Sunday, August 4, 2019

2019 ರಲ್ಲಿ ನಿಂತು 1970ಕ್ಕೆ ಹಣಕಿ ಹಾಕಿದಾಗ!



 ಅರೆ ಇದೇನಿದು ವಿಚಿತ್ರವಾಗಿದೆಯಲ್ಲಾ. ಇದೂ ಸಾಧ್ಯನಾ?! ಮೊನ್ನೆಯಷ್ಟೆ ಮಹಾರಾಷ್ಟ್ರದ ಮಹಾಡ್ ಹಳ್ಳಿಗೆ ಭೇಟಿ ಇತ್ತಿದ್ದೆ. ಆಗ ನನಗೆ ಹಾಗನ್ನಿಸಿತು.
   

ನಮ್ಮ ಗುರಿ ಇದ್ದದ್ದು ಶಿವಾಜಿಯ 'ರಾಯ್ಗಢ್' ಕೋಟೆ ನೋಡೋದು. ಮಹಾಡ್ನಿಂದ ರಾಯ್ ಗಢ್ ಬರೀ 25 ಕಿ. ಮೀ. ಮಹಾಡ್ ಮಹಾರಾಷ್ಟ್ರದ ತಾಲೂಕು ಕೇಂದ್ರ. ಪುಣೆಯ ಬಸ್ ನಿಲ್ದಾಣದಿಂದ ಬರೋಬ್ಬರಿ 4 ಗಂಟೆಯ ದಾರಿ. ದಾರಿ ನಡುವೆ ತಿಂದ ಇಡ್ಲಿ ಮತ್ತು ಪೋಹಾ (ಅವಲಕ್ಕಿ) ದಿಂದಾಗಿ ಹೊಟ್ಟೆ ಸುಮ್ಮನಿತ್ತು. ಕರ್ನಾಟಕದಂತೆ ಎತ್ತರ ಎತ್ತರ ಬೆಳೆಯುವ ಮರಗಳಿಲ್ಲದ ಕಾಡು, ನಮ್ಮಷ್ಟು ದಟ್ಟವಲ್ಲದ ಪಶ್ಚಿಮಘಟ್ಟಗಳು. ದಾರಿ ನಡುವೆ ಒಂದೆರೆಡು ಝರಿಗಳು ಕಾಣ ಸಿಕ್ಕವು. ನೀರಿಲ್ಲದೆ ಖಾಲಿ ಹೊಡೆಯುತ್ತಿರುವ ಒಂದೆರಡು ಡ್ಯಾಂ ನೋಡುತ್ತಾ, ಸಹ್ಯಾದ್ರಿಯ ಗಿರಿ ಶಿಖರಗಳ ಬಳಸಿ ನಮ್ಮ ಬಸ್ ಸುಮಾರು 11 ಕ್ಕೆ ಮಹಾಡ್ ತಲುಪಿತು. 



ಎಡಕ್ಕೆ ಹರಡಿದ ಸಹ್ಯಾದ್ರಿಯ ನೋಟವಂತೂ ಮನೋಹರ. ನಡು ನಡುವೆ ರಸ್ತೆ ಹದಗೆಟ್ಟಿತ್ತು. ಜೊತೆಗೆ ನಿದ್ದೆಗೆಟ್ಟ ರಾತ್ರಿ ಪ್ರಯಾಣ ಇನ್ನಷ್ಟೂ ಹದಗೆಡಿಸಿತು! 

ಇಲ್ಲಿನ ಸರಕಾರಿ ಬಸ್ ವ್ಯವಸ್ಥೆ, ಬಸ್ ನಿಲ್ದಾಣಗಳನ್ನು ಕಂಡಾಗ ನಾವು 70ರ ದಶಕದಲ್ಲಿದ್ದೇವೆ ಎನಿಸಿತು. ಕಿತ್ತು ಹೋದ ಬಸ್ ನಿಲ್ದಾಣ! ಯಮ ವೇಗದಲ್ಲಿ ಓಡುವ ಗುಜರಿ ಬಸ್ಗಳು! ಬಸ್ನೊಳೆಗೆ ಗಂಟೆಯೊಂದನ್ನು ಹಾಕಿದ್ದರು! ಅದಕ್ಕೆಂದು ಸರಿ ಹೊಂದಿಸಿದ ದಾರ ಎಳೆದು ಬಸ್ ನಿಲ್ಲಿಸಬೇಕಿತ್ತು! ಕೇರಳಕ್ಕೆ ಹೋದಾಗಲೂ ಹೀಗೊಂದು ವ್ಯವಸ್ಥೆ ಕಂಡು ಅಚ್ಚರಿ ಪಟ್ಟು ಮೂಕವಿಸ್ಮಿತನಾಗಿದ್ದೆ. 1970ರ ಶೈಲಿಯ ಕಂಡಕ್ಟರ್ನ್ನ ಧಿರಿಸು. ಕಚ್ಚೆ ಸೀರೆ ಧರಿಸಿ ಮಸ್ತ್ ಆಗಿ ಓಡಾಡೋ ಮಹಿಳೆಯರು! 30 ರೂಪಾಯಿಗೆ ಸಿಗುವ ಪೊಗದಸ್ತಾದ ಭೋಜನ. ಕಮಲದ ದಂಟು, ನೇರಳೆ ಹಣ್ಣಿನಿಂದ ಹಿಡಿದು ಮಾರಲು ಇಟ್ಟ ಥರಾವರಿ ಕಂಡರಿಯದ ದೇಸಿ ವಸ್ತುಗಳು. ಹೀಗೆ ಪೇಟೆಯೇ ಒಂದು ವಿಚಿತ್ರ ಸಂತೆಯಂತೆ ನನಗನ್ನಿಸಿತು. ಒಂದು ಬಸ್ ಬಂದರೆ ಮುಳುಗಿ ಹೋಗುವಷ್ಟು ಧೂಳು. ಒಂದೆರಡು ಅಂಗಡಿ ಮುಂಗಟ್ಟುಗಳನ್ನು ಬಿಟ್ಟರೆ ಉಳಿದವೆಲ್ಲಾ ಹಳೆ ಹಳೆ ಕಾಲದವು. ನಿಮಗೂ ಹಾಗನ್ನಿಸದೇ ಇರದು ಬಿಡಿ.  ಆದರೂ ಅದೇಕೋ ತುಂಬಾ ಇಷ್ಟವಾಯಿತು. ನಿಮಗೂ ಇಷ್ಟವಾಯಿತಾ? ನಮಗೂ ಒಮ್ಮೆ ನಿಜವಾಗಿ 1970ರದ್ದೊ 1000 ನೇ ಇಸವಿಯ ಜನ ಜೀವನ ಹಣಕಿ ಹಾಕುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೆಂದುಕೊಳ್ಳುತ್ತಾ ಈ ಲೇಖನಕ್ಕೆ ಪೂರ್ಣ ವಿರಾಮ ವಿಡುತ್ತೇನೆ. ನಿಮಗೂ ಇಷ್ಟವಾದರೆ ತಿಳಿಸಿ. 




1 comment:

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...