Monday, December 28, 2020

ಜೀವಂತ ಸೇತುವೆಗಳ ಸೆರಗು!-ನಾನ್ ಬ್ಲಾಂಗ್!

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...

ಸಂಪುಟ-೩




ಅದೇಕೋ ಗೊತ್ತಿಲ್ಲ ಸಣ್ಣ ಸಣ್ಣ ಊರುಗಳ ಸೆಳೆತವೇ ವಿಚಿತ್ರ. ದೊಡ್ಡ ಶಹರಕ್ಕಿಂತ ಪುಟಾಣಿ ಊರುಗಳೇ ನನಗಿಷ್ಟ. ಒಂದೆರಡು ಅಂಗಡಿ ಬಿಟ್ಟರೆ ಮತ್ತೇನೂ ಇಲ್ಲಿಲ್ಲ!  ಮಿಕ್ಕೆಲ್ಲವೂ ಮೊಗೆವಷ್ಟು ಇವೆ.




ಎಲ್ಲರೂ ಎಲ್ಲರಿಗೂ ಪರಿಚಯಸ್ಥರು. ಅಪರಿಚಿತತೆ ಎಂಬುದೇ ಇಲ್ಲಿ ಇಲ್ಲ. ಮಳೆಗೆ ಮನ ತಣಿಸಿದ ಭಾವದಲ್ಲಿರುವ ಜನ. ಹಾಸಿ ಹೊದ್ದು ಮಲಗಿ ಮಿಗುವಷ್ಟು ಸಮಯ. ನೆಟ್ಟಿನಲೇ(ಇಂಟರ್ ನೆಟ್)  ನೇತಾಡಿಕೊಂಡಿರಬೇಕಾದ ಅಗತ್ಯತೆ ಇಲ್ಲ. ಡಾಟಾ ಮುಗಿವ ಚಿಂತೆ ಇಲ್ಲ. ಝರಿ, ಕೊಳ, ಹೊಳೆಯ ಸಾನಿಧ್ಯವಿದ್ದರಂತೂ ಇನ್ನೂ ಅಪ್ಯಾಯಮಾನ. ದೊಡ್ಡ ಸೌಲಭ್ಯಗಳೂ ಇಲ್ಲ. ಸಣ್ಣ ಊರು ಕೊಡುವ ಕುಷಿ ಮೆಟ್ರೋಪಾಲಿಟನ್
 ನೀಡದು. ಅಲ್ಲಿ ಎಲ್ಲವಿದ್ದು ಒಂಟಿ ಎಂಬ ಭಾವ. ಸಣ್ಣ ಊರುಗಳಲ್ಲಿ ಏನಿಲ್ಲದೆಯೂ ಸಂತೃಪ್ತ ಭಾವ. 
ಇಲ್ಲಿ ಸಣ್ಣ ಪುಟ್ಟ ಜಗಳಗಳಿರಬಹುದು. ಅದರ ಎರಡರಷ್ಟು ನೆಮ್ಮದಿ ಇದೆ. ದೈವತ್ವಕ್ಕೆ ಸಮಾನವಾದ ಶುಚಿತ್ವವಿದೆ. ಬೇಜಾರು ಕಳೆಯಲು ಹಸಿರುಕ್ಕಿಸುವ ಮರಗಳಿವೆ. ಸಂಬಂಧಗಳೂ ಮರಗಳಂತೆ ಹಸಿರಾಗಿವೆ. ನಾಳೆಗಳ ಬರವಸೆ ಇದೆ. ಆಪತ್ಕಾಲಕ್ಕಾಗುವ ನೆಂಟರಿದ್ದಾರೆ. ಇಂತಹ ಊರುಗಳಲ್ಲಿ ಹುಟ್ಟಿ ಬರಲು ಪುಣ್ಯ ಮಾಡಿರಬೇಕಷ್ಟೆ. ಇಂತಹ ಸಣ್ಣ ಊರಿನ ಸೆರಗಿಡದ ಹಸಿ ಬಿಸಿ ಅನುಭವವೇ ಈಗ ನಿಮ್ಮ ಮುಂದೆ.

ಗೆಳೆಯ ನಾಗರಾಜ್ ನಾನ್ ಬ್ಲಾಂಗ್ ಊರಿಗೆ ಹೋಗೋಣ ಎಂದು ಹೇಳಿದರೂ ಈ ಹೆಸರು ನನ್ನ ಸುಲಭದ ನೆನಪಿಗೆ ದಕ್ಕದು. ಶಿಲ್ಲಾಂಗ್ನಿಂದ ಡಾಕಿಗೆ ಹೋಗುವ ದಾರಿಯಲ್ಲೇ ಒಂದರ್ದ ಗಂಟೆಯ ದಾರಿಯಲ್ಲಿ ಚಲಿಸಿದರೆ ಪುಟಾಣಿ ಗ್ರಾಮ 'ನಾನ್ ಬ್ಲಾಂಗ್!'. ಹೆಸರ ತಜರ್ುಮೆಗೆ ನಿಲುಕದ ಹಳ್ಳಿ. ತಪ್ಪಿದ್ದರೆ ಕ್ಷಮಿಸಿ. ಕಾಡಿನ ಪುಟಾಣಿ ಬಳ್ಳಿ. ಊರಿನ ಅನುಕೂಲಕ್ಕೆ ಮಾಡಿಕೊಂಡ ವಿಚಿತ್ರ ಜೀವಂತ ಸೇತುವೆಗಳನ್ನು ಮಾತನಾಡಿಸುವ ಮಾತಾಗಿತ್ತು. 
 ನಾಗರಾಜ್ನ 'ಖಾಸಿ' ಭಾಷೆ ಮಾತನಾಡಬಲ್ಲ ಗೆಳೆಯರೂ ಬಂದಿದ್ದರು. ಶಿಲ್ಲಾಂಗನ ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಳಿ ಹರಡಿಕೊಂಡ ಕಾಲು ಹಾದಿ ಹಿಡಿಯಲು ಸುಮಾರು ಅರ್ಧ ತಾಸು ಬೇಕಾಯ್ತು. ಊರ ಬಾಗಿಲಲಿ ಸಿಕ್ಕ ಇಬ್ಬರು ಖಾಸಿ ಮಂದಿಯನ್ನು ಜೊತೆ ಮಾಡಿಕೊಂಡೆವು.
ನೀರವ ಏಕಾಂತದಲಿ ಇನಿಯನ ಬರುವಿಕೆಗೆ ಕಾದು ಕುಳಿತಂತಿರುವ ಒಂಟಿ ಮನೆಗಳು. ಮನೆ ಎದುರಿಗೆ ಬಿದರ ಬೇಲಿಯಲಿ ನಿಂತು ಇಣುಕುವ ಪುಟಾಣಿ ಪೋರರು. ರಗ್ಗು ಹೊದ್ದುಕೊಂಡೆ ಬೀಡಿ ಎಳೆವ ಮುಗ್ಧ ಜನರ ವಿಚಿತ್ರ ನೋಟ. 
ಚಳಿಗೆ ಪ್ರಿಯತಮೆಯ ಅಪ್ಪುಗೆಯಂತಹ ಸೂರ್ಯ ಮಾಮನ ಬಿಸಿಲು. ಪ್ರತಿಯುಸಿರಿಗೂ ಏಲಕ್ಕಿಯ ಘಮಲು. 




ದೂರದಲ್ಲಿ ಕಾಣುವ ಹಳ್ಳಿ. 
ಅರಳಿನಿಂತ ಮುಖಾರವಿಂದವನು ಹೊತ್ತು 9ರ ಹೊತ್ತಿಗೆ ನಾನ್ ಬ್ಲಾಂಗ್ನ ಹೊರಳು ದಾರಿ ಎದುರಿಗಿದ್ದೆವು. ನಿರುದ್ದೀಶವಾಗಿ ನೇತುಬಿದ್ದ 'ನಾನ್ ಬ್ಲಾಗ್' ಹಳ್ಳಿಗೆ ದಾರಿ ಎಂಬ ಫಲಕ. ಮಳೆರಾಯ ರಾತ್ರಿ ಬಂದು ದಾರಿ ತೊಳೆದಿಟ್ಟಿದ್ದ. ಕೆಂದುಟಿ ಹೊತ್ತು, ನಮ್ಮನ್ನು ಹಿಂದಿಕ್ಕಿ, ಮತ್ತೆಲ್ಲೋ ಹೊರಟ ಅರವತ್ತರ ಹರಯದ ಯುವತಿ! ನಮಗೂ ಮೇಘಾಲಯದ ಎಲೆ ಅಡಿಕೆ ತಿನ್ನಿಸಿದಳು. ಬೆನ್ನ ಮೇಲೆ ಬೆತ್ತದ
 ಚೀಲ. ಉಳಿದ ಪ್ರಶ್ನೆಗಳ ಸರಪಳಿ. ಭಾಷಾ ತೊಡಕು.
ಸರಿ ಸುಮಾರು 5-6 ಕಿ.ಮೀ ಉದ್ದದ ಪ್ರಪಾತದ ಹಾವಿನ ಹಾದಿಗೆ ಅವರಿಬ್ಬರು ತಂದು ನಿಲ್ಲಿಸಿ ಇಳಿಯಿರಿ ಎನ್ನುವುದೆ! ಅಕ್ಷರಶಃ ಆತ್ಮಹತ್ಯೆಗೆ ಸಜ್ಜಾದವರಂತೆ ನಿಂತುಬಿಟ್ಟೆವು. ನಮ್ಮ ಗ್ರಹಚಾರಕ್ಕೆ ಬುತ್ತಿ ಗಂಟು ಮರೆತು ಗಾಡಿಯಲ್ಲೇ ಬಿಟ್ಟು ಬಂದಿದ್ದೆವು. ಇನ್ನೇನು ಮಾಡುವುದು ಬಂದಾಯಿತೆಂದು ಏರಿಳಿವ ಸಾಹಸಕ್ಕೆ ಅಂಟಿಕೊಂಡೆವು. 
ಬಿದಿರ ಹಿಂಡಿಲುಗಳ ನಡುವೆ ಪ್ರಪಾತದ ಹಾದಿ ನುಂಗುವಂತೆ ಬಾಯಿ ಕಳೆದಿತ್ತು. ಅಬ್ಬಾ ಎನಿಸುವ ಇಳಿಜಾರಿಗೆ ಮುಖಮಾಡಿದ್ದೆವು. ಹೆಜ್ಜೆ ಜಾರಿದರೆ ಪ್ರಪಾತದ ಆ ತುದಿಗೆ. ಯಾರೋ ಬೇಕಂತಲೇ ಬೇಕಾಬಿಟ್ಟಿ ಎಸೆದ ಅನಾಥ ಅಂಕುಡೊಂಕಿನ ನಡು ಹರಿವ ನಟೋರಿಯಸ್ ಹಾದಿ. 


ಇಳಿಕೆಯೇ ಎದೆ ಹಾರಿಸುತ್ತೆ.. 

ಎಲ್ಲೋ ಹೊರಟ ಮುದುಕಿ.. 
ಹಳ್ಳಿಯಿಂದ ಕೇಳುವ ಮಕ್ಕಳ ಕೇಕೆ. ದೊಡ್ಡವರ ದನಿಯ ಪ್ರತಿಧ್ವನಿ! ಗಾಳಿಗೆ ಮೂಗೊಡ್ಡಿದರೆ ಕಾಡು ಏಲಕ್ಕಿಯ ಘಮಲು. ಇಳಿವ ಪ್ರತಿ ಹೆಜ್ಜೆಯಲೂ ಸೊಂಟದ ನೆಟ್ಟು ಬೊಲ್ಟುಗಳ ಟಿಕ್ ಟಿಕ್ ಸದ್ದು. ಬಾಕಿ ಎಲ್ಲಾ ಮೌನ.
	ಮೊದಲಿದ್ದ ದೊಡ್ಡ ಮರಗಳ ದಟ್ಟನೆ ಕಡಿಮೆಯಾಗಿ ಬಿದಿರ ಹೊದ್ದ ಬೆಟ್ಟ ಸಾಲು ಶುರುವಾಗಿತ್ತು. ಇಲ್ಲಿನ ಬಿದಿರಿಗೆ ಅದರದೇ ಆದ ಅಸ್ಮಿಯತೆ ಇದೆ. ತೀರಾ ಉದ್ದವಾಗಿ ಬೆಳೆಯದ ಕುಳ್ಳ ಜಾತಿಯ ಸದೃಡವಾದ ಬಿದಿರು ಇಲ್ಲಿನದು.  ಸ್ಥಳೀಯ ಹೆಂಗಸರು ಮತ್ತು ಗಂಡಸರು ಎಲೆ ಅಡಿಕೆ ಜಗಿಯುತ್ತಲೊ, ಹಾಡು ಕೇಳುತ್ತಲೊ, ಕೆಲವರು ಮಕ್ಕಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಆರಾಮಾಗಿ ಇಳಿದು ಹೋಗುತ್ತಿದ್ದರು! ಕೆಲವರು ನಿಧಾನಕ್ಕೆ ಏರಿ ಬರುತಲಿದ್ದರು! ಅವರು ತಮ್ಮೊಳಗೆ ಚಯಾ ಪಯಾವೆಂದು ಹರಟುತ್ತಿದ್ದ ಖಾಸಿ ನುಡಿಗಳೊಂದೂ ನನ್ನ ಮಿದುಳಿನಲ್ಲಿ ದಾಖಲಾಗಲೇ ಇಲ್ಲ! ನಮ್ಮ ನಡುವಿನ ಸಾಮಾನ್ಯ ಶಬ್ದ ಶಿಲ್ಲಾಂಗ್ ಒಂದೇ ಎಂದು ಗೆಳೆಯ ನಾಗರಾಜ್ ತಮಾಷಿ ಮಾಡುತ್ತಾ ಇಳಿಯ ತೊಡಗಿದೆವು. ಪುಣ್ಯಕ್ಕೆ ಶಿಲ್ಲಾಂಗ್ ಒಂಟಿ ಪದವು ನಮ್ಮ ನಾಲಗಗೆ ತೊಂದರೆ ಕೊಡದೆ ಉಳಿದು ಕೊಂಡಿದ್ದು ನಮ್ಮ ಅದೃಷ್ಟವೇ!

ಇಳಿಯುವ ಸರ್ಕಸ್ ನಲ್ಲಿ ನಿರತ ನಮ್ಮ ಗುಂಪಿನ ಲಕ್ಷ್ಮೀ ನಾರಾಯಣ್ 


ಬಿದಿರ ಹಿಂಡಲುಗಳ ನಡುವಿನ ಹರ ದಾರಿ. .. 

ಅರಳಿನಿಂತ ಕಾಡು ಹೂ..  





ಖಾಸಿ ಜನಾಂಗದ ಅಜ್ಜನೊಬ್ಬ ನಮ್ಮಿಬ್ಬರನ್ನು ( ನಾನು ಗೆಳೆಯ ನಾಗರಾಜ್) ತಬ್ಬಿಕೊಂಡು ಖುಷಿಪಟ್ಟ! ಕಣಿವೆಯ ಎಡ ಮತ್ತು ಬಲ ಮಗ್ಗಲುಗಳಲ್ಲಿ ಜೀವಂತ ಸೇತುವೆಗಳ ತೋರಣಗಳನ್ನೇ ನಿಮರ್ಿಸಿದ್ದಾರೆ ಇಲ್ಲಿನ ಸ್ಥಳೀಯರು. ಅರ್ಧ ದಾರಿಗೆ ಕ್ರಮಿಸುತ್ತಲೆ ನಮ್ಮ ತಂಡದ ಲಕ್ಷೀ ನಾರಾಯಣ್ ದಾರಿ ತಪ್ಪಿ ಮುಂದೆ ಹೋಗಿದ್ದರು. ಜೊತೆಯಾದ ಸ್ಥಳೀಯ ಖಾಸಿ ಗೆಳೆಯ 'ಸ್ಮಾಯಿಲ್' ಆತನನ್ನು ಕರೆತರಲು ಪುಟ ಪುಟನೇ ಕೆಳಗೋಡಿ ಕ್ಷಣಾರ್ಧದಲ್ಲಿ ಮೇಲೆ ಬಂದಿದ್ದ. ಇನ್ನೊಬ್ಬ ನಮ್ಮ ಖಾಸಿ ಜೊತೆಗಾರ 'ಸಿಮಜಿನ್' ಕೈಲ್ಲೊಂದು ವಿಚಿತ್ರ ಕತ್ತಿ ಯಾವಾಗಲೂ ತೊನೆದಾಡುತ್ತಲೇ ಇರುತ್ತಿತ್ತು. ಆತ ಮೇಲೆ ಬರುವುದರೊಳಗೆ ಎರಡು ಬೀಡಿ ಎಳೆದು ಬಿಸಾಕಿದ್ದ ಆಸಾಮಿ. 

ಬೆರಗಿನ ಬೇರುಗಳ ಮಾಯಾ ಲೋಕ:-

ಲಕ್ಷ್ಮೀ ನಾರಾಯಣ್ ಮೇಲೆ ಬರುತ್ತಲೇ ಆತನನ್ನು ಜೀವಂತ ಸೇತುವೆಗಳಿರುವ ದಾರಿಗೆ ಹಚ್ಚಿದೆವು. ಇಡಿ ಊರಿಗೂರೇ ಹಳ್ಳ ಕೊಳ್ಳ. ಈ ಕೊಳ್ಳಗಳನ್ನು ದಾಟಿಕೊಳ್ಳಲು ಅವರೇ ರಚಿಸಿಕೊಂಡ ನೂರಾರುವರ್ಷ ಹಳೆಯ ಜೀವಂತ ಸೇತುವೆಗಳು. ಮನುಜನ ಸೃಜನಶೀಲತೆಯ ಪರಾಕಾಷ್ಠೆ. ಸಿಮೆಂಟು ರಾಡುಗಳಿಲ್ಲದ ಕಾಲದಲ್ಲಿ ಬೇರು ನಾರುಗಳನ್ನು ಪಳಗಿಸಿದ ಪರಿ ಅನನ್ಯ. ಆಲದಂತಹ ಮರಗಳನ್ನು ಬಿದಿರಿನ ಬೊಂಬಿನೊಳಗೆ ತೂರಿಸಿ ಮತ್ತೊಂದು ಕಡೆ ಬರುವಂತೆ ನೋಡಿಕೊಳ್ಳುವರು. ಹೀಗೆ ತೂರಿದ ಬೇರಿಗೆ ಆಚೆ ಕಡೆಯ ಮತ್ತೊಂದು ಬೇರಿನೊಂದಿಗೆ ಹೆಣಿಗೆ ಹಾಕಲಾಗುತ್ತದೆ. ಅಂತಹುದೇ ಇನ್ನೊಂದು ಮರದ ಬೇರನ್ನು ಆಚೆಯ ತುದಿಯಿಂದ ಇಚೆಗೆ ಹರಿಯ ಬಿಡಲಾಗುತ್ತದೆ. ಒಟ್ಟು ಎರಡು ದೊಡ್ಡ ಬೇರುಗಳ ಮಹಾ ಜಾಲವೇರ್ಪಟ್ಟು ಒಂದರೊಳಗೆ ಬೆಸೆದು ಸೇತುವೆ ತಯಾರಾಗುತ್ತದೆ. ಕಾಲದ ತೆಕ್ಕೆಯಲಿ ಕರಗದ ಈ ಸೇತುವೆಗಳು ಇನ್ನೂ ಜೀವಂತ. ಇಂತಹ 25 ಸೇತುವೆಗಳಿವೆ ಎಂದ ಖಾಸಿ ಮಾರ್ಗದರ್ಶಕ ಗೆಳೆಯ! ಪ್ರತೀ ಸೇತುವೆಗೂ ಒಂದೊಂದು ಹೆಸರು. ನಾಮಫಲಕ ತೂಗುಹಾಕಲಾಗಿದೆ. ಕೆಲವು ಬೋಡರ್ುಗಳು ಮಳೆ ಗಾಳಿಗೆ ಹಾರಿ ಹೋಗಿವೆ. ಹೀಗೆ ಒಂದಾದ ಮೇಲೊಂದರಂತೆ 8 ಜೀವಂತ ಸೇತುವೆಗಳನ್ನು ನೋಡಿದೆವು. ಪ್ರತಿಯೊಂದು ಮತ್ತೊಂದರಂತಿಲ್ಲ! ಕೊನೆಗೆ ನೋಡಿದ ಎಂಟನೆಯ ಸೇತುವೆಯಂತೂ ಅತ್ಯದ್ಭುತ!





ಊಟವಿಲ್ಲದೆ ಹೊಟ್ಟೆ ಚುರುಗುಟ್ಟುತಲಿತ್ತು. ಅಂತೂ ಸರಪಂಚನ ಮನೆಯಲ್ಲಿ ಚಹ ಸತ್ಕಾರವಾಯಿತು. ಚಹದ ಜೋಡಿ ಬಿಸ್ಕೀಟು ಬಂತು. ಮುಲಾಜಿಲ್ಲದೆ ಹೊಟ್ಟೆಗಿಳಿದ ಬಿಸ್ಕೀಟುಗಳ ಲೆಕ್ಕ ಸಿಕ್ಕಲಿಲ್ಲ. ಮತ್ತೆ ಆಸಾಮಿ ಬಿಸ್ಕೀಟು ಬೇಕೆಂದರೆ ಬರೋಬ್ಬರಿ 4 ರಿಂದ 5 ಗಂಟೆ ನಡೆಯಲೇಬೇಕು. ದುಡ್ಡು ಕೊಟ್ಟರೆ ಬೇಡವೆಂದ. ಪಾಪದವ! 'ನೀವು ನನ್ನ ಅತಿಥಿಗಳು ನಿಮ್ಮಲ್ಲಿ ದುಡ್ಡು ತೆಗೆದುಕೊಳ್ಳುವುದಾ?' ಅವನ ಮುಗ್ಧ ಪ್ರಶ್ನೆ. ಅತಿಥಿ ದೇವೋಭವ. ಹಾಂ ಹೇಳುವುದನು ಮರೆತೆ ಈ ಜಾಗದಲ್ಲೇ ಗುಡ್ಡಗಾಡು ಓಟ ನಡೆಯುವುದು! ನಡೆಯುವಂತಿಲ್ಲ ಓಡಬೇಕು. ಹ್ಹ ಹ್ಹ. ನನ್ನಂಥವರಿಗಲ್ಲ ಬಿಡಿ. ಗುಡ್ಡ ಹತ್ತಿಳಿಯುವುದೇ ಕಷ್ಟ! ಹಂಬಲದ ಬೆಂಬಲವೊಂದೇ ನನ್ನ ಪಾಲಿಗೆ ಉಳಿದಿರುವ ಕೃತತ್ವ ಶಕ್ತಿ.




















ಪೂವರ್ೋತ್ತರ ರಾಜ್ಯಗಳಲ್ಲಿ ಹಗಲು ಬೇಗ ಇಳಿಯುವುದರಿಂದ ಮೂರಕ್ಕೆ ವಾಪಾಸು ಹೊರಡಲೇ ಬೇಕಾಯ್ತು. ದಾರಿ ಸನಿಹದ ಎರಡು ಬಿಳಲುಗಳ ಸೇತುವೆಗೆ ಇನ್ನೊಮ್ಮೆ ಬರುತ್ತೇವೆಂದು ನಮ್ಮೂರಿನ ದಾರಿ ಹಿಡಿದೆವು. ದಾರಿಯುದ್ದಕ್ಕೂ ತಂದ ಉಂಡೆ ಚಕ್ಕುಲಿಗಳನ್ನು ಹೆಗ್ಗಣಗಳಂತೆ ಹೊಡೆಯುತ್ತಾ, ಹರಟುತ್ತಾ ಗುಡ್ಡವೇರಿದೆವು. ಗುಡ್ಡದ ತುದಿಯಲ್ಲೊಮ್ಮೆ ಕತ್ತಲಾದುದರಿಂದ ದಾರಿ ತಪ್ಪಿ ಮತ್ತೆ ಸರಿ ದಾರಿಗೆ ಬಂದೆವು. ಸುಂದರ ಸೂರ್ಯ ಮಾಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದ. ಸೂರ್ಯ ಮಾಮನ ಚಂದದ ಪಟ ಒಂದೆರಡು ನೆನಪ ಜೋಳಿಗೆಗೆ ಹಾಕಿಕೊಂಡೆ. 6 ಗಂಟೆಯ ಕಡು ಕತ್ತಲೆಗೆ ಬೆಟ್ಟದ ನೆತ್ತಿಯಲ್ಲಿದ್ದೆವು. ಕಾಲು ಮತ್ತು ಸೊಂಟ ಯಾವೊತ್ತೊ ನನ್ನ ಮಾತು ಕೇಳುವುದನ್ನು ನಿಲ್ಲಿಸಿಯಾಗಿತ್ತು!
	ಸ್ಫಟಿಕ ಶುಭ್ರ ನೀರಿನ ಇಲ್ಲಿನ ಜಲಧಾರೆಗಳನ್ನು ನೋಡುವ ಹಂಬಲದೊಂದಿಗೆ ಅಂದಿನ ದಿನಕ್ಕೆ ಮಂಗಳಹಾಡಿದೆವು. ನಿಮ್ಮ ಕಿಸೆಗೆ ಭಾರವಾಗದ ಅನೇಕ ಹೋಟೆಲುಗಳು ರೆಸ್ಟುರೆಂಟ್ಗಳು ಶಿಲ್ಲಾಂಗಿನಲ್ಲಿದೆ. ಯಾಕಿನ್ನು ತಡ?



ಶ್ರೀಧರ್. ಎಸ್. ಸಿದ್ದಾಪುರ.
						ರಥ ಬೀದಿ ಸಿದ್ದಾಪುರ.
						ಕುಂದಾಪುರ ತಾಲೂಕು
						ಉಡುಪಿ ಜಿಲ್ಲೆ-576229.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...