Wednesday, October 21, 2020

ಹಾರೋ ಹಾತೆಗಳ ಹಿಂದೆ ಬಿದ್ದು.

ಇಂದು ನಾ ನಿಮ್ಮನ್ನು ನನ್ನ ಬಾಲ್ಯದ ಗೆಳೆಯನನ್ನು ಭೇಟಿ ಮಾಡಿಸುವೆ. ನನ್ನದಲ್ಲದೆ ನಿಮ್ಮ ಬಾಲ್ಯ ಕಾಲದ ಸ್ನೇಹಿತನೂ ಆಗಿರಬಹುದು. ಸಾವಿರ ಕಣ್ಣುಗಳು ದುಂಡಗಿನ ತಲೆ, ಪಾರದರ್ಶಕ ರೆಕ್ಕೆ! ಸಣ್ಣ ಆಂಟೆನಾ. ಹೀಗೆ ಅತಿ ವಿಶಿಷ್ಟ್ಯ ವಾದ ರಚನೆಯನ್ನು ಹೊಂದಿದಾತ. ಆತನೇ ನಮ್ಮ ನಿಮ್ಮೆಲ್ಲರ ಡ್ರಾಗನ್ ಪ್ಲೈ, ಹಾತೆ, ಏರೋಪ್ಲೇನ್ ಚಿಟ್ಟೆ.
ಆಟಿಕೆಗಳಿಲ್ಲದ ಕಾಲದಲ್ಲಿ ಇವನ್ನು ಆಟಿಕೆಯಂತೆ ಬಳಸುತ್ತಿದ್ದೆವು ನಾವು. ನಮ್ಮ ಮನೆಯ ಬಾವಿ ಸುತ್ತಲೂ, ಶಾಲೆಯ ಬಯಲಿನಲಿ ಕತ್ತರಿಸಿ ತೆಗೆದ ಗಿಡಗಳ ಸಂದುಗಳಿಂದ ಇವು ದುತ್ತನೆ ಪ್ರತ್ಯಕ್ಷವಾಗಿ ಇಷ್ಟು ಹೊತ್ತು ಎಲ್ಲಿದ್ದವು? ಎಂಬ ಜಟಿಲ ಪ್ರಶ್ನೆಯೊಂದನ್ನು ಮೂಡುವಂತೆ ಮಾಡುತ್ತಿದ್ದವು. ಕೆರೆಗಳ ಅಂಚಿನಲಿ, ಹೊಳೆಯ ಸುತ್ತಲಿನಲಿ ಧ್ಯಾನಕ್ಕೆ ಕೂರುತ್ತವೆ! ಜೊತೆಗೆ ತಮ್ಮ ಉದ್ದನೆಯ ಬಾಲವನ್ನು ನೀರಿಗೆ ತಾಕಿಸುತ್ತಾ ಓಡುವುದು ಏಕೆಂದು ಇತ್ತೀಚಿನವರೆಗೂ, ಮಳೆ ಕಾಡು ಸಂಶೋಧನಾಲಯದ ಅಜಯ್ ಗಿರಿ ಸಣ್ಣ ಪುಸ್ತಕವೊಂದು ನನಗೆ ನೀಡುವವರಗೂ ಗೊತ್ತಿರಲಿಲ್ಲ. ಹೆಲಿಕಾಪ್ಟರ್ನಂತೆ ಹಾರಾಡುತ್ತಾ ಗಾಳಿಯಲ್ಲೇ ದೇಹವನ್ನು ನಿಯಂತ್ರಿಸುತ್ತಾ ನೋಡುವುದೇ ಒಂದು ಚೆಂದ.
ಕಾಡಿನ ನಡುವಿದ್ದ ದೊಡ್ಡಮ್ಮನ ಮನೆಗೆ ಹೋದಾಗ ಆಡಲು ಯಾರೂ ಇಲ್ಲದಾಗ ಈ ಡ್ರಾಗನ್ ಪ್ಲೈಗಳ ದೋಸ್ತಿ ಮಾಡುತ್ತಿದ್ದೆ. ಇವುಗಳಲ್ಲಿ ಅರಶಿನ ಮತ್ತು ಕೆಂಪು ನನ್ನ ಅಚ್ಚು ಮೆಚ್ಚಿನ ಬಣ್ಣದವು. ಹಂಬಲಿಸಿ ಹಂಬಲಿಸಿಯೇ ಅವುಗಳ ಬೆನ್ನು ಹತ್ತುತಿದ್ದೆ. ಹಿಂದಿನಿಂದ ನಿಧಾನಕ್ಕೆ ಹೋಗಿ ಬಾಲ ಹಿಡಿದಿಬಿಡುತ್ತಿದ್ದೆ. ಅದರ ಬಾಲಕ್ಕೆ ಹಗ್ಗ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುತ್ತಿದ್ದೆ. ನಮ್ಮಿಂದ ತಪ್ಪಿಸಿಕೊಳ್ಳಲು ಅದು ವಿಶ್ವ ಪ್ರಯತ್ನವನ್ನೇ ಮಾಡುತ್ತದೆ. ಯಾವುದೋ ಮರದ ಟೊಂಗೆಯ ಮೇಲೆ ಹೋಗಿ ಕುಳಿತು ಬಿಡುತ್ತದೆ. ಜಪ್ಪಯ್ಯ ಅಂದರೂ ಕೆಳಗಿಳಿದು ಬರುವುದಿಲ್ಲ. ಜಗ್ಗಿ ಜಗ್ಗಿ ಎಳೆದು ಕೆಳಗಿಳಿಸಿ, ಸಂಜೆಯಾದೊಡನೆ ಅದನ್ನೊಂದು ಪೆಟ್ಟಿಗೆಯಲಿ ತುಂಬಿಡುತ್ತಿದ್ದೆ. ದೊಡ್ಡಮ್ಮ ನಮಗೆ ಗೊತ್ತಾಗದಂತೆ ಅದರ ದಾರ ಬಿಚ್ಚಿ ಹಾರಿ ಬಿಡುತ್ತಿದ್ದರು. ರಾತ್ರಿಯೇ ಹಾರಿ ಹೋಯಿತೆಂದು ಸುಳ್ಳು ಹೇಳುತ್ತಿದ್ದರು. ನಾವು ಇನ್ನೊಂದು ಹಾರೋ ಹಾತೆ ಬೆನ್ನು ಬೀಳುತ್ತಿದ್ದೆವು. ಮೈಸೂರಿನ ಕಡೆಯವರು ಅದರ ರೆಕ್ಕೆಯನ್ನು ಇಟ್ಟುಕೊಂಡರೆ ಹಣ ಸಿಗುತ್ತದೆಂದು ನಂಬಿದ್ದರೆಂದು ತಮ್ಮ ಅನುಭವನ್ನು ತೇಜಸ್ವಿ ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಡ್ರಾಗನ್ ಪ್ಲೈಗಳ ರೆಕ್ಕೆಗಾಗಿ ಅವುಗಳ ಹಿಂದೆ ಅಲೆದು, ಅವುಗಳು ಸಿಕ್ಕದೆ ತಪ್ಪಿಸಿಕೊಂಡು ಹಾರಿ ಬಿಡುತ್ತಿದ್ದವು ಎಂದಿದ್ದಾರೆ. ***
ಮಿಲಿಯಗಟ್ಟಲೆ ವರ್ಷಗಳಿಂದ ಹಾರುತ್ತಿರುವ ಈ ಜೀವಿ, ಸಹಸ್ರ ಸಹಸ್ರ ವರ್ಷಗಳಾಚೆ ದೈತ್ಯನಿದ್ದವನು ಕುಬ್ಜನಾಗಿ ಇಲ್ಲಿಯತನಕ ಸಾಗಿ ಬಂದುದು ಅನಂತ ವಿಸ್ಮಯ. ಭ್ರಮೆ ಏನೋ ಎನ್ನಿಸುವ ಸಂಖ್ಯೆ. ನಮಗಿಂತಲೂ ಹಿರಿಯ. ಭೂಮಿಯ ವಿವಿಧ ವಿಪರೀತ ಪರಿಸ್ಥಿತಿಗಳನ್ನು, ವಿಪ್ಲವಗಳನ್ನು ಗೆದ್ದು, ಅವನ್ನೆಲ್ಲಾ ತನ್ನ ಜಿನೋಮ್ ಒಳಗೆ ಕಟ್ಟಿಕೊಂಡು 21 ನೆಯ ಶತಮಾನದವರೆಗೂ ಬೆಳೆದ ಪರಿ ಅಚ್ಚರಿ! ವಿಕಾಸದ ಏಣಿಯಲ್ಲಿ ಜೀವಿಯ ಅನುವಂಶೀಯತೆಯಲ್ಲಾದ ಬದಲಾವಣೆಗಳು ಸಂಶೋಧನಾರ್ಹ. 75 ಮೀಟರ್ ಉದ್ದಕ್ಕೆ ಬೆಳೆಯುತ್ತಿದ್ದ ಇವುಗಳ ಅಚ್ಚು ಸಿಕ್ಕ ಮೇಲೆ ವಿಜ್ಞಾನಿಗಳಿಗಾದ ಅಚ್ಚರಿ ಅಷ್ಟಿಷ್ಟಲ್ಲ!! ಜೊತೆಗೆ ಇವುಗಳ ಸ್ವಯಂ ಭಕ್ಷಕ ಗುಣ. ಈ ಹಾರೋ ಹಾತೆಗಳು ಮರಿ ಇಡುವುದು ನೀರಿನಲ್ಲಿ. ಇವುಳ ಮರಿಯನ್ನು ನಿಂಫ್ ಎನ್ನುತ್ತಾರೆ. ನಿಂಫ್ಗಳು ನೀರಿನಲ್ಲೇ ಸುಮಾರು 4 ವರ್ಷಗಳ ಕಾಲ ಬದುಕಿ ಹೊರ ಬಂದು ಹಾತೆಗಳಾಗುತ್ತವೆ. ಚಿಟ್ಟೆಗಳಂತೆ ಇವುಗಳ ಜೀವನವು ಅನೇಕ ಹಂತಗಳನ್ನು ಒಳಗೊಂಡಿದ್ದರೂ ಇವು ಚಿಟ್ಟೆಗಳಲ್ಲ! ಹಾತೆಗಳಾಗುವ ರೂಪ ಪರಿವರ್ತನೆಯ ಗುಟ್ಟನ್ನು ತಮ್ಮ ಮೆದುಳಿನೊಳಗೆ ಅಡಗಿಸಿಟ್ಟುಕೊಂಡಿರುತ್ತವೆ, ಜೊತೆಗೆ ಯಾವುದೇ ಗಡಿಯಾರವಿಲ್ಲದೆಯೇ ಕಾಲದ ಗಣತಿಯೂ! ಇವು ನೀರಿನಿಂದ ಹೊರಬಂದು ಚಿಟ್ಟೆಯಾಗುವುದನ್ನು ಒಮ್ಮೆ ನೋಡಬೇಕು. ಮತ್ತೊಂದು ವಿಶಿಷ್ಟ್ಯ ಜೀವಿಯೊಂದಿಗೆ ಮತ್ತೊಮ್ಮೆ ಭೇಟಿಯಾಗೋಣ. ಅಲ್ಲಿಯವರೆಗೆ ಅಲ್ವಿದಾ.

Tuesday, October 13, 2020

ಸೈಕಲ್ ಸಾಹಸದ ಸುಮಧುರ ನೆನಪು....


ಮಗನಿಗೊಂದು ಸೈಕಲ್ ಕೊಳ್ಳುವಾಗ ನನ್ನ ಸೈಕಲ್ ಪುರಾಣದ ನೆನಪು ಬಿಚ್ಚಿಕೊಳ್ಳ ತೊಡಗಿತು. ಅಂದು ನಾವೊಂದು 8 ಜನ ಹರಯದ ಹುರುಪಿನಲಿ ತೇಲುತ್ತಿರುವವರು, ಹುಚ್ಚು ಕನಸು ಹತ್ತಿಸಿಕೊಂಡು, ಕಾರಿಗೆ ಕೊಡಲು ಕಾಸಿಲ್ಲದೆ, ಕಾಲನ್ನೆ ನಂಬಿ ಸೈಕಲ್ಲನಲ್ಲಿ ಸವಾರಿ ಹೊರಡಲು ತಯಾರಾದೆವು. ಸಿದ್ದಾಪುರದಿಂದ ಹೊರಟು ಮಾಸ್ತಿಕಟ್ಟೆ ತಲುಪಿ ಯಡೂರು ಮಾರ್ಗವಾಗಿ ಮಾಣಿ ಅಣೆಕಟ್ಟೆಯನ್ನು ದಾಟಿ ಮೇಲುಸುಂಕದ ದುರ್ಗಾ ಪರಮೇಶ್ವರಿ ದೇವಾಲಯವನ್ನು ಹಾದು ಹುಲಿಕಲ್ ತಲುಪಿ ವಾಪಾಸು ಸಿದ್ದಾಪುರ ತಲುಪುವುದು ನಮ್ಮ ಯೋಜನೆಯಾಗಿತ್ತು.






ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ನಮ್ಮ ಕ್ರಿಕೆಟ್ ತಂಡದ ಸದಸ್ಯರೆಲ್ಲಾ ಸೇರಿ ನಾಳೆ ದಿನ ಹೊರಡುವುದೆಂದು ತೀರ್ಮಾನ ಕೈಗೊಂಡೆವು. ಯಾರ ಕೈಲೂ ಬಿಡಿಗಾಸಿರಲಿಲ್ಲ. ಕೆಲವರ ಬಳಿ ಸೈಕಲ್ಲು ಇರಲಿಲ್ಲ. ನನ್ನ ಬಳಿ ಆಗಿನ ಕಾಲದಲ್ಲಿ ವಿಶೇಷವಾದ  HERO MTB ಎಂಬ ನೀಲಿ ಬಣ್ಣದ ಸೈಕಲ್ಲಿತ್ತು. ಸೈಕಲ್ ಇರದವರು ಬಾಡಿಗೆಗೆ ಕೊಂಡರು.  1998ರ ಸುಮಾರಿಗೆ ಅತ್ಯಂತ ಪ್ರಸಿದ್ದವಾದ ತೆಂಗಿನ ಕಟ್ಟೆ ಹೋಟೆಲಿನಲ್ಲಿ ಪಲಾವು ಮಾಡಿಸಿ 8 ಜನರಿಗೆ 20 ಪ್ಯಾಕೆಟ್ಸ್ ಕಟ್ಟಿಸಿಕೊಂಡೆವು.



ಜಾಂಟಿ ಕಾಲಿನ ಸುಧೀರ, ನೀತು ಭಂಡಾರಿ, ಸಂದೀಪ, ಗುರುರಾಜ, ಪ್ರವೀಣ, ಪ್ರಕಾಶ, ಗುರು ಮತ್ತು ನಾನು ಸಕಲ ಸಿದ್ದತೆಯೊಂದಿಗೆ, ಒಂದು  ಚೀಲದಲ್ಲಿ ಡಬ್ಬಿಗೆ ಮೊಸರು ಬಜ್ಜಿಯನ್ನು ಇನ್ನೊಂದು ದೊಡ್ಡ ಪೆಟ್ಟಿಗೆಯಲಿ ಪಲಾವ್ ಕಟ್ಟಿಕೊಂಡೆವು. ಹೊರಡುವ ಉಮೇದಿನಲ್ಲಿ ನಾನೆ ಮೊದಲಿಗೆ ಮೊಸರು ಬಜ್ಜಿಯ ದೊಡ್ಡ ಡಬ್ಬಿ ಹೊತ್ತೆ.
ಸಿದ್ದಾಪುರದಿಂದ ಹೊಸಂಗಡಿ ಹಾದು ಮೇಲ್ಮುಖ ಪ್ರಯಾಣ ಪ್ರಾರಂಭವಾಗಿತ್ತು. ಹೊಸಂಗಡಿಯ ನಂತರ ರಸ್ತೆ ಘಟ್ಟದ ಏರು ನಮ್ಮ ಉಸ್ಸಾಹಕ್ಕೇನೂ ಭಂಗ ತರಿಸಲಿಲ್ಲ! ಮೊಸರು ಬಜ್ಜಿ ಹೊತ್ತು ಒದ್ದಾಡುತ್ತಿದ್ದ ನನ್ನ ನೋಡಿ ಕನಿಕರಗೊಂಡು ಯಾರೋ ಒಬ್ಬರು ಮೊಸರು ಬಜ್ಜಿ ಇಸಗೊಂಡರು. ತಿರುವು ಮುರುವು ದಾರಿಯಲ್ಲಿ ಸೈಕಲ್ ಹೊಡೆದು ಅಭ್ಯಾಸವಿಲ್ಲದ ಅನೇಕರು ಒದ್ದಾಡತೊಡಗಿದರು. ಮಳೆಗಾಲ ಪ್ರಾರಂಭವಾಗುವ ಹೊತ್ತು ಹಾಗಾಗಿ ವಾತಾವರಣ ಅಹ್ಲಾದಕರವಾಗಿತ್ತು. ಅಂತು ಇಂತೂ ಘಾಟಿ ಇಡೀ ತುಳಿದು ತುಳಿದು ಸುಸ್ತು ಹೊಡೆದಾಗಲೇ ಚಂಡಿಕಾಂಬ ದೇವಾಲಯ ಬಂದಿತ್ತು. ದೇವಿಗೆ ನಮಸ್ಕರಿಸಿ ಅವಲಕ್ಕಿ ಪಂಚಕಜ್ಜಾಯ ಕೊಂಡು ಒಂದಿಷ್ಟು ತಿಂದು ನೀರು ಕುಡಿದೆವು. ಎಂಟು ಗಂಟೆಗೆ ಹೊರಟ ನಮ್ಮ ತಂಡ 12 ಗಂಟೆಗೆಲ್ಲಾ ಮಾಸ್ತಿಕಟ್ಟೆಯಲ್ಲಿದ್ದೆವು. ಮಾಸ್ತಿಕಟ್ಟೆಯಲ್ಲಿ ಮಾಣಿ ಅಣೆಕಟ್ಟೆಗೆ ಹೋಗುವ ಅನುಮತಿಯನ್ನು ಪಡೆದುಕೊಂಡೆವು. ಮಾಣಿ ಅಂದು ನಮಗೆ ಸಿಕ್ಕಿದ ಅನುಮತಿ ಇಂದು ಸಿಗುವುದು ಬಹಳಾ ಕಷ್ಟ. ಇಂದು ಅನುಮತಿ ಇದ್ದರೂ ಬಿಡಲು ಹಿಂದೆ ಮುಂದೆ ನೋಡುವರು. 


ನಾನಂತೂ ಮಾಸ್ತಿಕಟ್ಟೆ ತಲುಪುವಷ್ಟರಲ್ಲಿ ಹೈರಾಣಾಗಿದ್ದೆ. ಇನ್ನು ತುಳಿಯಲು ಸಾಧ್ಯವಿಲ್ಲ ಎನ್ನುವಾಗಲೇ ಎದುರಿನಿಂದ ವಿಪರೀತ ವೇಗದಲ್ಲಿ ಲಾರಿಯೊಂದು ಬಂದಿತು. ನಮ್ಮ ತಂಡದ ನಿತ್ತು ತನ್ನ ಸೈಕಲ್ನ್ನು ನಡು ರಸ್ತೆಯಲ್ಲಿ ಕವುಚಿಕೊಂಡು ಬಿದ್ದ. ಇನ್ನೇನು ಲಾರಿ ನಿತ್ತುವಿನ ಮೈಮೇಲೆ ಹರಿದು ಚಟ್ನಿಯಾಗುದರಲ್ಲಿದ್ದ. ನಮಗೆಲ್ಲಾ ಆತಂಕ. ಜೋರಾಗಿ ಕೂಗಿ ಕೊಂಡೆವು. ಆತ ತಂದಿದ್ದು ಬಾಡಿಗೆ ಸೈಕಲ್. ಸೈಕಲ್ ಅಂಗಡಿಯವನಿಗೆ ಏನು ಹೇಳುವುದೆಂಬ ಮತ್ತೊಂದು ಚಿಂತೆ ಹತ್ತಿತು. ಲಾರಿಯಲ್ಲಿದ್ದ ಡ್ರೈವರ್ ಕೊನೆಗಳಿಗೆಯಲ್ಲಿ ಲಾರಿಯ ಬಿರಿಕುಂಟಿಯನ್ನು(ಬ್ರೇಕ್) ಬಿಗಿ ಹಿಡಿದು ನಮ್ಮ ಗೆಳೆಯನ ಜೀವ ಉಳಿಸಿದ.
ಮಾಸ್ತಿಕಟ್ಟೆ ದಾಟಿದ ಮೇಲೆ ಪಲಾವಿನ ಪರಿಮಳ ತಡೆಯಲಾಗದೆ ಪ್ಯಾಕೆಟ್ ಬಿಚ್ಚಿದೆವು. ಒಂದೊಂದರಲ್ಲಿ ಸಣ್ಣ ಮೊರ ತುಂಬುವಷ್ಟು ಪಲಾವು ಇತ್ತು. ನಾನು ಎರಡು ಪ್ಯಾಕೆಟ್ನ್ನು ಮಟಾಷ್ ಮಾಡಿದೆ!!! ಎಲ್ಲರಿಗೂ ಅಚ್ಚರಿಯೋ ಅಚ್ಚರಿ. 'ಕಂಡ್ರ ಮಾಣಿ ಉಂಡ್ರ ಗೋಣಿ' ಅಂದ ಗೆಳೆಯ ಸಂದೀಪ. ಪಲಾವ್ ತಿಂದ ಹೊಡೆತ ತಾಳಲಾರದೆ 'ನಾ ಮುಂದೆ ಬತ್ತಿಲ್ಲೆ' ಎಂಬ ವರಾತ ಶುರುವಿಟ್ಟೆ. ಜೊತೆಗೆ ಎಲ್ಲರಿಗಿಂತ ಹಿಂದುಳಿದೆ. ಆದರೂ ಗೆಳೆಯ ಸಂದೀಪ ಬಿಡದೇ ನನ್ನ ಯಡೂರಿನ ಮಾಣಿ ಡ್ಯಾಂವರೆಗೆ ಕೊಂಡೊಯ್ದ.

ಹೀಗಿದೆ ಡ್ಯಾಂ..


ದಾರಿಯುದ್ದಕ್ಕೂ ಅನೇಕರು ನಮ್ಮನ್ನು ನೋಡಿ ಅಚ್ಚರಿಗೊಂಡರು. ಅಂದಿನ ಪರಿಸರವಂತೂ ಅತ್ಯದ್ಭುತವಾಗಿತ್ತು. ಜನಸಂಖ್ಯೆಯಂತೂ ವಿರಳಾತಿ ವಿರಳ. ಮಾಸ್ತಿಕಟ್ಟೆಯಲ್ಲಿ ಶಬರಿ ಎಂಬ ಹೋಟೆಲ್ ಬಿಟ್ಟರೆ ಬೇರೆ ಗತಿ ಇರಲಿಲ್ಲ.
 ಮೋಡಗಳೆಲ್ಲಾ ನಮ್ಮ ನೆತ್ತಿಯ ಮೇಲೇ ಚಪ್ಪರ ಹಾಸಿತ್ತು. ಡ್ಯಾಂ ತಲಪುವಷ್ಟರಲ್ಲಿ ನಮಗೆಲ್ಲಾ ಮಳೆಯ ಮಾಘ ಸ್ನಾನವಾಗಿತ್ತು. ಮಂಜು ಮುಸುಕಿದ ಹಾದಿ. ಅಲ್ಲಿನ ತಂಪು ಹವೆಯ ಆಹ್ಲಾದಕರ ವಾತಾವರಣ. ಸೈಕಲ್ ತುಳಿದುದರಿಂದ ಮೈ ಕೂಡ ಬೆಚ್ಚಗಿತ್ತು. ಯಡೂರಿನಿಂದ ಒಳ ಹೊಕ್ಕ ರಸ್ತೆ ಎತ್ತರೆತ್ತರಕ್ಕೆರುತ್ತಾ ಡ್ಯಾಂನ ನೆತ್ತಿಗೆ ರಸ್ತೆ ಬಂದು ತಲುಪುತ್ತದೆ. ಅಲ್ಲಿಂದ ಅನೇಕ ಕವಲುಗಳ ಮೂಲಕ ರಸ್ತೆ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತದೆ. ಮೇಲುಸುಂಕವೆಂಬಲ್ಲಿನ ದೇವಸ್ಥಾನಕ್ಕೂ ಒಂದು ರಸ್ತೆ ನಿಮ್ಮನ್ನು ಕರೆದೊಯ್ಯುತ್ತದೆ. ಒಂದು ರಸ್ತೆಯು ವರಾಹಿ ಮೂಲ ಹರಿವಿನ ಜಾಗವಾದ ಕುಂಚಿಕಲ್ಲು ಅಬ್ಬಿಗೊಯ್ಯುತ್ತದೆ. ಎಲ್ಲಾ ಕಡೆ ಓಡಾಡಲು ಉತ್ತಮ ರಸ್ತೆ ನಿರ್ಮಿಸಿದ್ದಾರೆ. ಒಂಟಿ ಕಾವಲುಗಾರರು ತಮ್ಮ ಮನೆ ಖರ್ಚಿಗೂ ಹಾಗೂ ಬೇಸರ ಕಳೆಯಲು ಅಲ್ಲಲ್ಲಿ ತರಕಾರಿ ಬೆಳೆಯುತ್ತಾರೆ. ಡ್ಯಾಂನ ಇಕ್ಕೆಲಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ದೊಡ್ಡ ತೂಬುಗಳನ್ನು ಮುಚ್ಚಲು ತೂಬು ನಿಯಂತ್ರಕಗಳಿವೆ. ಮಳೆ ಶುರುವಾದದಷ್ಟೇ ಆದ್ದರಿಂದ ಅಲ್ಲಲ್ಲಿ ಸಣ್ಣ ದ್ವೀಪಗಳಂತಾಗಿ ಮಂಜು ಅವನ್ನು ಸವರಿ ಹೋಗುವುದನ್ನು ಮೌನವಾಗಿ ನೋಡುತ್ತಾ ನಿಂತೆವು.
ನಮ್ಮ ಗ್ರಹಚಾರಕ್ಕೆ ಡ್ಯಾಂ ಪ್ರವೇಶಿಸುತ್ತಲೆ ನಮ್ಮ ಪ್ರಕಾಶನ ಸೈಕಲ್ಲು ಮುಷ್ಕರ ಹೂಡಿತು, ಪಂಕ್ಚರ್ ಆಗಬೇಕೆ? ಪಂಕ್ಚರ್ ಸಲಕರಣೆ ಇಲ್ಲದ್ದರಿಂದ ಬರಿ ರಿಮ್ನಲ್ಲೇ ತುಳಿಯಬೇಕಾದ ಪರಿಸ್ಥಿತಿ!

ಅಂದು ನನ್ನ ಬಳಿ ಕೊಡಾಕ್ ರೀಲ್ ಕ್ಯಾಮರವೊಂದಿತ್ತು. ಅದರ ಹೊಟ್ಟೆಯನ್ನು ಕೊಡಾಕ್ ರೀಲಿನಿಂದ ತುಂಬಿಸಿದ್ದೆ. ಅದರಲ್ಲೇ ಮಾಣಿ ಅಣೆಕಟ್ಟಿನ ಸುತ್ತಮುತ್ತಲಿನ ಸೌಂದರ್ಯವನ್ನು ಸೆರೆಹಿಡಿದೆ. ಗೆಳೆಯರ ಪೋಟೊ ಶೂಟ್ ನಿರಂತವಾಗಿ ನಡೆಯುತ್ತಿತ್ತು. ನಡುಗುಡ್ಡೆಗಳ ಚಿತ್ರಗಳು ಒಂದೊಂದಾಗಿ ಕ್ಯಾಮರದ ಹೊಟ್ಟೆ ಸೇರುತ್ತಲೇ ರೀಲು ಖಾಲಿ ಮಾಡ್ಬೇಡ್ರೊ ಎಂಬ ಗೆಳೆಯನ ಬೊಬ್ಬೆ ಕೇಳಿಸಿತು.
 ಮಾಣಿಯಿಂದ ನೀರು ಪಿಕಪ್ ಡ್ಯಾಂಗೆ ಬಂದು ಅಲ್ಲಿಂದ ನೇರವಾಗಿ ಹೊಸಂಗಡಿ ಸಮೀಪ ದೊಡ್ಡ ನಾಲ್ಕು ಪೈಪುಗಳಲ್ಲಿ ಹರಿದು ಬರುವುದೆಂದು ಅಲ್ಲಿನ ಕಾವಲುಗಾರ  ವಿವರಿಸಿದ. ಹೊಸಂಗಡಿಗೆ ಹೋದಾಗ ಅದರ ಭೀಮಕಾಯವನ್ನು ಕಂಡು ಬೆರಗಾಗಿದ್ದೆ.

ಬೆಳಕಿನ ಕತೆ ಹೇಳುವ ಕತ್ತಲೆ ಮನೆಗಳು-




ಮಾಣಿ ಡ್ಯಾಂ ನೋಡಿಕೊಂಡು ಪಿಕಪ್ ಡ್ಯಾಂನ್ನು ಸವರಿಕೊಂಡು ಹುಲಿಕಲ್ ಮೂಲಕ ಹೊರ ಬಿದ್ದೆವು. ಡ್ಯಾಂನ ಅನೇಕ ಕಡೆ ಈಗಲೂ ಮನೆ ಕೆಡವಿದ, ತೆಂಗಿನ ಮರಗಳ ಕುರುಹು ಈಗಲೂ ಇದೆ. ಹಡಿಲು ಬಿದ್ದ ಗದ್ದೆಗಳು ನಿಮಗೆ ದರ್ಶನ ಕೊಟ್ಟಾಗ ಕರಳು ಕಿತ್ತು ಬರುವುದು. ಜೀವ ಒಸರುತ್ತಿದ್ದ ಕಣಿವೆ ಈಗ ನಿರ್ಜನ ಬೆಂಗಾಡು. ಹೀಗೆ ಮುಳುಗಡೆ ಪ್ರದೇಶಗಳ ಕತೆ ಹೇಳುತ್ತಾ ಹೋದರೆ ಅದೊಂದೇ ವಿಶಿಷ್ಟ ದಸ್ತಾವೇಜಾಗುವುದು. ಅಭಿವೃದ್ದಿಯ ಅಡ್ಡ ಪರಿಣಾಮ ನೋಡಲೊಮ್ಮೆ ನೀವಿಲ್ಲಿಗೆ ಬರಬೇಕು. ಸುರಿವ ಮಳೆಯಲ್ಲಿ ಇಲ್ಲಿನವರ ಕತೆ ಕೇಳಬೇಕು! 
ಇಳಿ ಸಂಜೆ ಹೊತ್ತಿಗೆ ಮೂಕಾಂಬಿಕಾ ದೇವಾಲಯ ಚಂಡಿಕಾಂಬ ದೇವಾಲಯಕ್ಕೆ ನಮ್ಮ ಪ್ರವೇಶವಾಯ್ತು. ಹಸಿದ ಹೊಟ್ಟೆಗೆ ನೈವೇದ್ಯದ ಅವಲಕ್ಕಿ ಯಥೇಚ್ಛವಾಗಿ ಹೊಟ್ಟೆ ಸೇರಿ ಸಂಪ್ರೀತಗೊಂಡಿತು. ದೇವಾಲಯದಿಂದ ಹೊರ ಬರುತ್ತಲೇ ಮಳೆಗೆ ಮಿಂಚು ಗುಡುಗುಗಳ ಹಿಮ್ಮೇಳ. ಹತ್ತು ನಿಮಿಷ ದೇವಾಲಯದಲ್ಲೇ ಉಳಿಯಬೇಕಾಯ್ತು. ಮಳೆ ನಿಲ್ಲುವವರೆಗೆ ಅಲ್ಲೇ ನಿಲ್ಲಬೇಕಾಯ್ತು. ಮಳೆ ನಿಂತು ಹೊರಟಾಗ ಮುಗಿಯದ ಮುಗಿಲನಿಂದ ಹುಲಿಕಲ್ ಘಾಟಿ ಸ್ವಲ್ಪವೂ ಕಾಣುತ್ತಿರಲಿಲ್ಲ. ಸ್ವಲ್ಪ ಯಾಮಾರಿದರೂ ಕಣಿವೆಗೆ ಪಾದ ಬೆಳೆಸಬೇಕಿತ್ತು. ಒಂದು ಪಂಕ್ಚರ್ ಆದ ಸೈಕಲ್ಲು ತುಳಿಯೋ ಕಷ್ಟ ಇಮ್ಮಡಿಗೊಳಿಸಿತ್ತು. ಮರದ ಸೈಕಲ್ ತುಳಿದಂತೆ. ಯಾವನೋ ಪುಣ್ಯಾತ್ಮ ಜೀಪ್ನಲ್ಲಿ ನಮ್ಮ ಹಿಂದೆಯೇ ಹೊಸಂಗಡಿವರೆಗೆ ಬಂದು ನಮಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟ. ದೇವಿ ಕೃಪೆಯಿಂದ ನಿರಾತಂಕವಾಗಿ ಘಾಟಿ ಇಳಿದೆವು!
ಹೊಸಂಗಡಿ ತಲುಪುತ್ತಲೆ ಗೆಳೆಯ ಪ್ರಕಾಶನ ಸೈಕಲ್ಗೆ ಪಂಕ್ಚರ್ ಹಾಕಿಸಿದೆವು. ಯಾರ ಸೈಕಲ್ಲಿನಲ್ಲಿ ಡೈನಮೋವೇ ಇರಲಿಲ್ಲ. ಮುಂದೆ ಹೋಗುವ ದಾರಿ ಸ್ವಲ್ಪವೂ ಕಾಣೋದಿಲ್ಲ. ಕಾಟಿ, ಕಡವೆ, ಚಿರತೆಗಳ ಆವಾಸವಾದ್ದರಿಂದ ಭಯಗೊಂಡೆವು. ಕೊನೆಗೊಂದು ಉಪಾಯ ಮಾಡಿ ಹಳೆಯ ಟೈರೊಂದಕ್ಕೆ ಬೆಂಕಿ ಕೊಟ್ಟು ಅದನ್ನು ಸುಧೀರ ಕೈಗಿತ್ತೆವು. ಅವನು ಒಂದು ಕೈಯಲ್ಲಿ ಸೈಕಲ್ ತುಳಿಯುತ್ತಾ ಮತ್ತೊಂದು ಕೈಯಲ್ಲಿ ಟಯರ್ ಹಿಡಿದುಕೊಂಡು ಸರ್ಕಸ್ ಮಾಡುತ್ತಾ ನಿಧಾನವಾಗಿ ಸಿದ್ದಾಪುರ ತಲುಪಿ ನಮ್ಮ ಮೊದಲ ಸೈಕಲ್ ಪ್ರವಾಸಕ್ಕೆ ಶುಭ ಮಂಗಳ ಹಾಡಿದೆವು. ಈ ಪ್ರವಾಸವನ್ನು ಮೆಲುಕು ಹಾಕಿದಾಗೆಲ್ಲ ರೋಮಾಂಚವಾಗುವುದು. ನಿತ್ತು ಸಿಕ್ಕರೆ ಮತ್ತೆ ನೆನಪು ಕೆದಕಿ ಅವನ ಕಾಲೆಳೆಯುವೆವು. ಸರಿಯಾದ ಮಾರ್ಗದರ್ಶನ ದೊರೆತಿದ್ದರೆ ಇನ್ನೂ ಅನೇಕ ಸೈಕಲ್ ಪ್ರಯಾಣದ ಸುಖ ನೆನಪುಗಳು ನಮ್ಮ ಜೋಳಿಗೆಯಲ್ಲಿರುತ್ತಿತ್ತು. ಮತ್ತೆಂದೂ ನಾವು ಇಂತಹ ದೊಡ್ಡ ಸೈಕಲ್ ಸಾಹಸ ಮಾಡಲೇ ಇಲ್ಲ!! ಇನ್ನೊಮ್ಮೆ ಮತ್ತೊಂದು ಸಾಹಸದೊಂದಿಗೆ ನಿಮ್ಮ ಮುಂದೆ ಬರುವೆ ಅಲ್ಲಿಯವರೆಗೆ ನಮಸ್ಕಾರ. 


ಶ್ರೀಧರ್ ಎಸ್. ಸಿದ್ದಾಪುರ.



Sunday, October 4, 2020

ಕಾಟಿ ಮರಿಯ ಕೃಪಾಕಟಾಕ್ಷ....



 

ಹೆಸರು ಹೇಮಂತ್.‌ ಅವಧೂತನಂತಹ ಗಡ್ಡ ̤ ಹೊಳೆವ ಜಿಂಕೆ ಕಣ್ಣು . ಛೆ ಜಿಂಕೆ ಎಂದರೆ ಮೋಸವಾದೀತು. ಕಾಡುಕೋಣದ ಕಣ್ಣು. ವದನದ ತುಂಬಾ ಹರಡಿಕೊಂಡ ಕುರುಚಲು ಗಡ್ಡ. ಎಲ್ಲೋ ನೆಟ್ಟ ನೋಟ.  ಭಾವತತ್ಪರತೆ. ಬಿಗುಮಾನ. ಎತ್ತರದ ನಿಲುವು. ಕತೆಗಳು, ಮಲೆನಾಡು ಅವರ ನಡುವಿನ ಏಕತ್ರ ಸೂತ್ರ. 


ಬಿಚ್ಚಲೊಲ್ಲದೆ ಬಿಗಿದ ಅವನ ತುಟಿಗಳನು ಮೆಲು ಮಳೆಯಲ್ಲಿ ಮಾತಿಗೆಳೆದಳು ಅವನಿ. ಅವನ ಸೃಜನಾತ್ಮಕ ಕೆಲಸಗಳಲ್ಲಿ ಅವಳ ಹಾಜರಿ ಇತ್ತು. ಇಂದು ಅವನ ಎರಡನೆಯ ಕತಾ ಸಂಕಲನ ಅನಾವರಣಗೊಂಡಿತ್ತು. ಪುಸ್ತಕ ಅನಾವರಣದ ಗೌಜಿ ಮುಗಿದು ಅವರಿಬ್ಬರು ಕಲಾ ಪರಿಷತ್ತಿನ ಎದುರಿನ ಕಾಫಿಬಾರ್ ನಲ್ಲಿದ್ದರು. ಕಪಚಿನೊಗೆ ಆರ್ಡರಿಸಿದ್ದರು.


ಗುಡುಗು ಬಂದು ಅವರ ಮಾತಿಗೆ ಮೇಳವಾಗಿತ್ತಂದು. ಧೋ ಎಂದು ಸುರಿವ ಮಳೆಯ ನಡುವೆ ಅವಳು ಅವನನ್ನು ಮಾತಿಗೆ ಎಳೆದಳು.
ಏಯ್ ಹೇಮ್, ನೀನು ಹೇಗೆ ಪರ್ತಕರ್ತನಾದೆ? ಎಂದು ಹೇಳುತ್ತಿಯೆಂದು ಕಳೆದ ಬಾರಿಯೇ ಹೇಳಿದ್ದೆ ಎಂದು ಜೋಗುಳದಂತೆ ಅವಳು ಪಿಸುಗುಟ್ಟಿದಳು.
ಮಲೆನಾಡಿನ ನನ್ನ ನೆನಪೇ ನನಗೆ ಶ್ರೀರಕ್ಷೆ.
ಹೇಳಿದರೆ ನೀ ನಗುತ್ತಿ, ಯಾಕೆ ಈಗ ಅದೆಲ್ಲಾ ಮೆಲ್ಲಗೆ ಅವನೆಂದ.
ಕೇಳುವ ಕುತೂಹಲ ಎಂದು ಮೆಲ್ಲಗೆ ಅವನ ಬೆನ್ನಿಗೆ ಗುದ್ದಿದಳು.
ಮರಾಯ್ತಿ ನೀ ಬಿಡುವ ಹಾಗೆ ಕಾಣಿಸೊಲ್ಲ ಎಂದು ಒಂದು ನೋಟವನ್ನು ಅವಳೆಡೆಗೆ ಎಸೆದು ನಕ್ಕ.
..........................ಹಂ ಅವಳೂ ನಕ್ಕಳು.
ಅದೊಂದು ವಿಚಿತ್ರ ಕತೆ. ನಾನೊಂದು ಕಾಡುಕೋಣದ ಮರಿಯಿಂದಾಗಿ ಈ ವೃತ್ತಿಗೆ ಬಂದೆ.
ಏನು? ಅವಳು ಆಶ್ಚರ್ಯ ತಡೆಯಲಾಗದೆ ಕೇಳಿದಳು.
ಹೌದು
ಅದು ಹೇಗೋ? ಎಂದಳು.
ಅದೊಂದು ನನ್ನ ಬದುಕಿನ ಅತಿ ವಿಚಿತ್ರ ಘಟನೆ. ಎಲ್ಲರ ಬದುಕಲ್ಲೂ ಘಟಿಸೊಲ್ಲವೆಂದು ನೆನಪ ಸುರುಳಿ ಬಿಚ್ಚತೊಡಗಿದ.
***
ಮಾಘ ಮಾಸದ ಸಂಜೆಗತ್ತಲಿನ ಸಮಯ. ಹಸುಗಳು ಹಟ್ಟಿಗೆ ಮರಳುವ ಹೊತ್ತು. ಸೂರ್ಯ ತನ್ನ ಕೆಲಸ ಮುಗಿಸಿದ್ದ. ಗಾಳಿ ತಣ್ಣಗೆ ಹೊಯ್ಯುತ್ತಿತ್ತು.
ಓತಿಕ್ಯಾತನಂತಿರುವ ತನ್ನ ನೆಚ್ಚಿನ ಬಂಟ ಅಂಜು ಬುರುಕ ಮಾಚನೊಡನೆ "ಬೇಟೆಗೆ ಹೋಗುವಾ." ಎಂದೆ. ಮಾಚ ನನ್ನ ಬೇಟೆಯ ಸಂಗಾತಿ. ಮೂರು ಹೊತ್ತು ನಮ್ಮನೆಯ ಕೂಳು ತಿನ್ನದಿದ್ದರೆ ಅವನಿಗೆ ಸರಿಯಾಗಿ ನಿದ್ರೆ ಹತ್ತಲ್ಲ. ಬೇಟೆ ಹುಚ್ಚಿನ ಮನುಷ್ಯ. ತನ್ನ ಸ್ವಭಾವಕ್ಕೂ ಬೇಟೆಗೂ ವಿರುದ್ಧ ಪದದಂತಿದ್ದ.
ಮಲೆನಾಡಿನ ನಮ್ಮ ಒಂಟಿ ಮನೆಯಿಂದ ಚರೆ ಕೋವಿ ಹಿಡಿದು ಕಬ್ಬಿನಗದ್ದೆ, ಕಾಲು ತೋಡು ದಾಟಿ ಕುರುಚಲು ಕಾಡಿಗೆ ಬಂದಿದ್ದೆವು. ರಾತ್ರಿ ಪೂರಾ ತಿರುಗುವ ಉದ್ದೇಶದಿಂದ ಒಂದಿಷ್ಟು ಕಡುಬು, ಚರೆ ಕೋವಿಗೊಂದಿಷ್ಟು ಗುಂಡು ನಮ್ಮ ಜೊತೆಗಿದ್ದವು. ಕಾಟಿ, ಚಿರತೆ, ಹಂದಿಗಳು ಕಾಡ ನಡುವೆ ಹೆದ್ದಾರಿ ಕೊರೆದ ಜಾಗವದು. 
ಕುರುಚಲು ಕಾಡಿನ ನಡುವೆಯೊಂದು ದೊಡ್ಡಾಲದ ಮರವಿತ್ತು. ಕುರುಚಲು ಕಾಡಿನ ನಡುವೆಯೇ ಜಿಂಕೆ, ಕಡವೆಗಳನ್ನು ಒಂದೇಟಿಗೆ ಹೊಡೆದುರುಳಿಸಿದ್ದ ನಡು ಕಾಡಲ್ಲಿ ಅವತ್ತು  ಯಾವ ಬೇಟೆಯೂ ಕಾಣಸಿಗದೇ, ನಿರಾಶನಾಗಿ  ಆ ಆಲದ ಮರದಡಿ ಸ್ವಲ್ಪ ಕೂರೋಣವೇ? ಎಂದೆ. ಅಯ್ಯೋ, ಸರಿ ದ್ಯಾವ್ರೆ ಎಂದ ಮಾಚ. ಥೂ ಹಲ್ಕಾ ಸುವರ್, ಎಲ್ಲದಕ್ಕೂ ಅಯ್ಯೋ ಸೇರಿಸಿ ಕನ್ನಡದ ಮಯರ್ಾದೆ ತೆಗಿಬೇಡ್ವೋ ಮರಾಯ ಎಂದು ಗದರಿದೆ. ಆಗಲೇ ಆಲದ ಮರದಡಿ ಏನೋ ಬಹೃತ್ ಪ್ರಾಣಿಯೊಂದು ನೆಗೆಯೊ ಸದ್ದಿನಿಂದ ನಮ್ಮ ಕಿವಿ ನೆಟ್ಟಗಾಯಿತು. ಚರೆ ಕೋವಿ ನಿಮಿರಿ ನಿಂತಿತು ನೋಡು.
ಸದ್ದಾಗದಂತೆ ನಾವು ಆಲದ ಮರವನ್ನು ಸಮೀಪಿಸಿದೆವು. ಎದೆ ಢವ-ಢವನೇ ಹೊಡೆದುಕೊಳ್ಳ ಹತ್ತಿತ್ತು. ಈ ರೀತಿ ಕುಣಿಯುವ ಪ್ರಾಣಿ ಯಾವುದೆಂದು ನಮಗೆ ಹೊಳೆಯಲೇ ಇಲ್ಲ. ಹಂದಿ, ಕಡವೆಯಾಗಿದ್ದರೆ ಅವುಗಳ ಸದ್ದು ಹೀಗಿರುತ್ತಿರಲಿಲ್ಲ. ನಿಧಾನಕ್ಕೆ ನಾನು ಕಳ್ಳ ಹೆಜ್ಜೆ ಇಟ್ಟು ಕುರುಚಲು ಕಾಡಿನೊಳಗೆ ಇಣುಕಿ ನೋಡಿದೆ. ಧಿಗ್ಮೂಢನಾದೆ. ಕಾಡುಕೋಣದ ಮರಿಯೊಂದು ಮರದಡಿಯಲ್ಲಿ ಖುಷಿಯಿಂದ ಕುಣಿಯುತಲಿತ್ತು. ನಾವಿಬ್ಬರೂ ಜಾಗೃತರಾದೆವು.
ಮರಿ ಇದೆ ಎಂದರೆ ಹತ್ತಿರದಲ್ಲೆಲ್ಲೋ ಅದರ ತಾಯಿ ಇರಲೇ ಬೇಕಲ್ಲ. ಸುತ್ತಲೂ ಹುಡುಕಿದರೂ. ಏನೂ ಕಾಣಲಿಲ್ಲ. 
ಅಯ್ಯೋ, ಇಲ್ಲೇನೂ ಕಾಂತಿಲ್ಯಲೆ ದ್ಯಾವ್ರೇ ಎಂದ ಮಾಚ ಆಶ್ಚರ್ಯ ಸೂಚಿಸುತ್ತಾ.
 ಹತ್ತಿರ ಹೋಗಿ ನೋಡೋ ಮರಾಯ, ಪಕ್ಕದಲ್ಲೇ ಮಲಗಿರಬಹುದು ಎಂದೆ. ಮರಿ ಎಮ್ಮೆ ಅಸಾಧ್ಯ ಶಬ್ದಮಾಡುತ್ತಾ ಜಾತ್ರೆಯ ಕೀಲು ಗೊಂಬೆಯಂತೆ ಕುಣಿಯುತಲಿತ್ತು. 
ಎಷ್ಟು ದಿನಗಳ ಮರಿ ಇರ್ಬೊದು ಮಾಚ? 
ಅಯ್ಯೋ, ಒಂದಿಪ್ಪತ್ತು ದಿನದ್ದು, ದ್ಯಾವ್ರೆ 
 ಹಟ್ಟಿಯ ದನಗಳೊಂದಿಗೆ ಸಾಕಿದ್ರೆ ಹೆಂಗೆ? ನಾನೆಂದೆ.
ಅಯ್ಯೋ, ಥೂ ನಿಮ್ಮ, ಅದರಮ್ಮ ಬಂದ್ರೆ ಸಿಗದ್ ಹಾಕತ್ತೆ ಅಷ್ಟೇ! 400 ಕೆ. ಜಿ ಬಬ್ಬರ್ಯದಾಂಗ್ ಇಪ್ಪೊ ಅದನ್ ಎದ್ರುಸುಕಾತ್ತೆ? ಅದ್ ನಮ್ಮನ್ ಕಂಡು ಕೊಂದ್ ಹಾಕುತ್ತೆ ದ್ಯಾವ್ರೆ. ಎಂದು ಪಿಸುಗುಟ್ಟಿದ ಮಾಚ. ನಾ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಎಷ್ಟು ಹಾಲು ಕೊಡುತದೆಂದು ನೋಡ್ಬೇಕು ಮರಾಯ?
"ನಮ್ ತಿಥಿ ಆಯ್ದಿರ್ ಸಾಕ್." 
ಮಾಚ ಏನು ಹೇಳುವುದೆಂದು ತೋಚದೆ ಗರ ಬಡಿದವನಂತೆ ನಿಂತ .
ಏಯ್ ಮಾಚ, ನೀನು ಲಂಗೋಟಿ ಕಟ್ಟಿದ್ಯಾ? ಕೇಳಿದೆ.
ಅಯ್ಯೋ, ಅದು ಈ ಮರಿ ಕಟ್ಟುವಷ್ಟು ಉದ್ದವಿಲ್ಲ ದ್ಯಾವ್ರೆ
ಥೂ, ಹಲ್ಕಾ ಬಡ್ಡಿ ಮಗನೆ, ನಿನ್ನ ಲಂಗೋಟಿ ಯಾರಿಗೆ ಬೇಕೋ?
ಬೇಕಾಗಿರೋದು ನಿನ್ನ ಪಂಚೆ. 
ಅಯ್ಯಯ್ಯೋ, ಬ್ಯಾಡ ದೇವ್ರೆ ಎಂದು ಕಿರುಚಲು ಬಾಯಿ ತೆರೆದ. ಅಯ್ಯೋ, ಊರ ದನಕಳ ಕಾಯ್ಲಿ ಅವಕ್ಕೂ ಬತ್ತ್ ಮರ್ರೆ, ಬ್ಯಾಡ ದ್ಯಾವ್ರೆ ಎನ್ನುವುದನ್ನು ಕಿವಿಗೆ ಹಾಕಿಕೊಳ್ಳದೇ ಹಠ ಹಿಡಿದಾಗ ಅನಿವಾರ್ಯವಾಗಿ ಮಾಚ ಸುಮ್ಮನಾದ. 
***
ಕಪಚಿನೋ ಬಂದಿತ್ತು. ಅದನ್ನು ಸವಿಯುತಲಿದ್ದ ಹೇಮಂತ್ ಮತ್ತು ಅವನಿ. ಎನ್ ಧೈರ್ಯ ನಿಂದು ಎಂದು ಕಣ್ಣಲ್ಲೇ ನಕ್ಕಳು. ಅವನೂ ನಕ್ಕ. ಮತ್ತೊಂದು ಸಿಗರೇಟಿಗೆ ಕೈ ಹಚ್ಚಿದ್ದ. ಅವನಿ ಮುನಿಸಿಕೊಂಡು ಕೆಂಪಗಾದಳು. ಸಿಗರೇಟಿನ ಧೂಮದೊಂದಿಗೆ ಕತೆ ಮತ್ತೆ ಬಿಚ್ಚಿಕೊಳ್ಳ ತೊಡಗಿತು.
***
ಕುಣಿತಿದ್ದ ಕಾಟಿ ಮರಿ ಹಿಂದೆ ಹೋಗಿ ಅಡಗಿ ಸದ್ದಾಗದಂತೆ ಅದರ ಕುತ್ತಿಗೆ ಸುತ್ತ ಪಂಚೆ ಬಿಗಿದು ಆಲದ ಮರಕ್ಕೆ ಕಟ್ಟಿ ಹಾಕಿದೆವು. ಕಟ್ಟಿದ ಕೂಡಲೇ ತಟಪಟವೆಂದು ಕಾಲನ್ನು ವಿಚಿತ್ರ ರೀತಿಯಿಂದ ಬಡಿಯತೊಡಗಿತು. ಅಪಸ್ವರದ ಶಂಖದಿಂದ ಹೊಮ್ಮಿದಂತಹ ಸ್ವರವೊಂದನು ಅದು ಹೊರಡಿಸಿತು. ಕಾಡಿನ ಮರಗಿಡಗಳೆಲ್ಲಾ ಅಲ್ಲಾಡಿದವು. ಅನೇಕ ಬಾರಿ ಕಾಡೆಮ್ಮೆಯ ಸ್ವರ ಕೇಳಿದ್ದ ನಾವಿಬ್ಬರೂ ಮರಿ ಈ ವಿಚಿತ್ರ ಸ್ವರಕ್ಕೆ ವಿಚಲಿತರಾದೆವು. ಅಷ್ಟು ಕರ್ಕಶವಾಗಿತ್ತದು. ಇದು ಯಾವುದೋ ಸನಿಹದ ಮತ್ತೊಂದಕ್ಕೆ ಸಂದೇಶ ನೀಡುತ್ತಿದೆ ಎಂದು ನಮಗೆ ಖಾತ್ರಿಯಾಯಿತು. ಚರೆ ತುಂಬಿದ ಕೋವಿ ಹಿಡಿದೆವು. ಕರುವನ್ನು ಆಲದ ಉದ್ದದ ಬಿಳಲುಗಳನ್ನು ಸೇರಿಸಿ ಪಂಚೆಯಿಂದ ಕಟ್ಟಿದ್ದೆವು.
ಕುರುಚಲು ಕಾಡಿನ ಕಡೆಯಿಂದ ಏನೋ ಸದ್ದಾಯಿತು. ಮಹಾ ಧೈತ್ಯ ಕಾಟಿಯೊಂದು ಬುಸು ಬುಸು ಉಸಿರ ಬಿಡುತ್ತಾ ಬಂದಿತು. ಅದರ ಎತ್ತರದ ನಿಲುವು ಹೊಳೆಯುವ ಮೈ. ಕೆಂಗಣ್ಣು. ಕೋಪದಿಂದ ಬುಸುಗುಡುವ ಅದರ ಮೂತಿ ನೋಡಿ ನಮ್ಮ ಚಡ್ಡಿ ಒದ್ದೆಯಾಗುವುದೊಂದು ಬಾಕಿ. ತನ್ನ ಕೋಡಿನಿಂದ ತಿವಿಯುವಂತೆ ಎತ್ತುತ್ತಾ ನಾವಿರುವಲ್ಲಿಗೆ ನುಗ್ಗಿತು. ಬಿಳಲುಗಳನ್ನು ಹಿಡಿದು ನಾವಿಬ್ಬರು ಮರವೇರಿದರು. ಗಜರ್ಿಸುತ್ತಾ ಮರವನ್ನೇ ತಿವಿಯ ತೊಡಗಿತು. ಐದಾರು ಬಾರಿ ಮರ ಸುತ್ತಿ ಬಂದಿತು. ತನ್ನ ಕಂದನ ಬಿಡಿಸಿರೆಂದು ಒಮ್ಮೆ ಆರ್ತನಾದ ಮಾಡಿ ಕೂಗಿತು. ಬರಿ ಅಂಗಿಯಲ್ಲಿದ್ದ ಮಾಚನಿಗೆ ಸಂಜೆಗತ್ತಲಾವರಿಸುವುದ ನೋಡಿ ಚಿಂತೆಯಾಯಿತು. ಅಯ್ಯೋ, ಗಾಳಿಯಲ್ಲಿ ಒಂದು ಗುಂಡು ಹಾರಿಸಿ ದ್ಯಾವ್ರೆ ಎಂದ. ತಡಮಾಡದೆ ನಾನು, ಕಾಡೆಮ್ಮೆಯ ಕಿವಿಗಳ ನಡುವೆ ಗುಂಡು ಹಾರಿಸಿದೆ. ಕೋಡುಗಳ ನಡುವೆ ಗುಂಡು ಹಾರಿತು. ಒಂದೇ ನೆಗೆತಕ್ಕೆ ತನ್ನ ಮರಿಯಿಂದ ಅನತಿ ದೂರಕ್ಕೆ ಹೋಗಿ ಕಾಟಿ ನಿಂತು ಬಿಟ್ಟಿತು. ಸ್ಪೋಟಿಸಿದ ಶಬ್ದಕ್ಕೆ ಕಾಡೊಮ್ಮೆ ನಿಶ್ಯಬ್ದವಾಯಿತು. ದೂರ ಹೋಗಿ ನಿಂತ ಎಮ್ಮೆ ತನ್ನ ಮರಿಗೆ ಬರುವಂತೆ ಬುಸುಗುಟ್ಟಿ ಕರೆಯತೊಡಗಿತು. ಮತ್ತೊಂದು ಚರೆ ತುಂಬಿಸಿ ಅದರ ಕೋಡುಗಳ ನಡುವೆ ಹೊಡೆದೆ. ವಿಚಿತ್ರವಾಗಿ ಕೂಗೂತ್ತಾ ಕಾಡಿನಲ್ಲಿ ಕಣ್ಮರೆಯಾಯಿತು. ಅದರ ವಿಚಿತ್ರ ದನಿ ನನ್ನ ಕಿವಿಗಳಲ್ಲಿ ಇನ್ನೂ ರಿಂಗಿಣಿಸುತ್ತಿದೆ.
ಕಾಡಿನ ಮೌನದಲ್ಲೇ ಲೀನವಾದ ನಾವಿಬ್ಬರೂ ಕುಳಿತಲ್ಲೇ ಕುಳಿತ್ತಿದ್ದರಿಂದ ಸೊಳ್ಳೆಗಳು ಕಡಿಯ ತೊಡಗಿದವು. ನಡೆದ ಘಟನಾವಳಿಗಳಿಂದ ಸ್ವಲ್ಪ ವಿಚಲಿತನಾದೆ. ಮಾಚನಿಗೆ ತೋರಿಸಿಕೊಳ್ಳದೆ ಸುಮ್ಮನಿದ್ದೆ. ಇಳಿದು ಹೋಗಲು ಅಂಜಿಕೆ. ಮಾಚನೊಬ್ಬನನ್ನೇ ಬಿಟ್ಟು ಹೋದರೆ ಅವನಿಗೆ ಗುಂಡು ಹಾರಿಸಲೂ ಬರದು. ಕಾಡಿನ ಹಾದಿಯಲ್ಲಿ ಕೋವಿ ಇರದೇ ನಡೆದು ಹೋಗುವುದು ಅತಿ ಅಪಾಯ. ಹಾಗೇ ಸಂದಿಗ್ಧದಲ್ಲೇ ಕೆಲ ಕ್ಷಣಗಳು ಕಳೆದವು. ರಾತ್ರಿ ಎರುವ ಹೊತ್ತಲ್ಲಿ ಮಾಚನನ್ನು ಸಮಾಧಾನ ಮಾಡಿ, ಕೋವಿಗೆ ಚರೆ ತುಂಬಿಸಿ ಅಲ್ಲೇ ಬಿಟ್ಟು ಧೈರ್ಯ ಮಾಡಿ ಹೊರಟೆ. 
ಬಲವಾದ ಹಗ್ಗ, ಪಂಚೆ ಒಂದಿಷ್ಟು ಹುಲ್ಲಿನೊಂದಿಗೆ ಹಿಂದಿರುಗಿದೆ.
ಅಯ್ಯೋ, ಬಂದ್ಬಿಟ್ರಾಯ್ಯಾ ದ್ಯಾವ್ರೆ
ಯಾಕೆ ಬರ ಬಾರದಿತ್ತೆ.? 
ಮಾಚನಿಗೆ ಪಂಚೆ ಕೊಟ್ಟು ಬಲವಾದ ಹಗ್ಗದಿಂದ ಮರಿಯನ್ನು ಬಂದಿಸಿದೆ. ನಿಶೆಯ ಮೊದಲ ಘಳಿಗೆಯೊಳಗೆ ಮನೆ ತಲುಪಿದೆವು. ಹಟ್ಟಿಯಲ್ಲಿ ಕರುವನ್ನು ಉಳಿದ ಕರುಗಳ ಜೊತೆಗೇ ಕಟ್ಟಿ ನಿಟ್ಟುಸಿರಿಟ್ಟೆ.
***
ರಾತ್ರಿ ತನ್ನ ಮಗ್ಗಲು ಬದಲಿಸಿತ್ತು. ತೋಟ ತಿರುಗಿ ಬಂದ ತಂದೆ ಹಟ್ಟಿ ಕಡೆ ಹೋದವರಿಗೆ ಈ ಹೊಸ ಅತಿಥಿ ಗುಟುರು ಹಾಕಿತು. 
ಗಾಬರಿ ಬಿದ್ದವರು, ನೇರ ಮನೆಯೊಳಗೆ ಹೋಗಿ  ಎಲ್ಲಿಂದ ತಂದ್ಯೋ ಇದ್ನಾ, ಅಲ್ಲೇ ಬಿಟ್ಟು ಬಾ. ಡಿಪಾರ್ಟಮೆಂಟಿಗೆ ಗೊತ್ತಾದರೆ ಮುಗೀತು ಕತೆ. 
ಹಾಗೇನೂ ಆಗಲ್ಲ. ಅದು ಕಾಡುಕೋಣದ ಮರಿಯೆಂದು ಯಾರಿಗೂ ಗೊತ್ತಾಗಲ್ಲ ಬಿಡಿ. ನೀವೇನು ತಲೆ ಬಿಸಿ ಮಾಡ್ಬೇಡಿ. ಎಂದು ಅವರ ಬಾಯಿ ಮುಚ್ಚಿಸಿದೆ.
ಒಂದು ನಾಲ್ಕು ದಿನ ಕಷ್ಟ ಕೊಟ್ಟಿತು. ನಂತರ ಅದುವೇ ಮರಿಗಳೊಂದಿಗೆ ಹೊಂದಿಕೊಂಡಿತು. ಮನೆಯ ದನ ಕರುಗಳೊಂದಿಗೆ ಒಂದಾದ ಮರಿ ದಿನಾಲೂ ಮೇಯಲು ಹೋಗಿ ಹಟ್ಟಿಗೆ ಹಿಂತಿರುಗುತಲಿತ್ತು. ಅದಕೆ ದಿನಾಲೂ ನಾಲ್ಕು ಲೀಟರ್ ಹಾಲು ಕುಡಿಸುತ್ತಿದ್ದೆ. 
***
ಒಂದು ಮುಂಜಾನೆ ಧೂಳೆಬ್ಬಿಸುತ್ತಾ ಬಂದ ಕಪ್ಪು ಪೋಲಿಸ್ ಜೀಪು ನನ್ನ ಅಪ್ಪಯ್ಯನ ಎದೆ ಪಸೆ ಆರುವಂತೆ ಮಾಡಿತ್ತು. 
ಏನ್ರೀ ಕಾಡುಕೋಣದ ಮರಿ ಸಾಕುತ್ತಿದ್ದೀರಿಯಂತೆ? ಎಂದು ಜಂಬದಿಂದ ಜಬರಿಸಿದ ಅರಣ್ಯಾಧಿಕಾರಿ.
ಎ...........ಲ್ಲಾ..........ದ........ರೂ......ಉಂ.....ಟೆ?. ಎಂದರು ಅಪ್ಪಯ್ಯ ನಡುಗುವ ಕಂಠದಲ್ಲಿ. ಅರಣ್ಯಾಧಿಕಾರಿ ನೇರ ಹಟ್ಟಿಗೆ ಹೋಗಿ ನೋಡಿದ. ದನಗಳು, ಕರುಗಳು, ಎಮ್ಮೆಗಳು ಇವನನ್ನು ಪಿಳಿ-ಪಿಳಿ ನೋಡಿದವು. ಅವನೂ ದಿಟ್ಟಿಸಿದ. ಯಾವನೋ ಹೊಸಬನ ನೋಡಿ ಬೆಚ್ಚಿ ಬೊಬ್ಬಿರಿದು ಕೂಗ ತೊಡಗಿದವು. 10-15 ಮರಿಗಳಲ್ಲಿ ಕಾಡುಕೋಣ ಯಾವುದೆಂದು ಅವನಿಗೆ ಗುರುತಿಸಲಾಗಲಿಲ್ಲ. ಅಧಿಕಾರಿಯೋ ಬಯಲು ಸೀಮೆಯವನು. ನಿರಾಶನಾಗಿ ಹಿಂದೆ ಬಂದು ಆ ಮರಿಗಳವುಗಳ ಪೋಟೋ ತೆಗೆದು ಕೊಳ್ಳಿ ಎಂದು ಪೋಟೊಗ್ರಾಫರ್ಗೆ ಆದೇಶಿಸಿದ. ಅಪ್ಪಯ್ಯನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಬಿಸಿತು. ಅಧಿಕಾರಿ ಅಪ್ಪಯ್ಯನೊಡನೆ ಏನೋ ಮಾತನಾಡಿಕೊಂಡು ಜೀಪು ಹತ್ತಿ ಹೊರಟ. 
ಅವರು ಬಂದು ಹೋದ ಮೇಲೆ ಅಪ್ಪಯ್ಯ ಚಿಂತಾಕ್ರಾಂತರಾದರು. ನನ್ನೊಡನೆ ಮಾತು ನಿಲ್ಲಿಸಿದರು. ನೀನು ಸ್ವಲ್ಪ ದಿನಗಳಿಗೆ ಊರು ಬಿಡು. ಆ ಮರಿಯನ್ನ ಹಟ್ಟಿಯಿಂದ ಬಿಡು ಎಂದು ವರಾತ ಶುರುವಿಟ್ಟರು. ಸಣ್ಣ ಶಬ್ದಕ್ಕೂ ಎಗರಿ ಬೀಳುತ್ತಿದ್ದರು. ಅಪ್ಪಯ್ಯ ದಿನದಿಂದ ದಿನಕ್ಕೆ ಕೃಶರಾಗತೊಡಗಿದರು. ಅವರ ಅವಸ್ಥೆ ನೋಡಲಾಗದೇ ಮರಿಯನ್ನು ಕಾಡಿಗೆ ಬಿಟ್ಟು ಬಂದೆ. ಅದು ಐದಾರು ಬಾರಿ ಇವನನ್ನೇ ನೋಡಿ ಕಾಡಿನಲ್ಲಿ ಕಣ್ಮರೆಯಾಯಿತು. ಏನೇ ಮಾಡಿದರೂ ಅಪ್ಪಯ್ಯನ ದಿಗಿಲು ಕಡಿಮೆಯಾಗಲಿಲ್ಲ. ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಯಾವಾಗ ಮಗ ಅರಸ್ಟ್ ಆಗುವನೊ ಎಂಬ ಚಿಂತೆಯಲ್ಲೇ ಕಾಲ ಹಾಕತೊಡಗಿದರು. 
***
"ಇದೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್" ಎಂದು ಕಪಾಚಿನೋ ಹೀರುತ್ತಾ ಹೇಳಿದ ಹೇಮಂತ್.
ಅವನಿ ಮುಂದೆ ಎನ್ನುವಂತೆ ಅವನನ್ನೆ ನೋಡತೊಡಗಿದಳು.
***
ಇದೇ ಚಿಂತೆಯಲ್ಲಿ ಅವರನ್ನು ನೋಡಲಾದೇ ನಾನು ಮನೆ ಬಿಟ್ಟೆ. ಮೊದ ಮೊದಲಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಜೊತೆ ಜೊತೆಗೆ ಓದು ಮುಂದುವರಿಸಿದೆ. ಬೆಂಗಳೂರಿಗೆ ಬಂದೆ ಬರವಣಿಗೆ ಕೈ ಹತ್ತಿತು. ನಾ ಬರೆದ 'ಕಾಟಿ ಮರಿಯ ಕೃಪಾಕಟಾಕ್ಷ' ಕತೆಗೆ ಮೊದಲ ಬಹುಮಾನ ಕೂಡ ಬಂದಿತು. ಪ್ರಜಾ ಮಿತ್ರಕ್ಕೆ ದುಡಿದೆ. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೆ ಇಲ್ಲಾ.
***
ಕಪ್ನಲ್ಲಿದ್ದ ಕಪಚಿನೋ ಕೂಡಾ ಮುಗಿದಿತ್ತು. ತುಂತುರು ಮಳೆಯೂ ಆಗಸ್ಟೇ ನಿಂತಿತು.
ಪ್ರಪಂಚದಲ್ಲಿ ಕಾಡೆಮ್ಮೆ ಮರಿಯಿಂದಾಗಿ ಪರ್ತಕರ್ತರಾದವರು ಇರಲಿಕ್ಕಿಲ್ಲ. ಎಂದು ಹೇಳಿ ನಕ್ಕ. 
ಅವಳೂ ಅವನ ಜೊತೆಗೂಡಿದಳು.
***
ಶ್ರೀಧರ್. ಎಸ್. ಸಿದ್ದಾಪುರ.
x

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...