ನೀಲ ನೀರ ತುಣುಕಿನ ಮೇಲೆಯೇ ತೇಲುವ ಒಂದು ಅಪರೂಪದ ಪಯಣದ ಅನುಭವ! ಅಮ್ಮ ಹಾಕಿದ ಉಜಾಲದಂತೆ ಕೊಳವೆಲ್ಲಾ ನೀಲಿ ನೀಲಿ. ನೀರ ಮೇಲೆ ತೇಲುತ್ತಾ ಬೆಳೆವ ಹುಲ್ಲು, ಪುಮ್ಡಿನ್. ಪನ್ನೀರಷ್ಟು ಶುಭ್ರ ನೀರ ಸರೋವರ. ಅಲ್ಲಲ್ಲಿ ಹುಲ್ಲ ಮೇಲೆಯೇ ತೇಲುವ ಮನೆಗಳು! ಮನೆಗಳು ತನ್ನ ಸ್ಥಳ ಬದಲಾಯಿಸದಂತೆ ಹುಗಿದ ಬಿದಿರ ಕೋಲುಗಳು. ಕೊಳದ ನಡುವೆಯೊಂದು ಸಣ್ಣ ದ್ವೀಪ ಸೆಂಡ್ರಾ! ಕೊಳದ ಇಕ್ಕಲೆಗಳಲ್ಲಿ ಮೀನುಗಾರರ ಬಡಾವಣೆ. ಕಣ್ಣ ತುದಿಯವರೆಗೂ ನೀಲಿಯ ನೀರೇ ನೀರು! ಸ್ವರ್ಗ ಸದೃಶ ನೋಟ. ಈ ಸರೋವರದ ಒಟ್ಟು ವಿಸ್ತೀರ್ಣ 287 ಚದರ ಕಿಲೋ ಮೀಟರ್!
ದಾರಿ ಕೇಳಿದಿರಾ?
ಮಣಿಪುರದ (manipur) ರಾಜದಾನಿ ಇಂಪಾಲದಿಂದ ಎರಡು ಗಂಟೆಯ ಪ್ರಯಾಣದ ದೂರದಲ್ಲಿರುವ ಪನ್ನೀರ ಕೊಳ ಲೊಕ್ತಾಕ್ (Loktak Lake). ಇಲ್ಲಿಗೆ ದೇಶದ ನಾನಾ ಕಡೆಯಿಂದ ನೇರ ವಿಮಾನ ಸಂಪರ್ಕವಿದೆ. ಕೈಯಲ್ಲೊಂದು 15 ಸಾವಿರವಿದ್ದರೆ ನಾಲ್ಕು ದಿನವಿದ್ದು ಬರಬಹುದು. ಸರೋವರದ ಬಳಿ ಸಾಕಷ್ಟು ಹೋಟೆಲ್ಗಳಿವೆ.
ಜಿಲೇಬಿ ಹೊಯ್ದಂತೆ ವೃತ್ತಾಕಾರದಲ್ಲೇ ಬೆಳೆವ ಹುಲ್ಲು! ನೀವದರ ಮೇಲೆ ನಿಂತು ನಿರಾತಂಕವಾಗಿ ನಡೆಯಬಹುದು! ನೀರ ಮೇಲೆ ಹುಲ್ಲು, ಹುಲ್ಲ ಮೇಲೆ ನೀವು! ನಿಮ್ಮನ್ನು ಅಚ್ಚರಿಯ ಕಡಲಲ್ಲಿ ತೇಲಿಸಲು ಇಷ್ಟು ಸಾಕಲ್ಲ? ಮೇಲಿನಿಂದ ನೋಡಿದರೆ ಯಾರೋ ಬೇಕೆಂತಲೇ ಹಾಕಿದಂತಹ ಗೋಲಾಕಾರದ ಹುಲ್ಲು ಕಾಣುವುದು. ತೇಲುತ್ತಾ ಹೋದಂತೆ ಸರೋವರದ ನಡುವೆಯೊಂದು ರೆಸ್ಟೋರೆಂಟ್ ಇದೆ. ನಮ್ಮ ದೋಣಿಯ ಅಂಬಿಗ ರೆಸ್ಟೋರೆಂಟ್ಗೆ ಕಾಫಿ ಹೀರಲು ಹೋಗೋಣವೇ ಎಂದ. ನಾವು ಧೈರ್ಯ ಸಾಲದೇ ಬೇಡವೆಂದು ನುಣುಚಿಕೊಂಡೆವು. ಸರೋವರಕ್ಕೆ ಒಂದು ಸುತ್ತು ಬರಲು ಅನೇಕ ಗಂಟೆಗಳೇ ಬೇಕು.
ಇಲ್ಲಿನ ವೈಶಿಷ್ಟ್ಯ ಪೂರ್ಣ ಹುಲ್ಲಿನಲ್ಲಿ 13 ಜಾತಿಗಳಿವೆ ಎಂದು ಅಂಬಿಗನಿಂದ ತಿಳಿದೆವು. ವೃತ್ತಾಕಾರವಾಗಿ ಬೆಳೆಯುವ ಇದು ಮೇಲಿನಿಂದ ನೋಡುವವರಿಗೆ ಹಸಿರು ಜಿಲೇಬಿ ತೇಲಿಬಿಟ್ಟಂತೆ ತೋರುತ್ತೆ! ಬಲೆ ಬೀಸುವ ಮೀನುಗಾರರು ಜಿಲೇಬಿ ಹಿಡಿವ ದೇವತೆಗಳಂತೆ ಕಾಣುತ್ತಾರೆ! ಮಣಿಪುರದ ನದಿಗಳ ಕೊನೆ ತುದಿಯೇ ಈ ಲೋಕ್ತಾಕ್ ಶಬ್ದದ ಅರ್ಥ.
ಚಂದ್ರನ ತುಣುಕಿನಂತಿರುವ ತಂಪು ತಂಪು ಸರೋವರವನ್ನು ಯಾರೋ ಅಪಹರಿಸುವರೋ ಎಂಬಂತಿರುವ ಸೈನಿಕರ ದಂಡು ದಂಡೆಯಲಿ ಕವಾಯತು ನಡೆಸುತ್ತಿತ್ತು. ದಂಡೆ ಬದಿ ಬಗೆ ಬಗೆ ಅಂಗಡಿಗಳ ಹಿಂಡು. ಒಬ್ಬಳು ಕರಿ ಸಿಯುಂಡೆಯಂತಿದ್ದ ವಿಚಿತ್ರ ವಸ್ತುವೊಂದನ್ನು ರಾಶಿ ಹಾಕಿಕೊಂಡು ಮಾರಲು ಕುಳಿತಿದ್ದಳು! ಕೇಳಿದರೆ, ತಿನ್ನುವ ವಸ್ತು ಎನ್ನಬೇಕೆ? ಬೇಯಿಸಿದ ಕಮಲದಗಡ್ಡೆ! ಬುಕ್ಕನಂತೆ ನಾವು ಬಾಯಿಗೆ ಹಾಕಿಕೊಂಡೆವು. ಸಪ್ಪೆ ಸಪ್ಪೆ ಗೆಣಸಿನಂತಹ ರುಚಿ.
ತೇಲುವ ಉದ್ಯಾನವನ!
ಸರೋವರದ ಉತ್ತರ ಭಾಗದತ್ತ ಹೊರಟೆವು. ಅಗಾದವಾಗಿ ಆಳೆತ್ತರ ಬೆಳೆದ ಆನೆ ಹುಲ್ಲಿನಿಂದ ತುಂಬಿದ ವಿಶ್ವದ ಏಕೈಕ ತೇಲುವ 'ಕೈಬುಲ್ ಲೆಮ್ಜಾವೊ' ಎಂಬ ರಾಷ್ಟ್ರೀಯ ಉದ್ಯಾನದಲ್ಲಿದ್ದೆವು! ಉದ್ಯಾನವನದ ನಡುಗುಡ್ಡೆಯನ್ನೇರಿ ಹುಲ್ಲರಾಶಿಗಳ ನಡುವೆ ಮೇವ ಹುಲ್ಲೆಯೊಂದನು ಕಂಡೆವು. ಇಲ್ಲಿನವರು ಪ್ರೀತಿಯಿಂದ 'ಶಂಘೈ' ಎನ್ನುವರು. ಅಳಿದವೆಂದುಕೊಂಡ ಶಂಫೈ ಈಗ ಸರಕಾರದ ಕ್ರಮದಿಂದ 265 ಹೆಚ್ಚು ಉಳಿದುಕೊಂಡಿದೆ. ವಿಶ್ವದ ಯಾವ ಮೂಲೆಯಲ್ಲೂ ಕಾಣಸಿಗದ ಅಪರೂಪದ, ಹುಲ್ಲಿನ ಜೊಂಡಿನ ಮೇಲೆ ಜಿಗಿಯುವ ಶಂಘೈಯನ್ನು ಕಣ್ತುಂಬಿಕೊಂಡೆವು. ತೇಲುವ ಉದ್ಯಾನದ ಹುಲ್ಲನ್ನು ಮೈಸೂರ್ ಪಾಕ್ ಕತ್ತರಿಸಿದಂತೆ ಕತ್ತರಿಸಿದ ದಾರಿಯಲ್ಲಿ ದೋಣಿಗಳ ಮೇಲೆ ಉದ್ಯಾನಕ್ಕೆ ಒಂದು ಸುತ್ತು ಬಂದೆವು. ಶಂಘೈ ಜಿಂಕೆ ನಮ್ಮ ಗಲಾಟೆಗೆ ಅಡಗಿಕುಳಿತಿತಿರಬೇಕು. ತೇಲುವ ಹುಲ್ಲಿನ ಮೇಲೆ ಅಂಬಿಗನ ಸಹಾಯದಿಂದ ನಡೆದಾಡಿ ಪುಳಕಗೊಂಡೆವು. ಅಕ್ಷರಶಃ ಹುಲ್ಲು ನಮ್ಮನ್ನು ಮುಳುಗಿಸದೇ ತೇಲಿಸಿತ್ತು.
ಪರಿಸರ ಮಾಲಿನ್ಯದಿಂದ ಮೊದಲಿನ ಶುದ್ಧತೆ, ಸ್ಪಟಿಕ ಶುಭ್ರತೆ ಈಗಿಲ್ಲವೆಂದು ಸ್ಥಳೀಯರು ಬೇಸರದಿಂದ ಹೇಳುತ್ತಾರೆ. ಜೊತೆಗೆ ಲೋಕ್ತಾಕ್ ಹೈಡ್ರೋ ಪವರ್ ಪ್ರಾಜೆಕ್ಟ್ ಸರೋವರಕ್ಕೆ ಸಾಕಷ್ಟು ದಕ್ಕೆ ಉಂಟು ಮಾಡಿದೆ. ಇಂತಹ ಅಪರೂಪದ ಸರೋವರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ?
ಶ್ರೀಧರ್. ಎಸ್. ಸಿದ್ದಾಪುರ
No comments:
Post a Comment