Sunday, November 6, 2022

ದೂದ್‌ ಸಾಗರ ಒಂದು ಸ್ವಪ್ನ ವಿಲಾಸ

 


ಶ್ರಾವಣದ ಮಳೆ ಇಳೆಗೆ  ಮುತ್ತಿಕ್ಕುವ ಹೊತ್ತು. ಭುವಿಗೆ ಛತ್ರಿ ಹಿಡಿದಂತಿರುವ ಮಂಜನು ಸೀಳುವ ಚುಕ್‌ ಬುಕ್‌ ಬಂಡಿ.  ನೆಲದೊಡಲಿನಿಂದಲೂ ಕಿವಿಯ ಕುಹರ ತುಂಬುವ ಚುಕ್‌ ಬುಕ್‌ ಸದ್ದು. ರೈಲು ದೂದ್‌ ಸಾಗರವೆಂಬ ಅಗಾಧ ಜಲರಾಶಿ ಎಡೆಗೆ ಮಲಗಿದ ನೂರಾರು ಭತ್ತದ ಗದ್ದೆಗಳನ್ನು ಎಬ್ಬಿಸುತ ಸೂರ್ಯನೇಳುವ ಮುನ್ನ ಬೆಳಗಾವಿಯಿಂದ ಹೊರಟಿತ್ತು. ರೈಲು ಲೊಂಡ ಜಂಕ್ಷನ್‌ನಲ್ಲಿ ಟಿಫಿನ್‌ ಮಾಡತೊಡಗಿತ್ತು. ನಾವೂ ಕೂಡ. ಹಿಮ್ಮುಖವಾಗಿ ಎಳಿಯುತ್ತಿದ್ದ ರೈಲು ಮುಂದೆ ಚಲಿಸಲು ತೊಡಗಿತ್ತು.

  ಬೆಳಗಾವಿಯಿಂದ ಬಂಡಿಯ ಜೊತೆಯಲಿ ಸರಿಗಮ…



ಸದಾ ಖಾಸಗೀತನ ಬಯಸುವ ನನ್ನಂತವರಿಗೆ ಹೇಳಿ ಮಾಡಿಸಿದ ಪ್ರಯಾಣ. ದಿವ್ಯ ಏಕಾಂತ. ವೇಗದ ವ್ಯಾಧಿಗಂಟದ ಸಹನ ಶೀಲ ಬಂಡಿ. ಏಕಾಂತದಲಿ ಬೆರೆತ ಪ್ರಕೃತಿ. ಸ್ವಾಗತ ಕಾರರಂತೆ ನಿಂತ ಸಾಲು ಮರಗಳು.  ಹೃದಯದ ಏರಿಳಿತಗಳನು ಸರಿಪಡಿಸಬಲ್ಲ ಅಗಾಧ ಪ್ರಕೃತಿ. ಮನದ ಕಾನನದಿ ಸೈಕ್ಲೊ ಸೈಲ್‌ ಶಬ್ದ ಚುಕ್‌ ಬುಕ್‌, ಚುಕ್‌ ಬುಕ್. ರೈಲೊಳಗೂ ನುಗ್ಗಿ ಎಲ್ಲರನೂ ಒದ್ದೆ ಮಾಡಿ ಮೆತ್ತಗೆ ಮಾಡುವ ಸೂಜಿ ಮಳೆ ಬೆಳಗಿನಿಂದಲೂ ಜೋಗುಳ ಹಾಡುತ್ತಿತ್ತು. ಪ್ರಕೃತಿ ಆನಂದ ಮಯ ಈ ಜಗ ಹೃದಯ ಎನ್ನುವ ಗೀತೆಯನು ಹಾಡುತ್ತಿರುವಂತಹ ಅನುಭೂತಿ. ಎಲ್ಲೆಲ್ಲೂ ನೀರ ಸಂಗೀತ. ಮಂಜಿನ ತಂಪಾದ ರಗ್‌ ಹೊದ್ದ ಪ್ರಕೃತಿ ಅತಿ ರಮ್ಯ. ದಿವ್ಯ ಏಕಾಂತ.



ಇಲ್ಲಿನ ಗುಡ್ಡದ ತುಂಬಾ ನೆಕ್ಲೆಸ್‌ ನಡುವಿನ ಹವಳದಂತೆ ಹರವಿನಿಂತ ಹೂಗಳು. ನನ್ನ ಕಂಡು ಕ್ರೀಮು ಬಳಿದುಕೊಂಡತಿರುವ  ಗುಡ್ಡಗಳು ಹಲ್ಕಿರಿದು ನಕ್ಕವು. ಗುಡ್ಡದ ತುಂಬಾ ನೀರ ಹನಿಗಳು ಸಂಪಿಗೆ ಮೂಗಿನ ಸುಂದರಿ ಮುತ್ತಿನ ಹಾರ ತೊಟ್ಟಂತೆ ತೊಟ್ಟಿಕ್ಕುತಲಿದೆ. ಮನಸ್ಸಿನ ಏಕಾಂತಕ್ಕೆ ಸಾತ್‌ ನೀಡುವ ರೈಲಿನ ಚುಕ್‌ ಬುಕ್‌ ಚುಕ್‌ ಬುಕ್.‌ ಗುಡ್ಡಗಾಡಿಗೆ ತೊಂದರೆ ಕೊಡ ಬಾರದೆಂದು ಸೂರ್ಯ ರಜೆ ಮೇಲಿದ್ದ. ಇಲ್ಲಿನ ಪ್ರತೀ ಸುರಂಗವೂ ಹೆಬ್ಬಾವಿನ ಹೊಟ್ಟೆ ಹೊಕ್ಕು ಬಂದಂತಹ ಅನುಭವ. 



ಕಾತರಕ್ಕೊಂದು ಕಾವ್ಯ ತೆರೆ…



ಹಳ್ಳ ಕೊಳ್ಳ ಹಾದು ಜಲಪಾತದ ಸನಿಹಕೇ ಬಂದಿದೆ ಬಂಡಿ. ರೈಲಿನೊಳಗಿರುವವರ ಎದೆಯಲಿ ವಿದ್ಯುತ್‌ ಸಂಚಾರ. ಈ ಅಗಾಧ ಜಲರಾಶಿಯನ್ನು ಕಣ್‌ ತುಂಬಿಕೊಳ್ಳುವ ತವಕ ಪ್ರತಿಯೊಬ್ಬರಲ್ಲೂ. ಜಲರಾಶಿ, ರೈಲು, ಹೃದಯದ ಶಬ್ದಗಳ ಕಲಸು ಮೇಲೊಗರ. ಕಣ್ಣಿಗೆ ಸುಗ್ಗಿ. ಮನಸ್ಸಿಗೆ ಸಿಹಿ ಹುಗ್ಗಿ. ಮಂಜಿನ ರಗ್ಗಿನಿಂದ ಧುಮ್ಮಿಕ್ಕುವಂತೆ ಧುಮ್ಮಿಕ್ಕುತ್ತಿದೆ ಹಾಲ್ನೊರೆ!  ಅಬ್ಬಾ ಎಂತಹ ಸುಮನೋಹರ ದೃಶ್ಯ. ಒಂಟಿ ಮರವೊಂದು ಕಾಲಾತೀತ ಆನಂದದಲಿ ಜಲಪಾತದ ನಡುವಿನಲಿ ರಕ್ಷಕನಂತೆ ಸಂಭ್ರಮದಿ ನಿಂತೇ ಇದೆ. ಎಳೆಯ ಎದೆಗಳಿಂದ ವಾವ್‌ ಎಂಬ ಚೀತ್ಕಾರ. ಕೆಲವರು ಮೂಕವಿಸ್ಮಿತ. ರೈಲಿನಲ್ಲಿರುವ ಪ್ರತಿಯೊಬ್ಬರಲ್ಲೂ ವಿದ್ಯುತ್‌ ಸಂಚಾರ. ಇಣುಕಿ ನೋಡಿದಷ್ಟೂ ಮುಗಿಯದ ತವಕ. ಎಲ್ಲವೂ ವಿಸ್ಮಯವಿಲ್ಲಿ. ನೋಟಕನ ದೃಷ್ಟಿ ಗಮ್ಯವಾದುದಿಲ್ಲಿ ಎಲ್ಲವೂ ಅತಿ ರಮ್ಯ… ನಾನಿಂತ ಬಾಗಿಲ ತುದಿಗೊಬ್ಬಳು ಮುದುಕಿ ಪದೇ ಪದೇ ಬಂದು ಓಡೋಡಿ ಬಂದು ಪ್ರಕೃತಿಯ ರಮಣೀಯತೆ  ಸವಿದು ಹೋಗುತ್ತಿದ್ದಳು. ಅವಳ ಉತ್ಸಾಹ ಕಂಡು ಬೆರಗಾದೆ.

ಚಾರಣಿಗರ ಸಂತೆಯಲಿ ಬೆರಗಾಗಿ…




ಎಲ್ಲೆಲ್ಲೋ ಜಿನುಗಿದ ಹನಿಯೊಂದು ನದಿ  ಸೇರುವಂತೆ ಸೇರುವ ಚಾರಣಿಗರ ಹಿಂಡು. ಹೃದಯದ ಕವಾಟ ತೆರೆವ ನೋಟ. ಎಲ್ಲಾ ವೈಯಕ್ತಿಕ ಸುಖ ದುಃಖ ಕರಗುವ ಏಕೈಕ ಪ್ಲಾಟ್‌ ಪಾರಂ. ದುಃಖಗಳೆಲ್ಲಾ ಕರಗಿ ನೀರು ಕೆಂಪಾಗಿ ಹರಿಯುತ್ತಿರುವುದೋ ಎಂಬಂತೆ ಭಾಸ. ಮೈ ಕೈಗಳಲೆಲ್ಲಾ ನೀರ ಕಾರು ಬಾರು. ಅದ್ರಿಯ ತುದಿಯಲ್ಲಿ ಬೋರ್ಗರೆಯುತಾ ನಡುವಿನಲಿ ನಯವಾಗಿ ನುಗ್ಗುವ ದೂದ್‌ ಸಾಗರದ ರಮ್ಯತೆ ಅಪಾರ. 



ರ್ಭಾವುಕವಾಗಿ ಚಲಿಸುವ ರೈಲು ಮಳೆಯ, ಮಂಜಿನ ಚಾದರಕ್ಕೆ ಮೆತ್ತಗಾಗಿದೆ. ಜಾರದಂತೆ ಜಾಗರೂಕವಾಗಿ ಚಲಿಸುತ್ತಿದೆ. ನಿರ್ಭಾವುಕ ಕಣ್ಣುಳ್ಳ ತಮ್ಮ ತುತ್ತಿನ ಬುತ್ತಿ ಅರಸಿ ಹೊರಟ ಅರಸಿಕರು ಹೊರಗೆ ಇಣುಕದೆ ಸುಮ್ಮನಿದ್ದರು! ಅವರನ್ನೆಲ್ಲಾ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತೆ ಬೆಟ್ಟಗುಂಟ ಪ್ರಯಾಣ ಹೊರಟ ಬಂಡಿ.  ಮನಸ್ಸು ಸುರಿವ ಮಳೆಗೆ ಜಲಪಾತದ ಅಬ್ಬರಕ್ಕೆ ತೊಯ್ದು ತೊಪ್ಪೆಯಾಗಿತ್ತು.

ರೈಲ್ವೆಯ ವಿಕ್ರಮ-

ರೈಲ್ವೆ ಇಲಾಖೆ ಇಂತಹ ದುರ್ಗಮ ದಾರಿಯಲ್ಲೂ ಅತ್ಯಂತ ಸುರಕ್ಷಿತವಾದ ಹಾದಿ ನಿರ್ಮಿಸಿದ ಕತೆ ಇನ್ನೂ ರೋಚಕ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ದಾರಿ ಮಾಡುವುದು ಅಪಾರ ಪರಿಶ್ರಮದ ಕೆಲಸ. ಜೊತೆಗೆ ಇಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ಎದುರಿಸಿ ಕೆಲಸ ಮಾಡುವುದು ಅಸಾಧ್ಯ ದುಸ್ಸಾಹಸದ ಕೆಲಸ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟಗಳ ಒಡಲಿನೊಳಗೆ  ಕೊರೆದ ಹಾದಿಯ ರೋಚಕತೆ ನೆನಪಿಗೆ ಬಂದು ಪುಳಕಗೊಂಡಿತು ಮನ. 

ರೈಲು ಬಲಕ್ಕೆ ಹೊರಳಿ ಆ ಮಹಾ ರುದ್ರ ರಮಣಿಯತೆಯ ದೃಶ್ಯವನ್ನು ನಮಗೆಲ್ಲಾ ಉಣಬಡಿಸಿ ಸೋನಾಲಿಮ್‌ ಸ್ಟೇಷನ್‌ನಲ್ಲಿ ನಿಶ್ಚಲವಾಯಿತು. ಈ ಅಮೋಘ ಜಲೌಗಕ್ಕೆ ಮನಸೋತ ಗೆಳೆಯ ಮಧ್ಯ ರೈಲಿನಿಂದ ಜಿಗಿಯಲು ತಯಾರಾಗಿದ್ದ. ಅವನನ್ನು ತಡೆದೆ. ಸೋನಾಲಿಮ್‌ ಬರುತ್ತಲೇ ರೈಲಿನಿಂದ ಜಿಗಿದು ಜಲಪಾತದತ್ತ ಹೊರಟೆವು. ಪಾಕಿಸ್ಥಾನದ ಉಗ್ರಗಾಮಿಗಳನ್ನು ಕಂಡವರಂತೆ ಅಲ್ಲೇ ನಿಂತಿದ್ದ ಪೋಲಿಸರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ಏನೋ ಕದ್ದವರಂತೆ ಓಡುತ್ತಾಬಂದು ರೈಲು ಹತ್ತಿದೆವು.

ಲಾಠಿ ಬೀಸುತ್ತಲೇ ಕರಗಿದ ನಮ್ಮ ಅಹಂಕಾರ ನೀರಿನೊಂದಿಗೆ ಸೇರಿ ಧುಮ್ಮಿಕ್ಕುತ್ತಲೇ ಇದೆ. ನೀರೂ ತನ್ನ ಬಣ್ಣ ಬದಲಿಸಿದೆ.  ಎಷ್ಟು ಸುರಿದರೂ ತಣಿಯದ ಹಾಲ್ನೋರೆ ಯಾರ ಕರುಣೆಗಾಗಿ ಕಾಯುತಿದೆಯೋ? ಜಲಪಾತ್ರೆಯ ಕೆಳಗೆ ತಿನ್ನಲು ಬಚ್ಚಿಟ್ಟ ಎರಡು ವಡಾಪಾವ್‌ ಪೋಲಿಸರನ್ನು ಕಂಡಾಗಲೇ ಹಣಕಿ ಹಾಕಿ ನಗತೊಡಗಿತು.

ಸೊನಾಲಿಮ್‌ನಿಂದ ಜಲಪಾತ ಹತ್ತು ಹಾಡಿನ ದೂರ. ಕೆಲವರ ಕಣ್ಣಾಲಿಗಳಲಿ ಮತ್ತೆ ಜಲಪಾತ ದರ್ಶನ. ನಿರಾಶೆ ಕರಗುವ ಬಿಂದು ಹುಡುಕುತ್ತಾ ನಿಂತೆ. ಕೆಲವರು ಇಷ್ಟಾದರೂ ನೋಡಲು ಸಿಕ್ಕಿತ್ತಲ್ಲ ಎಂದು ಖುಷಿ ಪಟ್ಟರು. ಎರಡು ಭಿನ್ನ ದ್ರುವಗಳು. ಸನಿಹಕ್ಕೆ ಹೋಗಿ ನೋಡದಷ್ಟು ಕಡಕ್‌ ಖಾಕಿ. ಇಂತಹ ಅತಿ ರಮ್ಯ ಜಲಪಾತಕ್ಕೆ ಬೇಲಿ ಹಾಕಿದ್ದು ಬೇಸರ ತರಿಸಿತು. ಇದ್ಯಾವುದನ್ನೂ ಲೆಕ್ಕಿಸದೇ ಹೋದವರು ಪೋಲಿಸರ ಅತಿಥಿಯಾದರು. ಡಕ್‌ ವಾಕ್‌  ಮಾಡಿಸಿಕೊಂಡು ಜಲಪಾತದಿಂದ ಕುಲೆಮ್‌ ರೈಲ್ವೆ ಸ್ಟೇಷನ್‌ ವರೆಗೆ ಎಂಟು ಕಿ.ಮೀ ವರೆಗೆ ಪಾದ ಸೇವೆಗೈದರು. ಬಂದವರೆ ಕುಲೆಮ್‌ ಸ್ಟೇಷನ್‌ ನ ಬಣ್ಣದೊಂದಿಗೆ ಒಂದಾಗಿ ನಿದ್ರಾ ದೇವಿಗೆ ಶರಣಾದರು. ತಮ್ಮ ತಮ್ಮ ರೈಲಿಗಾಗಿ ಕಾಯುತ್ತಾ ಕುಲೆಮ್‌ ನಲ್ಲಿ ಕರಗತೊಡಗಿದರು. ಇವರನ್ನೆಲ್ಲಾ ಮಳೆ ತನ್ನ ಜೋಗುಳದಲ್ಲಿ ಜೀಕತೊಡಗಿತು. 

ಬೀಳುವಾಗಲೂ ಘನತೆ ಉಳಿಸಿಕೊಳ್ಳುವುದು ಜಲಪಾತವೊಂದೇ ಇರಬೇಕು. ಬಿದ್ದಾಗಲೇ ಘನತೆ. ಇದ್ದಲ್ಲೇ ಇದ್ದರೆ ಘನತೆ ಎಲ್ಲಿ? ಬೀಳುವಾಗಲೂ ಘನತೆ ಉಳಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾ ಗಾಂಭೀರ್ಯದಿಂದಲೇ ಧುಮುಕುತ್ತಲೇ ಇದೆ.

ಎಷ್ಟೊಂದು ಬೆಸೆದ ಜೀವಗಳನ್ನು ಕಂಡಿತೋ ಅದು. ಮತ್ತೆ ಮತ್ತೆ ಇವರೆಲ್ಲರ ಬೆಸುಗೆ ಕಾಣಲು ಧುಮುಕುತ್ತಲೇ ಇದೆ.  ವಡಾಪಾವ್‌ ಮಾರುವವನಿಗೆ ನಾಲ್ಕು ಕಾಸು ಆಗುವುದು ಇಲ್ಲೇ. ಜಲಪಾತ ಬಿದ್ದಾಗಲೇ ಅವನ ಜೀವನದ ಬುತ್ತಿ ಕಟ್ಟಿಕೊಳ್ಳುವುದು. ಜಲಪಾತದಂತೆ ಇವನಿಗೂ ಬಹಳ ಅವಸರ. ಅವನ ಮನೆಯಲ್ಲಿ ಯಾರಿದ್ದಾರೋ ಕಾಯುವವರು.

ಬನ್ರಿ ಮತ್ತೆ-

ಬದುಕಿನ ದುಃಖ ದುಮ್ಮಾನ ಏಕತಾನದ ತಂತಿ ಮುರಿಯಲು ಇಂತಹ ರೋಚಕ ಹಾದಿಯನ್ನೊಮ್ಮೆ ತುಳಿದು ನೋಡಿ. ಜೀವಮಾನಕ್ಕಾಗುವಷ್ಟು ಅನುಭವದ ಬುತ್ತಿ ನಿಮ್ಮ ಜೊತೆ! 

ನಿಶ್ಚಲವಾದ ಸನ್ಯಾಸಿಯಂತಹ ಕನಸಿನ ಕುಲೆಮ್‌ನಲ್ಲಿ ಸಿಕ್ಕ ಬಿಸಿ ಬಿಸಿ ಊಟ ಹೊಸ ಚೈತನ್ಯ ಜಗತ್ತಿಗೆ ಕಾಲಿಡುವಂತೆ ಮಾಡಿತು. 



ಕ್ಷಮಿಸಲಾರೆಯ ಧರೆಯೆ –

ಪ್ರಕೃತಿಯ ಋಣಭಾರ ನನ್ನೆದೆಯಲಿ ಹಾಗೇ ಉಳಿಯಿತು. ತೀರಿಸುವ ಹೊಣೆಗಾರಿಕೆಯೊಂದಿಗೆ ಹಿಂದಿರುಗಿದೆ. ಆದರೆ ನೀರ ಸೆರಗಿನಲಿ ಉಳಿದ ನನ್ನಣ್ಣಂದಿರು ಎಸೆದ ಪ್ಲಾಸ್ಟಿಕ್‌ ಇನ್ನೂ ಅಣಕಿಸುತ್ತಲೇ ಸಮುದ್ರ ಸೇರುವ ತವಕದಲ್ಲಿದೆ.

ಕುಲೆಮ್‌ ರೈಲು ನಿಲ್ದಾಣ ಮತ್ತು  ಜಲಪಾತಕ್ಕೆ ಮಿಸ್‌ಯು ಎಂದೆನ್ನುತ್ತಾ ಮತ್ತೆ ಬರುವ ಬರವಸೆಯನ್ನಿತ್ತು ಬಾಯ್‌ ಬಾಯ್ ಹೇಳಿ ಹೊರಟು ನಿಂತೆವು.


ಶ್ರೀಧರ್‌ ಎಸ್.‌ ಸಿದ್ದಾಪುರ. 

Wednesday, May 4, 2022

ನೆನಪುಗಳನ್ನು ನೇಣಿಗೇರಿಸಬೇಕು...

ಹಮಾರ ಬಜಾಜ್‌-




    ನೆನಪುಗಳನ್ನು ನೇಣಿಗೇರಿಸಬೇಕೆಂದು ಹೊರಟವನಿಗೆ ಸಿಕ್ಕ ಹಳೆ ಹೊತ್ತಗೆಯ ನೆನಪುಗಳು ಕಾಡುತಲಿವೆ. ಬೇಡವೆಂದರೂ ಕಹಿಯೇ ಉಳಿದ ಕಾಫಿ ಚರಟದಂತೆ ನೆನಪುಗಳು ಕಾಡುತಲಿವೆ. ಕುಡಿದ ಕಹಿ -ಸಿಹಿ ಕಾಫಿಯ ನೆನಪು ಮಾಸಿದಂತೆ ಕುಣಿಯುತ್ತೆ ಮನಸ್ಸು. ಮತ್ತೇನಕ್ಕೋ ಧ್ಯಾನಿಸುತ್ತೆ ಮನಸ್ಸು. ಮೂಲೆಯಲಿ ಮಲಗಿದ್ದ ಸಣ್ಣ ವೃಣವೊಂದನು ಕೆದಕಿ ಕೆದಕಿ ಮಹಾ ವೃಣವಾಗುವಂತೆ ರಾಡಿ ಎಬ್ಬಿಸುತ್ತೆ.




ನೆನಪುಗಳು, ನೆನಪುಗಳ ಶವ ಪೆಟ್ಟಿಗೆಯಿಂದ ಹೊರ ಬರಲಾರದಂತೆ ಮೊಳೆ ಜಡಿಯಬೇಕು ಬಿಡಿಸಿಕೊಳ್ಳಲಾರದಂತೆ, ಆಗುತ್ತಿಲ್ಲ. ಅದು ಕಾಡಿದಂತೆ ಮತ್ಯಾವುದೂ ಕಾಡವುದಿಲ್ಲ. ಸುಡುವ ಬೆಳದಿಂಗಳು. ನೆನಪಿಗೆ ವಾರಸುದಾರನಿಲ್ಲ. ಹೊರ ಹಾಕಿದರೂ ಹಾಕದೇ ಇದ್ದರೂ ನೆನಪುಗಳು ಒಮ್ಮೊಮ್ಮೆ ಮೆರವಣಿಗೆ ಹೊರಡುತ್ತವೆ. ತಟ್ಟುತ್ತವೆ. ದಿಗ್ಗನೇಳುತ್ತವೆ ಮುಂಗಾರಿನ ಮೋಡದಂತೆ. ಕಾಡುವ ಅನಂತ ಪ್ರಲೋಭನೆಗಳೂ ಇದರ ಎದುರು ಮಂಡಿಯೂರಲೇ ಬೇಕು ಜೋಗಿಯಂತೆ. ಅಕ್ಷರವೇ ಅಳಿಯುತ್ತವೆ ಇನ್ನೆಲ್ಲಿಯ ನೆನಪುಗಳು ಎಂಬ ಸಿನಿಕ ವಾಕ್ಯವೂ ಕ್ಷಣಿಕ. ಮತ್ತೆ ತೆರೆಯಂತೆ ದಡಕ್ಕೆ ಬಡಿಯುತ್ತವೆ. 


ಇಂತಹ ನೆನಪುಗಳ ನೊರೆ ಉಕ್ಕಿಸುವ ಕತೆಗಳ ಗುಚ್ಚ ನನ್ನೆದುರಿಗಿದೆ. ಎಲ್ಲಾ ಕತೆಯ ಹೆಣಿಗೆಯೂ ವಿಶಿಷ್ಟವಾದ ಪ್ಲಾಟ್‌ ಫಾರಂನಲ್ಲಿ ಕಟ್ಟಿರುವಂತಹ ನಿರ್ಮಿತಿ. ಎಲ್ಲೆಲ್ಲೂ ನೆನಪುಗಳದ್ದೇ ಮುಖ್ಯ ಭೂಮಿಕೆ.

ನೀವಾದರೂ ಓದಿ ಕತೆಗಳ ಸಿಕ್ಕನ್ನೂ ಬಿಡಿಸಿಕೊಳ್ಳಿ. ಒಂದೊಂದು ಕತೆಗಳು ತೆರೆಗಳಂತೆ ನನ್ನನ್ನು ಮತ್ತೆ ಮತ್ತೆ ತಟ್ಟುತ್ತಲೇ ಇವೆ. ನಿಮಗೂ ತಟ್ಟಿದರೆ ಹೇಳಿ. ತಕರಾರಿದ್ದರೂ.

 

ಯಾವ ಉಡುಗೊರೆ ಕೊಡಲಿ-

ಭಟ್ಟರ ಸಿನೆಮಾ ನೆನಪು ಮಾಡಿಕೊಡುವಂತಹ ವಿಶಿಷ್ಟ ಕತೆ ಯಾವ ಉಡುಗೊರೆ ಕೊಡಲಿ. ಕತೆಯ ಎಳೆ ವಿಧಾಯದಲಿ ಮಡುಗಟ್ಟುವ ವಿಶಾದ. ವಿಶಾಧವೇ ಕತಾ ನಾಯಕನೊ ಎಂಬಂತೆ ಭಾಸವಾಗುತ್ತದೆ. ಅದಮ್ಯವಾಗಿ ಪ್ರೇಮಿಸುವ ಗಂಡು ಹೆಣ್ಣು ವಿಧಾಯವನ್ನೇ ಅತ್ಯಂತ ರೋಚಕವಾಗಿ ವಿಧಾಯದ ಬಿಸಿ ಓದುಗನಿಗೂ ತಟ್ಟುವಂತೆ ವರ್ಣಿಸುತ್ತಾ ಕತೆಗಾರ ಕತೆಯಲ್ಲಿ ಸಾಧಿಸುವ ತಾಧ್ಯಾತ್ಮ ಅಪೂರ್ವವಾದುದು. ಎಲ್ಲಿಯೂ ಒಂದೇ ಒಂದು ವಾಕ್ಯವೂ ಭಾರವಾಗದಂತೆ ವಿಧಾಯದ ಕಹಿಯೇ ಹೃದಯ ತುಂಬುವಂತಹ ಮ್ಯಾಜಿಕ್ ಕತೆಯುದ್ದಕ್ಕೂ ಸಾಧ್ಯವಾಗಿಸಿದ್ದು ಕನ್ನಡದ ಕತೆಗಳ ಮಟ್ಟಿಗೆ ವಿಶೇಷ.‌ ಎರಡು ಹೃದಯಗಳ ತೊಳಲಾಟವನ್ನು, ಅವರು ಜೊತೆಯಾಗುವರಾ ಇಲ್ಲವಾ ಒಂದೂ ಗೊತ್ತಾಗದಂತೆ ಮುಕ್ತ ಅಂತ್ಯ ಕಾಣುವ ವಿಶಿಷ್ಟ ಕತೆ.

ಜೆಜೆ ಬಂದಿದ್ದ –

            ಇಬ್ಬರು ಗೆಳೆಯರ ನಡುವೆ ನಡೆವ ಆಪ್ತ ಮಾತುಕತೆಯಂತೆ ಕಂಡರೂ ಇಲ್ಲೊಂದು ವಿಶೇಷತೆ ಇದೆ. ಮಾನವ ಸಂಬಂಧಗಳ ನಡುವೆ ಗುಪ್ತವಾಗಿ ಹರಿಯುವ ಹೊಟ್ಟೆ ಕಿಚ್ಚು ಕತೆಯುದ್ದಕ್ಕೂ ಹರಿದು ಅದೇ ಕತಾ ನಾಯಕನಿರಬೇಕೆಂಬ ಗುಮಾನಿ ನಮಗೆ ಹುಟ್ಟಿಸುತ್ತದೆ. ಪ್ರೀತಿಸಿದ  ಹುಡುಗಿಯನ್ನು ಬಿಟ್ಟುಕೊಟ್ಟ ನೆನಪುಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಈ ಕತೆಯ ಪ್ರಧಾನ ಭೂಮಿಕೆಯು ನೆನಪೇ.  ಹೆಚ್ಚು ಕಡಿಮೆ ಮೇಲ್ಮೆಗಳ ತಾಕಲಾಟಗಳು ಕತೆಯ ನೇಯ್ಗೆಯಲ್ಲಿ ಸೇರಿಸಿ ಅತ್ಯಂತ ಸುಶಿಕ್ಷಿತರೂ ಈ ಮೇಲ್ಮೆಗಳ ಹೊಡೆದಾಟದಲ್ಲಿ ಭಾಗಿದಾರರು ಎಂಬ ಅಚ್ಚರಿಯು ಟಿಸಿಲೊಡೆಯುತ್ತದೆ. ಜೆಜೆಯ ವಿಶಿಷ್ಟ ವಿಕ್ಷಿಪ್ತ ವ್ಯಕ್ತಿತ್ವದ ಹೊರತಾಗಿಯೂ ಅದು ನಮಗೆ ಕಾಡುತ್ತದೆ.

ಹಮಾರ ಬಜಾರ್‌-

ಹಿಮ್ಮುಖವಾಗಿ  ಚಲಿಸುವ ತಂದೆಯ ನೆನಪಿನ ವಿಶಿಷ್ಟ ನೀಳ್ಗತೆ  ʼ ಹಮಾರ ಬಜಾಜ್‌ʼ. ಡೈರಿಯ ಪುಟಗಳಿಂದ ಹಿಮ್ಮುಖವಾಗಿ ಶುರುವಾಗಿ ಅಂತ್ಯದಲ್ಲಿ ಮುಂದೆ ಚಲಿಸುತ್ತಾ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತದೆ.

ತಂದೆಯ ನೆನಪಿನಿಂದ ಹೊರ ಬರಲಾರದ ಮಗ ತನಗೆ ತಾನು ಬರೆದುಕೊಂಡ ಸ್ವಗತದ ಕಿಂಡಿಯಂತೆ ಕೆಲವೊಮ್ಮೆ ಭಾಸ ಆಗುವುದು. ನೆನಪೆಂಬ ಗಾಳಿ ಪಟ ಮನದ ತುಂಬಾ ಹಾರಾಡುವಂತೆ ಮಾಡಿ ವಿಶಿಷ್ಟವಾಗಿಸಿದ್ದಾರೆ ವಿಕ್ರಂ.

ಬಜಾಜ್‌ ಸ್ಕೂಟರ ಅವರ ನೆನಪಿನ ಅಥವಾ ಅವರದ್ದೇ ಒಂದು ಭಾಗವೇನೋ ಅನ್ನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾರೆ. ಸಾವಿನಿಂದ ಮೊದಲ್ಗೊಂಡು ವಿಚಿತ್ರ ಸನ್ನಿವೇಶಗಳನ್ನು ವಿರಚಿಸುತ್ತಾ ಅವರ ಬದುಕಿನ ವಿವರಗಳನ್ನು ಡೈರಿಯ ಪುಟಗಳ ಮೂಲಕ ಮರಳಿಸುವ ಪ್ರಯತ್ನ. ಗಾಢ ವಿಶಾದದಲಿ ಅದ್ದಿ ತೆಗೆದ ಚಿತ್ರದಂತೆ ಚಿತ್ತದಲಿ ಉಳಿದು ಹೋಗುತ್ತದೆ. ತಂದೆಯ ಬದುಕಿನೊಂದಿಗೆ ಆಪ್ತವಾಗಿ ತಳುಕು ಹಾಕಿ ಕೊಂಡವರನ್ನೆಲ್ಲಾ ಇಲ್ಲಿ ಮತ್ತೊಮ್ಮೆ ಜೀವಂತಿಸಿದ್ದಾರೆ. ತಂದೆಯ ಗೆಳೆಯರಾದ ಪೆಜತ್ತಾಯರು, ಉಡುಪರನ್ನು ಪುನಃ ಬದುಕಿಸಿ ಆಪ್ತವಾಗಿಸಿದ್ದಾರೆ.

ಯಾರನ್ನೇ ಆಗಲಿ ನಾವು ಪ್ರಯತ್ನ ಪೂರ್ವಕ ನೆನಪು ಮಾಡಿಕೊಳ್ಳಬೇಕೊ ಅಥವಾ ಅದಾಗಿಯೇ ನೆನಪುಗಳು ತೆರೆಗಳಂತೆ ಮನ ಪಟಲದಲಿ ಆವರಿಸುವುದೋ ಎಂಬ ಗುಮಾನಿ ನನಗೆ ಕಾಡುವುದು.

ತೀವ್ರ ವಿಶಾದಕ್ಕೂ ಎಳಸದೇ ಕತೆ ಸತ್ವಯುತವಾಗಿ ಅಂತ್ಯ ಕಾಣುವುದು ಕತೆಯ ಮಗದೊಂದು ವಿಶೇಷತೆ.



Monday, March 21, 2022

ಬೇಟೆ ಹಕ್ಕಿಯ ಬೆನ್ನಟ್ಟಿ!

ಶಿಖ್ರಾ

    ಹಲವು ವರುಷಗಳ ಹಿಂದೆ ಪಕ್ಷಿ ಛಾಯಾಗ್ರಹಣದ ಬೆನ್ನು ಹತ್ತಿದ ಸಮಯ. ಕಾಗೆ ಗಾತ್ರದ ಹಕ್ಕಿಯೊಂದು ನೀಲಾಕಾಶದಲಿ ನಿರುಕಿಸುತ್ತಾ ವೃತ್ತಾಕಾರದ ಸುತ್ತು ಬರುತಲಿತ್ತು. ಎಷ್ಟು ಹೊತ್ತು ಕಾದರೂ ಕೆಳಗಿಳಿಯುತ್ತಿರಲಿಲ್ಲ. 
    ಯಾಕೆ ಇದು ಹೀಗೆ ವೃತ್ತಾಕಾರವಾಗಿ ಸುತ್ತುತ್ತಿದೆ. ಯಾವುದಾದರೂ ಹರಕೆ ಉಂಟಾ ಎಂದು ತಲೆ ಕೆರೆದುಕೊಳ್ಳತೊಡಗಿದೆ. ತಿಳಿಯಲೇ ಇಲ್ಲ. 

ಈ ಹಕ್ಕಿ ಹೇಗಿದೆ? ಯಾವ ಪಂಗಡಕ್ಕೆ ಸೇರಿದುದು ಎಂದು ತಿಳಿವ ಕುತೂಹಲ ತೀವ್ರವಾಗಿತ್ತು. ಆಗ ನನ್ನ ಬಳಿ ಉತ್ತಮ ದರ್ಜೆಯ ಕ್ಯಾಮರವೂ ಇರಲಿಲ್ಲ. ಅದರ ಮಿತಿಯನು ಮೀರಿ ಆ ಹಕ್ಕಿಯ ವಿವರಗಳನ್ನು ಹೆಕ್ಕಲು ಯತ್ನಿಸಿದ್ದೆ. ಸಾಧ್ಯವಾಗಲೇ ಇಲ್ಲ. ವಿಫಲತೆಯೇ ಬೆನ್ನು ಹತ್ತಿದ ವರ್ಷಗಳು ಅವು. ಮತ್ತೆ ಮತ್ತೆ ಮುಗಿಲಿಗೆ ಹಾರಿ ನೆಲದ ನೋಟಗಳನ್ನು ತನ್ನ ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ನನ್ನ ನಿದ್ದೆಕೆಡಿಸುತಲಿತ್ತು. ಹೀಗೆ ಕೆಲ ವರುಷ ಅದರ ಗುಂಗಿನಲ್ಲೇ ಕಳೆದೆ. ಅಲ್ಲದೇ ಅದರ ವಿಚಿತ್ರ ಕೂಗಿನಿಂದ ನಮ್ಮ ಮನೆಯ ಸನಿಹದವರೆಲ್ಲಾ ಅದರ ಕೂಗು ಅಪಶಕುನವೆಂದು ಹೇಳುತ್ತಿದುದು ನನ್ನ ನಿದ್ದೆ ಕೆಡಿಸಿತ್ತು. ತನ್ನ ಒಡಲ ದನಿ ನಮಗೆ ಅಪಶಕುನವಾಗುವುದು ಹೇಗೆಂದು ತಿಳಿಯದೆ, ಅವರಿಗೆ ಪ್ರಶ್ನೆಗಳ ಸರ ತೊಡಿಸಿ ʼಫಟಿಂಗʼ ಎಂಬ ಬಿರುದನ್ನೂ ಸಂಪಾದಿಸಿದ್ದೆ. ಈ ಹಕ್ಕಿಯ ಚಿತ್ರಕ್ಕಾಗಿ ಹತ್ತಾರು ಗಂಟೆಗಳ ವ್ಯಯಿಸಿದಿದೆ. ಒಂದು ಚಿತ್ರಕ್ಕಾಗಿ ಹಲವಾರು ಕಿಲೋ ಮೀಟರ್‌ ಪಯಣಿಸಿದ್ದೆ. ಕೆಲವರುಷದ ಬಳಿಕ ದೊಡ್ಡ ಲೆನ್ಸ್‌ ಸಿಕ್ಕ ಮೇಲೆ ಅದರ ಜಾತಕದ ಒಂದೊಂದೇ ವಿವರಗಳು ಲಭ್ಯವಾದವು. ಇಂತಿಪ್ಪ ಅದರ ವಿವರಗಳು ಈ ಕೆಳಗಿನಂತಿವೆ. 

ಸೂಕ್ಷ್ಮ ದೃಷ್ಟಿ ಪಾದರಸದ ಚುರುಕು ವ್ಯಕ್ತಿತ್ವದ ಜಾಣ ಬೇಟೆಗಾರ ಈ ಹಕ್ಕಿ. ಕಾಲು, ಕೊಕ್ಕು ಎಲ್ಲವೂ ಹದ್ದಿನಂತೆ! ದೇಹ ಚಿಕ್ಕದು. ಸುಮಾರು ಕಾಗೆ ಗಾತ್ರ. ಹೆಸರು ಶಿಖ್ರಾ .  ಹೊಟ್ಟೆ ಮತ್ತು ಗರಿಗಳು ಬಿಳಿ ಬಣ್ಣ. ತನ್ನ ದೃಷ್ಟಿ ಗಮ್ಯವಾದ ಎಲ್ಲವನ್ನೂ ಬಕಾಸುರನಂತೆ ಕಬಳಿಸುತ್ತದೆ.  ಒಂದೆರಡು ಬಾರಿ ಇದರ ಅದ್ಭುತ ಬೇಟೆಯನ್ನು ಕಣ್ಣಾರೆ ಕಂಡು ಧನ್ಯನಾಗಿದ್ದೆ. ಆದರೆ ಚಿತ್ರ ಮಾತ್ರ ಮರೀಚಿಕೆಯಾಗುಳಿಯಿತು. 

ಚೈತ್ರ ಮಾಸದ ಏರು ಹೊತ್ತು ಸೂರ್ಯ ಇಬ್ಬನಿಗೆ ಮುತ್ತಿಕ್ಕಿ ಮೇಲೇರುವಾಗಲೇ ದೊಡ್ಡದೊಂದು ಲೆನ್ಸ್ ಹಿಡಿದು ವಾರಾಹಿ ತಟದ ಝರಿಯೊಂದರ ಸನಿಹ ಹೈಡ್‌ ರಚಿಸಿ ನಿಂತಿದ್ದೆ. ಝರಿಯ ಸನಿಹದಿಂದ ಏನೋ  ನೆತ್ತಿಯ ಮೇಲಿಂದ ಕೇತಾನ್‌ ಫ್ಯಾನ್‌ ಗಾಳಿ ಬೀಸಿದಂತೆ ಗಾಳಿ ಬೀಸಿತು. ನನ್ನ ಹೈಡ್‌ನ ಕೇವಲ ೫ ಮೀಟರ್‌ ಅಂತರದಲ್ಲೇ ತನ್ನ ಬೇಟೆಯೊಂದನ್ನು ಹಿಡಿದು ಭಕ್ಷಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಹೈಡನ ರಂಧ್ರವನ್ನು ಬದಲಾಯಿಸುವುದರೊಳಗೆ ಅದರ ಭಕ್ಷಣೆ ಮುಗಿದು ತಣ್ಣಗೆ ಸನಿಹದ ಹಣ್ಣಿನ ಮರವೇರಿ ಪೋಸು ಕೊಡಲಾರಂಬಿಸಿತ್ತು. ನನ್ನ ನೋಡಿದ್ದೆ ಪಲಾಯನಗೈಯಿದಿತು. ಅಷ್ಟರೊಳಗೆ ಕ್ಯಾಮರದಲ್ಲೊಂದು ಸುಂದರ ಚಿತ್ರ ದಾಖಲಾಗಿತ್ತು. ಕೆಮರಾ ಖುಷಿ ನಗೆ ನಕ್ಕಿತು! 

***

ಕತ್ತಲಿಗೆ ಕಾಲಿಡಲು ಹೊರಟ ಸೂರ್ಯ ಕಿರಣಗಳಿಗೆ ಗಿಡಗಂಟೆಗಳೆಲ್ಲಾ ಪ್ರತಿಸ್ಪಂದಿಸುವ ಹೊತ್ತಲ್ಲಿ ಕೆರಾಡಿಯಿಂದ ವಾಪಾಸಾಗುತ್ತಿದ್ದೆ. ಪಶ್ಚಿಮದಲ್ಲಿ ಬಣ್ಣಗಳ ಓಕಳಿಯಾಟ. ಯಾವುದೋ ಗಿಡದ ಸಂಧಿಯಲಿ ಸಣ್ಣ ಅಲುಗಾಟ. ನೋಡಿದರೇ ಅದೇ ಶಿಖ್ರಾ ಕುಳಿತು ನನಗಾಗಿ ಕಾದಿದೆಯೋ ಏನೋ ಎಂಬಂತೆ ಕುಳಿತಿತ್ತು. ಒಂದೆರಡು ಚಿತ್ರ ತೆಗೆದೆ. ಒಂದು ಚಿತ್ರ ಸ್ಪಷ್ಟ ಬಂದಿತು. ಅಂದು ಅತ್ಯಂತ ಖುಷಿಯ ದಿನ ನನ್ನ ಪಾಲಿಗೆ. ಇಂತಹ ಸ್ವರ್ಗ ಸದೃಶ ಹಕ್ಕಿಯನ್ನು ನೋಡಿದ್ದು ನನ್ನ ಪುಣ್ಯವೇ ಸರಿ. 

ಜೀವನ:

ಮಾರ್ಚ್‌ ನಿಂದ ಜೂನ್‌ ವರೆಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಕಾಗೆಯಂತೆ ಸಪಾಟಾದ ಗೂಡು ನಿರ್ಮಿಸುತ್ತದೆ. ತನ್ನ ಕಾಲುಗಳಲ್ಲಿ ಕಡ್ಡಿಯನ್ನು ತೆಗೆದುಕೊಂಡೊಗಿ ಗೂಡನ್ನು ನಿರ್ಮಿಸುತ್ತದೆ. ೩-೪ ಮೊಟ್ಟೆಗಳನ್ನು ಒಮ್ಮೆಗೆ ಇರಿಸುತ್ತದೆ. ಜೀವ ವಿಸ್ಮಯದ ಅತ್ಯಂತ ನಾಜೂಕಾದ ಕೊಂಡಿ ಇದಾಗಿದ್ದು ಇಲಿ ಮುಂತಾದ ದಂಶಕಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

Sunday, December 12, 2021

ಸಿಕ್ಕರೂ ಸಿಗದಂತಿರುವ ಸಿಕ್ಕಿಂನ ಜಲಧಾರೆಗಳು ..

ನಮ್ಮ ಕಾರನ್ನು ರಸ್ತೆಗೆ ಹಚ್ಚಿ ಕಾರೊಳಗೆ ತೂರಿಕೊಂಡಾಗ ಕಣ್ಣೊಳಗೆ ಸಿಕ್ಕಿಂನ ಕಾಮನಬಿಲ್ಲು. ಅಮರೀಶ್ ಪುರಿಯ ಗಡ್ಡದಂತಿದ್ದ ರಸ್ತೆಯಲಿ ಕಾರು ಚಲಿಸಲು ಹೆಣಗುತ್ತಿತ್ತು. ಏಕದಂ ಕುಂಡೆ ಪರೀಕ್ಷೆ! 

ಗ್ಯಾಂಗ್ಟಾಕ್ ದಾಟುತ್ತಲೇ ದರುಶನಕೊಟ್ಟ 'ಸಪ್ತ ಸಹೋದರಿಯರು'. ಏಳು ಜಲಪಾತಗಳ ಸರಣಿ ರಸ್ತೆಗುಂಟ ಮೈ ಚಲ್ಲಿತ್ತು.  ಸುತ್ತಲಿನ ವನರಾಶಿಯನ್ನು ಅಪ್ಪುತ್ತಾ ಬಂಡೆಗಳನು ತಡವುತ್ತಾ ಬಳುಕಿತ್ತು ಜಲರೇಖೆ. ಒಂದಕ್ಕಿಂತ ಒಂದು ಚಂದ. ಗಂಟೆಗಳ ವರೆಗಿನ ಪ್ರಯಾಣಕ್ಕೆ ಸೋನೆ ಮಳೆಯ ಕೊನೆ. ಮಳೆ ಮುಗಿಯುತ್ತಲೆ ಹೆಜ್ಜೆ ಹೊರಗಿಟ್ಟು ಕ್ಲಿಕ್ ಕ್ಲಿಕ್ ಕೋಟ್ಗೇಟ್ ಅಡವಟಾಯಿಸಮೆಂಟ್ನಂತೆ ಪೋಟೋ ಶೂಟ್ ಸುರು. ಎಷ್ಟು ತೆಗೆದಿದ್ದೆವೋ ಚಿತ್ರ ಗೊತ್ತಿಲ್ಲ!




ಬೆಳಕಿನ ಜೊತೆ ಕಾಡುವ ವಿಷಾದ....


ಕೆಳಗಿನ ತಿರುವಿನಲ್ಲೆಲ್ಲೋ ಮೋಟಾರ್ ಸದ್ದು. ಬಳುಕಿನ ಸುಂದರಿಯ ಬಗ್ಗಿಸಿ ಬೆಳಕ ತಯಾರಿಯಲಿ ತೊಡಗಿಸಿದ್ದರು. ಅಚ್ಚರಿಯ ಜೊತೆಗೊಂದಿಷ್ಟು ವಿಶಾದ ತೇಲಿತು. ಉತ್ತರಾಖಂಡದ ಉದ್ದಗಲಕ್ಕೂ ಇಂತಹ ನೂರಾರು ವಿದ್ಯುತ್ ಗಿರಣಿಗಳ ಬಿಡಾರವೇ ಬೀಡುಬಿಟ್ಟಿದ್ದರಿಂದ 2014 ರ ಜಲಪ್ರಳಯಕ್ಕೆ ಕಾರಣ ಎನ್ನಲಾಗುತ್ತಿದೆ.


'ಸಪ್ತ ಸಹೋದರಿ'ಯರನ್ನು ಸುಮೋಹಿಸಿ ಗ್ಯಾಂಗ್ ಟಾಕ್ನ ಉತ್ತರಕೆ ಪ್ರಯಾಣಿಸಿದೆವು. ಗಿಲೀಟಿನ ರಸ್ತೆ. ಗಾಳಿಗೆ ತೊನೆಯುವ ವಿಚಿತ್ರ ಬಾವುಟಗಳು. ಚದುರಿದ ಹನಿಗಳನು ಚದುರಿಸುತ್ತಾ ಚಲಿಸುವ ಜೀಪ್ ಚಕ್ರಗಳ ಹಿಮ್ಮೇಳದ ದನಿ. ಹಸಿರು ಮುಕ್ಕಳಿಸುವ ಬೆಟ್ಟಗಳ ಭುಜಕ್ಕಂಟಿದ ಪ್ರಯಾಣ. ಎದುರಿಗೆಲ್ಲಾ ಒಬ್ಬರ ಮೇಲೊಬ್ಬರು ಆತು ನಿಂತಂತಿರುವ ಬೆಟ್ಟ ಸಾಲುಗಳು. ಬೆಟ್ಟವನ್ನು ಅಮರಿಕೊಂಡ ಮೋಡ.  ಅಲ್ಲಲ್ಲಿ ಗುಡ್ಡ ಕುಸಿತ. ಕಾಡ ತೊಟ್ಟಿಲಿನಲಿ ಜೀಕುವ ನೀರ ಜೋಕಾಲಿಗಳು. ಸಾಸಿವೆ ಚದುರಿದಂತೆ ಮನೆಗಳು. ಅಲ್ಲಿಂದ ನಿರುಕುವ ಮುದುಕರ ನಿರುಪದ್ರವಿ ನೋಟ. ಚಲಿಸುವ ಗಾಲಿಗಡ್ಡ ಬರುವ ಅವರ ಕೋಳಿ ಹಿಂಡುಗಳು. ಶತಮಾನಗಳಿಂದ ಹರಿವ ನೀರ ಹಾಡು. ಇಲ್ಲಿನ ವರ್ಜಿನ್ ಕಾಡುಗಳಿಗೆ, ಸ್ನೇಹಮಯಿ ಜನಕ್ಕೆ, ಅವರ ಪ್ರೀತಿಗೆ ಸಾಟಿ ಎಲ್ಲಿ? ಹೊಟ್ಟೆ ಚುಂಯಿಗುಡುವುದಕ್ಕೂ ಕ್ಯಾವೆಂಡಿಶ್, ಲಿಚಿಯ ದರುಶನಕ್ಕೂ ಸರಿ ಹೋಯ್ತು! ಎಲ್ಲವನ್ನೂ ಹೊಟ್ಟೆ ದೇವರಿಗೆ ಅರ್ಪಿಸಿದೆವು. ಜೊತೆಗೊಂದಿಷ್ಟು ಅನ್ನ ಸಾಂಬಾರು ಹೊಟ್ಟೆಗಿಳಿಸಿ ಜೀಪಿಗೂ ಪೆಟ್ರೋಲು ಉಣಿಸಿ, ಜೀಪಿನೊಳಗೆ ತೂರಿಕೊಂಡು ಮತ್ತೊಂದಿಷ್ಟು ಜಲರೇಖೆಯನು ಸವಿಯಲು ಲಾಚೆನತ್ತ ಹೊರೆಟೆವು. ಅಲ್ಲಲ್ಲಿ ಕೈ ಬೀಸುವ ಸುಂದರಿಯರು. ಅವರ ನಗು, ನಾಚಿಕೆ. ಜೊತೆಗೆ ಲಾಚೆನ್ ಸಾಗುವವರೆಗೂ ಬೀದಿಗೊಂದು ಬಸವನಂತೆ ಕಾಣಸಿಕ್ಕ ಜಲರೇಖೆಗಳ ಮೇಳ. ಅವುಗಳೊಂದಿಗೆ ನಮ್ಮ ಸರಸ ಮುಂದುವರಿದಿತ್ತು.


ಗ್ಯಾಂಗ್ಟಾಕ್ vs ಲಾಚೆನ್


ನಿಯಾನ ಸರಣಿ ಬೆಳಕಿನಿಂದ ಸಿಕ್ಕಿಂನ ನಿಜದ ನೆಲೆಗಳಿಗೆ ತೆರೆದುಕೊಂಡಿತ್ತು ಕಣ್ಣು. ಸಿಕ್ಕಿದ್ದನ್ನೆಲ್ಲಾ ಮಾರಾಟಕ್ಕಿಟ್ಟ ಲೌಕಿಕ ಗ್ಯಾಂಗ್ಟಾಕ್ನ ಮುಂದೆ ಲಾಚೆನ್ ಸಿಕ್ಕಿಂನ ಅಲೌಕಿಕತೆ ತೆರೆದಿಟ್ಟಿತ್ತು. ಲೌಕಿಕ ಜಗತ್ತಿಗಿಂತ ಈ ಜಗತ್ತು ಇಷ್ಟವಾಗಿತ್ತು ಎನ್ನುವುದು ಕಡಿಮೆಯೆ. ನೈಜ ಸಹಜ ಜೀವನವನ್ನು ಹೊಂದಿದ ಮುಗ್ಧ ಜನ ಸಮೂಹ.

ಅಲ್ಲಲ್ಲಿ ನನ್ನನ್ನು ಬಳಸಿ ಎಂಬ ಬೋರ್ಡ್ನ್ನು ತಬ್ಬಿದ ಬುಟ್ಟಿ. ಬಯಲು ಶೌಚಕ್ಕೆ ನಿರ್ಬಂಧ. ಸಿಕ್ಕಿ ಬಿದ್ದರೆ 5 ಸಾವಿರದವರೆಗೆ ದಂಡ! ಸಪ್ತ ಸುಂದರಿಯರ ದರ್ಶನವಿತ್ತು ಹೊರಟು ಲಾಚೆನ್ ಬೀದಿ ತಲುಪಿ ಅರಮನೆಯಂತಹ ರೆಸರ್ಾಟ್ ಒಂದರಲ್ಲಿ ತಂಗಿದೆವು. ರೆಸಾರ್ಟ್ ಎದುರಿಗೇ ಅತಿ ಸುಂದರ ಜಲಧಾರೆ. 



ಉರಗ ಸುಂದರಿಯ ಸುತ್ತು ಬಳಸಿ.


ಬೆಳಗ್ಗೆ ನಾಲ್ಕಕ್ಕೆದ್ದು ಗುರುದೊಂಗ್ಮಾರ ಸರೋವರಕ್ಕೆ ಸುತ್ತು ಬಂದು ಲಾಚುಂಗ್ ಗೆ ಹೊರಟಾಗ ಕಾಣ ಸಿಕ್ಕ ಮತ್ತೊಬ್ಬಳು ಚೆಲುವಿಯ ಹೆಸರು 'ಕೀಮಾ'. 'ಕೀಮಾ" ಎಂದರೆ ಹಾವು! ಸ್ನೇಕ್ ಫಾಲ್ಸ್ ಎಂಬ ವಿಶೇಷಣ ಹೊತ್ತ ಈಕೆ ನಿಜಕ್ಕೂ ಅಪ್ರತಿಮ ಸುಂದರಿಯೇ. ತನ್ನ ಬಳುಕು ಮೈ ಮಾಟವನ್ನು ರಸ್ತೆಗುಂಟ ಸ್ವಲ್ಪವೂ ನಾಚಿಕೆ ಇಲ್ಲದೆ ಹರವಿ ನಿಂತಿದ್ದಳು!

ಜಲಧಾರೆ ನೋಡುತ್ತಲೆ ಹೊಟ್ಟೆ ಚುಂಯಿಗುಡ ಹತ್ತಿತು. ಸಣ್ಣ ಗೂಡಂಗಡಿ ಹೊಕ್ಕು ತಿಂಡಿಗೆ ಆರ್ಡರಿಸಲು ಹೋದೆವು. ಅಂಗಡಿ ಮುಚ್ಚಿತ್ತು. ಜಲಪಾತವನ್ನೇ ನಿರುಕಿಸುತ್ತಾ ಕಾರು ಏರಿದೆವು. ಅಲ್ಲಿಂದ ಹೊರಟಿದ್ದು ಲಾಚುಂಗ್ ಕಡೆಗೆ.


ಲಾಚುಂಗ್ ಮತ್ತು ಹೆಸರಿಲ್ಲದ ಸುಮನೋಹರಿ!


ಲಾಚುಂಗ್ ನ ನಮ್ಮ ಹೊಟೇಲ್ ಎದುರಿನ ಬೀದಿಯಲಿ ಹಗಲು ರಾತ್ರಿ ಎನ್ನದೇ ಧೋ ಎಂದು ಸುರಿವ ಸುಂದರಿಯ ಕಡೆಗೆ ಯಾರೂ ಗಮನ ಕೊಟ್ಟಂತಿಲ್ಲ. ಬಜ್ಜಿ ತಿನ್ನುವಾಗ ಅದರ ಸೌಂದರ್ಯವನ್ನೇ ನೆಂಜಿಕೊಂಡು ತಿಂದೆ! ಹೆಸರಿನ ಫಲಕ ಜಲಧಾರೆಯ ಸನಿಹ ನನಗೆ ಕಾಣಿಸದೇ ನಿರಾಶೆಯಾಯಿತು. ಹೆಸರಿನ ಹಂಗೇಕೆ? ಇಷ್ಟೊಂದು ನಿರ್ಲಕ್ಷವೇ? ಎನ್ನುವಂತೆ ಒಂದೆರಡು ಚಿತ್ರಗಳನ್ನು ಕ್ಯಾಮರಕ್ಕೆ ಸೇರಿಸಿದೆ. ಜಲ ರೇಖೆಯ ಸನಿಹದಲ್ಲೆಲ್ಲಾ ಬೆಳೆದ ವೈಲ್ಡ್ ಸ್ಟ್ರಾಬೆರಿ ಹಣ್ಣುಗಳು! 
ನಮ್ಮೂರಿನಲ್ಲಾದರೆ ಜಲಧಾರೆಯನ್ನು ಕಮರ್ಶಿಯಲ್ ಆಗಿ ಮಾಡಿ ಸ್ಟ್ರಾ ಬೆರಿ ಕೊಯ್ದು ಮಾರಾಟಕ್ಕಿಡುತ್ತಿದ್ದರು! ಅವರ ಈ ಮುಗ್ಧತೆ, ಅಲೌಕಿಕತೆ ಇಷ್ಟವಾಯಿತು. ಬುದ್ಧನ ನಾಡು ಟಿಬೆಟ್ ಇಲ್ಲಿಂದ ಕೆಲವೇ ಕಿಲೋ ಮೀಟರ್! ಹೀಗೆ ಬುದ್ಧನ ನಾಡಿಗೊಮ್ಮೆ ಹೋಗಬೇಕು, ಮನಸೋ ಇಚ್ಚೆ ಅಲೆಯಬೇಕು.




ಕೊನೆಯಲ್ಲಿ ಸಿಕ್ಕವಳು!





ಲಾಚುಂಗ್ನ ಜೀರೊ ಪಾಯಿಂಟ್ ತಲುಪಿ ಅಲ್ಲಿಂದ ಮತ್ತೆ ಗ್ಯಾಂಗ್ ಟಾಕ್ಗೆ ಹೊರಟಾಗ ಕಂಡ ಜಲಧಾರೆಯನು ಜೀವನದಲಿ ಮರೆಯಲುಂಟೆ! 
ನಮ್ಮ ಜೋಗಕ್ಕಿಂತಲೂ ಎತ್ತರದ ನೋಟ, ಮೈ ಮಾಟ. ನಾವು ನೋಡುತ್ತಲೇ ಮೋಡದ ಸೆರಗಿನಲ್ಲಿ ಅಡಗಿದ ಕೊನೆಯ ಜಲರೇಖೆಯನ್ನು ನೋಡುತ್ತಲೆ ನೆನಪು ತಮ್ಮ ತಮ್ಮ ಪ್ರೇಯಸಿ/ ಪ್ರಿಯತಮನ ಕಡೆಗೆ ವಾಲಿದ್ದರಿಂದ ಎಲ್ಲರೂ  ಮೌನ. ಇಹಕ್ಕೆ ಕಾಲಿಟ್ಟರೂ ಮೋಡದ ಸೆರಗಿನಿಂದ ಸತಾಯಿಸುತ್ತಲೇ ಇತ್ತು. ಸುತ್ತಲಿನ ಮಂಗಗಳು ಏನಾದರು ತಿಂಡಿ ಸಿಗಬಹುದೇ ಎಂದು ನಿರುಕಿಸಹತ್ತಿ ನಮ್ಮ ಚೀಲಗಳನು ತಡವಲು ಬಂದವು. ಹೆಸರ ಹುಡುಕಾಟದಲಿ ತೊಡಗಿದವನಿಗೆ ಸಿಕ್ಕಿದ್ದು ನಿರಾಶೆ. ಗಾಳಿಯಬ್ಬರಕ್ಕೆ ಸಿಡಿದ ಕೆಲವು ಹನಿಗಳು ಕ್ಯಾಮರ ಹೊಕ್ಕವು. ತೆರೆದ ನೋಟು ಬುಕ್ಕಿನಲಿ ಆ ಕೊನೆಯ ಜಲರೇಖೆ ದಾಖಲಾಯಿತು. ನೆನಪ ಬುತ್ತಿಯೊಳಗೆ ಈ ಸುಂದರ ಹೆಸರೊಂದು ಅಚ್ಚಾಯಿತು.




ಹೀಗೆ ಭತ್ತ ಬಾಡು ಹಾಕಿದಂತೆ ಗಡಿ ಗಡಿಗೆ ದರುಶನಕೊಟ್ಟ ಈ ಸುಂದರಿಯರನ್ನೊಮ್ಮೆ ಹೀಗಾದರೂ ನೆನಪಿಸಿಕೊಳ್ಳುವ ಅವಕಾಶವಾಯಿತು. ನಿಮಗೂ ನಿಮ್ಮ ಹಳೆಯ ಪ್ರೇಯಸಿಯ ನೆನಪು ಮಾಡಿಕೊಳ್ಳುವ ಬೆಚ್ಚಗಿನ ಅವಕಾಶಕ್ಕಾಗಿ ಒಮ್ಮೆ ಇತ್ತ ಬನ್ನಿ!

 

Sunday, October 24, 2021

ಕಾಶ್ಮೀರವೆಂಬ ಕನಸು..

 



2 ವರುಷದಿಂದ ಕಟ್ಟಿ ಹಾಕಿದ ಕಾಶ್ಮೀರ ಕನಸೆಂಬ ಹಾಯನ್ನು ಬಿಚ್ಚುವ ಹೊಸ ಅವಕಾಶವೊಂದು ನನ್ನೆದುರಿಗೆ ಬಂದಿತ್ತು. ಕಾಶ್ಮೀರವೆಂಬ ನಭವು ನನ್ನೆದುರಿಗೆ ಈ ಸರೋವರದಂತೆ ಪ್ರತಿಫಲಿಸಿತ್ತು. ಕಾಶ್ಮೀರವೆಂಬುದು ಪ್ರತಿ ಅಲೆಮಾರಿಯ ಕನಸು ಅಂತಹ ಕನಸಿನ ನಭವು ನನ್ನೆದುರಿಗೆ ಸಾಕಾರಗೊಂಡ ಮಧುರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಅದರ ಮೊದಲ ಕಂತು ಇದು. 








ದಾಲ್ ಸರೋವರ, ಗುಲ್ ಮಾರ್ಗ್, ತೇಲುವ ಪೋಸ್ಟಾಪೀಸು ನೋಡಿದ ಮಧುರಾನುಭೂತಿಯ ಪುಳಕವನ್ನು ಇಲ್ಲಿನ ಚಿತ್ರಗಳೊಂದಿಗೆ ಹಂಚಿಕೊಳ್ಳುತ್ತಿರುವೆ.








ದಾಲ್ ಸರೋವರದಲಿ ದೋಣಿ ವಿಹಾರದ ಅನುಭವದ ರಮ್ಯಯತೆಯನು ಪದಗಳಲಿ ಹಿಡಿದಿಡುವುದು ಅಸಾಧ್ಯವೇ. ಸರಿ ಸುಮಾರು 20 ಕಿ.ಮೀ ವ್ಯಾಸ ಹೊಂದಿರುವ. ಸಾವಿರಕ್ಕೂ ಮೀರಿದ ಜನಸಾಂದ್ರತೆ ಹೊಂದಿರುವ ಈ ಮಾಯಾ ಸಮುದ್ರದಲ್ಲಿ ತೇಲುವುದೇ ಒಂದು ಮಧುರಾನುಭೂತಿ. ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುವ ಆಕಾಶವೇ ತನ್ನೊಡಲಿನಂತೆ ತೋರಿಸುವ, ತರೇವಾರಿ ವ್ಯಾಪಾರಿಗಳು ದೋಣಿಯಲ್ಲೇ ವ್ಯಾಪಾರ ಕುದುರಿಸುವ ಜಾಗ. ಹೂವಿನ ವ್ಯಾಪಾರ, ಬಳೆ, ಸರ, ತರಕಾರಿ ವ್ಯಾಪಾರ ನಡೆಯುವುದು ದೋಣಿ ಮೇಲೆಯೇ. ಉಳಿದ ಕತೆ ಮತ್ತೊಮ್ಮೆ...


Sunday, September 26, 2021

ನೇರಳ ಕಟ್ಟೆಯಲ್ಲೊಬ್ಬ ದೇವಲೋಕದ ಸುಂದರ......


ಮಾಗಿ ಚಳಿಯ ಸಮಯ, ಸ್ನೇಹಿತ ಕಾಲ್ ಮಾಡಿ ನೇರಳ ಕಟ್ಟೆಯಲ್ಲಿ ಹಳೆ ವಸ್ತು ಮಾರಾಟಗಾರನಿದ್ದಾನೆ. ಅವನಲ್ಲಿ ಹೊಸ ಹೊಸ ಹಳೆ ವಸ್ತುಗಳು ಬಂದಿವೆಯಂತೆ ನೋಡಿ, ಕೊಂಡು ಬರೋಣವೇ?  ಎಂದು ಕೇಳಿದ. ಸರಿ ಎಂದು ಹೊರಟೆ.  ನೇರಳಕಟ್ಟೆಯಿಂದ ಮುಂದೆ ಗುಲ್ವಾಡಿಯಲ್ಲಿ ಆತನ ಮನೆಯಿತ್ತು. 

ಹಳೆಯ ವಸ್ತುಗಳ ಮಾರಾಟಗಾರನಾದ ಆತ ನಮ್ಮೆದುರು ಒಂದು ಗೋಣಿ ಚೀಲದಷ್ಟು ಹಳೆ ವಸ್ತುಗಳನ್ನು ರಾಶಿ ಹಾಕಿದ. ನಮಗೂ ಅವನಿಗೂ ವ್ಯಾಪಾರ ಕುದುರದೇ ಅಲ್ಲಿಂದ ಹೊರಟೆವು. ಹಾದಿ ನಡುವಿನ ನೇರಳಕಟ್ಟೆಯಲ್ಲಿ ಚಹ ಹೀರಲು ನಿಲ್ಲಿಸಿದೆವು. ಹತ್ತಾರು ಅಂಗಡಿ, ಸಣ್ಣ ಶಾಲೆ ಇರುವ ಪುಟಾಣಿ ಗ್ರಾಮ. ಅನೇಕ ಬರಹಗಾರರು, ಸಾಹಿತ್ಯ ಪ್ರೇಮಿಗಳನ್ನು ತನ್ನ ಒಡಲ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿದೆ. ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್, ಕವಯತ್ರಿ ಜ್ಯೋತಿ ನೇರಳಕಟ್ಟೆ, ನಾಟಕಕಾರ ಆನಂದ ತಪ್ಪಲು, ಅಕ್ಷರ ಸಂಚಾರದ ಪುಸ್ತಕ ಪ್ರೇಮಿ ಭಾಸ್ಕರ ಮುಂತಾದವರು. 

ನೇರಳಕಟ್ಟೆಯಿಂದ ವಾಪಾಸು ಬರುವಾಗ  ಒಂದಿಷ್ಟು ಮೀನು ಮಾರುವವರನ್ನು ಕಂಡೆ. ತಲೆ ಮೇಲೊಂದು ಅಣಬೆ ಛತ್ರಿ ಹಾಕಿಕೊಂಡು ಅದರ ನೆರಳಲ್ಲಿ ಕುಳಿತು ಮಾರುತ್ತಿದ್ದರು. ನೋಡಿದ ಕೂಡಲೆ ನನ್ನೊಳಗಿನ ಛಾಯಾಗ್ರಾಹಕ ಜಾಗೃತನಾದ. ಇವರ ಛಾಯಾಗ್ರಹಣ ಮಾಡಬೇಕೆಂದು ನಿರ್ಧರಿಸಿದೆ. ಮುಂದಿನ ಭಾನುವಾರವೇ ಅಲ್ಲಿಗೆ ಮತ್ತೆ ಹೊರಟೆ.

ನೇರಳ ಕಟ್ಟೆ ಚಿತ್ರಕಾರನೊಬ್ಬ ಬಿಡಿಸಿದ ಕೊಲಾಜ್ನಂತೆ. ಹೆಸರೇ ಎಷ್ಟು ಸುಂದರ. ಕೇರಳದಿಂದ ಬಂದ ಮಾಪಿಳ್ಳೆಗಳು, ಕೊಚ್ಚಿ ಕ್ರಿಶ್ಚಿಯನ್ನರು ಈ ಭಾಗದವರೇ ಆಗಿ ಹೋಗಿದ್ದಾರೆ. ಬಹುತೇಕರು ಕೃಷಿಕರು. ಕೊಡ್ಲಾಡಿ ಸಮೀಪದ ದಿ. ಶ್ರೀಪತಿ ಅಡಿಗ ಮತ್ತು ಅವರ ಮಗ ಪ್ರಸನ್ನ ಅಡಿಗ ತಮ್ಮ ಸಹಜ ಕೃಷಿಯ ಮೂಲಕ ನೇರಳ ಕಟ್ಟೆಗೆ ಹೆಸರು ತಂದು ಕೊಟ್ಟವರು. 



ಕ್ಯಾಮರಕ್ಕೊಂದು ದೊಡ್ಡ ಲೆನ್ಸ್ ಹಾಕಿ ನೇರಳಕಟ್ಟೆಯ ಬೀದಿಯಲ್ಲಿ ಬಜ್ಜಿ ಅಂಗಡಿ ಎದುರು ನಿಂತೆ. ಶಕುಂತಲೆಯಂತೆ ಶಿಖೆ ಹೊತ್ತ ಬೋಂಡಾ ಮಾಡುತ್ತಿದ್ದ ಹೆಂಗಸೊಬ್ಬಳು ಬೋಂಡಾ ಕಲೆಸುತ್ತಾ ನನ್ನನ್ನು 'ಏನು?' ಎಂದು ವಿಚಾರಿಸಿಕೊಂಡಳು. 'ಹೀಗೇ ಸುಮ್ನೆ' ಎಂಬ ಜಾರಿಕೆಯ ಉತ್ತರವನ್ನಿತ್ತೆ. ಸನ್ ಗ್ಲಾಸ್ ಏರಿಸಿ, ಜೀನ್ಸ ಧರಿಸಿ ಬುಲೆಟ್ನಲ್ಲೊಬ್ಬ ಬಿರುಗಾಳಿಯಂತೆ ಬಂದ. ಅಂಗಡಿ ಮುಂಗಟ್ಟಿನ ಮುಂದೆ ನಿಂತು ಗುಟಕಾ ಖರೀಧಿಸಿದ. ಕಂಕುಳಲ್ಲೊಂದು ಕೋಳಿ ಪಡೆಯ ಹುಂಜವೊಂದು ಕ್ಕೊಕ್ಕೊ ಕ್ಕೋ ಕೋ ಎಂದು ಕೂಗುತ್ತಿತ್ತು. ಆತ ಪೂರ್ವ ಮತ್ತು ಪಶ್ಚಿಮಗಳ ಸಮ್ಮಿಲನದಂತೆ ನನಗೆ ಕಂಡ. ಕ್ರಿಶ್ಚಿಯನ್ ಅಜ್ಜನೊಂದಿಗೆ ಮೀನು ಹೆಂಗಸರು ಸರಸ ಸಂಭಾಷಣೆಯಲ್ಲಿ ತೊಡಗಿ, ಅವನನ್ನು ಮೀನು ಖರೀಧಿಸುವಂತೆ ಮಾಡಿದರು! ಅಂದು ಛತ್ರಿಯಡಿ ಮೀನಿನ ವ್ಯಾಪಾರ ಮಾಡುತ್ತಿದ್ದ ಛತ್ರಿ ಹೆಂಗಸು ಇಂದಿರಲಿಲ್ಲ. ಆದರೂ ಏನಾದರೂ ಒಳ್ಳೇ ಚಿತ್ರ ಸಿಗಬಹುದೆಂದು ಕಾದೆ. ಮೀನು ಹೆಂಗಸರ ವ್ಯಾಪಾರ ನೋಡದಂತೆ ಅಡ್ಡಲಾಗಿ ದುಗರ್ಾಂಬ ಬಸ್ಸೊಂದು ಧೂಳೆಬ್ಬಿಸುತ್ತಾ ಗಡಿ ಬಿಡಿಯಿಂದ ಬಂದು ನಿಂತಿತು. ಬಂದ ಯಮ ವೇಗ ನೋಡಿದರೆ ಕೂಡಲೇ ಹೊರಟು ಹೋಗುತ್ತದೆಂದು ನಾನು ಎಣಿಸಿದೆ. ಆದರೆ ಕಂಡಕ್ಟರ್ ಬಜ್ಜಿ ಮಾಡುತ್ತಿದ್ದ ಹೆಂಗಸಿನೊಂದಿಗೆ ಮಾತಿಗಿಳಿದ. ಬಸ್ಸಿಂದ ಎದ್ದ ಧೂಳಿನ ಕಣಗಳೆಲ್ಲಾ ಮೇಲೆದ್ದು ಕಂಡೂ ಕಾಣದಂತೆ ಬೊಂಡಾದ ಹಿಟ್ಟಿನೊಂದಿಗೆ ಸೇರಿ ಹೊಯ್ತು. ಬಜ್ಜಿ ಮಾಡುತ್ತಿದ್ದ ಶಕುಂತಲೆ ಇದಾವೂದಕ್ಕೂ ಕ್ಯಾರೇ ಎನ್ನದೆ ಕಲಿಸುತ್ತಲೇ ಇದ್ದಳು! ಕಂಡಕ್ಟರ್ ಬಜ್ಜಿ ರುಚಿ ನೋಡಿದ. ನನ್ನ ಫೋಟೋ ಯಜ್ಞ ಯಡವಟ್ಟಿಗಿಟ್ಟು ಕೊಂಡಿತು. ಅಂತೂ ಹತ್ತು ನಿಮಿಷ ಕಾದು, ಶಕುಂತಲೆಯನ್ನೇ ನೋಡುತ್ತಾ ಕಂಡಕ್ಟರ್ ರೈಟ್ ಎಂದ. ಅಂತೂ ಹೊರಟಿತಲ್ಲ ಉಗಿಬಂಡಿ ಎಂದು ಸಂತಸ ಪಟ್ಟೆ. ಈ ಬೋಂಡಾ ಅಂಗಡಿ ಎದುರಿಗೇ ಅನೇಕ ವರ್ಷಗಳಿಂದ ನನ್ನನ್ನು ಪೀಡಿಸಿದ, ಕಾಡಿಸಿದ ಹಟ್ಟಿ ಮುದ್ದ ಕುಳಿತಿದ್ದ? ಇವನ ಪೋಟೊಗಾಗಿ ಊರೂರು ಅಲೆದಿದ್ದೆ. ಎಷ್ಟೋ ಕಾಡು ಸುತ್ತಿದ್ದೆ. ಲೀಟರ್ಗಟ್ಟಲೆ ಬೆವರು ಹರಿಸಿದ್ದೆ. ಅಚಾನಕ್ ಆಗಿ ಸಿಕ್ಕಿದ್ದನ್ನು ನೋಡಿ ಕುಸಿಯಾಯಿತು.


ಅಂತೂ ಆಸಾಮಿ ವಿಷಯಕ್ಕೆ ಬಂದ್ನಲ್ಲ ಎಂದು ಕುಸಿಯಾಯಿತಾ? ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ್ರೆ ಈ ಹಟ್ಟಿ ಮುದ್ದ. ನಾ ನಿಟ್ಟ ಹೆಸರಲ್ಲ ಇದು. ಪರಿಸರದೊಂದಿಗೆ ಹಲವು ಶತಮಾನಗಳಿಂದ ಸಹ ಜೀವನ ನಡೆಸುತ್ತಾ ಬಂದ ಕುಡುಬಿ ಮತ್ತು ಮರಾಠಿ ಜನಾಂಗದವರಿತ್ತ ಹೆಸರು! ಹಟ್ಟಿ ಎಂದರೆ ನಮ್ಮ ಕಡೆ ದನ, ಎಮ್ಮೆ ಕಟ್ಟುವ ಜಾಗ. ಅಲ್ಲಿರುವ ಕೀಟಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ಹೊರೆದು ಕೊಳ್ಳುವವನೀತ. ಗಂಡು ಗಲಿ. ಅಲ್ಲದೆ ಮರಾಠಿಗರ ಹೋಳಿ ಹಬ್ಬಕ್ಕೆ ಇವನ ಚಂದ ಬಾಲವಿದ್ದರೆ ಅದರ ಗತ್ತೇ ಬೇರೆ. ಅವನ ಬಾಲಕ್ಕೆ ಒಳ್ಳೆ ಬೆಲೆ! ಹಾಗೆಂದು ಹಿಡಿಯಲು ಹೋಗಬೇಡಿ. ಪಾರೆಸ್ಟ್ ಡಿಪಾರ್ಟಮೆಂಟಿನವರು ಹಿಡಿದಾರು ಜೋಕೆ. ಈಗಾಗಲೇ ಅಳಿವಿನಂಚಿಗೆ ಸರಿದಿದೆ ಸ್ವಾಮಿ.

ಹೇಗಿದ್ದಾನಿವ ಎಂದು ಕೇಳಿದಿರಾ? ತಲೆಯ ಮೇಲೊಂದು ಶಿಖೆ. ಸೀಳಿಕೊಂಡ ಉದ್ದನೆಯ ಬಿಳಿ ಬಾಲ. ಚೂಪು ಕಣ್ಣು. ದೇಹವೆಲ್ಲಾ ಕಪ್ಪೆನಿಸುವ ಕಡು ನೀಲಿ. ಎದೆ ಬಿಳಿ. ಅದಕೆ ಮ್ಯಾಚಿಂಗ್ ಆದ ಬಿಳಿ ಪುಕ್ಕ ಮತ್ತು ಸೀಳಿಕೊಂಡ ಸುಂದರ ಬಾಲ. ಥೇಟ್ ಸ್ವರ್ಗದಿಂದಿಳಿದು ಬಂದ ದೇವತೆ. ಹಾಗಾಗಿ ಇಂಗ್ಲೀಷ್ ಬಲ್ಲವರು ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು. ಇರಲಿ ಇದು ಒಂದು ಅಗ್ದಿ ನೊಣ ಹಿಡುಕ. ಹಾಗಾಗಿ ಮೀನು ಹೆಂಗಸರ ಬೆನ್ನು ಬಿದ್ದಿದ್ದ. ಹಟ್ಟಿ ಮುದ್ದನ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡುಬಿಟ್ಟೆ. ನನ್ನ ಕ್ಯಾಮರ ಇವತ್ತು ತೃಪ್ತಿಯ ತೇಗು ತೇಗಿತ್ತು. ಫೋಟೋ ಕ್ಲಿಕ್ಕಿಸಿಕೊಂಡ ಕುಸಿಯಲ್ಲಿ ಆತನೂ ಬಾಲ ಅಲ್ಲಾಡಿಸುತ್ತಾ ಹಾರಿ ಹೋದ!

ಶ್ರೀಧರ್. ಎಸ್. ಸಿದ್ದಾಪುರ

Saturday, July 10, 2021

ಪ್ರತಿಫಲನ.



ಕುಳಿರ್ಗಾಳಿ ಶಿಖಾರಿ ಗುಡ್ಡದ ಕಡೆಯಿಂದ ಬೀಸುತಲಿತ್ತು. ಮಂಜು ನಿಧಾನವಾಗಿ ಶಿಖಾರಿ ಗುಡ್ಡವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತಲಿತ್ತು. ಶಿಖಾರಿ ಗುಡ್ಡದ ಎಡ ಮಗ್ಗುಲಿಗೆ ನನ್ನ ಮನೆಯಿದೆ. ಕೆಂಪಾದ ಸೂರ್ಯ ಶಿಖಾರಿ ಗುಡ್ಡದಲ್ಲಿ ಅಡಗಲು ನಿಧಾನಕ್ಕೆ ಶಿಖಾರಿ ಗುಡ್ಡಕ್ಕೆ ಇಳಿಯುತ್ತಿದ್ದ. ಮರಗಳ ನೆರಳು ಉದ್ದಕ್ಕೆ ಬೆಳೆದು ಮನೆಯ ಜಗುಲಿ ಹೊಕ್ಕು ಅಲ್ಲೇ ಕಾಲು ಚಾಚಿತ್ತು. ದನ ಕರುಗಳ ಗಂಟೆಯ ನಾದ ಕಿವಿಗಳ ತುಂಬುತಲಿತ್ತು. ಕತ್ತಲನ್ನು ನಿಧಾನಕ್ಕೆ ಚಳಿ ಅಪ್ಪಿಕೊಳ್ಳುತಲಿತ್ತು.

ನಮ್ಮ ಮನೆಯ ಸನಿಹದಲ್ಲೇ ಕಮ್ಮಾರರ ಕೇರಿಗೊಂದು ಸುಂದರ ರಸ್ತೆ. ಮೈಲುದ್ದ ಮಲಗಿದ ರಸ್ತೆ ಕೆಂಧೂಳಿಯಿಂದ ಅಲಂಕೃತಗೊಂಡು, ಅಜಿರೆವರೆಗೆ ರಸ್ತೆ ಹಾವಿನಂತೆ ಸುತ್ತಿ ಸುಮ್ಮನಾಗಿತ್ತು. ಇಳಿಜಾರಿನ ಕೊನೆಗೆ ಹರಿವ ಚಿತ್ತೇರಿ ಹೊಳೆ ಸುತ್ತಲೂ ಹಬ್ಬಿದ ವನವು ಶಿಖಾರಿಗುಡ್ಡದ ತನಕವೂ ಹಬ್ಬಿತ್ತು. ಶಿಖಾರಿಗುಡ್ಡದ ಬಲ ಮಗ್ಗುಲಿನಲ್ಲಿ ಚೀರು, ಸುಬ್ಬಮ್ಮ, ಶಂಕ್ರ ಮನೆ ಮಾಡಿಕೊಂಡಿದ್ದರು. ಶಿಖಾರಿ ಗುಡ್ಡದ ಎಡ ಮಗ್ಗುಲಿನಿಂದ ಹಬ್ಬಿದ ವನವು ನಮ್ಮ ತೋಟದ ಬುಡಕ್ಕೆ ಬರುವಷ್ಟರಲ್ಲಿ ಅಸಾಧ್ಯ ಜಿಗ್ಗುಗಳಾಗಿ ಪರಿವರ್ತನೆ ಹೊಂದಿ ಒಳಹೋಗಲಾರದಷ್ಟು ದಟ್ಟವಾಗಿತ್ತು.

***

ಆಗಸ್ಟೇ ತೋಟದ ಕೆಲಸ ಮುಗಿಸಿ ಕಾಲು ಚಾಚಿ ಕುಳಿತು, ಚಹಾ ಹೀರುತ್ತಾ, ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಚೀರು ಸುಬ್ಬಮ್ಮರ ಮನೆ ಕಡೆಯಿಂದ ಗದ್ದಲದ ಸದ್ದೊಂದು ಕೇಳಿ ಬಂತು. ಅನೇಕ ಜನ ಸೇರಿ ಕೂಗಿಕೊಂಡತೆ ಏನೋ ಪ್ರಾಣಿಗಳನ್ನು ಅಡ್ಡಗಟ್ಟಿದಂತಹ ಗಲಾಟೆ. ದನವೋ ಎಮ್ಮೆಯನ್ನು ಅಡ್ಡಗಟ್ಟುವ ದನಿಯಾಗಿ ನನಗೆ ಕೇಳಿಸಿತು. ಹೋಗಿ ನೋಡಿ ಬರೋಣವೆಂದೆನಿಸಿದರೂ ಬಹಳಾ ಸುಸ್ತಾದುದರಿಂದ ಸುಮ್ಮನಾದೆ. ಅವರ ಕೇರಿಕಡೆಯಿಂದ ಕೋಳಿ ಕುಪ್ಪ ಬರುವುದು ಕಾಣಿಸಿತು. ಇವನಲ್ಲೇ ಕೇಳೋಣವೆಂದು ಸುಮ್ಮನಾದೆ.

ಕೋಳಿ ಅಂಕದಲ್ಲಿ ಹಮ್ಮೀರನಾದ ಈತ ಎರಡು ಕೋಳಿ ಚಂಚಿಕೊಂಡು ಕೋಳಿ ಅಂಕಕ್ಕೆ ಹೊರಟಿದ್ದ. ಆತನನ್ನು ಕರೆದೆ. ಬಹಳ ಗಡಿಬಿಡಿಯಲ್ಲಿದ್ದ ಆತ ಸ್ವಯಂ ಮುಚ್ಚುವ ಗೇಟು ತೆಗೆದುಕೊಂಡು ಬಂದು ಅನ್ಯ ಮನಸ್ಕನಾಗಿ ನನ್ನ ಪ್ರಶ್ನಾರ್ಥಕವಾಗಿ ನೋಡಿದ. "ಕಮ್ಮಾರರ ಕೇರಿಯಿಂದ ಏನೋ ಗಲಾಟೆ ಕೇಳುತ್ತಿದೆಯಲ್ಲಾ ಮರಾಯ ನಿನಗೇನಾದರು ಗೊತ್ತೋ?" ಎಂದೆ. "ಚೀರು ಮನೆಯ ಹಳೇ ದನವಿರಬೇಕು ಕೊಟ್ಟಿಗೆಗೆ ಬರಲು ಉಪದ್ರವ ಕೊಡುತ್ತಿರಬೇಕು. ಅದೇ ಗದ್ದಲ." ಎಂದು ಗಡಿಬಿಡಿಯ ತೀರ್ಮಾನ ಕೊಟ್ಟ. ನನಗೆ ಹಾಗನಿಸುತ್ತಿರಲಿಲ್ಲವಾದರೂ ನನ್ನ ಅನುಮಾನ ಅವನಲ್ಲಿ ಹೇಳಿದರೆ ಆತ ಇನ್ನೇನೊ ಹೇಳಿ ತನ್ನದೇ ಸರಿ ಎಂದು ವಾದಿಸುವವನಾದ್ದರಿಂದ ಸುಮ್ಮನಾದೆ. ಈಗ ಶಬ್ದ ಸಂಪೂರ್ಣ ನಿಂತು ಹೋದುದರಿಂದ ಸುಮ್ಮನಾದೆ. ಕೋಳಿ ಕುಪ್ಪ ತನ್ನ ಕೋಳಿಯೊಂದಿಗೆ ಹೊರಟು ಹೋದ. 

ಕೋಳಿ ಕುಪ್ಪನಂತವರು ಸಿಗುವುದೇ ವಿರಳ. ಆತನೊಬ್ಬ ವಿಲಾಸಿ ವಿರಾಮ ಜೀವಿ. ಕೋಳಿಗಳ ಕುರಿತು ಆತ್ಮಜ್ಞಾನಿ. ಈತನಿಗೆ ಕೋಳಿಗಳಿಗೆ ನೀಡುವ ಔಷಧಗಳು ಆರೈಕೆ ಮಾಡುವ ವಿಧಾನ ಗಳೆಲ್ಲ ನಾಲಿಗೆ ತುದಿಯಲ್ಲಿ. ದಿನದ ಹೆಚ್ಚಿನ ಸಮಯ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಳೆಯುತ್ತಿದ್ದ. ಆತ ಮನವಿಟ್ಟು ಹುಂಜನೊಂದನು ಸಾಕಿದರೆ ಕೋಳಿ ಅಂಕದಲಿ ಗೆದ್ದೇ ತೀರುವುದು. ಆದರೆ ಆತನೆಷ್ಟು ಅನ್ಯ ಮನಸ್ಕನೆಂದರೆ ಆತನ ಮನೆಯಲ್ಲೇ ಒಂದೇ ಒಂದು ಕೋಳಿ ಇಲ್ಲ! "ಕುಪ್ಪ ನೀನೊಂದು ಕೋಳಿ ಫಾರಂ ಮಾಡಿದ್ರೆ ಚೆನ್ನಾಗಿತ್ತು ಮರಾಯ. ನಿನಗೆ ಕೋಳಿಗಳ ಕುರಿತು ಒಳ್ಳೆ ಜ್ಞಾನವಿದೆ." ಎಂದು ಒಮ್ಮೆ ಎಲ್ಲೊ ಹೊರಟವನಲ್ಲಿ ಬಿಟ್ಟಿ ಸಲಹೆಯೊಂದನು ಎಸೆದೆ. "ಕೋಳಿಗಳನ್ನು ಫಾರಂನಲ್ಲಿಟ್ಟು ಸಾಕಬಾರದು. ಪಾಪ ಬರ್ತದೆ." ಎಂದ.

"ಅಲ್ವೋ ಕೋಳಿ ಅಂಕ ಮಾಡಿ, ಚೂರಿ ಕಟ್ಟಿ ಹಿಂಸೆ ಕೊಟ್ಟರೆ ಬರಲ್ವೇನೋ?" ಎಂಬ ತರ್ಕವನ್ನು ಮುಂದಿಟ್ಟೆ. " ಹಾಗಲ್ಲ ಬುದ್ದಿ "ದುಡ್ಡಿಗೆ ಕೋಳಿಗಳನ್ನು ಮಾರಾಟ ಮಾಡಬಾರದು." ಎಂಬ ತನ್ನ ವಿಚಿತ್ರ ವಿತ್ತಂಡವಾದವನ್ನು ಮುಂದಿಟ್ಟು ಅಲ್ಲಿಂದ ಕಾಲ್ಕಿತ್ತ. ಎಲ್ಲರಿಗೂ ಧರ್ಮಾರ್ಥ ಕೋಳಿ ಮತ್ತು ದನಗಳಿಗೆ ಬರುವ ಕಾಯಿಲೆಗಳಿಗೆ ಔಷಧಿ ಕೊಡುತ್ತಾ ಸಿಗುವ ಆರಾಮವನ್ನು ಅನುಭವಿಸುತ್ತಾ, ಒಂದೆರಡು ಗದ್ದೆ ಮಾಡಿಕೊಂಡು ಕಾಲಹಾಕುತ್ತಿದ್ದ. ಕೇರಿಯುದ್ದಕ್ಕೂ ಇಂತಹುದೇ ಮನಸ್ಥಿಯವರೇ ಅನೇಕರಿದ್ದರು.

ಪತ್ರಿಕೆಯನ್ನು ಎತ್ತಿಕೊಂಡು ಅದರ ಮೇಲೆ ಕಣ್ಣಾಡಿಸತೊಡಗಿದೆ. ಆಗಲೇ ಸುಬ್ಬಣ್ಣನ ಮನೆಯ ನಾಗರಾಜ ಏದುಸಿರು ಬಿಡುತ್ತಾ, ಓಡುತ್ತಾ ಮನೆ ಕಡೆಗೆ ಬಂದ.  ಬಂದ ಗಡಿಬಿಡಿ ನೋಡಿದರೆ ಏನೋ ಅನಾಹುತವಾಗಿದೆ ಎಂದು ಅಂದಾಜಿಸಿದೆ. ಅವನನ್ನೇ ನೋಡುತ್ತಾ, "ಎಂತಾ ಆಯಿತು?" ಎಂದೆ. 'ನಮ್ಮ ಮನೆಯ ದನವನ್ನು ಯಾವುದೋ ಪ್ರಾಣಿ ಹಿಡಿದಿದೆ, ಬೇಗ ಬಂದು ತಪ್ಪಿಸಬೇಕು. ಎಂದು ಅವಸರ ಮಾಡಿದ. ಈಗ ಇಚಾರಣೆ ಸರಿಯಲ್ಲವೆಂದು ನನ್ನ ಹಳೆ ಕಾಲದ ರೈಪಲ್ನ್ನು ತೆಗೆದು ಚರೆ ತುಂಬಿಸಿ, ಮನೆಯಿಂದ ಹೊರಟೆ. ಅವನ ಮನೆಗೆ ಏನಿಲ್ಲವೆಂದರೂ ಐದು ನಿಮಿಷದ ಹಾದಿ. ಕೂಡಲೇ ಹಳೇ ಎಜಿಡಿ ಬೈಕ್ನ ಕಿವಿ ಹಿಂಡಿದೆ. ನಾಗರಾಜ ನನ್ನ ಕೋವಿ ಹಿಡಿದು ಗೇಟಿನೆಡೆಗೆ ಓಡಿದ. 

ಕೆಂದೂಳು ಮಿಶ್ರಿತ ಹೊಗೆ ಉಗುಳುತ್ತಾ ಬೈಕ್ ಮಣ್ಣು ರಸ್ತೆಯಲ್ಲಿ ಜಿಂಕೆಯಂತೆ ಓಡಿತು. 'ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' 'ನಾನು ನೋಡಿಲ್ಲ ಮರ್ರೆ, ಅಮ್ಮ ನೋಡಿದ್ದಾಳೆ.' ಎಂದ. 'ಅಮ್ಮನಿಗೂ ಸರಿಯಾಗಿ ಕಾಣಿಸಿಲ್ಲವಂತೆ' ಎಂದ. 'ನೀವೆಲ್ಲಾ ಕುರುಡರೋ ಹೇಗೆ?' ಎಂದು ಅಸಮದಾನದಿಂದ ಗದರಿದೆ. ಅವನಿಂದ ಉತ್ತರವೇ ಬರಲಿಲ್ಲ. 'ಯಾವ ಕಡೆ ಹೋಯಿತೆಂದು ಗೊತ್ತಾ?' 'ಶಿಖಾರಿ ಗುಡ್ಡದ ನೆತ್ತಿಯ ಕಲ್ಲು ಬಂಡೆ ಎಡೆಗೆ ಕರುವನ್ನು ಎಳೆದೊಯ್ಯಿದಿತು.' ಎಂದ. 'ಸರಿ', ಎಂದು ಶಿಖಾರಿ ಗುಡ್ಡದ ನೆತ್ತಿಯ ಕಡೆಗೆ ಬೈಕ್ ತಿರುಗಿಸಿದೆ. ನನ್ನ ಮನೆಯಿಂದ ಕೇವಲ ಎರಡು ಫರ್ಲಾಂಗ್ ದೂರ ಮಾತ್ರವಿದ್ದ ಎರಡು ಪರ್ವತದ ಕಣಿವೆಯಲ್ಲಿ ಬೈಕ್ನ್ನು ನಿಲ್ಲಿಸಿದೆ. ನಾಗರಾಜನ ತಾಯಿ ಅಲ್ಲೇ ಒಂಟಿ ದೆವ್ವದಂತೆ ದೊಣ್ಣೆ ಹಿಡಿದು ವೀರಬಾಹುವಿನಂತೆ ನಮಗಾಗಿ ಕಾಯುತಲಿದ್ದಳು. ಇಲ್ಲಿಂದಲೇ ಶಿಖಾರಿ ಗುಡ್ಡದ ನೆತ್ತಿಗೆ ಹೋಗುವ ಕಾಲು ದಾರಿಯೊಂದಿತ್ತು. ಎರಡು ಮೂರು ನಿಮಿಷದೊಳಗೆ ನೆತ್ತಿ ತಲುಪಬಹುದಾದ ಜಾಗದಲ್ಲಿಂದು ಅಸಾಧ್ಯ ಜಿಗ್ಗು ಬೆಳೆದು ಯಾರೂ ಏರದಂತೆ ಪ್ರತಿಬಂದಿಸಿತ್ತು ಪ್ರಕೃತಿ. ಮೊದಲೆಲ್ಲಾ ಇಲ್ಲಿ ವಿಶಾಲವಾದ ಮರವಿದ್ದಿತ್ತು. ನಾಟ ಕಳ್ಳರಿಗೆ ಬಲಿಯಾಗಿದ್ದವು. 

ನಾವು ಬಂದದ್ದೇ 'ಒಡೀರೆ, ಈ ಜಿಗ್ಗಿನೊಳಗೆ ನಮ್ಮ ಹೆಂಗರುವೊಂದನ್ನು ಎಳೆದೊಯ್ಯಿದಿತು. ಸ್ವಲ್ಪ ಕಾಣಿ.' ಎಂದು ಭಯಭೀತಳಾದಂತೆ ತೋರುತ್ತಿದ್ದ ಆಕೆ, ಒಂದು ಅಸಾದ್ಯ ಜಿಗ್ಗಿನೆಡೆಗೆ ತನ್ನ ಅಸಹಾಯಕ ಕೈ ತೋರಿದಳು ಸುಬ್ಬಮ್ಮ. ' ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' ಆಕೆ ವೀಳ್ಯ ಉಗಿಯುತ್ತಾ 'ಚಿರತೆ ಇರಬೇಕು ಅಯ್ಯ. ಒಂದೇ ಅಲ್ಲ, ಎರಡು ಮೂರು ಪ್ರಾಣಿ ಇದ್ದಂಗಿದೆ.' ಆಶ್ಚರ್ಯ ಚಕಿತನಾದೆ. ಈ ಇಳಿ ಸಂಜೆಯ ಹೊತ್ತಿನಲ್ಲಿ ಕರುವನ್ನು ಹೊತ್ತೊಯ್ಯುವ ಪ್ರಾಣಿ ಯಾವುದೆಂದು ಅಂದಾಜಿಸಲಾಗಲಿಲ್ಲ.

ಮೊದಲೆಲ್ಲಾ ಹಗಲು ಹೊತ್ತಿನಲ್ಲೇ ದಾರಿಯಲ್ಲಿ ಮೊಲ, ಜಿಂಕೆ, ಕಡವೆಗಳು ಸಿಕ್ಕುತ್ತಿದ್ದವು. ಗುಡ್ಡದಲ್ಲಿ ನಿಶ್ಚಿಂತವಾಗಿ ಮೇಯುತ್ತಿದ್ದವು. ಕೇರಿಯವರ ಬಾಯಿ ಚಪಲಕ್ಕೆ, ಪೇಟೆ ಜನರ ಶೋಕಿಗೆ ಅವೆಲ್ಲಾ ತಮ್ಮ ಪ್ರಾಣ ಅರ್ಪಿಸಬೇಕಾಗಿ ಬಂತು. ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಬಂದೂಕು ನಳಿಕೆಗೆ ಗುರಿ ಮಾಡಿದರು. ಶಿಖಾರಿ ಗುಡ್ಡದ ಪ್ರಾಣಿಗಳ ಜೀವ ವಿಮೋಚನೆಗೆ ಒಳಗಾಯಿತು. ಒಂದೆರಡು ದಿನಗಳಲ್ಲ ಅನೇಕ ವರ್ಷಗಳವರೆಗೆ ಭೇಟೆ ಅವ್ಯಾಹತ. ಕಾಡಿನಲ್ಲಿರಬೇಕಾದುದು ಇವರ ಹೊಟ್ಟೆಯಲ್ಲಿ ತಣ್ಣಗೆ ಮಲಗಿತ್ತು. ಕೆಲವರಿಗೆ ಬೇಟೆ ಶೋಕಿ ಇನ್ನು ಕೆಲವರಿಗೆ ಬಾಯಿ ಚಪಲ. ಬೇಡವೆಂದು ಬಡಕೊಂಡ್ರೂ ಬಿಡದೇ ತಿಂದು ಮುಗಿಸಿದರು. ಚಿರತೆಗಳಿಗೆ ತಿನ್ನಲೇನೂ ಸಿಗದೆ ಊರಿಗೆ ಧಾಳಿ ಮಾಡುವುದು ಸಾಮಾನ್ಯ ಸಂಗತಿಯಾಗ ತೊಡಗಿತು. ಹುಲಿ ಬೆಕ್ಕುಗಳು ಕೋಳಿ ಗೂಡುಗಳಿಗೆ ಧಾಳಿ ಮಾಡುತ್ತಿದ್ದವು. ಇತ್ತೀಚಿನ ದಿನ ಮಾನಸದಲ್ಲಿ ಇದು ವಿಪರೀತಕ್ಕಿಟ್ಟಿತು.

ಜಿಗ್ಗಿನೊಳಗೆ ನುಗ್ಗಿದ ಪ್ರಾಣಿಯಾವುದೆಂದು ಊಹಿಸುತ್ತಾ ನಾಗರಾಜನೊಡನೆ ಜಿಗ್ಗಿನೊಳಗೆ ನುಗ್ಗ ತೊಡಗಿದೆವು. ಕಿಚಕ್ ಕಿಚಕ್ ಎಂದು ಕಾಡು ಕೋಳಿಗಳು ಸಣ್ಣ ಸದ್ದು ಮಾಡಿ ಮರೆಯಾದವು. ಹಕ್ಕಿ ಪಿಕ್ಕಿಗಳು ಕಂಡರೆ ಒಂದೂ ಉಳಿಸುವುದಿಲ್ಲವೆಂದು ಮುಂದಡಿ ಇಟ್ಟೆ. ಚರೆ ಕೋವಿಯನ್ನು ನಾಗರಾಜನಿಗೆ ಕೊಟ್ಟು, ಅಡ್ಡ ಬಂದ ಜಿಗ್ಗನ್ನು ಸವರುತ್ತಾ ದಾರಿ ಮಾಡುತ್ತಾ ಮುಂದಡಿ ಇಡತೊಡಗಿದೆ. ಮಲಗಿರುವ ಹುಲ್ಲುಗಳು ಪ್ರಾಣಿಯೊಂದು ನುಸುಳಿ ಹೋದ ಸಾಕ್ಷಿ ನುಡಿಯುತ್ತಿದ್ದವು. ಶಿಕಾರಿಯ ಹೆಜ್ಜೆ ಗುರುತು ಹಿಡಿಯಲು ಪ್ರಯತ್ನಿಸಿದೆ. ಮಳೆ ಹೋಗಿ ಅನೇಕ ದಿನಗಳಾದುದರಿಂದ ಮಣ್ಣಿನಲ್ಲಿ ಹೆಜ್ಜೆ ಗುರುತು ಗುರುತಿಸದಾದೆ.  ಇಂತಹ ಜಿಗ್ಗಿನೊಳಗೆ ಹೇಗೆ ನುಗ್ಗಿ ಹೋಗಿರಬೇಕೆಂದು ಆಲೋಚಿಸತೊಡಗಿದೆ. 

ಕೆಲವೇ ನಿಮಿಷ ನಡೆಯುವುದರೊಳಗೆ ಮೈ ಕೈ ಎಲ್ಲಾ ಗೀರಿದ ಗಾಯಗಳಿಂದ ತುಂಬಿ ಹೊಯ್ತು. ಬೆವರಿನೊಂದಿಗೆ ಬೆರೆತ ಗೀರಿದ ಗಾಯಗಳು ಚುರುಗುಟ್ಟುತ್ತಿದ್ದವು. 'ಬೇಕಾ ನಿನಗಿದೆಲ್ಲಾ?' ಎನ್ನುತಲಿತ್ತು ಒಳ ಮನಸ್ಸು. ಆಗಲೇ ಮುಸುವ ಮಂಗವೊಂದು ಕೀರಲು ದನಿ ಮಾಡಿ ತನ್ನ ಗುಂಪಿಗೆ ಸಂಜ್ಞೆ ಕೊಟ್ಟಿದ್ದು ಅಸ್ಪಷ್ಟವಾಗಿ ತೇಲಿಬಂತು. ಕಷ್ಟ ಪಟ್ಟು ಶಿಖಾರಿಗುಡ್ಡದ ನೆತ್ತಿಯೊಳಗೆ ಕಾಲಿರಿಸಿದಾಗ ಸೂರ್ಯ ಸಂಪೂರ್ಣವಾಗಿ ಜಿಗ್ಗಿನೆಡೆಯಲ್ಲಿ ಕಂತಲು ಕಾಯುತ್ತಿದ್ದ. ಗಾಳಿ ಗುಡ್ಡದ ಮೇಲಿನಿಂದ ಕೆಳಗೆ ಬೀಸುತಲಿತ್ತು. ಭೂತಾಕಾರದ ಮರಗಳು ಅಲ್ಪ ಬೆಳಕನ್ನು ಬಿಟ್ಟು ಭಯದ ವಾತಾವರಣ ನಿರ್ಮಿಸಿತ್ತು. ಹಕ್ಕಿ, ಮುಸುವ ಮಂಗಳಗಳ ವಿಪರೀತ ಅರಚಾಟ ಸ್ಪಷ್ಟವಾಗ ತೊಡಗಿತು. ಇಲ್ಲೆ ಎಲ್ಲೋ ಸನಿಹದಲ್ಲಿ ಅದಿರಬೇಕೆಂದು ಜಾಗರೂಕನಾದೆ. 

ಮರದ ನೆರಳಿನಲ್ಲಿ ಕರಿ ಕರಡಿಯಂತಹ ಬಂಡೆಯೊಂದು ಕಂಬಳಿ ಹೊದ್ದಂತೆ ನಮ್ಮೆದುರಿಗಿತ್ತು. ಈ ನೆರಳಿನಡಿ ಏನೋ ಚಲಿಸಿದ ಸದ್ದಾಯಿತು. ಒಂದು ಜೀವಿ ಮತ್ತೊಂದು ಜೀವಿಯನ್ನು ಎಳೆದಾಡುವಂತಹ ಸದ್ದು. ಎರಡು ಮೂರು ಜೀವಿಗಳು ಓಟ ಮುಗಿಸಿ ಬಂದು ದೀರ್ಘ ಶ್ವಾಸ ಬಿಡುವ ಸದ್ದುಗಳು. ಕೆಂಪಾದ ಆಗಸದೆದುರಿಗೆ ಬಿದ್ದಿದ್ದ ಕರಿ ಕಲ್ಲಿನ ಮೇಲೆ ಆ ಜೀವಿ ತನ್ನ ದರ್ಶನ ಕೊಟ್ಟಿತು. ಒಮ್ಮೆಲೆ ಮೆದುಳಿನ ನರ ತಂತುಗಳೆಲ್ಲಾ ತಲ್ಲಣಿಸಿ ಸ್ತಬ್ದವಾದವು. ಮೊದಲೇ ಪಸೆ ಆರಿದ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಲ್ಲಿನ ಮೇಲೆಲ್ಲಾ ರಕ್ತದೋಕುಳಿ. ದನದ ಕುತ್ತಿಗೆ ಕಚ್ಚಿ ಹಿಡಿದ ಚಿರತೆಯೊಂದು ತನ್ನ ಬೇಟೆಯನ್ನು ಸುರುಕ್ಷಿತ ಸ್ಥಳಕ್ಕೆ ಎಳೆದೊಯ್ಯುವ ಮೊದಲು ಸ್ವಲ್ಪ ವಿಶ್ರಾಂತಿಗಾಗಿ ಬಂಡೆ ಎಡೆಯಿಂದ ನಮಗೆ ದರ್ಶನ ಕೊಟ್ಟಿತ್ತು. ತೀವ್ರ ಚಟುವಟಿಕೆಯಿಂದ ಕೂಡಿದ್ದ ಸಂಜೆಯಲಿ ಚಿರತೆ ನಮ್ಮನ್ನು ಗಮನಿಸಲಿಲ್ಲ. ನಾವಿಬ್ಬರೂ ಹಿಂದೆಯೂ ಹೋಗದಂತಹ ಮುಂದಡಿಯು ಇಡದಂತಹ ಸಂಧಿಗ್ದಕ್ಕೆ ಸಿಕ್ಕಿಹಾಕಿಕೊಂಡೆವು. ಹಿಮ್ಮುಖವಾಗಿ ಓಡಲಾರದ ಎಡ ಬಲಕ್ಕೂ ದಾರಿಗಳಿಲ್ಲದ ಬೋನೊಳಗೆ ಬಿದ್ದಿದ್ದೆವು. ಕ್ಷಣ ಕಾಲ ಮೆದುಳೇ ಖಾಲಿ ಖಾಲಿ.

ನಮ್ಮೆಲ್ಲ ಕುಕೃತ್ಯಗಳು ಶಿಖಾರಿಗುಡ್ಡದ ಚಿರತೆಯ ಕಣ್ಣುಗಳಲ್ಲಿ ಪ್ರತಿಫಲನಗೊಂಡು ನನ್ನನ್ನು ವಿಚಲಿತಗೊಳಿಸಿದವು. ತೆವಳುತ್ತಾ ಮೇಲೆ ಬರುತ್ತಾ ಚಿರತೆಯ ಸಂಪೂರ್ಣ ದರ್ಶನ ಸಿಗುತ್ತಲೇ ನಾಗರಾಜ ನಡುಗುವ ಕೈಗಳಲ್ಲೇ ಕೋವಿಯ ಕುದುರೆಯನ್ನು ಅಮುಕಲು ತಯಾರಾಗಿದ್ದ. ಒಮ್ಮೆಲೆ ನಾನು ಕೋವಿ ಮೇಲೆರುಗುದಕ್ಕೂ ಆತ ಕೋವಿಯ ಕುದುರೆಯನ್ನು ಸಂಪೂರ್ಣ ಅದುಮುದಕ್ಕೂ ಸರಿ ಹೋಯ್ತು. ಗುಂಡು ಹಾರದೆ ಕೋವಿ ಕೆಳಗೆ ಬಿದ್ದು ನಿಶ್ಶಬ್ದವಾಯ್ತು. ನಾಗರಾಜ ನನ್ನನ್ನೇ ಆಶ್ಚರ್ಯ ಚಕಿತನಾಗಿ ನೋಡ ಹತ್ತಿದ. ಕೋವಿಯಿಂದ ಶಬ್ದ ಹೊರ ಹೊಮ್ಮಿದಿದ್ದರೆ ನಾವಿಬ್ಬರೂ ಪಡ್ಜವಾಗುತ್ತಿದ್ದೆವು. ವಿರುದ್ದ ದಿಕ್ಕಿನಿಂದ ಬೀಸುತ್ತಿದ್ದ ಗಾಳಿ, ಮೀಟದ ಕೋವಿಯ ಕುದುರೆ ನಮ್ಮನ್ನುಳಿಸಿತ್ತು. ಮುಂದಿದ್ದ ನಾಗರಾಜನಿಗೆ ವಾಪಾಸಾಗುವ ಸೂಚನೆ ನೀಡಿದೆ. ಚಿರತೆಯನ್ನೇ ಗಮನಿಸುತ್ತಾ ಏನೂ ಮಾತನಾಡದೇ ಹಿಮ್ಮುಖವಾಗಿ ಚಲಿಸತೊಡಗಿದೆವು. ಸುಬ್ಬಮ್ಮನ್ನ ಕರುವಾಗಲೇ ಪ್ರಾಣ ಬಿಟ್ಟಿತ್ತು. 'ಹೂಜಿ ಗಿಡದ' ಬೋನಿನಿಂದ ನೊಣ ಹೊರ ಬರುವಂತೆ ಬರತೊಡಗಿದೆವು. ಸುಬ್ಬಮ್ಮನ ಕರುವಾಗಲೇ ಪ್ರಾಣ ಬಿಟ್ಟಾಗಿತ್ತು. ಜಿಗ್ಗಿನೊಳಗೆ ಹೇಗೋ ಸುಲಭವಾಗಿ ನುಗ್ಗಿದ್ದೆವು. ಹುಲಿ ಬೋನಿಗೆ ಬಿದ್ದ ಇಲಿಯಂತಾಗಿದ್ದೆವು. ಮೈಯಲ್ಲಿ ಚೂರೂ ಜಾಗವಿಲ್ಲದಂತೆ ತರಚು ಗಾಯಗಳು. ಹಿಂದಡಿ ಇಡುತ್ತಾ ಬೈಕಿರುವಲ್ಲಿಗೆ ಬಂದಾಗ " ಗುಂಡು ಹಾರಿಸಿ ಕೊಲ್ಲ ಬಹುದಿತ್ತಲ್ಲಾ?" ಎಂದ ನಾಗರಾಜ. "ಕರು ಉಳಿಯುವ ಸಾಧ್ಯತೆ ಇಲ್ಲದಾಗ ಕೊಂದೇನು ಲಾಭ?" " ಮುಂದೊಂದು ದಿನ ಅದು ಇನ್ನೊಂದು ದನವನ್ನು ಸಾಯಿಸಬಹುದು." "ಅದಕ್ಕೆ ಈಗಲೇ ಕೊಲ್ಲುವುದೇ?" "ಅದೊಂದು ಹೆಣ್ಣು ಚಿರತೆ, ಈಗಷ್ಟೇ ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅವು ಹೊರಬರುವುದಿಲ್ಲ. ತನ್ನ ಸಂಗಾತಿಯನ್ನೂ ಕಳೆದುಕೊಂಡಿರಬೇಕು. ಹಾಗಾಗಿ ಸ್ವತಃ ಬೇಟೆಗೆ ಬಂದಿದೆ. ಮರಿಗಳೆಲ್ಲಾ ಅನಾಥವಾಗುವುದು ಸರಿಯಲ್ಲ." ಎಂದು ಆತನಿಗೆ ತಿಳಿ ಹೇಳಿದೆ. "ನಿಮಗೆ ಹೇಗೆ ಇಷ್ಟೆಲ್ಲಾ ವಿವರ ತಿಳಿಯಿತು?" ಅವನೆಂದ. 

" ಅದರ ಹೊಟ್ಟೆಯನ್ನು ನೀನು ಗಮನಿಸಿದೆಯಾ? ಅದು ಬೆನ್ನಿಗಂಟಿದೆ. ಹಾಲು ತುಂಬಿದ ಅದರ ಜೋಲು ಮೊಲೆಗಳನ್ನು ನೋಡಿದರೆ ಅದೀಗಷ್ಟೇ ಮರಿ ಹಾಕಿದೆ ಎಂದು ಗೊತ್ತಾಗುತ್ತೆ." ಎಂದೆ. ನಾಗರಾಜ ಏನೂ ಮಾತನಾಡದೆ ನನ್ನ ಜೊತೆ ಹೆಜ್ಜೆ ಹಾಕಿದ. ಶಿಖಾರಿ ಗುಡ್ಡವನ್ನು ಪ್ರಾಣಿ ಮುಕ್ತ ಮಾಡಿದ್ದಕ್ಕೆ ಸೇಡು ತೀರಿಸಲೋ ಎಂಬಂತೆ ಚಿರತೆಯೊಂದು ನಮ್ಮ ಕರುವನ್ನು ಎಳೆದೊಯ್ಯಿದಿತು. ಬೈಕನ ಕಿವಿ ಹಿಂಡಿ ಧೂಳು ರಸ್ತೆಯಲ್ಲಿ ನಿಧಾನಕ್ಕೆ ಧೂಳಿನೊಂದಿಗೆ ಒಂದಾದೆವು.



ಶ್ರೀಧರ್. ಎಸ್. ಸಿದ್ದಾಪುರ.

                                                                                ವಿಳಾಸ:- ರಥಬೀದಿ ಸಿದ್ಧಾಪುರ,

                          ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,

                          ಉಡುಪಿ ಜಿಲ್ಲೆ 576229.

 

Saturday, June 5, 2021

ಇತಿಹಾಸ ಹೊಸೆದ ಹೂ ಬಳ್ಳಿ ಹೊಸಗುಂದ...






ಹೂ ಅರಳುವ ಹೊತ್ತು. ಮಲಗಲು ಹೋದ ರವಿ ಇನ್ನೂ ಎದ್ದಿರಲಿಲ್ಲ. ಒಮ್ನಿಯ ಲಾಟಾನು ಬೆಳಕನು ಮುಂದ್ಹಾಯಿಸಿ ಮಂಜಿನ ಪರದೆ ಸೀಳಿ ನಮ್ಮ ವಾಹನ ಸಾಗರ ತಾಲೂಕಿನ ಆನಂದಪುರದ ಸನಿಹದ ಹೊಸಗುಂದದತ್ತ ಧಾವಿಸುತಲಿತ್ತು. ಗೂಗಲ್ ಗುರುವಿಗೆ ಸಹಾಯಕ್ಕಾಗಿ ಪದೇ ಪದೇ ಯಾಚಿಸಿದರೂ ನಿಮ್ಮ ಮೊಬೈಲ್ ನೆಟ್ವಕರ್್ ಕ್ಷೇತ್ರದಲ್ಲಿಲ್ಲವೆಂದು ಸಂದೇಶ ತೋರಿಸುತ್ತಾ ಮುಷ್ಕರ ಹೂಡಿತ್ತು. ಆನಂದಪುರದಲಿ ಎಡಕ್ಕೆ ಹಾಯ್ದು, ಆಕಾಶಕ್ಕೆ ಚಪ್ಪರ ಹಾಸಿದ ಮರಗಳ ನಡುವೆ ಹುದುಗಿದ ಹೊಸಗುಂದವೆಂಬ ಹೊಸಲೋಕವನ್ನು ಹಳೇ ಒಮ್ನಿ ಕಾರಿನಲ್ಲೇ ತಲುಪಿಕೊಂಡೆವು.


ಹೊಸನಗರದಿಂದ ಉತ್ತರಾಭಿಮುಖವಾಗಿ ಹೊರಟು ಆನಂದಪುರದಲ್ಲಿ ಎಡಕ್ಕೆ ಹೊರಳಿದರೆ ಹೊಸಗುಂದದ ದೇವಾಲಯಗಳ ಹೆಬ್ಬಾಗಿಲಿಗೆ ಬಂದು ಬೀಳುತ್ತೀರಿ. ಇಲ್ಲಿಂದ ಕೇವಲ 12 ಕಿಲೋ ಮೀಟರ್. ಸುತ್ತಲೂ ಆವರಿಸಿದ ಭತ್ತದ ಬಯಲು. ಊರಿಗೆ ಹೊಸಗುಂದ ಹೆಸರು ಹೇಗೆ ಬಂತೆದು ಇಲ್ಲಿನವರಿಗಿನ್ನೂ ಗೊತ್ತಿಲ್ಲ. ಮನ ಸೆಳೆವ ಆಕರ್ಷಕ ಶೈಲಿಯ 12ನೆಯ ಶತಮಾನದ ದೇಗುಲ.

ಸುತ್ತೋಣ ಬನ್ನಿ...

ಪನ್ನೀರ ಪುಷ್ಕರಣಿಯಲಿ ಕಾಲು ತೋಯಿಸಿ ಮೆಟ್ಟಿಲೇರಿದಾಗ ಕಾಣಿಸಿದ್ದು ರಾಶಿ ರಾಶಿ ವೀರಗಲ್ಲು. ಕಾಲನ ಹೊಡೆತಕ್ಕೆ ಕೆಲವು ಕಂಗಾಲಾಗಿ ಮಲಗಿದ್ದರೆ ಕೆಲವೇ ಕೆಲವು ನಿಂತಿದ್ದವು. ತಮ್ಮ ಮೇಲಿನ ಅಕ್ಷರಗಳನ್ನೆಲ್ಲಾ ನುಂಗಿಕೊಂಡಿದ್ದವು ಕೆಲವು! ವೀರಗಲ್ಲಿನ ಮೇಲೂ ಕಲಾ ನೈಪುಣ್ಯ. ಚಿತ್ರ ವಿಚಿತ್ರ ಚಿತ್ರಗಳ ವಿಶಿಷ್ಟ್ಯ ವೀರಗಲ್ಲುಗಳ ಸಮೂಹವೇ ಇಲ್ಲಿದೆ. ಇಲ್ಲಿ ನಡೆದಿರಬಹುದಾದ ಯುದ್ಧಗಳ ಸಣ್ಣ ಚಳಕನ್ನು ಈ ವೀರಗಲ್ಲುಗಳು ನಮಗೆ ತೋರಿಸುತ್ತವೆ. ನಮ್ಮವರ ಇತಿಹಾಸದ ದರ್ಪಣಗಳಿವು ಎಂಬುದನ್ನೂ ಅರಿಯದೇ ಸಾಯಲು ಬಿಟ್ಟಂತಿದೆ. ಕಲ್ಲಿಗೆ ಭಾಷೆ ಬಂದಿದ್ದರೆ ಹರಟ ಬಹುದಿತ್ತು, ಇತಿಹಾಸ ಕೆದಕಬಹುದಿತ್ತು!




ಮುಂದೆ ಸಿಗುವುದೇ ದೇವಾಲಯ ಸಮುಚ್ಚಯ. ಹಾಸುಗಲ್ಲಿನ 18 ಕಂಬಗಳ ಮೇಲೆ ಅರಳಿ ನಿಂತ ನವರಂಗದ ಶೋಭೆ. ಕಲಾತ್ಮಕತೆಯಂತೂ ಅತ್ಯದ್ಭುತ. ಸ್ಫಟಿಕರೂಪಿ ಶಿವಲಿಂಗ ಲಿಪ್ಸ್ಟಿಕ್ ಹಾಕಿದಂತೆ ಕೆಂಪು. ಉಳಿದರ್ಧ ಕಂದು! ವರ್ನಾನಾತೀತ. ನೇಪಾಳದಿಂದ ತರಿಸಲಾದ ಶಿವಲಿಂಗ ಎಂಬುದು ಅರ್ಚಕರ ಅಂಬೋಣ. ದಕ್ಷಿಣ ಭಾರತದಲ್ಲೆಲ್ಲೂ ಇಂತಹ ಅಪೂರ್ವ ಲಿಂಗವಿಲ್ಲವೆನ್ನುತ್ತಾರೆ! ಮತ್ತೆ ಮತ್ತೆ ನೋಡುವಷ್ಟು ಚೆಲವು. ಶಿವಲಿಂಗ ಜೊತೆಗಿರುವ ಪ್ರಸನ್ನ ನಾರಾಯಣ ದೇವಾಲಯವೋ ಮಹದ್ಭುತಗಳಲ್ಲೊಂದು. ನಾರಾಯಣನ ಮೂರುತಿ ಪೀಠ ಸೇರಿದಂತೆ ಸುಮಾರು 7 ಅಡಿ. ಶಿವಲಿಂಗದೊಂದಿಗೆ ಪೈಪೋಟಿಗಿಳಿದಂತಿರುವ ಪ್ರಸನ್ನ ನಾರಾಯಣನ ಮೂರುತಿ. ನವರಂಗದ ಹೊರ ಭಿತ್ತಿಯಲ್ಲಿ ಅನೇಕ ಕತೆಗಳನ್ನು, ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ! ಕೆತ್ತನೆಯ ನಾಜೂಕು ನಿಮ್ಮನ್ನು ಸೂರೆಗೊಳಿಸುತ್ತದೆ.





ಕೋಟೆ ಇದ್ದಿರಬಹುದೇ?

ದೇವಾಲಯದ ಸನಿಹದಲ್ಲೇ 12 ಅಡಿಗಳೆಷ್ಟು ಎತ್ತರದ ಮಣ್ಣಿನ ಗೋಡೆಗಳಿವೆ. ಯಾವುದೋ ಸಾಮಂತ ರಾಜ ಆಳ್ವಿಕೆ ಮಾಡಿರುವ ಸಾಧ್ಯತೆಗಳಿವೆ. ಕೆದಕಿದರೆ ಇತಿಹಾಸದ ಕುರುಹುಗಳು ಕಾಣ ಸಿಕ್ಕಾವು. ದೇವಾಲಯದ ಸನಿಹದ ಕಾಡು ಅಮೂಲ್ಯ ವನ ಸಂಪತ್ತಿನ ಆಗರ. 600 ವರುಷ ಹಳೆಯ ಮಾವಿನ ಮರವೊಂದು ನಾವು ಆರು ಜನ ಮುತ್ತಿಗೆ ಹಾಕಿದರೂ ಕೈ ಸಾಲದಾಯಿತು!! 500 ವರುಷ ಹಳೆಯ ಬಳ್ಳಿಗಳು, ವಿಶಿಷ್ಟ್ಯ ಪೊದೆಗಳು ಅನೇಕ ದಿನಗಳ ವರೆಗೆ ನಿಮ್ಮ ಮನಸ್ಸನ್ನು ಆವರಿಸದೇ ಬಿಡದು. 600 ಎಕೆರೆಯಲಿ ಹರಡಿದ ಹೊಸಗುಂದದ ದೇವಾಲಯ ನಿಶ್ಚಯವಾಗಿ ನಿಮಗೆ ಹೊಸ ಸ್ಟೋರಿ ನೀಡುವಲ್ಲಿ ಖಂಡಿತ ಸೋಲದು. ಇಲ್ಲಿನ ವನ ಸಂಪತ್ತನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸರ್ವೆ ನಡೆಸಿ 540ಕ್ಕೂ ಹೆಚ್ಚು ಅಳಿವಿನಂಚಿನ ಗಿಡಗಳಿವೆಯೆಂದು ಗುರುತಿಸಿದ್ದಾರೆ! ಅಬ್ಬಾ ಎಂದಿತು ಮನ.

ವಿಶಿಷ್ಟ್ಯ ವಿನ್ಯಾಸದ ಕಾಳಿ ದೇವಾಲಯವನ್ನು ನೋಡದೆ ಬಂದರೆ ಖಂಡಿತ ಏನೋ ಒಂದು ಕಳೆದುಕೊಂಡಂತೆ. ಕೇರಳೀಯ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ಕಡೆದು ಕೆತ್ತಿದ್ದಾರೆ. ಅಂದವಾಗಿ ಅದಕ್ಕೆ ಮಂಗಳೂರು ಹೆಂಚು ಹೊದಿಸಲಾಗಿದೆ. ಸುತ್ತಲೂ ಸುಂದರ ಪೌಳಿಯನ್ನು ನಿರ್ಮಿಸಿದ್ದಾರೆ.

ಇತಿಹಾಸ

ಇತಿಹಾಸವನು ಕೆದಕಿದರೆ ಕ್ರಿ ಶ 9 ನೆಯ ಶತಮಾನಕ್ಕೆ ನಮ್ಮನ್ನು ಒಯ್ಯುತ್ತದೆ. ಕೆಲವೇ ವರ್ಷಗಳ ಕೆಳಗೆ ಮಣ್ಣಿನಡಿಯಲ್ಲಿ ಮಲಗಿದ್ದ ದೇವಾಲಯವು ಊರಿನವರ (ನಾರಾಯಣ ಶಾಸ್ತ್ರಿ ದಂಪತಿಗಳು) ಮತ್ತು ಉಮಾ ಮಹೇಶ್ವರ ಸೇವಾ ಟ್ರಸ್ಟ್ನ ಕಾಳಜಿಯಿಂದ ಜೀರ್ಣೋದ್ದಾರಗೊಂಡಿದೆ. ಎಲ್ಲಾ ದೇವಾಲಯಗಳನ್ನು ಮೊದಲಿದಂತೆ ನಿರ್ಮಿಸಲಾಗಿದೆ.

ಎ. ಸುಂದರಂ, ಜಿ.ವಿ ಕಲ್ಲಾಪುರ, ಸಾಮಕ್ ಅವರ ಸಂಶೋಧನೆಯ ಪರಿಶ್ರಮ ಎದ್ದು ಕಾಣುತ್ತದೆ. ಇಲ್ಲಿನ ಶಾಸನಗಳನ್ನು ಓದಿ ಇದರ ಐತಿಹ್ಯದ ಗಂಟನ್ನು ಬಿಡಿಸಿದ್ದಾರೆ. ಉತ್ಖನನ ಗೊಂಡಾಗ ಶಿಲಾಯುಗದ ಆಯುಧಗಳೂ, ಗಂಗರ ಕಾಲದ ನಾಣ್ಯಗಳೂ ಸಿಕ್ಕಿವೆ ಎಂದು ಹೇಳಲಾಗುತ್ತದೆ. 

ನಿರ್ಮಾಣ:-

ಪ್ರಸನ್ನ ನಾರಾಯಣಿ ದೇವಾಲಯವನ್ನು ಬಲದೇವನೆಂಬುವವನು 1242ರಲ್ಲಿ ನಿರ್ಮಿಸಿದನೆಂದು ಐತಿಹ್ಯ ಹೇಳುತ್ತದೆ. ಕ್ರಿ. ಶ 1320ರಲ್ಲಿ ಹೊಯ್ಸಳರ ವೀರ ಬಲ್ಲಾಳ ದೇವರಸನು ಕಂಚಿ ಕಾಳಮ್ಮದೇವಾಲಯಕ್ಕೆ ಭೂ ದಾನ ನೀಡಿದ ಶಾಸನ ಪತ್ತೆಯಾಗಿದೆ. ಗಣಪತಿ, ವೀರ ಭದ್ರ, ಮಹಿಷ ಮರ್ಧಿನಿ, ಸುಬ್ರಹ್ಮಣ್ಯ ದೇವಾಲಯ ನಿರ್ಮಿಸಿದನೆಂದು ಅಳಿಯದೇ ಉಳಿದ ಶಾಸನಗಳು ಸಾರುತ್ತವೆ. 

ಇಲ್ಲಿನ ದೇವಾಲಯಗಳು ದ್ರಾವಿಡ, ಹೊಯ್ಸಳ, ಪಲ್ಲವ , ಕೇರಳೀಯ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಅತ್ಯದ್ಬುತವಾದ ದೇವಾಲಯ ಸಮುಚ್ಚಯದ ಜೊತೆಗೆ 600 ಎಕರೆ ದೇವರ ಕಾಡು ಪರಿಸರಾಸಕ್ತರಿಗೆ, ಇತಿಹಾಸ ಪ್ರಿಯರಿಗೆ ಸುಗ್ರಾಸ ಭೋಜನವನುಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. 

ಶ್ರೀಧರ್. ಎಸ್. ಸಿದ್ದಾಪುರ


 

Tuesday, May 18, 2021

ಓದಲಾರೆ ಓದದೆಯೂ ಇರಲಾರೆ!!



ತೀವ್ರತೆ, ತುಮುಲ, ಕಲ್ಪನೆಗಳಿದ್ದರೆ ಮಾತ್ರ ಕವಿತೆ ಹುಟ್ಟಬಹುದೇನೊ? ಕತೆ ಕಟ್ಟಬಹುದೇನೋ? ತೀವ್ರ ತಿರಸ್ಕಾರ, ವಿಷಾದ ಜೊತೆಯಾದಾಗ ಹುಟ್ಟುವ ಭಾವಕ್ಕೆ ಕತೆಯ ಚೌಕಟ್ಟು ತೊಡಿಸಬಹುದೇನೋ? 

ಸಣ್ಣಗೆ ಜಿನುಗುವ ಲಾಟಾನು ಬೆಳಕಿನಲಿ ಕವಿ ಅನುಭವಿಸಿದ ಅತೀವ ಭಾವನೆಗಳನ್ನು ಕೊನೆ ಮೊದಲಿಲ್ಲದ ವಿಷಾದದಲ್ಲಿ ಅದ್ದಿ ತೆಗೆದಂತಹ ಬರೆಹ. 

ಅಪ್ಪ, ಲೀಲಾವತಿ ಮತ್ತು 'ನಾನು' ಎಂಬ ಮೂರು ಭಿನ್ನ ಟಿಸಿಲುಗಳಲ್ಲಿ ಹಬ್ಬಿ ಹರಡಿದ  ಕಥನ ಕವನ! ಹೃದಯದ ರಕ್ತ ಬಸಿದು ಬಿಡುವಂತಹ ನಿಗಿ ನಿಗಿ ಸುಡು ಸಾಲುಗಳ ನಡುವೆ ಹರಡಿದ ಕತೆ. ಭಿನ್ನ ರೂಪಕಗಳಲ್ಲಿ ಕಸಿ ಕಟ್ಟಲಾದ ಕತೆ. ಈ ಪದಗಳು ಹುಟ್ಟು ಹಾಕುವ ಭಾವ ತೀವ್ರತೆ ನನ್ನಲ್ಲಿ ಮಾತ್ರವಾ ಎಂದು ಆಲೋಚಿಸುತ್ತೇನೆ. ಇಲ್ಲ. ಮುಂಬರಹ, ಹಿಂಬರದ ನುಡಿಗಳಲ್ಲೂ ಅವೇ ಮಾತು. ಕೆಲವೊಮ್ಮೆ ಆಲೋಚಿಸುತ್ತೇನೆ ಓದು, ಬರೆಹ ಎಲ್ಲವೂ            ನಿರರ್ಥಕವೆಂದು. ಎಲ್ಲವೂ ಅಯೋಮಯ. 

ಕಾದಂಬರಿಯ ಕೆಲವು ಸಾಲುಗಳು...

1. ನಿರಾಕರಣವೇ ಬಾಳಿನ ಬೆಳಕು.

ಒಮ್ಮೆಯಾದರೂ ಯಾರಿಂದಲಾದರೂ ತಿರಸ್ಕೃತಗೊಳದೇ ಹೋದರೆ ಕವಿತೆ ಜಾಳಾಗುತ್ತದೆ. ತಿರಸ್ಕೃತಗೊಂಡ ಜೀವಕ್ಕೂ ಕವಿತೆಗೂ ಜಗತ್ತನ್ನೇ ಗೆಲ್ಲುವ ಧೈರ್ಯ ಬರುತ್ತದೆ.

2. ನಿರೂಪಕ ಹೇಳುತ್ತಾನೆ...

ಪದ್ಯ ಬರೆಯಬಾರದು.

ಬರೆದರೆ ಅದು ಮತ್ತೊಬ್ಬರ ವಶವಾಗುತ್ತದೆ. ನಾವು ಪಳಗಿಸದೇ ಹೋದರೂ ಅವರು ಅದನ್ನು ಪಳಗಿಸುತ್ತಾರೆ. ಕವಿತೆಯನ್ನು ಪಳಗಿಸಿದರೆ ಕವಿಯನ್ನು ಪಳಗಿಸಿದಂತೆ ಅಂದುಕೊಳ್ಳುತ್ತಾರೆ. ನೀವು ನನ್ನನ್ನು ಪಳಗಿಸಲಾರಿರಿ. ನನ್ನ ಕವಿತೆಯನ್ನು ಕೂಡ ಎಂದು ಸಿಟ್ಟಿನಿಂದ ಹೇಳಬೇಕು ಅಂದುಕೊಳ್ಳುತ್ತೇನೆ, ಸಿಟ್ಟು ಕೂಡ ಪದ್ಯದ ಹಾಗೆಯೇ. ಮತ್ತೊಬ್ಬರ ವಶವಾದರೆ ಅದನ್ನೂ ಅವರು ಪಳಗಿಸಬಲ್ಲರು.

3. ....

ನಾನು ಕವಿತೆಗಳನ್ನು ಅನುವಾದಿಸಲಿಕ್ಕೇ ಹೋಗಲಿಲ್ಲ. ಅನುವಾದವೆಂದರೆ ಮಕ್ಕಳ ಪೋಟೋ ತೆಗೆದಂತೆ. ಮಕ್ಕಳಂತೆಯೇ ಕಾಣಿಸುತ್ತದೆ. ಜೀವ ಇರುವುದಿಲ್ಲ.

ಜೀವ ಇಲ್ಲದ ಪದ್ಯ ಬರೆಯುವುದಕ್ಕೆ ಹೋಗಬಾರದು.

ಅಂಥ ಪದ್ಯ ಬರೆದರೆ ಒಂದೋ ಕವಿ ಸತ್ತಿರುತ್ತಾನೆ. ಅಥವಾ ಪದ್ಯ.

ಎರಡೂ ಸತ್ತಿರುವುದನ್ನೂ ನೋಡಿದ್ದೇನೆ. ಸತ್ತ ಕವಿ ಸತ್ತು ಹೋದ ಪದ್ಯಗಳನ್ನು ಹೆರುತ್ತಾನೆ. ಅವುಗಳನ್ನು ತೋರಿಸಿ ನನ್ನ ಪದ್ಯಗಳಿವು ಅಂತ ಹೇಳುತ್ತಾನೆ.

4. ..

ಕವಿತೆ ಬರೆಯುವುದು ಅಂದರೆ ಕಳೆದುಕೊಳ್ಳುವುದು. ಬೇರೆ ಯಾರಿಗೋ ಕೊಟ್ಟು ಬಿಡುವುದು. ಸೆರೆಮನೆಯಲ್ಲಿ ಹೆತ್ತ ಮಗುವನ್ನು ನಂದನದಲ್ಲಿ ಬಿಟ್ಟು ಬರುವುದು. ಮತ್ತೆ ಸೆರೆಯಾಗಿ ಏಕಾಂಗಿಯಾಗಿ ಬದುಕುವುದು. ಹಾಗಾಗಿ ಪದ್ಯ ಬರೆಯಲೇ ಬಾರದು. ಹಾಗಾದರೂ ಅದು ನನ್ನ ಜೊತೆಗಿರುತ್ತದೆ.

5. 

ಈ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು, ಓದಿಯೂ ಎಲ್ಲೋ ಬಿಟ್ಟುಹೋದ ಒಳ್ಳೆಯ ಇಮೇಜುಗಳು, ಒಳ್ಳೆಯ ಸಾಲುಗಳು ಸಾವಿರಾರು ಇವೆ, ಅವುಗಳನ್ನು ಹಿಡಿಯಬೇಕು. ಈ ಕಾದಂಬರಿ ಒಂದು ಥರ ಅಷ್ಟು ಸುಲಭಕ್ಕೆ ಅರ್ಥಕ್ಕೆ ಸಿಗದ ಒಂದು ಮೊಂಡು ಕವಿತೆಯೇ. ನಾವೂ ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು. ಅಥವಾ ಅದರ ಗುಂಗಲ್ಲೇ ಇದ್ದು ಬಿಡಬೇಕು. ಥೇಟು ಲಕ್ಷ್ಮಣ ನೀಲಂಗಿ ಅರ್ಥಾತ್ ಎಲ್, ತನ್ನ ಲೀಲಾಳ ಗುಂಗಲ್ಲೇ ಇದ್ದು ಬಿಡುವಂತೆ.

- ಹಿಂಬರಹದಿಂದ ವಿಕಾಸ್.



***

ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು. ಎನ್ನುವ ತೀವ್ರ ಸಾಲುಗಳನ್ನು ನೆನಪಿಸುತ್ತಾ ಕವಿಯ ಅಸಾಹಕತೆ ಜೊತೆಗೆ ಕವಿತೆಯ ನಿರರ್ಥಕತೆ ಕಾಡುತ್ತಾ ಇರುವಾಗ... ಹೀರಿಬಿಟ್ಟ ಕಾಫಿ ಲೋಟದ ಘಮಲು ಹಾಗೆಯೇ ಉಳಿದಿದೆ. ಈ 'ಎಲ್' ನಂತೆ.


 

Monday, May 3, 2021

ಪ್ರಿಯಕರನಿಗೆ ಉಚಿತ ಸವಾರಿ!!

     ನನ್ನ ಹೆಡ್ಡಿಂಗ್ ಬೇರೇಯದೇ ಇತ್ತು. 'ಹೆಂಡತಿ ಮೇಲೆ ಗಂಡನ ಸವಾರಿ' ಎಂದು ಹಾಕ ಬೇಕೆಂದಿದ್ದೆ. ಮಹಿಳಾವಾದಿಗಳು, ಮಹಿಳಾ ಸಂಘಟನೆಗಳು ಚಕಾರ ಎತ್ತಬಹುದೆಂದು ಬದಲಾಯಿಸಿದೆ! ಅನೇಕ ಮಹಿಳಾ ಮಣಿಗಳು ತಪ್ಪು ತಿಳಿಯಬಹುದೆಂದು ಬದಲಾಯಿಸಿದೆ. ಮಹಿಳೆಯರ ಮೇಲೆ ಯಾವಾಗಲೂ ಪುರುಷರದ್ದೇ ಸವಾರಿ ಎಂದು ಯಾವಾಗಲೂ ಇವಳು ಹೇಳುತ್ತಿರುತ್ತಾಳೆ. ನಮ್ಮ ಶಿಕ್ಷಕಿ ವೃಂದದವರದ್ದೂ ಇದೇ ಅಭಿಪ್ರಾಯ.


ಸವಾರಿ  ಹೊರಟ ಕ್ರ್ಯಾಬ್ ಸುಂದ್ರಿ.

ನಾನಿವತ್ತು ಹೇಳ ಹೊರಟಿರುವುದು ಜೇಡಗಳ ಒಂದು ಅನನ್ಯ ಅಭ್ಯಾಸದ ಕುರಿತು. ನನ್ನ ಅನೇಕ ಜೇಡ ಮಿತ್ರರು ಈ ಚಿತ್ರವನ್ನು ಹಾಕಿ ನನ್ನ ಹೊಟ್ಟೆಯುರಿ ಹೆಚ್ಚಿಸಿದ್ದರು. ನನಗೆ ಈ ವಿಚಿತ್ರ ನೋಡಲು ಸಾಧ್ಯವಾಗಲಿಲ್ಲ. ಪ್ರಕೃತಿ ನನ್ನ ಮಟ್ಟಿಗಂತೂ ಕರುಣಿ. ತನ್ನೊಡಲಲ್ಲಿ ಅಡಗಿರುವ ಅನೇಕ ವಿಚಿತ್ರವನ್ನು ಸ್ವಲ್ಪ ಸ್ವಲ್ಪವೇ ತೆರೆದು ತೋರಿಸುತ್ತಿದೆ. ಕಳೆದ ಅಕ್ಟೋಬರ್ಲ್ಲಿ ಅನೇಕ ವಿಚಿತ್ರಗಳನ್ನು ಕಂಡಿರುವೆ. ಬಸವನ ಹುಳವನ್ನು ತಿನ್ನುತ್ತಿರುವ ಮಿಂಚುಹುಳದ ಲಾರ್ವ, ಹೀಗೆ ಹತ್ತು ಹಲವು ಅನನ್ಯತೆಯನ್ನು ತೆರೆದು ತೋರಿದೆ. ಈ ಬೇಸಿಗೆಯಲ್ಲಿ ಅದು ಮತ್ತೊಂದು ಅನನ್ಯತೆಯನು ಅದು ತೆರೆದು ತೋರಿದೆ.


ಕ್ರ್ಯಾಬ್ ಸುಂದ್ರಿಯ ಬೆನ್ನ ಮೇಲೆ ಸುಂದ್ರ.

ಥಾಮಸಿಡೆ ಕುಟುಂಬಕ್ಕೆ ಸೇರಿದ ಕ್ರ್ಯಾಬ್ ಸುಂದ್ರಿ ಚಿಕ್ಕ ನೇರಳೆಗಿಡದಲ್ಲಿ ಪವಡಿಸಿತ್ತು. ಯಾವುದೋ ಕಸವೆಂದು ಮುಂದುವರಿಯಲಿದ್ದೆ. ಆದರೂ ನೋಡೋಣವೆಂದು ಕಣ್ಣು ಹಾಯಿಸಿದೆ, ಅಚ್ಚರಿ! ಸುಂದ್ರಿಯ ಬೆನ್ನ ಮೇಲೆ ಸುಂದ್ರ. ಕೆಳಗಿಳಿದರೆ ಗಂಡಿಗೆ ಸಾವು! (ಹೆಣ್ಣು ಜೇಡಗಳು ಗಂಡು ಜೇಡಗಳನ್ನು ತಿನ್ನುತ್ತವೆ.) ಸುಮ್ಮನೆ ಹೆಣ್ಣು ಗಂಡನ್ನು ಹೊತ್ತು ತಿರುಗತಲಿತ್ತು. ಏನೇ ಮಾಡಿದರೂ ಇಳಿಯಲೊಲ್ಲದು ಈ ಪುರುಷೋತ್ತಮ. ಎಷ್ಟೋ ಹೊತ್ತಿನಿಂದ ಕಾಯುತಲಿದ್ದ ಮತ್ತೊಂದು ಗಂಡು ಜೇಡ ಉದ್ದ ಜಿಗಿತದ ಸ್ಪರ್ಧಿಯಂತೆ ಓಡಿ ಬಂದು ಹೆಣ್ಣು ಜೇಡದ ಮೇಲೆ ಹತ್ತಿ ಕುಳಿತಿತು. ಮೊದಲಿನ ಜೇಡದ ಮೇಲೆ ಆಕ್ರಮಣ ಮಾಡಿತು(ನನ್ನ ಅನಿಸಿಕೆ). ತುಂಬಾ ಹೊತ್ತು ಆ ಎರಡು ಜೇಡಗಳು ಹೆಣ್ಣು ಜೇಡದ ಮೇಲೆ ಕುಳಿತು ಪಟ್ಟಾಂಗ ಹೊಡೆದವು! ನಮ್ಮ ಹೆಣ್ಣು ಜೇಡ ಮಾತ್ರ ಎರಡೂ ಜೇಡಗಳನ್ನು ಹೊತ್ತು ನೇರಳೆ ಮರಕ್ಕೆ ಸುತ್ತು ಬರತೊಡಗಿತು. ಎರಡಕ್ಕೂ ಇಳಿಯುವ ಮನಸ್ಸಿಲ್ಲ! ಕೊನೆಗೆ ಒಂದಕ್ಕೆ ಬೇಜಾರು ಬಂದಿತೋ, ಇವುಗಳ ಸಹವಾಸ ಸಾಕೆನಿಸಿತೊ ಏನೊ ಒಂದು ಗಂಡು ಜೇಡ ಇಳಿದು ಹೋಗಿ ಎಲೆಯಡಿಯಲ್ಲಿ ಅವಿತಿತು. ಅಂತೂ ದೂರಾದ ಜೇಡ ಮತ್ತೆ ಇವುಗಳ ಸಹವಾಸಕ್ಕೆ ಬರಲೇ ಇಲ್ಲ. ಮತ್ತೊಂದು ಜೇಡ ಇದಕ್ಕೇನು ಹೇಳಿತೊ ತಿಳಿಯದು. ಹೆಣ್ಣು ಜೇಡ ಒಂದು ಗಂಡು ಜೇಡವನ್ನು ಇಳಿಸದೇ ನೇರಳೆ ಮರದ ಪರಿಕ್ರಮದಲ್ಲಿ ನಿರತವಾಗಿ ಸ್ವಲ್ಪ ಹೊತ್ತಿಗೆ ಮೌನವಾಯಿತು. ಜೇಡಗಳ ಈ ವಿಶಿಷ್ಟ ಗುಣಗಳ ಬಗ್ಗೆ ಜೇಡ ಸ್ನೇಹಿತರು ಬೆಳಕು ಚೆಲ್ಲುವಿರಾ?
 

Saturday, May 1, 2021

ಯಾಮಿನಿ ಬಂದಿದ್ದಳು!!



12 ವರ್ಷಗಳ ಬಳಿಕ ಯಾಮಿನಿ ಬಂದಿದ್ದಳು. ಅನೇಕ ಬಾರಿ ಬಾ ಎಂದರೂ ಬಂದಿರಲಿಲ್ಲ.  ಅವಳ ಜೊತೆ ಗೆಳೆಯ ಚಿರಾಯು  ಸಹ ಬಂದಿದ್ದ. ಹಗಲು ರಾತ್ರಿ ಅವಳೊಂದಿಗೇ ಮಾತೇ ಮಾತು. ಕಾಫಿ ಕಪ್ ಹಿಡಿದು ಅದನ್ನೇ ಮರೆತು ಅವಳ ಕತೆಯಲ್ಲಿ ತೇಲಿದ್ದಿದೆ. ನಿದ್ದೆಯಲ್ಲೂ ಅವಳ ಕನವರಿಕೆ. ಹೆಂಡತಿಗಂತೂ ವಿಪರೀತ ಹೊಟ್ಟೆ ಕಿಚ್ಚು. ಎನಷ್ಟು ಅವಳೊಂದಿಗೆ ಮಾತು. ಏನೋ ಕುತೂಹಲ ಅವಳಿಗೆ. ಸಣ್ಣ ಸಂಶಯ. ಅಂತಹದ್ದೆನಿದೆ ಅವಳಲ್ಲಿ? ಇವಳ ಪ್ರಶ್ನೆ. ಚೂಪು ಮೂಗಿನ ನವಿರು ಗಲ್ಲದ ಮುದ್ದಾದ ಹುಡುಗಿ. ಏನಿಲ್ಲ ಅವಳಲ್ಲಿ? ವಿವರಣೆಗೆ ಕುಳಿತರೆ ತೇಜಸ್ವಿಯ ಕತೆಗಿಂತಲೂ ರೋಚಕವಾಗಿ ಹೇಳಬಲ್ಲಳು. ಹಾಡಲು ಹೇಳಿದರೆ ಗಂಗೂಬಾಯಿ. ಅತ್ಯುತ್ತಮ ವಿಮರ್ಶಕಿ. ಎದೆಯಲ್ಲೊಂದು ಪ್ರೀತಿಯ ಝರಿ ಜೀವಂತ. ಇಂತಿಪ್ಪ ಯಾಮಿನಿ...

12 ವರ್ಷಗಳ ತನ್ನ ಕತೆಯನ್ನು ಬಿಚ್ಚಿಟ್ಟಳು. ಕರೋನ ಬರುತ್ತದೆಂದು ಹೆಂಡತಿ ಹೆದರಿಸಿದರೂ ಕೇಳದೆ ನಾವಿಬ್ಬರೂ ಒಂದೆರಡು ದಿನ ಹಾಯಾಗಿ ಬೆಂಗಳೂರಿಗೆ, ಶಿವಮೊಗ್ಗಕ್ಕೆ, ಯಲ್ಲಾಪುರ, ಸುಬ್ರಮಣ್ಯ ಸುತ್ತಿ ಸುಳ್ಯದ ಅವಳ ಕಾಡುಮನೆಯಲ್ಲಿ ಒಂದೆರಡು ದಿನವಿದ್ದು ಬಂದೆವು. ಪ್ರಯಾಣದ ನಡುವೆ ಶೃದ್ಧಾ ಶರ್ಮಾ ಸೇರಿಕೊಂಡಳು.

ನಮ್ಮೆಲ್ಲರ ಕಣ್ಮಣಿಯಾದವಳು ಒಲಿದದ್ದು ಮಾತ್ರ ಚಿರಾಯುವಿಗೆ. ನಾವು ಒಲಿಸಿಕೊಳ್ಳಲು ಪ್ರಯತ್ನಿಸಿಲ್ಲವೆಂಬುದು ಶುದ್ಧ ಸುಳ್ಳು! ಒಲಿದಿಲ್ಲವಷ್ಟೇ. ಹಾಗಂತ ಚಿರಾಯುವಿನ ಹೆಂಡತಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಒಲಿದಿದ್ದು ಗಿರೀಶ್ ಗೆ ಇರುವುದು ಚಿರಾಯುವಿನ ಜೊತೆ!!

ಅವಳು ಬಂದ ದಿನ ರಾತ್ರಿ ಪೂರಾ ಜಾಗರಣೆ. ಓರೆ ಕೋರೆ ಗೆರೆಗಳಂತೆ ಚದುರಿದ ರೇಖೆಗಳಂತೆ ತನ್ನ ಕತೆ ಹೇಳುತ್ತಾ ಕೂತಿದ್ದಳು. ತಾನೇ ಕನ್ನಡಿ ಮುಂದೆ ನಿಂತು ಕತೆ ಹೇಳಿ ಕೊಳ್ಳತೊಡಗಿದಳು. ತನ್ನ ತುಮುಲಗಳನ್ನು, ಒಳತೋಟಿಗಳನ್ನು ಹೇಳುತ್ತಾ ಬೆತ್ತಲಾಗತೊಡಗಿದಳು. 

ಕಮಲಶಿಲೆಯಲ್ಲಿ, ಶಿವಮೊಗ್ಗೆಯಲ್ಲಿ ಚಿರಾಯು ಕಳೆದ ದಿನಗಳು, ಅವನೊಂದಿಗಾದ ಮಾತು ಕತೆಯ ವಿವರಗಳು. ಆತನ ಕತೆಗಳು. ಚಿರಾಯುವಿನ ತಂದೆಯ ತಿರಸ್ಕಾರ, ಸಿಕ್ಕ ಪುರಸ್ಕಾರ. ಯಾವುದು ಶಾಶ್ವತ? ಯಾವುದು ನಶ್ವರ? ಎಂಬ ತೊಳಲಾಟಗಳು. ಅವನ ಹೋರಾಟದ ದಿನಗಳು ಎಲ್ಲವೂ ಮಾತಿನ ನಡುವೆ ಜಾಗ ಮಾಡಿಕೊಂಡವು. ಬದುಕಿನ ನಾಜೂಕಿನ ಸಂದರ್ಭದಲ್ಲಿ ಚಿರಾಯುವಿನಿಂದ ದೂರಾಗಲು ಇಂಗ್ಲೆಂಡ್ಗೆ ಹೊರಟು ನಿಂತ ಕ್ಷಣಗಳು. ವರುಷಗಳ ಬಳಿಕ ಮತ್ತೆ ಚಿರಾಯುವನ್ನೇ ಸೇರಿಕೊಂಡ ಕತೆ. ಆತನನ್ನು ಪ್ರೇರೇಪಿಸಿ ಬರೆಯಿಸಿದ ಕತೆಗೆ ಬಹುಮಾನ ಬಂದಿದ್ದು. ಜೀವನದಲ್ಲಿ ನಡೆದ ಕತೆಗಳನ್ನು ಹೆಕ್ಕಿ ಹೇಳಿದ್ದಳು. ಯಾವುದೂ ಇಲ್ಲಿ ನೇರವಿಲ್ಲ. ಆದರೂ ವಕ್ರವಲ್ಲ. ಅವಳು ಅವನ ಬದುಕಿನ ವಿವರಗಳ ಗುಚ್ಚಗಳು ಅಚ್ಚರಿ ಹುಟ್ಟಿಸುವಂತಹುದು. ಹೀಗೆ ಆಕೆ ಹೇಳಿದ ಸಣ್ಣ ಸಣ್ಣ ವಿವರಗಳು ಎರಡು ದಿನದಿಂದ ನನ್ನ ಎದೆಯಲ್ಲಿ ಗುಂಯ್ ಗುಡುತ್ತಿದೆ. ಹೀಗೂ ಜೀವನವಿರಬಹುದೇ ಎಂಬ ತುಮುಲದಲ್ಲಿರುವೆ. ಕತೆಗಳಿಗಿಂತಲೂ ಕೆಲವರ ಬದುಕುಗಳು ವಿಚಿತ್ರ. ಎರಡು ತಿಂಗಳಿಗಾಗುವಷ್ಟು ಕತೆ ಹೇಳಿ ಹೋಗಿದ್ದಾಳೆ. ಒಂದೊಂದೇ ನವಿಲುಗರಿಯಂತಹ ಕತೆಗಳನ್ನು ಎದೆಯ ಗೂಡಲ್ಲಿ ಬಚ್ಚಿಡಲು ಪ್ರಯತ್ನಿಸುತ್ತಿರುವೆ ಆಗುತ್ತಿಲ್ಲ. ಕತೆಗಾರ್ತಿ ಯಾಮಿನಿಯ ಚಮಕ ಪ್ರತಿ ವಾಕ್ಯದಲ್ಲೂ ಅನುರಣಿಸುತಿದೆ. ನನ್ನ ಎದೆಯ ಗೂಡಲ್ಲಿ ಅರಳಲು ತವಕಿಸುತ್ತಿದೆ. ಕಣ್ಣು ಮಾತಿಗಿಳಿದಾಗ ಬಾಯಿ ಬಲು ಮೌನ! ಅವಕಾಶ.

ಇಂದು ಆಕೆ ಹೊರಟು ನಿಂತಾಗ ಎದೆ ಭಾರ. ಮತ್ತೆ ಕೇಳಿದೆ ಭೇಟಿ ಯಾವಾಗ?

 



 

Sunday, April 11, 2021

ಎಲೆಲೆ ಕೀಟ!!



ಎಲೆಯಂತಿರುವ ಹೊಟ್ಟೆಯ ಭಾಗ.



ಹೊಸಬನಲ್ಲನಿವ ಹಳೆಯ ಗಿರಾಕಿ
ಹೊಡೆಯುತಿದ್ದ ಮನೆ ಸನಿಹವೇ ಗಿರಕಿ 
ನನ್ನ ಹಳೆಯ ಗೆಳೆಯ!

ಬಾಯದು ಬಾಯಲ್ಲ
ಕಣ್ಣದು ಕಣ್ಣಲ್ಲ
ಇರುವಲ್ಲ್ಯಾವುದೂ ಇಲ್ಲ
ನೋಟಕನ ನೋಟ 
ಎಲ್ಲವೂ ಚಿತ್ತ ಬ್ರಾಂತಿ!!!







ಮಳೆಗಾಲದ ಒಂದು ಮುಂಜಾನೆ ಸಣ್ಣಗೆ ಮೋಡ ಕವಿದಿತ್ತು. ತಣ್ಣನೆ ಗಾಳಿ ಹೊಯ್ಯುತ್ತಿತ್ತು. ಅಜ್ಜಿ ನರುಕಿದಂತೆ, ಹುಡುಗಿ ಮಿಡುಕಿದಂತೆ  ಸುರಿಯುತ್ತಿತ್ತು ಮಳೆ. ಕೊಡೆಯೊಂದನು ಕೊಂಡು ಸರ್ಕಸ್ ಮಾಡುತ್ತಾ ಮನೆಯ ಸನಿಹದ ಕಾಡು ತಲುಪಿ, ಕ್ಯಾಮರಕ್ಕೆ ಬೇಕಾದ ಸಲಕರಣೆಗಳನು ಜೋಡಿಸುವ ಹೊತ್ತಿಗೆ ಮಳೆ ನಿಂತಿತು. ಕಾಡು ಹಬ್ಬಿದ್ದ ಕಡೆ ಕಣ್ಣು ಹಾಯಿಸಿದರೆ ಯಾವ ಕೀಟವೂ ಕಣ್ಣಿಗೆ ಬೀಳಲೇ ಇಲ್ಲ. ಕೆಲವು ಹೂಗಳ ಚಿತ್ರ ತೆಗೆಯೋಣವೆಂದು ಪರಿಮಳ ರಹಿತ ಕಾಡು ಹೂಗಳ ಸಾಂಗತ್ಯಕ್ಕೆ ನಿಂತೆ. ಕೆಲವು ಬಿರಿದಿದ್ದವು ಕೆಲವು ಬಿರಿಯುವ ತಯಾರಿಯಲ್ಲಿದ್ದವು. ಆಗಲೇ ಕಾಂಗ್ರೆಸ್ ಗಿಡದ ಬುಡದಲ್ಲೇನೋ ಅಲ್ಲಾಡಿದ ಅನುಭವವಾಯಿತು. ಅದೊಂದು ಒಣಗಿದ ಎಲೆಯಂತಿದೆಯೆಲ್ಲಾ ಎಂದು ಸುಮ್ಮನಾದೆ. ಮತ್ತೆ ಒಣಗಿದೆಲೆಯಲಿ ಸಣ್ಣ ಅಲುಗಾಟ. ಇದೇನೆಂದು ನೋಡೋಣವೆಂದು ಸನಿಹಕೆ ಹೋದರೆ ಯಾವುದೋ ಹುಳುವೊಂದನು ಗುಳಕಾಯಿಸಿ ಗಮ್ಮತ್ತಿನಲಿ ಕುಂಡೆ ಅಲ್ಲಾಡಿಸುತ್ತಿತ್ತು ಈ ಕೀಟ. ಅರೆರೆ ಇದು ಎಲೆಯಂತಿದೆ. ಎಲೆಲೆ ಕೀಟ. ಸಾಮಾನ್ಯ ನೋಟಕೆ ಸುಲಭಕ್ಕೆ ಯಾಮಾರಿಸುವ ಕಲೆ ಕರಗತ ಮಾಡಿಕೊಂಡಿದೆ. ಇದ್ದರೂ ಇಲ್ಲದಂತಿರುತ್ತದೆ. ಅದರ ಕಣ್ಣಿನಂತಿರುವ ಭಾಗ ಕಣ್ಣಲ್ಲ. ಬಾಯಿಯಂತೆ ರಚಿತಗೊಂಡಿರುವ ಭಾಗ ಬಾಯಲ್ಲ. ಎಲ್ಲವೂ ಮಾಯೆ ಬ್ರಾಂತಿ. ಕೆಳಗೆ ಬಾಯಿಯಂತಿರುವ ಅಂಗ ನಿಜಕ್ಕೂ ಅದರ ಬಾಯಿಯಲ್ಲ! ಅದರ ಒಳ ಪದರ ಗುಲಾಬಿ ಬಣ್ಣದಿಂದ ಕೂಡಿದ್ದು ತುಂಬಾನೇ ಆಕರ್ಷಕವಾಗಿದೆ. ಈ ಒಂದು ಕೀಟದಲ್ಲೇ ಅನೇಕ ಪ್ರಭೇದಗಳಿದ್ದು ಪ್ರತಿಯೊಂದು ಒಂದರಿಂದ ಒಂದು ಭಿನ್ನವಾಗಿವೆ. ಡ್ರಾಗನ್ ಹಾತೆ, ಇರುವೆ ಮುಂತಾದವೆ ಇವುಗಳ ಆಹಾರ. ಒಟ್ಟಾರೆಯಾಗಿ ಆಹಾರ ಸೂಕ್ಷ್ಮ ಸರಪಳಿಯ ಭಾಗವಾಗಿರುವ ಇವು ಅನನ್ಯ ಜೀವಿಗಳು. ಸೂರ್ಯನ ಕುದುರೆಗಳೆಂದು ಕರೆಯಿಸಿಕೊಳ್ಳುವ ಇವು ಕೀಟ ಜಗತ್ತಿನ ವಿಶಿಷ್ಟ ಮುಕುಟ ಮಣಿಗಳು. 

ಶ್ರೀಧರ್ ಎಸ್. ಸಿದ್ದಾಪುರ.
 


 

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...