Tuesday, September 12, 2017

ತೇಜಸ್ವಿ ನೆನಪಿಗೆ ದಕ್ಕಿದ್ದು ..........2

      ಮನೆ ಎದುರಿಗೆ ಹಕ್ಕಿ ಹಿಂಡು ಗೌಜಿ ಮಾಡುತಲಿದ್ದವು. ಮದುವೆ ಮುಗಿದ ಮಂಟಪದಂತಿತ್ತು ಆ ಮನೆ. ನೀರವ ಮೌನ.   ನಾಯೊಂದು ಮನೆಗೆ ಗಿರಕಿ ಹೊಡೆಯುತ್ತಿತ್ತು. ಅವತ್ತು ಗೌರಿ ಹಬ್ಬ. ಮರುದಿನ ಗಣೇಶ ಬರುವವನಿದ್ದ. 'ಯಾರದು' ಎಂಬ ಒಳಗಿನಿಂದ ದನಿಯೊಂದು ಹೊರ ಬಂತು. 
ತೇಜಸ್ವಿ ತೋಡಿಸಿದ ಕೆರೆ.
ಒಮ್ಮೆಗೆ ಆ ನೀರವ ಏಕಾಂತದಲ್ಲಿ ಬಿರಿಯಾನಿ ಕರಿಯಪ್ಪ ಪಾತ್ರ ಮೈದೆಳೆದಿದ್ದು, ಕವರ್ಾಲೋ, ಮಂದಣ್ಣರ ಅನ್ವೇಷಣೆ, ಹೀಗೆ ಅವರ ಕಾದಂಬರಿಯ ಪಾತ್ರಗಳೆಲ್ಲಾ ಎದುರಿಗೆ ಬಂದವು. ಏಕಾಂತದ ಸರ ಹೊತ್ತಲ್ಲಿ ಕೈಹಿಡಿದು ಕರೆತಂದ ಪಾತ್ರಗಳು ನೆನಪಾದವು. ಕತೆ ಬಿಗಿ ಕಳೆದು ಕೊಳ್ಳದಂತಹ ನೇಯ್ಗೆ ಹೇಗೆ ಸಾಧ್ಯವಾಯಿತೆಂದು ನಮಗರ್ಥವಾಯಿತು.
ಮರುಕ್ಷಣ ಮನೆಯೊಳಗಿದ್ದೆವು. ತಂಡಿ ಹೊದ್ದ ನೆಲ. ಸ್ವೆಟರು ಹೊದ್ದು ಅಮ್ಮನಂತಿರುವ ರಾಜೇಶ್ವರಿ ತೇಜಸ್ವಿ ಸ್ವಾಗತಿಸಿದರು. ಯಾವುದೋ  ಚಾನಲ್ನವರು ಆಗಷ್ಟೇ ಬಂದು ಹೋಗಿದ್ದರೂ ಬೇಸರಿಸದೇ ನಮ್ಮ ಜೊತೆಗೆ ಹರಟೆ ಕೂತಿದ್ದರು. ಮಾತೆಲ್ಲಾ ತೇಜಸ್ವಿ ಸುತ್ತ. ಯಾಕಷ್ಟು ತೇಜಸ್ವಿ ಆಕರ್ಷಣೆಯೆಂದು ದೇವರಾಣೆಗೂ ತಿಳಿಯದು. ಚಿತ್ರಕೂಟ ಅವರ ತೋಟದ ಮನೆಯಿಂದ ನಿರುತ್ತರದ ಅವರ ತೋಟದ ಸಾಹಸಗಳು ಮಾತಿನಲ್ಲಿ ತೆರೆದುಕೊಂಡಿತು.
ಬಿಳಿಯಂಗಿ ತೊಟ್ಟ ತೇಜಸ್ವಿ ಸ್ಕೂಟರ್ ಏರಿ ಮೂಡಿಗೆರೆ ಪೇಟೆ ತಿರುಗಿ ಬರುವುದರೊಳಗೆ 'ಕೆಂಪಗಿ' ದಳವಾಗಿ ಬರುತ್ತಿದ್ದರು. ಪೇಟೆ ಸೇರಿ ಧೂಳು ಕುಡಿಯಬಹುದಾಗಿದ್ದ ಕಾಲದಲ್ಲಿ ಕಾಡು ಸೇರಿ, ಗಾಳ ಹಿಡಿದು ಗಂಭೀರ ಚಿಂತಕರಾದರು ತೇಜಸ್ವೀ. ಸುಲಭದಲ್ಲಿ ಮಾಸ್ತರಾಗ ಬಹುದಾಗಿದ್ದರೂ ಕಾಡಿನ ಅನ್ವೇಷಣೆಗೆ ಹೊರಟು ನಿಂತರು.
ವೆಂಕ್ಟನ ಪುಂಗಿಯ ನಾದದಂತೆ ಒಂದೊಂದೇ ಪುಸ್ತಕಗಳು ಹೊರ ಬಂದವು. ಬಿರಿಯಾನಿ ಕರಿಯಪ್ಪನಂತೇ, ಜುಗಾರಿ ಕ್ರಾಸ್ ಕಾದಂಬರಿಯ 'ಅಮೋಪಾಸ್ ಮೂಟೆ ಮತ್ತು ವಾಂತಿ' ಪ್ರಕರಣಗಳು ನೈಜ ಘಟನೆಗಳೆಂದು ಹೇಳಿದ ನೆನಪು. ಚಿಮುಣಿ ಬುಡ್ಡಿ ದೀಪದಲ್ಲಿ ಬರೆದ ಕವರ್ಾಲೋ ಕ್ಲಾಸಿಕ್ ಎಂದು ನೆನಪು ಮಾಡಿಕೊಂಡರು. ಮುಂದೆ ಕೃಷಿ ಬದುಕಿನ ಕಷ್ಟಗಳ ಬಗ್ಗೆ ಮಾತಾಡಿಕೊಂಡೆವು. ಕಾಲದ ಪರಿವೆಯೇ ಇರಲಿಲ್ಲ. 
ರಾಜೇಶ್ವರಿ ತೇಜಸ್ವಿ ಸ್ವತಃ ಚಹ ಮಾಡಿಕೊಟ್ಟರು. ತೇಜಸ್ವಿ ಕೆಲಸ ಮಾಡುತ್ತಿದ್ದ ಮಾಳಿಗೆ, ಅಲ್ಲಿಂದ ಕಾಣುತ್ತಿದ್ದ ಸಂಪಿಗೆ, ಚಕ್ಕೊತ್ತಾ ಮರ, ಹಕ್ಕಿ ಮರೆ ಹಾಗೇ ಇತ್ತು! ಅತಿ ಸಣ್ಣ ಪೇರಲೆಯೊಂದು ನಾಲ್ಕು ಕಾಯಿ ಬಿಟ್ಟು ನಗುತ್ತಿತ್ತು. ಇಂಬಳ ಕಚ್ಚಿಸಿಕೊಳ್ಳುತ್ತಾ ತೋಟ, ಕೆರೆ, ಗದ್ದೆ ನೋಡಿದೆವು. ಅವರಿಗಾಗಿ ತಂದ ತಿಂಡಿ ಪೊಟ್ಟಣವೊಂದ ಕೊಟ್ಟೆವು. ಅವರ ಮನೆಯ ಚಕ್ಕೊತ್ತಾ ಹಣ್ಣು ಜೊತೆಯಾದವು. ಚಕ್ಕೊತ್ತಾ ಹೇಗೆ ತಿನ್ನಬೇಕೆಂದು ಅವರೇ ಹೇಳಿದರು. ಸಿಪ್ಪೆ ಬಿಡಿಸಿಟ್ಟು ಮರುದಿನ ತಿನ್ನಬೇಕು ಆಗಲೇ ತಿನ್ನಬೇಕು. ಯಾಕೆಂದು ನಾನು ಈವರೆಗೂ ಆಲೋಚಿಸಿಲ್ಲ! ಮರುದಿನ ಸಾಯಂಕಾಲದವರೆಗೂ ಹಣ್ಣು ನಮ್ಮ ಬಗಲಿಗೆ ಅಂಟಿಕೊಂಡಿತ್ತು! ತೀರಾ ಹುಳಿಯೂ ಅಲ್ಲದ, ತೀರ ಕಹಿಯೂ ಅಲ್ಲದ ಹಣ್ಣದು. ತೇಜಸ್ವಿ ಇದ್ದಿದ್ದರೆ ಬೈಸಿಕೊಳ್ಳುತ್ತಿದ್ದಿರಿ ಎಂದರು ರಾಜೇಶ್ವರಿ.  ಅಷ್ಟು ತಿಂಡಿ ಒಯ್ದಿದ್ದೆವು.
ತೇಜಸ್ವಿ ಮನೆಯೆದುರಿನ ಚಕ್ಕೊತ್ತಾ ಮರ ಮತ್ತು ವರಾಂಡ
ಚಕ್ಕೊತ್ತಾದ ಸವಿ ಇನ್ನೂ ನಾಲಗೆಯ ತುದಿಯಲ್ಲಿದೆ. ಅವರು ಸಹಿ ಮಾಡಿಕೊಟ್ಟ ಪುಸ್ತಕ ಮತ್ತು ತೇಜಸ್ವಿ ತಂದಿಟ್ಟ ಇನ್ಲ್ಯಾಂಡ್ ಕಾಗದವೊಂದು ನಮ್ಮ ನೆನಪಿಗಾಗಿ ಕೊಟ್ಟರು. ತೇಜಸ್ವಿ ನೆನಪಾದಾಗ ಮತ್ತೆ ಮತ್ತೆ ಆ ನೆನಪಿಗೆ ಮರಳುತ್ತೇನೆ, ಕಾಗದ ತಡುವುತ್ತೇನೆ.


ಶ್ರೀಧರ್. ಎಸ್. ಸಿದ್ದಾಪುರ


No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...