ಮೀಟರ್ ಚಲಿಸಿ ಎಡಕ್ಕೆ ಹೊರಳಿ ಕೊರಕಲಲ್ಲಿ ಇಳಿದರೆ ಝರಿ ಜಲಧಾರೆ ಯ ದಾರಿ ತೆರೆದುಕೊಳ್ಳುವುದು.

ಜಾರುವ ಇಳಿಜಾರಿನಲ್ಲಿ ಸರ್ಕಸ್-

 ಜಾರುವ ಕೊರಕಲಿನಲ್ಲಿ ಚಿಕ್ಕ ಮಕ್ಕಳೊಂದಿಗೆ  ನಿಧಾನಕ್ಕೆ ಹೆಜ್ಜೆ ಇಡುತ್ತಾ ನಡೆಯ ತೊಡಗಿದೆವು. ಹಾದಿಯುದ್ದಕ್ಕೂ ಕೆಂಪು, ನೀಲಿ ಹೂಗಳನ್ನು ಯಾರೋ ಹರಡಿದಂತ್ತಿತ್ತು. ಹಲವು ಬಗೆಯ ಆಕರ್ಿಡ್ಗಳು ಮರದಿಂದ ಇಣುಕು ಹಾಕುತ್ತಿದ್ದವು. ಕೆಲವು ನೆಲದಲ್ಲಿ ಅರಳಿ ನಿಂತಿದ್ದವು. ಅವನ್ನೆಲ್ಲಾ ಕ್ಯಾಮರದಲ್ಲಿ ಬಂದಿಯಾಗಿಸಿಕೊಂಡೆವು. ಅನೇಕ ಬಳ್ಳಿಗಳು ಬಿಡದಂತೆ ಮರ ಸುತ್ತಿ, ಹೂ ಬಿಟ್ಟಿದ್ದವು. ಮಲಬಾರ್ ವಿಸಲಿಂಗ್ ಥ್ರಷ್ನ ಸಣ್ಣದನಿ ಎಲ್ಲಿಂದಲೋ ಕೇಳಿಬರುತ್ತಿತ್ತು. ದಾರಿಯೂ ಸಣ್ಣಗೆ ಜಾರುತ್ತಿತ್ತು. ಜಾರದಂತೆ ಗಿಡ ಬಳ್ಳಿಗಳನ್ನು ಹಿಡಿದು ನಡೆಯುತ್ತಿದ್ದೆವು. ಕೊರಕಲಿನಲ್ಲಿ 2 ಕಿಲೋ ಮೀಟರ್ ನಡೆದರೂ ಜಲಧಾರೆಯ ಸುಳಿವಿಲ್ಲ್ಲ.  ಕಾನನದಲ್ಲಿ ಯಾರನ್ನು ಕೇಳುವುದು? . ಮೊದಲ ಮಳೆ ಸಣ್ಣಗೆ ಜಿನುಗಿ ನಾಪತ್ತೆಯಾಗಿತ್ತು. ದಾರಿ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಜಲಪಾತದ ಕುರುಹು ಸಹ ಕಾಣಲಿಲ್ಲ. ಹಾವು ಮಲಗಿದಂತೆ ಮಲಗಿದಂತಹ ದಾರಿಯಲ್ಲಿ ನಡೆ ನಡೆದು ಕಾಲು ಮುಷ್ಕರ ಹೂಡಿತ್ತು. ಜೊತೆಯಲ್ಲಿ ಚಿಕ್ಕ ಮಕ್ಕಳನ್ನು ಹೊರುವ ಕಷ್ಟ ಬೇರೆ. ಇಲ್ಲೇ ಹತ್ತಿರದಲ್ಲಿದೆ ಎಂದ ಚಾಲಕನನ್ನು ಮಕ್ಕಳನ್ನು ಹೊತ್ತ ಅಮ್ಮಂದಿರು ಮನಸಾರೆ ಶಪಿಸಿದರು. 
ತಿಳಿಯದ ಹಾದಿಯಲ್ಲಿ ನಡೆವ ಸುಖವನ್ನುಂಡು ಹರಟುತ್ತಾ, ಗಿಡ, ಬಳ್ಳಿ ನೋಡುತ್ತಾ ಲೋಕ ಮರೆತವರಂತೆ ನಡೆಯ ಹತ್ತಿದೆವು. ಸುಂದರ ಜಲಧಾರೆ ನೋಡುವ ಆಸೆ ನಮ್ಮನ್ನು ಇನ್ನೂ ಕೆಳಗಿಳಿಯುವಂತೆ ಪ್ರೇರೆಪಿಸುತ್ತಿತ್ತು. ಒಂದೆರಡು ಸಲ ಮಣ್ಣಿನೊಂದಿಗೆ ಚಕ್ಕಂದವಾಡಿಯಾಗಿತ್ತು. ಅಂತು ಇಂತು ಮಕ್ಕಳನ್ನು ಹೊತ್ತು 2 ಗಂಟೆಯಷ್ಟು ನಡೆದಾಗ ಕೊನೆಗೊಂದು ಮನೋಹರ ಜಲಧಾರೆಯೊಂದು ನಮ್ಮ ಕಣ್ಗಳಿಗೆ ಗೋಚರಿಸಲು ಪ್ರಾರಂಭವಾಯಿತು. ನಡೆದ ದಣಿವಿಗೆ ಅಮೃತ ಸಿಂಚನವಾಯಿತು. ಆತುರಾತುರವಾಗಿ ಇಳಿದು, ಜಲಧಾರೆಯಡಿಯಲ್ಲಿ ತಲೆ ಒಡ್ಡಿದಾಗಲೇ ಸಮಾಧಾನವಾಗಿದ್ದು. ಹಿಮದ ಹನಿಗಳ ಸಿಂಚನದಂತಿತ್ತು  ಜಲಧಾರೆಯ ನೀರು. ಸಣ್ಣ ಹನಿ ಹನಿಯಾಗಿ ಜಿನುಗುವ ಜಲಧಾರೆಯ ಸೊಬಗು ಪದಗಳಲ್ಲಿ ಹಿಡಿದಿಡಲಾರೆ. ಎರಡು ಹಂತಗಳಲ್ಲಿ ಧುಮುಕುವ ಜಲಧಾರೆಯ ಪೂರ್ಣ ಚಿತ್ರ ತೆಗೆಯುವುದು ಸ್ವಲ್ಪ ಕಷ್ಟ ಸಾಧ್ಯ. ಇನ್ನೂ ನಿಗೂಢವಾಗಿರುವ ಇದನ್ನು ಅನೇಕ ಹೆಸರಿನಿಂದ ಕರೆಯುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದರು. ಝರಿ ಜಲಧಾರೆ ಎಂಬುದು ಇದರದೊಂದು ಹೆಸರು. ತೊರೆಯನ್ನು ವಿವಿಧ ಕೋನದಲ್ಲಿ, ಕ್ಯಾಮರದ ವಿವಿಧ ಸೆಟ್ಟಿಂಗ್ ಬಳಸಿ ಕ್ಲಿಕ್ಕಿಸಿದೆ. ಕಾನನದ ನಡುವೆ ಕಾಡುವಂತಹ ಎಷ್ಟು ಸುಂದರಿಯರು ಹೆಸರಿಲ್ಲದೇ ತಣ್ಣಗೇ ಹರಿಯುತಿರುವರೋ ಎಂದು ಅಚ್ಚರಿಯಾಯಿತು. ಮನಸ್ಸು ತಣಿದಿತ್ತು.
ಅರಳಿ ನಿಂತ ಆರ್ಕಿಡ್.

ಹಾದಿ ಬದಿಯಲ್ಲಿ ಬಣ್ಣದ ಗಿಡ.
 ಮಳೆಗಾಲದ ಕೆಲವೊಂದು ಆಕರ್ಿಡ್ ಸಸ್ಯಗಳು ನಮ್ಮ ಚೀಲ ಸೇರಿದವು. ಮರಳುವ ಹಾದಿ ಎಣಿಸಿದಾಗ ಒಮ್ಮೆ ಎದೆ ಜಲ್ಲನೆ ನಡುಗಿತಾದರೂ ಮೇಲೇರಲೇ ಬೇಕಾದುದರಿಂದ ಕಡಿದಾದ ಬೆಟ್ಟವೇರ ತೊಡಗಿದೆವು. ಅಂತೂ ತುದಿ ತಲುಪಿದಾಗ ಸಾರ್ಥಕ ಭಾವ. ಇಳಿಯುವ ಗಡಿಬಿಡಿಯಲ್ಲಿ ಸುತ್ತಲಿನ ಪರಿಸರ ಗಮನಿಸಲಿಲ್ಲವಾಗಿತ್ತು. ಸುತ್ತಲೂ ಚಿತ್ತಾಕರ್ಷಕವಾದ ಮನೋಹರ ಚಿತ್ರವೊಂದು ನಮ್ಮ ಮುಂದೆ ತೆರದುಕೊಂಡಿತು. ಇಲ್ಲಿಂದ ನಮ್ಮ ಪಟಾಲಂ ಹೊರಟಿದ್ದು ಮುಳ್ಳಯ್ಯನ ಗಿರಿಯೆಡೆಗೆ.
 ಸನಿಹದಲ್ಲೇ ಚಿಕ್ಕಮಗಳೂರಿರುವುದರಿಂದ ವಾಸ್ತವ್ಯಕ್ಕೆ ಯಾವುದೇ ಕುಂದಿಲ್ಲ. ನೋಡಲು ಬೇಲೂರು, ಹಳೆಬೀಡು, ದತ್ತ ಪೀಠ, ಮುಳಯ್ಯನ ಗಿರಿಗಳಿವೆ. ನವೆಂಬರ್ನಿಂದ ಮೇ ವರೆಗೆ ಪ್ರಯಾಣಕ್ಕೆ ಸೂಕ್ತ.
     ಶ್ರೀಧರ್. ಎಸ್. ಸಿದ್ದಾಪುರ.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...