Wednesday, May 4, 2022

ನೆನಪುಗಳನ್ನು ನೇಣಿಗೇರಿಸಬೇಕು...

ಹಮಾರ ಬಜಾಜ್‌-




    ನೆನಪುಗಳನ್ನು ನೇಣಿಗೇರಿಸಬೇಕೆಂದು ಹೊರಟವನಿಗೆ ಸಿಕ್ಕ ಹಳೆ ಹೊತ್ತಗೆಯ ನೆನಪುಗಳು ಕಾಡುತಲಿವೆ. ಬೇಡವೆಂದರೂ ಕಹಿಯೇ ಉಳಿದ ಕಾಫಿ ಚರಟದಂತೆ ನೆನಪುಗಳು ಕಾಡುತಲಿವೆ. ಕುಡಿದ ಕಹಿ -ಸಿಹಿ ಕಾಫಿಯ ನೆನಪು ಮಾಸಿದಂತೆ ಕುಣಿಯುತ್ತೆ ಮನಸ್ಸು. ಮತ್ತೇನಕ್ಕೋ ಧ್ಯಾನಿಸುತ್ತೆ ಮನಸ್ಸು. ಮೂಲೆಯಲಿ ಮಲಗಿದ್ದ ಸಣ್ಣ ವೃಣವೊಂದನು ಕೆದಕಿ ಕೆದಕಿ ಮಹಾ ವೃಣವಾಗುವಂತೆ ರಾಡಿ ಎಬ್ಬಿಸುತ್ತೆ.




ನೆನಪುಗಳು, ನೆನಪುಗಳ ಶವ ಪೆಟ್ಟಿಗೆಯಿಂದ ಹೊರ ಬರಲಾರದಂತೆ ಮೊಳೆ ಜಡಿಯಬೇಕು ಬಿಡಿಸಿಕೊಳ್ಳಲಾರದಂತೆ, ಆಗುತ್ತಿಲ್ಲ. ಅದು ಕಾಡಿದಂತೆ ಮತ್ಯಾವುದೂ ಕಾಡವುದಿಲ್ಲ. ಸುಡುವ ಬೆಳದಿಂಗಳು. ನೆನಪಿಗೆ ವಾರಸುದಾರನಿಲ್ಲ. ಹೊರ ಹಾಕಿದರೂ ಹಾಕದೇ ಇದ್ದರೂ ನೆನಪುಗಳು ಒಮ್ಮೊಮ್ಮೆ ಮೆರವಣಿಗೆ ಹೊರಡುತ್ತವೆ. ತಟ್ಟುತ್ತವೆ. ದಿಗ್ಗನೇಳುತ್ತವೆ ಮುಂಗಾರಿನ ಮೋಡದಂತೆ. ಕಾಡುವ ಅನಂತ ಪ್ರಲೋಭನೆಗಳೂ ಇದರ ಎದುರು ಮಂಡಿಯೂರಲೇ ಬೇಕು ಜೋಗಿಯಂತೆ. ಅಕ್ಷರವೇ ಅಳಿಯುತ್ತವೆ ಇನ್ನೆಲ್ಲಿಯ ನೆನಪುಗಳು ಎಂಬ ಸಿನಿಕ ವಾಕ್ಯವೂ ಕ್ಷಣಿಕ. ಮತ್ತೆ ತೆರೆಯಂತೆ ದಡಕ್ಕೆ ಬಡಿಯುತ್ತವೆ. 


ಇಂತಹ ನೆನಪುಗಳ ನೊರೆ ಉಕ್ಕಿಸುವ ಕತೆಗಳ ಗುಚ್ಚ ನನ್ನೆದುರಿಗಿದೆ. ಎಲ್ಲಾ ಕತೆಯ ಹೆಣಿಗೆಯೂ ವಿಶಿಷ್ಟವಾದ ಪ್ಲಾಟ್‌ ಫಾರಂನಲ್ಲಿ ಕಟ್ಟಿರುವಂತಹ ನಿರ್ಮಿತಿ. ಎಲ್ಲೆಲ್ಲೂ ನೆನಪುಗಳದ್ದೇ ಮುಖ್ಯ ಭೂಮಿಕೆ.

ನೀವಾದರೂ ಓದಿ ಕತೆಗಳ ಸಿಕ್ಕನ್ನೂ ಬಿಡಿಸಿಕೊಳ್ಳಿ. ಒಂದೊಂದು ಕತೆಗಳು ತೆರೆಗಳಂತೆ ನನ್ನನ್ನು ಮತ್ತೆ ಮತ್ತೆ ತಟ್ಟುತ್ತಲೇ ಇವೆ. ನಿಮಗೂ ತಟ್ಟಿದರೆ ಹೇಳಿ. ತಕರಾರಿದ್ದರೂ.

 

ಯಾವ ಉಡುಗೊರೆ ಕೊಡಲಿ-

ಭಟ್ಟರ ಸಿನೆಮಾ ನೆನಪು ಮಾಡಿಕೊಡುವಂತಹ ವಿಶಿಷ್ಟ ಕತೆ ಯಾವ ಉಡುಗೊರೆ ಕೊಡಲಿ. ಕತೆಯ ಎಳೆ ವಿಧಾಯದಲಿ ಮಡುಗಟ್ಟುವ ವಿಶಾದ. ವಿಶಾಧವೇ ಕತಾ ನಾಯಕನೊ ಎಂಬಂತೆ ಭಾಸವಾಗುತ್ತದೆ. ಅದಮ್ಯವಾಗಿ ಪ್ರೇಮಿಸುವ ಗಂಡು ಹೆಣ್ಣು ವಿಧಾಯವನ್ನೇ ಅತ್ಯಂತ ರೋಚಕವಾಗಿ ವಿಧಾಯದ ಬಿಸಿ ಓದುಗನಿಗೂ ತಟ್ಟುವಂತೆ ವರ್ಣಿಸುತ್ತಾ ಕತೆಗಾರ ಕತೆಯಲ್ಲಿ ಸಾಧಿಸುವ ತಾಧ್ಯಾತ್ಮ ಅಪೂರ್ವವಾದುದು. ಎಲ್ಲಿಯೂ ಒಂದೇ ಒಂದು ವಾಕ್ಯವೂ ಭಾರವಾಗದಂತೆ ವಿಧಾಯದ ಕಹಿಯೇ ಹೃದಯ ತುಂಬುವಂತಹ ಮ್ಯಾಜಿಕ್ ಕತೆಯುದ್ದಕ್ಕೂ ಸಾಧ್ಯವಾಗಿಸಿದ್ದು ಕನ್ನಡದ ಕತೆಗಳ ಮಟ್ಟಿಗೆ ವಿಶೇಷ.‌ ಎರಡು ಹೃದಯಗಳ ತೊಳಲಾಟವನ್ನು, ಅವರು ಜೊತೆಯಾಗುವರಾ ಇಲ್ಲವಾ ಒಂದೂ ಗೊತ್ತಾಗದಂತೆ ಮುಕ್ತ ಅಂತ್ಯ ಕಾಣುವ ವಿಶಿಷ್ಟ ಕತೆ.

ಜೆಜೆ ಬಂದಿದ್ದ –

            ಇಬ್ಬರು ಗೆಳೆಯರ ನಡುವೆ ನಡೆವ ಆಪ್ತ ಮಾತುಕತೆಯಂತೆ ಕಂಡರೂ ಇಲ್ಲೊಂದು ವಿಶೇಷತೆ ಇದೆ. ಮಾನವ ಸಂಬಂಧಗಳ ನಡುವೆ ಗುಪ್ತವಾಗಿ ಹರಿಯುವ ಹೊಟ್ಟೆ ಕಿಚ್ಚು ಕತೆಯುದ್ದಕ್ಕೂ ಹರಿದು ಅದೇ ಕತಾ ನಾಯಕನಿರಬೇಕೆಂಬ ಗುಮಾನಿ ನಮಗೆ ಹುಟ್ಟಿಸುತ್ತದೆ. ಪ್ರೀತಿಸಿದ  ಹುಡುಗಿಯನ್ನು ಬಿಟ್ಟುಕೊಟ್ಟ ನೆನಪುಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಈ ಕತೆಯ ಪ್ರಧಾನ ಭೂಮಿಕೆಯು ನೆನಪೇ.  ಹೆಚ್ಚು ಕಡಿಮೆ ಮೇಲ್ಮೆಗಳ ತಾಕಲಾಟಗಳು ಕತೆಯ ನೇಯ್ಗೆಯಲ್ಲಿ ಸೇರಿಸಿ ಅತ್ಯಂತ ಸುಶಿಕ್ಷಿತರೂ ಈ ಮೇಲ್ಮೆಗಳ ಹೊಡೆದಾಟದಲ್ಲಿ ಭಾಗಿದಾರರು ಎಂಬ ಅಚ್ಚರಿಯು ಟಿಸಿಲೊಡೆಯುತ್ತದೆ. ಜೆಜೆಯ ವಿಶಿಷ್ಟ ವಿಕ್ಷಿಪ್ತ ವ್ಯಕ್ತಿತ್ವದ ಹೊರತಾಗಿಯೂ ಅದು ನಮಗೆ ಕಾಡುತ್ತದೆ.

ಹಮಾರ ಬಜಾರ್‌-

ಹಿಮ್ಮುಖವಾಗಿ  ಚಲಿಸುವ ತಂದೆಯ ನೆನಪಿನ ವಿಶಿಷ್ಟ ನೀಳ್ಗತೆ  ʼ ಹಮಾರ ಬಜಾಜ್‌ʼ. ಡೈರಿಯ ಪುಟಗಳಿಂದ ಹಿಮ್ಮುಖವಾಗಿ ಶುರುವಾಗಿ ಅಂತ್ಯದಲ್ಲಿ ಮುಂದೆ ಚಲಿಸುತ್ತಾ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತದೆ.

ತಂದೆಯ ನೆನಪಿನಿಂದ ಹೊರ ಬರಲಾರದ ಮಗ ತನಗೆ ತಾನು ಬರೆದುಕೊಂಡ ಸ್ವಗತದ ಕಿಂಡಿಯಂತೆ ಕೆಲವೊಮ್ಮೆ ಭಾಸ ಆಗುವುದು. ನೆನಪೆಂಬ ಗಾಳಿ ಪಟ ಮನದ ತುಂಬಾ ಹಾರಾಡುವಂತೆ ಮಾಡಿ ವಿಶಿಷ್ಟವಾಗಿಸಿದ್ದಾರೆ ವಿಕ್ರಂ.

ಬಜಾಜ್‌ ಸ್ಕೂಟರ ಅವರ ನೆನಪಿನ ಅಥವಾ ಅವರದ್ದೇ ಒಂದು ಭಾಗವೇನೋ ಅನ್ನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾರೆ. ಸಾವಿನಿಂದ ಮೊದಲ್ಗೊಂಡು ವಿಚಿತ್ರ ಸನ್ನಿವೇಶಗಳನ್ನು ವಿರಚಿಸುತ್ತಾ ಅವರ ಬದುಕಿನ ವಿವರಗಳನ್ನು ಡೈರಿಯ ಪುಟಗಳ ಮೂಲಕ ಮರಳಿಸುವ ಪ್ರಯತ್ನ. ಗಾಢ ವಿಶಾದದಲಿ ಅದ್ದಿ ತೆಗೆದ ಚಿತ್ರದಂತೆ ಚಿತ್ತದಲಿ ಉಳಿದು ಹೋಗುತ್ತದೆ. ತಂದೆಯ ಬದುಕಿನೊಂದಿಗೆ ಆಪ್ತವಾಗಿ ತಳುಕು ಹಾಕಿ ಕೊಂಡವರನ್ನೆಲ್ಲಾ ಇಲ್ಲಿ ಮತ್ತೊಮ್ಮೆ ಜೀವಂತಿಸಿದ್ದಾರೆ. ತಂದೆಯ ಗೆಳೆಯರಾದ ಪೆಜತ್ತಾಯರು, ಉಡುಪರನ್ನು ಪುನಃ ಬದುಕಿಸಿ ಆಪ್ತವಾಗಿಸಿದ್ದಾರೆ.

ಯಾರನ್ನೇ ಆಗಲಿ ನಾವು ಪ್ರಯತ್ನ ಪೂರ್ವಕ ನೆನಪು ಮಾಡಿಕೊಳ್ಳಬೇಕೊ ಅಥವಾ ಅದಾಗಿಯೇ ನೆನಪುಗಳು ತೆರೆಗಳಂತೆ ಮನ ಪಟಲದಲಿ ಆವರಿಸುವುದೋ ಎಂಬ ಗುಮಾನಿ ನನಗೆ ಕಾಡುವುದು.

ತೀವ್ರ ವಿಶಾದಕ್ಕೂ ಎಳಸದೇ ಕತೆ ಸತ್ವಯುತವಾಗಿ ಅಂತ್ಯ ಕಾಣುವುದು ಕತೆಯ ಮಗದೊಂದು ವಿಶೇಷತೆ.



No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...