Angaeus sp. [Thomisidae family] |
ದಟ್ಟ ಕಾನನದ ನಡುವೆ ಹೊಳೆಯಂತೆ ಹರಿವ ಸರ ಹದ್ದಿನ ಹರ ದಾರಿಯಲಿ ಸ್ವಚ್ಚಂದವಾಗಿ, ರಾತ್ರಿಯವರೆಗೆ ಏಳಬಾರದೆಂದು ಸಣ್ಣ ಪೊದೆಯ ಟೊಂಗೆ ಮೇಲೆ ಮಲಗಿದ್ದೆ.
ಚಿಕ್ಕ ಗಿಡವೇ ನನ್ನ ಮನೆ. ಧೂಳೆಬ್ಬಿಸಿ, ಬರ್ರೆಂದು ಬರುವ ಬೈಕುಗಳ ಹಿಂಡು ಒಂದರ ಹಿಂದೊಂದು. ಎಲ್ಲರೂ ಮುಂದೆ ಮುಂದೆ ಹೋಗುವವರೇ. ಒಬ್ಬರೂ ನೋಡೋರೇ ಇಲ್ಲ! ನನ್ನ ಪುಣ್ಯ. ನನ್ನ ಜಾಗದ ಸನಿಹವೇ ಹಾದು ಹೋಗುವರು. ಆದರೆ ನನ್ನ ನೀಳ ನೀಳ ಕಾಲುಗಳು. ಕಾಲ ಬುಡದಲಿ ಮುಳ್ಳಿನಂತಹ ರಚನೆ. ಜೊತೆಗೆ ಸಾಕ್ಸ್ ತೊಟ್ಟಂತೆ ಕಾಣುವ ಕಪ್ಪು ಕಪ್ಪು ಕಾಲುಗಳು. ಕಣ್ಣುಗಳೋ ದುಂಡಗೆ ಕೆಂಪು ಕೆಂಪು. ಕಣ್ಣು ಗುಡ್ಡೆ ಎದ್ದಂತಿರುವ ನನ್ನ ಕಣ್ಣು ಕಂಡರೆ ನಿಮಗೆ ಭಯವಾಗಬಹುದು. ಭಯ ಪಡುವ ಅಗತ್ಯವಿಲ್ಲ. ಹಗಲಿನಲ್ಲಿ ತಣ್ಣಗೆ ಮಲಗುವ ನಾ ರಾತ್ರಿ ಕಾವಲುಗಾರ!
spider ನ ಹಿಂಬಾಗ.... |
ಕೈ ಕಾಲು ಮಡಚಿ ಮಲಗಿದವನ ಪಕ್ಕ ಪುಸಕ್ಕನೆ ಬೆಳಕಬಿಟ್ಟು ಎಬ್ಬಿಸಬೇಕೆ ಈ ಪುಣ್ಯಾತ್ಮ? ನನ್ನ ಇಷ್ಟು ಹತ್ತಿರ ಬಂದವರಿಲ್ಲ. ಒಮ್ಮೆಗೆ ಹೆದರಿಕೆಯೂ ಆಯಿತು. ಸುದಾರಿಸಿಕೊಂಡೆ. ಹಿಂದಿನಿಂದ ಮುಂದಿನಿಂದ ನನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನುಷ್ಯನ ಮುಖವನ್ನು ಹೋಲುವ ನನ್ನ ಹೊಟ್ಟೆ ಭಾಗವನ್ನೂ ಈ ಪುಣ್ಯಾತ್ಮ ಕ್ಲಿಕ್ಕಿಸಿಕೊಂಡ. ಸಾಕ್ಸು ತೊಡಿಸಿದ್ದು ಯಾರೆಂದು ಕೇಳಬೇಡಿ. ಇಷ್ಟವಾದರೆ ಕ್ಲಿಕ್ಕಿಸಿ ಒಂದು ಲೈಕು! ಶ್ರೀಧರ್. ಎಸ್. ಸಿದ್ದಾಪುರ.
No comments:
Post a Comment