ಇದೇ ಸೆಪ್ಟೆಂಬರ್ 8 ರಂದು ತೇಜಸ್ವಿ ಹುಟ್ಟಿದ ದಿನ. ಜಪಾನ್ ಮಹಿಳೆಯೊಬ್ಬರು ಇಲ್ಲಿ ಬಂದು ಅವರ ತೋಟವೆಲ್ಲಾ ನೋಡಿ ಹೋಗಿರುವಾಗ ಸಣ್ಣ ಅಪರಾಧಿ ಪ್ರಜ್ಞೆ ಜಾಗೃತವಾಯಿತು. ಅವತ್ತು ಆದದ್ದೆಲ್ಲಾ ಅಚಾನಕ. ಅದರ ವಿವರಗಳು ಈಗ ನಿಮ್ಮ ಮುಂದೆ. ಇಷ್ಟವಾದರೂ ಇಲ್ಲದಿದ್ದರೂ ತಿಳಿಸಿ..
ಸುಮ್ನೆ ಸಿಕ್ಕಿದ ಬಸ್ ಹತ್ತಿ ಗೊತ್ತು ಗುರಿ ಇಲ್ಲದೇ ಅಲೆಯುವ ಆಸೆಗೆ ಪುಷ್ಟಿ ಬಂದಿದ್ದು ಅವತ್ತು. ನಾನು ಗೆಳೆಯ ನಾಗರಾಜ ಶೃಂಗೇರಿಯ ಬಸ್ ಹತ್ತಿ ಹೊರಟು ನಿಂತಿದ್ದೆವು. ಜೀರಿಗೆ ಮಳೆ ಬೇರೆ. ಮನದಲ್ಲಿ ತೇಜಸ್ವಿ ಕನವರಿಕೆಯೊಂದು ಹುಟ್ಟಿಕೊಂಡಿತು. ನೇರವಾಗಿ ಮೂಡಿಗೆರೆಗೆ ಬಂದಿಳಿದೆವು. ಹೊರಗೆಲ್ಲಾ ಮೋಡ ಕವಿದ ವಾತಾವರಣ. ನಿಧಾನಿ ಜನಗಳು. ತೀವ್ರ ಜರೂರತ್ತು ಇಲ್ಲದೇ ಜನ ಓಡಾಡುತ್ತಿದ್ದರು.
ಜಿಟಿ ಜಿಟಿ ಜೀರಿಗೆ ಮಳೆಯಲಿ.....
ನಿಧಾನಕ್ಕೆ ಜಿಟಿ ಜಿಟಿ ಜೀರಿಗೆ ಮಳೆಯಲಿ ಗೊತ್ತು ಗುರಿ ಇಲ್ಲದೆ ಹ್ಯಾಂಡ್ ಪೋಸ್ಟ್ನಲ್ಲಿ ಇಳಿದು ನಿರ್ಜನ ದಾರಿ ನೋಡುತ್ತಾ ಹೋಗುವುದೆಲ್ಲಿಗೆ ಎಂದು ಯಾರಲ್ಲಿ ಕೇಳುವುದೆಂದು ತೋಚದೆ ಎದುರಿಗಿದ್ದ ಗೇಟೊಳಗೆ ನುಗ್ಗಿದೆವು. ತೆರೆದಂತೆ ಮುಚ್ಚಿಕೊಂಡ ಗೇಟು, ಹೊಸ ಸತ್ಯವೊಂದ ನಮಗೆ ಅರುಹಿತು. ಇದೇ ಸ್ವಾಮಿ ತೇಜಸ್ವಿ ಮನೆಯೆಂದು!
ಕಾಫಿ ಕಾಡು...
ಒಳಗೆ ನುಗ್ಗಿದ ನಮಗೆ ನಾಯಿ ಹಿಡಿಸುವರೋ ಎಂಬ ಹೆದರಿಕೆ ಬೇರೆ. ಪುಕ್ಕನಂತೆ ಕಾಫಿ ತೋಟ ನೋಡುತ್ತಾ ಹೊರಟೆವು. ಸುತ್ತಲೆಲ್ಲಾ ಕಾಡು ಕಾಡು. ನಡುವೆ ಕಾಫಿ ತೋಟ. ಅಲ್ಲಿಲ್ಲಿ ಹಣ್ಣಿನ ಗಿಡಗಳು. ಚಕ್ಕೊತ್ತಾ, ಪೇರಲೆ, ಹಲಸು, ಮಾವು ಇತ್ಯಾದಿ. ಚಕ್ಕೊತ್ತಾವಂತೂ ಹಣ್ಣ್ ತುಂಬಿ ಬೀಳುವ ಹಾಗಿತ್ತು. ಎಲ್ಲೆಲ್ಲೂ ಹಕ್ಕಿಗಳ ಉಲಿ. ಮುಂಜಾವಾದರೂ ರಾತ್ರಿಯಂತೆ ಭಾಸವಾದ ಭಾವ. ಹಕ್ಕಿಗಳ ಚಿಲಿ ಪಿಲಿ ಆಲಿಸುತ್ತಾ ಇದೇ ಇರಬೇಕೆಂದು ನಿಧಾನಕ್ಕೆ ಇಳಿಯುತ್ತಾ ಇಳಿಜಾರಿನಲ್ಲಿ ಸಾಗಿದೆವು.
ಮುಂದಿನದು ಸೆಪ್ಟೆಂಬರ್ 7 ಕ್ಕೆ..
No comments:
Post a Comment