ಎರಡು ಪ್ರಾಣಿಗಳು ಪರಸ್ಪರ ಮಾತಾಡುತ್ತಿವೆಯೋ ಎಂಬಂತೆ ಕಾಣುವ 'ಏರಿಕಲ್ಲು' ಬೆಟ್ಟ ಚಿತ್ತಾಕರ್ಷಕ ಚಾಮರ್ಾಡಿಗೆ ಬಂದೊಡನೆ ನಿಮ್ಮನ್ನು ಸ್ವಾಗುತಿಸುತ್ತೆ. ಬೆಟ್ಟದ ತಪ್ಪಲಿನ ತಣ್ಣಗಿನ ಊರು ಚಾಮರ್ಾಡಿ. ಫಾಟಿಯ ಹೆಸರೂ ಊರಿಗೂ ಅಂಟಿದೆ.
ಊರ ಪಕ್ಕದ ಹೋಟೆಲ್ ಗುರುಪ್ರಸಾದ್ಗೆ ದಾಳಿ ಮಾಡಿ ಏಳೇಳು ಇಡ್ಲಿ, ಅವಲಕ್ಕಿ, ಬನ್ಸ್ ಹೊಡೆದು ಹೊರಟಿದ್ದು ಬಾಳೆಕಲ್ಲು, ಕೊಡೆಕಲ್ಲು ಏರಲು. ಹೊಂಡ ಮಯ ಬಸ್ ದಾರಿಯಲ್ಲಿ ಸ್ವಲ್ಪ ಹೊತ್ತು ಪ್ರಯಾಣ.
|
ಬಾಳೆ ಗುಡ್ಡದ ನೆತ್ತಿ |
ಏರು ದಾರಿಯ ಚಾಮರ್ಾಡಿ ಗಿರಿಗಳ ಸುತ್ತಿ ಹೊಂಡ ಹಾರಿ ನಿಂತಿದ್ದು ಒಂಟಿ ಮರವೆಂಬಲ್ಲಿ. ಎಡಕೆಲ್ಲಾ ಮರಗಳ ಗಸ್ತು ಬಲಕೆ ಬಾಯಿಬಿಟ್ಟ ಪ್ರಪಾತ. ಚಾಮರ್ಾಡಿಯ ಕನ್ನಿಕೆಯೊಬ್ಬಳು ಅಲ್ಲೇ ನಿಶ್ಶಬ್ದವಾಗಿ ಹರಿವಳಲ್ಲಿ. ಅವಳ ಜಡೆ ಹಿಡಿದು, ಬೇರ ಮುಟ್ಟಿ, ಉಸಿರು ಬಿಟ್ಟು ಸಣ್ಣ ಗುಡ್ಡ ಹತ್ತಿದೊಡೆ ನಿಚ್ಚಳ ಹಾದಿಯ ಸಣ್ಣ ಗೆರೆ ನಮ್ಮ ಮುಂದೆ ತೆರೆದು ಕೊಂಡಿತು. ಅಲ್ಲಲ್ಲಿ ಕರಿಗಳ ಸಗಣಿ. ಚಾಮರ್ಾಡಿ ಸನಿಹದ ಏರಿಕಲ್ಲು ಗುಡ್ಡ ಸೆಲ್ಪಿಗೆ ಬಾಯ್ಕಳೆದು ಸ್ಮಾಯಲ್ ಮಾಡುತಲಿತ್ತು.
|
ಬಾಳೇ ಗುಡ್ಡ ನೆತ್ತಿಯಿಂದ ಕಾಣುವ ಮನೋಹರ ದೃಶ್ಯ |
ಮೂವತ್ತು ನಿಮಿಷಗಳ ಏರು ದಾರಿ ಏರಿ ಕೊಡೆಕಲ್ಲಿನ ಮೇಲಿದ್ದೆವು. ದೊಡ್ಡ ಬೆಟ್ಟವೇರುವ ಮೊದಲಿನ ಪುಟಾಣಿ ನಿಲ್ದಾಣವಿದ್ದಂತೆ ಈ ಕೊಡೆಕಲ್ಲು ಬೆಟ್ಟ. ಕೊಡೆಯೊಂದು ಬೆಟ್ಟದ ತುದಿಯಲ್ಲಿ ಕೂತು ವಿಶ್ರಾಂತಿ ಪಡೆಯುತ್ತಿದೆಯೋ ಎಂಬಂತಿದೆ. ಏರದೆ ಬಿಡಲು ಸಾಧ್ಯವಿಲ್ಲದಂತಹ ಅಪರಿಮಿತ ಸೌಂದರ್ಯದ ಬೆಟ್ಟ ಎದುರಿಗೆ, ಅದವೇ ಬಾಳೆ ಕಲ್ಲು. ಆರೇಳು ಜನ ಇಲ್ಲಿ ಕುಳಿತು ಬಾಳೆಕಲ್ಲು ಬೆಟ್ಟವನ್ನು ನೋಡುತ್ತಾ ದಿನ ಕಳೆಯಲಡ್ಡಿಯಿಲ್ಲ. ಕೊಡೆ ಕಲ್ಲು ಕರಡಿಗಳ ಅಡಗುತಾಣ. ನಾವು ಬರುವ ನಾಲ್ಕು ದಿನಗಳ ಹಿಂದೆ ಚಾರಣಿಗರ ದೊಡ್ಡ ತಂಡವನ್ನು ಕರಡಿಯೊಂದು ಅಟ್ಟಿಸಿಕೊಂಡು ಬಂದಿತ್ತು.
ಬಲು ಎಚ್ಚರಿಕೆಯಿಂದ ಸುತ್ತ ದಿಟ್ಟಿಸಿ ನೋಡಿ ಕರಡಿ ಇಲ್ಲದ್ದು ಖಾತ್ರಿಯಾದ ಮೇಲೆ ಮುಂದಡಿ ಇಟ್ಟೆವು! ಆಹಾ ಇದರ ಸೌಂದರ್ಯವೇ. ಹಿಂದಕ್ಕೆ ಏರಿಕಲ್ಲು ಎದುರಿಗೆ ಬಾಳೆ ಕಲ್ಲು. ವಿಶ್ರಮಿಸಿ ಮುಂಬರಿದೆವು. ಅಲ್ಲಲ್ಲಿ ಜರಿದ ಗುಡ್ಡವ ಹಾದು, ಆನೆ ಲದ್ದಿಯ ನೋಡಿ, ಇದು ಆನೆಗಳ ಕಿತಾಪತಿ ಎಂದರಿತು ಒಂದರೆಗಳಿಗೆ ಬೆದರಿ ಬೆವರಿ ಮುಂಬರಿದೆವು. ತಿಂಗಳ ಹಿಂದೆ ನಮ್ಮ ಮಾರ್ಗದರ್ಶಕನಿಗೆ ಆನೆ ಅಟ್ಟಿಸಿಕೊಂಡು ಬಂದ ವಿಷಯ ಹೇಳಿ ಹೆದರಿಸಿದ. ಬಂಜಾರು ಮಲೆಯಲ್ಲಿದ್ದಷ್ಟು ಆನೆ ಇಲ್ಲಿಲ್ಲವೆಂದು ಸಂತೈಸಿದ.
|
ಗುಡ್ಡದ ಎದುರಿಗೆ ಮಾನವ ಎಷ್ಟು ಸಣ್ಣ |
|
ಕರಡಿ ಸಿಕ್ಕಿದ ಕೊಡೆಕಲ್ಲು ಗುಡ್ಡದ ಮೋಹಕ ನೋಟ |
ಬಾಳೆ ಕಲ್ಲಿನ ಕೊನೆಯ ಏರು ದಾರಿ ನಮಗೆ ಕುದುರೆ ಮುಖದ ನೆನಪ ತಂದಿತು. ನಡುವೆ ಸಿಗುವ ಅತ್ತಿ ಮರ, ಕಣಿವೆ ದಾಟಿ ಬಾಳೆ ಗುಡ್ಡದ ನೆತ್ತಿ ಕಡೆ ಹೊರಟೆವು. ಕಡಿದಾದ ಎರಡು ಗುಡ್ಡವೇರಿದರೆ ಬಾಳೆ ಕಲ್ಲು ನಿಮ್ಮ ಕೈವಶ. ನೆತ್ತಿಯ ನೋಟ ಚಿತ್ತ ಬಿತ್ತಿಯಲ್ಲಿನ್ನು ಹಸಿರು. ಇಲ್ಲಿನ ಸೌಂದರ್ಯ ಪದಗಳಲ್ಲಿ ಹಿಡಿದಿಡುವುದೇ ಕಷ್ಟ. ಒಣಗಲು ಹಾಕಿದ ಅಮ್ಮನ ಸೀರೆಯಂತೆ ಹಸಿರು ಹುಲ್ಲು ಗಾಳಿಗೆ ವೈಯಾರ ಮಾಡುತಲಿತ್ತು. ಯುದ್ದಕ್ಕೆ ನಿಂತ ಸೈನಿಕರಂತೆ ಸುತ್ತುವರಿದ ಮಲೆಗಳ ಸಾಲು. ದೂರದಲ್ಲೆರಡು ಜಲಧಾರೆ. ಬಂಡಾಜೆ ಗುಡ್ಡ, ಸುಂಕ ಸಾಲೆ ನದಿಯ ಸೌಂದರ್ಯ. ಬಲ್ಲಾಳರಾಯನ ಕೋಟೆ ಇರುವ ಬೆಟ್ಟ, ನೋಡಲು ಒಂದೇ ಎರಡೇ! ವಾವ್ ಎಂದಿತು ಮನಸ್ಸು. ಗಾಳಿಗೆ ಜೀಕುವ ಹುಲ್ಲು ನೋಡುವುದೇ ಖುಷಿ. ನೆತ್ತಿಯ ಮೇಲೆ ಕೀಟಗಳ ರಾಶಿ. ಪಶ್ಚಿಮ ಘಟ್ಟಕ್ಕೇ ಸೀಮಿತವಾದ ಅಗಣಿತ ಚಿಟ್ಟೆ ಸಮೂಹ. ಅಡಿಗಡಿಗೆ ಕ್ಯಾಮರದ ಮುಡಿಗೇರಿದ ಚಿತ್ರಗಳು ಇಂದಿಗೂ ನನ್ನ ಬಿಡದೇ ಕಾಡುವವು. ಇಂತಹ ಚಿತ್ರಗಳಿಗಾಗಿಯಾದರೂ ಒಮ್ಮೆ ಇವನ್ನೇರಲು ಹೊರಡಬೇಕು. ಅಪರಿಮಿತ ಸೌಂದರ್ಯ ರಾಶಿ ನೋಡಿ ಪುಳಕದಿಂದ ಹಿಂದಿರುಗಿದೆವು.
|
ಚಾರ್ಮಾಡಿಯಿಂದ ಕಂಡ ಏರಿ ಕಲ್ಲು ಗುಡ್ಡ ಅಥವಾ ಹುಲಿ ದನ ಬೆಟ್ಟ |
ಕೊನೆಯ ಮುತ್ತು :-
ಪಶ್ಚಿಮ ಘಟ್ಟದ ಅನನ್ಯ ಪರ್ವತ ಶ್ರೇಣಿಗಳಲ್ಲಿ ಚಾಮರ್ಾಡಿ ತೀರಾ ಭಿನ್ನ. ಇಲ್ಲಿನ ಜೀವ ಪರಿಸರವೂ ವಿಭಿನ್ನ. ಕಾಟಿ, ಕರಡಿ, ಕರಿಗಳ ಆಶ್ರಯ ತಾಣ. ಇವುಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸುವುದು ಪ್ರತಿ ನಾಗರಿಕರ ಕರ್ತವ್ಯ. ಇಲ್ಲಿನ ಪರಿಸರವನ್ನು ಪ್ಲಾಸ್ಟಿಕ್ ರಕ್ಕಸನಿಂದ ಕಾಪಾಡಿ. ನೇತ್ರಾವತಿಗೆ ನೀರುಣಿಸುವ ಇಲ್ಲಿನ ಜಲಧಾರೆಗಳಿಗೆ ಪ್ಲಾಸ್ಟಿಕ್ ಸೇರದಂತೆ ಕಾಪಾಡುವುದು ನಮ್ಮ ಕರ್ತವ್ಯವಲ್ಲವೇ?