ಹಲವು ವರುಷಗಳ ಹಿಂದೆ ಪಕ್ಷಿ ಛಾಯಾಗ್ರಹಣದ ಬೆನ್ನು ಹತ್ತಿದ ಸಮಯ. ಕಾಗೆ ಗಾತ್ರದ ಹಕ್ಕಿಯೊಂದು ನೀಲಾಕಾಶದಲಿ ನಿರುಕಿಸುತ್ತಾ ವೃತ್ತಾಕಾರದ ಸುತ್ತು ಬರುತಲಿತ್ತು. ಎಷ್ಟು ಹೊತ್ತು ಕಾದರೂ ಕೆಳಗಿಳಿಯುತ್ತಿರಲಿಲ್ಲ.
ಯಾಕೆ ಇದು ಹೀಗೆ ವೃತ್ತಾಕಾರವಾಗಿ ಸುತ್ತುತ್ತಿದೆ. ಯಾವುದಾದರೂ ಹರಕೆ ಉಂಟಾ ಎಂದು ತಲೆ ಕೆರೆದುಕೊಳ್ಳತೊಡಗಿದೆ. ತಿಳಿಯಲೇ ಇಲ್ಲ.
ಈ ಹಕ್ಕಿ ಹೇಗಿದೆ? ಯಾವ ಪಂಗಡಕ್ಕೆ ಸೇರಿದುದು ಎಂದು ತಿಳಿವ ಕುತೂಹಲ ತೀವ್ರವಾಗಿತ್ತು. ಆಗ ನನ್ನ ಬಳಿ ಉತ್ತಮ ದರ್ಜೆಯ ಕ್ಯಾಮರವೂ ಇರಲಿಲ್ಲ. ಅದರ ಮಿತಿಯನು ಮೀರಿ ಆ ಹಕ್ಕಿಯ ವಿವರಗಳನ್ನು ಹೆಕ್ಕಲು ಯತ್ನಿಸಿದ್ದೆ. ಸಾಧ್ಯವಾಗಲೇ ಇಲ್ಲ. ವಿಫಲತೆಯೇ ಬೆನ್ನು ಹತ್ತಿದ ವರ್ಷಗಳು ಅವು. ಮತ್ತೆ ಮತ್ತೆ ಮುಗಿಲಿಗೆ ಹಾರಿ ನೆಲದ ನೋಟಗಳನ್ನು ತನ್ನ ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ನನ್ನ ನಿದ್ದೆಕೆಡಿಸುತಲಿತ್ತು. ಹೀಗೆ ಕೆಲ ವರುಷ ಅದರ ಗುಂಗಿನಲ್ಲೇ ಕಳೆದೆ. ಅಲ್ಲದೇ ಅದರ ವಿಚಿತ್ರ ಕೂಗಿನಿಂದ ನಮ್ಮ ಮನೆಯ ಸನಿಹದವರೆಲ್ಲಾ ಅದರ ಕೂಗು ಅಪಶಕುನವೆಂದು ಹೇಳುತ್ತಿದುದು ನನ್ನ ನಿದ್ದೆ ಕೆಡಿಸಿತ್ತು. ತನ್ನ ಒಡಲ ದನಿ ನಮಗೆ ಅಪಶಕುನವಾಗುವುದು ಹೇಗೆಂದು ತಿಳಿಯದೆ, ಅವರಿಗೆ ಪ್ರಶ್ನೆಗಳ ಸರ ತೊಡಿಸಿ ʼಫಟಿಂಗʼ ಎಂಬ ಬಿರುದನ್ನೂ ಸಂಪಾದಿಸಿದ್ದೆ. ಈ ಹಕ್ಕಿಯ ಚಿತ್ರಕ್ಕಾಗಿ ಹತ್ತಾರು ಗಂಟೆಗಳ ವ್ಯಯಿಸಿದಿದೆ. ಒಂದು ಚಿತ್ರಕ್ಕಾಗಿ ಹಲವಾರು ಕಿಲೋ ಮೀಟರ್ ಪಯಣಿಸಿದ್ದೆ. ಕೆಲವರುಷದ ಬಳಿಕ ದೊಡ್ಡ ಲೆನ್ಸ್ ಸಿಕ್ಕ ಮೇಲೆ ಅದರ ಜಾತಕದ ಒಂದೊಂದೇ ವಿವರಗಳು ಲಭ್ಯವಾದವು. ಇಂತಿಪ್ಪ ಅದರ ವಿವರಗಳು ಈ ಕೆಳಗಿನಂತಿವೆ.
ಸೂಕ್ಷ್ಮ ದೃಷ್ಟಿ ಪಾದರಸದ ಚುರುಕು ವ್ಯಕ್ತಿತ್ವದ ಜಾಣ ಬೇಟೆಗಾರ ಈ ಹಕ್ಕಿ. ಕಾಲು, ಕೊಕ್ಕು ಎಲ್ಲವೂ ಹದ್ದಿನಂತೆ! ದೇಹ ಚಿಕ್ಕದು. ಸುಮಾರು ಕಾಗೆ ಗಾತ್ರ. ಹೆಸರು ಶಿಖ್ರಾ . ಹೊಟ್ಟೆ ಮತ್ತು ಗರಿಗಳು ಬಿಳಿ ಬಣ್ಣ. ತನ್ನ ದೃಷ್ಟಿ ಗಮ್ಯವಾದ ಎಲ್ಲವನ್ನೂ ಬಕಾಸುರನಂತೆ ಕಬಳಿಸುತ್ತದೆ. ಒಂದೆರಡು ಬಾರಿ ಇದರ ಅದ್ಭುತ ಬೇಟೆಯನ್ನು ಕಣ್ಣಾರೆ ಕಂಡು ಧನ್ಯನಾಗಿದ್ದೆ. ಆದರೆ ಚಿತ್ರ ಮಾತ್ರ ಮರೀಚಿಕೆಯಾಗುಳಿಯಿತು.
ಚೈತ್ರ ಮಾಸದ ಏರು ಹೊತ್ತು ಸೂರ್ಯ ಇಬ್ಬನಿಗೆ ಮುತ್ತಿಕ್ಕಿ ಮೇಲೇರುವಾಗಲೇ ದೊಡ್ಡದೊಂದು ಲೆನ್ಸ್ ಹಿಡಿದು ವಾರಾಹಿ ತಟದ ಝರಿಯೊಂದರ ಸನಿಹ ಹೈಡ್ ರಚಿಸಿ ನಿಂತಿದ್ದೆ. ಝರಿಯ ಸನಿಹದಿಂದ ಏನೋ ನೆತ್ತಿಯ ಮೇಲಿಂದ ಕೇತಾನ್ ಫ್ಯಾನ್ ಗಾಳಿ ಬೀಸಿದಂತೆ ಗಾಳಿ ಬೀಸಿತು. ನನ್ನ ಹೈಡ್‌ನ ಕೇವಲ ೫ ಮೀಟರ್ ಅಂತರದಲ್ಲೇ ತನ್ನ ಬೇಟೆಯೊಂದನ್ನು ಹಿಡಿದು ಭಕ್ಷಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಹೈಡನ ರಂಧ್ರವನ್ನು ಬದಲಾಯಿಸುವುದರೊಳಗೆ ಅದರ ಭಕ್ಷಣೆ ಮುಗಿದು ತಣ್ಣಗೆ ಸನಿಹದ ಹಣ್ಣಿನ ಮರವೇರಿ ಪೋಸು ಕೊಡಲಾರಂಬಿಸಿತ್ತು. ನನ್ನ ನೋಡಿದ್ದೆ ಪಲಾಯನಗೈಯಿದಿತು. ಅಷ್ಟರೊಳಗೆ ಕ್ಯಾಮರದಲ್ಲೊಂದು ಸುಂದರ ಚಿತ್ರ ದಾಖಲಾಗಿತ್ತು. ಕೆಮರಾ ಖುಷಿ ನಗೆ ನಕ್ಕಿತು!
***
ಕತ್ತಲಿಗೆ ಕಾಲಿಡಲು ಹೊರಟ ಸೂರ್ಯ ಕಿರಣಗಳಿಗೆ ಗಿಡಗಂಟೆಗಳೆಲ್ಲಾ ಪ್ರತಿಸ್ಪಂದಿಸುವ ಹೊತ್ತಲ್ಲಿ ಕೆರಾಡಿಯಿಂದ ವಾಪಾಸಾಗುತ್ತಿದ್ದೆ. ಪಶ್ಚಿಮದಲ್ಲಿ ಬಣ್ಣಗಳ ಓಕಳಿಯಾಟ. ಯಾವುದೋ ಗಿಡದ ಸಂಧಿಯಲಿ ಸಣ್ಣ ಅಲುಗಾಟ. ನೋಡಿದರೇ ಅದೇ ಶಿಖ್ರಾ ಕುಳಿತು ನನಗಾಗಿ ಕಾದಿದೆಯೋ ಏನೋ ಎಂಬಂತೆ ಕುಳಿತಿತ್ತು. ಒಂದೆರಡು ಚಿತ್ರ ತೆಗೆದೆ. ಒಂದು ಚಿತ್ರ ಸ್ಪಷ್ಟ ಬಂದಿತು. ಅಂದು ಅತ್ಯಂತ ಖುಷಿಯ ದಿನ ನನ್ನ ಪಾಲಿಗೆ. ಇಂತಹ ಸ್ವರ್ಗ ಸದೃಶ ಹಕ್ಕಿಯನ್ನು ನೋಡಿದ್ದು ನನ್ನ ಪುಣ್ಯವೇ ಸರಿ.
ಜೀವನ:
ಮಾರ್ಚ್ ನಿಂದ ಜೂನ್ ವರೆಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಕಾಗೆಯಂತೆ ಸಪಾಟಾದ ಗೂಡು ನಿರ್ಮಿಸುತ್ತದೆ. ತನ್ನ ಕಾಲುಗಳಲ್ಲಿ ಕಡ್ಡಿಯನ್ನು ತೆಗೆದುಕೊಂಡೊಗಿ ಗೂಡನ್ನು ನಿರ್ಮಿಸುತ್ತದೆ. ೩-೪ ಮೊಟ್ಟೆಗಳನ್ನು ಒಮ್ಮೆಗೆ ಇರಿಸುತ್ತದೆ. ಜೀವ ವಿಸ್ಮಯದ ಅತ್ಯಂತ ನಾಜೂಕಾದ ಕೊಂಡಿ ಇದಾಗಿದ್ದು ಇಲಿ ಮುಂತಾದ ದಂಶಕಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.