ಸೂಕ್ಷ್ಮ ಅವಲೋಕಿಸುವವರಿಗೆ ಮಾತ್ರ ಪ್ರಕೃತಿಯ ತನ್ನ ವಿಸ್ಮಯಗಳನ್ನು ಬಿಟ್ಟು ಕೊಡುತ್ತೆ. ಇಲ್ಲಿ ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುವಂತಿಲ್ಲ. ನೋಡುವುದರ ಹೊಸ ಅರ್ಥಕೊಡುವಂತೆ ನೋಡಬೇಕು. ಅತಿ ಸೂಕ್ಷ್ಮವಾಗಿ ಅವಲೋಕಿಸಿಬೇಕು. ಪುಸ್ತಕಗಳನ್ನು ಪುನರಾವಲೋಕನ ಮಾಡಬೇಕು, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು ನಂತರವೇ ಒಂದು ನಿರ್ಧಾರಕ್ಕೆ ಬರಬೇಕು. ಹೀಗೆ ಮಾಡಿದಾಗಲೂ
ಕೆಲವು ವಿಚಾರಗಳು ಗೊಂದಲ ಪೂರ್ಣವಾಗಿಯೇ ಉಳಿಯಬಹುದು.
ಕಳೆದ ಮಳೆಗಾಲದಲ್ಲಿ ವಿಚಿತ್ರ ಜೀವಿಯೊಂದನ್ನು ಕಂಡೆ. ಬಸವನ ಹುಳುವೊಂದು ಸಣ್ಣ ಟೊಂಗೆಗೆ ತನ್ನಿಡೀ ದೇಹವನ್ನು ನೇತು ಹಾಕಿಕೊಂಡಿತ್ತು. ಆದರೆ ಅದರ ಮೇಲ್ಬಾಗವು ಬಸವನ ಹುಳದ ಮೇಲ್ಬಾಗಕ್ಕೆ ಒಂಚೂರು ಹೋಲಿಕೆಯಾಗುತ್ತಿರಲಿಲ್ಲ ಜೊತೆಗೆ ಅದಕ್ಕೆ ಕಣ್ಣುಗಳಿರಲಿಲ್ಲ!! ಜೀವಿಯ ಕೆಳಭಾಗ ಬಸವನ ಹುಳುವಿನಂತಿದ್ದು, ಮೇಲ್ಬಾಗ ಮಾತ್ರ ಯಾವುದೋ ಲಾರ್ವೆಯನ್ನು ಹೋಲುವಂತಿತ್ತು. ಏನಿದು ವಿಚಿತ್ರ
ಜೀವಿ ಎಂದು ಚಕಿತನಾದೆ. ಮೇಲಿನ ಭಾಗವನ್ನು ಹೋಲುವ ಜೀವಿಯನ್ನು ಅನೇಕ ಬಾರಿ ನೋಡಿದ್ದೆ. ನಮ್ಮ ಕಡೆ ಜವಳೆ ಎಂದು ಕರೆಯುವ ಜೀವಿಯನ್ನು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದೆ. ಆದರೂ ಅನುಮಾನ ಬಂದು ಹುಡುಕಾಡಿದೆ. ಕೆಲವು ಪುಸ್ತಕ, ಗೂಗಲ್ನ ಸಹಾಯ ಯಾಚಿಸಿದೆ. ಅಚ್ಚರಿಯೊಂದು ಕಾದು ಕೂತಿತ್ತು. ಬಸವನ ಹುಳುವನ್ನು ತಿನ್ನುವ ಜೀವಿಗಳ ಪಟ್ಟಿ ತಯಾರಿಸಿದೆ. ಕಪ್ಪೆ
, ಪಕ್ಷಿಗಳು, ಸರಿಸೃಪಗಳು ಮೊದಲ ಪಟ್ಟಿಯಲ್ಲಿದ್ದವು. ಇವಲ್ಲದೇ ಮಿಂಚು ಹುಳುವಿನ ಲಾರ್ವಾ ಕೂಡ ಬಸವನ ಹುಳುವನ್ನು ಇಷ್ಟ ಪಟ್ಟು ತಿನ್ನುತ್ತೆ ಎಂದು ಗೊತ್ತಾಗುತ್ತಲ್ಲೇ ಸಣ್ಣ ಮಿಂಚೊಂದು ಮೆಡುಲಾ ಅಬ್ಲಾಂಗೇಟದಿಂದ ಹೊಡೆಯುತ್ತಲೇ ಈ ಚಿತ್ರದ ಹೊಸ ಅರ್ಥವೊಂದು ಬಿಚ್ಚಿಕೊಳ್ಳುತ್ತಾ ಸಾಗಿತು.
ಮಿಂಚು ಹುಳುವಿನ ಲಾರ್ವವೊಂದು ಬಸವನ ಹುಳುವೊಂದರ ಚಿಪ್ಪೊಳಗೆ ಸಾಗಿ ತಿಂದು ಮುಗಿಸುವ ಕಾಯಕದಲ್ಲಿ ತಲ್ಲೀನನಾಗಿತ್ತು. ಗಂಟೆಗಳವರೆಗೆ ಅದನ್ನೇ ಹಿಡಿದು ಕೊಂಡಿತ್ತು. ಎಂಥಾ ವಿಸ್ಮಯವಲ್ಲವೇ?
ಶ್ರೀಧರ್. ಎಸ್. ಸಿದ್ದಾಪುರ.
No comments:
Post a Comment