ಏಕಾಂಗಿಯಾಗಿ ಚಿರಾಪುಂಜಿಯ ಖಾಸಿ ಬೆಟ್ಟಗಳ ನಡುವೆ ಹರಿವ ನೊ ಕಲಿ ಕೈ ಜಲಧಾರೆಗೆ ಹೊರಟು ನಿಂತಾಗ ಹೊಟ್ಟೆಯೊಳಗೂ ಸಣ್ಣ ಚಳಿ ಹಾಸಿಗೆ ಬಿಡಿಸಿತ್ತು! ಆದರೂ ರಸ್ತೆ ಗುಂಟ ಹೊದ್ದು ಮಲಗಿದ್ದ ಮಂಜಿನ ಪರದೆ, ರಸ್ತೆ ಇಕ್ಕೆಲಗಳಲ್ಲಿ ಹಾಸಿದ್ದ ಚೆರ್ರಿ ಹೂ ಪಕಳೆಯ ಸ್ವಾಗತ ಸ್ವಲ್ಪ ಧೈರ್ಯ ಕೊಟ್ಟಿತ್ತು. ಸೂಚಿಪರ್ಣ ಕಾಡುಗಳ ನಡುವೆ ಚುಚ್ಚುವ ಸೂಜಿಯಂತಹ ಚಳಿ. ಶಿಲ್ಲಾಂಗಿನಿಂದ ಬರೋಬ್ಬರಿ 54 ಕಿಲೋ ಮೀಟರ್ ಪಯಣ. ಕಾಡ ನಡುವೆ ಹೊಟ್ಟೆ ಪೂಜೆಗೆ ಡಾಬಾ ಒಂದರಲ್ಲಿ ಕಾರ್ನ್ನು ನಿಲ್ಲಿಸಿದೆವು. ಪರೋಟ ಮತ್ತು ವಿಶಿಷ್ಟ ರುಚಿಯ ಪಕೋಡ ಹೊಡೆದು ಹೊರಟೆವು.
ದಾರಿಗುಂಟ ಸಾಲು ಸಾಲು ಜಲ ಕನ್ನಿಕೆಯರು ಕಲಶ ಹಿಡಿದು ನಿಂತಿದ್ದರು! ಸಾಲು ಕನ್ನಿಕೆಯರಲ್ಲಿ ಯಾರನ್ನು ನೋಡುವುದೆಂಬುದೇ ತೋಚದ ಸ್ಥಿತಿ. ಬೆಟ್ಟಗಳ ಬಯಲಿನಲಿ ನುಗ್ಗಿ ನೋಡುವ ಧಾವಂತ. ಬೆಟ್ಟಗಳ ಬಯಲಲಿ ಇಂಗಿ ಇಳಿದು ಸೃಜಿಸುವ ಸ್ಫಟಿಕ ಶುಭ್ರ ಹನಿಗಳ ಸಿಂಚನ ಮನಮೋಹಕ. ರೆಪ್ಪೆ ಮಿಟುಕಿಸಿದರೆ ತಪ್ಪಿ ಹೋಗುವ ದೃಶ್ಯ ಕಾವ್ಯ. ಇಲ್ಲಿ ಮಳೆಗಾಲದಲ್ಲಿ ಪ್ರತಿ ಬೆಟ್ಟಗಳ ಮೇಲೂ ಎಣಿಸಲಸದಳ ಜಲ ಕನ್ನಿಕೆಯರ ಮೆರವಣಿಗೆ ನಡೆಯುತ್ತೆ.
ವಿಶಾಲ ಬೆಟ್ಟಗಳ ಬಯಲು ದಾಟಿ ಮುಂದಡಿ ಇಟ್ಟರೆ ಸಿಗುವ ಸಾಲು ಸಾಲು ಅಂಗಡಿ. ಸ್ಥಳೀಯ ಮಸಾಲೆ ಪದಾರ್ಥ ಮಾರುವ ಹೆಂಗಸರು. ತರೇವಾರಿ ಅಳತೆಯ ಬಿದಿರ ಬುಟ್ಟಿಗಳು, ಬಿದಿರ ಬುಟ್ಟಿಯ ಕೀ ಚೈನುಗಳು!, ಬಿದಿರ ಪಸರ್ುಗಳು ವಿವಿಧ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳು. ನಾನು ಅವುಗಳ ಸೂಕ್ಷ್ಮತೆಗೆ ಸೂರೆ ಹೋದೆನು. ಅಂತಹ ಕಲಾತ್ಮಕತೆ! ಇವುಗಳ ನಡುವೆ ಧುಮುಕುವ ಮೇಘಾಲಯದ ಚಿರಾಪುಂಜಿಯ ಚಿರ ಯೌವನೆ ನೊಹ ಕಲಿಕೈ ಜಲದಾರೆ. ಸದಾ ಕಣಿವೆಯ ಮಂಜಿನೊಂದಿಗೆ ಚಕ್ಕಂದಕ್ಕಿಳಿಯುವ ಜಲಧಾರೆ. ಸ್ಥಳೀಯರಿಟ್ಟ ಹೆಸರು ಸೊಹ್ರಾ. ಕ್ಷಣ ಕ್ಷಣಕೂ ಮಂಜು ತನ್ನ ಮಡಿಲಿನಲಿ ಜಲಧಾರೆಯನ್ನು ಮುಚ್ಚಿಟ್ಟುಕೊಳ್ಳುವ ಈ ಸುಂದರ ಜಲರಾಶಿಯ ಹಿಂದೆ ಕರುಣಾಜನಕ ಕತೆ ಇದೆ.
'ಕಲಿಕೈ'ಯ ಕರುಣಾ ಜನಕ ಕತೆ-
ಕಲಿಕೈ ಎಂಬ ಸುಂದರ ಯುವತಿ ತನ್ನ ಗಂಡನೊಂದಿಗೆ ಇಲ್ಲಿ ವಾಸವಾಗಿದ್ದಳು. ಅವಳ ಗಂಡ ಅಶಿಸ್ತಿನ ಮನುಷ್ಯನೂ, ಕುಡುಕನು, ಪತ್ನಿ ಪೀಡಕನೂ ಆಗಿದ್ದ. ಆಕೆಗೆ ಮುದ್ದಾದ ಪುಟ್ಟ ಹೆಣ್ಣು ಮಗುವಿತ್ತು. ಆಕೆಯೊಮ್ಮೆ ಕೆಲಸಕ್ಕೆ ಹೊರಗೆ ಹೋಗಿದ್ದಳು. ವಾಪಾಸು ಬಂದಾಗ ಪತಿಯೇ ಅಂದು ಅಡುಗೆ ಮಾಡಿದ್ದ! ಅವಳಿಗೆ ಅಚ್ಚರಿಯಾಗಿತ್ತು. 'ಮಗು ಜೋಲಿಯಲ್ಲಿ ಮಲಗಿದೆ, ಸುಸ್ತಾಗಿದೆ ನಿನಗೆ, ಊಟ ಮಾಡು' ಎಂದ. ಊಟದ ನಡುವೆ ಬಟ್ಟಲಿನಲ್ಲಿ ಆಕೆಗೆ ಪುಟ್ಟ ಉಗುರುಗಳು ಸಿಕ್ಕವು. ಅನುಮಾನ ಬಂದು ಮಗುವೆಲ್ಲಿ ಎಂದು ಕೇಳಿದಳು. ಪತಿ ತಬ್ಬಿಬ್ಬಾದ. ತಾನು ಉಂಡಿದ್ದು ತನ್ನ ಮಗುವಿನ ಮಾಂಸವೆಂದು ತಿಳಿದದ್ದೇ ಆಕೆ ಕಾಳಿಯಾದಳು. ತಾಯಿಯಾದವಳಿಗೆಂತಹ ದಾರುಣ ಸ್ಥಿತಿ. ಗಂಡನನ್ನು ಕೊಂದು ಈ ಜಲಧಾರೆಯ ನೆತ್ತಿಯಿಂದ ಧುಮುಕಿ ಜೀವ ಕೊಟ್ಟಳು. ಅಂದಿನಿಂದ ಈ ಜಲಧಾರೆ ನೊಹ ಕಲಿಕೈ ಎಂಬ ಅವಳ ಹೆಸರಿನಿಂದ ಹೆಸರಾಯಿತು, ಎಂದು ಜನಪದೀಯ ಕತೆಯೊಂದನ್ನು ಸ್ಥಳೀಯರು ಅರುಹಿದರು.
ಸುಮಾರು 340 ಅಡಿಯಿಂದ ಧುಮುಕುವ ಇದರ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾರದ್ದು. ಸ್ವಟಿಕ ಶುಭ್ರ ಹಸಿರು ವರ್ಣ ಲೇಪಿತ ನೀರು! ಆ ಎತ್ತರದಿಂದ ಬಳಕುತ್ತಾ ಧುಮುಕುವ ಇವಳು ಕಾಡನ್ನೆಲ್ಲಾ ಸುತ್ತಿ ಕೊನೆಗೆ ಬ್ರಹ್ಮಪುತ್ರ ನದಿಗೆ ಸೇರುವಳು. ಕ್ಷಣಗಳಷ್ಟೇ ದರುಶನ ಭಾಗ್ಯ. ಮಂಜಿನ ಪರೆದೆ ಯಾವಾಗ ಮುಚ್ಚಿ ಬಿಡುವುದೋ ತಿಳಿಯದು. ಬೆಳಗಿನ ಹೊತ್ತು ಇಲ್ಲಿಗೆ ಭೇಟಿ ಕೊಡುವುದು ಬಹಳ ಉತ್ತಮ. ಮಳೆಗಾಲದಲ್ಲಿ ಇದರ ಸೊಬಗೇ ಬೇರೆ. ಮೇ ನಿಂದ ನವೆಂಬರ್ ಭೇಟಿ ಕೊಡಲು ಸೂಕ್ತ ಸಮಯ. ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ ತರೇವಾರಿ ತಿನಿಸುಗಳಿವೆ. ರಸ್ತೆಯುದ್ದಕ್ಕೂ ಊಟಕ್ಕೆ ಅನೇಕ ಹೋಟೆಲ್ಗಳಿವೆ. ನಾನು ಊಟ ಮಾಡಿದ ಹೋಟೆಲ್ ಗ್ರೀನ್ ಆಕರ್ಿಡ್ ಅದ್ಭುತವಾಗಿತ್ತು. ಇಲ್ಲಿನ ವಿಚಿತ್ರ ರುಚಿಯ ಚಟ್ನಿ ನನ್ನ ನಾಲಗೆ ತುದಿಯಲ್ಲಿ ಇನ್ನೂ ಜೀವಂತ!
'ಮಾವುಜ್ರಂಗ್' ಎಂಬ ಸ್ವಚ್ಚ ಊರನ್ನು ಹಾದು ಬರುವಾಗ ನನಗೆ ಕನರ್ಾಟಕದ ಬೀದಿಗಳೊಮ್ಮೆ ಕಣ್ಮುಂದೆ ಬಂದವು. ಇಲ್ಲಿನ ಪರಿಸರ ನಮಗೆ ಪರ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು! ದಾರಿಗುಂಟ ಹುಡುಕಿದರೂ ಒಂದು ಸಣ್ಣ ಪ್ಲಾಸ್ಟಿಕ್ ಕಸ ನಿಮಗೆ ಸಿಗದು! ಮನೆಯ ಎದುರಿನ ಜಾಗವಲ್ಲದೇ ಪಕ್ಕದ ಮನೆಯವರೆಗೆ ಗುಡಿಸಿ ಸ್ಪಟಿಕ ಶುಭ್ರವಾಗಿಸುವ ಇವರ ಪರಿಸರ ಪ್ರೇಮ ಮೆಚ್ಚಲೇಬೇಕು! ರಸ್ತೆ ಗುಡಿಸುವ ಅನೇಕ ಸ್ಥಳೀಯರನ್ನು ಇಲ್ಲಿ ಕಂಡೆ. ಎಷ್ಯಾದಲ್ಲೇ ಸ್ವಚ್ಚ ಹಳ್ಳಿ ಪುರಸ್ಕಾರ ಪಡೆದಿರುವ 'ಮವುಲಿನ್ನೋಂಗ್' (Mawlynnong) ಶಿಲ್ಲಾಂಗ್ನಿಂದ ಕೂಗಳತೆಯ ದೂರದಲ್ಲಿದೆ.
ಇಲ್ಲಿನ ಬೆಟ್ಟಗಳನ್ನು ಎಲ್ಲೆಲ್ಲೂ ಕೊರೆದ ಸುಣ್ಣದ ಕಲ್ಲಿನ ಗುಹೆಗಳು, ಅಲ್ಲಿ ಕೆಲಸ ಮಾಡುವ ಕಾಮರ್ಿಕರು ನಮಗೆ ಕಾಣ ಸಿಗುತ್ತಾರೆ. ಜೊತೆಗೆ ಜಲ್ಲಿ ಕಲ್ಲಿನ ಕ್ವಾರಿಗಳೂ. ಹೀಗೆ ಮುಂದುವರಿದರೆ ಇನ್ನೊಂದು ಹತ್ತು ವರ್ಷಕ್ಕೆಲ್ಲಾ ಬೆಟ್ಟಗಳೆಲ್ಲಾ ಬಯಲಾಗಿ ಬಿಡುವುದರಲ್ಲಿ ಸಂಶಯವಿಲ್ಲ! ಸನಿಹದ ಸಿಮೆಂಟ್ ಕಾಖರ್ಾನೆಗೆ ಇಲ್ಲಿಂದಲೇ ಸುಣ್ಣದ ಕಲ್ಲು ಸರಬರಾಜಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಚಿರಾಪುಂಜಿಯ ಸುಮನೋಹರ ಬೆಟ್ಟಗಳನ್ನು ಬಲಿಕೊಡುವುದು ಎಷ್ಟು ಸರಿ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಲೇ ಇದೆ.
ಈ ಜಲಧಾರೆಯ ನೋಡಿ ಸನಿಹದ 'ಅಕ್ಕ ತಂಗಿ ಜಲಧಾರೆ'(Seven sister water falls), 'ಮೌಸ್ವಾಮಿ' ( mawsmai cave) ಸುಣ್ಣದ ಕಲ್ಲಿನ ಗುಹೆ, 'ವಾಕಾಬಾ' ಜಲಧಾರೆ ಮುಂತಾದ ಅದ್ಭುತ ತಾಣಗಳನ್ನೂ ನೋಡಿ ಬರಬಹುದು. ಉಳಿದುಕೊಳ್ಳಲು ಶಿಲ್ಲಾಂಗ್ನಲ್ಲಿ ಸಾಕಷ್ಟು ವಸತಿ ನಿಲಯಗಳಿವೆ.
ಶ್ರೀಧರ್. ಎಸ್. ಸಿದ್ದಾಪುರ
No comments:
Post a Comment