ಅರೆ ಕೊಟಚಾದ್ರಿ ಎಂದರೆ ಅದೇಕೋ ರೋಮಾಂಚನ! ಧಮನಿಗಳಲ್ಲಿ ರುಧಿರ ನರ್ತನ. ಇಂತಹ ಕುಟಚಾದ್ರಿ, ಕೊಡಚಾದ್ರಿ ಎಂದು ಕರೆಸಿಕೊಳ್ಳುವ ಈ ಸ್ಥಳವೇ ಅಪೂರ್ವ. ಏಳು ಅಶ್ವಗಳ ಸೆಳೆತ. ಮುಗಿಲು ಚುಂಬಿಸಿ ಬಂದ ಅನುಭವವನ್ನು ಹೊಸ ರೀತಿಯಲ್ಲಿ ಹೇಳುವ ಸಣ್ಣ ಪ್ರಯತ್ನ.
ಜೀಪಿನಲ್ಲೂ ಹೋಗಿ ಬರಬಹುದು. ಹೋಗಿಬರಲು 2 ಸಾವಿರ ತೆಗೆದುಕೊಳ್ಳುವರು. ಮಳೆಗಾಲ ವಿಡಿ ಬ್ಯುಸಿಯಾಗಿರುವ ಇಲ್ಲಿನ ಜೀಪಿನವರು ಬೇಸಿಗೆಯಲಿ ಇವರಿಗೆ ಸೂಟಿ. ವಾರಕ್ಕೆರಡು ಬಾಡಿಗೆಯಾದರೆ ಹೆಚ್ಚು. ಇದನ್ನೇ ಪ್ರಧಾನ ಉದ್ಯೋಗವಾಗಿ ನೆಚ್ಚುವಂತಿಲ್ಲ. ಬೇರೊಂದು ಉದ್ಯೋಗದ ಜೊತೆ ಜೀಪು ಸವಾರಿ ಎಂಬುದು ನಮ್ಮ ಜೊತೆ ಬಂದ ನಿತ್ಯಾನ ಉವಾಚ. ಜೀಪಿನ ಸವಾರಿಯೂ ಒಂದು ಆಧ್ಯಾತ್ಮಿಕ ಪಯಣ.
ಕುಟಜವೆಂದರೆ ಸಸ್ಯ. ಅದನ್ನ ಹೊದ್ದ ಅದ್ರಿ ಕುಟಚಾದ್ರಿ ಅಥವಾ ಕೊಡಚಾದ್ರಿ
ಎಂಬ ಅರ್ಥವಿದೆ ಎಂದವರು ಗಣ್ಯರಾದ ವಸಂತ ಕುಮಾರ ಪೆರ್ಲಾ. ಇಂತಹ ಅದ್ರಿಯು ನೂರಾರು ಗಿಡ ಮೂಲಿಕೆಗಳ
ಕಣಜ!. ಮೂಕಾಂಬಿಕಾ ವನದ ಸೆರಗಲ್ಲೆ ಮಲಗಿದ ಐದನೆಯ ದೊಡ್ಡ ಅದ್ರಿ. ಅಪ್ಪೆ, ಮತ್ತಿ ಮುಂತಾದ ವಿಶಿಷ್ಟ
ಮರಗಳ ಗಮ್ಯ. ಏನೇ ಇರಲಿ ತುದಿಯೇರುವ ತವಕದಲ್ಲಿರುವ
ನಮಗೆ ಬಾಕಿ ಎಲ್ಲವೂ ಗೌಣ. ಮುಳ್ಳಯ್ಯನ ಗಿರಿಗೆ ಬಿಟ್ಟರೆ ಕೊಡಚಾದ್ರಿಗೆ ಮಾತ್ರ ರಸ್ತೆ ಮಾರ್ಗ. ಹಾಗಾಗಿ
ಬೈಕನ್ನೇರಿಸುವ ಹುಚ್ಚು ಸಾಹಸ ಮೈ ಮೇಲೆಳೆದು ಕೊಂಡೆವು. ಅದೂ ಬುಲೆಟ್!
ಬೈಕಿನ ಬಂಟ ಹೆಂಗೆ
ಹೊಂಟ..
ಗೌರಿ ಕೆರೆ ಎಂಬೂರಿನಲಿ ಬಲಕ್ಕೆ ತೇಲಿಕೊಂಡರೆ ಸಿಗುವ ಜಲಧಾರೆವರೆಗೆ
ಒಮ್ಮೆ ಬಂದು ಹೋಗಿದ್ದೆ. ಅದೇ ಎಮ್ಮೆ ಹೊಂಡ ಜಲಪಾತ. ಅಂದೇ ಒಮ್ಮೆ ಈ ಅದ್ರಿಯ ಏರಬೇಕೆಂದು ಕನಸು ಕಂಡಿದ್ದೆ.
ಈ ಅದ್ರಿ ಏರಲು ಎರಡು ದಾರಿಗಳಿವೆ. ಮೊದಲನೆಯದು ಒಂಟಿ ಮರದ ಅತಿ ಭಯಂಕರ
ಏರು ದಾರಿ. ದಾರಿ ತಪ್ಪಿದರೆ ಕಾಡೊಳಗೆ ಲೀನ. ಗೆಳೆಯನೊಬ್ಬರ ತಂಡ ಇಲ್ಲೇ ಕಳೆದು ಹೋಗಿ ಸಂಜೆ ಊರು ಸೇರಬೇಕಾದವರು
ಮಧ್ಯ ರಾತ್ರಿ ಊರು ಸೇರಿದರು! ರಹಮತ್ ತರಿಕೇರಿ ಎಂಬ ಉಪನ್ಯಾಸಕರೂ ಇಲ್ಲಿ ದಾರಿ ತಪ್ಪಿ ಅಲೆದಿದ್ದರು.
ಎರಡನೆಯದು ರಸ್ತೆ ಮಾರ್ಗ. ಕಾಲು ನೋವಿದ್ದ ಕಾರಣ ಅತಿ ದೂರದ ರಸ್ತೆ ಮಾರ್ಗವನ್ನೇ ಆಯ್ದುಕೊಂಡೆವು.
ಗೆಳೆಯ ನಾಗರಾಜನೇ ಮುಖ್ಯ ಸವಾರ. ಹೊರಟಿದ್ದು ನಡು ಮಧ್ಯಾಹ್ನಕ್ಕೆ. ಇಳಿ ಸಂಜೆಗೆ ಮೊದಲು ನಾಗೋಡಿ ದಾಟಿ ಕುಟಚಾದ್ರಿಯ ತಿರುವಿನಲ್ಲಿದ್ದೆವು. ಒಂದೆರಡು ಜೀಪುಗಳು ಕಾದು ನಿಂತಿದ್ದವು. ಸುಲಭಾಗೇ ಚೆಕ್ ಪೋಸ್ಟವರೆಗೆ ದಾಟಿಕೊಂಡೆವು. ಮುಂದಿನದು ಅತಿ ದುರ್ಗಮ ಪಯಣ. ಹೋರಿಯಂತಹ ರಾಯಲ್ ಎನಪೀಲ್ಡ್‌ನ್ನು ಜೋಲಿ ಹೊಡೆಯದಂತೆ ಕಾಪಾಡುವುದೇ ದೊಡ್ಡ ಸಾಹಸ. ರಸ್ತೆ ನಡುವಿನ ನೀರ ತೋಡುಗಳ ದಾಟುವುದೇ ಮಹಾ ಸಂಕಷ್ಟ. ಇಂತಹುದೇ ಒಂದು ಗಾಳಿ ಗುಡ್ಡ ವೆಂಬ ಪರ್ವತ ಹೊರನಾಡಿನ ಸಮೀಪವಿದೆ. ಅದರ ಚಾರಣವಂತೂ ಭಾರಿ ಭೀಕರ.
ಬೈಕ್ ಎಲ್ಲೂ ನಮ್ಮ ಮಾತೇ ಕೇಳದೇ ಸ್ವಂತ ಬುದ್ದಿ ಇರುವಂತೆ ವರ್ತಿಸತೊಡಗಿತು. ಯಾವಾಗಲೂ ತೋಡುಗಳೆಡೆಗೆ ಅತೀವ ಆಕರ್ಷಣೆ. ಭರ್ಜರಿ ಹಾರ್ನ್ ಹಾಕುತ್ತಾ ಹಿಂದಿನಿಂದ ಜೀಪೊಂದು ಧೂಳ ಸಾಗರವನ್ನು ಕಟ್ಟಿಕೊಂಡೇ ತಿರುವಿನಲ್ಲಿ ಬುಸುಗುಡುತ್ತಾ ಬರುತಲಿತ್ತು. ಮ್ಯಾಂಗನೀಸ್ ಅದಿರಿನ ಮಹಾ ಧೂಳಿನ ಮೋಡವೊಂದು ಎದ್ದಿತು. ಆಗಲೇ ನಮ್ಮ ಬೈಕ್ ನೀರ ಓಣಿಯೊಳಗೆ ಸವಾರನ ಆಜ್ಞೆಯನ್ನು ದಿಕ್ಕರಿಸಿ ಮಲಗಿಬಿಟ್ಟಿತು. ಕೆಸರ ಹೊಂಡದಲ್ಲಿ ಮಲಗಿದ ಎಮ್ಮೆಯಂತೆ ಏಳಲು ಒಪ್ಪಲೇ ಇಲ್ಲ. ಅಂತೂ ಕಷ್ಟ ಪಟ್ಟು ಎತ್ತಿ ಹಿಡಿದಾಗ ಉಸ್ಸಪ್ಪವೆಂಬ ಉಸಿರು ಹೊರ ಚೆಲ್ಲಿತು. ಜೀಪಿನವನೂ ನಿಲ್ಲಿಸಿ ಸಹಾಯ ಬೇಕೇ? ಎಂದು ಕೇಳಿದ. ಜೀಪಿನ ಮಾಲಿಕನಿಗೆ ಧನ್ಯವಾದ ಹೇಳಿ ಏರು ದಾರಿಯ ಏರಲು ಅನುವಾದೆವು. ಕಾಲಿಗೆರಡು ಬರ್ಜರಿ ಬರೆ ಬಿದ್ದವು. ಕಾಲಿನ ಬರೆಯ ಬಿಸಿಯನು ಹೊತ್ತೇ ನೆತ್ತಿ ಹತ್ತಿತು ನಮ್ಮ ಬೈಕ್. ಮೂಲ ಮೂಕಾಂಬಿಕೆ, ಹುಲಿ ದೇವರ ಗುಡಿಯ ಸನಿಹ ಬೈಕ್ ನಿಲ್ಲಿಸಿದೆವು. ನಾಗ ತೀರ್ಥದ ಪನ್ನೀರು ಚಿಮುಕಿಸಿಕೊಂಡು ಹೊರಟೆವು.
ಅದಿರಿನ ಖದರು ...
ಅಪಾರ ಅದಿರಿನ ಖನಿಯಾದ ಇಲ್ಲಿನ ಬೆಟ್ಟ ಬಗೆಯಲು ಖಾದಿಯವರು ಕಾದು ಕುಳಿತಿದ್ದಾರೆ. ಬೆಟ್ಟ ಬಯಲು ಮಾಡಲು! ಮುಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವುದರಿಂದ ಕೊಂಚ ನಿರಾಳವಾಗಿದೆ. ಇಲ್ಲವಾದರೆ ಎಂದೋ ಇದನ್ನು ಬಗೆದು ಹಾಕುತ್ತಿದ್ದರು. ಮನುಷ್ಯನ ದುರಾಸೆಗೆ ಮಿತಿ ಎಲ್ಲಿ?
ಬೆಲೆ ಕಟ್ಟಲಾಗದ ಹಸಿರು ಮತ್ತು ಜೀವಜಗತ್ತಿನ ತಾಣ ಈ ಕೊಡಚಾದ್ರಿ . ಹಗಲು ಹೊತ್ತಿನಲಲ್ಲೇ ಕಾಡು ಕೋಣಗಳ ಹಿಂಡು ಕೆಲವೊಮ್ಮೆ ಕಾಣಸಿಗುತ್ತದೆ. ಹುಲಿ ಚಿರತೆಗಳ ಸಂಖ್ಯೆಯೂ ಕಮ್ಮಿ ಇಲ್ಲ.
ಶಂಕರ ಪೀಠದ ಹಾದಿಯಲಿ…
ಬೈಕಿನಿಂದಿಳಿದು ಬೈಗಿಗೆ ಜಾರುವ ದಿನಕರನ ದರುಶನಕೆ ಸರ್ವಜ್ಞ ಪೀಠಕ್ಕೆ ಲಗ್ಗೆ ಇಟ್ಟೆವು. ನಭವನು ಕಡು ಕಿತ್ತಳೆಗೆ ತಿರುಗಿಸಿದ ದಿನಕರನು ಕಡಲಿಗಿಳಿದು ತನ್ನ ಉರಿಯನ್ನು ತಣ್ಣಗೆ ಮಾಡಿಕೊಳ್ಳುತ್ತಿದ್ದ. ನಾವಿಬ್ಬರು ಚಿಪ್ಪ್ಸು ಮತ್ತು ಹಣ್ಣಿನ ರಸವನು ಹೊಟ್ಟೆಗಿಳಿಸಿ ಹೊಟ್ಟೆಯುರಿಯನ್ನು ಸಾಕಷ್ಟು ತಣ್ಣಗೆ ಮಾಡಿಕೊಳ್ಳ ತೊಡಗಿದೆವು. ಇಷ್ಟು ಎತ್ತರಕೆ ಕಲ್ಲು ಸಾಗಿಸಿ ಕಟ್ಟಿದ ಸರ್ವಜ್ಞ ಪೀಠ/ ಶಂಕರ ಪೀಠದ ಕೆತ್ತನೆಗೆ ಮನ ಕರಗಿತು. ಯಾರನ್ನು ಮೆಚ್ಚಿಸಲು ಈ ಪರಿ ಕಸರತ್ತು!? ಗೊತ್ತಿಲ್ಲ.
ಚಾರಣಿಗರ ಸಂತೆಯಲಿ ಕರಗದೇ ಮುಂದಿನ ಇಳಿ ಜಾರಿನ ತುದಿಗಿದ್ದ ಗುಡ್ಡವೇರಿದೆವು. ಈಗ ಇಲ್ಲೊಂದು ಬೇಲಿ ನಿರ್ಮಿಸಿದ್ದಾರೆ. ಚಾರಣಿಗರೆಸದ ಕಸವ ಕಂಡು ಕೆಂಪು ಮೂತಿ ಮಾಡಿಕೊಂಡು ಕಡಲಿಗಿಳಿದ ಸೂರ್ಯ ಮಾಮನಿಗೆ ಟಾಟಾ ಹೇಳಿದೆವು. ನಮ್ಮ ವರ್ತನೆಗೆ ಬೇಸರಿಸಿಕೊಂಡ. ತಾವು ತಂದ ಬಾಟಲಿ, ಜರಿಗಳನು ಅಲ್ಲೇ ಬಿಸುಟು ಹೋಗಿದ್ದರು. ಎಂದು ಬರುವುದೋ ಇವರಿಗೆ ಪರಿಸರ ಕಾಳಜಿ.
ಶಂಕರ ಪೀಠದ ಬಲ ಮಗ್ಗುಲಿನಲ್ಲೇ ಚಿತ್ರಾ ಮೂಲವಿದೆ. ಇದೇ ಸೌಪರ್ಣಿಕೆಯ ಉಗಮ ಎನ್ನುತ್ತಾರೆ. ಸಾಕಷ್ಟು ಸಂಜೆ ಆದುದರಿಂದ ಇಳಿಯುವ ಸಾಹಸ ಮಾಡಲಿಲ್ಲ.
ನಮ್ಮ ಟೆಂಟುಗಳಿಗೆ ಹಿಂದಿರುಗುವಾಗ ಮೂಡಣದ ಬೆಳ್ಳಿ ಹಣಕಿ ಹಾಕಿತ್ತು. ಜೋಗಿಯವರ ಬಿಡಾರದಲ್ಲಿ ಉಳಿಯುವ/ಉಣ್ಣುವ ವ್ಯವಸ್ಥೆಯಾಯಿತು. ಅಂದು ಚಳಿ ಬಹಳವೇ ಇತ್ತು.
ಮುಂದಿನ ದಿನಕೆ ಅಣಿಯಾಗಲು ನಮ್ಮ ನಮ್ಮ ನಿದ್ರಾ ಚೀಲದೊಳಗೆ ನುಸುಳಿಕೊಂಡಾಗ ನಕ್ಷತ್ರವೊಂದು ನನ್ನ ನೋಡಲ್ವೆ ಎಂದು ನಕ್ಕಿತು. ಕೆಲವರು ನಕ್ಷತ್ರ ವೀಕ್ಷಣೆಗೆ ಹೊರಟು ನಿಂತರು. ಶುಚಿಯಾಗಿ ಗುಡಿಸಿಟ್ಟಂತಹ ಆಕಾಶ ವೀಕ್ಷಣೆಗೆ ಇಂಬು ಕೊಟ್ಟಿತ್ತು. ಸುಸ್ತಾದ ನಾನು ನಿದ್ರಾ ಚೀಲದೊಳಗೆ ಹೊಕ್ಕು ಗೊರಕೆಗೆ ಬಿದ್ದೆ!
ಸೂರ್ಯನ ಎಬ್ಬಿಸಲು ಹೊರಟಾಗ…...
ಗಂಟೆ ೬ ಆದರೂ ಸೂರ್ಯ ಮಾಮ ಎದ್ದಿರಲೇ ಇಲ್ಲ! ನಾವೈವರು ಗಲಾಟಿ ಮಾಡಿ
ಅವನ ಎಬ್ಬಿಸಲು ಹೊರಟು ನಿಂತೆವು. ಒಂದಿಷ್ಟು ಪ್ರಿ ಪೋಟೋ ಸೆಷನ್ ನಡೆಸಿದೆವು. ಬಂಗಾರದ ಬೆಳಕು ಹುಲ್ಲ ಮೇಲೆಲ್ಲ ಹರಡಿ ಬಂಗಾರವಾಗಿಸಿತು.
ಅಸ್ಸಾಂಗೆ ವಲಸೆ ಹೋಗುವ ಲೆಸ್ಸರ್ ಕೆಸ್ಟ್ರಲ್ ಹಕ್ಕಿಯೊಂದು ಖುಷಿಯಲ್ಲಿ
ಹಾಡು ಹೇಳುತ್ತಲೇ ಇತ್ತು. ದೂರದಲ್ಲೆಲ್ಲೋ ಬ್ಲಾಕ್ ಈಗಲ್ ನ ಕೂಗಿಗೆ ಮೆಲ್ಲ ಮೆಲ್ಲನೆ ನೆತ್ತರು ಸುರಿದಂತೆ
ಕಾಣುತ್ತಿದ್ದ ಸೂರ್ಯ ಮೆಲ್ಲಗೆ ಮೇಲೆ ಬರುತಲಿದ್ದ. ಸೂರ್ಯ ನೆದುರಿಗೆ ಒಂದಿಷ್ಟು ಪೋಟೋ ನೈವೇದ್ಯವಾಯಿತು.
ನೆತ್ತಿಯಿಂದ ಕಾಣುವ ಸೊಬಗು ಅನ್ಯಾದರ್ಷ. ಪ್ರಕೃತಿಯ ರಮ್ಯತೆಯ ಅನುಭವಿಸಿಯೇ ತಿಳಿಯಬೇಕು.
ಮಾನವನ ಹಸ್ತಕ್ಷೇಪ ಕಡಿಮೆಯಾದಂತೆ ಅದರ ಸೊಬಗು ಇಮ್ಮಡಿಸುವುದು.
ಝರಿ ಕತೆ….
ಸೌಪರ್ಣಿಕೆಯ ಒಡುಲು ಸೇರುವ ಇಲ್ಲಿನ ಝರಿಗಳು ಒಂದಕ್ಕಿಂದ ಒಂದು ಚಂದ.
ಚಿತ್ರಾ ಮೂಲವು ಅದರಲ್ಲಿ ಒಂದು. ಗುಡ್ಡ ವಿಳಿದು ಚಿತ್ರಾ ಮೂಲ ದರುಶನವೂ ಅದರಲ್ಲಿ ಒಂದು ವಿಶಿಷ್ಟ
ಗುಹಾ ಝರಿ. ಬೆಟ್ಟವಿಳಿದು ಇದರ ಒಡಲು ಸೇರುವುದು ವಿಶಿಷ್ಟ ಅನುಭೂತಿ. ಇಲ್ಲೊಂದು ಲಿಂಗವೂ, ಇದೆ. ಈ ಝರಿಗಳ ನೀರು ಅನೇಕ ಔಷಧೀಯ ಗುಣ ಹೊಂದಿದೆ ಎನ್ನುತ್ತಾರೆ
ಇಲ್ಲಿನವರು. ಜನವರಿಯ ನಂತರ ತನ್ನ ಹರಿವನ್ನು ಈ ಝರಿ ಕಳೆದು ಕೊಳ್ಳುತ್ತದೆ ಎನ್ನುತ್ತಾರೆ ಇಲ್ಲಿನ
ಪೂಜಾರಿಯವರು. ಇಲ್ಲಿ ತಪಸ್ವಿಗಳಿದ್ದರು ಎನ್ನುತ್ತದೆ ಇಲ್ಲಿನ ಜನಪದ.
ಚಿತ್ರಾ ಮೂಲಕ್ಕೆ ಹೋಗಿ ಹಣಕಿ ಹಾಕಿ ಬರುವ ಹುಮ್ಮಸ್ಸಿದ್ದರೂ ಹಿಂಡಲು
ಮನೆಯ ಜಲಧಾರೆ ನನ್ನ ಕರೆಯುತ್ತಲೇ ಇತ್ತು. ಸಿಕ್ಕಾ ಪಟ್ಟೆ ಬೆಸ್ತು ಬೀಳಿಸಿದ ಬೈಕ್‌ನ್ನು ನಾಗರಾಜನ
ತೆಕ್ಕೆಗೆ ಒಪ್ಪಿಸಿ ನಾನು ನಟರಾಜ ಸರ್ವಿಸ್ ಹತ್ತಿದೆ! ಅಂದರೆ ನಡಿಗೆ! ನಮ್ಮನ್ನು ಬೀಳಿಸಿದ ಅದೇ
ಬೈಕು ಗೆಳೆಯ ರಾಘುವನ್ನು ಬೀಳಿಸಿ ಮೈ ಕೈ ತುಂಬಾ ತರಚು ಗಾಯವಾಗುವಂತೆ ಮಾಡಿತು!
ನನ್ನ ಜೊತೆ ಒಂದೈದು ಜನ ಗೆಳೆಯರು ಜೊತೆಯಾದರು. ಚಾರಣದ ಕತೆ ಹೇಳುತ್ತಾ
ಸಮಯದ ಪರಿವೆಯೇ ಇಲ್ಲದೆ ಹಿಂಡ್ಲು ಮನೆಯ ಹಾದಿ ತುಳಿದೆವು. ಅದರ ರೋಚಕ ಕತೆಯನ್ನು ಮನಸ್ಸಾದರೆ ಮತ್ತೆ
ಎಂದಾದರೂ ಹೇಳುವೆ. ಅಲ್ಲಿಯವರೆಗೆ…..