ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಸಿಕ್ಕಿ ಎಂದಿದ್ದ ಗೆಳೆಯ. ಮಾಡಲೇನೂ ಕೆಲಸವು ಇರಲಿಲ್ಲ ಹಾಗಾಗಿ ಕಾಫೀ ಹೀರಿ ಅಂಕಿತದ ಜಗುಲಿಗೆ ಬಂದು ಪುಸ್ತಕ ತಿರುವುತ್ತಾ ಕೂತೆ. ಗಂಟೆ ಹತ್ತಾದರೂ ಆಸಾಮಿ ನಾಪತ್ತೆ. ಕಾಯುವಿಕೆ ಮುಂದುವರಿದಿತ್ತು.
ಪ್ರೇಯಸಿಗಾಗಿ ಅವಳ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ ಕಾದವನಂತೆ ಪುಸ್ತಕದಂಚು ಸವರುತಲಿದ್ದೆ. ಸಿ. ಇ. ಟಿ ಬರೆದು ರಿಸಲ್ಟ್ ಗೆ ಕಾದ ಇಂಜಿನಿಯರಿಂಗ್ ವಿದ್ಯಾರ್ಥಿಯಂತೆ. ಮಿಸ್ ಯು ಹೇಳುವ ಅವಳ ತುಟಿ ಅಂಚಿನ ಮೋಹಕತೆ.
ಪಕ್ಕನೆ ಸಿಕ್ಕಿದ್ದೆ ಮಾರ್ಕ್ವೇಜ್ನ ʼನೋಬಡಿ ರೈಟ್ಸ್
ಟು ಕರ್ನಲ್ʼ. ಪುಟ ತಿರುತಿರುಗಿಸುತ್ತಾ ಕುಳಿತೆ.
ಮಾರ್ಕ್ವೇಜ್ ಕಾಯುವಿಕೆಯೊಂದನ್ನು ರೂಪಕದಂತೆ ಇಲ್ಲಿ ಬಳಸಿದ್ದಾನೆ, ಕರ್ನಲ್ ಬದುಕಿನ ಸಂಧ್ಯಾ ಕಾಲವಿಡಿ
ಬಾರದ ಒಂದು ಪತ್ರಕ್ಕಾಗಿ ಕಾಯುತ್ತಾನೆ. ಅರ್ಥ ನಿರರ್ಥಕಗಳ ಪರಿವೇ ಇಲ್ಲದ ಅಸಾಮಾನ್ಯ ಕಾಯುವಿಕೆ ಆತನದು.
ಕಾಯುವಿಕೆಯೇ ಸುಂದರ ಕಾದು ಕಾದು ಸುಣ್ಣವಾದರೂ ಕತೆಗಳಲ್ಲಿ
ನಿಜ ಜೀವನದ ಸಿಕ್ಕುಗಳಲ್ಲಿ ಸಿಕ್ಕಿ ನಮಗೂ ಸಿಕ್ಕಿ ಅಸಾಮಾನ್ಯವಾದುದೇನೋ ಒಂದನ್ನು ಹೊಳೆಯಿಸುತ್ತಾನೆ.
ಹೀಗೆ ತೇಜಸ್ವಿಯ ತಬರನೂ ಅಂಥವರಲ್ಲೊಬ್ಬ.
ತಬರ ಬಾರದ ಪೆನ್ಶನ್ಗಾಗಿ, ತಬರನಿಗೆ ಸಾಲಕೊಟ್ಟ ಅಂಗಡಿಯಾತ ಆತನಿಗೆ ಬರಬೇಕಾದ ದುಡ್ಡಿಗೆ, ಹೆಂಡತಿ
ಔಷಧಿಗಾಗಿ ಅನವರತ ಕಾಯುತ್ತಿರುತ್ತಾಳೆ. ನಾನು ಗೆಳೆಯನಿಗೆ, ಅಂಗಡಿಯಾತ ಈತ ಪುಸ್ತಕ ಕೊಳ್ಳಲಿ, ಬೋಣಿಯಾಗಲಿ ಎಂದು ಕಾಯುತ್ತಿರುತ್ತಾನೆ.
ಹುಟ್ಟಿದವ ಸಾವಿಗೆ. ಸ್ಪರ್ಧಿ ರಿಸಲ್ಟ್‌ಗೆ ಮತದಾರ ಮತ ಎಣಿಕೆಯ ರೋಚಕತೆಗೆ. ಗುಮಾಸ್ತ ಪ್ರಮೋಷನ್‌ಗೆ.
ಕೋರ್ಟನ ವಿಚಾರಣೆಗೆ ಕಾಯುವ ಅನಸೂಯಳಂತೆ ನಾವೆಲ್ಲಾ ಯಾವುದೋ ಫಲಿತಕ್ಕಾಗಿ ಕಾಯುತ್ತಿರುತ್ತೇವೆ.
ನೈದಿಲೆಯು ಸೂರ್ಯನಿಗೆ, ಚಕೋರಿಯು ಚಂದ್ರನಿಗೆ ಕಾದಂತೆ. ಇಲ್ಲಿ ಎಲ್ಲರೂ ಕಾಯುವವರೇ.
ಕಾಯುವ ಸುಖಕಷ್ಟ ಕುರಿತು ಚಂದದ ಲೇಖನ ಈ ಕೃತಿಯಲ್ಲಿ ಉಂಟು. |
ಕಾಯುವುದರಲ್ಲೂ
ಕಾಯಕ್ಕೆ ಸುಖವುಂಟು. ಅದಮ್ಯವಾದ ಪ್ರೀತಿಯುಂಟು. ಕಾಯ ಕಾಯಬೇಕು. ಅಹಲ್ಯ ಮತ್ತು ಶಬರಿ ರಾಮನಿಗಾಗಿ
ಕಾಯುವಿಕೆಗೆ ಕೊನೆಯುಂಟೆ? ಅಂದ ಹಾಗೆ ನೀವು ಯಾವುದಕ್ಕೆ ಕಾಯುತ್ತಿರುವಿರಿ.
ಶ್ರೀಧರ್ ಎಸ್. ಸಿದ್ದಾಪುರ.