ಕಡಲ ಒಡಲಿನಲಿ ಮುಸ್ಸಂಜೆ. |
ಪ್ರವಾಸಿಗರ ಮಸ್ತಿ... |
ಮೃದ್ವಂಗಿ ದ್ವೀಪ:-
ಲೈಟ ಹ ೌಸನ ನೆತ್ತಿಯಿಂದ |
ಮೆಲ್ಲಗೆ ಮುತ್ತಿಕ್ಕುವ ಕಡಲಿನ ಅಲೆಗಳು. ಕಾಡುವ ಕೆಂಬಣ್ಣದ ಸೂರ್ಯ ನೆತ್ತಿಗೆ ಬಂದಿದ್ದ. ಕಾರಾವಾರದ ಕಡಲ ಜಗಲಿಯಲಿ ಕೂತು ಅಲ್ಲಿನ ಬಾಡಿಗೆ ಹಾಯಿಯವರನ್ನೆಲ್ಲಾ ಮಾತಾಡಿಸಿ 4000 ಸಾವಿರಕ್ಕೆ ಒಬ್ಬನನ್ನು ಒಪ್ಪಿಸಿ ನಡು ಮಧ್ಯಾಹ್ನದ ಹೊತ್ತಿಗೆ ಆಯಿಸ್ಟರ್ ದ್ವೀಪದತ್ತ ಹೊರಟೆವು.
ಲಂಗರು ಜಾಗ. |
ಅಂದು ಇಳಿತದ ಸಮಯ, ಕಡಲು ತುಂಬಾ ಶಾಂತವಾಗಿತ್ತು. ಲೈಪ್ ಜಾಕೇಟ್ ಎಲ್ಲರ ಹೆಗಲೇರಿತ್ತು. ಎಂದೋ ಎದ್ದ ನಡುಗುಡ್ಡೆಗಳ ನಡುವೆ ಸೀಳುತ್ತಾ ಸಾಗಿತ್ತು ಹಡಗು.
ಹಾರುವ ಡಾಲ್ಪಿನ್ಗಳು ದ್ವೀಪಕ್ಕೆ ಭವ್ಯ ಸ್ವಾಗತವನ್ನೇ ಕೋರಿದ್ದವು. ನನ್ನ ಮಗನಂತೂ ರೋಮಾಂಚಿತನಾಗಿದ್ದ. ಕಣ್ಣರಳಿಸಿ ಕಡಲನ್ನೇ ನೋಡುತ್ತಾ ನಿಂತ. ಒಂದು ಬದಿ ಕಾಳಿ ನದಿಯೂ ಕಡಲನ್ನು ಅಪ್ಪಿಕೊಳ್ಳುವ ತವಕದಲ್ಲಿತ್ತು. ಮುಂದೆ ಸಮುದ್ರ ಸೀಲ್ಗಳ ಗುಂಪೊಂದು ನಮಗೆದುರಾಗಿ ಆಯಿಸ್ಟರ್ ದ್ವೀಪದ ಮೊತ್ತೊಂದು ಬದಿಯಲ್ಲಿ ಚಕ್ಕಂದದಲಿ ನಿರತರಾಗಿದ್ದವು. ನಮ್ಮನ್ನು ನೋಡುತ್ತಲೇ ಮಾಯವಾದವು. ಸೀಲ್ಗಳ ಮೊದಲ ನೋಟಕ್ಕೆ ನಾವು ಪರವಶರಾದೆವು. ಬಿಳಿ ಹೊಟ್ಟೆಯ ಸಿ ಈಗಲ್, ಡಾಲ್ಪಿನ್, ಸೀಲ್ ನೋಡಿದ ಖುಷಿಯಲ್ಲಿ ತೇಲುತ್ತಲೇ ದ್ವೀಪಕ್ಕೆ ಲಗ್ಗೆ ಇಟ್ಟೆವು.
ಅನಾಥ ದ್ವೀಪದಲ್ಲೊಂದು ದೀಪ ಸ್ತಂಭ:-
ಆ ದ್ವೀಪದ ಅಪರಿಮಿತ ಸೌಂದರ್ಯವನ್ನು ಪದಗಳಲ್ಲಿ ಖಂಡಿತಾ ಹಿಡಿದಿಡಲಾರೆ. ಕಡಲ ನಡುವಿನ ಒಂಟಿ ದೀಪ ಸ್ತಂಭ. ಅಲ್ಲೊಬ್ಬ ಒಂಟಿ ಕಾವಲುಗಾರ.
ರಾತ್ರಿ-ಹಗಲು ಕಡಲನ್ನೇ ಕಾಣುತ್ತಾ ದ್ವೀಪ ಕಾಯುತ್ತಾ ಅಲ್ಲಿರುತ್ತಾನೆ. 1860 ರ ಸುಮಾರಿಗೆ ಪೋಚರ್ುಗೀಸರು ಅವರ ಹಡುಗಗಳಿಗಾಗಿ ಸಂಜ್ಞೆ ನೀಡಲು ರೂಪಿಸಿದ್ದರು. ಕಾರವಾರದ ನೈಸಗರ್ಿಕ ಬಂದರಿನಿಂದ ತಮ್ಮ ಊರಿಗೆ ಸಾಂಬಾರು ಪದಾರ್ಥಗಳನ್ನು ಕೊಂಡೊಯ್ಯಲು ಅವರು ಮಾಡಿಕೊಂಡ ವ್ಯವಸ್ಥೆ.
ಇಲ್ಲಿಗೆ ಬಂದರೆ ಬೇರೆ ಯಾವುದೋ ಲೋಕಕ್ಕೆ ಬಂದಂತಹ ಅನುಭವ ನೀಡುವುದು. ಅಪರಿಮಿತ ಸೌಂದರ್ಯದ ಖನಿ. ದೀಪ ಸ್ತಂಭ ಏರಿ ಸುತ್ತಲಿನ ದೃಶ್ಯಾವಳಿಯ ಸುಂದರತೆ ಅನ್ಯಾದರ್ಶ.
ದ್ವೀಪದಲ್ಲಿ ಮಾವು ಮುಂತಾದ ಹಣ್ಣಿನ ಗಿಡಗಳಿವೆ. ಕಡಲ ಹಕ್ಕಿಗಳು ದ್ವೀಪಗಳನ್ನೇ ನೆಲೆಯಾಗಿಸಿಕೊಂಡಿವೆ. ಕಡಲ ಜೀವಿಗಳನ್ನು ಹೆಕ್ಕಿ ಹೆಕ್ಕಿ ತಿಂದ ಹಕ್ಕಿಗಳು ಸಂತಾನ ಬೆಳೆಸಿಕೊಂಡಿವೆ. ವಿದ್ಯುತ್ಗಾಗಿ ಸೋಲಾರ್ ಅಳವಡಿಸಲಾಗಿದೆ. ಇವೆಲ್ಲವನ್ನು ನೋಡಿಕೊಳ್ಳಲೊಬ್ಬನನ್ನು ನೇಮಿಸಲಾಗಿದೆ! ಹುಚ್ಚು ಕಡಲ ನಡುವೆ ಒಂಟಿಯಾಗಿರುವುದು ಅವನ ಸಾಹಸವೇ ಸರಿ. ಸಿಹಿ ನೀರಿಗಾಗಿ ಬಾವಿಯೊಂದಿದೆ. ಉಳಿದೆಲ್ಲವನ್ನೂ ಕಾರವಾರದಿಂದಲೇ ತರಬೇಕು. ಎಲ್ಲವಿದ್ದೂ ಒಂಟಿ ಎಂಬ ಭಾವ.
ಆಯಿಸ್ಟರ್ಗಳೆಂಬ ಮೃದ್ವಂಗಿ ಜೀವಿಗಳು ಇಲ್ಲಿ ಹೇರಳವಾಗಿ ಸಿಗುವುದರಿಂದಲೇ ಈ ದ್ವೀಪಕ್ಕೆ ಆಯಿಸ್ಟರ್ ದ್ವೀಪವೆಂದು ಹೆಸರು ಬಂದಿದೆ. ಮೊದಲಿನಂತೆ ಈಗ ಇಲ್ಲಿ ಅವು ಕಾಣಸಿಗುವುದಿಲ್ಲ! ತಮ್ಮ ನೆಲೆ ಕಳಕೊಂಡಿವೆ.
ಕುರುಮ್ ಗಡ ದ್ವಿಪ.. |
ಕುರುಮ್ಗಢ್ ದ್ವೀಪ:-
ಗಢ್ ಎಂದರೆ ಕೋಟೆ ಎಂಬ ಅರ್ಥವು ಮರಾಠಿ ಭಾಷೆಯಲ್ಲಿದೆ. ಕಾರವಾರವು ಮೊದಲು ಮುಂಬೈ ಪ್ರಾಂತಕ್ಕೆ ಅಂಟಿಕೊಂಡಿತ್ತು. ಮರಾಠಿ ಭಾಷೆಯ ಎರಿಳಿತ ಮತ್ತು ಎಳೆ ಅಲ್ಲಿನ ಕನ್ನಡಿಗರಲ್ಲಿ ಕಾಣಬಹುದು. ಪೋಚರ್ುಗೀಸರು ಕುರುಮ್ಗಢ್ನ್ನು ಕಾವಲಿನ ತಾಣವಾಗಿ ಬಳಸುತ್ತಿದ್ದರು ಎಂದು ಕಾಣುತ್ತೆ. ಸದಾಶಿವ ಗಢ್ನ ಪ್ರವೇಶಿಸುವ ಹಡಗುಗಳು ಈ ಜಾಗವನ್ನು ಹಾದು ಹೋಗಬೇಕು ಅದರ ಕಾವಲಿಗೆ ಇದನ್ನು ಬಳಸಿಕೊಳ್ಳುತ್ತಿದ್ದಿರಬೇಕು. ಆಯಿಷ್ಟರ್ ದ್ವೀಪವನ್ನು ದಾಟಿ ಬಂದ ವೈರಿಗಳನ್ನು ಹೊಡೆದುರುಳಿಸಲು ಇಲ್ಲಿನ ಗುಡ್ಡದ ಮೇಲೊಂದು ಪಿರಂಗಿಯನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಎಲ್ಲೂ ಈ ದ್ವೀಪದ ಕುರಿತು ಸ್ಪಷ್ಟವಾದ ಮಾಹಿತಿ ಸಿಗಲಿಲ,್ಲ ನಿರಾಸೆಯಾಯಿತು. ಆಳೆತ್ತರದ ಹುಲ್ಲ ರಾಶಿ ನಡುವೆ ತುಕ್ಕು ತಿನ್ನದೆ ಬಿದ್ದಿರುವ ಪಿರಂಗಿಗಳು ಮಾತು ಬಂದಿದ್ದರೆ ಇಲ್ಲಿನ ಕತೆಗಳನ್ನು ರೋಚಕವಾಗಿ ಹೇಳುತ್ತಿದ್ದವೋ ಏನೋ?!
ಇಳಿಯಲು ಇಲ್ಲಿ ಸೂಕ್ತ ಜೆಟ್ಟಿ ವ್ಯವಸ್ಥೆ ಇಲ್ಲ. ಅತ್ಯಂತ ಕುಶಲಿ ನಾವಿಕ ಮಾತ್ರ ಹಡಗನ್ನು ಲಂಗರು ಹಾಕಬಲ್ಲ.
ಸಣ್ಣ ಬಂಡೆಯ ಮೇಲೆ ಕಡಲನ್ನು ನಿರುಕಿಸುತ್ತಾ ಕುಳಿತೆವು. ಅಲ್ಲಲ್ಲಿ ಡಾಲ್ಫಿನ್ಗಳು ಹಾರುತ್ತಿದುದು ಕಾಣುತಲಿತ್ತು. ಇಲ್ಲಿನ ಬೃಹತ್ ಬಂಡೆಗಳ ಮೇಲೆ ಕಡಲು ಕೆತ್ತಿದ ಚಿತ್ರಗಳ ಚಿತ್ತಾರ. ನಾವಿಳಿದ ಜಾಗದ ಬಂಡೆಗಳ ಮೇಲೆ ಹುಡುಗಿಯೊಬ್ಬಳ ಚಿತ್ರವೊಂದು ಕಾಣಿಸಿತು.
ಹುಡುಗಿಯ ಚಿತ್ತಾರದ ಬಂಡೆ... |
ಇದೊಂದು ಸಣ್ಣ ದ್ವೀಪವಾದರೂ ಇದರ ಒಡಲಿನಲ್ಲೊಂದು ನರಸಿಂಹ ದೇವಾಲಯವಿದೆ.
ವರ್ಷಕ್ಕೊಮ್ಮೆ ಇಲ್ಲಿ ಪೂಜೆ ನಡೆಯುತ್ತೆ. ಗೋವಾ ಮತ್ತು ಕಾರವಾರದಿಂದ ಜನ ಬಂದು ಇಲ್ಲಿ ಪೂಜೆ ಸಲ್ಲಿಸಿ ಹೋಗುವರು. ದಿನವಿಡೀ ಕಳೆದರೂ ಬೇಸರವೆನಿಸದ ಮನಕೆ ಉಲ್ಲಾಸ ತುಂಬಬಹುದಾದ ತಾಣಗಳಲ್ಲಿ ಇದೂ ಒಂದು.
ಕೊನೆಯ ಮಾತು:-
ಕಡಲ ಒಡಲನ್ನು ತಿಳಿಯಾಗಿಡಬೇಕಾದುದು ನಮ್ಮ ಕರ್ತವ್ಯ. ತಿಳಿಯದೇ ಎಸೆದ ಪ್ಲಾಸ್ಟಿಕ್ ದಡದ ಬದುಕನ್ನು ಕದಡದೇ ಬಿಡದು. ದಡದಲ್ಲೇರಿದ ಇಂಗಾಲವನ್ನು ನುಂಗುವ ಕಡಲು ಪ್ರಕ್ಷುಬ್ದಗೊಂಡರೆ ದಡದ ಬದುಕು ಹೈರಾಣವಾಗುವುದು ಎಂಬ ತಿಳಿವಿನೊಂದಿಗೆ ಸುಮಧುರ ನೆನಪಿನ ಕಾರವಾರಕ್ಕೆ ವಿದಾಯ ಕೋರಿ ದಾಂಡೇಲಿಯತ್ತ ಹೊರಟೆವು.
ಶ್ರೀಧರ್. ಎಸ್. ಸಿದ್ದಾಪುರ
ಆಪ್ತವಾದ ಹಾಗೂ ಅಷ್ಟೇ ವಿವರವಾದ ವರದಿ.
ReplyDeleteಧನ್ಯವಾದಗಳು
ಧನ್ಯವಾದಗಳು ಸರ್
Deleteಬಹಳ ಚೆನ್ನಾಗಿದೆ. .. ಕಣ್ಣಿಗೆ ಕಾಣುವಂತೆ ಲೇಖನ ಮೂಡಿ ಬಂದಿದೆ. ..
ReplyDeleteಧನ್ಯವಾದಗಳು
Delete