Saturday, February 4, 2017

ಏಕಾಂತದ ಆಗುಂಬೆ ಮತ್ತು ಮಲಬಾರ್ ಟ್ರೋಗನ್ ( Malabar Trogon)

A Beauty Of Nature A Unique water fall Of Agumbe.
    ಜಗತ್ತಿನ 38 ಜೀವವೈವಿದ್ಯತಾ ತಾಣಗಳಲ್ಲಿ ಆಗುಂಬೆಯೂ ಒಂದು. World heritage ಮಾನ್ಯತೆಯೂ ಇದಕ್ಕಿದೆ. ಲಂಗೂರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮಹೋರಗದಲ್ಲೊಂದಾದ ಕಾಳಿಂಗ ಸರ್ಪ ಸಾಮಾನ್ಯ. ಸೂರ್ಯನಿಗಿಲ್ಲಿ ಯಾವತ್ತೂ ರಜೆ. ಹತ್ತಿ ಮರದ ಅಜ್ಜನ ಗಡ್ಡ ಹಾರಿದಂತೆ ಮುಖಕೆ ಮಂಜಿನ ಸಿಂಚನ. ಮೌನವೇ ಹಾಸು ಹೊದ್ದ ರಸ್ತೆಗಳು. ಮಳೆಗಾಲದ ಅನುದಿನವೂ ಹೂಪಕಳೆಗಳುದುರಿದಂತೆ ಮಳೆ ಸಿಂಚನ. ಗಿರಿ ಶಿಖರವನ್ನೆಲ್ಲಾ ತೊಯಿಸಿ ಇಲ್ಲಿ ಹುಟ್ಟುವ ಜೀವ ನದಿಗಳು ಅನೇಕ. ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ನೀರವ ರಸ್ತೆಗಳು. ಇಲ್ಲಿನ ಮೌನ ಬಹಳ ಇಷ್ಟವಾಗುತ್ತದೆ. ಅನೇಕ ಪ್ರವಾಸಿ ಸ್ಥಳಗಳು ಹತ್ತಿರದಲ್ಲೇ ಇವೆ ಎಂಬುದು ಇಲ್ಲಿನ ಮತ್ತೊಂದು ಆಕರ್ಷಣೆ. ಹೊಂಬುಜ, ಕವಲೇ ದುರ್ಗ, ನಗರ ಕೋಟೆ, ಸಿರಿಮನೆ, ಕಿಗ್ಗ ದೇವಾಲಯ ಇತ್ಯಾದಿ.

Malabar Trogon Male.


      ಕಪ್ಪೆಗಳು, ವಿವಿಧ ಜಾತಿಯ ಹಾವುಗಳು, ಹಾರುವ ಓತಿ ನೋಡಬೇಕೆಂದರೆ ಆಗುಂಬೆ ಒಂದು ಪ್ರಶಸ್ತ ಸ್ಥಳ. ಇಲ್ಲಿನ ಹಕ್ಕಿಗಳಿಗಾಗಿ ವಿದೇಶಿಯರೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಟ್ರೋಗನ್ ಇಲ್ಲಿನ ಒಂದು ವಿಶೇಷ ಹಕ್ಕಿ. ಕೆಂಬಣ್ಣ ತುಂಬಿದ ಡಬ್ಬಿಗೆ ಬಿದ್ದು ಬಂದಂತಹ ಬಣ್ಣ. ಅದರ ಮೋಹಕ್ಕೆ ಸೋಲದವರಾರು. ಅನೇಕ ಬಾರಿ ಇಲ್ಲಿ ಲಂಗರು ಹೊಡೆದರೂ ಕ್ಯಾಮರಕ್ಕೆ ಈ ಹಕ್ಕಿ ದರ್ಶನ ಕೊಟ್ಟಿರಲಿಲ್ಲ. ಅನೇಕ ಬಾರಿ ಹೆಬ್ರಿ ಮೂಲಕ ಹಿಂತಿರುಗುವಾಗ ಕಂಡು ಕಾಣದಂತೆ ಹೆಣ್ಣು ಹಕ್ಕಿಯೊಂದು ಹಾರಿ ಹೋಯಿತು. ಗೆಳೆಯ ರಾಘು ಜೊತೆ ಆಗುಂಬೆಯ ಸುತ್ತ ಸುತ್ತು ಹಾಕಿ ಬಂದೆ. ಇಲ್ಲ. ಒಂದೆರಡು ಹೆಣ್ಣು ಹಕ್ಕಿಯ ದರ್ಶನ ಬಿಟ್ಟರೆ ಗಂಡು ಹಕ್ಕಿಯ ದರ್ಶನ ಭಾಗ್ಯ ಸಿಕ್ಕಿರಲಿಲ್ಲ.


lion tailed Macaque
    ಜನವರಿಯ ಚಳಿಯ ದಿನಗಳಲ್ಲಿ ಮನೆ ಎದುರಿನ ಚಿಕ್ಕ ಕುರುಚಲು ಕಾಡಿನಲ್ಲಿ ತಿರುಗುತ್ತಿದ್ದೆ. ಸುಮಾರು 7.20 ರ ಸಮಯ. ಇಡಿ ಪ್ರಕೃತಿಯೇ ಚಳಿಯಲ್ಲಿ ಮಿಂದೇಳುತ್ತಿತ್ತು. ಅಚಾನಕ್ ಆಗಿ ಗಂಡು ಹಕ್ಕಿಯೊಂದು ಸಣ್ಣ ಕೊಂಬೆಯ ಮೇಲೆ ಬಂದು ಚಳಿ ಕಾಯಿಸುತ್ತಾ ಕುಳಿತ್ತಿತ್ತು. ಸುಮಾರು 05 ನಿಮಿಷ ಅಲ್ಲೇ ಕುಳಿತು ಅನೇಕ ಚಿತ್ರ ತೆಗೆಯಲು ಅನುವು ಮಾಡಿತು. ಮುಂಜಾವಿನ ಬೆಳಕಿನ ಕೊರತೆಯಿಂದ ಕೆಲವು ಚಿತ್ರ ಮಬ್ಬಾದವು. ಒಂದೆರಡು ಚನ್ನಾಗಿ ಮೂಡಿ ಬಂದವು. ಮತ್ತೆರಡು ದಿನವೂ ಅದೇ ರೆಂಬೆಯ ಮೇಲೆ ಬಂದು ಕುಳಿತು ಹಾರಿ ಹೋದದ್ದು ವಿಶೇಷ. 


No comments:

Post a Comment

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...