Showing posts with label ಪ್ರಕಟಿತ ಲೇಖನ.. Show all posts
Showing posts with label ಪ್ರಕಟಿತ ಲೇಖನ.. Show all posts

Sunday, May 25, 2025

ಹೂ ಕಣಿವೆಯಲಿ…

 ನೇಪಾಳ ಮತ್ತು ಭೂತಾನ್ ನಡುವೆ ಸಿಕ್ಕಿಹಾಕಿಕೊಂಡ ಸಿಕ್ಕಿಂನ ಕಥೆ ನಿಮ್ಮ ಮುಂದೆ. ಡಾರ್ಜಲಿಂಗ್‌ ನಲ್ಲಿಳಿದು ಸಿಕ್ಕಿಂಗೆ ಕಾಲಿಪೊಂಗ್‌ ಮೂಲಕ ದಾಟಿಕೊಂಡ ಅನನ್ಯ ಅನುಭವ.

ಲಾಚೆನ್‌ ಟೂ ಲಾಚುಂಗ್‌ ….

 ಸಿಕ್ಕಿಂನ ಲಾಚೆನ್ನಿಂದ ಲಾಚುಂಗ್ಗೆ ಬಂದಾಗ ಇಳಿಸಂಜೆ. ನಮ್ಮ ದಾರಿಗುಂಟ ಹರಿದ ನದಿಯ ಹೆಸರನ್ನು ಯಾರಲ್ಲೇ ಕೇಳಿದರು ಹೇಳುವ ಹೆಸರೊಂದೇ ತೀಸ್ಟಾ!

ಲಾಚುಂಗ್‌ನ ಪ್ರತಿ ಮನೆಯ ದಣಪೆ ಆಚೆಗಿನ ದಾರಿ ದಾಟುತ್ತಲೇ ಸಿಕ್ಕಿಂನ ತೀಸ್ಟಾ ನದಿ ಮೌನವಾಗಿ ಹರಿಯುತ್ತಾಳೆ. ಎಲ್ಲೆಲ್ಲೂ ಅಡ್ಡಗಟ್ಟಿಸಿಕೊಂಡು ಮನುಜನ ಅಭೀಪ್ಸೆಗೆ ಬಲಿಯಾಗಿ ʼಹರಿʼ ಯುತ್ತಾ ಅನೇಕರ ತುತ್ತಿನ ಚೀಲಕ್ಕೂ ದಾರಿಯಾಗಿದ್ದಾಳೆ. ಸಿಕ್ಕಿಂನ ಲಾಚುಂಗ್ ಕಣಿವೆಯುದ್ದಕ್ಕೂ ಬೆಳೆವ ಸೊಪ್ಪು ತರಕಾರಿಗಳಲ್ಲಿ ಇವಳದೇ ಪರಿಮಳ. ಸಿಕ್ಕಿಂನಲ್ಲಿ ಹುಟ್ಟಿ ತಾಯಿಯಾದವಳು ಬಂಗಾಲಕ್ಕೆ ಬರುತ್ತಲೇ ಕಾಳಿಯಾಗುತ್ತಾಳೆ. ಇಬ್ಬರಿಗೂ ನದಿಯು ಸೇತುವೆ ಕಟ್ಟಿದೆ. ಇವಳು ಸಿಕ್ಕಿಂನಿಂದ ಬ್ರಹ್ಮ ಪುತ್ರ ನದಿಯನ್ನು ಅಪ್ಪುವವರೆಗಿನ ತನ್ನ ದೀರ್ಘ ಪಯಣದಲ್ಲಿ ಮನುಜರ ಅಪರಿಮಿತ ಅಭೀಪ್ಸೆಗೆ ಕನಿಕರಿಸಿದ್ದಾಳೆ. ಬಂಗಾಲಿಗರಿಗೆ ಬುಟ್ಟಿ ತುಂಬಾ ಮೀನಿತ್ತು ಹರಿಸಿದ್ದಾಳೆ. ತೀಸ್ಟಾ ನದಿಯ ಟ್ರಾಟ್‌ ಮೀನಿನ ರುಚಿ ಅತ್ಯದ್ಭುತ. ಗುಡ್ಡ ಗುಡ್ಡಗಳ ಹನಿಗಳಿಗೂ ಇವಳ ಪ್ರೇಮ. ಲಾಚೆನ್‌ ನಿಂದ ಝೀರೋ ಪಾಯಿಂಟ್‌ ತಲುಪುವವರೆಗಿನ ಇವಳ ಸಂಗಗಕ್ಕೆ ಸಿಲುಕಿದ ನೂರಾರು ಝರಿಗಳ ಕಥನವು ವಿಭಿನ್ನ. ಬನ್ನಿ ಹರಿ ಕಥೆ ಶುರು ಮಾಡೋಣ! 

ತಿರುಗಿದೆ ವಿಳಾಸವಿಲ್ಲದೇ -


ಲಾಚೆನ್‌ ದಾಟುತ್ತಲೇ ಯುಗಾಂಗ್‌ ಜಲಧಾರೆಯೊಂದು ಅದೆಲ್ಲಿಂದಲೋ ಇದನ್ನು ಕಾಣಲು ಕಾತರತೆಯಿಂದ ಧುಮುಕುತ್ತದೆ. ಕಿವಾ ಎಂಬ ಇನ್ನೊಂದು ಜಲಧಾರೆ ನಾನೆಂಬ ನಾನು ಯಾವುದಕ್ಕೂ ಕಡಿಮೆ ಇಲ್ಲ ಎನ್ನುತ್ತಾ ಬಳುಕುತ್ತಾ ಹೋಗಿ ಬರುವವರಿಗೆಲ್ಲಾ ಟಾಟಾ ಬಾಯ್‌ ಬಾಯ್‌ ಮಾಡುತ್ತಿದ್ದಳು. 

ಪದ್ಯಗಳ ಅಡಿಗಡಿಗೆ ನುಗ್ಗುವ ಪ್ರಾಸದಂತೆ ಪ್ರಯಾಸವಿಲ್ಲದೇ ಗಿರಿ ನೆತ್ತಿಗಳ ಮೇಲಿಂದ ಸುರಿಯುತ್ತಲೇ ಇರುತ್ತದೆ. ಇವರನ್ನೆಲ್ಲಾ ಸೆರಗಿಗೆ ಕಟ್ಟಿಕೊಂಡು ಬ್ರಹ್ಮ ಪುತ್ರದೊಡಲಿಗೆ ಸೇರಲು ತವಕದಿ ಓಡುತ್ತಾಳೆ ತೀಸ್ಟಾ. 





ರಸ್ತೆ ರಿಪೇರಿಗೆ ನಿಂತ ಕಿನ್ನರರು ಎಲ್ಲಿಗೆ ಹೊರಟಿರುವಿರಿ ಎಂದು ಸನ್ನೆಯಲ್ಲೇ ಕೇಳುವರು. ಬ್ರೆಡ್ಡು ಕೂಡಿಟ್ಟಂತಹ ಕಲ್ಲು ರಸ್ತೆಯಲ್ಲಿ ಎಣ್ಣೆ ಕುಡಿದವರಂತೆ ಜೀಪು ಜೋಲಿ ಹೊಡೆಯುತ್ತಿತ್ತು. ಕೆಲವು ಕಲ್ಲುಗಳು ನಮ್ಮನ್ನು ಕಾಣಲು ರಸ್ತೆ ಬದಿಗೆ ಬಂದು ನಿಂತಿದ್ದವು!!

ಪ್ರತೀ ಕುಲುಕಾಟಕ್ಕೂ ಬೆನ್ನು ಹುರಿಯ ಲೆಕ್ಕ ಸಿಗುತ್ತಿತ್ತು. ಹೊಸ ಹಾದಿಯ ಹುಡುಕಾಟದಲ್ಲಿ ಇದೆಲ್ಲಾ ಮಾಮೂಲು ಎಂಬ ಹಸಿ ವೇದಾಂತ. ಇಂತಹ ಪರಿಸ್ಥಿತಿಯಲ್ಲೂ ತಣ್ಣಗೆ ಬದುಕುವ ಇವರ ಪ್ರಶಾಂತತೆಗೆ ದೊಡ್ಡ ಹೊಟ್ಟೆ ಕಿಚ್ಚು. 
ಹೂ ಕಣಿವೆಯ ಧ್ಯಾನ

 ಅಚಾನಕ್‌ ಆಗಿ ಆಯ್ದುಕೊಂಡ ಹೊಸ ದಾರಿಯಲ್ಲಿ ಸಿಕ್ಕ ಸಿಕ್ಕಿಂನ ಹೂ ಕಣಿವೆಯ ಯುಮ್‌ ತುಂಗ್‌ ಕಣಿವೆ ಮತ್ತು ಶಿಂಗ್‌ ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. ಹೂ ಕಣಿವೆ ಸವಿಯಲು ಲಾಚುಂಗ್‌ ನಲ್ಲಿ ತಂಗಲೇ ಬೇಕು! 
 ಬೆಟ್ಟಕ್ಕೆ ಕಾವಲು ನಿಂತ ಇಂಡೋ ಟಿಬೇಟಿಯನ್‌ ಬೆಟಾಲಿನ್‌ . ನಾರಿ ಕೊರಳ ಹಾರದಂತೆ 


ಊರ ಹೆಬ್ಬಾಗಿಲಿನಲ್ಲಿ ಬೆಟ್ಟವೊಂದಕ್ಕೆ ನಾಚಿಕೆ ಇಲ್ಲದೇ ಜಲಪಾತವೊಂದು ಜೋತುಬಿದ್ದಿತ್ತು. ಓಂ ಮಣಿ ಪದ್ಮೇ ನಮಃ ಹೀಗೆ ಬೌಧ್ದರ ಭಾಷೆಯಲ್ಲಿನ ಭೌದ್ಧ ಧ್ವಜ ತೂಗುಹಾಕಲಾಗಿತ್ತು. ಊರ ಮಹನೀಯರಲ್ಲಿ ಹೆಸರ ಕೇಳಿದರೆ ನೀವೇ ಒಂದು ನಾಮಕರಣ ಮಾಡಿಕೊಳ್ಳಿ ಎಂದು ನಿರ್ಲಿಪ್ತರಾದರು. ಊರ ಬೀದಿಯಲ್ಲಿ ಲಾಚುಂಗ್‌ ನದಿಯ ಹಿಮ್ಮೇಳ. 

ಹೊಟ್ಟೆ ಹಸಿದುದರಿಂದ ಬಜ್ಜಿ ಅಂಗಡಿಗೆ ಅಡಿ ಇಟ್ಟೆವು. ನೀರ ಕಣದೊಂದಿಗೆ ಬೆರೆತ ನದಿಯ ಹಿಮ್ಮೇಳ. ಸಂತೃಪ್ತ ಜನ. ಊರು ತಿಳಿಯಲು ನಾಲ್ಕು ಸುತ್ತು ಬಂದೆವು. ಎರಡು ಹಾಡಿನಷ್ಟೇ ದೂರದ ಪುಟಾಣಿ ಊರು. 


ಊರಿನ ಪೂರ್ವ ತುದಿಯಲ್ಲಿ ತಂಗಲು ವ್ಯವಸ್ಥೆಯಾಗಿತ್ತು. ಜವೆ ಗೋಧಿ, ಬಾರ್ಲಿ, ಹೂ ಕೋಸು, ಆಲೂಗಡ್ಡೆಯ ತೋಟದ ನಡುವೆ ನಮಗೆ ರೂಂ ನೀಡಲಾಗಿತ್ತು. ಕರಿ ಮಣ್ಣಿನ ತೋಟದಲಿ ಹೂಕೋಸು ನಲಿಯುತ್ತಿತ್ತು. ಕೈ ಎಟುಕಿದರೆ ಹೂ ಕೋಸು.
ಧ್ಯಾನಕ್ಕೆ, ಆಧ್ಯಾತ್ಮಕ್ಕೆ ಹೇಳಿ ಮಾಡಿಸಿದ ಊರು. ಇಲ್ಲಿಂದ ಶಿಂಗ್‌ಬಾ ಹೂ ಕಣಿವೆಗೆ ಬರೀ 23 ಕಿ.ಮೀ. ಸಂಜೆಯ ರಗ್‌ ಬಿಚ್ಚುತ್ತಲೇ ಚಳಿ ಅಮರಿಕೊಂಡಿತು. ಊರ ತುದಿಯಲ್ಲೊಂದು ತೊರೆ. ತೊರೆಗೆ ಕಾಲು ಬಿಟ್ಟು ಬೆಟ್ಟವೊಂದು ನಿಂತಿತ್ತು. ಬೆಟ್ಟದ ನೆತ್ತಿಯಲಿ ಐಸ್‌ ಕ್ರೀಂ ಟೋಫಿ. ಅದರ ಬುಡವ ಕಡಿದು ಅಲೆ ಅಲೆಯಾಗಿ ಗದ್ದೆ ನಿರ್ಮಿಸಿದ್ದರು. ಕೆಲವು ಗದ್ದೆಗಳಲ್ಲಿ ಹೋಂ ಸ್ಟೇ ತಲೆ ಎತ್ತಿದ್ದವು.

ಬೆಳ್ಳಂ ಬೆಳಿಗ್ಗೆ ಹೂ ಕಣಿವೆಯತ್ತ…
ಮಗುಚಿ ಬಿದ್ದ ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ದಾರಿಯಲಿ ಸರ್ಕಸ್‌ ಮಾಡುತ್ತಾ ನಮ್ಮ ರಥವೇರಿ ಹೊರಟಾಗ ಮನದ ಕದ ತೆರೆದಂತೆ ಬೆಟ್ಟಗಳ ಕದವನ್ನು ಯಾರೋ ತೆರೆದಿಟ್ಟಂತೆ, ತಾಜಾ ಮಾವಿನ ರುಚಿಯಂತೆ, ತಾಜಾ ಕವಿತೆಯಂತೆ ಹೊಸ ಲೋಕವೊಂದು ತೆರೆದುಕೊಂಡಿತು. ದೂರದಿಂದ ಬಂದ ನಮ್ಮನ್ನು ಕಾಣಲು ನೂರಾರು ಕಲ್ಲುಗಳು ಕೈಯಲ್ಲಿ ಕಳಶವಿಲ್ಲದೇ ರಸ್ತೆ ಗುಂಟ ನೆರೆದಿದ್ದವು!! 
ಅಮರೀಶ ಪುರಿಯ ಗಡ್ಡದಂತಹ ರಸ್ತೆ. ರಸ್ತೆ ಯಿಂದ ಅನತಿ ದೂರದಲ್ಲಿ ಹರಿವ ತಿಳಿ ಹಸಿರ ಲಾಚುಂಗ್‌ ನದಿ. ಹಳ್ಳಿಗರಿಗೆ ತೀಸ್ಟಾ. ಲಾಚುಂಗ್‌ ದಾಟುತ್ತ ಸ್ವಲ್ಪ ದೂರದಲ್ಲೇ ಶಿಂಗ್‌ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. 


ಸ್ವಾಗತಿಸಲು ನಿಂತಂತೆ ಕಾಣುವ ಸಾಲು ಸಾಲು ಡೆಂಡ್ರಾನ್‌ ಮರ. ಪ್ರತಿ ಮರದಲ್ಲೂ ಅರಳಿ ನಿಂತ ನೂರಾರು ಡೆಂಡ್ರಾನ್‌ ಪುಷ್ಪಗಳು. ಕ್ರಿಸ್‌ ಮಸ್ ಮರಕ್ಕೆ ಶೃಂಗರಿಸಿದಂತೆ ಕೆಂಪು, ತಿಳಿ ಅರಶಿನ, ನೇರಳೆ ಹೂ ಶೃಂಗಾರ.‌ ತಣ್ಣಗೆ ಹಸಿರಾಗಿ ಹರಿವ ನದಿ. ಸದಾ ತಣ್ಣಗಿರುವ ಹಿಮ ಪಾತ್ರೆಯಂತಹ ಹಲವು ಹೆಕ್ಟೇರ್‌ ಜಾಗವನ್ನು ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚರಿ ಎಂದು ನಾಮಕರಿಸಿದ್ದಾರೆ. ಯಾವುದೇ ಹೆಸರಿನ ಹಂಗಿಲ್ಲದ ನೂರಾರೂ ಹೂಗಳು ಕಣಿವೆಯುದ್ದಕ್ಕೂ ಅರಳಿ ಸ್ವಾಗತಕ್ಕೆ ನಿಂತಿದ್ದವು. ಭಾರತದ ವಿಶಿಷ್ಟ ಸ್ಯಾಂಚುರಿಯಲ್ಲಿ ನಾವಿದ್ದೆವು. ಎಪ್ರಿಲ್‌ ತಿಂಗಳು ಇಲ್ಲಿಗೆ ಭೇಟಿಕೊಡಲು ಪ್ರಶಸ್ತ. ಹಿಮಾಲಯದ ತಪ್ಪಲಿನಲಿ ಕೆಂಪು ರೆಡೋ ಡೆಂಡ್ರಾನ್‌ ಹೂಗಳು ಸಾಮಾನ್ಯ ಮತ್ತು ಸರ್ವಾಂತರಯಾಮಿ.

ಆದರಿಲ್ಲಿ ನೀವು 24 ಬಗೆಯ ರೆಡೋ ಡೆಂಡ್ರಾನ್‌ ಹೂಗಳಿಗೆ ಸಾಕ್ಷ್ಯವಾಗಬಹುದು. ಪ್ರತಿ ಹೂವು ವಿಶಿಷ್ಟ. ಜೊತೆಗೆ ಲಾಚುಂಗ್‌ ನಿಂದ 23 ಕಿ. ಮಿ ದೂರವಿರುವ ಝೀರೋ ಪಾಯಿಂಟ್‌ ಗೆ ಹೋಗಿ ಮನಸೋ ಇಚ್ಛೆ  ಆಡಬಹುದು. 



ಡೆಂಡ್ರಾನ್‌ ಹೂಗಳಿಗೆ ಮುತ್ತಿಕ್ಕಿ ಮುಂದಡಿ ಇಟ್ಟೆವು. ವಸಂತ ಕಾಲಿಡುತ್ತಿದ್ದಂತೆ ಯಾಕ್‌ಗಳನ್ನು ಇಲ್ಲಿ ಮೇಯಿಸಲಾಗುತ್ತದೆ. ವಸಂತವಿಡಿ ಕಣಿವೆಯಲ್ಲಿ ಮೆಂದು ಮಳೆಗಾಲಕ್ಕೆ ಮತ್ತೆ ಮರಳುತ್ತವೆ. ಸ್ಥಳೀಯರು ತಮ್ಮ ಗೂಡಿಗೆ ಅವನ್ನು ಕರೆತರುತ್ತಾರೆ. ಐರಿಸ್‌, ಪ್ರಿಮುಲಾಸ್‌, ಪೊಪ್ಪಿಸ್‌ ಗಿಡಗಳನ್ನು ಬೀಜ ಸಮೇತವಾಗಿ ತಿಂದು ಗೊಬ್ಬರ ದಾನ ಮಾಡುತ್ತವೆ. ಮರು ವರುಷ ಹಿಮ ಕರಗಿದಂತೆ ಒಂದೊಂದಾಗಿ ಮತ್ತೆ ಚಿಗುರಿ ಹೂ ಅರಳಿಸುತ್ತದೆ. ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿ ಮದುವಣ ಗಿತ್ತಿಯಂತೆ ಮತ್ತೆ ತೋರುತ್ತದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯಿಂದ ಮುಂದಕ್ಕೆ…


ತಣ್ಣಗಿನ ಊರಿನ ಬಿಸಿ ನೀರ ಬುಗ್ಗೆ…
ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ಸನಿಹದಲ್ಲೇ ಇರುವ ಇನ್ನೊಂದು ಸ್ಥಳ ಹಾಟ್‌ ಸ್ಪ್ರಿಂಗ್. 
ಇಲ್ಲಿನ ಬೆಟ್ಟಗಳು ಸಡಿಲ ಮಣ್ಣಿನ ಬೆಟ್ಟಗಳು. ಅಲ್ಲಲ್ಲಿ ಬಾಯ್ದೆರೆದು ಬಿಸಿ ನೀರಿನ ಬುಗ್ಗೆಗಳ ಉಗುಳುತ್ತವೆ. ಒಡಲೊಳಗಿನ ರಾಸಾಯನಿಕಗಳನ್ನೆಲ್ಲಾ ಕರಗಿಸಿಕೊಂಡು ಮೇಲಕ್ಕೆ ಚಿಮ್ಮುತ್ತದೆ. ಹೆಚ್ಚಿನವುಗಳಲ್ಲಿ ಗಂಧಕದ ಪರಿಮಳ. ಹೂ ಕಣಿವೆಯ ದಾಟುತ್ತಿದ್ದಂತೆ ಬೃಹತ್‌ ಬೆಟ್ಟದ ಬುಡದಲ್ಲೊಂದು ಬಿಸಿ ನೀರಿನ ಬುಗ್ಗೆ. ಬುಗ್ಗೆಯ ಬಿಸಿ ನೀರನ್ನು ತೊಟ್ಟಿಯೊಂದಕ್ಕೆ ಹಾಯಿಸಿ ತಣ್ಣೀರನ್ನೂ ಮಿಶ್ರ ಮಾಡಿ ನೀರ ತಾಪವನ್ನು ಕಡಿಮೆ ಗೊಳಿಸಿದ್ದರು.
ಆ ತೊಟ್ಟಿಯಲ್ಲಿದ್ದ ಕೊಳಕನ್ನು ನೋಡಿ ಅಸಹ್ಯವೆನಿಸಿ ಹಾಗೇ ಬಂದೆವು. ನೀರು ಸಹಾ ವಿಪರೀತ ಬಿಸಿಯಿತ್ತು. 


ಪಂಜಾಬಿ ಕುಟುಂಬವೊಂದು ಬಂದು ಬುಗ್ಗೆಯ ನೀರನ್ನು ಮೆಲಕ್ಕೆ ಚಿಮ್ಮಿಸಿದರು. ಮೌನದ ಬಗ್ಗೆ ಮತ್ತು ಸಾರ್ವಜನಿಕ ನಡೆವಳಿಕೆಯ ಕುರಿತು ವಿವರಿಸಿ ಹೇಳುವುದು ವ್ಯರ್ಥ ಎಂದು ಒಂದೂ ಮಾತನಾಡದೆ ಸುಮ್ಮನೆ ಬಂದೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೆಂಬ ಮೂಲಪಾಠವನು ಇವರಿಗೆ ಕಲಿಸುವವರು ಯಾರು? ದಾಂದಲೆಗೆ ಕಿವುಡಾಗಿ ಯುಮ್ತಾಂಗ್‌ ಕಣಿವೆಯ ಸೌಂದರ್ಯವನು ಸವಿಯುತ್ತಾ ಕುಳಿತೆ. ಅಮ್ಮನ ನೀಲಿ ಸೆರಗಿನಂತೆ ತಿಳಿ ಹಸಿರಾಗಿ ಲಾಚುಂಗ್‌ ನದಿ ಹರಿಯುತ್ತಲೇ ಇತ್ತು. ದೂರದ ಝೀರೋ ಪಾಯಿಂಟ್‌ನಲ್ಲಿ ಹಿಮ ಹೊದ್ದ ಬೆಟ್ಟಗಳು ಕಣಿವೆಗೆ ನೀರುಣಿಸುವ ಬೆಟ್ಟದ ಮಹಾ ಮೊಲೆಗಳಂತೆ ಕಂಡವು. 
ಜೋಳಿಗೆಯಲ್ಲಿ ಅಡಗಿದ್ದ ನಾಲ್ಕು ರೆಡೋಡೆಂಡ್ರಾನ್‌ ಹೂಗಳು ಕಿವಿ ಏರಿ ಖುಷಿ ಪಟ್ಟವು. ಕೆಲವನ್ನು ಚಟ್ನಿ ಮಾಡುವ ಆಸೆಯಿಂದಲೂ ತೆಗೆದುಕೊಂಡೆ. ಕಾಡಿಗೆ ಬೆಂಕಿ ಬಿದ್ದಂತೆ ‌ಗಿರಿಯ ನೆತ್ತಿ ತುಂಬಾ ಡೆಂಡ್ರಾನ್‌ ಹೂಗಳ ರಾಶಿ ರಾಶಿ.

ತುದಿಯಿಂದ ತುದಿಗೆ ಜೋಕಾಲಿಯಂತೆ ನೇತುಬಿದ್ದ ತೂಗು ಸೇತುವೆಯಲಿ ನಿಂತು ಪ್ರಕೃತಿಯಲಿ ಕರಗಿದೆವು. ಬೆಟ್ಟಕ್ಕೂ ಬಯಲಿಗೂ ಸೇತುವೆಯಾದ ನದಿ, ಬಯಲ ಕನಸು ಹೊತ್ತು ತಣ್ಣಗೆ ಹರಿಯುತ್ತಿತ್ತು. ಪಾಪ ಏನೋ ಧಾವಂತ. ನಾವು ಬೆಟ್ಟ ಅರಸಿ ಬಂದಿದ್ದೆವು. ನಮಗ್ಯಾವ ಧಾವಂತವೂ ಇರಲಿಲ್ಲ.
ಬಯಲಿನ ಬದುಕು ಹಸನಾಗಲು ಬೆಟ್ಟ ಹಿಮ ಹೊರಬೇಕು ಮತ್ತು ಸದಾ ಕರಗುತ್ತಲೇ ಇರಬೇಕು. ಯಾವುದನ್ನೋ ಸಲಹಲು ಇನ್ನಾವುದನ್ನೋ ಕರಗಿಸುವ ಗಾರುಡಿಗ ಈ ಪ್ರಕೃತಿಯ. ಈ ಎಲ್ಲಾ ಪ್ರಕೃತಿಯ ವಿಸ್ಮಯದಿಂದ ಝೀರೋ ಪಾಯಿಂಟ್‌ ಕೆಲವೇ ಕಿಲೋ ಮೀಟರ್.

ಹೊಟ್ಟೆ ತನ್ನ ಏಕತಾಳ ಶುರುವಿಟ್ಟುಕೊಂಡಿತು. ೪೬ ನೆಯ ನಂಬರಿನ ಅಂಗಡಿಗೆ ನುಗ್ಗಿದೆವು. ಯಾವನೋ ಒಬ್ಬ ಯಾಕ್‌ ನ ಮಾಂಸ ಹದ ಮಾಡುತ್ತಾ ಕುಳಿತಿದ್ದ. ದೂರದಲ್ಲಿ ಹಸನ್ಮುಖಿ ಅಜ್ಜಿಯೊಬ್ಬಳು ಶಾಖಹಾರಿ ತುಪ್ಕಾ ತಯಾರಿಯಲ್ಲಿದ್ದಳು.

ನಾವು ಅನುಮಾನಿಸ ತೊಡಗಿದೆವು. ಶುದ್ಧ ಶಾಖಹಾರಿ ಎಂದು ಮತ್ತೊಮ್ಮೆ ಒತ್ತಿ ಹೇಳಿದಳು. ನಾವು ಆರ್ಡರಿಸಿ ಸಿಕ್ಕಿಂನ ಸ್ಪೆಷಲ್ ತುಪ್ಕಾ ಸವಿದೆವು.‌ ಹೊಟ್ಟೆ ಮತ್ತು ಮನಸ್ಸನ್ನು ತಣಿಸಿತು. 
ಇಂತಹ ಅವಿಸ್ಮರಣೀಯ ವಿಸ್ಮಯಗಳಿಗೆ ಸಾಕ್ಷಿಯಾಗಿ ಬಂದು ಏಳು ವರ್ಷ ಕಳೆದರೂ ಲಾಚುಂಗ್‌ ನದಿಯ ಬೋರ್ಗೆರೆತ ದೊಂದಿಗೆ ಬೆರೆತ ರೆಡೊ ಡೆಂಡ್ರಾನ ಹೂವ ಗಂಧವಿನ್ನು ನನ್ನ ನಾಸಿಕಾಗ್ರದಲ್ಲೇ ಇದೆ. ಇವುಗಳ ಪರಿಮಳಕ್ಕೆ ಸಾಕ್ಷಿಯಾಗಲು ತೀಸ್ಟಾ ನದಿಯ ಜುಳು ಜುಳುಗೆ ಕಿವಿಯಾಗಲು ನೀವು ಯಾವಾಗ ಬರುವಿರಿ. 





Saturday, January 20, 2024

ಕಲ್ಲು ಕರಗಿಸುವ ಕೊಟಚಾದ್ರಿಯ ಕರೆ….


ರೆ ಕೊಟಚಾದ್ರಿ ಎಂದರೆ ಅದೇಕೋ ರೋಮಾಂಚನ! ಧಮನಿಗಳಲ್ಲಿ ರುಧಿರ ನರ್ತನ. ಇಂತಹ ಕುಟಚಾದ್ರಿ, ಕೊಡಚಾದ್ರಿ ಎಂದು ಕರೆಸಿಕೊಳ್ಳುವ ಈ ಸ್ಥಳವೇ ಅಪೂರ್ವ. ಏಳು ಅಶ್ವಗಳ ಸೆಳೆತ. ಮುಗಿಲು ಚುಂಬಿಸಿ ಬಂದ ಅನುಭವವನ್ನು ಹೊಸ ರೀತಿಯಲ್ಲಿ ಹೇಳುವ ಸಣ್ಣ ಪ್ರಯತ್ನ.

 ಜೀಪಿನಲ್ಲೂ ಹೋಗಿ ಬರಬಹುದು. ಹೋಗಿಬರಲು 2 ಸಾವಿರ ತೆಗೆದುಕೊಳ್ಳುವರು. ಮಳೆಗಾಲ ವಿಡಿ ಬ್ಯುಸಿಯಾಗಿರುವ ಇಲ್ಲಿನ ಜೀಪಿನವರು ಬೇಸಿಗೆಯಲಿ ಇವರಿಗೆ ಸೂಟಿ. ವಾರಕ್ಕೆರಡು ಬಾಡಿಗೆಯಾದರೆ ಹೆಚ್ಚು. ಇದನ್ನೇ ಪ್ರಧಾನ ಉದ್ಯೋಗವಾಗಿ ನೆಚ್ಚುವಂತಿಲ್ಲ. ಬೇರೊಂದು ಉದ್ಯೋಗದ ಜೊತೆ ಜೀಪು ಸವಾರಿ ಎಂಬುದು ನಮ್ಮ ಜೊತೆ ಬಂದ ನಿತ್ಯಾನ ಉವಾಚ. ಜೀಪಿನ ಸವಾರಿಯೂ ಒಂದು ಆಧ್ಯಾತ್ಮಿಕ ಪಯಣ.



ಹೆಸರಿನ ನಂಟು….     

ಕುಟಜವೆಂದರೆ ಸಸ್ಯ. ಅದನ್ನ ಹೊದ್ದ ಅದ್ರಿ ಕುಟಚಾದ್ರಿ ಅಥವಾ ಕೊಡಚಾದ್ರಿ ಎಂಬ ಅರ್ಥವಿದೆ ಎಂದವರು ಗಣ್ಯರಾದ ವಸಂತ ಕುಮಾರ ಪೆರ್ಲಾ. ಇಂತಹ ಅದ್ರಿಯು ನೂರಾರು ಗಿಡ ಮೂಲಿಕೆಗಳ ಕಣಜ!. ಮೂಕಾಂಬಿಕಾ ವನದ ಸೆರಗಲ್ಲೆ ಮಲಗಿದ ಐದನೆಯ ದೊಡ್ಡ ಅದ್ರಿ. ಅಪ್ಪೆ, ಮತ್ತಿ ಮುಂತಾದ ವಿಶಿಷ್ಟ ಮರಗಳ ಗಮ್ಯ.  ಏನೇ ಇರಲಿ ತುದಿಯೇರುವ ತವಕದಲ್ಲಿರುವ ನಮಗೆ ಬಾಕಿ ಎಲ್ಲವೂ ಗೌಣ. ಮುಳ್ಳಯ್ಯನ ಗಿರಿಗೆ ಬಿಟ್ಟರೆ ಕೊಡಚಾದ್ರಿಗೆ ಮಾತ್ರ ರಸ್ತೆ ಮಾರ್ಗ. ಹಾಗಾಗಿ ಬೈಕನ್ನೇರಿಸುವ ಹುಚ್ಚು ಸಾಹಸ ಮೈ ಮೇಲೆಳೆದು ಕೊಂಡೆವು. ಅದೂ ಬುಲೆಟ್!‌


ಬೈಕಿನ ಬಂಟ ಹೆಂಗೆ ಹೊಂಟ..

ಗೌರಿ ಕೆರೆ ಎಂಬೂರಿನಲಿ ಬಲಕ್ಕೆ ತೇಲಿಕೊಂಡರೆ ಸಿಗುವ ಜಲಧಾರೆವರೆಗೆ ಒಮ್ಮೆ ಬಂದು ಹೋಗಿದ್ದೆ. ಅದೇ ಎಮ್ಮೆ ಹೊಂಡ ಜಲಪಾತ. ಅಂದೇ ಒಮ್ಮೆ ಈ ಅದ್ರಿಯ ಏರಬೇಕೆಂದು ಕನಸು ಕಂಡಿದ್ದೆ.

ಈ ಅದ್ರಿ ಏರಲು ಎರಡು ದಾರಿಗಳಿವೆ. ಮೊದಲನೆಯದು ಒಂಟಿ ಮರದ ಅತಿ ಭಯಂಕರ ಏರು ದಾರಿ. ದಾರಿ ತಪ್ಪಿದರೆ ಕಾಡೊಳಗೆ ಲೀನ. ಗೆಳೆಯನೊಬ್ಬರ ತಂಡ ಇಲ್ಲೇ ಕಳೆದು ಹೋಗಿ ಸಂಜೆ ಊರು ಸೇರಬೇಕಾದವರು ಮಧ್ಯ ರಾತ್ರಿ ಊರು ಸೇರಿದರು! ರಹಮತ್‌ ತರಿಕೇರಿ ಎಂಬ ಉಪನ್ಯಾಸಕರೂ ಇಲ್ಲಿ ದಾರಿ ತಪ್ಪಿ ಅಲೆದಿದ್ದರು. ಎರಡನೆಯದು ರಸ್ತೆ ಮಾರ್ಗ. ಕಾಲು ನೋವಿದ್ದ ಕಾರಣ ಅತಿ ದೂರದ ರಸ್ತೆ ಮಾರ್ಗವನ್ನೇ ಆಯ್ದುಕೊಂಡೆವು.

ಗೆಳೆಯ ನಾಗರಾಜನೇ ಮುಖ್ಯ ಸವಾರ. ಹೊರಟಿದ್ದು ನಡು ಮಧ್ಯಾಹ್ನಕ್ಕೆ. ಇಳಿ ಸಂಜೆಗೆ ಮೊದಲು ನಾಗೋಡಿ ದಾಟಿ ಕುಟಚಾದ್ರಿಯ ತಿರುವಿನಲ್ಲಿದ್ದೆವು. ಒಂದೆರಡು ಜೀಪುಗಳು ಕಾದು ನಿಂತಿದ್ದವು. ಸುಲಭಾಗೇ ಚೆಕ್‌ ಪೋಸ್ಟವರೆಗೆ ದಾಟಿಕೊಂಡೆವು. ಮುಂದಿನದು ಅತಿ ದುರ್ಗಮ ಪಯಣ. ಹೋರಿಯಂತಹ ರಾಯಲ್‌ ಎನಪೀಲ್ಡ್‌ನ್ನು ಜೋಲಿ ಹೊಡೆಯದಂತೆ ಕಾಪಾಡುವುದೇ ದೊಡ್ಡ ಸಾಹಸ. ರಸ್ತೆ ನಡುವಿನ ನೀರ ತೋಡುಗಳ ದಾಟುವುದೇ ಮಹಾ ಸಂಕಷ್ಟ. ಇಂತಹುದೇ ಒಂದು ಗಾಳಿ ಗುಡ್ಡ ವೆಂಬ ಪರ್ವತ ಹೊರನಾಡಿನ ಸಮೀಪವಿದೆ. ಅದರ ಚಾರಣವಂತೂ ಭಾರಿ ಭೀಕರ. 

ಬೈಕ್‌ ಎಲ್ಲೂ ನಮ್ಮ ಮಾತೇ ಕೇಳದೇ ಸ್ವಂತ ಬುದ್ದಿ ಇರುವಂತೆ ವರ್ತಿಸತೊಡಗಿತು. ಯಾವಾಗಲೂ ತೋಡುಗಳೆಡೆಗೆ ಅತೀವ ಆಕರ್ಷಣೆ. ಭರ್ಜರಿ ಹಾರ್ನ್‌ ಹಾಕುತ್ತಾ ಹಿಂದಿನಿಂದ ಜೀಪೊಂದು ಧೂಳ ಸಾಗರವನ್ನು ಕಟ್ಟಿಕೊಂಡೇ ತಿರುವಿನಲ್ಲಿ ಬುಸುಗುಡುತ್ತಾ ಬರುತಲಿತ್ತು. ಮ್ಯಾಂಗನೀಸ್ ಅದಿರಿನ ಮಹಾ ಧೂಳಿನ ಮೋಡವೊಂದು ಎದ್ದಿತು. ಆಗಲೇ ನಮ್ಮ ಬೈಕ್‌ ನೀರ ಓಣಿಯೊಳಗೆ ಸವಾರನ ಆಜ್ಞೆಯನ್ನು ದಿಕ್ಕರಿಸಿ ಮಲಗಿಬಿಟ್ಟಿತು. ಕೆಸರ ಹೊಂಡದಲ್ಲಿ ಮಲಗಿದ ಎಮ್ಮೆಯಂತೆ ಏಳಲು ಒಪ್ಪಲೇ ಇಲ್ಲ. ಅಂತೂ ಕಷ್ಟ ಪಟ್ಟು ಎತ್ತಿ ಹಿಡಿದಾಗ ಉಸ್ಸಪ್ಪವೆಂಬ ಉಸಿರು ಹೊರ ಚೆಲ್ಲಿತು. ಜೀಪಿನವನೂ ನಿಲ್ಲಿಸಿ ಸಹಾಯ ಬೇಕೇ? ಎಂದು ಕೇಳಿದ. ಜೀಪಿನ ಮಾಲಿಕನಿಗೆ ಧನ್ಯವಾದ ಹೇಳಿ ಏರು ದಾರಿಯ ಏರಲು ಅನುವಾದೆವು. ಕಾಲಿಗೆರಡು ಬರ್ಜರಿ ಬರೆ ಬಿದ್ದವು. ಕಾಲಿನ ಬರೆಯ ಬಿಸಿಯನು ಹೊತ್ತೇ ನೆತ್ತಿ ಹತ್ತಿತು ನಮ್ಮ ಬೈಕ್.‌ ಮೂಲ ಮೂಕಾಂಬಿಕೆ, ಹುಲಿ ದೇವರ ಗುಡಿಯ ಸನಿಹ ಬೈಕ್ ನಿಲ್ಲಿಸಿದೆವು. ನಾಗ ತೀರ್ಥದ ಪನ್ನೀರು ಚಿಮುಕಿಸಿಕೊಂಡು ಹೊರಟೆವು.


ಅದಿರಿನ ಖದರು ...

ಅಪಾರ ಅದಿರಿನ ಖನಿಯಾದ ಇಲ್ಲಿನ ಬೆಟ್ಟ ಬಗೆಯಲು ಖಾದಿಯವರು ಕಾದು ಕುಳಿತಿದ್ದಾರೆ. ಬೆಟ್ಟ ಬಯಲು ಮಾಡಲು! ಮುಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವುದರಿಂದ ಕೊಂಚ ನಿರಾಳವಾಗಿದೆ. ಇಲ್ಲವಾದರೆ ಎಂದೋ ಇದನ್ನು ಬಗೆದು ಹಾಕುತ್ತಿದ್ದರು. ಮನುಷ್ಯನ ದುರಾಸೆಗೆ ಮಿತಿ ಎಲ್ಲಿ?

ಬೆಲೆ ಕಟ್ಟಲಾಗದ ಹಸಿರು ಮತ್ತು ಜೀವಜಗತ್ತಿನ ತಾಣ ಈ ಕೊಡಚಾದ್ರಿ . ಹಗಲು ಹೊತ್ತಿನಲಲ್ಲೇ ಕಾಡು ಕೋಣಗಳ ಹಿಂಡು ಕೆಲವೊಮ್ಮೆ ಕಾಣಸಿಗುತ್ತದೆ. ಹುಲಿ ಚಿರತೆಗಳ ಸಂಖ್ಯೆಯೂ ಕಮ್ಮಿ ಇಲ್ಲ. 

ಶಂಕರ ಪೀಠದ ಹಾದಿಯಲಿ…

ಬೈಕಿನಿಂದಿಳಿದು ಬೈಗಿಗೆ ಜಾರುವ ದಿನಕರನ ದರುಶನಕೆ ಸರ್ವಜ್ಞ ಪೀಠಕ್ಕೆ ಲಗ್ಗೆ ಇಟ್ಟೆವು. ನಭವನು ಕಡು ಕಿತ್ತಳೆಗೆ ತಿರುಗಿಸಿದ ದಿನಕರನು ಕಡಲಿಗಿಳಿದು ತನ್ನ ಉರಿಯನ್ನು ತಣ್ಣಗೆ ಮಾಡಿಕೊಳ್ಳುತ್ತಿದ್ದ. ನಾವಿಬ್ಬರು ಚಿಪ್ಪ್ಸು ಮತ್ತು ಹಣ್ಣಿನ ರಸವನು ಹೊಟ್ಟೆಗಿಳಿಸಿ ಹೊಟ್ಟೆಯುರಿಯನ್ನು ಸಾಕಷ್ಟು ತಣ್ಣಗೆ ಮಾಡಿಕೊಳ್ಳ ತೊಡಗಿದೆವು.  ಇಷ್ಟು ಎತ್ತರಕೆ ಕಲ್ಲು ಸಾಗಿಸಿ ಕಟ್ಟಿದ ಸರ್ವಜ್ಞ ಪೀಠ/ ಶಂಕರ ಪೀಠದ ಕೆತ್ತನೆಗೆ ಮನ ಕರಗಿತು. ಯಾರನ್ನು ಮೆಚ್ಚಿಸಲು ಈ ಪರಿ ಕಸರತ್ತು!? ಗೊತ್ತಿಲ್ಲ.

ಚಾರಣಿಗರ ಸಂತೆಯಲಿ ಕರಗದೇ ಮುಂದಿನ ಇಳಿ ಜಾರಿನ ತುದಿಗಿದ್ದ ಗುಡ್ಡವೇರಿದೆವು. ಈಗ ಇಲ್ಲೊಂದು ಬೇಲಿ ನಿರ್ಮಿಸಿದ್ದಾರೆ. ಚಾರಣಿಗರೆಸದ ಕಸವ ಕಂಡು ಕೆಂಪು ಮೂತಿ ಮಾಡಿಕೊಂಡು ಕಡಲಿಗಿಳಿದ ಸೂರ್ಯ ಮಾಮನಿಗೆ ಟಾಟಾ ಹೇಳಿದೆವು. ನಮ್ಮ ವರ್ತನೆಗೆ ಬೇಸರಿಸಿಕೊಂಡ. ತಾವು ತಂದ ಬಾಟಲಿ, ಜರಿಗಳನು ಅಲ್ಲೇ ಬಿಸುಟು ಹೋಗಿದ್ದರು. ಎಂದು ಬರುವುದೋ ಇವರಿಗೆ ಪರಿಸರ ಕಾಳಜಿ. 


 ಶಂಕರ ಪೀಠದ ಬಲ ಮಗ್ಗುಲಿನಲ್ಲೇ ಚಿತ್ರಾ ಮೂಲವಿದೆ. ಇದೇ ಸೌಪರ್ಣಿಕೆಯ ಉಗಮ ಎನ್ನುತ್ತಾರೆ. ಸಾಕಷ್ಟು ಸಂಜೆ ಆದುದರಿಂದ ಇಳಿಯುವ ಸಾಹಸ ಮಾಡಲಿಲ್ಲ.

 ಟೆಂಟಿಗೆ ಅಂಟಿ…

ನಮ್ಮ ಟೆಂಟುಗಳಿಗೆ ಹಿಂದಿರುಗುವಾಗ ಮೂಡಣದ ಬೆಳ್ಳಿ ಹಣಕಿ ಹಾಕಿತ್ತು. ಜೋಗಿಯವರ ಬಿಡಾರದಲ್ಲಿ ಉಳಿಯುವ/ಉಣ್ಣುವ ವ್ಯವಸ್ಥೆಯಾಯಿತು. ಅಂದು ಚಳಿ ಬಹಳವೇ ಇತ್ತು. 

ಮುಂದಿನ ದಿನಕೆ ಅಣಿಯಾಗಲು ನಮ್ಮ ನಮ್ಮ ನಿದ್ರಾ ಚೀಲದೊಳಗೆ ನುಸುಳಿಕೊಂಡಾಗ ನಕ್ಷತ್ರವೊಂದು ನನ್ನ ನೋಡಲ್ವೆ ಎಂದು ನಕ್ಕಿತು. ಕೆಲವರು ನಕ್ಷತ್ರ ವೀಕ್ಷಣೆಗೆ ಹೊರಟು ನಿಂತರು. ಶುಚಿಯಾಗಿ ಗುಡಿಸಿಟ್ಟಂತಹ ಆಕಾಶ ವೀಕ್ಷಣೆಗೆ ಇಂಬು ಕೊಟ್ಟಿತ್ತು. ಸುಸ್ತಾದ ನಾನು ನಿದ್ರಾ ಚೀಲದೊಳಗೆ ಹೊಕ್ಕು ಗೊರಕೆಗೆ ಬಿದ್ದೆ!


ಸೂರ್ಯನ ಎಬ್ಬಿಸಲು ಹೊರಟಾಗ…...




ಗಂಟೆ ೬ ಆದರೂ ಸೂರ್ಯ ಮಾಮ ಎದ್ದಿರಲೇ ಇಲ್ಲ! ನಾವೈವರು ಗಲಾಟಿ ಮಾಡಿ ಅವನ ಎಬ್ಬಿಸಲು ಹೊರಟು ನಿಂತೆವು. ಒಂದಿಷ್ಟು ಪ್ರಿ ಪೋಟೋ ಸೆಷನ್ ನಡೆಸಿದೆವು.  ಬಂಗಾರದ ಬೆಳಕು ಹುಲ್ಲ ಮೇಲೆಲ್ಲ ಹರಡಿ ಬಂಗಾರವಾಗಿಸಿತು. 

ಅಸ್ಸಾಂಗೆ ವಲಸೆ ಹೋಗುವ ಲೆಸ್ಸರ್‌ ಕೆಸ್ಟ್ರಲ್‌ ಹಕ್ಕಿಯೊಂದು ಖುಷಿಯಲ್ಲಿ ಹಾಡು ಹೇಳುತ್ತಲೇ ಇತ್ತು. ದೂರದಲ್ಲೆಲ್ಲೋ ಬ್ಲಾಕ್‌ ಈಗಲ್ ನ ಕೂಗಿಗೆ ಮೆಲ್ಲ ಮೆಲ್ಲನೆ ನೆತ್ತರು ಸುರಿದಂತೆ ಕಾಣುತ್ತಿದ್ದ ಸೂರ್ಯ ಮೆಲ್ಲಗೆ ಮೇಲೆ ಬರುತಲಿದ್ದ. ಸೂರ್ಯ ನೆದುರಿಗೆ ಒಂದಿಷ್ಟು ಪೋಟೋ ನೈವೇದ್ಯವಾಯಿತು. ನೆತ್ತಿಯಿಂದ ಕಾಣುವ ಸೊಬಗು ಅನ್ಯಾದರ್ಷ. ಪ್ರಕೃತಿಯ ರಮ್ಯತೆಯ ಅನುಭವಿಸಿಯೇ ತಿಳಿಯಬೇಕು. 

ಮಾನವನ ಹಸ್ತಕ್ಷೇಪ ಕಡಿಮೆಯಾದಂತೆ ಅದರ ಸೊಬಗು ಇಮ್ಮಡಿಸುವುದು. 




ಝರಿ ಕತೆ….

ಸೌಪರ್ಣಿಕೆಯ ಒಡುಲು ಸೇರುವ ಇಲ್ಲಿನ ಝರಿಗಳು ಒಂದಕ್ಕಿಂದ ಒಂದು ಚಂದ. ಚಿತ್ರಾ ಮೂಲವು ಅದರಲ್ಲಿ ಒಂದು. ಗುಡ್ಡ ವಿಳಿದು ಚಿತ್ರಾ ಮೂಲ ದರುಶನವೂ ಅದರಲ್ಲಿ ಒಂದು ವಿಶಿಷ್ಟ ಗುಹಾ ಝರಿ. ಬೆಟ್ಟವಿಳಿದು ಇದರ ಒಡಲು ಸೇರುವುದು ವಿಶಿಷ್ಟ ಅನುಭೂತಿ. ಇಲ್ಲೊಂದು ಲಿಂಗವೂ,  ಇದೆ. ಈ ಝರಿಗಳ ನೀರು ಅನೇಕ ಔಷಧೀಯ ಗುಣ ಹೊಂದಿದೆ ಎನ್ನುತ್ತಾರೆ ಇಲ್ಲಿನವರು. ಜನವರಿಯ ನಂತರ ತನ್ನ ಹರಿವನ್ನು ಈ ಝರಿ ಕಳೆದು ಕೊಳ್ಳುತ್ತದೆ ಎನ್ನುತ್ತಾರೆ ಇಲ್ಲಿನ ಪೂಜಾರಿಯವರು. ಇಲ್ಲಿ ತಪಸ್ವಿಗಳಿದ್ದರು ಎನ್ನುತ್ತದೆ ಇಲ್ಲಿನ ಜನಪದ.

ಚಿತ್ರಾ ಮೂಲಕ್ಕೆ ಹೋಗಿ ಹಣಕಿ ಹಾಕಿ ಬರುವ ಹುಮ್ಮಸ್ಸಿದ್ದರೂ ಹಿಂಡಲು ಮನೆಯ ಜಲಧಾರೆ ನನ್ನ ಕರೆಯುತ್ತಲೇ ಇತ್ತು. ಸಿಕ್ಕಾ ಪಟ್ಟೆ ಬೆಸ್ತು ಬೀಳಿಸಿದ ಬೈಕ್‌ನ್ನು ನಾಗರಾಜನ ತೆಕ್ಕೆಗೆ ಒಪ್ಪಿಸಿ ನಾನು ನಟರಾಜ ಸರ್ವಿಸ್‌ ಹತ್ತಿದೆ! ಅಂದರೆ ನಡಿಗೆ! ನಮ್ಮನ್ನು ಬೀಳಿಸಿದ ಅದೇ ಬೈಕು ಗೆಳೆಯ ರಾಘುವನ್ನು ಬೀಳಿಸಿ ಮೈ ಕೈ ತುಂಬಾ ತರಚು ಗಾಯವಾಗುವಂತೆ ಮಾಡಿತು!

ನನ್ನ ಜೊತೆ ಒಂದೈದು ಜನ ಗೆಳೆಯರು ಜೊತೆಯಾದರು. ಚಾರಣದ ಕತೆ ಹೇಳುತ್ತಾ ಸಮಯದ ಪರಿವೆಯೇ ಇಲ್ಲದೆ ಹಿಂಡ್ಲು ಮನೆಯ ಹಾದಿ ತುಳಿದೆವು. ಅದರ ರೋಚಕ ಕತೆಯನ್ನು ಮನಸ್ಸಾದರೆ ಮತ್ತೆ ಎಂದಾದರೂ ಹೇಳುವೆ. ಅಲ್ಲಿಯವರೆಗೆ…..






Saturday, July 8, 2023

ನಿಲ್ದಾಣವಲ್ಲದ ನಿಲ್ದಾಣದಲ್ಲಿ…

 

ಪಶ್ಚಿಮ ಘಟ್ಟದ ಸೆರಗ ಹಿಡಿದು ಅದರ ತೊಡೆಯ ಮೇಲೆ ಮಲಗಿದ ರಮ್ಯ ರೈಲು ನಿಲ್ದಾಣ! ಕಾವಲಿಗೆ ನಿಂತ ಬೆಟ್ಟ ಸಾಲು. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಸಾಗುವ ನೋಟ ಎಂತಹ ಜಡ ಭರತರನ್ನೂ ಕವಿಯಾಗಿಸಬಲ್ಲದು! ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟವಾದ ಮತ್ತೊಂದು ರೈಲು ನಿಲ್ದಾಣವಿರಲಿಕ್ಕಿಲ್ಲ. ಯಡಕುಮರಿ. ಎಂತಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿ ಅಥವಾ ಯಡಕುವೇರಿ ಎಂಬ ಹೆಸರು ಕೇಳಿರದ ಚಾರಣಿಗ ಇಲ್ಲವೇನೋ.


ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಬೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುಮರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್‌ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್‌ ಒಂದು ಇದೆ ಎಂಬುದೇ  ಒಂತರಾ ವಿಚಿತ್ರವಲ್ಲವೇ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ ೮ ಕಿ. ಮೀಟರ್‌ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಯಡಕುಮರಿ.


            ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂರ್ಣ ಹಸಿರು ಚಾದರ ಹೊದ್ದ ಬೆಟ್ಟ ಗುಡ್ಡಗಳು. ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾಯನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತ್ತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ.‌ ಕೇಳುವವರೇ ಇಲ್ಲದ ಕ್ಯಾರೆ ಎನ್ನದ ದಿವ್ಯ ಮೌನ. ಮಾತಿಗೆ ಮೌನ ಸ್ವೆಟರಿನ ಮುಚ್ಚಿಗೆ. ಜೀರುಂಡೆಗಳ ಸಮೂಹಗಾಯನ. ಇನಿಯಳೊಂದಿಗೆ ಮುದ್ದು ಮಾಡುತ್ತಾ ಕೂರಬಹುದಾದ ಜಾಗ. 



ಇಲ್ಲಿನ ರೈಲ್ವೆ ಮಾಸ್ತರರನ್ನು ಮಾತಾಡಿಸಿದೆ. ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ!

            ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್‌ ಮಾಸ್ಟ್ರುಗಳಿಗೆ ಬಹಳ ಕಷ್ಟ! ವಿದ್ಯುತ್‌ ಬೇರೆ ಇಲ್ಲ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾರ್ಟುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿರ್ಮಿಸಿದ ಒಂದೆರಡು ಸಣ್ಣ ಮನೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ!


    ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ.  ಆದರೂ ಒಂದು ನಿಲ್ದಾಣ!! ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿದಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಇಳಿದರೆ ಇಲ್ಲಿನ ಏಕಾಂತದಲ್ಲಿ ಬಂಧಿ. ಹಲವು ವರ್ಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಈ ಚಾರಣ ಸಂಪೂರ್ಣ ನಿಶೇಧಿಸಲಾಗಿದೆ. ಈಗಿಲ್ಲಿ  ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್‌ ಕೇಸ್‌ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಸಕಲೇಶಪುರದ ಸನಿಹದಲ್ಲಿರುವ ಮೌನವೇ ಹೊದ್ದು ಮಲಗಿದ ಇಲ್ಲಿಗೆ ಒಮ್ಮೆಯಾದರೂ ಹೋಗಿ ನೀರವ ಏಕಾಂತವನ್ನು ತಬ್ಬಿ ಮಲಗಬೇಕು. ನೀವು ಬರುವಿರಾ?



Sunday, November 6, 2022

ದೂದ್‌ ಸಾಗರ ಒಂದು ಸ್ವಪ್ನ ವಿಲಾಸ

 


ಶ್ರಾವಣದ ಮಳೆ ಇಳೆಗೆ  ಮುತ್ತಿಕ್ಕುವ ಹೊತ್ತು. ಭುವಿಗೆ ಛತ್ರಿ ಹಿಡಿದಂತಿರುವ ಮಂಜನು ಸೀಳುವ ಚುಕ್‌ ಬುಕ್‌ ಬಂಡಿ.  ನೆಲದೊಡಲಿನಿಂದಲೂ ಕಿವಿಯ ಕುಹರ ತುಂಬುವ ಚುಕ್‌ ಬುಕ್‌ ಸದ್ದು. ರೈಲು ದೂದ್‌ ಸಾಗರವೆಂಬ ಅಗಾಧ ಜಲರಾಶಿ ಎಡೆಗೆ ಮಲಗಿದ ನೂರಾರು ಭತ್ತದ ಗದ್ದೆಗಳನ್ನು ಎಬ್ಬಿಸುತ ಸೂರ್ಯನೇಳುವ ಮುನ್ನ ಬೆಳಗಾವಿಯಿಂದ ಹೊರಟಿತ್ತು. ರೈಲು ಲೊಂಡ ಜಂಕ್ಷನ್‌ನಲ್ಲಿ ಟಿಫಿನ್‌ ಮಾಡತೊಡಗಿತ್ತು. ನಾವೂ ಕೂಡ. ಹಿಮ್ಮುಖವಾಗಿ ಎಳಿಯುತ್ತಿದ್ದ ರೈಲು ಮುಂದೆ ಚಲಿಸಲು ತೊಡಗಿತ್ತು.

  ಬೆಳಗಾವಿಯಿಂದ ಬಂಡಿಯ ಜೊತೆಯಲಿ ಸರಿಗಮ…



ಸದಾ ಖಾಸಗೀತನ ಬಯಸುವ ನನ್ನಂತವರಿಗೆ ಹೇಳಿ ಮಾಡಿಸಿದ ಪ್ರಯಾಣ. ದಿವ್ಯ ಏಕಾಂತ. ವೇಗದ ವ್ಯಾಧಿಗಂಟದ ಸಹನ ಶೀಲ ಬಂಡಿ. ಏಕಾಂತದಲಿ ಬೆರೆತ ಪ್ರಕೃತಿ. ಸ್ವಾಗತ ಕಾರರಂತೆ ನಿಂತ ಸಾಲು ಮರಗಳು.  ಹೃದಯದ ಏರಿಳಿತಗಳನು ಸರಿಪಡಿಸಬಲ್ಲ ಅಗಾಧ ಪ್ರಕೃತಿ. ಮನದ ಕಾನನದಿ ಸೈಕ್ಲೊ ಸೈಲ್‌ ಶಬ್ದ ಚುಕ್‌ ಬುಕ್‌, ಚುಕ್‌ ಬುಕ್. ರೈಲೊಳಗೂ ನುಗ್ಗಿ ಎಲ್ಲರನೂ ಒದ್ದೆ ಮಾಡಿ ಮೆತ್ತಗೆ ಮಾಡುವ ಸೂಜಿ ಮಳೆ ಬೆಳಗಿನಿಂದಲೂ ಜೋಗುಳ ಹಾಡುತ್ತಿತ್ತು. ಪ್ರಕೃತಿ ಆನಂದ ಮಯ ಈ ಜಗ ಹೃದಯ ಎನ್ನುವ ಗೀತೆಯನು ಹಾಡುತ್ತಿರುವಂತಹ ಅನುಭೂತಿ. ಎಲ್ಲೆಲ್ಲೂ ನೀರ ಸಂಗೀತ. ಮಂಜಿನ ತಂಪಾದ ರಗ್‌ ಹೊದ್ದ ಪ್ರಕೃತಿ ಅತಿ ರಮ್ಯ. ದಿವ್ಯ ಏಕಾಂತ.



ಇಲ್ಲಿನ ಗುಡ್ಡದ ತುಂಬಾ ನೆಕ್ಲೆಸ್‌ ನಡುವಿನ ಹವಳದಂತೆ ಹರವಿನಿಂತ ಹೂಗಳು. ನನ್ನ ಕಂಡು ಕ್ರೀಮು ಬಳಿದುಕೊಂಡತಿರುವ  ಗುಡ್ಡಗಳು ಹಲ್ಕಿರಿದು ನಕ್ಕವು. ಗುಡ್ಡದ ತುಂಬಾ ನೀರ ಹನಿಗಳು ಸಂಪಿಗೆ ಮೂಗಿನ ಸುಂದರಿ ಮುತ್ತಿನ ಹಾರ ತೊಟ್ಟಂತೆ ತೊಟ್ಟಿಕ್ಕುತಲಿದೆ. ಮನಸ್ಸಿನ ಏಕಾಂತಕ್ಕೆ ಸಾತ್‌ ನೀಡುವ ರೈಲಿನ ಚುಕ್‌ ಬುಕ್‌ ಚುಕ್‌ ಬುಕ್.‌ ಗುಡ್ಡಗಾಡಿಗೆ ತೊಂದರೆ ಕೊಡ ಬಾರದೆಂದು ಸೂರ್ಯ ರಜೆ ಮೇಲಿದ್ದ. ಇಲ್ಲಿನ ಪ್ರತೀ ಸುರಂಗವೂ ಹೆಬ್ಬಾವಿನ ಹೊಟ್ಟೆ ಹೊಕ್ಕು ಬಂದಂತಹ ಅನುಭವ. 



ಕಾತರಕ್ಕೊಂದು ಕಾವ್ಯ ತೆರೆ…



ಹಳ್ಳ ಕೊಳ್ಳ ಹಾದು ಜಲಪಾತದ ಸನಿಹಕೇ ಬಂದಿದೆ ಬಂಡಿ. ರೈಲಿನೊಳಗಿರುವವರ ಎದೆಯಲಿ ವಿದ್ಯುತ್‌ ಸಂಚಾರ. ಈ ಅಗಾಧ ಜಲರಾಶಿಯನ್ನು ಕಣ್‌ ತುಂಬಿಕೊಳ್ಳುವ ತವಕ ಪ್ರತಿಯೊಬ್ಬರಲ್ಲೂ. ಜಲರಾಶಿ, ರೈಲು, ಹೃದಯದ ಶಬ್ದಗಳ ಕಲಸು ಮೇಲೊಗರ. ಕಣ್ಣಿಗೆ ಸುಗ್ಗಿ. ಮನಸ್ಸಿಗೆ ಸಿಹಿ ಹುಗ್ಗಿ. ಮಂಜಿನ ರಗ್ಗಿನಿಂದ ಧುಮ್ಮಿಕ್ಕುವಂತೆ ಧುಮ್ಮಿಕ್ಕುತ್ತಿದೆ ಹಾಲ್ನೊರೆ!  ಅಬ್ಬಾ ಎಂತಹ ಸುಮನೋಹರ ದೃಶ್ಯ. ಒಂಟಿ ಮರವೊಂದು ಕಾಲಾತೀತ ಆನಂದದಲಿ ಜಲಪಾತದ ನಡುವಿನಲಿ ರಕ್ಷಕನಂತೆ ಸಂಭ್ರಮದಿ ನಿಂತೇ ಇದೆ. ಎಳೆಯ ಎದೆಗಳಿಂದ ವಾವ್‌ ಎಂಬ ಚೀತ್ಕಾರ. ಕೆಲವರು ಮೂಕವಿಸ್ಮಿತ. ರೈಲಿನಲ್ಲಿರುವ ಪ್ರತಿಯೊಬ್ಬರಲ್ಲೂ ವಿದ್ಯುತ್‌ ಸಂಚಾರ. ಇಣುಕಿ ನೋಡಿದಷ್ಟೂ ಮುಗಿಯದ ತವಕ. ಎಲ್ಲವೂ ವಿಸ್ಮಯವಿಲ್ಲಿ. ನೋಟಕನ ದೃಷ್ಟಿ ಗಮ್ಯವಾದುದಿಲ್ಲಿ ಎಲ್ಲವೂ ಅತಿ ರಮ್ಯ… ನಾನಿಂತ ಬಾಗಿಲ ತುದಿಗೊಬ್ಬಳು ಮುದುಕಿ ಪದೇ ಪದೇ ಬಂದು ಓಡೋಡಿ ಬಂದು ಪ್ರಕೃತಿಯ ರಮಣೀಯತೆ  ಸವಿದು ಹೋಗುತ್ತಿದ್ದಳು. ಅವಳ ಉತ್ಸಾಹ ಕಂಡು ಬೆರಗಾದೆ.

ಚಾರಣಿಗರ ಸಂತೆಯಲಿ ಬೆರಗಾಗಿ…




ಎಲ್ಲೆಲ್ಲೋ ಜಿನುಗಿದ ಹನಿಯೊಂದು ನದಿ  ಸೇರುವಂತೆ ಸೇರುವ ಚಾರಣಿಗರ ಹಿಂಡು. ಹೃದಯದ ಕವಾಟ ತೆರೆವ ನೋಟ. ಎಲ್ಲಾ ವೈಯಕ್ತಿಕ ಸುಖ ದುಃಖ ಕರಗುವ ಏಕೈಕ ಪ್ಲಾಟ್‌ ಪಾರಂ. ದುಃಖಗಳೆಲ್ಲಾ ಕರಗಿ ನೀರು ಕೆಂಪಾಗಿ ಹರಿಯುತ್ತಿರುವುದೋ ಎಂಬಂತೆ ಭಾಸ. ಮೈ ಕೈಗಳಲೆಲ್ಲಾ ನೀರ ಕಾರು ಬಾರು. ಅದ್ರಿಯ ತುದಿಯಲ್ಲಿ ಬೋರ್ಗರೆಯುತಾ ನಡುವಿನಲಿ ನಯವಾಗಿ ನುಗ್ಗುವ ದೂದ್‌ ಸಾಗರದ ರಮ್ಯತೆ ಅಪಾರ. 



ರ್ಭಾವುಕವಾಗಿ ಚಲಿಸುವ ರೈಲು ಮಳೆಯ, ಮಂಜಿನ ಚಾದರಕ್ಕೆ ಮೆತ್ತಗಾಗಿದೆ. ಜಾರದಂತೆ ಜಾಗರೂಕವಾಗಿ ಚಲಿಸುತ್ತಿದೆ. ನಿರ್ಭಾವುಕ ಕಣ್ಣುಳ್ಳ ತಮ್ಮ ತುತ್ತಿನ ಬುತ್ತಿ ಅರಸಿ ಹೊರಟ ಅರಸಿಕರು ಹೊರಗೆ ಇಣುಕದೆ ಸುಮ್ಮನಿದ್ದರು! ಅವರನ್ನೆಲ್ಲಾ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತೆ ಬೆಟ್ಟಗುಂಟ ಪ್ರಯಾಣ ಹೊರಟ ಬಂಡಿ.  ಮನಸ್ಸು ಸುರಿವ ಮಳೆಗೆ ಜಲಪಾತದ ಅಬ್ಬರಕ್ಕೆ ತೊಯ್ದು ತೊಪ್ಪೆಯಾಗಿತ್ತು.

ರೈಲ್ವೆಯ ವಿಕ್ರಮ-

ರೈಲ್ವೆ ಇಲಾಖೆ ಇಂತಹ ದುರ್ಗಮ ದಾರಿಯಲ್ಲೂ ಅತ್ಯಂತ ಸುರಕ್ಷಿತವಾದ ಹಾದಿ ನಿರ್ಮಿಸಿದ ಕತೆ ಇನ್ನೂ ರೋಚಕ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ದಾರಿ ಮಾಡುವುದು ಅಪಾರ ಪರಿಶ್ರಮದ ಕೆಲಸ. ಜೊತೆಗೆ ಇಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ಎದುರಿಸಿ ಕೆಲಸ ಮಾಡುವುದು ಅಸಾಧ್ಯ ದುಸ್ಸಾಹಸದ ಕೆಲಸ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟಗಳ ಒಡಲಿನೊಳಗೆ  ಕೊರೆದ ಹಾದಿಯ ರೋಚಕತೆ ನೆನಪಿಗೆ ಬಂದು ಪುಳಕಗೊಂಡಿತು ಮನ. 

ರೈಲು ಬಲಕ್ಕೆ ಹೊರಳಿ ಆ ಮಹಾ ರುದ್ರ ರಮಣಿಯತೆಯ ದೃಶ್ಯವನ್ನು ನಮಗೆಲ್ಲಾ ಉಣಬಡಿಸಿ ಸೋನಾಲಿಮ್‌ ಸ್ಟೇಷನ್‌ನಲ್ಲಿ ನಿಶ್ಚಲವಾಯಿತು. ಈ ಅಮೋಘ ಜಲೌಗಕ್ಕೆ ಮನಸೋತ ಗೆಳೆಯ ಮಧ್ಯ ರೈಲಿನಿಂದ ಜಿಗಿಯಲು ತಯಾರಾಗಿದ್ದ. ಅವನನ್ನು ತಡೆದೆ. ಸೋನಾಲಿಮ್‌ ಬರುತ್ತಲೇ ರೈಲಿನಿಂದ ಜಿಗಿದು ಜಲಪಾತದತ್ತ ಹೊರಟೆವು. ಪಾಕಿಸ್ಥಾನದ ಉಗ್ರಗಾಮಿಗಳನ್ನು ಕಂಡವರಂತೆ ಅಲ್ಲೇ ನಿಂತಿದ್ದ ಪೋಲಿಸರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ಏನೋ ಕದ್ದವರಂತೆ ಓಡುತ್ತಾಬಂದು ರೈಲು ಹತ್ತಿದೆವು.

ಲಾಠಿ ಬೀಸುತ್ತಲೇ ಕರಗಿದ ನಮ್ಮ ಅಹಂಕಾರ ನೀರಿನೊಂದಿಗೆ ಸೇರಿ ಧುಮ್ಮಿಕ್ಕುತ್ತಲೇ ಇದೆ. ನೀರೂ ತನ್ನ ಬಣ್ಣ ಬದಲಿಸಿದೆ.  ಎಷ್ಟು ಸುರಿದರೂ ತಣಿಯದ ಹಾಲ್ನೋರೆ ಯಾರ ಕರುಣೆಗಾಗಿ ಕಾಯುತಿದೆಯೋ? ಜಲಪಾತ್ರೆಯ ಕೆಳಗೆ ತಿನ್ನಲು ಬಚ್ಚಿಟ್ಟ ಎರಡು ವಡಾಪಾವ್‌ ಪೋಲಿಸರನ್ನು ಕಂಡಾಗಲೇ ಹಣಕಿ ಹಾಕಿ ನಗತೊಡಗಿತು.

ಸೊನಾಲಿಮ್‌ನಿಂದ ಜಲಪಾತ ಹತ್ತು ಹಾಡಿನ ದೂರ. ಕೆಲವರ ಕಣ್ಣಾಲಿಗಳಲಿ ಮತ್ತೆ ಜಲಪಾತ ದರ್ಶನ. ನಿರಾಶೆ ಕರಗುವ ಬಿಂದು ಹುಡುಕುತ್ತಾ ನಿಂತೆ. ಕೆಲವರು ಇಷ್ಟಾದರೂ ನೋಡಲು ಸಿಕ್ಕಿತ್ತಲ್ಲ ಎಂದು ಖುಷಿ ಪಟ್ಟರು. ಎರಡು ಭಿನ್ನ ದ್ರುವಗಳು. ಸನಿಹಕ್ಕೆ ಹೋಗಿ ನೋಡದಷ್ಟು ಕಡಕ್‌ ಖಾಕಿ. ಇಂತಹ ಅತಿ ರಮ್ಯ ಜಲಪಾತಕ್ಕೆ ಬೇಲಿ ಹಾಕಿದ್ದು ಬೇಸರ ತರಿಸಿತು. ಇದ್ಯಾವುದನ್ನೂ ಲೆಕ್ಕಿಸದೇ ಹೋದವರು ಪೋಲಿಸರ ಅತಿಥಿಯಾದರು. ಡಕ್‌ ವಾಕ್‌  ಮಾಡಿಸಿಕೊಂಡು ಜಲಪಾತದಿಂದ ಕುಲೆಮ್‌ ರೈಲ್ವೆ ಸ್ಟೇಷನ್‌ ವರೆಗೆ ಎಂಟು ಕಿ.ಮೀ ವರೆಗೆ ಪಾದ ಸೇವೆಗೈದರು. ಬಂದವರೆ ಕುಲೆಮ್‌ ಸ್ಟೇಷನ್‌ ನ ಬಣ್ಣದೊಂದಿಗೆ ಒಂದಾಗಿ ನಿದ್ರಾ ದೇವಿಗೆ ಶರಣಾದರು. ತಮ್ಮ ತಮ್ಮ ರೈಲಿಗಾಗಿ ಕಾಯುತ್ತಾ ಕುಲೆಮ್‌ ನಲ್ಲಿ ಕರಗತೊಡಗಿದರು. ಇವರನ್ನೆಲ್ಲಾ ಮಳೆ ತನ್ನ ಜೋಗುಳದಲ್ಲಿ ಜೀಕತೊಡಗಿತು. 

ಬೀಳುವಾಗಲೂ ಘನತೆ ಉಳಿಸಿಕೊಳ್ಳುವುದು ಜಲಪಾತವೊಂದೇ ಇರಬೇಕು. ಬಿದ್ದಾಗಲೇ ಘನತೆ. ಇದ್ದಲ್ಲೇ ಇದ್ದರೆ ಘನತೆ ಎಲ್ಲಿ? ಬೀಳುವಾಗಲೂ ಘನತೆ ಉಳಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾ ಗಾಂಭೀರ್ಯದಿಂದಲೇ ಧುಮುಕುತ್ತಲೇ ಇದೆ.

ಎಷ್ಟೊಂದು ಬೆಸೆದ ಜೀವಗಳನ್ನು ಕಂಡಿತೋ ಅದು. ಮತ್ತೆ ಮತ್ತೆ ಇವರೆಲ್ಲರ ಬೆಸುಗೆ ಕಾಣಲು ಧುಮುಕುತ್ತಲೇ ಇದೆ.  ವಡಾಪಾವ್‌ ಮಾರುವವನಿಗೆ ನಾಲ್ಕು ಕಾಸು ಆಗುವುದು ಇಲ್ಲೇ. ಜಲಪಾತ ಬಿದ್ದಾಗಲೇ ಅವನ ಜೀವನದ ಬುತ್ತಿ ಕಟ್ಟಿಕೊಳ್ಳುವುದು. ಜಲಪಾತದಂತೆ ಇವನಿಗೂ ಬಹಳ ಅವಸರ. ಅವನ ಮನೆಯಲ್ಲಿ ಯಾರಿದ್ದಾರೋ ಕಾಯುವವರು.

ಬನ್ರಿ ಮತ್ತೆ-

ಬದುಕಿನ ದುಃಖ ದುಮ್ಮಾನ ಏಕತಾನದ ತಂತಿ ಮುರಿಯಲು ಇಂತಹ ರೋಚಕ ಹಾದಿಯನ್ನೊಮ್ಮೆ ತುಳಿದು ನೋಡಿ. ಜೀವಮಾನಕ್ಕಾಗುವಷ್ಟು ಅನುಭವದ ಬುತ್ತಿ ನಿಮ್ಮ ಜೊತೆ! 

ನಿಶ್ಚಲವಾದ ಸನ್ಯಾಸಿಯಂತಹ ಕನಸಿನ ಕುಲೆಮ್‌ನಲ್ಲಿ ಸಿಕ್ಕ ಬಿಸಿ ಬಿಸಿ ಊಟ ಹೊಸ ಚೈತನ್ಯ ಜಗತ್ತಿಗೆ ಕಾಲಿಡುವಂತೆ ಮಾಡಿತು. 



ಕ್ಷಮಿಸಲಾರೆಯ ಧರೆಯೆ –

ಪ್ರಕೃತಿಯ ಋಣಭಾರ ನನ್ನೆದೆಯಲಿ ಹಾಗೇ ಉಳಿಯಿತು. ತೀರಿಸುವ ಹೊಣೆಗಾರಿಕೆಯೊಂದಿಗೆ ಹಿಂದಿರುಗಿದೆ. ಆದರೆ ನೀರ ಸೆರಗಿನಲಿ ಉಳಿದ ನನ್ನಣ್ಣಂದಿರು ಎಸೆದ ಪ್ಲಾಸ್ಟಿಕ್‌ ಇನ್ನೂ ಅಣಕಿಸುತ್ತಲೇ ಸಮುದ್ರ ಸೇರುವ ತವಕದಲ್ಲಿದೆ.

ಕುಲೆಮ್‌ ರೈಲು ನಿಲ್ದಾಣ ಮತ್ತು  ಜಲಪಾತಕ್ಕೆ ಮಿಸ್‌ಯು ಎಂದೆನ್ನುತ್ತಾ ಮತ್ತೆ ಬರುವ ಬರವಸೆಯನ್ನಿತ್ತು ಬಾಯ್‌ ಬಾಯ್ ಹೇಳಿ ಹೊರಟು ನಿಂತೆವು.


ಶ್ರೀಧರ್‌ ಎಸ್.‌ ಸಿದ್ದಾಪುರ. 

Saturday, June 5, 2021

ಇತಿಹಾಸ ಹೊಸೆದ ಹೂ ಬಳ್ಳಿ ಹೊಸಗುಂದ...






ಹೂ ಅರಳುವ ಹೊತ್ತು. ಮಲಗಲು ಹೋದ ರವಿ ಇನ್ನೂ ಎದ್ದಿರಲಿಲ್ಲ. ಒಮ್ನಿಯ ಲಾಟಾನು ಬೆಳಕನು ಮುಂದ್ಹಾಯಿಸಿ ಮಂಜಿನ ಪರದೆ ಸೀಳಿ ನಮ್ಮ ವಾಹನ ಸಾಗರ ತಾಲೂಕಿನ ಆನಂದಪುರದ ಸನಿಹದ ಹೊಸಗುಂದದತ್ತ ಧಾವಿಸುತಲಿತ್ತು. ಗೂಗಲ್ ಗುರುವಿಗೆ ಸಹಾಯಕ್ಕಾಗಿ ಪದೇ ಪದೇ ಯಾಚಿಸಿದರೂ ನಿಮ್ಮ ಮೊಬೈಲ್ ನೆಟ್ವಕರ್್ ಕ್ಷೇತ್ರದಲ್ಲಿಲ್ಲವೆಂದು ಸಂದೇಶ ತೋರಿಸುತ್ತಾ ಮುಷ್ಕರ ಹೂಡಿತ್ತು. ಆನಂದಪುರದಲಿ ಎಡಕ್ಕೆ ಹಾಯ್ದು, ಆಕಾಶಕ್ಕೆ ಚಪ್ಪರ ಹಾಸಿದ ಮರಗಳ ನಡುವೆ ಹುದುಗಿದ ಹೊಸಗುಂದವೆಂಬ ಹೊಸಲೋಕವನ್ನು ಹಳೇ ಒಮ್ನಿ ಕಾರಿನಲ್ಲೇ ತಲುಪಿಕೊಂಡೆವು.


ಹೊಸನಗರದಿಂದ ಉತ್ತರಾಭಿಮುಖವಾಗಿ ಹೊರಟು ಆನಂದಪುರದಲ್ಲಿ ಎಡಕ್ಕೆ ಹೊರಳಿದರೆ ಹೊಸಗುಂದದ ದೇವಾಲಯಗಳ ಹೆಬ್ಬಾಗಿಲಿಗೆ ಬಂದು ಬೀಳುತ್ತೀರಿ. ಇಲ್ಲಿಂದ ಕೇವಲ 12 ಕಿಲೋ ಮೀಟರ್. ಸುತ್ತಲೂ ಆವರಿಸಿದ ಭತ್ತದ ಬಯಲು. ಊರಿಗೆ ಹೊಸಗುಂದ ಹೆಸರು ಹೇಗೆ ಬಂತೆದು ಇಲ್ಲಿನವರಿಗಿನ್ನೂ ಗೊತ್ತಿಲ್ಲ. ಮನ ಸೆಳೆವ ಆಕರ್ಷಕ ಶೈಲಿಯ 12ನೆಯ ಶತಮಾನದ ದೇಗುಲ.

ಸುತ್ತೋಣ ಬನ್ನಿ...

ಪನ್ನೀರ ಪುಷ್ಕರಣಿಯಲಿ ಕಾಲು ತೋಯಿಸಿ ಮೆಟ್ಟಿಲೇರಿದಾಗ ಕಾಣಿಸಿದ್ದು ರಾಶಿ ರಾಶಿ ವೀರಗಲ್ಲು. ಕಾಲನ ಹೊಡೆತಕ್ಕೆ ಕೆಲವು ಕಂಗಾಲಾಗಿ ಮಲಗಿದ್ದರೆ ಕೆಲವೇ ಕೆಲವು ನಿಂತಿದ್ದವು. ತಮ್ಮ ಮೇಲಿನ ಅಕ್ಷರಗಳನ್ನೆಲ್ಲಾ ನುಂಗಿಕೊಂಡಿದ್ದವು ಕೆಲವು! ವೀರಗಲ್ಲಿನ ಮೇಲೂ ಕಲಾ ನೈಪುಣ್ಯ. ಚಿತ್ರ ವಿಚಿತ್ರ ಚಿತ್ರಗಳ ವಿಶಿಷ್ಟ್ಯ ವೀರಗಲ್ಲುಗಳ ಸಮೂಹವೇ ಇಲ್ಲಿದೆ. ಇಲ್ಲಿ ನಡೆದಿರಬಹುದಾದ ಯುದ್ಧಗಳ ಸಣ್ಣ ಚಳಕನ್ನು ಈ ವೀರಗಲ್ಲುಗಳು ನಮಗೆ ತೋರಿಸುತ್ತವೆ. ನಮ್ಮವರ ಇತಿಹಾಸದ ದರ್ಪಣಗಳಿವು ಎಂಬುದನ್ನೂ ಅರಿಯದೇ ಸಾಯಲು ಬಿಟ್ಟಂತಿದೆ. ಕಲ್ಲಿಗೆ ಭಾಷೆ ಬಂದಿದ್ದರೆ ಹರಟ ಬಹುದಿತ್ತು, ಇತಿಹಾಸ ಕೆದಕಬಹುದಿತ್ತು!




ಮುಂದೆ ಸಿಗುವುದೇ ದೇವಾಲಯ ಸಮುಚ್ಚಯ. ಹಾಸುಗಲ್ಲಿನ 18 ಕಂಬಗಳ ಮೇಲೆ ಅರಳಿ ನಿಂತ ನವರಂಗದ ಶೋಭೆ. ಕಲಾತ್ಮಕತೆಯಂತೂ ಅತ್ಯದ್ಭುತ. ಸ್ಫಟಿಕರೂಪಿ ಶಿವಲಿಂಗ ಲಿಪ್ಸ್ಟಿಕ್ ಹಾಕಿದಂತೆ ಕೆಂಪು. ಉಳಿದರ್ಧ ಕಂದು! ವರ್ನಾನಾತೀತ. ನೇಪಾಳದಿಂದ ತರಿಸಲಾದ ಶಿವಲಿಂಗ ಎಂಬುದು ಅರ್ಚಕರ ಅಂಬೋಣ. ದಕ್ಷಿಣ ಭಾರತದಲ್ಲೆಲ್ಲೂ ಇಂತಹ ಅಪೂರ್ವ ಲಿಂಗವಿಲ್ಲವೆನ್ನುತ್ತಾರೆ! ಮತ್ತೆ ಮತ್ತೆ ನೋಡುವಷ್ಟು ಚೆಲವು. ಶಿವಲಿಂಗ ಜೊತೆಗಿರುವ ಪ್ರಸನ್ನ ನಾರಾಯಣ ದೇವಾಲಯವೋ ಮಹದ್ಭುತಗಳಲ್ಲೊಂದು. ನಾರಾಯಣನ ಮೂರುತಿ ಪೀಠ ಸೇರಿದಂತೆ ಸುಮಾರು 7 ಅಡಿ. ಶಿವಲಿಂಗದೊಂದಿಗೆ ಪೈಪೋಟಿಗಿಳಿದಂತಿರುವ ಪ್ರಸನ್ನ ನಾರಾಯಣನ ಮೂರುತಿ. ನವರಂಗದ ಹೊರ ಭಿತ್ತಿಯಲ್ಲಿ ಅನೇಕ ಕತೆಗಳನ್ನು, ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ! ಕೆತ್ತನೆಯ ನಾಜೂಕು ನಿಮ್ಮನ್ನು ಸೂರೆಗೊಳಿಸುತ್ತದೆ.





ಕೋಟೆ ಇದ್ದಿರಬಹುದೇ?

ದೇವಾಲಯದ ಸನಿಹದಲ್ಲೇ 12 ಅಡಿಗಳೆಷ್ಟು ಎತ್ತರದ ಮಣ್ಣಿನ ಗೋಡೆಗಳಿವೆ. ಯಾವುದೋ ಸಾಮಂತ ರಾಜ ಆಳ್ವಿಕೆ ಮಾಡಿರುವ ಸಾಧ್ಯತೆಗಳಿವೆ. ಕೆದಕಿದರೆ ಇತಿಹಾಸದ ಕುರುಹುಗಳು ಕಾಣ ಸಿಕ್ಕಾವು. ದೇವಾಲಯದ ಸನಿಹದ ಕಾಡು ಅಮೂಲ್ಯ ವನ ಸಂಪತ್ತಿನ ಆಗರ. 600 ವರುಷ ಹಳೆಯ ಮಾವಿನ ಮರವೊಂದು ನಾವು ಆರು ಜನ ಮುತ್ತಿಗೆ ಹಾಕಿದರೂ ಕೈ ಸಾಲದಾಯಿತು!! 500 ವರುಷ ಹಳೆಯ ಬಳ್ಳಿಗಳು, ವಿಶಿಷ್ಟ್ಯ ಪೊದೆಗಳು ಅನೇಕ ದಿನಗಳ ವರೆಗೆ ನಿಮ್ಮ ಮನಸ್ಸನ್ನು ಆವರಿಸದೇ ಬಿಡದು. 600 ಎಕೆರೆಯಲಿ ಹರಡಿದ ಹೊಸಗುಂದದ ದೇವಾಲಯ ನಿಶ್ಚಯವಾಗಿ ನಿಮಗೆ ಹೊಸ ಸ್ಟೋರಿ ನೀಡುವಲ್ಲಿ ಖಂಡಿತ ಸೋಲದು. ಇಲ್ಲಿನ ವನ ಸಂಪತ್ತನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸರ್ವೆ ನಡೆಸಿ 540ಕ್ಕೂ ಹೆಚ್ಚು ಅಳಿವಿನಂಚಿನ ಗಿಡಗಳಿವೆಯೆಂದು ಗುರುತಿಸಿದ್ದಾರೆ! ಅಬ್ಬಾ ಎಂದಿತು ಮನ.

ವಿಶಿಷ್ಟ್ಯ ವಿನ್ಯಾಸದ ಕಾಳಿ ದೇವಾಲಯವನ್ನು ನೋಡದೆ ಬಂದರೆ ಖಂಡಿತ ಏನೋ ಒಂದು ಕಳೆದುಕೊಂಡಂತೆ. ಕೇರಳೀಯ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ಕಡೆದು ಕೆತ್ತಿದ್ದಾರೆ. ಅಂದವಾಗಿ ಅದಕ್ಕೆ ಮಂಗಳೂರು ಹೆಂಚು ಹೊದಿಸಲಾಗಿದೆ. ಸುತ್ತಲೂ ಸುಂದರ ಪೌಳಿಯನ್ನು ನಿರ್ಮಿಸಿದ್ದಾರೆ.

ಇತಿಹಾಸ

ಇತಿಹಾಸವನು ಕೆದಕಿದರೆ ಕ್ರಿ ಶ 9 ನೆಯ ಶತಮಾನಕ್ಕೆ ನಮ್ಮನ್ನು ಒಯ್ಯುತ್ತದೆ. ಕೆಲವೇ ವರ್ಷಗಳ ಕೆಳಗೆ ಮಣ್ಣಿನಡಿಯಲ್ಲಿ ಮಲಗಿದ್ದ ದೇವಾಲಯವು ಊರಿನವರ (ನಾರಾಯಣ ಶಾಸ್ತ್ರಿ ದಂಪತಿಗಳು) ಮತ್ತು ಉಮಾ ಮಹೇಶ್ವರ ಸೇವಾ ಟ್ರಸ್ಟ್ನ ಕಾಳಜಿಯಿಂದ ಜೀರ್ಣೋದ್ದಾರಗೊಂಡಿದೆ. ಎಲ್ಲಾ ದೇವಾಲಯಗಳನ್ನು ಮೊದಲಿದಂತೆ ನಿರ್ಮಿಸಲಾಗಿದೆ.

ಎ. ಸುಂದರಂ, ಜಿ.ವಿ ಕಲ್ಲಾಪುರ, ಸಾಮಕ್ ಅವರ ಸಂಶೋಧನೆಯ ಪರಿಶ್ರಮ ಎದ್ದು ಕಾಣುತ್ತದೆ. ಇಲ್ಲಿನ ಶಾಸನಗಳನ್ನು ಓದಿ ಇದರ ಐತಿಹ್ಯದ ಗಂಟನ್ನು ಬಿಡಿಸಿದ್ದಾರೆ. ಉತ್ಖನನ ಗೊಂಡಾಗ ಶಿಲಾಯುಗದ ಆಯುಧಗಳೂ, ಗಂಗರ ಕಾಲದ ನಾಣ್ಯಗಳೂ ಸಿಕ್ಕಿವೆ ಎಂದು ಹೇಳಲಾಗುತ್ತದೆ. 

ನಿರ್ಮಾಣ:-

ಪ್ರಸನ್ನ ನಾರಾಯಣಿ ದೇವಾಲಯವನ್ನು ಬಲದೇವನೆಂಬುವವನು 1242ರಲ್ಲಿ ನಿರ್ಮಿಸಿದನೆಂದು ಐತಿಹ್ಯ ಹೇಳುತ್ತದೆ. ಕ್ರಿ. ಶ 1320ರಲ್ಲಿ ಹೊಯ್ಸಳರ ವೀರ ಬಲ್ಲಾಳ ದೇವರಸನು ಕಂಚಿ ಕಾಳಮ್ಮದೇವಾಲಯಕ್ಕೆ ಭೂ ದಾನ ನೀಡಿದ ಶಾಸನ ಪತ್ತೆಯಾಗಿದೆ. ಗಣಪತಿ, ವೀರ ಭದ್ರ, ಮಹಿಷ ಮರ್ಧಿನಿ, ಸುಬ್ರಹ್ಮಣ್ಯ ದೇವಾಲಯ ನಿರ್ಮಿಸಿದನೆಂದು ಅಳಿಯದೇ ಉಳಿದ ಶಾಸನಗಳು ಸಾರುತ್ತವೆ. 

ಇಲ್ಲಿನ ದೇವಾಲಯಗಳು ದ್ರಾವಿಡ, ಹೊಯ್ಸಳ, ಪಲ್ಲವ , ಕೇರಳೀಯ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಅತ್ಯದ್ಬುತವಾದ ದೇವಾಲಯ ಸಮುಚ್ಚಯದ ಜೊತೆಗೆ 600 ಎಕರೆ ದೇವರ ಕಾಡು ಪರಿಸರಾಸಕ್ತರಿಗೆ, ಇತಿಹಾಸ ಪ್ರಿಯರಿಗೆ ಸುಗ್ರಾಸ ಭೋಜನವನುಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. 

ಶ್ರೀಧರ್. ಎಸ್. ಸಿದ್ದಾಪುರ


 

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...