Saturday, January 14, 2023

ಹಸಿರ ಜಾಡಿನಲಿ ನಮ್ಮದೇ ತುತ್ತೂರಿ...


"ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು" ಎಂಬ ಕವಿ ವಿನಂತಿಯಂತೆ  ಮುಂಜಾವಿನಿಂದಲೇ ಮಳೆ ಸಿಂಚನಗೈಯುತ್ತಿತ್ತು. ಸ್ವಲ್ಪವೂ ಅತಿ ಎನಿಸದ ಹನಿ ಮಳೆ. ಕವಿ ಮನಸಿನಲಿ ಕಾಮನ ಬಿಲ್ಲು. 
       ತಿರುವು ಮುರುವು ರಸ್ತೆಯಲಿ ಹಾರ್ನ್ ಕೇಳದಷ್ಟು ಜೀರುಂಡೆಗಾನ. ಮಳೆಗೆ ತೊಳೆದಿಟ್ಟ ಫಳ ಫಳ ರಸ್ತೆ. ಕೊಪ್ಪೆ ಹೊದ್ದು ಹೊರಟ ಗೋಪಾಲರ ಅರಳಿದ ಕಣ್ಣು. ಜಾರಿದ ಮಳೆ ಬಿಂದುಗಳು ಕ್ಯಾಮರದಲಿ ಸೆರೆ. ಚಾರಣಿಗನನು ಕವಿಯಾಗಿಸಲು ಹೊರಟ ಕಾಡು, ಚಿಟ್ಟೆ, ಪತಂಗಗಳ ಸ್ವಾಗತ. ಮಂಜಿನೊಂದಿಗೆ ಬೆರೆತ ಧೂಮದ ವಿಚಿತ್ರ ಪರಿಮಳ. ದೂರದಿಂದಲೇ ಕೇಳಿ ಬರುವ ಹೂಡುವವನ ಹೂಂಕಾರದ ದನಿ. ವಿಭೂತಿಯ ಜಲಪಾತ್ರೆಯ ಸನ್ನಿಧಿಯಲಿ ಕಂಡ ಚಿತ್ರಗಳ ನಿಲುಗನ್ನಡಿ.

ವಿಭೂತಿ ಜಲಧಾರೆ.. 



ಈ ವಿಶಿಷ್ಟ್ಯ ಜಲಧಾರೆ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡದಿರೆ ಕೇಳಿ. ಯಾಣ ಹಾದಿಯಲೇ ಸಾಗಿ ಅಡ್ಡ ಕವಲು ಹಿಡಿಯಬೇಕು. ಬರೋಬ್ಬರಿ ಅಡ್ಡದಾರಿಯಿಂದ 12 ಕಿ. ಮೀ ಎಂಬ ನೆನಪು. ಕತ್ತಲ ಕಾನಿಗೆ ಲಗ್ಗೆ ಇಟ್ಟ ಅನುಭವ. 'ಕತ್ತಲ ಕಾನಿನ' ಕತೆ ಮತ್ತೊಮ್ಮೆ ಹೇಳುವೆ.




ದಾರಿ ಹರಿವಿನಗಲಕ್ಕೂ ಪುಟಾಣಿ ಜಲಕನ್ನಿಕೆಯರ ಜಾತ್ರೆ. ಒಂದಕಿಂತ ಒಂದು ಚೆಂದ. ನಡೆವ ಹಾದಿಯಲಿ ಜಿಗಣೆಗಳ ಸಂತೆ. ಕಾಲ ತುಂಬ ರಕ್ತ ಪರೀಕ್ಷಕ ಜಿಗಣೆಗಳ ಹಾವಳಿ. ತಂಬಾಕು ಹುಡಿಯ ಧಾರಾಳ ಸನ್ಮಾನದಿಂದ ಕಾಲಿನಿಂದ ಕಾಲ್ಕಿತ್ತವು. ಇಪ್ಪತ್ತು ನಿಮಿಷದ ನಡಿಗೆಯಲಿ ವಿಭೂತಿ ಎಂಬ ವಿಶಿಷ್ಟ  ಲಲನೆಯ ದಿವ್ಯ ದರ್ಶನ. ಮುತ್ತುದುರಿದಂತೆ ಧುಮುಕುವ ನೀರ ರಾಶಿಗೆ ವಿಭೂತಿ ಎಂಬ ವಿಶಿಷ್ಟ್ಯ ನಾಮ. ಮೂರು ಹೆಜ್ಜೆಗಳ ಪುಟಾಣಿ ಧುಮುಕು. ನೋಡಿದಾಗ ಎಲ್ಲೆ ಮೀರಿದ ಸಂತಸ. ಸಣ್ಣ ಗುಂಡಿಗಳ ಅಳೆಯುವಷ್ಟರಲ್ಲೇ ತಿಂದ ಎರಡು ಇಡ್ಲಿಯೂ ಜೀರ್ಣ. ನೀರಿಗಿಳಿಯುತ್ತಲೇ ಎಮ್ಮೆಯಂತಾಡುವ ಗೆಳೆಯನೆಬ್ಬಿಸಲು ಸತತ ವಿಫಲ ಯತ್ನ. ಕೊನೆಗೂ ಮಂಜುಗಣಿ ದೇವಾಲಯದ ತಂಬುಳಿ ಊಟ ತಪ್ಪಿ ಹೋಗುವುದೆಂದಾಗ ಮನಸಿಲ್ಲದ ಮನಸ್ಸಿನಿಂದ ಎದ್ದ. ಪಾಪ. ಡ್ರೈವರ್ ಅಂಕಲ್ ಮಂಜುವಾಣಿಗೆ ತಡವಾಯ್ತು ಎಂದು ಎಚ್ಚರಿಸಲು ಬಾರದಿದ್ದರೆ ಮತ್ತೆರಡು ಗಂಟೆ ಧ್ಯಾನ ಮಾಡುತ್ತಿದ್ದನೋ ಏನೋ.
ಬೆಣ್ಣೆ ಹೋಳೆ ಜಲಧಾರೆಯಲ್ಲಿ . 


ಸರಪಳಿಗೆ ಜೋತು ಬಿದ್ದಂತೆ ಗಾಳಿಗೆ ಹೊಯ್ದಾಡುವ ನೀರ ರೇಖೆಗಳು. ಕೈ ಮೈ ಒದ್ದೆ ಮಾಡಿ ಕ್ಷಣಾರ್ಧದಲಿ ಮತ್ತೊಂದು ಕಡೆ ಮಾಯಾ! ವಿಚಿತ್ರ ಕಪ್ಪೆ, ಬಣ್ಣದ ಹಾರ್ ಹಾತೆಗಳು ಜಲಪಾತವನೇ ದಿಟ್ಟಿಸುತ್ತಾ ಕೂತಿದ್ದನ್ನು ಕ್ಯಾಮರಾದಲಿ ಸೆರೆ ಹಿಡಿದೆ. ತನ್ನರಮನೆಗೆ ಬಂದ ಅಪರಿಚಿತರಿಗೂ ಜಾಗ ಮಾಡಿ  ಕೊಟ್ಟಿದ್ದವು. ಅಘನಾಶಿನಿಯ ಕವಲಿಗೆ ಸೇರುವ ಇದರೊಡಲಲ್ ಅಡಗಿದ ಅಚ್ಚರಿಯ ಬಿಚ್ಚಲು ದಿನಗಟ್ಟಲೇ ಇಲ್ಲೆ ಮನೆ ಮಾಡಿ ಕಳೆಯಬೇಕು. ಜೀವ ವಿಸ್ಮಯಗಳ ತಾಣ ಈ ಜಲಧಾರೆ. ಪದಗಳೇ ಸೋಲುವಂತ ಚೆಲುವು.



ಕಾಡ ನಡುವಿನಲಿ ಸುಂದರ ಜಲಧಾರೆ. 


ಹೊರಟು ನಿಂತಾಗ ಮೈ ಮನಸ್ಸು ಭಾರ. ಕ್ಯಾಮರವೂ ಚಳಿ ಬಿಟ್ಟು ನೀರಿನಲಿ ಮುಳುಗಿ ಎರಡು ಗುಟುಕು ನೀರ ಕುಡಿದೇ ಬಿಟ್ಟಿತು! ಯಾಕೆ ನೀವು ಕಪ್ಪೆ ಕರಕರ ಕೇಳಲು ನೀರ ಜೋಗುಳದಲಿ ಮಗುವಾಗಿ ಮಲಗಲು ಈ ಮಳೆಗಾಲದಲ್ಲೊಮ್ಮೆ ಇತ್ತ ಬರಬಾರದು. ವಿಭೂತಿ ಜೊತೆಗಿರುವ ಯಾಣ, ಮಂಜುಗಣಿಯನು ಮರೆಯದಿರಿ. ಮತ್ತೊಮ್ಮೆ ಭೇಟಿಯಾಗೋಣ.

                                                                                                                  ಶ್ರೀಧರ್. ಎಸ್. ಸಿದ್ದಾಪುರ.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...