Showing posts with label adventure. Show all posts
Showing posts with label adventure. Show all posts

Thursday, July 9, 2026

ಬಲ ಉಳ್ಳವರ ಅಹೋಬಿಲಂ!

 


ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ಸಹಾಯದಿಂದ ಆಂಧ್ರದ ಮೂಲೆಯೂರಿಗೆ ಪ್ರಯಾಣ ಬೆಳೆಸಿದೆವು. 

ಭವನಾಶಿನಿ ನದಿ ತಟದ ಅಹೋಬಿಲಂ -

 ಭರತ ಖಂಡದ ಯಾವ ಮೂಲೆಗೆ ಹೋದರೂ ನಿಮಗೆ ಒಂದೇ ಊರಿನಲ್ಲಿ 9 ನರಸಿಂಹ ದೇವಾಲಯಗಳು ಸಿಗಲಾರವು. ಅಂತಹ ಮಹಾ ವಿಚಿತ್ರ ಅಹೋಬಿಲಂ! ತೆಲುಗಿನಲ್ಲಿ ಬಿಲಂ ಎಂದರೆ ಗುಹೆ. ನಮ್ಮ ನಿಯಾನ್ ಕಣ್ಣುಗಳಲ್ಲಿ ಮಿಂಚಿದ ಪ್ರಶ್ನೆಗಳು ಹಲವು. ಒಂಭತ್ತು ದೇವಾಲಯಗಳನ್ನು ಒಂದೇ ಊರಿನಲ್ಲಿ ನಿರ್ಮಿಸುವ ಔಚಿತ್ಯವಾದರೂ ಏನು? ಅಚ್ಚರಿಯ ಅಹೋಬಿಲಂನ್ನು ಒಂದೇ ಗುಟುಕಿನಲಿ ನೋಡಿದ ನಮ್ಮ ಪಯಣದ ಮೆಲುಕು ಹಾಕೋಣ ಬನ್ನಿ. 

ಪೊಂಗಲ್‌ ಮುನ್ನುಡಿ!


 ಹೈದ್ರಾಬಾದಿನಿಂದ ಕಾರು ಬಾಡಿಗೆಗೆ ಹಿಡಿದು. ಸಿಕ್ಕ ಒಂದು ರೈಲು ಹತ್ತಿ ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂಗೆ ಬೆಳ್ಳಂ ಬೆಳಿಗ್ಗೆ ಹೆಜ್ಜೆ ಇಟ್ಟೆವು. ಮುಸುಕು ಎಳೆದು ಮಲಗಿದ್ದ ಊರನ್ನು ನಮ್ಮ ಬಸ್ಸು ಎಬ್ಬಿಸಿತು. ಜೊತೆಗೆ ಮಹಾ ಧೂಳಿನ ನೆಬ್ಯೂಲಾ ಊರನ್ನು ಮುಚ್ಚಿತು. ನಮ್ಮ ಮೂಗನ್ನೂ. 

 ಊರಿಗೆ ಕಾಲಿಡುತ್ತಲೆ ಸಣ್ಣ ಲಾಡ್ಜು ಹಿಡಿದು ಪ್ರಾತಃವಿಧಿಗಳನ್ನು ಪೂರೈಸಿ ಬಳ್ಳಾರಿ ಭಟ್ಟರ ಹೋಟೆಲಿಗೆ ಲಗ್ಗೆ ಇಟ್ಟೆವು. ಭಟ್ಟರಿನ್ನು ಬಾಗಿಲು ತೆರೆದಿರಲಿಲ್ಲ. ಹೋಟೆಲ್‌ ತೆರೆಯುತ್ತಲೇ ಪೊಂಗಲ್‌ ಬಾರಿಸಿ ಭಟ್ಟರ ಕುಶಲೋಪರಿ ವಿಚಾರಿಸಿ ನರಸಿಂಹ ದೇವಾಲಯ ಭೇಟಿಗೆ ಹೊರಟು ಬಿಟ್ಟೆವು. 

ಕನ್ನಡ ನಾಡಿನ ಬಳ್ಳಾರಿಯಿಂದ ಬಂದ ಭಟ್ಟರ ತಂದೆ ಇಲ್ಲೇ ನೆಲೆಯೂರಿದವರು. ಅಂದಿನ ಅವರ ದುರ್ದು ಏನಿತ್ತೋ. ಸಣ್ಣದೊಂದು ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೇ ಬೇರೆ ಸೌಲಭ್ಯಗಳಿಲ್ಲ. ವ್ಯಾಪಾರವಾಗುತ್ತದೆ ಎಂಬ ಭರವಸೆ ಏನಿಲ್ಲ. ಯಾರೂ ಇಲ್ಲಿ ಉಳಿಯಲು ಮನಸ್ಸು ಮಾಡುವುದಿಲ್ಲ! ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಕಾಡ ನಡುವಿನ ಊರು. ದೂರದ ಬಾಗಲ ಕೋಟೆಯ ಇಬ್ಬರು ಇಲ್ಲಿ ಸಿಕ್ಕರು.  

 ಬದುಕಿನ ನಾಗಾಲೋಟಕ್ಕೆ ಬ್ರೇಕ್‌ ಬೇಕೆನಿಸಿದರೆ ಇಲ್ಲಿಗೆ ಸುಮ್ಮನೆ ಬನ್ನಿ! ಯಾವುದೋ ನಾಟಕದ ಪಾತ್ರಧಾರಿಗಳಂತೆ ಇಲ್ಲಿನವರು ನಿಮಗೆ ಕಾಣುತ್ತಾರೆ. ತಮ್ಮ ಉಬ್ಬಿದ ಹೊಟ್ಟೆ ಹೊತ್ತು ಯಮ ಸದೃಶಃ ಪರ್ವತವನ್ನು ಏರಲಾಗದೇ ಬೆಟ್ಟವೇರುವವರು. 



ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್‌ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.

ಅಚ್ಚರಿಯ ಅಹೋಬಿಲಂ.



ಈ ಒಂಭತ್ತು ದೇವಾಲಯಗಳು ನಲ್ಲಮಾಲಾ ಕಾಡೊಳಗೆ ಅವಿತಿದೆ ಎನ್ನುವುದೇ ಅಚ್ಚರಿ. ಕಾಡೊಳಗೆ ನಿರ್ಮಿಸುವ ದುರ್ದು ಏನಿತ್ತೊ. ಕಾಡ ಕಟ್ಟೆಯಲ್ಲಿ ಕಟ್ಟಿದ ಅಹೋಬಿಲಂನಲ್ಲಿ ಎರಡು ದೇವಾಲಯಗಳು ಕಾಡಿನಂಚಿನಲ್ಲಿವೆ. ಹೆಚ್ಚಿನ ಎಲ್ಲಾ ದೇವಾಲಯ 14 ಮತ್ತು 15 ನೆಯ ಶತಮಾನದ ಅಂಚಿನಲ್ಲಿ ವಿಜಯನಗರದ ಕಾಲದಲಿ ನಿರ್ಮಿಸಿದಂತವು. ನಾಲ್ಕು ದೇವಾಲಯ ಬೆಟ್ಟದ ಬುಡದಲ್ಲೂ ನಾಲ್ಕು ಬೆಟ್ಟದ ಮೇಲೆ ಹಾಗೂ ಒಂದು ಕಾಡೊಳಗೆ ಅವಿತಿದೆ. ಯೋಗಾನಂದ ಚತ್ರವಟ ನರಸಿಂಹ ಕಾಡಂಚಿನಲ್ಲಿದೆ.



ಯೋಗಾನಂದ ನರಸಿಂಹ ಶನಿಯನ್ನು ಆಳುತ್ತಾನೆಂದು ಪ್ರತೀತಿ ಇದೆ. ಇಲ್ಲಿನ ನರಸಿಂಹ ದೇವರನ್ನು ಅಹೋಬಾಲ ಎಂದೂ ಕರೆಯುತ್ತಾರೆ. ಅಂದರೆ ಮಹಾ ಶಕ್ತಿ ಶಾಲಿ ಎಂದು. ಯೋಗಾನಂದ ನರಸಿಂಹ ಯೋಗಾಸನದಲ್ಲಿದ್ದಾನೆ.


ಚತುರ್ವಾತ ನರಸಿಂಹ ಹಾಹಾ ಮತ್ತು ಹೋ ಹೋ ಎಂಬಿಬ್ಬರು ಗಂಧರ್ವರು ನರಸಿಂಹನಿಗೆ ಸಂಗೀತ ಸೇವೆ ಮಾಡಿ ಖುಷಿ ಪಡಿಸಿದರು. ಆ ಸಲುವಾಗಿಯೇ ಇಲ್ಲಿನ ನರಸಿಂಹನಲ್ಲಿ ಸಂಗೀತ ಮತ್ತು ಕಲೆಯ ಆರಾಧಕರು ಇಲ್ಲಿ ಬೇಡಿಕೊಂಡರೆ ಅವರಿಗೆ ಕಲೆ ಸಿದ್ಧಿಸುತ್ತದೆ ಎಂಬ ಪ್ರತೀತಿಯೂ ಇದೆ.

ಕೆಳಗಿನ ಎರಡು ದೇವಾಲಯ ದರ್ಶಿಸಿ ಮೇಲಿನ ದೇವಾಲಯ ದರ್ಶಿಸುವ ಹೊತ್ತು. ಇದೊಂದು ಅಚ್ಚರಿಯ ಪಯಣ! ಕಾಡು ತನ್ನ ಬಾಹು ಕವಚಿದ ಏಳು ದೇವಾಲಯಗಳ ತೋರಲೊಬ್ಬ ಕನ್ನಡ ಬಲ್ಲ ಗೈಡ್‌ಗಾಗಿ ತಡಕಾಡಿ ಗೆದ್ದೆವು. ಆತನೋ ನಮಗೆ ಮೂರು ಸಾವಿರಕ್ಕೆ ಬೇಡಿಕೆ ಇಟ್ಟ! ಆತನ ಬ್ರಹ್ಮಾಂಡ ಕನ್ನಡ ಪಾಂಡಿತ್ಯಕ್ಕೆ ಮೂರು ಸಾವಿರ ಬಹಳ ಕಡಿಮೆ!! ಹೊಕ್ಕ ದಾರಿ ಅಲ್ಲದೆ ಹೊರ ಬರುವ ಬೇರೊಂದು ದಾರಿ ಇರುವುದರಿಂದ ಈತನನ್ನೇ ಆಯ್ಕೆ ಮಾಡಿ ಕೊಂಡೆವು. ದಾರಿಯಾದರೂ ತೋರು ರಾಘವೇಂದ್ರನೇ ಎನ್ನುತ್ತ ಪುಟ್ಟ ಮಕ್ಕಳಂತೆ ಅವನ ಹಿಂದೆ ಹೆಜ್ಜೆ ಇಟ್ಟೆವು.

ಬೃಹತ್‌ ಮರಳು ಶಿಲೆಯೊಂದು ನಿಮ್ಮನ್ನು ಕೆಳಗಿನಿಂದಲೇ ಕರೆಯುತ್ತದೆ. ಬಹೃತ್‌ ಶಿಲೆಯ ಜಟೆಯಿಂದ ಧುಮುಕುವ ನೀರ ಹನಿಗಳ ಪ್ರೋಕ್ಷಣೆಗೈದು ದೇವಾಲಯ ಪ್ರವೇಶಿಸಬೇಕಾಗುವುದು ಇಲ್ಲಿನ ವಿಶೇಷ. ಮೂರು ಜಲಕನ್ನಿಕೆಯರು ನಿಮ್ಮ ಬರುವಿಕೆಗಾಗಿ ಕಾಯುವರು. ಬನ್ನಿ ಹಾಗೆ ಮುಂದೆ ಹೋಗೋಣ. 

ಯಗುವಾ ಅಹೋಬಿಲ ನರಸಿಂಹ-



ಭವನಾಶಿನಿ ನದಿ ದಡದ ನರಸಿಂಹ ಸ್ವಯಂ ಭೂ. ಅಂದರೆ ಉದ್ಭವ ನರಸಿಂಹ. ಇಲ್ಲಿ ಹತ್ತಾರು ಪೇರಳೆ ನಮ್ಮ ಚೀಲ ಸೇರಿದವು. ಭಕ್ತರು ಬೆಳಗಿದ ನೂರಾರು ಹಣತೆ ದೇವಾಲಯದೆದುರು ಪ್ರಜ್ವಲಿಸುತಲಿತ್ತು. ಯಾರೋ ಮಹಾಶಯನೊಬ್ಬ ನಮ್ಮ ಹಣೆಗೆ ನಾಮವೆಳೆದ ಸುಮ್ಮನಿದ್ದು ಎಳೆಸಿಕೊಂಡೆವು! ಬೆಟ್ಟವೇರಲು ಮೂರನೆ ಕಾಲಾಗಿ ಒಂದು ಕೋಲು ಕೊಟ್ಟರು ಬರೇ ಐದು ರೂಪಾಯಿಗೆ. ಇಸ್ಕೊಂಡೆವು. ಯಾರಿಗೆ ಹೊಡೆಯಲೋ ಗೊತ್ತಿಲ್ಲ. 

ಬೃಹತ್‌ ಪರ್ವತದ ಬುಡದಲ್ಲಿ ದೇವಾಲಯವಿದೆ. ಗಡಿಬಿಡಿಯಲ್ಲಿ ದೇವಾಲಯ ದರ್ಶನಕ್ಕೆ ಹೊರಟು ನಿಂತೆವು. ಸುಖಾಸೀನನಾದ ನರಸಿಂಹ ಹಿರಣ್ಯ ಕಶುಪುವಿನ ಎದೆ ಬಗೆಯುತ್ತಿದ್ದಾನೆ. ಇನ್ನೆರಡು ಕೈಗಳಿಂದ ಹಿರಣ್ಯಕಶುಪುವಿನ ಕಾಲು ತಲೆ ಹಿಡಿದು ಉಗ್ರರೂಪಿಯಾಗಿದ್ದಾನೆ. ಬಲ ತುದಿಯಲಿ ಅಬಲಾನಾದ ಪ್ರಹ್ಲಾದನು ಕೈ ಮುಗಿಯುವಂತೆ ಚಿತ್ರಿಸಿದ್ದಾನೆ ಶಿಲ್ಪಿ. ಯಗುವಾ ನರಸಿಂಹ ದರ್ಶನ ಮುಗಿಸಿ ಹಲಗೆಯ ಸೇತುವೆಯಲ್ಲಿ ಭವನಾಶಿನಿಯನ್ನು ದಾಟಿ ಹೊಸ ಲೋಕಕ್ಕೆ ಕಾಲಿಟ್ಟೆವು. 


ಕಾಡು ನಮ್ಮೊಳಗೋ ನಾವೇ ಕಾಡಿನೊಳಗೋ ಎಂಬಂತೆ ಕಾಡಿಗೆ ಕಾಲಿಟ್ಟೆವು. ಚಿತ್ರ ವಿಚಿತ್ರವಾಗಿ ಪ್ರಕೃತಿಯ ನಮ್ಮೆದುರು ತನ್ನ ಭವ್ಯತೆಯನ್ನು ತೋರುತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿವ ಭವನಾಶಿನಿ ಹೊಳೆ ದಾಟಲು ಹಲವು ಕಡೆ ಹಗ್ಗ ಹಾಕಲಾಗಿತ್ತು. ಮಳೆಗಾಲದ ಮೂರು ತಿಂಗಳು ಅಸಾಧ್ಯ ವೇಗದಿಂದ ಹರಿವ ಇವಳನ್ನು ಹರಿಯುವುದು ಅಸಾಧ್ಯ. ಯಗುವಾ ನರಸಿಂಹ ದೇವಾಲಯದ ಸನಿಹವಂತು 6-7 ಅಡಿ ನೀರು ಧುಮ್ಮಿಕ್ಕುತ್ತದೆ. ಅಹೋಬಿಲಂ ಜಲಪಾತ ಮತ್ತು ಉಗ್ರ ಸ್ತಂಭ ಕಾಣಿಸುವ ಬ್ರಿಡ್ಜ್‌ ಮೇಲೆ ನಿಂತೆವು. ನಾವು ಗುರಿಯ ಸನಿಹವೆಂದು ಕೊಂಡೆವು. ನೀವಿನ್ನೂ 450 ಮೆಟ್ಟಿಲು ಏರುವುದಿದೆ ಎಂದು ಹೇಳಿ ಗೈಡ್‌ ನಮ್ಮನ್ನು ಗಾಬರಿ ಬೀಳಿಸಿದ. ಉಗ್ರ ಸ್ತಂಭದ ಸನಿಹದಲ್ಲೇ ಜ್ವಾಲಾ ನರಸಿಂಹ ದೇವಾಲಯವಿದೆ. ಇಲ್ಲಿಂದ ಮುಂದೆ ಏರುವುದೇ ಅತಿ ಕಠಿಣ ಹಾದಿ. ಉಗ್ರ ಸ್ತಂಭದ ಬಳಿಯ ಅಹೋ ಬಿಲಂ ಜಲಪಾತ ಅಂದು ತನ್ನ ಉಗ್ರ ರೂಪ ತೊರೆದು ಶಾಂತವಾಗಿತ್ತು.

ನರಸಿಂಹ ಜಯಂತಿ ಮತ್ತು ಸ್ವಾತಿ ನಕ್ಷತ್ರ!

ಸ್ವಾತಿ ನಕ್ಷತ್ರದಂದೇ ನರಸಿಂಹ ಸ್ವಾಮಿಯ ಜನ್ಮ ದಿನ. ಬೆಳಗಾವಿ ಬಾಗಲಕೋಟೆಯ ಹತ್ತಾರು ಭಕ್ತರು ಅಂದು ದರ್ಶನಕ್ಕೆ ಬಂದಿದ್ದರು. ನೀವು ಪುಣ್ಯವಂತರು, ಇಂದು ನವ ನರಸಿಂಹನ ದರ್ಶನ ಮಾಡಿದವರಿಗೆ ಮೋಕ್ಷ ಪ್ರಾಪ್ತಿ ಎಂದ ನಮ್ಮ ಗೈಡ್.‌ ನಿನ್ನೊಂದಿಗೆ ನಡೆಯುವ ಎಲ್ಲರಿಗೂ ಮೋಕ್ಷ ಖಾತರಿ ಮರಾಯ ಎಂದು ಅವನನ್ನು ಚೇಡಿಸುತ್ತ ಹೆಜ್ಜೆ ಹಾಕಿದೆವು. ಉಗ್ರ ಸ್ತಂಭದಿಂದ ಧುಮುಕುವ ನೀರಲ್ಲಿ ಅಭಿಶೇಕ ಮಾಡಿಸಿಕೊಂಡು ಬಲ ಭಾಗದ ಕೆಂಪು ಕೊಳವನ್ನು ನೋಡುತ್ತಾ ಜ್ವಾಲಾ ನರಸಿಂಹನ ಸೇರಿಕೊಂಡೆವು. 



ಕೆಂಪು ಆಲ್ಗೆ ತುಂಬಿದ ಈ ಕೊಳವನ್ನು ಹಿರಣ್ಯ ಕಶುಪುವಿನ ರಕ್ತ ತೊಳೆದ ಕೊಳವೆಂದು ಜನ ಈಗಲೂ ನಂಬುತ್ತಾರೆ. ಜ್ವಾಲಾ ನರಸಿಂಹ ದೇವಾಲಯದ ಹಿಂದೆ 80 ಡಿಗ್ರಿ ಕೋನದಲ್ಲಿದ್ದ ದಾರಿಯಲ್ಲಿ ಕೇವಲ ಹಗ್ಗದ ಸಹಾದಿಂದ ಏರಬೇಕು. ಕೈ ಕಾಲುಗಳಲ್ಲಿ ಕಸುವಿಲ್ಲದ ಕಾರಣ ಕೈ ಬಿಟ್ಟೆವು. 




ಮೈ ತೋಯಿಸಿಕೊಂಡ ನಿಮಗೆ ಇಲ್ಲಿ ಕತೆಗಳು ನಿಮ್ಮ ಮನಸ್ಸು ತೋಯಿಸುವವು. ಪ್ರಕೃತಿ ಮಡಿಲಲ್ಲಿ ಇಂತಹದೊಂದು ಅಚ್ಚರಿಯ ತಾಣವ ಹುಡುಕಿ ತೆಗೆದು ಅದಕೊಂದು ಕತೆಗಳನ್ನು ಜೋಡಿಸಿದ ಮಹಾ ಪುರುಷನಿಗೆ ಶರಣು. ದೇಶ ಕಾಲಾತೀತದಲ್ಲಿ ಹಬ್ಬಿ ಹರಡಿದ ನೂರಾರು ಕತೆಗಳು ನಿಜಕ್ಕೂ ನಿಮ್ಮನ್ನು ಕಾಡುವವು. 

ಕಾಡೊಳಗಿನ ಅಚ್ಚರಿ ಮೂಡಿಸುವ ಕಾಡುವ ಕತೆಗಳು 

ಚುಂಚೂ ಬುಡಕಟ್ಟು ಮತ್ತು ನರಸಿಂಹ-


ಇಲ್ಲಿನ ಚುಂಚೂ ಆದಿವಾಸಿಗಳು ನರಸಿಂಹನನ್ನು ತಮ್ಮ ಅಳಿಯನ್ನನ್ನಾಗಿಸಿದ ಪರಿಗೆ ಅಚ್ಚರಿಗೊಂಡೆ. ನರಸಿಂಹನಿಗೆ ಆದಿವಾಸಿ ಲಕ್ಷ್ಮೀಯನ್ನು ಮದುವೆ ಮಾಡಿಸಿ ಇವರು ತಮ್ಮವನನ್ನಾಗಿ ಮಾಡಿ ಕೊಂಡಿದ್ದಾರೆ! ಹಾಗಾಗಿ ಹೋಗಿ ಬರುವವರಿಗಾಗಿ ಇಲ್ಲಿನ ಬುಡಕಟ್ಟು ಜನರು ದಾರಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಾದು ಕೂರುವುದು ನಮಗಂತೂ ಅಚ್ಚರಿ. ಸಾಕ್ಷಾತ್‌ ದೈವ ಸಂಭೂತರಾದ ಸರಳ ಜನ! ಇವರ ಚೇತನವೇ ಒಂದು ಒಗಟು. ನಮ್ಮ ದಾರಿಯಲ್ಲೊಬ್ಬಳೂ ನರಸಿಂಹ ಲಕ್ಷೀಗಾಗಿ ರಂಗೋಲಿ ಹಾಕಿ ಕುಳಿತಿದ್ದಳು. ಭಕ್ತರು ನೀಡಿದ ಅಷ್ಟೋ ಇಷ್ಟೋ ಇವರಿಗೆ ಆದಾಯ! ಅಬ್ಬಬ್ಬಾ ಎಂದರೂ ೨೦೦ ದಾಟದ ಸಂಪಾದನೆ. ಮತ್ತು ಮಗದೊಂದು ಯೋಚಿಸದ ಯೋಜಿಸದ ತೃಪ್ತ ಜನ.

ಮಾಲೋಲ ನರಸಿಂಹನೆಡೆಗೆ….

ಅಹೋಬಿಲಂನ ಜ್ವಾಲಾ ನರಸಿಂಹನಿಗೆ ಶರಣು ಬಂದು ನಿಧ ನಿಧಾನಕ್ಕೆ ಒಂದೊಂದು ಹೆಜ್ಜೆ ಇಟ್ಟು ನೀರ ಜೋಕಾಲಿಯಲಿ ಮಿಂದು ಕ್ಯಾಮರಕ್ಕೂ ಎರಡು ಹನಿ ಮೀಯಿಸಿ ನಮ್ಮ ಗೈಡ್‌ ಜೊತೆ ಹೊರಟು ನಿಂತೆವು.

ಕ್ಷೀಣ ಜಲಪಾತವೊಂದು ನನ್ನ ಕಣ್ಣವೆಯಲ್ಲಿ ತುಂಬಿ ಪೂರ್ಣ ಸೃಷ್ಟಿಯ ಸೊಬಗನ್ನು ಹೆಚ್ಚಿಸುವ, ಕತೆಗಳ ಸೃಷ್ಟಿಸುವ ಪರಿಗೆ ಚಕಿತಗೊಂಡಿರುವೆ.

ಇಲ್ಲಿಂದ ಹೊರಟು ಮಾಲೋಲ ನರಸಿಂಹನೆಡೆಗೆ ಹೆಜ್ಜೆ ಹಾಕಿದೆವು. ಹಿರಣ್ಯ ಕಶಪುವಿನ ಸಂಹರಿಸಿ ಕುಪಿತಗೊಂಡ ಆತನನ್ನು ಸಂತೈಸಲು ಆದಿವಾಸಿ ಲಕ್ಷ್ಮೀ ಎಂಬ ಮಹಿಳೆಯನ್ನು ಬ್ರಹ್ಮ ಕಳುಹುತ್ತಾನೆ. ಆಗಲೇ ಶಾಂತ ಸ್ವರೂಪಿಯಾಗಿ ಜ್ವಾಲಾ ನರಸಿಂಹ ಮಾಲೋಲ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾನೆ. ದೇವರ ಸಿಟ್ಟಿಗೆ ಕತೆಯ ಒಗ್ಗರಣೆ ಅನಿಸಿತು. ಅದೇ ಹಾದಿಯಲಿ ಕೆಳಗಿಳಿಯುತ್ತಾ ಬಂದಾಗ ವರಾಹ ರೂಪಿಯಾಗಿ ನರಸಿಂಹ ನೆಲೆ ನಿಂತಿದ್ದಾನೆ. ಭೂ ಭಾರವನ್ನು ಎತ್ತಿದ್ದಾನೆ. ಕತೆಗಳ ಸಿಕ್ಕು ಬಿಡಿಸಲು ಹೋಗದೇ ಸುಮ್ಮನೆ ದರ್ಶನಗೈದು ಬಂದೆವು. 

ಮೇಲೇರುವ ಹಾದಿಯೊಂದು ವಾಪಾಸಾಗುವ ಹಾದಿ ಇನ್ನೊಂದು. ಪ್ರತಿ ಕಲ್ಲಿಗೂ ಇಲ್ಲೊಂದು ಸುಂದರ ಕತೆ ಹೆಣೆಯುವ ಚಾತುರ್ಯ ಇದೆ. ಕತೆಗಳನ್ನು ಕೇಳುತ್ತಾ ಕೇಳುತ್ತಾ ದಾರಿ ಸಾಗಿದ್ದೆ ತಿಳೀಲಿಲ್ಲ.

14 ಕಿಲೋ ಮೀಟರ್‌ ದೂರದ ಪವನ ನರಸಿಂಹ ದರುಶನಕ್ಕೆ ಅಹೋಬಿಲಂ ವೃತ್ತಕ್ಕೆ ಬಂದು ಜೀಪು ಹತ್ತಿ ಹೊರಟೆವು. ಕಾಡೊಳಗೆ ಜೀಪು ಸರ್ಕಸ್ ಮಾಡುತ್ತಾ ನರಸಿಂಹ ದೇವಾಲಯ ತಲುಪಿತು. ಮುಚ್ಚಿದ ಬಾಗಿಲ ನಡುವೆ ಹಣಕಿ ಹಾಕಿ ದರ್ಶನ ಮುಗಿಸಿ ಹಿಂದಿರುಗಿದೆವು. ಹೀಗೆ ಒಂಭತ್ತು ದೇವಾಲಯ ದರುಶನವಾದರೂ ನೋಡಿದ ಸಂಪೂರ್ಣತೆ ನನಗೆ ದಕ್ಕಲಿಲ್ಲ. ಇನ್ನೂ ನೋಡಬೇಕು ಅಲ್ಲೇ ಇನ್ನೆರಡು ದಿನವಿರಬೇಕೆಂಬ ಹಂಬಲ. ಆದರೆ ಕಾಲ ಪುರುಷನೆದುರು ನಾವು ಮಂಡಿ ಊರಲೇ ಬೇಕಲ್ಲ. ಹೊರಡಲೇ ಬೇಕಾಯಿತು.

ಮೇಲೇರಿದ ಜಾಗದ ಸನಿಹದಲ್ಲೇ ವಿಶಿಷ್ಟ ವನ ಭೋಜನವೊಂದು ನಮಗಾಗಿ ಕಾಯುತಲಿತ್ತು. ಅಣಬೆ ಗಸಿ ಮತ್ತು ಕಡಲೆ ಬೇಳೆ ಪಾಯಸವನ್ನು ಹಿತಮಿತವಾಗಿ ಸೇವಿಸಿ ಗಂಡೀಕೋಟದತ್ತ ಓಟ ಕಿತ್ತೆವು .


Saturday, June 27, 2026

ಹಂಪಿಯ ಹೊಳೆ ದಂಡೆ

 


ಹಂಪಿ ಎಂಬ ವಿಸ್ಮಯವನ್ನು ಪದಗಳಲ್ಲಿ ಹಿಡಿದಡಲು ಅಸಾಧ್ಯ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳುತ್ತವೆ. ಕತೆಗಳಿಗೆ ಕಿವಿಯಾಗಬೇಕಷ್ಟೆ. 

ನಿಗೂಢ ಹಂಪಿ


ಹಂಪಿ ನೋಡುವವರು ಕಮಲ್‌ ಮಹಲ್‌, ಗಜ ಶಾಲೆ, ವಿರುಪಾಕ್ಷ ದೇವಾಲಯ, ಹಜಾರ ರಾಮ, ವಿಜಯ ವಿಠಲ ನೋಡಿಕೊಂಡು ಹಿಂದಿರುಗುವರು. ಹೆಚ್ಚೆಂದರೆ ಅಚ್ಯುತರಾಯ ದೇವಾಲಯ ನೋಡಿ ಹಂಪಿಗೆ ಬೈ ಬೈ ಹೇಳುವರು. ನೋಡುವುದು ಬಿಡಿ ಅದರಾಚಿಗಿನ ಸ್ಥಳಗಳನ್ನು ಮುಟ್ಟಿ ಮೂಸುವುದು ಇಲ್ಲ. ನಿಜವಾಗಿ ನೋಡುವುದೇ ಬೇರೆ. ನೋಡುವುದು ಎಂದರೆ ಹಂಪಿಯ ಅಂತರ್ ಸತ್ವ ಅರಿಯುವುದು. ನೂರಾರು ವರ್ಷಗಳ ಕಾಲ ಇಲ್ಲಿನ ವಾಸ್ತು ಶಿಲ್ಪ ಕಾಪಾಡಿದವರು ಇಲ್ಲಿನ ರೈತರು!

ಹಂಪಿ ಎಂದರೆ ಇಷ್ಟೇ ಅಲ್ಲಾ. ಹಂಪಿಯ ಬಳುಕು ವೈಯಾರ ನೋಡಬೇಕೆಂದರೆ ಹೊರಗೆ ಕಾಲಿಡಬೇಕು. ಹಂಪಿಯ ಪಿಸುಮಾತನ್ನು ಆಲಿಸಬೇಕು. ಹಂಪಿಯ ಮುಖ್ಯ ಆಕರ್ಷಣೆಯ ಆಚೆಗೂ ಅನನ್ಯತೆ ಇದೆ. ಹಂಪಿಯ ನಿಜದ ಅಸ್ಮಿತೆ ಇರುವುದು ಬದುಕು ಇರುವುದು ಮುಖ್ಯ ಮಂದಿರಗಳ ಹೊರಗೆ! ಇವುಗಳಿಗೆ ಹಣಕಿ ಹಾಕಿದರೆ ಹೊಸ ನೋಟ ತೆರೆಯುತ್ತದೆ.

ಹಂಪಿಯ ಪ್ರವಾಸವನ್ನ ವಿಭಿನ್ನವಾಗಿಸಿಕೊಳ್ಳಬೇಕೆಂಬ ಬಯಕೆ ಇದ್ದರೆ ಇಲ್ಲಿನ ಮುಖ್ಯ ಆಕರ್ಷಣೆಯ ಹೊರಗೆ ಇಣುಕಬೇಕು. ಆಗಲೇ ಹಂಪಿಯ ಮೌನ, ಕಂಪನದ ಆಸ್ವಾದನೆ ಮತ್ತು ಅಚ್ಚರಿಗಳು ಅರ್ಥವಾಗುವುದು. ಹಂಪಿಯ ಜನಸಾಮಾನ್ಯರ ಬದುಕು ಅರ್ಥವಾಗುವುದು. ಹೀಗಾಗಿ ಹೊಸ ಬಗೆಯ ಸ್ಥಳಗಳ ಆಯ್ಕೆ ಮಾಡಿ ನಿರ್ಧರಿಸಿ ಹೊರಟೆವು. ಸ್ಥಳೀಯ ಗೈಡ್‌ ಈರಣ್ಣ ಎಂಬುವವರನ್ನು ಜೊತೆ ಮಾಡಿಕೊಂಡೆವು. ನಮ್ಮ ಪ್ರಯಾಣದ ಪಟ್ಟಿಯಲ್ಲಿ ಏನೇನೆಲ್ಲಾ ಇತ್ತೊ ಅವೆಲ್ಲಾ ಸಾಧ್ಯವಾಗದೇ ಇದ್ರೂ ಹನುಮ ಪಾದದ ನೆತ್ತಿ ಮುಟ್ಟಿ, ತೆಪ್ಪದೊಂದಿಗೆ ಪಯಣಿಸಿ, ಸ್ಥಳೀಯ ಆಹಾರ ಸೇವನೆ, ಮದನಕೊತ್ತಲ ಮಂಟಪದಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿ ಕೊಂಡೆವು. ಗಜ ಸ್ನಾನವೊಂದು ತಪ್ಪಿ ಹೋಯಿತು.


 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜಾಗ ವಿರೂಪಾಕ್ಷ ಮಂದಿರ! ಅದರ ಸನಿಹವೇ ಒಂದು ಹಳೆಯ ದೋಣಿ ಹೆಂಚಿನ ಮಠವಿದೆ. ಪಿನ್‌ ಹೋಲ್‌ ಕ್ಯಾಮರದಲ್ಲಿ ತಲೆಕೆಳಗಾದ ಛಾಯೆ ತೋರುತ್ತದಷ್ಟೇ ಆದರಿಲ್ಲಿ ನಿಜದ ಬಿಂಬ! ಪಿನ್‌ ಹೋಲ್‌ ಕ್ಯಾಮರದಲ್ಲಿ ಮಠದಿಂದ ಕಂಡ ಸ್ವಾಗತ ಗೋಪುರದ ಬಣ್ಣದ ಪ್ರತಿಬಿಂಬ ಇಂದಿಗೂ ಒಂದು ಸೋಜಿಗ! ಅಲ್ಲಿ ಹೋಗಿ ಬರುವವರ ಪ್ರತಿಬಿಂಬವೂ ಬಣ್ಣದಲ್ಲಿ. ಸಾಮಾನ್ಯವಾಗಿ ಯಾವ ಗೈಡೂ ಈ ಸ್ಥಳಗಳನ್ನೂ ಕಾಣಿಸುವುದಿಲ್ಲ. ಆತ ಕಾಣಿಸದೇ ಉಳಿದಿದ್ದು ನೀವು ಕಂಡರೆ ನಿಮ್ಮೊಳಗೊಂದು ಒಳನೋಟವಿದೆ ಎಂದೇ ಅರ್ಥ. ಬದುಕಿಗೊಂದು ಹೊಸ ಒಳನೋಟ ಪ್ರಾಪ್ತವಾದರೆ ಪ್ರವಾಸ ಸಾರ್ಥಕ. 

ಹಂಪಿಯ ಹನುಮ ಪಾದದ ನೆತ್ತಿಯಿಂದ

ವಿಜಯ ವಿಠಲದ ಹಾದಿಯಲ್ಲೇ ಸಣ್ಣ ಗುಡ್ಡದ ತುದಿಯಲ್ಲಿ ಹನುಮ ಪಾದವಿದೆ. ವಿಜಯ ವಿಠಲ ಎರಡು ಕಿಲೋ ಮೀಟರ್‌ ಎಂಬ ಮೈಲಿಗಲ್ಲು ದಾಟಿ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ಹೊರಳಿ ಕಿಲೋ ಮೀಟರ್‌ ಹಲುಸಾಗಿ ಬೆಳೆದ ಬಾಳೆ ತೋಟದಂಚಲ್ಲಿ ಸಾಗಿ ಕಟ್ಟಿಗೆ ಅಹಮದ್‌ ಖಾನ್‌ ನ ಅರವಟ್ಟಿಗೆ ಬಳಿ ಮೇಲೇರುತ್ತಾ ಸಾಗಬೇಕು. ನಡು ನಡುವೆ ಜೋಳ ಬೆಳೆದ ಕುರುಹುಗಳು, ಅನೇಕ ಗೋರಿಗಳು ಪಾಳು ಬಿದ್ದ ಮನೆಗಳ ಅವಶೇಷಗಳು ನಿಮಗೆ ಕಾಣಸಿಗುತ್ತದೆ. ಅನೇಕ ನೀರು ಸಂಗ್ರಹಕಗಳು. ಅಲ್ಲಲ್ಲಿ ಬೆಳೆದ ಕಳ್ಳಿ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಚ್ಚು ಕಡಿಮೆಯಾದರೆ ನೀವೇ ಗತಿಸುವಿರಿ ಅಂತಹ ಜಾಗ! ಮೇಲೇರಿದಂತೆ ಚಲಿಸುವ ಜಾಗವೂ ಕಡಿದಾಗುತ್ತಾ ಸಾಗುತ್ತದೆ. ದಿಗಂತಕ್ಕೆ ಕೈ ಚಾಚಿದಂತೆ ಇರುವ ಇದರ ನೆತ್ತಿ ಸವರಲು ಬಂಡೆಗಳ ನಡುವೆ ತೆವಳುತ್ತಾ ಸಾಗಬೇಕು. ಹೃದಯ ಬಡಿತ ಹೆಚ್ಚಿಸುವ ಜಾಗಗಳಲ್ಲಿ ಹೆಜ್ಜೆ ಹಾಕಬೇಕು. ವರ್ಟಿಗೋ ಇಲ್ಲದವರಷ್ಟೇ ಸುಲಭವಾಗಿ ಮೇಲೇರಬಲ್ಲರು. ಮೇಲೆರಿದಾಗ ಬೃಹತ್‌ ಪಾದವೊಂದು ನಿರ್ಮಿಸಲಾಗಿದೆ. ಜೊತೆಗೊಂದು ಚಿಕ್ಕ ಮಂಟಪ ಇದರ ನೆತ್ತಿಯ ಮೇಲೆ. ಇಲ್ಲಿಂದ ಕೆಳಗಿಳಿದು ಮದನ ಕೊತ್ತಲ ಮಂಟಪದತ್ತ ಹೆಜ್ಜೆ ಹಾಕಿದೆವು.

ಮದನಕೊತ್ತಲ ಮಂಟಪವೂ ನಮ್ಮ ಪಟ್ಟಿಯಲ್ಲಿತ್ತು! ಹಂಪಿಗೆ ಬಂದವರು ಮದನಕೊತ್ತಲ ಮಂಟಪದ ಇಳಿ ಸಂಜೆಗೆ ಹೋಗದೇ ಇದ್ದರೆ ಹೇಗೆ? ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹೊಸಪೇಟೆಯಿಂದ ಹಂಪಿಗೆ ಬರುವವರು ಹಂಪಿಗೆ ತಿರುಗುವಲ್ಲಿ ಸಿಕ್ಕ ಬೋರ್ಡ್‌ ಒಂದಕ್ಕೆ ಸಿಕ್ಕಿಸಿದ ಬೃಹತ್‌ ಚಿತ್ರ ನೋಡದೇ ಮುಂಬರಿಯಲಾರರು. ಅದುವೇ ಮದನಕೊತ್ತಲ ಮಂಟಪದ ಸೂರ್ಯಾಸ್ತ! ಅಪಾರ ಸೌಂದರ್ಯದ ಸೂರ್ಯಾಸ್ತವನ್ನು ಕಣ್ಣು ತುಂಬಿಕೊಳ್ಳಲು ನೀವು ಹರ ಸಾಹಸ ಪಡಬೇಕು. ಇಲ್ಲಿಗೆ ಪಯಣಿಸುವ ಅನುಭವವು ಅನನ್ಯ. ಈ ಮಟಂಪಕ್ಕೆ ತೆನಾಲಿ ಮಂಟಪವೆಂಬ ಇನ್ನೊಂದು ಹೆಸರು. ಈ ಹೆಸರು ಹೇಗೆ ಬಂತೆಂಬುದು ಮಾತ್ರ ತಿಳಿದಿಲ್ಲ. ಬನ್ನಿ ಮದನ ಕೊತ್ತಲವನ್ನೇರೋಣ.

ಮದನ ಕೊತ್ತಲದ ದಾರಿಯಲ್ಲಿ

ಗಜ ಶಾಲೆಯ ಬಲ ತುದಿಯ ರಂಗನಾಥ ದೇವಾಲಯದ ಸನಿಹ ದಾರಿಯಲ್ಲಿ ಅನತಿ ದೂರದವರೆಗೆ ನಿರ್ಜನ ದಾರಿಯಲ್ಲಿ ಸಾಗಬೇಕು. ಅದೊಂದು ಬೆದರಿಸುವ ನಿರ್ಜನ ದಾರಿ. ಎದುರಿಗೆ ಏರು ಗುಡ್ಡ. ದೂರದಲ್ಲಿ ಮಹಾನವಮಿ ದಿಬ್ಬ. ಒಂದಾನೊಂದು ಕಾಲದಲ್ಲಿ ದೊಡ್ಡ ದೇವಾಲಯ. ವಿದೇಶಿ ಮತ್ತು ಸ್ವದೇಶಿ ಆಕ್ರಮಣದ ತರುವಾಯ ಕೇವಲ ದಿಬ್ಬ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ!

ನೂರಾರು ಅವಶೇಷಗಳಡಿಯಲ್ಲಿ ನೆಟ್ಟನೋಟ. ಉದುದ್ದ ಮಲಗಿದ್ದ ವಹಿವಾಟಿನ ಖಾಲಿ ಅಂಗಡಿ ಸಾಲುಗಳು. ಕೃಷ್ಣ ಮತ್ತು ಅಚ್ಚುತರಾಯ ದೇವಾಲಯದ ಬೀದಿಗಳು ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಅಗಲದ ಬೀದಿಯ ನೋಡಿದರೆ ಅವರ ಮುಂದಾಲೋಚನೆಗೆ ದೊಡ್ಡ ಸಲಾಮು. ಊರು ಎಲ್ಲಿಯವರೆಗೆ ಬೆಳೆಯುತ್ತದೆ ಎಂಬ ಅಂದಾಜು ಅವರ ತೀಕ್ಷ್ಣಮತಿಯ ಧ್ಯೋತಕ! 

ಗಜಶಾಲೆಯಿಂದ ಮುಂದಡಿ ಇಟ್ಟರೆ ಅಡಿಗಡಿಗೆ ಸಿಗುವ ಒಡೆದ ಮಡಿಕೆ ಚೂರುಗಳು. ಒಂಟಿಯಾಗಿ ಕಲ್ಲು ಮುಳ್ಳು ಕಂಟಿಗಳ ನಡುವೆ ಹುದುಗಿದ ಜೀವನೋತ್ಸಾಹದ ಹೆದ್ದಾರಿಗಳಾದ ದಾರಿಗಳನ್ನು ಕಂಡಾಗ ಕರಳು ಚುರುಕ್‌ ಎನ್ನುತ್ತದೆ. ವಿಷಾದದ ಒಣ ಬಿಸಿಲು ರಾಚುತ್ತದೆ. ಕಾಲದ ಕೈವಾಡಕ್ಕೆ ನಲುಗಿದ ಫಲವತ್ತತೆಯ ಭೂಮಿ. ಕಳಕೊಂಡ ಖಾಲಿತನ, ಹಳವಂಡಗಳ ಹದ್ದು ಮನದ ಮುಗಿಲಿನಲಿ! 

ತಾಳಿಕೋಟೆ ಕದನದ ನಂತರ ಹಂಪಿಯ ಕನಸು ಕರಗುತ್ತಾ ನಿಧ ನಿಧಾನಕ್ಕೆ ಈ ಜಾಗಗಳನ್ನೆಲ್ಲಾ ತೊರೆದು ಜನ ಹೊಸ ಕನಸ ಬೆನ್ನಟ್ಟಿ ಹೊರಟರಿರಬೇಕು. ಇವೆಲ್ಲವ ಕಂಡಾಗ ವಸುದೇಂದ್ರರ ತೇಜೋ-ತುಂಗಭದ್ರ ಕಾದಂಬರಿಯ ಮಹತ್ವಾಕಾಂಕ್ಷಿ ಅಹಮದ್‌ ಖಾನ್‌ ನೆನಪಿಗೆ ಬರುತ್ತಾನೆ. ಏನೋ ಆಗಲು ಹೋಗಿ ಏನೂ ಆಗದೆ ತುಂಗಾ ತೀರದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಜೊತೆಗೆ ಕಿವಿಯನ್ನೂ ಮತಾಂಧರಿಂದ ಕಳೆದುಕೊಳ್ಳುತ್ತಾನೆ. ಆತ ದುಡ್ಡಿನಾಸೆಗೆ ತನ್ನೂರ ತೊರೆದಂತೆ ಇಲ್ಲಿನ ಜನ ಬಿಡಾರ ಕೊಡವಿ ಹೊರಟಿರಬೇಕು. ತನ್ನ ತನವ ತೊರೆದ ನದಿಯಂತೆ.

 ಒಂದು ಕಾಲದಲ್ಲಿ ಅಪಾರ ಜನಸ್ತೋಮವನು ಕಟ್ಟಿಕೊಂಡ ಊರಿಗ ಪುಟಾಣಿ ಹಳ್ಳಿ. ಗುಡ್ಡದ ತುದಿಗಳಲ್ಲೂ ಮಡಿಕೆ ಕಂಡವನಿಗೆ ಎಂದೋ ಬಿಸುಟು ಹೋದವರ ತಾಪದ ಬಿಸಿ ತಟ್ಟುತ್ತದೆ. ಇಲ್ಲಿಯವರೆಗೆ ಆ ರಾಜ ಮಾಡಿಕೊಡುತ್ತಿದ್ದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಗಜ ಶಾಲೆಯಿಂದ ಏನಿಲ್ಲವೆಂದರೂ ಎರಡು ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕು. ಗಜ ಶಾಲೆಯಿಂದ ಇಲ್ಲಿಯವರೆಗಿನ ದೂರವೇ ನಿಮ್ಮನ್ನು ದಂಗು ಬಡಿಸುತ್ತದೆ! ಈಗ ಮುಳ್ಳು ಕಂಟಿಗಳ ಒಳ ದಾರಿ. ಬೆಟ್ಟದಿಂದ ಇಳಿಬಿಟ್ಟಂತಹ ಇಳಿಜಾರು ಬಂಡೆಯನು ಭಾರಿ ಕಷ್ಟದಲಿ ಏರಬೇಕು. ಯಾರೋ ಪುಣ್ಯಾತ್ಮ ಇಲ್ಲಿ ಪುಟಾಣಿ ಮೆಟ್ಟಿಲು ನಿರ್ಮಿಸಿದ್ದಾನೆ! ಎಲ್ಲೆಲ್ಲೂ ದೈವ ಮತ್ತು ದೇವರುಗಳು. ನಡುವೆಲ್ಲೋ ದೊಡ್ಡ ಹನುಮಂತ ಮೂರ್ತಿ ಕೆತ್ತಿಟ್ಟಿದ್ದರು. ಒಂದಾನೊಂದು ಕಾಲದಲ್ಲಿ ದೇವಾಲಯ ಮತ್ತು ಮನೆಗಳ ಸಮುಚ್ಚಯವಿದ್ದಿರಬೇಕು. ಈಗ ಬಟಾ ಬಯಲು. ಅಲ್ಲಲ್ಲಿ ಮಂಟಪಗಳು ನಿದ್ರಿಸುವ ವಿರಾಮ ಪಡೆಯುವ ಸಣ್ಣ ಜಾಗಗಳನ್ನು ನೀವು ನೋಡಬಹುದು. ತೆನಾಲಿ ಮಂಟಪದ ಉತ್ತರ ದಿಕ್ಕಿಗೆ ಮಾತಂಗ ಪರ್ವತ ಪವಡಿಸಿತ್ತು. ಹಾವಿನ ಹೆಡೆಯಂತಹ ಬಂಡೆಯೊಂದು ಕಂಡಿತು. ಪ್ರಕೃತಿಯ ಅಚ್ಚರಿಯ ಮುಂದೆ ಉಳಿದಚ್ಚರಿಗಳು ಗೌಣ.

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.

ಮದನಕೊತ್ತಳದ ಮುಸ್ಸಂಜೆ

 ನೆತ್ತಿ ಹತ್ತಿ ಪುಳಕಗೊಂಡು ಸ್ವಲ್ಪ ವಿಶ್ರಮಿಸಿಕೊಂಡೆವು. ಮೇಲೇರಿ ಬಂದ ಗೈಡ್‌ ಸನಿಹದ ಕಡಿದಾದ ಬಂಡೆ ಏರಿದ. ಇಳಿಯುವಾಗಂತೂ ನಮಗೇ ಭಯವಾಯಿತು. ಸೂರ್ಯನನ್ನು ನುಂಗುವಂತೆ, ಯೋಗ ನಮಸ್ಕಾರದ ನಡುವೆ ಸೂರ್ಯನ ಸಿಲುಕಿಸಿ ಮುಂತಾದ ವಿವಿಧ ಭಂಗಿಯಲ್ಲಿ ಚಿತ್ರ ತೆಗೆದು ಖುಷಿ ಪಟ್ಟೆವು. ಸ್ವಲ್ಪ ಆಯ ತಪ್ಪಿದರೂ ಮೂಳೆಗಳೆಲ್ಲಾ ಪುಡಿ ಪುಡಿ. ಮದನಕೊತ್ತಳ ಮಂಟಪದಲಿ ಮುಸ್ಸಂಜೆಯನು ಕಳೆದು, ಹಗಲು ಮುಗಿಯುವ ಮೊದಲೇ ಇಳಿಯ ತೊಡಗಿದೆವು. ಮದನ ಕೊತ್ತಲದ ಮುಸ್ಸಂಜೆ ಅನ್ಯಾದರ್ಶ. ಅಪರೂಪದ ಹಲವು ಚಿತ್ರಗಳು ನನ್ನ ಲ್ಯಾಪ್‌ಟಾಪ್‌ ಸೇರಿದವು.

ಮತ್ತದೇ ದಾರಿಯಲ್ಲಿ ಮುಳ್ಳು ಕಂಟಿಗಳ ನಡುವೆ ಮುಂದುವರಿಯ ಬೇಕಿರುವುದರಿಂದ ಹಾಗೂ ಈ ದಾರಿಯಲ್ಲಿ ಕರಡಿ, ಚಿರತೆಗಳ ಹಾವಳಿ ಬಲು ಜೋರೆಂದು ಬೇಗನೆ ಇಳಿದೆವು.

ಚಕ್ರ ತೀರ್ಥದ ಸೆಳೆತ

ವಿರೂಪಾಕ್ಷ ಮಂದಿರದಿಂದ ನೇರ ಚಲಿಸಿ ತುಂಗೆಯ ತೀರದ ಲಿಂಗದ ಮುಂದಿರುವುದೇ ಚಕ್ರತೀರ್ಥ. ಇಲ್ಲಿನ ಸೆಳತವೇ ಅನನ್ಯ. ಇಲ್ಲಿಂದಲೇ ಆಚೆ ದಡಕ್ಕೆ ತೆಪ್ಪದಲ್ಲಿ ಬಿಡಲಾಗುತ್ತದೆ. ಆಚೆ ದಡದ ಚಂದ್ರಮೌಳೇಶ್ವರ ದೇವಾಲಯ ಮತ್ತು ಮಠಗಳನ್ನು ನೋಡಿ ಬಂದಿದ್ದು ಇಲ್ಲಿಂದಲೇ. ಅದೊಂದು ವಿಶಿಷ್ಟ ಕಥನ.

ಚಕ್ರತೀರ್ಥದಲ್ಲಿ ಮಿಂದೆದ್ದು ಬಂದು ಕೋದಂಡ ರಾಮನಿಗೆ ನಮಿಸಿ ಅಲ್ಲೇ ಎಡಕ್ಕೆ ಸಿಗುವ ಮೆದು ಇಡ್ಲಿ ಮತ್ತು ಹಸಿರು ಚಟ್ನಿ, ಬೋಂಡಾ ಉದರದ ಉಪಶಮನಕ್ಕೆ ಹೇಳಿ ಮಾಡಿಸಿದ ತಂಪೆಳೆಯುವ ಜಾಗ. ೧೦ರೊಳಗೆಲ್ಲಾ ಖಾಲಿ ಖಾಲಿ. ಅಲಲ್ಲಿ ಚೌಕುಳಿ ವಯರ್‌ ಬುಟ್ಟಿ ಬಿಡಿಸಿ ಊಟಕ್ಕೆ ಕೂತ ಕಾರ್ಮಿಕರು ಗಮನ ಸೆಳೆಯುತ್ತಾರೆ. 

ಕೋದಂಡ ರಾಮ, ಯಂತ್ರೋದ್ಧಾರಕ ಹನುಮ, ಕೋಟಿಲಿಂಗ, ಸೀತಾ ಸೆರಗು, ರಂಗನಾಥ, ಅಚ್ಚುತರಾಯ ಪೇಟೆ ಇತ್ಯಾದಿಗಳನ್ನು ದರ್ಶಿಸಿ ಹಳೆಯ ಹೆದ್ದಾರಿಗಳನ್ನು ಹಾಯ ಬಹುದು.

 ಇಲ್ಲಿಂದಲೇ ಕಂಪ-ಭೂಪ ಮಾರ್ಗ ಪ್ರಾರಂಭವಾಗಿ ಸುಗ್ರಿವನ ಗುಹೆ ಹಾದು ವಿಠಲ ದೇವಾಲಯದ ಹಿಂಬಂದಿಗೆ ಪುರಂದರ ಮಂಟಪದ ಬಾಜುವಲ್ಲೇ ಹಾದು ಹೋಗುತ್ತದೆ. ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಹೊರಟರೆ ೫ರ ಸುಮಾರಿಗೆ ಪುರಂದರ ಮಂಟಪದ ಸನಿಹವಿರುತ್ತೀರಿ. ಇಲ್ಲೊಬ್ಬಳು ಲಕ್ಷ್ಮೀ ಇಡ್ಲಿ, ವಡೆ, ಬಿಸಿ ಬಿಸಿ ಮೆಣಸಿನ ಬಜ್ಜಿಯನ್ನು ಬಯನಿ ಮರದ ನೆರಳಡಿ ಮಾರಾಟಕ್ಕೆ ನಿಂತಿರುತ್ತಾಳೆ. ನೀವೇನೋ ಗ್ರಹಿಸದಿರಿ. ಮುಂಜಾವಿಗೆ ಪುರಂದರ ಮಂಟಪದ ಸ್ವಚ್ಚಂದದ ಗಾಳಿ ಕುಡಿದು ಬಂದು ಮೆದು ಇಡ್ಲಿ ಮೆಲ್ಲುವ ಆ ಸುಖವೇ ಬೇರೆ. ಪುರಂದರ ಮಂಟಪದಿಂದ ಆಚೆಗೆ ತಲುಪಲು ನಿರ್ಮಿಸಿದ ೫೦೦ ವರ್ಷ ಹಳೆಯ ಸೇತುವೆಯುದ್ದಕ್ಕೂ ಕಣ್ಣು ಹಾಯಿಸಿ. ಹೊಸ ಮಿಂಚೊಂದು ಸಂಚಾರವಾಗುತ್ತದೆ. ಹಾಗೆಯೇ ಆಚಯ ಬದಿಯ ದೇವಾಲಯಕ್ಕೂ ಕಲ್ಲುಗಳ ಮೇಲೆ ಜಿಗಿಯುತ್ತಾ ಹೋಗಿ ಬರಬಹುದು. ಆಚೆ ದಡದಲ್ಲಿ ನೆಲಕ್ಕುರುಳಲು ತಯಾರಾದ ದೇವಾಲಯ ಹಾಗು ಇಬ್ಬರು ವೃದ್ಧರಿರುವ ಪುಟಾಣಿ ಮಠವಿದೆ.

ಇಲ್ಲಿನ ಗಾಳಿ, ನೀರಲ್ಲಿ ಒಂಟಿತನದ ಅಮಲು. ಇಲ್ಲಿಂದ ಮುಂದಡಿ ಇಟ್ಟರೆ ತಿರುಮಲ ದೇವಾಲಯ, ತುಲಾಭಾರ ಮಂಟಪ ಮತ್ತು ವಿಜಯ ವಿಠಲನ ಗುಡಿ ಎದುರಿಗಿರುತ್ತೀರಿ.

 ಹೀಗೆ ಸಾಗಿದ ಅನನ್ಯ. ದಾರಿ ಗುಂಟ ಸಿಗುವ ವಿಶಾಲ ಬೀದಿ ಮತ್ತು ಪ್ರತಿ ಬೀದಿಯ ಅಚ್ಚುಕಟ್ಟುತನ ನಮ್ಮ ಇಂದಿನ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ತುಂಗಭದ್ರೆಯನ್ನು ತಿರುಗಿಸಿ ಹಂಪಿಗೆ ಸದಾ ನೀರಿನ ಕೊರತೆಯಾಗದಂತೆ ಕಾಪಾಡಿದುದು ಒಂದು ಅದ್ಭುತ ಇಂಜಿನಿಯರಿಂಗ್‌ ಸಾಹಸ. ಇಂದಿಗೂ ಇದೊಂದು ಮಿಸ್ಟರಿಯೇ! 

ಮಾಲ್ಯವಂತದ ಮುಂಜಾನೆ

ಮಾಲ್ಯವಂತದ ಚುಬುಕು ಎಂತವರನ್ನು ಆಕರ್ಷಿಸದೇ ಬಿಡದು. ದೇವಾಲಯದವರೆಗೆ ರಸ್ತೆ ಇದೆ. ಮುಂದೆ ಸಣ್ಣ ದಾರಿಯಲ್ಲಿ ಕತ್ತಲಲ್ಲಿ ನಡೆಯಬೇಕು. 

ಮೇಲೇರಿದಾಗ ಕಾಣುವ ದೃಶ್ಯಾವಳಿಗಳಿಗೆ ನೀವು ಮಾರು ಹೋಗುವಿರಿ. ಒಂದೆಡೆ ಮಾಲ್ಯವಂತ ರಘುನಾಥ ದೇವಾಲಯ ಇನ್ನೊಂದೆಡೆ ಗಜಶಾಲೆ ಕಾಣಸಿಗುತ್ತದೆ. ಮಾಲ್ಯವಂತದ ಬೆಳಗು ಹಾಗೂ ಸಂಜೆಗಳು ಪ್ರೇಯಸಿಯ ಬಿಸಿ ಅಪ್ಪುಗೆಯಂತೆ ಬೆಚ್ಚಗೆ! ಸದಾ ಹಂಪಿಗಾಗಿ ಹಾತೊರೆಯುವಂತೆ ಮಾಡುತ್ತದೆ! 



ರಾಮನಿಲ್ಲಿಗೆ ವನವಾಸದ ಸಮಯಕ್ಕೆ ಬಂದಿರುವ ಕುರುಹಾಗಿ ರಘುನಾಥ ದೇವಾಲಯ ನಿರ್ಮಿಸಲಾಗಿದೆ. ಜೊತೆಗೊಂದು ವಿಶಿಷ್ಟ ಶಿವಾಲಯವಿದೆ. ಶಿವಾಲಯದೆದುರು ಪುಟಾಣಿ ಲಿಂಗಗಳನ್ನು ಕೆತ್ತಿಡಲಾಗಿದೆ. ಸೂರ್ಯೋದಯ ವೀಕ್ಷಣೆಗೆ ಅತ್ಯಂತ ಪ್ರಶಸ್ತವಾದ ಜಾಗವೇ ಮಾಲ್ಯವಂತ.



ಮಾಲ್ಯವಂತ ದೇವಾಲಯದಲ್ಲಿ ೨೪ ಗಂಟೆ ಭಜನೆ ಮತ್ತು ಪಾರಾಯಣ ನಡೆಯುತ್ತದೆ. ಅಲ್ಲಲ್ಲಿ ಅರಳುವ ನಾಗಸಂಪಿಗೆಯ ಘಮಲನ್ನು ಆಸ್ವಾದಿಸುತ್ತಾ ನೆತ್ತಿ ಏರಿದರೆ ಅಪೂರ್ವ ಅಹ್ಲಾದ. ಇನ್ನೂ ಎತ್ತರಕೆ ಏರಿದರೆ ಹಂಪಿಯ ದಶ ದಿಕ್ಕುಗಳೂ ಕಾಣ ಸಿಗುತ್ತದೆ. ಪ್ರತಿವರ್ಷ ನಡೆಯುವ ಹಂಪಿಯ ಫಲ ಪುಷ್ಪ ಪೂಜೆಗೆ ಕಾತರನಾಗಿ ಕಾಯುತ್ತಾ ನಮ್ಮ ರೂಂನತ್ತ ನಡೆದೆವು


ವರ್ಷ ವರ್ಷವೂ ಹಂಪಿಯ ನೋಡುವ ಬಯಕೆ ಜ್ವರದಂತೆ ಏರುತ್ತಲೇ ಇದೆ. ಮತ್ತೆಂದು ಹಂಪಿಯ ಅಲೆಮಾರಿತನದ ಗಾಳಿಯನ್ನು ಹೀರುವೆನೆಂಬ ತವಕದಲ್ಲೇ ಕಳೆಯುತ್ತಿದೆ ದಿನಗಳು.


 

Wednesday, January 14, 2026

ತಿಲಮಿಟ್ಟಿಯ ತೀರದಲಿ

 


ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ಮತ್ತಿಬ್ಬರು ಬೆಳಗಿನ ಮೀನು ಶಿಖಾರಿಗೆ ಬಲೆ ಸರಿಪಡಿಸುತ್ತಿದ್ದರು. ಮರಳ ಮೇಲೆ ಚೆಲ್ಲಿದ ಹಳದಿ ಬೆಳಕು. ಸಮುದ್ರದ ನೀಲಿ ಕುಡಿದು ಕುಡಿ ಒಡೆದ ಆಕಾಶ. ಗಾಳಿ ತೆಕ್ಕೆಗೆ ಸೇರಿದ  ತೆಂಗಿನ ಗರಿಗಳ ಓಲಾಟದ ನಡುವೆ ಹರಿದ ನೇರ ರಸ್ತೆ. ಕಾರೊಳಗೆ ನುಗ್ಗುವ ಕಡಲ್ಗಾಳಿ. ಹಾರುವ ಮರಳಿನ ಕಣ. ಸೂರ್ಯನಾಗಲೇ ದಿನವಿಡೀ ದುಡಿದ ಸುಸ್ತು ಕಳೆಯಲು ಅಂಗಿ ಚಡ್ಡಿ ಕಳಚಿ ಕಡಲಿಗಿಳಿದು ಮೀಯುವ ತಯಾರಿಯಲ್ಲಿದ್ದಿದ್ದ. ಮುಂಬರಿದಾಗ ದೂರದಿಂದಲೇ ಕಣ್ಣಿಗೆ ಬಿದ್ದ ಸಣ್ಣ ಫಲಕ ʻತಿಲಮಿಟ್ಟಿʻ, ನಮ್ಮನ್ನು ಆಕರ್ಷಿಸಿತು. ಏನಿದೆಂದು ಕೇಳಲೂ ಒಬ್ಬರೂ ಸನಿಹದಲ್ಲಿ ಪತ್ತೆಯಿಲ್ಲ. ಒಂದು ಕಿ.ಮೀ ಕಳೆದಾಗ ಸಿಕ್ಕ ಮೀನುಗಾರರ ಮನೆಯಲ್ಲಿ ಏನಿದು ತಿಲಮಿಟ್ಟಿ ಎಂದು ಕೇಳಿದೆವು. ಖಾರ್ವಿ ಕೊಂಕಣಿ, ಮರಾಠಿ ಮಿಶ್ರಿತ ಕನ್ನಡದಲಿ ನಾಚಿಕೆಯಿಂದ ಏನೋ ಉಲಿದಳೊಬ್ಬಳು ತ್ರಿಪುರ ಸುಂದರಿ. ನನಗಂತೂ ಅರ್ಥವಾಗಲಿಲ್ಲ. ಮರಾಠಿ ಬಲ್ಲ  ಗೆಳೆಯನೊಬ್ಬನಿಗೆ ಅಲ್ಪ ಸ್ವಲ್ಪ ಅರ್ಥವಾಗಿ ಕಡಲ ಕಿನಾರೆಯ ತುದಿಗೆ ಕರೆದೊಯ್ದ.  ಕನ್ನಡದ ಅನಂತ ಸಾಧ್ಯತೆಯ ವಿಸ್ತೃತ ಪ್ರಸ್ತುತಿಯೊಂದು ನಮ್ಮೆದುರಿಗೆ ಅನಾವರಣಗೊಂಡು ಹಾಗೋ ಹೀಗೋ ಅರ್ಥೈಸಿ ಕಡಲ ತುದಿಗಿಳಿದಿದ್ದೆವು. ಗುಡ್ಡದಾಟಿ ಆಚೆಗೆ ಹೋಗಬೇಕೆಂಬುದು ಅವಳ ಭಾವವಷ್ಟೇ ನನಗೆ ಅರ್ಥವಾಗಿದ್ದು. ಭಾಷೆಯ ಅನಂತ ಸಾಧ್ಯತೆಯನಿಲ್ಲಿ ಆಕೆ ನಮಗೆ ತೋರಿಸಿಕೊಟ್ಟಿದ್ದಳು. ಅವಳ ಉಚ್ಛಾರ ಎಲ್ಲವೂ ಕನ್ನಡದಂತಿಲ್ಲ. 

ದೂರದೂರದಲ್ಲಿ ನಿಂತ ನಡುಗುಡ್ಡೆಗಳು ನಡುವೆ ಸೂರ್ಯ ನಮ್ಮನ್ನೇ ಅಣಕಿಸುತ್ತಾ ಕಡಲಿಗಿಳಿದಿದ್ದ. ಖಾರ್ವಿ ಹೆಂಗಸು ದಾರಿ ತೋರಿದಲ್ಲಿ ಕುಂಬದಂತಹ ಗುಡ್ಡ ತನ್ನ ನೀಳ ಕಾಲುಗಳನ್ನು ಕಡಲಿಗೆ ಚಾಚಿ ಮಲಗಿತ್ತು. ಮಲಗಿದ ಕುಂಬದಂತಹ ಬಸಾಲ್ಟ್‌ ಶಿಲೆಯ ಗುಡ್ಡವೇರಿ ಆಚೆಗೆ ಹೊರಟೆವು.

ಬಸಾಲ್ಟ್‌ ಬೆಟ್ಟವೇರಿ

ತೆಂಗಿನ ಗರಿಗಳ ನಡುವೆ ಜಾಗ ಮಾಡಿಕೊಂಡು ಮರಾಠಿ ಮಿಶ್ರಿತ ಕೊಂಕಣಿ ಕನ್ನಡದ ದಾರಿ ತೋರಿದೆಡೆಗೆ ಓಡಿ ಕಿನಾರೆಗೆ ಜೋಡಿಸಿದ ಕಿರುದಾರಿಯಲಿ ಸಣ್ಣ ಗುಡ್ಡವೇರಿದೆವು. ಜ್ವಾಲಾಮುಖಿ ಉಗುಳಿನಿಂದಾದ ಕಿರುಗುಡ್ಡ ಕಿನಾರೆಗೆ ತಾಕಿಕೊಂಡಿತ್ತು. ಸೂರ್ಯ ಚೆಲ್ಲಿದ ಪ್ರತಿಫಲಿತ ಬೆಳಕಿನಲ್ಲಿ 20 ನಿಮಿಷದ ಏರು ದಾರಿಯಲಿ ಪಯಣ. ಎಲ್ಲಿಗೆ ಹೋಗುತ್ತಿದ್ದೇವೆ ದಾರಿ ಕೊನೆಗೆ ನಮಗೆ ದಕ್ಕುವುದಾದರೂ ಏನು ಎಂಬ ಕಲ್ಪನೆ ಇಲ್ಲದ ನಿರುದ್ಧೀಶ ನಡಿಗೆ. ದಾರಿ, ಕಿನಾರೆ ಎರಡೂ ಆಹ್ಲಾದಕರ. ಅಲ್ಲಲ್ಲಿ ಕೇಸರಿ ಬಾವುಟ ನೆಟ್ಟು ದೂರದ ದೋಣಿಗಳು ಈ ಕಡೆ ಬರದಂತೆ ಪ್ರತಿಬಂದಿಸಿದ್ದರು. ದೂರದಿಂದಲೇ ಲಂಗರು ಹಾಕಿದ ದೋಣಿಯೊಂದು ಕಂಡಿತು. ಪ್ರವಾಸಿಗರೋ ಇರಬೇಕೆಂದುಕೊಂಡು ಹೆಜ್ಜೆ ಮುಂದಿಟ್ಟೆವು. 

 


ಕರಿ ಕಲ್ಲುಗಳ ನಡುವೆ ಜಾಗ ಮಾಡಿಕೊಂಡು ನಡೆದು ತಲುಪುವ ಧಾವಂತದಲ್ಲಿದ್ದೆವು. ಸುತ್ತಲೂ ಕಲ್ಲು ಕುರುಚಲುಗಳ ನಡುವೆ ತುರುಕಿಟ್ಟಂತಹ ಕೆಂಪು ಮಣ್ಣು. ಮಿಲಿಯಾಂತರ ವರ್ಷಗಳ ಕೆಳಗೆ ಜ್ವಾಲಾಮುಖಿಯಿಂದ ರೂಪುಗೊಂಡ ಕಲ್ಲುಗಳು ಭೂಮಿಯ ವಿವರವನ್ನರಹುತ್ತದೆ. ಇಲ್ಲಿನ ಬಂಡೆಗಳು ಭೂ ಸಂರಚನೆಯ, ಭೂ ಖಂಡಗಳ ಚಲನೆಯ ವಿಸ್ತೃತ ವಿವರದ ಪಟ್ಟಿಯಂತೆ ಸಂಶೋಧಕರಿಗೆ ವಿವರಿಸುತ್ತವೆ. ಬಸಾಲ್ಟ ಶಿಲೆಯ ರೂಪಾಂತರದ ಕತೆಯನ್ನೂ ಅರಹುತ್ತದೆ.

ಕರಿ ಸುಂದರಿಯ ಬೆನ್ನು ಬಿದ್ದು



ಕಾರವಾರ ಮತ್ತು ಗೋವಾದ ಕಿನಾರೆಯಲ್ಲಿ ಅಡ್ಡಾಡುತ್ತಿದ್ದಾಗ ಕಂಡ ಬೋರ್ಡಿನೆಡೆಗೆ ಸೆಳದ ವಿಚಿತ್ರ ಸೆಳೆತ ಇಲ್ಲಿಗೆ ಎಳೆದುಕೊಂಡು ಬಂದಿತ್ತು. ಕಾರವಾರದ ಟ್ಯಾಗೋರ್ ಬೀಚಿನಿಂದ ಕೇವಲ 20 ನಿಮಿಷದ ಹಾದಿ!


ಬೆಟ್ಟವಿಳಿಯುತ್ತಲೇ ಅಲ್ಲಿಬ್ಬರು ದಂಪತಿಗಳು ಕಾಣಸಿಕ್ಕರು. ಪ್ರವಾಸಿಗರಿರಬೇಕೆಂದು ಕೊಂಡೆ. ಸನಿಹ ಬರುತ್ತಲೇ ಸಂಜೆ ಮೀನುಗಾರಿಕೆ ಮಾಡಿ ಮರಳಿದ ಮೀನುಗಾರರೆಂದು ತಿಳಿಯಿತು. ಆಕೆ, ಆತ ಮತ್ತು ಕಡಲಷ್ಟೇ ಅಲ್ಲಿ. ಅವರ ನಡುವೆ ಅನೂಹ್ಯ ಮಾತುಕತೆಯೊಂದು ನಿರ್ಲಿಪ್ತ ಏಕಾಂತದ ಆ ಘಳಿಗೆಯಲಿ ಅಲ್ಲಿ ನಡೆಯುತ್ತಲಿತ್ತು. ಅಲೆಗಳ ಮೊರೆತ. ಮೌನವೂ ಸಹಾ ಸಹಜ ಮಾತಂತೆ ಭಾಸ. ಮಹಾ ಧ್ಯಾನದಂತೆ ಮೀನನ್ನು ಬಲೆಯಿಂದ ಬಿಡಿಸುತ್ತಾ ಇರುವ ಇವರು ಬದುಕಿನ ಸಿಕ್ಕು ಬಿಡಿಸುವವರಂತೆ ಕಂಡರು! ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ಏನೋ ಮಾತನಾಡುತ್ತಿದ್ದರು.


ದಂಡೆಗೆ ಬಡಿ ಬಡಿದು ತಮ್ಮನ್ನು ಮಾತಾಡಿಸಲೋ ಎಂಬಂತೆ ಬಂದು ಹೋಗುತ್ತಿದ್ದ ಅಲೆಗಳ ಮುತ್ತಿಗೆ ವಿಚಲಿತರಾಗದೆ ಮೀನು ಬಿಡಿಸುವುದರಲ್ಲೇ ತಲ್ಲೀನ. ಮೂರು ಮತ್ತೊಂದು ಮೀನು ಬಿಡಿಸುತ್ತಾ ಬದುಕಿನ ಸಿಕ್ಕುಗಳಲ್ಲಿ ಸಿಕ್ಕಿ ಹಾಕಿಕೊಂಡಂತೆನಿಸಿ ವಿಷಾದ ಕಾಡಿತು.

ಅಚಾನಕ್‌ ಆಗಿ ಸಿಕ್ಕ ಕರಿ ಸುಂದರಿ

ಸಹಸ್ರ ಮಾನದಿಂದ ಬೇಸರಿಸದೇ ಬಡಿದ ಅಲೆಗಳು ಕರಿ ಬಂಡೆಗಳನ್ನು ಗೀಚುತ್ತಾ ತನ್ನೊಲವ ತೋರುತ್ತಾ ಬಂಡೆಗಳನ್ನು ಖಾಲಿ ಮಾಡುತಲಿದ್ದವು!  ಹೊಸತೊಂದನು ಸಾಧ್ಯವಾಗಿಸುತಲಿದ್ದವು. ತಿಲಮಿಟ್ಟಿಯು ಕರಿ ಮುರುಳ ಕಿನಾರೆಗೆ ಬಡಿದ ಅಲೆಗಳಿಂದ ಸೃಷ್ಟಿಯಾಗಿತ್ತು. ಕರಿ ಮರಳ ಕಿನಾರೆಯ ಗುಟ್ಟದು! ತಿಲ ಎಂದರೆ ಎಳ್ಳು ಮಿಟ್ಟಿ ಎಂದರೆ ಮಣ್ಣು. ತಿಲಮಿಟ್ಟಿ ಎಂದರೆ ಕರಿ ಮಣ್ಣ ಕಿನಾರೆ. ಯಾವ ಅಲಂಕಾರ ಎಂದು ಮಾತ್ರ ಕೇಳಬೇಡಿ! 



ಭಾರತದಲ್ಲಿ ಒಟ್ಟು ೧೦ ಕರಿ ಮಣ್ಣ ಕಿನಾರೆಗಳಿವೆ. ಅವುಗಳಲ್ಲಿ ತಿಲ ಮಿಟ್ಟಿಯು ಒಂದು. ಅನನ್ಯವಾದ ಕರ್ನಾಟಕದ ಕರಿ ಮರಳ ಕಿನಾರೆಯಾಗಿ ಕಂಗೊಳಿಸುತಲಿದೆ. ಇದು ಜ್ವಾಲಾಮುಖಿ ಸ್ಪೋಟದಿಂದಾದ ಬಸಾಲ್ಟ್‌ ಶಿಲೆ ಕರಗಿ ಉಂಟಾದ ಕಿನಾರೆಯಾಗಿದೆ. ಕಿನಾರೆಯ ಸುತ್ತಲೂ ಬಸಾಲ್ಟ್‌ ಶಿಲೆಗಳದೇ ಕಾರುಬಾರು.

ಅಲೆ ಎಂಬ ಒಲವ ದೋಣಿ ಏರಿ



ಇನ್ನೊಬ್ಬರಿಗಾಗಿ ತಾನು ಖಾಲಿಯಾಗುವುದೇ ಒಲವಲ್ಲವೇ?  ಈ ಜಗದ ಜಗುಲಿಯಲಿ ಅದು ಸಾಧ್ಯವೇ? ಎಂಬ ಪ್ರಶ್ನೆಯೊಂದು ನನ್ನ ಮನಪಟಲದಲ್ಲಿ ಎದ್ದಿತು.  ಹೊಸತೊಂದನು ಸೃಷ್ಟಿಸಲು ಸವೆಯದೇ ಬೇರೆ ವಿಧಿಯಿಲ್ಲ ಎಂದು ಸಾರಿ ಸಾರಿ ಹೇಳುತಲಿದೆ ಎನಿಸುತ್ತಿತ್ತು. ಸವಕಲಾಗುವುದರಲ್ಲೂ ಸಂತೋಷವಿದೆ ಎಂಬ ಭಾವ ಉಕ್ಕುಕ್ಕಿ ತೆರೆಯಂತೆ ಮನದ ಕಡಲಿಗಪ್ಪಳಿಸುತ್ತಲೇ ಇದೆ. ತಿಲ ಮಿಟ್ಟಿಯ ನೆನಪಿನಂತೆ. 

ಅವನ ಕಣ್ಣ ಪಾಪಿಯಲ್ಲಿನ ಸೂರ್ಯ ಕಂತುತಲಿದ್ದ. ಭವದ ಬವಣೆ ತೀರಿಸಿತೇ ಕಡಲು. ಬೆಲೆಯೇ ಇಲ್ಲದ ಮೀನುಗಳ ಸಂಗಡ ಮೀನಾರಿಸುತ್ತಾ ತಿಲಮಿಟ್ಟಿಯ ದಡದಲ್ಲಿ ಬದುಕಿನ ನೌಕೆಗೆ ಹುಟ್ಟು ಹಾಕುತಿರುವ ತೀರ ಸಿಗದ ಜೋಡಿ! ಅಪ್ಪಟ ಕೊಂಕಣಿ ಮಿಶ್ರಿತ ಮರಾಠಿಯಲ್ಲಿ ಸ್ನೇಹಿತನ ಜೊತೆ ಮಾತೆಗಿಳಿದರು! ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು.  ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ದಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಬೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.

ಕೊನೆಯ ತುತ್ತು



ಇಂತಹ ವಿಶಿಷ್ಟ ಕಿನಾರೆಯಲ್ಲಿ ಸಿಕ್ಕ ಅಪರೂಪದ ಜೋಡಿಗಳ ನಗು, ಹಾಸ್ಯ, ಬೆರಗು, ಬೇಸರವಿಲ್ಲದ ಅವರ ನಿರ್ಮಲ ಮನ ನನ್ನೆದೆಯ ಆಲ್ಬಂನಲ್ಲಿ ಸದಾ ಜೀವಂತವಾಗಿ ಒಂದು ವಿಶಿಷ್ಟ ಪುಟವಾಗಿ ಸೇರ್ಪಡೆಗೊಂಡಿತು. ಕಡಲು ಕಾಣಲು ಬಂದ ಪ್ರವಾಸಿಗರೆಸೆದ ಕಸವನ್ನೆಲ್ಲಾ ತನ್ನೊಡಲಿನಿಂದ ಕಡಲು ದಡಕ್ಕೆ ಮರಳಿಸಿತ್ತು. ಕಡಲ ಬದುಕು ಕದಡದಂತೆ ಬದುಕಲು ಎಂದು ನಾವು ಕಲಿವೆವೋ? ವಿಧಿ ಲಿಖಿತದ ಅಲೆಯೊಂದು ನಮ್ಮ ಕಾಲಿಗೆ ಸೋಕಿ ಕೇವಲ ನೆನಪನ್ನು ಮಾತ್ರ ಉಳಿಸಿ ಸರ್ವವನೂ ಸ್ವಚ್ಛಗೊಳಿಸಿ ಕಡಲಿಗಿಳಿಯಿತು.




ಶ್ರೀಧರ್‌ ಎಸ್.‌ ಸಿದ್ದಾಪುರ.

Monday, October 2, 2017

ದಾರಿಯಿಲ್ಲದ ದಾರಿಯಲ್ಲಿ......ಅಡಿಗರ ನೆನೆದು.........


ಕಾಡಿನೊಳ ಹೊಕ್ಕು
ಪೊದೆ ಪೊದರು ಗಿಡಗಂಟೆ
ಮುಳ್ಳುಗಳ ನಡುವೆ
ಹೊಚ್ಚ ಹೊಸ ಹಾದಿ ಕಡಿವವರು
ಪದ್ಧತಿಯ ಬಿಟ್ಟು
ಮುದ್ದಾಮು ದಾರಿ ಹುಡುಕುತ್ತಾ
ಅಲೆವವರು, ಬೆಟ್ಟದ ನೆತ್ತಿ ಹತ್ತಿ
ಹತ್ತೂ ಕಡೆ ಕಣ್ಣು ಕಣ್ಣು
ಬಿಡುವಂಥವರು, ಇಂಥವರು
ಅರ್ಥವಾಗುವುದಾದರೂ ಹೇಗೆ?....... ಎಂದು ಗೋಪಾಲಕೃಷ್ಣ ಅಡಿಗರು ತಮ್ಮ ಪದ್ಯದಲ್ಲಿ ಕಥಿಸಿದ್ದಾರೆ. ನಮ್ಮ ಸಾಹಸಕ್ಕೂ ಈ ಪದ್ಯವನ್ನು ಸಾಮ್ಯ ಉಂಟೆದಿಲ್ಲಿ ಟಂಕಿಸಿದೆ.




ನನಗಿನ್ನೂ ಅರ್ಥವಾಗಿಲ್ಲ. ಕಿಸೆಯ ಭಾರ ದೇಹ ಭಾರ ಕಳಕೊಂಡು ಹೊರಡುವ ಈ ಚಾರಣಗಳ ಅರ್ಥ. ಸುಮ್ಮನೆ ಭಾನುವಾರದ ಸಂಜೆ ಉಂಡು ಮಲಗಬಹುದಿತ್ತು. ಕಾಫಿ ಹೀರುತ್ತಾ, ಮಳೆ ನೋಡುತ್ತಾ, ಒಂದೆರಡು ವಾತರ್ಾ ಪತ್ರಿಕೆ ಮಗುಚಿ ಹಾಕಬಹುದಿತ್ತು. ಆದರೆ, ದಾರಿಯಲ್ಲದ ದಾರಿಯಲಿ, ಹನಿ ನೀರಿಗೆ ಪರಿತಪಿಸಿ, ಜಪಿಸಿ, ಮುಳ್ಳು ಕಂಟಿಯ ಗೀರಿಸಿಕೊಳ್ಳುವ ಜರೂರೇನಿತ್ತು? ರಕ್ತ ಹೀರುವ ಇಂಬಳಗಳ ಕಾಟ. ಕಲ್ಲಿಂದ ಕಲ್ಲಿಗೆ ಹಾರುತ್ತಾ ಬೆಟ್ಟವೇರಬೇಕು. ಬೆಟ್ಟವಿಳಿಯಬೇಕು. ಎರಡು ದಿನ ನೋಯುವ ಕಾಲು. ಮುಷ್ಕರ ಹೂಡುವ ಗಂಟುಗಳು. ದಕ್ಕದ್ದು ದಕ್ಕಿಸಿಕೊಳ್ಳುವ ಛಲವೇ? ಗೊತ್ತಿಲ್ಲ. ಅಡಿಗರ ಮತ್ತೊಂದು ಪದ್ಯ ನೆನಪಾಗುತ್ತಿದೆ.
 ಸ್ವಿಚ್ ಎಲ್ಲೋ ಇದೆ ಸಿಕ್ಕುತ್ತಿಲ್ಲ?!








ಜಲಪಾತದೊಂದಿಗೆ ಸೆಲ್ಪಿ...
ಒಂದಲ್ಲ ಎರಡೆರಡು ಸಲ ನೋಡಿ ನಿರಾಶರಾಗಿ ಹಿಂದಿರುಗಿದ ಮೇಲೆ ಛಲ ಬಂದು ಹತ್ತಿ ನೋಡಿದೆವು ಬೆಟ್ಟದಾ ನೆತ್ತಿ. ನಡುವೆ ಸಿಗುವ ಫನರ್್ಗಳು, ಆಕರ್ಿಡ್ಗಳ ಲೆಕ್ಕವಿಟ್ಟವರ್ಯಾರು? ನೆತ್ತಿ ಸುಡದ ಮರಗಳ ನೆರಳು. ಕಲ್ಲುಗಳ ಸಂಧಿನಲ್ಲಿ ಕೋತಿಯಾಟವಾಡಿ ತಲುಪಿದೆವು ಅರೆ ನೆತ್ತಿ. ಅಲ್ಲೇ ಎರಡು ಬೆಟ್ಟಗಳ ನಡುವಲ್ಲಿ ಧುಮುಕುವ ತಿಳಿ ನೀರ ಜಲಧಾರೆ. ಜಟಾಧರನ ಜಟೆಯಿಂದೆಂಬಂತೆ ಉಕ್ಕಿ ಉಕ್ಕಿ ಬರುತಲಿತ್ತು ಮತ್ತೆ ಮತ್ತೆ. ಆಗಾಗ ಮೋಡದ ಪರದೆ. ಕ್ಯಾಮರಕ್ಕೆ ಬರಪೂರ ಊಟ. ಚಕ್ಕಳ ಬಕ್ಕಳ ಹಾಕಿ ಕೂತು ಜಲಧಾರೆ ಎದುರಿಗೆ ಒಂದಿಷ್ಟು ಧ್ಯಾನಿಸಿ, ಉಂಡು, ಮಿಂದು ಹೊರಟೆವು. ರುಚಿ ರುಚಿ ಪತ್ರೊಡೆ ಎಲೆಯನ್ನು ಗೆಳೆಯರು ಆರಿಸಿಕೊಟ್ಟರು. ಮರು ದಿನವೂ ಅದರದೇ ಧ್ಯಾನ.
ಭಾಗವಹಿಸಿದ ಗೆಳೆಯರಿಗೆಲ್ಲಾ ಧನ್ಯವಾದ.


ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...