ಭಯ ಉಕ್ಕಿಸುವ ಪ್ರಪಾತ. ಎಡಕ್ಕೆ ಬಲಕ್ಕೆ ಬೆಟ್ಟ ಝರಿಗಳು. ಬಲಕ್ಕೆ ಕಣಿವೆ. ತಂತಿ ಮೇಲಿನ ಸರ್ಕಸ್ನಂತೆ ರೈಲು ಬೆಟ್ಟದ ತುದಿಯಲ್ಲಿ ಚಲಿಸುತ್ತಿರುತ್ತದೆ, ಬಸವನ ಹುಳುವಿನಂತೆ. ಎಲ್ಲೆಲ್ಲಿಯೂ ಬೆಟ್ಟ ಕಾವ್ಯ. ಮಾರಿಗೊಂದರಂತೆ ನುಂಗುವಂತಿರುವ ಸುರಂಗಗಳು. ಕಲ್ಲು ಬಂಡೆಗಳ ಮೇಲೆಲ್ಲಾ ತರುಲತೆಗಳ ಚಿತ್ತಾರ. ಸಂದು ಗೊಂದಲಿನಲ್ಲೆಲ್ಲಾ ಸಣ್ಣ ಝರಿಗಳು. ತೀವ್ರ ತಿರುವಗಳಲ್ಲೆಲ್ಲಾ ಹೂ ಪಕಳೆಯಂತೆ ನಿರುಕುವ ನೀರ ಹನಿಗಳು. ಆಗಾಗ ಮೋಡದೊಳಗೆ ನುಗ್ಗುವ ರೈಲು.
Doodh Sagar waterfall- ಒಂದು ಮೋಹಕ ನೋಟ. |
ಮಂಜಿನೊಳಗೆ ನುಗ್ಗುವ ಬಂಡಿ. |
ಹಲವು ಬೆಟ್ಟಗಳನ್ನು ಸಂದರ್ಶಿಸಿ ಎತ್ತರದ ದಿಬ್ಬದ ತುದಿಗೆ ತಂದು ನಿಲ್ಲಿಸಿ ಇದೇ ಸ್ಟೇಷನ್ ಇಳಿಯಿರಿ ಎಂದಾಗ ಅವಕ್ಕಾಯಿತು. ಸ್ಟೇಷ್ನ್ಲ್ಲಿ ಪ್ಲಾಟ್ಪಾರಂ ಇಲ್ಲ! ಇಳಿಯುವುದಲ್ಲ ಹಾರಬೇಕು. ಸ್ವಲ್ಪ ಯಾಮಾರಿದರೂ ರೈಲಡಿಗೆ. ನಿಲ್ಲುವುದು ಬರೇ 1 ನಿಮಿಷ. ಅಷ್ಟರಲ್ಲೇ ನೂರಾರು ಜನ ನಮ್ಮನ್ನು ನೂಕಿಕೊಂಡು ಹಾರಿಯಾಗಿತ್ತು. ನಮ್ಮ ಭಾರವಾದ ಚೀಲವನ್ನು ಹಿಡಿದೇ ಹಾರಿ ಸುಧಾರಿಸಿಕೊಂಡೆವು. ಸ್ಟೇಷನ್ ಹೆಸರೇ 'ಧೂಧ್ ಸಾಗರ್'
ಕ್ಯಾಸಲ್ ರಾಕ್ ನಲ್ಲಿ ಕಂಡ ಬಿಂಬ... |
ಹುಬ್ಬಳ್ಳಿಯಿಂದ 5.30ಕ್ಕೆ ಹೊರಟು ಲೋಂಡಾ ಮೂಲಕ ಕ್ಯಾಸಲ್ರಾಕ್, ಕರಂಜೋರ್ ಸ್ಟೇಷನ್ ಕಳೆದು ಧೂಧ್ ಸಾಗರ್ ತಲುಪಿದ್ದು 11 ಗಂಟೆ 45 ನಿಮಿಷಕ್ಕೆ. ಬ್ರಿಟಿಷ್ ಕಾಲದಲ್ಲಾದ ರೈಲ್ವೇ ಟ್ರಾಕ್. ಬೆಳಗಾವಿಯಿಂದ ಪ್ರತಿನಿತ್ಯ ಕ್ಯಾಸಲ್ರಾಕ್ಗೆ ರೈಲಿರುತ್ತದೆ ಆದರೆ ಧೂಧ್ ಸಾಗರಕ್ಕೆ ವಾರಕ್ಕೆರಡು ಬಾರಿ ಭಾನುವಾರ ಮತ್ತು ಶನಿವಾರ.
ಇಲ್ಲಿ ಮುಗಿಲಲಿ ತೇಲೋಣ ಬಾ ಯಾತ್ರಿಕನೆ |
ಧೂದ್ ಸಾಗರ್ ಚಾರಣ ನಿರತ ಚಾರಣಿಗರು. |
ಬೆಟ್ಟದ ಬೆನ್ನಿನಲ್ಲಿ ಹೂ ಪಕಳೆಗಳ ಮಾತನಾಲಿಸುತ್ತಾ ಧೂಧ್ ಸಾಗರ ಸ್ಟೇಷನ್ನಿಂದ ಜಲಪಾತಕ್ಕೆ 6 ಹಾಡುಗಳ ರೋಚಕ ಹಾದಿ. ಕಣಿವೆಯ ಸೌಂದರ್ಯಕ್ಕೆ ಮೂಕವಾಗುತ್ತಾ ಬೆಟ್ಟ ತುದಿಯಲ್ಲಿ ನಡೆಯಬೇಕು. ಸುರಂಗ ಒಂದನ್ನು ದಾಟುವ ರೋಚಕ ಅನುಭವವೂ ಇದರೊಂದಿಗಿದೆ.
ಸವೆದ ಹಾದಿಯ ತುಂಬ ಸೌಂದರ್ಯ ಬಿಂಬ. ರೌದ್ರಾವತಾರಿಯಾಗಿ ರೈಲು ಹಳಿ ಮತ್ತು ನಮ್ಮನ್ನು ಕೊಚ್ಚಿಕೊಂಡು ಹೋಗುವುದೋ ಏನೋ ಎಂಬಂತೆ ಧುಮುಕುವ ಜಲಧಾರೆ. ಶಿವನ ಜಟೆಯಿಂದ ಅವತರಿಸಿ ಆತನ ಮೂಗಿಗೆ ಡಿಕ್ಕಿ ಹೊಡೆದು, ಎದೆಯ ಕಣಿವೆಗಳಲ್ಲಿ ಅಡಗಿ, ನಾಭಿಯಿಂದ ಉದ್ಭವಿಸಿದಂತೆ ಏಕಾಏಕಿ ಚಿಮ್ಮುತ್ತದೆ. ನೋಡುಗರ ದೇಹ ಮತ್ತು ಮನಸ್ಸನ್ನು ತಣಿಸುತ್ತದೆ.
ಬೆಟ್ಟ ಇಳಿಯುವ ಉಗಿಬಂಡಿ. |
ಜಲಧಾರೆಯ ಎಡ ಬಲ ಎಲ್ಲಿ ಬೇಕಾದಲ್ಲಿ ನಿಂತು ನೋಡಬಹುದಾದ ರುದ್ರ ನೋಟ. ನೋಟಕನ ಮನದಲಿ ಇದರ ಮಾಟ ಅಚ್ಚಳಿಯದೇ, ಸೌಂದರ್ಯ ಬಿಂಬ ಉಳಿದು ಬಿಡುವಂತಹ ಜಲಧಾರೆ. ಎಡದಲ್ಲಿರುವ ಮಂಟಪದಲ್ಲಿ ನಿಂತು ಜಲಧಾರೆಯನು ಮೋಹಿಸಬಹುದು. ಜಲಧಾರೆಯ ಬಲಕ್ಕಿರುವ ತೆರೆದ ಕುಟಿರದೊಳಗೆ ಒಂದು ರಾತ್ರಿ ಕಳೆಯಬಹುದು. ಪ್ರಾಣಿಯಾವುದಾದರೂ ಹೊತ್ತೊಯ್ದರೆ ನನ್ನ ಬೈಯದಿರಿ.
ಗೆಳೆಯ ನಾಗರಾಜನ ಜೊತೆ. |
ಗೋವಾದ ಮಾಂಡವಿ ನದಿಯ ಸೃಜಶೀಲ ಶಕ್ತಿಯಿಂದ ಸೃಷ್ಟಿಯಾಗಿರುವ ಕಾನನ ಸುಂದರಿಯನು ತಲೆ ಕೆಟ್ಟ ಪೇಟೆ ಹೈದರ ಪ್ಲಾಸ್ಟಿಕ್ ರಕ್ಕಸರಿಂದ ಕಾಪಾಡಬೇಕಾದುದು ತುರ್ತು ಅಗತ್ಯ. ಇಲ್ಲಿಗೆ ವಿಶಿಷ್ಟವೆನಿಸುವ ಅನೇಕ ಕಾಡು ಹಕ್ಕಿಗಳು ಚಿಟ್ಟೆಗಳು ನಿಮ್ಮನ್ನು ಮತ್ತೆ ಮತ್ತೆ ಕೈಬೀಸಿ ಕರೆಯುವಂತೆ ಮಾಡಿದರೆ ಆಶ್ಚರ್ಯವೇನಿಲ್ಲ.
ಸೂರ್ಯ ಮುಳುಗುವ ಮುನ್ನ ಧೂಧ್ ಸಾಗರದ ಸ್ಟೇಷನ್ಲ್ಲಿದ್ದರೆ ಮನೆ ತಲುಪಬಹುದು. ಇಲ್ಲವಾದರೆ ಧೂಧ್ ಸಾಗರದ ಜೋಗಳದಲ್ಲಿ ಲೀನವಾಗಬೇಕಾದೀತು.
ಶ್ರೀಧರ್ ಎಸ್. ಸಿದ್ದಾಪುರ.
Chenagi moodi bandide...
ReplyDelete