ಅಬಚೂರಿನ ಪೋಸ್ಟಾಫೀಸು ಕೃತಿಯಲ್ಲಿ ತೇಜಸ್ವೀ ಹೊಸ ನುಡಿಗಟ್ಟು ಉಕ್ತಿ ಬಂಗಿಯನ್ನು ಸೃಷ್ಟಿಸಬೇಕೆಂದು ತಮ್ಮ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅದದೇ ಹಳಸಲು ಸರಕು ರೇಜಿಗೆ ಹುಟ್ಟಿಸುತ್ತೆ. ಜೊತೆಗೆ ನವ್ಯದ ಹಿಡಿತದಿಂದ ಸಾಹಿತ್ಯವನ್ನು ಪಾರು ಮಾಡಬೇಕೆಂಬ ಘನ ಉದ್ದೇಶದಿಂದ ಈ ಮಾತು ಹೇಳಿರಬೇಕು.
ಇತಂಹ ಹೊಸ ಶಕೆಯೊಂದನ್ನು ಬರೆಯ ಹೊರಟ ಕೃತಿ ಕಾಡ ಸೆರಗಿನ ಸೂಡಿ. ತೇಜಸ್ವಿ ಕೃತಿಯೊಂದನ್ನು ಓದಿದ ನಂತರ ನಮಗೆ ಆ ಜಾಗಕ್ಕೆ ಹೋಗಬೇಕು ಅನಿಸುತ್ತೆ. ಆದರೆ ಸೂಡಿ ಓದಿದ ಮೇಲೆ ನನಗನಿಸಿದ್ದು ಅವರು ವಿವರಿಸಿದ ಜಾಗದಲ್ಲೇ ಮನೆ ಮಾಡಿ ಕೊಂಡಿರಬೇಕು!! ಅಷ್ಟು ಪರಿಣಾಮಕಾರಿಯಾಗಿ ಪರಿಸರ ಅದರ ಜೊತೆಗಿನ ತಮ್ಮ ಅನುಭವವನ್ನು ಪನ್ನೀರ ಪಾನಕದಂತೆ ವಿವರಿಸಿದ್ದಾರೆ ಮಂಜುನಾಥ್ ಚಾಂದ್. ನಾವೇ ಸೌಪರ್ಣಿಕಾ ನದಿಯ ಬೆಳದಿಂಗಳಲ್ಲಿ ಮಿಂದ ಅನುಭವ. ಈ ಪರಿಯ ಪರಿಸರ ಮಿಳಿತಗೊಂಡು ಅಮಿತಾನುಭವ ನೀಡಿದ ಕೃತಿ ಮತ್ತೊಂದಿಲ್ಲವೆಂದೇ ಹೇಳಬೇಕು. ಕನ್ನಡ ಸಾಹಿತ್ಯಲೋಕದ ಹೊಸ ಮೈಲುಗಲ್ಲು. ಇಂಥಹ ಅಪ್ಪಟವಾದ ಅಪರಂಜಿ ಕತೆ ಹೆಣೆದ ಮಂಜುನಾಥ್ ಚಾಂದ್ ನಮ್ಮ ತ್ರಾಸಿಯವರು ಎಂಬುದೇ ನಮಗೆ ಹೆಮ್ಮೆ.
ಕೆಲವು ಲೇಖಕರ ಕತೆ ಕಾದಂಬರಿಗಳಿಗೆ ಒಂದು ಸ್ಥಾಯಿ ಭಾವವಿದೆ ಎಂಬುದು ನನ್ನ ಸ್ವ ಅನಿಸಿಕೆ. ವಿಶಾದವೇ ಜೋಗಿ ಬರೆಹದ ಸ್ಥಾಯಿ ಭಾವ. ಹುಡುಕಾಟವೇ ತೇಜಸ್ವಿ ಬರೆಹದ ಸ್ಥಾಯಿ ಭಾವ. ಹೊಸ ಬರವಸೆಯ ಸೆಳಕೇ ಮಂಜುನಾಥ್ ಅವರ ಸ್ಥಾಯಿ ಭಾವ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ಅನೇಕ ಹೊಸತುಗಳ ಹೂರಣ :-
ಹೊಸ ಹೊಸ ಭಾಷಾ ಪ್ರಯೋಗಗಳು ಕಚಗುಳಿ ಇಕ್ಕಿದವು. ಅವುಗಳಲ್ಲಿ ಕೆಲವು... 1. "ಸೂರ್ಯ ಕಂದೀಲು ಗುಡ್ಡವನ್ನೂ, ಸೌಪರ್ಣಿಕಾ ನದಿಯನ್ನೂ ದಾಟಿಕೊಂಡು ಕಡಲ ಹೊಟ್ಟೆ ಸೇರಿಕೊಳ್ಳುವ ದಾವಂತದಲ್ಲಿತ್ತು." 2. "ಆ ಮಧ್ಯರಾತ್ರಿಯ ಸರಿ ಹೊತ್ತಿನಲ್ಲಿ ಹೊತ್ತಿಕೊಂಡ ಚಿಮಣಿ ದೀಪದ ಬೆಳಕು ಆ ಕೊಪ್ಪದ ತುಂಬಾ ಚೆಲ್ಲಾಡಲು ಒದ್ದಾಟ ನೆಡೆಸಿ ಒಂದಪಾ ಹಾಗೇ ತಟಸ್ಥವಾಯಿತು. 3. "ಒಂದಿದ್ದ ಸೂಡಿ ಎರಡಾಗಿ ಮೂರಾಗಿ ಆರಾಗುವ ಹೊತ್ತಿಗೆ ಆ ಪುಟ್ಟ ತೋಪಿನ ಕೆರೆಯ ನೀರು ಕೆಂಡದ ಓಕಳಿ ತುಂಬಿಕೊಂಡಂತೆ ಕಾಣುತ್ತಿತ್ತು." ಹೀಗೆ ಕವಿತೆಗಳಂತೆ ಪೋಣಿಸಿಕೊಟ್ಟ ಕಾಡಿನ ಹಾರದಂತೆ, ಒಂದೊಳ್ಳೆ ಪ್ರವಾಸ ಮಾಡಿದಂತೆ ಸೌಪರ್ಣಿಕೆಯಲ್ಲಿ ತೇಲಿ ಬರುವ ಬೆಳದಿಂಗಳಂತೆ ಪದಗಳನ್ನು ಬಳಸಲಾಗಿದೆ.
ಗಿರಿಜಾ ಹೆಗೆಡೆಯವರು ಗಂಡ ತೀರಿ ಹೋದಾಗ ಅನುಭವಿಸುವ ಗಾಢವಾದ ವಿಷಾದವನ್ನೂ ವಿಶಿಷ್ಟವಾಗಿ ಪೋಣಿಸಿಕೊಟ್ಟ ಪರಿ ಅನನ್ಯ. ಅನುಭವಿಸಿ ಬರೆದಂತಹ ವಿಷಾದ ಯೋಗ. ಹೀಗಿದೆ ಒಕ್ಕಣೆ "ಏಕಾಏಕಿ ಇವೆಲ್ಲಾ ನಡೆದು ಹೋದವು. ಬದುಕಿನ ರೀತಿಯೇ ಬದಲಾಗಿ ಹೋಯಿತು. ಆಸೆ, ಜಿಹಾಸೆ, ಮುನಿಸು, ಸ್ಪರ್ಶ ಎಲ್ಲಕ್ಕೂ ಅರ್ಥವಿತ್ತು. ಬದುಕಿನ ಕಿಂಡಿಯಲ್ಲಿ ಸಹ್ಯ ಕ್ಷಣಗಳಿದ್ದವು. ಮನಸ್ಸು ಎಲ್ಲವನ್ನೂ ಆಸ್ವಾದಿಸುವ ಶಕ್ತಿಯನ್ನು ಹೊಂದಿತ್ತು. ಈಗ ಬರೀ ಏಕಾಂತ. ಒಳಗಿನ ಧಗ್ಧ ಭಾವಗಳಿಗೆ ಅಂಕುಶವಿಡುವುದು ಅತ್ಯಂತ ಯಾತನಾಮಯ. ಹೊರಗೆ ಬೆಳದಿಂಗಳು ಹಾಲು ಸುರಿಯುತ್ತಿದೆ. ಆದರೆ ಇಣುಕಿ ನೋಡಬೇಕು ಅನಿಸುವುದಿಲ್ಲ. ಅದು ಈ ಮನಸ್ಸಿನ ನೋಟಕ್ಕೆ ಕಾಂತಿಹೀನ ಅನಿಸುತ್ತಿದೆ.....ಸಹಸ್ರಾತಿ ಸಹಸ್ರ ನಕ್ಷತ್ರಗಳ ಚಾಪೆಗೆ ಸೌಪರ್ಣಿಕಾ ನದಿ ಕನ್ನಡಿ ಹಿಡಿದಿರುವುದನ್ನು ಮನಸ್ಸು ಗ್ರಹಿಸುವುದೇ ಇಲ್ಲ! ಅತ್ಯಂತ ನವಿರಾಗಿ ವಿಶಾದವನ್ನು ಅಕ್ಷರಕ್ಕೆ ಪೋಣಿಸಿದ ಪರಿ ಅಚ್ಚರಿ.
ತನಿಯಾ ಎಂಬ ಅಮಾಯಕ:-
ಕತೆಯುದ್ದಕ್ಕೂ ಹಬ್ಬಿನಿಂತ ತನಿಯಾ ಅವನ ಅಮಾಯಕತೆ, ಅವನ ಜೀವನ ಪ್ರೀತಿ, ನಿಷ್ಠೆ ಗಮನ ಸೆಳೆಯುತ್ತದೆ. ಆತ ಗಿರಿಜಾ ಹೆಗಡೆ ಅವರಲ್ಲಿ ಕೇಳ್ತಾನೆ "ಅಲ್ಲಾ ಒಡ್ತಿಯರೆ, ಪ್ಯಾಪರ್ ಅಂದ್ರೆ ಎಂತ? ಸತಂತ್ರ ಅಂದ್ರೆ ಎಂತ? ಗಾಂಧಿ ಎಂದ್ರೆ ಯಾರ್? ಹೀಗೆ ಅವನ ಅಮಾಯಕತೆ ಕತೆಯುದ್ದಕ್ಕೂ ಸಾಗುತ್ತದೆ.
ಕತೆಯನ್ನೂ ಎಲ್ಲೂ ಎಳೆಯದೆ, ತತ್ವ ಸಿದ್ಧಾಂತಗಳ ಭಾರವನ್ನು ಹೊರಿಸದೇ ನೇರವಾಗಿ ಕತೆ ಹೆಣೆದ ಮಂಜುನಾಥ್ ಚಾಂದ್ ಯಶಸ್ವಿಯಾಗಿದ್ದಾರೆ. ಪುಸ್ತಕವನ್ನು ನಿಮ್ಮ ಜೋಳಿಗೆಗೆ ಹಾಕಿದ್ದೇನೆ. ನಿಮಗೇನನ್ನಿಸಿತೆಂದು ಓದಿ ಹೇಳಿ.