Wednesday, October 21, 2020
ಹಾರೋ ಹಾತೆಗಳ ಹಿಂದೆ ಬಿದ್ದು.
ಇಂದು ನಾ ನಿಮ್ಮನ್ನು ನನ್ನ ಬಾಲ್ಯದ ಗೆಳೆಯನನ್ನು ಭೇಟಿ ಮಾಡಿಸುವೆ. ನನ್ನದಲ್ಲದೆ ನಿಮ್ಮ ಬಾಲ್ಯ ಕಾಲದ ಸ್ನೇಹಿತನೂ ಆಗಿರಬಹುದು. ಸಾವಿರ ಕಣ್ಣುಗಳು ದುಂಡಗಿನ ತಲೆ, ಪಾರದರ್ಶಕ ರೆಕ್ಕೆ! ಸಣ್ಣ ಆಂಟೆನಾ. ಹೀಗೆ ಅತಿ ವಿಶಿಷ್ಟ್ಯ ವಾದ ರಚನೆಯನ್ನು ಹೊಂದಿದಾತ. ಆತನೇ ನಮ್ಮ ನಿಮ್ಮೆಲ್ಲರ ಡ್ರಾಗನ್ ಪ್ಲೈ, ಹಾತೆ, ಏರೋಪ್ಲೇನ್ ಚಿಟ್ಟೆ.
ಆಟಿಕೆಗಳಿಲ್ಲದ ಕಾಲದಲ್ಲಿ ಇವನ್ನು ಆಟಿಕೆಯಂತೆ ಬಳಸುತ್ತಿದ್ದೆವು ನಾವು. ನಮ್ಮ ಮನೆಯ ಬಾವಿ ಸುತ್ತಲೂ, ಶಾಲೆಯ ಬಯಲಿನಲಿ ಕತ್ತರಿಸಿ ತೆಗೆದ ಗಿಡಗಳ ಸಂದುಗಳಿಂದ ಇವು ದುತ್ತನೆ ಪ್ರತ್ಯಕ್ಷವಾಗಿ ಇಷ್ಟು ಹೊತ್ತು ಎಲ್ಲಿದ್ದವು? ಎಂಬ ಜಟಿಲ ಪ್ರಶ್ನೆಯೊಂದನ್ನು ಮೂಡುವಂತೆ ಮಾಡುತ್ತಿದ್ದವು. ಕೆರೆಗಳ ಅಂಚಿನಲಿ, ಹೊಳೆಯ ಸುತ್ತಲಿನಲಿ ಧ್ಯಾನಕ್ಕೆ ಕೂರುತ್ತವೆ! ಜೊತೆಗೆ ತಮ್ಮ ಉದ್ದನೆಯ ಬಾಲವನ್ನು ನೀರಿಗೆ ತಾಕಿಸುತ್ತಾ ಓಡುವುದು ಏಕೆಂದು ಇತ್ತೀಚಿನವರೆಗೂ, ಮಳೆ ಕಾಡು ಸಂಶೋಧನಾಲಯದ ಅಜಯ್ ಗಿರಿ ಸಣ್ಣ ಪುಸ್ತಕವೊಂದು ನನಗೆ ನೀಡುವವರಗೂ ಗೊತ್ತಿರಲಿಲ್ಲ. ಹೆಲಿಕಾಪ್ಟರ್ನಂತೆ ಹಾರಾಡುತ್ತಾ ಗಾಳಿಯಲ್ಲೇ ದೇಹವನ್ನು ನಿಯಂತ್ರಿಸುತ್ತಾ ನೋಡುವುದೇ ಒಂದು ಚೆಂದ.
ಕಾಡಿನ ನಡುವಿದ್ದ ದೊಡ್ಡಮ್ಮನ ಮನೆಗೆ ಹೋದಾಗ ಆಡಲು ಯಾರೂ ಇಲ್ಲದಾಗ ಈ ಡ್ರಾಗನ್ ಪ್ಲೈಗಳ ದೋಸ್ತಿ ಮಾಡುತ್ತಿದ್ದೆ. ಇವುಗಳಲ್ಲಿ ಅರಶಿನ ಮತ್ತು ಕೆಂಪು ನನ್ನ ಅಚ್ಚು ಮೆಚ್ಚಿನ ಬಣ್ಣದವು. ಹಂಬಲಿಸಿ ಹಂಬಲಿಸಿಯೇ ಅವುಗಳ ಬೆನ್ನು ಹತ್ತುತಿದ್ದೆ. ಹಿಂದಿನಿಂದ ನಿಧಾನಕ್ಕೆ ಹೋಗಿ ಬಾಲ ಹಿಡಿದಿಬಿಡುತ್ತಿದ್ದೆ. ಅದರ ಬಾಲಕ್ಕೆ ಹಗ್ಗ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುತ್ತಿದ್ದೆ. ನಮ್ಮಿಂದ ತಪ್ಪಿಸಿಕೊಳ್ಳಲು ಅದು ವಿಶ್ವ ಪ್ರಯತ್ನವನ್ನೇ ಮಾಡುತ್ತದೆ. ಯಾವುದೋ ಮರದ ಟೊಂಗೆಯ ಮೇಲೆ ಹೋಗಿ ಕುಳಿತು ಬಿಡುತ್ತದೆ. ಜಪ್ಪಯ್ಯ ಅಂದರೂ ಕೆಳಗಿಳಿದು ಬರುವುದಿಲ್ಲ. ಜಗ್ಗಿ ಜಗ್ಗಿ ಎಳೆದು ಕೆಳಗಿಳಿಸಿ, ಸಂಜೆಯಾದೊಡನೆ ಅದನ್ನೊಂದು ಪೆಟ್ಟಿಗೆಯಲಿ ತುಂಬಿಡುತ್ತಿದ್ದೆ. ದೊಡ್ಡಮ್ಮ ನಮಗೆ ಗೊತ್ತಾಗದಂತೆ ಅದರ ದಾರ ಬಿಚ್ಚಿ ಹಾರಿ ಬಿಡುತ್ತಿದ್ದರು. ರಾತ್ರಿಯೇ ಹಾರಿ ಹೋಯಿತೆಂದು ಸುಳ್ಳು ಹೇಳುತ್ತಿದ್ದರು. ನಾವು ಇನ್ನೊಂದು ಹಾರೋ ಹಾತೆ ಬೆನ್ನು ಬೀಳುತ್ತಿದ್ದೆವು.
ಮೈಸೂರಿನ ಕಡೆಯವರು ಅದರ ರೆಕ್ಕೆಯನ್ನು ಇಟ್ಟುಕೊಂಡರೆ ಹಣ ಸಿಗುತ್ತದೆಂದು ನಂಬಿದ್ದರೆಂದು ತಮ್ಮ ಅನುಭವನ್ನು ತೇಜಸ್ವಿ ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಡ್ರಾಗನ್ ಪ್ಲೈಗಳ ರೆಕ್ಕೆಗಾಗಿ ಅವುಗಳ ಹಿಂದೆ ಅಲೆದು, ಅವುಗಳು ಸಿಕ್ಕದೆ ತಪ್ಪಿಸಿಕೊಂಡು ಹಾರಿ ಬಿಡುತ್ತಿದ್ದವು ಎಂದಿದ್ದಾರೆ.
***
ಮಿಲಿಯಗಟ್ಟಲೆ ವರ್ಷಗಳಿಂದ ಹಾರುತ್ತಿರುವ ಈ ಜೀವಿ, ಸಹಸ್ರ ಸಹಸ್ರ ವರ್ಷಗಳಾಚೆ ದೈತ್ಯನಿದ್ದವನು ಕುಬ್ಜನಾಗಿ ಇಲ್ಲಿಯತನಕ ಸಾಗಿ ಬಂದುದು ಅನಂತ ವಿಸ್ಮಯ. ಭ್ರಮೆ ಏನೋ ಎನ್ನಿಸುವ ಸಂಖ್ಯೆ. ನಮಗಿಂತಲೂ ಹಿರಿಯ. ಭೂಮಿಯ ವಿವಿಧ ವಿಪರೀತ ಪರಿಸ್ಥಿತಿಗಳನ್ನು, ವಿಪ್ಲವಗಳನ್ನು ಗೆದ್ದು, ಅವನ್ನೆಲ್ಲಾ ತನ್ನ ಜಿನೋಮ್ ಒಳಗೆ ಕಟ್ಟಿಕೊಂಡು 21 ನೆಯ ಶತಮಾನದವರೆಗೂ ಬೆಳೆದ ಪರಿ ಅಚ್ಚರಿ! ವಿಕಾಸದ ಏಣಿಯಲ್ಲಿ ಜೀವಿಯ ಅನುವಂಶೀಯತೆಯಲ್ಲಾದ ಬದಲಾವಣೆಗಳು ಸಂಶೋಧನಾರ್ಹ. 75 ಮೀಟರ್ ಉದ್ದಕ್ಕೆ ಬೆಳೆಯುತ್ತಿದ್ದ ಇವುಗಳ ಅಚ್ಚು ಸಿಕ್ಕ ಮೇಲೆ ವಿಜ್ಞಾನಿಗಳಿಗಾದ ಅಚ್ಚರಿ ಅಷ್ಟಿಷ್ಟಲ್ಲ!! ಜೊತೆಗೆ ಇವುಗಳ ಸ್ವಯಂ ಭಕ್ಷಕ ಗುಣ. ಈ ಹಾರೋ ಹಾತೆಗಳು ಮರಿ ಇಡುವುದು ನೀರಿನಲ್ಲಿ. ಇವುಳ ಮರಿಯನ್ನು ನಿಂಫ್ ಎನ್ನುತ್ತಾರೆ. ನಿಂಫ್ಗಳು ನೀರಿನಲ್ಲೇ ಸುಮಾರು 4 ವರ್ಷಗಳ ಕಾಲ ಬದುಕಿ ಹೊರ ಬಂದು ಹಾತೆಗಳಾಗುತ್ತವೆ. ಚಿಟ್ಟೆಗಳಂತೆ ಇವುಗಳ ಜೀವನವು ಅನೇಕ ಹಂತಗಳನ್ನು ಒಳಗೊಂಡಿದ್ದರೂ ಇವು ಚಿಟ್ಟೆಗಳಲ್ಲ! ಹಾತೆಗಳಾಗುವ ರೂಪ ಪರಿವರ್ತನೆಯ ಗುಟ್ಟನ್ನು ತಮ್ಮ ಮೆದುಳಿನೊಳಗೆ ಅಡಗಿಸಿಟ್ಟುಕೊಂಡಿರುತ್ತವೆ, ಜೊತೆಗೆ ಯಾವುದೇ ಗಡಿಯಾರವಿಲ್ಲದೆಯೇ ಕಾಲದ ಗಣತಿಯೂ! ಇವು ನೀರಿನಿಂದ ಹೊರಬಂದು ಚಿಟ್ಟೆಯಾಗುವುದನ್ನು ಒಮ್ಮೆ ನೋಡಬೇಕು. ಮತ್ತೊಂದು ವಿಶಿಷ್ಟ್ಯ ಜೀವಿಯೊಂದಿಗೆ ಮತ್ತೊಮ್ಮೆ ಭೇಟಿಯಾಗೋಣ. ಅಲ್ಲಿಯವರೆಗೆ ಅಲ್ವಿದಾ.
Subscribe to:
Post Comments (Atom)
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...
No comments:
Post a Comment