Tuesday, May 18, 2021

ಓದಲಾರೆ ಓದದೆಯೂ ಇರಲಾರೆ!!



ತೀವ್ರತೆ, ತುಮುಲ, ಕಲ್ಪನೆಗಳಿದ್ದರೆ ಮಾತ್ರ ಕವಿತೆ ಹುಟ್ಟಬಹುದೇನೊ? ಕತೆ ಕಟ್ಟಬಹುದೇನೋ? ತೀವ್ರ ತಿರಸ್ಕಾರ, ವಿಷಾದ ಜೊತೆಯಾದಾಗ ಹುಟ್ಟುವ ಭಾವಕ್ಕೆ ಕತೆಯ ಚೌಕಟ್ಟು ತೊಡಿಸಬಹುದೇನೋ? 

ಸಣ್ಣಗೆ ಜಿನುಗುವ ಲಾಟಾನು ಬೆಳಕಿನಲಿ ಕವಿ ಅನುಭವಿಸಿದ ಅತೀವ ಭಾವನೆಗಳನ್ನು ಕೊನೆ ಮೊದಲಿಲ್ಲದ ವಿಷಾದದಲ್ಲಿ ಅದ್ದಿ ತೆಗೆದಂತಹ ಬರೆಹ. 

ಅಪ್ಪ, ಲೀಲಾವತಿ ಮತ್ತು 'ನಾನು' ಎಂಬ ಮೂರು ಭಿನ್ನ ಟಿಸಿಲುಗಳಲ್ಲಿ ಹಬ್ಬಿ ಹರಡಿದ  ಕಥನ ಕವನ! ಹೃದಯದ ರಕ್ತ ಬಸಿದು ಬಿಡುವಂತಹ ನಿಗಿ ನಿಗಿ ಸುಡು ಸಾಲುಗಳ ನಡುವೆ ಹರಡಿದ ಕತೆ. ಭಿನ್ನ ರೂಪಕಗಳಲ್ಲಿ ಕಸಿ ಕಟ್ಟಲಾದ ಕತೆ. ಈ ಪದಗಳು ಹುಟ್ಟು ಹಾಕುವ ಭಾವ ತೀವ್ರತೆ ನನ್ನಲ್ಲಿ ಮಾತ್ರವಾ ಎಂದು ಆಲೋಚಿಸುತ್ತೇನೆ. ಇಲ್ಲ. ಮುಂಬರಹ, ಹಿಂಬರದ ನುಡಿಗಳಲ್ಲೂ ಅವೇ ಮಾತು. ಕೆಲವೊಮ್ಮೆ ಆಲೋಚಿಸುತ್ತೇನೆ ಓದು, ಬರೆಹ ಎಲ್ಲವೂ            ನಿರರ್ಥಕವೆಂದು. ಎಲ್ಲವೂ ಅಯೋಮಯ. 

ಕಾದಂಬರಿಯ ಕೆಲವು ಸಾಲುಗಳು...

1. ನಿರಾಕರಣವೇ ಬಾಳಿನ ಬೆಳಕು.

ಒಮ್ಮೆಯಾದರೂ ಯಾರಿಂದಲಾದರೂ ತಿರಸ್ಕೃತಗೊಳದೇ ಹೋದರೆ ಕವಿತೆ ಜಾಳಾಗುತ್ತದೆ. ತಿರಸ್ಕೃತಗೊಂಡ ಜೀವಕ್ಕೂ ಕವಿತೆಗೂ ಜಗತ್ತನ್ನೇ ಗೆಲ್ಲುವ ಧೈರ್ಯ ಬರುತ್ತದೆ.

2. ನಿರೂಪಕ ಹೇಳುತ್ತಾನೆ...

ಪದ್ಯ ಬರೆಯಬಾರದು.

ಬರೆದರೆ ಅದು ಮತ್ತೊಬ್ಬರ ವಶವಾಗುತ್ತದೆ. ನಾವು ಪಳಗಿಸದೇ ಹೋದರೂ ಅವರು ಅದನ್ನು ಪಳಗಿಸುತ್ತಾರೆ. ಕವಿತೆಯನ್ನು ಪಳಗಿಸಿದರೆ ಕವಿಯನ್ನು ಪಳಗಿಸಿದಂತೆ ಅಂದುಕೊಳ್ಳುತ್ತಾರೆ. ನೀವು ನನ್ನನ್ನು ಪಳಗಿಸಲಾರಿರಿ. ನನ್ನ ಕವಿತೆಯನ್ನು ಕೂಡ ಎಂದು ಸಿಟ್ಟಿನಿಂದ ಹೇಳಬೇಕು ಅಂದುಕೊಳ್ಳುತ್ತೇನೆ, ಸಿಟ್ಟು ಕೂಡ ಪದ್ಯದ ಹಾಗೆಯೇ. ಮತ್ತೊಬ್ಬರ ವಶವಾದರೆ ಅದನ್ನೂ ಅವರು ಪಳಗಿಸಬಲ್ಲರು.

3. ....

ನಾನು ಕವಿತೆಗಳನ್ನು ಅನುವಾದಿಸಲಿಕ್ಕೇ ಹೋಗಲಿಲ್ಲ. ಅನುವಾದವೆಂದರೆ ಮಕ್ಕಳ ಪೋಟೋ ತೆಗೆದಂತೆ. ಮಕ್ಕಳಂತೆಯೇ ಕಾಣಿಸುತ್ತದೆ. ಜೀವ ಇರುವುದಿಲ್ಲ.

ಜೀವ ಇಲ್ಲದ ಪದ್ಯ ಬರೆಯುವುದಕ್ಕೆ ಹೋಗಬಾರದು.

ಅಂಥ ಪದ್ಯ ಬರೆದರೆ ಒಂದೋ ಕವಿ ಸತ್ತಿರುತ್ತಾನೆ. ಅಥವಾ ಪದ್ಯ.

ಎರಡೂ ಸತ್ತಿರುವುದನ್ನೂ ನೋಡಿದ್ದೇನೆ. ಸತ್ತ ಕವಿ ಸತ್ತು ಹೋದ ಪದ್ಯಗಳನ್ನು ಹೆರುತ್ತಾನೆ. ಅವುಗಳನ್ನು ತೋರಿಸಿ ನನ್ನ ಪದ್ಯಗಳಿವು ಅಂತ ಹೇಳುತ್ತಾನೆ.

4. ..

ಕವಿತೆ ಬರೆಯುವುದು ಅಂದರೆ ಕಳೆದುಕೊಳ್ಳುವುದು. ಬೇರೆ ಯಾರಿಗೋ ಕೊಟ್ಟು ಬಿಡುವುದು. ಸೆರೆಮನೆಯಲ್ಲಿ ಹೆತ್ತ ಮಗುವನ್ನು ನಂದನದಲ್ಲಿ ಬಿಟ್ಟು ಬರುವುದು. ಮತ್ತೆ ಸೆರೆಯಾಗಿ ಏಕಾಂಗಿಯಾಗಿ ಬದುಕುವುದು. ಹಾಗಾಗಿ ಪದ್ಯ ಬರೆಯಲೇ ಬಾರದು. ಹಾಗಾದರೂ ಅದು ನನ್ನ ಜೊತೆಗಿರುತ್ತದೆ.

5. 

ಈ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು, ಓದಿಯೂ ಎಲ್ಲೋ ಬಿಟ್ಟುಹೋದ ಒಳ್ಳೆಯ ಇಮೇಜುಗಳು, ಒಳ್ಳೆಯ ಸಾಲುಗಳು ಸಾವಿರಾರು ಇವೆ, ಅವುಗಳನ್ನು ಹಿಡಿಯಬೇಕು. ಈ ಕಾದಂಬರಿ ಒಂದು ಥರ ಅಷ್ಟು ಸುಲಭಕ್ಕೆ ಅರ್ಥಕ್ಕೆ ಸಿಗದ ಒಂದು ಮೊಂಡು ಕವಿತೆಯೇ. ನಾವೂ ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು. ಅಥವಾ ಅದರ ಗುಂಗಲ್ಲೇ ಇದ್ದು ಬಿಡಬೇಕು. ಥೇಟು ಲಕ್ಷ್ಮಣ ನೀಲಂಗಿ ಅರ್ಥಾತ್ ಎಲ್, ತನ್ನ ಲೀಲಾಳ ಗುಂಗಲ್ಲೇ ಇದ್ದು ಬಿಡುವಂತೆ.

- ಹಿಂಬರಹದಿಂದ ವಿಕಾಸ್.



***

ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು. ಎನ್ನುವ ತೀವ್ರ ಸಾಲುಗಳನ್ನು ನೆನಪಿಸುತ್ತಾ ಕವಿಯ ಅಸಾಹಕತೆ ಜೊತೆಗೆ ಕವಿತೆಯ ನಿರರ್ಥಕತೆ ಕಾಡುತ್ತಾ ಇರುವಾಗ... ಹೀರಿಬಿಟ್ಟ ಕಾಫಿ ಲೋಟದ ಘಮಲು ಹಾಗೆಯೇ ಉಳಿದಿದೆ. ಈ 'ಎಲ್' ನಂತೆ.


 

Monday, May 3, 2021

ಪ್ರಿಯಕರನಿಗೆ ಉಚಿತ ಸವಾರಿ!!

     ನನ್ನ ಹೆಡ್ಡಿಂಗ್ ಬೇರೇಯದೇ ಇತ್ತು. 'ಹೆಂಡತಿ ಮೇಲೆ ಗಂಡನ ಸವಾರಿ' ಎಂದು ಹಾಕ ಬೇಕೆಂದಿದ್ದೆ. ಮಹಿಳಾವಾದಿಗಳು, ಮಹಿಳಾ ಸಂಘಟನೆಗಳು ಚಕಾರ ಎತ್ತಬಹುದೆಂದು ಬದಲಾಯಿಸಿದೆ! ಅನೇಕ ಮಹಿಳಾ ಮಣಿಗಳು ತಪ್ಪು ತಿಳಿಯಬಹುದೆಂದು ಬದಲಾಯಿಸಿದೆ. ಮಹಿಳೆಯರ ಮೇಲೆ ಯಾವಾಗಲೂ ಪುರುಷರದ್ದೇ ಸವಾರಿ ಎಂದು ಯಾವಾಗಲೂ ಇವಳು ಹೇಳುತ್ತಿರುತ್ತಾಳೆ. ನಮ್ಮ ಶಿಕ್ಷಕಿ ವೃಂದದವರದ್ದೂ ಇದೇ ಅಭಿಪ್ರಾಯ.


ಸವಾರಿ  ಹೊರಟ ಕ್ರ್ಯಾಬ್ ಸುಂದ್ರಿ.

ನಾನಿವತ್ತು ಹೇಳ ಹೊರಟಿರುವುದು ಜೇಡಗಳ ಒಂದು ಅನನ್ಯ ಅಭ್ಯಾಸದ ಕುರಿತು. ನನ್ನ ಅನೇಕ ಜೇಡ ಮಿತ್ರರು ಈ ಚಿತ್ರವನ್ನು ಹಾಕಿ ನನ್ನ ಹೊಟ್ಟೆಯುರಿ ಹೆಚ್ಚಿಸಿದ್ದರು. ನನಗೆ ಈ ವಿಚಿತ್ರ ನೋಡಲು ಸಾಧ್ಯವಾಗಲಿಲ್ಲ. ಪ್ರಕೃತಿ ನನ್ನ ಮಟ್ಟಿಗಂತೂ ಕರುಣಿ. ತನ್ನೊಡಲಲ್ಲಿ ಅಡಗಿರುವ ಅನೇಕ ವಿಚಿತ್ರವನ್ನು ಸ್ವಲ್ಪ ಸ್ವಲ್ಪವೇ ತೆರೆದು ತೋರಿಸುತ್ತಿದೆ. ಕಳೆದ ಅಕ್ಟೋಬರ್ಲ್ಲಿ ಅನೇಕ ವಿಚಿತ್ರಗಳನ್ನು ಕಂಡಿರುವೆ. ಬಸವನ ಹುಳವನ್ನು ತಿನ್ನುತ್ತಿರುವ ಮಿಂಚುಹುಳದ ಲಾರ್ವ, ಹೀಗೆ ಹತ್ತು ಹಲವು ಅನನ್ಯತೆಯನ್ನು ತೆರೆದು ತೋರಿದೆ. ಈ ಬೇಸಿಗೆಯಲ್ಲಿ ಅದು ಮತ್ತೊಂದು ಅನನ್ಯತೆಯನು ಅದು ತೆರೆದು ತೋರಿದೆ.


ಕ್ರ್ಯಾಬ್ ಸುಂದ್ರಿಯ ಬೆನ್ನ ಮೇಲೆ ಸುಂದ್ರ.

ಥಾಮಸಿಡೆ ಕುಟುಂಬಕ್ಕೆ ಸೇರಿದ ಕ್ರ್ಯಾಬ್ ಸುಂದ್ರಿ ಚಿಕ್ಕ ನೇರಳೆಗಿಡದಲ್ಲಿ ಪವಡಿಸಿತ್ತು. ಯಾವುದೋ ಕಸವೆಂದು ಮುಂದುವರಿಯಲಿದ್ದೆ. ಆದರೂ ನೋಡೋಣವೆಂದು ಕಣ್ಣು ಹಾಯಿಸಿದೆ, ಅಚ್ಚರಿ! ಸುಂದ್ರಿಯ ಬೆನ್ನ ಮೇಲೆ ಸುಂದ್ರ. ಕೆಳಗಿಳಿದರೆ ಗಂಡಿಗೆ ಸಾವು! (ಹೆಣ್ಣು ಜೇಡಗಳು ಗಂಡು ಜೇಡಗಳನ್ನು ತಿನ್ನುತ್ತವೆ.) ಸುಮ್ಮನೆ ಹೆಣ್ಣು ಗಂಡನ್ನು ಹೊತ್ತು ತಿರುಗತಲಿತ್ತು. ಏನೇ ಮಾಡಿದರೂ ಇಳಿಯಲೊಲ್ಲದು ಈ ಪುರುಷೋತ್ತಮ. ಎಷ್ಟೋ ಹೊತ್ತಿನಿಂದ ಕಾಯುತಲಿದ್ದ ಮತ್ತೊಂದು ಗಂಡು ಜೇಡ ಉದ್ದ ಜಿಗಿತದ ಸ್ಪರ್ಧಿಯಂತೆ ಓಡಿ ಬಂದು ಹೆಣ್ಣು ಜೇಡದ ಮೇಲೆ ಹತ್ತಿ ಕುಳಿತಿತು. ಮೊದಲಿನ ಜೇಡದ ಮೇಲೆ ಆಕ್ರಮಣ ಮಾಡಿತು(ನನ್ನ ಅನಿಸಿಕೆ). ತುಂಬಾ ಹೊತ್ತು ಆ ಎರಡು ಜೇಡಗಳು ಹೆಣ್ಣು ಜೇಡದ ಮೇಲೆ ಕುಳಿತು ಪಟ್ಟಾಂಗ ಹೊಡೆದವು! ನಮ್ಮ ಹೆಣ್ಣು ಜೇಡ ಮಾತ್ರ ಎರಡೂ ಜೇಡಗಳನ್ನು ಹೊತ್ತು ನೇರಳೆ ಮರಕ್ಕೆ ಸುತ್ತು ಬರತೊಡಗಿತು. ಎರಡಕ್ಕೂ ಇಳಿಯುವ ಮನಸ್ಸಿಲ್ಲ! ಕೊನೆಗೆ ಒಂದಕ್ಕೆ ಬೇಜಾರು ಬಂದಿತೋ, ಇವುಗಳ ಸಹವಾಸ ಸಾಕೆನಿಸಿತೊ ಏನೊ ಒಂದು ಗಂಡು ಜೇಡ ಇಳಿದು ಹೋಗಿ ಎಲೆಯಡಿಯಲ್ಲಿ ಅವಿತಿತು. ಅಂತೂ ದೂರಾದ ಜೇಡ ಮತ್ತೆ ಇವುಗಳ ಸಹವಾಸಕ್ಕೆ ಬರಲೇ ಇಲ್ಲ. ಮತ್ತೊಂದು ಜೇಡ ಇದಕ್ಕೇನು ಹೇಳಿತೊ ತಿಳಿಯದು. ಹೆಣ್ಣು ಜೇಡ ಒಂದು ಗಂಡು ಜೇಡವನ್ನು ಇಳಿಸದೇ ನೇರಳೆ ಮರದ ಪರಿಕ್ರಮದಲ್ಲಿ ನಿರತವಾಗಿ ಸ್ವಲ್ಪ ಹೊತ್ತಿಗೆ ಮೌನವಾಯಿತು. ಜೇಡಗಳ ಈ ವಿಶಿಷ್ಟ ಗುಣಗಳ ಬಗ್ಗೆ ಜೇಡ ಸ್ನೇಹಿತರು ಬೆಳಕು ಚೆಲ್ಲುವಿರಾ?
 

Saturday, May 1, 2021

ಯಾಮಿನಿ ಬಂದಿದ್ದಳು!!



12 ವರ್ಷಗಳ ಬಳಿಕ ಯಾಮಿನಿ ಬಂದಿದ್ದಳು. ಅನೇಕ ಬಾರಿ ಬಾ ಎಂದರೂ ಬಂದಿರಲಿಲ್ಲ.  ಅವಳ ಜೊತೆ ಗೆಳೆಯ ಚಿರಾಯು  ಸಹ ಬಂದಿದ್ದ. ಹಗಲು ರಾತ್ರಿ ಅವಳೊಂದಿಗೇ ಮಾತೇ ಮಾತು. ಕಾಫಿ ಕಪ್ ಹಿಡಿದು ಅದನ್ನೇ ಮರೆತು ಅವಳ ಕತೆಯಲ್ಲಿ ತೇಲಿದ್ದಿದೆ. ನಿದ್ದೆಯಲ್ಲೂ ಅವಳ ಕನವರಿಕೆ. ಹೆಂಡತಿಗಂತೂ ವಿಪರೀತ ಹೊಟ್ಟೆ ಕಿಚ್ಚು. ಎನಷ್ಟು ಅವಳೊಂದಿಗೆ ಮಾತು. ಏನೋ ಕುತೂಹಲ ಅವಳಿಗೆ. ಸಣ್ಣ ಸಂಶಯ. ಅಂತಹದ್ದೆನಿದೆ ಅವಳಲ್ಲಿ? ಇವಳ ಪ್ರಶ್ನೆ. ಚೂಪು ಮೂಗಿನ ನವಿರು ಗಲ್ಲದ ಮುದ್ದಾದ ಹುಡುಗಿ. ಏನಿಲ್ಲ ಅವಳಲ್ಲಿ? ವಿವರಣೆಗೆ ಕುಳಿತರೆ ತೇಜಸ್ವಿಯ ಕತೆಗಿಂತಲೂ ರೋಚಕವಾಗಿ ಹೇಳಬಲ್ಲಳು. ಹಾಡಲು ಹೇಳಿದರೆ ಗಂಗೂಬಾಯಿ. ಅತ್ಯುತ್ತಮ ವಿಮರ್ಶಕಿ. ಎದೆಯಲ್ಲೊಂದು ಪ್ರೀತಿಯ ಝರಿ ಜೀವಂತ. ಇಂತಿಪ್ಪ ಯಾಮಿನಿ...

12 ವರ್ಷಗಳ ತನ್ನ ಕತೆಯನ್ನು ಬಿಚ್ಚಿಟ್ಟಳು. ಕರೋನ ಬರುತ್ತದೆಂದು ಹೆಂಡತಿ ಹೆದರಿಸಿದರೂ ಕೇಳದೆ ನಾವಿಬ್ಬರೂ ಒಂದೆರಡು ದಿನ ಹಾಯಾಗಿ ಬೆಂಗಳೂರಿಗೆ, ಶಿವಮೊಗ್ಗಕ್ಕೆ, ಯಲ್ಲಾಪುರ, ಸುಬ್ರಮಣ್ಯ ಸುತ್ತಿ ಸುಳ್ಯದ ಅವಳ ಕಾಡುಮನೆಯಲ್ಲಿ ಒಂದೆರಡು ದಿನವಿದ್ದು ಬಂದೆವು. ಪ್ರಯಾಣದ ನಡುವೆ ಶೃದ್ಧಾ ಶರ್ಮಾ ಸೇರಿಕೊಂಡಳು.

ನಮ್ಮೆಲ್ಲರ ಕಣ್ಮಣಿಯಾದವಳು ಒಲಿದದ್ದು ಮಾತ್ರ ಚಿರಾಯುವಿಗೆ. ನಾವು ಒಲಿಸಿಕೊಳ್ಳಲು ಪ್ರಯತ್ನಿಸಿಲ್ಲವೆಂಬುದು ಶುದ್ಧ ಸುಳ್ಳು! ಒಲಿದಿಲ್ಲವಷ್ಟೇ. ಹಾಗಂತ ಚಿರಾಯುವಿನ ಹೆಂಡತಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಒಲಿದಿದ್ದು ಗಿರೀಶ್ ಗೆ ಇರುವುದು ಚಿರಾಯುವಿನ ಜೊತೆ!!

ಅವಳು ಬಂದ ದಿನ ರಾತ್ರಿ ಪೂರಾ ಜಾಗರಣೆ. ಓರೆ ಕೋರೆ ಗೆರೆಗಳಂತೆ ಚದುರಿದ ರೇಖೆಗಳಂತೆ ತನ್ನ ಕತೆ ಹೇಳುತ್ತಾ ಕೂತಿದ್ದಳು. ತಾನೇ ಕನ್ನಡಿ ಮುಂದೆ ನಿಂತು ಕತೆ ಹೇಳಿ ಕೊಳ್ಳತೊಡಗಿದಳು. ತನ್ನ ತುಮುಲಗಳನ್ನು, ಒಳತೋಟಿಗಳನ್ನು ಹೇಳುತ್ತಾ ಬೆತ್ತಲಾಗತೊಡಗಿದಳು. 

ಕಮಲಶಿಲೆಯಲ್ಲಿ, ಶಿವಮೊಗ್ಗೆಯಲ್ಲಿ ಚಿರಾಯು ಕಳೆದ ದಿನಗಳು, ಅವನೊಂದಿಗಾದ ಮಾತು ಕತೆಯ ವಿವರಗಳು. ಆತನ ಕತೆಗಳು. ಚಿರಾಯುವಿನ ತಂದೆಯ ತಿರಸ್ಕಾರ, ಸಿಕ್ಕ ಪುರಸ್ಕಾರ. ಯಾವುದು ಶಾಶ್ವತ? ಯಾವುದು ನಶ್ವರ? ಎಂಬ ತೊಳಲಾಟಗಳು. ಅವನ ಹೋರಾಟದ ದಿನಗಳು ಎಲ್ಲವೂ ಮಾತಿನ ನಡುವೆ ಜಾಗ ಮಾಡಿಕೊಂಡವು. ಬದುಕಿನ ನಾಜೂಕಿನ ಸಂದರ್ಭದಲ್ಲಿ ಚಿರಾಯುವಿನಿಂದ ದೂರಾಗಲು ಇಂಗ್ಲೆಂಡ್ಗೆ ಹೊರಟು ನಿಂತ ಕ್ಷಣಗಳು. ವರುಷಗಳ ಬಳಿಕ ಮತ್ತೆ ಚಿರಾಯುವನ್ನೇ ಸೇರಿಕೊಂಡ ಕತೆ. ಆತನನ್ನು ಪ್ರೇರೇಪಿಸಿ ಬರೆಯಿಸಿದ ಕತೆಗೆ ಬಹುಮಾನ ಬಂದಿದ್ದು. ಜೀವನದಲ್ಲಿ ನಡೆದ ಕತೆಗಳನ್ನು ಹೆಕ್ಕಿ ಹೇಳಿದ್ದಳು. ಯಾವುದೂ ಇಲ್ಲಿ ನೇರವಿಲ್ಲ. ಆದರೂ ವಕ್ರವಲ್ಲ. ಅವಳು ಅವನ ಬದುಕಿನ ವಿವರಗಳ ಗುಚ್ಚಗಳು ಅಚ್ಚರಿ ಹುಟ್ಟಿಸುವಂತಹುದು. ಹೀಗೆ ಆಕೆ ಹೇಳಿದ ಸಣ್ಣ ಸಣ್ಣ ವಿವರಗಳು ಎರಡು ದಿನದಿಂದ ನನ್ನ ಎದೆಯಲ್ಲಿ ಗುಂಯ್ ಗುಡುತ್ತಿದೆ. ಹೀಗೂ ಜೀವನವಿರಬಹುದೇ ಎಂಬ ತುಮುಲದಲ್ಲಿರುವೆ. ಕತೆಗಳಿಗಿಂತಲೂ ಕೆಲವರ ಬದುಕುಗಳು ವಿಚಿತ್ರ. ಎರಡು ತಿಂಗಳಿಗಾಗುವಷ್ಟು ಕತೆ ಹೇಳಿ ಹೋಗಿದ್ದಾಳೆ. ಒಂದೊಂದೇ ನವಿಲುಗರಿಯಂತಹ ಕತೆಗಳನ್ನು ಎದೆಯ ಗೂಡಲ್ಲಿ ಬಚ್ಚಿಡಲು ಪ್ರಯತ್ನಿಸುತ್ತಿರುವೆ ಆಗುತ್ತಿಲ್ಲ. ಕತೆಗಾರ್ತಿ ಯಾಮಿನಿಯ ಚಮಕ ಪ್ರತಿ ವಾಕ್ಯದಲ್ಲೂ ಅನುರಣಿಸುತಿದೆ. ನನ್ನ ಎದೆಯ ಗೂಡಲ್ಲಿ ಅರಳಲು ತವಕಿಸುತ್ತಿದೆ. ಕಣ್ಣು ಮಾತಿಗಿಳಿದಾಗ ಬಾಯಿ ಬಲು ಮೌನ! ಅವಕಾಶ.

ಇಂದು ಆಕೆ ಹೊರಟು ನಿಂತಾಗ ಎದೆ ಭಾರ. ಮತ್ತೆ ಕೇಳಿದೆ ಭೇಟಿ ಯಾವಾಗ?

 



 

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...