Sunday, September 2, 2018

ಸ್ವರ್ಗದ ದಾರಿಯಲ್ಲಿ ದುರ್ಯೋಧನನ ಮಂದಿರ......

 ಯಾನ:-


out lookನ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ಒಂದು ವಿಶಿಷ್ಟ ದೇವಾಲಯ ಮತ್ತು ಓಸ್ಲಾ ಎಂಬ ಹಳ್ಳಿ. ಧರ್ಮರಾಯನೂ ಸ್ವರ್ಗವೇರಿದ ದಾರಿ! ಪುರಾಣಕಾಲಕ್ಕೂ ಹೆಜ್ಜೆ ಹಬ್ಬುವ ಕತೆಯನ್ನು ಓದಿ, ಉತ್ತರಾ ಖಂಡದ 66 ಕಿಲೋ ಮೀಟರ್ ದೂರದ ಹರ್ ಕಿ ದುನ್ ಚಾರಣಕ್ಕೆ ಭರ್ಜರಿ ತಯಾರಿ ನಡೆಸಿ ಹೊರಟು ನಿಂತೆ.
ಉತ್ತರಾಖಂಡದ ಡೆಹ್ರಾಡೂನ್ ರೈಲ್ವೆ ಸ್ಟೇಷನ್ಗೆ ಬೆಳಿಗ್ಗೆ 5.30ಕ್ಕೆ ರೈಲು ಏದುಸಿರು ಬಿಡುತ್ತಾ ಬಂದು ನಿಂತಿತು. ಬೆಳಗಿನ ಚಳಿಗೆ ಡೆಹ್ರಾಡೂನ ಸ್ಟೇಷನ್ ತಣ್ಣಗೆ ಮಲಗಿತ್ತು. ಚಾರಟೆ ಹುಳುವಂತೆ ಮುದುಡಿ ಕುಳಿತ ಪೋಲಿಸಿನವನಲ್ಲಿ ಹೋಟೆಲ್ ವಿಳಾಸ ಕೇಳಿ ಹೊರಬಿದ್ದೆ. ಚಳಿಯ ಮೊದಲ ಆಲಿಂಗನಕ್ಕೆ ಮನಸೋತೆ. ಬೆಳ್ಳಗಿನ ಹಿಮ ಹೊದ್ದ ಗೂಡಂಗಡಿಯಲ್ಲಿ ಚಹ ಕುಡಿದು ವಿಳಾಸ ಹುಡುಕುತ್ತಾ ಹೊಟೆಲ್ ಕಡೆಗೆ ಹೊರಟೆ.

ಮೊಮೊ ವಿಶಿಷ್ಟ ತಿಂಡಿ ...
ಮರುದಿನ ಬೆಳಿಗ್ಗೆ ಡೆಹ್ರಾಡೂನ್ನಿಂದ ಸಾಂಕ್ರಿ ಎಂಬ ಹಳ್ಳಿಗೆ ಪ್ರಯಾಣ ನಿಗದಿಯಾಗಿತ್ತು. ದೊಡ್ಡ ದೊಡ್ಡ ಪೈನ್ ಮರಗಳ ನೆರಳುಗಳ ಉದ್ದದ ಹಾದಿ. ಹೋದ ಹೋದಲೆಲ್ಲಾ ಯಮುನೆಯು ನಮ್ಮನ್ನೇ ಹಿಂಬಾಲಿಸುತ್ತಿದ್ದಳು. ಊರೊಂದರಲ್ಲಿ ಇಳಿದು ನೀರು ಕಾಣದೇ ವರ್ಷವಾದವರಂತೆ ಹಷರ್ಿಸುತ್ತಾ ಸ್ಪಟಿಕ ಶುಭ್ರ ಯಮುನೆಯಲಿ ಮುಳುಗಿ ಬಂದೆವು. ಮುಂದೆ ನಮ್ಮ ಪ್ರಯಾಣದುದ್ದಕ್ಕೂ ಜೊತೆಯಾದವಳು ಟೋನ್ಜ್ಸ್ ಎಂಬ ಯಮುನೆಯ ಉಪನದಿ. ನಡು ಮಧ್ಯಾಹ್ನ ಪಹಾಡಿ ಅನ್ನ, ದಾಲ್ ತಡಕಾ, ಪಾವಡಿ ರೋಟಿಯ ತುಣುಕೊಂದು ನಮ್ಮ ಹೊಟ್ಟೆಯ ಜೊತೆಯಾಯಿತು!
ಬೆಟ್ಟದ ಇಳಿಜಾರು ಕಡಿದು ಕಟ್ಟಿದ ಕಟ್ಟಿಗೆಯ ಸಣ್ಣ ಮನೆಗಳು. ಮನೆಯ ಮೇಲೋ, ಮರದ ಮೇಲೋ ಒಣಗಿಸುತ್ತಿದ್ದ ಒಣ ಹುಲ್ಲಿನ ಕಂತೆಗಳು ಪ್ರತೀ ಮನೆಯಲ್ಲೂ ಕಾಣ ಸಿಕ್ಕವು. ಎಲೆ ಉದುರಿಸಿಕೊಂಡು ಮರುಕ ಹುಟ್ಟಿಸುವ ಬೋಳು ಬೋಳಾದ ಸೇಬಿನ ತೋಪುಗಳು ಮನೆಯ ಪಕ್ಕ ಸುಮ್ಮನೆ ಬಿದ್ದಿದ್ದವು. ಶಾಲಾ ಮಕ್ಕಳು ಮನೆಗೆ ಮರಳುತ್ತಿದ್ದರು.
ಸಂಜೆ ನಾಲ್ಕರ ಸುಮಾರಿಗೆ ಚಾರಣದ ಹೆಬ್ಬಾಗಿಲಾದ ಸಾಂಕ್ರಿ ಎಂಬ ಪುಟ್ಟ ಹಳ್ಳಿಯಲ್ಲಿದ್ದೆವು. ಅಂದಲ್ಲಿ ಚಾರಣಿಗರ ಸಂತೆ. ಬಹು ಬೇಗ ಕಟ್ಟಿಗೆಯ ವಿಶಿಷ್ಟ ಕುಟಿರಗಳಲ್ಲಿ ನಾವು ನಿದ್ದೆಗೆ ಬಿದ್ದದ್ದೇ ತಿಳಿಯಲಿಲ್ಲ. ಎರಡನೆಯ ದಿನವೇ ಹಿಮಾಲಯದ ಸನ್ನಿಧಿಯಲ್ಲಿ ನನ್ನ ಎರಡನೇ ಚಾರಣ ಶುರುವಿಟ್ಟುಕೊಂಡಿತು.

ಮೊದಲ್ಗೊಂಡ ಮಂದ್ರ:-


ತಿಂಡಿ ತಿಂದು, ಚಪಾತಿ ಕಟ್ಟಿಸಿಕೊಂಡು ಪೈನ್ ಮರಗಳ ಸೆರಗಿಗೆ ಬಿದ್ದೆವು. ಪ್ರಪಾತಕ್ಕೆ ಬೋರಲು ಬಿದ್ದ ದಾರಿಗಳಲ್ಲಿ ಉಸಿರು ಬಿಗಿ ಹಿಡಿದು 12 ಕಿ.ಲೋ ಮೀಟರ್ ಜೀಪ್ಸಿಯಲ್ಲಿ ಪ್ರಯಾಣಿಸಿ ತಲೂಕಾ ಎಂಬ ಪುಟ್ಟ ಹಳ್ಳಿ ತಲುಪಿದೆವು. ಹನುಮನ ಜಾತಿಯ ಇಬ್ಬರು  ಜಿಪ್ಸಿ ಮೇಲೇರಿ ಕುಳಿತರು! ಮಂಗನಂತೆ ಎಗರಾಡುವ ನಮ್ಮ ಜೀಪು ತೊರೆಗಳ ಹತ್ತಿ ಇಳಿಯಿತು. ಕೆಳಗೆ ನೂರಾರಡಿಯ ಪ್ರಪಾತ, ಜೀವ ಒಮ್ಮೆಗೆ ಜಗ್ ಎಂದು ತಂದೆ, ತಾಯಿ, ಹೆಂಡತಿ, ಮಕ್ಕಳ ನೆನಪು ಮಾಡಿ ಕೊಟ್ಟಿತು. ಅಂತೂ ಅವನ್ನೆಲ್ಲಾ ದಾಟಿಕೊಂಡು ಕೇವಲ ಐದಾರು ಮನೆಗಳಿರುವ ಪುಟ್ಟ ಪುಟಾಣೀ ಹಳ್ಳಿ ತಲೂಕಾ ತಲುಪಿದೆವು. ಇಲ್ಲಿಂದಲೇ ನಮ್ಮ ಮೆರವಣಿಗೆ ಮೊದಲ್ಗೊಂಡಿತು.

ಆಕಾಶದ ಬಿಂಬ ಹರಿವ  ಜಲದಲಿ...


ಚಡ್ಡಿ ಹಾಕದ ಮಕ್ಕಳೆಲ್ಲಾ ಪ್ಯಾಷನ್ ಷೋಗೆ ನಿಂತಂತೆ ನಮ್ಮ ಕೆಮಾರಾಗೆ ಪೋಸು ಕೊಟ್ಟರು! ಮಕ್ಕಳ ದರ್ಶನ ಪಡೆದು ಚಾರಣ ಪ್ರಾರಂಬಿಸಿದೆವು!
ಎಡಕ್ಕೆ ಸುಪಿನ್ ನದಿ. ಬಲಕ್ಕೆ ಫೈನ್ ಮರಗಳ ಕಾಡು. ಸುತ್ತಲೂ ಕಾಡು ಹೂಗಳ ಮೆರವಣಿಗೆ. ಹಿಮಾಲಯದ ಹಕ್ಕಿಗಳ ಇಂಚರ. ಹಿಮ ಸುಂದರಿಯರ ತೆಕ್ಕೆಯಲ್ಲಿ ಮೋಹಿತರಾಗಿ, ಸಾಮಾನು ಹೊತ್ತ ಹೇಸರಗತ್ತೆಗಳು ನಮ್ಮ ಜೊತೆ ಪೈಪೋಟಿಗೆ ಬಿದ್ದು ಗುಡ್ಡ ಏರತೊಡಗಿದೆವು. ಐದಾರು ಸಣ್ಣ ದೊಡ್ಡ ತೊರೆಗಳನ್ನೆಲ್ಲಾ ಹತ್ತಿಳಿದು ಅತ್ಯಂತ ಸಫಾಟಾದ ಜಾಗದಲ್ಲಿ ಕುಳಿತು ಚಾರಣಿಗರು ಫೋಟೊಗೆ ಫೋಸ್ ಕೊಡತೊಡಗಿದರು. ಅಲ್ಲೇ ಬಲದ ಏರಿನಲ್ಲಿ ದೊಡ್ಡ ಗುಡ್ಡದಲ್ಲಿ ಡಟ್ಮೀರ್ ಎಂಬ ಪುಟ್ಟ ಹಳ್ಳಿ. ಕತ್ತೆತ್ತಿ ನೋಡಿದೆ ದೊಡ್ಡ ಬೆಟ್ಟದ ನೆತ್ತಿಯಲ್ಲಿತ್ತು! ಮನುಷ್ಯನ ಇಚ್ಚಾಶಕ್ತಿಗೆ ಚಕಿತನಾದೆ.


ತಲೂಕಾ ಹಳ್ಳಿಯ ಝರಿಯೊಂದರಲ್ಲಿ ತಯಾರಾದ ವಿದ್ಯುತ್ ಈಗಷ್ಟೇ ಅಲ್ಲಿವರೆಗೆ ಬಂದಿತ್ತು. ಭಾನುವಾರ ಬೆಳಿಗ್ಗೆ ರಜೆ ಮುಗಿಸಿ ರಣಬೀರ್ ಎಂಬ ಡಟಮೀರ್ ಹಳ್ಳಿಯ ಹುಡುಗ ದೂರದ ಡೆಹ್ರಾಡೂನ್ಗೆ ಎಂ. ಎ ಮಾಡಲು ಹೊರಟ್ಟಿದ್ದ. ಕಷ್ಟ ಸುಖ ವಿಚಾರಿಸಿದೆ. ಪುಣ್ಯಾತ್ಮ ಬರೋಬ್ಬರಿ 25 ಕಿಲೋ ಮೀಟರ್ ನಡದೇ ಹೊರಟಿದ್ದ! ನಾಚಿಕೆ ಸ್ವಭಾವದ ಹಳ್ಳಿ ಹೆಂಗಸರು ಬೆಳ್ಳಂಬೆಳಿಗ್ಗೆ ಎದ್ದು ಏನೋ ಕೊಯ್ದು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಮಕ್ಕಳೂ ತಮ್ಮ ಬೆನ್ನ ಹಿಂದೂ ಒಂದೊಂದು ಬುಟ್ಟಿ ನೇತಾಡಿಸಿಕೊಂಡಿದ್ದರು. ಅವರಲ್ಲಿ ಕೇಳ ಬೇಕಿದ್ದೆಲ್ಲಾ ನನ್ನಲ್ಲೇ ಕರಗಿತು.
ಪೌನಿಗರಾತ್ ಎಂಬ ಹಳ್ಳಿಯೊಂದು ಸುಪಿನ ನದಿಯ ಎಡ ದಂಡೆಯಲ್ಲಿತ್ತು. ಅಲ್ಲೇ ಸಿಕ್ಕವನೇ ಸುರೇಶ್ ಎಂಬ ದನಗಾಹಿ ಮತ್ತು ಪುಟಾಣಿ ಮಕ್ಕಳು. ಸಕ್ಕರೆಯ ಸಹವಾಸವೇ ಇಲ್ಲದ ಇಲ್ಲಿನ ಮಕ್ಕಳು ಚಾಕಲೇಟ್ಗಾಗಿ ಹಪಹಪಿಸುತ್ತಿದ್ದರು. ಶಾಲೆ ಇದೆಯೇ ಇಲ್ಲಿ ಎಂದು ಸುರೇಶ್ನಲ್ಲಿ ವಿಚಾರಿಸಿದೆ. 200 ಮಕ್ಕಳು ಮತ್ತು 8 ಜನ ಶಿಕ್ಷಕರಿರುವ ಶಾಲೆಯೊಂದು ಇಲ್ಲಿದೆ. ಎಂದು ನನ್ನ ದಂಗುಬಡಿಸಿದ! ದೂರದ ಓಸ್ಲಾ ಎಂಬ ಹಳ್ಳಿಯಿಂದ ಮಕ್ಕಳು ಶಾಲೆಗೆ 5 ಕಿ. ಮೀ ನಡೆದೇ ಬರುತ್ತಾರೆ. ಎಂದ. ಶಾಲೆಗೆ ಭೇಟಿ ಕೊಡಬೇಕೆನಿಸಿತು ಆದರೆ ಭಾನುವಾರ. ಸಂಜೆ ಐದಕ್ಕೆ ಕ್ಯಾಂಪ್ ತಲುಪಿದಾಗ ಬಿಸಿ ಬಿಸಿ ಬ್ರೆಡ್ ಬೊಂಡಾ ಚಳಿಯಲ್ಲಿ  ನಡುಗುತ್ತಾ ನಮಗಾಗಿ ಕಾದಿತ್ತು.
ಪುರಾತನ ಹಳ್ಳಿ ಓಸ್ಲಾದೆಡೆಗೆ
ಬೆಳ್ಳಂಬೆಳ್ಳಿಗ್ಗೆ ಬೇಡವೆಂದರೂ ತಣ್ಣೀರಲ್ಲಿ ಬ್ರಷ್ ಮಾಡಿದ ನಮ್ಮೆಲ್ಲರ ಬೆರಳು ಬೆಂಡೆಕಾಯಿಯಂತಾಗಿತ್ತು. ಮೈಚೆಲ್ಲಿ ಮಲಗಿದ್ದ ತಣ್ಣನೆ ಸೂರ್ಯ ಆಗಸ್ಟೇ ಆಗಮಿಸಿದ್ದ. ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದ ಹಿಮಾಲಯದ ಅತಿ ಪುರಾತನ ಪುಟಾಣಿ ಹಳ್ಳಿ ಓಸ್ಲಾದ ತುಡಿತವೇ ನನ್ನನ್ನು ಇಲ್ಲಿಗೆ ಎಳೆದು ತಂದಿದ್ದು. ಹಾಗಾಗಿ ಪತರುಗುಟ್ಟಿಸುವ ಚಳಿ ಲೆಕ್ಕಿಸದೇ ಓಸ್ಲಾದೆಡೆಗೆ ದೌಡಾಯಿಸಿದೆ.


400-500 ವರ್ಷಗಳ ಹಿಂದೇ ಇಲ್ಲಿಗೆ ಬಂದು ನೆಲಸಿದವರು! ಕುರಿ, ಹಸು ಸಾಕಣೆ, ಕೃಷಿ ಇವರ ಪ್ರಮುಖ ಉದ್ಯೋಗ. ಕುರಿ ಕಾಯುವವರು ಕುರಿಗಳನ್ನು ಮೇಯಿಸಲು ಹೊರಟಿದ್ದರಷ್ಟೇ. ಅವರಲ್ಲಿ ಹೆಣ್ಮಕ್ಕಳೂ ಇದ್ದರು. ಕ್ಯಾಮರ ಕ್ಲಿಕ್ಕಿಸುತ್ತಲೇ ನಾಚುತ್ತಿದ್ದರು. ಕೆಲವರಂತೂ ರಾತ್ರಿ ಬಿದ್ದ ಚಳಿಗೆ ಏಳುತ್ತಿದ್ದರಷ್ಟೇ. ಚಳಿ ಕಾಯಿಸುತ್ತಾ ಕುಳಿತ ಮಕ್ಕಳು , ಹೆಂಗಸರು, ಗಂಡಸರು ನಮ್ಮನ್ನೇ ನೋಡುತ್ತಿದ್ದರು. ಏನು ವಿಚಿತ್ರ ಜನ ಇವರು ಎಂದುಕೊಂಡರೋ ಏನೋ? ಇರಲಿ.


ಹರಿಯಾಣದ ಹುಡುಗಿಯೊಬ್ಬಳು ಈ ಹಳ್ಳಿಯವನನ್ನೇ ಮದುವೆಯಾಗಿ ಇಲ್ಲೇ ಇದ್ದಾಳೆಂದು ಗೈಡ್ ಹೇಳಿದ. ಬದುಕೆಷ್ಟು ವಿಚಿತ್ರವೆನಿಸಿತು. ಇಲ್ಲಿ ಆಚರಿಸುವ ಐದು ಹಬ್ಬಗಳ ಹೆಸರು ಹೇಳಿದ ಈಗ ಒಂದೂ ನೆನಪಿಲ್ಲ. ಇಲ್ಲ್ಲಿನ ಜನ ಕಷ್ಟ ಸಹಿಷ್ಣುಗಳು. ಹನ್ನೊಂದರ ಸುಮಾರಿಗೇ ದೊಡ್ಡ ದೊಡ್ಡ ಹೊರೆ ಹುಲ್ಲು ಹೊತ್ತು ಮನೆ ಕಡೆ ಬರುತ್ತಿದ್ದರು. ಅಂಜಲಿ ಎಂಬ ಪುಟ್ಟ ಹಳ್ಳಿ ಹುಡುಗಿ ಜೊತೆಯಾದಳು. ದೊಡ್ಡದೊಂದು ಕೋಲು, ಕತ್ತಿ ಹಿಡಿದು ಕಲ್ ಕತೀಯಾಧಾರ್ ಕಡೆ ಹೊರಟಿದ್ದಳು.

ಮನೆಗಳ ವಿನ್ಯಾಸ

ಇಲ್ಲಿನ ಮನೆಗಳು ನಾಲ್ಕು ಹಂತದವು. ಮೊದಲನೇ ಹಂತ ದನಗಳಿಗೆ. ಎರಡನೆಯದು ಕುರಿಗಳಿಗೆ. ಮೂರನೆಯದು ಹುಲ್ಲು ಮತ್ತಿತರ ಸಾಮಾನು ತುಂಬಿಸಲು. ಕೊನೆಯದ್ದು ವಾಸಕ್ಕೆ. ಹಿಮ ಸುರಿವ ಡಿಸೆಂಬರ್ನಿಂದ ಮಾರ್ಚನ ಕೊನೆಯವರೆಗೆ ಇಲ್ಲಿನವರಿಗೆ ದಿವ್ಯ ಏಕಾಂತ.

ಸಾರ್ಥ

ದುರ್ಯೋಧನನ  ಮಂದಿರದಲ್ಲಿ!



ಇಲ್ಲಿ ಭಯ ಭಕ್ತಿಯಿಂದ ದುಯರ್ೋದನನಿಗೆ ನಮಿಸುತ್ತಾರೆ! ಅರೆರೆ ದುಯರ್ೋಧನನಿಗಾ ಎಂದು ಹುಬ್ಬೇರಿಸಬೇಡಿ. 'ಹುಚ್ಚು ಹಿಡಿಯಿತೇ?' ಎಂದು ಆಲೋಚಿಸದಿರಿ. ಇಂತಹ ಸಂಧಿಗ್ಧ ನಮಗೂ ಎದುರಾಗಿತ್ತು. ನಿಜ ಇಂತಹದೊಂದು ದೇವಾಲಯವಿದೆ. ಉತ್ತರಾಖಂಡದಲ್ಲಿ. ಅಪರೂಪಕ್ಕೆ ಅಪರೂಪ. ಇಂತಹ ವಿಶೇಷಗಳು ಹಿಮಾಲಯದ ಉದ್ದಗಲಕ್ಕೂ ಸಂಚರಿಸಿದ ಬೆಂಗಾಲಿ ಗೆಳೆಯ ಸುಭಾಸ್ ಒಮ್ಮೆ ವಿವರಿಸಿದ್ದ. 1988ರ ಸುಮಾರಿಗೆ ಆತ ಇಲ್ಲಿಗೆ ಬಂದಿದ್ದ! ಆಗಲೂ ಅದು ದುಯರ್ೋಧನನ ದೇವಾಲಯ! ಈ ದೇವಾಲಯ ನೋಡಲೇ ನಾನು ಬಂದಿದ್ದು. ಅಪಕೀತರ್ಿಗಂಜಿಯೋ ಏನೋ ಅದೀಗ ಶಿವನ ದೇವಾಲಯವೆಂದು ಹೇಳುತ್ತಾರೆ. ಅಸಲಿಗೆ ಇದು ದುಯರ್ೋಧನನ ದೇವಾಲಯವೇ?! ಪೂರ್ಣ ದೇವಾಲಯವನ್ನು ಮರದಿಂದ ನಿಮರ್ಿಸಲಾಗಿದೆ. ಹೊರ ಮೈಯನ್ನು ಸುಂದರ ಕೆತ್ತನೆಗಳಿಂದ ಸಿಂಗರಿಸಲಾಗಿದೆ.

ಹಿಮಾಲಯದ ದಿವ್ಯ ಏಕಾಂತದಲ್ಲಿ ಕರಗಿ:-




ದೇವಾಲಯ ದಾಟಿಕೊಂಡರೆ ಏರು ತಗ್ಗುಗಳ ಕಠಿಣ ಹಾದಿ. ಒಂದೆರಡು ಕಡೆ ಗುಡ್ಡ ಜರಿದಿತ್ತು. ಒಂದು ಹೆಜ್ಜೆ ತಪ್ಪಿದರೆ ನೇರ ಯಮಲೋಕದ ಹೆದ್ದಾರಿಗೆ.



ಇಂತಹ ದಾರಿಗಳ ದಾಟಿ ಕಲ್ ಕತಿಯಾಧಾರಾ ಎಂಬ ಕ್ಯಾಂಪ್ ಸೈಟ್ಗೆ ಬಂದಿಳಿದೆವು. ಎತ್ತರದ ಜಾಗದಲ್ಲಿ ನಮ್ಮ ಎರಡನೆಯ ಕ್ಯಾಂಪ್. ಬಿಸಿ ಬಿಸಿ ಮ್ಯಾಕರೋನಿ ನಮ್ಮ ಹೊಟ್ಟೆ ತಣಿಸಿತು.
ಪರ್ವತಗಳು ಫೋಟೊ ಪ್ರೇಮ್ ಹಾಕಿಸಿಕೊಂಡಂತೆ ಸಾಲಾಗಿ ನಮ್ಮೆದುರು ಕೈಕಟ್ಟಿ ನಿಂತಿದ್ದವು! ಎದುರಿನ ದೃಶ್ಯ ಬಣ್ಣಿಸಲಸದಳ. ಗುಟುರು ಚಳಿ ನಮ್ಮ ನಮ್ಮ ಗುಡಾರದೊಳ ಹೊಕ್ಕಿತು. ಚಳಿ ಓಡಿಸಲು ಸಣ್ಣ ಬೆಂಕಿ ಉರಿಸಿದೆವು. ಬೆಂಕಿಯ ಸುತ್ತಲು ಕೂತು ಕೆಲವರು ಅವರು ಬರೆದ ಕವನ ಓದಿ ಕಾವ್ಯದ ಮಳೆಯಲ್ಲಿ ಮಿಂದೆದ್ದೆರು. ಕಾವ್ಯ ಕಮ್ಮಟಕ್ಕೆ ಆಕಾಶದ ರಾಶಿ ರಾಶಿ ನಕ್ಷತ್ರಗಳೇ ಕೇಳುಗರು. ಕಣ್ಣೂರಲು ಒಂದೈದು ಸೆಂಟ್ಸ್ ಜಾಗ ಉಳಿಸದಂತೆ ನಕ್ಷತ್ರಗಳೇ ತುಂಬಿದ್ದವು. ಅಬ್ಬಾ ನಕ್ಷತ್ರ ಸಂತೆ! ಭಾವ ಪರವಶನಾದೆ. ಮಾಲಿನ್ಯರಹಿತ ಆಗಸ ನೋಡುವ ಆನಂದವ ಬಣ್ಣಿಸಲು ಸಾಧ್ಯವಿಲ್ಲ.
ಸಂಜೆ ಎಂಟಕ್ಕೆಲ್ಲಾ ಊಟ ಮುಗಿಸಿ ನಿದ್ರಾ ಚೀಲದೊಳಗೆ ಹೂತು ಹೋದೆವು. ಹಿಮಾಲಯದ ದಿವ್ಯ ಏಕಾಂತದ ತುಣುಕೊಂದು ನಿಮ್ಮ ಬಳಿಯೇ ಇರುವಂತಹ ಧನ್ಯತಾ ಭಾವ ನಮ್ಮನ್ನಾವರಿಸಿತು. ನಿದ್ದೆ ನಮ್ಮನ್ನು ಅವುಚಿಕೊಂಡದ್ದು ಗೊತ್ತಾಗಲೇ ಇಲ್ಲ.

ಹೂ ಹಾಸಿನ ಅಂಗಳದಲಿ ನಿಂತು...





ಹರ್ ಕಿ ದುನ್ ಶಿಖರ, ಆಟಾ ಪರ್ವತಗಳು ತಮ್ಮಿರುವನ್ನು ಮೊದಲ ಹೆಜ್ಜೆಗೇ ಸಾರಿದ್ದವು. ಹಿಮಾಲಯದ ಸುಂದರಿಯೊಬ್ಬಳು ತನ್ನ ಮಾಟ ತೋರುತ್ತಾ ಜಲಧಾರೆಯಾಗಿ ಹರಿಯುತ್ತಿದ್ದಳು. ಅವಳ ತೆಕ್ಕೆ ಬಳಸಿ, ಮರದ ಸಂಕ ದಾಟಿ ಏರುದಾರಿ ಏರಿದಾಗ ತೆರೆದುಕೊಂಡ ವಿಶಾಲ ಬಯಲ ತುಂಬ ಚಿಟ್ಟೆ ಹೂಗಳ ವನ! ವಿಶಿಷ್ಟ ಪುಷ್ಪಗಳ ಗಂಧಕ್ಕೆ ಮೂಗರಳಿ. ಮೈ-ಮನಗಳಳಿಗೆ ಪುಳಕ. ಎಡಕ್ಕೂ ಬಲಕ್ಕೂ ಹೂ ಹಾಸಿನ ದಾರಿ. ಮರಗಳೆಲ್ಲಾ ಗ್ರೀಷ್ಮ ಬರುವ ಸೂಚನೆಗೆ ಎಲೆ ಉದುರಿಸಿಕೊಂಡು ನಿಂತಿದ್ದವು.

ಹಳ್ಳಿಯ ಹುಡುಗಿ  ಅಂಜಲಿಯೊಂದಿಗೆ....

ಭಾರತದ ಅತಿ ಸುಂದರ ಚಾರಣಗಳಲ್ಲಿ ಹರ್ ಕಿ ದುನ್ ಕೂಡ ಒಂದು. ಇಲ್ಲಿಂದ ಮುಂದೆ ಸಿಗುವ ಅನೇಕ ಝರಿಗಳನ್ನು ದಾಟಿ ಒಂದು ಗಂಟೆಯಷ್ಟೊತ್ತಿಗೆ ಕೊನೆಯ ಕ್ಯಾಂಪ್ಗೆ ಬಂದು ತಲುಪಿದ್ದೆವು.
ಸ್ವರ್ಗಾ ರೊಹಿಣಿ ಶಿಖರ...

 ತಲುಪುತ್ತಲೇ ಬಿಸಿ ಬಿಸಿ ಊಟ ನಮ್ಮನ್ನು ಸ್ವಾಗತಿಸಿತು. ಎದುರಿಗಿದ್ದ ಹರ್ ಕಿ ದುನ್ ಮತ್ತು ಸ್ವಗರ್ಾರೋಹಿಣಿ ಪರ್ವತಗಳ ತಪ್ಪಲಿನಲ್ಲಿ ಮಗುವಿನಂತೆ ಬಟ್ಟಲು ಹರವಿಕೊಂಡು ಊಟ ಮಾಡಿದೆವು. ವಿಶಿಷ್ಟ ರುಚಿಯ ದಾಲ್ ಹೊಟ್ಟೆ ತಣಿಸಿತು. ಕ್ಯಾಂಪ್ ಪಕ್ಕದ
ಬೆಟ್ಟಗಳನ್ನೇರಿ ಸುತ್ತಲಿನ ನೋಟಕ್ಕೆ ಸಾಕ್ಷಿಯಾದೆವು. ಅಮ್ಮ ಹಚ್ಚಿಟ್ಟ ಹಣತೆಯಂತಾಗಿದ್ದ ಸೂರ್ಯ ಕಿರಣಕ್ಕೆ ಹರ್ ಕಿ ದುನ್ ಶಿಖರ ಬೆಳಗುತ್ತಿತ್ತು. ಯಾರೂ ಏರದ ಸ್ವಗರ್ಾರೋಹಿಣಿ ಶಿಖರ ಚಳಿಗೆ ಮೋಡ ಹೊದ್ದು ಮಲಗಲು ತಯಾರಾಗಿತ್ತು. ಸಂಜೆಯ ಬೆರಗನ್ನು ಕ್ಯಾಮರದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ.

ಇಳಿ ಸಂಜೆ ಯಲಿ ಹರ ಕಿ ದುನ್ ಶಿಖರ ..


ಸಂಜೆಯ ಕೊನೆಯ ಕಿರಣಗಳ ಬೆಳಕಲ್ಲಿ ನಮ್ಮ ಶಿಬಿರ ...


ನಸುಕಿನಲ್ಲಿ ನಮ್ಮ ಶಿಬಿರ....

ಮಾರನೆಯ ದಿನ ನಸುಕಿಗೇ ಎದ್ದು ಸುಮಾರು ಏಳು ಕಿಲೋ ಮೀಟರ್ ದೂರದ ಗ್ಲೇಶಿಯರ್ ನೋಡಲು ಹೋಗಿ ಬಂದೆವು. ನಡುವೆ ಕಡೆದಾದ ಹಾದಿಯಲ್ಲಿ ನಾವು ಮುಂದೆ ಹೋಗಲೂ ಆಗದೇ ಹಿಂದೆ ಬರಲೂ ಆಗದೇ ಜಾಮ್ ಆದೆವು. ನಮ್ಮ ಟೀಂ ಲೀಡ್ ಬಂದು ನಮ್ಮನ್ನು ಮುಂದೆ ಕರೆದೊಯ್ದ. ಕೆಲವರು ಗ್ಲೇಶಿಯರ್ ವರೆಗೆ ಹೋಗಿ ಬಂದರು. ನಾವು ಮುಕ್ಕಾಲು ದಾರಿ ಸವೆಸಿ ಸ್ವಗರ್ಾರೋಹಿಣಿಯ ಸರಿ ಸುಮಾರು ಸಮೀಪದವರೆಗೆ ಹೋಗಿ ಹಿಂದಿರುಗಿದೆವು. ನೆನಪಿನೋಕಳಿಯಲ್ಲಿ ಮೀಯುವಂತೆ ಮಾಡಿದ ಚಾರಣ ಪುನಃ ಸಾಂಕ್ರಿಯಲ್ಲಿ ಕೊನೆಗೊಂಡಿತು.
ಒಂದಿಷ್ಟು ಪೂರ್ವತಯಾರಿ ಮತ್ತು ಮವತ್ತು ಸಾವಿರವಿದ್ದರೆ ಈ ಚಾರಣ ಮಾಡಿ ಮುಗಿಸಬಹುದು.


ಶ್ರೀಧರ್. ಎಸ್. ಸಿದ್ದಾಪುರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229

Monday, August 13, 2018

ಬಾಣಂತನ ಮುಗಿಸಿ ಹೊರಟ ಮನೆ ಮಗಳು...

   
ಎರಡು ಬಣ್ಣಗಳ ದಾಸವಾಳ....
     
      ಸುವಾಸನೆ ಬೀರುವ ಹೂ ಮಳೆಯೊಂದು ಸುರಿದು ಹೋಗಿತ್ತು. ಮುತ್ತು ಸುರಿಸುವ ಮಳೆಗಾಲ. ಅಲ್ಲಲ್ಲಿ ಹನಿಗಳು ಹಾಡು ಹೇಳುತ್ತಾ ಕುಳಿತ್ತಿದ್ದವು. ಅವೆನ್ನೆಲ್ಲಾ ಕೇಳಿಸಿಕೊಳ್ಳುತ್ತಾ ನಿಂತಿದ್ದೆ.

ಅಮ್ಮ ನೆಟ್ಟ ಹಳೇ ದಾಸವಾಳದ ಗಿಡದಲ್ಲೊಬ್ಬ ಊರ್ಣನಾಭ (Lynx Spider, Oxyopes Shewtha) ಕುಳಿತಿದ್ದ. ಅರೆ ಇವನಾ ಇವನ ಪರಿಚಯ ಉಂಟೆಂದು ಸುಮ್ಮನಾದೆ.
Lynx Spider, Oxyopes Shewtha
ಅನೇಕ ದಿನಗಳಿಂದ ಅಲ್ಲೇ ಬಿಡಾರ ಹೂಡಿದ್ದ. ಹೊಸ ಮನೆ ಬಾಡಿಗೆ ಸಿಗಲಿಲ್ಲವೋ ಏನೋ ಎಂದು ಸುಮ್ಮನಾದೆ. ಹತ್ತಿರದ ಮತ್ತೊಬ್ಬನಲ್ಲಿ ತನ್ನ ದುಃಖ ತೋಡಿಕೊಳ್ಳುತ್ತಿದ್ದನೆನಿಸಿತು. ಇವನ ಆಸುಪಾಸು ಏನೋ ವಿಚಿತ್ರವಾದ ನೂಲೂಗಳು ಕಾಣುತ್ತಿದ್ದವು. ತೀರ ಸನಿಹ ಹೋಗಿ ಇಣುಕಿದೆ. ಯಾವುದೋ ವಿಚಿತ್ರ ಬಿಳಿ ವಸ್ತುಗಳಿದ್ದವು. ಅವುಗಳಲ್ಲಿ ವಿಚಿತ್ರವಾದ ಬಿಳಿ ಬಿಳಿಯಂತದ್ದು ಕಾಣಿಸಿತು. ಅಲ್ಲಿಂದ ಏನೇನೋ ನೇಲುತಲಿದ್ದವು. ಗಾಳಿ ಬಂದೆಡೆ ತೇಲುತ ಹೋದವು. ಏನೆಂದು ಗೊತ್ತಾಗಲಿಲ್ಲ. ಕೂಡಲೇ ಒಳಗೊಡಿದೆ. ನನ್ನ ತಪಾಸಣೆಯ ವಸ್ತುಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬಂದೆ. ಇವನ ತೀರ ಸನಿಹಕ್ಕೆ ಹೋಗಿ ಅವುಗಳ ಚಿತ್ರ ತೆಗೆದುಕೊಂಡೆ. ಅವನ್ನೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸಿದೆ. ಅಬ್ಬಾ ಬರೋಬ್ಬರಿ 108
ಮರಿಗಳನ್ನಿಟ್ಟಿತ್ತು ನಮ್ಮ ಊರ್ಣನಾಭ. ಅವು ಅಲ್ಲಲ್ಲಿ ಜೀಕುತ್ತಾ ಕುಳಿತ್ತಿದ್ದವು. ಕೆಲವು ತಾಯಿಯ ಮೈ ಮೇಲೆಲ್ಲಾ ಕುಣಿತ್ತಿದ್ದವು. ಅನೇಕ ದಿನಗಳವರೆಗೆ ಅಲ್ಲೇ ಬೀಡು ಬಿಟ್ಟಿದ್ದ. ನಿನ್ನೆ ಸುರಿದ ಭಾರೀ ಮಳೆಗೆ ಬಾಯ್ ಹೇಳಿ ಹೊರಟೇ ಬಿಟ್ಟ. ಬಾಣಂತನ ಮುಗಿಸಿ ಹೊರಟ ಮಗಳಿನಂತಾಗಿದ್ದ ನನಗೆ ದುಃಖ ಒತ್ತರಿಸಿಕೊಂಡು ಬಂತು!
ಬಾಣಂತನದ ಕಷ್ಟ ಸುಖ ನಿಮ್ಮೊಡನೆ ಹಂಚಿಕೊಂಡಿರುವೆ. ಇಷ್ಟವಾದರೆ ಹೇಳಿ.
ಶ್ರೀಧರ್. ಎಸ್. ಸಿದ್ದಾಪುರ. 

Saturday, July 14, 2018

ಕೈ ಬೀಸಿ ಕರೆಯುತಿದೆ ಕಾರವಾರದ ಕಡಲು......


ಕಡಲ ಒಡಲಿನಲಿ ಮುಸ್ಸಂಜೆ.
ಕರಾವಳಿ ಎಂದರೆ ಭಯಂಕರ ಬಿಸಿಲೆಂದು ತಿಳಿದಿದ್ದ ನನಗೆ ಕಾರವಾರಕ್ಕೆ ಹೋದಾಗ ಅಚ್ಚರಿಯಾಗಿತ್ತು. ಕಾರವಾರದ ಹಗಲು ಕೂಡಾ ತುಂಬಾ ತಂಪು ತಂಪು. ಉಡುಪಿಯ ಕರಾವಳಿಯವರಾದ ನಮಗೆ ನವೆಂಬರ್ನಲ್ಲಿ ಬೆವತು ಹೋಗುವಷ್ಟು ಸೆಕೆ. ಪಡುಬಿದ್ರಿಯ ಉಷ್ಣ ವಿದ್ಯುತ್ ಸ್ಥಾವರದ ಪರಿಣಾಮವಿರಬೇಕು ಅಂದುಕೊಂಡಿದ್ದೇನೆ. ಗೋಕರ್ಣ ಸಮೀಪದ ತದಡಿ ಉಷ್ಣ ವಿದ್ಯುತ್ ಸ್ಥಾವರದ ಬಳಿಕ ಕಾರವಾರದ ಕತೆಯೂ ಅಷ್ಟೇಯೋ ಏನೋ ಎಂಬ ಹೆದರಿಕೆಯೂ ಶುರುವಾಗಿದೆ?
ಪ್ರವಾಸಿಗರ ಮಸ್ತಿ...
ಕಡಲೊಡಲಿನ ನಮ್ಮ ಮೊದಲ ಪ್ರಯಾಣಕ್ಕೆ ನಿಕ್ಕಿಯಾಗಿದ್ದು ಮೃದ್ವಂಗಿ ಮಯವಾಗಿದ್ದ ಆಯಿಸ್ಟರ್ ದ್ವೀಪಕ್ಕೆ. ಕಡಲ ನಡುವಿನ ಸುಮನೋಹರ ತಾಣ. ಒಂದು ಕಾಲದಲ್ಲಿ ಆಯಿಸ್ಟರ್ ಮಯವಾಗಿದ್ದ ದ್ವೀಪ!
ಮೃದ್ವಂಗಿ ದ್ವೀಪ:-

ಲೈಟ   ಹ ೌಸನ ನೆತ್ತಿಯಿಂದ

ಮೆಲ್ಲಗೆ ಮುತ್ತಿಕ್ಕುವ ಕಡಲಿನ ಅಲೆಗಳು. ಕಾಡುವ ಕೆಂಬಣ್ಣದ ಸೂರ್ಯ ನೆತ್ತಿಗೆ ಬಂದಿದ್ದ. ಕಾರಾವಾರದ ಕಡಲ ಜಗಲಿಯಲಿ ಕೂತು ಅಲ್ಲಿನ ಬಾಡಿಗೆ ಹಾಯಿಯವರನ್ನೆಲ್ಲಾ ಮಾತಾಡಿಸಿ 4000 ಸಾವಿರಕ್ಕೆ ಒಬ್ಬನನ್ನು ಒಪ್ಪಿಸಿ ನಡು ಮಧ್ಯಾಹ್ನದ ಹೊತ್ತಿಗೆ ಆಯಿಸ್ಟರ್ ದ್ವೀಪದತ್ತ ಹೊರಟೆವು.
ಲಂಗರು ಜಾಗ.
ಕಾರವಾರದ ಟ್ಯಾಗೋರ ಕಿನಾರೆಯಿಂದ ಅರ್ಧ ತಾಸಿನ ಪ್ರಯಾಣ. ಕೋಟ್ಯಾಂತರ ವರ್ಷಗಳ ಕೆಳಗೆ ಎದ್ದ ನೂರಾರು ನಡುಗುಡ್ಡೆಗಳಲ್ಲಿ ಒಂದಕ್ಕೆ ಹೊರಟು ನಿಂತಾಗ ಉಂಟಾಗುವ ಪುಳಕವೇ ಬೇರೆ. ಮೃದ್ವಂಗಿಗಳೇ ತುಂಬಿ ತುಳುಕುತ್ತಿದ್ದ ಈ ದ್ವೀಪವು ನಮ್ಮನ್ನು ಅಡಿಗಡಿಗೆ ಅಚ್ಚರಿಗೆ ಕೆಡವಿತ್ತು.


ಅಂದು ಇಳಿತದ ಸಮಯ, ಕಡಲು ತುಂಬಾ ಶಾಂತವಾಗಿತ್ತು. ಲೈಪ್ ಜಾಕೇಟ್ ಎಲ್ಲರ ಹೆಗಲೇರಿತ್ತು. ಎಂದೋ ಎದ್ದ ನಡುಗುಡ್ಡೆಗಳ ನಡುವೆ ಸೀಳುತ್ತಾ ಸಾಗಿತ್ತು ಹಡಗು.
ಹಾರುವ ಡಾಲ್ಪಿನ್ಗಳು ದ್ವೀಪಕ್ಕೆ ಭವ್ಯ ಸ್ವಾಗತವನ್ನೇ ಕೋರಿದ್ದವು. ನನ್ನ ಮಗನಂತೂ ರೋಮಾಂಚಿತನಾಗಿದ್ದ. ಕಣ್ಣರಳಿಸಿ ಕಡಲನ್ನೇ ನೋಡುತ್ತಾ ನಿಂತ. ಒಂದು ಬದಿ ಕಾಳಿ ನದಿಯೂ ಕಡಲನ್ನು ಅಪ್ಪಿಕೊಳ್ಳುವ ತವಕದಲ್ಲಿತ್ತು. ಮುಂದೆ ಸಮುದ್ರ ಸೀಲ್ಗಳ ಗುಂಪೊಂದು ನಮಗೆದುರಾಗಿ ಆಯಿಸ್ಟರ್ ದ್ವೀಪದ ಮೊತ್ತೊಂದು ಬದಿಯಲ್ಲಿ ಚಕ್ಕಂದದಲಿ ನಿರತರಾಗಿದ್ದವು. ನಮ್ಮನ್ನು ನೋಡುತ್ತಲೇ ಮಾಯವಾದವು. ಸೀಲ್ಗಳ ಮೊದಲ ನೋಟಕ್ಕೆ ನಾವು ಪರವಶರಾದೆವು. ಬಿಳಿ ಹೊಟ್ಟೆಯ ಸಿ ಈಗಲ್, ಡಾಲ್ಪಿನ್, ಸೀಲ್ ನೋಡಿದ ಖುಷಿಯಲ್ಲಿ ತೇಲುತ್ತಲೇ ದ್ವೀಪಕ್ಕೆ ಲಗ್ಗೆ ಇಟ್ಟೆವು.

ಅನಾಥ ದ್ವೀಪದಲ್ಲೊಂದು ದೀಪ ಸ್ತಂಭ:-
ಆ ದ್ವೀಪದ ಅಪರಿಮಿತ ಸೌಂದರ್ಯವನ್ನು ಪದಗಳಲ್ಲಿ ಖಂಡಿತಾ ಹಿಡಿದಿಡಲಾರೆ. ಕಡಲ ನಡುವಿನ ಒಂಟಿ ದೀಪ ಸ್ತಂಭ. ಅಲ್ಲೊಬ್ಬ ಒಂಟಿ ಕಾವಲುಗಾರ.
ರಾತ್ರಿ-ಹಗಲು ಕಡಲನ್ನೇ ಕಾಣುತ್ತಾ ದ್ವೀಪ ಕಾಯುತ್ತಾ ಅಲ್ಲಿರುತ್ತಾನೆ. 1860 ರ ಸುಮಾರಿಗೆ ಪೋಚರ್ುಗೀಸರು ಅವರ ಹಡುಗಗಳಿಗಾಗಿ ಸಂಜ್ಞೆ ನೀಡಲು ರೂಪಿಸಿದ್ದರು. ಕಾರವಾರದ ನೈಸಗರ್ಿಕ ಬಂದರಿನಿಂದ ತಮ್ಮ ಊರಿಗೆ ಸಾಂಬಾರು ಪದಾರ್ಥಗಳನ್ನು ಕೊಂಡೊಯ್ಯಲು ಅವರು ಮಾಡಿಕೊಂಡ ವ್ಯವಸ್ಥೆ.
ದ್ವೀಪ ಸ್ತಂಭ ಇಂದು ಭಾರತದ ಸುರ್ಪದಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಶಿಲೆಕಲ್ಲಿನಿಂದ ನಿಮರ್ಿಸಲಾದ ಇದು ಬಹಳ ಗಟ್ಟಿ ಮುಟ್ಟಾಗಿದೆ.

ಇಲ್ಲಿಗೆ ಬಂದರೆ ಬೇರೆ ಯಾವುದೋ ಲೋಕಕ್ಕೆ ಬಂದಂತಹ ಅನುಭವ ನೀಡುವುದು. ಅಪರಿಮಿತ ಸೌಂದರ್ಯದ ಖನಿ. ದೀಪ ಸ್ತಂಭ ಏರಿ ಸುತ್ತಲಿನ ದೃಶ್ಯಾವಳಿಯ ಸುಂದರತೆ ಅನ್ಯಾದರ್ಶ.
ದ್ವೀಪದಲ್ಲಿ ಮಾವು ಮುಂತಾದ ಹಣ್ಣಿನ ಗಿಡಗಳಿವೆ. ಕಡಲ ಹಕ್ಕಿಗಳು ದ್ವೀಪಗಳನ್ನೇ ನೆಲೆಯಾಗಿಸಿಕೊಂಡಿವೆ. ಕಡಲ ಜೀವಿಗಳನ್ನು ಹೆಕ್ಕಿ ಹೆಕ್ಕಿ ತಿಂದ ಹಕ್ಕಿಗಳು ಸಂತಾನ ಬೆಳೆಸಿಕೊಂಡಿವೆ. ವಿದ್ಯುತ್ಗಾಗಿ ಸೋಲಾರ್ ಅಳವಡಿಸಲಾಗಿದೆ. ಇವೆಲ್ಲವನ್ನು ನೋಡಿಕೊಳ್ಳಲೊಬ್ಬನನ್ನು ನೇಮಿಸಲಾಗಿದೆ! ಹುಚ್ಚು ಕಡಲ ನಡುವೆ ಒಂಟಿಯಾಗಿರುವುದು ಅವನ ಸಾಹಸವೇ ಸರಿ. ಸಿಹಿ ನೀರಿಗಾಗಿ ಬಾವಿಯೊಂದಿದೆ. ಉಳಿದೆಲ್ಲವನ್ನೂ ಕಾರವಾರದಿಂದಲೇ ತರಬೇಕು. ಎಲ್ಲವಿದ್ದೂ ಒಂಟಿ ಎಂಬ ಭಾವ.
ಆಯಿಸ್ಟರ್ಗಳೆಂಬ ಮೃದ್ವಂಗಿ ಜೀವಿಗಳು ಇಲ್ಲಿ ಹೇರಳವಾಗಿ ಸಿಗುವುದರಿಂದಲೇ ಈ ದ್ವೀಪಕ್ಕೆ ಆಯಿಸ್ಟರ್ ದ್ವೀಪವೆಂದು ಹೆಸರು ಬಂದಿದೆ. ಮೊದಲಿನಂತೆ ಈಗ ಇಲ್ಲಿ ಅವು ಕಾಣಸಿಗುವುದಿಲ್ಲ! ತಮ್ಮ ನೆಲೆ ಕಳಕೊಂಡಿವೆ.
ಕುರುಮ್ ಗಡ   ದ್ವಿಪ..
ಎಲ್ಲಿ ಹೋದವೋ ಆಯಿಸ್ಟರ್ಗಳು ಎಂಬ ಪ್ರಶ್ನೆ ಕಾಡುತ್ತಲೇ ಇದೇ, ನನಗೆ ಕ್ರಿಸಮಸ್ ದ್ವೀಪದ ಕೆಂಪು ಏಡಿಗಳ ನೆನಪಾಯಿತು. ಪ್ರತಿ ವರ್ಷವು ಅವು ಕ್ರಿಸ್ಮಸ್ ದ್ವೀಪಕ್ಕೇ ಬಂದು ಮೊಟ್ಟೆ ಇಟ್ಟು ಮರಿ ಮಾಡಿ ಪುನಃ ತಮ್ಮ ಮೂಲವನ್ನು ತಪ್ಪದೇ ಸೇರಬೇಕಾದರೆ ಅವುಗಳ ಮೆದುಳಿನಲ್ಲಿ ಆ ದ್ವೀಪದ ದಾರಿ ದಾಖಲಾಗಿರಲೇ ಬೇಕಲ್ಲವೇ? ಹೇಗೆ ಈ ದ್ವೀಪಗಳ ದಾರಿ ಅವುಗಳ ಮೆದುಳುಗಳಲ್ಲಿ ದಾಖಲಾಗಿರಬಹುದು? ಚಿಕ್ಕ ಮರಿಯೊಂದು ಅಲ್ಲಿ ಹುಟ್ಟಿ ಮೂಲ ನೆಲೆಯನ್ನು ಮತ್ತೆ ಸೇರಲು ಹಿಂದಿರುಗಿ ಬರುವ ದಾರಿಯೂ ದಾಖಲಾಗಿರಬೇಕಲ್ಲ ಎಂದು ಯೋಚಿಸುತ್ತಾ ಮಗದೊಂದು ದ್ವೀಪಕ್ಕೆ ಬಂದೆವು. ಆಯಿಸ್ಟರ್ಗಳ ಕಣ್ಮರೆಗೆ ಕಾರಣವಿನ್ನೂ ತಿಳಿದಿಲ್ಲವಂತೆ! ತೀರ ಮೃದು ದೇಹ ಹೊಂದಿದ ಅವು ಉಷ್ಣಾಂಶದಲ್ಲಾದ ತೀವ್ರ ಸ್ವರೂಪದ ಬದಲಾವಣೆಗೆ ಅವು ಹೊಂದಿಕೊಳ್ಳಲಾಗದೆ ನಾಶ ಹೊಂದಿರಬೇಕೆಂದು ಯೋಚಿಸಿದೆ. ಅಷ್ಟರಲ್ಲೇ ಮತ್ತೊಂದು ದ್ವೀಪಕ್ಕೆ ಬಂದಿದ್ದೆವು, ಅದೇ ಕುರುಮ್ಗಢ್ ದ್ವೀಪ. ಕುರಮ್ಗಢ್ ದ್ವೀಪದ ಇತಿಹಾಸ ಇನ್ನೂ ರೋಚಕ.
ಕುರುಮ್ಗಢ್ ದ್ವೀಪ:-

ಗಢ್ ಎಂದರೆ ಕೋಟೆ ಎಂಬ ಅರ್ಥವು ಮರಾಠಿ ಭಾಷೆಯಲ್ಲಿದೆ. ಕಾರವಾರವು ಮೊದಲು ಮುಂಬೈ ಪ್ರಾಂತಕ್ಕೆ ಅಂಟಿಕೊಂಡಿತ್ತು. ಮರಾಠಿ ಭಾಷೆಯ ಎರಿಳಿತ ಮತ್ತು ಎಳೆ ಅಲ್ಲಿನ ಕನ್ನಡಿಗರಲ್ಲಿ ಕಾಣಬಹುದು. ಪೋಚರ್ುಗೀಸರು ಕುರುಮ್ಗಢ್ನ್ನು ಕಾವಲಿನ ತಾಣವಾಗಿ ಬಳಸುತ್ತಿದ್ದರು ಎಂದು ಕಾಣುತ್ತೆ. ಸದಾಶಿವ ಗಢ್ನ ಪ್ರವೇಶಿಸುವ ಹಡಗುಗಳು ಈ ಜಾಗವನ್ನು ಹಾದು ಹೋಗಬೇಕು ಅದರ ಕಾವಲಿಗೆ ಇದನ್ನು ಬಳಸಿಕೊಳ್ಳುತ್ತಿದ್ದಿರಬೇಕು. ಆಯಿಷ್ಟರ್ ದ್ವೀಪವನ್ನು ದಾಟಿ ಬಂದ ವೈರಿಗಳನ್ನು ಹೊಡೆದುರುಳಿಸಲು ಇಲ್ಲಿನ ಗುಡ್ಡದ ಮೇಲೊಂದು ಪಿರಂಗಿಯನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಎಲ್ಲೂ ಈ ದ್ವೀಪದ ಕುರಿತು ಸ್ಪಷ್ಟವಾದ ಮಾಹಿತಿ ಸಿಗಲಿಲ,್ಲ ನಿರಾಸೆಯಾಯಿತು. ಆಳೆತ್ತರದ ಹುಲ್ಲ ರಾಶಿ ನಡುವೆ ತುಕ್ಕು ತಿನ್ನದೆ ಬಿದ್ದಿರುವ ಪಿರಂಗಿಗಳು ಮಾತು ಬಂದಿದ್ದರೆ ಇಲ್ಲಿನ ಕತೆಗಳನ್ನು ರೋಚಕವಾಗಿ ಹೇಳುತ್ತಿದ್ದವೋ ಏನೋ?!
ಇಳಿಯಲು ಇಲ್ಲಿ ಸೂಕ್ತ ಜೆಟ್ಟಿ ವ್ಯವಸ್ಥೆ ಇಲ್ಲ. ಅತ್ಯಂತ ಕುಶಲಿ ನಾವಿಕ ಮಾತ್ರ ಹಡಗನ್ನು ಲಂಗರು ಹಾಕಬಲ್ಲ.
ಸಣ್ಣ ಬಂಡೆಯ ಮೇಲೆ ಕಡಲನ್ನು ನಿರುಕಿಸುತ್ತಾ ಕುಳಿತೆವು. ಅಲ್ಲಲ್ಲಿ ಡಾಲ್ಫಿನ್ಗಳು ಹಾರುತ್ತಿದುದು ಕಾಣುತಲಿತ್ತು. ಇಲ್ಲಿನ ಬೃಹತ್ ಬಂಡೆಗಳ ಮೇಲೆ ಕಡಲು ಕೆತ್ತಿದ ಚಿತ್ರಗಳ ಚಿತ್ತಾರ. ನಾವಿಳಿದ ಜಾಗದ ಬಂಡೆಗಳ ಮೇಲೆ ಹುಡುಗಿಯೊಬ್ಬಳ ಚಿತ್ರವೊಂದು ಕಾಣಿಸಿತು.
ಹುಡುಗಿಯ ಚಿತ್ತಾರದ ಬಂಡೆ...
ಶೋಧಿಸುತ್ತಾ ಹೋದರೆ ಬಂಡೆಗಳಲ್ಲಿ ಹಲವು ಚಿತ್ತಾರ ನಿಮಗೆ ಕಾಣುತ್ತೆ. ದ್ವೀಪದ ದಕ್ಷಿಣ ತುದಿ ಕಡಿದಾಗಿದೆ. ಅಲ್ಲೊಂದು ರೆಸಾಟರ್್ ಕಾರ್ಯನಿರ್ವಹಿಸುತ್ತಿದೆ.
ಇದೊಂದು ಸಣ್ಣ ದ್ವೀಪವಾದರೂ ಇದರ ಒಡಲಿನಲ್ಲೊಂದು ನರಸಿಂಹ ದೇವಾಲಯವಿದೆ.
ವರ್ಷಕ್ಕೊಮ್ಮೆ ಇಲ್ಲಿ ಪೂಜೆ ನಡೆಯುತ್ತೆ. ಗೋವಾ ಮತ್ತು ಕಾರವಾರದಿಂದ ಜನ ಬಂದು ಇಲ್ಲಿ ಪೂಜೆ ಸಲ್ಲಿಸಿ ಹೋಗುವರು. ದಿನವಿಡೀ ಕಳೆದರೂ ಬೇಸರವೆನಿಸದ ಮನಕೆ ಉಲ್ಲಾಸ ತುಂಬಬಹುದಾದ ತಾಣಗಳಲ್ಲಿ ಇದೂ ಒಂದು.
ಕೊನೆಯ ಮಾತು:-
ಕಡಲ ಒಡಲನ್ನು ತಿಳಿಯಾಗಿಡಬೇಕಾದುದು ನಮ್ಮ ಕರ್ತವ್ಯ. ತಿಳಿಯದೇ ಎಸೆದ ಪ್ಲಾಸ್ಟಿಕ್ ದಡದ ಬದುಕನ್ನು ಕದಡದೇ ಬಿಡದು. ದಡದಲ್ಲೇರಿದ ಇಂಗಾಲವನ್ನು ನುಂಗುವ ಕಡಲು ಪ್ರಕ್ಷುಬ್ದಗೊಂಡರೆ ದಡದ ಬದುಕು ಹೈರಾಣವಾಗುವುದು ಎಂಬ ತಿಳಿವಿನೊಂದಿಗೆ ಸುಮಧುರ ನೆನಪಿನ ಕಾರವಾರಕ್ಕೆ ವಿದಾಯ ಕೋರಿ ದಾಂಡೇಲಿಯತ್ತ ಹೊರಟೆವು.

ಶ್ರೀಧರ್. ಎಸ್. ಸಿದ್ದಾಪುರ

ವಾರೆ ನೋಟ

ಧಂಕರ್‌ ಒಂದು ಅಪರೂಪದ ಆಲಾಪ

ಪ್ರಾರಂಭ ಓಡಾಟಕ್ಕೆ ಬಸ್ಸು, ಕಾರು ರಿಕ್ಷಾ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳಿದ್ದರೇನೆ ಬದುಕು ಎಂದುಕೊಂಡ ಶಹರದ ಬೆಪ್ಪುತಕ್ಕಡಿಗಳಿಗೆ, ಅಗಾಧ ಸಂಪತ್ತಿದ್ದರೆ ಮಾತ್ರ ಮನ...