Sunday, September 27, 2026

ಧಂಕರ್‌ ಒಂದು ಅಪರೂಪದ ಆಲಾಪ


ಪ್ರಾರಂಭ



ಓಡಾಟಕ್ಕೆ ಬಸ್ಸು, ಕಾರು ರಿಕ್ಷಾ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳಿದ್ದರೇನೆ ಬದುಕು ಎಂದುಕೊಂಡ ಶಹರದ ಬೆಪ್ಪುತಕ್ಕಡಿಗಳಿಗೆ, ಅಗಾಧ ಸಂಪತ್ತಿದ್ದರೆ ಮಾತ್ರ ಮನುಷ್ಯ ಆಕರ್ಷಿತನಾಗಿ ಅಲ್ಲಿ ಬದುಕಬಲ್ಲ ಎಂದುಕೊಂಡವರಿಗೆ ಇದನ್ನೆಲ್ಲಾ ಮಿಥ್ಯೆ ಮಾಡಿ ತೋರಿಸುವ ಸಣ್ಣ ಜಗತ್ತು. ತಮ್ಮದೇ ವಿಶಿಷ್ಟ ಚೌಕಟ್ಟನ್ನು ಹಾಕಿಕೊಂಡು ಬದುಕ ಹೊರಟವರು. ಸದಾ ಸವಾಲಿನೊಂದಿಗೆ ಮುಖಾಮುಖಿಯಾಗುವವರು ಹಿಮಾಚಲದ ಧಂಕರ್‌ ಎಂಬ ಪುಟಾಣಿ ಹಳ್ಳಿಯವರು. ಆರು ತಿಂಗಳು ಹಿಮ ಗುಡ್ಡೆಯೊಳಗೆ ಹೂತು ಬದುಕಬೇಕಾದ ಅನಿವಾರ್ಯತೆ. ಬೆಟ್ಟದ ಬೋಗುಣಿಯಲ್ಲಿ ಬೆಚ್ಚಗೆ ಕುಳಿತ ಪುಟಾಣಿ ಹಳ್ಳಿಗೆ ಒಂದು ಸುತ್ತು ಬರೋಣ ಬನ್ನಿ. 

ಎಲ್ಲಿಂದ ಹೊರಟು ಬಂದರೂ ಸುಮಾರು ಎಂಟು ಕಿಲೋ ಮೀಟರ್‌ ನಷ್ಟು ನಡೆದೇ ಬರಬೇಕಾದ ಧೂಳಿನ ಕೋಟೆಯಲ್ಲಿ ಅಡಗಿದ ಪುಟಾಣಿ ಹಳ್ಳಿ. ಸ್ವಂತ ವಾಹನ ಅಥವಾ ಶಿಚಲಿಂಗ್‌ ಹಳ್ಳಿಯಲ್ಲಿ ಇಳಿದು ನಡೆದೋ ಅಥವಾ ಟ್ಯಾಕ್ಸಿ ಮಾಡಿ ಬರಬೇಕು. ಒಂದು ಕಾಲದಲ್ಲಿ ರಾಜಧಾನಿಯಾಗಿದ್ದ ಈ ಊರು ಇಂದು ವಿರಳ ಜನಸಂಖ್ಯೆಯನ್ನು ಹೊಂದಿದೆ! ಕಾಜಾದಿಂದ 24 ಕಿ.ಮಿ. ದೂರದಲ್ಲಿದೆ. ಅದೇ ಹಿಮಾಚಲದ ಸ್ಪಿಟಿ ಕಣಿವೆಯ ಧಂಕರ್.

ಧಂಕರ್ ಹಳ್ಳಿಯಲಿ



ನ್ಯಾಕೊ ಹಳ್ಳಿಯಲಿ ತಂಗಿ, ರೆಕ್ಕೆ ಪಡಪಡಿಸಿ ಎದ್ದ ಹಗಲಿನಲ್ಲಿ ಟಾಬೋ ಮಾನೆಷ್ಟ್ರಿಗೆ ಮಾರು ಹೋಗಿ ಪೋಹ್‌ ಹಳ್ಳಿಯ ನಡು ಬಳಸಿ, ಸಿಲುಕ್‌ ಹಳ್ಳಿಯ ಸ್ನಿಗ್ಧ ಸಂತಸವ ಸವಿದು ಧಂಕರ್‌ ತಲುಪಿದಾಗ ಬಿಸಿಲಿಗೆ ಒಣ ಹಾಕಿದ ಹಗಲು ಮುಗಿಯುತಲಿತ್ತು. ನೂರು ಮೀರದ ಜನಸಂಖ್ಯೆಯ ಈ ಪುಟಾಣಿ ಹಳ್ಳಿ ಇಳಿ ಸಂಜೆಯ ಮೂಡಿನಲ್ಲಿತ್ತು. 




ಮೃದು ಮಣ್ಣ ಸಮುದ್ರದಲಿ ಎದ್ದ ಗೊದ್ದದ ಹುತ್ತದಂತಹ ಮಣ್ಣಗುಡ್ಡೆಗಳು. ಇನ್ನೇನು ಕೆಲವೇ ದಿನಗಳಲ್ಲಿ ಕಳಚಿ ಸ್ಪಿಟಿ ನದಿಗೆ ತನ್ನನ್ನು ಅರ್ಪಿಸಿಕೊಳ್ಳುವ ಧಾವಂತದಲ್ಲಿದ್ದಂತೆ ತೋರುತ್ತಿತ್ತು ಎಂಟು ನೂರು ವರ್ಷ ಹಳೆಯ ಧಂಕರ್‌ ಮಾನೆಷ್ಟ್ರಿ. ಮಣ್ಣ ಗುಡ್ಡೆಯೊಳಗೆ ಅಳಿಲು ಕೊರೆದ ಹೆದ್ದಾರಿ. ವಿಸ್ಮಯ. ಅಳಿವಿನಂಚಿನ ನೂರು ಸ್ಥಳಗಳಲ್ಲಿ ಧಂಕರ್‌ ಸಹ ಒಂದು ಎನ್ನುವುದು ವಿಶೇಷ. ಧಂಕರ್ ಉಳಿಸಿ ಎನ್ನುವ ಹೋರಾಟವೂ ಚಾಲ್ತಿಯಲ್ಲಿದೆ.

ಧಂಕರ್‌ ಎಂದರೆ ಬೆಟ್ಟದ ತುದಿಯ ಕೋಟೆ ಎಂದು. ಕುಲ್ಲು, ಲಡಾಕ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇದನ್ನು ೧೨೦೦ರ ಸುಮಾರಿಗೆ ಈ ಮಾನೆಷ್ಟ್ರಿ ಮತ್ತು ಕೋಟೆ ಕಟ್ಟಲಾಯಿತು. 

ಪಶ್ಚಿಮ ಘಟ್ಟದ ತಪ್ಪಲಿನಿಂದ ಬಂದ ನಮಗೆ ಅಚ್ಚರಿಯ ಅನುಭೂತಿ. ಸಸ್ಯಗಳ ಹಸಿರು ಕಂಡ ನಮ್ಮ ಕಣ್ಣುಗಳಿಗೆ ಎಂತಹುದೋ ಹಾಪಾ ಹಪಿ . ಇಲ್ಲಿನ ಜನರು, ಹುತ್ತದಂತಹ ಗುಡ್ಡ ಏರಿದರೆ ಅಲ್ಲೊಂದು ಇಲ್ಲೊಂದು ಮನೆಗಳು. ಆಚಾರ, ರೂಢಿ-ಪದ್ಧತಿಗಳು ಎಲ್ಲವೂ ಬಿನ್ನ. ನನಗೆ ಹಸಿರಿಲ್ಲದ ಇವರ ಬದುಕು ಬರಡು ಎಂದೆನ್ನಿಸಿತು. ಏರಲಾರದ ಎಡೆಗಳಲ್ಲಿ ಇವರ ಮನೆಗಳು. ನಮಗೋ ಬೀಳುವ ಭಯ ಅವರೋ ನಿರಾಳ ನಿಶ್ಷಿಂತರು. 



ಅವಿಚ್ಛಿನ್ನವಾಗಿ ಅವಿರತಿರುವ ಇವರ ಅಪ್ರತಿಮ ಇಚ್ಛಾಶಕ್ತಿಗೆ ಬೆರಗುಗೊಂಡೆ. ತಣ್ಣಗಿನ ಈ ದಿಬ್ಬಗಾಡು ಸರಿಸುಮಾರು ಆರು ತಿಂಗಳು ಹಿಮ ಹಿಮಚಾದರವ ಹೊದ್ದಿರುತ್ತದೆ. ಹಿಮ ಕರಗಿದ ನೀರೇ ಇವರಿಗೆ ಆಸರೆ. ಮಳೆ ನೆರಳಿನ ಪ್ರದೇಶ. ಹೊರ ಪ್ರಪಂಚದಿಂದ ಬಲು ದೂರ. ಎಲ್ಲೆಲ್ಲೂ ಏಕಾಂತ. ಇವರ ತಾಳ್ಮೆ ಅಪಾರ. ಇಲ್ಲಿನ ಕಲ್ಲುಗಳು ತಾಳ್ಮೆಯ, ಹಿಮ ಕವುಚಿದ ಕತೆ ಹೇಳುತ್ತವೆ.

ದಿನಕ್ಕೆ ಆಗುವಷ್ಟು ಸಂಪಾದನೆಯಾದರೆ ಸಾಕು ಇಲ್ಲವಾದರೂ ಸರಿಯೇ ಎಂಬಷ್ಟು ನಿರ್ಲಿಪ್ತ ಜನ. ಮಳೆ ನೆರಳಿನ ಪ್ರದೇಶವಾದುದರಿಂದ ಇಲ್ಲಿಯ ಮಣ್ಣಿಗೆ ಉಳಿಗಾಲ. ಇಲ್ಲವಾದರೆ ಅಷ್ಟೂ ಮಣ್ಣು ಕೊಚ್ಚಿ ಸ್ಪಿಟಿ ಸೇರುತ್ತಿತ್ತು. 

ಅಲ್ಲಲ್ಲಿ ಸಿಗುವ ಶಂಖದ ಅಚ್ಚು , ಸುರುಳಿ ಸುತ್ತಿದಂತಹ ಚಕ್ರದ ಕಲ್ಲಿನ ಫಾಸಿಲ್‌ ಪಳೆಯುಳಿಕೆ ಸಮುದ್ರದ ಕತೆ ಹೇಳುತ್ತದೆ.

ಧಂಕರ್‌ ಒಂದು ಅಪರೂಪದ ಹಳ್ಳಿ

1956ರಲ್ಲಿ ವಿಶ್ವ ಪಾರಂಪರಿಕ ಸ್ಥಳ ಎಂದು ಘೋಷಣೆಗೊಂಡ 17ನೆಯ ಶತಮಾನದ ಸ್ಪಿಟಿ ಕಣಿವೆಯ ರಾಜಧಾನಿ. ಒಂದೆಡೆ ಚೀನಾ ಮತ್ತು ಟಿಬೆಟ್.‌ ಬನ್ನಿ ಮಾನೆಷ್ಟ್ರಿ ಒಳ ಹೊಕ್ಕು ಬರೋಣ.

ಎದ್ದು ನಿಂತ ಕಾಂದಾ ಬಜ್ಜಿಯ ಗೋಪುರಗಳ ನಡುವೆ ಹುದುಗಿನಿಂತ ಸಣ್ಣ ಮಾನೆಷ್ಟ್ರಿ. ಹಲವೆಡೆ ಮಣ್ಣಗಾರೆಗೆ ಸಿಮೆಂಟ್‌ ಮೆತ್ತಿದ್ದರು. ಬಿಳಿ ಮತ್ತು ಕೆಂಪು ವರ್ಣದ ಗೋಡೆಗಳು. ಮಾನೆಷ್ಟ್ರಿಯ ಒಳ ಹೊಕ್ಕು ಉಪ್ಪು ಚಹ ಹೀರಿದೆವು. ಬೋತಿ ಭಾಷೆಯ ಲಿಪಿಯಲ್ಲಿ ಬರೆದ ಭೌದ್ಧ ಕಡತಗಳು ಕೆಲವಿದ್ದವು. ಒಳಗಿನ ಗೋಡೆಗಳಲ್ಲಿ 1500ರ ಸುಮಾರಿಗೆ ಬಣ್ಣದಲ್ಲಿ ಬಿಡಿಸಿದ ಸುಂದರ ಚಿತ್ರಗಳಿದ್ದವು. ಒಳಗಿನಿಂದ ಹೊರಟ ದಾರಿ ಮಾನೆಷ್ಟ್ರಿಯ ತುತ್ತ ತುದಿಗೆ ತಲುಪಿಸಿತ್ತು. ತುದಿಗೇರಿ ಸ್ಪಿಟಿ ಕಣಿವೆಯ ರುದ್ರ ಸೌಂದರ್ಯದಲಿ ಮುಳುಗಿದೆವು. ಸುತ್ತಲಿನ ೩೬೦ ಡಿಗ್ರಿ ನೋಟ ನಿಚ್ಚಳ. ದೂರದಲ್ಲಿ ಪರಿಶುಭ್ರ ಸ್ಪಿಟಿ ಮತ್ತು ಪಿನ್‌ ನದಿಗಳು ಸೇರುತಲಿದ್ದವು. ಸ್ಪಿಟಿ ನದಿ ದಕ್ಷಿಣಾಭಿ ಮುಖವಾಗಿ ಹರಿಯುತಲಿತ್ತು. ಸೂರ್ಯ ಅವಸರದಲ್ಲಿದ್ದ. ನೆತ್ತಿ ತಲುಪಿ ಸ್ಪಿಟಿ ನದಿಯಲಿ ಮೀಯಲು ತಯಾರಾಗಿದ್ದ. ಇಲ್ಲಿಂದ ಕಾಣುವ ಸೂರ್ಯಾಸ್ತ ಮತ್ತು ಚಂದ್ರಾಸ್ತಗಳು ಅಮೋಘ. ಸೂರ್ಯನ ಗೈರಿನಲ್ಲಿ ಚಳಿ ನರ್ತನ ಶುರುವಾಗಿತ್ತು. ಹಾರಾಡುವ ಪತಾಕೆಗಳು. ಹಳೆ ಕಾಲದ ವಸ್ತುಗಳನ್ನಿಟ್ಟ ವಸ್ತು ಸಂಗ್ರಹಾಲಯ ಅದರ ಜೊತೆಗಿತ್ತು. ನಾವು ಹೋದಾಗ ಮುಚ್ಚಿತ್ತು. 




ಮೂರು ಮಕ್ಕಳ ತಾಯೊಬ್ಬಳು ನಾವು ನಡೆಯಲೂ ಕಷ್ಟ ಪಡುವ ದಾರಿಯಲ್ಲಿ ಎದೆಗವಚಿದ ಮಗುವಿನೊಂದಿಗೆ ಕಿರು ನಗೆ ಸೂಸುತ್ತಾ ಮರವೇ ಇಲ್ಲದ ಊರಲ್ಲಿ ಕಟ್ಟಿಗೆಯ ಹೊರೆಯೊಂದನು ಹೊತ್ತು ಹೊರಟಿದ್ದಳು. ಗುಹೆಯಂತಹ ದಾರಿಯೊಳಗೆ ಮಾಯವಾದಳು. ಯಾರೊ ಅವಸರದಲಿ ಗೀಚಿದ ಹೋಮ್‌ ಸ್ಟೇಯೊಂದರ ಬೋರ್ಡು ನಮ್ಮನ್ನು ಅಣಕಿಸುತಲಿತ್ತು. ಅದೊಂದು ಸಣ್ಣ ಅಜಂತಾದ ಗುಹಾಂತರ ದೇವಾಲಯವನ್ನು ನೆನಪಿಗೆ ತರಿಸಿತ್ತು. ಸುತ್ತಲೂ ಗೊದ್ದದ ಹುತ್ತದಂತಹ ತ್ರಿಭುಜಾಕೃತಿಗಳು. ಇಂತಹ ಪ್ರಕೃತಿಯ ವಿಸ್ಮಯಗಳು ಅಲ್ಲಿ ನೂರಾರಿವೆ. ನೋಡುವ ಕಣ್ಣು ಬೇಕಷ್ಟೇ.

3 ಕಿಲೋ ಮೀಟರ್‌ ದೂರದ ಚಾರಣ ಮಾಡಿ ತಲುಪುವ ಧಂಕರ್‌ ಸರೋವರವನ್ನು ಈ ಬಾರಿ ಮಿಸ್‌ ಮಾಡುತ್ತಾ ಸ್ಪಿಟಿ ನದಿಯ ಸೆರಗಿಗೆ ತಲುಪಿ ಮುಖ ತೊಳೆದು ಮುಂದಡಿ ಇಟ್ಟೆವು.

ಚಳಿಯ ತೋಳಿನ ಬೆಂಕಿಯ ಕೂಸು ಧಂಕರ್

ಹಿಮದಲಿ ಸುಟ್ಟ ರೊಟ್ಟಿ ಸವಿಯಲು ಒಮ್ಮೆ ಇಲ್ಲಿಗೆ ಬರಬೇಕು. ಹಿಮ ಸ್ವಪ್ನ ಲೋಕದಲ್ಲೊಮ್ಮೆ ಹೊರಳಿ ಹೂತು ಹೋಗಬೇಕು. ಸವಾಲಿನ ಆರು ತಿಂಗಳು ಕಳೆದು ಮತ್ತೆ ನಿಚ್ಚಳ ಬೆಳಗನ್ನು ಸವಿಯಬೇಕು. 

ಸುಟ್ಟ ರೊಟ್ಟಿಯ ಕನಸುಗಳು. ಬೆಳದಿಂಗಳಲಿ ಬೆಂದ ನೋಟ. ಉಪ್ಪಿಟ್ಟಿನ ಹುರಿದ ರವೆಯಂತಹ ಮಣ್ಣು. ಮೀನಿನ ಸಾರಿನ ಪರಿಮಳದಂತಹ ಧೂಳು ನಾಸಿಕದೊಳ ಹೊಕ್ಕಿ ಒಳಗನ್ನು ಹೊರಗು, ಹೊರಗನ್ನು ಒಳಗೂ ಮಗುಚುತ್ತಲೇ ಇತ್ತು. ಇರುಳ್ಳಿ ಬಜ್ಜಿಯಂತೆ ಎದ್ದ ದೊಡ್ಡ ಗುಡ್ಡಗಳು. ಹಿಮಗಾಣಕ್ಕೆ ಸಿಕ್ಕ ಕೋಣಗಳ ಕೊಂಬುಗಳಂತೆ.  

ಸಾವಿರಾರು ವರ್ಷಗಳಿಂದ ಸೂರ್ಯನ ಕಾವಲಿಗೆ ಬಿದ್ದು ಬದುಕಿದ ಇಲ್ಲಿನ ಜನರ ತಾಳ್ಮೆಯ ಕತೆ ಕೇಳಿಸಿಕೊಳ್ಳಬೇಕು. ಸರಳ ಸಂತಸದ ತಿಳಿಯು ತುಂಬಿದ ಇವರ ಬೊಗಸೆಯಿಂದ ಸ್ವಲ್ಪವಾದರೂ ಸಂತಸವ ಬಸಿದುಕೊಳ್ಳಬೇಕು. ನೂರಾರು ಕತೆಗಳ ಜೋಲಿಯನ್ನು ತೂಗಬೇಕೆಂಬ ಆಸೆ. ಎಂದು ಬರುವೆ ಎಂದು ಕೇಳುತ್ತಲೇ ಇದೆ ಧಂಕರ್‌ ಎಂಬ ಮಧುರ ಆಲಾಪ!

ನನ್ನ ಸ್ಮರ್ತಿಪಟಲದಲಿ ಧಂಕರನ ಸುಂದರ ರಿಂಗ್‌ಟೋನು ಮತ್ತೆ ಮತ್ತೆ ರಿಂಗಿಣಿಸುತ್ತಲೇ ಇದೆ. ಒಳಹೊಕ್ಕು ನೋಡದೇ ಯಾವುದರ ಮಹತ್ವವೂ ನಮಗೆ ಅರಿಯದೆಂಬ ಅರಿವಿನೊಂದಿಗೆ ಅಪರೂಪದ ಧಂಕರ್‌ ಮಾನೆಷ್ಟ್ರಿಗೆ ವಿದಾಯ ಹೇಳಿದೆವು.


Sunday, September 13, 2026

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ್ಟಿದೆ, ಇನ್ನೆಷ್ಟು ಎಲೆ ಬಿಡಲು ಬಾಕಿ ಇದೆ ಮುಂತಾದ ವಿವರಗಳು ನಮ್ಮ ನಾಲಿಗೆ ತುದಿಯಲ್ಲಿ. ನಾವು ತಿನ್ನುವ ಜೋಗಾಳ ಅಷ್ಟರಲ್ಲೇ ಇದೆ. 



ಇಂತಹ ಮರ ಕೆಸುವಿನ ಎಲೆ ಭೇಟೆಗೆ ಹೊರಟಾಗ ಕಂಡ ನಾಲ್ಕು ಜಲಧಾರೆಯ ಕುರಿತು ಕಿರು ಟಿಪ್ಪಣಿ. ಇಂತಿಥ ಮರದಲ್ಲಿ ಈ ಸಮಯಕ್ಕೇ ಕೆಸುವಿನ ಎಲೆ ಬಿಡುತ್ತದೆ ಎಂಬುದೆಲ್ಲಾ ನಮಗೆ ಬಾಯಿ ಪಾಠ! ಸುಲಭದಲ್ಲಿ ಕೊಯ್ಯಬಹುದಾದ ನೂರಾರು ಮರಗಳನ್ನು ಗುರುತು ಹಾಕಿಟ್ಟುಕೊಂಡಿದ್ದೆವು. ಆದರೆಕೋ ಆ ವರ್ಷ ಎಲೆಗಳ ಅಭಾವ. ಪತ್ರೊಡೆ ತಿನ್ನದೇ ಬಾಯಿ ತುರಿಕೆ. ಅಂಗಡಿಯಲ್ಲಿ ಕೊಳ್ಳೋಣ ಎಂದರೆ ಒಂದಕ್ಕೆರಡು ದರ. ನಾಲ್ಕು ಎಲೆಗಳಿಗೆ ೨೦-೩೦ ಬೆಲೆ! ಹಾಗಾಗಿ ಆ ಭಾನುವಾರ ನಾವು ಊರು ಬಿಡಬೇಕಾಯಿತು! ಕೈ ಚೀಲ ಹಿಡಿದು ಬೇಟೆಗೆ ಹೊರಟೆವು!

   


     ಹೀಗೆ ನಾನು ಕೆಲಸ ಮಾಡೋ ಊರಿಂದ ಮುಂದೆ ದೊಡ್ಡದೊಂದು ಕಾಡು. ಈ ಕಾಡಿನ ಮರಗಳ ಕಂಕಳಲ್ಲಿ ಬೆಳೆವ ಎಲೆಗಳನ್ನು ಮಾತನಾಡಿಸಲು ಒಮ್ಮೆ ಹೊರಟೆವು! ಬೃಹತ್‌ ಕಾಡು ದಾಟಿದರೆ ಹರಿವ ಹಳ್ಳ. ಆ ಹಳ್ಳದ ಸನಿಹವೇ ಪುಟ್ಟ ವಿನಾಯಕ ದೇವಾಲಯ. ಹೇಗೂ ಬಂದಿದ್ದೇವೆಂದು ದೇವಾಲಯ ಹೊಕ್ಕೆವು. ಸಿದ್ದಾಪುರ ದಿಂದ 10-12 ಕಿಲೋಮೀಟರ್‌ ದೂರದ ತೊಂಭಟ್ಟು ಎಂಬ ಪುಟ್ಟ ಗ್ರಾಮದಲ್ಲಿದೆ ಈ ವಿನಾಯಕ ಮಂದಿರ. ನಮ್ಮೂರಿನ ತಂಡವೊಂದು ಆಗಷ್ಟೇ ಹೊಸ ಶಾಸನವೊಂದನ್ನು ಊರ ಮಕ್ಕಳ ಸಹಾಯದಿಂದ ಪತ್ತೆ ಮಾಡಿ ಅಧ್ಯಯನಕಾರರಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಈ ಊರಲ್ಲಿ ನಮ್ಮ ಮಕ್ಕಳ ಡೌಲು. ಶಾಸನಗಳ ಬಗ್ಗೆ ಕೇಳಿ ತಿಳಿದಿದ್ದ ನನಗೆ ಇವುಗಳನ್ನು ನೋಡುವ ಆಸೆ. ಉಳ್ಳೂರು ಕಂದಾವರ ದೇವಾಲಯದ ತುಂಬಾ ಹರಡಿರುವ ವಿಜಯನಗರ, ರಾಣಿ ಚೆನ್ನಾಬೈರಾದೇವಿ ಹೀಗೆ ಹತ್ತು ಹಲವು ಶಾಸನಗಳ ಸರಮಾಲೆಯನ್ನೇ ನಮಗೆ ಅಲ್ಲಿನ ಅರ್ಚಕರು ಪರಿಚಯಿಸಿದ್ದರು. ಶಾಸನಗಳ ಮೇಲೆ ವಿಶೇಷ ಆಸಕ್ತಿ ಹಾಗಾಗಿ ಇಲ್ಲಿರುವ ಹಳೆಯ ಕಾಲದ ಹಲವು ಶಾಸನಗಳನ್ನು ಓದುವ ಪ್ರಯತ್ನ ಮಾಡಿದೆವು. ಅಲ್ಲಿನ ಪುರೋಹಿತ ಉಡುಪರು ಸ್ಥಳ ಪುರಾಣ, ಶಾಸನ ಅಧ್ಯಯನಕ್ಕೆ ಬಂದ ಮಹನೀರಯರನ್ನೆಲ್ಲಾ ನೆನೆದರು. ಹದಿನಾಲ್ಕನೆಯ ಶತಮಾನದ ಈ ದೇವಾಲಯಕ್ಕೆ ವಿಜಯನಗರ ಆದಿಯಾಗಿ ಅನೇಕ ಅರಸರ ಉಂಬಳಿ ಇತ್ತೆಂದು ಹೇಳಿದ ನೆನಪು. ಒಂದಿಬ್ಬರ ಹಳೆಯ ಫೋನ್ ಸಂಖ್ಯೆಯನ್ನೆಲ್ಲಾ ನೀಡಿದರು. ಬಹಳ ಸಂಭ್ರಮದಿಂದ ಸನಿಹದ ಹಳ್ಳಕ್ಕೆ ಕರೆದೊಯ್ದರು.


ವಿನಾಯಕ ದೇವಾಲಯದ ಸನಿಹವೇ ಇರ್ಕಿಗದ್ದೆ ಜಲಧಾರೆ ಎರಡು ಹಂತವಾಗಿ ಹರಿಯುತ್ತದೆ. ಹೆಚ್ಚು ಕಡಿಮೆ ವಾರಾಹಿಯ ಗರ್ಭ ಸೇರುವ ಪುಟಾಣಿ ಹಳ್ಳ. ಒಂದಾನೊಂದು ಕಾಲದಲ್ಲಿ ಎಲ್ಲಾ ಊರುಗಳೂ ಹೊಳೆ, ಹಳ್ಳಗಳ ಸನಿಹವೇ! ಇಲ್ಲಾ ಗುಡ್ಡದ ಬುಡದಲ್ಲಿ ಮೈಲುಗಟ್ಟಲೆ ದೂರಕ್ಕೊಂದು ಮನೆ. ಮನೆ ಮನೆಗಳ ನಡುವೆ ಬಿಡಿಸಲಾಗದ ಭಾಂದವ್ಯ. ಇಲ್ಲಿನ ಗುಡ್ಡಗಳಿಗೆ ಸದಾ ಮಂಜಿನ ಪ್ರೀತಿ. ಮಂಜಿನ ಮುಸುಕೆಳೆದು ಮಲಗಿರುತ್ತವೆ. ಈ ಹಳ್ಳದ ಗುಂಟ ನಡೆದಿದ್ದೇನೆ. ಎಲ್ಲಾ ತಕರಾರುಗಳ ನಡುವೆ ತಕರಾರು ತೆಗೆಯದೇ ಬದುಕುವ ನಮ್ಮ ಪೂರ್ವಿಕರ ಪರಿಗೆ ಬೆರಗುಗೊಂಡಿದ್ದೇನೆ! ಗುಡ್ಡದಿಂದ ಒಸರುವ ನೀರೇ ಇವರ ಸಕಲ ಬೇಸಾಯ ಭಾಗ್ಯದ ಬಾಗಿಲು. ಒಂದೆರೆಡು ಎಕರೆ ತೋಟ ಮಾಡಿಕೊಂಡು ನೆಮ್ಮದಿಯ ಬದುಕು ಕಾಣುತ್ತಾರೆ.

ಕುಂಚಿಕಲ್ ಅಬ್ಬಿ ಮತ್ತು ಹುಲಿ ಮಾಬ್ಲ!



 ಅಂದು ನನಗೆ ಪರಿಚಯ ಆದವರೇ ಹುಲಿ ಮಾಬ್ಲನ ಮಗ ಅಶೋಕ ಪೂಜಾರಿ! ಊರವರ ಬಾಯಲ್ಲಿ ಸದಾ ನಲಿವ ಈ ಹೆಸರುಗಳು. ನಾವು ಹೋದಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ವಿನಾಯಕನ ದೇವಾಲಯದಿಂದ ಮಾರು ದೂರದ ಮನೆ ಅಶೋಕ್‌ ಪೂಜಾರಿಯದು. ಅವನೇ ನಮಗೆ ತನ್ನ ತಂದೆಯ ಕುರಿತು ಹೇಳಿದ ಕತೆಗಳು ನೂರಾರು. ಊರ ಜನರಿಗೆ ಉಪಟಳ ಕೊಡುವ ನೂರಕ್ಕೂ ಹೆಚ್ಚು ಹುಲಿಗಳನ್ನು ತನ್ನ ತಂದೆ ನಿವಾರಿಸಿದ್ದಾರೆ. ಹಾಗಾಗಿ ಅವರಿಗೆ ಬ್ರಿಟಿಷ್‌ ಸರಕಾರ ಬಿರುದು ಬಾವಲಿಗಳನ್ನಿತ್ತು ಸನ್ಮಾಸಿದೆ. ಹಳ್ಳದ ಸನಿಹದ ಗದ್ದೆ ಕೋವಿನಲ್ಲಿ ಆತನ ಮನೆ. ನಾವು ಹೋದಾಗ ಮನೆಯಿಂದ ಕಟ್ಟಿಗೆಯ ಧೂಮ ಏಳುತಲಿತ್ತು. ಜೊತೆಗೆ ಗಂಜಿಯ ಪರಿಮಳ. ಈಗ ಅವರಿಬ್ಬರೂ ಇಲ್ಲ.

  ಹುಲಿಗಳ ನಡುವೆ ಬದುಕು ಅಂದಿನವರ ಪರದಾಟ, ಬವಣೆಗಳ ನೆನೆದು ಖೇದವಾಯಿತು. ಜೊತೆಗೆ ಸಣ್ಣ ರೋಮಾಂಚನ! ಅವರ ಎದೆಯ ಬಯಲಲಿ ಕರಗಿದ ಹುಲಿಯ ನೂರಾರು ಕತೆಗಳು ಕೇಳುವ ತವಕವಿತ್ತು. ಅಂದು ಮನಸ್ಸಿರಲಿಲ್ಲ ಇಂದು ಅವರೇ ಇಲ್ಲ. ವಾರಾಹಿ ನದಿಯ ಉದ್ದಗಲಕ್ಕೂ ಹಬ್ಬಿದ ಬದುಕಿನ ಕತೆಗಳು ಅವರ ಬಳಿ ಇತ್ತು.

  ಹುಲಿ ಮಾಬ್ಲನ ಮಗನ ಜೊತೆಯಾಗಿ ಅವರ ಮನೆಗೆ ಹೋದೆ. ಬ್ರಿಟಿಷ್ ಸರಕಾರ ನೀಡಿದ ಪ್ರಶಸ್ತಿ ಫಲಕಗಳು ಮನೆಯ ಚಾವಡಿಯಲ್ಲಿ ನೇತು ಬಿದ್ದಿತ್ತು! ಹಳೆಯ ಚರೆ ಕೋವಿಯೂ ಸಹ! ಗತದ ವರ್ತಮಾನದ ಕೊಂಡಿಯಂತೆ ಅಂದಿನ ಜನರ ಹೋರಾಟದ ಬದುಕಿನ ಗುರುತಾಗಿ ಗೋಡೆಗೆ ಆತು ನಿಂತಿತ್ತು. ಮನೆ ಎದುರೇ 8-10 ಮುಡಿ ಗದ್ದೆ. ಗದ್ದೆ ಬಯಲ ನಂತರ ಚಿಕ್ಕ ತೆಂಗಿನ ತೋಟ. ತೋಟ ದಾಟಿದರೆ ಎಳ್ಳಾಮಾಸೆಗೆ ಊರ ಜನರೆಲ್ಲಾ ಸೇರಿ ಪೂಜೆ ಮಾಡೋ ಚಿಕ್ಕ ಗುಡಿ. ಕಲ್ಲೇ ಇವರಿಗೆ ದೇವರು. ಮಳೆಗಾಲವಿಡೀ ಗುಡಿಯೊಳಗೆ ನೀರ ಸಂಭ್ರಮ. ಸನಿಹದಲ್ಲೇ ಹರಿವ ಸಣ್ಣ ಜಲಪಾತವನ್ನು ತಾದ್ಯಾತ್ಮತೆಯಿಂದ ತೋರಿದನು. ನಾಲ್ಕಾರು ಸಂಕ ದಾಟಿ ಇಲ್ಲಿಗೆ ಬರಬೇಕು. ಮಳೆಗಾಲದಲ್ಲಿ ಬೋರ್ಗರೆವ ಬೇಸಿಗೆಯಲ್ಲಿ ಬತ್ತುವ ಈ ಹಳ್ಳಕ್ಕೆ ಕಟ್ಟು ಕಟ್ಟಿ ಊರಿನ ಎಲ್ಲಾ ಗದ್ದೆಗಳಿಗೆ ನೀರುಣಿಸುತ್ತಾರೆ. ಇದೆ ಹಳ್ಳವೇ ಪುಟ್ಟ ವಿನಾಯಕನ ಗುಡಿಯ ಸನಿಹ ಹಾದು ಹೋಗುತ್ತದೆ! ಅಂದು ನಮಗೆ ಪರಿಚಯವಾದವನೇ ಪುಟ್ಟ ಈಶ. ಈತನೇ ನಮ್ಮ ತಂಡದ ಗುರು.

ಪುಟ್ಟ ಈಶನ ಜೊತೆಯಲಿ

  ಇಲ್ಲಿ ನಮಗೆ ಜೊತೆಯಾದವನು ಪುಟಾಣಿ ಗೈಡ್‌ ಈಶ. ಆತನ ಜೊತೆಯಲಿ ಅಲ್ಲಿಂದ ನಮ್ಮ ಸವಾರಿ ಹೊರಟಿದ್ದು ಹಾವರೆಕಲ್ಲು ಎಂಬ ಅಜ್ಞಾತ ಧಾರೆಯೆಡೆಗೆ ಸಾಮಾನ್ಯವಾಗಿ ಯಾರೂ ಹೊರಡದ ಈ ಹಾದಿಗೆ ಅಲ್ಲಿನ ಈಶನೆಂಬ ಗೆಳೆಯನ ಜೊತೆ ಮಾಡಿದರು ಗೆಳೆಯ ಸುಧಾಕರ. ಈಶನೋ ಕೇವಲ 13ರ ಪೋರ! ಕಾಡ ನಡುವೆ ದಾರಿ ತಪ್ಪಿದರೆ ಎಂಬ ಅಜ್ಞಾತ ಭಯ. ಆದರೆ “ಈತ ಇಲ್ಲಿಗೆ ಹತ್ತಾರು ಬಾರಿ ಅಲ್ಲಿಗೆ ಭೇಟಿ ಕೊಟ್ಟಿದ್ದ!” ಎಂದು ತಿಳಿದಾಗ ಸಮಾಧಾನವಾಯ್ತು. ತನ್ನ ಪುಟಾಣಿ ಕೊಡೆ ಹಿಡಿದು ಇಲ್ಲಿನ ಕಾಡು, ಗಿಡ, ಮರ ಬಳ್ಳಿಯ ಬಗೆಗೆ ವಿವರಿಸಿ ಅಚ್ಚರಿ ಪಡಿಸಿದ್ದ. ಸುಟ್ಟಾಗ ಉಪ್ಪಿನಂತೆ ಚಟಪಟಗುಡುವ ಎಲೆ, ತಲೆದಿಂಬಿನಡಿ ಇಟ್ಟು ಮಲಗಿದರೆ ಈಗ ಎಲ್ಲಿದ್ದನೋ ತಿಳಿಯದು. ಕಾಡುವ ಅಸ್ಪಷ್ಟ ನೆನಪುಗಳು. ನಮ್ಮ ತಂಡದ ಪುಟಾಣಿ ಗುರು.



  ಪಶ್ಚಿಮ ಘಟ್ಟದ ಅಪೂರ್ವ ಕಾಡಿನ ದರ್ಶನ ಸಿಕ್ಕಿದ್ದು ಇಲ್ಲೇ. ವಿಭಿನ್ನ ಜಾತಿಯ ಮರಗಳ ದಟ್ಟಣೆಯಿಂದ ತುಂಬಿತ್ತು. ಅಮಾಯಕ ಜನರು ಕಾಡು ಉಳಿಕೆಗೆ ಕಾರಣವಾಗಿದ್ದರು. ಹಾಗೆಯೇ ಸದಾ ಸುರಿವ ಮಳೆ, ಇಂಬಳ, ಸರಿ ಇಲ್ಲದ ರಸ್ತೆ ಈ ಜಾಗವನ್ನು ಅನೂಹ್ಯವಾಗಟ್ಟಿತ್ತು. ಇತ್ತಿಚಿಗಷ್ಟೇ ಇಲ್ಲಿಗೊಂದು ಸುಸಜ್ಜಿತ ರಸ್ತೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದು. ಇಲ್ಲದೇ ಇದ್ದರೆ ರೋಗಿಗಳನ್ನು ರಸ್ತೆ ತನಕ ಎಂಟು ಕೀಲೊ ಮೀಟರ್ ಹಂದಿ ಹೊತ್ತಂತೆ ಹೊತ್ತು ತರಬೇಕಿತ್ತು. ಸಣ್ಣ ಕಾಯಿಲೆಗೂ 10 ಕಿ.ಮೀ ನಡಿಗೆ. ಹಾಗಾಗಿ ನಡಿಗೆ ಇವರಿಗೆ ಉಸಿರಾಟದಷ್ಟೇ ಸರಳ. ವಾರಾಹಿ ನದಿ ಗುಂಟ ಹಬ್ಬಿದ ನಾಗರೀಕತೆಗೆ ಸುಮಾರು 500 ವರ್ಷಗಳ ಇತಿಹಾಸ. ಮೊದಲೆಲ್ಲ ಕಾಡು ನದಿಗಳ ಸನಿಹವೇ ನಮ್ಮ ನಿಮ್ಮೆಲ್ಲರ ವಾಸ್ತವ್ಯ. ಇಂದು ಕಾಡಾಗಿರುವ ಎಡೆಗಳಲ್ಲಿ ಬದುಕಿದ ಜನ ಸಮುದಾಯದ ಬದುಕು ಇಂದಿಗಿಂತ ತದ್ವಿರುದ್ಧ. ಅಲ್ಲಲ್ಲಿ ಕಾಣ ಸಿಗುವ ಬೃಹತ್ ತೆಂಗಿನ ಮರಗಳು ಅಲ್ಲಿ ನಾಗರೀಕತೆ ಇತ್ತೆಂಬುದಕ್ಕೆ ಇಂಬು ಕೊಡುತ್ತವೆ. ಹುಲಿ ಮಾಬ್ಲನಿದ್ದಿದ್ದರೆ ಹತ್ತಾರು ಕತೆ ಹೇಳಿ ನಮ್ಮನ್ನು ಅಚ್ಚರಿಗೆ ಕೆಡಹುತ್ತಿದ್ದ. ಹಲವಾರು ಹಾವು ಅಣಬೆಗಳನ್ನು ನೋಡುತ್ತಾ ಹಾವರೆ ಕಲ್ಲಿನ ಜಲಧಾರೆಗೆ ತಲೆ ಕೊಟ್ಟಾಗಲೇ ನಮಗೆ ಸಮಾಧಾನವಾಗಿದ್ದು. ದಾರಿ ನಡುವೆ ವೈಪರ್‌ ಹಾವೊಂದು ಗಿರಕಿ ಹಾಕಿ ಮಲಗಿದ್ದಿದ್ದು ಈಶ ನಮಗೆಲ್ಲಾ ತೋರಿಸಿದ. ಒಣಗಿದ ತರಗಲೆಯ ಬಣ್ಣಕ್ಕೆ ಇದ್ದ ಅದರ ಚರ್ಮ ನಾವೆಷ್ಟೇ ಪ್ರಯತ್ನ ಪಟ್ಟರೂ ಕಾಣಿಸುತ್ತಿರಲ್ಲಿಲ್ಲ. ಆತ ನಮಗೆ ಅದನ್ನು ಕಾಣಿಸಿದ. ಕಿತ್ತಳೆ ಬಣ್ಣದ ಅಣಬೆಯನ್ನೂ ತೋರಿಸಿದ.


  ಹೀಗೆ ಹಾವರೆಕಲ್ಲು ಎಂಬ ಚೇತೋಹಾರಿ ಜಲ ಕನ್ನಿಕೆಯ ದರ್ಶನ ಪಡೆದು ಸಾಕಷ್ಟು ರಕ್ತದಾನ ಮಾಡಿ ಇಳಿ ಸಂಜೆಗೆ ಮತ್ತೆ ಹುಲಿ ಮಹಾಬಲನ ಮನೆ ಎದುರಿದ್ದೆವು.

  ಅಗಾದ ಕಷ್ಟದಲ್ಲಿ ಜಲಪಾತದ ಬುಡಕ್ಕೆ ಇಳಿದು ಅಪಾರ ನೆನಪುಗಳ ಹೊತ್ತು ತಂದಿದ್ದೆವು. ಜೀವ ಒತ್ತೆ ಇಟ್ಟು ಇಳಿದು ಎರಡು ಡಬ್ಬಿ ಚಿತ್ರಾನ್ನ, ಹತ್ತಾರು ಇಡ್ಲಿ ಹುಡಿ ಮಾಡಿದ್ದೆವು! ನೀರಿಗಿಳಿದಾಗ ಒಬ್ಬೊಬ್ಬರೂ ಬಕಾಸುರರು. ಹೊತ್ತು ತಂದವರಿಗೇ ಹಿಡಿ ಅನ್ನವಿಲ್ಲದಂತೆ ಮುಕ್ಕಿದ್ದರು!! ಹೊತ್ತು ಹೊರಟಾಗ ಇಷ್ಟು ಏಕೆ ಎಂದು ಲೇವಡಿ ಮಾಡಿದ್ದರು.

  ಮಾತನಾಡುತ್ತಾ ವಾರಾಹಿಯ ಮೂಲ ಜಲಪಾತವೊಂದು ಇಲ್ಲೇ ಸನಿಹದಲ್ಲೇ ಹರಿಯುತ್ತದೆ. ಭಾರತದ ಅತ್ಯಂತ ಉದ್ದದ ಜಲಪಾತವಿದು ಎಂಬುದು ಮತ್ತೆ ತಿಳಿಯಿತು. ವಾರಾಹಿಯ ಮೂಲ ದಿಕ್ಕನ್ನು ಬದಲಿಸಿದಾಗ ಇದು ಬರಿದಾಗುತ್ತಾ ಬಂದಿತ್ತು. ಇದನ್ನು ಕುಂಚಿಕಲ್ ಅಬ್ಬಿ ಎಂದು ಕರೆಯುತ್ತಾರೆ ಎಂದು ಅಶೋಕ ಪೂಜಾರಿ ಮಾಹಿತಿ ಇತ್ತರು. ಆದರಿದು ಬಲು ಕಠಿಣ ದಾರಿ ಬಂಡೆಗಳನು ಹತ್ತಿಳಿಯಬೇಕು. ಯಾವುದೇ ಮಾರ್ಗವಿಲ್ಲದೆ ಕೇವಲ ನಮ್ಮದೇ ಮಾರ್ಗ ಸೃಷ್ಟಿಸಿಕೊಂಡು ಹೊರಡಬೇಕು. ಇಲ್ಲಿ ಮಲೆನಾಡಿನ ವಿಶಿಷ್ಟ ತಳಿಯ ಬೆತ್ತ ಬೆಳೆಯುತ್ತದೆ. ಚುಚ್ಚುವ ಮುಳ್ಳನ್ನು ಹೊಂದಿದ ಈ ಬೆತ್ತ ಬಲು ಅಪಾಯಕಾರಿ. ಇದರ ನಿವಾರಣೆಗಾಗಿ ಕತ್ತಿ ಮತ್ತು ಶೂ ಅನಿವಾರ್ಯವೆಂದರು. ಹಾಗೆಯೇ ಅರಣ್ಯ ಇಲಾಖೆಯ ಅನುಮತಿ! ಇದೆಲ್ಲವನು ಪಡೆದು ತೊಂಭಟ್ಟಿನ ಒಬ್ಬನನ್ನು ಗೈಡಾಗಿಸಿಕೊಂಡು ದಿನ ನಿಗದಿ ಮಾಡಿಕೊಂಡು ಹೊರಟೆವು.

ಕಾಡ ನಡುವೆ ನವ ನಾಗರೀಕತೆಯ ಕತೆಗಳು

  ವಾರಾಹಿಯ ಹರಿವಿನುದ್ದಕ್ಕೂ ನಾಲ್ಕು ಅಣೆಕಟ್ಟು ಕಟ್ಟಲಾಗಿದೆ. ಅದರ ಎರಡನೆಯ ಅಣೆಕಟ್ಟಿನ ಸನಿಹ ಹರಿವು ಬಲು ನಿಧಾನ. ಸಿದ್ಧಾಪುರ ಹೊಸಂಗಡಿ ದಾಟಿ ಮುಂದೆ ಸಿಗುವ ವಿದ್ಯುದಾಗರಕ್ಕಿಂತ ಸ್ವಲ್ಪ ಮುಂಚೆ ಬಲಕ್ಕೆ ಹೊರಳಿಕೊಳ್ಳಬೇಕು. ದಟ್ಟ ಕಾಡಿನ ನಡುವೆ ಕಂಡು ಕಾಣದಂತೆ ಇರುವ ಬಲ ಹೊರಳಿಕೆ. ಅನೇಕ ಬಾರಿ ಹಕ್ಕಿ, ಜೇಡಗಳ ಛಾಯಾಚಿತ್ರ ತೆಗೆಯಲು ಹೋದವನ ಕಣ್ಣಿಗೆ ಕಾಣಿಸಿದ್ದುಂಟು. ಹಾಗೆಯೇ ಏನಿದೆ ಎಂಬ ಕುತೂಹಲ ತಾಳಿ ಒಂದೆರಡು ಬಾರಿ ಇಣುಕಿ ಹಾಕಿ ಬಂದಿದ್ದೆ. ಇಲ್ಲಿರುವ ಅಣೆಕಟ್ಟು ಕಾಯುವ ಕಾವಲುಗಾರನಿಗೂ ಹೆಸರು ತಿಳಿದಿಲ್ಲ! ಮತ್ತೆ ಮತ್ತೆ ಭೇಟಿಕೊಟ್ಟರೂ ಜಲಪಾತದ ಸನಿಹ ಸೇರುವ ಭಾಗ್ಯ ದೊರೆತಿರಲಿಲ್ಲ. ಅಂತು ಅದೊಂದು ಬೆಳಿಗ್ಗೆ ನಾವೊಂದು ಆರೇಳು ಜನ ಗೆಳೆಯರೆಲ್ಲಾ ಸೇರಿ ಅರಣ್ಯ ಇಲಾಖೆಯ ಅನುಮತಿ ಪಡೆದು ಪುಟಾಣಿ ಅಣೆ ಕಟ್ಟಿನ ಜಾಗಕ್ಕೆ ಬಂದು ಸೇರಿದೆವು. ಇಲ್ಲಿಂದಲೇ ಆ ಮನೋಹರ ಜಲಧಾರೆ ಕಾಣಸಿಗುತ್ತದೆ! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಅನೇಕ ಬಾರಿ ಅಂದು ಕೊಂಡು ವಾಪಾಸು ಹೋದದ್ದಿದೆ.

 ಇಲ್ಲಿಂದ ನಿಧ ನಿಧಾನಕ್ಕೆ ಹೊಳೆಯನ್ನು ಕಲ್ಲುಗಳ ಮೇಲೆ ಹಾರುತ್ತಾ ದಾಟಿದೆವು. ದೊಡ್ಡ ದೊಡ್ಡ ಬಂಗಲೆಯಂತಹಾ ನೂರಾರು ಮನೆಗಳಿಗಿಂತಾ, ಕಾಡನಡುವೆ ಮಣ್ಣಿನ ಸುಂದರ ಸರಳ ಮನೆಗಳ ನೆಮ್ಮದಿ ಅದ್ಭುತ. ಒತ್ತೊತ್ತಾಗಿ ಬದುಕುವುದಕ್ಕಿಂತ ಕಾಲು ಚಾಚಿ ಪ್ರಕೃತಿಯ ಮಡಿಲಲ್ಲಿ ಒಂದಾಗಿ ಸರಳ ಮನೆಗಳಲ್ಲಿ ಬದುಕುವ ಅಪರಿಮಿತ ಸೌಂದರ್ಯವೇ ಬೇರೆ! ನೂರಾರು ಇಲ್ಲಗಳ ನಡುವಿನ ವಿಶ್ರಾಂತ ಸುಖ. ಇಂತಹ ಹತ್ತಾರು ಅಳಿದ ಮನೆಗಳು ಹೊಳೆ ಹಾರುತ್ತಲೇ ಕಾಣಸಿಕ್ಕವು. ಅಲಲ್ಲಿ ಪುಟಾಣಿ ವಿಶಾಲ ಅಂಗಳಗಳು. ನಾಗರೀಕತೆಯ, ಮನುಷ್ಯ ವಾಸದ ಕತೆಯನ್ನು ಅರಹುತ್ತದೆ. ಪ್ರಕೃತಿ ಮಡಿಲಲ್ಲಿ ಬದುಕಿದ ಇವರ ಬದುಕಿನ ಸಾಹಸಗಳೆಂತೂ. ಇವರು ಬದುಕಿದ ಕುರುಹಾಗಿ ಅಲ್ಲಲ್ಲಿ ತೆಂಗಿನ ಮರಗಳಿವೆ! ಇಲ್ಲಿರುವವರು ಬಿಟ್ಟ ಬಳಿಕ ಬಯಲುಗಳೆಲ್ಲಾ ಕಾಡು ಪಾಲಾಗಿದೆ. ಇಲ್ಲಿನ ಕಾಡೊಳಗಡಗಿಹ ರಹಸ್ಯಗಳೆಷ್ಟೋ? ಹಲವೆಡೆ ಜನರು ಮನೆಯವರೆಗೆ ನೀರು ತಲುಪಲು ಮಾಡಿಕೊಂಡ ನೂರಾರು ನಾಲೆಗಳು ಕಂಡವು. ಜಲಪಾತ ಮತ್ತು ಪತ್ರೊಡೆ ಆಸೆಗೆ ಹೊರಟು ನಿಂತಾಗ ಕಂಡ ಅಚ್ಚರಿಗಳು.


  ಹೊಳೆ ದಾಟುತ್ತಲೇ ನಮಗೆ ಸಿಕ್ಕ ಪತ್ರೊಡೆ ಎಲೆಗಳಿಗೆ ಲೆಕ್ಕ ಉಂಟೇ? ಪತ್ರೊಡೆ ಎಲೆಗಳ ಮಹಾ ಸಮ್ಮೇಳನ! ಚಿಕ್ಕ ಚಿಕ್ಕ ಮರಗಳ ಎಡುಕುಗಳಲೆಲ್ಲಾ ಇವುಗಳದೇ ಕಾರುಬಾರು. ಎಲ್ಲವನ್ನೂ ಕೊಯ್ದು ಚೀಲ ತುಂಬಿಸಿಕೊಂಡೆ. ನಾಳಿನ ಪತ್ರೊಡೆ ಕನಸು ಇಂದೇ ಮೊಳೆತಂತಾಯಿತು.



  ಮೂಲ ವಾರಾಹಿಯ ಹೊಳೆಗುಂಟ ಹರಡಿದ ಬಂಡೆಗಳನ್ನು ಹತ್ತಿ ಇಳಿಯುತ್ತಾ ನಿಧಾನಕ್ಕೆ ಹೊರಟೆವು. ನೂರಾರು ಕಡೆ ಬೆತ್ತದ ಸಸಿಗಳು ನಮ್ಮ ದಾರಿಗಡ್ಡವಾಗಿದ್ದವು. ಅವನೆಲ್ಲಾ ನಿವಾರಿಸಿಕೊಂಡೆವು. ದಾರಿ ಎಂಬ ದಾರಿ ಎಲ್ಲಿತ್ತು? ನಾವು ನಡೆದದ್ದೇ ದಾರಿ. ದೊಡ್ಡ ಬಂಡೆಗಳು ಹಲವು ಬಾರಿ ನಮ್ಮ ದಾರಿಗಡ್ಡವಾಗಿತ್ತು. ಕ್ಷಮಿಸಿ ನಾವೇ ಬಂಡೆಗಳ ದಾರಿ ಗಡ್ಡವಾಗಿ ಬಂದಿದ್ದೆವು! ಅವನ್ನೆಲ್ಲಾ ಏರಿದ್ದಾಯಿತು. ಜಲಪಾತದ ಬುಡ ತಲುಪುವ ಕನಸು ಹೊತ್ತು ಹೊರಟಿದ್ದೆವು. ಹೊತ್ತು ಸಹ ನಮ್ಮ ಜೊತೆಗೆ ನಿಧಾನಕ್ಕೆ ಹೊರಟಿತ್ತು. ಇನ್ನೇನು ಒಂದೆರಡು ಗಂಟೆಯ ಚಾರಣ ಎನ್ನುವಾಗಲೇ ಬೃಹತ್ ಬಂಡೆಯೊಂದು ನಮ್ಮ ದಾರಿಗಡ್ಡ ಬಂತು. ಇವನ್ನೆಲ್ಲಾ ದಾಟುವುದು ಅಸಾಧ್ಯವಾಗಿ ಕಾಣಿಸಿತು. ಇನ್ನೇನು ಜಲಪಾತ ಅರ್ಧ ಕಿಲೋಮೀಟರ್‌ ದೂರವಿರುವಾಗಲೇ ಪ್ರಯಾಣ ನಿಲ್ಲಿಸಿದೆವು. ಕುಂಚಿಕಲ್‌ನ ದೊಡ್ಡ ಹರಿವು ಜೊತೆಯ ಸಣ್ಣೆರಡು ಹರಿವು ಕಣ್ತುಂಬಿಕೊಂಡೆವು. 


ಅಪಾರವಾದ ಹಸಿರ ನಡುವೆ ಬಳುಕುವ ಜಲಪಾತವ ನೋಡುವುದೇ ಅನನ್ಯ ಅನುಭೂತಿ. ದೊಡ್ಡ ಬಂಡೆಯೊಂದನ್ನು ಏರಿ ಕುಳಿತು ಬುತ್ತಿಗಂಟು ಬಿಚ್ಚಿದೆವು. ಅಪಾಯ ಶ್ರಮ ವಹಿಸಿ ಬೆಳ್ಳಂ ಬೆಳ್ಳಗೆ ಹೊರಟರೂ ಜಲಪಾತದ ಬುಡ ತಲುಪುವುದು ಸಾಧ್ಯವಾಗಲಿಲ್ಲ. ದೂರದಿಂದಲೇ ಹಲವು ಚಿತ್ರ ಕ್ಲಿಕ್ಕಿಸಿದೆವು. ಕೆಲವರಿಗೆ ನಿರಾಶೆ, ಕೆಲವರಿಗೆ ಮತ್ತೊಮ್ಮೆ ಈ ದಾರಿಯ ತುಳಿಯಬಹುದೆಂಬ ಹೊಸ ತವಕ. ಹೀಗೆ ಒಂದೇ ಜಗತ್ತಿನ ಹಲವು ಮಗ್ಗಲುಗಳು. ತಂದ ಬುತ್ತಿ ಗಂಟು ಖಾಲಿ ಮಾಡಿ ಪತ್ರೊಡೆ ಎಲೆ ತುಂಬಿಸಿದೆ. 

 ಕುಂಚಿಕಲ್ ಎಂಬ ಮಹಾ ಜಲೌಗವು ತನ್ನ ವಿರಾಟ ರೂಪಿಯಾಗಿ ಹರಿಯುತ್ತಲೇ ಇದೆ. ಸುತ್ತಲೂ ಬದುಕಿದ ನೂರಾರು ಮನುಜರ ಸುಖದ ಕತೆಗಳನ್ನು, ಕಣ್ಣೀರನ್ನು ಕಾಣುತ್ತಾ ಸಹಸ್ರಮಾನದಿಂದ ನದಿ ಹರಿಯುತ್ತಲೇ ಇದೆ. ಸ್ವಲ್ಪ ಮಾತಿಗೆ ಸಿಕ್ಕರೆ ಚೆನ್ನಾಗಿತ್ತು ಎನಿಸುತ್ತಲೇ ಮತ್ತೆ ಬರುವೆನೆಂದು ನಾನು ಹೊರಟೆ. ಮಹಾ ಬಂಡೆಗಳ ದಾರಿ ಮತ್ತೊಮ್ಮೆ ಹಲ್ಲು ಕಿಸಿಯಿತು.‌ ನಮ್ಮ ಅಹಂಕಾರದ ಬಲೂನಿಗೆ ಚುಚ್ಚಿದ ಅರಿವಿನ ಸೂಜಿ ಮೊನೆಯಂತೆ ಸದಾ ನಗುತ್ತಾ ಛೇಡಿಸುತ್ತಾ ಹರಿಯುತ್ತಲೇ ಮತ್ತೆಂದು ಬರುವೆ ಎಂದು ತನ್ನ ಸೆರಗ ಹಾಸಿ ಕರೆಯುತ್ತಲೇ ಇದೆ ಕುಂಚಿಕಲ್.





ವಾರೆ ನೋಟ

ಧಂಕರ್‌ ಒಂದು ಅಪರೂಪದ ಆಲಾಪ

ಪ್ರಾರಂಭ ಓಡಾಟಕ್ಕೆ ಬಸ್ಸು, ಕಾರು ರಿಕ್ಷಾ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳಿದ್ದರೇನೆ ಬದುಕು ಎಂದುಕೊಂಡ ಶಹರದ ಬೆಪ್ಪುತಕ್ಕಡಿಗಳಿಗೆ, ಅಗಾಧ ಸಂಪತ್ತಿದ್ದರೆ ಮಾತ್ರ ಮನ...