Wednesday, August 7, 2019

ಆ ಬೆಟ್ಟದಲ್ಲಿ ಪುಟಾಣಿ ರೈಲಿನಲ್ಲಿ.....


ಮೆಲ್ಲಗೆ ತೆವಳುವ ರೈಲು. ತಮಗೂ ರೈಲಿಗೂ ಸಂಬಂಧವೇ ಇಲ್ಲವೇನೊ ಎಂಬಂತೆ ಹಳಿಯ ಮೇಲೆಯೇ ನಿರ್ಮಲ ನಿಶ್ಚಿಂತೆಯಿಂದ ನಡೆವ ಜನ. ಹೂ ಪಕಳೆಗಳಿಂದ ಶೃಂಗಾರಗೊಂಡ ಬೀದಿ. ಬೀದಿ ಬದಿಯಲ್ಲಿ ಬೆಟ್ಟಕ್ಕೆ ನೇಣು ಬಿದ್ದಂತಿರುವ ಮನೆಗಳ ಸಮುಚ್ಚಯ. ಮನೆಯ ಮುಂದೆ ಯಾರಿಗೋ ಕಾದು ಕುಳಿತಂತಿರುವ ಬಣ್ಣ ಬಣ್ಣಗಳ ಹೂ ಕುಂಡಗಳ ಮೆರವಣಿಗೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಕಣಿವೆಯ ಸೌಂದರ್ಯ. ಕಣಿವೆಯ ಸೌಂದರ್ಯ ಮೀರಿಸುವ ಟಿಬೇಟಿಯನ್ ಛಾಯೆಯ ಸ್ಪುರದ್ರೂಪಿ ಹುಡುಗಿಯರ ಹಿಂಡು. ಬೆನ್ನು ಹುರಿಯಲಿ ಚಳಿಯ ಕಚಗುಳಿ. ಮಂಜಿನ ಮುಸುಕಿನಿಂದ ಹೊಗೆ ಹೊಮ್ಮಿಸಿ ಹೊರ ಬರುವ 'ಹಿಮಾಲಯನ್ ಕ್ವೀನ್' ರೈಲು. ದೂರದಲ್ಲೆಲ್ಲೋ ನನಗೂ ಇದಕೂ ಏನೂ ಸಂಬಂಧವಿಲ್ಲವೆಂಬಂತೆ ಪವಡಿಸಿರುವ ಕಾಂಚನಜುಂಗಾ ಶಿಖರ! ಜಗತ್ತು ಏಕಾಏಕಿ ನಿಶ್ಚಲಗೊಂಡ ಅನುಭವ!  ಇದು ಪಶ್ಚಿಮ ಬಂಗಾಳದ ಡಾರ್ಜಲಿಂಗ್ಗೆ ನೀವು ಕಾಲಿಟ್ಟರೆ ಕಾಣಸಿಗುವ ದೃಶ್ಯ.


Toy train



ಹಳಿಗಳೊಂದಿಗೆ ವಾಯು ವಿಹಾರ


ಡಾರ್ಜಿಲಿಂಗ್‌ ಕ್ಯಾಮರಾ ಕಣ್ಣಿನಲ್ಲಿ...

'ಗೋರ್ಖಾ ಲ್ಯಾಂಡ್' ಎಂಬ ಭಿನ್ನ ರಾಜ್ಯದ ಕನಸ ಕಟ್ಟಿ ಕೊಂಡು ಹಗಲು ರಾತ್ರಿ ಹೆಣಗುತ್ತಿರುವ ಪುಟಾಣಿ ಪಟ್ಟಣ ಡಾರ್ಜಲಿಂಗ್. ಜಲಪಾಯಿಗುಡಿ ರೈಲು ನಿಲ್ದಾಣದಿಂದ ಹೊರಟು, ಅಡ್ಡಗಟ್ಟಲು ಬಂದ ಆನೆಯೊಂದರಿಂದ ತಪ್ಪಿಸಿಕೊಂಡು, ಮಧ್ಯಾಹ್ನಕ್ಕೆ ಮೊಮೊ ಹೊಟ್ಟೆಗಿಳಿಸಿ, ಐದು ಗಂಟೆ ಪಯಣಿಸಿ ಸಂಜೆ ಮೂರರ ಸುಮಾರಿಗೆ ಡಾರ್ಜಲಿಂಗ್ನಲ್ಲಿದ್ದೆವು. ಜನ ಮಂಜಿನ ರಗ್ಗ್ ಹೊದ್ದು, ಮಳೆಗೆ ಛತ್ರಿ ಹಿಡಿದು ಓಡಾಡುತ್ತಿದ್ದರು.  ನಾವೂ ಒಂದು ಛತ್ರಿ ಕೊಂಡೆವು. ಜಲಪಾಯಿಗುಡಿ ರೈಲು ನಿಲ್ದಾಣದಿಂದ ಬರೋಬ್ಬರಿ 70 ಕಿ.ಮೀ. ಬಗ್ದೊದ್ರಾ ವಿಮಾನ ನಿಲ್ದಾಣದಿಂದ 70 ಕಿ.ಮೀ.


ಮೊದಲ ದಿನದ ನಮ್ಮೆಲ್ಲಾ ಯೋಜನೆ ತಲೆಕೆಳಗಾಗಿತ್ತು. ಆದರೂ 3 ಕಿ. ಮೀಟರ್ ದೂರವಿರುವ ತೇನ್ ಸಿಂಗ್ ನಾವರ್ೆ ಮತ್ತು ಎಡ್ಮಂಡ್ ಹಿಲರಿಗೆ ಸಂಬಂಧಿಸಿದ ಚಾರಣ ಸಾಮಾಗ್ರಿ ಪ್ರದರ್ಶನಕ್ಕಿಟ್ಟ ವಸ್ತು ಸಂಗ್ರಹಾಲಯಕ್ಕೆ (ಊಒ) ಭೇಟಿ ನೀಡಿದೆವು. ತೇನ್ ಸಿಂಗ್ ಬಳಸಿದ ಕೈಗವಸು, ಹಿಮ ಪಿಕ್ಕಾಸಿ, ಹಗ್ಗ, ಟೆಂಟ್, ನೀರು ತುಂಬುವ ಬಾಟಲಿ ಹೀಗೆ ಚಾರಣಕ್ಕೆ ಬೇಕಾದ ವಿಶಿಷ್ಟ ವಸ್ತುಗಳನ್ನು ನಮ್ಮ ಮುಂದೆ ತೆರೆದಿಟ್ಟಿತು. ಪೈನ್ ಮರಗಳಿಂದ ಕೂಡಿದ ಈ ಜಾಗ ಮನಸಿಗೆ ಆಹ್ಲಾದಕರ.


ಅಲ್ಲಿಂದ ಹಿಮಾಲಯದಲ್ಲಿ ಮಾತ್ರ ವಾಸವಿರುವ ವಿಶಿಷ್ಟ ಪ್ರಾಣಿಗಳ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಚ್ಚರಿ ಪಟ್ಟೆವು. ಹಿಮ ಚಿರತೆ, ಟಿಬೆಟಿನ್ ತೋಳ, ಹಿಮ ನಾಯಿ, ನೀಲಿ ಕುರಿ( ಬ್ಲೂ ಶೀಪ್, ಹೆಸರು ಮಾತ್ರ ನೀಲಿ) ಹುಲಿ ಮುಂತಾದ ಪ್ರಾಣಿಗಳನ್ನು ಮಾತನಾಡಿಸಿಕೊಂಡು ಬಂದೆವು! ಹುಲಿಯಂತೂ ನಮ್ಮ ಹತ್ತಿರವೇ ಬಂದುದರಿಂದ ಅದರ ಅಗಾಧತೆಯನ್ನು ನೋಡಿ ನಿಬ್ಬೆರಗಾದೆವು.






ಗೂಮ್ ರೈಲು ನಿಲ್ದಾಣದಲ್ಲೊಂದು ಸುತ್ತು...











ವಸಾಹುತು ಶಾಹಿ ಬ್ರಿಟಿಷ್ ಆಡಳಿತ ತಮ್ಮ ಅನುಕೂಲಕ್ಕೆ 1879 ರಲ್ಲಿ ಸ್ಥಾಪಿಸಿದ 610 ಮಿ. ಮೀಟರ್ ನ ನ್ಯಾರೋಗೇಜ್ ರೈಲು ಇಲ್ಲಿನ ವಿಶೇಷ. ಡಾರ್ಜಲಿಂಗ್ ಮತ್ತು ಕಣಿವೆ ತಳದ ಜಲಪಾಯಿಗುಡಿ ನಡುವೆ ಇದು ಓಡಾಡುತ್ತದೆ. ಬಟೇಸಿಯಾ ಲೂಪ್ಗೆ ರೈಲು ಬಂದು ಒಂದು ಸುತ್ತು ಹಾಕಿ ಹೋಗುತ್ತೆ. ಇಲ್ಲಿ ಸೈನಿಕ ಸ್ಮಾರಕ ನಿಮರ್ಿಸಲಾಗಿದೆ. ಒಬ್ಬರಿಗೆ ಬರೋಬ್ಬರಿ 1200 ರೂಪಾಯಿ! ಮೋಡವಿಲ್ಲದ ದಿನಗಳಲ್ಲಿ ಇದರ ಪ್ರಯಾಣಾನುಭೂತಿ ಅದ್ಭುತ! ಕೆಲವು ದಿನಗಳಲ್ಲಂತೂ ಮಂಜಿನ ಮೇಲೆ ತೇಲಿದ ಅನುಭವ! ಕಾಂಚನಜುಂಗವನ್ನು ನೋಡುತ್ತಾ ಜೊತೆ ಜೊತೆಗೆ ಪಯಣಿಸುವ ಅನುಭವವೇ ಅನನ್ಯ. ರೈಲು ತುಲುಪುವ 'ಗೂಮ್' ರೈಲು ನಿಲ್ದಾಣ ವಿಶ್ವದ ಎರಡನೆಯ ಅತಿ ಎತ್ತರದ ರೈಲು ನಿಲ್ದಾಣ! ಭಾರತದ ಅತಿ ಎತ್ತರದ ನಿಲ್ದಾಣ ಎನಿಸಿಕೊಂಡ ಇದು ಸಮುದ್ರ ಮಟ್ಟದಿಂದ ಬರೋಬ್ಬರಿ 7,407 ಅಡಿ ಎತ್ತರದಲ್ಲಿದೆ. ಬಿಸಿಲ ಕೋಲುಗಳ ಬೀಳುವ ಬೆಳಗಿನ ಹೊತ್ತೇ ಮಂಜಿನ ರಗ್ಗ ಹೊದ್ದು ಕುಳಿತಿತ್ತು. ಬಣ್ಣ ಬಳಿದುಕೊಂಡ ತರುಣ, ತರುಣಿಯರ ತಂಡ ನಮ್ಮ ಸ್ವಾಗತಕ್ಕಿದ್ದರು! ಬೀಡಿ ಸೇದಿದಂತೆ ಹೊಗೆಯುಗುಳುವ ವಯಸ್ಸಾದಂತೆ ಭಾಸವಾಗುವ ಬೋಗಿಗಳು ನಿಂತಿದ್ದವು. ನಿಲ್ದಾಣದ ಸನಿಹದಲ್ಲೇ ವಿಶೇಷ ರೈಲು ಸಂಗ್ರಾಹಲಯ. ಅಲ್ಲಿಗೆ ಹಣಿಕೆ ಹಾಕಿ ಬಂದೆವು. ಬೆಟ್ಟದ ರೈಲಿನ (Mountain railway) ಸಂಪೂರ್ಣ ಚರಿತ್ರೆಯ ಪರಿಚಯವಾಯ್ತು.


ಸಮ್ಟಿನ್ ಚೋಲಿಂಗ್ ಬುದ್ದಿಷ್ಟ್ ಮಾನೆಷ್ಟ್ರಿಗೆ....




          ಮಂಜಿನಿಂದ ಆಗಷ್ಟೇ ಎದ್ದ ಮಾನೆಷ್ಟ್ರಿ ನಮ್ಮನ್ನು ನೋಡಿ ನಗುತಲಿತ್ತು. ಬುದ್ದ ನಡೆದಾಡಿದ ನಾಡು. ಮಾನೆಸ್ಟ್ರಿಗಳ ಬೀಡು. ಇಲ್ಲಿನ ವಿಚಿತ್ರ ವಿಶಿಷ್ಟ ಪದ್ದತಿಗಳು ಜಗತ್ತಿನ ಯಾವ ಭಾಗದಲ್ಲೂ ಕಾಣಲಾರೆವು. ದಾರಿಗುಂಟ ಶಾಲ್ ಮಾರುವವರು, ನೆಪಾಳಿ ಕುರ್ಫಿ (ಒಂದು ವಿಧಧ ಕತ್ತಿ) ಮಾರುವವರ ಮೆರವಣಿಗೆ. ಇವರನ್ನೆಲ್ಲಾ ದಾಟಿ ಬುದ್ಧನಿದ್ದಲ್ಲಿಗೆ ಹೋದರೆ ಮನಸ್ಸು ಹೊರಗಿನ ಭಿನ್ನ ಕುಸುರಿ ಕಲೆ ಇದ್ದ ಕುರ್ಫಿಯ ಮೇಲೆ. ಕೊನೆಗೊಂದು ಕುರ್ಫಿ ಕೊಂಡು ಮನಸ್ಸಿಗೆ ಸಮಾಧಾನ ಮಾಡಿದೆ! ಮನೆಯ ಗೋಡೆಯ ಮೇಲೆ ರಾರಾಜಿಸಿದ ಆ ಕುರ್ಫಿ ಡಾರ್ಜಲಿಂಗ್ನ ನೆನಪಿನ ಚಿತ್ತಾರ ತರುತ್ತಲೇ ಇದೆ. ವಿಮಾನದೊಳಗೆ
ಕುರ್ಪಿಯನ್ನು ಒಯ್ಯಲು ಬಿಡುವುದಿಲ್ಲವೆಂದರಿತ ನಂತರ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು! ಬಂಗಾಳಿ ಗೆಳೆಯನಿಗೆ ಕುರ್ಪಿಯನ್ನು ದಾಟಿಸಿ ಕೊರಿಯರ್ ಮಾಡಲು ತಿಳಿಸಿ ಬಚಾವಾದೆ.  ಕ್ಷಮಿಸಿ ಮಾನೆಷ್ಟ್ರಿ ಬಗ್ಗೆ ಹೇಳಲೇ ಇಲ್ಲ! ಸಾಕಷ್ಟು ವಿಶಾಲ ಒಳಾಂಗಣ ಮತ್ತು ದೊಡ್ಡ ಶಾಂತ ಬುದ್ಧನ ವಿಗ್ರಹ ಗಮನ ಸೆಳೆಯಿತು. ಜೊತೆಗೆ ದುಡ್ಡು ಹಿಡಿದು ನಗುವ ಪುಟಾಣಿ ಬುದ್ಧ ವಿಗ್ರಹ
ಜೊತೆಯಲ್ಲಿತ್ತು.
 ಕೆಲವು ಭಕ್ತಾದಿಗಳು ಬುದ್ದನಿಗೆ '7 ಅಪ್'ನ್ನು ಅರ್ಪಣೆ ಮಾಡಿದ್ದು ವಿಚಿತ್ರವೆನಿಸಿತು. ಒಳಗೋಡೆಯ ಮೇಲೆಲ್ಲಾ ಚಿತ್ತಾಕರ್ಷಕ ಬುದ್ದನ ಕತಾ ಚಿತ್ರಗಳು. ನೋಡಲು ಏನಿಲ್ಲವೆಂದರೂ ಅರ್ಧ ದಿನವೇ ಬೇಕು. ಬುದ್ಧನ ಜೊತೆಗೆ ಧ್ಯಾನಿಸಿ, ಧರ್ಮ ಚಕ್ರ ತಿರುಗಿಸಿ ಪ್ರಾರ್ಥನೆ ಸಲ್ಲಿಸಿದೆವು.  ಭಾಷೆಯ ತೊಂದರೆಯಿಂದ ಹೆಚ್ಚೇನು ಕೇಳದೆ ಬೌದ್ಧ ಸ್ತೂಪ ನೋಡಲು ಅಲ್ಲಿಂದ ಹೊರಟು ನಿಂತೆವು.

ಶ್ರೀಧರ್. ಎಸ್. ಸಿದ್ದಾಪುರ 

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...