Friday, March 19, 2021

ಕಥನದ ಜಾಡು ಹಿಡಿದು..

ಅಂದು ಆಕೆ 9 ನದಿಗಳನ್ನು ದಾಟಿ ವಾಸುದೇವನನ್ನು ನಡೆಸಿಕೊಂಡು ತನ್ನ 6 ತಿಂಗಳ ಕೂಸು ದೇವಕಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಸತತ ಹತ್ತು ದಿನಗಳ ಕಾಲ ನಡೆಯದೇ ಹೋಗಿದ್ದರೆ, ಮೊಗೆಕಾಯಿ ತೆಳ್ಳೇವು , ಜೋನಿ ಬೆಲ್ಲದ ಆಸೆಗೆ ಬಲಿಯಾಗದೇ ಶಿವಾನಂದ ಕಳವೆಯವರು ಪಟ್ಟಣ ಸೇರಿದ್ದರೆ ಈ ಅತ್ಯಪೂರ್ವ ಕಥನದ ಹಾದಿ ತುಳಿಯುವ ಅಗತ್ಯ ಬರುತ್ತಲೇ ಇರುತ್ತಿರಲಿಲ್ಲ. ಈ ಅಭೂತಪೂರ್ವ ಘಟನಾವಳಿ ನಮ್ಮನ್ನು ಈಗ ನಿಮ್ಮನ್ನು ಬೆಸೆದಿದ್ದು. 


ಬಂಡೆ ತಬ್ಬಿದ ಮರ....ಚಾರಣದ ನಡುವೆ.

 
ಕಾಡಿನ ಕಥನ ಕಾಡುವ ಕಥನದ ಜಾಡು ಹಿಡಿದು...
ಶಿರಸಿ ಸೀಮೆಯ ಪುಟಾಣಿ ಹಳ್ಳಿಯ ಕಥನವೇ ಮಧ್ಯಘಟ್ಟದ ಹೂರಣ. ಕಾದಂಬರಿಯ ಹೂರಣವನ್ನು ಹೊಂದಿದ ಜನ-ಜೀವನದ ದಸ್ತಾವೇಜು. ಶಿರಸಿಯಿಂದ 37 ಕಿ. ಮೀ ದೂರದ ಮತ್ತಿಘಟ್ಟವೆಂಬ ಘಟ್ಟದ ಮಧ್ಯ ಭಾಗದಲ್ಲಿ ನಡೆವ ಕಥನ. ಇಲ್ಲಿನ ಕಷ್ಟ ಕಾರ್ಪಣ್ಯಗಳು, ಹಬ್ಬಗಳು, ಬಳಸುವ ಔಷಧೀಯ ಮೂಲಿಕೆಗಳು, ತಂಬುಳಿಗೆ ಬೇಕಾಗುವ ಚಿಗುರು ಕುಡಿಗಳ ವಿವರಗಳು, ಆಹಾರ ಸಂಸ್ಕೃತಿ, ಇಲ್ಲಿನ ಪಲ್ಲಟಗಳನ್ನು ನವಿರಾಗಿ ಚಿತ್ರಿಸಿದ ಕಾದಂಬರಿ. ಈ ಕಾದಂಬರಿಯ ಪಾತ್ರಗಳು ಸವೆಸಿದ ಹಾದಿಯಲ್ಲಿ ಸಾಗುವ ಅನನ್ಯ ಅನುಭವ. ಸುಮಾರು 75 ವರುಷಗಳ ಕೆಳಗೆ ತಾಯಿಯೊಂದಿಗೆ ನಡೆದು ಬಂದ ವಾಸುದೇವ ಹೆಗಡೆಯವರೊಂದಿಗೆ ಸಂವಾದಿಸುವ ಅಪೂರ್ವ ಅವಕಾಶ.

ಗೋಪಯ್ಯ ಹೆಗಡೆ ಮನೆಯಲ್ಲಿ....

ವಾಸುದೇವ ಹೆಗಡೆ ಮನೆ  ಎದುರು 

ತೇಜಸ್ವಿ ಕಾದಂಬರಿ ಬಿಟ್ಟರೆ ಇದೇ ಮೊದಲು ಕಾದಂಬರಿಯ ಪಾತ್ರವೊಂದು ಓದುಗರೊಂದಿಗೆ, ಲೇಖಕರೊಂದಿಗೆ ಸಂವಾದಿಸಿದ ವಿಶೇಷ ಸಂದರ್ಭವೊಂದು ಸೃಷ್ಟಿಯಾಯಿತು! ಎಲ್ಲದಕ್ಕೂ ಶಿವಾನಂದ ಕಳವೆಯವರು(ಮಧ್ಯಘಟ್ಟದ ಲೇಖಕರು) ಮೂಲ ಸೇತುವಾದರು. ಬನ್ನಿ ಕಥನದ ಜಾಡು ಹಿಡಿಯೋಣ.

ಗೋಪಯ್ಯ ಹೆಗಡೆ ಮನೆ....

ಕಥನದ ಜಾಡು ಹಿಡಿದು ಸಾಗಿದ್ದು ವೆಂಕಟರಮಣ ವೈದ್ಯರ ಮನೆಯಿಂದ. ದೇಸಿ ತಿಂಡಿಯಾದ ಕಡಬು, ಅವಲಕ್ಕಿ, ಜೋನಿ ಬೆಲ್ಲ, ತುಪ್ಪದ ನೈವೇದ್ಯ ನಡೆದು ಪನಿವಾರ ಸೇವಿಸಿ ಕಾಡು ಹರಟೆಯಲಿ ಲೀನವಾಗಿ ವಾಸುದೇವ ಹೆಗಡೆ ಮನೆಯತ್ತ ಕಾಲಿರಿಸಿದೆವು. ಮನೆಯ ಸನಿಹ ಹರಿವ ಹಸೆ ಹಳ್ಳದ ಆರ್ಭಟವ ಆಲಿಸುತ್ತಾ ಮುಂದೆ ಸಾಗಿ ಬಂದೆವು. ಹಸೆ ಹಳ್ಳ ಬೋರ್ಗೆಯುತ್ತಾ ಕಣಿವೆಗೆ ಮುಖಮಾಡಿ ಧುಮುಕುವ ಸೊಬಗೇ ಅಪ್ಯಾಯಮಾನ. ಮುಖಚಿತ್ರಕ್ಕೆ ಅಂಟಿಸುವ ಸಲುವಾಗಿ ಕೆಲವು ಚಿತ್ರಗಳನ್ನು ವಾಸುದೇವರ ಮನೆಯಲ್ಲಿ ತೆಗೆದುಕೊಂಡೆವು. ವಯಸ್ಸಿನ ಕಾರಣದಿಂದ ವಾಸುದೇವ ಹೆಗಡೆಯವರು ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿ ಆ ಮನೆ ಈಗ ಖಾಲಿ. 

ಬಾಯಾರಿಕೆ ನೀಗಿಸುವ ನುರುಕಲು.


ಶೋಭಾ, ಗಜಪತಿ ಹೆಗಡೆ ಹಲಸಿನ ಸೊಳೆ ಚೆರಿಗೆಯೊಂದಿಗೆ.



ಮುಂದೆ ವಾಸುದೇವ ಹೆಗಡೆಯ ಅಕ್ಕನ ಮನೆ ಅಂದರೆ ಗೋಪಯ್ಯ ಹೆಗಡೆ ಮನೆಗೆ ಪಯಣ. ಅವರದು ಮೂರಂತಸ್ತಿನ ಹೆಂಚಿನ ಮನೆ. ಮಣ್ಣು ಕಲ್ಲಿನ ಮಿಶ್ರಣಕ್ಕೆ ಸಿಮೆಂಟ್ನ ಹೊದಿಕೆ. 75-80 ವರುಷ ಸಂದರೂ ಗಟ್ಟಿ ಮುಟ್ಟಾಗಿದೆ. ದೇಸಿ ತಂತ್ರಜ್ಞಾನದಲಿ ಅರಳಿದ ಮನೆ. ವಿಶಾಲವಾದ ಜಗಲಿ, ವಿಶಾಲ ತಂಪಾದ ಹಜಾರ, ಸ್ವಚ್ಚ ಉಪ್ಪರಿಗೆ, ಅಡಿಕೆ ಒಣಗಿಸೊ ಚಾವಣಿ, ಮನೆ ಸುತ್ತ ಹೂವಿನ ಗಿಡಗಳು, ಅದರಲ್ಲೂ ವಿಶೇಷವಾಗಿ ಆಕರ್ಷಿಸಿದ್ದು 20 ವಿಧದ ಮಲ್ಲಿಗೆ ತಳಿಗಳು, ತರವಾರಿ ತರಕಾರಿಗಳು ಕಣ್ಮನ ಸೆಳೆದವು. ನಾವು ಗೋಪಯ್ಯ ಹೆಗಡೆಯವರ ಮಗ ಗಜಪತಿ ಹೆಗಡೆ ಮತ್ತು ಶೋಭಾರು ತಮ್ಮ ನೆನಪ ಕನ್ನಡಿಯ ಬಿಂಬಗಳಿಂದ ನಮ್ಮನ್ನು ತೋಯಿಸಿದರು. 250 ಹಲಸಿನ ಹಣ್ಣಿನ ಸೊಳೆ ಹಿಡಿಸುವ ದೊಡ್ಡ ಹಲಸಿನ ಮರದ ಚರಿಗೆಯೊಂದು ನಮ್ಮ ಪರಂಪರಾಗತ ಜ್ಞಾನದ ಕೊಂಡಿಯಾಗಿ ಇನ್ನೂ ಅವರ ಮನೆ ಎದುರಿಗೆ ಮೂಕ ಸಾಕ್ಷಿಯಾಗಿ ನಿಂತಿದೆ.


ಶಿವಾನಂದ ರ ಮೂಲಿಕೆ ಪರಿಚಯ ...

ದಾರಿಯಲ್ಲಿ ಸಿಕ್ಕ ಮೀಸೆ ಮಾವ.






ಇಂತಹ ಹಲವಾರು ವಸ್ತುಗಳು ಅವರ ಮನೆಯಲ್ಲಿದೆ.  ಅಡಿಕೆ ಬೆಳೆಗಾರರಾಗಿದ್ದ ಅವರಿಗೆ ಮಳೆಗಾಲದಲ್ಲಿ ಹೊರ ಹೋಗಲು ಆಗದೇ ಊಟಕ್ಕೆ ಅಕ್ಕಿಯ ದಾಸ್ತಾನು ಮುಗಿದಾಗ, ಲಭ್ಯವಿಲ್ಲದಾದಾಗ ಹಲಸಿನ ಹಣ್ಣಿನ ಸೊಳೆ ತಿಂದು ದಿನ ದೂಡಿದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಹಿಂದಿನವರಿಗೆ ತಿಳಿದ ವಿಜ್ಞಾನದ ಜ್ಞಾನ, ಸಾಮಾನ್ಯ ಜ್ಞಾನ ಇಂದಿನವರಿಗೆ ಇಲ್ಲ! ಹಾಗೆಯೇ ಬಾಳೆ ಕಾಯಿ ತಿಂದು ಬದುಕಿದ ತಮ್ಮ ನೆನಪ ಜೋಳಿಗೆಯಿಂದ ಹರಿದು ಬಂದವು.




ನಮ್ಮ ಹಿಂದಿನವರ ವಸ್ತು ವಿಜ್ಞಾನದಲಿ ಪಳಗಿದವರು, ಹಲಸಿನ ಸೊಳೆ ಒಣಗಿಸಲು ಒಂದು ಜಾತಿಯ ಮರವಾದರೆ, ದೊಣಪೆಗೆ ಒಂದು ಜಾತಿ, ಮನೆಯ ಪಕಾಸಿ, ಜಂತಿ, ತೊಲೆ, ದಿಂಡುಗಳಿಗೆ ಬಳಸಿದ ಮರಗಳು ಬೇರೆ ಬೇರೆ. ಯಾವ ಮರವೂ ಒರಲೆ ಹಿಡಿಯದೇ ಹಾಗೆಯೇ ಉಳಿದು ನಮ್ಮನ್ನು ಅಚ್ಚರಿಗೆ ಕೆಡವಿದೆ. ಕಡಿಯುವ ಸಮಯ, ನಾಜೂಕು ಎಲ್ಲವೂ ಮರದ ಭವಿಷ್ಯವನ್ನು ನಿರ್ಧರಿಸುತ್ತವೆ ಎನ್ನುತಾರೆ ಶಿವಾನಂದ ಅವರು. ಮರ ಕೊಯ್ಯುವಾಗಲೂ  ಹುಣ್ಣಿಮೆ, ಅಮಾವಾಸ್ಯೆಯನ್ನು ಗಮನದಲ್ಲಿರಿಸಿ ಕಡಿಯಲಾಗುತ್ತದೆ!! ಇಂತಹ ಪಾರಂಪರಿಕ ಜ್ಞಾನಕ್ಕೆ ನಾವು ಬೆರಗಾದೆವು. 



ಮುಂದಿನ ಕಾಡಿನ ಹಾದಿಯಲಿ ಪರಿಚಯಗೊಂಡ ಗಿಡ ಮೂಲಿಕೆಗಳು ಅನೇಕ. ಬಾಯರಿಕೆ ನೀಗಿಸಲು ಬಳಸುತ್ತಿದ್ದ ನುರುಕಲು ಗಿಡ, ನೀರನ್ನು ಒಸರುವ ಮರಗಳ ಪರಿಚಯವನ್ನು ಶಿವಾನಂದ ಕಳವೆಯವರು ಮಾಡಿಕೊಟ್ಟರು. ಕಣಗಿಲೆ, ಬಿಳಿಸಾರೆ ಮರ, ಕರಿ ಮತ್ತಿ, ಬಿಳಿ ಮತ್ತಿ, ಹಿಂದಿನವರು ಸೋಪಿನಂತೆ ಬಳಸುತ್ತಿದ್ದ ಗಣಪೆ ಬಳ್ಳಿ ಪರಿಚಯಗೊಂಡ ಮರ ಬಳ್ಳಿಗಳು. ತಂಬಳಿ ಮಾಡಬಹುದಾದ ನಡೆತೆ ಕುಡಿ, ಕೆಂದಿಗೆ ಕುಡಿಯನ್ನು ಪರಿಚಯಿಸಿದರು. ದಕ್ಷಿಣ ಆಫ್ರಿಕಾದಿಂದ ಬಂದ ಸಿದ್ದಿಗಳ ಹಬ್ಬ, ಅವರ ದೇವರಾದ ಸಿದ್ದಿ ನ್ಯಾಸದ ಕುರಿತೂ ಮಾತು ಕತೆಯಾಯಿತು.
ಮತ್ತೆ ಮತ್ತೆ ನೆನಪ ಜೋಳಿಗೆಯಿಂದ ಮೊಗೆವಷ್ಟು ಸಂತಸವನ್ನು ಕೊಟ್ಟ 8 ಕಿ.ಮೀ ಚಾರಣವು ಪ್ರಮೋದ್ ವೈದ್ಯರ ಮನೆ ವಸತಿಯಲ್ಲಿ ಕೊನೆಗೊಂಡಿತು. ಮಾತಿಗೆ ಮಾತು ಜೋಡಿಸಿಕೊಂಡು ಮುಗಿದಂತೆ ಕಂಡರೂ ಅವರವರ ನೆನಪ ಬುತ್ತಿಯಲಿ ಅನುರಣಿಸುತಿದೆ. ಹೊಸ ಕಲಿಕೆಗೆ ಹಾದಿ ತೆರೆದಿದೆ.

ಶ್ರೀಧರ್. ಎಸ್. ಸಿದ್ದಾಪುರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...