ಮಗನಿಗೊಂದು ಸೈಕಲ್ ಕೊಳ್ಳುವಾಗ ನನ್ನ ಸೈಕಲ್ ಪುರಾಣದ ನೆನಪು ಬಿಚ್ಚಿಕೊಳ್ಳ ತೊಡಗಿತು. ಅಂದು ನಾವೊಂದು 8 ಜನ ಹರಯದ ಹುರುಪಿನಲಿ ತೇಲುತ್ತಿರುವವರು, ಹುಚ್ಚು ಕನಸು ಹತ್ತಿಸಿಕೊಂಡು, ಕಾರಿಗೆ ಕೊಡಲು ಕಾಸಿಲ್ಲದೆ, ಕಾಲನ್ನೆ ನಂಬಿ ಸೈಕಲ್ಲನಲ್ಲಿ ಸವಾರಿ ಹೊರಡಲು ತಯಾರಾದೆವು. ಸಿದ್ದಾಪುರದಿಂದ ಹೊರಟು ಮಾಸ್ತಿಕಟ್ಟೆ ತಲುಪಿ ಯಡೂರು ಮಾರ್ಗವಾಗಿ ಮಾಣಿ ಅಣೆಕಟ್ಟೆಯನ್ನು ದಾಟಿ ಮೇಲುಸುಂಕದ ದುರ್ಗಾ ಪರಮೇಶ್ವರಿ ದೇವಾಲಯವನ್ನು ಹಾದು ಹುಲಿಕಲ್ ತಲುಪಿ ವಾಪಾಸು ಸಿದ್ದಾಪುರ ತಲುಪುವುದು ನಮ್ಮ ಯೋಜನೆಯಾಗಿತ್ತು.
ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ನಮ್ಮ ಕ್ರಿಕೆಟ್ ತಂಡದ ಸದಸ್ಯರೆಲ್ಲಾ ಸೇರಿ ನಾಳೆ ದಿನ ಹೊರಡುವುದೆಂದು ತೀರ್ಮಾನ ಕೈಗೊಂಡೆವು. ಯಾರ ಕೈಲೂ ಬಿಡಿಗಾಸಿರಲಿಲ್ಲ. ಕೆಲವರ ಬಳಿ ಸೈಕಲ್ಲು ಇರಲಿಲ್ಲ. ನನ್ನ ಬಳಿ ಆಗಿನ ಕಾಲದಲ್ಲಿ ವಿಶೇಷವಾದ HERO MTB ಎಂಬ ನೀಲಿ ಬಣ್ಣದ ಸೈಕಲ್ಲಿತ್ತು. ಸೈಕಲ್ ಇರದವರು ಬಾಡಿಗೆಗೆ ಕೊಂಡರು. 1998ರ ಸುಮಾರಿಗೆ ಅತ್ಯಂತ ಪ್ರಸಿದ್ದವಾದ ತೆಂಗಿನ ಕಟ್ಟೆ ಹೋಟೆಲಿನಲ್ಲಿ ಪಲಾವು ಮಾಡಿಸಿ 8 ಜನರಿಗೆ 20 ಪ್ಯಾಕೆಟ್ಸ್ ಕಟ್ಟಿಸಿಕೊಂಡೆವು.
ಜಾಂಟಿ ಕಾಲಿನ ಸುಧೀರ, ನೀತು ಭಂಡಾರಿ, ಸಂದೀಪ, ಗುರುರಾಜ, ಪ್ರವೀಣ, ಪ್ರಕಾಶ, ಗುರು ಮತ್ತು ನಾನು ಸಕಲ ಸಿದ್ದತೆಯೊಂದಿಗೆ, ಒಂದು ಚೀಲದಲ್ಲಿ ಡಬ್ಬಿಗೆ ಮೊಸರು ಬಜ್ಜಿಯನ್ನು ಇನ್ನೊಂದು ದೊಡ್ಡ ಪೆಟ್ಟಿಗೆಯಲಿ ಪಲಾವ್ ಕಟ್ಟಿಕೊಂಡೆವು. ಹೊರಡುವ ಉಮೇದಿನಲ್ಲಿ ನಾನೆ ಮೊದಲಿಗೆ ಮೊಸರು ಬಜ್ಜಿಯ ದೊಡ್ಡ ಡಬ್ಬಿ ಹೊತ್ತೆ.
ಸಿದ್ದಾಪುರದಿಂದ ಹೊಸಂಗಡಿ ಹಾದು ಮೇಲ್ಮುಖ ಪ್ರಯಾಣ ಪ್ರಾರಂಭವಾಗಿತ್ತು. ಹೊಸಂಗಡಿಯ ನಂತರ ರಸ್ತೆ ಘಟ್ಟದ ಏರು ನಮ್ಮ ಉಸ್ಸಾಹಕ್ಕೇನೂ ಭಂಗ ತರಿಸಲಿಲ್ಲ! ಮೊಸರು ಬಜ್ಜಿ ಹೊತ್ತು ಒದ್ದಾಡುತ್ತಿದ್ದ ನನ್ನ ನೋಡಿ ಕನಿಕರಗೊಂಡು ಯಾರೋ ಒಬ್ಬರು ಮೊಸರು ಬಜ್ಜಿ ಇಸಗೊಂಡರು. ತಿರುವು ಮುರುವು ದಾರಿಯಲ್ಲಿ ಸೈಕಲ್ ಹೊಡೆದು ಅಭ್ಯಾಸವಿಲ್ಲದ ಅನೇಕರು ಒದ್ದಾಡತೊಡಗಿದರು. ಮಳೆಗಾಲ ಪ್ರಾರಂಭವಾಗುವ ಹೊತ್ತು ಹಾಗಾಗಿ ವಾತಾವರಣ ಅಹ್ಲಾದಕರವಾಗಿತ್ತು. ಅಂತು ಇಂತೂ ಘಾಟಿ ಇಡೀ ತುಳಿದು ತುಳಿದು ಸುಸ್ತು ಹೊಡೆದಾಗಲೇ ಚಂಡಿಕಾಂಬ ದೇವಾಲಯ ಬಂದಿತ್ತು. ದೇವಿಗೆ ನಮಸ್ಕರಿಸಿ ಅವಲಕ್ಕಿ ಪಂಚಕಜ್ಜಾಯ ಕೊಂಡು ಒಂದಿಷ್ಟು ತಿಂದು ನೀರು ಕುಡಿದೆವು. ಎಂಟು ಗಂಟೆಗೆ ಹೊರಟ ನಮ್ಮ ತಂಡ 12 ಗಂಟೆಗೆಲ್ಲಾ ಮಾಸ್ತಿಕಟ್ಟೆಯಲ್ಲಿದ್ದೆವು. ಮಾಸ್ತಿಕಟ್ಟೆಯಲ್ಲಿ ಮಾಣಿ ಅಣೆಕಟ್ಟೆಗೆ ಹೋಗುವ ಅನುಮತಿಯನ್ನು ಪಡೆದುಕೊಂಡೆವು. ಮಾಣಿ ಅಂದು ನಮಗೆ ಸಿಕ್ಕಿದ ಅನುಮತಿ ಇಂದು ಸಿಗುವುದು ಬಹಳಾ ಕಷ್ಟ. ಇಂದು ಅನುಮತಿ ಇದ್ದರೂ ಬಿಡಲು ಹಿಂದೆ ಮುಂದೆ ನೋಡುವರು.
ನಾನಂತೂ ಮಾಸ್ತಿಕಟ್ಟೆ ತಲುಪುವಷ್ಟರಲ್ಲಿ ಹೈರಾಣಾಗಿದ್ದೆ. ಇನ್ನು ತುಳಿಯಲು ಸಾಧ್ಯವಿಲ್ಲ ಎನ್ನುವಾಗಲೇ ಎದುರಿನಿಂದ ವಿಪರೀತ ವೇಗದಲ್ಲಿ ಲಾರಿಯೊಂದು ಬಂದಿತು. ನಮ್ಮ ತಂಡದ ನಿತ್ತು ತನ್ನ ಸೈಕಲ್ನ್ನು ನಡು ರಸ್ತೆಯಲ್ಲಿ ಕವುಚಿಕೊಂಡು ಬಿದ್ದ. ಇನ್ನೇನು ಲಾರಿ ನಿತ್ತುವಿನ ಮೈಮೇಲೆ ಹರಿದು ಚಟ್ನಿಯಾಗುದರಲ್ಲಿದ್ದ. ನಮಗೆಲ್ಲಾ ಆತಂಕ. ಜೋರಾಗಿ ಕೂಗಿ ಕೊಂಡೆವು. ಆತ ತಂದಿದ್ದು ಬಾಡಿಗೆ ಸೈಕಲ್. ಸೈಕಲ್ ಅಂಗಡಿಯವನಿಗೆ ಏನು ಹೇಳುವುದೆಂಬ ಮತ್ತೊಂದು ಚಿಂತೆ ಹತ್ತಿತು. ಲಾರಿಯಲ್ಲಿದ್ದ ಡ್ರೈವರ್ ಕೊನೆಗಳಿಗೆಯಲ್ಲಿ ಲಾರಿಯ ಬಿರಿಕುಂಟಿಯನ್ನು(ಬ್ರೇಕ್) ಬಿಗಿ ಹಿಡಿದು ನಮ್ಮ ಗೆಳೆಯನ ಜೀವ ಉಳಿಸಿದ.
ಮಾಸ್ತಿಕಟ್ಟೆ ದಾಟಿದ ಮೇಲೆ ಪಲಾವಿನ ಪರಿಮಳ ತಡೆಯಲಾಗದೆ ಪ್ಯಾಕೆಟ್ ಬಿಚ್ಚಿದೆವು. ಒಂದೊಂದರಲ್ಲಿ ಸಣ್ಣ ಮೊರ ತುಂಬುವಷ್ಟು ಪಲಾವು ಇತ್ತು. ನಾನು ಎರಡು ಪ್ಯಾಕೆಟ್ನ್ನು ಮಟಾಷ್ ಮಾಡಿದೆ!!! ಎಲ್ಲರಿಗೂ ಅಚ್ಚರಿಯೋ ಅಚ್ಚರಿ. 'ಕಂಡ್ರ ಮಾಣಿ ಉಂಡ್ರ ಗೋಣಿ' ಅಂದ ಗೆಳೆಯ ಸಂದೀಪ. ಪಲಾವ್ ತಿಂದ ಹೊಡೆತ ತಾಳಲಾರದೆ 'ನಾ ಮುಂದೆ ಬತ್ತಿಲ್ಲೆ' ಎಂಬ ವರಾತ ಶುರುವಿಟ್ಟೆ. ಜೊತೆಗೆ ಎಲ್ಲರಿಗಿಂತ ಹಿಂದುಳಿದೆ. ಆದರೂ ಗೆಳೆಯ ಸಂದೀಪ ಬಿಡದೇ ನನ್ನ ಯಡೂರಿನ ಮಾಣಿ ಡ್ಯಾಂವರೆಗೆ ಕೊಂಡೊಯ್ದ.
ಹೀಗಿದೆ ಡ್ಯಾಂ..
ದಾರಿಯುದ್ದಕ್ಕೂ ಅನೇಕರು ನಮ್ಮನ್ನು ನೋಡಿ ಅಚ್ಚರಿಗೊಂಡರು. ಅಂದಿನ ಪರಿಸರವಂತೂ ಅತ್ಯದ್ಭುತವಾಗಿತ್ತು. ಜನಸಂಖ್ಯೆಯಂತೂ ವಿರಳಾತಿ ವಿರಳ. ಮಾಸ್ತಿಕಟ್ಟೆಯಲ್ಲಿ ಶಬರಿ ಎಂಬ ಹೋಟೆಲ್ ಬಿಟ್ಟರೆ ಬೇರೆ ಗತಿ ಇರಲಿಲ್ಲ.
ಮೋಡಗಳೆಲ್ಲಾ ನಮ್ಮ ನೆತ್ತಿಯ ಮೇಲೇ ಚಪ್ಪರ ಹಾಸಿತ್ತು. ಡ್ಯಾಂ ತಲಪುವಷ್ಟರಲ್ಲಿ ನಮಗೆಲ್ಲಾ ಮಳೆಯ ಮಾಘ ಸ್ನಾನವಾಗಿತ್ತು. ಮಂಜು ಮುಸುಕಿದ ಹಾದಿ. ಅಲ್ಲಿನ ತಂಪು ಹವೆಯ ಆಹ್ಲಾದಕರ ವಾತಾವರಣ. ಸೈಕಲ್ ತುಳಿದುದರಿಂದ ಮೈ ಕೂಡ ಬೆಚ್ಚಗಿತ್ತು. ಯಡೂರಿನಿಂದ ಒಳ ಹೊಕ್ಕ ರಸ್ತೆ ಎತ್ತರೆತ್ತರಕ್ಕೆರುತ್ತಾ ಡ್ಯಾಂನ ನೆತ್ತಿಗೆ ರಸ್ತೆ ಬಂದು ತಲುಪುತ್ತದೆ. ಅಲ್ಲಿಂದ ಅನೇಕ ಕವಲುಗಳ ಮೂಲಕ ರಸ್ತೆ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತದೆ. ಮೇಲುಸುಂಕವೆಂಬಲ್ಲಿನ ದೇವಸ್ಥಾನಕ್ಕೂ ಒಂದು ರಸ್ತೆ ನಿಮ್ಮನ್ನು ಕರೆದೊಯ್ಯುತ್ತದೆ. ಒಂದು ರಸ್ತೆಯು ವರಾಹಿ ಮೂಲ ಹರಿವಿನ ಜಾಗವಾದ ಕುಂಚಿಕಲ್ಲು ಅಬ್ಬಿಗೊಯ್ಯುತ್ತದೆ. ಎಲ್ಲಾ ಕಡೆ ಓಡಾಡಲು ಉತ್ತಮ ರಸ್ತೆ ನಿರ್ಮಿಸಿದ್ದಾರೆ. ಒಂಟಿ ಕಾವಲುಗಾರರು ತಮ್ಮ ಮನೆ ಖರ್ಚಿಗೂ ಹಾಗೂ ಬೇಸರ ಕಳೆಯಲು ಅಲ್ಲಲ್ಲಿ ತರಕಾರಿ ಬೆಳೆಯುತ್ತಾರೆ. ಡ್ಯಾಂನ ಇಕ್ಕೆಲಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ದೊಡ್ಡ ತೂಬುಗಳನ್ನು ಮುಚ್ಚಲು ತೂಬು ನಿಯಂತ್ರಕಗಳಿವೆ. ಮಳೆ ಶುರುವಾದದಷ್ಟೇ ಆದ್ದರಿಂದ ಅಲ್ಲಲ್ಲಿ ಸಣ್ಣ ದ್ವೀಪಗಳಂತಾಗಿ ಮಂಜು ಅವನ್ನು ಸವರಿ ಹೋಗುವುದನ್ನು ಮೌನವಾಗಿ ನೋಡುತ್ತಾ ನಿಂತೆವು.
ನಮ್ಮ ಗ್ರಹಚಾರಕ್ಕೆ ಡ್ಯಾಂ ಪ್ರವೇಶಿಸುತ್ತಲೆ ನಮ್ಮ ಪ್ರಕಾಶನ ಸೈಕಲ್ಲು ಮುಷ್ಕರ ಹೂಡಿತು, ಪಂಕ್ಚರ್ ಆಗಬೇಕೆ? ಪಂಕ್ಚರ್ ಸಲಕರಣೆ ಇಲ್ಲದ್ದರಿಂದ ಬರಿ ರಿಮ್ನಲ್ಲೇ ತುಳಿಯಬೇಕಾದ ಪರಿಸ್ಥಿತಿ!
ಅಂದು ನನ್ನ ಬಳಿ ಕೊಡಾಕ್ ರೀಲ್ ಕ್ಯಾಮರವೊಂದಿತ್ತು. ಅದರ ಹೊಟ್ಟೆಯನ್ನು ಕೊಡಾಕ್ ರೀಲಿನಿಂದ ತುಂಬಿಸಿದ್ದೆ. ಅದರಲ್ಲೇ ಮಾಣಿ ಅಣೆಕಟ್ಟಿನ ಸುತ್ತಮುತ್ತಲಿನ ಸೌಂದರ್ಯವನ್ನು ಸೆರೆಹಿಡಿದೆ. ಗೆಳೆಯರ ಪೋಟೊ ಶೂಟ್ ನಿರಂತವಾಗಿ ನಡೆಯುತ್ತಿತ್ತು. ನಡುಗುಡ್ಡೆಗಳ ಚಿತ್ರಗಳು ಒಂದೊಂದಾಗಿ ಕ್ಯಾಮರದ ಹೊಟ್ಟೆ ಸೇರುತ್ತಲೇ ರೀಲು ಖಾಲಿ ಮಾಡ್ಬೇಡ್ರೊ ಎಂಬ ಗೆಳೆಯನ ಬೊಬ್ಬೆ ಕೇಳಿಸಿತು.
ಮಾಣಿಯಿಂದ ನೀರು ಪಿಕಪ್ ಡ್ಯಾಂಗೆ ಬಂದು ಅಲ್ಲಿಂದ ನೇರವಾಗಿ ಹೊಸಂಗಡಿ ಸಮೀಪ ದೊಡ್ಡ ನಾಲ್ಕು ಪೈಪುಗಳಲ್ಲಿ ಹರಿದು ಬರುವುದೆಂದು ಅಲ್ಲಿನ ಕಾವಲುಗಾರ ವಿವರಿಸಿದ. ಹೊಸಂಗಡಿಗೆ ಹೋದಾಗ ಅದರ ಭೀಮಕಾಯವನ್ನು ಕಂಡು ಬೆರಗಾಗಿದ್ದೆ.
ಬೆಳಕಿನ ಕತೆ ಹೇಳುವ ಕತ್ತಲೆ ಮನೆಗಳು-
ಮಾಣಿ ಡ್ಯಾಂ ನೋಡಿಕೊಂಡು ಪಿಕಪ್ ಡ್ಯಾಂನ್ನು ಸವರಿಕೊಂಡು ಹುಲಿಕಲ್ ಮೂಲಕ ಹೊರ ಬಿದ್ದೆವು. ಡ್ಯಾಂನ ಅನೇಕ ಕಡೆ ಈಗಲೂ ಮನೆ ಕೆಡವಿದ, ತೆಂಗಿನ ಮರಗಳ ಕುರುಹು ಈಗಲೂ ಇದೆ. ಹಡಿಲು ಬಿದ್ದ ಗದ್ದೆಗಳು ನಿಮಗೆ ದರ್ಶನ ಕೊಟ್ಟಾಗ ಕರಳು ಕಿತ್ತು ಬರುವುದು. ಜೀವ ಒಸರುತ್ತಿದ್ದ ಕಣಿವೆ ಈಗ ನಿರ್ಜನ ಬೆಂಗಾಡು. ಹೀಗೆ ಮುಳುಗಡೆ ಪ್ರದೇಶಗಳ ಕತೆ ಹೇಳುತ್ತಾ ಹೋದರೆ ಅದೊಂದೇ ವಿಶಿಷ್ಟ ದಸ್ತಾವೇಜಾಗುವುದು. ಅಭಿವೃದ್ದಿಯ ಅಡ್ಡ ಪರಿಣಾಮ ನೋಡಲೊಮ್ಮೆ ನೀವಿಲ್ಲಿಗೆ ಬರಬೇಕು. ಸುರಿವ ಮಳೆಯಲ್ಲಿ ಇಲ್ಲಿನವರ ಕತೆ ಕೇಳಬೇಕು!
ಇಳಿ ಸಂಜೆ ಹೊತ್ತಿಗೆ ಮೂಕಾಂಬಿಕಾ ದೇವಾಲಯ ಚಂಡಿಕಾಂಬ ದೇವಾಲಯಕ್ಕೆ ನಮ್ಮ ಪ್ರವೇಶವಾಯ್ತು. ಹಸಿದ ಹೊಟ್ಟೆಗೆ ನೈವೇದ್ಯದ ಅವಲಕ್ಕಿ ಯಥೇಚ್ಛವಾಗಿ ಹೊಟ್ಟೆ ಸೇರಿ ಸಂಪ್ರೀತಗೊಂಡಿತು. ದೇವಾಲಯದಿಂದ ಹೊರ ಬರುತ್ತಲೇ ಮಳೆಗೆ ಮಿಂಚು ಗುಡುಗುಗಳ ಹಿಮ್ಮೇಳ. ಹತ್ತು ನಿಮಿಷ ದೇವಾಲಯದಲ್ಲೇ ಉಳಿಯಬೇಕಾಯ್ತು. ಮಳೆ ನಿಲ್ಲುವವರೆಗೆ ಅಲ್ಲೇ ನಿಲ್ಲಬೇಕಾಯ್ತು. ಮಳೆ ನಿಂತು ಹೊರಟಾಗ ಮುಗಿಯದ ಮುಗಿಲನಿಂದ ಹುಲಿಕಲ್ ಘಾಟಿ ಸ್ವಲ್ಪವೂ ಕಾಣುತ್ತಿರಲಿಲ್ಲ. ಸ್ವಲ್ಪ ಯಾಮಾರಿದರೂ ಕಣಿವೆಗೆ ಪಾದ ಬೆಳೆಸಬೇಕಿತ್ತು. ಒಂದು ಪಂಕ್ಚರ್ ಆದ ಸೈಕಲ್ಲು ತುಳಿಯೋ ಕಷ್ಟ ಇಮ್ಮಡಿಗೊಳಿಸಿತ್ತು. ಮರದ ಸೈಕಲ್ ತುಳಿದಂತೆ. ಯಾವನೋ ಪುಣ್ಯಾತ್ಮ ಜೀಪ್ನಲ್ಲಿ ನಮ್ಮ ಹಿಂದೆಯೇ ಹೊಸಂಗಡಿವರೆಗೆ ಬಂದು ನಮಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟ. ದೇವಿ ಕೃಪೆಯಿಂದ ನಿರಾತಂಕವಾಗಿ ಘಾಟಿ ಇಳಿದೆವು!
ಹೊಸಂಗಡಿ ತಲುಪುತ್ತಲೆ ಗೆಳೆಯ ಪ್ರಕಾಶನ ಸೈಕಲ್ಗೆ ಪಂಕ್ಚರ್ ಹಾಕಿಸಿದೆವು. ಯಾರ ಸೈಕಲ್ಲಿನಲ್ಲಿ ಡೈನಮೋವೇ ಇರಲಿಲ್ಲ. ಮುಂದೆ ಹೋಗುವ ದಾರಿ ಸ್ವಲ್ಪವೂ ಕಾಣೋದಿಲ್ಲ. ಕಾಟಿ, ಕಡವೆ, ಚಿರತೆಗಳ ಆವಾಸವಾದ್ದರಿಂದ ಭಯಗೊಂಡೆವು. ಕೊನೆಗೊಂದು ಉಪಾಯ ಮಾಡಿ ಹಳೆಯ ಟೈರೊಂದಕ್ಕೆ ಬೆಂಕಿ ಕೊಟ್ಟು ಅದನ್ನು ಸುಧೀರ ಕೈಗಿತ್ತೆವು. ಅವನು ಒಂದು ಕೈಯಲ್ಲಿ ಸೈಕಲ್ ತುಳಿಯುತ್ತಾ ಮತ್ತೊಂದು ಕೈಯಲ್ಲಿ ಟಯರ್ ಹಿಡಿದುಕೊಂಡು ಸರ್ಕಸ್ ಮಾಡುತ್ತಾ ನಿಧಾನವಾಗಿ ಸಿದ್ದಾಪುರ ತಲುಪಿ ನಮ್ಮ ಮೊದಲ ಸೈಕಲ್ ಪ್ರವಾಸಕ್ಕೆ ಶುಭ ಮಂಗಳ ಹಾಡಿದೆವು. ಈ ಪ್ರವಾಸವನ್ನು ಮೆಲುಕು ಹಾಕಿದಾಗೆಲ್ಲ ರೋಮಾಂಚವಾಗುವುದು. ನಿತ್ತು ಸಿಕ್ಕರೆ ಮತ್ತೆ ನೆನಪು ಕೆದಕಿ ಅವನ ಕಾಲೆಳೆಯುವೆವು. ಸರಿಯಾದ ಮಾರ್ಗದರ್ಶನ ದೊರೆತಿದ್ದರೆ ಇನ್ನೂ ಅನೇಕ ಸೈಕಲ್ ಪ್ರಯಾಣದ ಸುಖ ನೆನಪುಗಳು ನಮ್ಮ ಜೋಳಿಗೆಯಲ್ಲಿರುತ್ತಿತ್ತು. ಮತ್ತೆಂದೂ ನಾವು ಇಂತಹ ದೊಡ್ಡ ಸೈಕಲ್ ಸಾಹಸ ಮಾಡಲೇ ಇಲ್ಲ!! ಇನ್ನೊಮ್ಮೆ ಮತ್ತೊಂದು ಸಾಹಸದೊಂದಿಗೆ ನಿಮ್ಮ ಮುಂದೆ ಬರುವೆ ಅಲ್ಲಿಯವರೆಗೆ ನಮಸ್ಕಾರ.
ಶ್ರೀಧರ್ ಎಸ್. ಸಿದ್ದಾಪುರ.
No comments:
Post a Comment