Saturday, July 27, 2024

ನಿಶ್ಚಲವಾದ ಊರುಗಳ ನಡುವೆ

 


ಯಾರೋ ಹರವಿದ ಕ್ಯಾನವಾಸ ಮೇಲೆ ಹದವಾಗಿ ಬಿಡಿಸಿಟ್ಟ ಊರು. ಚಿತ್ರಕಾರ ತನ್ನ ಕುಂಚದಿಂದ ರಚಿಸಿದಂತಹ ರಚನೆಗಳು. ಊರಿನ ಜನರಂತೆ ಇಲ್ಲಿನ ದೇವಾಲಯಗಳೂ ಅನಾಥರಂತೆ ಅಲ್ಲಲ್ಲಿ ಹರಡಿವೆ.


ಎಲ್ಲೋ ಕಳೆದು ಹೋದ ಹಿಂದಿನ ಶತಮಾನದ ಮಾನಸ ಪುತ್ರ ರತ್ನರಂತೆ, ಕಾಲದೊಂದಿಗೆ ಋಜುತ್ವ ಸಾಧಿಸಿದವರಂತೆ ಈ ಪುಟಾಣಿ ಹಳ್ಳಿಯಲ್ಲಿ ಬಂದಿಯಾದವರು ಶಾಪಗ್ರಸ್ಥ ಅಹಲ್ಯೆಯ ನೆನಪಾಗುವಂತೆ ಮಾಡುತ್ತಾರೆ. ಅವಳ ಚಂಚಲತೆಗೆ ಶಾಪ, ಇವರಿಗೆ ನಿಶ್ಚಲವಾಗಿರುವಂತಹ ಶಾಪ! ಎರಡೂ ಶಾಪವೇ. ಚಂಚಲತೆ ಮತ್ತು ನಿಶ್ಚಲತೆಯ ನಡುವಿನ ಗಡಿ ರೇಖೆಯೊಂದನ್ನು ಗುರುತಿಸಬೇಕಿದೆ.

ಇಲ್ಲಿನವರು ಎಲ್ಲೂ ಗಡಿಬಿಡಿ ಇಲ್ಲದೆ, ಯಾವುದಕ್ಕೂ ಹಪಹಪಿಸದೇ ಕಾಲ ದೇಶದ ಗಡಿ ಮೀರಿದವರಂತೆ, ಯಾರಿಗೋ ಕಾದು ಕುಳಿತವರಂತೆ ಭಾಸವಾಗುತ್ತಾ, ಕಿರು ವ್ಯಾಪಾರಕ್ಕೂ ಖುಷಿ ಪಡುತ್ತಾ ಇಟ್ಟಿಗೆ ಗೂಡಿನಂತಹ ಮನೆಗಳಲ್ಲಿ ವಾಸ ಮಾಡುತ್ತ ಬದುಕುತ್ತಿದ್ದಾರೆ. ಪೆನ್ನಾ ನದಿಯೂ ಯಾವುದೇ ಗಡಿ ಬಿಡಿ ಇಲ್ಲದೆ ಪ್ರಶಾಂತವಾಗಿ ಪ್ರವಹಿಸುತ್ತಾ ಇಲ್ಲಿನ ಬದುಕಿಗೆ ರೂಪಕವಾಗಿದೆ. ಮುಂದೆಲ್ಲೋ ಇದಕ್ಕೆ ಅಣೆಕಟ್ಟು ಕಟ್ಟಿದಂತೆ ನೀರು ನಿಂತಂತೆ ಹರಿಯುತ್ತಿದೆ.  




ಭಾರತದ ಎರಡನೇ ದೊಡ್ಡ ಕ್ಯಾನ್ಯಾನ್‌ ಎಂದು ಕರೆಯಿಸಿಕೊಳ್ಳುವ ಇಲ್ಲಿನ ನದಿ, ಅದರ ಹರಿವ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾಗದು. ಶಾಪ ಗ್ರಸ್ಥ ಕೋಟೆಯೊಳಗೆ ಮಾಧವ ಮತ್ತು ರಂಗಸ್ವಾಮಿ ದೇವಾಲಯವಿದೆ.  

 ಗಂಡೀಕೊಟ ಒಂದು ಕಾಲದ ಶ್ರೀಮಂತ ಬೀಡು, ಇಂದು ಬಡತನ ಮತ್ತು ಅವಜ್ಞೆಯ ಕತೆ ಹೇಳುತ್ತದೆ. ಹಿಂದೆ ಸರಿಯಲಾರದ ಮುಂದೆ ಹೋಗಲಾರದ ಒಂದಿಷ್ಟು ಮಂದಿ ಮಾತ್ರ ಉಳಿದಿದ್ದಾರೆ. ಅರ್ಥವೇ ಇಲ್ಲದ ಅನಾಥರು. ಯಾವ ರಾಮನ ಬರುವಿಕೆಗಾಗಿ ಕಾದಿರುವರೋ? ಒಂದಿಡಿ ಬದುಕು ರಾಮನ ಬರುವಿಕೆಗಾಗಿ ಕಾದಂತಿರುವ ನೂರಾರು ಶಬರಿಯರು. ಯಾರೋ ಅವರನ್ನು ಸ್ವಯಂ ಆಗಿ ನಿಯಂತ್ರಿಸುವಂತೆ ಪ್ರೊಗ್ರಾಂ ಮಾಡಿರುವರೋ ಎಂಬಂತಿದ್ದಾರೆ.  ಪೆನ್ನಾರನ ಗಾಢ ಹಸಿರಿನಂತಿರದೆ ಬದುಕು ಇವರದು ಕಡು ಕಷ್ಟ. ದಿನಕ್ಕೆರಡು ಬಸ್ಸು ಬಿಟ್ಟರೆ ಬೇರೆ ಸೌಲಭ್ಯಗಳಿಲ್ಲದೂರು. ಬಂದರೆ ಬಂತು  ಇಲ್ಲವಾದರೆ ಇಲ್ಲ. ಭಗ್ನಗೊಂಡ ಕೋಟೆ ಮತ್ತು ಊರು ಬಿಕೋ ಅನ್ನುತ್ತಿತ್ತು. ಭಗ್ನತೆಗೆ ತುಪ್ಪ ಸುರಿದಂತೆ ಆಕಾಶ ಬಿಕ್ಕ ತೊಡಗಿತು! ಹೊಟೆಲ್‌ ಹರಿತಾ ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ. ಇತಿಹಾಸದ ಪ್ರಜ್ಞೆ ಮತ್ತು ತೀವ್ರ ಅವಜ್ಞೆಗೆ ಮತ್ತೊಂದು ಹೆಸರೇ ಗಂಡೀಕೊಟ!!



ಕಲೆ, ಇತಿಹಾಸ ಮತ್ತು ಪ್ರಾಕೃತಿಕ ಅಚ್ಚರಿಗಳ ಸಂಮ್ಮಿಶ್ರಣದಂತಿರುವ ಕೋಟೆಯೂರು ಗಂಡಿಕೋಟ. ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂನಿಂದ ೮೦ ಕಿಲೋ ಮೀಟರ್. ಗಂಡಿಕೊಟವು ಆಂಧ್ರದ ಕಡಪಾ ಜಿಲ್ಲೆಯ ಕೊಟೆಯೂರು.

            ಚಿದ್ರಗೊಂಡ ಊರಿನಿಂದ ಭಗ್ನ ಮನಸ ಹೊತ್ತು ಹೊರಟು ನಿಂತಾಗ ಇಳಿ ಸಂಜೆ.

2 comments:

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...