Friday, September 27, 2019

ಮೊದಲ ಮಳೆ, ಮೊದಲ ಮುತ್ತು, ಮೊದಲ ಚಿತ್ರ....



 

ನಾನಾಗ ಸಣ್ಣ ಸುಣ್ಣದ ಪೆಟ್ಟಿಗೆಯಂತಹ ಕ್ಯಾಮಾರಾ ಹೆಗಲಿಗೇರಿಸಿ ಸಣ್ಣ ಪೋಟೋಗ್ರಾಫರ್ ಪೋಸ್ ನೀಡುತ್ತಿದ್ದೆ! ಮೊದಲ ಕ್ಯಾಮರವದು. ಈಗಲೂ ನನ್ನ ಬಳಿ ಇದೆ! ನನ್ನ ಮಗ ಅದನ್ನು ಸಾಕಷ್ಟು ರಗಳೆ ತೆಗೆದಿದ್ದ. ಅದರಲ್ಲೇ ಕೆಲವು ಪಕ್ಷಿಗಳ ಚಿತ್ರಗಳನ್ನು ಜೂಮ್ ಇಲ್ಲದ ರೀಲ್ ಕ್ಯಾಮಾರದಲ್ಲಿ ತೆಗೆದಿದ್ದೆ! ಕೊನೆಗೆ ದೊಡ್ಡ ಭೂತ ಕನ್ನಡಿ ಹಿಡಿದು ಅದರಲ್ಲಿದ್ದ ಪಕ್ಷಿಯನ್ನು ಹುಡುಕಿ ತೆಗೆದು ನನ್ನಕ್ಕನಿಗೆ ತೋರಿಸಿದ್ದೆ. ಏನೋ ಇದು ನಿನ್ನ ಅವಸ್ಥೆ, ಪಕ್ಷಿ ಪೋಟೋಗ್ರಫಿ ಅಂದರೆ ಹೀಗಾ? ಎಂದು ಅಕ್ಕ ಮೂಜು ಮುರಿದಿದ್ದಳು.  ಏನು ಹೇಳುವುದೆಂದು ಅಂದು ತೋಚಲೇ ಇಲ್ಲ! ಬರುತ್ತಿದ್ದ ಪೋಟೋಗಳು ಅಷ್ಟಕ್ಕಷ್ಟೇ. ಮನೆಯಲ್ಲಿ ಮಾತ್ರ ಪೋಟೋಗಳ ರಾಶಿ ರಾಶಿ ಬಂಡಲ್ಲು. ಹೀಗಿರುವ ದಿನಗಳಲ್ಲಿ ನನ್ನ 'ಪೋಟೋಗ್ರಫಿ ವಿಷಯ' ಎಲ್ಲರ ಆಹಾರವಾಗಿತ್ತು! 
  ಮೊದಲ ಮಳೆ, ಮೊದಲ ಕವನ, ಮೊದಲ ಪ್ರೀತಿ, ಮೊದಲ ತೊದಲು, ಮೊದಲ ಮುತ್ತು ಹೀಗೆ ಮೊದಲಾಗಿರುವುದೆಲ್ಲವು ನೆನಪಿನಲ್ಲುಳಿಯುತ್ತೆ. ಯಾರೂ ಅದನ್ನು ಮರೆಯಲಾರರು! ಅರೆ ಏನು ಹೇಳ್ತಾನೆ ಎಂದು ಮನಸು ಮಂಡಿಗೆ ತಿಂತಿದೆಯಾ? ಮೊದಲ ಜಗತ್ತಿನ ಹಳೆ ತುಣುಕೊಂದು ಇಲ್ಲಿದೆ. 2001 ರ ಸಮಯವಿರಬೇಕು. ಸಾಕಷ್ಟು ಓದುತ್ತಿದ್ದೆನಾದರೂ ಬರೆಯುತ್ತಿರಲಿಲ್ಲ. ಆ ಸಂಧರ್ಬದಲ್ಲಿ ವಿಜಯ ಕರ್ನಾಟಕ ಪತ್ರಿಕಾ ಜಗತ್ತಿಗೆ ತನ್ನ ವಿಶಿಷ್ಟ ಅಂಕಣದಿಂದ ಅಚ್ಚರಿಗಳನ್ನು ನೀಡುತಲಿತ್ತು. ಅದೇ ಸಮಯಕ್ಕೆ ಅವರು ಹೊಸದಾಗಿ 'ಚಿತ್ರಕ ನೆನಪು' ಅಂಕಣ ಆರಂಬಿಸಿದ್ದರು. ಚಿತ್ರ ಮತ್ತು ಅದರ ಜೊತೆಗಿನ ನೆನಪನ್ನು ಹಿಡಿದಿಡುವ ಪುಟಾಣಿ ಅಂಕಣ.
 ಫೋಟೋಗ್ರಫಿಯ ಹವ್ಯಾಸವಿದ್ದ ನನಗೆ ಈ ಅಂಕಣ ಬಹಳ ಅಚ್ಚು ಮೆಚ್ಚು. ಯಾಕೆ ನಾನು ನನ್ನದೊಂದು ಚಿತ್ರ ಇಲ್ಲಿಗೆ ಕಳುಹಿಸಬಾರದು ಎಂದುಕೊಂಡೆ. ಹಾಗೆಯೇ ನನ್ನ ಕಡತ ರಾಶಿಗಳನ್ನು ಹರವಿ ಕುಳಿತೆ. ಯಾವ ಚಿತ್ರವೂ ಮನಸ್ಸಿಗೆ ಹಿಡಿಸಲಿಲ್ಲ. ಚಿತ್ರ ಗುಡ್ಡೆಯಿಂದ ಒಂದು ಚಿತ್ರವನ್ನು ಆರಿಸಿ, ಕುಂದಾಪುರಕ್ಕೆ ಹೋಗಿ ಪ್ರಿಂಟ್ ಹಾಕಿಸಿ ತಂದು ವಿಜಯ ಕನರ್ಾಟಕ ಪತ್ರಿಕೆಗೆ ಕಳುಹಿಸಿ, ಕಣ್ಮುಚ್ಚಿ ಕುಳಿತೆ. ನನ್ನ ಅದೃಷ್ಟವೋ ಗೊತ್ತಿಲ್ಲ ನನ್ನ ಬರೆಹ ಮತ್ತು ಚಿತ್ರ ಪತ್ರಿಕೆಗೆ ಆಯ್ಕೆಯಾಗಿತ್ತು. ಆ ಚಿತ್ರವನ್ನು ಅಮ್ಮನಿಗೆ, ಅಕ್ಕನಿಗೆ ತೋರಿಸಿ ಬೀಗಿದೆ. ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದೆಯೆಂದು ಸಣ್ಣ ಜಂಬ ಮಾಡಿದೆ. ಆ ಸಂತೋಷವನ್ನು ಪದಗಳಲ್ಲಿ ಹಿಡಿದಿಡಲಾರೆ ಬಿಡಿ. ಮೊದಲ ಬರೆಹ ಮೊದಲ ಮುದ್ರಣ. ಅಂತಹ ಸಂತಸವೊಂದು ಒಡಮೂಡಿತ್ತು. ಮೊದಲ ಲೇಖನ ಕಣ್ಣು ತೆರೆದಿದ್ದು ಹೀಗೆ. ಈಗ ಇಲ್ಲಿವರೆಗೆ ಬರೆಯುತ್ತಾ ಬಂದಿರುವೆ. ಎಷ್ಟು ದಿನ ಈ ವೈಕುಂಠ ಗೊತ್ತಿಲ್ಲ. ಇವತ್ತು ಲೇಖನಗಳ ರಾಶಿಗೆ ಕೈಹಚ್ಚಿದಾಗ ಸಿಕ್ಕಿತು. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...