Saturday, November 21, 2020

ಚಿಟ್ಟೆ ಎಂಬ ಅಮಿತ ಅಚ್ಚರಿಗಳ ಮೂಟೆ!!


 
ಪ್ಯೂಪಾದಿಂದ ಹೊರಬಂದಾಗ
ಅದ್ಯಾಕೋ ಈ ಬಾರಿಯ ಅಕ್ಟೋಬರ್(2020) ತಿಂಗಳು ಬಹಳ ಆಪ್ಯಾಯಮಾನವಾಯಿತು. ಪ್ರಕೃತಿ ವಿಸ್ಮಯದ ಕೆಲವು ತುಣುಕುಗಳನ್ನು ನನ್ನ ಮುಂದೆ ಹಿಡಿದಿದ್ದೇ ಈ ವಿಶೇಷತೆಗೆ ಕಾರಣ. 
 
ಈ ಬಾರಿ ಬಿಡದೇ ಸುರಿದ ಬಾರೀ ಮಳೆಗೆ ಬೆಳೆ ಕೊಚ್ಚಿ ನಾಶವಾದರೆ ಅನೇಕ ಕ್ರೀಮಿ, ಕೀಟಗಳೂ, ಜೇಡಗಳು ತಮ್ಮ ಜೀವ ಕಳೆದುಕೊಂಡವು. ಇಂತಹ ಸಂಧಿ ಕಾಲದಲ್ಲಿ ಪ್ರಕೃತಿ ನಮಗೆ ತನ್ನ ಗುಟ್ಟನ್ನು ಅತಿ ಸುಲಭಕ್ಕೆ ಬಿಟ್ಟುಕೊಡುವುದೇ ಇಲ್ಲ. ಅದಕ್ಕೆ ನಾವು ಬಹಳ ಶ್ರಮ ಪಡಬೇಕು. 

pupa.

ಚಿಟ್ಟೆಯೊಂದು ತನ್ನ ಪ್ಯೂಪಾ ಸ್ಥಿತಿಯಿಂದ ದಾಟಿಕೊಂಡು ಬರುವ ವಿಸ್ಮಯಕ್ಕೆ ಸಾಕ್ಷಿಯಾಗಬೇಕೆಂಬ ಹಂಬಲವೊಂದು ನನ್ನೊಡಲಿನಲಿ ಬೆಚ್ಚಗೆ ಕುಳಿತ್ತಿತ್ತು.ಆದರೂ ಸಾಧ್ಯವಾಗಲೇ ಇಲ್ಲ. ಅವಂತೂ ಮಳೆಗಾಲದಲ್ಲೇ ಚಿಟ್ಟೆಯಾಗಿ ಹೊರ ಹೊಮ್ಮುವವು. ನೋಡಿದ ಪ್ಯೂಪವನ್ನು ನೆನಪಿಟ್ಟುಕೊಂಡು ದಿನಗಟ್ಟಲೇ ಅದರ ಮುಂದೆ ತಪಸ್ಸು ಮಾಡಬೇಕು. ಎಲ್ಲಾ ಪ್ಯೂಪಾಗಳು ಚಿಟ್ಟೆಯಾಗುವವು ಎಂಬ ಖಾತರಿ ಕೂಡಾ ಇಲ್ಲ. ನಾವು ನೋಡುವ ಸಮಯಕ್ಕೂ ಅದೂ ಹೊರ ಬರುವುದಕ್ಕೂ ಸರಿ ಹೊಂದಬೇಕು!! ಎಲ್ಲವೂ ಹೊಂದಾಣಿಕೆಯಾಗಿ ಸಿಗುವುದು ಬಲು ಅಪರೂಪ. ಕೆಲವು ಚಿಟ್ಟೆಯಾದರೆ ಕೆಲವು ಪತಂಗ (ಮೊತ್).


ಪ್ರತೀ ಚಿಟ್ಟೆಗೂ ಅದರದೇ ಆದ ಮಾತೃ ಗಿಡವೊಂದೊ ಎರಡೋ ಮೊಟ್ಟೆಯಿಡಲು ಆಯ್ಕೆ ಮಾಡಿಕೊಳ್ಳುವುದು. ಇದು ಪ್ರಕೃತಿಯ ಆಯ್ಕೆ. ಮಿಲಿಯಗಟ್ಟಲೆ ವರ್ಷದಿಂದ ನಡೆದುಬಂದ ರೀತಿ. ಮೊಟ್ಟೆಯಿಂದ ಹೊರಬಂದ ಚಿಟ್ಟೆಯ ಎರಡನೇ ಹಂತವಾದ ಹುಳವು ಮರಿಯಾಗಿ ಗಿಡದ ಸರ್ವ ಎಲೆಯನ್ನು ಭಕ್ಷಿಸಿ ಅದೇ ಗಿಡದಲ್ಲೊಂದು ಗೂಡು ನಿರ್ಮಿಸುವವು. ಈ ಗೂಡಿನಲ್ಲೇ ಅನೇಕ ದಿನಗಳ ಕಾಲ ಆಹಾರವಿಲ್ಲದೇ ಮಲಗಿ ಚಿಟ್ಟೆ ಎಂಬ ಹುಳ ರೂಪ ಪರಿವರ್ತನೆಯಾಗಿ ಚಿಟ್ಟೆಯಾಗುವುದು. ಈ ವಿಸ್ಮಯವನ್ನು ಈ ಬಾರಿಯ ದಸರಾ ರಜೆ ನನಗೆ ದಯಪಾಲಿಸಿದ್ದು ನನ್ನ ಪಾಲಿನ ಪುಣ್ಯ.




ತನ್ನ ಮರಿ ಹೊರ ಬರಲು ಸೂಕ್ತವಾದ ಗಿಡವನ್ನೇ ಚಿಟ್ಟೆ ಆಯ್ಕೆ ಮಾಡಿಟ್ಟುಕೊಂಡು ಮೊಟ್ಟೆ ಇಡುವುದು. ಮೊಟ್ಟೆ ಇಟ್ಟ ಬಳಿಕ ಅದರ ಕೆಲಸ ಮುಗಿದು ಹೋದಂತೆ. ವಾತಾವರಣದ ಶಾಖ ಮತ್ತಿತರ ಅನುಕೂಲವನ್ನು ಬಳಸಿ ಮೊಟ್ಟೆ ಒಡೆದು ನಿಧಾನಕ್ಕೆ ಮರಿ ಹುಳವಾಗಿ ಹೊರಬರುವುದು. ಹೊರ ಬಂದ ಮೇಲೆ ಅವಕ್ಕೆ ಪುರುಸೊತ್ತೆಂಬುದೇ ಇಲ್ಲ. ಬರೀ ಎಲೆ ತಿನ್ನುವ ಕಾಯಕ. ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೇ ಅವ್ಯಾಹತ ಎಲೆ ಭಕ್ಷಣೆ. 


ಭಕ್ಷಣೆ ಮುಗಿಯಿತು ಎಂದ ಕೂಡಲೇ ತನ್ನ ದೇಹದಿಂದ ನೂಲನ್ನು ಬಿಟ್ಟು ಗೂಡು ನಿರ್ಮಿಸುವುದರಲ್ಲಿ ನಿರತ. ಮೊದಲೆರಡು ನೂಲನ್ನು ಬಿಟ್ಟು ನೇತಾಡಿಕೊಂಡಿದ್ದು ಒಂದೆರಡು ದಿನದಲ್ಲಿ ಗೂಡು ಕಟ್ಟಲು ತಯಾರಿ ಶುರು. 


ತನ್ನ ಸುತ್ತ ತನ್ನದೇ ದೇಹದ ಎಳೆ ಬಿಟ್ಟು ಗೂಡು ಕಟ್ಟುತ್ತೆ. ತನ್ನನ್ನು ತಾನೇ ಬಂದಿಸಿಕೊಳ್ಳುವ ಎರಡನೇ ಜೀವಿ. ಮೊದಲನೆಯದು ಮನುಷ್ಯ! ಹೀಗೆ ಬಂದಿಸಿಕೊಂಡು ಮಲಗಿ ಬಿಟ್ಟರೆ ಮತ್ತೆ ಏಳುವುದು ಕಾಲನ ಕರೆ ಬಂದಾಗಲೇ. ಭ್ರೂಣದಲ್ಲೇ ಕಪ್ಪಾಗಿ ಅಲ್ಲೇ ಸಾಯುವವೂ ಇವೆ. ಇರುವೆಗಳು ಇವುಗಳ ಕೋಶವನ್ನು ಒಡೆದು ಒಳಗಿನ ರಸ ಹೀರುವವು. ಹಾಗಾಗಿ ಇರುವೆಗಳಿಲ್ಲದ ಜಾಗವನ್ನು ಮೊಟ್ಟೆ ಇಡುವ ಚಿಟ್ಟೆ ಆಯ್ಕೆ ಮಾಡಿಕೊಳ್ಳಬೇಕು. 

ಅಂತೂ ಬಂತು-


ಹೀಗೆ ಮಲಗಿದ ಹುಳವೊಂದು ಕೆಲವು ದಿನಗಳ ಬಳಿಕ ಒಳಗೊಳಗೆ ರೆಕ್ಕೆ ಮೂಡಿ, ರೆಕ್ಕೆ ಮೂಡಿದ ಎಚ್ಚರವು ಅದಕೆ ತಿಳಿದು ನಿಧಾನಕ್ಕೆ ಕೋಶ ಒಡೆದು ಚಿಟ್ಟೆಯಾಗಿ ಹೊರ ಹೊಮ್ಮುವುದು. 
A Butterfly coming out of pupa.


ರೆಕ್ಕೆ ಮೂಡಿದುದು ತಿಳಿವ, ಕೋಶ ಹರಿದು ಹೊರ ಬರುವ ವಿಸ್ಮಯಕೆ ಬೆರಗಾದೆನೆಂಬುದು ಕಡಿಮೆ. ವಿಸ್ಮಯದಲಿ ಮಿಂದ ಪುಳಕ ನನ್ನೊಡಲಿನಲಿ ಹಾಗೇ ಇದೆ ಇನ್ನು. ಎಂದು ನೀವು ನನ್ನೊಂದಿಗೆ ಹೊಸ ವಿಸ್ಮಯಕೆ ಸಾಕ್ಷಿಯಾಗುವಿರಿ. 

ಮುಂದಿನ ಅಚ್ಚರಿ....

ಹುಟ್ಟಿದ ಕೂಡಲೇ ಕೂಡಿಕೆ-





ಶ್ರೀಧರ್. ಎಸ್. ಸಿದ್ದಾಪುರ


 

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...